ಸಂತೋಷವು ದೈಹಿಕ ಅಥವಾ ಮಾನಸಿಕವಾಗಿರಬಹುದು. ದುಃಖವು ಸಹ ಎರಡು ರೀತಿಯದ್ದಾಗಿರುತ್ತವೆ: ದೈಹಿಕ ಮತ್ತು ಮಾನಸಿಕ. ನಮ್ಮಲ್ಲಿ ಅನೇಕರು ಸಂತೋಷವನ್ನು ಸಾಧಿಸಲು ಬಯಸುತ್ತೇವೆಯಾದರೂ, ಇದನ್ನು ಸಾಧಿಸುವ ವಿಧಾನಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ನಾವು ಬಳಸುವ ವಿಧಾನಗಳು ನಮ್ಮನ್ನು ದುಃಖದೆಡೆಗೆ ಕೊಂಡೊಯ್ಯುತ್ತವೆ.
ಕೆಲವರು ದರೋಡೆ ಮಾಡಿ, ಕೊಲೆ ಮಾಡಿ ಜೀವನ ನಡೆಸುತ್ತಾರೆ. ಇದು ಅವರಿಗೆ ಸಂತೋಷವನ್ನು ತರುತ್ತದೆ ಎಂದು ಅವರು ಭಾವಿಸುತ್ತಾರೆ. ಹಾಗಾಗುವುದಿಲ್ಲ. ವ್ಯಾಪಾರಿಯಾಗಿ, ರೈತರಾಗಿ, ಕಾನೂನುಗಳ ಪರಿಧಿಯಲ್ಲಿ ಸಂತೋಷವನ್ನು ಸಾಧಿಸಲು ಪ್ರಯತ್ನಿಸುವ ಇನ್ನೂ ಅನೇಕರಿದ್ದಾರೆ. ಇಂತಹ ವಿಧಾನಗಳ ಮೂಲಕ ಅನೇಕರು ಬಹಳ ಶ್ರೀಮಂತರು ಮತ್ತು ಪ್ರಸಿದ್ಧರಾಗುತ್ತಾರೆ. ಈ ರೀತಿಯ ಸಂತೋಷವು ಶಾಶ್ವತವಾಗಿ ಉಳಿಯುವಂತಹದ್ದಲ್ಲ; ಇದು ಅಂತಿಮವಾದ ಸಂತೋಷವಾಗಿರುವುದಿಲ್ಲ. ನಮ್ಮ ಬಳಿ ಎಷ್ಟೇ ಸಂತೋಷ ಅಥವಾ ಭೌತಿಕ ವಸ್ತುಗಳು ಇದ್ದರೂ, ಇದು ಸಾಕು ಎಂದು ನಾವು ಎಂದಿಗೂ ತೃಪ್ತರಾಗುವುದಿಲ್ಲ. ನಾವು ಇಡೀ ದೇಶವನ್ನೇ ಹೊಂದಿದ್ದರೂ ಸಹ, ನಾವು ಇನ್ನೂ ಹೆಚ್ಚಿನದನ್ನು ಬಯಸುತ್ತೇವೆ.
ಸಂತೋಷವನ್ನು ಸಾಧಿಸಲು ನಾವು ಮಾಡುವ ಕೆಲಸ ಎಂದಿಗೂ ಮುಗಿಯುವುದಿಲ್ಲ. ನಾವು ಸಾಧ್ಯವಾದಷ್ಟು ವೇಗವಾದ ವಿಧಾನಗಳು, ಕಾರುಗಳು, ಇತ್ಯಾದಿಗಳಿಂದ ಸುತ್ತಲು ಪ್ರಯತ್ನಿಸುತ್ತೇವೆ - ಈ ರೀತಿಯ ಬೆನ್ನಟ್ಟುವಿಕೆಗೆ ಅಂತ್ಯವಿಲ್ಲ. ಅದಕ್ಕಾಗಿಯೇ ಸಂಸಾರಿಕ ಅಸ್ತಿತ್ವಕ್ಕೆ ಅಂತ್ಯವಿಲ್ಲ ಎಂದು ಹೇಳಲಾಗುತ್ತದೆ, ಅದು ಸುತ್ತುತ್ತಲೇ ಇರುತ್ತದೆ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬಹುದಾಗಿದೆ: ಲೌಕಿಕ ಬೆನ್ನಟ್ಟುವಿಕೆಗಳು ಎಂದಿಗೂ ಕೊನೆಗೊಳ್ಳುವುದಿಲ್ಲ.
