ಏನಿದು…
ಲೇಖನ 1 ರಲ್ಲಿ 20
ಮುಂದೆ Arrow right
Study buddhism what is buddhism

ಬೌದ್ಧಧರ್ಮವು, ವಾಸ್ತವದ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳುವ ಮೂಲಕ ನಮ್ಮ ಪೂರ್ಣ ಮಾನವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ವಿಧಾನಗಳ ಒಂದು ಗುಚ್ಚವಾಗಿದೆ.

2,500 ವರ್ಷಗಳ ಹಿಂದೆ, ಬುದ್ಧನೆಂದು ಪ್ರಸಿದ್ಧರಾಗಿರುವ ಸಿದ್ಧಾರ್ಥ ಗೌತಮರು ಬೌದ್ಧಧರ್ಮವನ್ನು ಭಾರತದಲ್ಲಿ ಸ್ಥಾಪಿಸಿದ ನಂತರ, ಅದು ಏಷ್ಯಾದಾದ್ಯಂತ ಹರಡಿತು ಮತ್ತು ಇಂದು ವಿಶ್ವದ ನಾಲ್ಕನೇ ಅತಿದೊಡ್ಡ ಧರ್ಮವಾಗಿದೆ. ಬುದ್ಧನು ತಮ್ಮ ಜೀವನದ ಬಹುಪಾಲು ಸಮಯದಲ್ಲಿ, ಇತರರು ಸ್ವತಃ ಪ್ರಬುದ್ಧ ಬುದ್ಧರಾಗಲು ಸಹಾಯ ಮಾಡಲು ತಾವು ಅರಿತುಕೊಂಡ ಜಾಗೃತಿಯ ವಿಧಾನಗಳನ್ನು ಕಲಿಸುತ್ತಾ ಕಳೆದರು. ಬುದ್ಧನಾಗುವ ಸಾಮರ್ಥ್ಯದಲ್ಲಿ ಎಲ್ಲರೂ ಸಮಾನರಾಗಿದ್ದರೂ, ಜನರು ತಮ್ಮ ಆದ್ಯತೆಗಳು, ಆಸಕ್ತಿಗಳು ಮತ್ತು ಪ್ರತಿಭೆಗಳಲ್ಲಿ ಅಗಾಧವಾಗಿ ಭಿನ್ನವಾಗಿರುವುದನ್ನು ಅವರು ಗಮನಿಸಿದರು. ಇದನ್ನು ಗೌರವಿಸಿ, ಒಬ್ಬರ ಮಿತಿಗಳನ್ನು ಜಯಿಸಲು ಮತ್ತು ಒಬ್ಬರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅವರು ವಿವಿಧ ಮಾರ್ಗಗಳನ್ನು ಕಲಿಸಿದರು. 

ಬೌದ್ಧಧರ್ಮವನ್ನು ಅಳವಡಿಸಿಕೊಂಡ ಪ್ರತಿಯೊಂದು ಸಂಸ್ಕೃತಿಯಲ್ಲಿ ವಿಭಿನ್ನ ಅಂಶಗಳನ್ನು ಒತ್ತಿಹೇಳಲಾಗಿದೆ; ಬೌದ್ಧಧರ್ಮದ ಹಲವು ರೂಪಗಳಿದ್ದರೂ, ಅವುಗಳಲ್ಲೆವೂ ಮೂಲಭೂತ ಬೋಧನೆಗಳನ್ನು ಹಂಚಿಕೊಳ್ಳುತ್ತವೆ. 

