ಪರಿಚಯ
ಬೌದ್ಧ ಧರ್ಮದ ಬಗ್ಗೆ ಮೊದಲ ಬಾರಿ ತಿಳಿಯುವಾಗ, ಚತುರಾರ್ಯ ಸತ್ಯಗಳ ಬಗ್ಗೆ ತಿಳಿಯುವುದು ಒಳ್ಳೆಯದಾಗಿರುತ್ತದೆ. ಇದು ಸೂಕ್ತವಾಗಿರುತ್ತದೆ, ಏಕೆಂದರೆ ಬುದ್ಧನು ಬೋಧಿಸಲು ಪ್ರಾರಂಭಿಸಿದಾಗ, ಅವರು ಇಲ್ಲಿಂದಲೇ ಶುರುಮಾಡಿದರು. ಆಗಾಗಲೇ ಬುದ್ಧನ ಕಾಲದಲ್ಲಿ, ಧಾರ್ಮಿಕ ಮತ್ತು ತಾತ್ವಿಕ ವ್ಯವಸ್ಥೆಗಳು ಬಹಳಷ್ಟಿದ್ದವು, ಮತ್ತು ಇಂದು ನಾವು ಇನ್ನೂ ವಿಶಾಲವಾದ ಆಧ್ಯಾತ್ಮಿಕ ಬೋಧನೆಗಳ ವಿಧಾನಗಳನ್ನು ಕಾಣಬಹುದಾಗಿದೆ. ಆದ್ದರಿಂದ, ನಾವು ಬೌದ್ಧಧರ್ಮದ ಬಗ್ಗೆ ಮಾತನಾಡುವಾಗ, ಬೌದ್ಧ ವಿಧಾನದ ವಿಶಿಷ್ಟತೆ ಏನು ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ. ಸಹಜವಾಗಿ, ಇತರ ಧಾರ್ಮಿಕ ಬೋಧನೆಗಳಲ್ಲಿ ಕಾಣಬಹುದಾದ ಅನೇಕ ಸಾಮಾನ್ಯ ಬೋಧನೆಗಳನ್ನು ಬೌದ್ಧಧರ್ಮದಲ್ಲೂ ಕಾಣಬಹುದು: ದಯೆ, ಪ್ರೀತಿಯಿಂದ ತುಂಬಿದ ವ್ಯಕ್ತಿಯಾಗಿರುವುದು, ಯಾರಿಗೂ ಹಾನಿಯಾಗದಂತೆ ನೋಡಿಕೊಳ್ಳುವುದು, ಇತ್ಯಾದಿ. ಪ್ರತಿಯೊಂದು ಧರ್ಮ ಮತ್ತು ತತ್ತ್ವಶಾಸ್ತ್ರಗಳಲ್ಲಿ ನಾವು ಈ ಅಂಶಗಳನ್ನು ಕಾಣಬಹುದು, ಮತ್ತು ಬೌದ್ಧಧರ್ಮದಲ್ಲಿ ದಯೆ, ಪ್ರೀತಿ ಮತ್ತು ಸಹಾನುಭೂತಿಯನ್ನು ಅಭಿವೃದ್ಧಿಪಡಿಸುವ ಸಾಕಷ್ಟು ಅಮೂಲ್ಯವಾದ ವಿಧಾನಗಳಿದ್ದರೂ, ಅವುಗಳ ಬಗ್ಗೆ ತಿಳಿದುಕೊಳ್ಳಲು, ಬೌದ್ಧಧರ್ಮದ ಕಡೆಗೆ ತಿರುಗುವ ಅಗತ್ಯವಿಲ್ಲ. ನಾವು ಬೌದ್ಧ ಬೋಧನೆಗಳ ಇತರ ವಿಷಯಗಳನ್ನು ಸ್ವೀಕರಿಸಲಿ, ಸ್ವೀಕರಿಸದಿರಲಿ, ಈ ವಿಧಾನಗಳನ್ನು ನಮ್ಮ ಪ್ರಯೋಜನಕ್ಕಾಗಿ ಬಳಸಬಹುದು.
ಆದರೆ, ನಾವು "ಬೌದ್ಧ ಧರ್ಮಕ್ಕೆ ನಿರ್ದಿಷ್ಟವಾದದ್ದು ಏನು?" ಎಂದು ಪ್ರಶ್ನಿಸಿದರೆ, ನಾವು ಚತುರಾರ್ಯ ಸತ್ಯಗಳ ಬಗ್ಗೆ ತಿಳಿಯಬೇಕಾಗಿದೆ. ಇವುಗಳ ಕುರಿತಾದ ನಮ್ಮ ಚರ್ಚೆಯೊಳಗೆ ಸಹ ನಾವು ಇತರ ಧರ್ಮಗಳೊಂದಿಗಿನ ಸಮಾನತೆಗಳನ್ನು ಕಾಣಬಹುದು.
ನಮ್ಮ ಬಳಿ "ನೋಬಲ್ ಟ್ರುತ್" ಎಂಬ ಅಭಿವ್ಯಕ್ತಿಯಿದೆ, ಆದರೆ ಇದು ವಿಚಿತ್ರವಾದ ಅನುವಾದವಾಗಿರುವುದು. "ನೋಬಲ್" ಎಂಬ ಪದವು ಮಧ್ಯಕಾಲೀನ ಶ್ರೀಮಂತರನ್ನು ಸೂಚಿಸುವಂತಿದೆ, ಆದರೆ ವಾಸ್ತವದಲ್ಲಿ ಇದು, ಉನ್ನತಮಟ್ಟದ ಅರಿವಿಕೆಯನ್ನು ಗಳಿಸದವರನ್ನು ಸೂಚಿಸುತ್ತದೆ. ಹೀಗೆ ಚತುರಾರ್ಯ ಸತ್ಯಗಳು ನಾಲ್ಕು ಸಂಗತಿಗಳಾಗಿದ್ದು, ಇವುಗಳು, ವಾಸ್ತವವನ್ನು ಕಲ್ಪನಾರಹಿತವಾಗಿ ಕಂಡವರಿಗೆ ಸತ್ಯವೆಂದು ತೋರುತ್ತದೆ. ಈ ನಾಲ್ಕು ಸಂಗತಿಗಳು ನಿಜವಾಗಿದ್ದರೂ, ಹೆಚ್ಚಿನ ಜನರು ಅವುಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಹೆಚ್ಚಿನವರಿಗೆ ಅವುಗಳ ಬಗ್ಗೆ ತಿಳಿದಿರುವುದಿಲ್ಲ.
ಮೊದಲ ಆರ್ಯ ಸತ್ಯ
ಸಾಮಾನ್ಯವಾಗಿ, ಮೊದಲ ನಿಜವಾದ ಸತ್ಯವನ್ನು "ದುಃಖ" ಎಂದು ಕರೆಯಲಾಗುತ್ತದೆ. ನಮ್ಮ ಜೀವನವು ದುಃಖದಿಂದ ತುಂಬಿದೆ ಎಂದೂ, ನಾವು ಸಾಮಾನ್ಯವಾಗಿ ಸಂತೋಷವೆಂದು ಪರಿಗಣಿಸುವುದರಲ್ಲೂ ಸಮಸ್ಯೆಗಳ ಸಂಪೂರ್ಣ ಶ್ರೇಣಿಯನ್ನು ಕಾಣಬಹುದೆಂದೂ ಬುದ್ಧ ಹೇಳಿದರು. "ದುಃಖ" ಎಂಬ ಪದವು ಸಂಸ್ಕೃತದ "ದುಃಖಾ" ಇಂದ ಬಂದಿರುವುದು. ನಮಗೆ ಸುಖ, ಸಂತೋಷವಿದೆ, ಮತ್ತು ದುಃಖ, ಅಸಂತೋಷವಿದೆ. ಭಾಷಾಶಾಸ್ತ್ರದ ಪರಿಭಾಷೆಯಲ್ಲಿ, ಖ ಎಂಬುದು ಒಂದು ಸ್ಥಾನವಾಗಿದ್ದು, ದುಹ್ ಎಂಬುದು ಅತೃಪ್ತಿ, ಅಹಿತಕರತೆಯನ್ನು ಸೂಚಿಸುವ ಪೂರ್ವಪ್ರತ್ಯಯವಾಗಿರುತ್ತದೆ. ನಾವು "ಕೆಟ್ಟದು" ಎನ್ನುವಂತಹ ಪೂರ್ವಭಾವಿ ಪದಗಳನ್ನು ಬಳಸಬಾರದಾದರೂ, ಇದು ಆ ದಿಕ್ಕಿನಲ್ಲಿರುವುದು. ನಮ್ಮ ಮಾನಸಿಕ ಸ್ಥಾನದಲ್ಲಿ ಮತ್ತು ನಮ್ಮ ಜೀವನದಲ್ಲಿನ ಸಾಮಾನ್ಯವಾದ ಸ್ಥಾನದಲ್ಲಿ ಏನೋ ತಪ್ಪಾಗಿದೆ ಎಂದು ದುಃಖಾ ಸೂಚಿಸುತ್ತದೆ. ಇದು ಅಹಿತಕರವಾದ ಪರಿಸ್ಥಿತಿಯಾಗಿರುತ್ತದೆ.
