ಸಂಬಂಧಗಳಲ್ಲಿನ ಈರ್ಷ್ಯೆಯನ್ನು ಹೇಗೆ ನಿಭಾಯಿಸುವುದು

How to jealousy ben blennerhassett unsplash

ನಮ್ಮ ಸ್ನೇಹಿತರು ಮತ್ತು ಸಂಗಾತಿಗಳು ನಮ್ಮನ್ನು ಬಿಟ್ಟುಹೋಗುತ್ತಾರೆ ಎಂಬ ಮತಿವಿಕಲ್ಪವನ್ನು ಹುಟ್ಟಿಸುವುದರಿಂದ, ಈರ್ಷ್ಯೆಯು ನಮ್ಮ ಸಂಬಂಧಗಳನ್ನು ಗೊಂದಲಮಯವಾಗಿ ಮಾಡುತ್ತದೆ ಮತ್ತು ನಾವು ಸಂಪೂರ್ಣವಾಗಿ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಾವು ಹೆಚ್ಚು ಈರ್ಷ್ಯೆ ಮತ್ತು ಸ್ವಾಮ್ಯಶೀಲರಾದಷ್ಟು, ಇತರರನ್ನು ಅಷ್ಟೇ ದೂರ ತಳ್ಳುತ್ತೇವೆ. ನಾವೆಲ್ಲರೂ ಬಹಳಾ ಜನರನ್ನು ಮತ್ತು ವಸ್ತುಗಳನ್ನು ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬುದನ್ನು ಅರಿತುಕೊಂಡರೆ, ಅದು ಈರ್ಷ್ಯೆಯನ್ನು ಜಯಿಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಸ್ನೇಹಿತರು, ವೃತ್ತಿ, ಕ್ರೀಡೆಗಳು ಮತ್ತು ಮುಂತಾದವುಗಳನ್ನು ಪ್ರೀತಿಸುವುದರಿಂದ ನಮಗಿರುವ ನಮ್ಮ ಸಂಗಾತಿಯ ಪ್ರೀತಿ ಅಥವಾ ಅವರ ಮೇಲಿನ ನಮ್ಮ ಪ್ರೀತಿಯು ಕಡಿಮೆಯಾಗುವುದಿಲ್ಲ; ಬದಲಿಗೆ ಅದು ಉತ್ಕೃಷ್ಟಗೊಳ್ಳುತ್ತದೆ. 

‍‍ರ್ಷ್ಯೆ vs ಅಸೂಯೆ 

ಈ‍‍ರ್ಷ್ಯೆಯು ಹಲವಾರು ರೂಪಗಳನ್ನು ಪಡೆದುಕೊಳ್ಳಬಹುದು. ನಾವು ಒಂಟಿಯಾಗಿದ್ದರೆ ಮತ್ತು ದಂಪತಿಗಳ ಬಗ್ಗೆ ಈ‍‍ರ್ಷ್ಯೆಯುಂಟಾದರೆ ಅಥವಾ ಈಗಾಗಲೇ ಸಂಬಂಧದಲ್ಲಿರುವ ಯಾರಿಗಾದರೂ ಆಕರ್ಷಿತವಾಗಿದ್ದರೆ, ಅದು ನಿಜವಾಗಿಯೂ ಅಸೂಯೆಯಾಗಿರುತ್ತದೆ. ಆ ವ್ಯಕ್ತಿಯ ಬದಲು ನಾವು ಆ ಪ್ರೀತಿ ಮತ್ತು ಕಾಳಜಿಯನ್ನು ಪಡೆಯಬೇಕೆಂದು ನಾವು ಬಯಸುತ್ತೇವೆ ಅಥವಾ ಅಂತಹ ಪ್ರೇಮದ ಸಂಬಂಧವನ್ನು ಹೊಂದಬೇಕೆಂದು ನಾವು ಬಯಸುತ್ತೇವೆ. ಈ ಎರಡೂ ಸಂದರ್ಭಗಳಲ್ಲಿ, ನಮ್ಮ ಬಳಿಯಿರದ ವಸ್ತುವಿನ ಬಗ್ಗೆ ನಾವು ಅಸೂಯೆಪಡುತ್ತೇವೆ ಮತ್ತು ಇದರಿಂದ ಅಸಮರ್ಪಕತೆ ಮತ್ತು ಇತರ ಸ್ವಾಭಿಮಾನದ ಸಮಸ್ಯೆಗಳ ಭಾವನೆಗಳು ಉಂಟಾಗಬಹುದು.  

