ಧರ್ಮವನ್ನು ಅನುಸರಿಸುವುದು ಮತ್ತು ದುಃಖವನ್ನು ದೂರವಿರಿಸುವುದು

ಸಂಸ್ಕೃತದ ಪದವಾದ ಧರ್ಮ, ಟಿಬೆಟಿಯನ್‌ನಲ್ಲಿ ಚೋ (ಚೋಸ್) ಎಂದರೆ, ಒಂದನ್ನು ಹಿಡಿದಿಟ್ಟುಕೊಳ್ಳುವುದು ಅಥವಾ ಎತ್ತಿ ಹಿಡಿಯುವುದು ಎಂದರ್ಥ. ಯಾವುದನ್ನು ಎತ್ತಿಹಿಡಿಯಲಾಗುತ್ತದೆ ಅಥವಾ ನಿರ್ವಹಿಸಲಾಗುತ್ತದೆ? ಇದು ದುಃಖದ ನಿವಾರಣೆ ಮತ್ತು ಸಂತೋಷದ ಸಾಧನೆಯಾಗಿರುತ್ತದೆ. ಧರ್ಮವು ಇದನ್ನು ನಮಗೆ ಮಾತ್ರವಲ್ಲ, ಎಲ್ಲಾ ಜೀವಿಗಳಿಗಾಗಿ ಮಾಡುತ್ತದೆ.

ದುಃಖವನ್ನು ಗುರುತಿಸುವುದು 

ನಾವು ಅನುಭವಿಸುವ ನೋವುಗಳು ಎರಡು ವಿಧಗಳದ್ದಾಗಿವೆ: ಮೊದಲನೆಯದು ಮನುಷ್ಯರಾದ ನಮಗೆ ತಕ್ಷಣವಾಗಿ ಗೋಚರವಾಗುವುದು ಮತ್ತು ಬಾಹ್ಯ ಶಕ್ತಿಗಳಿಲ್ಲದೆ ನಾವು ನೋಡಲಾಗದೇ ಇರುವುದು ಇನ್ನೊಂದು. ಮೊದಲಿನದ್ದು, ಜನನ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ನೋವು, ಸಾಂದರ್ಭಿಕವಾಗಿ ಅನಾರೋಗ್ಯಕ್ಕೆ ಒಳಗಾಗುವ ಅಹಿತಕರತೆ, ವೃದ್ಧಾಪ್ಯ ಮತ್ತು ವಯಸ್ಸಾದಾಗ ಅನುಭವಿಸುವ ದುಃಖ ಮತ್ತು ಸಾವಿನ ಭಯವನ್ನು ಒಳಗೊಂಡಿರುತ್ತದೆ. 

ಸಾವಿನ ನಂತರ ಬರುವ ದುಃಖಗಳು ಸಾಮಾನ್ಯ ವ್ಯಕ್ತಿಗೆ ಕಾಣಿಸುವುದಿಲ್ಲ. ಬಹುಶಃ, ನಾವು ಸತ್ತ ನಂತರ, ನಾವು ಮನುಷ್ಯರಾಗಿ ಮರುಜನ್ಮ ಪಡೆಯುತ್ತೇವೆ ಎಂದು ನಾವು ಭಾವಿಸಬಹುದು. ಆದರೆ, ಹೀಗೆ ಯಾವಾಗಲೂ ನಡೆಯಬೇಕಾಗಿಲ್ಲ. ಅಂತಹ ವಿಕಾಸವು ಸಂಭವಿಸುತ್ತದೆ ಎಂದು ಭಾವಿಸಲು ಯಾವುದೇ ತಾರ್ಕಿಕ ಕಾರಣವಿಲ್ಲ. ಅಥವಾ ನಾವು ಸತ್ತ ನಂತರ ನಾವು ಪುನರ್ಜನ್ಮವನ್ನು ಖಂಡಿತ ಪಡೆಯುತ್ತೇವೆ ಎಂದು ಊಹಿಸಲೂ ಯಾವುದೇ ಕಾರಣವಿಲ್ಲ. 

ನಾವು ಪಡೆಯಬಹುದಾದ ಪುನರ್ಜನ್ಮಗಳ ಬಗ್ಗೆ ತಿಳಿದುಕೊಳ್ಳುವುದು ಬಹಳಾ ಕಷ್ಟವಾಗಿರುತ್ತದೆ ಮತ್ತು ಇದು ನಮ್ಮ ಪ್ರಸ್ತುತವಾದ ಜ್ಞಾನದ ವ್ಯಾಪ್ತಿಯಲ್ಲಿಲ್ಲ. ನಾವು ಈ ಜೀವನದಲ್ಲಿ ಸಕಾರಾತ್ಮಕ ಕರ್ಮವನ್ನು ಸೃಷ್ಟಿಸಿದರೆ, ಭವಿಷ್ಯದಲ್ಲಿ ಸಂತೋಷಕರವಾದ ಪುನರ್ಜನ್ಮಗಳು ಸ್ವಾಭಾವಿಕವಾಗಿ ಅನುಸರಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನಾವು ನಕಾರಾತ್ಮಕ ಕರ್ಮವನ್ನು ಹೆಚ್ಚಾಗಿ ರಚಿಸಿದರೆ, ನಾವು ಸಂತೋಷಕರವಾದ ಪುನರ್ಜನ್ಮವನ್ನು ಪಡೆಯುವುದಿಲ್ಲ, ಬದಲಿಗೆ ಕೆಳಮಟ್ಟದ ಪುನರ್ಜನ್ಮವನ್ನು ಪಡೆದು, ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತೇವೆ. ಇದು ಖಚಿತವಾಗಿರುತ್ತದೆ. ಪುನರ್ಜನ್ಮವು ಹೀಗೆ ಕಾರ್ಯನಿರ್ವಹಿಸುತ್ತದೆ. ನಾವು ಗೋಧಿಯ ಬೀಜವನ್ನು ಭಿತ್ತಿದರೆ, ಅದು ಗೋಧಿಯ ಸಸ್ಯವಾಗುತ್ತದೆ. ನಾವು ಭತ್ತದ ಬೀಜವನ್ನು ಭಿತ್ತಿದರೆ, ಭತ್ತದ ಸಸ್ಯವು ಉತ್ಪತ್ತಿಯಾಗುತ್ತದೆ. ಅಂತೆಯೇ, ನಕಾರಾತ್ಮಕ ಕರ್ಮವನ್ನು ಸೃಷ್ಟಿಸುವ ಮೂಲಕ ನಾವು ನರಕ ಜೀವಿ, ಹಸಿದ ಪ್ರೇತ ಅಥವಾ ಪ್ರಾಣಿಯಾಗಿ, ಈ ಮೂರರಲ್ಲಿ ಒಂದಾಗಿ ಪುನರ್ಜನ್ಮ ಪಡೆಯಲು ಬೀಜ ಭಿತ್ತುತ್ತೇವೆ. 

ನಾಲ್ಕು ವಿಭಿನ್ನ ರಾಜ್ಯಗಳು ಅಥವಾ ನರಕದ ಕ್ಷೇತ್ರಗಳಿರುತ್ತವೆ (ಸಂತೋಷವಿಲ್ಲದ ಕ್ಷೇತ್ರಗಳು): ಸುಡುವ, ಶೀತ, ನೆರೆಹೊರೆ ಮತ್ತು ಸಾಂದರ್ಭಿಕ ನರಕಗಳು. ಇವುಗಳನ್ನು ಮತ್ತಷ್ಟು ಉಪವಿಭಾಗಿಸಿದರೆ, ಎಂಟು ವಿಭಿನ್ನ ಸುಡುವ ನರಕಗಳಿವೆ. ಇವುಗಳಲ್ಲಿ ಮೊದಲನೆಯದನ್ನು ಪುನರುಜ್ಜೀವನಗೊಳಿಸುವ ನರಕ ಎಂದು ಕರೆಯಲಾಗುತ್ತದೆ. ತುಲನಾತ್ಮಕವಾಗಿ, ಇದರಲ್ಲಿ ಕಡಿಮೆ ಸಂಕಟವಿರುತ್ತದೆ. ಇಲ್ಲಿ ಅನುಭವಿಸುವ ದುಃಖದ ಮಟ್ಟವನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಭಯಂಕರ ನರಕದಲ್ಲಿರುವ ಜೀವಿಗಳಿಗೆ ಹೋಲಿಸಿದರೆ, ಈ ಬೆಂಕಿಯಲ್ಲಿ ಸಿಲುಕಿದ ವ್ಯಕ್ತಿಯ ನೋವು ಬಹಳಾ ಕಡಿಮೆಯಾಗಿರುತ್ತದೆ. ಪುನರುಜ್ಜೀವನಗೊಳಿಸುವ ನರಕದ ಕೆಳಗಿನ ಪ್ರತಿಯೊಂದು ನರಕದಲ್ಲಿ ದುಃಖದ ತೀವ್ರತೆಯು ಹೆಚ್ಚಾಗುತ್ತಲೇ ಇರುತ್ತದೆ. 

ನರಕ ಜೀವಿಗಳು ಮತ್ತು ಹಸಿದ ದೆವ್ವಗಳು ನಮಗೆ ಕಾಣಿಸದಿದ್ದರೂ, ಪ್ರಾಣಿಗಳ ನೋವನ್ನು ನಮ್ಮ ಕಣ್ಣುಗಳಿಂದ ನೋಡಬಹುದಾಗಿದೆ. ನಾವೇ ಪ್ರಾಣಿಗಳಾಗಿ ಮರುಜನ್ಮ ಪಡೆದರೆ ಏನಾಗುತ್ತದೆ ಎಂಬುದರ ಬಗ್ಗೆ ನಾವು ಯೋಚಿಸಬೇಕಾದಲ್ಲಿ, ಭಾರತದಲ್ಲಿ ನಮ್ಮ ಸುತ್ತ-ಮುತ್ತಲಿರುವ ಬೀದಿಯಲ್ಲಿರುವ ಪ್ರಾಣಿಗಳು ಮತ್ತು ಮೃಗಗಳನ್ನು ನೋಡಿ, ಅವುಗಳ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸಬಹುದು. ಇಂತಹ ಕೆಳಮಟ್ಟದ ಪುನರ್ಜನ್ಮಗಳ ದುಃಖವನ್ನು ಅನುಭವಿಸುವುದರಿಂದ ಧರ್ಮವು ನಮ್ಮನ್ನು ತಡೆಹಿಡಿಯುತ್ತದೆ ಮತ್ತು ರಕ್ಷಿಸುತ್ತದೆ. 