ಹಾಗಾದರೆ, ಇಲ್ಲಿ ಅಹಿತಕರವಾದದ್ದು ಏನು? ಮೊದಲನೆಯದಾಗಿ, ನಾವು ನೋವು, ಅಸಂತೋಷ ಮತ್ತು ಸಂಕಟದಂತಹ ಘೋರ ದುಃಖಗಳನ್ನು ಅನುಭವಿಸುತ್ತೇವೆ. ಇದು ನಾವೆಲ್ಲರೂ ಅರ್ಥಮಾಡಿಕೊಳ್ಳಬಹುದಾದ ವಿಷಯವಾಗಿದ್ದು, ಇದನ್ನು ಪ್ರಾಣಿಗಳು ಸೇರಿದಂತೆ ಪ್ರತಿಯೊಬ್ಬರೂ ತಪ್ಪಿಸಲು ಬಯಸುತ್ತಾರೆ. ನೋವು ಮತ್ತು ಅಸಂತೋಷವು ಅತೃಪ್ತಿಕರ ಪರಿಸ್ಥಿತಿಯಾಗಿರುತ್ತವೆ ಮತ್ತು ನಾವು ಅವುಗಳಿಂದ ಹೊರಬರುವುದು ಉತ್ತಮ ಎಂದು ಹೇಳುವುದರಲ್ಲಿ ಬೌದ್ಧಧರ್ಮವೇನು ವಿಶಿಷ್ಟವಾಗಿರುವುದಿಲ್ಲ. ಎರಡನೆಯ ವಿಧದ ದುಃಖವನ್ನು ಬದಲಾವಣೆಯ ದುಃಖವೆಂದು ಕರೆಯಲಾಗುತ್ತದೆ, ಇದು ನಮ್ಮ ಸಾಮಾನ್ಯವಾದ, ಎಂದಿನಂತೆ ಇರುವ ದೈನಂದಿನ ಸಂತೋಷದ ಬಗ್ಗೆ ಮಾತನಾಡುತ್ತದೆ. ಈ ರೀತಿಯ ಸಂತೋಷದಲ್ಲಿರುವ ಸಮಸ್ಯೆ ಏನು? ಇದರ ಸಮಸ್ಯೆಯೆಂದರೆ ಇದು ಶಾಶ್ವತವಾಗಿರುವುದಿಲ್ಲ; ಇದು ಯಾವಾಗಲೂ ಬದಲಾಗುತ್ತಿರುತ್ತದೆ. ನಾವು ಸಾಮಾನ್ಯ ಸಂತೋಷವೆಂದು ಪರಿಗಣಿಸುವುದು ನಿಜವಾದ ಸಂತೋಷವಾಗಿದ್ದರೆ, ಅದು ಹೆಚ್ಚಾದಷ್ಟು ನಾವು ಹೆಚ್ಚು ಸಂತೋಷವಾಗಿರುತ್ತಿದ್ದೆವು. ಉದಾಹರಣೆಗೆ, ನಾವು ಚಾಕೊಲೇಟ್ ತಿನ್ನುವುದರಿಂದ ಸಂತೋಷವನ್ನು ಅನುಭವಿಸಿದರೆ, ನಾವು ಗಂಟೆಗಳ ಕಾಲ ಹೆಚ್ಚು ತಿಂದಷ್ಟು, ನಾವು ಹೆಚ್ಚು ಸಂತೋಷವಾಗಿರಬೇಕು. ಆದರೆ ಖಂಡಿತವಾಗಿಯೂ ಹೀಗಾಗುವುದಿಲ್ಲ ಎಂದು ನಮಗೆ ತಿಳಿದಿದೆ! ಅಥವಾ ನಿಮ್ಮ ಪ್ರೀತಿಪಾತ್ರರೊಬ್ಬರು ಗಂಟೆಗಟ್ಟಲೆ ನಿಮ್ಮ ಕೈಯನ್ನು ಸವರುತ್ತಿರುತ್ತಾರೆ ಎಂದು ಊಹಿಸಿ. ಆಹ್ಲಾದಕರ ಭಾವನೆಯು ಶೀಘ್ರದಲ್ಲೇ ನೋವಾಗಿ ಅಥವಾ ವಿಚಿತ್ರವೆನಿಸಲು ಪ್ರಾರಂಭವಾಗುತ್ತದೆ. ಇದರ ಸರಳವಾದ ವಿವರಣೆಯೆಂದರೆ, ಸಾಮಾನ್ಯವಾದ ಸಂತೋಷವು ಬದಲಾಗುತ್ತಿರುತ್ತದೆ. ಸಹಜವಾಗಿ, ಅದು ಎಷ್ಟಿದ್ದರೂ ಸಾಲದು; ನಮಗೆ ಎಂದಿಗೂ ತೃಪ್ತಿಯಾಗುವುದಿಲ್ಲ. ನಾವು ಯಾವಾಗಲೂ ಹೆಚ್ಚು ಚಾಕೊಲೇಟ್ ಅನ್ನು ಬಯಸುತ್ತೇವೆ, ತಕ್ಷಣವೇ ಅಲ್ಲವಾದರೂ, ಸ್ವಲ್ಪ ಹೊತ್ತಿನ ನಂತರ ಮತ್ತೆ ಬಯಸುತ್ತೇವೆ.
"ನನ್ನ ಅಚ್ಚುಮೆಚ್ಚಿನ ಆಹಾರವನ್ನು ಯಾವ ಪ್ರಮಾಣದಲ್ಲಿ ಸೇವಿಸಿದರೆ ನನಗೆ ಅದರಿಂದ ಆನಂದ ಸಿಗುತ್ತದೆ?" ಎಂದು ನೀವು ಯೋಚಿಸಿದರೆ ಅದು ಆಸಕ್ತಿದಾಯಕವಾಗಿರುತ್ತದೆ. ಒಂದು ಸಣ್ಣ ತುತ್ತು ಸಾಕಾದರೂ, ನಾವು ಯಾವಾಗಲೂ ಹೆಚ್ಚು ಹೆಚ್ಚು ಬಯಸುತ್ತೇವೆ. ಈ ನಮ್ಮ ಸಾಮಾನ್ಯವಾದ, ಪ್ರಾಪಂಚಿಕ ಸಂತೋಷದ ಸಮಸ್ಯೆಯನ್ನು ಜಯಿಸಲು ಬಯಸುವುದೂ ಸಹ ಪ್ರತ್ಯೇಕವಾಗಿ ಬೌದ್ಧ ಗುರಿಯಾಗಿರುವುದಿಲ್ಲ. ಪ್ರಾಪಂಚಿಕ ಸುಖಗಳನ್ನು ಮೀರಿ, ಶಾಶ್ವತವಾದ ಆನಂದದಿಂದ ಕೂಡಿದ ಸ್ವರ್ಗದ ಕೆಲವು ರೂಪಗಳನ್ನು ಕಂಡುಕೊಳ್ಳಲು ನಮಗೆ ಕಲಿಸುವ ಅನೇಕ ಧರ್ಮಗಳಿವೆ.
ಮೂರನೆಯ ವಿಧದ ದುಃಖವು ನಿರ್ದಿಷ್ಟವಾಗಿ ಬೌದ್ಧವಾಗಿದ್ದು, ಇದನ್ನು "ಸರ್ವವ್ಯಾಪಿ ದುಃಖ" ಎಂದು ಕರೆಯಲಾಗುತ್ತದೆ. ಇದನ್ನು ನಮ್ಮ "ಸರ್ವವ್ಯಾಪಿ ಸಮಸ್ಯೆ" ಎಂದೂ ಕರೆಯಬಹುದು. ಈ ದುಃಖವು ನಾವು ಅನುಭವಿಸುವ ಎಲ್ಲವನ್ನೂ ವ್ಯಾಪಿಸುತ್ತದೆ ಮತ್ತು ನಾವು ಅನಿಯಂತ್ರಿತವಾಗಿ ಪುನರ್ಜನ್ಮವನ್ನು ಪಡೆದುಕೊಳ್ಳುವ ವಿಧಾನವನ್ನು ಸೂಚಿಸುತ್ತದೆ, ಪುರ್ನಜನ್ಮವೂ ನಮ್ಮ ದೈನಂದಿನ ಜೀವನದ ಏರಿಳಿತಗಳ ನಿಜವಾದ ಆಧಾರವಾಗಿರುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ನಮ್ಮ ಬಳಿಯಿರುವ ಮನಸ್ಸು ಮತ್ತು ದೇಹಗಳ ಪ್ರಕಾರಗಳೊಂದಿಗೆ, ಮತ್ತೆ ಮತ್ತೆ ಮರುಹುಟ್ಟು ಪಡೆಯುವುದು ಮೊದಲ ಎರಡು ರೀತಿಯ ದುಃಖಗಳಿಗೆ ಆಧಾರವಾಗಿರುತ್ತದೆ. ಇದು ಪುನರ್ಜನ್ಮದ ಬಗ್ಗೆಯಾಗಿದ್ದು, ಅದರ ಬಗ್ಗೆ ನಾವು ನಂತರ ಕಲಿಯಬಹುದು.
ಸಹಜವಾಗಿ, ಪುನರ್ಜನ್ಮದ ಬಗ್ಗೆ ಕಲಿಸುವ ಅನೇಕ ಭಾರತೀಯ ತಾತ್ವಿಕ ವ್ಯವಸ್ಥೆಗಳಿವೆ, ಆದ್ದರಿಂದ ಮತ್ತೊಮ್ಮೆ, ಇದು ಬುದ್ಧನಿಂದ ಬಂದ ಹೊಸ ವಿಷಯವೇನಲ್ಲ. ಆದರೆ, ಪುನರ್ಜನ್ಮದ ಕಾರ್ಯವಿಧಾನವನ್ನು ಅಂದಿನ ಕಾಲದ ಇತರ ತತ್ವಶಾಸ್ತ್ರಗಳು ಅಥವಾ ಧರ್ಮಗಳಿಗಿಂತ ಹೆಚ್ಚು ಆಳವಾಗಿ ಅರ್ಥಮಾಡಿಕೊಂಡು, ಬುದ್ಧ ವಿವರಿಸಿದ್ದರು. ಬುದ್ಧನು, ಪುನರ್ಜನ್ಮವು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಮನಸ್ಸು ಮತ್ತು ದೇಹಗಳು ನೋವು, ಅತೃಪ್ತಿ ಮತ್ತು ಸಾಮಾನ್ಯ ಸಂತೋಷಗಳ ಈ ಏರಿಳಿತಗಳನ್ನು ಹೇಗೆ ಅನುಭವಿಸುತ್ತವೆ ಎಂಬುದರ ಕುರಿತು ಸಂಪೂರ್ಣ ವಿವರಣೆಯನ್ನು ನೀಡಿದ್ದರು.
ಎರಡನೇ ಆರ್ಯ ಸತ್ಯ
ಎರಡನೆಯ ಸತ್ಯವು ನಾವು ಅನುಭವಿಸುವ ಈ` ಎಲ್ಲಾ ಅಸಂತೋಷಗಳ ನಿಜವಾದ ಕಾರಣದತ್ತ ನೋಡುತ್ತದೆ. ಇಲ್ಲಿ ನಾವು ಪುನರ್ಜನ್ಮದಂತಹ ವಿಷಯದ ಬಗ್ಗೆ ಮಾತನಾಡುವ ಅಗತ್ಯವಿಲ್ಲ; ಬದಲಿಗೆ ಬುದ್ಧನು ಸರಳವಾದ, ತಾರ್ಕಿಕ ರೀತಿಯಲ್ಲಿ ವಿವರಿಸುತ್ತಿರುವುದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬಹುದು. ನಾವು ದುಃಖ ಮತ್ತು ಸಾಮಾನ್ಯ ಸಂತೋಷದ ಬಗ್ಗೆ ಮತ್ತು ಇವುಗಳು ನಾನಾ ಕಾರಣಗಳಿಂದ ಹುಟ್ಟುತ್ತವೆ ಎಂಬುದರ ಬಗ್ಗೆ ಮಾತನಾಡಿದ್ದೇವೆ, ಆದರೆ ಬುದ್ಧನು "ನಿಜವಾದ ಕಾರಣಗಳಲ್ಲಿ" ಆಸಕ್ತಿ ಹೊಂದಿದ್ದರು. ಸಂತೋಷ ಮತ್ತು ನೋವು ನಮಗೆ ಪ್ರತಿಫಲ ಅಥವಾ ಶಿಕ್ಷೆಯ ರೀತಿಯಲ್ಲಿ ಸಿಗುತ್ತವೆ ಎಂದು ನಾವು ಭಾವಿಸಬಹುದು, ಆದರೆ ನಿಜವಾದ ಕಾರಣವು, ವಿನಾಶಕಾರಿ ಮತ್ತು ರಚನಾತ್ಮಕ ನಡವಳಿಕೆಯಾಗಿರುವುದು ಎಂದು ಬುದ್ಧ ಹೇಳಿದರು.