ಸಂಬಂಧಗಳಲ್ಲಿ ‍‍ರ್ಷ್ಯೆ 

ನಾವು ಸಂಬಂಧದಲ್ಲಿರುವಾಗ, ಈ‍‍ರ್ಷ್ಯೆಯಿಂದ ಇನ್ನಷ್ಟು ತೊಂದರೆಗಳು ಉದ್ಭವಿಸಬಹುದು. ಇನ್ನೊಬ್ಬ ವ್ಯಕ್ತಿಯ ಬಳಿ ಇರುವ ವಸ್ತುವಿನ ಮೇಲೆ ಕೇಂದ್ರೀಕರಿಸುವ ಬದಲು, ಇಲ್ಲಿ ನಾವು ನಮ್ಮ ಸಂಗಾತಿ ಅಥವಾ ಸ್ನೇಹಿತ ಮತ್ತು ಮೂರನೇ ವ್ಯಕ್ತಿಯೊಬ್ಬರ ಮೇಲೆ ಕೇಂದ್ರೀಕರಿಸುತ್ತವೆ; ಸಾಮಾನ್ಯವಾಗಿ ನಮ್ಮ ಬಳಿಯಿರುವ ವಿಶೇಷ ಸಂಬಂಧವನ್ನು ಆ ಮೂರನೇ ವ್ಯಕ್ತಿಯು ಕಸಿದುಕೊಳ್ಳುತ್ತಾರೆ ಎಂದು ಭಯಪಡುತ್ತೇವೆ. ಯಾವುದೇ ಪೈಪೋಟಿ ಅಥವಾ ಸಂಭವನೀಯ ವಿಶ್ವಾಸದ್ರೋಹದ ಬಗ್ಗೆ ನಾವು ಅಸಹಿಷ್ಣುರಾಗುತ್ತೇವೆ. ಉದಾಹರಣೆಗೆ, ನಮ್ಮ ಸಂಗಾತಿ ತಮ್ಮ ಸ್ನೇಹಿತರೊಂದಿಗೆ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದರೆ ಅಥವಾ ನಮ್ಮನ್ನು ಬಿಟ್ಟು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರೆ ನಮ್ಮಲ್ಲಿ ಈ‍‍ರ್ಷ್ಯೆ ಹುಟ್ಟುತ್ತದೆ. ಹೊಸ ಮಗು ಮನೆಗೆ ಬಂದಾಗ, ನಮ್ಮ ನಾಯಿ ಕೂಡ ಈ ರೀತಿಯ ಈ‍‍ರ್ಷ್ಯೆಯನ್ನು ಅನುಭವಿಸುತ್ತದೆ. ಈ ರೀತಿಯ ಈ‍‍ರ್ಷ್ಯೆಯು, ಅಭದ್ರತೆ ಮತ್ತು ಅಪನಂಬಿಕೆಯ ಪ್ರಬಲವಾದ ಅಂಶಗಳ ಜೊತೆಗೆ ಅಸಮಾಧಾನ ಮತ್ತು ಹಗೆತನದ ಅಂಶಗಳನ್ನು ಒಳಗೊಂಡಿರುತ್ತದೆ. 

