"ಸಂಘ" ಎಂಬ ಪದವು "ಸಮುದಾಯ" ಎಂಬರ್ಥದ ಸಂಸ್ಕೃತ ಪದದಿಂದ ಬಂದಿದೆ ಮತ್ತು ಇದನ್ನು ಪ್ರಾಥಮಿಕವಾಗಿ ಭಿಕ್ಷುಗಳು ಮತ್ತು ಭಿಕ್ಷುನಿಗಳು ಅಥವಾ ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಎಂದು ಕರೆಯಲ್ಪಡುವ ಬುದ್ಧನ ದೀಕ್ಷೆ ಪಡೆದ ಅನುಯಾಯಿಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಬೌದ್ಧಧರ್ಮವು ಪಾಶ್ಚಿಮಾತ್ಯ ಪ್ರಪಂಚದಾದ್ಯಂತ ಹರಡಿದ್ದು, ಬೌದ್ಧ ಸಮುದಾಯ ಅಥವಾ ಧರ್ಮ ಕೇಂದ್ರಗಳಲ್ಲಿ ಸಾಧಾರಣ ಅನುಯಾಯಿಗಳ ಸಣ್ಣ ಗುಂಪುಗಳು, ಸಂಘವನ್ನು ರೂಪಿಸುವುದು ಸಾಮಾನ್ಯವಾಗಿದೆ.
What is sangha 1

ಸಂಘದ ಮೂಲಗಳು 

ಧರ್ಮಚಕ್ರಪ್ರವರ್ತನ ಸೂತ್ರದ ಪ್ರಕಾರ, ಬುದ್ಧನಿಗೆ ಜ್ಞಾನೋದಯವಾದ ನಂತರ, ಅವರು ತಮ್ಮ ಮೊದಲ ಬೋಧನೆಯನ್ನು ನಾಲ್ಕು ಆರ್ಯ ಸತ್ಯಗಳ ಮೇಲೆ, ಅವರೊಂದಿಗೆ ಹಲವಾರು ವರ್ಷಗಳಿಂದ ತಪಸ್ಸನ್ನಾಚರಿಸಿದ ಐದು ಸ್ನೇಹಿತರಿಗೆ ನೀಡಿದರು. ಈ ಬೋಧನೆಯ ಸಮಯದಲ್ಲಿ, ಎಲ್ಲಾ ಐವರು ತಪಸ್ವಿಗಳು ಅವರ ಶಿಷ್ಯರಾದರು, ಮತ್ತು ಅವರಲ್ಲಿ, ಕೌಂಡಿನ್ಯ ವಿಮೋಚನೆಯ ಜೀವಿಯಾದ ಅರ್ಹಂತ್ ಸ್ಥಿತಿಯನ್ನು ಸಾಧಿಸಿದರು. ಕೆಲವು ದಿನಗಳ ನಂತರ, ಆತ್ಮದ ಶೂನ್ಯತೆಯ ಬಗ್ಗೆ ಅಥವಾ ಆತ್ಮವು ಅಸಾಧ್ಯವಾದ ರೀತಿಗಳಲ್ಲಿ ಅಸ್ತಿತ್ವದಲ್ಲಿರಲಾಗದ ಬಗ್ಗೆ ಕಲಿಸುವಾಗ, ಇತರ ತಪಸ್ವಿಗಳೂ ಸಹ ಅರ್ಹಂತವನ್ನು ಪಡೆದರು. ಹೀಗೆ ಈ ಐದು ಶಿಷ್ಯರು ಸಂಘದ ಮೊದಲ ಸದಸ್ಯರಾದರು, ಅಂದರೆ ಮೊದಲ ಬೌದ್ಧ ಸನ್ಯಾಸಿಗಳಾದರು. 

