ಆಂತರಿಕ ಶಾಂತಿಯ ಮೂಲಕ ಶಾಂತಿಯನ್ನು ಸಾಧಿಸುವುದು

Study buddhism universal values 06

ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆ

ಶಾಂತಿಯು ಎಲ್ಲರ ಕಾಳಜಿಯಾಗಿದೆ – ಅವರು ಎಲ್ಲೇ ವಾಸಿಸುತ್ತಿರಲಿ, ಪೂರ್ವ, ಪಶ್ಚಿಮ, ಉತ್ತರ ಅಥವಾ ದಕ್ಷಿಣದಲ್ಲಾಗಲಿ. ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಪ್ರತಿಯೊಬ್ಬರೂ ಶಾಂತಿಯ ಬಗ್ಗೆ ನೈಜ ಕಾಳಜಿವಹಿಸಬೇಕಾಗಿದೆ. ನಾವೆಲ್ಲರೂ ಮಾನವರು ಮತ್ತು ನಮ್ಮಲ್ಲಿರುವ ಒಂದು ಸಾಮಾನ್ಯ ಕಾಳಜಿಯೆಂದರೆ: ಸಂತೋಷವಾಗಿರುವುದು, ಸಂತೋಷವಾಗಿ ಜೀವನವನ್ನು ನಡೆಸುವುದು. ನಾವೆಲ್ಲರೂ ಸಂತೋಷವಾದ ಜೀವನವನ್ನು ಸಾಗಿಸಲು ಅರ್ಹರು. ನಾವು ಆ ಮಟ್ಟದಲ್ಲಿದ್ದುಕೊಂಡು ಇಲ್ಲಿ ಮಾತನಾಡುತ್ತಿದ್ದೇವೆ. ಪ್ರತಿಯೊಬ್ಬರೂ "ನಾನು" ಅಥವಾ "ಸ್ವಯಂ" ಎಂಬ ಭಾವನೆಯನ್ನು ಹೊಂದಿದ್ದೇವೆ, ಆದರೆ "ನಾನು" ಅಥವಾ "ಸ್ವಯಂ" ಅಂದರೆ ಏನೆಂದು ನಮಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ಅದೇನೇ ಇದ್ದರೂ, "ನಾನು" ಎಂಬ ಬಲವಾದ ಭಾವನೆಯನ್ನು ನಾವು ಇನ್ನೂ ಹೊಂದಿದ್ದೇವೆ. ಆ ಭಾವನೆಯೊಂದಿಗೆ ನಮಗೆ ಸುಖವನ್ನು ಗಳಿಸುವ ಬಯಕೆ ಬರುತ್ತದೆ, ದುಃಖವನ್ನಲ್ಲ. ಇದು ತಾನಾಗಿಯೇ, ಸ್ವಯಂಚಾಲಿತವಾಗಿ ಉದ್ಭವಿಸುತ್ತದೆ ಅಥವಾ ಕಾಣಿಸಿಕೊಳ್ಳುತ್ತದೆ. ಅದರ ಆಧಾರದ ಮೇಲೆ, ನಮಗೆಲ್ಲರಿಗೂ ಸಂತೋಷವಾಗಿರುವ ಹಕ್ಕಿದೆ. 

ಈ ನಡುವೆ, ನಮ್ಮ ಜೀವನದಲ್ಲಿ ಬಹಳಷ್ಟು ಅಹಿತಕರ ಸಂಗತಿಗಳು ಮತ್ತು ಅಡೆತಡೆಗಳು ಸಂಭವಿಸುತ್ತವೆ. ಇವುಗಳಲ್ಲಿ ಎರಡು ವರ್ಗಗಳಿವೆ. ಒಂದು, ದೈಹಿಕ ಕಾರಣಗಳಿಂದ ಉಂಟಾಗುವ ನೋವು - ಉದಾಹರಣೆಗೆ ಅನಾರೋಗ್ಯ ಮತ್ತು ವೃದ್ಧಾಪ್ಯ. ನನಗೆ, ಈಗಾಗಲೇ ಇದರ ಬಗ್ಗೆ ಸ್ವಲ್ಪ ಅನುಭವವಿದೆ - ನನಗೆ ಕೇಳಲು, ನೋಡಲು, ನಡೆಯಲು ಕಷ್ಟವಾಗುತ್ತದೆ. ಇವು ನಿಶ್ಚಿತವಾಗಿರುವವು. ಇತರ ವರ್ಗವು, ಪ್ರಧಾನವಾಗಿ ಮಾನಸಿಕ ಮಟ್ಟದ್ದಾಗಿದೆ. ಭೌತಿಕ ಮಟ್ಟದಲ್ಲಿ, ಎಲ್ಲವೂ ಆರಾಮದಾಯಕವಾಗಿ ಮತ್ತು ಐಷಾರಾಮಿಯಾಗಿದ್ದರೂ, ನಮ್ಮಲ್ಲಿ ಸ್ವಲ್ಪ ಒತ್ತಡ ಮತ್ತು ಆತಂಕವಿದ್ದರೆ, ನಾವು ಒಂಟಿತನವನ್ನು ಅನುಭವಿಸುತ್ತೇವೆ. ನಮ್ಮಲ್ಲಿ ಅಸೂಯೆ, ಭಯ ಮತ್ತು ದ್ವೇಷವೆದ್ದು, ಕೊನೆಗೆ ನಾವು ಅತೃಪ್ತರಾಗುತ್ತೇವೆ. ಆದ್ದರಿಂದ, ದೈಹಿಕ ಮಟ್ಟದ ಹೊರತಾಗಿಯೂ, ನಾವು ಮಾನಸಿಕ ಮಟ್ಟದಲ್ಲಿ ಹೆಚ್ಚು ದುಃಖವನ್ನು ಅನುಭವಿಸಬಹುದು. 

ದೈಹಿಕ ಸೌಕರ್ಯಕ್ಕಾಗಿ, ನಾವು ಕೆಲವು ದುಃಖಗಳನ್ನು ಹಣದ ಮೂಲಕ ಕಡಿಮೆ ಮಾಡಿಕೊಂಡು, ದೈಹಿಕ ತೃಪ್ತಿಯನ್ನು ಪಡೆಯಬಹುದೇನೋ ಹೌದು. ಆದರೆ, ಅಧಿಕಾರ, ಹೆಸರು ಮತ್ತು ಖ್ಯಾತಿಯನ್ನು ಒಳಗೊಂಡ ಆ ಭೌತಿಕ ಮಟ್ಟವು ನಮಗೆ ಆಂತರಿಕ ಶಾಂತಿಯನ್ನು ನೀಡಲು ಸಾಧ್ಯವಿಲ್ಲ. ವಾಸ್ತವವಾಗಿ, ಕೆಲವೊಮ್ಮೆ, ಅತಿಯಾದ ಹಣ ಮತ್ತು ಸಂಪತ್ತು, ನಮ್ಮಲ್ಲಿ ಹೆಚ್ಚು ಚಿಂತೆಯನ್ನು ಹುಟ್ಟಿಸುತ್ತದೆ. ನಾವು ನಮ್ಮ ಖ್ಯಾತಿ-ಪ್ರಖ್ಯಾತಿಯ ಬಗ್ಗೆ ಬಹಳ ಕಾಳಜಿ ವಹಿಸುವುದರಿಂದ, ಅವು ನಮ್ಮಲ್ಲಿ ಸ್ವಲ್ಪ ಬೂಟಾಟಿಕೆ, ಸ್ವಲ್ಪ ಅಸ್ವಸ್ಥತೆ, ಸ್ವಲ್ಪ ಒತ್ತಡಕ್ಕೆ ಕಾರಣವಾಗುತ್ತವೆ. ಆದ್ದರಿಂದ, ಮಾನಸಿಕ ಸಂತೋಷವು, ಬಾಹ್ಯ ವಿಧಾನಗಳ ಮೇಲೆ ಅವಲಂಬಿತವಾಗಿರುವುದಿಲ್ಲ, ಆದರೆ ನಮ್ಮ ಆಲೋಚನೆಯ ಆಂತರಿಕ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. 