ಹೊಚ್ಚಹೊಸ ಹೂವು ತಾಜಾ ಆಗಿರುತ್ತದೆ, ಹಳೆಯದಾದಾಗ ಮರೆಯಾಗುತ್ತದೆ. ಈ ಜನ್ಮದಲ್ಲಿ ನೀವು ಏನನ್ನೇ ಸಾಧಿಸಿದರೂ ಅದು ಕೊನೆಗೊಳ್ಳುತ್ತದೆ. ಸಮಯ ಕಳೆದಂತೆ ನಮ್ಮ ಜೀವನವು ಕೊನೆಗೊಳ್ಳುತ್ತಾ ಹೋಗುತ್ತದೆ, ಮತ್ತು ಅಂತ್ಯದಲ್ಲಿ ನಾವು ಹೆಚ್ಚಿನ ದುಃಖವನ್ನು ಅನುಭವಿಸುತ್ತೇವೆ. ಉದಾಹರಣೆಗೆ, ಆಟೋಮೊಬೈಲ್. ಹಳೆಯ ಕಾರುಗಳನ್ನು ಎಸೆದಿರುವ ಜಂಕ್ ಯಾರ್ಡ್‌ಗಳ ಮೂಲಕ ನೀವು ಹಾದು ಹೋಗುತ್ತೀರಿ. ಎಲ್ಲವೂ ತ್ಯಾಜ್ಯವಾಗಿರುವ ಸ್ಥಿತಿಯಲ್ಲಿರುತ್ತವೆ, ಮತ್ತು ಇದೇ ಅಂತ್ಯವಾಗಿರುತ್ತದೆ. ಕಾರು ಉತ್ತಮ ಸ್ಥಿತಿಯಲ್ಲಿದ್ದರೂ ನಾವು ಅದರ ಬಗ್ಗೆ ಚಿಂತಿಸುತ್ತೇವೆ. ಭಾಗಗಳು ಒಡೆದು ಹೋಗುತ್ತವೆ, ತೆರಿಗೆ ಮತ್ತು ವಿಮೆ ಪಾವತಿಗಳು, ಇತ್ಯಾದಿ, ಇತ್ಯಾದಿ ಎಂದು ಚಿಂತಿಸುತ್ತೇವೆ. ನಾವು ಈ ಉದಾಹರಣೆಯನ್ನು ನಮ್ಮ ಎಲ್ಲಾ ಭೌತಿಕ ಆಸ್ತಿಗಳಿಗೂ ವಿಸ್ತರಿಸಬಹುದು. ನಮ್ಮ ಬಳಿ ಹೆಚ್ಚು ವಸ್ತುಗಳಿದ್ದಷ್ಟೂ ನಮಗೆ ಅವುಗಳ ಬಗೆಗಿರುವ ಚಿಂತೆಯು ಹೆಚ್ಚುತ್ತದೆ.
ಧರ್ಮವು ಮಾನಸಿಕ ಸಂತೋಷವನ್ನು ತರುವ ವಿಧಾನವನ್ನು ಕಲಿಸುತ್ತದೆ. ಒಂದು ರೀತಿಯ ಮಾನಸಿಕ ಸಂತೋಷವನ್ನು ಸಾಧಿಸಲು, ನಾವು ದೈಹಿಕ ಕೆಲಸವನ್ನು ಮಾಡಬೇಕಾಗಿಲ್ಲ: ನಾವು ನಮ್ಮ ಮನಸ್ಸಿನಿಂದ ಕೆಲಸ ಮಾಡಬೇಕಾಗುತ್ತದೆ. ಆದರೆ ಮನಸ್ಸು, ಭವಿಷ್ಯದ ಜೀವಿತಾವಧಿಯಲ್ಲಿನ ಮತ್ತು ಹಿಂದಿನ ಜೀವಿತಾವಧಿಯಿಂದಿರುವ ನಿರಂತರತೆಯ ದೀರ್ಘ ಪ್ರವಾಹವನ್ನು ಹೊಂದಿರುತ್ತದೆ. ಪ್ರತಿಯೊಂದು ಜೀವಿತಾವಧಿಯಲ್ಲಿ, ನಾವು ಒಂದು ದೇಹವನ್ನು ಹೊಂದಿರುತ್ತೇವೆ ಮತ್ತು ಆ ದೇಹದಿಂದ ನಾವು ಸಂತೋಷವನ್ನು ಪಡೆಯಲು ಪ್ರಯತ್ನಿಸುತ್ತೇವೆ, ಆದರೆ ಮರಣದ ನಂತರ ಮನಸ್ಸು ಮುಂದುವರಿಯುತ್ತದೆ. ಆದ್ದರಿಂದ, ನಾವು ಬಯಸಬೇಕಾದ ಸಂತೋಷವು ಕೇವಲ ಶ್ರೇಷ್ಠವಾದ ಮತ್ತು ಸ್ಥಿರವಾದ ಸಂತೋಷವಲ್ಲ, ಬದಲಿಗೆ ನಮ್ಮ ಎಲ್ಲಾ ಭವಿಷ್ಯದ ಜೀವಿತಾವಧಿಯಲ್ಲಿ ಉಳಿಯುವಂತಹ ಮತ್ತು ಅದರ ನಿರಂತರತೆಗೆ ಯಾವುದೇ ವಿರಾಮವಿಲ್ಲದಂತಹ ಸಂತೋಷವನ್ನು ಬಯಸಬೇಕು.
