What is enligtment abhijeet gourav

ಜ್ಞಾನೋದಯವೆಂದರೆ ಮಾನವ ಅಭಿವೃದ್ಧಿ ಮತ್ತು ಸಾಮರ್ಥ್ಯದ ಪರಾಕಾಷ್ಠೆಯಾಗಿರುವ ಬುದ್ಧನಾಗುವುದು - ಇದು ಬೌದ್ಧಧರ್ಮದಲ್ಲಿನ ಅಂತಿಮ ಗುರಿಯಾಗಿದೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಇದನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದೀಗ ನಾವು ಬುದ್ಧರಲ್ಲ - ಬದಲಿಗೆ, ನಾವು ಸಮಸ್ಯೆಗಳು ಮತ್ತು ನಿರಂತರ ಏರಿಳಿತಗಳಿಂದ ತುಂಬಿದ ಜೀವನವನ್ನು ಅನುಭವಿಸುತ್ತಿದ್ದೇವೆ. ಏಕೆ ಈ ರೀತಿಯಾಗಿದೆ ಎಂದರೆ, ನಮ್ಮ ಮನಸ್ಸು ಸ್ವಯಂಚಾಲಿತವಾಗಿ ಎಲ್ಲದರ ಮೇಲೆ ಅಸಂಬದ್ಧತೆಯನ್ನು ಪ್ರಕ್ಷೇಪಿಸಿ, ಅದೇ ಸತ್ಯವೆಂದು ಗಂಭೀರವಾಗಿ ನಂಬುತ್ತೇವೆ. ನಮಗೆ ನಿಜವಾದ ಸಂತೋಷವು ಪ್ರಾಪ್ತಿಯಾಗುವಂತೆ ನಾವು ವರ್ತಿಸುತ್ತದ್ದೇವೆ ಎಂದು ಭಾವಿಸಿದ್ದರೂ, ಅದು ಕೇವಲ ದುಃಖವನ್ನು ತರುತ್ತದೆ. 

ಸಾಮಾನ್ಯವಾಗಿ, ಬೇರೆಯವರ ಕಾಳಜಿಯ ಪರಿವೆಯಿಲ್ಲದೆ, ನಮಗೆ ಬೇಕಾದ ಹಾಗೆ ನಡೆದುಕೊಳ್ಳುತ್ತೇವೆ, ಏಕೆಂದರೆ ನಮ್ಮ ಪ್ರಕಾರ, ನಾವೇ ಈ ಬ್ರಹ್ಮಾಂಡದ ಸೂರ್ಯನಿದ್ದ ಹಾಗೆ, ಎಲ್ಲವೂ ನಮ್ಮ ಸುತ್ತ ತಿರುಗುತ್ತದೆ ಎಂದು ಭಾವಿಸುತ್ತೇವೆ. ಈ ರೀತಿಯ ಚಿಂತನೆಯು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ: ಇದು ಸ್ವಾರ್ಥಪ್ರೇರಿತವಾಗಿದ್ದು, ನಮಗೆ ಮತ್ತು ಇತರರಿಗೆ ಅತೃಪ್ತಿಯನ್ನು ತರುತ್ತದೆ. ಪ್ರಬುದ್ಧರಾಗಲು, ಮೊದಲಾಗಿ ಈ ಕೆಳಗಿನಂತೆ ಮಾಡಬೇಕು: 

  • ನಮ್ಮ ನಡವಳಿಕೆಯಿಂದ ನಮ್ಮ ಮತ್ತು ಇತರರ ಮೇಲಾಗುವ  ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವಿನಾಶಕಾರಿಯಾಗಿ ವರ್ತಿಸುವುದನ್ನು ತಡೆಯಬೇಕು 
  • ಎಲ್ಲದರ ಅಸ್ತಿತ್ವದ ಸತ್ಯತೆಯನ್ನು ಅರಿತುಕೊಳ್ಳಬೇಕು, ಮತ್ತು ನಮ್ಮ ಪ್ರಕ್ಷೇಪಗಳು ನಮ್ಮನ್ನು ಮರುಳು ಮಾಡದೇ ಇರುವ ಹಾಗೆ ನೋಡಿಕೊಳ್ಳಬೇಕು. 

ನಾವು ನಮ್ಮ ಮನಸ್ಸಿನ ಪ್ರಕ್ಷೇಪಗಳನ್ನು ನಂಬುವುದನ್ನು ನಿಲ್ಲಿಸಿದಾಗ, ಆ ಗೊಂದಲದಿಂದ ಉದ್ಭವಿಸುವ ಕೋಪ, ದ್ವೇಷ, ದುರಾಶೆ ಮತ್ತು ಅಸೂಯೆಯಂತಹ ಗಲಿಬಿಲಿಯ ಭಾವನೆಗಳನ್ನು ಸಹ ನಿಲ್ಲಿಸುತ್ತೇವೆ. ನಾವು ಎಂದಿಗೂ ನಮ್ಮ ನಕಾರಾತ್ಮಕ ಭಾವನೆಗಳಿಂದ ಪ್ರೇರಿತರಾಗಿ, ಪ್ರಚೋದಿತವಾಗಿ ವರ್ತಿಸುವುದಿಲ್ಲ. ಇದಕ್ಕೆ ಅಗತ್ಯವಾದ ವಿಷಯಗಳೆಂದರೆ:

