ಭೂಮಿ ದಿನಕ್ಕಾಗಿ ದಲೈ ಲಾಮಾ ಅವರ ಸಂದೇಶ

Sb nasa earth

ಭೂಮಿ ದಿನದ 50 ನೇ ವಾರ್ಷಿಕೋತ್ಸವದಂದು, ನಮ್ಮ ಗ್ರಹವು, ತನ್ನ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ, ಒಂದು ದೊಡ್ಡ ಸವಾಲನ್ನು ಎದುರಿಸುತ್ತಿದೆ. ಆದರೆ, ಈ ಹೋರಾಟದ ನಡುವೆಯೂ, ನಮಗೆ ಸಹಾನುಭೂತಿ ಮತ್ತು ಪರಸ್ಪರ ಬೆಂಬಲದ ಮೌಲ್ಯವನ್ನು ನೆನಪಿಸಲಾಗಿದೆ. ಪ್ರಸ್ತುತ ಜಾಗತಿಕ ಸಾಂಕ್ರಾಮಿಕ ರೋಗವು, ಜನಾಂಗ, ಸಂಸ್ಕೃತಿ ಅಥವಾ ಲಿಂಗದ ಭೇದವಿಲ್ಲದೆ ನಮ್ಮೆಲ್ಲರನ್ನು ಭಯಭೀತಗೊಳಿಸಿದೆ, ಮತ್ತು ಇದಕ್ಕೆ ನಮ್ಮ ಪ್ರತಿಕ್ರಿಯೆಯು, ಎಲ್ಲರಿಗೂ ಅತ್ಯವಶ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ, ಮಾನವೀಯತೆಯ ಏಕತೆಯಾಗಿರಬೇಕು.

ನಮಗೆ ಇಷ್ಟವಿರಲಿ ಇಲ್ಲದಿರಲಿ, ನಾವು ಈ ಭೂಮಿಯ ಮೇಲೆ ಒಂದು ದೊಡ್ಡ ಕುಟುಂಬದ ಭಾಗವಾಗಿ ಹುಟ್ಟಿದ್ದೇವೆ. ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ವಿದ್ಯಾವಂತರಾಗಿರಲಿ ಅಥವಾ ಅವಿದ್ಯಾವಂತರಾಗಿರಲಿ, ಒಂದು ಅಥವಾ ಇನ್ನೊಂದು ರಾಷ್ಟ್ರಕ್ಕೆ ಸೇರಿದವರಾಗಿರಲಿ, ಅಂತಿಮವಾಗಿ, ನಾವು ಪ್ರತಿಯೊಬ್ಬರಂತೆ ಕೇವಲ ಮಾನವರು. ಇದಲ್ಲದೆ, ಸಂತೋಷವನ್ನು ಅನುಸರಿಸುವ ಮತ್ತು ದುಃಖವನ್ನು ದೂರವಿರುಸುವ ಸಾಮಾನ್ಯ ಹಕ್ಕನ್ನು ನಾವೆಲ್ಲರೂ ಹೊಂದಿದ್ದೇವೆ. ಈ ವಿಷಯದಲ್ಲಿ ಎಲ್ಲಾ ಜೀವಿಗಳು ಸಮಾನರೆಂದು ನಾವು ಗುರುತಿಸಿದಾಗ, ನಾವು ಸ್ವಯಂಚಾಲಿತವಾಗಿ ಇತರರತ್ತ ಸಹಾನುಭೂತಿ ಮತ್ತು ನಿಕಟತೆಯನ್ನು ಬೆಳೆಸಿಕೊಳ್ಳುತ್ತೇವೆ. ಇದರಿಂದ ಸಾರ್ವತ್ರಿಕ ಜವಾಬ್ದಾರಿಯ ನೈಜ ಶಿಸ್ತೊಂದು ಉದ್ಭವವಾಗುತ್ತದೆ: ಇತರರಿಗೆ ಅವರ ಸಮಸ್ಯೆಗಳನ್ನು ನಿವಾರಿಸಲು ಸಕ್ರಿಯವಾಗಿ ಸಹಾಯ ಮಾಡುವ ಬಯಕೆ.

ನಮ್ಮ ಭೂಮಿತಾಯಿಯು ಸಾರ್ವತ್ರಿಕ ಜವಾಬ್ದಾರಿಯ ಪಾಠವೊಂದನ್ನು ನಮಗೆ ಕಲಿಸುತ್ತಿದ್ದಾಳೆ. ಈ ನೀಲಿ ಗ್ರಹವು ಸಂತೋಷಕರ ಆವಾಸಸ್ಥಾನವಾಗಿದೆ. ಅದರ ಜೀವ ನಮ್ಮ ಜೀವ; ಅದರ ಭವಿಷ್ಯ, ನಮ್ಮ ಭವಿಷ್ಯ. ವಾಸ್ತವವಾಗಿ, ಭೂಮಿಯು ನಮಗೆಲ್ಲರಿಗೂ ತಾಯಿಯಂತೆ ಕಾರ್ಯನಿರ್ವಹಿಸುತ್ತಾಳೆ; ಅವಳ ಮಕ್ಕಳಾದ ನಾವು ಅವಳ ಮೇಲೆ ಅವಲಂಬಿತರಾಗಿದ್ದೇವೆ. ನಾವು ಎದುರಿಸುತ್ತಿರುವ ಜಾಗತಿಕ ಸಮಸ್ಯೆಗಳನ್ನು ವಿರೋಧಿಸುವಲ್ಲಿ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಮುಖ್ಯ.

