ಲ್ಯಾಮ್-ರಿಮ್ ಎಂದರೇನು ಮತ್ತು ಬುದ್ಧನ ಬೋಧನೆಗಳಿಂದ ಅದು ಹೇಗೆ ಹುಟ್ಟಿಕೊಂಡಿತು?
ಕ್ರಮವಾದ ಮಾರ್ಗವಾದ ಲ್ಯಾಮ್-ರಿಮ್, ಮೂಲಭೂತ ಬೌದ್ಧ ಬೋಧನೆಗಳನ್ನು ನಮ್ಮ ಜೀವನದಲ್ಲಿ ಪರಿಚಯಿಸಲು ಮತ್ತು ಸಂಯೋಜಿಸಲು ಇರುವ ಒಂದು ಮಾರ್ಗವಾಗಿದೆ. 2,500 ವರ್ಷಗಳ ಹಿಂದೆ, ಬುದ್ಧ, ಸನ್ಯಾಸಿಗಳ ಸಮುದಾಯದೊಂದಿಗೆ ಮತ್ತು ನಂತರ, ಸನ್ಯಾಸಿನಿಯರ ಸಮುದಾಯದೊಂದಿಗೆ ವಾಸಿಸುತ್ತಿದ್ದರು. ದೀಕ್ಷೆ ಪಡೆದ ಸಮುದಾಯಗಳಿಗೆ ಕಲಿಸುವುದಲ್ಲದೆ, ಅವರು ಆಗಾಗ್ಗೆ ಜನರ ಮನೆಗಳಿಗೆ ಆಹ್ವಾನಿತಗೊಳ್ಳುತ್ತಿದ್ದರು, ಮತ್ತು ಅವರಿಗೆ ಅಲ್ಲಿ ಊಟವನ್ನು ಬಡಿಸಲಾಗುತ್ತಿತ್ತು ಮತ್ತು ನಂತರ ಅವರು ಅಲ್ಲಿ ಭಾಷಣವನ್ನು ನೀಡುತ್ತಿದ್ದರು.
ನಾವು "ಕುಶಲ ವಿಧಾನ" ಎಂದು ಕರೆಯುವುದನ್ನು ಬುದ್ದ ಯಾವಾಗಲೂ ಬೋಧಿಸುತ್ತಿದ್ದರು, ಇದು ಇತರರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಕಲಿಸುವ ವಿಧಾನವಾಗಿರುತ್ತದೆ. ಇದು ಅಗತ್ಯವಾಗಿತ್ತು ಏಕೆಂದರೆ ಆಗ, ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ವಿವಿಧ ಹಂತಗಳು ಇದ್ದವು ಮತ್ತು ಇಂದಿಗೂ ಇವೆ. ಇದರಿಂದ ಬುದ್ಧ, ವಿವಿಧ ಹಂತಗಳಲ್ಲಿ, ವಿವಿಧ ವಿಷಯಗಳ ಬಗ್ಗೆ ಬೋಧಿಸಬೇಕಾಗಿತ್ತು.
ಬುದ್ಧನ ಅನೇಕ ಅನುಯಾಯಿಗಳು ಅಸಾಧಾರಣ ಸ್ಮರಣಶಕ್ತಿಯನ್ನು ಹೊಂದಿದ್ದರು. ಆ ಕಾಲದಲ್ಲಿ ಯಾವುದನ್ನೂ ಬರೆದಿಡಲಾಗುತ್ತಿರಲಿಲ್ಲ ಮತ್ತು ಮುಂಬರುವ ಪೀಳಿಗೆಗೆ ಬೋಧನೆಗಳನ್ನು ಮೌಖಿಕವಾಗಿ ರವಾನಿಸಲು, ಸನ್ಯಾಸಿಗಳು ಕಂಠಪಾಠ ಮಾಡುತ್ತಿದ್ದರು. ಅಂತಿಮವಾಗಿ, ಈ ಬೋಧನೆಗಳನ್ನು ಬರೆದಿಡಲಾಯಿತು ಮತ್ತು ಅವುಗಳನ್ನು ಸೂತ್ರಗಳೆಂದು ಕರೆಯಲಾಯಿತು. ಶತಮಾನಗಳ ನಂತರ, ಅನೇಕ ಶ್ರೇಷ್ಠ ಭಾರತೀಯ ಗುರುಗಳು ಇದನ್ನು ಕ್ರಮವಾಗಿ ಸಂಯೋಜಿಸಲು ಮತ್ತು ಅದರ ಬಗ್ಗೆ ವ್ಯಾಖ್ಯಾನಗಳನ್ನು ಬರೆಯಲು ಪ್ರಯತ್ನಿಸಿದರು. ಹನ್ನೊಂದನೇ ಶತಮಾನದಲ್ಲಿ, ಟಿಬೆಟ್‌ಗೆ ಹೋದ ಭಾರತೀಯ ಗುರುಗಳಲ್ಲಿ ಒಬ್ಬರಾದ ಅತಿಶಾ ಅವರು ಈ ಪ್ರಸ್ತುತಿಯ ಮೂಲಮಾದರಿಯಾದ ಲ್ಯಾಮ್-ರಿಮ್ ಅನ್ನು ರಚಿಸಿದರು.
ಅತಿಶಾನ ಮೂಲಮಾದರಿಯು, ಪ್ರತಿಯೊಬ್ಬರಿಗೂ ತಮ್ಮನ್ನು ತಾವು ಬುದ್ಧಸ್ಥಿತಿಯತ್ತ ಅಭಿವೃದ್ಧಿಪಡಿಸಿಕೊಳ್ಳುವ ವಿಧಾನವೊಂದನ್ನು ಪ್ರಸ್ತುತಪಡಿಸಿತು. ಸೂತ್ರಗಳನ್ನು ಸುಮ್ಮನೆ ಓದುವುದರಿಂದ ನಾವು ಎಲ್ಲಿಂದ ಪ್ರಾರಂಭಿಸಬೇಕು ಅಥವಾ ಜ್ಞಾನೋದಯವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಆಧ್ಯಾತ್ಮಿಕ ಮಾರ್ಗ ಸಿಗುವುದಿಲ್ಲ. ಎಲ್ಲಾ ಸಾಮಾಗ್ರಿಗಳು ಇದ್ದರೂ, ಅವೆಲ್ಲವನ್ನೂ ಒಟ್ಟಿಗೆ ಸೇರಿಸುವುದು ಸುಲಭವಲ್ಲ.
ಈ ಸಾಮಾಗ್ರಿಯನ್ನು ಶ್ರೇಣೀಕೃತ ಕ್ರಮದಲ್ಲಿ ಪ್ರಸ್ತುತಪಡಿಸುವ ಮೂಲಕ ಲ್ಯಾಮ್-ರಿಮ್ ಇದನ್ನು ಸಾದಿಸುತ್ತದೆ. ಅತಿಶಾ ಅವರ ನಂತರ, ಇದರ ವಿಭಿನ್ನವಾದ, ಹೆಚ್ಚು ವಿಸ್ತಾರವಾದ ಅವೃತ್ತಿಗಳನ್ನು ಟಿಬೆಟ್‌ನಲ್ಲಿ ಬರೆಯಲಾಗಿದೆ. ಹದಿನೈದನೇ ಶತಮಾನದಲ್ಲಿ ತ್ಸೋಂಗ್‌ಖಾಪಾ ಅವರು ಬರೆದ ಆವೃತ್ತಿಯನ್ನು ನಾವು ಇಲ್ಲಿ ವಿಶ್ಲೇಷಿಸುತ್ತಿದ್ದು, ಇದು ಬಹುಶಃ ಬೋಧನೆಗಳ ಅತಿದೊಡ್ಡ ವಿಸ್ತರಣೆಯಾಗಿದೆ. ತ್ಸೋಂಗ್‌ಖಾಪಾ ಅವರ ಕಾರ್ಯದ ಮಹೋನ್ನತ ವೈಶಿಷ್ಟ್ಯವೆಂದರೆ, ಅದು ಸೂತ್ರಗಳು ಮತ್ತು ಭಾರತೀಯ ವ್ಯಾಖ್ಯಾನಗಳಿಂದ ಉಲ್ಲೇಖಗಳನ್ನು ಒಳಗೊಂಡಿದೆ, ಆದ್ದರಿಂದ ಅವರು ಮನಸೋ ಇಚ್ಛೆ ವಿಷಯಗಳನ್ನು ನುಡಿಯುತ್ತಿಲ್ಲ ಎಂದು ನಾವು ಖಚಿತವಾಗಿ ಹೇಳಬಹುದು.