ನಂತರ, ಬುದ್ಧನು ತಮ್ಮ ಉಳಿದ ಜೀವನವನ್ನು - ಒಟ್ಟು ಸುಮಾರು 45 ವರ್ಷಗಳು - ಅವರು ಕಂಡುಹಿಡಿದ ಧರ್ಮ ಬೋಧನೆಗಳನ್ನು ಸಾರಲು ಮುಡುಪಾಗಿಟ್ಟರು, ಜೊತೆಗೆ ಅವರ ಶಿಷ್ಯರು, ಬುದ್ಧನ ಸಂದೇಶವನ್ನು ಸ್ವತಃ ಹರಡಲು ಉತ್ತರ ಭಾರತದ ಬಯಲು ಪ್ರದೇಶದ ಹಳ್ಳಿಗಳು ಮತ್ತು ಪಟ್ಟಣಗಳಿಗೆ ಪ್ರಯಾಣಿಸಿದರು. ತ್ವರಿತವಾಗಿ, ಇತರ ಆಧ್ಯಾತ್ಮಿಕ ಶಿಕ್ಷಕರು, ರಾಜರು ಮತ್ತು ರಾಣಿಯರು, ರೈತರು ಮತ್ತು ಕಟುಕರು ಸೇರಿದಂತೆ ಎಲ್ಲಾ ಸಾಮಾಜಿಕ ವ್ಯಾಪ್ತಿಯಿಂದ ಅನೇಕ ಅನುಯಾಯಿಗಳನ್ನು ಬುದ್ಧ ಆಕರ್ಷಿಸಿದರು. ಬಹುಪಾಲು ಶಿಷ್ಯರು ಪ್ರಾಪಂಚಿಕ ಜೀವನವನ್ನು ತ್ಯಜಿಸಲು ಬಯಸದಿದ್ದರೂ, ಲೌಕಿಕ ಜೀವನವನ್ನು ತೊರೆದು ಸೇರಲು ಬಯಸುವವರನ್ನು ಸಂಘವು ಸ್ವಾಗತಿಸಿತ್ತು. ಕೆಲಸ ಮತ್ತು ವಿವಾಹವನ್ನು ಮುಂದುವರೆಸಿದ ಸಾಮಾನ್ಯ ಶಿಷ್ಯರು, ಆಹಾರ ಮತ್ತು ಬಟ್ಟೆಯನ್ನು ನೀಡುವುದರೊಂದಿಗೆ ಸಂಘವನ್ನು ಬೆಂಬಲಿಸಿದರು. 

ಕಾಲಾನಂತರದಲ್ಲಿ, ಹೆಚ್ಚು ಹೆಚ್ಚು ಜನರು ಬುದ್ಧನನ್ನು ಔಪಚಾರಿಕವಾಗಿ ಸೇರಿಕೊಂಡಂತೆ, ಸಾಮರಸ್ಯದ ಆಧ್ಯಾತ್ಮಿಕ ಸಮುದಾಯವನ್ನು ರಚಿಸಲು, ಶಿಷ್ಯರು ಅನುಸರಿಸಬೇಕಾದ ನಿಯಮಗಳನ್ನು ರಚಿಸುವುದು ಅಗತ್ಯವಾಯಿತು. ಸಂಘದೊಳಗೆ ಸಂಭವಿಸುವ ಅನಪೇಕ್ಷಿತ ಫಲಿತಾಂಶಗಳ ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ಅಗತ್ಯವಿದ್ದಲ್ಲಿ ಪ್ರಯೋಗ ಮತ್ತು ದೋಷದ ಮೂಲಕ ನಿಯಮಗಳನ್ನು ರೂಪಿಸಲಾಯಿತು. ಬುದ್ಧನ ಜೀವನದ ಅಂತ್ಯಕಾಲದಲ್ಲಿ, ಸನ್ಯಾಸಿಗಳು ಮತ್ತು ಸನ್ಯಾಸಿನಿಗಳಿಗೆ ನೂರಾರು ನಿಯಮಗಳು ಇದ್ದವು.