ನಾವು ಯಾವುದೇ ರೀತಿಯ ಚಟುವಟಿಕೆಯಲ್ಲಿ ತೊಡಗಿರಲಿ, ಅದು ರಚನಾತ್ಮಕವಾಗಿರಬಹುದು ಅಥವಾ ಆಗದಿರಬಹುದು, ಅದು ಧರ್ಮವಾಗಿರುವುದಿಲ್ಲ, ಆದರೆ ನಮ್ಮ ಭವಿಷ್ಯದ ಜೀವನಕ್ಕಾಗಿ ಮಾಡುವ ಸಕಾರಾತ್ಮಕ ಕ್ರಿಯೆಗಳು ಧರ್ಮವಾಗಿರುತ್ತದೆ.
ಸಂತೋಷ ಅಥವಾ ಅಸಂತೋಷ ನಮ್ಮ ಕ್ರಿಯೆಗಳಿಂದ ಬರುತ್ತವೆ. ಈ ಕರ್ಮ ಕ್ರಿಯೆಗಳಿಗೆ ಸಂಬಂಧಿಸಿದಂತೆ, ನಕಾರಾತ್ಮಕ ಕ್ರಿಯೆಗಳು ನಕಾರಾತ್ಮಕ ಫಲಿತಾಂಶಗಳನ್ನು ತರುತ್ತವೆ ಮತ್ತು ಸಕಾರಾತ್ಮಕ ಕ್ರಿಯೆಗಳು ಸಕಾರಾತ್ಮಕ ಫಲಿತಾಂಶಗಳನ್ನು ಕರೆತರುತ್ತವೆ. ಈ ಜನ್ಮದಲ್ಲಿ ನಾವು ಚೆನ್ನಾಗಿ ಮಾಡಬಲ್ಲ ಎಲ್ಲವೂ, ಉದಾಹರಣಗೆ ಹೊಲಗಳಲ್ಲಿ ನೆಡುವುದು, ನಮ್ಮ ಹಿಂದಿನ ಜೀವತಾವಧಿಯಲ್ಲಿ ನಾವು ಮಾಡಿದ ಸಕಾರಾತ್ಮಕ ಕ್ರಿಯೆಗಳ ಫಲಿತಾಂಶವಾಗಿರುತ್ತದೆ. ನಾವು ಅನಾರೋಗ್ಯದಿಂದ ಬಹಳಾ ಬಳಲುತ್ತಿದ್ದರೆ ಅಥವಾ ನಾವು ಅತೃಪ್ತರಾಗಿದ್ದರೆ ಅಥವಾ ಅಲ್ಪಾವಧಿಯ ಜೀವನವನ್ನು ಹೊಂದಿದ್ದರೆ, ಇದು ನಾವು ಹಿಂದೆ ಮಾಡಿದ ನಕಾರಾತ್ಮಕ ಕ್ರಿಯೆಗಳ ಫಲಿತಾಂಶವಾಗಿರುತ್ತದೆ.
ಉದಾಹರಣೆಗೆ, ಇಬ್ಬರು ವ್ಯಾಪಾರಿಗಳಿದ್ದಾರೆ, ಒಬ್ಬರು ಯಶಸ್ವಿಯಾಗಿದ್ದಾರೆ ಮತ್ತು ಒಬ್ಬರು ಆಗಿಲ್ಲ. ಇದು ಅವರ ಹಿಂದಿನ ಕರ್ಮದ ಕಾರಣವಾಗಿರುತ್ತದೆ. ನೀವು ಇಬ್ಬರು ಉದ್ಯಮಿಗಳನ್ನು ನೋಡಬಹುದು, ಒಬ್ಬರು ಬಹಳಾ ಕಷ್ಟಪಟ್ಟು ಕೆಲಸ ಮಾಡಿದರೂ ಯಶಸ್ವಿಯಾಗುವುದಿಲ್ಲ ಆದರೆ ಇನ್ನೊಬ್ಬರು ಕಷ್ಟಪಟ್ಟು ಕೆಲಸ ಮಾಡದಿದ್ದರೂ ಯಶಸ್ವಿಯಾಗಿರುತ್ತಾರೆ. ಇನ್ನೊಂದು ಉದಾಹರಣೆಯೆಂದರೆ, ನೀವು ಜೀವಿಗಳನ್ನು ಕೊಂದರೆ, ನೀವು ಅಲ್ಪಾವಧಿಯ ಜೀವನವನ್ನು ಹೊಂದಿರುತ್ತೀರಿ ಮತ್ತು ಅನಾರೋಗ್ಯದಿಂದ ಬಳಲುತ್ತೀರಿ. ಇದೆಲ್ಲದರ ಬಗ್ಗೆ ನಿಮ್ಮ ಗೆಶೆ-ಲ ಅವರನ್ನು ಇಲ್ಲಿ ಕೇಳಬಹುದು.