ಮೂಲಭೂತ ಬೌದ್ಧ ಬೋಧನೆಗಳು - ನಾಲ್ಕು ಆರ್ಯ ಸತ್ಯಗಳು 

ಬುದ್ಧನ ಅತ್ಯಂತ ಮೂಲಭೂತ ಬೋಧನೆಯನ್ನು ನಾಲ್ಕು ಆರ್ಯ ಸತ್ಯಗಳು ಎಂದು ಕರೆಯಲಾಗಿದ್ದು, ಈ ನಾಲ್ಕು ಸತ್ಯಗಳನ್ನು ಸರ್ವೋಚ್ಛ ಜೀವಿಗಳಿಂದ ಸತ್ಯವೆಂದು ಪರಿಗಣಿಸಲಾಗಿದೆ: 

ಮೊದಲ ಆರ್ಯ ಸತ್ಯ: ನಿಜವಾದ ಸಮಸ್ಯೆಗಳು 

ಜೀವನದಲ್ಲಿ ಅನೇಕ ಆನಂದಗಳಿದ್ದರೂ, ಪ್ರತಿಯೊಂದು ಜೀವಿ - ಅತ್ಯಂತ ಚಿಕ್ಕ ಕೀಟದಿಂದ, ನಿರಾಶ್ರಿತ ವ್ಯಕ್ತಿಯಿಂದ, ಕೋಟ್ಯಾಧಿಪತಿಯವರೆಗೆ - ಸಮಸ್ಯೆಗಳನ್ನು ಎದುರಿಸುತ್ತದೆ. ಹುಟ್ಟು ಮತ್ತು ಸಾವಿನ ನಡುವೆ, ನಮಗೆ ವಯಸ್ಸಾಗುತ್ತದೆ ಮತ್ತು ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ ಮತ್ತು ನಮ್ಮ ಪ್ರೀತಿಪಾತ್ರರು ಸಾವನಪ್ಪುತ್ತಾರೆ. ನಾವು ಹತಾಶೆ ಮತ್ತು ನಿರಾಶೆಗೊಳಗಾಗುತ್ತೇವೆ, ನಮಗೆ ಬೇಕಾದುದನ್ನು ಪಡೆಯುವುದಿಲ್ಲ, ನಮಗೆ ಬೇಡವಾದದ್ದನ್ನು ಎದುರಿಸುತ್ತೇವೆ. 

ಎರಡನೇ ಆರ್ಯ ಸತ್ಯ: ಸಮಸ್ಯೆಗಳ ನಿಜವಾದ ಕಾರಣ 

ನಮ್ಮ ಸಮಸ್ಯೆಗಳು ಸಂಕೀರ್ಣವಾದ ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಉದ್ಭವಿಸುತ್ತವೆ, ಆದರೆ ಬುದ್ಧನ ಪ್ರಕಾರ ಇವುಗಳ ಅಂತಿಮ ಕಾರಣವು ವಾಸ್ತವದ ಬಗ್ಗೆಗಿನ ನಮ್ಮ ಸ್ವಂತ ಅಜ್ಞಾನವಾಗಿರುತ್ತದೆ: ಅಂದರೆ ನಮ್ಮ ಮನಸ್ಸುಗಳು ನಮ್ಮ ಮೇಲೆ, ಇತರರ ಮೇಲೆ ಮತ್ತು ಎಲ್ಲದರ ಮೇಲೆ ಅಸಾಧ್ಯವಾದ ಅಸ್ತಿತ್ವದ ಮಾರ್ಗಗಳನ್ನು ಯೋಜಿಸುವ ರೀತಿ. 

ಮೂರನೇ ಆರ್ಯ ಸತ್ಯ: ಸಮಸ್ಯೆಗಳ ನಿಜವಾದ ನಿಲುಗಡೆ 

ನಾವು ನಮ್ಮ ಸಮಸ್ಯೆಗಳನ್ನು ಮತ್ತೊಮ್ಮೆ ಅನುಭವಿಸದಂತೆ ಅವುಗಳೆಲ್ಲವನ್ನೂ ತೊಡೆದುಹಾಕಲು ಸಾಧ್ಯವೆಂದು ಬುದ್ಧ ಗೋಚರಿಸಿದರು: ಅವುಗಳ ಕಾರಣವಾದ ನಮ್ಮ ಸ್ವಂತ ಅಜ್ಞಾನ ನಾಶಪಡಿಸುವ ಮೂಲಕ. 

