ನಿಜವಾದ ಧರ್ಮಕ್ಕಾಗಿ ಬೇಕಾಗಿರುವ ಪ್ರೇರಣೆಯ ಮೂರು ಮಟ್ಟಗಳು
ಲ್ಯಾಮ್-ರಿಮ್, ಮೂರು ಮಟ್ಟದ ಪ್ರೇರಣೆಯನ್ನು ಒದಗಿಸಿಕೊಡುತ್ತದೆ:
- ಆರಂಭಿಕ ಮಟ್ಟ - ನಮ್ಮ ಮುಂದಿನ ಜೀವಿತಾವಧಿಯಲ್ಲಿ ಮಾತ್ರವಲ್ಲದೆ, ನಾವು ಭವಿಷ್ಯದ ಎಲ್ಲಾ ಜೀವಿತಾವಧಿಯಲ್ಲಿ ಉತ್ತಮವಾದ ಪುನರ್ಜನ್ಮವನ್ನು ಪಡೆಯಲಿದ್ದೇವೆ ಎಂದು ಖಚಿತಪಡಿಸಿಕೊಳ್ಳುವ ವಿಷಯವಾಗಿ ನಾವು ಯೋಚಿಸುತ್ತೇವೆ.
- ಮಧ್ಯಂತರ ಮಟ್ಟ - ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಸಂಪೂರ್ಣ ವಿಮೋಚನೆಯನ್ನು ಪಡೆಯುವುದು ನಮ್ಮ ಪ್ರೇರಣೆಯಾಗಿರುತ್ತದೆ; ನಾವು ವಿಮೋಚನೆ ಪಡೆಯಲು ಬಯಸುತ್ತೇವೆ.
- ಉನ್ನತ ಮಟ್ಟ - ನಾವು ಸಂಪೂರ್ಣವಾಗಿ ಪ್ರಬುದ್ಧವಾದ ಬುದ್ಧನ ಸ್ಥಿತಿಯನ್ನು ತಲುಪುವ ಗುರಿಯನ್ನು ಹೊಂದಿರುತ್ತೇವೆ, ಉಳಿದವರೆಲ್ಲರೂ ಕೂಡ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಮುಕ್ತರಾಗಲು ಸಹಾಯ ಮಾಡುತ್ತೇವೆ.
ಪ್ರತಿಯೊಂದು ಮಟ್ಟವು ಪುನರ್ಜನ್ಮದ ವಿಚಾರವನ್ನು ಆಧರಿಸಿವೆ ಎಂಬುದು ಸ್ಪಷ್ಟವಾಗಿದೆ. ಆದರೂ, ನಾವು ಮೊದಲೇ ಚರ್ಚಿಸಿದಂತೆ, ಈ ಮೂರು ಮಟ್ಟಗಳಲ್ಲಿ ಪ್ರಸ್ತುತಪಡಿಸಲಾದ ವಿಚಾರದಲ್ಲಿನ ಪ್ರತಿಯೊಂದು ವಿಧಾನವನ್ನು ಧರ್ಮ-ಲೈಟ್ ಮಟ್ಟದಲ್ಲಿಯೂ ಅನ್ವಯಿಸಬಹುದು. ಈ ಪ್ರೇರಣೆಗಳನ್ನು ನಾವು ಕ್ಷುಲ್ಲಕಗೊಳಿಸಬಾರದು, ಏಕೆಂದರೆ ನಾವು ಅವುಗಳನ್ನು ಪ್ರಾಮಾಣಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾದರೆ ಅವು ನಿಜವಾಗಿಯೂ ಗಮನಾರ್ಹವಾಗಿರುತ್ತವೆ.
ನಮ್ಮ ಅಮೂಲ್ಯ ಅವಕಾಶಗಳನ್ನು ವ್ಯರ್ಥ ಮಾಡದಿರಲು ಸಾವು ಮತ್ತು ಅಶಾಶ್ವತತೆಯ ಬಗ್ಗೆ ಯೋಚಿಸುವುದು
ನಮ್ಮಲ್ಲಿರುವ ಅಮೂಲ್ಯವಾದ ಜೀವನವು ಶಾಶ್ವತವಾಗಿ ಉಳಿಯುವುದಿಲ್ಲ ಎಂದು ನಿಜವಾಗಿಯೂ ಅರ್ಥಮಾಡಿಕೊಳ್ಳುವುದು ಆರಂಭಿಕ ಮಟ್ಟದ ಮುಂದಿನ ಅಂಶವಾಗಿದೆ. ಇದು ನಮ್ಮ ಜೀವನದಲ್ಲಿ ಸಂದರ್ಭಗಳು ಬದಲಾಗುತ್ತವೆ ಎಂಬ ಅಂಶಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ನಾವೆಲ್ಲರೂ ನಿಜವಾಗಿ ಸಾಯುತ್ತೇವೆ ಎಂಬದುನ್ನೂ ಒಳಗೊಂಡಿರುತ್ತದೆ. ಆದ್ದರಿಂದ, ಸಾವಿನ ಬಗೆಗಿರುವ ಬಹಳಷ್ಟು ಧ್ಯಾನಗಳಿರುವುದನ್ನು ನಾವು ನೋಡುತ್ತೇವೆ. ಅನೇಕರು, ಅನೇಕ ಸಮಾಜಗಳಲ್ಲಿ, ಸಾವನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಾರೆ, ಸಾಮಾನ್ಯವಾಗಿ ಇದು ನಿಷೇಧಿತ ವಿಷಯವಾಗಿರುತ್ತದೆ. ಒಂದು ಕಾಲದಲ್ಲಿ ನಾವೆಲ್ಲರೂ ಸಾಯುತ್ತೇವೆ ಎಂಬ ವಾಸ್ತವವನ್ನು ನಾವು ನಿಜವಾಗಿಯೂ ಒಪ್ಪಿಕೊಳ್ಳುವುದಿಲ್ಲ. ಇದು ನಮ್ಮ ಪ್ರೀತಿಪಾತ್ರರನ್ನು, ನಮಗೆ ತಿಳಿದಿರುವ ಪ್ರತಿಯೊಬ್ಬರನ್ನೂ ಮತ್ತು ನಮ್ಮನ್ನೂ ಒಳಗೊಂಡಿರುತ್ತದೆ. ಇದು ವಾಸ್ತವವಾಗಿರುತ್ತದೆ.
ನಾವು ಖಂಡಿತವಾಗಿಯೂ ಸಾಯುತ್ತೇವೆ ಎಂಬ ಅಂಶವನ್ನು ಬೆಂಬಲಿಸಲು ಹಲವು ಕಾರಣಗಳಿವೆ. ಇದುವರೆಗೆ ಬದುಕಿದವರೆಲ್ಲರೂ ಸತ್ತಿದ್ದಾರೆ, ಹಾಗಾದರೆ ನಾವು ಏಕೆ ವಿಶೇಷವಾಗಿರುತ್ತೇವೆ ಅಥವಾ ಅವರಿಗಿಂತ ಭಿನ್ನರಾಗಿರುತ್ತೇವೆ? ಸಾವಿನ ಅಂತಿಮ ಕಾರಣವು ನಮ್ಮ ಹುಟ್ಟಾಗಿರುತ್ತದೆ, ಆದ್ದರಿಂದ ನಾವು ಹುಟ್ಟಿದ್ದರೆ, ನಾವು ಸಾಯುತ್ತೇವೆ. ನಮಗೆ ವಯಸ್ಸಾದಂತೆ ನಮ್ಮ ದೇಹವು ದುರ್ಬಲಗೊಳ್ಳುತ್ತದೆ ಮತ್ತು ಕುಸಿಯಲು ಪ್ರಾರಂಭಿಸುತ್ತದೆ. ಇದು, ನಾವು ಯೋಚಿಸುವಷ್ಟು ಬಲವಾಗಿರುವುದಿಲ್ಲ, ಬದಲಿಗೆ ಬಹಳ ಸುಲಭವಾಗಿ ಹಾನಿಗೊಳಗಾಗಬಹುದು ಮತ್ತು ಗಾಯಗೊಳ್ಳಬಹುದು. ಇದನ್ನು ನಾವು ಮೊದಲು ತಾರ್ಕಿಕವಾಗಿ ಮನವರಿಕೆ ಮಾಡಿಕೊಳ್ಳಬೇಕು, ಆಗ ಇದನ್ನು ಭಾವನಾತ್ಮಕ ಮಟ್ಟದಲ್ಲಿ ನಿಧಾನವಾಗಿ ಒಪ್ಪಿಕೊಳ್ಳಬಹುದು.
ನಾವು ಖಂಡಿತವಾಗಿಯೂ ಸಾಯುತ್ತೇವೆ ಎಂಬ ಅಂಶದ ಜೊತೆಗೆ, ಎರಡನೆಯ ಅಂಶವೆಂದರೆ ನಾವು ಯಾವಾಗ ಸಾಯುತ್ತೇವೆ ಎಂದು ನಮಗೆ ತಿಳಿದಿರುವುದಿಲ್ಲ. ಸಾಯಲು ನಮಗೆ ವಯಸ್ಸಾಗುವ ಅಥವಾ ಅನಾರೋಗ್ಯದ ಅಗತ್ಯವಿಲ್ಲ; ಅನೇಕ ಯುವ ಮತ್ತು ಆರೋಗ್ಯವಂತ ಜನರು, ವಯಸ್ಸಾದ ಮತ್ತು ಅನಾರೋಗ್ಯಕ್ಕ ಒಳಗಾದ ಜನರಿಗಿಂತ ಮೊದಲು ಸಾಯುತ್ತಾರೆ. ಇತ್ತೀಚೆಗೆ ಒಂದು ದೊಡ್ಡ ವಿಮಾನ ಅಪಘಾತ ಸಂಭವಿಸಿದ್ದು, ಆ ವಿಮಾನವನ್ನು ಹತ್ತಿದಾಗ ಅದು ಅಪಘಾತಕ್ಕೀಡಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಯಾವಾಗ ಬೇಕಾದರೂ ನಮಗೆ ಬಸ್ಸೊಂದು ಡಿಕ್ಕಿ ಹೊಡೆಯಬಹುದು. ನನ್ನ ಆತ್ಮೀಯ ಸ್ನೇಹಿತರೊಬ್ಬರು, 54 ವರ್ಷದವರು ಮತ್ತು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದವರು, ಎರಡು ವಾರಗಳ ಹಿಂದೆ ಹಠಾತ್ ಆಗಿ ಸಂಭವಿಸಿದ ಹೃದಯಾಘಾತದಿಂದ ನಿಧನಗೊಂಡರು.