ಕೆಲವು ಬಡವರು, ಆಂತರಿಕ ಮಟ್ಟದಲ್ಲಿ, ಬಹಳ ಧೃಡವಾಗಿರುವುದನ್ನು ಮತ್ತು ಸಂತೋಷವಾಗಿರುವುದನ್ನು ನಾವು ನೋಡಬಹುದು. ವಾಸ್ತವವಾಗಿ, ನಮ್ಮಲ್ಲಿ ಆಂತರಿಕ ತೃಪ್ತಿಯಿದ್ದರೆ, ನಾವು ಯಾವುದೇ ರೀತಿಯ ಕಠಿಣ ದೈಹಿಕ ನೋವನ್ನೂ ಸಹಿಸಿಕೊಳ್ಳಬಹುದು ಮತ್ತು ಅದನ್ನು ಪರಿವರ್ತಿಸಬಹುದು. ಆದ್ದರಿಂದ, ದೈಹಿಕ ಮತ್ತು ಮಾನಸಿಕ ನೋವಿನ ನಡುವೆ, ಮಾನಸಿಕ ನೋವು ಹೆಚ್ಚು ತೀವ್ರವಾದದ್ದು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ದೈಹಿಕ ಅಸ್ವಸ್ಥತೆಯನ್ನು ಮಾನಸಿಕ ಸೌಕರ್ಯಗಳಿಂದ ನಿಗ್ರಹಿಸಬಹುದು, ಆದರೆ ದೈಹಿಕ ಸೌಕರ್ಯದಿಂದ ಮಾನಸಿಕ ಅಸ್ವಸ್ಥತೆಯನ್ನು ನಿವಾರಿಸಲು ಸಾಧ್ಯವಿಲ್ಲ.

ಮಾನವರ ಮಾನಸಿಕ ತೊಂದರೆಗಳು ಮತ್ತು ಸಮಸ್ಯೆಗಳು ಪ್ರಾಣಿಗಳಿಗಿಂತ ಪ್ರಬಲವಾದವು ಮತ್ತು ತೀವ್ರವಾದವು. ಬಹುಶಃ ಭೌತಿಕ ಮಟ್ಟದಲ್ಲಿ, ಇಬ್ಬರ ಸಂಕಟವೂ ಒಂದೇ ಆಗಿರಬಹುದೇನೋ, ಆದರೆ ಮಾನವರಲ್ಲಿ, ನಮ್ಮ ಬುದ್ಧಿವಂತಿಕೆಯಿಂದಾಗಿ, ನಮಗೆ ಅನುಮಾನಗಳು, ಅಭದ್ರತೆ ಮತ್ತು ಒತ್ತಡವಿರುತ್ತದೆ. ಇವು ಖಿನ್ನತೆಗೆ ಕಾರಣವಾಗುತ್ತವೆ; ಮತ್ತು ಇವೆಲ್ಲವೂ ನಮ್ಮ ಉನ್ನತ ಬುದ್ಧಿವಂತಿಕೆಯಿಂದ ಉಂಟಾಗುತ್ತವೆ. ಇದನ್ನು ಎದುರಿಸಲೂ ಸಹ, ನಮ್ಮ ಮಾನವ ಬುದ್ಧಿವಂತಿಕೆಯನ್ನೇ ಬಳಸಬೇಕು. ಭಾವನಾತ್ಮಕ ಮಟ್ಟದಲ್ಲಿ, ಕೆಲವು ಭಾವನೆಗಳು ಉದ್ಭವಿಸಿದ ತಕ್ಷಣ, ನಮ್ಮ ಮನಸ್ಸಿನ ಶಾಂತಿಯನ್ನು ಛಿದ್ರಗೊಳಿಸುತ್ತವೆ. ಮತ್ತೊಂದೆಡೆ, ಕೆಲವು ಭಾವನೆಗಳು ನಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ಅವು ಶಕ್ತಿ ಮತ್ತು ಆತ್ಮವಿಶ್ವಾಸದ ಆಧಾರವಾಗಿದ್ದು, ನಮಗೆ ಹೆಚ್ಚಿನ ನೆಮ್ಮದಿ ಮತ್ತು ಶಾಂತ ಮನಸ್ಥಿತಿಯನ್ನು ಕಂಡುಕೊಳ್ಳಲು ದಾರಿದೀಪವಾಗುತ್ತವೆ.

ಭಾವನೆಗಳ ಎರಡು ವರ್ಗಗಳು

ಆದ್ದರಿಂದ, ಭಾವನೆಗಳಲ್ಲಿ ಎರಡು ವರ್ಗಗಳಿವೆ. ಒಂದು ಮನಸ್ಸಿನ ಶಾಂತಿಗೆ ತುಂಬಾ ಹಾನಿಕಾರಕವಾಗಿರುವುದು, ಇವು ಕೋಪ ಮತ್ತು ದ್ವೇಷದಂತಹ ವಿನಾಶಕಾರಿ ಭಾವನೆಗಳಾಗಿವೆ. ಅವು ಕೇವಲ ಕ್ಷಣಿಕವಾಗಿ ನಮ್ಮ ಮನಸ್ಸಿನ ಶಾಂತಿಯನ್ನು ಹಾಳುಮಾಡುವುದಲ್ಲದೆ, ನಮ್ಮ ಮಾತು ಮತ್ತು ದೇಹಕ್ಕೂ ಹಾನಿಕಾರಕವಾಗಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವು ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತವೆ. ಅವು ನಮ್ಮನ್ನು ಹಾನಿಕಾರಕ ರೀತಿಯಲ್ಲಿ ವರ್ತಿಸುವಂತೆ ಮಾಡುವುದರಿಂದ ಅವು ವಿನಾಶಕಾರಿಯಾಗಿವೆ. ಆದರೆ ಸಹಾನುಭೂತಿಯಂತಹ ಇತರ ಭಾವನೆಗಳು ನಮಗೆ ಆಂತರಿಕ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತವೆ. ಉದಾಹರಣೆಗೆ, ಅವು ನಮಗೆ ಕ್ಷಮಾಶೀಲತೆಯ ಶಕ್ತಿಯನ್ನು ತೋರಿಸುತ್ತವೆ. ಒಂದು ಕಾಲದಲ್ಲಿ, ಕೆಲವು ವ್ಯಕ್ತಿಗಳೊಂದಿಗೆ ನಮಗೆ ತೊಂದರೆಗಳಿದ್ದರೂ, ಅಂತಿಮವಾಗಿ, ಕ್ಷಮಾಶೀಲತೆಯು ನಮಗೆ ನೆಮ್ಮದಿಯ, ಶಾಂತ ಮನಸ್ಥಿತಿಯನ್ನು ನೀಡುತ್ತದೆ. ನಮ್ಮ ತೀವ್ರವಾದ ಕೋಪಕ್ಕೆ ಕಾರಣರಾದ ವ್ಯಕ್ತಿಯು, ಈಗ ನಮ್ಮ ಉತ್ತಮ ಸ್ನೇಹಿತರಾಗಿರಬಹುದು. 

ಬಾಹ್ಯ ಶಾಂತಿ 

ನಾವು ಶಾಂತಿಯ ಬಗ್ಗೆ ಮಾತನಾಡುವಾಗ, ಈ ಭಾವನೆಗಳು ಮತ್ತು ಆಂತರಿಕ ಶಾಂತಿಯ ಬಗ್ಗೆ ಮಾತನಾಡಬೇಕಾಗಿದೆ. ಆದ್ದರಿಂದ, ಯಾವ ಭಾವನೆಗಳು ಆಂತರಿಕ ಶಾಂತಿಗೆ ಕಾರಣವಾಗುತ್ತವೆ ಎಂಬುದನ್ನು ನಾವು ಕಂಡುಹಿಡಿಯಬೇಕಾಗಿದೆ. ಆದರೆ ಮೊದಲು, ನಾನು ಬಾಹ್ಯ ಶಾಂತಿಯ ಬಗ್ಗೆ ಸ್ವಲ್ಪ ಮಾತನಾಡಲು ಬಯಸುತ್ತೇನೆ. 