ನಾಲ್ಕನೇ ಆರ್ಯ ಸತ್ಯ: ಮನಸ್ಸಿನ ಸತ್ಯವಾದ ಮಾರ್ಗ 

ವಾಸ್ತವವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮೂಲಕ ನಾವು ಅಜ್ಞಾನವನ್ನು ತೊಡೆದುಹಾಕಿದಾಗ ಸಮಸ್ಯೆಗಳು ನಿಲ್ಲುತ್ತವೆ. ಪ್ರತಿಯೊಬ್ಬರೂ ಪರಸ್ಪರ ಸಂಬಂಧಿತರಾಗಿದ್ದಾರೆ ಮತ್ತು ಪರಸ್ಪರ ಅವಲಂಬಿತರಾಗಿದ್ದಾರೆ ಎಂಬುದನ್ನು ಅರಿತುಕೊಳ್ಳುವ ಮೂಲಕ ನಾವು ಹೀಗೆ ಮಾಡಬಹುದು. ಈ ಆಧಾರದ ಮೇಲೆ ನಾವು ಎಲ್ಲಾ ಜೀವಿಗಳಿಗೆ ಸಮಾನವಾದ ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಮತ್ತು ಇತರರ ಅಸ್ತಿತ್ವದ ಕುರಿತಾದ ಗೊಂದಲವನ್ನು ನಾವು ನಶಿಸಿದಾಗ, ನಮ್ಮ ಮತ್ತು ಇತರರ ಒಳಿತಿಗಾಗಿ ಕಾರ್ಯನಿರ್ವಹಿಸಲು ನಮಗೆ ಸಾಧ್ಯವಾಗುತ್ತದೆ.

ಬುದ್ಧನ ಬೋಧನೆಗಳ ಮಟ್ಟಗಳು 

ದಲೈ ಲಾಮಾ ಬೌದ್ಧಧರ್ಮದಲ್ಲಿನ ಮುಮ್ಮಡಿಯ ವ್ಯತ್ಯಾಸವನ್ನು ತೋರಿಸುತ್ತಾರೆ: 

  • ಬೌದ್ಧರ ಮಾನಸಿಕ ವಿಜ್ಞಾನ - ವ್ಯಕ್ತಿನಿಷ್ಠ ಅನುಭವದ ದೃಷ್ಟಿಕೋನದಿಂದ ಗ್ರಹಿಕೆ, ಆಲೋಚನೆ ಮತ್ತು ಭಾವನೆಗಳು ಹೇಗೆ ಕೆಲಸ ಮಾಡುತ್ತವೆ 
  • ಬೌದ್ಧ ತತ್ವಶಾಸ್ತ್ರ - ನೈತಿಕತೆ ಮತ್ತು ತರ್ಕ, ಮತ್ತು ವಾಸ್ತವತೆಯ ಬಗ್ಗೆ ಬೌದ್ಧಧರ್ಮದಲ್ಲಿನ ತಿಳುವಳಿಕೆ 
  • ಬೌದ್ಧ ಧರ್ಮ - ಭೂತಕಾಲದ ಮತ್ತು ಭವಿಷ್ಯದ ಜೀವನದಲ್ಲಿ ನಂಬಿಕೆ, ಕರ್ಮ, ಆಚರಣೆಗಳು ಮತ್ತು ಪ್ರಾರ್ಥನೆ. 

