What is compassion

ಬೌದ್ಧಧರ್ಮದಲ್ಲಿ, ಸಹಾನುಭೂತಿಯು, ಇತರರು ದುಃಖದಿಂದ ಮತ್ತು ದುಃಖದ ಕಾರಣಗಳಿಂದ ಮುಕ್ತರಾಗಬೇಕೆಂಬ ಆಶಯವಾಗಿದೆ. ವಿಶೇಷವಾಗಿ, ನಮ್ಮಂತೆಯೇ ಅಗ್ನಿಪರೀಕ್ಷೆಯನ್ನು ಎದುರಿಸಿದ ಇತರರ ಭಾವನೆಗಳನ್ನು ಶ್ಲಾಘಿಸುವುದರ ಮೇಲೆ ಇದು ಆಧಾರಿತವಾಗಿದೆ. ಅವರು ಅನುಭವಿಸುತ್ತಿರುವುದನ್ನು ನಾವು ಎಂದಿಗೂ ಅನುಭವಿಸದಿದ್ದರೂ, ಅವರ ಜಾಗದಲ್ಲಿ ನಾವಿದ್ದರೆ ಅದು ಎಷ್ಟು ಭೀಕರವಾಗಿರಬಹುದು ಎಂದು ನಾವು ಭಾವಿಸಬಹುದು. ಆಗ ಅದರಿಂದ ಮುಕ್ತರಾಗಬೇಕೆಂಬ ನಮ್ಮ ಬಯಕೆಯನ್ನು ಕಲ್ಪಿಸಿಕೊಂಡು, ಇತರರೂ ಅದರಿಂದ ಸ್ವತಂತ್ರರಾಗಬೇಕೆಂದು ನಾವು ಬಲವಾಗಿ ಹಂಬಲಿಸುತ್ತೇವೆ. 

ಪ್ರೀತಿ ಮತ್ತು ಸಹಾನುಭೂತಿ ಅಗತ್ಯತೆಗಳು, ಐಷಾರಾಮಿಗಳಲ್ಲ. ಅವುಗಳಿಲ್ಲದೆ ಮಾನವೀಯತೆಗೆ ಉಳಿಯಲು ಸಾಧ್ಯವಿಲ್ಲ. - 14 ನೇ ದಲೈ ಲಾಮಾ 

ಸಹಾನುಭೂತಿಯು, ಕೇವಲ ನಮ್ಮ ಬಗ್ಗೆ ಯೋಚಿಸುವಂತಹ, ಸ್ವತಃ ಹೇರಿಕೊಂಡಿರುವ ಏಕಾಂಗಿತನದ ಮಿತಿಗಳಿಂದ ಹೊರಬಂದು, ನಮ್ಮ ಹೃದಯವನ್ನು ಮತ್ತು ಮನಸ್ಸನ್ನು ಇತರರಿಗೆ ತೆರೆಯುವಂತೆ ಮಾಡುತ್ತದೆ. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವಲ್ಲಿ ನಾವೆಲ್ಲರೂ ಒಟ್ಟಾಗಿರುತ್ತೇವೆ ಮತ್ತು ಇತರರೊಂದಿಗೆ ಸಂಬಂಧ ಹೊಂದಿದಾಗ, ನಮ್ಮಲ್ಲಿರುವ ಪ್ರತ್ಯೇಕತೆ ಮತ್ತು ಆತಂಕವನ್ನು ನಿವಾರಿಸುತ್ತೇವೆ. ಸಹಾನುಭೂತಿಯಿಂದ ನಾವು ಹೆಚ್ಚು ಸಂತೋಷವನ್ನು ಮತ್ತು ಸುರಕ್ಷತೆಯನ್ನು ಅನುಭವಿಸುತ್ತೇವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇತರರ ನೋವು ಮತ್ತು ದುಃಖವನ್ನು ಗಂಭೀರವಾಗಿ ಪರಿಗಣಿಸುವುದು ಮತ್ತು ಸಹಾಯ ಮಾಡಲು ಬಯಸುವುದರಿಂದ ನಮ್ಮ ಆಂತರಿಕ ಶಕ್ತಿ ಮತ್ತು ಆತ್ಮ ವಿಶ್ವಾಸವು ಪ್ರಬಲಗೊಳ್ಳುತ್ತವೆ. ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ನಾವು ನಮ್ಮನ್ನು ತರಬೇತುಗೊಳಿಸಿದರೆ, ಅದು ನಿಜವಾಗಿಯೂ ನಮ್ಮ ಯೋಗಕ್ಷೇಮದ ಪ್ರಮುಖವಾದ ಮೂಲವಾಗುತ್ತದೆ. 

ನಮ್ಮ ಸಹಾನುಭೂತಿಯು ಸಕ್ರಿಯವಾಗಿದ್ದು, ಇತರರ ದುಃಖವನ್ನು ನಿವಾರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸಬೇಕು. ಸಹಾಯ ಮಾಡುವ ನಮ್ಮ ಸಾಮರ್ಥ್ಯವು ಸೀಮಿತವಾಗಿದ್ದರೂ, ಜನರು ಅತೃಪ್ತಿ ಮತ್ತು ನೋವಿನಲ್ಲಿರುವಾಗ, ಸುಮ್ಮನೆ ನಿಲ್ಲದೆ, ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು. 

ಜ್ಞಾನ ಮತ್ತು ಬುದ್ಧಿವಂತಿಕೆಯೊಂದಿಗೆ ಸಂಯೋಜಿಸಿದಾಗ, ಸಹಾನುಭೂತಿಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಇದರಿಂದ ನಾವು ಸರಿಯಾದ ಆಯ್ಕೆಯನ್ನು ಮಾಡಬಹುದಾಗಿದೆ. ನಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದಾಗ ಅಥವಾ ನಮ್ಮ ಸಲಹೆಯಂತೆ ನಡೆಯದಿದ್ದಲ್ಲಿ, ಅಸಮಾಧಾನ ಅಥವಾ ನಿರುತ್ಸಾಹಗೊಳ್ಳದಷ್ಟು ನಾವು ಭಾವನಾತ್ಮಕವಾಗಿ ಪ್ರಬುದ್ಧರಾಗಿದ್ದರೆ, ಸಹಾನುಭೂತಿಯು ನಮ್ಮ ನ್ಯೂನತೆಗಳನ್ನು ನಿವಾರಿಸುವ ಮತ್ತು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಬಲವಾದ ಪ್ರೇರಣೆಯಾಗುತ್ತದೆ.

Top