ಸಾವು ಯಾವ ಕ್ಷಣದಲ್ಲಾದರೂ ಬರಬಹುದು ಎಂಬ ವಿಷಯವನ್ನು ಬೆಂಬಲಿಸಲು ಬಹಳಷ್ಟು ಕಾರಣಗಳಿವೆ. ಮರಣವು ನಮ್ಮ ಕೆಲಸ ಅಥವಾ ನಮ್ಮ ಊಟ ಅಥವಾ ಯಾವುದೇ ವಿಷಯವು ಮುಗಿಯುವ ತನಕ ಕಾಯುವುದಿಲ್ಲ. "ಒಂದು ನಿಮಿಷ, ಇದನ್ನು ಮುಗಿಸುತ್ತೇನೆ" ಎಂದು ಸಾವಿಗೆ ಹೇಳಲು ಸಾಧ್ಯವಿಲ್ಲ. ಸಾವು ಬಂದಾಗ, ಅದು ಬರುತ್ತದೆ ಮತ್ತು ನಮ್ಮ ಜೀವನವು ಕೊನೆಗೊಳ್ಳುತ್ತದೆ. ನಮ್ಮ ಸಮಯ ಮುಗಿದ ನಂತರ, ಅದನ್ನು ವಿಸ್ತರಿಸಲು ನಮಗೆ ಏನೂ ಮಾಡಲು ಸಾಧ್ಯವಿಲ್ಲ. ನೀವು ಸಾವಿಗೆ ಲಂಚ ನೀಡಲು ಸಾಧ್ಯವಿಲ್ಲ. ನಾವು ನಮ್ಮ ದೇಹವನ್ನು ಜೀವಾಧಾರಕ ಯಂತ್ರದೊಂದಿಗೆ ಉಳಿಸಿಕೊಳ್ಳಬಹುದು, ಆದರೆ ಅಂತಹ ನಿರ್ಜೀವ ಸ್ಥಿತಿಯಲ್ಲಿ ಉಳಿಯುವುದರ ಗುರಿಯಾದರೂ ಏನು, ಏಕೆಂದರೆ ನಮ್ಮ ಜೀವನವು ಆಗಲೇ ಒಂದು ರೀತಿಯಲ್ಲಿ ಕೊನೆಗೊಂಡಿರುತ್ತದೆ.
ಸಾವಿನ ಬಗೆಗಿರುವ ಮೂರನೇ ಅಂಶವೆಂದರೆ, ನಾವು ಸಾವಿನ ಅಂಚಿನಲ್ಲಿರುವಾಗ ನಮಗೆ ಯಾವುದು ಸಹಾಯಕವಾಗಿರುತ್ತದೆ ಎಂಬುದನ್ನು ಪರಿಶೀಲಿಸುವುದಾಗಿರುತ್ತದೆ. ನಾವು ಹಣವನ್ನು, ಸ್ನೇಹಿತರು ಅಥವಾ ಕುಟುಂಬವನ್ನು ನಮ್ಮೊಂದಿಗೆ ಕರೆದೊಯ್ಯಲು ಸಾಧ್ಯವಿಲ್ಲ. ನಾವು ಒಂದು ಪಿರಮಿಡ್ ಅನ್ನು ನಿರ್ಮಿಸಿ, ನಾವು ಸತ್ತಾಗ ಅವರೆಲ್ಲರನ್ನೂ ಅದರೊಳಗೆ ಇರಿಸಿದರೂ, ಅವರು ನಿಜವಾಗಿಯೂ ನಮ್ಮೊಂದಿಗೆ ಬರುವುದಿಲ್ಲ. ಬೌದ್ಧ ದೃಷ್ಟಿಕೋನದಿಂದ, ನಾವು ಸಾಯುವಾಗ ನಮಗೆ ಸಹಾಯ ಮಾಡುವ ವಿಷಯವೆಂದರೆ, ನಮ್ಮ ಮಾನಸಿಕ ನಿರಂತರತೆಯ ಮೂಲಕ ನಾವು ನಿರ್ಮಿಸಿದ ಸಕಾರಾತ್ಮಕ ಅಭ್ಯಾಸಗಳಾಗಿರುತ್ತವೆ.
ಬಹುಶಃ ನಾವು ಸಾಕಷ್ಟು ಸಕಾರಾತ್ಮಕ ಕೆಲಸಗಳನ್ನು ಮಾಡಿದ್ದೇವೆ ಮತ್ತು ಇತರರಿಗೆ ಸಹಾಯ ಮಾಡಿದ್ದೇವೆ ಅಥವಾ ಬಹುಶಃ ನಮ್ಮ ಕೋಪ, ಸ್ವಾರ್ಥ ಮತ್ತು ಮುಂತಾದವುಗಳನ್ನು ಕಡಿಮೆ ಮಾಡುವ ಆಧ್ಯಾತ್ಮಿಕ ಹಾದಿಯಲ್ಲಿ ನಾವು ಬಹಳಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಇದು ನಮ್ಮ ಮಾನಸಿಕ ನಿರಂತರತೆಯ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಧರ್ಮ-ಲೈಟ್ ದೃಷ್ಟಿಕೋನದಿಂದ, ನಾವು ಪಶ್ಚಾತ್ತಾಪವಿಲ್ಲದೆ ಸಾಯಬಹುದು ಮತ್ತು ನಾವು ಮೌಲ್ಯಯುತವಾದ, ಸಕಾರಾತ್ಮಕ ಜೀವನವನ್ನು ನಡೆಸಿದ್ದೇವೆ, ವಿಶೇಷವಾಗಿ ನಮ್ಮ ಪ್ರೀತಿಪಾತ್ರರಿಗಾಗಿ ಕಾಳಜಿ ವಹಿಸಿದ್ದೇವೆ ಅಥವಾ ಸಮಾಜಕ್ಕೆ ಒಂದು ಚಿಕ್ಕ ಕೊಡುಗೆ ನೀಡಿದ್ದೇವೆ ಎಂದು ಭಾವಿಸಬಹುದು. “ನಾನೊಂದು ಉತ್ತಮವಾದ, ಉಪಯುಕ್ತವಾದ ಜೀವನವನ್ನು ನಡೆಸಿದ್ದೇನೆ”, ಎಂದು ಯೋಚಿಸುತ್ತಾ ಮತ್ತು ಭಾವಿಸುತ್ತಾ, ಮನಸ್ಸಿನ ಶಾಂತಿಯನ್ನು ಪಡೆದಿರುತ್ತೇವೆ.
ನಿಜವಾದ ಧರ್ಮದ ವಿಷಯದಲ್ಲಿ, ಈ ಸಕಾರಾತ್ಮಕ ಅಭ್ಯಾಸಗಳು, ಪ್ರವೃತ್ತಿಗಳು ಮತ್ತು ನಮ್ಮ ಮಾನಸಿಕ ನಿರಂತರತೆಯ ಪ್ರವೃತ್ತಿಗಳು, ಭವಿಷ್ಯದ ಜೀವನದಲ್ಲಿ ಮುಂದುವರಿಯುತ್ತವೆ ಎಂಬ ವಿಶ್ವಾಸದಿಂದ ನಾವು ಸಾಯಬಹುದು. "ಭವಿಷ್ಯದ ಜೀವನದಲ್ಲಿ, ನಾನು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆದು ಮುಂದುವರೆಯುತ್ತೇನೆ. ನಾನು ಬಹಳಷ್ಟು ಸಕಾರಾತ್ಮಕ ಪ್ರವೃತ್ತಿಯನ್ನು ಹೊಂದಿರುವ ಮಗುವಾಗಿ ಹುಟ್ಟುತ್ತೇನೆ.” ಎಂದು ಭಾವಿಸುತ್ತಾ ಸಾಯುತ್ತೇವೆ. ಇದನ್ನು ನಾವು ಮಕ್ಕಳೊಂದಿಗೇ ನೋಡಬಹುದು. ಕೆಲವು ಮಕ್ಕಳು ಚಿಕ್ಕವರಾಗಿದ್ದಾಗ ಯಾವಾಗಲೂ ಅಳುತ್ತಾರೆ ಮತ್ತು ಕೋಪಗೊಳ್ಳುತ್ತಾರೆ, ಇತರರು ಶಾಂತವಾಗಿ ಮತ್ತು ಇತರರೊಂದಿಗೆ ದಯೆಯಿಂದ ವರ್ತಿಸುತ್ತಾರೆ. ಇದು ಹಿಂದಿನ ಜೀವತಾವಧಿಯಲ್ಲಿ ಅವರು ನಿರ್ಮಿಸಿದ ಸಕಾರಾತ್ಮಕ ಅಭ್ಯಾಸಗಳ ಪರಿಣಾಮವಾಗಿರುತ್ತದೆ. ಶಾಂತಿಯುತ ಮನಸ್ಥಿತಿಯೊಂದಿಗೆ ನಾವು ಸಾವು ಹೊಂದಿದರೆ, ಅದು ಬಹಳ ಸಹಾಯಕವಾಗಿರುತ್ತದೆ. ಬ್ಯಾಂಕಿನಲ್ಲಿ ಎಷ್ಟು ಹಣವಿದೆ ಎಂಬುದು ನಮಗೆ ಯಾವುದೇ ಸೌಕರ್ಯವನ್ನು ನೀಡುವುದಿಲ್ಲ, ಏಕೆಂದರೆ ಸಾವಿನ ಸಮಯದಲ್ಲಿ ಅದು ಕಂಪ್ಯೂಟರ್ ಪರದೆಯ ಮೇಲಿರುವ ಕೆಲವು ಸಂಖ್ಯೆಗಳಾಗಿರುತ್ತವೆಯಷ್ಟೇ.
