ಬುದ್ಧನ ದೃಶ್ಯೀಕರಣ

ದೃಶ್ಯೀಕರಣವು, ಅನೇಕ ಧ್ಯಾನದ ಅಭ್ಯಾಸಗಳ ಭಾಗವಾಗಿರುತ್ತದೆ. ಆದರೆ "ದೃಶ್ಯೀಕರಣ"ವು, ಸ್ವಲ್ಪ ತಪ್ಪು ಅರ್ಥವನ್ನು ನೀಡುವ ಅನುವಾದವಾಗಿರಬಹುದು, ಏಕೆಂದರೆ ಇಲ್ಲಿ ನಾವು ನಮ್ಮ ಕಣ್ಣುಗಳನ್ನು ಬಳಸುತ್ತಿಲ್ಲ. ನಾವು ನಮ್ಮ ಕಲ್ಪನೆಯೊಂದಿಗೆ ಕೆಲಸ ಮಾಡುತ್ತಿರುವುದರಿಂದ, ಇದು ಕೇವಲ ದೃಶ್ಯವಾಗಿರುವುದಿಲ್ಲ, ಅದರ ಜೊತೆಗೆ ನಾವು ಶಬ್ದಗಳು, ವಾಸನೆಗಳು, ಅಭಿರುಚಿಗಳು ಮತ್ತು ದೈಹಿಕ ಸಂವೇದನೆಗಳನ್ನು ಸಹ ಕಲ್ಪಿಸಿಕೊಳ್ಳಬೇಕು. ನಾವು ವಿವಿಧ ವಸ್ತುಗಳ ಮಾನಸಿಕ ಅರ್ಪಣೆಗಳನ್ನು ರಚಿಸಿದಾಗ, ಅವುಗಳನ್ನು ಆನಂದಿಸುವುದರಿಂದ ಪಡೆಯುವ ಸಂವೇದನಾಶೀಲ ಆನಂದವನ್ನು ನಾವು ಊಹಿಸುತ್ತೇವೆ. ಅಲ್ಲದೆ, ನಾವು ಎರಡು ಆಯಾಮದ ಚಿತ್ರಗಳನ್ನು ದೃಶ್ಯೀಕರಿಸುತ್ತಿಲ್ಲ; ನಾವು ಕೇವಲ ಚಿತ್ರ, ಪ್ರತಿಮೆ ಅಥವಾ ಕಾರ್ಟೂನ್ ಆಕೃತಿಗಳನ್ನು ಮಾತ್ರವಲ್ಲದೆ, ಬೆಳಕಿನಿಂದ ರಚಿಸಿದ ಜೀವಂತ, ಮೂರು ಆಯಾಮದ ಆಕೃತಿಗಳನ್ನು ದೃಶ್ಯೀಕರಿಸಬೇಕಾಗಿದೆ. 

ಬುದ್ಧನ ಮೇಲೆ ಕೇಂದ್ರೀಕರಿಸಿ 

ಮಹಾಯಾನ ಸಂಪ್ರದಾಯದಲ್ಲಿ ಏಕಾಗ್ರತೆಯ ಅಭ್ಯಾಸವನ್ನು ಮಾಡುವಾಗ, ಅನೇಕ ಶಿಕ್ಷಕರು ಉಸಿರಾಟದ ಮೇಲೆ ಕೇಂದ್ರೀಕರಿಸಲು ಸಲಹೆ ನೀಡುತ್ತಾರೆ, ಏಕೆಂದರೆ ಇದು ಅತ್ಯಂತ ಸುಲಭವಾದ ಮಾರ್ಗವಾಗಿರುತ್ತದೆ. ಆದರೆ, ಈ ಸಂಪ್ರದಾಯದಲ್ಲಿನ ಅತ್ಯಂತ ಸಾಮಾನ್ಯವಾದ ಅಭ್ಯಾಸವು, ಚಿಕ್ಕದೊಂದು ಬುದ್ಧನನ್ನು ದೃಶ್ಯೀಕರಿಸುವ ಮೂಲಕ ಏಕಾಗ್ರತೆಯನ್ನು ಪಡೆಯುವುದಾಗಿರುತ್ತದೆ. ನಾವು ಒಂದು ಸೇಬನ್ನು ನೋಡುತ್ತಾ ಏಕಾಗ್ರತೆಯನ್ನು ಪಡೆಯಬಹುದು, ಆದರೆ ಸೇಬನ್ನು ನೋಡುವುದರಿಂದ ಏನು ಪ್ರಯೋಜನವಾಗುತ್ತದೆ? ನಾವು ಬುದ್ಧನ ಮೇಲೆ ಕೇಂದ್ರೀಕರಿಸಿದರೆ, ಏಕಾಗ್ರತೆಯನ್ನು ಗಳಿಸುವುದರ ಜೊತೆಗೆ, ನಾವು ಬುದ್ಧನ ಗುಣಗಳ ಬಗ್ಗೆಯೂ ತಿಳಿಯಬಹುದು ಮತ್ತು ಬುದ್ಧನು ಸೂಚಿಸಿದ ಸುರಕ್ಷಿತ ದಿಕ್ಕನ್ನು (ಆಶ್ರಯ)ವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು, ಬೋಧಿಚಿತ್ತದಿಂದ ನಾವೇ ಬುದ್ಧರಾಗುವ ಗುರಿಯನ್ನು ಅಳವಡಿಸಿಕೊಳ್ಳಬಹುದು. 