ಮತ್ತೊಂದು ಮಹೋನ್ನತ ವೈಶಿಷ್ಟ್ಯವೆಂದರೆ, ತ್ಸೋಂಗ್‌ಖಾಪಾ ಅವರು, ಎಲ್ಲಾ ವಿವಿಧ ಅಂಶಗಳ ಅತ್ಯಂತ ವಿಸ್ತಾರವಾದ, ತಾರ್ಕಿಕ ಪ್ರದರ್ಶನಗಳನ್ನು ಒದಗಿಸಿದ್ದಾರೆ, ಇದರಿಂದಾಗಿ ನಾವು ತರ್ಕ ಮತ್ತು ಕಾರಣದ ಆಧಾರದ ಮೇಲೆ, ಬೋಧನೆಗಳ ಮಾನ್ಯತೆಯಲ್ಲಿ, ಇನ್ನಷ್ಟು ಬಲವಾದ ವಿಶ್ವಾಸವನ್ನು ಗಳಿಸಬಹುದು. ಹಿಂದಿನ ಲೇಖಕರು ಅತ್ಯಂತ ಕಷ್ಟಕರವಾದ ಅಂಶಗಳನ್ನು ಬಿಟ್ಟುಬಿಡುತ್ತಿದ್ದರು, ಆದರೆ ತ್ಸೋಂಗ್ಖಾಪಾ ಅವರ ವಿಶೇಷ ಲಕ್ಷಣವೆಂದರೆ, ಅವರು ಅಂತಹ ವಿಷಯಗಳ ಮೇಲೆಯೇ ಕೇಂದ್ರೀಕರಿಸಿರುವರು.
ನಾಲ್ಕು ಟಿಬೆಟಿಯನ್ ಬೌದ್ಧ ಸಂಪ್ರದಾಯಗಳಲ್ಲಿ, ತ್ಸೋಂಗ್ಖಾಪಾ ಅವರಿಂದ ಹುಟ್ಟಿಕೊಂಡ ಸಂಪ್ರದಾಯವನ್ನು "ಗೆಲುಗ್ಪಾ" ಸಂಪ್ರದಾಯ ಎಂದು ಕರೆಯಲಾಗುತ್ತದೆ.
ಆಧ್ಯಾತ್ಮಿಕ ಮಾರ್ಗದ ಅರ್ಥವೇನು ಮತ್ತು ಅದನ್ನು ರಚಿಸುವುದು ಹೇಗೆ?
ನಿಜವಾದ ಪ್ರಶ್ನೆಯೆಂದರೆ, ಆಧ್ಯಾತ್ಮಿಕ ಮಾರ್ಗವನ್ನು ಹೇಗೆ ರಚಿಸಬೇಕು? ಸಾಮಾನ್ಯವಾಗಿ, ಭಾರತದಲ್ಲಿ ಅನೇಕ ವಿಭಿನ್ನ ವಿಧಾನಗಳನ್ನು ಕಲಿಸಲಾಗುತ್ತಿತ್ತು. ಉದಾಹರಣೆಗೆ, ಬುದ್ಧನ ಕಾಲದಲ್ಲಿ, ಏಕಾಗ್ರತೆಯನ್ನು ಬೆಳೆಸುವ ವಿಧಾನಗಳು, ಇತರ ಎಲ್ಲಾ ಭಾರತೀಯ ಸಂಪ್ರದಾಯಗಳಲ್ಲಿ ಕಾಣಬಹುದಾಗಿತ್ತು. ಇದು ಅವರು ಕಂಡುಹಿಡಿದ ಅಥವಾ ರಚಿಸಿದ ವಿಷಯವಾಗಿರಲಿಲ್ಲ. ನಾವು ನಮ್ಮನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳುತ್ತೇವೆ ಎಂಬುದಕ್ಕೆ ಸಂಬಂಧಿಸಿದಂತೆ, ನಮ್ಮ ಆಧ್ಯಾತ್ಮಿಕ ಮಾರ್ಗದಲ್ಲಿ ಏಕಾಗ್ರತೆ ಮತ್ತು ಇತರ ಎಲ್ಲಾ ಅಂಶಗಳನ್ನು ಹೇಗೆ ಕರೆತರಬಹುದು ಎಂಬುದನ್ನು ನಾವು ಗಮನಿಸಬೇಕು ಎಂದು ಎಲ್ಲರೂ ಒಪ್ಪಿಕೊಂಡಿದ್ದರು.
ಸಹಜವಾಗಿ, ನಮ್ಮನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳಬೇಕೆಂಬುದರ ಬಗೆಗಿರುವ ಅನೇಕ ಅಂಶಗಳನ್ನು ಅರ್ಥಮಾಡಿಕೊಳ್ಳಲು, ಬುದ್ಧ ವಿಭಿನ್ನ ವಿವರಣೆಗಳನ್ನು ಹೊಂದಿದ್ದರು, ಆದರೆ ಇಲ್ಲಿ ನಿರ್ದಿಷ್ಟವಾದದ್ದು, ಆಧ್ಯಾತ್ಮಿಕ ಗುರಿಗಳ ಬಗ್ಗೆ ಇರುವ ಅವರ ತಿಳುವಳಿಕೆಯಾಗಿತ್ತು. ಈ ಆಧ್ಯಾತ್ಮಿಕ ಗುರಿಗಳ ಮುಖ್ಯ ತತ್ವ ಮತ್ತು ವಿವಿಧ ಶ್ರೇಣಿಗಳಲ್ಲಿ ಇಡಲಾದ ವಿಷಯವು ನಮ್ಮ ಪ್ರೇರಣೆಯಾಗಿದೆ.
ಈ ಸಾಹಿತ್ಯಕ್ಕೆ ನೀಡಲಾದ ಪದವು ಲ್ಯಾಮ್-ರಿಮ್ ಆಗಿದೆ, "ಲ್ಯಾಮ್" ಅನ್ನು "ಮಾರ್ಗ" ಎಂದು ಅನುವಾದಿಸಲಾಗುತ್ತದೆ ಮತ್ತು "ರಿಮ್" ಎಂಬುದು, ಈ ಮಾರ್ಗದ ಕ್ರಮವಾದ ಹಂತಗಳನ್ನು ಸೂಚಿಸುತ್ತದೆ. ಈ ಮಾರ್ಗವು, ನಮ್ಮ ಗುರಿಯನ್ನು ತಲುಪಲು, ಶ್ರೇಣೀಕೃತ ಕ್ರಮದಲ್ಲಿ ಅಭಿವೃದ್ಧಿಪಡಿಸಬೇಕಾದ ವಿವಿಧ ಮನಸ್ಥಿತಿಯಾಗಿರುತ್ತದೆ. ಇದೊಂದು ಪ್ರಯಾಣದಂತೆ ಇರುತ್ತದೆ; ನಾವು ರೊಮೇನಿಯಾದಿಂದ ಭಾರತಕ್ಕೆ, ಭೂಪ್ರದೇಶದ ಮೂಲಕ ಪ್ರಯಾಣಿಸಲು ಬಯಸಿದರೆ, ಭಾರತವು ನಮ್ಮ ಅಂತಿಮ ಗುರಿಯಾಗಿರುತ್ತದೆ. ಆದರೆ ಅದರ ಮೊದಲು, ನಾವು ಅಂತಿಮವಾಗಿ ಭಾರತವನ್ನು ತಲುಪುವ ಮೊದಲು, ಟರ್ಕಿ, ಇರಾನ್ ಮತ್ತು ಮುಂತಾದವುಗಳ ಮೂಲಕ ಹಾದುಹೋಗಬೇಕಾಗುತ್ತದೆ.
ಆಧ್ಯಾತ್ಮಿಕ ಪ್ರೇರಣೆ: ನಮ್ಮ ಜೀವನದಲ್ಲಿ ಅರ್ಥವನ್ನು ಅಳವಡಿಸಿಕೊಳ್ಳುವುದು
ಲ್ಯಾಮ್-ರಿಮ್ನಲ್ಲಿ ಸಾಮಾನ್ಯವಾಗಿ ಶ್ರೇಣೀಕರಿಸಲಾಗುವ ವಿಷಯವು, ನಮ್ಮ ಪ್ರೇರಣೆಯಾಗಿರುತ್ತದೆ, ಇದು ಬೌದ್ಧ ಪ್ರಸ್ತುತಿಯ ಪ್ರಕಾರ, ಎರಡು ಭಾಗಗಳನ್ನ ಒಳಗೊಂಡ ವಿಷಯವಾಗಿರುತ್ತದೆ. ಪ್ರೇರಣೆಯು, ನಾವು ಹೊಂದಿರುವ ಒಂದು ನಿರ್ದಿಷ್ಟ ಗುರಿ ಅಥವಾ ಉದ್ದೇಶದೊಂದಿಗೆ ಸಂಬಂಧಿಸಿರುತ್ತದೆ, ಆ ಗುರಿಯನ್ನು ತಲುಪಲು ನಮ್ಮನ್ನು ಪ್ರೇರೇಪಿಸುವ ಭಾವನೆಯೊಂದಿಗೂ ಸಂಬಂಧಿಸಿರುತ್ತದೆ. ಇನ್ನೂ ಹೆಚ್ಚು ನಿಖರವಾಗಿ ಹೇಳುವುದಾದರೆ, ನಾವು ಒಂದು ಗುರಿಯನ್ನು ತಲುಪಲು ಬಯಸುವುದಕ್ಕೆ ನಮಗೆ ಒಂದು ಕಾರಣವಿರುತ್ತದೆ, ಜೊತೆಗೆ ನಮ್ಮನ್ನು ಅಲ್ಲಿಗೆ ಕರೆದೊಯ್ಯುವ ಭಾವನೆಯಿರುತ್ತದೆ.