ನೀವು ಈ ನಕಾರಾತ್ಮಕ ಕಾರ್ಯಗಳಿಂದ ದೂರವಿದ್ದರೆ, ನೀವು ಕೆಳಮಟ್ಟದಲ್ಲಿ ಜನಿಸುವುದಿಲ್ಲ, ಬದಲಿಗೆ ಮನುಷ್ಯರಾಗಿ ಅಥವಾ ದೇವಲೋಕದಲ್ಲಿ ಜನಿಸುತ್ತೀರಿ. ಆದರೆ ನೀವು ಮನುಷ್ಯರಾಗಿ ಅಥವಾ ದೇವರಾಗಿ ಜನಿಸಿದರೂ, ಇದು ನಿಮಗೆ ಅಂತಿಮವಾದ ಸಂತೋಷವನ್ನು ತರುವುದಿಲ್ಲ - ಇದು ದುಃಖದ ಸ್ವರೂಪವಾಗಿರುತ್ತದೆ. ಯಾಕೆ ಹೀಗೆ? ನೀವು ಉನ್ನತ ಸ್ಥಾನವನ್ನು ಸಾಧಿಸಿದರೆ, ನೀವು ಕೆಳಮಟ್ಟಕ್ಕೆ ಬೀಳುತ್ತೀರಿ; ನೀವು ಕೆಳಮಟ್ಟದ ಸ್ಥಾನದಲ್ಲಿದ್ದರೆ, ನೀವು ಉನ್ನತ ಸ್ಥಾನಕ್ಕೆ ಏರುತ್ತೀರಿ. ಇದರಿಂದ ಸಾಕಷ್ಟು ದುಃಖ ಎದುರಾಗುತ್ತದೆ. ಉದಾಹರಣೆಗೆ ನೀವು ಹಸಿದಿದ್ದರೆ, ನೀವು ಆಹಾರವನ್ನು ಸೇವಿಸುತ್ತೀರಿ; ಆದರೆ ನೀವು ಹೆಚ್ಚು ಸೇವಿಸಿದರೆ, ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ. ನಿಮಗೆ ಚಳಿಯೆನಿಸಿದರೆ, ನೀವು ಶಾಖವನ್ನು ಪಡೆಯುತ್ತೀರಿ ಮತ್ತು ಬಹಳಾ ಸೆಖೆಯನ್ನು ಅನುಭವಿಸುತ್ತೀರಿ; ಆಗ ಮತ್ತೆ ತಣ್ಣಗಾಗಬೇಕಾಗುತ್ತದೆ. ಇವೆಲ್ಲವೂ ಹಲವಾರು ರೀತಿಯ ದುಃಖಗಳೇ.
ಸಂಸಾರ (ಅನಿಯಂತ್ರಿತವಾಗಿ ಪುನರಾವರ್ತಿತವಾಗುವ ಅಸ್ತಿತ್ವ) ಈ ರೀತಿಯ ದುಃಖಗಳನ್ನು ಒಳಗೊಂಡಿರುತ್ತದೆ. ಇದು ಕರ್ಮ ಮತ್ತು ವಿವಿಧವಾದ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳ ಪರಿಣಾಮವಾಗಿರುತ್ತದೆ. ನಾವು ಶೂನ್ಯತೆ ಅಥವಾ ಗುರುತಿಲ್ಲದಿರುವಿಕೆಯ ಬುದ್ಧಿವಂತಿಕೆಯನ್ನು (ವಿವೇಚನಾತ್ಮಕ ಅರಿವು) ಅಭಿವೃದ್ಧಿಪಡಿಸಬೇಕಾಗಿದೆ.
ತಮ್ಮ ಸಂಸಾರದ ಅಂತ್ಯವನ್ನು ತಲುಪಿ, ಈ ಸ್ಥಿತಿಯನ್ನು ಸಾಧಿಸಿದ ಹದಿನಾರು ಅರ್ಹತ್ರ ಮತ್ತು ಹಲವಾರು ಆರ್ಯರ ಉದಾಹರಣೆಗಳನ್ನು ನಾವು ನೋಡಬಹುದು. ನಾವು ನಮ್ಮ ಸ್ವಂತ ಸಂಸಾರಿಕ ಅಸ್ತಿತ್ವವನ್ನು ಕೊನೆಗೊಳಿಸಬಹುದಾದರೂ, ಇದು ಸಾಕಾಗುವುದಿಲ್ಲ, ಏಕೆಂದರೆ ಸೀಮಿತ ಜೀವಿಗಳಿಗಿಂತ (ಸಂವೇದನಾಶೀಲ ಜೀವಿಗಳು) ಹೆಚ್ಚಾಗಿ ನಮಗಾಗಿ ಯಾರೂ ದಯೆ ತೋರಿರುವುದಿಲ್ಲ. ಡೈರಿ ಉತ್ಪನ್ನಗಳು ಪ್ರಾಣಿಗಳ ದಯೆಯಿಂದ ಬರುತ್ತವೆ. ನಾವು ಮಾಂಸವನ್ನು ಆಸ್ವಾದಿಸಿದರೆ, ಇದು ಆರೋಗ್ಯಕರ ಪ್ರಾಣಿಗಳನ್ನು ಹತ್ಯೆ ಮಾಡುವುದರಿಂದ ಬರುತ್ತದೆ. ಚಳಿಗಾಲದಲ್ಲಿ ನಾವು ತುಪ್ಪಳದ ಮತ್ತು ಉಣ್ಣೆಯ ಕೋಟುಗಳನ್ನು ಧರಿಸುತ್ತೇವೆ, ಅದು ಕೂಡ ಪ್ರಾಣಿಗಳಿಂದ ಬರುತ್ತದೆ. ಇವನ್ನು ನಮಗೆ ಒದಗಿಸಲು ಅವರು ಬಹಳಾ ಕರುಣಾಮಯಿಯಾಗಿರುತ್ತಾರೆ. ನಾವೇ ಬುದ್ಧತ್ವದ ಸ್ಥಿತಿಯನ್ನು ಸಾಧಿಸುವ ಮೂಲಕ ಎಲ್ಲಾ ಜೀವಿಗಳ ದಯೆಯನ್ನು ಮರುಪಾವತಿಸಬೇಕಾಗಿದೆ - ಆಗ ನಾವು ಎಲ್ಲಾ ಸೀಮಿತ ಜೀವಿಗಳ ಗುರಿಗಳನ್ನು ಪೂರೈಸಬಹುದು.