ಪುನರ್ಜನ್ಮದ ಸಂಪೂರ್ಣ ಚಕ್ರವು, ಅನಿಯಂತ್ರಿತವಾಗಿ ಮರುಕಳಿಸುವ ಅಸ್ತಿತ್ವವೆರಡೂ (ಸಂಸಾರ) ದುಃಖ ಸ್ವಭಾವಗಳನ್ನು ಹೊಂದಿರುತ್ತದೆ. ಧರ್ಮವು ನಮ್ಮನ್ನು ಸಂಸಾರದ ಎಲ್ಲಾ ಸಂಕಟಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಮಹಾ ವಾಹನದ ಬೋಧನೆಗಳಾದ ಮಹಾಯಾನ ಧರ್ಮವು ನಮಗೆ ಮಾತ್ರವಲ್ಲ, ಎಲ್ಲಾ ಸೀಮಿತ ಜೀವಿಗಳಿಗೂ (ಸಂವೇದನಾಶೀಲ ಜೀವಿಗಳಿಗೆ) ರಕ್ಷಣೆ ನೀಡುತ್ತದೆ. 

ಆಶ್ರಯದ ಸುರಕ್ಷಿತ ದಿಕ್ಕನ್ನು ಪಾಲಿಸುವುದು

ಬೌದ್ಧ ಧರ್ಮದಲ್ಲಿ ಬುದ್ಧ, ಧರ್ಮ ಮತ್ತು ಸಂಘ ಎಂಬ ತ್ರಿರತ್ನಗಳ ಬಗ್ಗೆ ನಾವು ಬಹಳಷ್ಟು ಕೇಳುತ್ತೇವೆ. ಇವುಗಳಲ್ಲಿ ಮೊದಲನೆಯದು, ಧರ್ಮವನ್ನು ಬೋಧಿಸುವ ಎಲ್ಲಾ ಪ್ರಬುದ್ಧ ಜೀವಿಗಳನ್ನು ಒಳಗೊಂಡಿರುತ್ತದೆ. ಚತುರಾರ್ಯ ಸತ್ಯಗಳನ್ನು ಬೋಧಿಸುವ ಮೂಲಕ ವಾರಣಾಸಿಯಲ್ಲಿ ಧರ್ಮದ ಚಕ್ರವನ್ನು ಮೊದಲು ತಿರುಗಿಸಿದ ಬುದ್ಧ ಶಾಕ್ಯಮುನಿಯು ನಮಗೆ ಬಹಳಾ ಮುಖ್ಯವಾದವರು. ಈ ನಾಲ್ಕು ಸತ್ಯಗಳಲ್ಲಿ ಕೊನೆಯದಾದ ನಿಜವಾದ ಮಾರ್ಗಗಳು, ವಿಮೋಚನೆಯನ್ನು ಸಾಧಿಸಲು ಆಚರಿಸಬೇಕಾದ ಧರ್ಮವಾಗಿರುತ್ತದೆ. ಧರ್ಮದ ರತ್ನದ ವಿಷಯದಲ್ಲಿ, ಇದೇ ಆಶ್ರಯ ಸುರಕ್ಷಿತ ದಿಕ್ಕಿನಲ್ಲಿರುವ ವಸ್ತುವಾಗಿರುತ್ತದೆ. 

ಧರ್ಮಾಚರಣೆಯು ಎರಡು ವಿಷಯಗಳನ್ನು ಒಳಗೊಂಡಿರುತ್ತದೆ: ಸಂಸಾರಿಕ ದುಃಖದ ಮೂಲವನ್ನು ಗುರುತಿಸುವುದು ಮತ್ತು ಈ ಮೂಲವನ್ನು ನಿರ್ಮೂಲನೆ ಮಾಡುವುದು. ಪುನರಾವರ್ತಿತ ಅಸ್ತಿತ್ವದ ಮೂಲ ಯಾವುದು? ಇದು ನಿಜವಾಗಿಯೂ ಅಸ್ತಿತ್ವದಲ್ಲಿರುವ ಸ್ವಯಂ ಮತ್ತು ವಿದ್ಯಮಾನಗಳ ನಿಜವಾದ ಅಸ್ತಿತ್ವವನ್ನು ಗ್ರಹಿಸುವುದಾಗಿರುತ್ತದೆ. ನಮ್ಮ ಎಲ್ಲಾ ದುಃಖಗಳನ್ನು ಕರೆತರುವ ಈ ಗ್ರಹಿಕೆಯ ಬಗ್ಗೆ ನಾವು ವಿಕರ್ಷಣೆಯನ್ನು ಬೆಳೆಸಿಕೊಳ್ಳಬೇಕು. ನಿಜವಾದ ಅಸ್ತಿತ್ವವನ್ನು ಗ್ರಹಿಸಲು ಬೇಕಾದ ಪ್ರತಿವಿಷದ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕು. ಈ ಪ್ರತಿವಿಷವು ನಿಸ್ವಾರ್ಥತೆ ಅಥವಾ ಗುರುತಿಲ್ಲದಿರುವಿಕೆಯ (ವಿವೇಚನಾತ್ಮಕ ಅರಿವು) ಆಗಿರುತ್ತದೆ. ಈ ನಿಸ್ವಾರ್ಥತೆಯ ತಿಳುವಳಿಕೆಯೇ ನಮಗೆ ದುಃಖದಿಂದ ವಿಮೋಚನೆಯನ್ನು ತರುತ್ತದೆ. 

ಸಂಸಾರದಲ್ಲಿ ನಾವು ಅನುಭವಿಸುವ ಸಂಕಟಗಳು ಕಾರಣವಿಲ್ಲದೆ ಸಂಭವಿಸುವುದಿಲ್ಲ. ಗೊಂದಲದ ಭಾವನೆಗಳು ಮತ್ತು ವರ್ತನೆಗಳು (ಭ್ರಮೆಗಳು) ಮತ್ತು ಇವುಗಳಿಂದ ರಚಿಸಲ್ಪಟ್ಟ ಕರ್ಮದಿಂದ ಉದ್ಭವವಾಗುತ್ತವೆ. ಎಲ್ಲಾ ಗೊಂದಲದ ಭಾವನೆಗಳು ಮತ್ತು ವರ್ತನೆಗಳು ಮತ್ತು ಕರ್ಮದ ಮೂಲವು ‘ಸ್ವಯಂ’ ಎಂಬುದರ ಗ್ರಹಿಕೆಯಾಗಿರುತ್ತದೆ. ನಾವು ಇದನ್ನು ಅರ್ಥಮಾಡಿಕೊಂಡಾಗ, ಈ ಸ್ವಯಂನ ಗ್ರಹಿಕೆಗೆ ಪ್ರತಿವಿಷವನ್ನು ಪಡೆಯಲು ಬಯಸುತ್ತೇವೆ. ನಮ್ಮ ಮಾನಸಿಕ ನಿರಂತರತೆಯಲ್ಲಿ ಈ ಪ್ರತಿವಿಷವನ್ನು ಏಕೆ ಇನ್ನೂ ಅಭಿವೃದ್ಧಿಪಡಿಸಲಾಗಿಲ್ಲ? ನಾವು ನಿಸ್ವಾರ್ಥತೆಯನ್ನು ಏಕೆ ಅರ್ಥಮಾಡಿಕೊಳ್ಳುವುದಿಲ್ಲ? ಒಂದು ಕಾರಣವೆಂದರೆ ನಮಗೆ ಸಾವು ಮತ್ತು ಅಶಾಶ್ವತತೆಯ ಬಗ್ಗೆ ಸಾಕಷ್ಟು ಅರಿವಿರುವುದಿಲ್ಲ. 

ಸಾವು ಮತ್ತು ಅಶಾಶ್ವತತೆ 

ಜನನದ ಏಕೈಕ ಸಂಭವನೀಯ ಫಲಿತಾಂಶವು ಸಾವು. ನಾವು ವಿಧಿಯಿಲ್ಲದೆ ಮರಣ ಹೊಂದುತ್ತೇವೆ. ಸಾವಿನೊಂದಿಗೆ ಜೀವನ ಅಂತ್ಯಗೊಳ್ಳದ ಯಾವುದೇ ಜೀವಿ ಇಲ್ಲ. ಸಾವನ್ನು ಸಂಭವಿಸುವುದರಿಂದ ತಡೆಯಲು ಜನರು ಬಹಳಷ್ಟು ಕಷ್ಟ ಪಡುತ್ತಾರೆ, ಆದರೆ ಇದು ಅಸಾಧ್ಯ. ಯಾವ ಔಷಧಿಗೂ ನಮ್ಮನ್ನು ಸಾವಿನಿಂದ ಗುಣಪಡಿಸಲು ಸಾಧ್ಯವಾಗುವುದಿಲ್ಲ. 