ಬಾಹ್ಯ ಶಾಂತಿ ಎಂದರೆ ಕೇವಲ ಹಿಂಸೆಯ ಅನುಪಸ್ಥಿತಿಯಲ್ಲ. ಬಹುಶಃ ಕೋಲ್ಡ್ ವಾರ್ ಸಮಯದಲ್ಲಿ ನಮ್ಮ ಬಳಿ ಶಾಂತಿಯಿತ್ತೇನೋ; ಆದರೆ ಆ ಶಾಂತಿಯು ಭಯ, ಪರಮಾಣು ಹತ್ಯಾಕಾಂಡದ ಭಯದ ಮೇಲೆ ನಿಂತಿತ್ತು. ಇಬ್ಬರ ಕಡೆಯಲ್ಲೂ ಇನ್ನೊಬ್ಬರು ನಮ್ಮ ಮೇಲೆ ಬಾಂಬ್ ದಾಳಿ ಮಾಡುತ್ತಾರೆ ಎಂಬ ಭಯವಿತ್ತು, ಆದ್ದರಿಂದ ಇದು ನಿಜವಾದ ಶಾಂತಿಯಾಗಿರಲಿಲ್ಲ. ನಿಜವಾದ ಶಾಂತಿಯು ಆಂತರಿಕ ಶಾಂತಿಯಿಂದ ಬರಬೇಕು. ಸಂಘರ್ಷ ಉಂಟಾದಾಗ, ನಾವು ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು, ಅಂದರೆ ಮಾತುಕತೆಯ ಮೂಲಕ ಅದನ್ನು ಕಂಡುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಶಾಂತಿಯು, ಇತರರ ಜೀವನವನ್ನು ಆತ್ಮೀಯತೆ ಮತ್ತು ಗೌರವದಿಂದ ನೋಡುವುದಾಗಿದೆ, ಇತರರಿಗೆ ಹಾನಿಯನ್ನುಂಟುಮಾಡುವುದನ್ನು ವಿರೋಧಿಸುವುದಾಗಿದೆ ಮತ್ತು ಇತರರ ಜೀವವು ನಮ್ಮಂತೆಯೇ ಪವಿತ್ರವಾಗಿದೆ ಎಂಬ ಮನೋಭಾವವನ್ನು ಹೊಂದಿರುವುದಾಗಿದೆ. ನಾವು ಇದನ್ನು ಗೌರವಿಸಬೇಕಾಗಿದೆ ಮತ್ತು ಇದರ ಆಧಾರದ ಮೇಲೆ, ನಮಗೆ ಸಾಧ್ಯವಿದ್ದಲ್ಲಿ, ನಾವು ಇತರರಿಗೆ ಸಹಾಯ ಮಾಡಬೇಕಾಗಿದೆ.

ನಾವು ಕಷ್ಟಕಾಲದಲ್ಲಿರುವಾಗ, ನಮಗೆ ಯಾರಾದರೂ ಸಹಾಯ ಮಾಡಲು ಬಂದಾಗ, ನಾವು ಅವರಿಗೆ ಕೃತಜ್ಞರಾಗಿರುತ್ತೇವೆ. ಬೇರೊಬ್ಬರು ಬಳಲುತ್ತಿದ್ದಾಗ, ನಾವು ಕೇವಲ ಮಾನವೀಯತೆಯಿಂದ ಅರ್ಥಮಾಡಿಕೊಂಡರೂ ಸಹ, ಆ ವ್ಯಕ್ತಿಯು ನಮ್ಮನ್ನು ಮೆಚ್ಚಿ, ತುಂಬಾ ಸಂತೋಷಪಡುತ್ತಾರೆ. ಹೀಗೆ, ಆಂತರಿಕ ಸಹಾನುಭೂತಿ ಮತ್ತು ಮನಸ್ಸಿನ ಶಾಂತಿಯಿಂದ, ಎಲ್ಲಾ ಕ್ರಿಯೆಗಳು ಶಾಂತಿಯುತವಾಗುತ್ತವೆ. ಆಂತರಿಕ ಶಾಂತಿಯನ್ನು ಸ್ಥಾಪಿಸಿಕೊಂಡರೆ, ನಾವು ಬಾಹ್ಯ ಶಾಂತಿಯನ್ನು ಸಹ ಸ್ಥಾಪಿಸಬಹುದು. 

ಮಾನವರಾದ ನಮ್ಮ ಪರಸ್ಪರ ಸಂವಹನದಲ್ಲಿ ಯಾವಾಗಲೂ ವಿಭಿನ್ನ ದೃಷ್ಟಿಕೋನಗಳಿರುತ್ತವೆ. ಆದರೆ "ನಾನು" ಮತ್ತು "ಅವರು" ಎಂಬ ಬಲವಾದ ಪರಿಕಲ್ಪನೆಗಳನ್ನು ಆಧರಿಸಿ, ಹೆಚ್ಚುವರಿಯಾಗಿ "ನನ್ನ ಆಸಕ್ತಿ" ಮತ್ತು "ನಿಮ್ಮ ಆಸಕ್ತಿ" ಎಂಬ ಪರಿಕಲ್ಪನೆಗಳು ನಮ್ಮಲ್ಲಿ ಹುಟ್ಟುತ್ತವೆ. ಅದರ ಆಧಾರದ ಮೇಲೆ, ಯುದ್ಧವೂ ಆಗಬಹುದು. ನಮ್ಮ ಶತ್ರುವಿನ ನಾಶವು, ನಮ್ಮನ್ನು ವಿಜೇತರಾಗಿ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಈಗ, ಒಂದು ಹೊಸ ವಾಸ್ತವವಿದೆ. ಆರ್ಥಿಕ ದೃಷ್ಟಿಕೋನದಿಂದ ಮತ್ತು ಪರಿಸರ ದೃಷ್ಟಿಕೋನದಿಂದ, ನಾವು ಒಬ್ಬರೊಬ್ಬರ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಆದ್ದರಿಂದ "ನಾವು" ಮತ್ತು "ಅವರು" ಎಂಬ ಪರಿಕಲ್ಪನೆಗಳು ಇಂದಿನ ಕಾಲದಲ್ಲಿ ಹೆಚ್ಚಾಗಿ ಉಪಯುಕ್ತವಾಗುವುದಿಲ್ಲ. "ಅವರು" ಎಂದು ನಾವು ಪರಿಗಣಿಸುವವರು ಇಂದು “ನಾವು” ಎನ್ನುವುದರ ಭಾಗವಾಗಿದ್ದಾರೆ. ಹೀಗಾಗಿ, ಈ ಭೂಮಿಯ ಮೇಲಿರುವ ಆರು ಶತಕೋಟಿ ಜನರಾದ ನಮ್ಮೆಲ್ಲರಿಗೂ ಸಂತೋಷವಾಗಿರುವ ಹಕ್ಕಿದೆ ಎಂಬ ಗುರುತಿಸುವಿಕೆಯ ಆಧಾರದ ಮೇಲಿನ ಸಹಾನುಭೂತಿಯು, ಮಾನಸಿಕ ಶಾಂತಿಯನ್ನು ಬೆಳೆಸಿಕೊಳ್ಳುವುದರ ಪ್ರಮುಖ ಅಂಶವಾಗಿರುವುದು. ಅದರ ಆಧಾರದ ಮೇಲೆ, ನಾವು ಎಲ್ಲರನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಅದರ ಆಧಾರದ ಮೇಲೆ, ನಾವು ಬಾಹ್ಯ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ.