ಸಾವಿನ ಮೇಲೆ ಧ್ಯಾನ
ಈ ಮೇಲಿನ ಕಾರಣಗಳ ಪರಿಣಾಮವಾಗಿ, ನಾವು ಸಾವಿನ ಧ್ಯಾನವನ್ನು ಹೊಂದಿದ್ದೇವೆ, ಇಲ್ಲಿ ನಾವು, ‘ಇಂದು ನಮ್ಮ ಕೊನೆಯ ದಿನ’ ಎಂಬುದನ್ನು ಊಹಿಸಿಕೊಳ್ಳಬಹುದು. ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುತ್ತೇವೆ, ನಾವು ಯಾವುದೇ ಸಮಯದಲ್ಲಾದರೂ ಸಾಯಲು ಸಿದ್ಧರಿದ್ದೇವೆಯೇ? ಇಂದು ನಾನು ಸತ್ತರೆ, ನನ್ನ ಜೀವನವನ್ನು ಹೇಗೆ ನಡೆಸಿದ್ದೇನೆ ಎಂಬುದರ ಬಗ್ಗೆ ನಾನು ಪಶ್ಚಾತ್ತಾಪ ಪಡುತ್ತೇನೆಯೇ? ಖಂಡಿತವಾಗಿಯೂ ಇದರ ಉದ್ದೇಶವು ಖಿನ್ನತೆಗೆ ಒಳಗಾಗುವುದಾಗಿರುವುದಿಲ್ಲ, ಬದಲಿಗೆ ಈ ಅಮೂಲ್ಯವಾದ ಮಾನವ ಜೀವನವನ್ನು ಮತ್ತು ಈಗ ನಾವು ಹೊಂದಿರುವ ಎಲ್ಲಾ ಅವಕಾಶಗಳ ಲಾಭವನ್ನು ಪಡೆಯುವಂತೆ ನಮ್ಮನ್ನು ನಾವು ಪ್ರೋತ್ಸಾಹಿಸುವುದಾಗಿರುತ್ತದೆ. ಇದೇ ಈ ಧ್ಯಾನದ ಸಂಪೂರ್ಣ ಗುರಿಯಾಗಿರುತ್ತದೆ. ನನಗೆ ಪ್ರತಿದಿನ ವಯಸ್ಸಾಗುತ್ತಿರುವುದಲ್ಲದೆ, ನಾನು ನಿರಂತರವಾಗಿ ನನ್ನ ಸಾವಿಗೆ ಹತ್ತಿರವಾಗುತ್ತಿದ್ದೇನೆ. ಪ್ರತಿಯೊಂದು ದಿನ ಮುಗಿದಂತೆ, ನಮಗೆ ಬದುಕಲು ಒಂದು ದಿನ ಕಡಿಮೆಯಾಗುತ್ತಿದೆ. ಸಮಯ ಮೀರುತ್ತಿದೆ ಮತ್ತು ನಮಗಾಗಿ ಎಷ್ಟು ಸಮಯ ಉಳಿದಿದೆ ಎಂದು ನಮಗೆ ತಿಳಿದಿಲ್ಲ. ಆದ್ದರಿಂದ, ನಾವು ನಿಜವಾಗಿಯೂ ನಮ್ಮ ಜೀವನವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ನಾವು ನಿಜವಾಗಿಯೂ ನಮ್ಮ ಜೀವನವನ್ನು ವ್ಯರ್ಥ ಮಾಡಿದ್ದೇವೆ ಮತ್ತು ಇನ್ನೂ ಹೆಚ್ಚಿನದನ್ನು ಸಾಧಿಸಬಹುದಿತ್ತು ಎಂದು ಅರಿತುಕೊಳ್ಳುವ ಮನಸ್ಥಿತಿಯೊಂದಿಗೆ ಸಾಯುವುದು, ಅತ್ಯಂತ ಬೇಸರವಾದ ಮನಸ್ಥಿತಿಯಾಗಿರುತ್ತದೆ.
"ನಾನು ನನ್ನ ಅವಕಾಶಗಳನ್ನು ವ್ಯರ್ಥ ಮಾಡುವುದಿಲ್ಲ" ಎಂಬ ಈ ಮನಸ್ಥಿತಿಯನ್ನು ನಾವು ಸಮತೋಲಿತ ರೀತಿಯಲ್ಲಿ ಸ್ಥಾಪಿಸಬೇಕು. ನಾವು ಭಯಪಟ್ಟು, ಸದಾ ಕೆಲಸ ಮಾಡುವುದನ್ನು ಅಥವಾ ಧ್ಯಾನಿಸುವಂತಹ ಮತಾಂಧರಾಗುವುದನ್ನು ತಪ್ಪಿಸಬೇಕು. ನಮಗೆ ನಿಜವಾಗಿಯೂ ಅಗತ್ಯವಿದ್ದಲ್ಲಿ ವಿಶ್ರಾಂತಿ ಪಡೆಯಬೇಕು ಮತ್ತು ವಿರಾಮ ತೆಗೆದುಕೊಳ್ಳಬೇಕು, ಇದರಿಂದ ನಾವು ನಂತರ ಮುಂದುವರಿಯಲು ಶಕ್ತಿಯನ್ನು ಪಡೆಯುತ್ತೇವೆ. ನನ್ನ ನೆಚ್ಚಿನ ಝೆನ್ ಕೋಯಾನ್ ಇದಾಗಿದೆ: “ಸಾವು ಯಾವಾಗ ಬೇಕಾದರೂ ಬರಬಹುದು. ಶಾಂತವಾಗಿರಿ.” ನೀವು ಇದರ ಬಗ್ಗೆ ಯೋಚಿಸಿದರೆ, ಇದು ನಿಜವಾಗಿಯೂ ಉತ್ತಮವಾದ ಅರ್ಥವನ್ನು ಹೊಂದಿರುತ್ತದೆ. ಹೌದು, ನಾವು ಯಾವುದೇ ಸಮಯದಲ್ಲಿ ಸಾಯಬಹುದು, ಆದರೆ ಅದರ ಬಗ್ಗೆ ನಿಷ್ಠುರ ಮತ್ತು ಮತಾಂಧರಾಗಿರುವುದು ನಮ್ಮನ್ನು ನಾವೇ ಸೋಲಿಸುವಂತಿರುತ್ತದೆ.
ನಮ್ಮಲ್ಲಿರುವ ಈ ಅದ್ಭುತವಾದ, ಅಮೂಲ್ಯವಾದ ಮಾನವ ಜೀವನದ ಪ್ರಯೋಜನವನ್ನು ಪಡೆದುಕೊಳ್ಳುವುದು ಮುಖ್ಯ ಸಂದೇಶವಾಗಿದೆ, ಆದರೆ ಅದನ್ನು ಸಮತೋಲಿತ ರೀತಿಯಲ್ಲಿ ನಡೆಸಬೇಕು. ನಮಗೆ ಅಗತ್ಯವಿರುವಾಗ ನಾವು ವಿಶ್ರಾಂತಿ ಪಡೆಯಬಹುದು ಮತ್ತು ನಾವು ನಿಜವಾಗಿಯೂ ದಣಿದಿಲ್ಲದಿದ್ದಾಗ, ನಾವು ಸೋಮಾರಿಯಾಗಿದ್ದೇವೆ ಎಂದು ನಮ್ಮೊಂದಿಗೆ ಪ್ರಾಮಾಣಿಕವಾಗಿರಬಹುದು. ನಾವು ನಮ್ಮ ಪ್ರೇರಣೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು.
ನಿಸ್ಸಂಶಯವಾಗಿ, ಸಾವಿನ ಅರಿವಿನ ಧ್ಯಾನಗಳನ್ನು ಧರ್ಮ-ಲೈಟ್ ಮತ್ತು ನಿಜವಾದ ಧರ್ಮ – ಎರಡರಲ್ಲೂ ಅನ್ವಯಿಸಬಹುದು. ಉದಾಹರಣೆಗೆ, ಇನ್ನೂ ಮುಗಿಯದ ಕೆಲಸಗಳನ್ನು ಮಾಡುವುದು - ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮತ್ತು ಅವರನ್ನು ಪ್ರಶಂಸಿಸಲು ಬಯಸಿದರೆ, ಹಾಗೆ ಮಾಡಬೇಕು ಅಥವಾ ಒಬ್ಬರಿಗೆ ಕ್ಷಮೆಯಾಚಿಸುವುದು ಮತ್ತು ನಿಮ್ಮ ತಪ್ಪುಗಳನ್ನು ಸರಿಪಡಿಸುವಂತಹ ಮುಂತಾದ ವಿಷಯಗಳನ್ನು ಮುಗಿಸಲು ತಡ ಮಾಡಬೇಡಿ. ಆ ವ್ಯಕ್ತಿ ನಾಳೆ ಇಲ್ಲದಿರಬಹುದು ಅಥವಾ ನಾವು ನಾಳೆ ಇಲ್ಲದಿರಬಹುದು. ಸಾವಿನ ಅರಿವಿನಿಂದ ನಾವು ಪಡೆಯಬಹುದಾದ ಧರ್ಮ-ಲೈಟ್ ಪಾಠ ಇದಾಗಿರುತ್ತದೆ. ಇದು ಎಲ್ಲಾ ಮಟ್ಟದಲ್ಲಿಯೂ ಬಹಳಾ ಪ್ರಯೋಜನಕಾರಿ ಮತ್ತು ಸಹಾಯಕವಾಗಿರುತ್ತದೆ; ಸಾವನ್ನು ನಿರಾಕರಿಸಬೇಡಿ, ಆದರೆ ಅದಕ್ಕಾಗಿ ಸಿದ್ಧರಾಗಿರಿ. ನಾವು ನಮ್ಮ ಸ್ವಂತ ಸಾವುಗಳು ಮತ್ತು ಅಂತ್ಯಕ್ರಿಯೆಗಳನ್ನು ದೃಶ್ಯೀಕರಿಸಲೂಬಹುದು, ಇದು ಹೆಚ್ಚಿನ ನೈಜತೆಯನ್ನು ನೀಡಲು ಸಹಾಯ ಮಾಡುತ್ತದೆ. ಅದರ ಬಗ್ಗೆಯೇ ಯೋಚಿಸುತ್ತಾ ಅನಾರೋಗ್ಯ ಅಥವಾ ಖಿನ್ನತೆಗೆ ಒಳಗಾಗದೇ ಇರುವಂತೆ ನೋಡಿಕೊಳ್ಳಿ!