ನಾವು ಅಸುರಕ್ಷಿತರಾಗಿದ್ದರೆ, ನಮ್ಮ ಸಂಗಾತಿ ಅಥವಾ ಸ್ನೇಹಿತರು ಇತರ ಜನರೊಂದಿಗೆ ಬೆರೆಯುವಾಗ, ನಮ್ಮಲ್ಲಿ ಈ‍‍ರ್ಷ್ಯೆ ಉದ್ಭವವಾಗುತ್ತದೆ. ಏಕೆಂದರೆ ನಮ್ಮ ಸ್ವಂತ ಸ್ವಾಭಿಮಾನದ ಬಗ್ಗೆ ನಮಗೆ ಖಚಿತತೆಯಿರುವುದಿಲ್ಲ ಮತ್ತು ನಮಗಾಗಿ ಇರುವ ನಮ್ಮ ಸಂಗಾತಿಯ ಪ್ರೀತಿಯ ಬಗ್ಗೆ ನಿಶ್ಚಿತವಾಗಿರುವುದಿಲ್ಲ - ಇದರಿಂದ ನಮ್ಮ ಸಂಗಾತಿಯ ಮೇಲಿನ ವಿಶ್ವಾಸವು ಹೊರಟುಹೋಗಲು ಕಾರಣವಾಗುತ್ತದೆ. ನಮ್ಮ ಕೈಬಿಡುತ್ತಾರೆ ಎಂದು ನಾವು ಭಯಪಡುತ್ತೇವೆ. ನಮ್ಮ ಸಂಗಾತಿ ಅಥವಾ ಸ್ನೇಹಿತರು ಬೇರೆಯವರೊಂದಿಗೆ ಸಮಯ ಕಳೆಯದಿದ್ದರೂ ಸಹ ಈ ಭಯಹುಟ್ಟಲು ಸಾಧ್ಯವಿದೆ. ವಿಪರೀತ ಸ್ವಾಮ್ಯಸೂಚಕತೆಯೊಂದಿಗೆ, ಅವರು ಯಾವುದೇ ಕ್ಷಣದಲ್ಲಿ ನಮ್ಮನ್ನು ಬಿಟ್ಟು ಹೋಗಬಹುದು ಎಂದು ನಾವು ಮತಿಭ್ರಮಿತರಾಗಿರುತ್ತೇವೆ. 

‍‍ರ್ಷ್ಯೆಯನ್ನು ಜಯಿಸುವುದು 

ಈ‍‍ರ್ಷ್ಯೆಯನ್ನು ಎದುರಿಸುವ ಮೊದಲು, ನಮ್ಮ ಹೃದಯವು ಹೇಗೆ ಎಲ್ಲರನ್ನು ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದರ ಕುರಿತು ನಾವು ಆಲೋಚಿಸಬೇಕಾಗಿದೆ - ಇದು ನಮ್ಮ ಬೌದ್ಧ ಸ್ವಭಾವದ ಒಂದು ಅಂಶವಾಗಿರುತ್ತದೆ. ಈ ಸತ್ಯವನ್ನು ನಾವು ಪುನರುಚ್ಚರಿಸಿದಾಗ, ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದೆಂದರೆ ಇತರರನ್ನು ಪ್ರೀತಿಸದೇ ಇರುವುದೆಂದಲ್ಲ ಎಂಬುದನ್ನು ಅರಿತುಕೊಳ್ಳುವ ಮೂಲಕ ಈ‍‍ರ್ಷ್ಯೆಯನ್ನು ಜಯಿಸಬಹುದಾಗಿದೆ. ನಾವು ನಮ್ಮ ಹೃದಯವನ್ನು ಹೇಗೆ ಹಲವಾರು ಜನರಿಗಾಗಿ ಮತ್ತು ವಿಷಯಗಳಿಗಾಗಿ ತೆರೆಯಬಹುದು ಎಂಬುದನ್ನು ಯೋಚಿಸಿ. ನಮ್ಮ ತೆರೆದ ಹೃದಯದಲ್ಲಿ, ನಮ್ಮ ಸಂಗಾತಿ, ಸ್ನೇಹಿತರು, ಮಕ್ಕಳು, ಸಾಕುಪ್ರಾಣಿಗಳು, ಪೋಷಕರು, ದೇಶ, ಪ್ರಕೃತಿ, ದೇವರು, ಹವ್ಯಾಸಗಳು ಮತ್ತು ಮುಂತಾದವುಗಳಿಗಾಗಿ ಪ್ರೀತಿಯನ್ನು ಹೊಂದಿದ್ದೇವೆ. ಪ್ರೀತಿಯು ಪ್ರತ್ಯೇಕವಾಗಿಲ್ಲದ ಕಾರಣ, ಅವರೆಲ್ಲರಿಗೂ ನಮ್ಮ ಹೃದಯದಲ್ಲಿ ಒಂದು ಸ್ಥಳವಿದೆ. ನಮ್ಮ ಪ್ರೀತಿಗೆ ಪಾತ್ರರಾದ ಇವೆಲ್ಲದರೊಂದಿಗೆ ವ್ಯವಹರಿಸಲು ಮತ್ತು ಸಂಬಂಧಿಸಲು ನಾವು ಸಂಪೂರ್ಣವಾಗಿ ಸಮರ್ಥರಾಗಿದ್ದೇವೆ, ಪ್ರತಿ ವಸ್ತುವಿಗೆ, ಸೂಕ್ತವಾದ ರೀತಿಯಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ಸಹಜವಾಗಿ, ನಾವು ನಮ್ಮ ಪತಿ ಅಥವಾ ಪತ್ನಿ ಅಥವಾ ಪೋಷಕರಿಗೆ ವ್ಯಕ್ತಪಡಿಸುವ ರೀತಿಯಲ್ಲಿಯೇ ನಮ್ಮ ನಾಯಿಗೆ ನಮ್ಮ ಪ್ರೀತಿ ಮತ್ತು ಅಕ್ಕರೆಯನ್ನು ವ್ಯಕ್ತಪಡಿಸುವುದಿಲ್ಲ! 