1959 ರಲ್ಲಿ ಟಿಬೆಟ್‌ನಿಂದ ತಪ್ಪಿಸಿಕೊಂಡ ನಂತರವೇ ನನಗೆ ಪರಿಸರ ಕಾಳಜಿಯ ಪ್ರಾಮುಖ್ಯತೆಯು ಅರಿವಾದದ್ದು, ಏಕೆಂದರೆ, ಅಲ್ಲಿ ನಾವು ಯಾವಾಗಲೂ ಪರಿಸರವನ್ನು ಶುದ್ಧವೆಂದು ಪರಿಗಣಿಸಿದ್ದೇವೆ. ಉದಾಹರೆಣೆಗೆ, ನಾವು ನೀರಿನ ತೊರೆಯನ್ನು ನೋಡಿದಾಗಲೆಲ್ಲಾ, ಅದು ಕುಡಿಯಲು ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಚಿಂತೆ ಇತುತ್ತಿರಲಿಲ್ಲ. ದುಃಖಕರ ವಿಷಯವೆಂದರೆ, ಕುಡಿಯುವ ಶುದ್ಧ ನೀರಿನ ಲಭ್ಯತೆಯು, ಇಂದು ಪ್ರಪಂಚದಾದ್ಯಂತ ಒಂದು ದೊಡ್ಡ ಸಮಸ್ಯೆಯಾಗಿದೆ.

ಪ್ರಪಂಚದಾದ್ಯಂತ, ಅನಿಯಂತ್ರಿತ ಕಾಯಿಲೆಯ ಹರಡುವಿಕೆಯನ್ನು ತಡೆಗಟ್ಟಲು, ರೋಗಿಗಳಿಗೆ ಮತ್ತು ಧೀರ ಆರೋಗ್ಯ ಕಾರ್ಮಿಕರಿಗೆ, ಶುದ್ಧ ನೀರು ಮತ್ತು ಸರಿಯಾದ ನೈರ್ಮಲ್ಯದ ಮೂಲಭೂತ ಅವಶ್ಯಕತೆಗಳು ಪೂರೈಕೆ ಆಗುವಂತೆ ನಾವು ಖಾತರಿಪಡಿಸಬೇಕು. ಪರಿಣಾಮಕಾರಿಯಾದ ಆರೋಗ್ಯ ರಕ್ಷಣೆಯ ಅಡಿಪಾಯಗಳಲ್ಲಿ ನೈರ್ಮಲ್ಯವು ಒಂದು.

ಸುಸಜ್ಜಿತವಾದ ಮತ್ತು ಸಿಬ್ಬಂದಿಗಳಿರುವ ಆರೋಗ್ಯ-ರಕ್ಷಣಾ ಸೌಲಭ್ಯಗಳಿಗೆ ಸುಸ್ಥಿರವಾದ ಲಭ್ಯತೆಯು, ನಮ್ಮ ಗ್ರಹವನ್ನು ನಾಶಮಾಡುತ್ತಿರುವ ಪ್ರಸ್ತುತ ಸಾಂಕ್ರಾಮಿಕದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಇದು ಭವಿಷ್ಯದ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳ ವಿರುದ್ಧವು, ಪ್ರಬಲವಾದ ರಕ್ಷಣೆಯನ್ನು ನೀಡುತ್ತದೆ. ಜಾಗತಿಕ ಮಟ್ಟದ ಆರೋಗ್ಯದ ಸವಾಲುಗಳನ್ನು ಎದುರಿಸುವ ವಿಶ್ವಸಂಸ್ಥೆಯ ಸುಸ್ಥಿರವಾದ ಅಭಿವೃದ್ಧಿಯ ಗುರಿಗಳಲ್ಲಿ ಇವುಗಳನ್ನೂ ನಿಖರವಾಗಿ ನಿಗದಿಪಡಿಸಲಾಗಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. 

ಈ ಬಿಕ್ಕಟ್ಟನ್ನು ನಾವೆಲ್ಲರೂ ಎದುರಿಸುತ್ತಿರುವಾಗ, ಅತ್ಯವಶ್ಯಕವಾದ ಸೌಕರ್ಯಗಳನ್ನು ಒದಗಿಸುವ ಸಲುವಾಗಿ, ಪ್ರಧಾನವಾಗಿ ಪ್ರಪಂಚದಾದ್ಯಂತ ಇರುವ ಕಡಿಮೆ ಸವಲತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಒದಗಿಸುವ ಸಲುವಾಗಿ ನಾವು ಒಗ್ಗಟ್ಟಿನ ಮತ್ತು ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ, ಸಂತೋಷವಾದ ಮತ್ತು ಆರೋಗ್ಯಕರ ಜಗತ್ತನ್ನು ರಚಿಸಲು, ಸಾಧ್ಯವಾದಷ್ಟು ನಾವೆಲ್ಲರೂ ಕೆಲಸ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. 

ದಲೈ ಲಾಮಾ 

22 ಏಪ್ರಿಲ್ 2020 

Top