ಕೊರೊನಾವೈರಸ್ನ ಬಗ್ಗೆ ದಲೈ ಲಾಮಾ: ಪ್ರಾರ್ಥನೆ ಸಾಕಾಗುವುದಿಲ್ಲ

ಏಕೆ ನಾವು ಕೊರೊನಾವೈರಸ್ ವಿರುದ್ಧ ಸಹಾನುಭೂತಿಯಿಂದ ಹೋರಾಡಬೇಕು

ಕೆಲವೊಮ್ಮೆ, ನನ್ನ ಸ್ನೇಹಿತರು ನನಗೆ ಯಾವುದಾದರೂ "ಮಾಂತ್ರಿಕ ಶಕ್ತಿಗಳನ್ನು" ಬಳಸಿಕೊಂಡು ಪ್ರಪಂಚದ ಕೆಲವು ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಹೇಳುತ್ತಾರೆ. ನಾನು ಯಾವಾಗಲೂ ಹೇಳುತ್ತೇನೆ, ದಲೈ ಲಾಮಾ ಅವರಿಗೆ ಯಾವುದೇ ಮಾಂತ್ರಿಕ ಶಕ್ತಿಗಳಿಲ್ಲ ಎಂದು. ಹಾಗೇನಾದರೂ ಇದ್ದರೆ, ನನ್ನ ಕಾಲುಗಳಲ್ಲಿ ನೋವು ಅಥವಾ ಗಂಟಲು ನೋವು ಇರುತ್ತಿರಲಿಲ್ಲ. ನಾವೆಲ್ಲರೂ ಮಾನವರಾಗಿ ಸಮಾನರು, ನಾವೆಲ್ಲರೂ ಅದೇ ಭಯಗಳು, ಅದೇ ಭರವಸೆಗಳು, ಅದೆ ಅನಿಶ್ಚಿತತೆಗಳನ್ನು ಅನುಭವಿಸುತ್ತೇವೆ.

ಬೌದ್ಧ ದೃಷ್ಟಿಕೋನದಿಂದ, ಪ್ರತಿ ಪ್ರಜ್ಞಾಜೀವಿಯು ದುಃಖ ಮತ್ತು ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣದ ಸತ್ಯಗಳೊಂದಿಗೆ ಪರಿಚಿತವಾಗಿರುತ್ತದೆ. ಆದರೆ ಮಾನವರಾಗಿ, ಕೋಪ, ಗಾಬರಿ ಮತ್ತು ದುರಾಸೆಯನ್ನು ಜಯಿಸಲು ನಮ್ಮ ಮನಸ್ಸನ್ನು ಬಳಸುವ ಸಾಮರ್ಥ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ನಾನು "ಭಾವನಾತ್ಮಕ ನಿರಸ್ತ್ರೀಕರಣ"ದ ಬಗ್ಗೆ ಒತ್ತಿಹೇಳುತ್ತಿದ್ದೇನೆ: ಭಯ ಅಥವಾ ಕ್ರೋಧದ ಗೊಂದಲವಿಲ್ಲದೆ, ವಾಸ್ತವಿಕವಾಗಿ ಮತ್ತು ಸ್ಪಷ್ಟವಾಗಿ ವಿಷಯಗಳನ್ನು ನೋಡಲು ಪ್ರಯತ್ನಿಸುವುದು. ಸಮಸ್ಯೆಗೆ ಪರಿಹಾರವಿದ್ದರೆ, ಅದನ್ನು ಹುಡುಕಲು ನಾವು ಶ್ರಮ ಪಡಬೇಕು; ಇಲ್ಲದಿದ್ದರೆ, ಅದರ ಬಗ್ಗೆ ಯೋಚಿಸಿ ಸಮಯ ವ್ಯರ್ಥ ಮಾಡಬೇಕಾಗಿಲ್ಲ.