ನಮ್ಮ ಬಳಿ ತೆರೆದ ಹೃದಯವಿರುವುದು ಸಾಧ್ಯವಾದರೆ, ನಮ್ಮ ಸಂಗಾತಿ ಅಥವಾ ಸ್ನೇಹಿತರ ಬಳಿಯೂ ತೆರೆದ ಹೃದಯವಿರಲು ಸಾಧ್ಯವಾಗಿರುತ್ತದೆ. ಪ್ರತಿಯೊಬ್ಬರ ಹೃದಯವು ಅಗಾಧ ಸಂಖ್ಯೆಯ ಜನರಿಗೆ ಮತ್ತು ವಸ್ತುಗಳಿಗೆ ಪ್ರೀತಿಯನ್ನು ವಿಸ್ತರಿಸುವಂತಹ ಸಾಮರ್ಥ್ಯವನ್ನು ಹೊಂದಿದೆ - ಇಡೀ ಜಗತ್ತಿಗೂ ಸಹ. ಅವರು ಕೇವಲ ನಮಗಾಗಿ ತಮ್ಮ ಪ್ರೀತಿಯನ್ನು ಕಾದರಿಸಿ ಇಟ್ಟು, ಇತರರೊಂದಿಗಿನ ಗೆಳೆತನ ಅಥವಾ ಆಸಕ್ತಿಗಳಲ್ಲಿ ಎಂದಿಗೂ ತೊಡಗಿಸಿಕೊಳ್ಳಬಾರದು ಎಂದು ನಿರೀಕ್ಷಿಸುವುದು ಮತ್ತು ಬೇಡುವುದು ಅನ್ಯಾಯ ಮತ್ತು ಅವಾಸ್ತವಿಕವಾಗಿರುತ್ತದೆ. ಅವರ ಹೃದಯದಲ್ಲಿ ನಮ್ಮನ್ನು ಬಿಟ್ಟು ಇತರ ಜನರಿಗೆ ಸ್ಥಳವಿಲ್ಲ ಎಂದು ಭಾವಿಸುವಷ್ಟು ಅವರ ಬಗ್ಗೆ ಚಿಕ್ಕದಾಗಿ ಯೋಚಿಸುತ್ತೇವೆಯೇ? ಅವರ ಬೌದ್ಧ-ಸ್ವಭಾವದ ಪ್ರೀತಿಯ ಸಾಮರ್ಥ್ಯಗಳನ್ನು ಅರಿತುಕೊಳ್ಳುವುದರಿಂದ ಮತ್ತು ಅದರ ಪರಿಣಾಮವಾಗಿ ಸಿಗುವ ಜೀವನದಲ್ಲಿನ ಹಲವು ದೊಡ್ಡ ಸಂತೋಷಗಳಿಂದ ಅವರನ್ನು ವಂಚಿಸಲು ನಾವು ಬಯಸುತ್ತೇವೆಯೇ? 