ಮನುಷ್ಯರಲ್ಲದ ಪುರ್ನಜನ್ಮದ ಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಹೇಗೆ
ನಾವು ಮಾನಸಿಕ ಚಟುವಟಿಕೆಯ ವಿಷಯದಲ್ಲಿ ಸಂಬಂಧಿಸಬಹುದು ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ವಿಷಯವನ್ನು ಅನುಭವಿಸುವ ಕ್ಷಣ-ಕ್ಷಣದ ವಿಚಾರವಾಗಿ ಸಂಬಂಧಿಸಬಹುದು. ಪ್ರತಿ ಕ್ಷಣದಲ್ಲಿ, ನಾವು ಮಾನಸಿಕ ಹೊಲೊಗ್ರಾಮ್ ಒಂದನ್ನು ಉತ್ಪತ್ತಿಸುತ್ತೇವೆ, ಇದನ್ನೇ ನೋಡುವುದು, ತಿಳಿದುಕೊಳ್ಳುವುದು ಅಥವಾ ಯೋಚಿಸುವುದು ಇತ್ಯಾದಿ ಎಂದು ಕರೆಯಲಾಗುತ್ತದೆ. ಅನುಭವದ ಪ್ರತಿ ಕ್ಷಣದೊಂದಿಗೆ, ಒಂದು ರೀತಿಯ ಸಂತೋಷ ಅಥವಾ ಅಸಂತೋಷದ ಭಾವನೆ ಇರುತ್ತದೆ. ವಾಸ್ತವದಲ್ಲಿ, ಇದು ನಮ್ಮನ್ನು ಕಂಪ್ಯೂಟರ್‌ಗಳಿಂದ ಪ್ರತ್ಯೇಕಿಸುವ ವಿಷಯವಾಗಿರುವಂತೆ ತೋರುತ್ತದೆ. ಕಂಪ್ಯೂಟರ್ ಒಳಗೆ ಮಾಹಿತಿ ಇರುತ್ತದೆ, ಮತ್ತು ಒಂದು ಅರ್ಥದಲ್ಲಿ ನಾವು ಅದರೊಂದಿಗೆ ವ್ಯವಹರಿಸುತ್ತದೆ ಮತ್ತು ಅದರ ಬಗ್ಗೆ ತಿಳಿದಿರುತ್ತೇವೆ. ಆದರೆ ಕಂಪ್ಯೂಟರ್ ಸಂತೋಷ ಅಥವಾ ಅಸಂತೋಷವನ್ನು ಅನುಭವಿಸುವುದಿಲ್ಲ, ಮತ್ತು ಮಾಹಿತಿಯನ್ನು ನಿಜವಾಗಿಯೂ ಅನುಭವಿಸುವುದಿಲ್ಲ. ನಾವು ಸಂತೋಷ ಮತ್ತು ಅಸಂತೋಷದ ಭಾವನೆಗಳನ್ನು ಹೊಂದಿದ್ದೇವೆ ಎಂಬುದೇ ಅನುಭವವನ್ನು ವ್ಯಾಖ್ಯಾನಿಸುತ್ತದೆ ಮತ್ತು ಸಂತೋಷ ಮತ್ತು ಅಸಂತೋಷದ ವರ್ಣಪಟಲವು ಅತ್ಯಂತ ವಿಸ್ತಾರವಾಗಿರುತ್ತದೆ. ನಾವು ಅನುಭವಿಸಲು ಸಾಧ್ಯವಾಗುವ ಆ ವರ್ಣಪಟಲದ ಪ್ರಮಾಣವು ನಮ್ಮ ಹಾರ್ಡ್‌ವೇರ್ ಅನ್ನು ಅವಲಂಬಿಸಿರುತ್ತದೆ; ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಹೊಂದಿರುವ ದೇಹದ ಪ್ರಕಾರವನ್ನು ಅವಲಂಬಿಸಿರುತ್ತದೆ.
ಇದನ್ನು ಕೇವಲ ಸಂತೋಷ ಮತ್ತು ಅಸಂತೋಷದ ಪರಿಭಾಷೆಯಲ್ಲಿ ಮಾತ್ರ ಅರ್ಥಮಾಡಿಕೊಳ್ಳುವುದಲ್ಲದೆ, ನಮ್ಮ ಪ್ರತಿಯೊಂದು ಇಂದ್ರಿಯಗಳಿಂದಲೂ ಅರ್ಥಮಾಡಿಕೊಳ್ಳಬಹುದು. ಕೆಲವರು ಇತರರಿಗಿಂತ ಹೆಚ್ಚು ಚೆನ್ನಾಗಿ ನೋಡಬಹುದು, ಕೆಲವರು ಇತರರಿಗಿಂತ ಚೆನ್ನಾಗಿ ಕೇಳಿಸಿಕೊಳ್ಳಬಹುದು, ಮತ್ತು ಕೆಲವರು ಶಾಖ ಮತ್ತು ಶೀತವನ್ನು ಇತರರಿಗಿಂತ ಹೆಚ್ಚು ಸಹಿಸಿಕೊಳ್ಳುತ್ತಾರೆ. ಪ್ರಾಣಿಗಳ ವಿಷಯದಲ್ಲಿ, ಒಂದು ನಾಯಿಯು ಮಾನವನಿಗಿಂತ ಹೆಚ್ಚಿನ ಆವರ್ತನಗಳನ್ನು ಕೇಳಬಲ್ಲದು ಏಕೆಂದರೆ ಅದು ವಿಭಿನ್ನ ರೀತಿಯ ದೇಹವನ್ನು ಹೊಂದಿರುತ್ತದೆ, ಆದ್ದರಿಂದ ವಿಭಿನ್ನ ಹಾರ್ಡ್ವೇರ್ ಅನ್ನು ಹೊಂದಿರುತ್ತದೆ. ಹದ್ದು, ತನ್ನ ಕಣ್ಣುಗಳಿಂದ, ಮಾನವನ ಕಣ್ಣುಗಳಿಗೆ ಕಾಣುವುದಕ್ಕಿಂತ ಹೆಚ್ಚಿನದನ್ನು ನೋಡಬಹುದು. ವಿವಿಧ ಇಂದ್ರಿಯಗಳ ವಿಷಯದಲ್ಲಿ ಇದು ನಿಜವಾಗಿದ್ದರೆ, ಸಂತೋಷ ಮತ್ತು ಅಸಂತೋಷದ ಭಾವನೆಯ ವರ್ಣಪಟಲದಲ್ಲಿಯೂ ಕೂಡ ಇದು ನಿಜವಾಗಿರಬಹುದು, ಅಲ್ಲವೇ?
ಈ ಚರ್ಚೆಯಲ್ಲಿ ನಾವು ಆನಂದ ಮತ್ತು ನೋವಿನ ಭಾವನೆಗಳನ್ನು ಸೇರಿಸಬಹುದು, ಆದರೆ ಅವು ಸಮರೂಪದ್ದಾಗಿರುವುದಿಲ್ಲ. ಸಂತೋಷ ಮತ್ತು ಅಸಂತೋಷವನ್ನು ಮಾನಸಿಕವಾಗಿ ಅನುಭವಿಸಲಾಗುತ್ತದೆ, ಆದರೆ ಆನಂದ ಮತ್ತು ನೋವು, ಅವುಗಳಿಗಾಗಿ ಇರುವ ಇಂಗ್ಲಿಷ್ ಪದಗಳ ಪ್ರಕಾರ, ಹೆಚ್ಚಾಗಿ ದೈಹಿಕ ಸಂವೇದನೆಗಳಾಗಿರುತ್ತವೆ. ನಮ್ಮ ಮಾನವ ಹಾರ್ಡ್‌ವೇರ್ಗೆ ಸಂಬಂಧಿಸಿದಂತೆ, ದೈಹಿಕ ನೋವು ತೀರಾ ಪ್ರಬಲವಾದಾಗ, ನಾವು ಪ್ರಜ್ಞಾಹೀನರಾಗುತ್ತೇವೆ. ಭಾವನಾತ್ಮಕ ನೋವಿನೊಂದಿಗೆ, ನಾವು ಆಘಾತವನ್ನು ಅನುಭವಿಸುತ್ತೇವೆ ಮತ್ತು ನಮ್ಮ ದೇಹವು ಸ್ಥಗಿತಗೊಳ್ಳಬಹುದು.
ಮತ್ತೊಂದೆಡೆ, ಅನಂದವು ಆಸಕ್ತಿದಾಯಕವಾಗಿರುತ್ತದೆ. ನೀವು ತುರಿಕೆಯೊಂದನ್ನು ವಿಶ್ಲೇಷಿಸಿದರೆ, ಅದು ವಾಸ್ತವದಲ್ಲಿ ಪ್ರಬಲವಾದ ಆನಂದವಾಗಿರುತ್ತದೆ. ಇದು ನೋವಿನಿಂದ ಕೂಡಿರುವುದಿಲ್ಲ, ಆದರೆ ತೀರಾ ಆನಂದಮಯವಾಗಿರುವುದರಿಂದ ನಾವು ಅದನ್ನು ಸಹಜವಾಗಿ ತುರಿಸಿಕೊಳ್ಳುವ ಮೂಲಕ ನಾಶಪಡಿಸುತ್ತೇವೆ. ತೀವ್ರವಾದ ತುರಿಕೆಯಿರುವ ದೀರ್ಘಕಾಲದ ಚರ್ಮದ ಅಸ್ವಸ್ಥತೆಗಳನ್ನು ಎದುರಿಸಲು ಇರುವ ಇದೊಂದು ಮಾರ್ಗವಾಗಿರುತ್ತದೆ, ಇದು ಕಜ್ಜಿಯನ್ನು ಸಂತೋಷವೆಂದು ಪರಿಗಣಿಸುತ್ತದೆ. ಇದು ಬಹಳಾ ಮುಂದುವರೆದಿರುವ ವಿಷಯವಾಗಿರುತ್ತದೆ ಮತ್ತು ಇದನ್ನು ಕೇವಲ ಆನಂದಿಸಲು ಮತ್ತು ಶಾಂತವಾಗಿರಲು ಪ್ರಯತ್ನಿಸುವುದು ಬಹಳಾ ಕಷ್ಟ, ವಿಶೇಷವಾಗಿ, ಈ ತುರಿಸುವಿಕೆಯಿಂದ ಹಾನಿಯುಂಟಾಗುತ್ತಿದ್ದಲ್ಲಿ. ಆದರೂ ಇದು ಸಾಧ್ಯವಾಗಿರುತ್ತದೆ. ಏನೇ ಆಗಿರಲಿ, ನಾವು ಇದನ್ನು ಲೈಂಗಿಕ ಆನಂದದ ವಿಷಯದಲ್ಲಿ ಯೋಚಿಸಿದರೆ, ಅದು ತೀವ್ರಗೊಳ್ಳುತ್ತಿದ್ದಂತೆ, ನಾವು ಅದನ್ನು ನಾಶಮಾಡಲು ಪರಾಕಾಷ್ಠೆಯನ್ನು ತಲುಪಲು ಬಯಸುತ್ತೇವೆ.
ಹೀಗೆ, ನಾವು ಹೊಂದಿರುವ ಈ ಮಾನವ ಹಾರ್ಡ್‌ವೇರ್ ಸಂತೋಷ ಮತ್ತು ಅಸಂತೋಷ, ಮತ್ತು ಆನಂದ ಮತ್ತು ನೋವಿನ ವರ್ಣಪಟಲದ ಒಂದು ನಿರ್ದಿಷ್ಟ ಭಾಗವನ್ನು ಮಾತ್ರ ಅನುಭವಿಸಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ನೋಡಬಹುದು. ದೃಷ್ಟಿ ಮತ್ತು ಧ್ವನಿಯಂತಹ ವಿಭಿನ್ನ ಸಂವೇದನಾ ವರ್ಣಪಟಲದಲ್ಲಿ ಪ್ರಾಣಿಗಳು ಹೆಚ್ಚು ಅನುಭವಿಸಬಹುದು ಎಂಬ ವಿಷಯವನ್ನು ನಾವು ಸ್ಥಾಪಿಸಿದ್ದೇವೆ. ಆದ್ದರಿಂದ ತಾರ್ಕಿಕವಾಗಿ, ನೋವು, ಆನಂದ, ಸಂತೋಷ ಮತ್ತು ಅಸಂತೋಷದ ವರ್ಣಪಟಲಗಳಲ್ಲಿ ಹೆಚ್ಚಿನದನ್ನು ಅನುಭವಿಸುವ ಸಾಮರ್ಥ್ಯವಿರುವ ಇತರ ಹಾರ್ಡ್‌ವೇರ್ ಇರಬಹುದು ಅಲ್ಲವೇ?