ಇದಲ್ಲದೆ, ಪ್ರಾಚೀನ ಭಾರತೀಯ ಗುರು ಅಸಂಗಾ ಅವರು ಪರಿಪೂರ್ಣ ಏಕಾಗ್ರತೆಯ ಸಾಧನೆಯು, ಮಾನಸಿಕ ಪ್ರಜ್ಞೆಯ ಮೂಲಕ ಬರುತ್ತದೆ, ಯಾವುದೇ ಇಂದ್ರಿಯ ಪ್ರಜ್ಞೆಯಿಂದಲ್ಲ ಎಂದು ಸೂಚಿಸಿದರು. ಏಕೆಂದರೆ ನಾವು ಈ ಏಕಾಗ್ರತೆಯನ್ನು, ನಮ್ಮ ಮನಸ್ಸಿನ ಮೂಲಕ ಪ್ರೀತಿ, ಸಹಾನುಭೂತಿ, ತಿಳುವಳಿಕೆ ಶೂನ್ಯತೆ ಮತ್ತು ಮುಂತಾದವುಗಳನ್ನು ಉತ್ಪಾದಿಸಲು ಅನ್ವಯಿಸಲಿದ್ದೇವೆ. ನಾವು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಮನಸ್ಥಿತಿಯಲ್ಲಿ ಏಕಾಗ್ರತೆಯನ್ನು ಪಡೆಯಲು, ಬುದ್ಧನ ಚಿತ್ರವನ್ನು ದೃಶ್ಯೀಕರಿಸುವುದು ನಮ್ಮ ಮಾನಸಿಕ ಪ್ರಜ್ಞೆಯನ್ನು ತರಬೇತಿ ಮಾಡುವ ಸಾಧನವಾಗಿದೆ. ಹೀಗಾಗಿ, ಪರಿಪೂರ್ಣ ಏಕಾಗ್ರತೆಯನ್ನು ಪಡೆಯಲು ಬುದ್ಧನನ್ನು ದೃಶ್ಯೀಕರಿಸುವಂತೆ, ಟಿಬೆಟಿನ ಗೆಲುಗ್ ಸಂಪ್ರದಾಯದಲ್ಲಿ ವಿಶೇಷವಾಗಿ, ಯಾವಾಗಲೂ ಒತ್ತಿ ಹೇಳಲಾಗುತ್ತದೆ.  

ಹಾಗಾದರೆ ಟಿಬೆಟ್‌ನ ಸಕ್ಯಾ, ನ್ಯಿಂಗ್ಮಾ ಮತ್ತು ಕಗ್ಯು ಸಂಪ್ರದಾಯಗಳಲ್ಲಿ ಹೇಗೆ ನಡೆಯುತ್ತದೆ? ಇಲ್ಲಿ, ಉಸಿರಾಟದ ಮೇಲೆ ಆಗಾಗ್ಗೆ ಕೇಂದ್ರೀಕರಿಸಲು ಅಥವಾ ಚಿತ್ರಕಲೆ ಅಥವಾ ಬುದ್ಧನ ಪ್ರತಿಮೆಯನ್ನು ನೋಡುವ ಮೂಲಕ ಕಣ್ಣುಗಳಿಂದ ಕೇಂದ್ರೀಕರಿಸುವ ಸಲಹೆಯನ್ನು ಪಡೆಯುತ್ತೇವೆ. ಇವು ಅಸಂಗಾ ಅವರ ಸಲಹೆಗೆ ವಿರುದ್ಧವಾಗಿದೆಯೇ? ಇಲ್ಲ, ಮನಸ್ಸು ವಸ್ತುಗಳನ್ನು ಹೇಗೆ ಅರಿಯುತ್ತದೆ ಎಂಬುದರ ಬಗ್ಗೆ ಇರುವ ಈ ಸಂಪ್ರದಾಯಗಳಲ್ಲಿನ ವಿವರಣೆಗಳು, ಕಣ್ಣಿನ ಪ್ರಜ್ಞೆಯು ಕೇವಲ ಬಣ್ಣದ ಆಕಾರಗಳನ್ನು ಮತ್ತು ಒಂದು ಕಾಲಕ್ಕೆ ಒಂದು ಕ್ಷಣವನ್ನು ಮಾತ್ರ ತಿಳಿದಿರುತ್ತವೆ ಎಂದು ಹೇಳುತ್ತವೆ. ಅಂತೆಯೇ, ಕಿವಿಯ ಪ್ರಜ್ಞೆಯು ಶಬ್ದಗಳ ಬಗ್ಗೆ ಮಾತ್ರ ತಿಳಿದಿದ್ದು, ಒಂದು ಕಾಲಕ್ಕೆ ಒಂದು ಶಬ್ದದ ಬಗ್ಗೆ ಮಾತ್ರ ತಿಳಿದಿರುತ್ತದೆ. ನಂತರ, ಪರಿಕಲ್ಪನಾ ಅರಿವು, ಎಲ್ಲವನ್ನೂ ಒಟ್ಟಾಗಿ ಸೇರಿಸಿ, ನಾವು "ಸಾಮಾನ್ಯ-ಅರ್ಥದ ವಸ್ತು" ಎಂದು ಕರೆಯಬಹುದಾದದ್ದನ್ನು ರಚಿಸುತ್ತದೆ. ಉದಾಹರಣೆಗೆ, ಸೇಬು ಕೇವಲ ಕೆಂಪು ಗೋಳಾಕಾರದ ಆಕಾರವಾಗಿರುವುದಿಲ್ಲ. ಇದು ಕೇವಲ ರುಚಿ ಅಥವಾ ವಾಸನೆಯಾಗಿರುವುದಿಲ್ಲ. ಇದು ನಿಮ್ಮ ಕೈಯಲ್ಲಿರುವ ದೈಹಿಕ ಸಂವೇದನೆ ಮಾತ್ರವಾಗಿರುವುದಿಲ್ಲ, ಅಥವಾ ನೀವು ಅದನ್ನು ಕಚ್ಚಿದಾಗ ಆಗುವ ಶಬ್ದ ಮಾತ್ರವಾಗಿರುವುದಿಲ್ಲ. ಇದು, ಒಂದು ಕ್ಷಣದ ಅಸ್ತಿತ್ವದಲ್ಲಿದ್ದು, ನಂತರ ಸಂಪೂರ್ಣವಾಗಿ ವಿಭಿನ್ನವಾದ ವಸ್ತುವಾಗಿ ಮಾರ್ಪಾಡಾಗುವುದಿಲ್ಲ; ಕಾಲಾನಂತರದಲ್ಲಿ ನಿರಂತರತೆ ಇರುತ್ತದೆ. ಈ ಸೇಬು ಅಂತಿಮವಾಗಿ ಕೊಳೆಯುತ್ತದೆ ಮತ್ತು ಬೀಳುತ್ತದೆ, ಆದರೆ ಕೆಲವು ದಿನಗಳವರೆಗೆ, ಸಾಂಪ್ರದಾಯಿಕ ಸೇಬಾಗಿರುತ್ತದೆ. ನೀವು ಸೇಬನ್ನು ನೋಡಿದಾಗ, ನೀವು ನಿಜವಾಗಿಯೂ ಮಾನಸಿಕ ರಚನೆಯೊಂದನ್ನು ನೋಡುತ್ತಿರುತ್ತೀರಿ.