ಇದು ನಮ್ಮ ದೈನಂದಿನ ಜೀವನದ ವಿಷಯಗಳಿಗೆ ಸಮಂಜಸವಾದ ಅರ್ಥವನ್ನು ನೀಡುತ್ತದೆ; ನಮ್ಮ ಜೀವನದ ವಿವಿಧ ಹಂತಗಳಲ್ಲಿ ನಾವು ವಿವಿಧ ಗುರಿಗಳನ್ನು ಹೊಂದಿರುತ್ತೇವೆ. ಉದಾಹರಣೆಗೆ, ನಾವು ಶಿಕ್ಷಣವನ್ನು ಪಡೆಯಲು ಬಯಸುತ್ತೇವೆ, ಅಥವಾ ಜೀವನ ಸಂಗಾತಿಯನ್ನು ಭೇಟಿಯಾಗಲು ಅಥವಾ ಉತ್ತಮ ಉದ್ಯೋಗವನ್ನು ಹುಡುಕಲು ಬಯಸುತ್ತೇವೆ, ಇತ್ಯಾದಿ. ಇದು ಸಕಾರಾತ್ಮಕ ಭಾವನೆಗಳು ಮತ್ತು ನಕಾರಾತ್ಮಕ ಭಾವನೆಗಳನ್ನು ಒಳಗೊಂಡಿರುತ್ತವೆ ಮತ್ತು ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಏನೇ ಆಗಲಿ, ಶ್ರೇಣೀಕೃತವಾದ ಪ್ರೇರಣೆಗಳ ಈ ಪ್ರಸ್ತುತಿಯು, ನಮ್ಮ ಸಾಮಾನ್ಯ ಜೀವನಕ್ಕೆ ಅನ್ವಯವಾಗುತ್ತದೆ.
ನಮ್ಮ ಆಧ್ಯಾತ್ಮಿಕ ಪ್ರೇರಣೆಗಳ ವಿಷಯಗಳಲ್ಲಿಯೂ ಇದೇ ಸತ್ಯವಾಗಿರುತ್ತದೆ. ಇವು ನಮ್ಮ ದೈನಂದಿನ ಜೀವನಕ್ಕೆ ಸಂಪೂರ್ಣವಾಗಿ ಸಂಬಂಧಿಸಿದ ಮನಸ್ಥಿತಿಗಳಾಗಿರುತ್ತವೆ. ನಾವು ನಮ್ಮ ಜೀವನದೊಂದಿಗೆ ಏನು ಮಾಡುತ್ತಿದ್ದೇವೆ? "ಲೌಕಿಕ ಮಟ್ಟ"ದಲ್ಲಿ, ನಾವು ನಮ್ಮ ಕುಟುಂಬಗಳು, ಉದ್ಯೋಗಗಳು ಮತ್ತು ಮುಂತಾದವುಗಳನ್ನು ಹೊಂದಿದ್ದೇವೆ. ಆದರೆ ಆಧ್ಯಾತ್ಮಿಕ ಮಟ್ಟದಲ್ಲಿ ನಾವು ಏನು ಮಾಡುತ್ತಿದ್ದೇವೆ? ಇದು ಕೂಡ ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಜೀವನದ ಈ ಎರಡು ಅಂಶಗಳು ವಿರೋಧಾತ್ಮಕವಾಗಿಲ್ಲದೆ ಇರುವುದು ಅಥವಾ ಪರಸ್ಪರವಾಗಿ ಪ್ರತ್ಯೇಕವಾಗಿಲ್ಲದೆ ಇರುವುದು ಬಹಳಾ ಮುಖ್ಯ, ಬದಲಿಗೆ ಅವು ಒಂದು ರೀತಿಯ ಸಾಮರಸ್ಯದಲ್ಲಿ ಬೆರೆತಿರಬೇಕು.
ಕೇವಲ ಸಾಮರಸ್ಯದಿಂದಿರುವುದಲ್ಲದೆ, ಪ್ರತಿಯೊಂದೂ ಇನ್ನೊಂದನ್ನು ಬೆಂಬಲಿಸಬೇಕು. ನಮ್ಮ ಆಧ್ಯಾತ್ಮಿಕ ಜೀವನವು, ನಮ್ಮ ಸಾಮಾನ್ಯ ಲೌಕಿಕ ಜೀವನವನ್ನು ನಡೆಸಲು ನಮಗೆ ಶಕ್ತಿಯನ್ನು ನೀಡಬೇಕು, ಮತ್ತು ನಮ್ಮ ಲೌಕಿಕ ಜೀವನವು, ನಮ್ಮ ಆಧ್ಯಾತ್ಮಿಕ ಜೀವನವನ್ನು ಅಭ್ಯಾಸ ಮಾಡಲು ಸಂಪನ್ಮೂಲಗಳನ್ನು ಒದಗಿಸಬೇಕು. ಲ್ಯಾಮ್-ರಿಮ್‌ನ ಈ ಶ್ರೇಣೀಕೃತ ಹಂತಗಳ ಮೂಲಕ ನಾವು ಕಲಿಯುವ ಎಲ್ಲವನ್ನೂ ನಮ್ಮ ದೈನಂದಿನ ಜೀವನಕ್ಕೆ ಅನ್ವಯಿಸಬೇಕಾಗಿದೆ.
ಉತ್ತಮ ವ್ಯಕ್ತಿಯಾಗುವುದು
ಹಾಗಾದರೆ ಇಲ್ಲಿ ಪ್ರಸ್ತುತಪಡಿಸಿದ ಬೌದ್ಧ ಆಚರಣೆಯೊಂದಿಗೆ ನಾವು ಏನು ಮಾಡುತ್ತಿದ್ದೇವೆ? ಸಾಮಾನ್ಯವಾಗಿ, ಬೌದ್ಧ ಆಚರಣೆಯನ್ನು ಕೆಲವು ಪದಗಳಲ್ಲಿಯೇ ಸಂಕ್ಷಿಪ್ತಗೊಳಿಸಬಹುದು. ಸರಳ ಭಾಷೆಯಲ್ಲಿ ಹೇಳುವುದಾದರೆ, ನಾವು ಉತ್ತಮ ವ್ಯಕ್ತಿಗಳಾಗಲು ನಮ್ಮ ಮೇಲೆಯೇ ಕೆಲಸ ಮಾಡುತ್ತೇವೆ. "ಉತ್ತಮ ವ್ಯಕ್ತಿ" ಎಂಬ ಪದವು ಪೂರ್ವಾಭಾವಿಯಾಗಿ ತೋರಬಹುದು, ಆದರೆ ಇಲ್ಲಿ ಯಾವುದೇ ರೀತಿಯ ಪೂರ್ವಾಗ್ರಹಗಳನ್ನು ನಾವು ಸೂಚಿಸುತ್ತಿಲ್ಲ. ಅದು ಇಲ್ಲಿನ ವಿಷಯವಲ್ಲ. ನಮ್ಮೆಲ್ಲರಲ್ಲೂ ಕೆಲವೊಮ್ಮೆ ಇರುವ ವಿನಾಶಕಾರಿ ನಡವಳಿಕೆ ಮತ್ತು ನಕಾರಾತ್ಮಕ ಭಾವನೆಗಳಾದ ಕೋಪ, ದುರಾಸೆ, ಸ್ವಾರ್ಥ ಮುಂತಾದವುಗಳನ್ನು ಜಯಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ಈ ರೀತಿಯ ಉದ್ದೇಶವನ್ನು ಗುರಿಯಾಗಿರಿಸಿಕೊಳ್ಳುವಲ್ಲಿ, ಬೌದ್ಧಧರ್ಮವು ಏಕೈಕ ಧರ್ಮ ಅಥವಾ ತತ್ವಶಾಸ್ತ್ರ ಅಥವಾ ಆಚರಣೆಯಾಗಿ ಪ್ರತ್ಯೇಕವಾಗಿಲ್ಲ. ನಾವು ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಜುದಾಯಿಸಂ, ಹಿಂದೂ ಧರ್ಮಗಳಲ್ಲಿಯೂ ಇದೇ ವಿಷಯವನ್ನು ಕಂಡುಕೊಳ್ಳುತ್ತೇವೆ ಮತ್ತು ನಾವು ಅದನ್ನು ಮಾನವತಾವಾದದಲ್ಲಿಯೂ ಕಾಣುತ್ತೇವೆ. ಇದು ಎಲ್ಲೆಡೆ ಇರುತ್ತದೆ. ಬೌದ್ಧ ವಿಧಾನಗಳು, ಈ ಇತರ ವಿಧಾನಗಳಲ್ಲಿ ನಾವು ಕಂಡುಕೊಂಡಂತೆ, ಕ್ರಮವಾದ ರೀತಿಯಲ್ಲಿ ಉತ್ತಮ ವ್ಯಕ್ತಿಯಾಗುವ ವಿಧಾನವನ್ನು ನೀಡುವ ಮೂಲಕ, ಈ ರೀತಿಯ ಗುರಿಯನ್ನು ಸಾಧಿಸಲು ನಮಗೆ ಸಹಾಯ ಮಾಡಬಹುದು.