ಮಹಿಳೆಯರ ದೀಕ್ಷೆ

ಆರಂಭದಲ್ಲಿ, ಬುದ್ಧನು ಕೇವಲ ಪುರುಷರನ್ನು ಬೌದ್ಧ ಪದ್ಧತಿಗೆ ಸೇರಿಸಿದರು. ಸನ್ಯಾಸತ್ವದ ಪದ್ಧತಿಯನ್ನು ಸ್ಥಾಪಿಸಿದ ಐದು ವರ್ಷಗಳ ನಂತರ, ಬುದ್ಧನ ಚಿಕ್ಕಮ್ಮ ಮಹಾಪ್ರಜಾಪತಿ ಗೌತಮಿ ತಮ್ಮನ್ನು ಸನ್ಯಾಸಿನಿಯಾಗಿ ಸ್ವೀಕರಿಸುವಂತೆ ಬುದ್ಧನಲ್ಲಿ ವಿನಂತಿಸಿದರು, ಆದರೆ ಅವರು ನಿರಾಕರಿಸಿದರು. ಆದರೂ, ಮಹಾಪ್ರಜಾಪತಿ ಧೈರ್ಯಗೆಡದೆ, 500 ಇತರ ಮಹಿಳೆಯರೊಂದಿಗೆ ತಮ್ಮ ತಲೆ ಬೋಳಿಸಿ, ಹಳದಿ ನಿಲುವಂಗಿಯನ್ನು ಧರಿಸಿ, ಬುದ್ಧನನ್ನು ಅನುಸರಿಸಲು ನಿರ್ಧರಿಸಿದರು. 

ಮಹಾಪ್ರಜಾಪತಿ ಬುದ್ಧನಲ್ಲಿ ಇನ್ನೂ ಎರಡು ವಿನಂತಿಗಳನ್ನು ಮಾಡಿದರು ಮತ್ತು ಪ್ರತಿ ಬಾರಿ ಬುದ್ಧ ಅವರಿಗೆ ದೀಕ್ಷೆ ನೀಡಲು ನಿರಾಕರಿಸಿದರು. ನಾಲ್ಕನೇ ಸಂದರ್ಭದಲ್ಲಿ, ಬುದ್ಧನ ಸೋದರಸಂಬಂಧಿ ಆದ ಆನಂದ, ಅವರ ಪರವಾಗಿ ಮಧ್ಯಸ್ಥಿಕೆ ವಹಿಸಿ, ಆಧ್ಯಾತ್ಮಿಕ ಹಾದಿಯಲ್ಲಿ ಮುಂದುವರಿಯಲು ಮತ್ತು ಜ್ಞಾನೋದಯವನ್ನು ಪಡೆಯಲು ಪುರುಷರಂತೆ ಸಮಾನವಾದ ಸಾಮರ್ಥ್ಯವು ಮಹಿಳೆಯರಿಗೆ ಇದೆಯೇ ಎಂದು ಕೇಳಿದರು. ಅದಕ್ಕೆ ಬುದ್ಧ ದೃಢವಾಗಿ ಸಕಾರಾತ್ಮಕವಾಗಿ ಉತ್ತರಿಸಿದರು. ನಂತರ ಮಹಿಳೆಯರು ಸನ್ಯಾಸಿನಿಯರಾಗುವುದು ಒಳ್ಳೆಯದು ಎಂದು ಆನಂದ ಸಲಹೆ ನೀಡಿದರು, ಆಗ ಬುದ್ಧ ಮಹಿಳೆಯರಿಗೆ ಶಿಷ್ಯರ ದೀಕ್ಷೆಯನ್ನು ನೀಡಲು ಸಮ್ಮತಿಸಿದರು. 