ಶ್ರಾವಕರು ಮತ್ತು ಅರ್ಹತ್ರು ಸೀಮಿತ ಜೀವಿಗಳ ಎಲ್ಲಾ ಉದ್ದೇಶಗಳನ್ನು ಪೂರೈಸಲು ಸಾಧ್ಯವಿಲ್ಲ. ಇದನ್ನು ಮಾಡಬಲ್ಲ ಏಕೈಕ ವ್ಯಕ್ತಿಯು ಒಬ್ಬ ಬುದ್ಧನಾಗಿರುವನು, ಆದ್ದರಿಂದ ಅವರಿಗೆ ನಿಜವಾಗಿಯೂ ಸಹಾಯ ಮಾಡಲು ನಾವು ಇದನ್ನೇ ಸಾಧಿಸಬೇಕು. ನಾವೇ ಬುದ್ಧರಾಗಬೇಕು.
ನಾವು ಇದನ್ನು ಹೇಗೆ ಮಾಡಬಹುದು? ಧರ್ಮವನ್ನು ಅನುಸರಿಸುವ ಮೂಲಕ. ಭಾರತದಲ್ಲಿ, ಅತಿಹೆಚ್ಚು ಸಾಧಿಸಿದ ಮಹಾಸಿದ್ಧರು ಇದ್ದರು, ಅವರಲ್ಲಿ ಎಂಭತ್ತು ಜನರ ಜೀವನ ಕಥೆಗಳು ನಮ್ಮಲ್ಲಿವೆ, ಆದರೆ ನಿಜವಾಗಿ ಹೇಳಬೇಕೆಂದರೆ ಅವರು ಅಸಂಖ್ಯಾತರಾಗಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿಯೇ ಜ್ಞಾನೋದಯವನ್ನು ಸಾಧಿಸಿದ್ದರು. ಟಿಬೆಟ್‌ನಲ್ಲಿ, ಕಾಗ್ಯು, ನ್ಯಿಂಗ್ಮಾ, ಸಕ್ಯಾ ಮತ್ತು ಗೆಲುಗ್ ಶಾಲೆಗಳಿಂದ ಮಿಲರೆಪಾ ಮತ್ತು ಇತರ ಅನೇಕ ಮಹಾನ್ ಗುರುಗಳ ಉದಾಹರಣೆಗಳಿವೆ.
ಒಮ್ಮೆ ನಾವು ಬುದ್ಧಸ್ಥಿತಿಯನ್ನು ಸಾಧಿಸಿದರೆ, ನಮ್ಮ ಧರ್ಮದ ಪ್ರಯತ್ನಗಳು ಕೊನೆಗೊಳ್ಳುತ್ತವೆ. ಪ್ರಾರಂಭದಲ್ಲಿ, ಧರ್ಮದಲ್ಲಿ ನಾವು ಮಾಡುವ ಕೆಲಸವು ಬಹಳಾ ಕಷ್ಟಕರವಾಗಿರುತ್ತದೆ, ಆದರೆ ಅದು ಸುಲಭಗೊಳ್ಳುತ್ತಾ ಹೋಗುತ್ತದೆ ಮತ್ತು ನಾವು ಪ್ರಗತಿ ಪಡೆದಂತೆ ನಾವು ಹೆಚ್ಚು ಹೆಚ್ಚು ಸಂತೋಷವನ್ನು ಪಡೆಯುತ್ತೇವೆ. ನಾವು ನಮ್ಮ ಧರ್ಮದ ಕಾರ್ಯವನ್ನು ಸಂಪೂರ್ಣವಾದ ಸಂತೋಷದ ಸ್ಥಿತಿಯಲ್ಲಿ ಮುಗಿಸುತ್ತೇವೆ. ಪ್ರಾಪಂಚಿಕ ಕೆಲಸವು ನಮಗೆ ಹೆಚ್ಚು ದುಃಖವನ್ನೇ ತರುತ್ತದೆ.