ಇಲ್ಲಿ ನಾವು ಲೈಂಗಿಕ ದಾಂಪತ್ಯ ದ್ರೋಹದ ಬಗ್ಗೆ ಮಾತನಾಡುತ್ತಿಲ್ಲ. ಏಕ ವಿವಾಹ ಮತ್ತು ಲೈಂಗಿಕ ವಿಶ್ವಾಸದ್ರೋಹದ ಸಮಸ್ಯೆಗಳು ಅತ್ಯಂತ ಸಂಕೀರ್ಣವಾಗಿದ್ದು, ಅವು ಇನ್ನೂ ಅನೇಕ ಸಮಸ್ಯೆಗಳನ್ನು ಉದ್ಭವಿಸುತ್ತವೆ. ನಮ್ಮ ಲೈಂಗಿಕ ಸಂಗಾತಿಗಳು, ವಿಶೇಷವಾಗಿ ನಮ್ಮ ವೈವಾಹಿಕ ಸಂಗಾತಿಗಳು ವಿಶ್ವಾಸದ್ರೋಹಿಗಳಾಗಿದ್ದರೆ ಅಥವಾ ಇತರರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರೆ - ವಿಶೇಷವಾಗಿ ನಮ್ಮ ಬಳಿ ಚಿಕ್ಕ ಮಕ್ಕಳಿರುವಾಗ – ಈ‍‍ರ್ಷ್ಯೆ, ಅಸಮಾಧಾನ ಮತ್ತು ಸ್ವಾಮ್ಯಸೂಚಕವು ಎಂದಿಗೂ ಸಹಾಯಕವಾಗುವ ಭಾವನಾತ್ಮಕ ಪ್ರತಿಕ್ರಿಯೆಗಳಲ್ಲ. ನಾವು ಪರಿಸ್ಥಿತಿಯನ್ನು ಸಮಚಿತ್ತದಿಂದ ಎದುರಿಸಬೇಕಾಗಿದೆ, ಏಕೆಂದರೆ ನಮ್ಮ ಸಂಗಾತಿಗಳನ್ನು ಬೈಯುವುದು ಅಥವಾ ಅವರು ತಪ್ಪಿತಸ್ಥರೆಂದು ತೋರಿಸಲು ಪ್ರಯತ್ನಿಸುವುದರಿಂದ ಅವರು ನಮ್ಮನ್ನು ಪ್ರೀತಿಸುವಂತೆ ಮಾಡುವಲ್ಲಿ ಯಶಸ್ವಿಯಾಗುವುದಿಲ್ಲ.