ಕೇವಲ "ನಾನು ಸಾಯಲಿದ್ದೇನೆ" ಎಂದು ಯೋಚಿಸುವುದು, ಸಾವಿನ ಬಗ್ಗೆ ಆಲೋಚಿಸುವ ಸರಿಯಾದ ಮಾರ್ಗವಲ್ಲ. ಹೌದು, ಎಲ್ಲರೂ ಸಾಯುತ್ತಾರೆ, ಆದರೆ ಈ ಸತ್ಯದ ಬಗ್ಗೆ ಕೇವಲ ಯೋಚಿಸುವುದು ಬಹಳಾ ಪ್ರಭಾವಶಾಲಿಯಾಗಿರುವುದಿಲ್ಲ. ಇದು ಸರಿಯಾದ ವಿಧಾನವಲ್ಲ. ಅದೇ ರೀತಿಯಾಗಿ, ನಾವು ಕರಗಿಹೋಗುತ್ತೇವೆ ಮತ್ತು ಅಧೋಗತಿಗೊಳ್ಳುತ್ತೇವೆ, ನಮ್ಮ ದೇಹಗಳು ಕೊಳೆತು ಹೋಗುತ್ತವೆ ಎಂದು ಯೋಚಿಸುವುದು ಸಾಕಾಗುವುದಿಲ್ಲ. ನಮ್ಮ ಅಧಃಪತನವನ್ನು ಹೇಗೆ ತಡೆಯುವುದು ಎಂಬುದರ ಕುರಿತು ನಾವು ಯೋಚಿಸಬೇಕು.  

ಸಾವಿನ ಸಮಯದಲ್ಲಿ ಬರುವ ಭಯ ಮತ್ತು ಆ ಭಯವನ್ನು ಹೋಗಲಾಡಿಸುವುದು ಹೇಗೆ ಎಂಬುದರ ಕುರಿತು ಯೋಚಿಸಿದರೆ, ಸಾವಿನ ಬಗೆಗಿರುವ ನಮ್ಮ ಧ್ಯಾನವು ಪರಿಣಾಮಕಾರಿಯಾಗುತ್ತದೆ. ತಮ್ಮ ಜೀವನದಲ್ಲಿ ಬಹಳಷ್ಟು ನಕಾರಾತ್ಮಕ ಕರ್ಮಗಳನ್ನು ಸಂಗ್ರಹಿಸಿರುವ ಜನರು, ಸಾವಿನ ಸಮಯದಲ್ಲಿ ಬಹಳಾ ಭಯಭೀತರಾಗಿರುತ್ತಾರೆ. ಅವರು ಅಳುತ್ತಾರೆ, ಅವರ ಕೆನ್ನೆಗಳ ಮೇಲೆ ಕಣ್ಣೀರು ಹರಿಯುತ್ತದೆ, ಅವರ ಬಾಯಿಂದ ಜೊಲ್ಲು ಸುರಿಯುತ್ತದೆ, ಅವರು ತಮ್ಮ ಬಟ್ಟೆಯಲ್ಲೇ ಮಲವಿಸರ್ಜನೆ ಮಾಡುತ್ತಾರೆ ಮತ್ತು ಸಂಪೂರ್ಣವಾಗಿ ಸೋತುಹೋಗುತ್ತಾರೆ. ಜೀವನದಲ್ಲಿ ಎಸಗಿದ ನಕಾರಾತ್ಮಕ ಕ್ರಿಯೆಗಳಿಂದ ಉಂಟಾಗುವ ಭಯದಿಂದಾಗಿ ಸಾವಿನ ಸಮಯದಲ್ಲಿ ಸಂಭವಿಸುವ ದುಃಖದ ಸ್ಪಷ್ಟ ಚಿಹ್ನೆಗಳು ಇವು. 

ಪರ್ಯಾಯವಾಗಿ, ನಮ್ಮ ಜೀವಿತಾವಧಿಯಲ್ಲಿ ನಾವು ನಕಾರಾತ್ಮಕ ಕ್ರಿಯೆಗಳಿಂದ ದೂರವಿದ್ದರೆ, ಸಾವಿನ ಸಮಯವನ್ನು ಎದುರಿಸುವುದು ಬಹಳಾ ಸುಲಭ. ಒಂದು ಮಗುವು ತನ್ನ ತಂದೆ ತಾಯಿಯ ಮನೆಗೆ ಹೋಗುವಾಗ ಪಡುವ ಸಂತೋಷದ ಅನುಭವವನ್ನು ಅದು ನೀಡುತ್ತದೆ. ನಾವು ನಮ್ಮನ್ನು ಶುದ್ಧೀಕರಿಸಿದರೆ, ನಾವು ಸಂತೋಷದಿಂದ ಸಾಯಬಹುದು. ಹತ್ತು ನಕಾರಾತ್ಮಕ ಮಾರ್ಗಗಳಿಂದ ದೂರವಿದ್ದು, ಅವುಗಳ ವಿರೋಧಾಭಾಸಗಳಾದ ಹತ್ತು ರಚನಾತ್ಮಕ ಕ್ರಿಯೆಗಳನ್ನು ಬೆಳೆಸಿಕೊಳ್ಳುವುದರಿಂದ, ನಮ್ಮ ಸಾವುಗಳು ಸುಲಭವಾಗುತ್ತವೆ ಮತ್ತು ನಾವು ದುಃಖದ ಸ್ಥಿತಿಯಾದ ಪುನರ್ಜನ್ಮವನ್ನು ಅನುಭವಿಸಬೇಕಾಗಿಲ್ಲ. ಹೆಚ್ಚು ಅದೃಷ್ಟವಂತ ಸ್ಥಿತಿಗಳಲ್ಲಿ ಪುನರ್ಜನ್ಮ ಪಡೆಯುವುದರ ಮೇಲೆ ನಾವು ಭರವಸೆ ಇರಿಸಬಹುದು. ಔಷಧೀಯ ಸಸ್ಯಗಳ ಬೀಜಗಳನ್ನು ಬಿತ್ತುವುದರಿಂದ ನಾವು ಔಷಧೀಯ ಶಕ್ತಿಯುಳ್ಳ ಮರಗಳನ್ನು ಪಡೆಯುತ್ತೇವೆ, ವಿಷಕಾರಿ ಮರಗಳ ಬೀಜಗಳನ್ನು ಬಿತ್ತುವುದರಿಂದ ನಾವು ಹಾನಿಕಾರಕ ಹಣ್ಣುಗಳನ್ನು ಮಾತ್ರ ಉತ್ಪಾದಿಸುತ್ತೇವೆ. ನಾವು ನಮ್ಮ ಪ್ರಜ್ಞೆಯ ಆಧಾರದ ಮೇಲೆ ರಚನಾತ್ಮಕ ಕ್ರಿಯೆಗಳ ಬೀಜಗಳನ್ನು ನೆಟ್ಟರೆ, ಭವಿಷ್ಯದ ಪುನರ್ಜನ್ಮಗಳಲ್ಲಿ ನಾವು ಸಂತೋಷವನ್ನು ಅನುಭವಿಸುತ್ತೇವೆ. ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಅದೃಷ್ಟಕಾರಿ ಸಂದರ್ಭಗಳನ್ನು ಅನುಭವಿಸುತ್ತೇವೆ. ಧರ್ಮದ ಈ ಮೂಲಭೂತ ಬೋಧನೆ - ವಿನಾಶಕಾರಿ ಕಾರ್ಯಗಳನ್ನು ತಪ್ಪಿಸಿ, ರಚನಾತ್ಮಕವಾದವುಗಳನ್ನು ಬೆಳೆಸಿಕೊಳ್ಳುವುದು - ಬೌದ್ಧಧರ್ಮದಲ್ಲಿ ಮಾತ್ರವಲ್ಲದೆ ಕ್ರಿಶ್ಚಿಯನ್ ಧರ್ಮ ಸೇರಿದಂತೆ ಇತರ ಅನೇಕ ಧರ್ಮಗಳಲ್ಲಿಯೂ ನೀಡಲಾಗುತ್ತದೆ. 

ನಾವು ಸಾವು ಮತ್ತು ಅಶಾಶ್ವತತೆಯನ್ನು ಹೇಗೆ ಪರಿಗಣಿಸುತ್ತೇವೆ? ಮೊದಲೇ ಹೇಳಿದಂತೆ, "ನಾನು ಸಾಯುತ್ತೇನೆ" ಎಂದು ಯೋಚಿಸುವುದು ಬಹಳಾ ಪ್ರಯೋಜನಕಾರಿಯಾಗಿರುವುದಿಲ್ಲ. ನಾವು ಹೀಗೆ ಯೋಚಿಸಬೇಕಾಗಿದೆ: “ನಾನು ಹತ್ತು ವಿನಾಶಕಾರಿ ಕ್ರಿಯೆಗಳಲ್ಲಿ ಯಾವುದನ್ನಾದರೂ ಎಸಗಿದ್ದರೆ, ಮರಣದ ಸಮಯದಲ್ಲಿ ನಾನು ಬಹಳ ಭಯ ಮತ್ತು ದುಃಖವನ್ನು ಎದುರಿಸಬೇಕಾಗುತ್ತದೆ ಮತ್ತು ಅದರ ಪರಿಣಾಮವಾಗಿ, ಬಹಳಾ ದುರದೃಷ್ಟಕರ ಮರುಜನ್ಮವನ್ನು ಪಡೆಯುವಂತೆ ವಿಕಸನಗೊಳ್ಳುತ್ತೇನೆ. ಮತ್ತೊಂದೆಡೆ, ನನ್ನ ಜೀವನದಲ್ಲಿ ನಾನು ಸಕಾರಾತ್ಮಕ ಶಕ್ತಿಯನ್ನು (ಪುಣ್ಯ) ರಚಿಸಿದ್ದರೆ, ಸಾವಿನಲ್ಲಿ ನಾನು ಭಯ ಅಥವಾ ದುಃಖವನ್ನು ಅನುಭವಿಸುವುದಿಲ್ಲ ಮತ್ತು ಹೆಚ್ಚು ಅದೃಷ್ಟಕರ ಸ್ಥಿತಿಯಲ್ಲಿ ಮರುಜನ್ಮ ಪಡೆಯುತ್ತೇನೆ.” ಇದು ಸಾವಿನ ಬಗ್ಗೆ ಯೋಚಿಸುವ ಸರಿಯಾದ ಮಾರ್ಗವಾಗಿರುತ್ತದೆ. 