"ಉತ್ತಮ ವ್ಯಕ್ತಿ" ಆಗಲು, ನಾವು ಮೊದಲು ಇತರರಿಗೆ ಹಾನಿಯನ್ನುಂಟುಮಾಡುವ ವಿನಾಶಕಾರಿ ರೀತಿಯಲ್ಲಿ ವರ್ತಿಸುವುದನ್ನು ನಿಲ್ಲಿಸಬೇಕು. ಇದಕ್ಕಾಗಿ, ನಾವು ಸ್ವಲ್ಪ ಸ್ವಯಂ ನಿಯಂತ್ರಣವನ್ನು ಹೊಂದಿರಬೇಕು. ಒಮ್ಮೆ, ಆಳವಾದ ಮಟ್ಟದಲ್ಲಿ ಹೀಗೆ ಮಾಡಲು ಸಾಧ್ಯವಾದರೆ, ನಾವು ವಿನಾಶಕಾರಿಯಾಗಿ ವರ್ತಿಸಲು ಕಾರಣವಾಗುವ ನಿಜವಾದ ವಿಷಯಗಳನ್ನು ಜಯಿಸುವತ್ತ ನಮ್ಮ ಗಮನಹರಿಸುತ್ತೇವೆ: ಕೋಪ, ದುರಾಶೆ, ಬಾಂಧವ್ಯ, ಅಸೂಯೆ, ದ್ವೇಷ ಇತ್ಯಾದಿ. ಹೀಗೆ ಮಾಡಲು, ಈ ನಕಾರಾತ್ಮಕ ಭಾವನೆಗಳು ಹೇಗೆ ಉದ್ಭವಿಸುತ್ತವೆ ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ, ಈ ಗೊಂದಲಮಯ ಭಾವನೆಗಳನ್ನು ಕಡಿಮೆ ಮಾಡಲು ಅಥವಾ ನಿವಾರಿಸಲು ಸಹಾಯ ಮಾಡುವ ಕೆಲವು ರೀತಿಯ ತಿಳುವಳಿಕೆಯನ್ನು ನಾವು ಅಭಿವೃದ್ಧಿಪಡಿಸುತ್ತೇವೆ.
ನಂತರ, ನಾವು ಇನ್ನೂ ಆಳವಾಗಿ ವಿಶ್ಲೇಷಿಸಬಹುದು ಮತ್ತು ನಮ್ಮ ಸ್ವಾರ್ಥ ಮತ್ತು ನಮ್ಮ ಬಗ್ಗೆ ಮಾತ್ರ ಯೋಚಿಸುವ ಸ್ವ-ಕೇಂದ್ರಿತ ವಿಧಾನವನ್ನು ಗುರುತಿಸುವ ಮೂಲಕ, ಈ ಎಲ್ಲಾ ಗೊಂದಲಮಯ ಭಾವನೆಗಳ ನಿಜವಾದ ಆಧಾರದ ಬಗ್ಗೆ ಕೆಲಸ ಮಾಡಬಹುದು. ನಾವು ಸಾಮಾನ್ಯವಾಗಿ ಹೀಗೆ ಯೋಚಿಸುತ್ತೇವೆ, "ನಾನು ಹೇಳಿದಂತೆಯೇ ನಡೆಯಬೇಕು." ನಾವು ಹೇಳಿದಂತೆ ನಡೆಯದಿದ್ದಾಗ, ನಾವು ಆಗಾಗ್ಗೆ ಕೋಪಗೊಳ್ಳುತ್ತೇವೆ. ನಾವು ಬಯಸಿದ ರೀತಿಯಲ್ಲಿಯೇ ಎಲ್ಲವೂ ನಡೆಯಬೇಕೆಂದು ನಾವು ಇಚ್ಛಿಸಿದರೂ, ಅದು ಹಾಗೆಯೇ ಏಕೆ ನಡೆಯಬೇಕು? ನಾವು ಹಾಗೆ ಬಯಸುತ್ತೇವೆ ಎಂಬುದನ್ನು ಹೊರತುಪಡಿಸಿ, ಅದಕ್ಕಾಗಿ ಯಾವುದೇ ಕಾರಣವಿರುವುದಿಲ್ಲ. ಎಲ್ಲರೂ ಅದೇ ರೀತಿಯಾಗಿ ಯೋಚಿಸುತ್ತಾರೆ ಮತ್ತು ನಾವೆಲ್ಲರೂ ಸರಿಯಾಗಿರಲು ಸಾಧ್ಯವಿಲ್ಲ.
ಕಾಲಾನಂತರದಲ್ಲಿ, ಕ್ರಮೇಣವಾಗಿ, ಈ ತೊಂದರೆಗಾರರನ್ನು ಜಯಿಸುವ ಮಟ್ಟಕ್ಕೆ ಬರಲು ನಾವು ಕೆಲಸ ಮಾಡುತ್ತೇವೆ. ನಮ್ಮ ಸ್ವಾರ್ಥವನ್ನು ವಿಶ್ಲೇಷಿಸಿದಾಗ, ನಮ್ಮ "ನಾನು" ಮತ್ತು "ಸ್ವಯಂ" ಎಂಬ ಪರಿಕಲ್ಪನೆಯನ್ನು ಅದು ಅವಲಂಬಿಸಿರುವುದು ಕಂಡುಬರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬ ನಮ್ಮ ಪರಿಕಲ್ಪನೆಯು "ನಾನು ವಿಶೇಷವಾದವನು" ಎಂಬ ಕಲ್ಪನೆಯನ್ನು ಆಧರಿಸಿರುತ್ತದೆ, ನಮ್ಮಲ್ಲಿ ಪ್ರತಿಯೊಬ್ಬರೂ ಬ್ರಹ್ಮಾಂಡದ ಕೇಂದ್ರವಾಗಿದ್ದೇವೆ, ಎಲ್ಲರಿಂದಲೂ ಸ್ವತಂತ್ರವಾಗಿರುವ ಒಬ್ಬ ಪ್ರಮುಖ ವ್ಯಕ್ತಿ ಎಂಬ ಪರಿಕಲ್ಪನೆಯಿರುತ್ದತೆ. ನಾವು ಈ ಗ್ರಹಿಕೆಯನ್ನು ಪರಿಶೀಲಿಸಬೇಕು ಏಕೆಂದರೆ ಖಂಡಿತವಾಗಿಯೂ ಇದರಲ್ಲಿ ಏನೋ ತಪ್ಪಿದೆ ಮತ್ತು ವಿರೂಪಗೊಂಡದ್ದು ಇದೆ. ಕ್ರಮವಾದ ಮಾರ್ಗವು ಇದನ್ನೇ ಸಂಬೋಧಿಸುತ್ತದೆ.