ಸಣ್ಣ ಮಟ್ಟದಲ್ಲಿ ಪ್ರಾರಂಭ

ಹೀಗೆ ಶಾಂತಿಗಾಗಿ, ಮೊದಲು ನಾವು ನಮ್ಮಲ್ಲಿ, ನಂತರ ನಮ್ಮ ಕುಟುಂಬಗಳಲ್ಲಿ ಮತ್ತು ನಂತರ ನಮ್ಮ ಸಮುದಾಯಗಳಲ್ಲಿ ಶಾಂತಿಯನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಬೇಕು. ಉದಾಹರಣೆಗೆ, ಮೆಕ್ಸಿಕೋದಲ್ಲಿ, ಒಬ್ಬ ಸ್ನೇಹಿತನು ತನ್ನ ಸ್ವಂತ ಸಮುದಾಯದಲ್ಲೇ "ಜೋನ್ ಆಫ್ ಪೀಸ್‌” ಅಂದರೆ ಶಾಂತಿವಲಯಗಳನ್ನು ಆರಂಭಿಸಿದನು. ಅವನ ಸಮುದಾಯದಲ್ಲಿರುವವರೆಲ್ಲರ ಒಪ್ಪಂದದ ಮೂಲಕ ಇದನ್ನು ಸ್ಥಾಪಿಸಿದನು. ಈ ಶಾಂತಿವಲಯದಲ್ಲಿ ಉದ್ದೇಶಪೂರ್ವಕವಾದ ಹಿಂಸಾಚಾರವನ್ನು ಮಾಡದೇ ಇರಲು ಪ್ರಯತ್ನಿಸಲು ಸಮುದಾಯದಲ್ಲಿ ಪ್ರತಿಯೊಬ್ಬರೂ ಒಪ್ಪಿಕೊಂಡರು. ಅವರು ಒಪ್ಪದಿದ್ದರೆ ಅಥವಾ ಜಗಳವಾಡಬೇಕಾದಲ್ಲಿ, ಅವರು ಆ ವಲಯದ ಗಡಿಯಿಂದ ಹೊರಗೆ ಹೋಗಬೇಕೆಂದು ಎಲ್ಲರೂ ಒಪ್ಪಿಕೊಂಡರು. ಇದು ಬಹಳ ಒಳ್ಳೆಯ ವಿಷಯ.

ವಿಶ್ವ ಶಾಂತಿಗಾಗಿ ವಿನಂತಿಸುವುದು ಕಷ್ಟ, ಆದರೆ ಅಂತಿಮವಾಗಿ ವಿಶ್ವ ಮಟ್ಟದಲ್ಲಿ ಶಾಂತಿಯಿದ್ದರೆ ಒಳ್ಳೆಯದಾಗಿರುತ್ತದೆ. ಆದರೆ ಹೆಚ್ಚು ವಾಸ್ತವಿಕವಾಗಿರುವ ದಾರಿಯೆಂದರೆ, ಸಣ್ಣ ಮಟ್ಟದಲ್ಲಿ, ನಮ್ಮಿಂದಲೇ, ನಮ್ಮ ಕುಟುಂಬ, ಸಮುದಾಯ, ಜಿಲ್ಲೆ ಹೀಗೆ ಮುಂತಾದವುಗಳೊಂದಿಗೆ ಪ್ರಾರಂಭಿಸಿ, ಶಾಂತಿವಲಯಗಳಂತವುಗಳನ್ನು ಸ್ಥಾಪಿಸುವುದು. ಆಗ ಆಂತರಿಕ ಶಾಂತಿಯು, ಸಹಾನುಭೂತಿಯೊಂದಿಗೆ ಹೆಚ್ಚು ಆತ್ಮೀಯವಾಗಿರುತ್ತದೆ.

ಇದೀಗ ಜಗತ್ತಿನಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಕೆಲವು ವರ್ಷಗಳ ಹಿಂದೆ, ನನ್ನ ಶಿಕ್ಷಕರೂ, ಸ್ನೇಹಿತರೂ ಆದ ಜರ್ಮನಿಯ ದಿವಂಗತ ಫ್ರೆಡ್ರಿಕ್ ವಾನ್ ವೈಜ್ಸಾಕರ್ ಅವರು ಹೇಳುತ್ತಿದ್ದರು, ಅವರು ಚಿಕ್ಕವರಾಗಿದ್ದಾಗ, ಪ್ರತಿಯೊಬ್ಬ ಜರ್ಮನ್ ವ್ಯಕ್ತಿಯ ಕಣ್ಣಿನಲ್ಲಿ, ಫ್ರೆಂಚ್ ಅವರನ್ನು ಶತ್ರುವೆಂದು ಪರಿಗಣಿಸಲಾಗುತ್ತಿತ್ತು ಮತ್ತು ಪ್ರತಿ ಫ್ರೆಂಚ್ ವ್ಯಕ್ತಿಯ ಕಣ್ಣಿನಲ್ಲಿ, ಜರ್ಮನ್ನರು ಶತ್ರುಗಳಾಗಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಇಂದು ನಾವು ಯೂರೋಪ್ ಒಕ್ಕೂಟ ಎಂಬ ಏಕೀಕೃತ ಶಕ್ತಿಯನ್ನು ಹೊಂದಿದ್ದೇವೆ. ಇದು ತುಂಬಾ ಒಳ್ಳೆಯ ಸಂಗತಿ. ಹಿಂದೆ, ಪ್ರತಿಯೊಂದು ರಾಜ್ಯವು, ತನ್ನ ದೃಷ್ಟಿಕೋನದಿಂದ, ತನ್ನದೇ ಆದ ಸಾರ್ವಭೌಮತ್ವವನ್ನು ಅಮೂಲ್ಯವೆಂದು ಪರಿಗಣಿಸುತ್ತಿತ್ತು. ಆದರೆ ಇಂದು ಯುರೋಪ್‌ನಲ್ಲಿನ ವಾಸ್ತವವು ಹೊಸದಾಗಿದೆ; ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಾಮಾನ್ಯ ಹಿತಾಸಕ್ತಿ ಹೆಚ್ಚು ಮುಖ್ಯವಾಗಿದೆ. ಆರ್ಥಿಕತೆಯು ಸುಧಾರಿಸಿದರೆ, ಪ್ರತಿ ಸದಸ್ಯ ರಾಷ್ಟ್ರಕ್ಕೂ ಪ್ರಯೋಜನವಾಗುತ್ತದೆ. ಆದ್ದರಿಂದ ಈ ಆಲೋಚನೆಯನ್ನು ಭೂಮಿ ಮೇಲಿನ ಎಲ್ಲಾ ಆರು ಶತಕೋಟಿ ಜನರಿಗೂ ವಿಸ್ತರಿಸುವುದು ಮುಖ್ಯವಾಗಿದೆ. ನಾವೆಲ್ಲರೂ ಒಂದು ದೊಡ್ಡ ಮಾನವ ಕುಟುಂಬದ ಸದಸ್ಯರು ಎಂದು ನಾವು ಭಾವಿಸಬೇಕಾಗಿದೆ.