ಈ ಮಾನಸಿಕ ಚಟುವಟಿಕೆಯ ಬಗ್ಗೆಯೇ ನಾವು ಜೀವನದಿಂದ ಜೀವನದಲ್ಲಿರುವ ನಿರಂತರತೆಯಲ್ಲಿ ಮಾತನಾಡುತ್ತೇವೆ. ತೀವ್ರವಾದ ಸಂಕಟ ಮತ್ತು ನೋವಿನಿಂದ ತೀವ್ರವಾದ ಆನಂದ ಮತ್ತು ಸಂತೋಷದವರೆಗಿರುವ ಸಂಪೂರ್ಣ ವರ್ಣಪಟಲವನ್ನು ಅನುಭವಿಸಲು ಸಾಧ್ಯವಾಗಬಾರದೆಂದು ಹೇಳಲು ಯಾವುದೇ ಕಾರಣಗಳಿಲ್ಲ. ಇದು ಪ್ರತಿ ಜೀವಿತಾವಧಿಯಲ್ಲಿ ನಾವು ಹೊಂದಿರುವ ಹಾರ್ಡ್‌ವೇರ್ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಕಣ್ಣಿಗೆ ಕಾಣದ, ಬೌದ್ಧಧರ್ಮದಲ್ಲಿ ವಿವರಿಸಲಾದ ಈ ಇತರ ಜೀವ ರೂಪಗಳನ್ನು ಪರಿಗಣಿಸಲು ಪ್ರಯತ್ನಿಸುವ ಮತ್ತು ಮುಕ್ತ ಮನಸ್ಸಿನಿಂದ ಪ್ರಯತ್ನಿಸುವ ಕನಿಷ್ಠಪಕ್ಷದ ತಾರ್ಕಿಕ ಮಾರ್ಗವಾಗಿದೆ. ನಾವು ಅಮೀಬಾಗಳನ್ನು ನೋಡಲು ಸಾಧ್ಯವಿಲ್ಲ, ಆದರೆ ಸೂಕ್ಷ್ಮದರ್ಶಕಗಳ ವೈಜ್ಞಾನಿಕ ಬೆಳವಣಿಗೆಯೊಂದಿಗೆ, ನಾವು ಅವುಗಳನ್ನು ಜೀವರೂಪವಾಗಿ ನೋಡಬಹುದು ಮತ್ತು ಒಪ್ಪಿಕೊಳ್ಳಬಹುದು. ಅಂತೆಯೇ, ನಾವು ಪ್ರೇತಗಳನ್ನು ನೋಡಲು ಸಾಧ್ಯವಾಗದಿರಬಹುದು, ಆದರೆ ಮಾನಸಿಕ ಬೆಳವಣಿಗೆಯೊಂದಿಗೆ, ಬಹುಶಃ ಅದು ಸಾಧ್ಯವಾಗಬಹುದು.
ಧರ್ಮ-ಲೈಟ್ ಆವೃತ್ತಿಯು ಇತರ ಎಲ್ಲಾ ಕ್ಷೇತ್ರಗಳನ್ನು ಮಾನವ ಅನುಭವಗಳ ಪ್ರಕಾರಗಳಿಗೆ ತಗ್ಗಿಸುತ್ತದೆ. ಉದಾಹರಣೆಗೆ, ಒಬ್ಬರು ಎಷ್ಟರಮಟ್ಟಿಗೆ ಮಾನಸಿಕವಾಗಿ ತೊಂದರೆಗೊಳಗಾಗಿರುವರು ಎಂದರೆ, ಅವರಿಗೆ ನರಕದಲ್ಲಿ ವಾಸಿಸುತ್ತಿರುವಂತೆ ಭಾಸವಾಗಬಹುದು. ಇದು ಅವರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡಬಹುದು ಮತ್ತು ಭವಿಷ್ಯದಲ್ಲಿ ಅವರ ಹಾಗಾಗದಿರಲು ಬಯಸುವಂತೆ ಸಹಾಯಮಾಡಬಹುದು. ಇದು ಧರ್ಮ-ಲೈಟ್ನ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ನಿಜವಾದ ಧರ್ಮವು ಕೇವಲ ಮಾನವ ಅನುಭವದ ಬಗ್ಗೆ ಮಾತನಾಡುವುದಿಲ್ಲ, ಬದಲಿಗೆ ಮಾನಸಿಕ ನಿರಂತರತೆಯನ್ನು ಹೊಂದಿರುವ ಆಧಾರದ ಮೇಲೆ ನಾವು ಮತ್ತು ಪ್ರತಿಯೊಬ್ಬರೂ ಹೊಂದಬಹುದಾದ ಅನುಭವಗಳ ಬಗ್ಗೆ ಮಾತನಾಡುತ್ತದೆ. ಈ ಮಾನಸಿಕ ಚಟುವಟಿಕೆಯು, ಸಂತೋಷದಿಂದ ಅಸಂತೋಷದವರೆಗೆ, ಆನಂದದಿಂದ ನೋವಿನವರೆಗಿನ ವರ್ಣಪಟಲದಿಂದ ಕೂಡಿರುತ್ತದೆ. ಖಂಡಿತವಾಗಿಯೂ ನಾವು ಭವಿಷ್ಯದಲ್ಲಿ ಕೇವಲ ಭಯಾನಕ ನೋವಿನ ಅನುಭವಗಳನ್ನು ಬೆಂಬಲಿಸುವ ಸೀಮಿತವಾದ ಆಧಾರವನ್ನು ಹೊಂದಲು ಬಯಸುವುದಿಲ್ಲ. ಈ ವಿಷಯವು ಸ್ಪಷ್ಟವಾಗಿದೆ.
ಇದನ್ನು ತಪ್ಪಿಸುವ ಮಾರ್ಗವಿದೆಯೇ? ಇದೇ ಮಹತ್ತರವಾದ ಪ್ರಶ್ನೆ! ಮೊದಲಾಗಿ, ನಾವು ನಮ್ಮ ಜೀವನದಲ್ಲಿ ಒಂದು ನಿರ್ದಿಷ್ಟವಾದ ಸಕಾರಾತ್ಮಕ ದಿಕ್ಕನ್ನು ಪಾಲಿಸಬೇಕು, ಇದು ಈ ಕೆಟ್ಟ ಪುರ್ನಜನ್ಮಗಳನ್ನು ತಪ್ಪಿಸಲು ನಮಗೆ ಅನುವು ಮಾಡಿಕೊಡುತ್ತದೆ. ಇದಲ್ಲದೆ, ನಮ್ಮನ್ನು ವಿಮೋಚನೆ ಮತ್ತು ಜ್ಞಾನೋದಯದತ್ತ ಕೂಡ ಕರೆದೊಯ್ಯುತ್ತದೆ.
ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ಅನುಸರಿಸುವುದು: ಆಶ್ರಯವನ್ನು ಪಡೆಯುವುದು
"ಆಶ್ರಯ" ಎಂಬ ಪದದ ಬಗ್ಗೆ ನಾನು ಅಷ್ಟೊಂದು ಉತ್ಸುಕನಲ್ಲ, ಏಕೆಂದರೆ ಇದು ತುಂಬಾ ನಿಷ್ಕ್ರಿಯವೆಂಬ ಅರ್ಥವನ್ನು ನೀಡುವ ತಪ್ಪುದಾರಿಗೆಳೆಯುವಂತೆ ತೋರುತ್ತದೆ, "ಓ ಬುದ್ಧನೇ, ನನ್ನನ್ನು ಕಾಪಾಡು!" ಎಂದು ನಾವು ರಕ್ಷಕನಾದ ಬುದ್ಧನ ಬಳಿಗೆ ಹೋಗುವಂತೆ ತೋರುತ್ತದೆ, ಅಥವಾ ವನ್ಯಜೀವಿಗಳ ಆಶ್ರಯಕ್ಕೆ ಕರೆದೊಯ್ಯುವ ಪ್ರಾಣಿಗಳಂತೆ ನಾವು ತೋರುತ್ತೇವೆ. ಇಲ್ಲಿ ನಾವು ಬಹಳಾ ಸಕ್ರಿಯವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ, ನಿಷ್ಕ್ರಿಯವಾದದ್ದಲ್ಲ. ಇದನ್ನು, ನಮ್ಮ ಜೀವನದಲ್ಲಿ "ಸುರಕ್ಷಿತ ನಿರ್ದೇಶನ"ವನ್ನು ಇರಿಸುವುದೆಂದು ನಾನು ವಿವರಿಸುತ್ತೇನೆ; ನಾವು ಈ ದಿಕ್ಕಿನಲ್ಲಿ ಹೋದರೆ, ಕೆಟ್ಟ ಪುನರ್ಜನ್ಮಗಳನ್ನು ಅನುಭವಿಸುವುದರಿಂದ, ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ಅನುಭವಿಸುವುದರಿಂದ, ಹಾಗೆಯೇ ಇತರರಿಗೆ ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಸಹಾಯ ಮಾಡಲಾಗದ ಅಸಮರ್ಥತತೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ.
ಸಾಮಾನ್ಯವಾಗಿ ಬುದ್ಧನ ಬೋಧನೆಗಳು ಎಂದು ಭಾಷಾಂತರಿಸಲಾಗುವ “ಧರ್ಮ” ಎಂಬ ಪದವು, ತಡೆಗಟ್ಟುವ ಕ್ರಮಗಳನ್ನು ಸೂಚಿಸುತ್ತದೆ. ಭವಿಷ್ಯದ ಸಮಸ್ಯೆಗಳು ಮತ್ತು ದುಃಖಗಳನ್ನು ತಡೆಗಟ್ಟಲು ಅಥವಾ ತಪ್ಪಿಸಲು ನಾವು ಇವುಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುತ್ತೇವೆ. ಕೆಟ್ಟ ಪುನರ್ಜನ್ಮಗಳು, ಒಟ್ಟಾರೆಯಾಗಿ ಪುನರ್ಜನ್ಮವನ್ನು ಮತ್ತು ಇತರರಿಗೆ ಸಂಪೂರ್ಣವಾಗಿ ಸಹಾಯ ಮಾಡಲಾಗದ ಅಸಮರ್ಥತತೆಯ ಮೂರು ಸಮಸ್ಯೆಗಳನ್ನು ತಪ್ಪಿಸಲು ನಾವು ಈ ಕ್ರಮಗಳನ್ನು ನಮ್ಮ ಜೀವನದಲ್ಲಿ ಇರಿಸಿಕೊಳ್ಳುತ್ತೇವೆ.