ಮುಕ್ತ ಹೃದಯದಿಂದ ಪ್ರೀತಿಯನ್ನು ಸ್ವಾಗತಿಸುವುದು

ನಿಕಟವಾದ ಪ್ರೀತಿಯಿಂದ ಕೂಡಿದ ಸ್ನೇಹವು ಕೇವಲ ಒಬ್ಬ ವ್ಯಕ್ತಿಯೊಂದಿಗೆ ಮಾತ್ರ ಹಂಚಿಕೊಳ್ಳಲು ಸಾಧ್ಯವೆಂದು ನಾವು ಯೋಚಿಸಿದಾಗ, ಕೇವಲ ಒಬ್ಬ ವ್ಯಕ್ತಿಯ - ನಮ್ಮ ಸಂಗಾತಿ ಅಥವಾ ಸ್ನೇಹಿತ - ಪ್ರೀತಿಯೇ ಮುಖ್ಯವಾದುದು ಎಂದು ನಾವು ಭಾವಿಸುತ್ತೇವೆ. ನಮ್ಮನ್ನು ಪ್ರೀತಿಸುವ ಬಹಳಷ್ಟು ಜನರು ಇದ್ದರೂ, ನಾವು ಆ ಸತ್ಯವನ್ನು ನಿರ್ಲಕ್ಷಿಸುತ್ತೇವೆ ಮತ್ತು "ಅದು ಅಷ್ಟು ಮಹತ್ವದಲ್ಲ" ಎಂದು ಯೋಚಿಸುತ್ತೇವೆ. ನಮ್ಮ ಹೃದಯವನ್ನು ನಿರಂತರವಾಗಿ ಇತರರಿಗಾಗಿ ತೆರೆಯುವುದರಿಂದ ಮತ್ತು ಇತರರು - ಸ್ನೇಹಿತರು, ಸಂಬಂಧಿಕರು, ಸಾಕುಪ್ರಾಣಿಗಳು ಮತ್ತು ಹೀಗೆ – ನಮಗಾಗಿ ಹೊಂದಿರುವ ಪ್ರೀತಿಯನ್ನು ಅಂಗೀಕರಿಸುವುದರಿಂದ – ಇಂದಿನ, ಹಿಂದಿನ ಮತ್ತು ಭವಿಷ್ಯದಲ್ಲಿನ - ನಾವು ಭಾವನಾತ್ಮಕವಾಗಿ ಹೆಚ್ಚು ಸುರಕ್ಷಿತವಾಗಿರುವುದನ್ನು ಅನುಭವಿಸಬಹುದಾಗಿದೆ. ಪ್ರತಿಯಾಗಿ, ನಮ್ಮ ಪ್ರೀತಿಯ ಯಾವುದೇ ವಸ್ತುವಿನ ಮೇಲಿನ ಅಸಹಜ ರೀತಿಯ ಸ್ಥಿರೀಕರಣವನ್ನು ಮೀರಲು ನಮಗೆ ಸಹಾಯ ಮಾಡುತ್ತದೆ. 

ಸರ್ವಜ್ಞ ಮತ್ತು ಸರ್ವ-ಪ್ರೇಮಿ – ಇವೆರಡೂ ಪ್ರತಿಯೊಬ್ಬರನ್ನು ನಮ್ಮ ಮನಸ್ಸು ಮತ್ತು ಹೃದಯದಲ್ಲಿಟ್ಟುಕೊಳ್ಳುವುದನ್ನು ಸೂಚಿಸುತ್ತದೆ. ಅದೇನೇ ಇದ್ದರೂ, ಒಬ್ಬ ಬುದ್ಧ ಒಬ್ಬ ವ್ಯಕ್ತಿಯ ಮೇಲೆ ಮಾತ್ರ ಗಮನಹರಿಸಿದಾಗ, ಆ ವ್ಯಕ್ತಿಯ ಮೇಲೆ ಅವರು 100% ಕೇಂದ್ರೀಕೃತವಾಗಿರುತ್ತಾರೆ. ಆದ್ದರಿಂದ, ಪ್ರತಿಯೊಬ್ಬರನ್ನು ಪ್ರೀತಿಸುವುದೆಂದರೆ, ಪ್ರತಿಯೊಬ್ಬ ವ್ಯಕ್ತಿಯ ಮೇಲಿನ ಪ್ರೀತಿಯು ದುರ್ಬಲಗೊಂಡಿರುತ್ತದೆ ಎಂದು ಅರ್ಥವಲ್ಲ. ನಾವು ಬಹಳಾ ಜನರಿಗೆ ನಮ್ಮ ಹೃದಯವನ್ನು ತೆರೆದರೆ, ನಮ್ಮ ವೈಯಕ್ತಿಕ ಸಂಬಂಧಗಳ ತೀವ್ರತೆ ಅಥವಾ ಪರಿಪೂರ್ಣತೆಯು ಕಡಿಮೆಯಾಗುತ್ತದೆ ಎಂದು ನಾವು ಭಯಪಡಬೇಕಾಗಿಲ್ಲ. ಒಂದೇ ಸಂಬಂಧದಿಂದ ಸಿಗುವ ತೃಪ್ತಿಯ ಮೇಲಿನ ನಮ್ಮ ಬಾಂಧವ್ಯ ಮತ್ತು ಅವಲಂಬನೆ ಕಡಿಮೆಯಾಗಬಹುದು ಮತ್ತು ನಾವು ಪ್ರತಿಯೊಂದು ವ್ಯಕ್ತಿಯೊಡನೆ ಕಡಿಮೆ ಸಮಯ ಕಳೆಯಬಹುದು, ಆದರೆ ಪ್ರತಿಯೊಂದು ಸಂಬಂಧವೂ ಪರಿಪೂರ್ಣವಾಗಿರುತ್ತದೆ. ನಮ್ಮ ಜೊತೆಗೆ ಇತರರೊಂದಿಗೆ ಪ್ರೀತಿಯಿಂದ ಕೂಡಿದ ಸ್ನೇಹವಿದ್ದಾಗ, ನಮಗಿರುವ ಪ್ರೀತಿಯು ದುರ್ಬಲಗೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯಿಂದ ನಮ್ಮಲ್ಲಿ ಉಂಟಾಗುವ ಈರ್ಷ್ಯೆಯ ಭಾವನೆಗೂ ಇದನ್ನು ಅನ್ವಯಿಸಬಹುದಾಗಿದೆ.  