ವಿನಾಶಕಾರಿ ನಡವಳಿಕೆಯ ಅರ್ಥವೇನು? ಇದು ಕೇವಲ ಹಾನಿಯನ್ನುಂಟುಮಾಡುವುದೇ? ನಾವು ಹಾನಿಯನ್ನುಂಟುಮಾಡುವ ಬಗ್ಗೆ ಮಾತನಾಡುವಾಗ, ಅದು ಇತರರಿಗೆ ಹಾನಿಕರವಾಗಿರಬಹುದು ಅಥವಾ ನಮಗೇ ಹಾನಿಕರವಾಗಿರಬಹುದು. ನಮ್ಮ ನಡವಳಿಕೆಯು ಇತರರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರಬಹುದು, ಅದು ಹಾನಿಕರವಾಗಿರಬಹುದೇ ಅಥವಾ ಸಹಾಯಕವಾಗಿರಬಹುದೇ ಎಂಬುದನ್ನು ತಿಳಿದುಕೊಳ್ಳುವುದು ನಿಜವಾಗಿಯೂ ತುಂಬಾ ಕಷ್ಟಕರವಾಗಿರುತ್ತದೆ. ಉದಾಹರಣೆಗೆ, ನಾವು ಯಾರಿಗಾದರೂ ದೊಡ್ಡ ಮೊತ್ತದಲ್ಲಿ ಹಣವನ್ನು ನೀಡಬಹುದು ಮತ್ತು ಅದರ ಪರಿಣಾಮವಾಗಿ, ಹಣವನ್ನು ಕದಿಯಲು ಬಯಸುವ ಬೇರೊಬ್ಬರು ಅವರನ್ನು ಕೊಲ್ಲಬಹುದು. ಅವರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿರಬಹುದು, ಆದರೆ ವಾಸ್ತವದಲ್ಲಿ ಅದರ ಖಾತರಿಯಿರುವುದಿಲ್ಲ. ಆದರೆ ನಮಗಾಗಿಯೇ ವಿನಾಶಕಾರಿಯಾಗಿರುವ ವರ್ತನೆಗಳ ಬಗ್ಗೆ ನಮಗೆ ಖಾತರಿಯಿರುತ್ತದೆ. ಇದನ್ನೇ ಬುದ್ದನು ವಿನಾಶಕಾರಿ ನಡವಳಿಕೆಯೆಂದು ಅರ್ಥೈಸಿದರು - ಇದು ಸ್ವಯಂ-ವಿನಾಶಕಾರಿಯಾಗಿರುತ್ತದೆ.
ಪ್ರತಿಯಾಗಿ, ಇದು ಗೊಂದಲದ ಭಾವನೆಗಳ ಪ್ರಭಾವದಡಿ ಯೋಚಿಸುವುದು, ವರ್ತಿಸುವುದು ಅಥವಾ ಮಾತನಾಡುವುದನ್ನು ಸೂಚಿಸುತ್ತದೆ. ಸರಳವಾಗಿ ಹೇಳುವುದಾದರೆ, ಗೊಂದಲದ ಭಾವನೆಗಳು, ಗೊಂದಲಗೊಳಿಸುತ್ತವೆ ಅಷ್ಟೆ! ಅವು ನಮ್ಮ ಮನಸ್ಸಿನ ಶಾಂತಿಯನ್ನು ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಇದು ಕೋಪ, ದುರಾಸೆ, ಬಾಂಧವ್ಯ, ಅಸೂಯೆ, ದುರಹಂಕಾರ ಮತ್ತು ನಿಷ್ಕಪಟತೆಯಂತಹ ಮುಂತಾದವುಗಳನ್ನು ಸೂಚಿಸುತ್ತದೆ. ಈ ಭಾವನೆಗಳ ಪ್ರಭಾವದಡಿ ನಮ್ಮ ಆಲೋಚನೆಗಳು ಸಿಲುಕಿಕೊಂಡಾಗ, ಮತ್ತು ನಂತರ ಅವುಗಳ ಪ್ರಭಾವದಡಿ ನಾವು ಮಾತನಾಡಿದಾಗ ಅಥವಾ ವರ್ತಿಸಿದಾಗ, ನಮಗೆ ನಾವೇ ಅತೃಪ್ತಿಯನ್ನು ಸೃಷ್ಟಿಸಿಕೊಳ್ಳುತ್ತೇವೆ. ಸದ್ಯಕ್ಕೆ ಇದರಿಂದ ಯಾವುದೇ ತೊಂದರೆಗಳಾಗದಿದ್ದರೂ, ದೀರ್ಘಾವಧಿಯಲ್ಲಿ ಅವು ಅತೃಪ್ತಿಯನ್ನು ಉಂಟುಮಾಡುತ್ತವೆ, ಏಕೆಂದರೆ ಅವು ಅಂತಹ ನಡವಳಿಕೆಯನ್ನೇ ಮುಂದುವರಿಸುವ ಪ್ರವೃತ್ತಿಯೊಂದನ್ನು ನಿರ್ಮಿಸುತ್ತವೆ.
ಮತ್ತೊಂದೆಡೆ, ರಚನಾತ್ಮಕ ನಡವಳಿಕೆಯಿವೆ, ಇವು ಗೊಂದಲಮಯ ಭಾವನೆಗಳ ಪ್ರಭಾವದಡಿಯಿಲ್ಲದ ವರ್ತನೆಗಳಾಗಿದ್ದು, ಅವುಗಳ ಬದಲಿಗೆ ಪ್ರೀತಿ, ಸಹಾನುಭೂತಿ ಅಥವಾ ತಾಳ್ಮೆಯಂತಹ ಸಕಾರಾತ್ಮಕ ಭಾವನೆಗಳಿಂದ ಪ್ರೇರೇಪಿಸಲ್ಪಡಬಹುದು.
ರಚನಾತ್ಮಕವಾಗಿ ವರ್ತಿಸುವುದರಿಂದ ಸಂತೋಷವುಂಟಾಗುತ್ತದೆ. ನಮ್ಮ ಮನಸ್ಸು ಹೆಚ್ಚು ಶಾಂತವಾಗಿದ್ದು, ಸಾಮಾನ್ಯವಾಗಿ ನಾವೂ ಹೆಚ್ಚು ಶಾಂತರಾಗಿರುತ್ತೇವೆ. ಸಾಮಾನ್ಯವಾಗಿ ನಾವು ಹೆಚ್ಚು ಸ್ವಯಂ ನಿಯಂತ್ರಣದಲ್ಲಿರುತ್ತೇವೆ, ಆದ್ದರಿಂದ ಸಮಸ್ಯೆಗಳನ್ನು ಉಂಟುಮಾಡುವ ಹಾಗೆ ನಾವು ಮೂರ್ಖ ರೀತಿಯಲ್ಲಿ ವರ್ತಿಸುವುದಿಲ್ಲ ಅಥವಾ ಮೂರ್ಖತನದಿಂದ ಮಾತನಾಡುವುದಿಲ್ಲ. ಮತ್ತೊಮ್ಮೆ, ಪರಿಣಾಮವು ತಕ್ಷಣವೇ ಕಾಣುವುದಿಲ್ಲವಾದರೂ, ದೀರ್ಘಾವಧಿಯಲ್ಲಿ, ಇದು ಸಂತೋಷವನ್ನು ಸೃಷ್ಟಿಸುತ್ತದೆ. ಆದರೆ, ಅದರ ಆಧಾರವು ನಾವು ಅಸ್ತಿತ್ವದಲ್ಲಿರುವ ರೀತಿಯ ಬಗ್ಗೆ, ಇತರರು ಅಸ್ತಿತ್ವದಲ್ಲಿರುವ ರೀತಿಯ ಬಗ್ಗೆ ಮತ್ತು ಸಾಮಾನ್ಯವಾಗಿ ವಾಸ್ತವದ ಬಗೆಗಿರುವ ನಿಷ್ಕಪಟತೆಯಾಗಿರುತ್ತದೆ.
ನಮ್ಮ ಸಾಮಾನ್ಯ ಸಂತೋಷ ಮತ್ತು ಅಸಂತೋಷವು ಯಾವುದೋ ಬಾಹ್ಯ ನ್ಯಾಯಾಧೀಶರಂತಹವರಿಂದ ಸಿಗುವ ಪ್ರತಿಫಲಗಳು ಅಥವಾ ಶಿಕ್ಷೆಗಳಾಗಿರುವುದಿಲ್ಲ. ಅವು, ಬಹುತೇಕ ಭೌತಶಾಸ್ತ್ರದ ನಿಯಮವನ್ನು ಅನುಸರಿಸುತ್ತವೆ. ನಡವಳಿಕೆಯ ಕಾರಣ ಮತ್ತು ಪರಿಣಾಮವು ಯಾವುದರ ಆಧಾರದ ಮೇಲೆ ನಿಂತಿದೆ? ಅದರ ಆಧಾರವು ನಮ್ಮ ಗೊಂದಲವಾಗಿರುತ್ತದೆ, ವಿಶೇಷವಾಗಿ ನಮ್ಮ ಬಗ್ಗೆಯೇ ಇರುವ ಗೊಂದಲವಾಗಿರುತ್ತದೆ. ನಾವು ಹೀಗೆ ಯೋಚಿಸುತ್ತೇವೆ, "ಹೌದು, ನಾನೇ ಅತ್ಯಂತ ಪ್ರಮುಖವಾದ ವ್ಯಕ್ತಿ, ನಾನು ಹೇಳಿದ ಹಾಗೆಯೇ ನಡೆಯಬೇಕು. ಸೂಪರ್ಮಾರ್ಕೆಟ್ನಲ್ಲಿನ ಸಾಲಿನ ಮುಂಚೂಣಿಯಲ್ಲಿ ನಾನು ನಿಲ್ಲಬೇಕು. ನಾನೇ ಮೊದಲಿಗನಾಗಿರಬೇಕು.” ನಾವು ಮೊದಲಿಗರಾಗಬೇಕೆಂಬ ದುರಾಸೆಯನ್ನು ಹೊಂದಿದ್ದೇವೆ, ಆದ್ದರಿಂದ ನಾವು ನಮ್ಮ ಮುಂದೆ ಇರುವವರ ಮೇಲೆ ಕೋಪಗೊಳ್ಳುತ್ತೇವೆ. ಎದುರಿಗಿರುವ ವ್ಯಕ್ತಿಯು ತುಂಬಾ ನಿಧಾನವಾಗಿರುವುದರಿಂದ ಮತ್ತು ತುಂಬಾ ಸಮಯ ತೆಗೆದುಕೊಳ್ಳುತ್ತಿರುವುದರಿಂದ ನಾವು ತಾಳ್ಮೆ ಕಳೆದುಕೊಳ್ಳುತ್ತೇವೆ ಮತ್ತು ನಮ್ಮ ಮನಸ್ಸು ಅವರ ಬಗ್ಗೆ ಎಲ್ಲಾ ರೀತಿಯ ಅತೃಪ್ತಿಕರ ಆಲೋಚನೆಗಳಿಂದ ತುಂಬಿರುತ್ತದೆ. ನಾವು ರಚನಾತ್ಮಕ ರೀತಿಯಲ್ಲಿ ವರ್ತಿಸಿದರೂ ಸಹ, ಅವುಗಳ ಕೆಳಗೆ "ನನ್ನ" ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಉದಾಹರಣೆಗೆ, ನಾವು ಇತರರಿಗೆ ಸಹಾಯ ಮಾಡಬಹುದು ಏಕೆಂದರೆ ಅವರು ನಮ್ಮನ್ನು ಇಷ್ಟಪಡಬೇಕೆಂದು ನಾವು ಬಯಸುತ್ತೇವೆ ಅಥವಾ ಪ್ರತಿಯಾಗಿ ಅವರು ನಮಗಾಗಿ ಏನಾದರೂ ಮಾಡಬೇಕೆಂದು ಬಯಸುತ್ತೇವೆ. ಅಥವಾ, ಅದರಿಂದ ನಾವು ಅವರಿಗೆ ಬೇಕಾದವರು ಎಂದು ನಾವು ಭಾವಿಸಬಹುದು. ಕನಿಷ್ಠಪಕ್ಷ ನಮಗೆ ಒಂದು ಧನ್ಯವಾದವಾದರೂ ಬೇಕಾಗಿರುತ್ತದೆ!