ಜೈವಿಕ ಅಂಶವಾಗಿ ಸಹಾನುಭೂತಿ 

ಈಗ ಸಹಾನುಭೂತಿಯ ಬಗ್ಗೆ ಮಾತನಾಡುವುದಾದರೆ, ತಾಯಂದಿರಿಂದ ಹುಟ್ಟಿದ ಎಲ್ಲಾ ಸಸ್ತನಿಗಳು - ಮಾನವರು, ಸಸ್ತನಿಗಳು, ಪಕ್ಷಿಗಳು, ಇತ್ಯಾದಿ - ಅವುಗಳ ಬೆಳವಣಿಗೆಯು ವಾತ್ಸಲ್ಯ ಮತ್ತು ಕಾಳಜಿಯನ್ನು ಪಡೆಯುವುದರ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಷಯದಿಂದ, ಸಮುದ್ರ ಆಮೆ, ಚಿಟ್ಟೆಗಳು, ಮೊಟ್ಟೆ ಇಟ್ಟು ಸಾಯುವ ಸಾಲ್ಮನ್‌ಗಳಂತಹ ಕೆಲವೇ ಜಾತಿಗಳನ್ನು ಹೊರತುಪಡಿಸಲಾಗುತ್ತದೆ - ಈ ಜೀವಿಗಳನ್ನು ಸ್ವಲ್ಪ ಹೊರತುಪಡಿಸಲಾಗುತ್ತದೆ. ಉದಾಹರಣೆಗೆ, ಸಮುದ್ರ ಆಮೆಯನ್ನು ತೆಗೆದುಕೊಳ್ಳಿ. ತಾಯಿ ಆಮೆ ಮೊಟ್ಟೆಗಳನ್ನು ತೀರದಲ್ಲಿ ಇಟ್ಟು ಹೊರಡುತ್ತದೆ; ಆದ್ದರಿಂದ ಎಳೆಯ ಆಮೆಗಳ ಉಳಿವು ಕೇವಲ ಅವುಗಳ ಸ್ವಂತ ಪ್ರಯತ್ನದ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳು ತಾಯಿಯ ವಾತ್ಸಲ್ಯದ ಅಗತ್ಯವಿಲ್ಲದೆಯೇ ಬದುಕುತ್ತವೆ. ಅದಕ್ಕೆ ನಾನು ಕೆಲವು ಪ್ರೇಕ್ಷಕರಿಗೆ ಹೇಳುತ್ತೇನೆ, ಆಮೆ ಮೊಟ್ಟೆಯೊಡೆದಾಗ, ಆಮೆ ಮರಿ ಮತ್ತು ತಾಯಿಯನ್ನು ಒಟ್ಟಿಗೆ ಇಟ್ಟು, ಅವುಗಳ ನಡುವೆ ಪರಸ್ಪರ ಪ್ರೀತಿಯಿರುತ್ತದೆಯೇ ಇಲ್ಲವೇ ಎಂಬುದನ್ನು ನೋಡಲು ಬಹಳಾ ಆಸಕ್ತಿದಾಯಕವಾದ ವೈಜ್ಞಾನಿಕ ಪ್ರಯೋಗವಾಗಿರುತ್ತದೆ. ಪ್ರೀತಿಯಿರುತ್ತದೆ ಎಂದು ನನಗನ್ನಿಸುವುದಿಲ್ಲ. ಪ್ರಕೃತಿಯೇ ಅವುಗಳನ್ನು ಹಾಗೆ ಸೃಷ್ಟಿಸಿದೆ, ಆದ್ದರಿಂದ ಪ್ರೀತಿಯ ಅಗತ್ಯವಿಲ್ಲ. ಆದರೆ ಸಸ್ತನಿಗಳು, ವಿಶೇಷವಾಗಿ ಮಾನವರು, ತಾಯಿಯ ಆರೈಕೆಯಿಲ್ಲದೆ ನಾವೆಲ್ಲರೂ ಸಾಯುತ್ತೇವೆ. 

ಒಂದು ಶಿಶುವಿನ ಲಾಲನೆ-ಪಾಲನೆಗೆ ಕೆಲವು ಭಾವನೆಗಳು ಅತ್ಯಗತ್ಯ, ಅವು ಸಹಾನುಭೂತಿ, ವಾತ್ಸಲ್ಯ ಮತ್ತು ಕಾಳಜಿ, ಕಳವಳದ ಭಾವನೆಗಳು. ಜನನದ ನಂತರದ ಕೆಲವು ವಾರಗಳಲ್ಲಿ, ಮಗುವಿನ ಮೆದುಳಿನ ಬೆಳವಣಿಗೆಗೆ ತಾಯಿಯ ಸ್ಪರ್ಶ ಅತ್ಯಗತ್ಯ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರೀತಿಯಿರುವ, ವಾತ್ಸಲ್ಯವಿರುವ, ಸೌಹಾರ್ದತೆಯಿರುವ ಕುಟುಂಬದಿಂದ ಬಂದ ಮಕ್ಕಳು, ಹೆಚ್ಚು ಸಂತೋಷವಾಗಿರುವುದನ್ನು ನಾವು ಗಮನಿಸುತ್ತೇವೆ. ಅವರು ದೈಹಿಕವಾಗಿಯೂ ಹೆಚ್ಚು ಆರೋಗ್ಯವಂತರಾಗಿರುವರು. ಆದರೆ ಪ್ರೀತಿಯಿಂದ ಬೆಳೆಸಿಲ್ಲದ ಮಕ್ಕಳು, ವಿಶೇಷವಾಗಿ ಅವರು ಚಿಕ್ಕವರಾಗಿರುವಾಗ, ಬಹಳಷ್ಟು ತೊಂದರೆಗಳನ್ನು ಹೊಂದಿರುತ್ತಾರೆ. 

ಕೆಲವು ವಿಜ್ಞಾನಿಗಳು, ಎಳೆಯ ಕೋತಿಗಳನ್ನು ಅವುಗಳ ತಾಯಂದಿರಿಂದ ಬೇರ್ಪಡಿಸಿ ಪ್ರಯೋಗಗಳನ್ನು ನಡೆಸಿದಾಗ, ಆ ಕೋತಿಗಳು ಯಾವಾಗಲೂ ಕೆಟ್ಟ ಮನಸ್ಥಿತಿಯಲ್ಲಿದ್ದು, ಜಗಳವಾಡುವುದನ್ನು ಗಮನಿಸಿದರು. ಅವು ತಮ್ಮ ನಡುವೆ  ಚೆನ್ನಾಗಿ ಆಟವಾಡಲಿಲ್ಲ. ಆದರೆ ತಾಯಂದಿರ ಬಳಿಯೇ ಬೆಳೆದ ಕೋತಿಗಳು ಸಂತೋಷವಾಗಿದ್ದವು ಮತ್ತು ಚೆನ್ನಾಗಿ ಆಡುತ್ತಿದ್ದವು. ವಿಶೇಷವಾಗಿ ಪ್ರೀತಿಯಿಲ್ಲದ ಶಿಶುಗಳು ಬೆಳೆದು ಮಕ್ಕಳಾದಾಗ, ಅವರು ಹೆಚ್ಚಾಗಿ ಭಾವರಹಿತವಾಗಿರುತ್ತಾರೆ. ಅವರಿಗೆ ಇತರರೊಂದಿಗೆ ಪ್ರೀತಿಯಿಂದಿರಲು ಕಷ್ಟವಾಗುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಅವರು ಇತರರೊಂದಿಗೆ ಹಿಂಸಾತ್ಮಕವಾಗಿಯೂ ವರ್ತಿಸುತ್ತಾರೆ. ಆದ್ದರಿಂದ ಪ್ರೀತಿಯು ಜೈವಿಕ ಅಂಶವಾಗಿದೆ, ಜೈವಿಕವಾಗಿ ಆಧಾರಿತ ಅಂಶವಾಗಿದೆ. 

ಅಲ್ಲದೆ, ನಾನು ಹೀಗೆ ಭಾವಿಸುತ್ತೇನೆ - ಸಹಾನುಭೂತಿ ಮತ್ತು ಭಾವನೆಯು, ಈ ಜೈವಿಕ ಭೌತಿಕ ಮಟ್ಟಕ್ಕೆ ಸಂಬಂಧಿಸಿರುವುದರಿಂದ, ಕೆಲವು ವಿಜ್ಞಾನಿಗಳ ಪ್ರಕಾರ, ನಾವು ನಿರಂತರವಾಗಿ ಕೋಪಗೊಂಡಿದ್ದರೆ ಮತ್ತು ದ್ವೇಷ ಹೊಂದಿದ್ದರೆ, ಭಯಭೀತರಾಗಿದ್ದರೆ, ಇವು ನಮ್ಮ ರೋಗನಿರೋಧಕ ಶಕ್ತಿಯನ್ನು ಸವೆದುಹಾಕುತ್ತವೆ ಮತ್ತು ಅದನ್ನು ದುರ್ಬಲಗೊಳಿಸುತ್ತವೆ. ಆದರೆ ಸಹಾನುಭೂತಿಯುಳ್ಳ ಮನಸ್ಸು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡುತ್ತದೆ ಮತ್ತು ಬಲಪಡಿಸುತ್ತದೆ. 

ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳಿ. ನಾವು ವೈದ್ಯಕೀಯ ಕ್ಷೇತ್ರದಲ್ಲಿ ನೋಡುವುದಾದರೆ, ಒಂದು ಕಡೆ ದಾದಿಯರು ಮತ್ತು ವೈದ್ಯರ ನಡುವೆ ಮತ್ತು ಇನ್ನೊಂದು ಕಡೆ ರೋಗಿಗಳ ನಡುವೆ ನಂಬಿಕೆ ಇದ್ದರೆ, ಇದು ರೋಗಿಗಳ ಸುಧಾರಣೆಗೆ ಮುಖ್ಯವಾಗಿರುತ್ತದೆ. ಹಾಗಾದರೆ ನಂಬಿಕೆಯ ಆಧಾರವೇನು? ವೈದ್ಯರ ಮತ್ತು ದಾದಿಯರ ಕಡೆಯಿಂದ, ರೋಗಿಯ ಚೇತರಿಕೆಗಾಗಿ ನಿಜವಾದ ಕಾಳಜಿಯಿದ್ದರೆ, ನಂಬಿಕೆ ಬರುತ್ತದೆ. ಆದರೆ ಮತ್ತೊಂದೆಡೆ, ವೈದ್ಯರು ಪರಿಣಿತರಾಗಿದ್ದರೂ, ಅವರು ಅಥವಾ ಅವಳು ತಮ್ಮ ರೋಗಿಯನ್ನು ಯಂತ್ರದಂತೆ ಪರಿಗಣಿಸಿದರೆ, ಹೆಚ್ಚಾಗಿ ನಂಬಿಕೆಯಿರುವುದಿಲ್ಲ. ಬಹುಶಃ ವೈದ್ಯರಿಗೆ ಅಗಾಧ ಅನುಭವವಿದ್ದರೆ, ಸ್ವಲ್ಪ ನಂಬಿಕೆ ಬರಬಹುದು, ಆದರೆ ವೈದ್ಯರು ಹೆಚ್ಚು ಸಹಾನುಭೂತರಾಗಿದ್ದರೆ, ಅವರ ಮೇಲೆ ಇನ್ನೂ ಹೆಚ್ಚಿನ ನಂಬಿಕೆ ಬರುತ್ತದೆ. ಆಗ ರೋಗಿಗಳು ಚೆನ್ನಾಗಿ ನಿದ್ರಿಸುತ್ತಾರೆ ಮತ್ತು ಕಡಿಮೆ ಚಿಂತಿತರಾಗುತ್ತಾರೆ. ಅವರು ಆಳವಾಗಿ ಚಿಂತಿತರಾದರೆ, ಅವರು ತುಂಬಾ ಗೊಂದಲಗೊಳಗಾಗುತ್ತಾರೆ ಮತ್ತು ಇದು ಅವರ ಚೇತರಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಆದರೆ ಜೀವನದಲ್ಲಿ ಸಮಸ್ಯೆಗಳು ಸಹಜ. ಭಾರತದ ಮಹಾನ್ ಬೌದ್ಧ ಗುರು ಶಾಂತಿದೇವರು, ನಾವು ಸಮಸ್ಯೆಗಳನ್ನು ಎದುರಿಸಿದಾಗ, ನಾವು ಅವುಗಳನ್ನು ವಿಶ್ಲೇಷಿಸಬೇಕು ಎಂದು ಸಲಹೆ ನೀಡಿದರು. ಅದನ್ನು ಜಯಿಸುವ ಒಂದು ವಿಧಾನವಿದ್ದರೆ, ಚಿಂತಿಸಬೇಡಿ, ಆ ವಿಧಾನವನ್ನು ಅನ್ವಯಿಸಿ. ಆದರೆ ಸಮಸ್ಯೆಗೆ ಪರಿಹಾರವಿಲ್ಲದಿದ್ದಲ್ಲಿ, ಅದರ ಬಗ್ಗೆ ಚಿಂತಿಸಬೇಕಾಗಿಲ್ಲ, ಅದರಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ರೀತಿಯಾಗಿ ಯೋಚಿಸುವುದು ಬಹಳ ಸಹಾಯಕವಾಗಿದೆ. ನಮಗೆ ದೊಟ್ಟ ಸಮಸ್ಯೆಯಿದ್ದರೂ ಹೀಗೆ ಯೋಚಿಸುವುದರಿಂದ ಅದನ್ನು ಕಡಿಮೆ ಮಾಡಬಹುದು. 

ನಮಗೆ ಇತರರ ಆರೈಕೆಯ ಅಗತ್ಯವಿರುವವರೆಗೆ, ಉದಾಹರಣೆಗೆ ನಾವು ಚಿಕ್ಕ ಮಕ್ಕಳಾಗಿರುವಾಗ, ನಾವು ವಾತ್ಸಲ್ಯ ಮತ್ತು ಸಹಾನುಭೂತಿಯನ್ನು ಹೊಂದಿರುತ್ತೇವೆ. ಆದರೆ ನಮಗೆ ವಯಸ್ಸಾದಂತೆ, ಹೆಚ್ಚು ಸ್ವಾತಂತ್ರ್ಯದೊಂದಿಗೆ, ನಮ್ಮ ಇಚ್ಚೆಯಂತೆಯೇ ನಡೆದುಕೊಳ್ಳಲು, ಸಹಾನುಭೂತಿಗಿಂತ ಆಕ್ರಮಣಶೀಲತೆ ಹೆಚ್ಚು ಮುಖ್ಯವೆಂದು ನಾವು ಭಾವಿಸುತ್ತೇವೆ. ಆದರೆ ಆರು ಶತಕೋಟಿ ಜನರು ತಾಯಂದಿರಿಂದ ಬಂದಿರುವರು. ಎಲ್ಲರೂ ತಾಯಿಯ ಮಮತೆ, ಆರೈಕೆಯಲ್ಲಿ ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸಿರುವರು,  ಅಥವಾ ತಾಯಿಯಲ್ಲದಿದ್ದರೆ, ಬೇರೊಬ್ಬರ ಮಮತೆಯನ್ನು ಅನುಭವಿಸಿರುತ್ತೇವೆ. ಆದರೆ ನಮಗೆ ವಯಸ್ಸಾದಂತೆ, ಈ ಗುಣಗಳು ಬರಿದಾಗುತ್ತಾ ಹೋಗುತ್ತವೆ, ಮತ್ತು ನಾವು ಬೆದರಿಸುವಿಕೆಯಿಂದ ಆಕ್ರಮಣಕಾರಿಯಾಗುತ್ತೇವೆ ಮತ್ತು ಹೀಗೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸುತ್ತೇವೆ. 

ವಾಸ್ತವವನ್ನು ನೋಡುವ ಅಗತ್ಯತೆ 

ಸ್ವೀಡನ್‌ನ ಒಬ್ಬ ವಿಜ್ಞಾನಿ ನನಗೆ ಹೇಳಿದ್ದರು – ಮನಸ್ಸು ಕೋಪಗೊಂಡು, ನಮ್ಮ ಮೆದುಳು ಕೋಪದಿಂದ ಪ್ರಭಾವಿತವಾದಾಗ, ನಾವು ಕೋಪಗೊಂಡಿರುವ ಭಯಾನಕ ವ್ಯಕ್ತಿಯ ರೂಪವು, 90%ರಷ್ಟು ಮಾನಸಿಕ ಪ್ರಕ್ಷೇಪಣ ಎಂದು. ಬೇರೆ ಮಾತಿನಲ್ಲಿ ಹೇಳುವುದಾದರೆ, 90%ರಷ್ಟು ಋಣಾತ್ಮಕತೆಯನ್ನು ಮಾನಸಿಕವಾಗಿ ಯೋಜಿಸಲಾಗಿದೆ. ನಾವು ಬೇರೊಬ್ಬರನ್ನು ಬಲು ಬಯಸಿದಾಗಲೂ ಮತ್ತು ಬಾಂಧವ್ಯ ಹೊಂದಿದಾಗಲೂ, ಹೀಗಾಗುವುದು; ನಾವು ಆ ವ್ಯಕ್ತಿಯನ್ನು 100% ಸುಂದರವಾಗಿ ಮತ್ತು ಒಳ್ಳೆಯವರಾಗಿ ನೋಡುತ್ತೇವೆ. ಆದರೆ ಅದರ ಹೆಚ್ಚಿನ ಭಾಗವೂ ಮಾನಸಿಕ ಪ್ರಕ್ಷೇಪಣೆಯೇ ಆಗಿದೆ; ನಾವು ವಾಸ್ತವವನ್ನು ನೋಡುವುದಿಲ್ಲ. ಆದ್ದರಿಂದ, ವಾಸ್ತವವನ್ನು ನೋಡುವುದು ಬಹಳ ಮುಖ್ಯ. 