ಯಾವುದೇ ಒಬ್ಬ ವ್ಯಕ್ತಿಯಿಂದ, ನಮಗೆ ಪರಿಪೂರ್ಣವಾದ ಹೊಂದಾಣಿಕೆ ಸಿಗುತ್ತದೆ ಎಂದು ಯೋಚಿಸುವುದು, ನಮ್ಮನ್ನು "ಪೂರೈಸುವ ಅರ್ಧಾಂಗಿ"ಯು ನಮಗೆ ಎಲ್ಲಾ ರೀತಿಯಲ್ಲಿ ಪೂರಕವಾಗಿರುತ್ತಾರೆ ಮತ್ತು ನಮ್ಮ ಜೀವನದ ಪ್ರತಿಯೊಂದು ಅಂಶವನ್ನು ಅವರೊಂದಿಗೆ ಹಂಚಿಕೊಳ್ಳಬಹುದು ಎಂದು ಯೋಚಿಸುವುದು ಅವಾಸ್ತವಿಕವಾಗಿದೆ. ಅಂತಹ ಕಲ್ಪನೆಗಳು ಪ್ಲೇಟೋವಿನ ಪ್ರಾಚೀನ ಗ್ರೀಕ್ ಪುರಾಣವನ್ನು ಆಧರಿಸಿವೆ - ಮೂಲತಃ ನಾವೆಲ್ಲರೂ ಸಂಪೂರ್ಣರಾಗಿರುತ್ತೇವೆ, ಮತ್ತು ಎರಡು ಭಾಗಗಳಾಗಿ ವಿಭಜಿಸಲ್ಪಟ್ಟಿರುತ್ತೇವೆ. ಎಲ್ಲೋ "ಹೊರಗೆ" ನಮ್ಮ ಉಳಿದ ಅರ್ಧವಿರುತ್ತದೆ; ಮತ್ತು ನಾವು ನಮ್ಮ ಉಳಿದ ಭಾಗವನ್ನು ಕಂಡುಕೊಂಡಾಗ, ಮತ್ತು ಮತ್ತೆ ಒಂದಾದಾಗ, ಅದು ನಿಜವಾದ ಪ್ರೀತಿಯಾಗಿರುತ್ತದೆ. ಈ ಪುರಾಣವು ಪಾಶ್ಚಾತ್ಯ ರೊಮ್ಯಾಂಟಿಸಿಸಂಗೆ ಅಡಿಪಾಯವಾಗಿದ್ದರೂ, ಇದು ವಾಸ್ತವವನ್ನು ಉಲ್ಲೇಖಿಸುವುದಿಲ್ಲ. ಅದು ಯಾರೋ ಸುಂದರಾಂಗ ರಾಜಕುಮಾರನು ಒಂದು ಬಿಳಿಯ ಕುದುರೆಯ ಮೇಲೇರಿ ನಮ್ಮನ್ನು ರಕ್ಷಿಸಲು ಬರುತ್ತಾನೆ ಎಂಬುದನ್ನು ನಂಬುವ ಹಾಗಿದೆ. ನಮ್ಮ ಎಲ್ಲಾ ಆಸಕ್ತಿಗಳು ಮತ್ತು ಅಗತ್ಯಗಳನ್ನು ಹಂಚಿಕೊಳ್ಳಲು ನಮಗೆ ಅನೇಕ ಜನರೊಂದಿಗೆ ಪ್ರೀತಿಯಿಂದ ಕೂಡಿದ ಸ್ನೇಹದ ಅಗತ್ಯವಿದೆ. ಇದು ನಮಗೆ ಸತ್ಯವಾದಲ್ಲಿ, ನಮ್ಮ ಸಂಗಾತಿ ಮತ್ತು ಸ್ನೇಹಿತರಿಗೂ ಸತ್ಯವಾಗಿರುತ್ತದೆ. ಅವರ ಎಲ್ಲಾ ಅಗತ್ಯಗಳನ್ನು ಪೂರೈಸುವುದು ನಮಗೆ ಅಸಾಧ್ಯ, ಆದ್ದರಿಂದ ಅವರಿಗೂ ಇತರರ ಗೆಳೆತನ ಬೇಕಾಗಿರುತ್ತದೆ. 

