ಕಾಳಜಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು

ಇತರರನ್ನು ನಮ್ಮಂತೆಯೇ ಭಾವನೆಗಳುಳ್ಳ ಮನುಷ್ಯರೆಂದು ಪರಿಗಣಿಸುವುದರಿಂದ, ನಮ್ಮ ನಡವಳಿಕೆ ಮತ್ತು ಮಾತಿನ ವಿಧಿ-ವಿಧಾನಗಳು ಅವರ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ನಾವು ಎಚ್ಚರಿಕೆ ಮತ್ತು ಕಾಳಜಿವಹಿಸಲು ಶುರುಮಾಡುತ್ತೇವೆ.
Meditation generating care matheus ferrero

ವಿವರಣೆ 

ಯಾವುದೇ ರೀತಿಯ ಧ್ಯಾನಕ್ಕಾಗಿ ಪೂರ್ವಾಪೇಕ್ಷಿತವಾಗಿರುವ ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ನಾವು ನಮ್ಮ ಮನಸ್ಸನ್ನು ಶಾಂತಗೊಳಿಸಿದ ನಂತರ, ನಾವು ಸಕಾರಾತ್ಮಕ, ಸೃಜನಶೀಲವಾದ ಮನಸ್ಥಿತಿಯನ್ನು ಸೃಷ್ಟಿಸಲು ಸಿದ್ಧರಾಗಿರುತ್ತೇವೆ. ಇತರರೊಂದಿಗೆ ಸಂವಹನ ನಡೆಸಲು, ಅವರ ಬಗ್ಗೆ ಪ್ರಾಮಾಣಿಕವಾದ ಕಾಳಜಿ ಮತ್ತು ಕಳವಳವಿರುವುದು ಅತ್ಯಂತ ಮುಖ್ಯವಾದುದು. ಇದರರ್ಥ ಅವರೂ ನಮ್ಮಂತೆಯೇ ಮನು‍ಷ್ಯರೆಂದು, ಅವರೂ ಕೂಡ ನಮ್ಮಂತೆಯೇ ಭಾವನೆಗಳನ್ನು ಹೊಂದಿರುವವರು ಎಂದು ಗಂಭೀರವಾಗಿ ಪರಿಗಣಿಸುವುದಾಗಿರುತ್ತದೆ. ಆದರೆ ಈ ಸತ್ಯದ ಅರಿವಿಕೆಯನ್ನು ಕಳೆದುಕೊಳ್ಳುವುದು ಸುಲಭ, ನಾವು ಕಾರ್ಯನಿರತರಾಗಿರುವಾಗ, ಒತ್ತಡದಲ್ಲಿರುವಾಗ ಅಥವಾ ನಮ್ಮ ಬಗ್ಗೆಯೇ ಯೋಚಿಸುತ್ತಿರುವಾಗ, ಸಂವೇದನಾಶೀಲರಾಗಿರದೇ ಇರಬಹುದು. ಆದರೆ ನಾವು ಹೆಚ್ಚು ಸಂಕುಚಿತವಾಗಿ, ನಮ್ಮ ಮೇಲೆ ಮತ್ತು ನಮ್ಮ ಸ್ವಂತ ಸಮಸ್ಯೆಗಳು ಮತ್ತು ಭಾವನೆಗಳ ಮೇಲೆ ಕೇಂದ್ರೀಕರಿಸಿದಷ್ಟು ನಾವು ಅತೃಪ್ತರಾಗುತ್ತೇವೆ. ನಮ್ಮ ಸುತ್ತಮುತ್ತಲಿನ ವಿಶಾಲವಾದ ವಾಸ್ತವತೆಯೊಂದಿಗೆ ನಾವು ಸಂಪರ್ಕದಲ್ಲಿರುವುದಿಲ್ಲ. 

ಮನುಷ್ಯರಾದ ನಾವು ಸಾಮಾಜಿಕ ಪ್ರಾಣಿಗಳು; ನಾವೆಲ್ಲರೂ ನಮ್ಮ ಯೋಗಕ್ಷೇಮ ಮತ್ತು ಕಲ್ಯಾಣಕ್ಕಾಗಿ ಪರಸ್ಪರ ಅವಲಂಬಿತವಾಗಿರುತ್ತೇವೆ. ನಾವು ಒಬ್ಬರೊಬ್ಬರೊಂದಿಗೆ ಸಂವಹನ ನಡೆಸಬೇಕಾಗಿದೆ. ಆದ್ದರಿಂದ, ಇತರರೊಂದಿಗೆ ವಾಸ್ತವಿಕವಾದ ಮತ್ತು ಆರೋಗ್ಯಕರ ರೀತಿಯಲ್ಲಿ ಸಂವಹನ ನಡೆಸಲು, ನಾವು ಅವರ ಯೋಗಕ್ಷೇಮ ಮತ್ತು ಕಲ್ಯಾಣದ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ಅವರಿರುವ ಸನ್ನಿವೇಶಗಳು ಮತ್ತು ಅವರ ಭಾವನೆಗಳ ವಾಸ್ತವತೆಯ ಬಗ್ಗೆ ನಾವು ಸೂಕ್ಷ್ಮವಾಗಿರಬೇಕು, ವಿಶೇಷವಾಗಿ ಅವರೊಂದಿಗೆ ನಾವು ಸಂವಹನ ನಡೆಸುವಲ್ಲಿ ಇದನ್ನು ಪಾಲಿಸಬೇಕು.  