ಈ ಧ್ಯಾನವು, “ನಾನು ಸಾಯಲಿದ್ದೇನೆ ಮತ್ತು ಅದರ ಬಗ್ಗೆ ನನಗೆ ಏನೂ ಮಾಡಲು ಸಾಧ್ಯವಿಲ್ಲ." ಎಂದು ಕತ್ತಲೆಯಿಂದ ಕೂಡಿದ, ನಿರಾಶಾವಾದದ ಆಲೋಚನೆಯಾಗಿರಬೇಕಾಗಿಲ್ಲ, ಬದಲಿಗೆ, ನಾವು ಸತ್ತಾಗ ಏನಾಗುತ್ತದೆ ಎಂಬುದರ ಕುರಿತು ನಾವು ಯೋಚಿಸಬೇಕು. “ಸಾವಿನ ನಂತರ ನಾನು ಎಲ್ಲಿಗೆ ಹೋಗುತ್ತೇನೆ? ನಾನು ಯಾವ ರೀತಿಯ ಕಾರಣಗಳನ್ನು ರಚಿಸಿದ್ದೇನೆ? ನಾನು ಸಂತೋಷವಾಗಿ ಸಾವನಪ್ಪಬಹುದೇ? ಅದು ಹೇಗೆ? ನನ್ನ ಭವಿಷ್ಯದ ಪುನರ್ಜನ್ಮಗಳನ್ನು ನಾನು ಸಂತೋಷಪಡಿಸಬಹುದೇ? ಹೇಗೆ?” 

ಭವಿಷ್ಯದ ಪುನರ್ಜನ್ಮಗಳನ್ನು ಆಲೋಚಿಸುವಾಗ, ಸಂಸಾರದಲ್ಲಿ ವಿಶ್ವಾಸಾರ್ಹವಾದ ಯಾವುದೇ ಜಾಗವಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಯಾವುದೇ ದೇಹವನ್ನು ಪಡೆದರೂ, ಅದು ಅಂತಿಮವಾಗಿ ಸಾವನಪ್ಪಬೇಕು. ನೂರು ಅಥವಾ ಸಾವಿರ ವರ್ಷಗಳ ಕಾಲ ಬದುಕಿದ ಜನರ ಬಗ್ಗೆ ಇತಿಹಾಸದಲ್ಲಿ ನಾವು ಓದುತ್ತೇವೆ. ಅದು ಎಷ್ಟೇ ಅದ್ಭುತವಾಗಿದ್ದರೂ, ಅಂತಿಮವಾಗಿ ಸಾವನ್ನಪ್ಪದ ವ್ಯಕ್ತಿಯ ಯಾವುದೇ ಪ್ರಕರಣವಿಲ್ಲ. ನಾವು ಗಳಿಸುವ ಯಾವುದೇ ರೀತಿಯ ಸಂಸಾರಿಕ ದೇಹವು ಮರಣ ಹೊಂದುತ್ತದೆ.  

ಸಾವಿನಿಂದ ತಪ್ಪಿಸಿಕೊಳ್ಳಲು ನಾವು ಹೋಗಬಹುದಾದ ಯಾವ ಸ್ಥಳವೂ ಇಲ್ಲ. ಎಲ್ಲೇ ಇದ್ದರೂ, ಸಮಯ ಬಂದಾಗ ನಾವು ಸಾಯಲೇಬೇಕು. ಆಗ ಯಾವುದೇ ಔಷಧಿ, ಮಂತ್ರ, ಅಥವಾ ಅಭ್ಯಾಸವು ಸಹಾಯ ಮಾಡುವುದಿಲ್ಲ. ಶಸ್ತ್ರಚಿಕಿತ್ಸಾ ಕಾರ್ಯಾಚರಣೆಗಳು ನಮ್ಮ ದೇಹದಲ್ಲಿನ ಕೆಲವು ರೀತಿಯ ಕಾಯಿಲೆಗಳನ್ನು ಗುಣಪಡಿಸಬಹುದು, ಆದರೆ ಸಾವನ್ನು ತಡೆಯಲು ಸಾಧ್ಯವಿಲ್ಲ.  

ನಾವು ಯಾವುದೇ ರೀತಿಯ ಪುನರ್ಜನ್ಮವನ್ನು ಪಡೆದರೂ ಅದು ಮರಣ ಹೊಂದುತ್ತದೆ. ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ನಮ್ಮ ಕ್ರಿಯೆಗಳ ದೀರ್ಘಾವಧಿಯ ಪರಿಣಾಮಗಳನ್ನು ಮತ್ತು ಜನನ, ಜೀವನ, ಮರಣ ಮತ್ತು ಪುನರ್ಜನ್ಮದ ಪ್ರಕ್ರಿಯೆಯು ಹೇಗೆ ನಿರಂತರವಾಗಿದೆ ಎಂಬುದನ್ನು ಆಲೋಚಿಸುವುದು ಹೆಚ್ಚು ಸಕಾರಾತ್ಮಕ ಕರ್ಮವನ್ನು ಉತ್ಪಾದಿಸಲು ನಮಗೆ ಸಹಾಯ ಮಾಡುತ್ತದೆ. 

ನಾವು ಕೆಲವೊಮ್ಮೆ ಧರ್ಮವನ್ನು ಆಚರಿಸಲು ಯೋಜಿಸಿದ್ದರೂ, ನಾವು ಸಾಮಾನ್ಯವಾಗಿ ನಾಳೆ ಅಥವಾ ಮರುದಿನ ಅದನ್ನು ಪಾಲಿಸುವಂತೆ ಯೋಚಿಸುತ್ತೇವೆ. ಆದರೆ ನಾವು ಯಾವಾಗ ಸಾಯುತ್ತೇವೆ ಎಂದು ನಮ್ಮಲ್ಲಿ ಯಾರಿಗೂ ಹೇಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ನಮಗೆ ಬದುಕಲು ನೂರು ವರ್ಷಗಳು ಉಳಿದಿವೆ ಎಂಬ ವಿಶ್ವಾಸವಿದ್ದರೆ, ನಮ್ಮ ಅಭ್ಯಾಸವನ್ನು ವ್ಯವಸ್ಥೆಗೊಳಿಸಲು ನಾವು ಮುಕ್ತರಾಗಿರುತ್ತೇವೆ. ಆದರೆ ನಾವು ಯಾವಾಗ ಸಾಯುತ್ತೇವೆ ಎಂಬುದರ ಬಗ್ಗೆ ನಮಗೆ ಸ್ವಲ್ಪವೂ ಖಚಿತತೆಯಿಲ್ಲ. ನಮ್ಮ ಅಭ್ಯಾಸವನ್ನು ಮುಂದೂಡುವುದು ಬಹಳಾ ಮೂರ್ಖತನದ ಕೆಲಸವಾಗಿರುತ್ತದೆ. ಕೆಲವರು ಹುಟ್ಟುವ ಮೊದಲೇ ಗರ್ಭದಲ್ಲಿ ಸಾಯುತ್ತಾರೆ, ಇನ್ನೂ ಕೆಲವರು ನಡೆಯಲು ಕಲಿಯುವ ಮೊದಲೇ ಚಿಕ್ಕ ಮಕ್ಕಳಾಗಿರುವಾಗ ಸಾಯುತ್ತಾರೆ. ನಾವು ಸುದೀರ್ಘ ಜೀವನವನ್ನು ನಡೆಸಲಿದ್ದೇವೆ ಎಂಬುದನ್ನು ಅದು ಅನುಸರಿಸುವುದಿಲ್ಲ. 

ನಮ್ಮ ದೇಹವು ಬಹಳಾ ದುರ್ಬಲವಾಗಿರುತ್ತವೆ. ಅವುಗಳು ಕಲ್ಲು ಅಥವಾ ಕಬ್ಬಿಣದಿಂದ ಮಾಡಲ್ಪಟ್ಟಿದ್ದರೆ, ಬಹುಶಃ ಅವುಗಳಿಗೆ ಒಂದು ರೀತಿಯ ಸ್ಥಿರತೆಯಿರಬಹುದಿತ್ತು. ಆದರೆ ನಾವು ವಿಚಾರಣೆ ನಡೆಸಿದರೆ, ಮಾನವ ದೇಹವು ಬಹಳಾ ದುರ್ಬಲವಾಗಿದೆ ಎಂದು ನೋಡುತ್ತೇವೆ. ಅದರೊಂದಿಗೆ ಏನಾದರೂ ಗಡಿಬಿಡಿಯಾಗುವುದು ಬಹಳಾ ಸುಲಭ. ಇದು ಅಸಂಖ್ಯಾತವಾದ, ಚಿಕ್ಕದಾದ ದುರ್ಬಲವಾದ ಭಾಗಗಳಿಂದ ನಿರ್ಮಿತವಾದ ಸೂಕ್ಷ್ಮವಾದ ಕೈಗಡಿಯಾರದಂತಿರುತ್ತದೆ. ಅದರ ಮೇಲೆ ವಿಶ್ವಾಸವಿಡಬಾರದು. ನಮ್ಮ ಸಾವಿಗೆ ಕಾರಣವಾಗುವ ಅನೇಕ ಸಂದರ್ಭಗಳಿವೆ: ಆಹಾರ ವಿಷ, ಸಣ್ಣ ಕೀಟವೊಂದರ ಕಡಿತ ಅಥವಾ ವಿಷಕಾರಿ ಮುಳ್ಳಿನ ಚುಚ್ಚುವಿಕೆ. ಅಂತಹ ಸಣ್ಣ ಪರಿಸ್ಥಿತಿಗಳು ನಮ್ಮನ್ನು ಕೊಲ್ಲಬಹುದು. ನಮ್ಮ ಜೀವನವನ್ನು ವಿಸ್ತರಿಸಲು ನಾವು ಬಳಸುವ ಆಹಾರ ಮತ್ತು ದ್ರವ್ಯಗಳು ಅದನ್ನು ಕೊನೆಗೊಳಿಸುವ ಸಂದರ್ಭಗಳಾಗಿ ಪರಿಣಮಿಸಬಹುದು. ನಾವು ಯಾವಾಗ ಸಾಯುತ್ತೇವೆ ಅಥವಾ ಯಾವ ಸಂದರ್ಭಗಳು ನಮ್ಮ ಸಾವಿಗೆ ಕಾರಣವಾಗುತ್ತವೆ ಎಂಬುದರ ಬಗ್ಗೆ ನಮಗೆ ಯಾವುದೇ ಖಚಿತತೆಯಿಲ್ಲ. 