ಇಂದ್ರಿಯ ಗ್ರಹಿಕೆ, ಏಕಾಗ್ರತೆ, ಗಮನ, ಸಾವಧಾನತೆ ಮತ್ತು ಸ್ಮರಣೆ, ಜೊತೆಗೆ ನಮ್ಮ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳನ್ನು ಒಳಗೊಂಡಂತೆ, ಮನಸ್ಸಿನ ವಿವಿಧ ಅರಿವಿನ ಕಾರ್ಯಗಳ ವ್ಯಾಪಕವಾದ ನಕ್ಷೆಯನ್ನು ಒದಗಿಸುವ ಮೂಲಕ, ಬೌದ್ಧ ವಿಜ್ಞಾನವು ಆಧುನಿಕ ನರವಿಜ್ಞಾನಕ್ಕೆ ಪೂರಕವಾಗಿದೆ. ಸಕಾರಾತ್ಮಕ ನರ ಮಾರ್ಗಗಳನ್ನು ರೂಪಿಸುವ ಮೂಲಕ, ನಾವು ನಮ್ಮ ಮನಸ್ಸಿನ ಪ್ರಯೋಜನಕಾರಿ ಸಾಮರ್ಥ್ಯಗಳನ್ನು ಹೆಚ್ಚಿಸಬಹುದು. 

ಬೌದ್ಧ ಚಿಂತನೆಯು ನಂಬಿಕೆಗಿಂತ ಪರಿಶೀಲನೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ, ಆದ್ದರಿಂದ ವೈಜ್ಞಾನಿಕ ಸಂಶೋಧನೆಗಳು ಬೌದ್ಧ ಚಿಂತನೆಗೆ ಬಹಳ ಸಹಾಯಕವಾಗಿವೆ. - 14 ನೇ ದಲೈ ಲಾಮಾ 

ಭೌತಿಕ ಮಟ್ಟದಲ್ಲಿ, ಬೌದ್ಧ ವಿಜ್ಞಾನವು ಹಲವಾರು ರೋಗಗಳಿಗೆ ಚಿಕಿತ್ಸೆಗಳನ್ನು ಒಳಗೊಂಡಿರುವ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಗಳನ್ನು ಸಹ ಒಳಗೊಂಡಿದೆ. ಬಾಹ್ಯವಾಗಿ, ಇದು ಕ್ವಾಂಟಮ್ ಭೌತಶಾಸ್ತ್ರಕ್ಕೆ ಅನೇಕ ಹೋಲಿಕೆಗಳನ್ನು ಹೊಂದಿದ್ದು, ವಸ್ತು ಮತ್ತು ಶಕ್ತಿಯ ವಿವರವಾದ ವಿಶ್ಲೇಷಣೆಯನ್ನು ಪ್ರಸ್ತುತಪಡಿಸುತ್ತದೆ. ಇದು ಬ್ರಹ್ಮಾಂಡದ ಮೂಲ, ಜೀವನ ಮತ್ತು ಅಂತ್ಯವನ್ನು ಸಹ ಚರ್ಚಿಸುತ್ತದೆ, ಮತ್ತು ಪ್ರಸ್ತುತ ಬ್ರಹ್ಮಾಂಡವನ್ನು ಹಿಂಬಾಲಿಸುವ, ಯಾವುದೇ ಅರಂಭವಿಲ್ಲದ ಬ್ರಹ್ಮಾಂಡದ ಪ್ರವಾಹವನ್ನು ಪ್ರತಿಪಾದಿಸುತ್ತದೆ.

ಬೌದ್ಧ ತತ್ತ್ವಶಾಸ್ತ್ರವು ಪರಸ್ಪರ ಅವಲಂಬನೆ, ಸಾಪೇಕ್ಷತೆ ಮತ್ತು ಕಾರಣದಂತಹ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಇದು ಸೆಟ್ ಸಿದ್ಧಾಂತ ಮತ್ತು ಚರ್ಚೆಯ ಆಧಾರದ ಮೇಲೆ ತರ್ಕದ ವಿವರವಾದ ವ್ಯವಸ್ಥೆಯನ್ನು ಪ್ರಸ್ತುತಪಡಿಸುತ್ತದೆ, ಅದು ನಮ್ಮ ಮನಸ್ಸಿನ ತಪ್ಪು ಪ್ರಕ್ಷೇಪಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. 

ಬೌದ್ಧ ನೀತಿಗಳು ತನಗೆ ಮತ್ತು ಇತರರಿಗೆ ಯಾವುದು ಪ್ರಯೋಜನಕಾರಿ ಮತ್ತು ಹಾನಿಕಾರಕ ಎಂಬುದರ ನಡುವಿನ ವ್ಯತ್ಯಾಸವನ್ನು ಆಧರಿಸಿದೆ. 