ಈ ರೀತಿಯಾಗಿ ಜನರಿಗೆ ಸಹಾಯ ಮಾಡುವುದು ನಮಗೆ ಸಂತೋಷವನ್ನುಂಟುಮಾಡುತ್ತದೆಯಾದರೂ, ಅದು ಬಹಳಾ ಆರಾಮದಾಯವಾಗಿರುವುದಿಲ್ಲ. ನಾವು ಅನುಭವಿಸಬಹುದಾದ ಈ ಸಂತೋಷವು ದೀರ್ಘಾವಧಿಯಲ್ಲಿ ಎಂದಿಗೂ ಉಳಿಯುವುದಿಲ್ಲ. ಇದು ಅತೃಪ್ತಿಕರವಾಗಿ ಬದಲಾಗುತ್ತದೆ. ಈ ರೀತಿಯಾಗಿ ನಮ್ಮ ಜೀವನದುದ್ದಕ್ಕೂ ಮತ್ತು ಬೌದ್ಧ ದೃಷ್ಟಿಕೋನದಿಂದ, ನಮ್ಮ ಮುಂದಿನ ಜೀವನದಲ್ಲಿಯೂ ಮುಂದುವರಿಯುತ್ತದೆ.
ನಾವು ಸೂಕ್ಷ್ಮತೆಯಿಂದ ನೋಡಿದಾಗ, ನಮಗೆ ಎಲ್ಲದರ ಬಗ್ಗೆ ಗೊಂದಲವಿರುವುದನ್ನು ನೋಡುತ್ತೇವೆ. ಉದಾಹರಣೆಗೆ, ನಾವು ಯಾರನ್ನಾದರೂ ತುಂಬಾ ಪ್ರೀತಿಸಿದಾಗ, ನಾವು ಅವರ ಒಳ್ಳೆಯ ಗುಣಗಳನ್ನು ಬಹಳಾ ಉತ್ಪ್ರೇಕ್ಷಿಸುತ್ತೇವೆ. ಅಥವಾ ನಾವು ಯಾರನ್ನಾದರೂ ಅತಿಯಾಗಿ ಇಷ್ಟಪಡದಿದ್ದಾಗ, ನಾವು ಅವರ ನಕಾರಾತ್ಮಕ ಗುಣಗಳನ್ನು ಉತ್ಪ್ರೇಕ್ಷಿಸುತ್ತೇವೆ ಮತ್ತು ಅವರಲ್ಲಿರುವ ಒಳ್ಳೆಯ ಗುಣಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ನಾವು ಹೆಚ್ಚು ಪರಿಶೋಧನೆ ನಡೆಸಿದಷ್ಟು, ನಾವು ಅನುಭವಿಸುವ ಎಲ್ಲದರ ಆಧಾರದಲ್ಲಿರುವ ಹೆಚ್ಚಾದ ಗೊಂದಲವನ್ನು ನಿರಂತರವಾಗಿ ಕಂಡುಕೊಳ್ಳುತ್ತಿರುತ್ತೇವೆ.
ಆಳವಾಗಿ ನೋಡಿದರೆ, ಇದಕ್ಕೆ ನಮ್ಮದೇ ಇತಿಮಿತಿಗಳು ಆಧಾರವಾಗಿರುವುದನ್ನು ನಾವು ಕಂಡುಕೊಳ್ಳಬಹುದು. ನಾವು ಹೊಂದಿರುವ ಈ ಮನಸ್ಸು ಮತ್ತು ದೇಹದೊಳಗೆ ಮಿತಿಗಳಿರುತ್ತವೆ. ನಾವು ಕಣ್ಣು ಮುಚ್ಚಿದಾಗ, ಪ್ರಪಂಚದಲ್ಲಿನ ಉಳಿದಲ್ಲೆವೂ ಅಸ್ತಿತ್ವದಲ್ಲಿರದೆ, ಕೇವಲ ನಾನು ಮಾತ್ರ ಇದ್ದೇನೆ ಎಂದು ತೋರುತ್ತದೆ. ನಮ್ಮ ತಲೆಯಲ್ಲಿ ಇದೊಂದು ಧ್ವನಿಯಾಗಿದ್ದು, ಅದು "ನಾನು" ಎನ್ನುವುದಾಗಿರುವಂತೆ ತೋರುತ್ತದೆ, ನನ್ನೊಳಗಿರುವ ನನ್ನಂತೆ. ಇದು ಬಹಳಾ ವಿಚಿತ್ರವಾಗಿರುತ್ತದೆ. ಆದರೆ ನಾವು ಅದರೊಂದಿಗೆ ಗುರುತಿಸಿಕೊಳ್ಳುತ್ತೇವೆ, ಏಕೆಂದರೆ ಅದು ಯಾವಾಗಲೂ ದೂರು ನೀಡುತ್ತಿರುತ್ತದೆ, “ನಾನು ಮುಂದೆ ಹೋಗಬೇಕು; ನಾನು ಇದನ್ನು ಮಾಡಬೇಕು.” ಇದು ಯಾವಾಗಲೂ ಚಿಂತಿಸುತ್ತಿರುತ್ತದೆ. ನಮ್ಮ ತಲೆಯೊಳಗಿನ ಈ ಧ್ವನಿಯು ವಿಶೇಷವಾಗಿದೆ ಮತ್ತು ವಿಶಿಷ್ಟವಾಗಿದೆ ಮತ್ತು ಎಲ್ಲರಿಗಿಂತ ಸ್ವತಂತ್ರವಾಗಿ ಅಸ್ತಿತ್ವದಲ್ಲಿದೆ ಎಂದು ನಮಗೆ ತೋರುತ್ತದೆ, ಏಕೆಂದರೆ ನಾವು ನಮ್ಮ ಕಣ್ಣುಗಳನ್ನು ಮುಚ್ಚಿದಾಗ, "ನಾನು" ಎಂಬುದನ್ನು ಹೊರತುಪಡಿಸಿ ಬೇರೇನೂ ಇರುವುದಿಲ್ಲ.
ಇದು ಬಹಳಾ ಗೊಂದಲಮಯವಾದ ಆಲೋಚನಾ ವಿಧಾನವಾಗಿರುತ್ತದೆ, ನಿಸ್ಸಂಶಯವಾಗಿ ನಾವು ಬೇರೆಯವರಿಂದ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವುದಿಲ್ಲ; ಮತ್ತು ವಾಸ್ತವದಲ್ಲಿ ಯಾರೊಬ್ಬರೂ ವಿಶೇಷವಾಗಿರುವುದಿಲ್ಲ. ನಾವೆಲ್ಲರೂ ಮನುಷ್ಯರೇ. ಘನೀಕರಿಸುವ ಅಂಟಾರ್ಕ್ಟಿಕ್ನಲ್ಲಿ ಸಾವಿರಾರು ಪೆಂಗ್ವಿನ್ಗಳು ಒಟ್ಟಿಗೆ ಸೇರಿಕೊಂಡಿರುವುದನ್ನು ಕಲ್ಪಿಸಿಕೊಳ್ಳಿ: ಅವುಗಳಲ್ಲಿ ಇತರರಿಗಿಂತ ಹೆಚ್ಚು ವಿಶೇಷವಾದದ್ದು ಯಾವುದು? ವಾಸ್ತವದಲ್ಲಿ, ಅವೆಲ್ಲವೂ ಒಂದೇ. ನಾವೂ ಕೂಡ ಹಾಗೆಯೇ. ಬಹುಶಃ ಪೆಂಗ್ವಿನ್‌ಗಳಿಗೆ, ಮನುಷ್ಯರೆಲ್ಲರೂ ಒಂದೇ ರೀತಿ ಕಾಣುತ್ತಾರೆ! "ನಾನು ಎಲ್ಲರಿಗಿಂತ ವಿಶೇಷ ಮತ್ತು ಸ್ವತಂತ್ರವಾಗಿದ್ದೇನೆ," ಎಂಬ ಆಲೋಚನೆಯ ಮೇಲೆ, ನಾವು ಹೇಳಿದ ರೀತಿಯಲ್ಲೇ ನಡೆಯಬೇಕು ಎಂದು ಹಠಬೀಳುತ್ತೇವೆ, ಹಾಗಾಗದಿದ್ದಲ್ಲಿ ಕೋಪಗೊಳ್ಳುತ್ತೇವೆ.
ಮೂಲಭೂತವಾಗಿ, ನಮ್ಮ ಮನಸ್ಸು ಮತ್ತು ದೇಹದ ಯಂತ್ರಾಂಶವು ಈ ಗೊಂದಲವನ್ನು ಹೊಂದಲು ಅನುಕೂಲಕರವಾಗಿದೆ. ಇದು ವಿಚಿತ್ರವಾಗಿ ಕಾಣಬಹುದು, ಆದರೆ ಪ್ರಮುಖವಾಗಿ, ನಾವು ನಮ್ಮ ತಲೆಯ ಮುಂಭಾಗದಲ್ಲಿರುವ ಈ ಎರಡು ರಂಧ್ರಗಳಿಂದ ಜಗತ್ತನ್ನು ಅನುಭವಿಸುತ್ತೇವೆ. ನನ್ನ ಹಿಂದೆ ಏನಿದೆ ಎಂಬುದನ್ನು ನನಗೆ ನೋಡಲಾಗುವುದಿಲ್ಲ. ಪ್ರಸ್ತುತವಾಗಿ ಇರುವುದನ್ನು ಮಾತ್ರ ನಾನು ನೋಡಬಲ್ಲೆ; ನನ್ನ ಮೊದಲು ಬಂದದ್ದನ್ನು ಅಥವಾ ನನ್ನ ನಂತರ ಬರುವುದನ್ನು ನೋಡಲು ಸಾಧ್ಯವಿಲ್ಲ. ಇದು ಬಹಳಾ ಸೀಮಿತವಾಗಿರುತ್ತದೆ. ತದನಂತರ ನಮಗೆ ವಯಸ್ಸಾಗುತ್ತದೆ ಮತ್ತು ಸರಿಯಾಗಿ ಕೇಳುವುದಿಲ್ಲ. ಯಾರೋ ಏನೋ ಹೇಳುತ್ತಾರೆ, ನಮಗೆ ಅದು ಸರಿಯಾಗಿ ಕೇಳಿಸುವುದಿಲ್ಲ, ಅವರು ಬೇರೆ ಏನೋ ಹೇಳಿದರು ಎಂದು ಭಾವಿಸಿಕೊಂಡು ನಾವು ಕೋಪಗೊಳ್ಳುತ್ತೇವೆ. ಇದರ ಬಗ್ಗೆ ನೀವು ಯೋಚಿಸಿದರೆ ಇದು ಬಹಳಾ ಕರುಣಾಜನಕವಾಗಿರುತ್ತದೆ.