ಮತ್ತೊಂದು ಪ್ರಮುಖ ಅಂಶವೆಂದರೆ: ಯಾರೂ ತೊಂದರೆಯನ್ನು ಬಯಸುವುದಿಲ್ಲ, ಆದರೆ ತೊಂದರೆಗಳು ಯಾಕೆ ಉದ್ಭವಿಸುತ್ತವೆ? ಇದು ನಮ್ಮ ನಿಷ್ಕಪಟತೆ, ನಮ್ಮ ಅಜ್ಞಾನ, ನಮ್ಮ ವಿಧಾನದಿಂದಾಗಿ: ನಾವು ವಾಸ್ತವವನ್ನು ನೋಡುವುದಿಲ್ಲ. ನಮ್ಮದೇ ಸೀಮಿತ ದೃಷ್ಟಿಕೋನದಿಂದ, ನಾವು ವಾಸ್ತವದ ಸಂಪೂರ್ಣ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ನಾವು ಕೇವಲ ಎರಡು ಆಯಾಮಗಳನ್ನು ನೋಡುತ್ತೇವೆ, ಆದರೆ ಇದು ಸಾಕಾಗುವುದಿಲ್ಲ. ನಾವು ವಿಷಯಗಳನ್ನು ಮೂರು, ನಾಲ್ಕು, ಆರು ಆಯಾಮಗಳಲ್ಲಿ ನೋಡಬೇಕು. ವಸ್ತುನಿಷ್ಠವಾಗಿ ತನಿಖೆ ಮಾಡಲು, ಮೊದಲು ನಾವು ನಮ್ಮ ಮನಸ್ಸನ್ನು ಶಾಂತಗೊಳಿಸಬೇಕಾಗಿದೆ. 

ಇಲ್ಲಿಯೂ ಸಹ, ಈ ಅಂಶಗಳನ್ನು ಅರ್ಥಮಾಡಿಕೊಳ್ಳಲು, ರಚನಾತ್ಮಕ ಮತ್ತು ವಿನಾಶಕಾರಿ ಭಾವನೆಗಳ ನಡುವಿನ ವ್ಯತ್ಯಾಸವು ಮುಖ್ಯವಾಗಿದೆ. ನಾವು ಬೆಳೆದಂತೆ, ಸಹಾನುಭೂತಿಯ ಜೈವಿಕ ಅಂಶವು ಕ್ರಮೇಣವಾಗಿ ಕಡಿಮೆಯಾಗುತ್ತದೆ, ಆದ್ದರಿಂದ ನಮ್ಮಲ್ಲಿ ಮತ್ತೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು, ಶಿಕ್ಷಣ ಮತ್ತು ತರಬೇತಿಯ ಅಗತ್ಯವಿದೆ. ಆದಾಗ್ಯೂ, ಸಹಾನುಭೂತಿಯ ಜೈವಿಕ ಪ್ರಕಾರವು ಪಕ್ಷಪಾತವಾಗಿದೆ: ಅದು ಇತರರ ಪ್ರೀತಿಯನ್ನು ಪಡೆಯುವುದರ ಮೇಲೆ ಆಧಾರಿತವಾಗಿದೆ. ಆದರೆ ಅದನ್ನು ಆಧಾರವಾಗಿ ಬಳಸಿ, ನಮ್ಮ ತನಿಖೆಯಿಂದ ತಾರ್ಕಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಸೇರಿಸುವ ಮೂಲಕ, ನಾವು ಈ ಜೈವಿಕ ಮಟ್ಟದ ಸಹಾನುಭೂತಿಯನ್ನು ಕೇವಲ ಕಾಪಾಡಿಕೊಳ್ಳುವುದಲ್ಲದೆ, ಅದನ್ನು ಹೆಚ್ಚಿಸಲೂ ಸಹ ಸಾಧ್ಯವಾಗುತ್ತದೆ. ಹೀಗೆ, ತರಬೇತಿ ಮತ್ತು ಶಿಕ್ಷಣದೊಂದಿಗೆ, ಸೀಮಿತವಾದ, ಪಕ್ಷಪಾತದ ಸಹಾನುಭೂತಿಯನ್ನು ಅನಂತ, ನಿಷ್ಪಕ್ಷಪಾತ ಸಹಾನುಭೂತಿಯಾಗಿಸಿ, ಅದನ್ನು ಆರು ಶತಕೋಟಿಗಿಂತಲೂ ಹೆಚ್ಚು ಜನರಿಗೆ ವಿಸ್ತರಿಸಬಹುದಾಗಿದೆ.

ಶಿಕ್ಷಣದ ಪ್ರಾಮುಖ್ಯತೆ

ಇದೆಲ್ಲದಕ್ಕೂ ಮುಖ್ಯವಾದುದು ಶಿಕ್ಷಣ. ಆಧುನಿಕ ಶಿಕ್ಷಣವು, ಮೆದುಳು ಮತ್ತು ಬುದ್ಧಿಶಕ್ತಿಯ ಬೆಳವಣಿಗೆಗೆ ಹೆಚ್ಚು ಗಮನ ನೀಡುತ್ತದೆ, ಆದರೆ ಇದು ಸಾಕಾಗುವುದಿಲ್ಲ. ನಾವು ನಮ್ಮ ಶೈಕ್ಷಣಿಕ ವ್ಯವಸ್ಥೆಗಳಲ್ಲಿ ಸೌರ್ಹಾದತೆಯನ್ನೂ ಬೆಳೆಸಿಕೊಳ್ಳಲು ಸಾಧ್ಯವಾಗಬೇಕಿದೆ. ಇದು ನಮಗೆ ಶಿಶುವಿಹಾರದಿಂದ ವಿಶ್ವವಿದ್ಯಾಲಯದ ತನಕ ಅಗತ್ಯವಿದೆ. 

ಅಮೆರಿಕಾದಲ್ಲಿ, ಕೆಲವು ವಿಜ್ಞಾನಿಗಳು ಮಕ್ಕಳಿಗೆ ಹೆಚ್ಚು ಸಹಾನುಭೂತಿ ಮತ್ತು ಸಾವಧಾನತೆಯನ್ನು ಬೆಳೆಸಲು ತರಬೇತಿ ನೀಡಲು ಶಿಕ್ಷಣ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮಕ್ಕಳ ಭವಿಷ್ಯಕ್ಕಾಗಿ, ಜೀವನವನ್ನು ಸುಧಾರಿಸಿ, ನಿರ್ವಾಣವನ್ನು ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ತಯಾರಿಸಲಾಗಿಲ್ಲ, ಬದಲಿಗೆ ಇದನ್ನುಅವರ ಜೀವನದ ಪ್ರಯೋಜನಕ್ಕಾಗಿ ತಯಾರಿಸಲಾಗಿದೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲೂ ಸಹ, ಸೌರ್ಹಾದತೆ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಈಗಾಗಲೇ ಕೆಲವು ಶಿಕ್ಷಣ ಕಾರ್ಯಕ್ರಮಗಳಿವೆ. ಆ ರೀತಿಯ ನಿಷ್ಪಕ್ಷಪಾತ ಸಹಾನುಭೂತಿಯು, ಇತರರ ವರ್ತನೆಗಳ ಮೇಲೆ ಕೇಂದ್ರೀಕೃತವಾಗಿರುವುದಿಲ್ಲ, ಬದಲಿಗೆ ಅವರ ಮಾನವೀಯತೆಯ ಬಗ್ಗೆ ಆಗಿರುತ್ತದೆ. ಈ ಭೂಮಿ ಮೇಲಿನ ಆರು ಶತಕೋಟಿ ಜನಸಂಖ್ಯೆಯಲ್ಲಿ ನಾವೂ ಒಬ್ಬರು, ಆದ್ದರಿಂದ ಪ್ರತಿಯೊಬ್ಬರೂ ಸಮಾನತೆಯ ಆಧಾರದ ಮೇಲೆ ನಮ್ಮ ಸಹಾನುಭೂತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. 