ನಾವು ನಂಬಿಕೆಯುಳ್ಳವರು ಅಥವಾ ಅಜ್ಞೇಯತಾವಾದಿಗಳು ಎಂಬುದನ್ನು ಲೆಕ್ಕಿಸದೆ, ನಾವು ದೇವರನ್ನು ಅಥವಾ ಕರ್ಮವನ್ನು ನಂಬುತ್ತೇವೆಯೇ ಎಂಬುದನ್ನು ಲೆಕ್ಕಿಸದೆ, ಪ್ರತಿಯೊಬ್ಬರೂ ನೈತಿಕ ನೀತಿಗಳನ್ನು ಅನುಸರಿಸಬಹುದು. - 14 ನೇ ದಲೈ ಲಾಮಾ 

ಇದು ದಯೆ, ಪ್ರಾಮಾಣಿಕತೆ, ಔದಾರ್ಯ ಮತ್ತು ತಾಳ್ಮೆಯ ಮೂಲಭೂತ ಮಾನವ ಮೌಲ್ಯಗಳ ಜೊತೆಗೆ, ಇತರರಿಗೆ ಸಾಧ್ಯವಾದಷ್ಟು ಹಾನಿಯುಂಟುಮಾಡದಂತಿರಲು ಪ್ರಯತ್ನಿಸುವುದನ್ನು ಶ್ಲಾಘಿಸುತ್ತದೆ ಮತ್ತು ಅಭಿವೃದ್ಧಿಪಡಿಸುತ್ತದೆ. 

ಬೌದ್ಧ ಧರ್ಮವು ಕರ್ಮ, ಭೂತಕಾಲದ ಮತ್ತು ಭವಿಷ್ಯದ ಜೀವನ, ಪುನರ್ಜನ್ಮದ ಕಾರ್ಯವಿಧಾನ, ಪುನರ್ಜನ್ಮದಿಂದ ವಿಮೋಚನೆ ಮತ್ತು ಜ್ಞಾನೋದಯದ ಸಾಧನೆಯಂತಹ ವಿಷಯಗಳೊಂದಿಗೆ ವ್ಯವಹರಿಸುತ್ತದೆ. ಇದು ಪಠಣ, ಧ್ಯಾನ ಮತ್ತು ಪ್ರಾರ್ಥನೆಗಳಂತಹ ಅಭ್ಯಾಸಗಳನ್ನು ಒಳಗೊಂಡಿದೆ. ಬೌದ್ಧಧರ್ಮದಲ್ಲಿ "ಬೌದ್ಧ ಬೈಬಲ್" ನಂತಹ ಏಕೈಕ ಪವಿತ್ರ ಗ್ರಂಥವಿಲ್ಲ, ಏಕೆಂದರೆ ಪ್ರತಿಯೊಂದು ಸಂಪ್ರದಾಯವು ಮೂಲ ಬೋಧನೆಗಳ ಆಧಾರದ ಮೇಲೆ ತನ್ನದೇ ಆದ ಪಠ್ಯಗಳನ್ನು ಹೊಂದಿದೆ. 

ಜನರು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಪ್ರಾರ್ಥಿಸಬಹುದು, ಆದರೂ ಹಲವರು ದೇವಾಲಯಗಳಲ್ಲಿ ಅಥವಾ ತಮ್ಮ ಮನೆಗಳಲ್ಲಿನ ಗುಡಿಗಳ ಮುಂದೆ ಪ್ರಾರ್ಥಿಸುತ್ತಾರೆ. ಪ್ರಾರ್ಥನೆಯ ಉದ್ದೇಶವು ನಮ್ಮ ಆಶಯಗಳಿಗಾಗಿ ಬೇಡುವುದು ಅಲ್ಲ, ಬದಲಿಗೆ ನಮ್ಮ ಸ್ವಂತ ಆಂತರಿಕ ಶಕ್ತಿ, ಬುದ್ಧಿವಂತಿಕೆ ಮತ್ತು ಸಹಾನುಭೂತಿಯನ್ನು ಎಚ್ಚರಿಸುವುದಾಗಿದೆ. 

