ಸಹಾನುಭೂತಿಯನ್ನು ಹೇಗೆ ಅಭಿವೃದ್ಧಿಪಡಿಸುವುದು

How zo develop compassion clay banks unsplash

ಇತರರು ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಬೇಕೆಂದು ಬಯಸಲು, ನಾವೆಲ್ಲರೂ ಸಹಾನುಭೂತಿಯ ಸಾಮರ್ಥ್ಯವನ್ನು ಹೊಂದಿದ್ದೇವೆ. ನಮಗೆ ಮತ್ತು ಇತರರಿಗೆ ಬಹಳಷ್ಟು ಪ್ರಯೋಜನಗಳನ್ನು ತರುವ ಸಲುವಾಗಿ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬಹುದಾಗಿದೆ. 

ಸಹಾನುಭೂತಿಯನ್ನು ಅಭಿವೃದ್ಧಿಪಡಿಸುವ ಅತ್ಯುತ್ತಮವಾದ ಮಾರ್ಗವೆಂದರೆ, ಮೊದಲು ನಮ್ಮ ಸಹಾನುಭೂತಿಯ ವ್ಯಾಪ್ತಿಯನ್ನು ನಿಜ ಜೀವನದಲ್ಲಿ ಮತ್ತು ಅಂತರ್ಜಾಲದಲ್ಲಿ ಭೇಟಿಯಾಗುವ ಜನರಿಗೆ ಮತ್ತು ಬಹುಶಃ ಕೆಲವು ಪ್ರಾಣಿಗಳಿಗೆ ಸೀಮಿತಗೊಳಿಸಬೇಕು. ನಂತರ ನಿಧಾನವಾಗಿ, ಎಲ್ಲರನ್ನೂ ಒಳಗೊಳ್ಳುವಂತೆ - ನಾವು ಇಷ್ಟಪಡುವವರು, ಅಪರಿಚಿತರು ಮತ್ತು ನಾವು ಖಂಡಿತವಾಗಿಯೂ ಇಷ್ಟಪಡದ ವ್ಯಕ್ತಿಗಳು - ನಮ್ಮ ಸಹಾನುಭೂತಿಯನ್ನು ವಿಸ್ತರಿಸಲು ನಾವು ತರಬೇತುಗೊಳ್ಳಬಹುದು. ನಮ್ಮ ಸಹಾನುಭೂತಿಯು ಇಡೀ ಜಗತ್ತನ್ನು ಒಳಗೊಳ್ಳುವವರೆಗೆ ನಾವು ಹೀಗೆ ಮುಂದುವರಿಯುತ್ತೇವೆ - ಹೌದು, ಜಿರಳೆಗಳೂ ಸೇರಿವೆ! 