ಆಂತರಿಕ ಮತ್ತು ಬಾಹ್ಯ ನಿಶ್ಯಸ್ತ್ರೀಕರಣ 

ಆಂತರಿಕ ಶಾಂತಿ ಮತ್ತು ವಿಶ್ವ ಶಾಂತಿಗಾಗಿ, ನಮಗೆ ಆಂತರಿಕ ಮತ್ತು ಬಾಹ್ಯ ನಿಶ್ಶಸ್ತ್ರೀಕರಣ, ಎರಡರ ಅಗತ್ಯವೂ ಇದೆ. ಇದರರ್ಥ, ಆಂತರಿಕ ಮಟ್ಟದಲ್ಲಿ ನಾವು ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಅಂತಿಮವಾಗಿ, ಅದರ ಆಧಾರದ ಮೇಲೆ, ನಾವು ಎಲ್ಲವನ್ನೂ, ಎಲ್ಲಾ ದೇಶಗಳನ್ನು, ಬಾಹ್ಯ ಮಟ್ಟದಲ್ಲಿ ನಿಶ್ಯಸ್ತ್ರಗೊಳಿಸಲು ಸಾಧ್ಯವಾಗುತ್ತದೆ. ಇದು ಫ್ರಾಂಕೋ-ಜರ್ಮನ್ ಯುರೋಪಿಯನ್ ಆರ್ಮಿ ಕಾರ್ಪ್ಸ್ನ ಏಕೀಕೃತ ಬಲವನ್ನು ಹೊಂದಿರುವಂತಿರುವುದು; ಇದೊಂದು ಅದ್ಭುತದ ಸಂಗತಿ. ಇಡೀ ಯುರೋಪಿಯನ್ ಒಕ್ಕೂಟಕ್ಕೆ ಏಕೀಕೃತ ಶಕ್ತಿ ಇರಲು ಸಾಧ್ಯವಾದರೆ, ಸದಸ್ಯರ ನಡುವೆ ಯಾವುದೇ ಸಶಸ್ತ್ರ ಹೋರಾಟ ನಡೆಯುವುದಿಲ್ಲ. 

ಒಮ್ಮೆ ಬ್ರಸೆಲ್ಸ್‌ನಲ್ಲಿ, ವಿದೇಶಾಂಗ ಮಂತ್ರಿಗಳ ಸಭೆಯೊಂದರಲ್ಲಿ ನಾನು ಹೇಳಿದೆ - ಭವಿಷ್ಯದಲ್ಲಿ ಯುರೋಪಿಯನ್ ಒಕ್ಕೂಟದ ಪ್ರಧಾನ ಕಛೇರಿಯನ್ನು ಪೂರ್ವಕ್ಕೆ, ಯಾವುದಾದರೂ ಪೂರ್ವ ಯುರೋಪಿಯನ್ ರಾಷ್ಟ್ರಗಳಲ್ಲಿ ಒಂದಕ್ಕೆ ಸ್ಥಳಾಂತರಿಸಿದರೆ, ತುಂಬಾ ಸಹಾಯಕವಾಗುತ್ತದೆ ಎಂದು, ಉದಾಹರಣೆಗೆ ಪೋಲೆಂಡ್. ಕಾಲಕ್ರಮೇಣ ಅದನ್ನು ವಿಸ್ತರಿಸಿ, ಅಂತಿಮವಾಗಿ ರಷ್ಯಾವನ್ನು ಒಳಗೊಳ್ಳುವಂತಿದ್ದರೆ ಒಳ್ಳೆಯದಾಗುವುದು, ನಂತರ NATO ಪ್ರಧಾನ ಕಛೇರಿಯನ್ನು ಮಾಸ್ಕೋಗೆ ಸ್ಥಳಾಂತರಿಸಬಹುದು. ಹಾಗೆ ಸಂಭವಿಸಿದ್ದಲ್ಲಿ, ಯುರೋಪಿನಲ್ಲಿ ಯುದ್ಧದ ಅಪಾಯವಿಲ್ಲದೆ, ನಿಜವಾಗಿಯೂ ಶಾಂತಿ ಇರುತ್ತದೆ. ಪ್ರಸ್ತುತವಾಗಿ, ರಷ್ಯಾ ಮತ್ತು ಜಾರ್ಜಿಯಾ ನಡುವೆ ಕೆಲವು ತೊಂದರೆಗಳಿವೆ, ಆದರೆ ನಾವು ನಮ್ಮ ಭರವಸೆಯನ್ನು ಉಳಿಸಿಕೊಳ್ಳಬೇಕಾಗಿದೆ.

ಶಾಂತಿಯ ಈ ಹೆಚ್ಚಿನ ವಿಸ್ತರಣೆಯ ಆಧಾರದ ಮೇಲೆ, ಉದಾಹರಣೆಗೆ, ಫ್ರಾನ್ಸ್‌ನಲ್ಲಿನ ಶಸ್ತ್ರಾಸ್ತ್ರ ಉದ್ಯಮವನ್ನು ಅಂತಿಮವಾಗಿ ಮುಚ್ಚಬಹುದು ಮತ್ತು ನಾವು ಆರ್ಥಿಕತೆಯನ್ನು ಹೆಚ್ಚು ಉತ್ಪಾದನಾ ಕ್ಷೇತ್ರಗಳತ್ತ ಕೇಂದ್ರೀಕರಿಸಬಹುದು. ಉದಾಹರಣೆಗೆ, ಟ್ಯಾಂಕ್‌ಗಳ ಬದಲಿಗೆ, ಕಾರ್ಖಾನೆಗಳನ್ನು ಬುಲ್ಡೋಜರ್‌ಗಳನ್ನು ನಿರ್ಮಿಸಲು ಪರಿವರ್ತಿಸಬಹುದು!

ಆಫ್ರಿಕನ್ ರಾಷ್ಟ್ರಗಳಿಗೂ ನಮ್ಮ ಸಹಾಯದ ಅಗತ್ಯವಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು, ಕೇವಲ ಜಾಗತಿಕವಾಗಿ ದೊಡ್ಡ ಸಮಸ್ಯೆಯಾಗಿಲ್ಲ; ರಾಷ್ಟ್ರೀಯ ಮಟ್ಟದಲ್ಲೂ ಸಹ, ಶ್ರೀಮಂತ ಮತ್ತು ಬಡವರ ನಡುವಿನ ಅಂತರವು ಬಹಳ ಭೀಕರವಾಗಿದೆ. ಉದಾಹರಣೆಗೆ, ಫ್ರಾನ್ಸ್‌ನಲ್ಲಿ, ಶ್ರೀಮಂತರು ಮತ್ತು ಬಡವರ ನಡುವೆ ದೊಡ್ಡ ವ್ಯತ್ಯಾಸವಿದೆ. ಕೆಲವರು ಹಸಿವಿನಿಂದ ಬಳಲುತ್ತಿದ್ದಾರೆ. ಆದರೆ ನಾವೆಲ್ಲರೂ ಮಾನವರು ಮತ್ತು ನಾವೆಲ್ಲರೂ ಒಂದೇ ರೀತಿಯ ಭರವಸೆಗಳು, ಅಗತ್ಯಗಳು ಮತ್ತು ಸಮಸ್ಯೆಗಳನ್ನು ಹೊಂದಿದ್ದೇವೆ. ಆಂತರಿಕ ಶಾಂತಿಯ ಮೂಲಕ ಶಾಂತಿಯನ್ನು ಅಭಿವೃದ್ಧಿಪಡಿಸಲು ನಾವು ಈ ಎಲ್ಲಾ ಅಂಶಗಳನ್ನು ಪರಿಗಣಿಸಬೇಕಾಗಿದೆ.

Top