ಉದಾಹರಣೆಗೆ, ಜನರು ಮರಣ ಹೊಂದಿದಾಗ, ಅವರ ಸಾವು ಕೇವಲ ಅವರಿಗೆ ದುಃಖ ಮತ್ತು ಸಂಕಟವನ್ನು ನೀಡುವುದಲ್ಲದೆ ಅವರ ಹಿಂದೆ ಉಳಿದ ಜನರೆಲ್ಲರಿಗೂ, ಉದಾಹರಣೆಗೆ ಅಂತ್ಯಕ್ರಿಯೆಯಲ್ಲಿ ತೊಡಗಿದವರೆಲ್ಲರಿಗೂ, ದುಃಖ ಮತ್ತು ಸಂಕಟವನ್ನು ನೀಡುತ್ತದೆ. ಇದರ ಬಗ್ಗೆ ಯೋಚಿಸಿ, ಒಂದು ರೀತಿಯ ಧರ್ಮದ ಕಾರ್ಯಗಳನ್ನು ನಾವು ನಡೆಸಬೇಕಾಗಿದೆ. ಜ್ಞಾನೋದಯದೊಂದಿಗೆ ಧರ್ಮದ ಪರಾಕಾಷ್ಠೆ ಅಥವಾ ಅಂತ್ಯವನ್ನು ತಲುಪುವುದು ಕೇವಲ ನಮಗೆ ಮಾತ್ರವಲ್ಲ ಇತರರೆಲ್ಲರಿಗೂ ಸಹ ಸಂತೋಷವನ್ನು ತರುತ್ತದೆ.
ನಾವು ಹತ್ತು ನಕಾರಾತ್ಮಕ ಕ್ರಿಯೆಗಳಲ್ಲಿ ತೊಡಗುವುದರಿಂದ ತಡೆಯಬೇಕು. ನಾವು ಸಕಾರಾತ್ಮಕ ಕ್ರಿಯೆಗಳನ್ನು ಮಾಡಿದರೆ, ನಾವು ಸಂತೋಷವನ್ನು ಅನುಭವಿಸುತ್ತೇವೆ ಮತ್ತು ನಾವು ನಕಾರಾತ್ಮಕ ಕ್ರಿಯೆಗಳನ್ನು ಮಾಡಿದರೆ, ನಾವು ದುಃಖವನ್ನು ಅನುಭವಿಸುತ್ತೇವೆ. ನಾವು ನಮ್ಮ ಕ್ರಿಯೆಗಳ ಫಲಿತಾಂಶಗಳನ್ನು ಪರೀಕ್ಷಿಸಬೇಕು ಮತ್ತು ನಮ್ಮ ಕ್ರಿಯೆಗಳ ಕಾರಣವಾಗಿ ನಮ್ಮ ಮನಸ್ಸಿನ ಮೇಲಾಗುವ ಫಲಿತಾಂಶಗಳನ್ನು ನಾವು ಪರೀಕ್ಷಿಸಬೇಕು. ನಾವು ಹೀಗೆ ಪರೀಕ್ಷಿಸಿದಾಗ, ನಾವು ಮೂರು ವಿಷಕಾರಿ ಭಾವನೆಗಳು ಮತ್ತು ವರ್ತನೆಗಳನ್ನು ಹೊಂದಿದ್ದೇವೆ ಎಂದು ನೋಡಬಹುದು: ಆಸೆ, ಹಗೆತನ ಮತ್ತು ಮನಮುಚ್ಚಿದ ಅಜ್ಞಾನ (ನಿಷ್ಕಪಟತೆ).
ಇವುಗಳಿಂದ, ನಾವು 84,000 ರೀತಿಯ ಗೊಂದಲದ ಭಾವನೆಗಳು ಮತ್ತು ವರ್ತನೆಗಳನ್ನು ಪಡೆಯುತ್ತೇವೆ. ಈ 84,000 ಭ್ರಮೆಗಳು ನಮ್ಮ ಮುಖ್ಯ ಶತ್ರುಗಳು, ಆದ್ದರಿಂದ ನಾವು ನಮ್ಮ ಶತ್ರುಗಳಿಗಾಗಿ ನಮ್ಮ ಸುತ್ತಲೂ ಅಲ್ಲ, ಬದಲಿಗೆ ನಮ್ಮೊಳಗೆ ನೋಡುತ್ತೇವೆ. ಈ 84,000ರಲ್ಲಿ ಮುಖ್ಯವಾದವುಗಳು ಈ ಮೂರು ವಿಷಗಳಾಗಿವೆ, ಮತ್ತು ಅತ್ಯಂತ ಕೆಟ್ಟದ್ದು ನಮ್ಮ ಮಾನಸಿಕ ಹರಿವಿನಲ್ಲಿರುವ ಮನಸ್ಸಿನ ಅಜ್ಞಾನ ಅಥವಾ ನಿಷ್ಕಪಟತೆಯಾಗಿರುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ನಾವು ನಮ್ಮೊಳಗೇ ನೋಡಬೇಕು ಮತ್ತು ಈ ಆಂತರಿಕ ಶತ್ರುಗಳನ್ನು ಕೊನೆಗೊಳಿಸಲು ಪ್ರಯತ್ನಿಸಬೇಕು. ಅದಕ್ಕಾಗಿಯೇ ಬುದ್ಧ ಧರ್ಮದ ಅನುಯಾಯಿಗಳನ್ನು "ಒಳಗಿನವರು" (ನಾಂಗ್-ಪಾ) ಎಂದು ಕರೆಯಲಾಗುತ್ತದೆ, ಏಕೆಂದರೆ ಅವರು ಯಾವಾಗಲೂ ತಮ್ಮೊಳಗೇ ನೋಡುತ್ತಾರೆ. ನಮ್ಮ ಮಾನಸಿಕ ನಿರಂತರತೆಯಲ್ಲಿನ ಈ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳನ್ನು ನಾವು ಕೊನೆಗೊಳಿಸಿದರೆ, ನಮ್ಮ ಎಲ್ಲಾ ದುಃಖಗಳನ್ನು ನಾವು ಕೊನೆಗೊಳಿಸುತ್ತೇವೆ. ಹೀಗೆ ಮಾಡುವ ವ್ಯಕ್ತಿಯನ್ನೇ ಧರ್ಮವನ್ನು ಅನುಸರಿಸುವವನು ಎಂದು ಕರೆಯಲಾಗುತ್ತದೆ.