ಸಹಾನುಭೂತಿಯು ಭಾವನಾತ್ಮಕ ಮತ್ತು ತರ್ಕಬದ್ಧ ಅಂಶಗಳೆರಡನ್ನೂ ಹೊಂದಿರುತ್ತದೆ. ಭಾವನಾತ್ಮಕವಾಗಿ, ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳ ಪರಸ್ಪರ ಅವಲಂಬನೆಯನ್ನು ನಾವು ಪ್ರಶಂಸಿಸಬೇಕಾಗಿದೆ. ಜಾಗತಿಕ ಆರ್ಥಿಕತೆ ಮತ್ತು ನಾವು ಆನಂದಿಸುವ ಎಲ್ಲವೂ - ಆಹಾರ, ಬಟ್ಟೆ, ಗ್ಯಾಜೆಟ್‌ಗಳು, ಮನೆಗಳು, ವಾಹನಗಳು ಇತ್ಯಾದಿ - ಇತರರ ಕಠಿಣ ಪರಿಶ್ರಮದ ಮೂಲಕ ಸಿಗುತ್ತದೆ. ಇತರರು ಇಲ್ಲದಿದ್ದರೆ, ನಮಗಾಗಿ ರಸ್ತೆಗಳು, ವಿದ್ಯುತ್, ಇಂಧನ, ನೀರು ಅಥವಾ ಆಹಾರವು ಇರುತ್ತಿರಲಿಲ್ಲ. ಇದಕ್ಕಾಗಿಯೇ ನಾವು ಸ್ವಾಭಾವಿಕವಾಗಿ ಕೃತಜ್ಞರಾಗಿದ್ದು, ಈ ಸಂತೋಷದ ಮನಸ್ಸಿನ ಸ್ಥಿತಿಯನ್ನು "ಹೃತ್ಫೂರ್ವಕವಾದ ಪ್ರೀತಿ" ಎಂದು ಕರೆಯುತ್ತೇವೆ. ನಾವು ಈ ಕೃತಜ್ಞತೆಯ ಭಾವನೆಯನ್ನು ಹೆಚ್ಚು ಆಲೋಚಿಸಿದಷ್ಟು, ಇತರರನ್ನು ಅಷ್ಟೇ ಬಲವಾಗಿ ಪ್ರೀತಿಸುತ್ತೇವೆ - ಒಬ್ಬ ತಾಯಿಯು ತನ್ನ ಮಗುವಿಗೇನಾದರೂ ಕೆಟ್ಟದು ಸಂಭವಿಸಿದರೆ, ಅವಳ ಎದೆ ಚಡಪಡಿಸುವಷ್ಟು ಪ್ರೀತಿಸುವ ಹಾಗೆ. ನಾವು ಇತರರ ದುರದೃಷ್ಟದ ಬಗ್ಗೆ ದುಃಖಿತರಾಗುತ್ತೇವೆ, ಆದರೆ ನಾವು ಅವರ ಬಗ್ಗೆ ಮರುಕಪಡುವುದಿಲ್ಲ ಅಥವಾ ಅನುಕಂಪ ತೋರುವುದಿಲ್ಲ. ಅವರ ಸಮಸ್ಯೆಗಳು ನಮ್ಮದೇ ಆಗಿರುವಂತೆ ನಾವು ಸಹಾನುಭೂತಿ ಹೊಂದಿರುತ್ತೇವೆ. 

ನಮ್ಮ ಸಹಾನುಭೂತಿಯನ್ನು ಎಲ್ಲರಿಗೂ ಸಮಾನವಾಗಿ ವಿಸ್ತರಿಸುವ ತರ್ಕಬದ್ಧ ಆಧಾರವು ಬಹಳ ಸ್ಪಷ್ಟವಾಗಿದ್ದರೂ, ಬಹಳಷ್ಟು ಜನರು ಇದನ್ನು ಪರಿಗಣಿಸುವುದೇ ಇಲ್ಲ - ಅಂದರೆ ಎಲ್ಲರೂ ಸಂತೋಷವಾಗಿರಲು ಬಯಸುವುದರಲ್ಲಿ ಸಮಾನರಾಗಿದ್ದೇವೆ ಮತ್ತು ಅತೃಪ್ತಿ ಮತ್ತು ದುಃಖದಿಂದ ಮುಕ್ತರಾಗಲು ಬಯಸುವುದರಲ್ಲೂ ಸಹ ಎಲ್ಲರೂ ಸಮಾನರಾಗಿದ್ದೇವೆ. ನಮಗೆ ಹತ್ತಿರವಿರುವವರಾಗಲಿ ಅಥವಾ ದೂರದಲ್ಲಿರುವವರಾಗಲಿ, ಅವರು ಏನೇ ಮಾಡುತ್ತಿರಲಿ, ಈವೆರಡೂ ಸಂಗತಿಗಳು ಸತ್ಯವಾಗಿರುತ್ತವೆ. ಯಾರಾದರೂ ದೊಡ್ಡ ಹಾನಿಯನ್ನುಂಟುಮಾಡಿದರೂ, ಅವರು ಅದನ್ನು ಅಜ್ಞಾನ, ಗೊಂದಲ ಮತ್ತು ಭ್ರಮೆಯಿಂದ ಮಾಡುತ್ತಾರೆ, ಅವರ ಅಥವಾ ಸಮಾಜದ ಒಳಿತಿಗಾಗಿ ಮಾಡುತ್ತಿದ್ದೇನೆ ಎಂಬ ತಪ್ಪು ಭಾವನೆಯಿಂದ ಮಾಡುತ್ತಾರೆ. ಅವರು ಸ್ವಾಭಾವಿಕವಾಗಿ ಕೆಟ್ಟವರಾಗಿರುವುದಿಲ್ಲ; ಯಾರೂ ಸ್ವಾಭಾವಿಕವಾಗಿ "ಕೆಟ್ಟವರು" ಆಗಿರುವುದಿಲ್ಲ. ಆದ್ದರಿಂದ, ಅವರ ಬಗ್ಗೆಯೂ ಸಹಾನುಭೂತಿ ಹೊಂದಿರುವುದು ಸಮಂಜಸ ಮತ್ತು ಸೂಕ್ತವಾಗಿರುತ್ತದೆ; ಏಕೆಂದರೆ ನಾವು ಹೇಗೆ ದುಃಖವನ್ನು ಅನುಭವಿಸಲು ಬಯಸುವುದಿಲ್ಲವೋ, ಹಾಗೆಯೇ ಅವರೂ ಕೂಡ ಬಯಸುವುದಿಲ್ಲ. 