ಅರಿವಿನ ಈ ವಿವರಣೆಯ ಪ್ರಕಾರ, ನಾವು ಸೇಬು ಅಥವಾ ಉಸಿರಾಟದ ಮೇಲೆ ಕೇಂದ್ರೀಕರಿಸಿದಾಗ, ಅದು ಪರಿಕಲ್ಪನಾ ವಸ್ತುವಾಗಿರುತ್ತದೆ ಮತ್ತು ಪರಿಕಲ್ಪನಾ ವಸ್ತುಗಳು ಮಾನಸಿಕ ಪ್ರಜ್ಞೆಯೊಂದಿಗೆ ಕೇಂದ್ರೀಕೃತವಾಗಿರುತ್ತವೆ. ಕಲ್ಪನಾತ್ಮಕವಾಗಿ, ನಾವು ಬಣ್ಣದ ಆಕಾರಗಳು ಮತ್ತು ವಾಸನೆಗಳು ಮತ್ತು ಸತತ ಕ್ಷಣಗಳನ್ನು ಒಂದು ವಸ್ತುವಿನೊಳಗೆ ಸೇರಿಸಿ, ಅದನ್ನು ಸಾಮಾನ್ಯ ಅರ್ಥದಲ್ಲಿನ "ಸೇಬು" ಅಥವಾ ಬೇರೆ ಏನಾದರೂ ಕರೆಯಬಹುದು. ಆದ್ದರಿಂದ, ನಾವು ಮಾನಸಿಕ ಪ್ರಜ್ಞೆಯ ಮೂಲಕ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು ಎಂಬ ಅಸಂಗಾ ಅವರ ಪ್ರತಿಪಾದನೆಯನ್ನು ಈ ಸಂಪ್ರದಾಯಗಳು ಗೌರವಿಸುತ್ತಿವೆ. 

ನಿಜವಾದ ಅಭ್ಯಾಸ 

ನಾವು ಏಕಾಗ್ರತೆಯನ್ನು ಪಡೆಯಲು ಬುದ್ಧನ ಆಕೃತಿಯನ್ನು ಉಪಯೋಗಿಸುತ್ತಿದ್ದರೆ, ಆ ಬುದ್ಧನು ನಮ್ಮ ಹೆಬ್ಬೆರಳಿನ ಗಾತ್ರದಷ್ಟಿರಬೇಕು ಮತ್ತು ನಮ್ಮ ಮುಂದೆ, ಸುಮಾರು ಒಂದು ತೋಳಿನ ಅಂತರದಲ್ಲಿರಬೇಕು. ನಮ್ಮ ಕಣ್ಣುಗಳು ಕೆಳಮುಖವಾಗಿರಬೇಕು, ವಸ್ತುವಿನ ಕಡೆಗೆ ನೋಡಬಾರದು, ಏಕೆಂದರೆ ಅದು ನಿಮ್ಮ ಕಣ್ಣುಗಳಿಂದ ಉತ್ಪತ್ತಿಯಾಗಿರುವುದಿಲ್ಲ. ನಾವು ಕೆಳಗೆ ನೋಡುತ್ತೇವೆ ಮತ್ತು ಬುದ್ಧನು ನಮ್ಮ ಹಣೆಯ ಮಟ್ಟದಲ್ಲಿರುತ್ತಾರೆ. 