ಕೇವಲ ತನ್ನೊಳಗೆ ಇರುವ ಗೊಂದಲದ ಭಾವನೆಗಳನ್ನು ಮತ್ತು ವರ್ತನೆಗಳನ್ನು ನಿವಾರಿಸಲು ಕೆಲಸ ಮಾಡುವ ವ್ಯಕ್ತಿಯ ಧರ್ಮ ಚಟುವಟಿಕೆಯು ಹೀನಯಾನ ಧರ್ಮದ ಚಟುವಟಿಕೆಯಾಗಿರುತ್ತದೆ. ನಮ್ಮ ಸ್ವಂತ ದುಃಖವನ್ನು ನಿವಾರಿಸುವುದಲ್ಲದೆ, ಇತರರನ್ನೂ ಹೆಚ್ಚು ಮುಖ್ಯವೆಂದು ಪರಿಗಣಿಸಿ, ಅವರ ಭ್ರಮೆಗಳನ್ನು ಹೋಗಲಾಡಿಸಲು ಮತ್ತು ಅವರ ಮನಸ್ಸಿನಲ್ಲಿರುವ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳನ್ನು ನಿವಾರಿಸುವಂತೆ ಅವರಿಗೆ ಸಹಾಯ ಮಾಡಬೇಕೆಂದು ಯೋಚಿಸಿ, ನಮ್ಮ ಭ್ರಮೆಯನ್ನು ನಿವಾರಿಸುವತ್ತ ನಾವು ಕೆಲಸಮಾಡುತ್ತಿದ್ದರೆ, ನಾವು ಮಹಾಯಾನ ಅಭ್ಯಾಸಿಗರಾಗಿರುತ್ತೇವೆ. ಇದರ ಆಧಾರದ ಮೇಲೆ, ನಾವು ಮಹಾಯಾನಿಗರಾಗಲು ಪ್ರಯತ್ನಿಸಬೇಕು ಮತ್ತು ಇದರ ಫಲಿತಾಂಶವು ಬುದ್ಧನ ಪ್ರಬುದ್ಧ ಸ್ಥಿತಿಯನ್ನು ಸಾಧಿಸವುದಾಗಿರುತ್ತದೆ.
ಇಲ್ಲಿನ ಮುಖ್ಯ ವಿಷಯವೆಂದರೆ, ನಾವು ಯಾವಾಗಲೂ ಎಲ್ಲರಿಗೂ ಉಪಯುಕ್ತವಾಗಿರಲು ಪ್ರಯತ್ನಿಸಬೇಕು ಮತ್ತು ಯಾರಿಗೂ ಹಾನಿಯುಂಟುಮಾಡಬಾರದು. ನಾವು "ಓಂ ಮಣಿ ಪದ್ಮೆ ಹಮ್" ಎಂದು ಪಠಿಸಿದರೆ, "ಇದರ ಸಕಾರಾತ್ಮಕ ಶಕ್ತಿಯಿಂದ ಎಲ್ಲಾ ಸೀಮಿತ ಜೀವಿಗಳಿಗೆ ಉಪಯೋಗವಾಗಲಿ" ಎಂದು ನೀವು ಯೋಚಿಸಬೇಕು.
ನಮ್ಮ ಕೆಲಸದ ಆಧಾರವಾಗಿರುವ ಈ ದೇಹಗಳನ್ನು ಪಡೆಯುವುದು ಕಷ್ಟ: ಮನುಷ್ಯನಾಗಿ ಹುಟ್ಟಲು ಸಾಧ್ಯವಾಗುವುದು ಸುಲಭವಲ್ಲ. ಉದಾಹರಣೆಗೆ, ಭೂಗೋಳವನ್ನು ಒಮ್ಮೆ ನೋಡಿ. ಅದರ ಬಹುಪಾಲು ಸಾಗರವಾಗಿದೆ ಮತ್ತು ಈ ಎಲ್ಲಾ ಸಾಗರಗಳಲ್ಲಿ ಎಷ್ಟೊಂದು ಮೀನುಗಳಿವೆ ಎಂದು ಯೋಚಿಸಿ. ಅತಿಹೆಚ್ಚು ಸಂಖ್ಯೆಗಳಿರುವ ಜೀವರೂಪಗಳು ಪ್ರಾಣಿಗಳು ಮತ್ತು ಕೀಟಗಳಾಗಿರುತ್ತವೆ. ಇಡೀ ಗ್ರಹದ ಬಗ್ಗೆ ನಾವು ಯೋಚಿಸಿದರೆ, ಪ್ರಾಣಿಗಳು ಮತ್ತು ಕೀಟಗಳ ಸಂಖ್ಯೆಗಳ ಬಗ್ಗೆ ನಾವು ಯೋಚಿಸಿದರೆ, ನಾವು ಮನುಷ್ಯರಾಗಿ ಹುಟ್ಟುವುದು ಎಷ್ಟು ಅಪರೂಪದ ವಿಷಯವೆಂದು ಅರ್ಥಮಾಡಿಕೊಳ್ಳುತ್ತೇವೆ.
ಸಾರಾಂಶ
ಧರ್ಮದಲ್ಲಿ, ಸಾಕ್ಷಾತ್ಕಾರಗಳು ಮತ್ತು ಒಳನೋಟಗಳು ಬಹಳ ನಿಧಾನವಾಗಿ ಬರುತ್ತವೆ. ಇದು ಕೆಲವೇ ದಿನಗಳು, ವಾರಗಳು ಅಥವಾ ತಿಂಗಳುಗಳಲ್ಲಿ ಆಗುವ ಕೆಲಸವಲ್ಲ. ಧರ್ಮವನ್ನು ಅರಿತುಕೊಳ್ಳುವುದು ಬಿಡಿ, ಕೆಲವೇ ಕೆಲವರು ಮಾತ್ರ ಧರ್ಮದ ಬಗ್ಗೆ ಯೋಚಿಸುತ್ತಾರೆ. ನಾವು ದೀರ್ಘಕಾಲ, ಸತತವಾಗಿ ಅದರ ಮೇಲೆ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಉತ್ತಮವಾಗಿ ಉತ್ತರಿಸಬಲ್ಲ ಗೆಶೆಯೊಬ್ಬರು ಇಲ್ಲಿದ್ದಾರೆ. ದೀರ್ಘಾವಧಿಯಲ್ಲಿ, ಬುದ್ಧ ಧರ್ಮವು ಬೆಳೆಯುತ್ತಲೇ ಇರುತ್ತದೆ ಮತ್ತು ವ್ಯಾಪಕವಾಗಿ ಹರಡುತ್ತದೆ. ಇದು ಹೆಚ್ಚುತ್ತಲೇ ಇದೆ ಮತ್ತು ಜೀವಂತವಾಗಿದೆ. ಬುದ್ಧನು ಮೊದಲು ಬೋಧಿಸಿದಾಗ, ಅವರ ಬಳಿ ಕೇವಲ ಐದು ಶಿಷ್ಯರಿದ್ದರು. ಇದು ಈ ಜನರಿಂದ ಹರಡಿ, ಇಂದು ದೊಡ್ಡ ಪ್ರಮಾಣದಲ್ಲಿ ಪ್ರಸ್ತುತವಾಗಿದೆ.
ಇಂದು ನಮ್ಮಲ್ಲಿ ಶಾಕ್ಯಮುನಿಗೆ ಸಮಾನವಾದ ಒಬ್ಬರು ಇದ್ದು, ಪರಮಪೂಜ್ಯ ದಲೈ ಲಾಮಾ ಅವರು ಅಕ್ಟೋಬರ್‌ನಲ್ಲಿ ಇಲ್ಲಿಗೆ ಬರಲಿದ್ದಾರೆ. ಪರಮಪೂಜ್ಯರು ನಿಮಗೆ ನೀಡುವ ಬೋಧನೆಗಳನ್ನು ಮನಸ್ಸಿಟ್ಟು ಕಲಿಯಿರಿ ಮತ್ತು ಪ್ರಾಮಾಣಿಕವಾಗಿ ಅಭ್ಯಾಸ ಮಾಡಿರಿ. ಬೋಧನೆಗಳ ಮೂಲತತ್ವವು ಯಾವುದೇ ಜೀವಿಗಳಿಗೆ ಎಂದಿಗೂ ಹಾನಿಯುಂಟುಮಾಡದಿರುವುದು ಮತ್ತು ಯಾವುದೇ ಹಾನಿಕಾರಕ ಆಲೋಚನೆಗಳನ್ನು ಹೊಂದದಿರುವುದಾಗಿರುತ್ತದೆ – ಅವುಗಳಿಗೆ ಉಪಯುಕ್ತವಾಗಲು ಮಾತ್ರ ಪ್ರಯತ್ನಿಸಿ. ಇದೇ ಮುಖ್ಯ ಅಂಶವಾಗಿರುತ್ತದೆ. ನೀವು ಈ ರೀತಿಯಾಗಿ ವರ್ತಿಸಿದರೆ, ಭವಿಷ್ಯದಲ್ಲಿ ಇದು ಹೆಚ್ಚಿನ ಪ್ರಯೋಜನವನ್ನು ಕರೆತರುತ್ತದೆ.