ಈ ನಮ್ಮ ಸರ್ವವ್ಯಾಪಿ ಸಮಸ್ಯೆಯೆಂದರೆ, ಈ ರೀತಿಯ ದೇಹ ಮತ್ತು ಮನಸ್ಸಿನೊಂದಿಗೆ ನಾವು ನಿರಂತರವಾಗಿ ಪುನರ್ಜನ್ಮವನ್ನು ಪಡೆಯುತ್ತಿರುತ್ತೇವೆ, ಅದು ಈ ಗೊಂದಲವನ್ನು ಶಾಶ್ವತಗೊಳಿಸುತ್ತದೆ. ಈ ಗೊಂದಲದ ಆಧಾರದ ಮೇಲೆ, ನಾವು ವಿನಾಶಕಾರಿಯಾಗಿ ಅಥವಾ ಸಾಮಾನ್ಯವಾದ ರಚನಾತ್ಮಕ ರೀತಿಯಲ್ಲಿ ವರ್ತಿಸುತ್ತೇವೆ ಮತ್ತು ಇದು ನಾವು ಅನುಭವಿಸುವ ಅಸಂತೋಷ ಮತ್ತು ಸಾಮಾನ್ಯವಾದ ಸಂತೋಷವನ್ನು ಉಂಟುಮಾಡುತ್ತದೆ.
ನಾವು ಇನ್ನೂ ಆಳವಾಗಿ ನೋಡಿದರೆ, ಗೊಂದಲವೇ ಈ ಅನಿಯಂತ್ರಿತವಾಗಿ ಮರುಕಳಿಸುವ ಪುರ್ನಜನ್ಮಕ್ಕೆ ಕಾರಣವಾಗಿರುತ್ತದೆ, ಆದರೆ ಅದು ಸಂಕೀರ್ಣವಾಗಿದ್ದು, ಸದ್ಯಕ್ಕೆ ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಇದು ನಮ್ಮ ನಿಜವಾದ ಸಮಸ್ಯೆಗಳ ನಿಜವಾದ ಕಾರಣವಾಗಿರುತ್ತದೆ. ಸಾಮಾನ್ಯವಾಗಿ, ಈ ಗೊಂದಲ ಅಥವಾ ಪ್ರಜ್ಞಾಹೀನತೆಯನ್ನು "ಅಜ್ಞಾನ" ಎಂದು ಅನುವಾದಿಸಲಾಗುತ್ತದೆ. ನಾನು ಈ ಪದವನ್ನು ಬಳಸದಿರಲು ಬಯಸುತ್ತೇನೆ, ಏಕೆಂದರೆ ನಾವು ಮೂರ್ಖರು ಎಂದು ಇದು ಸೂಚಿಸುತ್ತದೆ; ಆದರೆ ಅದು ನಿಜವಾದ ಸಮಸ್ಯೆಯಾಗಿರುವುದಿಲ್ಲ, ಮತ್ತು ಇದು ನಮಗೆ ಬೇಕಾದ ಅರ್ಥವಾಗಿರುವುದಿಲ್ಲ. ಅಜ್ಞಾನವು, ಕೇವಲ ನಾವು ಅಥವಾ ವಿದ್ಯಮಾನಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದು ನಮಗೆ ತಿಳಿದಿಲ್ಲ ಎಂಬುದನ್ನು ಸೂಚಿಸುತ್ತದೆ. ಇದು, ವಾಸ್ತವಕ್ಕೆ ಸಂಪೂರ್ಣವಾಗಿ ವಿರುದ್ಧವಾದ ರೀತಿಯಲ್ಲಿ, ‘ನಾನೇ ಅತ್ಯಂತ ಪ್ರಮುಖವಾದ ವ್ಯಕ್ತಿ’ - ನಾನೇ ಬ್ರಹ್ಮಾಂಡದ ಕೇಂದ್ರಬಿಂದು - ಎಂದು ಯೋಚಿಸುವುದನ್ನು ಅರ್ಥೈಸುತ್ತದೆ. ವಾಸ್ತವದಲ್ಲಿ ನಾವೆಲ್ಲರೂ ಇಲ್ಲಿ ಒಟ್ಟಿಗೆ ಇದ್ದೇವೆ. ನಾವು ಮೂರ್ಖರಲ್ಲ, ಆದರೆ ನಮ್ಮ ದೇಹ ಮತ್ತು ಮನಸ್ಸು ನಮಗೆ ಹಾಗೆ ಯೋಚಿಸುವಂತೆ ಮಾಡುತ್ತವೆ.
ಅದಕ್ಕಾಗಿಯೇ ನಾವು ಅವುಗಳನ್ನು "ಆರ್ಯ ಸತ್ಯಗಳು" ಎಂದು ಕರೆಯುತ್ತೇವೆ. ವಾಸ್ತವವನ್ನು ನೋಡುವವರು ಎಲ್ಲರಿಗಿಂತ ಭಿನ್ನವಾಗಿ ಅದನ್ನು ನೋಡುತ್ತಾರೆ. ನಮ್ಮ ಗೊಂದಲ ಮತ್ತು ನಮ್ಮಲ್ಲಿರುವ ಪ್ರಕ್ಷೇಪಗಳು ವಾಸ್ತವಕ್ಕೆ ಅನುಗುಣವಾಗಿವೆ ಎಂದು ನಾವು ನಿಜವಾಗಿಯೂ ನಂಬುತ್ತೇವೆ. ಅವು ಸತ್ಯವೆಂದು ನಾವು ನಂಬುತ್ತೇವೆ. ವಾಸ್ತವದಲ್ಲಿ, ನಾವು ಅದರ ಬಗ್ಗೆ ಯೋಚಿಸುವುದೂ ಇಲ್ಲ, ಏಕೆಂದರೆ ನಮ್ಮಲ್ಲಿರುವ ಪ್ರವೃತ್ತಿಯು ಹೀಗಿರುತ್ತದೆ "ನಾನೇ ಅತ್ಯಂತ ಮುಖ್ಯವಾದವನು, ನಾನು ಹೇಳಿದ ಹಾಗೆಯೇ ನಡೆಯಬೇಕು, ಎಲ್ಲರೂ ನನ್ನನ್ನು ಪ್ರೀತಿಸಬೇಕು." ಅಥವಾ ಕೆಲವರು ಇದರ ವಿಲೋಮವನ್ನು ನಂಬುತ್ತಾರೆ, "ಎಲ್ಲರೂ ನನ್ನನ್ನು ದ್ವೇಷಿಸಬೇಕು, ನಾನು ಒಳ್ಳೆಯವನಲ್ಲ". ಇದು ಒಂದೇ ವಿಷಯವಾಗಿದ್ದು, ನಾಣ್ಯದ ಇನ್ನೊಂದು ಬದಿಯಾಗಿರುತ್ತದೆ. ಇದೇ ನಿಜವಾದ ಕಾರಣ.
ಮೂರನೇ ಆರ್ಯ ಸತ್ಯ
ಮೂರನೆಯ ಸತ್ಯವನ್ನು ನಾವು "ನಿಜವಾದ ನಿಲುಗಡೆ" ಎಂದು ಕರೆಯಬಹುದು. ಇದನ್ನು ಸಾಮಾನ್ಯವಾಗಿ "ನಿಜವಾದ ಸಮಾಪ್ತಿ" ಎಂದು ಅನುವಾದಿಸಲಾಗುತ್ತದೆ ಮತ್ತು ಈ ಗೊಂದಲವನ್ನು ಎಂದಿಗೂ ಮರುಕಳಿಸದಂತೆ ನಿಲ್ಲಿಸಲು ಮತ್ತು ತೊಡೆದುಹಾಕಲು ಸಾಧ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ. ನಾವು ನಿಜವಾದ ಕಾರಣವಾದ ಗೊಂದಲವನ್ನು ತೊಡೆದುಹಾಕಿದರೆ, ನಾವು ನಿಜವಾದ ಸಮಸ್ಯೆಗಳು, ಏರಿಳಿತಗಳು ಮತ್ತು ಅದನ್ನು ಆಧಾರವಾಗಿ ಪಡೆದ ಈ ಅನಿಯಂತ್ರಿತವಾದ ಪುನರಾವರ್ತಿತ ಪುನರ್ಜನ್ಮವನ್ನು ತೊಡೆದುಹಾಕುತ್ತೇವೆ. ನಾವು ಹೀಗೆ ಮಾಡಿದ್ದಲ್ಲಿ, ನಾವು "ವಿಮೋಚನೆ" ಎಂದು ಕರೆಯಲ್ಪಡುವುದನ್ನು ಪಡೆಯುತ್ತೇವೆ. ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮಕ್ಕಾಗಿ ಇರುವ "ಸಂಸಾರ" ಮತ್ತು ವಿಮೋಚನೆಗಾಗಿ ಇರುವ "ನಿರ್ವಾಣ" ಎಂಬ ಸಂಸ್ಕೃತ ಪದಗಳನ್ನು ನೀವೆಲ್ಲರೂ ಕೇಳಿದ್ದೀರಿ ಎಂದು ನಾನು ಭಾವಿಸುತ್ತೇನೆ.
ಬುದ್ಧನ ಕಾಲದಲ್ಲಿ, ಸಂಸಾರದಿಂದ ವಿಮೋಚನೆಗೊಳ್ಳುವುದರ ಬಗ್ಗೆ ಮಾತನಾಡುವ ಇತರ ಭಾರತೀಯ ಸಂಪ್ರದಾಯಗಳಿದ್ದವು ಇದ್ದವು. ಇದು ಭಾರತದಲ್ಲಿನ ಸಾಮಾನ್ಯ ವಿಷಯವಾಗಿತ್ತು. ಆದರೆ ಈ ಇತರ ಸಂಪ್ರದಾಯಗಳು, ನಿಜವಾದ ಕಾರಣವನ್ನು ಗುರುತಿಸುವಷ್ಟು ಆಳವಾಗಿ ಹೋಗಲಿಲ್ಲ ಎಂಬುದನ್ನು ಬುದ್ಧ ನೋಡಿದರು. ಈ ಅನಿಯಂತ್ರಿತವಾಗಿ ಮರುಕಳಿಸುವ ಸಮಸ್ಯೆಗಳಿಂದ ನೀವು ವಿರಾಮವನ್ನು ಪಡೆಯಬಹುದು, ಉದಾಹರಣೆಗೆ ನಿಮ್ಮ ಮನಸ್ಸು ಖಾಲಿಯಾಗಿರುವ ಕೆಲವು ಸ್ವರ್ಗೀಯ ಕ್ಷೇತ್ರದಲ್ಲಿ, ಯುಗಗಳವರೆಗೆ ಜನಿಸಬಹುದು, ಆದರೆ ಅದು ಅಂತಿಮವಾಗಿ ಕೊನೆಗೊಳ್ಳುತ್ತದೆ. ಈ ಇತರ ಸಂಪ್ರದಾಯಗಳಲ್ಲಿ ನಿಜವಾದ ವಿಮೋಚನೆ ಇರಲಿಲ್ಲ.