ಇದು ತುಂಬಾ ಕಷ್ಟವೇನಲ್ಲ. ನೆಲದ ಕಡೆಗೆ ನೋಡಿ, ತದನಂತರ ಹಣೆಯ ಮಟ್ಟದಲ್ಲಿ ನಿಮ್ಮ ಹೆಬ್ಬೆರಳನ್ನು ನಿಮ್ಮ ಮುಂದೆ ಹಿಡಿದುಕೊಳ್ಳಿ. ನಿಮ್ಮ ಹೆಬ್ಬೆರಳು ಇದೆ ಎಂಬ ಭಾವನೆ ನಿಮ್ಮಲ್ಲಿದೆ, ಮತ್ತು ಅದನ್ನು ನೋಡದೆ ನಿಮ್ಮ ಹೆಬ್ಬೆರಳಿನ ಮೇಲೆ ನೀವು ಕೇಂದ್ರೀಕರಿಸಬಹುದು, ಅಲ್ಲವೇ? ನಂತರ ನಿಮ್ಮ ಕೈ ಕೆಳಗಿಳಿಸಿ, ನಿಮ್ಮ ಹೆಬ್ಬೆರಳು ಇದ್ದ ಜಾಗದ ಮೇಲೆ ಇನ್ನೂ ಗಮನಹರಿಸಬಹುದು. ಅಷ್ಟೇ! 

ಅನೇಕ ಥೆರವಾದ ಬೌದ್ಧ ಆಚರಣೆಗಳಲ್ಲಿ, ಕಣ್ಣುಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ, ಆದರೆ ಮಹಾಯಾನ ಪಠ್ಯಗಳಲ್ಲಿ ಕಣ್ಣುಗಳನ್ನು ತೆರೆದಿಡಲು ಸಲಹೆ ನೀಡಲಾಗುತ್ತದೆ. ಕಣ್ಣುಗಳನ್ನು ಅಗಲವಾಗಿ ತೆರೆದಿಡುವಂತೆ ಅಥವಾ ಮುಚ್ಚುವಂತೆ ಹೇಳುವ ಕೆಲವು ನಿರ್ದಿಷ್ಟ ಧ್ಯಾನದ ಅಭ್ಯಾಸಗಳಿದ್ದರೂ, ಸಾಮಾನ್ಯವಾಗಿ ಮಹಾಯಾನದಲ್ಲಿ, ಕಣ್ಣುಗಳನ್ನು ತೆರೆದಿಡಲಾಗುತ್ತದೆ, ಅವುಗಳನ್ನು ಮುಚ್ಚಿಡುವುದಿಲ್ಲ. ಕಣ್ಣುಗಳನ್ನು ಸಂಪೂರ್ಣವಾಗಿ ತೆರೆದಿಡಬಾರದು, ಏಕೆಂದರೆ ಆಗ ಸುಲಭವಾಗಿ ವಿಚಲಿತರಾಗುತ್ತೇವೆ. ಆದ್ದರಿಂದ ನಾವು ಮೂಗಿನ ತುದಿಯ ಕಡೆಗೆ, ಕೆಳಮುಖವಾಗಿ ನೋಡುತ್ತೇವೆ. ಇದರರ್ಥ ನಾವು ಮಳ್ಳೆಗಣ್ಣಾಗಿ ನೋಡುತ್ತೇವೆ ಎಂದಲ್ಲ, ಬದಲಿಗೆ ನಾವು ಮೂಗಿನ ತುದಿಯ ಮಟ್ಟದಲ್ಲಿ, ನೆಲದ ಕಡೆಗೆ ನೋಡುತ್ತೇವೆ, ಸಡಿಲವಾಗಿ ಕೇಂದ್ರೀಕರಿಸುತ್ತೇವೆ, ಹೆಚ್ಚು ತೀವ್ರವಾಗಿ ಅಲ್ಲ: ಇಲ್ಲಿ, ನಾವೇನು ನೆಲದ ಮೇಲೆ ಬಿದ್ದ ನಮ್ಮ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಹುಡುಕುತ್ತಿಲ್ಲ. 

ಕಣ್ಣು ಮುಚ್ಚಿ ಧ್ಯಾನ ಮಾಡುವುದರ ಅನಾನುಕೂಲಗಳೂ ಇವೆ. ಶಾಂತವಾಗಲು ಮತ್ತು ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಲು ನಾವು ನಮ್ಮ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚಿಡುವ ಅಭ್ಯಾಸವನ್ನು ಬೆಳೆಸಿಕೊಂಡರೆ, ಅದನ್ನು ದೈನಂದಿನ ಜೀವನದಲ್ಲಿ ಪಾಲಿಸಲು ಕಷ್ಟವಾಗಬಹುದು. ನೀವು ಬೇರೆಯವರೊಂದಿಗೆ ಸಂವಹನ ನಡೆಸುವಾಗ, ನೀವು ಇದ್ದಕ್ಕಿದ್ದಂತೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಮನಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸಲಾಗುವುದಿಲ್ಲ - ಅದು ಸ್ವಲ್ಪ ವಿಲಕ್ಷಣವಾಗಿ ಕಾಣಿಸಿಕೊಳ್ಳಬಹುದು. ಮಹಾಯಾನದಲ್ಲಿ, ನಾವು ನಮ್ಮ ಕಣ್ಣುಗಳನ್ನು ಸ್ವಲ್ಪ ತೆರೆದಿಡುತ್ತೇವೆ, ಏಕೆಂದರೆ ನಮ್ಮ ಕಾರ್ಯವು, ಇತರ ಎಲ್ಲಾ ಜೀವಿಗಳಿಗೆ ಸಹಾಯವಾಗುವಂತೆ ನಿರ್ದೇಶಿಸಲ್ಪಟ್ಟಿರುತ್ತದೆ; ನಾವು ಅವುಗಳನ್ನು ಮುಚ್ಚಲು ಬಯಸುವುದಿಲ್ಲ. ಪರಮಪೂಜ್ಯ ದಲೈ ಲಾಮಾ ಅವರು ಇದೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ - ಕಣ್ಣುಗಳನ್ನು ಮುಚ್ಚಿ ಧ್ಯಾನಿಸುವುದರ ಒಂದು ಸೂಕ್ಷ್ಮವಾದ ಸಮಸ್ಯೆಯೆಂದರೆ, ಕಣ್ಣುರೆಪ್ಪೆಗಳು ಸ್ವಲ್ಪಮಟ್ಟಿಗೆ ಬೀಸುತ್ತವೆ ಮತ್ತು ನೀವು ಆಗಾಗ್ಗೆ ಕೆಂಪು ಕಲೆಗಳನ್ನು ಕಾಣಬಹುದು, ಅವು ನಮ್ಮನ್ನು ವಿಚಲಿತಗೊಳಿಸುತ್ತವೆ. 