ಸಾಂಪ್ರದಾಯಿಕ ಸಂಘ ಮತ್ತು ಆರ್ಯ ಸಂಘ 

ಸಾಮಾನ್ಯವಾಗಿ, ಬುದ್ಧನ ಬೋಧನೆಗಳನ್ನು ಅನುಸರಿಸುವ ಸನ್ಯಾಸಿನಿಗಳು ಮತ್ತು ಸನ್ಯಾಸಿಗಳಾದ ಭಿಕ್ಷುಗಳು ಮತ್ತು ಭಿಕ್ಷುನಿಗಳ ಈ ಎರಡು ಗುಂಪುಗಳನ್ನು ಉಲ್ಲೇಖಿಸಲು ಸಂಘ ಎಂಬ ಪದವನ್ನು ಬಳಸಲಾಗುತ್ತದೆ. "ಭಿಕ್ಷುಕ" ಎಂಬ ಪದವನ್ನು ಏಕೆ ಬಳಸಲಾಗಿದೆ ಎಂದರೆ, ದೀಕ್ಷೆ ಪಡೆದ ಸಮುದಾಯವು, ಹೆಚ್ಚಿನ ಬೌತಿಕ ಆಸ್ತಿಯನ್ನು ತ್ಯಜಿಸಿ, ಆಹಾರಕ್ಕಾಗಿ ಇತರರನ್ನು ಅವಲಂಬಿಸಿ, ಸ್ಥಳದಿಂದ ಸ್ಥಳಕ್ಕೆ ಅಲೆದಾಡಬೇಕಾಗಿತ್ತು. ಸಂಘವನ್ನು ರಚಿಸಲು ಕನಿಷ್ಠ ನಾಲ್ವರ ಅಗತ್ಯವಿದೆ – ಅವರು ಸಂಪೂರ್ಣ ದೀಕ್ಷೆ ಪಡೆದವರಾಗಿರಬಹುದು ಅಥವಾ ಅನನುಭವಿ ಸನ್ಯಾಸಿನಿಗಳು ಅಥವಾ ಸನ್ಯಾಸಿಗಳಾಗಿರಬಹುದು - ಅವರ ಅರಿವು ಅಥವಾ ಸಾಕ್ಷಾತ್ಕಾರದ ಮಟ್ಟ ಏನೇ ಆಗಿರಬಹುದು. ಇದನ್ನು ನಾವು ಸಾಂಪ್ರದಾಯಿಕ ಸಂಘ ಎಂದು ಕರೆಯುತ್ತೇವೆ. ಶಿಷ್ಯರಲ್ಲದಿದ್ದರೂ, ಧರ್ಮಮಾರ್ಗದ ಕೆಲವು ಸಾಕ್ಷಾತ್ಕಾರಗಳನ್ನು ನಿಜವಾಗಿಯೂ ಸಾಧಿಸಿದ ವ್ಯಕ್ತಿಗಳನ್ನು ಸೂಚಿಸುವ ಆರ್ಯ ಸಂಘವೂ ಇದೆ. 

ಸಾಂಪ್ರದಾಯಿಕ ಸಂಘ ಮತ್ತು ಆರ್ಯ ಸಂಘಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಬಹಳ ಮುಖ್ಯ. ಅತ್ಯುತ್ತಮವಾದ ಸಾಮಾನ್ಯ ಸನ್ಯಾಸಿನಿಗಳು ಮತ್ತು ಸನ್ಯಾಸಿಗಳು ಬಹಳಷ್ಟು ಇದ್ದರೂ, ಅವರಲ್ಲಿ ಕೆಲವರು ನಮ್ಮಂತೆಯೇ ಭಾವನಾತ್ಮಕವಾಗಿ ತೊಂದರೆಗೊಳಗಾದವರು ಇರಬಹುದು – ಆದ್ದರಿಂದ ನಾವು ಅವರಲ್ಲಿ ಏಕೆ ಆಶ್ರಯ ಪಡೆಯಬೇಕು ಎಂಬ ಪ್ರಶ್ನೆಯು ಹುಟ್ಟಬಹುದು. ಹೀಗಾಗಿ ತ್ರಿರತ್ನಗಳಲ್ಲಿ ಒಂದಾದ ಆರ್ಯ ಸಂಘವೇ ನಾವು ಆಶ್ರಯ ಪಡೆಯುವ ನಿಜವಾದ ರತ್ನ. ನಮ್ಮನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುವಂತೆ ಅವರು ಪ್ರಾಮಾಣಿಕವಾಗಿ ಸಹಾಯ ಮಾಡುವರು.

ಸಂಘದ ಗುಣಗಳು 

ಹಾಗಾದರೆ, ನಾವು ನಮ್ಮಲ್ಲಿ ಅಭಿವೃದ್ಧಿಪಡಿಸಲು ಬಯಸುವ ಯಾವ ರೀತಿಯ ಗುಣಗಳನ್ನು ಸಂಘದಲ್ಲಿ ಕಾಣಬಹುದು? 