ಯಾವುದೇ ಆಹಾರದ ಮಿತಿಗಳಿಲ್ಲವಾದರೂ, ಹೆಚ್ಚಿನ ಗುರುಗಳು, ಸಾಧ್ಯವಾದಷ್ಟು ಸಸ್ಯಾಹಾರಿಗಳಾಗಿರಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಬುದ್ಧನು ತನ್ನ ಅನುಯಾಯಿಗಳಿಗೆ ಮದ್ಯಪಾನ ಅಥವಾ ಮಾದಕ ದ್ರವ್ಯಗಳನ್ನು ಸೇವಿಸದಂತೆ ಸೂಚಿಸಿರುವರು. ಬೌದ್ಧರ ತರಬೇತಿಯು ಸಾವಧಾನತೆ ಮತ್ತು ಸ್ವಯಂ-ಶಿಸ್ತನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ, ನಾವು ಕುಡಿದಾಗ ಅಥವಾ ನಮಗೆ ಮತ್ತೇರಿದಾಗ, ಅವುಗಳನ್ನು ಕಳೆದುಕೊಳ್ಳುತ್ತೇವೆ. 

ಬೌದ್ಧಧರ್ಮವು ಸನ್ಯಾಸಿಗಳು ಮತ್ತು ಸನ್ಯಾಸಿನಿಗಳೊಂದಿಗೆ ಸನ್ಯಾಸತ್ವದ ಸಂಪ್ರದಾಯವನ್ನು ಹೊಂದಿದ್ದು, ಅವರು ಸಂಪೂರ್ಣವಾದ ಬ್ರಹ್ಮಚರ್ಯವನ್ನು ಒಳಗೊಂಡಂತೆ ನೂರಾರು ಪ್ರತಿಜ್ಞೆಗಳನ್ನು ತೆಗೆದುಕೊಳ್ಳುತ್ತಾರೆ. ಅವರು ತಮ್ಮ ತಲೆಯನ್ನು ಬೋಳಿಸಿಕೊಳ್ಳುತ್ತಾರೆ, ನಿಲುವಂಗಿಯನ್ನು ಧರಿಸುತ್ತಾರೆ ಮತ್ತು ಸನ್ಯಾಸಿಗಳ ಸಮುದಾಯಗಳಲ್ಲಿ ವಾಸಿಸುತ್ತಾರೆ, ಅಲ್ಲಿ ಅವರು ತಮ್ಮ ಜೀವನವನ್ನು ಅಧ್ಯಯನ, ಧ್ಯಾನ, ಪ್ರಾರ್ಥನೆ ಮತ್ತು ಸಾಮಾನ್ಯ ಸಮುದಾಯಕ್ಕಾಗಿ ಆಚರಣೆಗಳನ್ನು ನಡೆಸಲು ಅರ್ಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅನೇಕ ಜನಸಾಮಾನ್ಯರು ಬೌದ್ಧ ಕೇಂದ್ರಗಳಲ್ಲಿ ಬೌದ್ಧ ಧರ್ಮವನ್ನು ಅಧ್ಯಯನ ಮಾಡುತ್ತಾರೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡುತ್ತಾರೆ. 