ದೃಶ್ಯೀಕರಣದ ಎರಡು ಅಂಶಗಳು

ದೃಶ್ಯೀಕರಿಸುವಾಗ, ನಾವು ಕಾಳಜಿ ವಹಿಸಬೇಕಾದ ಎರಡು ಪ್ರಮುಖ ಅಂಶಗಳಿವೆ. ಇಂಗ್ಲಿಷ್ನಲ್ಲಿ ಸಾಮಾನ್ಯವಾಗಿ, ಒಬ್ಬರು ರೂಪತಾಳುವುದನ್ನು "ಕ್ಲಾರಿಟಿ (ಸ್ಪಷ್ಟತೆ)" ಎಂದು ಅನುವಾದಿಸಲಾಗುತ್ತದೆ, ಆದರೆ ಅದು ಸರಿಯಾದ ಪದವಾಗಿರುವುದಿಲ್ಲ ಏಕೆಂದರೆ ಅದು ಲಕ್ಷ್ಯವಿಡುವುದು ಎಂದು ಸೂಚಿಸುತ್ತದೆ. ಈ ಹಂತದಲ್ಲಿ, ನಾವು ಇದರ ಬಗ್ಗೆ ಯೋಚಿಸುವುದಿಲ್ಲ. ಇಲ್ಲಿ ನಾವು ನಮ್ಮ ಕಲ್ಪನೆಯೊಂದಿಗೆ ಒಂದು ವಸ್ತುವನ್ನು ರೂಪತಾಳುವಂತೆ ಮಾಡುವುದಾಗಿರುತ್ತದೆ. ಎರಡನೆಯ ಅಂಶವು ಅಕ್ಷರಶಃ "ಹೆಮ್ಮೆ" ಆಗಿರುತ್ತದೆ, ಇದು ನಾವು ದೃಶ್ಯೀಕರಿಸಿದ ವಸ್ತುವು, ನಿಜವಾಗಿಯೂ ಇರುವ ವಿಷಯದ ಬಗ್ಗೆ ಅನುಭವಿಸುವ ಹೆಮ್ಮೆಯಾಗಿರುತ್ತದೆ.  

ಆರಂಭದಲ್ಲಿ ಈ ಹೆಮ್ಮೆಯ ಭಾವನೆಯು ಬಹಳ ಮುಖ್ಯ ಎಂದು ತ್ಸೋಂಗ್‌ಖಾಪಾ ವಿವರಿಸುತ್ತಾರೆ. ನಮ್ಮ ದೃಶ್ಯೀಕರಣವು ಕೇಂದ್ರೀಕೃತವಾಗಿರುವುದರ ಬಗ್ಗೆ ನಾವು ಹೆಚ್ಚು ಚಿಂತಿಸಬೇಕಾಗಿಲ್ಲ, ಆದರೆ ನಮ್ಮ ಮುಂದೆ ಬುದ್ಧನಿದ್ದಾನೆ ಎಂದು ನಾವು ನಿಜವಾಗಿಯೂ ಭಾವಿಸಿದರೆ, ಅದು ತುಂಬಾ ಒಳ್ಳೆಯದಾಗಿರುತ್ತದೆ. ನಮಗೆ ಬೇಕಾಗಿರುವುದು ಸ್ವಲ್ಪ ನೋಟ, ಸ್ವಲ್ಪ ಹಳದಿ ಬೆಳಕು, ಮತ್ತು "ಹೌದು, ಅಲ್ಲಿ ನಿಜವಾದ ಬುದ್ಧನಿದ್ದಾನೆ" ಎಂದು ಯೋಚಿಸಬೇಕು. ನಮ್ಮ ಏಕಾಗ್ರತೆ ಸುಧಾರಿಸಿದಂತೆ, ವಿವರಗಳು ಸ್ವಯಂಚಾಲಿತವಾಗಿ ಬರುತ್ತವೆ. 