ನಮ್ಮ ದಿನದ ಅನುಭವವು ನಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಇದು ನಾವು ಭೇಟಿಯಾಗುವವರೆಲ್ಲರಿಗೂ ಕೂಡ ಅನ್ವಯವಾಗಿರುತ್ತದೆ. ನಾವು ಅವರನ್ನು ಭೇಟಿಯಾದಾಗ ಅವರು ಎಲ್ಲಿಂದಲೋ ಹಠಾತ್ ಪ್ರತ್ಯಕ್ಷವಾಗುವುದಿಲ್ಲ. ನಮ್ಮ ಮನಸ್ಥಿತಿಯಂತೆಯೇ ಅವರ ಮನಸ್ಥಿತಿಯು ಕೂಡ ನಮ್ಮ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಈ ಸತ್ಯ ಮತ್ತು ವಾಸ್ತವತೆಯ ಬಗ್ಗೆ ನಾವು ಸಂವೇದನಾಶೀಲರಾಗದಿದ್ದರೆ – ಅವರ ಬಗ್ಗೆ ಮತ್ತು ನಮ್ಮ ಬಗ್ಗೆಯೂ ಕೂಡ - ನಮ್ಮ ವಿನಿಮಯವು ನಮ್ಮ ನಿರೀಕ್ಷೆಗಿಂತ ಭಿನ್ನವಾಗಿರಬಹುದು. ಜೊತೆಗೆ, ಹೇಗೆ ಅವರು ನಮ್ಮೊಂದಿಗೆ ಮಾತನಾಡುವ ಮತ್ತು ವರ್ತಿಸುವ ರೀತಿಯು ನಮ್ಮ ಮೇಲೆ ಪರಿಣಾಮ ಬೀರುತ್ತದೆಯೋ, ಅದೇ ರೀತಿ ನಾವು ಅವರೊಂದಿಗೆ ಹೇಗೆ ಮಾತನಾಡುತ್ತೇವೆ ಮತ್ತು ಹೇಗೆ ವರ್ತಿಸುತ್ತೇವೆ ಎಂಬುದು ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ. 

ನಾವು ಇತರರೊಂದಿಗೆ ಇದ್ದಾಗ – ಅದು ನಮ್ಮ ಗೆಳೆಯರಾಗಿರಬಹುದು, ಅಪರಿಚಿತರಾಗಿರಬಹುದು ಅಥವಾ ನಾವು ಇಷ್ಟಪಡದ ವ್ಯಕ್ತಿಗಳಾಗಿರಬಹುದು - ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡು, ಎಚ್ಚರವಹಿಸಿದಾಗ, ನಮ್ಮ ಸಂವಹನಗಳು ನಮಗೂ ಮತ್ತು ಅವರಿಗೂ ಹೆಚ್ಚು ಫಲಪ್ರದ ಮತ್ತು ತೃಪ್ತಿಕರವಾಗಿರುತ್ತವೆ. 