ಸಾರಾಂಶ 

ನಮ್ಮ ಜೀವನದಲ್ಲಿ ಹೊಸಬರು ಬಂದಾಗ, ಅವರನ್ನು ನಮ್ಮ ಕಿಟಕಿಗೆ ಹಾರಿಬಂದ ಸುಂದರವಾದ ಕಾಡು ಹಕ್ಕಿಯಂತೆ ಕಾಣವುದರಿಂದ ಸಹಾಯವಾಗುತ್ತದೆ. ಆ ಹಕ್ಕಿಯು ಇತರ ಜನರ ಕಿಟಕಿಗಳಿಗೆ ಹೋಗುತ್ತದೆ ಎಂದು ನಾವು ಈರ್ಷ್ಯೆಯಿಂದ ಅದನ್ನು ಪಂಜರದಲ್ಲಿಟ್ಟರೆ, ಅದು ದಯನೀಯ ಸ್ಥಿತಿಯಲ್ಲಿದ್ದು, ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಮತ್ತು ಸಾಯಲೂಬಹುದು. ಸ್ವಾಮ್ಯಸೂಚಕತೆ ಇಲ್ಲದೆ, ನಾವು ಹಕ್ಕಿಯನ್ನು ಮುಕ್ತವಾಗಿ ಹಾರಲು ಬಿಟ್ಟರೆ, ಆ ಹಕ್ಕಿಯೊಂದಿಗಿನ ನಮ್ಮ ಅದ್ಭುತ ಸಮಯವನ್ನು ಆನಂದಿಸಬಹುದು. ತನ್ನ ಹಕ್ಕಿನಂತೆ ಅದು ಹಾರಿಹೋದಾಗ, ಅದಕ್ಕೆ ನಮ್ಮೊಂದಿಗೆ ಸುರಕ್ಷಿತವೆನಿಸಿದರೆ ಅದು ನಮ್ಮ ಬಳಿ ಹಿಂತಿರುಗಲು ಸೂಕ್ತವೆಂದು ನಿರ್ಧರಿಸುತ್ತದೆ. ನಮ್ಮನ್ನೂ ಒಳಗೊಂಡಂತೆ ಅನೇಕ ನಿಕಟ ಗೆಳೆತನವನ್ನು ಹೊಂದಲು ಪ್ರತಿಯೊಬ್ಬರಿಗೂ ಹಕ್ಕಿದೆ ಎಂಬುದನ್ನು ನಾವು ಒಪ್ಪಿಕೊಂಡರೆ ಮತ್ತು ಗೌರವಿಸಿದರೆ, ನಮ್ಮ ಸಂಬಂಧಗಳು ಆರೋಗ್ಯಕರವಾಗಿರುತ್ತವೆ ಮತ್ತು ದೀರ್ಘಕಾಲ ಉಳಿಯುತ್ತವೆ.

Top