ನಿಮ್ಮ ಮೇಲೆ ಹೆಚ್ಚು ಒತ್ತಡ ಹೇರಬೇಡಿ

ಅಭ್ಯಾಸಿಗರಾಗಿ ನಾವು ಮಾಡುವ ಒಂದು ದೊಡ್ಡ ತಪ್ಪೆಂದರೆ, ನಾವು ದೃಶ್ಯೀಕರಿಸಲು ಪ್ರಯತ್ನಿಸುತ್ತಿರುವ ವಿಷಯವು ಹೇಗಿರಬೇಕು, ಯಾವ ರೀತಿಯ ಆಭರಣಗಳು ಮತ್ತು ಬಟ್ಟೆಗಳನ್ನು ಧರಿಸಿರಬೇಕು, ಕಣ್ಣುಗಳು ಯಾವ ಬಣ್ಣದಲ್ಲಿರಬೇಕು ಇತ್ಯಾದಿ ವಿವರಗಳ ಬಗ್ಗೆ ಅತಿಯಾಗಿ ಯೋಚಿಸುತ್ತಾ ಕಳೆದುಹೋಗುತ್ತೇವೆ. ಈ ಕಾರಣದಿಂದಾಗಿ ನಾವು ಎಷ್ಟೊಂದು ಒತ್ತಡಕ್ಕೆ ಒಳಗಾಗುತ್ತೇವೆಯೆಂದರೆ, ನಮಗೆ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ನಾವು ಅನೇಕ ಆಕೃತಿಗಳ ಶ್ರೇಣಿಯನ್ನು ದೃಶ್ಯೀಕರಿಸಲು ಪ್ರಯತ್ನಿಸಿದಾಗ ಇದು ಇನ್ನೂ ಹದಗೆಡುತ್ತದೆ. ಪಠ್ಯಗಳು ಸಹ ಸಹಾಯ ಮಾಡುವುದಿಲ್ಲ, ಏಕೆಂದರೆ ಅವುಗಳು ಎಲ್ಲಾ ರೀತಿಯ ಚಿಕ್ಕ ಚಿಕ್ಕ ವಿವರಗಳನ್ನು ಒಳಗೊಂಡಿರುತ್ತವೆ ಮತ್ತು ಪ್ರಾರಂಭದಿಂದಲೇ ಎಲ್ಲವನ್ನೂ ದೃಶ್ಯೀಕರಿಸಲು ನಮ್ಮಿಂದ ಸಾಧ್ಯ ಎಂಬ ಅಭಿಪ್ರಾಯವನ್ನು ನೀಡುತ್ತವೆ. ಅನೇಕ ಆಕೃತಿಗಳ ಸಂಕೀರ್ಣ ಜೋಡಣೆಯ ಎಲ್ಲಾ ವಿವರಗಳನ್ನು ದೃಶ್ಯೀಕರಿಸುವಂತೆ ಸಾಧ್ಯವಾಗುವುದು, ಬಹಳಷ್ಟು ಉನ್ನತಮಟ್ಟದ ಸಾಧನೆಯಾಗಿರುತ್ತದೆ. ಅಂತಿಮವಾಗಿ, ನಾವು ಸಾಕಷ್ಟು ನುರಿತರಾದಾಗ, ನಾವು ಎಲ್ಲವನ್ನೂ ದೃಶ್ಯೀಕರಿಸಲು ಸಾಧ್ಯವಾಗುತ್ತದೆ, ಆದರೆ ಸದ್ಯಕ್ಕೆ ಅದರ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲಾ ವಿವರಗಳನ್ನು ಪಡೆಯಲು ನಾವು ಅತಿಯಾಗಿ ಒತ್ತಡ ಹೇರಿದರೆ, ಟಿಬೆಟಿಯನ್‌ನಲ್ಲಿ "ಲುಂಗ್" ಎನ್ನುವುದನ್ನು ನಾನು ಅನುಭವಿಸಬೇಕಾಗುತ್ತದೆ, ಅಲ್ಲಿ ನಮ್ಮ ಶಕ್ತಿಯು ಗೊಂದಲಕ್ಕೊಳಗಾಗುತ್ತದೆ ಮತ್ತು ನಾವು ನಿರಾಶೆಗೊಳ್ಳುತ್ತೇವೆ. 

ದೃಶ್ಯೀಕರಣಗಳನ್ನು ನಿರ್ಮಿಸುವುದು 

ಸಂಕೀರ್ಣ ದೃಶ್ಯೀಕರಣಗಳ ಬಗ್ಗೆ ತ್ಸೋಂಗ್‌ಖಾಪಾ ಅವರು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತಾರೆ, ಮತ್ತು ಎರಡು ಸಂಪ್ರದಾಯಗಳನ್ನು ಉಲ್ಲೇಖಿಸುತ್ತಾರೆ. ಮೊದಲ ಸಂಪ್ರದಾಯದಲ್ಲಿ, ನಾವು ಸಂಪೂರ್ಣ ಚಿತ್ರವನ್ನು ಪಡೆಯುವವರೆಗೆ, ನಾವು ಸೂಕ್ಷ್ಮವಾದ ವಿವರಗಳನ್ನು ಒಂದರ ಮೇಲೊಂದು ಸೇರಿಸುತ್ತೇವೆ. ಈ ವಿಧಾನವು ಕೆಲವು ವಿಶೇಷ ವ್ಯಕ್ತಿಗಳಿಗೆ ಮಾತ್ರ ಸೂಕ್ತವಾಗಿರುತ್ತದೆ ಎಂದು ಅವರು ಹೇಳುತ್ತಾರೆ. ನಮ್ಮಲ್ಲಿ ಹೆಚ್ಚಿನವರು, ಮೊದಲಿಗೆ ಪೂರ್ಣ ವಿಷಯದ ಅಸ್ಪಷ್ಟ ಚಿತ್ರ ಅಥವಾ ಭಾವನೆಯೊಂದಿಗೆ ಪ್ರಾರಂಭಿಸಬೇಕು ಮತ್ತು ನಂತರ, ಆ ಚೌಕಟ್ಟಿನೊಳಗೆ, ವಿವರಗಳನ್ನು ಕಾಲಾನಂತರವಾಗಿ ತುಂಬಬೇಕು. 