ಬುದ್ಧನು ನಿಜವಾದ ನಿಲುಗಡೆಯ ಬಗ್ಗೆ ಬೋಧಿಸಿದರು, ಮತ್ತು ಈ ಗೊಂದಲವನ್ನು ಎಂದಿಗೂ ಮರುಕಳಿಸದಂತೆ ಹೋಗಲಾಡಿಸಲು ನಿಜವಾಗಿಯೂ ಸಾಧ್ಯವಿದೆ ಎಂದು ಅರ್ಥಮಾಡಿಕೊಳ್ಳುವುದು ಮತ್ತು ಆತ್ಮವಿಶ್ವಾಸವನ್ನು ಹೊಂದಿರುವುದು ಮುಖ್ಯ ಎಂದು ಬೋಧಿಸಿದರು. ಇಲ್ಲದಿದ್ದರೆ, ನೀವು ಅದನ್ನು ತೊಡೆದುಹಾಕಲು ಏಕೆ ಪ್ರಯತ್ನಿಸುತ್ತೀರಿ? ಈ ಗೊಂದಲವನ್ನು ಶಾಶ್ವತವಾಗಿ ನಿಲ್ಲಿಸುವ ಬಗ್ಗೆ ನೀವು ಕಾಳಜಿ ವಹಿಸದಿದ್ದರೆ, ನೀವು ಸುಮ್ಮನೆ ಇದ್ದು, ಆ ಪರಿಸ್ಥಿತಿಯನ್ನು ಒಪ್ಪಿಕೊಳ್ಳಬಹುದು ಮತ್ತು ಅದರೊಂದಿಗೆ ಆದಷ್ಟು ಸಮಂಜಸವಾಗಿ ಬದುಕಲು ಪ್ರಯತ್ನಿಸಬಹುದು. ಬಹಳಷ್ಟು ಚಿಕಿತ್ಸೆಗಳು ಇದನ್ನು ತಮ್ಮ ಅಂತಿಮ ಗುರಿಯಾಗಿ ಹೊಂದಿರಬಹುದು: ಅದರೊಂದಿಗೆ ಬದುಕಲು ಕಲಿಯಿರಿ ಅಥವಾ ಔಷಧಿಯನ್ನು ಸೇವಿಸಿ!
ನಾಲ್ಕನೇ ಆರ್ಯ ಸತ್ಯ
ನಾಲ್ಕನೆಯ ಸತ್ಯವನ್ನು ಸಾಮಾನ್ಯವಾಗಿ "ನಿಜವಾದ ಮಾರ್ಗ" ಎಂದು ಅನುವಾದಿಸಲಾಗುತ್ತದೆ ಮತ್ತು ಇದು ಮೂರನೇ ಸತ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಇದು ಮನಸ್ಸಿನ ಸ್ಥಿತಿಯನ್ನು ಸೂಚಿಸುತ್ತದೆ ಮತ್ತು ನಾವು ಅಭಿವೃದ್ಧಿಗೊಂಡರೆ, ಅದು ವಿಮೋಚನೆಗೆ ದಾರಿ ಮಾಡಿಕೊಡುತ್ತದೆ. ನಾವು ಇದನ್ನು "ಮನಸದಸಿನ ಮಾರ್ಗ" ಎಂದೂ ಕರೆಯಬಹುದು, ಆದರೆ ಈ ಪದವನ್ನು ಇತರ ಭಾಷೆಗಳಿಗೆ ಭಾಷಾಂತರಿಸುವುದು ಕ್ಲಿಷ್ಟವಾಗಿರುತ್ತದೆ.
ನಮ್ಮ ಮನಸ್ಸು ಸಂಪೂರ್ಣವಾಗಿ ಅಸಂಬದ್ಧವಾದದ್ದನ್ನು ಪ್ರಕ್ಷೇಪಿಸುತ್ತದೆ. ಆದರೆ ಈ ಅಸಂಬದ್ಧತೆಗಳಲ್ಲೂ ಹಲವು ಮಟ್ಟಗಳಿರುತ್ತವೆ. ಸ್ಕಿಜೋಫ್ರೇನಿಯಾ ಅಥವಾ ಮತಿವಿಕಲ್ಪವು ವಿಪರೀತವಾದ ಮಟ್ಟವಾಗಿದ್ದು, ಅಲ್ಲಿ ಎಲ್ಲರೂ ನಮಗೆ ವಿರುದ್ಧವಾಗಿದ್ದಾರೆಂದು ನಾವು ಭಾವಿಸುತ್ತೇವೆ. ಇದು ಕಡಿಮೆ ತೀವ್ರತೆಯಲ್ಲೂ ಕಂಡುಬರಬಹುದು, "ಇದು ನಾನು ನೋಡಿದ ಅತ್ಯಂತ ಅದ್ಭುತವಾದ ಚಾಕೊಲೇಟ್ ಕೇಕ್ ಆಗಿದೆ; ನಾನು ಅದನ್ನು ತಿಂದರೆ, ಅದು ನಿಜವಾಗಿಯೂ ನನಗೆ ಸಂತೋಷವನ್ನು ನೀಡುತ್ತದೆ.” ಬುಕಾರೆಸ್ಟ್‌ಗೆ ಹೋಗುವ ವಿಮಾನವು ವಿಯೆನ್ನಾದಲ್ಲಿ ನಿಲುಗಡೆಯಾದಾಗ ನಾನು ಇದನ್ನು ಅನುಭವಿಸಿದೆ. ನಾನು ಹೀಗೆ ಯೋಚಿಸಿದೆ, "ವಿಯೆನ್ನಾದ ಸೇಬಿನ ಸ್ಟ್ರುಡೆಲ್ ವಿಶ್ವದಲ್ಲೇ ಅತ್ಯುತ್ತಮವಾದದ್ದು ಆಗಿರಬೇಕು." ನಾನು ಒಂದು ತುಂಡನ್ನು ಕೇಳಿದೆ, ಅದೇನು ಅತ್ಯುತ್ತಮವಾಗಿರಲಿಲ್ಲ. ಅದು ಹೇಗಿರಬೇಕು ಎಂಬುದರ ಕುರಿತಾದ ನನ್ನ ಪ್ರಕ್ಷೇಪಗಳು ಅಸಂಬದ್ಧವಾಗಿದ್ದವು. ಆಪಲ್ ಸ್ಟ್ರುಡೆಲ್ ಅಸ್ತಿತ್ವದಲ್ಲಿತ್ತು - ಅದು ನನ್ನ ಮನಸ್ಸಿನ ಪ್ರಕ್ಷೇಪಣವಲ್ಲ; ಆದರೆ ಆ ಸ್ಟ್ರುಡೆಲ್ ಹೇಗೆ ಅಸ್ತಿತ್ವದಲ್ಲಿರಬೇಕು, ನನಗೆ ಸಂತೋಷವನ್ನು ನೀಡುವ ಅತ್ಯಂತ ಅದ್ಭುತವಾದ ವಿಷಯವಾಗಿರಬೇಕು ಎಂಬುದು ನನ್ನ ಮನಸ್ಸಿನ ಪ್ರಕ್ಷೇಪಣೆಯಾಗಿರುತ್ತದೆ.
ಅಂತೆಯೇ, ನಾನು ಅಸ್ತಿತ್ವದಲ್ಲಿದ್ದೇನೆ ಮತ್ತು ನೀವು ಅಸ್ತಿತ್ವದಲ್ಲಿದ್ದೀರಿ. ನಾವು ಅಸ್ತಿತ್ವದಲ್ಲಿಲ್ಲ ಎಂದು ಬೌದ್ಧ ಧರ್ಮ ಹೇಳುತ್ತಿಲ್ಲ. ನಾವು ಅಸ್ತಿತ್ವದಲ್ಲಿರುವ ರೀತಿಯನ್ನು ವಾಸ್ತವತೆಯ ಮೇಲೆ ಪ್ರಸ್ತುತಪಡಿಸಿದ್ದು, ಅದು ವಾಸ್ತವದಲ್ಲಿನ ಆಗುಹೋಗುಗಳಿಗೆ ಅನುಗುಣವಾಗಿರುವುದಿಲ್ಲ ಎಂದು ಅದು ಹೇಳುತ್ತದೆಯಷ್ಟೆ. ವಸ್ತುಗಳು ಸ್ವತಂತ್ರವಾಗಿ, ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುತ್ತವೆ ಎಂಬ ಕಲ್ಪನೆಯನ್ನು ನಾವು ಹೊಂದಿದ್ದೇವೆ, ಇದು ಅಸ್ತಿತ್ವದ ಅಸಾಧ್ಯವಾದ ರೀತಿಯಾಗಿರುತ್ತದೆ. ಕಾರಣಗಳು ಮತ್ತು ಪರಿಸ್ಥಿತಿಗಳಿಂದ ವಿಷಯಗಳು ಉದ್ಭವಿಸುತ್ತವೆ ಮತ್ತು ಅವು ಸಾರ್ವಕಾಲಿಕವಾಗಿ ಬದಲಾಗುತ್ತಿರುತ್ತವೆ. ಆದರೆ ನಾವು ಇದನ್ನು ನೋಡುವುದಿಲ್ಲ; ನಮ್ಮ ಕಣ್ಣುಗಳ ಮುಂದೆ ಏನಿದೆ ಎಂಬುದನ್ನು ಮಾತ್ರ ನಾವು ನೋಡುತ್ತೇವೆ. ಉದಾಹರಣೆಗೆ, ನಾವು ಒಬ್ಬರನ್ನು ಭೇಟಿಯಾಗಲಿದ್ದೇವೆ, ಆದರೆ ಅವರು ಬರುವುದಿಲ್ಲ. ಆ ವ್ಯಕ್ತಿಯು ಬಹಳ ಕೆಟ್ಟ ವ್ಯಕ್ತಿಯಂತೆ ತೋರಿದ್ದು, ನಮ್ಮನ್ನು ಯಾವಾಗಲೂ ನಿರಾಸೆಗೊಳಿಸುತ್ತಾರೆ, ಇನ್ನು ಮುಂದೆ ನಮ್ಮನ್ನು ಇಷ್ಟಪಡುವುದಿಲ್ಲವೆಂಬಂತೆ ನಮಗೆ ತೋರುತ್ತದೆ. ಅವರ ಜೀವನವು ಟ್ರಾಫಿಕ್ನಿಂದ ಅಥವಾ ಹೆಚ್ಚವರಿ ಕೆಲಸದಿಂದ ಅಥವಾ ಇನ್ನೊಂದು ಯಾವುದೋ ಕಾರಣದಿಂದ ಸ್ವತಂತ್ರವಾಗಿ ಅಸ್ತಿತ್ವದಲ್ಲಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಎಲ್ಲವೂ ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಹುಟ್ಟಿಕೊಂಡಿರುವುದರಿಂದ, ಅವರ ಕಡೆಯಿಂದ, ಎಲ್ಲದರಿಂದ ಸ್ವತಂತ್ರವಾಗಿ, ಅವರು ಕೆಟ್ಟ ವ್ಯಕ್ತಿಯಾಗಿರುವುದು ಅಸಾಧ್ಯ. ಆದರೂ, ನಮ್ಮ ಮನಸ್ಸು ಈ ಕಲ್ಪನೆಯನ್ನು ಪ್ರಕ್ಷೇಪಿಸುತ್ತದೆ ಮತ್ತು ಅದರ ಮೇಲೆ ಸ್ಥಗಿತಗೊಂಡು, ವಿನಾಶಕಾರಿಯಾದ ಭಾವನೆಯಾದ ಕೋಪವನ್ನು ಸೃಷ್ಟಿಸುತ್ತದೆ. ನಂತರ, ನಾವು ಅವರನ್ನು ಮುಂದೊಮ್ಮೆ ಭೇಟಿಯಾದಾಗ, ನಾವು ಅವರನ್ನು ವಿಭಿನ್ನವಾಗಿ ನೋಡುತ್ತೇವೆ ಮತ್ತು ಅವರಿಗೆ ವಿವರಿಸಲು ಅವಕಾಶವನ್ನು ನೀಡದೆ, ಅವರ ಮೇಲೆ ಕೂಗಾಡುತ್ತೇವೆ. ಈ ಎಲ್ಲದರಲ್ಲೂ, ತಾಳಲಾರದ ಸಂಕಟ ಮತ್ತು ಅತೃಪ್ತಿಯಲ್ಲಿರುವವರು ನಾವೇ ಅಲ್ಲವೇ?