ಬೌದ್ಧಧರ್ಮವು ಎಲ್ಲರಿಗಾಗಿ ತೆರೆದಿದೆ 

ನಮ್ಮಂತೆಯೇ ಒಬ್ಬ ಮನುಷ್ಯನಾದ ಬುದ್ಧನು, ನಮ್ಮ ಅಸ್ತಿತ್ವದ ವಾಸ್ತವತೆಯ ನೈಜಗುಣವನ್ನು ಅರಿತು, ತಮ್ಮ ಎಲ್ಲಾ ನ್ಯೂನತೆಗಳನ್ನು ನಿವಾರಿಸಿದರು ಮತ್ತು ಅವರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡರು; ಬೌದ್ಧಧರ್ಮದಲ್ಲಿ ಇದನ್ನು ನಾವು "ಜ್ಞಾನೋದಯ" ಎಂದು ಕರೆಯುತ್ತೇವೆ. ಸುಮ್ಮನೆ ಕೈ ಬೀಸಿ ಬುದ್ಧನಿಗೆ ನಮ್ಮ ಸಮಸ್ಯೆಗಳನ್ನೆಲ್ಲಾ ದೂರ ಮಾಡಲಾಗಲಿಲ್ಲ. ಬದಲಾಗಿ, ಜೀವನದ ಸಮಸ್ಯೆಗಳಿಂದ ನಮ್ಮನ್ನು ಮುಕ್ತಗೊಳಿಸಲು ಮತ್ತು ನಮ್ಮ ಮನಸ್ಸಿನ ಉತ್ತಮ ಗುಣಗಳಾದ ಪ್ರೀತಿ, ಸಹಾನುಭೂತಿ, ಔದಾರ್ಯ, ಬುದ್ಧಿವಂತಿಕೆ ಇತ್ಯಾದಿಗಳನ್ನು ಅಭಿವೃದ್ಧಿಪಡಿಸಲು ಅನುಸರಿಸಬಹುದಾದ ಮಾರ್ಗವನ್ನು ಅವರು ನಮಗೆ ತೋರಿಸಿದರು. 

ಈ ಗುಣಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಕುರಿತಾದ ಬೋಧನೆಗಳು, ಸಾಂಸ್ಕೃತಿಕ ಹಿನ್ನೆಲೆ ಅಥವಾ ಧರ್ಮವನ್ನು ಪರಿಗಣಿಸದೆ, ಎಲ್ಲರಿಗೂ ಲಭ್ಯವಾಗಿರುತ್ತದೆ. ಬೌದ್ಧಧರ್ಮವು ದೇವರು ಅಥವಾ ದೇವತೆಗಳ ನಂಬಿಕೆಯನ್ನು ಆಧರಿಸಿಲ್ಲ, ಬದಲಿಗೆ ನಾವು ಒಂದು ಅಮೂಲ್ಯವಾದ ವಸ್ತುವನ್ನು ಖರೀದಿಸುವಾಗ ಅದನ್ನು ಪರಿಶೀಲಿಸಿದಂತೆ ಬೋಧನೆಗಳನ್ನೂ ಪರಿಶೀಲಿಸಲು ಕೇಳುತ್ತದೆ. ಈ ರೀತಿಯಾಗಿ, ಬುದ್ಧನ ಬೋಧನೆಗಳ ಸಾರವನ್ನು ನಾವು ಪ್ರಶಂಸಿಸುತ್ತೇವೆ - ನೈತಿಕತೆ, ಸಹಾನುಭೂತಿ ಮತ್ತು ಬುದ್ಧಿವಂತಿಕೆ - ನಾವು ಸ್ವಾಭಾವಿಕವಾಗಿ ಹಾನಿಕಾರಕ ಕ್ರಿಯೆಗಳಿಂದ ದೂರವಿದ್ದು, ನಮ್ಮ ಮತ್ತು ಇತರರ ಒಳಿತಿಗಾಗಿ ಸಕಾರಾತ್ಮಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇವೆ. ಹೀಗೆ ಮಾಡುವುದರಿಂದ, ನಮ್ಮಲ್ಲಿ ಪ್ರತಿಯೊಬ್ಬರೂ ಸಮಾನವಾಗಿ ಅಪೇಕ್ಷಿಸುವ ಸಂತೋಷ ಮತ್ತು ಯೋಗಕ್ಷೇಮವನ್ನು ಕರೆತರುವುದರಲ್ಲಿ ಯಾವುದೇ ಸಂದೇಹವಿಲ್ಲ.

Top