ವಿವರಗಳನ್ನು ಸೇರಿಸುವ ಈ ಪ್ರಕ್ರಿಯೆಯು ಸಂಗ್ರಹವಾಗುವುದು ಮುಖ್ಯವಾಗಿದೆ, ಇಲ್ಲಿ, ನಿಮ್ಮ ಲಕ್ಷ್ಯದಲ್ಲಿ ಒಂದು ವಿವರವನ್ನು ಹಿಡಿದಿಟ್ಟುಕೊಂಡು, ಅದನ್ನು ಕಳೆದುಕೊಳ್ಳದೆ, ಇನ್ನೊಂದನ್ನು ಸೇರಿಸಿ. ನಿಮ್ಮ ಲಕ್ಷ್ಯದಲ್ಲಿ ಎರಡು ವಿವರಗಳನ್ನು ಹಿಡಿದುಕೊಂಡ ನಂತರ, ಅವೆರಡನ್ನು ಕಳೆದುಕೊಳ್ಳದೆ ಮೂರನೆಯದನ್ನು ಸೇರಿಸಬಹುದು. ನೀವು ಮತ್ತಷ್ಟು ವಿವರಗಳನ್ನು ಸೇರಿಸುವಾಗ, ನಿಮ್ಮ ನಿಯಂತ್ರಣದಲ್ಲಿರುವ ವಿವರಗಳ ಬಗ್ಗೆ ಗಮನವನ್ನು ಕಳೆದುಕೊಳ್ಳದಿರುವುದು ಬಹಳ ಮುಖ್ಯ. 

ನಾವು ಬುದ್ಧನನ್ನು ದೃಶ್ಯೀಕರಿಸುತ್ತಿದ್ದರೆ, ಅವರ ಕಣ್ಣುಗಳಿಂದ ಪ್ರಾರಂಭಿಸುವಂತೆ ತ್ಸೋಂಗ್‌ಖಾಪಾ ಸಲಹೆ ನೀಡುತ್ತಾರೆ. ದೇಹದ ಸಾಮಾನ್ಯ ರೂಪವು ಸ್ಪಷ್ಟವಾಗಿದ್ದರೆ, ನಾವು ಅದನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಅವರು ಹೇಳುತ್ತಾರೆ. ಸಾಮಾನ್ಯ ರೂಪವು ಅಸ್ಪಷ್ಟವಾಗಿದ್ದು, ಕೆಲವು ಭಾಗಗಳು ಸ್ಪಷ್ಟವಾಗಿದ್ದರೆ, ನಾವು ಸ್ಪಷ್ಟವಾಗಿರುವುದರ ಮೇಲೆ ನಮ್ಮ ಗಮನವಿರಿಸಬೇಕು. ಈ ಕೆಲವು ಭಾಗಗಳು ಸಹ ಮಸುಕಾಗಿದ್ದರೆ, ನಾವು ಸಾಮಾನ್ಯವಾದ ರೂಪವನ್ನು ಸಂಪೂರ್ಣವಾಗಿ ಮತ್ತೊಮ್ಮೆ ರಚಿಸಬೇಕಾಗಿದೆ. 

ಅರಿವನ್ನು ವಿಸ್ತರಿಸುವ ಸಾಧನವಾಗಿ ದೃಶ್ಯೀಕರಣ 

ಈ ಎಲ್ಲಾ ಸಂಕೀರ್ಣ ದೃಶ್ಯೀಕರಣಗಳ ಅರ್ಥವೇನು? ಇದು, ಮಾನಸಿಕ ಅಥ್ಲೆಟಿಕ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ದೃಶ್ಯೀಕರಣದ ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದಾಗಿರುವುದಿಲ್ಲ. ಹಲವಾರು ವಿಭಿನ್ನ ವಿಷಯಗಳ ಬಗೆಗಿರುವ ಎಲ್ಲಾ ವಿವರಗಳು, ನಮ್ಮ ಮನಸ್ಸಿನ ಅರಿವು ಮತ್ತು ತಿಳುವಳಿಕೆಯನ್ನು ಏಕಕಾಲದಲ್ಲಿ ವಿಸ್ತರಿಸಲು ಸಹಾಯ ಮಾಡುತ್ತವೆ. ಎಲ್ಲವೂ ಹೇಗೆ ಕಾಣುತ್ತದೆ ಎಂಬುದು ಮಹತ್ವದ ವಿಷಯವಾಗಿರುವುದಿಲ್ಲ, ಬದಲಿಗೆ ಪ್ರತಿ ವಿವರ ಏನು ಪ್ರತಿನಿಧಿಸುತ್ತದೆ ಎಂಬುದು ಮುಖ್ಯವಾಗಿರುತ್ತದೆ.