ಬುದ್ಧ ಸೂಚಿಸಿದ ಈ ದಿಕ್ಕು ಯಾವುದು? ವಾಸ್ತವದಲ್ಲಿ, ಈ ದಿಕ್ಕನ್ನು ಸ್ವತಃ ಬುದ್ಧನೇ ಸಾಧಿಸಿದ್ದು, ಇದು ಎಲ್ಲಾ ಅಡೆತಡೆಗಳು, ನ್ಯೂನತೆಗಳು, ಗೊಂದಲ ಮತ್ತು ಕ್ಷೋಭೆಗೊಳಿಸುವ ಭಾವನೆಗಳನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಅದೇ ಸಮಯದಲ್ಲಿ, ಬುದ್ಧನು ಮನಸ್ಸಿನಲ್ಲಿರುವ ಎಲ್ಲಾ ಸಕಾರಾತ್ಮಕ ಸಾಮರ್ಥ್ಯಗಳನ್ನು ಅರಿತುಕೊಂಡರು. ಇದೇ ನಾವು ಮಾತನಾಡುತ್ತಿರುವ ದಿಕ್ಕಾಗಿದೆ. ಬುದ್ಧ, ಧರ್ಮ ಮತ್ತು ಸಂಘದ ಅಮೂಲ್ಯ ಮತ್ತು ಅಪರೂಪದ ರತ್ನಗಳ ಸುರಕ್ಷಿತ ದಿಕ್ಕಿನ ಕುರಿತು ನಾವು ಮಾತನಾಡುವಾಗ, ನಾವು ಇದರ ಬಗ್ಗೆ ಮಾತನಾಡುತ್ತಿರುತ್ತೇವೆ. ಧರ್ಮವೆಂದರೆ, ಬುದ್ಧನು ನಿಜವಾಗಿಯೂ ಸಾಧಿಸಿದ ಮತ್ತು ನಾವೆಲ್ಲರೂ ಅದನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತಾದ ಅವರ ಬೋಧನೆಗಳಾಗಿರುತ್ತವೆ. ಅದನ್ನು ಪೂರ್ಣವಾಗಿ ಸಾಧಿಸಿದ ವ್ಯಕ್ತಿಯನ್ನು ಬುದ್ಧ ಎಂದು ಕರೆಯಲಾಗುತ್ತದೆ. ಸಂಘವು ಕೇವಲ ಮಠದಲ್ಲಿರುವ ಅಥವಾ ನಮ್ಮ ಬೌದ್ಧ ಕೇಂದ್ರದಲ್ಲಿರುವ ಜನರಾಗಿರುವುದಿಲ್ಲ, ಬದಲಾಗಿ ಸನ್ಯಾಸಿಗಳ ಸಮುದಾಯವಾಗಿರುತ್ತದೆ. ವಾಸ್ತವದಲ್ಲಿ, ಇದು ನಿಜವಾಗಿಯೂ ನಮ್ಮ ಸುರಕ್ಷಿತ ದಿಕ್ಕಾಗಿರುವುದಿಲ್ಲ. ಸಂಘವು, ತ್ರಿರತ್ನಗಳ ಭಾಗವಾಗಿ, ಬುದ್ಧನು ಸಂಪೂರ್ಣವಾಗಿ ಸಾಧಿಸಿದನ್ನು, ಭಾಗಶಃ ಸಾಧಿಸಿದ ಹೆಚ್ಚು ಅರಿತುಕೊಂಡ ಜೀವಿಗಳನ್ನು ಉಲ್ಲೇಖಿಸುತ್ತದೆ.
ಅದರಂತೆ, ನಾವು ಮೊದಲು ಮಾಡಬೇಕಾದದ್ದು ಇದನ್ನೇ. ನಾವು ಪ್ರಾಮಾಣಿಕವಾಗಿ ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ಇರಿಸಿಕೊಳ್ಳಬೇಕು; ಅದಕ್ಕಾಗಿಯೇ ನಾವು ಕೆಲಸ ಮಾಡುತ್ತಿದ್ದೇವೆ. ಬುದ್ಧನು ಸಾಧಿಸಿದ್ದನ್ನು, ಬುದ್ಧರು ಪೂರ್ಣವಾಗಿ ಸಾಧಿಸಿದನ್ನು ಮತ್ತು ಸಂಘವು ಭಾಗಶಃ ಸಾಧಿಸಿದ ಮಾರ್ಗವನ್ನು ಅನುಸರಿಸಲು ನಾವು ಕೆಲಸ ಮಾಡುತ್ತೇವೆ. ನಮ್ಮ ಜೀವನದಲ್ಲಿ ಈ ದಿಕ್ಕನ್ನು ಇರಿಸುವುದರಿಂದ, ಪ್ರತಿ ಹಂತದಲ್ಲೂ ನಂಬಲಾಗದಷ್ಟು ದೊಡ್ಡ ವ್ಯತ್ಯಾಸವಾಗುತ್ತದೆ, ಏಕೆಂದರೆ ಈಗ ನಮ್ಮ ಜೀವನವು ನಿಜವಾಗಿಯೂ ಅರ್ಥ ಮತ್ತು ನಿರ್ದೇಶನವನ್ನು ಹೊಂದಿರುತ್ತದೆ. ನಮ್ಮ ನ್ಯೂನತೆಗಳನ್ನು ಹೋಗಲಾಡಿಸಲು ಮತ್ತು ನಮ್ಮ ಸಾಮರ್ಥ್ಯವನ್ನು ಅರಿತುಕೊಳ್ಳಲು ನಾವು ನಮ್ಮ ಮೇಲೆಯೇ ಕೆಲಸ ಮಾಡುತ್ತಿದ್ದೇವೆ. ನಾವು ಹಾಗೆ ಮಾಡಿದರೆ, ಸಾಮಾನ್ಯವಾಗಿ ನಾವು ಭಾವನಾತ್ಮಕವಾಗಿ ಹೆಚ್ಚು ಸಂತೋಷವಾಗಿರುತ್ತೇವೆ, ಏಕೆಂದರೆ ನಾವು ಹೀಗೆ ಯೋಚಿಸುವುದಿಲ್ಲ, “ಜೀವನ ಎಂದರೆ ಏನು ಎಂದು ನನಗೆ ತಿಳಿದಿಲ್ಲ. ನಾನು ಇಲ್ಲಿ ಏನು ಮಾಡುತ್ತಿದ್ದೇನೆಂದು ನನಗೆ ಗೊತ್ತಿಲ್ಲ; ನನ್ನ ಜೀವನ ಅರ್ಥಹೀನವಾಗಿದೆ.” ಇದೊಂದು ಬೇಸರಗೊಳಿಸುವ ಮನಸ್ಥಿತಿಯಾಗಿರುತ್ತದೆ, ಜನರು ಹೀಗೆ ಯೋಚಿಸಿದಾಗ, ಅವರ ಜೀವನವು ಹಣದ ಸುತ್ತ ಸುತ್ತುತ್ತದೆ ಎಂದರ್ಥ. ಕ್ಲೀಷೆಯಾಗಿ ಕಂಡರೂ, "ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ." ಎಂಬುದು ಸತ್ಯ.
ವಿನಾಶಕಾರಿ ನಡವಳಿಕೆಯನ್ನು ತಪ್ಪಿಸುವುದು
ಈಗ, ನಾವು ನಮ್ಮ ಜೀವನದಲ್ಲಿ ಈ ಸುರಕ್ಷಿತ ದಿಕ್ಕನ್ನು ಪಡೆದುಕೊಂಡಿದ್ದೇವೆ. ಈ ಆಧಾರದ ಮೇಲೆ, ಕೆಟ್ಟ ಪುರ್ನಜನ್ಮಗಳನ್ನು ತಪ್ಪಿಸುವ ಮಾರ್ಗವೇನು? ದೈಹಿಕವಾಗಿ, ಮೌಖಿಕವಾಗಿ ಅಥವಾ ಮಾನಸಿಕವಾಗಿ, ವಿನಾಶಕಾರಿ ರೀತಿಯಲ್ಲಿ ವರ್ತಿಸುವುದನ್ನು ತಪ್ಪಿಸುವ ವಿಧಾನವಾಗಿದೆ. ಕೋಪ, ದುರಾಸೆ, ಬಾಂಧವ್ಯ, ನಿಷ್ಕಪಟತೆ, ಅಸೂಯೆ, ದುರಹಂಕಾರ ಇತ್ಯಾದಿಗಳನ್ನು ಒಳಗೊಂಡಿರುವ ಸಂಪೂರ್ಣ ಪಟ್ಟಿಯ ಗೊಂದಲದ ಭಾವನೆಗಳ ಪ್ರಭಾವದ ಅಡಿಯಲ್ಲಿ, ನಾವು ಈ ಮೂರರಲ್ಲಿ ಎಲ್ಲವನ್ನೂ ತಪ್ಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದರ್ಥ. ಪ್ರಸ್ತುತವಾಗಿ, ಈ ಅಮೂಲ್ಯವಾದ ಮಾನವ ಜೀವನದ ಲಾಭವನ್ನು ಪಡೆಯುವ ಉತ್ತಮ ಮಾರ್ಗವೆಂದರೆ, ಆರಂಭಿಕ ಹಂತದಲ್ಲಿ, ವಿನಾಶಕಾರಿ ರೀತಿಯಲ್ಲಿ ವರ್ತಿಸುವುದು, ಮಾತನಾಡುವುದು ಮತ್ತು ಯೋಚಿಸುವುದನ್ನು ತಪ್ಪಿಸುವುದಾಗಿರುತ್ತದೆ.