  • ಅವಿವೇಕದ ನಡವಳಿಕೆಯಿಂದ ದೂರವಿರುವ ಶಕ್ತಿಯಾದ ನೈತಿಕ ಸ್ವಯಂ-ಶಿಸ್ತು   
  • ವ್ಯಾಕುಲತೆ ಅಥವಾ ಮಂದತೆಯನ್ನು ತಪ್ಪಿಸಲು ಏಕಾಗ್ರತೆ 
  • ಸಹಾಯಕ ಮತ್ತು ಹಾನಿಕಾರಕ ಮತ್ತು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ತೋರಿಸುವಂತಹ ಬುದ್ಧಿವಂತಿಕೆ  
  • ಪ್ರೀತಿ ಮತ್ತು ಸಹಾನುಭೂತಿಯಂತಹ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಸಿಗುವ ಭಾವನಾತ್ಮಕ ಸಮತೋಲನ. 

ಇವುಗಳಿಂದ ನಾವು ಮನಸ್ಸಿನ ಶಾಂತಿಯನ್ನು ಪಡೆದರೂ ಸಹ, ಅದು ಸಾಕಾಗುವುದಿಲ್ಲ: ಎಲ್ಲದರ ಮತ್ತು ಪ್ರತಿಯೊಬ್ಬರ ಪರಸ್ಪರ ಅವಲಂಬನೆ ಮತ್ತು ಪರಸ್ಪರ ಸಂಬಂಧವನ್ನು ಸಂಪೂರ್ಣವಾಗಿ ನೋಡಲು ನಮಗೆ ಇನ್ನೂ ಸಾಧ್ಯವಾಗುವುದಿಲ್ಲ. ಆದ್ದರಿಂದ, ಇತರರಿಗೆ ಸಹಾಯ ಮಾಡುವ ಅತ್ಯುತ್ತಮ ಮಾರ್ಗದ ಬಗ್ಗೆ ನಾವು ಎಂದಿಗೂ ಖಚಿತವಾಗಿರುವುದಿಲ್ಲ.

ಇದಕ್ಕಾಗಿ, ನಾವು ಸಂಪೂರ್ಣವಾಗಿ ಪ್ರಬುದ್ಧ ಬುದ್ಧರಾಗಬೇಕು, ಆಗ ನಮ್ಮ ಮನಸ್ಸು ಏನನ್ನೂ ಪ್ರಕ್ಷೇಪಿಸಲಾಗುವುದಿಲ್ಲ. ನಮಗೆ ಅಸ್ತಿತ್ವದಲ್ಲಿರುವ ಎಲ್ಲದರ ಪರಸ್ಪರ ಅವಲಂಬನೆಯನ್ನು ಸ್ಪಷ್ಟವಾಗಿ ನೋಡಲಾಗುತ್ತದೆ ಮತ್ತು ಇತರರಿಗೆ ಹೇಗೆ ಸಹಾಯ ಮಾಡಬೇಕೆಂದು ನಿಖರವಾಗಿ ತಿಳಿಯುತ್ತೇವೆ. ನಮ್ಮ ದೇಹದಲ್ಲಿ ಅನಿಯಮಿತ ಶಕ್ತಿಯಿದ್ದು, ನಾವು ಎಲ್ಲರೊಂದಿಗೆ ನಿಖರವಾಗಿ ಸಂವಹನ ನಡೆಸಬಹುದು ಮತ್ತು ನಮ್ಮ ಮನಸ್ಸು ಎಲ್ಲವನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತದೆ. ಪ್ರತಿಯೊಂದು ಜೀವಿಗೂ ನಾವು ಪ್ರಬಲವಾದ ಪ್ರೀತಿ, ಸಹಾನುಭೂತಿ ಮತ್ತು ಕಾಳಜಿಯನ್ನು ಸಮವಾಗಿ ತೋರಿಸಿ, ಪ್ರತಿಯೊಬ್ಬರನ್ನೂ ನಮ್ಮ ಮುದ್ದಿನ ಮಗುವಿನಂತೆ ಕಾಣುತ್ತೇವೆ. ನಾವು ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ, ಇತರರ ಒಳಿತಿಗಾಗಿ ಕೆಲಸ ಮಾಡುತ್ತೇವೆ. ನಾವು ಪ್ರಬುದ್ಧರಾದಾಗ, ನಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದು ಅಥವಾ ಕೋಪಗೊಳ್ಳುವುದು, ಜನರಿಗೆ ಬಂಧಿಯಾಗುವುದು ಅಥವಾ ಅವರನ್ನು ನಿರ್ಲಕ್ಷಿಸುವುದು ಅಸಾಧ್ಯವಾಗಿರುತ್ತದೆ, ಏಕೆಂದರೆ ನಾವು ಒಂದೋ ತುಂಬಾ ಕಾರ್ಯನಿರತರಾಗಿರುತ್ತೇವೆ ಅಥವಾ ದಣಿದಿರುತ್ತೇವೆ. 

ಒಬ್ಬ ಬುದ್ಧರಾಗಿ ನಾವೂ ಸರ್ವಜ್ಞರಾದರೂ ಸರ್ವಶಕ್ತರಾಗಿರುವುದಿಲ್ಲ. ನಾವು ಇತರರ ದುಃಖವನ್ನು ತೊಡೆದುಹಾಕಲು ಸಾಧ್ಯವಿಲ್ಲವಾದರೂ ಅವರಿಗೆ ಹೇಳಿಕೊಡುವ ಮೂಲಕ ಮತ್ತು ಜೀವಂತ ಉದಾಹರಣೆಯಾಗಿರುವ ಮೂಲಕ, ನಾವು ಅವರಿಗೆ ದಾರಿದೀಪವಾಗಬಹುದು. ಜ್ಞಾನೋದಯದ ಹಾದಿಯಲ್ಲಿ ಪ್ರಯಾಣಿಸಲು, ನಮಗೆ ಇವುಗಳ ಅಗತ್ಯವಿದೆ: 

  • ನಂಬಲಾಗದಷ್ಟು ಸಕಾರಾತ್ಮಕ ಶಕ್ತಿಯ ಸಂಗ್ರಹವನ್ನು ನಿರ್ಮಿಸಿ: ನಿಸ್ವಾರ್ಥದಿಂದ, ಇತರರಿಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯಕವಾಗಿರಬೇಕು. 
  • ವಾಸ್ತವವನ್ನು ಅರ್ಥಮಾಡಿಕೊಳ್ಳುವತ್ತ ಕೆಲಸ ಮಾಡಿ: ಪ್ರಪಂಚದ ಮೇಲೆ ಅಸಂಬದ್ಧತೆಗಳನ್ನು ಹೇರುವುದನ್ನು ನಿಲ್ಲಿಸಿ. 

ಜ್ಞಾನೋದಯದ ನಿರ್ಮಾಣಕ್ಕೆ ಬೇಕಾದ ಕಾರಣಗಳ ಉಪಕರಣಗಳನ್ನು ನಾವೆಲ್ಲರೂ ಹೊಂದಿದ್ದೇವೆ - ನಮ್ಮ ಭೌತಿಕ ದೇಹಗಳು ಮತ್ತು ಮೂಲಭೂತ ಮಾನವ ಬುದ್ಧಿಮತ್ತೆ. ಆಕಾಶದಂತೆ, ನಮ್ಮ ಮನಸ್ಸು ಮತ್ತು ಹೃದಯ, ಸ್ವಾಭಾವಿಕವಾಗಿ ಭಾವನಾತ್ಮಕ ಪ್ರಕ್ಷುಬ್ಧತೆ ಮತ್ತು ಗೊಂದಲದ ಆಲೋಚನೆಗಳಿಂದ ಕಲುಷಿತವಾಗಿರುವುದಿಲ್ಲ. ನಾವು ಮಾಡಬೇಕಾಗಿರುವುದು ಇಷ್ಟೆ - ಅವುಗಳ ಸಂಪೂರ್ಣ ಸಾಮರ್ಥ್ಯವನ್ನು ತಲುಪಲು ಅವುಗಳನ್ನು ಅಭಿವೃದ್ಧಿಪಡಿಸಬೇಕು. 

ಜ್ಞಾನೋದಯವನ್ನು ಸಾಧಿಸುವುದು ಅಸಾಧ್ಯವಾದ ಗುರಿಯಂತೆ ತೋಚುತ್ತದೆ ಮತ್ತು ಅದನ್ನು ಸಾಧಿಸುವುದು ಬಹಳಾ ಕಷ್ಟವಾಗಿರುವುದು ಹೌದು - ಇದು ಸುಲಭ ಎಂದು ಯಾರೂ ಹೇಳಲಿಲ್ಲ! ಆದರೆ, ಆ ದಿಕ್ಕಿನಲ್ಲಿ ಗುರಿಯಿಡುವುದು ನಮ್ಮ ಜೀವನಕ್ಕೆ ಅದ್ಭುತವಾದ ಅರ್ಥವನ್ನು ನೀಡುತ್ತದೆ. ಎಲ್ಲರೊಂದಿಗಿನ ನಮ್ಮ ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದರಿಂದ, ಖಿನ್ನತೆ ಮತ್ತು ಆತಂಕದಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ. ಎಲ್ಲರ ಒಳಿತಿಗಾಗಿ ಜ್ಞಾನೋದಯವನ್ನು ಪಡೆಯುವ ಅದ್ಭುತವಾದ ಸಾಹಸವನ್ನು ನಾವು ಪ್ರಾರಂಭಿಸಿದಾಗ ನಮ್ಮ ಜೀವನವು ಪರಿಪೂರ್ಣಗೊಳ್ಳುತ್ತದೆ.

Top