ಇಡೀ ಪ್ರಪಂಚವೇ ಪರಸ್ಪರ ಅವಲಂಬಿತವಾಗಿದೆ ಎಂದು ನಾವು ಬೌದ್ಧರು ನಂಬುತ್ತೇವೆ. ಅದಕ್ಕಾಗಿಯೇ ನಾನು ಸಾರ್ವತ್ರಿಕ ಜವಾಬ್ದಾರಿಯ ಬಗ್ಗೆ ಆಗಾಗ್ಗೆ ಮಾತನಾಡುತ್ತೇನೆ. ಒಬ್ಬ ವ್ಯಕ್ತಿಗೆ ಏನಾಗುತ್ತದೋ, ಅದು ಶೀಘ್ರದಲ್ಲೇ ಪ್ರತಿಯೊಬ್ಬ ಜೀವಿಯ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ಈ ಭಯಾನಕ ಕರೋನವೈರಸ್ನ ಸ್ಫೋಟ ಬಿಂಬಿಸಿದೆ. ಆದರೆ ಇದರ ಜೊತೆಗೆ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಾಗಲಿ ಅಥವಾ ಸಾಮಾಜಿಕ ಅಂತರವನ್ನು ಪಾಲಿಸುವುದಾಗಲಿ – ಹೇಗೆ ಇಂತಹ ಸಹಾನುಭೂತಿಯ ಅಥವಾ ಸಹಾಯಕ ಕಾರ್ಯಗಳು,  ಅಧಿಕ ಜನರಿಗೆ ಸಹಾಯಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನೂ ನಮಗೆ ನೆನಪಿಸಿದೆ.

ವುಹಾನ್‌ನಲ್ಲಿ ಕರೋನವೈರಸ್ ಬಗ್ಗೆಗಿನ ಸುದ್ದಿ ಹೊರಹೊಮ್ಮಿದಾಗಿನಿಂದ, ನಾನು ಚೀನಾ ಮತ್ತು ಇತರ ಎಲ್ಲೆಡೆಯ ನನ್ನ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಈ ವೈರಸ್‌ನಿಂದ ಯಾರೂ ಸುರಕ್ಷಿತವಾಗಿಲ್ಲ ಎಂದು ನಾವೀಗ ನೋಡಬಹುದು. ನಾವೆಲ್ಲರೂ ನಮ್ಮ ಪ್ರೀತಿಪಾತ್ರರ ಮತ್ತು ಭವಿಷ್ಯದ ಬಗ್ಗೆ, ಜಾಗತಿಕ ಆರ್ಥಿಕತೆ ಮತ್ತು ನಮ್ಮ ಸ್ವಂತ ಪಾಡಿನ ಬಗ್ಗೆ ಚಿಂತಿತರಾಗಿದ್ದೇವೆ. ಆದರೆ ಇದಕ್ಕಾಗಿ ನಮ್ಮ ಪ್ರಾರ್ಥನೆ ಸಾಕಾಗುವುದಿಲ್ಲ.

ಸಾಧ್ಯವಿರುವಲ್ಲಿ ನಾವೆಲ್ಲರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ದುರಂತ ತೋರಿಸುತ್ತದೆ. ಈ ಪರಿಸ್ಥಿತಿಯನ್ನು ಪರಿವರ್ತಿಸಲು ಮತ್ತು ಇಂತಹ ಹೆಚ್ಚಿನ ಭೀತಿಗಳಿಂದ ನಮ್ಮ ಭವಿಷ್ಯವನ್ನು ರಕ್ಷಿಸಲು, ಪ್ರಾಯೋಗಿಕ ವಿಜ್ಞಾನದೊಂದಿಗೆ ವೈದ್ಯರು ಮತ್ತು ದಾದಿಯರು ತೋರುತ್ತಿರುವ ಧೈರ್ಯವನ್ನು ನಾವು ಸಂಯೋಜಿಸಬೇಕಾಗಿದೆ.

ಈ ಭಯಾನಕ ಸಮಯದಲ್ಲಿ, ಇಡೀ ಜಗತ್ತಿನ ದೀರ್ಘಾವಧಿಯ ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ನಾವು ಯೋಚಿಸುವುದು ಮುಖ್ಯವಾಗಿದೆ. ನಮ್ಮ ನೀಲಿ ಗ್ರಹದಲ್ಲಿ ಯಾವುದೇ ನಿಜವಾದ ಗಡಿಗಳಿಲ್ಲ ಎಂಬುದನ್ನು ಬಾಹ್ಯಾಕಾಶದಿಂದ ತೆಗೆದ ನಮ್ಮ ಪ್ರಪಂಚದ ಛಾಯಾಚಿತ್ರಗಳು ಸ್ಪಷ್ಟವಾಗಿ ತೋರಿಸುತ್ತವೆ. ಆದ್ದರಿಂದ, ನಾವೆಲ್ಲರೂ ಅದರ ಬಗ್ಗೆ ಕಾಳಜಿ ವಹಿಸಿ, ಹವಾಮಾನ ಬದಲಾವಣೆ ಮತ್ತು ಇತರ ವಿಧ್ವಂಸಕ ಶಕ್ತಿಗಳನ್ನು ತಡೆಯಲು ಶ್ರಮ ಪಡಬೇಕು. ಒಂದು ಸಂಘಟಿತ, ಜಾಗತಿಕ ಪ್ರತಿಕ್ರಿಯೆಯೊಂದಿಗೆ ಒಟ್ಟುಗೂಡುವ ಮೂಲಕ ಮಾತ್ರ, ನಮಗೊಡ್ಡಿರುವ ಸವಾಲುಗಳ ಅಭೂತಪೂರ್ವ ಪ್ರಮಾಣವನ್ನು ಎದುರಿಸಲಾಗುವುದು, ಎಂಬ ಎಚ್ಚರಿಕೆಯಾಗಿ ಈ ಸಾಂಕ್ರಾಮಿಕ ರೋಗವು ಕಾರ್ಯನಿರ್ವಹಿಸುತ್ತದೆ.

ಯಾರೊಬ್ಬರೂ ದುಃಖದಿಂದ ಮುಕ್ತರಾಗಿಲ್ಲ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಂಡು, ವಸತಿ, ಸಂಪನ್ಮೂಲಗಳು ಅಥವಾ ಕುಟುಂಬವಿಲ್ಲದವರನ್ನು ರಕ್ಷಿಸಲು ನಮ್ಮ ಕೈಚಾಚಬೇಕು. ನಾವು ಬೇರೆಯಾಗಿ ವಾಸಿಸುತ್ತಿದ್ದರೂ ಸಹ, ಒಬ್ಬರನ್ನೊಬ್ಬರಿಗಿಂತ ಪ್ರತ್ಯೇಕವಾಗಿಲ್ಲ ಎಂಬುದನ್ನುಈ ದುರಂತ ತೋರಿಸಿದೆ. ಆದ್ದರಿಂದ, ಸಹಾನುಭೂತಿ ಮತ್ತು ಸಹಾಯವನ್ನು ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಬೌದ್ಧನಾಗಿ, ನಾನು ಅಶಾಶ್ವತತೆಯ ತತ್ವವನ್ನು ನಂಬುತ್ತೇನೆ. ಅಂತಿಮವಾಗಿ, ನನ್ನ ಜೀವಿತಾವಧಿಯಲ್ಲಿ ಯುದ್ಧಗಳು ಮತ್ತು ಇತರ ಭಯಾನಕ ಬೆದರಿಕೆಗಳು ಹಾದುಹೋಗುವುದನ್ನು ನಾನು ನೋಡಿದಂತೆ, ಈ ವೈರಸ್ ಕೂಡ ಹಾದುಹೋಗುತ್ತದೆ. ಮತ್ತು ಮೊದಲಿನಂತೆ, ಅನೇಕ ಬಾರಿಯಂತೆ, ನಮ್ಮ ಜಾಗತಿಕ ಸಮುದಾಯವನ್ನು ಪುನರ್ನಿರ್ಮಿಸಲು ನಮಗೆ ಅವಕಾಶವಿರುತ್ತದೆ. ಪ್ರತಿಯೊಬ್ಬರೂ ಸುರಕ್ಷಿತವಾಗಿರಲಿ ಮತ್ತು ಶಾಂತವಾಗಿರಲಿ ಎಂದು ನಾನು ಹೃತ್ಪೂರ್ವಕವಾಗಿ ಆಶಿಸುತ್ತೇನೆ. ಅನಿಶ್ಚಿತತೆಯ ಈ ಸಮಯದಲ್ಲಿ, ಅನೇಕರು ಮಾಡುತ್ತಿರುವ ಸಹಾಯಕ ಪ್ರಯತ್ನಗಳಲ್ಲಿ ನಾವು ಭರವಸೆ ಮತ್ತು ವಿಶ್ವಾಸವನ್ನು ಕಳೆದುಕೊಳ್ಳದಿರುವುದು ಮುಖ್ಯವಾಗಿದೆ.

Top