ಆದರೆ, ನಾವು ಇದನ್ನು ಬೌದ್ಧ ಚೌಕಟ್ಟಿನೊಳಗೆ ಮಾಡಬೇಕಾಗಿದೆ. ಸಾಮಾನ್ಯವಾಗಿ, ಎಲ್ಲಾ ಧರ್ಮಗಳು ಕೊಲ್ಲುವುದು ಮತ್ತು ಕದಿಯುವಂತಹ ವಿನಾಶಕಾರಿ ರೀತಿಯಲ್ಲಿ ವರ್ತಿಸದಂತೆ ಕಲಿಸುತ್ತವೆ, ಆದರೆ ಬೌದ್ಧ ಆಧಾರದ ವಿಶಿಷ್ಟತೆಯೆಂದರೆ ಅದು ಒಂದು ಕಾನೂನು ಆಗಿರುವುದಿಲ್ಲ. ಯಾವುದೇ ದೈವಿಕ ಜೀವಿ ಅಥವಾ ಶಾಸಕಾಂಗ ಅಥವಾ ಸರ್ಕಾರದಿಂದ ರಚಿಸಲ್ಪಟ್ಟ ಕಾನೂನು ಆಗಿರುವುದಿಲ್ಲ. ಬೌದ್ಧ ನೀತಿಯು ಕಾನೂನಿಗಿರುವ ವಿಧೇಯತೆಯನ್ನು ಆಧರಿಸಿರುವುದಿಲ್ಲ - "ಕಾನೂನನ್ನು ಪಾಲಿಸಿ, ಇಲ್ಲದಿದ್ದರೆ ನೀವು ಶಿಕ್ಷೆಗೆ ಗುರಿಯಾಗುತ್ತೀರಿ." ನಾಗರಿಕ ಕಾನೂನಿಗೆ ಸಂಬಂಧಿಸಿದಂತೆ, ನಾವು ಲಂಚವನ್ನು ನೀಡಬಹುದು ಅಥವಾ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಉತ್ತಮ ವಕೀಲರನ್ನು ನೇಮಿಸಿಕೊಳ್ಳಬಹುದು. ಅಲ್ಲದೆ, ನಾವು ಕಾನೂನನ್ನು ಪಾಲಿಸಿದಾಗ ಒಳ್ಳೆಯ ವ್ಯಕ್ತಿಯಾಗಿರುತ್ತೇವೆ ಮತ್ತು ನಾವು ಹಾಗೆ ಮಾಡದಿದ್ದರೆ ನಾವು ಕೆಟ್ಟವರು ಅಥವಾ ಅಪರಾಧಿಗಳು ಎಂಬಂತೆ ಇರುವುದಿಲ್ಲ. ವಿಧೇಯತೆ ಬೌದ್ಧ ನೀತಿಯ ಆಧಾರವಲ್ಲ.
ರಚನಾತ್ಮಕ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದು
ಬೌದ್ಧಧರ್ಮದಲ್ಲಿ ರಚನಾತ್ಮಕ ನಡವಳಿಕೆಯ ಅರ್ಥವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ವಿನಾಶಕಾರಿ ನಡವಳಿಕೆಯ ದೃಷ್ಟಿಯಿಂದ ನೋಡುವ ಮೂಲಕ ನಾವು ಹೀಗೆ ಮಾಡಬಹುದು. ಉದಾಹರಣೆಗೆ, ಕೊಲ್ಲುವ ಅಥವಾ ಜೀವ ತೆಗೆಯುವ ಒಂದು ಮಾರ್ಗವೆಂದರೆ ಬೇಟೆಯಾಡುವುದು. ಆದರೆ ನಾವು ಎಂದಿಗೂ ಬೇಟೆಯಾಡದಿದ್ದರೆ ಮತ್ತು ಬೇಟೆಯಾಡಲು ಆಸಕ್ತಿಯನ್ನು ಹೊಂದಿಲ್ಲದಿದ್ದರೆ, ನಾವು ಬೇಟೆಯಾಡುವುದಿಲ್ಲ ಎಂಬ ಅಂಶವು ಒಳ್ಳೆಯದೇ ಆಗಿದ್ದರೂ ಸಹ, ಅದನ್ನು ರಚನಾತ್ಮಕ ನಡವಳಿಕೆ ಎಂದು ಪರಿಗಣಿಸಲಾಗುವುದಿಲ್ಲ. ರಚನಾತ್ಮಕ ನಡವಳಿಕೆಯು, ಒಂದು ಸೊಳ್ಳೆಯನ್ನು ಕೊಲ್ಲಲು ಬಯಸಿದಾಗ, ನಾವು ನಮ್ಮ ಭಾವನೆಗೆ ಅನುಗುಣವಾಗಿ ಕಾರ್ಯನಿರ್ವಹಿಸದೇ ಇರುವುದನ್ನು ಸೂಚಿಸುತ್ತದೆ. ನಾವು ಹಾಗೆ ವರ್ತಿಸಿದರೆ, ನಾವು ಕೋಪದಿಂದ ವರ್ತಿಸುತ್ತಿದ್ದೇವೆ, ನಾನು, ನಾನು, ನಾನು ಎಂದು ಯೋಚಿಸುತ್ತಿದ್ದೇವೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಹೆಚ್ಚುವರಿಯಾಗಿ, ನಾವು ಈ ಸೊಳ್ಳೆಯನ್ನು ಕೊಂದರೆ, ನಮಗೆ ಇಷ್ಟವಿಲ್ಲದ ಯಾವುದೇ ವಸ್ತುವನ್ನು, ಕೊಲ್ಲುವ ಮೂಲಕ ಎದುರಿಸಲು ಪ್ರಯತ್ನಿಸುವ ಬಲವಾದ ಅಭ್ಯಾಸವನ್ನು ಸೃಷ್ಟಿಸುತ್ತದೆ ಎಂದು ನಮಗೆ ತಿಳಿದಿದೆ. ಆದ್ದರಿಂದ ಸೊಳ್ಳೆಗಳನ್ನು ಕೊಲ್ಲುವ ಬದಲು, ಅದನ್ನು ಒಂದು ಕಪ್‌ನಲ್ಲಿ ಹಿಡಿದು ಹೊರಗೆ ಬಿಡುವಂತಹ ಶಾಂತಿಯುತ ಮಾರ್ಗವನ್ನು ನಾವು ಕಂಡುಕೊಳ್ಳುತ್ತೇವೆ. ನಾವು ನಿಜವಾಗಿಯೂ ಇನ್ನೊಂದು ಜೀವಿಯನ್ನು ಕೊಲ್ಲಲು ಬಯಸಿದಾಗ ಅದನ್ನು ಕೊಲ್ಲುವುದರಿಂದ ತಡೆಯುವುದು ರಚನಾತ್ಮಕ ಕ್ರಿಯೆಯಾಗಿರುತ್ತದೆ. ನಾವು ಕಾರಣ ಮತ್ತು ಪರಿಣಾಮವನ್ನು ಅರ್ಥಮಾಡಿಕೊಳ್ಳುವುದರಿಂದ ನಾವು ನಮ್ಮನ್ನು ನಿಗ್ರಹಿಸಿಕೊಳ್ಳುತ್ತೇವೆ. ಈ ರೀತಿಯ ರಚನಾತ್ಮಕ ಕ್ರಿಯೆಯು ನಮ್ಮ ಮನಸ್ಸಿನಲ್ಲಿ ಬಲವಾದ ಸಕಾರಾತ್ಮಕ ಸಾಮರ್ಥ್ಯವನ್ನು ನಿರ್ಮಿಸುತ್ತದೆ.
ಇನ್ನೂ ಬಲವಾದ ರಚನಾತ್ಮಕ ಕ್ರಿಯೆಗಳ ಹಂತಗಳಿವೆ, ಇಲ್ಲಿ ನಾವು ಸೊಳ್ಳೆಗಳನ್ನು ಕೊಲ್ಲದಿರುವುದಲ್ಲದೆ ಅವುಗಳನ್ನು ಪೋಷಿಸುತ್ತೇವೆ. ನಮ್ಮ ರಕ್ತದ ಸ್ವಲ್ಪ ರುಚಿಯ ಅವಕಾಶವನ್ನು ಅವುಗಳಿಗೆ ನೀಡಬಹುದು. ನಮ್ಮಲ್ಲಿ ಬಹಳಷ್ಟು ಇದೆ. ಹೀಗೆ ನಿಜವಾಗಿಯೂ ಮಾಡಬಲ್ಲ ಕೆಲವು ವ್ಯಕ್ತಿಗಳನ್ನು ನಾನು ಭೇಟಿಮಾಡಿದ್ದೇನೆ. ನಾವು ಬೇಟೆಯಾಡದೇ ಇರುವುದು, ನಾವು ಯೋಚಿಸುವಷ್ಟು ಬಲವಾದ ಸಕಾರಾತ್ಮಕ ಕ್ರಿಯೆಯಾಗಿರುವುದಿಲ್ಲ.
ಬೌದ್ಧ ನೀತಿಶಾಸ್ತ್ರದ ಆಧಾರವು ವರ್ತನೆಯ ಕಾರಣ ಮತ್ತು ಪರಿಣಾಮವನ್ನು ಅರ್ಥೈಸಿಕೊಳ್ಳುವುದಾಗಿರುತ್ತದೆ
ಬೌದ್ಧಧರ್ಮದಲ್ಲಿನ ನೈತಿಕತೆಯು, ಒಂದು ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ಒಂದು ರೀತಿಯ ಫಲಿತಾಂಶಗಳನ್ನು ಸೃಷ್ಟಿಸುತ್ತದೆ ಮತ್ತು ಯಾವುದು ಹಾನಿಕಾರಕ ಮತ್ತು ಯಾವುದು ಸಹಾಯಕ ಎಂಬುದರ ನಡುವೆ ವಿವೇಚಿಸುವುದನ್ನು ಸಂಪೂರ್ಣವಾಗಿ ಆಧರಿಸಿರುತ್ತದೆ. ಉದಾಹರಣೆಗೆ, ನಾವು ವಿನಾಶಕಾರಿ ರೀತಿಯಲ್ಲಿ ವರ್ತಿಸಿದರೆ, ಅದು ನಮಗಾಗಿ ಅಸಂತೋಷ ಅಥವಾ ಗೊಂದಲಮಯ ಮನಸ್ಥಿತಿಯನ್ನು ಸೃಷ್ಟಿಸುತ್ತದೆ. ನಮ್ಮಲ್ಲಿರುವ ಮೂಲ ಗೊಂದಲದಿಂದಾಗಿ ನಾವು ಈ ರೀತಿಯಾಗಿ ವರ್ತಿಸುತ್ತೇವೆ. ಮೊದಲನೆಯದಾಗಿ, ವಿನಾಶಕಾರಿಯಾಗಿ ವರ್ತಿಸುವುದು ಸ್ವಯಂ-ವಿನಾಶಕಾರಿ ಎಂದು ನಮಗೆ ತಿಳಿದಿಲ್ಲದಿರಬಹುದು, ಉದಾಹರಣೆಗೆ ನಾವು ಮಾದಕ ದ್ರವ್ಯ ಅಥವಾ ಮದ್ಯದ ವ್ಯಸನಿಯಾದಾಗ. ನಾವು ಯಾವಾಗಲೂ ಮದದ ಅಮಲಿನಲ್ಲಿದ್ದರೆ, ನಮ್ಮ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ತಲೆಕೆಳಗಾದ ರೀತಿಯಲ್ಲಿ ಯೋಚಿಸಬಹುದು.