ಪ್ರೇರಣೆಯ ಪ್ರಗತಿಶೀಲ ಮಟ್ಟಗಳು: ಧರ್ಮ-ಲೈಟ್
ಬುದ್ಧನು ಕಲಿಸಿದ ವಿಧಾನಗಳು ಈ ರೀತಿಯ ಗುರಿಗಳಿಗಾಗಿ ಬಹಳ ಸಹಾಯಕವಾಗಿರುತ್ತವೆ. ಮೂಲತಃವಾಗಿ, ವಿನಾಶಕಾರಿ ನಡವಳಿಕೆ ಮತ್ತು ಕೋಪ ಮತ್ತು ಸ್ವಾರ್ಥದಂತಹ ನಕಾರಾತ್ಮಕ ಭಾವನೆಗಳನ್ನು ದೂರವಿರಿಸುವ ಬಯಕೆಗೆ ಒಂದು ಕಾರಣವಿರುತ್ತದೆ. ನಾವು ಇವುಗಳ ಪ್ರಭಾವದ ಅಡಿಯಲ್ಲಿ ವರ್ತಿಸಿದಾಗ, ಅದು ಆಹ್ಲಾದಕರವಾಗಿರುವುದಿಲ್ಲ ಮತ್ತು ನಮಗೆ ಮತ್ತು ಇತರರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಾವು ಅರ್ಥಮಾಡಿಕೊಂಡಿರುವುದೇ ಬಹುಶಃ ಇದರ ಕಾರಣವಾಗಿರಬಹುದು. ನಮಗೆ ಈ ಸಮಸ್ಯೆಗಳು ಬೇಡ!
ನಾವು ಈ ಸಮಸ್ಯೆಯನ್ನು ಕ್ರಮವಾದ ರೀತಿಯಲ್ಲಿ ಸಮೀಪಿಸಬಹುದು. ನಾನು ಒಂದು ರೀತಿಯಲ್ಲಿ ವರ್ತಿಸಿದರೆ, ಅದು ಸದ್ಯಕ್ಕೆ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಉಂಟುಮಾಡುತ್ತದೆ. ಉದಾಹರಣೆಗೆ, ನಾವು ಯಾರೊಂದಿಗಾದರೂ ಜಗಳವಾಡಿ ಅವರನ್ನು ಗಾಯಗೊಳಿಸಿದರೆ, ನಾವೂ ಗಾಯಗೊಳ್ಳಬಹುದು ಅಥವಾ ಜೈಲು ಸೇರಬಹುದು. ಆಳವಾದ ಮಟ್ಟದಲ್ಲಿ, ನಮ್ಮ ವಿನಾಶಕಾರಿ ನಡವಳಿಕೆಯ ದೀರ್ಘಾವಧಿಯ ಪರಿಣಾಮಗಳನ್ನು ನಾವು ನೋಡಬಹುದು, ಏಕೆಂದರೆ ನಾವು ಭವಿಷ್ಯದಲ್ಲಿಯೂ ತೊಂದರೆಗಳನ್ನು ದೂರವಿರಿಸಲು ಬಯಸುತ್ತೇವೆ, ಕೇವಲ ಸದ್ಯಕ್ಕಾಗಿ ಅಲ್ಲ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಿ, ನಮ್ಮ ಕುಟುಂಬ, ಪ್ರೀತಿಪಾತ್ರರು, ಸ್ನೇಹಿತರು ಮತ್ತು ಸಮಾಜಕ್ಕೆ ತೊಂದರೆ ಮತ್ತು ಸಮಸ್ಯೆಗಳನ್ನು ಸೃಷ್ಟಿಸುವುದನ್ನು ತಪ್ಪಿಸಲು ನಾವು ಬಯಸಬಹುದು. ಇದೆಲ್ಲವೂ ಈ ಜೀವಿತಾವಧಿಯ ಗಡಿಯೊಳಗೆ ಅಡಕವಾಗಿರುತ್ತದೆ. ಇನ್ನೂ ಮುಂದೆ ಹೋದರೆ, ಜಾಗತಿಕ ತಾಪಮಾನ ಏರಿಕೆಯಂತಹ, ಭವಿಷ್ಯದ ಪೀಳಿಗೆಗಳಿಗೆ ತೊಂದರೆಗಳನ್ನು ಉಂಟುಮಾಡುವ ವಿಷಯಗಳನ್ನು ತಪ್ಪಿಸಲು ಬಯಸುವಂತಹ ಇನ್ನಷ್ಟು ವಿಸ್ತಾರವಾದ ವಿಷಯಗಳ ಬಗ್ಗೆ ಯೋಚಿಸಬಹುದು.
ಈ ಎಲ್ಲಾ ಪ್ರೇರಣೆಗಳ ವಿಷಯದಲ್ಲಿ, ನಾವು ಹೊಸತನ್ನು ಅಭಿವೃದ್ಧಿಪಡಿಸಿದಂತೆ ಹಳೆಯದನ್ನು ಬಿಟ್ಟುಕೊಡುವುದಿಲ್ಲ. ಬದಲಾಗಿ, ಅವು ಸಂಚಿತವಾಗಿವೆ ಮತ್ತು ಪರಸ್ಪರ ಒಟ್ಟಾಗುತ್ತವೆ. ಇದು ಕ್ರಮವಾದ ಮಾರ್ಗದ ಸಾಮಾನ್ಯ ತತ್ವವಾಗಿರುತ್ತದೆ. ಈ ಮೇಲೆ ವಿವರಿಸಿದ ಎಲ್ಲವನ್ನೂ ನಾನು "ಧರ್ಮ-ಲೈಟ್" ಎಂದು ಕರೆಯುತ್ತೇನೆ. ಇದು ಬೌದ್ಧ ಬೋಧನೆಗಳಾದ “ಧರ್ಮ”ವನ್ನು, ಈ ಜೀವತಾವಧಿಯ ವಿಷಯವಾಗಿ ಮಾತ್ರ ಪ್ರಸ್ತುತಪಡಿಸುತ್ತದೆ ಮತ್ತು ಪುನರ್ಜನ್ಮದ ಯಾವುದೇ ಉಲ್ಲೇಖವಿರುವುದಿಲ್ಲ. ನಾನು "ಧರ್ಮ-ಲೈಟ್" ಮತ್ತು "ರಿಯಲ್ ಥಿಂಗ್ ಧರ್ಮ" ಎಂಬ ಪದಗಳನ್ನು ಕೋಕಾ-ಕೋಲಾ ಲೈಟ್ ಮತ್ತು ನೈಜವಾದ, ಸಕ್ಕರೆ ಇರುವ ಕೋಕಾ-ಕೋಲಾಗೆ ಸಮಾನಾಂತರವಾಗಿ ರಚಿಸಿದ್ದೇನೆ.
ಕೇವಲ ಈ ಜೀವತಾವಧಿಯನ್ನು ಸುಧಾರಿಸುವ ಬಗ್ಗೆ ಯೋಚಿಸುವಾಗ, ಪುರ್ನಜನ್ಮವನ್ನು ಸಕಾರಾತ್ಮಕವಾಗಿ ಪರಿಗಣಿಸುವುದು
"ಧರ್ಮ" ಎಂಬುದು ಬುದ್ಧನ ಬೋಧನೆಗಳಿಗಾಗಿ ಇರುವ ಸಂಸ್ಕೃತ ಪದವಾಗಿದೆ. "ಲೈಟ್" ಅಲ್ಲಿ ಏನೋ ತಪ್ಪಿದೆ ಎಂದಲ್ಲ, ಅದು ಬಲವಾದ, ನೈಜ ವಿಷಯವಾಗಿರುವುದಿಲ್ಲ ಅಷ್ಟೆ. ಟಿಬೆಟಿಯನ್ ಸಂಪ್ರದಾಯಗಳಲ್ಲಿ ನಾವು ಕಂಡುಕೊಳ್ಳುವ ಲ್ಯಾಮ್-ರಿಮ್ನ ನಿಜವಾದ ಪ್ರಸ್ತುತಿಯು ನೈಜ ವಿಷಯದ್ದಾಗಿರುತ್ತದೆ, ಆದರೆ ಇದು ನಮ್ಮಲ್ಲಿ ಅನೇಕರಿಗೆ, ಆರಂಭದಲ್ಲಿ ತುಸು ಹೆಚ್ಚೆನಿಸಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ, ನಾವು ಪುನರ್ಜನ್ಮದಂತಹ ವಿಷಯವನ್ನು ಸಂಪೂರ್ಣವಾಗಿ ನಂಬುತ್ತೇವೆ ಎಂದು ಅದು ಊಹಿಸುತ್ತದೆ ಮತ್ತು ಪುನರ್ಜನ್ಮವಿದೆ ಎಂಬ ಪ್ರಮೇಯದಡಿ ಎಲ್ಲಾ ವಿಷಯಗಳನ್ನು ಪ್ರಸ್ತುತಪಡಿಸುತ್ತದೆ. ಈ ದೃಷ್ಟಿಕೋನದಿಂದ, ನಮ್ಮ ಮುಂದಿನ ಜೀವತಾವಧಿಗಳಲ್ಲಿ ತೊಂದರೆಗಳನ್ನು ತಪ್ಪಿಸಲು ಮತ್ತು ಅವುಗಳನ್ನು ಸುಧಾರಿಸುವ ಸಲುವಾಗಿ ನಾವು ಕೆಲಸ ಮಾಡಲು ಪ್ರಾರಂಭಿಸುತ್ತೇವೆ.
ಭವಿಷ್ಯದ ಜೀವತಾವಧಿಗಳಲ್ಲಿ ನಮಗೆ ನಂಬಿಕೆ ಇಲ್ಲದಿದ್ದರೆ, ಅವುಗಳನ್ನು ಸುಧಾರಿಸುವ ನಮ್ಮ ಪ್ರೇರಣೆಯ ಬಗ್ಗೆ ನಾವು ಹೇಗೆ ಪ್ರಾಮಾಣಿಕವಾಗಿರಬಲ್ಲೆವು? ಇದು ಸಾಧ್ಯವೇ ಇಲ್ಲ. ಹಿಂದಿನ ಮತ್ತು ಭವಿಷ್ಯದ ಜೀವತಾವಧಿಗಳ ಕಲ್ಪನೆಯ ಬಗ್ಗೆ ನಮಗೆ ಪ್ರಶ್ನೆಗಳಿದ್ದಾಗ ಮತ್ತು ನಮಗೆ ಮನವರಿಕೆಯಾಗದಿದ್ದಾಗ ಅಥವಾ ಅವುಗಳನ್ನು ಅರ್ಥಮಾಡಿಕೊಳ್ಳದಿದ್ದಾಗ, ನಾವು ಧರ್ಮ-ಲೈಟ್‌ನಿಂದ ಪ್ರಾರಂಭಿಸಬೇಕು. ನಮ್ಮ ಆಧ್ಯಾತ್ಮಿಕ ಅಭ್ಯಾಸದಲ್ಲಿ ಏನನ್ನು ಗುರಿಯಾಗಿಸಿಕೊಂಡಿದ್ದೇವೆ ಎಂಬುದರ ಬಗ್ಗೆ ನಾವು ನಮ್ಮೊಂದಿಗೆ ಪ್ರಾಮಾಣಿಕವಾಗಿರಬೇಕು.
ಬಹುಶಃ ನಮ್ಮಲ್ಲಿ ಹೆಚ್ಚಿನವರು, ಈ ಜೀವತಾವಧಿಯನ್ನು ಸ್ವಲ್ಪಮಟ್ಟಿಗೆ ಉತ್ತಮಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಇದು ನಿಜವಾಗಲೂ ಮಾನ್ಯವಾದ ಗುರಿಯಾಗಿದೆ. ಇದು ಮೊದಲ ಹೆಜ್ಜೆಯಾಗಿದ್ದು, ಅತ್ಯಂತ ಅಗತ್ಯವಾದ ಹೆಜ್ಜೆಯಾಗಿರುತ್ತದೆ. ನಾವು ಧರ್ಮ-ಲೈಟ್‌ನ ಈ ಹಂತದಲ್ಲಿರುವಾಗ, ನಾವು ಧರ್ಮ-ಲೈಟ್ ಅನ್ನು ಪಾಲಿಸುತ್ತಿದ್ದೇವೆ ಮತ್ತು ನಿಜವಾದ ವಿಷಯವನ್ನಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ಬಹಳಾ ಮುಖ್ಯ. ಇವೆರಡರ ನಡುವೆ ಗೊಂದಲಗೊಂಡರೆ, ನಾವು ಬೌದ್ಧಧರ್ಮವನ್ನು ಕೇವಲ ಮತ್ತೊಂದು ರೀತಿಯ ಚಿಕಿತ್ಸೆ ಅಥವಾ ಸ್ವಯಂ-ಸಹಾಯವಾಗಿ ಪರಿಗಣಿಸುತ್ತೇವೆ. ಅದು ಬೌದ್ಧಧರ್ಮವನ್ನು ಸೀಮಿತಗೊಳಿಸಿದ್ದು, ನ್ಯಾಯೋಚಿತವಾಗಿರುವುದಿಲ್ಲ.
ಧರ್ಮ ಎಂದರೆ ಏನು ಎಂದು ನಮಗೆ ಅರ್ಥವಾಗದಿದ್ದರೆ, ಅದನ್ನು ನಿಜವೆಂದು ನಂಬುವುದನ್ನು ಬಿಡಿ, ಅದು ಅರ್ಥವಾಗಿಲ್ಲ ಎಂಬುದರ ಬಗ್ಗೆ ನಾವು ಪ್ರಮಾಣಿಕವಾಗಿರಬೇಕು. ನಾವು ಮುಕ್ತ ಮನಸ್ಸಿನವರಾಗಿ, ಹೀಗೆ ಯೋಚಿಸಬೇಕು,"ಭವಿಷ್ಯದ ಜೀವತಾವಧಿ ಮತ್ತು ವಿಮೋಚನೆಯ ಬಗ್ಗೆ ಅವರು ಹೇಳುವುದೆಲ್ಲಾ ನಿಜವೇ ಎಂದು ನನಗೆ ಖಚಿತವಾಗಿ ತಿಳಿದಿಲ್ಲ, ಆದರೆ ಸದ್ಯಕ್ಕೆ ನಾನು ಧರ್ಮ-ಲೈಟ್ನ ಮಟ್ಟದಲ್ಲಿ ಕೆಲಸ ಮಾಡುತ್ತದ್ದೇನೆ. ನಾನು ಮತ್ತಷ್ಟು ಅಭಿವೃದ್ಧಿ ಹೊಂದಿದಾಗ ಮತ್ತು ಹೆಚ್ಚು ಅಧ್ಯಯನ ಮಾಡಿದಾಗ ಮತ್ತು ಧ್ಯಾನಿಸಿದಾಗ, ಬಹುಶಃ ನಾನು ನಿಜವಾದ ಧರ್ಮದ ಬಗ್ಗೆ ಹೆಚ್ಚು ಅರ್ಥಮಾಡಿಕೊಳ್ಳಬಹುದು.” ಇದು ಅತ್ಯಂತ ಮಾನ್ಯವಾದ ಮತ್ತು ಉತ್ತಮವಾದ ವಿಧಾನವಾಗಿರುತ್ತದೆ, ಮತ್ತು ಬುದ್ಧನ ಆ ವಿಷಯಗಳನ್ನು ಕಲಿಸಿದಾಗ, ಅವರು ಅಸಂಬದ್ಧವಾಗಿ ಮಾತನಾಡಿರುವುದಿಲ್ಲ ಎಂಬ ಗೌರವ ಮತ್ತು ನಂಬಿಕೆಯನ್ನು ಆಧರಿಸಿರುತ್ತದೆ.
ಭವಿಷ್ಯದ ಜೀವತಾವಧಿ ಮತ್ತು ವಿಮೋಚನೆಯನ್ನು ವಿವರಿಸುವ ಮತ್ತು ವ್ಯಾಖ್ಯಾನಿಸುವ ಬಗ್ಗೆ ನಾವು ನಂಬಿರುವ ಕೆಲವು ವಿಚಾರಗಳು ತಪ್ಪಾಗಿರಬಹುದು ಮತ್ತು ಬೌದ್ಧಧರ್ಮವು ಆ ಪೂರ್ವಕಲ್ಪಿತ ವ್ಯಾಖ್ಯಾನಗಳು ಅಥವಾ ವಿವರಣೆಗಳನ್ನು ಸ್ವೀಕರಿಸುವುದಿಲ್ಲ ಎಂಬ ವಿಷಯವನ್ನು ನಾವು ಒಪ್ಪಿಕೊಳ್ಳಬೇಕು. ಹೀಗಾಗಿ ನಾವು ನಂಬುವ ಒಂದು ಅರ್ಥವನ್ನು ಅಥವಾ ನಾವು ಹಾಸ್ಯಾಸ್ಪದವಾಗಿ ಕಾಣುವ ವಿಷಯವನ್ನು ಬುದ್ಧನೂ ಕೂಡ ಹಾಸ್ಯಾಸ್ಪದವಾಗಿ ಕಾಣಬಹುದು, ಏಕೆಂದರೆ ಅದು ಸಂಪೂರ್ಣವಾದ ತಪ್ಪು ತಿಳುವಳಿಕೆಯಾಗಿರಬಹುದು. ಉದಾಹರಣೆಗೆ, ಆತ್ಮವು ರೆಕ್ಕೆಬಡಿದು, ನಮ್ಮ ದೇಹದಿಂದ ಹಾರಿಹೋಗಿ ಇನ್ನೊಂದನ್ನು ಪ್ರವೇಶಿಸುತ್ತದೆ ಎಂಬುದನ್ನು ಬುದ್ಧನು ಒಪ್ಪಿಕೊಳ್ಳುವುದಿಲ್ಲ. ನಾವೇ ಸರ್ವಶಕ್ತ ದೇವರಾಗಬಹುದು ಎಂಬ ಕಲ್ಪನೆಯನ್ನೂ ಕೂಡ ಬುದ್ದ ತಿರಸ್ಕರಿಸುತ್ತಾರೆ.
ಆರಂಭವಿಲ್ಲದ ಪುನರ್ಜನ್ಮದ ಪರಿಭಾಷೆಯಲ್ಲಿ ಯೋಚಿಸುವ ಪ್ರಯೋಜನಗಳು
ಈ ಕ್ರಮವಾದ ಮಾರ್ಗದಲ್ಲಿ ಪ್ರಸ್ತುತಪಡಿಸಲಾದ ಹೆಚ್ಚಿನ ವಿಧಾನಗಳನ್ನು ಧರ್ಮ-ಲೈಟ್ ಅಥವಾ ನಿಜವಾದ ಧರ್ಮದ ರೀತಿಯಲ್ಲಿ ಅನ್ವಯಿಸಬಹುದು. ಆದಾಗ್ಯೂ, ಭವಿಷ್ಯದ ಜೀವನವನ್ನು ಅರ್ಥಮಾಡಿಕೊಳ್ಳುವುದನ್ನು ಅವಲಂಬಿಸಿರುವ ಕೆಲವು ವಿಧಾನಗಳೂ ಇವೆ. ಉದಾಹರಣೆಗೆ, ಪ್ರತಿಯೊಬ್ಬರ ಕಡೆಗೆ ಸಮಾನವಾದ ಪ್ರೀತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗಲು, ಪ್ರತಿಯೊಬ್ಬರೂ ಪ್ರಾರಂಭವಿಲ್ಲದ ಪುನರ್ಜನ್ಮಗಳನ್ನು ಒಳಗೊಂಡಿದ್ದಾರೆ ಮತ್ತು ಸೀಮಿತ ಸಂಖ್ಯೆಯ ಜೀವಿಗಳು ಇವೆ ಎಂದು ಗುರುತಿಸುವುದು ಒಂದು ವಿಧಾನವಾಗಿದೆ. ಇಲ್ಲಿಂದ ಆರಂಭವಾಗಿ, ಒಂದು ಮಟ್ಟದಲ್ಲಿ ಅಥವಾ ಇನ್ನೊಂದರಲ್ಲಿ, ಪ್ರತಿಯೊಂದು ಜೀವಿಯೂ ನಮ್ಮ ತಾಯಿ, ಮತ್ತು ಎಲ್ಲರ ತಾಯಿಯಾಗಿದೆ ಎಂಬ ವಿಷಯವನ್ನು ತಾರ್ಕಿಕವಾಗಿ ಅನುಸರಿಸುತ್ತದೆ. ಬೇಕಾದರೆ, ಯಾವುದೇ ಆರಂಭವಿಲ್ಲದ ಸೀಮಿತ ಸಂಖ್ಯೆಯ ಜೀವಿಗಳ ತರ್ಕಬದ್ಧವಾದ ಗಣಿತದ ಪುರಾವೆಯನ್ನು ಒಬ್ಬರು ಪ್ರಸ್ತುತಪಡಿಸಬಹುದು. ಅನಂತ ಸಮಯ ಮತ್ತು ಅನಂತ ಜೀವಿಗಳು ಎರಡೂ ಇದ್ದಲ್ಲಿ, ಅದು ಈ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಾಬೀತುಪಡಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ.
ನಿಸ್ಸಂಶಯವಾಗಿ, ಇದರೊಂದಿಗೆ ಸಂಬಂಧಿಸಲು ಬಹಳಾ ಕಷ್ಟಕರವಾಗಿರುತ್ತದೆ, ವಿಶೇಷವಾಗಿ ಅನಂತ ಹಿಂದಿನ ಪುನರ್ಜನ್ಮಗಳ ಬಗ್ಗೆ ನಾವು ಎಂದಿಗೂ ಯೋಚಿಸದಿದ್ದಲ್ಲಿ ಇದು ಇನ್ನೂ ಕಷ್ಟಕರವಾಗಿರುತ್ತದೆ. ಅನಂತ ಪುನರ್ಜನ್ಮದ ಆಧಾರದ ಮೇಲೆ, ಎಲ್ಲಾ ಜೀವಿಗಳು ನಮಗೆ ತಾಯಿಯ ಮಮತೆಯನ್ನು ತೋರಿಸಿದ ವಿಷಯವಾಗಿ ನಾವು ಯೋಚಿಸಬಹುದು, ಅದನ್ನು ನಾವು ಶ್ಲಾಘಿಸುತ್ತೇವೆ ಮತ್ತು ಪ್ರತಿಯಾಗಿ ದಯೆ ಮತ್ತು ಪ್ರೀತಿಯಿಂದ ಇರಲು ಬಯಸುತ್ತೇವೆ. ಅದನ್ನು ಆಧರಿಸಿರುವ ಒಂದು ಸಂಪೂರ್ಣ ಬೆಳವಣಿಗೆಯೇ ಇದೆ. ಈ ಪ್ರಕ್ರಿಯೆಯ ಭಾಗವು, ಈ ವ್ಯಕ್ತಿ ಅಥವಾ ಆ ವ್ಯಕ್ತಿ ನಮ್ಮ ತಾಯಿಯಾಗುವ ಸಾಧ್ಯತೆಯು, ಕೇವಲ ಸಮಯದ ಮಾತಷ್ಟೆ ಎಂದು ಪರಿಗಣಿಸುವುದಾಗಿದೆ. ನಾವು ನಮ್ಮ ತಾಯಿಯನ್ನು ಹತ್ತು ನಿಮಿಷ, ಹತ್ತು ದಿನ ಅಥವಾ ಹತ್ತು ವರ್ಷಗಳ ಕಾಲ ನೋಡಿಲ್ಲದಿದ್ದರೂ, ಅವರು ಇನ್ನೂ ನಮ್ಮ ತಾಯಿಯೇ. ಅದೇ ರೀತಿ, ನಾವು ಅವರನ್ನು ಹತ್ತು ಜೀವಿತಾವಧಿಗಳ ಕಾಲ ನೋಡದಿದ್ದರೂ, ಅವರು ಇನ್ನೂ ನಮ್ಮ ತಾಯಿಯೇ. ನಾವು ಪುನರ್ಜನ್ಮವನ್ನು ನಂಬಿದರೆ, ಇದು ತುಂಬಾ ಸಹಾಯಕವಾಗಬಲ್ಲ ಆಲೋಚನಾ ವಿಧಾನವಾಗಿದೆ. ಈ ನಂಬಿಕೆಯಿಲ್ಲದೆ, ಇದು ಕೇವಲ ಅಸಂಬದ್ಧವೆನಿಸುತ್ತದೆ.
ಕೇವಲ ಜನರಲ್ಲ, ಬದಲಿಗೆ ನಾವು ಸೊಳ್ಳೆಗಳ ಬಗ್ಗೆ ಯೋಚಿಸುವಾಗ ಇದು ವಿಶೇಷವಾಗಿ ಅನ್ವಯವಾಗುತ್ತದೆ. ಈ ಸೊಳ್ಳೆಯು, ಹಿಂದಿನ ಜೀವಿತಾವಧಿಯಲ್ಲಿ ನಮ್ಮ ತಾಯಿಯಾಗಿತ್ತು, ಏಕೆಂದರೆ ಪುನರ್ಜನ್ಮವು ಮಾನಸಿಕ ಚಟುವಟಿಕೆಯನ್ನು ಹೊಂದಿರುವ ಯಾವುದೇ ರೂಪದಲ್ಲಿರಬಹುದು. ಇದರ ಧರ್ಮ-ಲೈಟ್ ರೂಪಾಂತರವೂ ಇದೆ, ಇಲ್ಲಿ ಯಾರಾದರೂ ನಮ್ಮನ್ನು ಮನೆಗೆ ಕರೆತರಬಹುದು, ನಮ್ಮನ್ನು ನೋಡಿಕೊಳ್ಳಬಹುದು ಮತ್ತು ನಮಗೆ ಆಹಾರವನ್ನು ನೀಡಬಹುದು ಎಂಬುದನ್ನು ನಾವು ಪರಿಗಣಿಸುತ್ತೇವೆ. ಪ್ರತಿಯೊಬ್ಬರೂ ಹೀಗೆ ಮಾಡಲು ಸಮರ್ಥರು; ನಾವು ಪ್ರಯಾಣಿಸುವಾಗ, ಸಂಪೂರ್ಣವಾದ ಅಪರಿಚಿತರು, ನಮಗೆ ತುಂಬಾ ಒಳ್ಳೆಯವರಾಗಿ, ಆತಿಥ್ಯವನ್ನು ನೀಡಬಹುದು ಎಂದು ನಾವು ಆಗಾಗ್ಗೆ ಕಂಡುಕೊಳ್ಳುತ್ತೇವೆ. ಅದು ಪುರುಷ ಅಥವಾ ಮಹಿಳೆಯಾಗಿರಬಹುದು, ಪ್ರತಿಯೊಬ್ಬರೂ ನಮ್ಮೊಂದಿಗೆ ತಾಯಿಯಂತೆ ವರ್ತಿಸಬಹುದು. ಒಂದು ಮಗುವು ಬೆಳೆದಾಗ, ಅದು ಕೂಡ ನಮ್ಮನ್ನು ನೋಡಿಕೊಳ್ಳಲು ಸಹಾಯ ಮಾಡಬಹುದು. ಇದು ಸ್ವಲ್ಪ ಸೀಮಿತವಾಗಿದ್ದರೂ, ಬಹಳಾ ಸಹಾಯಕವಾಗಬಹುದು ಏಕೆಂದರೆ ನಮಗೆ ಕಾಣುವ ಈ ಸೊಳ್ಳೆಯು, ನಮ್ಮನ್ನು ಮನೆಗೆ ಕರೆದುಕೊಂಡು ಹೋಗಿ ತಾಯಿಯಂತೆ ನೋಡಿಕೊಳ್ಳುತ್ತದೆ ಎಂದು ಯೋಚಿಸುವುದು ಕಷ್ಟ.