ಬುದ್ಧನಾಗಲು ಕಾರಣವಾಗುವ ವಿವಿಧ ಸಾಂದರ್ಭಿಕ ಆಚರಣೆಗಳ ಪ್ರಕರಣವನ್ನು ಪರಿಗಣಿಸಿ: ಇಲ್ಲಿ ಪ್ರಮುಖವಾದವು 32 ಇವೆ. ಏಕಕಾಲದಲ್ಲಿ, ಈ 32 ವಿಭಿನ್ನ ಅಭ್ಯಾಸಗಳ ಮೇಲೆ ನಮ್ಮ ಮನಸ್ಸಿಡುವುದು ತುಂಬಾ ಕಷ್ಟಕರವಾಗಿರುತ್ತದೆ, ನಾವು ಅವನ್ನು ಸಂಪೂರ್ಣವಾದ ಅಮೂರ್ತ ರೀತಿಯಲ್ಲಿ ಅಭ್ಯಾಸಮಾಡುತ್ತಿದ್ದಲ್ಲಿ, ಇನ್ನೂ ಕಷ್ಟಕರವಾಗಿರುತ್ತದೆ. ಬುದ್ಧನ ದೇಹದ 32 ಅತ್ಯುತ್ತಮ ಚಿಹ್ನೆಗಳ ರೂಪವನ್ನು, ಚಿತ್ರಾತ್ಮಕವಾಗಿ ಪ್ರತಿನಿಧಿಸಿದರೆ, ಉದಾಹರಣೆಗೆ, ಅವರ ಕೂದಲು ಪ್ರದಕ್ಷಿಣಾಕಾರವಾಗಿ ಸುರುಳುತ್ತದೆ, ಎಲ್ಲವನ್ನೂ ಒಟ್ಟಿಗೆ ಸೇರಿಸುವುದು ಸುಲಭವಾಗಿರುತ್ತದೆ, ಇದೇ ನಮ್ಮ ಗುರಿಯಾಗಿರುತ್ತದೆ. ಪ್ರತಿಯೊಂದು ವೈಯಕ್ತಿಕ ಸಾಕ್ಷಾತ್ಕಾರಗಳನ್ನು ಒಂದೊಂದಾಗಿ ರಚಿಸಲು ನಮಗೆ ಸಾಧ್ಯವಾಗದಿದ್ದರೆ, ನಮಗೆ ಎಲ್ಲವನ್ನೂ ಹೇಗೆ ತಾನೆ ಒಟ್ಟಿಗೆ ಜೋಡಿಸಲು ಸಾಧ್ಯವಾಗುತ್ತದೆ? ನಾವು ಎಲ್ಲಾ ಜೀವಿಗಳಿಗೆ ಪ್ರಯೋಜನವಾಗುವಂತಹ ಗುರಿಯನ್ನು ಹೊಂದಿದ್ದೇವೆ, ಅಂದರೆ ಒಂದೇ ಸಮಯದಲ್ಲಿ ಪ್ರತಿಯೊಬ್ಬರ ಬಗ್ಗೆ ಅರಿವಿರುವುದಾಗಿರುತ್ತದೆ. ಇದಕ್ಕಾಗಿ, ನಮ್ಮ ಅರಿವು ನಿಧಾನವಾಗಿ ಬೆಳೆಯುವಂತೆ ನಮ್ಮ ಮನಸ್ಸನ್ನು ವಿಸ್ತರಿಸಬೇಕಾಗಿದೆ. ಇದನ್ನು ಮಾಡಲು, ಈ ಸಂಕೀರ್ಣವಾದ ದೃಶ್ಯೀಕರಣಗಳು ನಮಗೆ ಸಹಾಯ ಮಾಡುತ್ತವೆ. 

ಸಾರಾಂಶ 

ಒಂದು ವಿಷಯವನ್ನು ಕುರಿತು, ನಾವು ನಿಜವಾಗಿಯೂ ಉತ್ಸಾಹಿಗಳಾಗಿದ್ದರೆ, ಅದನ್ನು ನಿಲ್ಲಿಸಿ ವಿರಾಮವನ್ನು ತೆಗೆದುಕೊಂಡಿದ್ದರೆ, ನಾವು ಸೋಮಾರಿಗಳಾಗಿರುವುದಿಲ್ಲ; ನಮಗೆ ಯಾವಾಗ ವಿಶ್ರಾಂತಿ ಬೇಕು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ, ಇದರಿಂದ ನಾವು ದಣಿಯುವುದಿಲ್ಲ ಮತ್ತು ಆ ವಿಷಯವನ್ನು ಸಂಪೂರ್ಣವಾಗಿ ಬಿಟ್ಟುಕೊಡುವುದಿಲ್ಲ. ಒಮ್ಮೆ ನಾವು ಬೋಧನೆಗಳನ್ನು ಕಲಿಯುವ, ಅವುಗಳನ್ನು ಪರೀಕ್ಷಿಸುವ ಮತ್ತು ನಂತರ ಅವುಗಳನ್ನು ಧ್ಯಾನಿಸುವ ಪ್ರಯೋಜನಗಳನ್ನು ನಿಜವಾಗಿಯೂ ಅರ್ಥಮಾಡಿಕೊಂಡಾಗ, ಪರಿಶ್ರಮ ಮತ್ತು ಸಂತೋಷದಿಂದ ಬೆಂಬಲಿತವಾದ ಪ್ರಾಬಲ್ಯವು, ತಾನಾಗಿಯೇ ನಿಧಾನವಾಗಿ ಬರುತ್ತದೆ. ಇದರ ಮೇಲೆ, ಬೌದ್ಧ ದೃಶ್ಯೀಕರಣದ ವಿಧಾನಗಳು, ನಮ್ಮ ಏಕಾಗ್ರತೆ ಮತ್ತು ಅರಿವನ್ನು ಉನ್ನತ ಮಟ್ಟಗಳಿಗೆ ಪರಿಷ್ಕರಿಸಲು ಉತ್ತಮ ಮಾರ್ಗವಾಗಿರುತ್ತದೆ. ಇಲ್ಲಿ ಮಹತ್ವವಾದುದು, ಇದನ್ನು ಹಂತ ಹಂತವಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಯುವುದಾಗಿರುತ್ತದೆ, ಮತ್ತು ಇದನ್ನು ನಾವು ಹೆಚ್ಚುಕಾಲ ಮುಂದುವರಿಸಿದರೆ, ನಮಗಾಗಿ ಮತ್ತು ಇತರರಿಗಾಗಿ ಸಹಾಯ ಮಾಡುವ ಸಲುವಾಗಿ, ನಾವು ಅತ್ಯಂತ ಪ್ರಯೋಜನಕಾರಿ ಮನಸ್ಥಿತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ.

Top