ನಾವು ನೂರು ವರ್ಷಗಳ ಕಾಲ ಬದುಕುತ್ತೇವೆ ಎಂಬುದರ ಬಗ್ಗೆ ಖಚಿತತೆಯಿದ್ದರೂ, ಆ ಅವಧಿಯ ಹಲವು ವರ್ಷಗಳು ಈಗಾಗಲೇ ಕಳೆದುಹೋಗಿವೆ ಮತ್ತು ನಾವು ಹೆಚ್ಚಿನದ್ದೇನೂ ಸಾಧಿಸಿಲ್ಲ. ರೈಲ್ವೇ ಗಾಡಿಯಲ್ಲಿ ಮಲಗಿರುವ ವ್ಯಕ್ತಿಯಂತೆ ನಾವು ಸಾವನ್ನು ಸಮೀಪಿಸುತ್ತೇವೆ, ನಿರಂತರವಾಗಿ ಗಮ್ಯಸ್ಥಾನಕ್ಕೆ ಹತ್ತಿರವಾಗುತ್ತಿರುತ್ತೇವೆ, ಆದರೆ ಅದರ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಈ ಪ್ರಕ್ರಿಯೆಯನ್ನು ನಿಲ್ಲಿಸಲು ನಮಗೆ ಹೆಚ್ಚೇನು ಮಾಡಲಾಗುವುದಿಲ್ಲ. ನಾವು ನಿರಂತರವಾಗಿ ಸಾವನ್ನು ಸಮೀಪಿಸುತ್ತಿರುತ್ತೇವೆ. 

ನಮ್ಮ ಜೀವಿತಾವಧಿಯಲ್ಲಿ ನಾವು ಎಷ್ಟೇ ಹಣ, ಆಭರಣ, ಮನೆ ಅಥವಾ ಬಟ್ಟೆಗಳನ್ನು ಸಂಗ್ರಹಿಸಿದ್ದರೂ, ನಮ್ಮ ಮರಣದ ಸಮಯದಲ್ಲಿ ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ. ಸಾಯುವಾಗ ನಾವು ಬರಿಗೈಯಲ್ಲಿ ಹೋಗಬೇಕಾಗುತ್ತದೆ. ಚಿಕ್ಕದೊಂದು ವಸ್ತುವನ್ನು ಸಹ ನಮ್ಮೊಂದಿಗೆ ತೆಗೆದುಕೊಂಡು ಹೋಗಲಾಗುವುದಿಲ್ಲ. ದೇಹವನ್ನೇ ನಾವು ಹಿಂದೆ ಬಿಡಬೇಕು. ದೇಹ ಮತ್ತು ಮನಸ್ಸು ಬೇರೆಯಾಗುತ್ತವೆ ಮತ್ತು ಮನಸ್ಸಿನ ಹರಿವು ತಾನಾಗಿ ಮುಂದುವರಿಯುತ್ತದೆ. ನಮ್ಮ ಸ್ವಾಧೀನದಲ್ಲಿರುವ ವಸ್ತುಗಳನ್ನು ಮಾತ್ರವಲ್ಲ, ನಮ್ಮ ದೇಹವನ್ನು ಸಹ ತೆಗೆದುಕೊಂಡು ಹೋಗಲಾಗುವುದಿಲ್ಲ. 

ಕರ್ಮ 

ಸಾವಿನ ನಂತರ ಪ್ರಜ್ಞೆಯ ಸಂಗಾತಿಯು ಯಾವುದಾಗಿರುತ್ತದೆ? ನಾವು ನಮ್ಮ ದೇಹಗಳನ್ನು, ನಮ್ಮ ಸ್ನೇಹಿತರನ್ನು ಮತ್ತು ನಮ್ಮ ಆಸ್ತಿಯನ್ನು ಬಿಡಬೇಕಾದರೆ, ಸಾವಿನ ನಂತರದ ಮುಂದಿನ ಜೀವನದಲ್ಲಿ, ನಮ್ಮ ಪ್ರಜ್ಞೆಯ ಸಹಾಯಕರಾಗಿ ಅನುಸರಿಸುವ ಯಾವ ವಿಷಯವಾದರೂ ಇರುತ್ತದೆಯೇ?

ಸಾವಿನ ನಂತರ ಪ್ರಜ್ಞೆಯನ್ನು ಅನುಸರಿಸುವ ಒಂದು ವಿಷಯವಿದೆ: ಈ ಜೀವಿತಾವಧಿಯಲ್ಲಿ ನಾವು ನಿರ್ಮಿಸಿದ ಕರ್ಮ ಪರಂಪರೆಗಳು (ಬೀಜಗಳು). ನಾವು ಹತ್ತು ನಕಾರಾತ್ಮಕ ಕರ್ಮ ಕ್ರಿಯೆಗಳಲ್ಲಿ ಯಾವುದನ್ನಾದರೂ ಎಸಗಿದ್ದರೆ, ನಕಾರಾತ್ಮಕ ಕರ್ಮದ ಪರಂಪರೆ ಅಥವಾ ಕರ್ಮದ ಸಾಲವು ನಮ್ಮ ಭವಿಷ್ಯದ ಪುನರ್ಜನ್ಮಗಳಿಗೆ ಹರಿಯುವ ನಮ್ಮ ಮಾನಸಿಕ ನಿರಂತರತೆಗಳೊಂದಿಗೆ ಇರುತ್ತವೆ. ಇತರ ಜೀವಿಗಳನ್ನು ಕೊಲ್ಲುವುದರಿಂದ, ಇತರರ ಆಸ್ತಿಯನ್ನು ಕದಿಯುವುದರಿಂದ ಅಥವಾ ಲೈಂಗಿಕ ದುಷ್ಕೃತ್ಯಗಳಲ್ಲಿ ತೊಡಗುವುದರಿಂದ, ದೇಹದ ಈ ವಿನಾಶಕಾರಿ ಕ್ರಿಯೆಗಳನ್ನು ನಕಾರಾತ್ಮಕ ಕರ್ಮ ಪರಂಪರೆಗಳಾಗಿ ಮನಸ್ಸಿನಲ್ಲಿ ಇರಿಸಲಾಗುತ್ತದೆ. ಸುಳ್ಳು ಹೇಳುವುದರಿಂದ, ಇತರರನ್ನು ನಿಂದಿಸುವುದರಿಂದ ಮತ್ತು ಜನರಲ್ಲಿ ಭಿನ್ನಾಭಿಪ್ರಾಯವನ್ನು ಉಂಟುಮಾಡುವುದರಿಂದ, ಇತರರಿಗೆ ಪದಗಳಿಂದ ನೋವುಂಟುಮಾಡುವುದರಿಂದ ಅಥವಾ ಅರ್ಥಹೀನವಾಗಿ ಮಾತನಾಡುವುದರಿಂದ, ಈ ನಕಾರಾತ್ಮಕ ಮಾತುಗಳ ನಕಾರಾತ್ಮಕ ಕರ್ಮ ಋಣಗಳು, ಮರಣದ ಸಮಯದಲ್ಲಿ ನಮ್ಮೊಂದಿಗೆ ಪ್ರಯಾಣಿಸುತ್ತವೆ. ನಾವು ಬಹಳಷ್ಟು ದುರಾಸೆಯ ಆಲೋಚನೆಗಳನ್ನು ಹೊಂದಿದ್ದರೆ, ಆಗಾಗ್ಗೆ ಇತರರ ಆಸ್ತಿಯನ್ನು ಬಯಸಿದ್ದರೆ; ನಾವು ಇತರರ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಿದ್ದರೆ, ಅವರಿಗೆ ಹಾನಿಯಾಗಲಿ ಅಥವಾ ಅವರಿಗೆ ಏನಾದರೂ ಕೆಟ್ಟದು ಸಂಭವಿಸಲಿ ಎಂದು ಬಯಸಿದ್ದರೆ; ಅಥವಾ "ಹಿಂದಿನ ಅಥವಾ ಭವಿಷ್ಯದ ಜೀವನಗಳಿಲ್ಲ," "ಕಾರಣ ಮತ್ತು ಪರಿಣಾಮದಂತಹ ವಿಷಯಗಳಿಲ್ಲ," "ಆಶ್ರಯದ ಸುರಕ್ಷಿತ ದಿಕ್ಕಿನಂತಹ ವಿಷಯವಿಲ್ಲ" ಎಂಬಂತಹ ವಿಕೃತವಾದ, ವಿರೋಧಾತ್ಮಕ ರೀತಿಯಲ್ಲಿ ನಾವು ಯೋಚಿಸಿದ್ದರೆ, ಈ ವಿನಾಶಕಾರಿ ರೀತಿಯ ಮನಸ್ಸಿನ ಕ್ರಿಯೆಗಳು ನಕಾರಾತ್ಮಕ ಕರ್ಮ ಪರಂಪರೆಗಳನ್ನು ಹುಟ್ಟುಹಾಕುತ್ತವೆ ಮತ್ತು ಅವು ನಮ್ಮ ಮನಸ್ಸನ್ನು ಭವಿಷ್ಯದ ಪುನರ್ಜನ್ಮಗಳಿಗೆ ನಿರ್ದೇಶಿಸುತ್ತವೆ. 

ಇದರ ವ್ಯತಿರಿಕ್ತವೂ ನಿಜವಾಗಿರುತ್ತದೆ. ನಾವು ಸಕಾರಾತ್ಮಕ ಕ್ರಿಯೆಗಳಲ್ಲಿ ತೊಡಗಿದ್ದರೆ ಮತ್ತು ನಕಾರಾತ್ಮಕತೆಯನ್ನು ಸೃಷ್ಟಿಸುವುದರಿಂದ ದೂರವಿದ್ದರೆ, ಅಂತಹ ಸಕಾರಾತ್ಮಕ ಶಕ್ತಿಯ ಕರ್ಮ ಪರಂಪರೆಗಳು ನಮ್ಮ ಮನಸ್ಸಿನ ಝರಿಯಲ್ಲಿ ಹರಿಯುತ್ತವೆ ಮತ್ತು ನಮ್ಮ ಮುಂದಿನ ಜೀವನದಲ್ಲಿ ಉತ್ತಮ ಸನ್ನವೇಶಗಳನ್ನು ಹುಟ್ಟುಹಾಕುತ್ತವೆ. 

ನಮ್ಮ ಪರಿಸ್ಥಿತಿಯ ಬಗ್ಗೆ ನಾವು ನಿಜವಾಗಿಯೂ ಯೋಚಿಸಿದಾಗ, ಸಕಾರಾತ್ಮಕ ಕರ್ಮವನ್ನು ಸೃಷ್ಟಿಸಲು ಮತ್ತು ಅದರ ವಿರುದ್ಧತೆಯನ್ನು ನಿವಾರಿಸಲು ನಾವು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಲು ನಿರ್ಧರಿಸುತ್ತೇವೆ. ನಮ್ಮ ಮುಂದಿನ ಜೀವನದಲ್ಲಿ ತೀರಿಸಬೇಕಾದ ಚಿಕ್ಕ ಚಿಕ್ಕ ಋಣಗಳನ್ನು ಸಹ ಬಿಡದೆ, ನಮ್ಮನ್ನು ನಕಾರಾತ್ಮಕತೆಯಿಂದ ಸಾಧ್ಯವಾದಷ್ಟು ಶುದ್ಧೀಕರಿಸಲು ಪ್ರಯತ್ನಿಸಬೇಕು. 

ಕಾರಣ ಮತ್ತು ಪರಿಣಾಮದ ಸೂತ್ರದೊಳಗೆ ಯಾವ ರೀತಿಯ ಪ್ರತಿಕ್ರಿಯೆಗಳು ಸಂಭವಿಸಬಹುದು ಎಂಬುದನ್ನು ನಾವು ಗಮನಿಸಬೇಕು. ಬಹಳ ಒಳ್ಳೆಯ ಗುಣಗಳಿಂದ ಕೂಡಿದ ಆದರೆ ಮಾತಿನಲ್ಲಿ ಕಠೋರವಾಗಿದ್ದ ವ್ಯಕ್ತಿಯೊಬ್ಬರ ಕಥೆಯೊಂದಿದೆ. ಅವರು ಇನ್ನೊಬ್ಬರನ್ನು ನಿಂದಿಸುತ್ತಾ, "ನೀನು ನಾಯಿಯಂತೆ ಮಾತನಾಡುತ್ತಿರುವೆ" ಎಂದು ಹೇಳಿದರು. ಪರಿಣಾಮವಾಗಿ, ಅವರೇ ಐನೂರು ಬಾರಿ ನಾಯಿಯಾಗಿ ಮರುಜನ್ಮ ಪಡೆದರು. ಚಿಕ್ಕದಾಗಿ ಕಾಣುವ ಕ್ರಿಯೆಯು ಬಹಳ ದೊಡ್ಡ ಫಲಿತಾಂಶಗಳಿಗೆ ಕಾರಣವಾಗಬಹುದು. 

ಅಂತೆಯೇ, ಒಂದು ಸಣ್ಣ ಸಕಾರಾತ್ಮಕ ಕ್ರಿಯೆಯು ಉತ್ತಮ ಫಲಿತಾಂಶವನ್ನು ನೀಡಬಹುದು. ಒಂದು ಚಿಕ್ಕ ಮಗುವು ಬುದ್ಧನಿಗೆ ವಿನಮ್ರವಾದ ಅರ್ಪಣೆ ಮಾಡಿದ ಮತ್ತು ಅದರ ಪರಿಣಾಮವಾಗಿ, ಸಾವಿರಾರು ಬೌದ್ಧ ಸ್ಮಾರಕಗಳನ್ನು ನಿರ್ಮಿಸಿದ ಮತ್ತು ಲೆಕ್ಕವಿಲ್ಲದಷ್ಟು ಭವ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಹಾನ್ ರಾಜನಾದ ಅಶೋಕನಾಗಿ ಮರುಜನ್ಮ ಪಡೆದ ಕಥೆಯೂ ಇದೆ. 

ತ್ಯಾಗ ಮತ್ತು ಸಹಾನುಭೂತಿ 

ನಾವೆಸಗಿದ ವಿವಿಧ ರೀತಿಯ ವಿನಾಶಕಾರಿ ಕ್ರಿಯೆಗಳನ್ನು ಮತ್ತು ಅವುಗಳ ಫಲಿತಾಂಶಗಳನ್ನು ಆಲೋಚಿಸುವುದು ನಮ್ಮ ಹಿತ ಮತ್ತು ಸಂತೋಷವನ್ನು ಖಚಿತಪಡಿಸಿಕೊಳ್ಳುವ ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿರುತ್ತದೆ. ನಮ್ಮ ನಕಾರಾತ್ಮಕತೆಯ ಪರಿಣಾಮವಾಗಿ ನಾವೇ ಅನುಭವಿಸಬೇಕಾದ ಸಂಕಟಗಳ ಬಗ್ಗೆ ಯೋಚಿಸುವುದರಿಂದ ಮತ್ತು ಈ ರೀತಿಯ ದುಃಖವನ್ನು ಅನುಭವಿಸಬಾರದು ಎಂಬ ಬಲವಾದ ಬಯಕೆ ಹುಟ್ಟಿದರೆ, ನಾವು "ತ್ಯಾಗ" ಎಂಬುದನ್ನು ಅಭಿವೃದ್ಧಿಪಡಿಸಿರುತ್ತೇವೆ.  

ಈ ರೀತಿಯ ಆಲೋಚನೆಯೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳುವುದೇ ಒಂದು ರೀತಿಯ ಧ್ಯಾನವಾಗಿರುತ್ತದೆ. ಮೊದಲನೆಯದಾಗಿ, ನಾವು ನಮ್ಮ ಸ್ವಂತ ದುಃಖದ ಬಗ್ಗೆ ಸಾವಧಾನತೆಯನ್ನು ಬೆಳೆಸಿಕೊಳ್ಳಬೇಕು; ನಂತರ ಈ ಸಾವಧಾನತೆಯನ್ನು ಎಲ್ಲಾ ಜೀವಿಗಳಿಗೆ ವಿಸ್ತರಿಸಬೇಕು. ಎಲ್ಲಾ ಜೀವಿಗಳು ಯಾವುದೇ ರೀತಿಯ ದುಃಖವನ್ನು ಅನುಭವಿಸಲು ಬಯಸುವುದಿಲ್ಲ, ಆದರೂ ಎಲ್ಲರೂ ಹೇಗೆ ದುಃಖದ ಬಲೆಯಲ್ಲಿ ಸಿಲುಕಿಕೊಂಡಿರುವರು ಎಂಬುದನ್ನು ಪರಿಗಣಿಸಿ. ಈ ರೀತಿಯ ಚಿಂತನೆಯು ನಮ್ಮನ್ನು ಸಹಾನುಭೂತಿಯೆಡೆಗೆ ಕೊಂಡೊಯ್ಯುತ್ತದೆ. ನಾವೇ ನಮ್ಮ ಎಲ್ಲಾ ದುಃಖಗಳಿಂದ ಮುಕ್ತರಾಗುವ ಬಯಕೆಯನ್ನು ಬೆಳೆಸಿಕೊಳ್ಳದಿದ್ದರೆ, ಇತರ ಜೀವಿಗಳು ತಮ್ಮ ದುಃಖದಿಂದ ಮುಕ್ತರಾಗಬೇಕೆಂಬ ಬಯಕೆಯನ್ನು ನಾವು ಹೇಗೆ ತಾನೆ ಬೆಳೆಸಿಕೊಳ್ಳಲು ಸಾಧ್ಯ? ನಮ್ಮ ಎಲ್ಲಾ ದುಃಖಗಳನ್ನು ನಾವು ಕೊನೆಗೊಳಿಸಬಹುದು, ಆದರೆ ಅಂತಿಮವಾಗಿ ಇದು ಅಷ್ಟಾಗಿ ಪ್ರಯೋಜನಕಾರಿಯಾಗಿರುವುದಿಲ್ಲ. ಸಂತೋಷವನ್ನು ಬಯಸುವ ಎಲ್ಲಾ ಜೀವಿಗಳಿಗೂ ಈ ಆಶಯವನ್ನು ವಿಸ್ತರಿಸಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ದುಃಖಗಳಿಂದ ಸಂಪೂರ್ಣವಾಗಿ ಬೇರೆಯಾಗಬೇಕೆಂಬ ಬಯಕೆಯನ್ನು ಬೆಳೆಸಿಕೊಳ್ಳಲು ನಾವು ನಮ್ಮ ಮನಸ್ಸನ್ನು ತರಬೇತಿಗೊಳಿಸಬಹುದು. ಇದು ಹೆಚ್ಚು ವಿಶಾಲವಾದ ಮತ್ತು ಹೆಚ್ಚು ಪ್ರಯೋಜನಕಾರಿಯಾದ ಚಿಂತನೆಯಾಗಿರುತ್ತದೆ. 

ನಾವು ಇತರ ಜೀವಿಗಳ ಬಗ್ಗೆ ಏಕೆ ಕಾಳಜಿ ವಹಿಸಬೇಕು? ಏಕೆಂದರೆ ನಾವು ಇತರರಿಂದ ಬಹಳಷ್ಟನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ, ನಾವು ಕುಡಿಯುವ ಹಾಲು ಹಸುಗಳು ಮತ್ತು ಎಮ್ಮೆಗಳ ದಯೆಯಿಂದ ಬರುತ್ತದೆ, ಶೀತ ಮತ್ತು ಗಾಳಿಯಿಂದ ನಮ್ಮನ್ನು ರಕ್ಷಿಸುವ ಬೆಚ್ಚಗಿನ ಬಟ್ಟೆಯು ಕುರಿ ಮತ್ತು ಮೇಕೆಗಳ ಉಣ್ಣೆಯಿಂದ ಬರುತ್ತದೆ, ಇತ್ಯಾದಿ. ಅವುಗಳ ದುಃಖಗಳನ್ನು ನಿವಾರಿಸುವ ವಿಧಾನವನ್ನು ಕಂಡುಹಿಡಿಯಲು ನಾವು ಏಕೆ ಪ್ರಯತ್ನಿಸಬೇಕು ಎಂಬುದಕ್ಕೆ ಇವು ಕೆಲವು ಉದಾಹರಣೆಗಳಾಗಿರುತ್ತವೆ. 

ನಾವು ಯಾವುದೇ ರೀತಿಯ ಅಭ್ಯಾಸವನ್ನು ಮಾಡಿದರೂ - ಮಂತ್ರದ ಪಠಣವಾಗಿರಬಹುದು ಅಥವಾ ಯಾವುದೇ ರೀತಿಯ ಧ್ಯಾನವಾಗಿರಬಹುದು - "ಇದರಿಂದ ಎಲ್ಲಾ ಸೀಮಿತ ಜೀವಿಗಳಿಗೆ ಪ್ರಯೋಜನವಾಗಲಿ" ಎಂಬ ಆಲೋಚನೆಯನ್ನು ನಾವು ಯಾವಾಗಲೂ ಉಳಿಸಿಕೊಳ್ಳಬೇಕು. ಸಹಜವಾಗಿ ಇದರಿಂದ ನಮಗೂ ಲಾಭವಾಗುತ್ತದೆ. ನಮ್ಮ ಜೀವನದ ಸಾಮಾನ್ಯ ಸನ್ನಿವೇಶಗಳು ಸಹ ಇದರಿಂದ ಲಾಭ ಪಡೆದುಕೊಳ್ಳಬಹುದು. ಉದಾಹರಣೆಗೆ, ಯಾರಾದರೂ ಬಹಳಾ ಸ್ವಾರ್ಥಿಯಾಗಿದ್ದರೆ ಮತ್ತು ಯಾವಾಗಲೂ ತನ್ನ ಸ್ವಂತ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದರೆ, ಅವನನ್ನು ಇತರರು ಇಷ್ಟಪಡುವುದಿಲ್ಲ. ಮತ್ತೊಂದೆಡೆ, ದಯೆಯುಳ್ಳವರು ಮತ್ತು ಯಾವಾಗಲೂ ಇತರರಿಗೆ ಸಹಾಯ ಮಾಡುವುದರ ಬಗ್ಗೆ ಯೋಚಿಸುವವರು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತಾರೆ. 

ನಮ್ಮ ಮಾನಸಿಕ ನಿರಂತರತೆಯಲ್ಲಿ ಬೆಳೆಯಬೇಕಾದ ಆಲೋಚನೆಯು, "ಎಲ್ಲರೂ ಸಂತೋಷವಾಗಿರಲಿ ಮತ್ತು ಯಾರೂ ಬಳಲಬಾರದು." ಎಂಬುದು. ಇದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಮೂಲಕ ನಮ್ಮ ಸ್ವಂತದ ಚಿಂತನೆಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದು ಬಹಳಾ ಪ್ರಯೋಜನಕಾರಿಯಾಗಿರಬಹುದು. ಈ ಹಿಂದೆ, ಈ ರೀತಿಯ ಚಿಂತನೆಯನ್ನು ಅಭಿವೃದ್ಧಿಪಡಿಸಿದ ಜೀವಿಗಳು ಈಗ ಶ್ರೇಷ್ಠ ಬುದ್ಧರು, ಬೋಧಿಸತ್ವರು ಅಥವಾ ಸಂತರಾಗಿರುವರು; ಪ್ರಪಂಚದ ಎಲ್ಲಾ ಶ್ರೇಷ್ಠ ಪುರುಷರು ಮತ್ತು ಮಹಿಳೆಯರು ಈ ರೀತಿಯ ಯೋಚನೆಯ ಮೇಲೆಯೇ ತಮ್ಮನ್ನು ತಾವು ಆಧರಿಸಿದ್ದಾರೆ. ನಾವೇ ಆ ಯೋಚನೆಯನ್ನು ಉದ್ಭವಿಸಲು ಪ್ರಯತ್ನಿಸಿದರೆ ಎಷ್ಟು ಅದ್ಭುತವಾಗಿರುತ್ತದೆ ಅಲ್ಲವೇ! 

ನಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಇತರರಿಗೆ ಹಾನಿಯುಂಟುಮಾಡುವುದರ ಕರ್ಮ

ಯಾರಾದರೂ ನಮಗೆ ಹಾನಿಯುಂಟುಮಾಡಲು ಪ್ರಯತ್ನಿಸಿದಾಗ ನಾವು ನಮ್ಮನ್ನು ರಕ್ಷಿಸಿಕೊಳ್ಳಬಾರದು ಎಂಬ ಸಲಹೆಯನ್ನು ನೀಡಲಾಗುತ್ತಿದೆಯೇ? 

ಈ ಪ್ರಶ್ನೆಯು ಬಹಳ ವಿಸ್ತಾರವಾದ ವಿಷಯವೊಂದನ್ನು ಪರಿಚಯಿಸುತ್ತದೆ. ಯಾರಾದರೂ ನಿಮ್ಮ ತಲೆಯ ಮೇಲೆ ಕೋಲಿನಿಂದ ಅಥವಾ ದೊಣ್ಣೆಯಿಂದ ಹೊಡೆದರೆ, ನಿಮ್ಮ ಹಿಂದಿನ ನಕಾರಾತ್ಮಕ ಕ್ರಿಯೆಗಳ ಕಾರಣದಿಂದಾಗಿ ನೀವು ಇದನ್ನು ಅನುಭವಿಸುತ್ತಿದ್ದೀರಿ ಎಂದು ಧ್ಯಾನಿಸುವುದು ಉತ್ತಮ ಪ್ರತಿಕ್ರಿಯೆಯಾಗಿರುತ್ತದೆ. ಈ ವ್ಯಕ್ತಿಯು, ಈ ನಿರ್ದಿಷ್ಟ ಕರ್ಮದ ಪರಂಪರೆಯನ್ನು, ಭವಿಷ್ಯದ ಬದಲು ಈಗ ನೆರವೇರಿಸಲು ಹೇಗೆ ಅನುಮತಿಸುತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಿ. ಈ ನಕಾರಾತ್ಮಕ ಕರ್ಮದ ಋಣವನ್ನು ನಿಮ್ಮ ಮನಸ್ಸಿನ ಹೊಳೆಯಿಂದ ತೆಗೆದುಹಾಕಿದ್ದಾರೆ ಎಂಬ ವಿಷಯಕ್ಕಾಗಿ ನೀವು ಕೃತಜ್ಞತೆಯನ್ನು ಅನುಭವಿಸಬೇಕು. 

ನನ್ನ ರಕ್ಷಣೆಯಲ್ಲಿರುವ ನನ್ನ ಹೆಂಡತಿ ಅಥವಾ ಮಗುವಿನ ಮೇಲೆ ಯಾರಾದರೂ ದಾಳಿ ಮಾಡಿದರೆ ಏನು ಮಾಡುವುದು? ನಾನು ಅವರನ್ನು ರಕ್ಷಿಸಬೇಕೇ? ಹಾಗೆ ಮಾಡುವುದು ನಕಾರಾತ್ಮಕ ಕಾರ್ಯವೇ?  

ನಿಮ್ಮ ಹೆಂಡತಿ ಮತ್ತು ಮಗುವನ್ನು ರಕ್ಷಿಸುವುದು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುವುದರಿಂದ, ನೀವು ಸಾಧ್ಯವಾದಷ್ಟು ಕೌಶಲ್ಯದಿಂದ ಹಾಗೆ ಮಾಡಲು ಪ್ರಯತ್ನಿಸಬೇಕು. ನೀವು ಬುದ್ಧಿವಂತರಾಗಿರಬೇಕು. ಆಕ್ರಮಣಕಾರರಿಗೆ ಹಾನಿಯಾಗದಂತೆ ಅವರನ್ನು ರಕ್ಷಿಸುವುದು ಉತ್ತಮ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಯಾವುದೇ ಹಾನಿಯನ್ನುಂಟುಮಾಡದಿರುವಂತೆ ಅವರನ್ನು ರಕ್ಷಿಸುವ ವಿಧಾನವನ್ನು ಕಂಡುಹಿಡಿಯಬೇಕು. 

ಅವನು ನನ್ನ ಮಕ್ಕಳಿಗೆ ಹಾನಿಯುಂಟುಮಾಡಬಹುದು, ಆದರೆ ನಾನು ಅವನಿಗೆ ಹಾನಿಯುಂಟುಮಾಡಬಾರದೆ? ಅನಾಗರಿಕ ಮತ್ತು ಕ್ರೂರ ಕೃತ್ಯಗಳಿಂದ ನಮ್ಮ ಮಕ್ಕಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಲ್ಲವೇ? ನಾವು ಸುಮ್ಮನೆ ನಮ್ಮ ಪ್ರಾಣವನ್ನು ತ್ಯಜಿಸಬೇಕೇ? 

ಈ ಪರಿಸ್ಥಿತಿಯನ್ನು ಕೌಶಲ್ಯದಿಂದ ನಿಭಾಯಿಸಲು ನಿಮಗೆ ಬಹಳಷ್ಟು ಧೈರ್ಯ ಬೇಕು. ಬುದ್ಧನ ಹಿಂದಿನ ಜೀವನದ ಒಂದು ಕಥೆಯಿದೆ, ಅದರಲ್ಲಿ ಅವರು ಭೂಸಮಾಧಿಯಾದ ನಿಧಿಯೊಂದನ್ನು ಹುಡುಕಲು ಐನೂರು ಜನರ ಗುಂಪಿನೊಂದಿಗೆ ಸಮುದ್ರಕ್ಕೆ ಇಳಿದ ನಾವಿಕರಾಗಿದ್ದರು. ಈ ಗುಂಪಿನಲ್ಲಿ ಒಬ್ಬ ವ್ಯಕ್ತಿಯು ಬಹಳ ದುರಾಸೆಯ ಆಲೋಚನೆಗಳನ್ನು ಹೊಂದಿದ್ದನು ಮತ್ತು ತನಗಾಗಿ ಎಲ್ಲಾ ಆಭರಣಗಳನ್ನು ಕದಿಯುವ ಸಲುವಾಗಿ ಐನೂರು ಜನರನ್ನು ಕೊಲ್ಲುವ ಸಂಚೊಂದನ್ನು ರೂಪಿಸುತ್ತಿದ್ದನು. ಬೋಧಿಸತ್ವ (ಹಿಂದಿನ ಜನ್ಮದಲ್ಲಿನ ಶಾಕ್ಯಮುನಿ ಬುದ್ಧ) ಇದನ್ನು ಅರಿತುಕೊಂಡರು ಮತ್ತು ಒಬ್ಬ ಮನುಷ್ಯನು ಐನೂರು ಮಂದಿಯನ್ನು ಕೊಲ್ಲುವ ಪರಿಸ್ಥಿತಿಯನ್ನು ಬೆಳೆಯಲು ಬಿಡುವುದು ತಪ್ಪು ಎಂದು ಭಾವಿಸಿದರು. ಆದ್ದರಿಂದ, ಈ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಮೂಲಕ ಐನೂರು ಜನರನ್ನು ಉಳಿಸುವ ಅತ್ಯಂತ ಧೈರ್ಯದ ಆಲೋಚನೆಯನ್ನು ಅವರು ಅಭಿವೃದ್ಧಿಪಡಿಸಿದರು, ಕೊಲ್ಲುವ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಮೇಲೆಯೇ ಸ್ವಇಚ್ಛೆಯಿಂದ ಸ್ವೀಕರಿಸಿದರು. ಇತರರನ್ನು ಉಳಿಸಲು ನರಕದಲ್ಲಿ ಮರುಜನ್ಮ ಪಡೆಯುವುದನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿದ್ದರೆ, ನೀವು ಬಹಳಾ ಧೈರ್ಯಶಾಲಿಯಾದ ಆಲೋಚನೆಯನ್ನು ಹೊಂದಿರುತ್ತೀರಿ. ಆಗ ಬುದ್ಧರಂತೆಯೇ ನೀವು ಈ ಕಾರ್ಯಗಳಲ್ಲಿ ತೊಡಗಬಹುದು. 

ಅಂತಹ ಸಂದರ್ಭಗಳಲ್ಲೂ ಕೊಲ್ಲುವುದನ್ನು ನಕಾರಾತ್ಮಕ ಕಾರ್ಯವೆಂದೇ ಪರಿಗಣಿಸಲಾಗುತ್ತದೆಯೇ?  

ಒಬ್ಬನು ತನ್ನ ಹೆತ್ತವರು, ಮಕ್ಕಳು, ಬೌದ್ಧ ಧರ್ಮ ಅಥವಾ ಆಶ್ರಯದ ತ್ರಿರತ್ನಗಳನ್ನು ರಕ್ಷಿಸುವ ಹೆಸರಿನಲ್ಲಿ ನಕಾರಾತ್ಮಕತೆಯ ಕೃತ್ಯವನ್ನು ಎಸಗಿದರೆ, ಅದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಂದು ನಾಗಾರ್ಜುನ ಅವರು ಸ್ನೇಹಿತನಿಗಾಗಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿನ ವ್ಯತ್ಯಾಸವೆಂದರೆ, ನೀವು ಪರಿಣಾಮಗಳ ಬಗ್ಗೆ ತಿಳಿದಿದ್ದು, ನಿಮ್ಮ ಹೆಂಡತಿ ಮತ್ತು ಮಗುವನ್ನು ರಕ್ಷಿಸುವ ಸಲುವಾಗಿ, ನಿಸ್ವಾರ್ಥದಿಂದ ಆ ಪರಿಣಾಮಗಳನ್ನು ನಿಮ್ಮ ಹೊರೆಯಾಗಿ ಸ್ವೀಕರಿಸಲು ಸಿದ್ಧರಿದ್ದೀರಾ ಎಂಬುದಾಗಿರುತ್ತದೆ. ನೀವು ಶತ್ರುಗಳಿಗೆ ಹಾನಿಯುಂಟುಮಾಡಿದರೆ, ನೀವು ದುಃಖದಿಂದ ಕೂಡಿದ ಪುರ್ನಜನ್ಮವನ್ನು ಅನುಭವಿಸುವಿರಿ. ಆದ್ದರಿಂದ, "ನಾನು ಆ ಸಂಕಟವನ್ನು ನನ್ನ ಹೊಣೆಯಾಗಿಸುತ್ತೇನೆ ಮತ್ತು ನಂತರದ ಜೀವನದಲ್ಲಿ ನನ್ನ ಹೆಂಡತಿ ಮತ್ತು ಮಗುವಿಗೆ ಇದರಿಂದ ತೊಂದರೆಯಾಗುವುದಿಲ್ಲ" ಎಂದು ಯೋಚಿಸುವ ಮೂಲಕ ಇದನ್ನು ಎದುರಿಸಲು ನೀವು ಸಿದ್ಧರಾಗಿರಬೇಕು. 

ಹಾಗಾದರೆ ಬೌದ್ಧ ಧರ್ಮದ ಪ್ರಕಾರ, ಇದನ್ನು ಇನ್ನೂ ನಕಾರಾತ್ಮಕ ಕೃತ್ಯವೆಂದೇ ಪರಿಗಣಿಸಲಾಗುವುದೇ?  

ನಿಮ್ಮ ಹೆಂಡತಿ ಮತ್ತು ಮಗುವನ್ನು ರಕ್ಷಿಸುವುದು ಸಕಾರಾತ್ಮಕವಾದ ರಚನಾತ್ಮಕ ಕಾರ್ಯವಾಗಿರುತ್ತದೆ, ಆದರೆ ಶತ್ರುಗಳಿಗೆ ಹಾನಿಯುಂಟುಮಾಡುವುದು ನಕಾರಾತ್ಮಕ ಮತ್ತು ವಿನಾಶಕಾರಿಯಾಗಿರುತ್ತದೆ. ಎರಡರ ಪರಿಣಾಮಗಳನ್ನೂ ಒಪ್ಪಿಕೊಳ್ಳಲು ನೀವು ಸಿದ್ಧರಾಗಿರಬೇಕು. 

ನಕಾರಾತ್ಮಕ ಕರ್ಮವನ್ನು ಉತ್ಪಾದಿಸಿದರೆ, ಭವಿಷ್ಯದಲ್ಲಿ ತೊಂದರೆಯಾಗುತ್ತದೆಯೆಂದೂ, ಒಳ್ಳೆಯದನ್ನು ಮಾಡಿದರೆ ಸಂತೋಷ ಸಿಗುತ್ತದೆಯೆಂದೂ ನೀವು ಹೇಳಿದ್ದೀರಿ. ಪುನರ್ಜನ್ಮವನ್ನು ಅನುಭವಿಸದೇ ಇರುವ ಸಂದರ್ಭದಲ್ಲಿ, ಈ ಉತ್ತಮ ಕ್ರಿಯೆಗಳು ಸಂಪೂರ್ಣವಾದ ಮೋಕ್ಷಕ್ಕೆ ಕಾರಣವಾಗಬಹುದೇ? 

ನೀವು ಮೋಕ್ಷವನ್ನು ಸಾಧಿಸಲು ಬಯಸಿದರೆ, ನೀವು ಸಂಪೂರ್ಣವಾಗಿ ಮತ್ತು ನಿಖರವಾಗಿ ಬೋಧನೆಗಳನ್ನು ಅನುಸರಿಸಬೇಕು. ಉದಾಹರಣೆಗೆ, ನೀವು ಕ್ರಿಶ್ಚಿಯನ್ ಮಾರ್ಗವನ್ನು ಅನುಸರಿಸುತ್ತಿದ್ದರೆ, ನೀವು ಕ್ರಿಸ್ತನ ಬೋಧನೆಗಳನ್ನು ಸಂಪೂರ್ಣವಾಗಿ ಅನುಸರಿಸಬೇಕು. ಆಗ ಕ್ರಿಶ್ಚಿಯನ್ ಮೋಕ್ಷವನ್ನು ಪಡೆಯುವುದು ಸಾಧ್ಯವಾಗುತ್ತದೆ. ಕೇವಲ ಯೇಸುವೇ ನಮ್ಮ ಪಾಪಗಳಿಂದ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ; ನಾವೇ ಏನಾದರೂ ಮಾಡಬೇಕು. ಇಲ್ಲದಿದ್ದರೆ, ಪಾಪ ಮಾಡಬೇಡಿ ಎಂದು ಯೇಸು ಏಕೆ ತಾನೆ ಹೇಳುತ್ತಿದ್ದರು? ಯೇಸು ಕಲಿಸಿದ್ದನ್ನು ನಾವೇ ಸರಿಯಾಗಿ ಅನುಸರಿಸಿದರೆ, ಕ್ರಿಶ್ಚಿಯನ್ ಮೋಕ್ಷ ಪಡೆಯುವುದು ಸಾಧ್ಯ ಎಂದು ನಾನು ಭಾವಿಸುತ್ತೇನೆ. ನಾವು ಬುದ್ಧನ ಬೋಧನೆಗಳನ್ನು ಸರಿಯಾಗಿ ಅನುಸರಿಸಿದರೆ, ಬೌದ್ಧ "ಮೋಕ್ಷ" - ವಿಮೋಚನೆ - ಸಾಧ್ಯವಾಗಿರುತ್ತದೆ. 

Top