ಇದು ಧರ್ಮ-ಲೈಟ್ ಮತ್ತು ನಿಜವಾದ ಧರ್ಮದ ಮಟ್ಟಗಳಲ್ಲಿ, ವಿಧಾನಗಳನ್ನು ಹೇಗೆ ಅನ್ವಯಿಸಬಹುದು ಎಂಬುದನ್ನು ಸ್ವಲ್ಪ ವಿವರಿಸುತ್ತದೆ. ಎರಡೂ ತಮ್ಮದೇ ಆದ ರೀತಿಯಲ್ಲಿ ಬಹಳಾ ಸಹಾಯಕವಾಗಿರುತ್ತವೆ, ಆದರೆ ಧರ್ಮ-ಲೈಟ್ ರೂಪಾಂತರವು ಸ್ವಲ್ಪಮಟ್ಟಿಗೆ ಸೀಮಿತವಾಗಿರುತ್ತದೆ. ನಿಜವಾದ ಧರ್ಮವು ಸಾಧ್ಯತೆಗಳ ದೊಡ್ಡ ವ್ಯಾಪ್ತಿಯನ್ನು ತೆರೆಯುತ್ತದೆ. ನಾವು ಯಾವ ಮಟ್ಟವನ್ನೇ ಅನ್ವಯಿಸಲಿ, ಅದನ್ನು ದೈನಂದಿನ ಜೀವನದಲ್ಲಿ ಅನ್ವಯಿಸುವುದು ಮುಖ್ಯವಾದ ಅಂಶವಾಗಿದೆ. ನಾವು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಾಗ ಅಥವಾ ನಾವು ಉದ್ದವಾದ ಸರತಿ ಸಾಲಿನಲ್ಲಿ ಕಾಯುತ್ತಿರುವಾಗ ಮತ್ತು ಇತರರ ಮೇಲೆ ನಾವು ಕೋಪಗೊಂಡಾಗ ಅಥವಾ ಅಸಹನೆಗೊಂಡಾಗ, ಅವರೆಲ್ಲರನ್ನು ನಮ್ಮ ತಾಯಿಯೆಂದು ಪರಿಗಣಿಸಬಹುದು. ಇದನ್ನು ನಮ್ಮ ಹಿಂದಿನ ಜೀವನ ಅಥವಾ ಈ ಜೀವನದ ವಿಷಯವಾಗಿಯೇ ಯೋಚಿಸಬಹುದು, ಮತ್ತು ಇದು ನಮ್ಮ ಕೋಪವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ, ತಾಳ್ಮೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ತಾಯಿ, ಸರದಿಯಲ್ಲಿ ನಮಗಿಂತ ಮುಂದಿದ್ದರೆ, ಅವರು ಮೊದಲು ಸೇವೆ ಸ್ವೀಕರಿಸುವುದರ ಬಗ್ಗೆ ನಾವು ಬೇಸರಗೊಳ್ಳುವುದಿಲ್ಲ ಎಂದು ನನಗೆ ಖಂಡಿತವಾಗಿಯೂ ನಂಬಿಕೆಯಿದೆ. ಬಹುಶಃ, ವಾಸ್ತವದಲ್ಲಿ ಆಕೆ ಮೊದಲು ಸೇವೆ ಪಡೆದರೆ ನಾವು ಬಹಳಾ ಸಂತೋಷಪಡಬಹುದು. ಈ ರೀತಿಯಾಗಿ ನಾವು ಈ ತಿಳುವಳಿಕೆಗಳನ್ನು ಅನ್ವಯಿಸಲು ಪ್ರಯತ್ನಿಸಬಹುದು. ನಾವು ಕೇವಲ ನಮ್ಮ ಧ್ಯಾನದ ಕುಶನ್ ಮೇಲೆ ಕುಳಿತಿರುವಾಗ ಈ ಮನಸ್ಥಿತಿಗಳನ್ನು ಅಭಿವೃದ್ಧಿಪಡಿಸಬಾರದು, ಬದಲಿಗೆ ನಮ್ಮ ದೈನಂದಿನ ಜೀವನದಲ್ಲಿ ಅವನ್ನು ಅಳವಡಿಸಿಕೊಳ್ಳಬೇಕು.
ಸಾರಾಂಶ
ಬೌದ್ಧಧರ್ಮದ ಅಭ್ಯಾಸವನ್ನು ಧರ್ಮ-ಲೈಟ್ ಮತ್ತು ನಿಜವಾದ ಧರ್ಮ ಎಂದು ವಿಂಗಡಿಸಬಹುದು. ಧರ್ಮ-ಲೈಟ್‌ನೊಂದಿಗೆ, ಜೀವನವು ನಮ್ಮತ್ತ ಎಸೆಯುವ ಸಮಸ್ಯೆಗಳನ್ನು ಉತ್ತಮವಾಗಿ ನಿಭಾಯಿಸಲು, ಮಾನಸಿಕ ಸಾಧನಗಳೊಂದಿಗೆ ನಮ್ಮನ್ನು ಸಜ್ಜುಗೊಳಿಸುವ ಮೂಲಕ ಪ್ರಸ್ತುತ ಜೀವನದ ಗುಣಮಟ್ಟವನ್ನು ಸುಧಾರಿಸಲು ಬಯಸುತ್ತೇವೆ. ಧರ್ಮ-ಲೈಟ್‌ನಲ್ಲಿ ಯಾವುದೇ ತಪ್ಪಿಲ್ಲವಾದರೂ, ಕೋಕಾ-ಕೋಲಾ ಲೈಟ್‌ನಂತೆಯೇ, ಇದು ಎಂದಿಗೂ ನೈಜ ವಸ್ತುವಿನಷ್ಟು ರುಚಿಕರವಾಗಿರುವುದಿಲ್ಲ.
ಸಾಂಪ್ರದಾಯಿಕವಾಗಿ, ಲ್ಯಾಮ್-ರಿಮ್ ಬೋಧನೆಗಳು, ಧರ್ಮ-ಲೈಟ್ನ ವಿಷಯದಲ್ಲಿ ಚರ್ಚಿಸಿದ ಯಾವುದೇ ವಿಚಾರಗಳನ್ನು ಉಲ್ಲೇಖಿಸುವುದಿಲ್ಲ, ಏಕೆಂದರೆ ಇದು ಹಿಂದಿನ ಮತ್ತು ಭವಿಷ್ಯದ ಜೀವತಾವಧಿಗಳಲ್ಲಿರುವ ನಂಬಿಕೆಯನ್ನು ಊಹಿಸುತ್ತದೆ. ಏನೇ ಆಗಲಿ, ನಮ್ಮ ಜೀವನವನ್ನು ಸುಧಾರಿಸಲು ಮತ್ತು ಉತ್ತಮ ಜನರಾಗಲು ಬಯಸುವುದು ನಿಜವಾದ ಧರ್ಮವನ್ನು ಅಭ್ಯಾಸ ಮಾಡುವ ಹಾದಿಯಲ್ಲಿನ ಅಗತ್ಯವಾದ ಮೊದಲ ಹೆಜ್ಜೆಯಾಗಿರುತ್ತದೆ.