ಧ್ಯಾನ 

  • ಉಸಿರಾಟದ ಮೇಲೆ ಕೇಂದ್ರೀಕರಿಸುವ ಮೂಲಕ ಶಾಂತರಾಗಿರಿ. 
  • ಶಾಂತ ಮನಸ್ಸಿನಿಂದ, ಪೂರ್ವಕಲ್ಪಿತ ಅಭಿಪ್ರಾಯವಿಲ್ಲದೆ, ನಿಮಗೆ ಇಷ್ಟವಾಗುವ, ಹತ್ತಿರವಿರುವವರೊಬ್ಬರ ಬಗ್ಗೆ ಯೋಚಿಸಿ 
  • ಈ ತಿಳುವಳಿಕೆಯಿಂದ ಅವರನ್ನು ಪರಿಗಣಿಸಿ - ನೀವು ಮನುಷ್ಯರೇ ಮತ್ತು ಭಾವನೆಗಳುಳ್ಳವರು 
  • ನನ್ನಂತೆಯೇ.
  • ನಿಮ್ಮ ಮನಸ್ಥಿತಿಯು ನಮ್ಮ ಸಂವಹನದ ಮೇಲೆ ಪರಿಣಾಮ ಬೀರುತ್ತದೆ, 
  • ಅಂತೆಯೇ ನನ್ನ ಮನಸ್ಥಿತಿಯು ಅದರ ಮೇಲೆ ಪರಿಣಾಮ ಬೀರುತ್ತದೆ 
  • ನಾನು ನಿಮ್ಮೊಂದಿಗೆ ಹೇಗೆ ವರ್ತಿಸುತ್ತೇನೆ ಮತ್ತು ಮಾತನಾಡುತ್ತೇನೆ ಎಂಬುದು ನಿಮ್ಮ ಭಾವನೆಗಳನ್ನು ಮತ್ತಷ್ಟು ಪ್ರಭಾವಿಸುತ್ತದೆ. 
  • ಆದ್ದರಿಂದ, ನಮ್ಮ ಸಂವಹನದಲ್ಲಿ, ಹೇಗೆ ನೀವು ನನ್ನ ಬಗ್ಗೆ ಮತ್ತು ನನ್ನ ಭಾವನೆಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಆಶಿಸುತ್ತೇನೋ, ಅದೇ ರೀತಿ ನಿಮ್ಮ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ನಾನು ನಿಮ್ಮ ಭಾವನೆಗಳ ಬಗ್ಗೆ ಕಾಳಜಿ ವಹಿಸುತ್ತೇನೆ. 
  • ಈ ಸಂಪೂರ್ಣ ಅನುಕ್ರಮವನ್ನು ಒಬ್ಬ ಪರಿಚಯಸ್ಥರನ್ನು ಅಥವಾ ಅಪರಿಚಿತರನ್ನು, ಅಂದರೆ ನಿಮ್ಮಲ್ಲಿ ಅವರಿಗಾಗಿ ಯಾವುದೇ ವಿಶೇಷವಾದ ಭಾವನೆಯಿಲ್ಲದವರನ್ನು, ಉದಾಹರಣೆಗೆ, ಚಿತ್ರಮಂದಿರದಲ್ಲಿ ನಿಮ್ಮ ಟಿಕೆಟ್ ತೆಗೆದುಕೊಳ್ಳುವವರನ್ನು ಗಮನದಲ್ಲಿಟ್ಟುಕೊಂಡು ಪುನರಾವರ್ತಿಸಿ. 
  • ನೀವು ಅನಾನುಕೂಲತೆಯನ್ನು ಕಾಣುವ ಮತ್ತು ಒಟ್ಟಿಗೆ ಇರಲು ಇಷ್ಟಪಡದಿರುವ ವ್ಯಕ್ತಿಯ ಮೇಲೆ ಕೇಂದ್ರೀಕರಿಸಿ, ಈ ಸಂಪೂರ್ಣ ಅನುಕ್ರಮವನ್ನು ಪುನರಾವರ್ತಿಸಿ. 

ಸಾರಾಂಶ 

ಈ ಧ್ಯಾನವು ಅನೇಕ ಅನ್ವಯಿಕೆಗಳನ್ನು ಹೊಂದಿದೆ ಮತ್ತು ಇದನ್ನು ವ್ಯಾಪಕವಾಗಿ ವಿಸ್ತರಿಸಬಹುದು. ನಾವು ವಿವಿಧ ವಯಸ್ಸಿನ ಜನರು, ವಿವಿಧ ಲಿಂಗಗಳು, ವಿವಿಧ ಜನಾಂಗಗಳು ಮತ್ತು ಈ ಮೂರು ವರ್ಗಗಳಲ್ಲಿ ಮುಂತಾದವರ ಮೇಲೆ ಕೇಂದ್ರೀಕರಿಸಬಹುದು. ನಾವು ಈ ಧ್ಯಾನವನ್ನು ನಮ್ಮ ಮೇಲೆ ಕೇಂದ್ರೀಕರಿಸಬಹುದು. ನಾವೂ ಸಹ ಮನುಷ್ಯರೇ ಮತ್ತು ನಮಗೂ ಭಾವನೆಗಳಿವೆ; ನಾವು ನಮ್ಮೊಂದಿಗೆ ವರ್ತಿಸುವ ರೀತಿ ಮತ್ತು ನಮ್ಮ ಮನಸ್ಸಿನಲ್ಲಿ ನಮ್ಮ ಬಗ್ಗೆ ಮಾತನಾಡುವ ರೀತಿಯು ನಮ್ಮ ಭಾವನೆಗಳನ್ನು ತುಂಬಾ ಪ್ರಭಾವಿಸುತ್ತದೆ. ಈ ರೀತಿಯಾಗಿ ನಾವು ನಮ್ಮ ಬಗ್ಗೆಯೂ ಸಹ ಕಾಳಜಿಯ ಮನೋಭಾವವನ್ನು ಬೆಳೆಸಿಕೊಳ್ಳಬಹುದು.

Top