ಸಹಾನುಭೂತಿಯ ಧ್ಯಾನ

ಸಹಾನುಭೂತಿಯನ್ನು ಅಭಿವೃದ್ಧಿಪಡಿಸುವ ತರಬೇತಿಯಲ್ಲಿ, ಅದನ್ನು ತೀವ್ರತೆಗಳ ಹಂತಗಳಲ್ಲಿ ಬೆಳೆಸಲಾಗುತ್ತದೆ. ಮೊದಲು ನಾವು ಇಷ್ಟಪಡುವವರ ನೋವುಗಳ ಮೇಲೆ ಕೇಂದ್ರೀಕರಿಸುತ್ತೇವೆ, ನಂತರ ನಾವು ನಿಷ್ಪಕ್ಷಪಾತರಾಗಿರುವವರ ಮೇಲೆ ಮತ್ತು ನಂತರ ನಾವು ಇಷ್ಟಪಡದವರ ಮೇಲೆ. ಅಂತಿಮವಾಗಿ, ನಾವು ಎಲ್ಲೆಡೆ, ಪ್ರತಿಯೊಬ್ಬರ ದುಃಖದ ಮೇಲೆ ಸಮಾನವಾಗಿ ಕೇಂದ್ರೀಕರಿಸುತ್ತೇವೆ. 

ಪ್ರತಿ ಹಂತದಲ್ಲಿ ನಾವು ಮೂರು ಭಾವನೆಗಳನ್ನು ಉದ್ಭವಿಸುತ್ತೇವೆ:

  • ಅವರು ತಮ್ಮ ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಿದ್ದರೆ ಎಷ್ಟು ಅದ್ಭುತವಾಗಿರುತ್ತದೆ
  • ಅವರು ಮುಕ್ತರಾಗಲಿ; ಅವರು ಮುಕ್ತರಾಗಲೆಂದು ನಾನು ಬಯಸುತ್ತೇನೆ
  • ನಾನು ಅವರನ್ನು ಮುಕ್ತಗೊಳಿಸುವಲ್ಲಿ ಸಹಾಯಕವಾಗಲು ಆಶಿಸುತ್ತೇನೆ

ಹೀಗೆ ಸಹಾನುಭೂತಿಯು, ಇತರರು ತಮ್ಮ ಸಮಸ್ಯೆಗಳಿಂದ ಮುಕ್ತರಾಗಲು ಮತ್ತು ಅವರ ಅಸಂತೋಷದಿಂದ ಹೊರಬರಲು ಸಹಾಯ ಮಾಡುವ ಇಚ್ಛೆಯನ್ನು ಒಳಗೊಂಡಿರುತ್ತದೆ. ವಾಸ್ತವಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬ ವಿಶ್ವಾಸವಿದೆ, ಅಂದರೆ ಯಾವುದೇ ಪರಿಸ್ಥಿತಿಯು ಆಶಾರಹಿತವಾಗಿರುವುದಿಲ್ಲ. ಬೌದ್ಧಧರ್ಮದಲ್ಲಿ ಸಹಾನುಭೂತಿಯು ಸಕ್ರಿಯ ಮನಸ್ಸಿನ ಸ್ಥಿತಿಯಾಗಿದ್ದು, ಅದು ಯಾವುದೇ ಕ್ಷಣದಲ್ಲಿ ಇತರರಿಗೆ ಉಪಕಾರಿಯಾಗುವಂತೆ ಕಾರ್ಯರೂಪಕ್ಕೆ ಬರಲು ಸಿದ್ಧವಾಗಿರುತ್ತದೆ.

Top