  1. ಅವರು ಕಲಿಸುವಾಗ, ಕೇವಲ ಪುಸ್ತಕ ಜ್ಞಾನವನ್ನು ಪುನರಾವರ್ತಿಸುವುದಿಲ್ಲ, ಬದಲಿಗೆ ತಮ್ಮದೇ ಆದ ಅಧಿಕೃತ ಅನುಭವದಿಂದ ಮಾತನಾಡುತ್ತಾರೆ - ಇದು ನಿಜವಾಗಿಯೂ ಸ್ಪೂರ್ತಿದಾಯಕವಾಗಿರುತ್ತದೆ. 
  2. ಅವರ ಏಕೈಕ ಆಸೆ ಇತರರಿಗೆ ಸಹಾಯ ಮಾಡುವುದಾಗಿದ್ದು, ಅವರು ಮಾತುಗಳನ್ನು ಅವರೇ ಪಾಲಿಸುತ್ತಾರೆ. ಉದಾಹರಣೆಗೆ, ಧೂಮಪಾನದ ಅಪಾಯಗಳ ಬಗ್ಗೆ ಧೂಮಪಾನಿಯೊಬ್ಬರು ನಮಗೆ ಬುದ್ಧಿವಾದ ಹೇಳಿದರೆ, ನಾವು ಅವರ ಸಲಹೆಯನ್ನು ಏಕೆ ಅನುಸರಿಸಬೇಕು ಎಂದು ಯೋಚಿಸುತ್ತೇವೆ ಅಲ್ಲವೇ? ಆದ್ದರಿಂದ ಸಂಘವು ತಮ್ಮ ಕಾರ್ಯಗಳನ್ನು ಪ್ರಾಮಾಣಿಕತೆಯಿಂದ ನಡೆಸುವುದರಿಂದ, ನಾವು ಅವರನ್ನು ನಿಜವಾಗಿಯೂ ನಂಬಬಹುದಾಗಿದೆ. 
  3. ನಾವು ದುಷ್ಟರ ಸಹವಾಸದಲ್ಲಿರುವಾಗ, ನಾವು ಅವರ ದುಷ್ಟ ಗುಣಗಳನ್ನು ಎಷ್ಟರಮಟ್ಟಿಗೆ ಅನುಸರಿಸುತ್ತೇವೆ ಎಂಬುದು ನಮಗೆ ಅರಿವಾಗುವುದಿಲ್ಲ. ಅಂತೆಯೇ, ನಾವು ಉತ್ತಮ ಸ್ನೇಹಿತರೊಂದಿಗೆ ಬೆರೆಯುತ್ತಿದ್ದರೆ, ಹೆಚ್ಚು ಶ್ರಮವಿಲ್ಲದೆ, ನಾವು ಉತ್ತಮ ಗುಣಗಳನ್ನು ತ್ವರಿತವಾಗಿ ಪಡೆದುಕೊಳ್ಳುತ್ತೇವೆ. ಆದ್ದರಿಂದ, ನಮ್ಮ ಧರ್ಮಾಚರಣೆಯ ಸುಧಾರಣೆಯ ಮೇಲೆ ಸಂಘವು ಉತ್ತಮ ಪ್ರಭಾವವನ್ನು ಬೀರುತ್ತದೆ. 

ಸಂಘದ ಪ್ರಾಮುಖ್ಯತೆ 

ಸುಮಾರು 2500 ವರ್ಷಗಳ ಹಿಂದೆ ಬುದ್ಧನು ನಮ್ಮನ್ನು ಅಗಲಿ, ಅವರ ಬೋಧನೆಗಳನ್ನು - ಧರ್ಮವನ್ನು - ನಮ್ಮ ಅಭ್ಯಾಸಕ್ಕಾಗಿ ಬಿಟ್ಟುಹೋದರು. ಇದೇ ಬೌದ್ಧಧರ್ಮದ ಮೂಲ. ಆದರೆ ನಾವು ಇದನ್ನು ಉತ್ತಮವಾಗಿ ಅಭ್ಯಸಿಸಲು, ನಮಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು, ಬುದ್ಧನ ಬೋಧನೆಗಳನ್ನು ನಿಜವಾಗಿಯೂ ಕಲಿತ ಮತ್ತು ಅಧ್ಯಯನ ಮಾಡಿದ ಮತ್ತು ಅಭ್ಯಾಸ ಮಾಡಿದ ಮತ್ತು ಅದರ ಕೆಲವು ಗುರಿಗಳನ್ನು ಸಾಧಿಸಿದ ವಿಶ್ವಾಸಾರ್ಹ ವ್ಯಕ್ತಿಗಳ ಉದಾಹರಣೆಗಳ ಅಗತ್ಯವಿದೆ. ಅಂಥವರ ಒಂದು ಸಮುದಾಯವೇ ಸಂಘ.

ಇತ್ತೀಚಿನ ದಿನಗಳಲ್ಲಿ, ನಾವು ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು ನಮ್ಮ ರೋಲ್ ಮಾಡೆಲ್‌ಗಳಾಗಿ ನೋಡುತ್ತೇವೆ: ನಟರು ಮತ್ತು ನಟಿಯರು, ಮಾಡೆಲ್‌ಗಳು, ಗಾಯಕರು ಮತ್ತು ಕ್ರೀಡಾಪಟುಗಳು. ಆದರೆ ಈ ಜನರಿಗೆ ತಮ್ಮದೇ ಆದ ಸಮಸ್ಯೆಗಳಿರುತ್ತವೆ ಅಲ್ಲವೇ? ಸಾಮಾನ್ಯವಾಗಿ ಅವರ ವೈಯಕ್ತಿಕ ಜೀವನದಲ್ಲಿ ಅವರು ಗೊಂದಲಕ್ಕೊಳಗಾಗಿರುತ್ತಾರೆ ಎಂದು ನಮಗೆ ತಿಳಿದಿದೆ! ಅಷ್ಟೇ ಅಲ್ಲ, ಸೆಲೆಬ್ರಿಟಿಗಳ ಮತ್ತು ಅವರ ಜೀವನದ ಬಗ್ಗೆ ವ್ಯಾಮೋಹ ಬೆಳೆಸಿಕೊಂಡಾಗ, ನಾವು ನಮ್ಮ ಸ್ನೇಹಿತರೊಂದಿಗೆ ಅದರ ಬಗ್ಗೆ ಹರಟೆ ಹೊಡೆಯಲು ಮತ್ತು ಭೌತಿಕ ಬಾಂಧವ್ಯಗಳಿಗೆ ಹೆಚ್ಚಾಗಿ ಅಂಟಿಕೊಳ್ಳಲು ಕಾರಣವಾಗುತ್ತದೆ; ಈ ಚಟುವಟಿಕೆಗಳಿಂದ ನಮಗೆ ಅಥವಾ ಇತರರಿಗೆ ಯಾವುದೇ ನಿಜವಾದ ಪ್ರಯೋಜನ ಅಥವಾ ಸಂತೋಷವಾಗುವುದಿಲ್ಲ. ಮತ್ತೊಂದೆಡೆ, ಸಂಘದಲ್ಲಿರುವವರು, ಈಗಾಗಲೇ ತಮ್ಮ ಸಮಸ್ಯೆಗಳ ಕೆಲವು ಹಂತಗಳನ್ನು ತೊಡೆದುಹಾಕಿದ್ದು – ಅದು ಅದ್ಭುತವಾದ ವಿಷಯ! - ಮತ್ತು ಉಳಿದವುಗಳನ್ನು ತೊಡೆದುಹಾಕುವತ್ತ ಕೆಲಸ ಮಾಡುತ್ತಿರುವವರು. ನಾವೂ ಕೂಡ ನಮ್ಮ ಸಮಸ್ಯೆಗಳನ್ನು ಹೋಗಲಾಡಿಸಲು ಅವರ ಮಾದರಿಯನ್ನು ಅನುಸರಿಸುವುದರಲ್ಲಿ ಅರ್ಥವಿದೆಯಲ್ಲವೇ? 

ಇಂದಿನ ನಮ್ಮ ಆಧುನಿಕ ಜಗತ್ತಿನಲ್ಲಿ, ಬುದ್ಧನ ಅದ್ಭುತವಾದ ಬೋಧನೆಗಳನ್ನು ನಾವು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲು ಸಾಧ್ಯವಾಗುವಂತೆ ಮಾಡಿದ ಸಂಘಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಹತ್ತಿರದ ಸಮಸ್ಯೆಗಳನ್ನು ಮೀರಿ, ಎಲ್ಲಾ ದುಃಖಗಳಿಂದ ನಮ್ಮನ್ನು ದೂರ ಕರೆದೊಯ್ಯುವ ಮಾರ್ಗವಿದೆ ಎಂದು ನೋಡಲು ಸಂಘವು ನಮ್ಮನ್ನು ಪ್ರೇರೇಪಿಸುತ್ತದೆ. ಮತ್ತು ಅವರು ಕೇವಲ ನಮಗೆ ಸ್ಫೂರ್ತಿ ನೀಡುವುದಿಲ್ಲ, ಜೊತೆಗೆ ಪ್ರತಿ ಹಂತದಲ್ಲೂ ನಮಗೆ ಮಾರ್ಗದರ್ಶನ ನೀಡುತ್ತಾರೆ, ಪ್ರೋತ್ಸಾಹಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಇದಕ್ಕಾಗಿಯೇ ಸಂಘವಿಲ್ಲದೆ ಬೌದ್ಧ ಧರ್ಮವಿಲ್ಲ ಎಂದು ಕೆಲವೊಮ್ಮೆ ಹೇಳಲಾಗುತ್ತದೆ. 

ಸಾರಾಂಶ 

ನಾವು ಜೀವನದಲ್ಲಿ ಉತ್ತಮ ಮಾದರಿಯನ್ನು ಹೇಗೆ ಆರಿಸಿಕೊಳ್ಳಬಹುದು? ನಾವು ಸಂಘದ ನಿಜವಾದ ಸದಸ್ಯರನ್ನು ಭೇಟಿಯಾಗದಿದ್ದರೂ – ಅಂದರೆ ನಿಜವಾದ ಜ್ಞಾನೋದಯವನ್ನು ಸಾಧಿಸಿದ ಆರ್ಯ ಸಂಘದವರನ್ನು - ನಾವು ಧರ್ಮದಲ್ಲಿ ಹೆಚ್ಚು ಅನುಭವ ಪಡೆದಿರುವ ವ್ಯಕ್ತಿಗಳನ್ನು ಭೇಟಿ ಮಾಡಿ, ಅವರಿಂದ ಸ್ಫೂರ್ತಿ ಪಡೆಯಬಹುದು. ಅವರ ಉದಾಹರಣೆಗಳಿಂದ, ಅವರ ಹೆಜ್ಜೆಗಳನ್ನು ಅನುಸರಿಸಲು ನಾವು ಪ್ರೋತ್ಸಾಹಿತರಾಗಬಹುದು.

ಬೌದ್ಧ ಸನ್ಯಾಸಿಗಳು ಮತ್ತು ಸನ್ಯಾಸಿನಿಗಳ ಸಮರ್ಪಣೆ ಮತ್ತು ಸಾಂಪ್ರದಾಯಿಕ ಸಂಘದಿಂದಲೇ ಧರ್ಮವು ಪ್ರಪಂಚದಾದ್ಯಂತ ಹರಡಲು ಸಾಧ್ಯವಾಯಿತು. ಬುದ್ಧನನ್ನು ವೈದ್ಯನಿಗೆ ಮತ್ತು ಧರ್ಮವನ್ನು ಔಷಧಿಗೆ ಹೋಲಿಸಿದಂತೆ, ನಮ್ಮ ಎಲ್ಲಾ ಸಮಸ್ಯೆಗಳಿಂದ ಶಾಶ್ವತವಾದ ಸ್ವಾತಂತ್ರ್ಯಕ್ಕಾಗಿ ಶ್ರಮಿಸುವ ಹಾದಿಯಲ್ಲಿ, ಸಂಘವು ದಾದಿಯರಂತೆ, ನಮ್ಮನ್ನು ಪ್ರೋತ್ಸಾಹಿಸಿ ಮುನ್ನಡೆಸುತ್ತದೆ.

Top