ಆದ್ದರಿಂದ, ನಾವು ಅಸ್ತಿತ್ವದಲ್ಲಿದ್ದೇವೆ ಹೌದು, ಆದರೆ ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಬಗ್ಗೆಗಿರುವ ನಮ್ಮ ಭಾವನೆಯು - ವಿಶೇಷವಾಗಿ ಮತ್ತು ಎಲ್ಲರಿಂದ ಸ್ವತಂತ್ರವಾಗಿ - ಸಂಪೂರ್ಣವಾದ ಪ್ರಕ್ಷೇಪಣವಾಗಿರುತ್ತದೆ. ಇದು ಅಸಂಬದ್ಧವಾಗಿರುತ್ತದೆ. ಇದು ನಿಜವಾದ ಯಾವುದನ್ನೂ ಉಲ್ಲೇಖಿಸುವುದಿಲ್ಲ. ಇದನ್ನು ನಾವು ಬೌದ್ಧಧರ್ಮದಲ್ಲಿ "ಶೂನ್ಯತೆ" ಎಂದು ಕರೆಯುತ್ತೇವೆ, ಇದನ್ನು ಸಾಮಾನ್ಯವಾಗಿ "ಎಮ್ಟಿನೆಸ್" ಎಂದು ಅನುವಾದಿಸಲಾಗುತ್ತದೆ. ಸಂಸ್ಕೃತದಲ್ಲಿನ "ಶೂನ್ಯ" ಎಂಬ ಪದದಂತೆಯೇ ಇದ್ದು, ಇದರ ಅರ್ಥ "ಏನೂ ಇಲ್ಲ," ಎಂಬುದಾಗಿರುತ್ತದೆ, ಅಂದರೆ ವಾಸ್ತವತೆಯ ಸಂಪೂರ್ಣವಾದ ಅನುಪಸ್ಥಿತಿ. ಉದಾಹರಣಗೆ, ನಮ್ಮ ಹೊಸ ಸಂಗಾತಿಯು, ಕಾಲ್ಪನಿಕ ಕಥೆಗಳಲ್ಲಿನ ಬಿಳಿ ಕುದುರೆಯನ್ನೇರಿ ಬಂದ ಒಬ್ಬ ರಾಜಕುಮಾರ ಅಥವಾ ರಾಜಕುಮಾರಿ ಎಂಬ ನಮ್ಮ ಪ್ರಕ್ಷೇಪಣೆಯು ಅಸಾಧ್ಯವಾದದ್ದಾಗಿರುತ್ತದೆ. ಅಂತಹ ಅಸ್ತಿತ್ವದಲ್ಲಿ ಯಾರೂ ಇರುವುದಿಲ್ಲ, ಆದರೆ ನಾವು ಯಾವಾಗಲೂ ಅದನ್ನು ಹುಡುಕುತ್ತಿರುತ್ತೇವೆ. ತದನಂತರ ಆ ವ್ಯಕ್ತಿಯು ನಮ್ಮ ಪ್ರಕ್ಷೇಪಣಕ್ಕೆ ತಕ್ಕಂತೆ ಜೀವಿಸದಿದ್ದಾಗ, ನಾವು ನಿರಾಶೆಗೊಳ್ಳುತ್ತೇವೆ ಮತ್ತು ನಾವು ಅಸಾಧ್ಯತೆಯನ್ನು ಹುಡುಕುತ್ತಿದ್ದರೂ ಸಹ ಮತ್ತೊಬ್ಬರನ್ನು ಹುಡುಕಲು ಶುರುಮಾಡುತ್ತೇವೆ.
ಆದ್ದರಿಂದ, ಮನಸ್ಸಿನ ನಿಜವಾದ ಮಾರ್ಗವೆಂದರೆ ಇದೆಲ್ಲವೂ ಅಸಂಬದ್ಧ ಎಂದೂ, ನಮ್ಮ ಪ್ರಕ್ಷೇಪಣಗಳಿಗೆ ಹೊಂದಿಕೆಯಾಗುವಂತೆ ನೈಜವಾದದ್ದು ಯಾವುದೂ ಇಲ್ಲವೆಂದೂ ಅರ್ಥಮಾಡಿಕೊಳ್ಳುವುದಾಗಿರುತ್ತದೆ. ನಾವು ನಿಜವಾದ ಕಾರಣದತ್ತ ನೋಡಿದರೆ, ನಮ್ಮ ಪ್ರಕ್ಷೇಪಗಳು ನಿಜವಾದ ಸಂಗತಿಗಳಿಗೆ ಅನುಗುಣವಾಗಿರುತ್ತವೆ ಎಂದು ನಂಬುವುದರಿಂದ ದುಃಖ ಹುಟ್ಟುತ್ತದೆ. ಇದು ನಿಜವಾದ ಯಾವುದಕ್ಕೂ ಹೊಂದಿಕೆಯಾಗುವುದಿಲ್ಲ ಎಂದು ಆಳವಾಗಿ ಅರ್ಥಮಾಡಿಕೊಳ್ಳುವುದೇ ನಿಜವಾದ ಮಾರ್ಗವಾಗಿರುತ್ತದೆ. ನಮ್ಮ ಕಲ್ಪನೆ ಮತ್ತು ವಾಸ್ತವದ ಪ್ರಕ್ಷೇಪಗಳು ಪರಸ್ಪರ ಪ್ರತ್ಯೇಕವಾಗಿರುತ್ತವೆ. ನಾನು ಪುನರಾವರ್ತಿಸುತ್ತೇನೆ - ಗೊಂದಲವು ಈ ಪ್ರಕ್ಷೇಪಣವು ನೈಜವಾದದ್ದಕ್ಕೆ ಅನುರೂಪವಾಗಿದೆ ಎಂದು ಯೋಚಿಸುವುದಾಗಿರುತ್ತದೆ, ಮತ್ತು ಸರಿಯಾದ ತಿಳುವಳಿಕೆಯು ಅಂತಹ ವಿಷಯಗಳಿಲ್ಲ ಎಂಬುದನ್ನು ಅರಿಯುವುದಾಗಿರುತ್ತದೆ. ಸರಳವಾಗಿ ಹೇಳುವುದಾದರೆ, ಅನುಗುಣವಾಗುವಂಥದ್ದು ಇರುತ್ತದೆ ಅಥವಾ ಇರುವುದಿಲ್ಲ. ಹೌದು ಅಥವಾ ಇಲ್ಲ; ಒಂದೇ ಕಾಲದಲ್ಲಿ, ಎರಡೂ ಸರಿಯಾಗಿರುತ್ತವೆ ಎಂದು ನಾವು ಯೋಚಿಸುವುದಿಲ್ಲ.
ಈಗ, ನಮಗಾಗಿ ಶಕ್ತಿಯುತವಾದದ್ದು ಯಾವುದು ಎಂದು ವಿಶ್ಲೇಷಿಸಬಹುದು: "ಹೌದು" ಅಥವಾ "ಇಲ್ಲ"? ನಾವು ತರ್ಕದೊಂದಿಗೆ ಪರಿಶೀಲಿಸಿದರೆ, ಅದು ನಿಸ್ಸಂಶಯವಾಗಿ "ಇಲ್ಲ" ವಾಗಿರುತ್ತದೆ, ಏಕೆಂದರೆ "ಹೌದು" ಎಂಬುದು ತರ್ಕಬದ್ಧವಾಗಿರುವುದಿಲ್ಲ. ನಾನು ಕಣ್ಣು ಮುಚ್ಚಿದಾಗ ಉಳಿದವರೆಲ್ಲರೂ ಅಸ್ತಿತ್ವದಲ್ಲಿರುವುದನ್ನು ನಿಲ್ಲಿಸುತ್ತಾರೆಯೇ? ಇಲ್ಲ, ಖಂಡಿತ ಇಲ್ಲ. ನಾನೇ ಪ್ರಪಂಚದ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುವುದರಿಂದ ನಾನು ಹೇಳಿದಂತೆಯೇ ನಡೆಯಬೇಕು ಎನ್ನುವುದು ಸರಿಯೇ? ಇಲ್ಲ, ಅದು ಹಾಸ್ಯಾಸ್ಪದವಾಗಿರುತ್ತದೆ. ನಾವು ಹೆಚ್ಚು ತನಿಖೆ ನಡೆಸಿದಷ್ಟು, ನಮ್ಮ ತಲೆಯೊಳಗಿನ ಈ ಚಿಕ್ಕ "ನಾನು" ಎಂಬುದನ್ನು ನಾವು ಹೆಚ್ಚು ಪ್ರಶ್ನಿಸಲು ಪ್ರಾರಂಭಿಸುತ್ತೇವೆ. ನಮ್ಮ ಮೆದುಳನ್ನು ವಿಶ್ಲೇಷಿಸಲು ಪ್ರಾರಂಭಿಸಿದರೆ, ನಮ್ಮ ಮೆದುಳಿನಲ್ಲಿ ಮಾತನಾಡುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ "ನಾನು" ಎಂಬುದು ಎಲ್ಲಿದೆ? ಇಲ್ಲಿ ಏನು ನಡೆಯುತ್ತಿದೆ? ವಿಶ್ಲೇಷಣೆಯ ನಂತರ, ನಾವು "ನಾನು" ಎಂದು ಕರೆಯಬಹುದಾದ ಯಾವುದನ್ನೂ ಕಂಡುಬರುವುದಿಲ್ಲ. ಸಹಜವಾಗಿ, ನಾನು ಕಾರ್ಯನಿರ್ವಹಿಸುತ್ತೇನೆ, ನಾನು ಕಾರ್ಯವಹಿಸುತ್ತೇನೆ, ನಾನು ಮಾತನಾಡುತ್ತೇನೆ. ನಾವು ಇದನ್ನು ನಿರಾಕರಿಸುತ್ತಿಲ್ಲ. ನಾವು ನಿರಾಕರಿಸುತ್ತಿರುವುದು ನನ್ನ ಮಾತಿನಂತೆಯೇ ನಡೆಯಬೇಕು ಎಂದು ಹೇಳುವ ಈ ಘನವಾದ "ನಾನು" ಎಂಬುದನ್ನು, ಏಕೆಂದರೆ ಅಂತಹ ಯಾವುದೇ ವಿಷಯವು ತರ್ಕದಿಂದ ಬೆಂಬಲಿತವಾಗಿರುವುದಿಲ್ಲ. ಕಾರಣ ಮತ್ತು ಪರಿಶೋಧನೆಯ ಮೂಲಕ, ಅಂತಹ ಯಾವುದೇ ವಿಷಯವು ಅಸ್ತಿತ್ವದಲ್ಲಿಲ್ಲ ಎಂದೂ, ಅದು ವಾಸ್ತವಕ್ಕೆ ಅನುರೂಪವಾಗಿದೆ ಎಂಬ ನಮ್ಮ ಗೊಂದಲವನ್ನು ಯಾವುದೂ ಬೆಂಬಲಿಸುವುದಿಲ್ಲವೆಂದೂ ನಾವು ನೋಡಬಹುದಾಗಿದೆ.