ಆದ್ದರಿಂದ, ನೈತಿಕ ನಡವಳಿಕೆಯ ಆಧಾರದ ತಿಳುವಳಿಕೆಯೊಂದಿಗೆ, ನಾವು ವಿನಾಶಕಾರಿಯಾಗಿ ವರ್ತಿಸಲು ಕಾರಣ ನಾವು ಕೆಟ್ಟವರು ಎಂದಲ್ಲ, ಬದಲಿಗೆ ನಾವು ಗೊಂದಲಕ್ಕೊಳಗಾಗಿರುವ ಕಾರಣ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಇತರರು ವಿನಾಶಕಾರಿಯಾಗಿ ವರ್ತಿಸಿದಾಗ, ಅವರು ಕೆಟ್ಟವರು ಮತ್ತು ಶಿಕ್ಷೆಗೆ ಅರ್ಹರು ಎಂದಲ್ಲ, ಏಕೆಂದರೆ ಅವರು ತುಂಬಾ ಗೊಂದಲಕ್ಕೊಳಗಾಗಿದ್ದಾರೆ ಮತ್ತು ಗಲಿಬಿಲಿಗೊಂಡಿರುತ್ತಾರೆ. ಅವರು ಸಹಾನುಭೂತಿಯನ್ನು ಸ್ವೀಕರಿಸಲು ಅರ್ಹರು, ಅವರ ಗೊಂದಲವನ್ನು ನಿವಾರಿಸಲು ನಾವು ಅವರಿಗೆ ಸಹಾಯ ಮಾಡಲು ಬಯಸುತ್ತೇವೆ. ಹೌದು, ಅವರು ಇತರ ಜನರಿಗೆ ಹಾನಿ ಮಾಡುವುದನ್ನು ಮುಂದುವರಿಸುವ ಸಾಧ್ಯತೆಯಿದ್ದರೆ, ನಾವು ಅವರನ್ನು ಕೂಡಿಹಾಕಬೇಕಾಗಬಹುದು, ಆದರೆ ಅದನ್ನು ವಿಭಿನ್ನ ಮನಸ್ಥಿತಿಯೊಂದಿಗೆ ಮಾಡಬೇಕು. ನಾವು ಅವರನ್ನು ಶಿಕ್ಷಿಸುವ ಅಥವಾ ನೋಯಿಸುವ ಅಗತ್ಯವಿಲ್ಲ, ಆದರೆ ಒಂದು ರೀತಿಯಲ್ಲಿ ಸಹಾಯ ಮಾಡಲು ಪ್ರಯತ್ನಿಸಬೇಕು. ಅವರು ಶಾಶ್ವತವಾಗಿ ಮುಂದುವರಿಯುವ ಮಾನಸಿಕ ನಿರಂತರತೆಯನ್ನು ಹೊಂದಿರುತ್ತಾರೆ ಮತ್ತು ನಾವು ಅವರಿಗಾಗಿ ಈಗ ಪುನರ್ವಸತಿ ನೀಡದಿದ್ದರೆ, ಅವರು ಭವಿಷ್ಯದಲ್ಲಿ ಬಹಳ ವಿನಾಶಕಾರಿ ರೀತಿಯಲ್ಲಿ ವರ್ತಿಸುವರು.
ಆದರೆ, ಈ ಆರಂಭಿಕ ಹಂತದಲ್ಲಿ, ನಾವು ಮುಖ್ಯವಾಗಿ ನಮ್ಮ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಭವಿಷ್ಯದಲ್ಲಿ ಭಯಾನಕ ಸಂದರ್ಭಗಳನ್ನು ತಪ್ಪಿಸಲು ಬಯಸುತ್ತೇವೆ, ಅದು ಈ ಜೀವಿತಾವಧಿಯಲ್ಲಿನ ಧರ್ಮ-ಲೈಟ್ ವಿಧಾನವಾಗಿರಬಹುದು ಅಥವಾ ಭವಿಷ್ಯದ ಜೀವತಾವಧಿಯ ನಿಜವಾದ ಧರ್ಮದ ವಿಧಾನವಾಗಿರಬಹದು. ಈ ಹಂತದಲ್ಲಿ, ಸುರಕ್ಷಿತ ದಿಕ್ಕನ್ನು ಕಂಡುಕೊಳ್ಳುವ ಮೂಲಕ ಈ ಅಮೂಲ್ಯವಾದ ಮಾನವ ಜೀವನವನ್ನು ನಾವು ಉಪಯೋಗಿಸಿಕೊಳ್ಳುತ್ತೇವೆ. ನಾವು ಈ ಜೀವನಕ್ಕೆ ಮೌಲ್ಯ ನೀಡುತ್ತೇವೆ, ಏಕೆಂದರೆ ನಾವು ಅದನ್ನು ಕಳೆದುಕೊಳ್ಳುತ್ತೇವೆ ಎಂದು ನಮಗೆ ತಿಳಿದಿದೆ ಮತ್ತು ಭವಿಷ್ಯದಲ್ಲಿ ನಾವು ಅಮೂಲ್ಯವಾದ ಮಾನವ ಜೀವನವನ್ನು ಮುಂದುವರಿಸುವ ಖಚಿತತೆಯನ್ನು ಪಡೆಯಲು ಬಯಸುತ್ತೇವೆ. ನಮಗೆ ಈ ಮಾನವ ಜೀವತಾವಧಿಗಳು ಬೇಕಾಗುತ್ತವೆ ಏಕೆಂದರೆ ವಿಮೋಚನೆ ಮತ್ತು ಜ್ಞಾನೋದಯದ ಗುರಿಗಳನ್ನು ತಲುಪಲು ಬಹಳ ಸಮಯ ಬೇಕಾಗುತ್ತದೆ. ಹೇಗೆ ಧರ್ಮ-ಲೈಟ್ ನಿಜವಾದ ಧರ್ಮಕ್ಕಾಗಿರುವ ಮೆಟ್ಟಿಲಾಗಿದೆ, ಅದೇ ರೀತಿಯಾಗಿ, ಈ ಆರಂಭಿಕ ಹಂತವು ಮಧ್ಯಂತರ ಮತ್ತು ಉನ್ನತ ಹಂತಗಳಿಗಾಗಿರುವ ಮೊದಲ ಹೆಜ್ಜೆಯಾಗಿರುತ್ತದೆ.
ಸಾರಾಂಶ
ಆರಂಭಿಕ ಪ್ರೇರಣೆಯು, ನಮ್ಮ ಬಳಿಯಿರುವ ಈ ಅತ್ಯುತ್ತಮವಾದ, ಅಮೂಲ್ಯವಾದ ಮಾನವ ಜೀವನವನ್ನು ಪ್ರಶಂಸಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ನಮಗೆ ಈ ದೇಹವಿದೆ, ಅವಕಾಶಗಳಿವೆ, ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಮಾನವ ಬುದ್ಧಿವಂತಿಕೆಯಿದೆ; ನಾವು ಮನಸ್ಸು ಮಾಡಿದರೆ, ನಮಗೆ ಸಾಧಿಸಲು ಸಾಧ್ಯವಾಗದಿರುವುದು ಯಾವುದೂ ಇಲ್ಲ.
ನಾವು ಈಗ ಇರುವ ಈ ಅದ್ಭುತ ಪರಿಸ್ಥಿತಿಯು ಶಾಶ್ವತವಾಗಿ ಉಳಿಯುವುದಿಲ್ಲ, ಏಕೆಂದರೆ ಯಾವುದೂ ಶಾಶ್ವತವಾಗಿರುವುದಿಲ್ಲ. ನಾವು ಎಷ್ಟು ಶ್ರೀಮಂತರಾಗಿದ್ದೇವೆ, ನಾವು ಎಷ್ಟು ಪ್ರಸಿದ್ಧರಾಗಿದ್ದೇವೆ ಅಥವಾ ನಮಗೆ ಎಷ್ಟು ಸ್ನೇಹಿತರಿದ್ದಾರೆ ಅಥವಾ ನಮ್ಮ ದೇಹವು ಎಷ್ಟು ಬಲಶಾಲಿಯಾಗಿದೆ ಎಂಬುದು ಯಾವುದೂ ಮುಖ್ಯವಲ್ಲ, ನಾವೆಲ್ಲರೂ ಸಾಯುತ್ತೇವೆ. ಇದನ್ನು ತಡೆಯಲು ಸಾಧ್ಯವಿಲ್ಲ, ಜೊತೆಗೆ ನಮ್ಮ ಸಮಯ ಯಾವಾಗ ಮುಗಿಯುತ್ತದೆ ಎಂದು ತಿಳಿಯುವ ಮಾರ್ಗವೂ ಇಲ್ಲ. ನಾವು ಸಾವನ್ನು ನಿಜವಾಗಿಯೂ ಅರಿತುಕೊಂಡರೆ, ನಾವು ಸಾಮಾನ್ಯ ಜೀವನವನ್ನು ನಡೆಸುವುದು ಅಸಾಧ್ಯವೆಂದು ಹೇಳಲಾಗಿದೆ.
ಈ ಜೀವನವು ದುರ್ಬಲವಾಗಿದೆ ಮತ್ತು ಯಾವುದೇ ಕ್ಷಣದಲ್ಲಾದರೂ ಕೊನೆಗೊಳ್ಳಬಹುದು ಎಂದು ನಾವು ಅರಿತುಕೊಂಡಾಗ, ನಾವು ಸಾವಿನ ಆಚೆಗೆ ಏನಿದೆ ಎಂದು ಯೋಚಿಸಲು ಪ್ರಾರಂಭಿಸುತ್ತೇವೆ. ಅನೇಕ ಸಂಭವನೀಯ ಸ್ಥಿತಿಗಳು ಇರುವುದರಿಂದ, ಅವುಗಳಲ್ಲಿ ಹಲವಾರು ಭಯಾನಕವಾಗಿದ್ದು, ನಾವು ಅವುಗಳಲ್ಲಿ ಪುರ್ನಜನ್ಮ ಪಡೆಯಬಹುದಾದ್ದರಿಂದ, ನಾವು ನಮ್ಮ ಜೀವನದಲ್ಲಿ ಸುರಕ್ಷಿತ ದಿಕ್ಕನ್ನು ಇರಿಸಿಕೊಳ್ಳುತ್ತೇವೆ.
ಈ ಸುರಕ್ಷಿತ ದಿಕ್ಕು, ಭವಿಷ್ಯದ ದುಃಖವನ್ನು ಉಂಟುಮಾಡುವ ವಿನಾಶಕಾರಿ ಕ್ರಿಯೆಗಳಿಂದ ದೂರವಿರಲು ಮತ್ತು ಭವಿಷ್ಯದ ಸಂತೋಷವನ್ನು ಉಂಟುಮಾಡುವ ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಈ ರೀತಿಯಾಗಿ, ನಮ್ಮ ಭವಿಷ್ಯದ ಪುನರ್ಜನ್ಮಗಳು ಉತ್ತಮ ಸ್ಥಿತಿಗಳಲ್ಲಿರುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ.