COP26 ಗೆ ಪವಿತ್ರ ದಲೈ ಲಾಮಾ ಅವರ ಸಂದೇಶ

Uv hhdl cop message

ಇಂದು ನಾವು ಎದುರಿಸುತ್ತಿರುವ ಹವಾಮಾನ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ - COP26 - ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯಲಿದೆ ಎಂದು ತಿಳಿಯಲು ನನಗೆ ಸಂತೋಷವಾಗಿದೆ. 

ಜಾಗತಿಕ ತಾಪಮಾನವು ತುರ್ತು ವಾಸ್ತವವಾಗಿದೆ. ನಮ್ಮಲ್ಲಿ ಯಾರಿಗೂ ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಾವೆಲ್ಲರೂ ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿದ್ದೇವೆ. ನಾವು ಸೇರಿದಂತೆ ಇಂದಿನ ಏಳು ಬಿಲಿಯನ್‌ಗಿಂತಲೂ ಹೆಚ್ಚು ಮಾನವರು ಶಾಂತಿ ಮತ್ತು ಸುರಕ್ಷತೆಯಿಂದ ಬದುಕನ್ನು ಮುಂದುವರಿಸುವಂತೆ ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ. ಭರವಸೆ ಮತ್ತು ನಿರ್ಣಯದೊಂದಿಗೆ, ನಾವು ನಮ್ಮ ಸ್ವಂತ ಮತ್ತು ನಮ್ಮ ನೆರೆಹೊರೆಯವರ ಜೀವನವನ್ನೂ ನೋಡಿಕೊಳ್ಳಬೇಕಾಗಿದೆ. 

ನಮ್ಮ ಪೂರ್ವಜರು ಭೂಮಿಯ ಸಿರಿವಂತಿಕೆ ಮತ್ತು ಉದಾರತೆಯನ್ನು ನೋಡಿದ್ದರು, ಆದರೆ ಅದಕ್ಕಿಂತ ಹೆಚ್ಚಾಗಿ ಅದು ನಮ್ಮ ಏಕೈಕ ಮನೆಯಾಗಿದೆ. ನಾವು ಇದನ್ನು ನಮಗಾಗಿ ಮಾತ್ರವಲ್ಲ, ಭವಿಷ್ಯದ ಪೀಳಿಗೆಗೂ ಮತ್ತು ನಾವು ಗ್ರಹವನ್ನು ಹಂಚಿಕೊಳ್ಳುವ ಅಸಂಖ್ಯಾತ ಜೀವಿಗಳಿಗಾಗಿಯೂ ರಕ್ಷಿಸಬೇಕಾಗಿದೆ. 

ಉತ್ತರ ಮತ್ತು ದಕ್ಷಿಣ ಧ್ರುವಗಳ ನಂತರ, ಹಿಮ ಮತ್ತು ಮಂಜುಗಡ್ಡೆಯ ಅತಿದೊಡ್ಡ ಆಶ್ರಯವಾದ ಟಿಬೆಟಿಯನ್ ಪ್ರಸ್ಥಭೂಮಿಯನ್ನು ಸಾಮಾನ್ಯವಾಗಿ "ಮೂರನೇ ಧ್ರುವ" ಎಂದು ಕರೆಯಲಾಗುತ್ತದೆ. ಟಿಬೆಟ್ ಪ್ರಪಂಚದ ಕೆಲವು ಪ್ರಮುಖ ನದಿಗಳಾದ ಬ್ರಹ್ಮಪುತ್ರ, ಗಂಗಾ, ಸಿಂಧೂ, ಮೆಕಾಂಗ್, ಸಲ್ವೀನ್, ಯೆಲ್ಲೋ ನದಿ ಮತ್ತು ಯಾಂಗ್ಟ್ಜಿಗಳ ಮೂಲವಾಗಿದೆ. ಏಷ್ಯಾದಾದ್ಯಂತ ಸುಮಾರು ಎರಡು ಶತಕೋಟಿ ಜನರಿಗೆ ಕುಡಿಯುವ ನೀರು, ಕೃಷಿಗೆ ನೀರಾವರಿ ಮತ್ತು ಜಲವಿದ್ಯುತ್ ಒದಗಿಸುವ ಕಾರಣದಿಂದಾಗಿ ಈ ನದಿಗಳು ಜೀವನದಿಗಳಾಗಿವೆ. ಟಿಬೆಟ್‌ನ ಹಲವಾರು ಹಿಮನದಿಗಳ ಕರಗುವಿಕೆ, ಅಣೆಕಟ್ಟುಗಳ ನಿರ್ಮಾಣದ ಮೂಲಕ ನದಿಗಳ ದಿಕ್ಕು ಬದಲಾವಣೆ, ಮತ್ತು ವ್ಯಾಪಕವಾದ ಅರಣ್ಯನಾಶವು, ಹೇಗೆ ಒಂದು ಪ್ರದೇಶದಲ್ಲಿನ ಪರಿಸರ ನಿರ್ಲಕ್ಷ್ಯವು ಬಹುತೇಕ ಎಲ್ಲೆಡೆ ಪರಿಣಾಮ ಬೀರುತ್ತದೆ ಎಂಬುದರ ಉದಾಹರಣೆಯಾಗಿದೆ. 

ಇಂದು, ಭಯದಿಂದ ಪ್ರೇರೇಪಿಸಲ್ಪಟ್ಟ ಪ್ರಾರ್ಥನೆಗಳಿಂದಲ್ಲ, ಆದರೆ ವೈಜ್ಞಾನಿಕ ತಿಳುವಳಿಕೆಯ ಮೇಲೆ ಸ್ಥಾಪಿಸಲಾದ ವಾಸ್ತವಿಕ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ನಾವು ಭವಿಷ್ಯವನ್ನು ಉದ್ದೇಶಿಸಬೇಕಾಗಿದೆ. ನಮ್ಮ ಗ್ರಹದ ನಿವಾಸಿಗಳು ಹಿಂದೆಂದಿಗಿಂತಲೂ ಇಂದು ಪರಸ್ಪರ ಅವಲಂಬಿತರಾಗಿದ್ದಾರೆ. ನಮ್ಮ ಪ್ರತಿ ನಡೆಯು, ನಮ್ಮ ಮಾನವ ಸಹಚರರ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ಅಸಂಖ್ಯಾತ ಪ್ರಾಣಿ ಮತ್ತು ಸಸ್ಯ ಜಾತಿಗಳ ಮೇಲೂ ಪರಿಣಾಮ ಬೀರುತ್ತದೆ. 

ಮಾನವರಾದ ನಾವು ಭೂಮಿಯನ್ನು ನಾಶಮಾಡುವ ಶಕ್ತಿ ಹೊಂದಿರುವ ಏಕೈಕ ಜೀವಿಗಳು, ಆದರೆ, ಜೊತೆಗೆ ಅದನ್ನು ರಕ್ಷಿಸುವ ದೊಡ್ಡ ಸಾಮರ್ಥ್ಯವನ್ನೂ ಹೊಂದಿರುವವರು. ಪ್ರತಿಯೊಬ್ಬರ ಪ್ರಯೋಜನಕ್ಕಾಗಿ, ನಾವು ಸಹಕಾರದಿಂದ ಜಾಗತಿಕ ಮಟ್ಟದಲ್ಲಿ ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸಬೇಕು. ಆದರೆ, ಜೊತೆಗೆ ನಾವು ವೈಯಕ್ತಿಕ ಮಟ್ಟದಲ್ಲೂ ನಮ್ಮಿಂದ ಸಾಧ್ಯವಿರುವಷ್ಟು ಸಹಾಯಮಾಡಬೇಕು. ನಾವು ನೀರನ್ನು ಹೇಗೆ ಬಳಸುತ್ತೇವೆ ಮತ್ತು ನಮಗೆ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡುತ್ತೇವೆ ಎಂಬಂತಹ ಸಣ್ಣ ದೈನಂದಿನ ಕ್ರಿಯೆಗಳು ಸಹ ಪರಿಣಾಮ ಬೀರುತ್ತವೆ. ನಮ್ಮ ನೈಸರ್ಗಿಕ ಪರಿಸರವನ್ನು ನಾವು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ನೋಡಿಕೊಳ್ಳಬೇಕು ಮತ್ತು ವಿಜ್ಞಾನವು ನಮಗೆ ನೀಡುವ ಪಾಠವನ್ನು ಕಲಿಯಬೇಕು.

ನಮ್ಮ ಯುವ ಪೀಳಿಗೆಯು ಹವಾಮಾನ ಬದಲಾವಣೆಯ ಬಗ್ಗೆ ಕಟ್ಟುನಿಟ್ಟಾದ ಕ್ರಮವನ್ನು ಬಯಸುತ್ತಿರುವುದನ್ನು ನೋಡಿ ನಾನು ಪ್ರೋತ್ಸಾಹಗೊಂಡಿದ್ದೇನೆ. ಇದು ಭವಿಷ್ಯದ ಬಗ್ಗೆ ಸ್ವಲ್ಪ ಭರವಸೆಯನ್ನು ನೀಡುತ್ತದೆ. ಗ್ರೆಟಾ ಥನ್‌ಬರ್ಗ್‌ನಂತಹ ಯುವ ಕಾರ್ಯಕರ್ತೆಯರು, ವಿಜ್ಞಾನವನ್ನು ಆಲಿಸುವುದರ ಮತ್ತು ಅದರಂತೆ ಕಾರ್ಯನಿರ್ವಹಿಸುವುದರ ಅಗತ್ಯತೆಯ ಅರಿವು ಮೂಡಿಸಲು ಮಾಡುವ ಪ್ರಯತ್ನಗಳು ನಿರ್ಣಾಯಕವಾಗಿವೆ. ಅವರ ನಿಲುವು ವಾಸ್ತವಿಕವಾಗಿರುವುದರಿಂದ ನಾವು ಅವರನ್ನು ಪ್ರೋತ್ಸಾಹಿಸಬೇಕಾಗಿದೆ. 

ಮಾನವೀಯತೆಯ ಏಕತೆಯ ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮತ್ತು ಪ್ರತಿಯೊಬ್ಬ ಮನುಷ್ಯನು ನಮ್ಮ ಒಂದು ಭಾಗ ಎಂಬ ಕಲ್ಪನೆಯ ಪ್ರಾಮುಖ್ಯತೆಯನ್ನು ನಾನು ನಿಯಮಿತವಾಗಿ ಒತ್ತಿಹೇಳುತ್ತೇನೆ. ಜಾಗತಿಕ ತಾಪಮಾನ ಮತ್ತು ಹವಾಮಾನದ ಬದಲಾವಣೆಯ ಬೆದರಿಕೆಯು ರಾಷ್ಟ್ರೀಯ ಗಡಿಗಳಿಂದ ಸೀಮಿತವಾಗಿಲ್ಲ; ಇದು ನಮ್ಮೆಲ್ಲರ ಮೇಲೆ ಪರಿಣಾಮ ಬೀರುವಂತಹದ್ದು. 

ನಾವು ಈ ಬಿಕ್ಕಟ್ಟನ್ನು ಒಟ್ಟಿಗೆ ಎದುರಿಸುತ್ತಿರುವಾಗ, ಅದರ ಪರಿಣಾಮಗಳನ್ನು ಮಿತಿಗೊಳಿಸಲು ನಾವು ಒಗ್ಗಟ್ಟು ಮತ್ತು ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ. ಈ ತುರ್ತು ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ಬದಲಾವಣೆಯ ವೇಳಾಪಟ್ಟಿಯೊಂದನ್ನು ತಯಾರಿಸಲು, ನಮ್ಮ ನಾಯಕರು ಸಾಮೂಹಿಕವಾಗಿ ಕ್ರಮ ತೆಗೆದುಕೊಳ್ಳುವಂತಹ ಸತ್ವವನ್ನು ಒಟ್ಟುಗೂಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಸುರಕ್ಷಿತವಾದ, ಹಸಿರಾದ, ಸಂತೋಷವಾದ ಜಗತ್ತಿಗಾಗಿ, ನಾವು ಕಾರ್ಯನಿರ್ವಹಿಸಬೇಕಾಗಿದೆ. 

ನನ್ನ ಪ್ರಾರ್ಥನೆ ಮತ್ತು ಶುಭ ಹಾರೈಕೆಯೊಂದಿಗೆ, 

ದಲೈ ಲಾಮಾ 

31 ಅಕ್ಟೋಬರ್ 2021

Top