ಈ ಅಸಾಧ್ಯ ರೀತಿಯಲ್ಲಿ ನಾವು ಅಸ್ತಿತ್ವದಲ್ಲಿದ್ದೇವೆ ಎಂದು ಯೋಚಿಸುವುದರ ಫಲಿತಾಂಶವೇನು? ನಾವು ನಮ್ಮನ್ನೇ ಶೋಚನೀಯ ಸ್ಥಿತಿಯಲ್ಲಿರಿಸುತ್ತೇವೆ! ಅಂತಹ ಅಸ್ತಿತ್ವವೇ ಇಲ್ಲ ಎಂದು ಯೋಚಿಸುವುದರ ಫಲಿತಾಂಶವೇನು? ಈ ಎಲ್ಲಾ ಸಮಸ್ಯೆಗಳಿಂದ ನಾವು ನಮ್ಮನ್ನು ಮುಕ್ತಗೊಳಿಸುತ್ತೇವೆ. "ಅಂತಹ ಯಾವುದೇ ವಿಷಯವಿಲ್ಲ, ಅದು ಅಸಂಬದ್ಧ" ಎಂದು ನಾನು ಯೋಚಿಸಿದಾಗ, ಅದೇ ಸಮಯದಲ್ಲಿ ಅದು ನೈಜತೆಗೆ ಅನುರೂಪವಾಗಿದೆ ಎಂದು ಯೋಚಿಸುವುದು ಅಸಾಧ್ಯವಾಗಿರುತ್ತದೆ. ಸರಿಯಾದ ತಿಳುವಳಿಕೆಯು, ತಪ್ಪು ತಿಳುವಳಿಕೆಯನ್ನು ಮೀರಿಸಬಹುದು ಮತ್ತು ಬದಲಾಯಿಸಬಹುದು. ಸಾರ್ವಕಾಲಿಕವಾಗಿ ನಾವು ಸರಿಯಾದ ತಿಳುವಳಿಕೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾದರೆ, ಗೊಂದಲವು ಎಂದಿಗೂ ಮತ್ತೊಮ್ಮೆ ಉದ್ಭವಿಸುವುದಿಲ್ಲ.
ಇಲ್ಲಿಯೂ ಸಹ, ವಾಸ್ತವದ ಸರಿಯಾದ ತಿಳುವಳಿಕೆಯು ತಪ್ಪು ತಿಳುವಳಿಕೆಯನ್ನು ಬದಲಿಸುತ್ತದೆ ಮತ್ತು ದುಃಖ ಮತ್ತು ಪುನರ್ಜನ್ಮದಿಂದ ವಿಮೋಚನೆಯನ್ನು ತರುತ್ತದೆ ಎಂಬ ಬುದ್ಧನ ಬೋಧನೆಯು ವಿಶಿಷ್ಟವಾಗಿರಲಿಲ್ಲ. ಇತರ ಭಾರತೀಯ ವ್ಯವಸ್ಥೆಗಳೂ ಇದನ್ನೇ ಪ್ರತಿಪಾದಿಸಿದ್ದವು. ವಿಶಿಷ್ಟವಾದದ್ದು ಏನೆಂದರೆ, ವಾಸ್ತವದ ಬಗೆಗಿರುವ ಸೂಕ್ಷ್ಮವಾದ ಗೊಂದಲವನ್ನು ಶಾಶ್ವತವಾಗಿ ಹೋಗಲಾಡಿಸುವ ನಿರ್ದಿಷ್ಟವಾದ ತಿಳುವಳಿಕೆಯಾಗಿತ್ತು. ಧ್ಯಾನದ ಮೂಲಕ ಪರಿಪೂರ್ಣ ಏಕಾಗ್ರತೆಯನ್ನು ಸಾಧಿಸಲು, ಈ ಸರಿಯಾದ ತಿಳುವಳಿಕೆಯನ್ನು ನಮ್ಮ ಮನಸ್ಸಿನಲ್ಲಿ ಬೇರೂರಿಸಲು ಮತ್ತು ಗೊಂದಲದ ನಿಜವಾದ ನಿಲುಗಡೆಯನ್ನು ಸಾಧಿಸಲು, ಬುದ್ಧನು ಎಲ್ಲಾ ಭಾರತೀಯ ಸಂಪ್ರದಾಯಗಳಲ್ಲಿ ಕಾಣಬಹುದಾದ ಸಾಮಾನ್ಯ ವಿಧಾನಗಳನ್ನು ಬಳಸಿದರು. ಅವುಗಳ ಮೂಲಕ, ನಾವು ನಿಜವಾದ ಕಾರಣದ ನಿಜವಾದ ನಿಲುಗಡೆಯನ್ನು ಸಾಧಿಸಬಹುದು, ಆದ್ದರಿಂದ ದುಃಖದ ನಿಜವಾದ ನಿಲುಗಡೆಯನ್ನು ಸಾಧಿಸಬಹುದು.
ವಾಸ್ತವದ ಸರಿಯಾದ ತಿಳುವಳಿಕೆಯೊಂದಿಗೆ ಇರಲು, ಎಲ್ಲಾ ವಿನಾಶಕಾರಿ ಭಾವನೆಗಳನ್ನು ಕತ್ತರಿಸಲು, ನಮ್ಮ ಮನಸ್ಸಿಗೆ ಶಕ್ತಿಯನ್ನು ನೀಡುವುದೇ ಪ್ರೇರಣೆ. ಇಲ್ಲಿ ಪ್ರೀತಿ, ಸಹಾನುಭೂತಿ ಇತ್ಯಾದಿಗಳು ಮುಂಬರುತ್ತವೆ. ಏಕೆಂದರೆ, ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿದ್ದೇವೆ ಮತ್ತು ಸಂತೋಷವನ್ನು ಬಯಸುವುದರಲ್ಲಿ ಎಲ್ಲರೂ ನಮ್ಮಂತೆಯೇ ಇರುವುದನ್ನು ನಾವು ನೋಡುತ್ತೇವೆ, ಅವರಿಗೆ ಸಂಪೂರ್ಣವಾಗಿ ಸಹಾಯ ಮಾಡಲು ಸಾಧ್ಯವಾಗುವಂತೆ ನಾವು ನಮ್ಮ ಗೊಂದಲವನ್ನು ತೊಡೆದುಹಾಕಬೇಕು ಎಂದು ನಮಗೆ ಅರಿವಾಗುತ್ತದೆ.
ಇದು ಚತುರಾರ್ಯ ಸತ್ಯಗಳ ಮೂಲ ಪ್ರಸ್ತುತಿಯಾಗಿದೆ. ಅವುಗಳನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು, ಮನಸ್ಸು ಮತ್ತು ಕರ್ಮದ ಬೌದ್ಧ ತಿಳುವಳಿಕೆಯ ಬಗ್ಗೆ ನಾವು ಸ್ವಲ್ಪ ಹೆಚ್ಚು ಕಲಿಯಬೇಕಾಗಿದೆ.
ಸಾರಾಂಶ
ಬೌದ್ಧಧರ್ಮವು ಇತರ ಅನೇಕ ಪ್ರಮುಖ ಧಾರ್ಮಿಕ ಮತ್ತು ತಾತ್ವಿಕ ವ್ಯವಸ್ಥೆಗಳೊಂದಿಗೆ ಹೆಚ್ಚು ಸಮಾನತೆಯನ್ನು ಪಡೆದುಕೊಂಡಿದ್ದರೂ, ಬುದ್ಧನ ಮೊದಲ ಬೋಧನೆಯಾದ ಚತುರಾರ್ಯ ಸತ್ಯಗಳು, ನಾವು ಅಸ್ತಿತ್ವದಲ್ಲಿರುವ ರೀತಿಯ, ನಾವು ಅನುಭವಿಸುವ ನೋವುಗಳು ಮತ್ತು ನಮ್ಮ ಸಮಸ್ಯೆಗಳನ್ನು ನಾವು ಹೇಗೆ ಜಯಿಸಬಹುದು ಎಂಬುದರ ವಿಶಿಷ್ಟವಾದ ಪ್ರಸ್ತುತಿಯಾಗಿರುತ್ತವೆ.
ಸಾಮಾನ್ಯವಾಗಿ, ಬುದ್ಧನನ್ನು ವೈದ್ಯರಿಗೆ ಹೋಲಿಸಲಾಗುತ್ತದೆ. ವೈದ್ಯರು ನಾವು ಅನಾರೋಗ್ಯದಿಂದ ಬಳಲುತ್ತಿದ್ದೇವೆ ಎಂದು ಖಚಿತಪಡಿಸುವಂತೆ, ಬುದ್ಧನು ಎಲ್ಲೆಡೆಯಿರುವ ಜೀವಿಗಳು ಅನುಭವಿಸುವ ಬಹುಸಂಖ್ಯೆಯ ದುಃಖವನ್ನು ತೋರಿಸಿದರು. ವೈದ್ಯರು ನಮ್ಮ ಅನಾರೋಗ್ಯದ ಕಾರಣವನ್ನು ಹೇಗೆ ಹುಡುಕುವರೋ, ಅದೇ ರೀತಿ ಬುದ್ಧನು ಗೊಂದಲವೇ ನಿಜವಾದ ಕಾರಣವೆಂದು ಸೂಚಿಸಿದರು. ನಂತರ ನಾವು ಗುಣಮುಖರಾಗಬಹುದೇ ಇಲ್ಲವೇ ಎಂದು ಅವರು ನಮಗೆ ತಿಳಿಸುತ್ತಾರೆ ಮತ್ತು ಸಾಧ್ಯವಾದರೆ ನಮಗೆ ಔಷಧವನ್ನು ನೀಡುತ್ತಾರೆ. ಅದೇ ರೀತಿ, ಬುದ್ಧನು ನಿಜವಾದ ನಿಲುಗಡೆ ಮತ್ತು ಅಲ್ಲಿಗೆ ಪ್ರಯಾಣಿಸುವ ಮಾರ್ಗವನ್ನು ಬೋಧಿಸಿದರು. ಅಂತಿಮವಾಗಿ, ನಮ್ಮ ಸ್ವಂತ ದುಃಖವನ್ನು ಜಯಿಸುವುದಕ್ಕಾಗಿ ಔಷಧಿಯನ್ನು ತೆಗೆದುಕೊಳ್ಳುವುದು ಅಥವಾ ಆ ಮಾರ್ಗದಲ್ಲಿ ನಡೆಯುವುದು ನಮ್ಮ ನಿರ್ಧಾರವಾಗಿರುತ್ತದೆ.