ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದರ ಪ್ರಯೋಜನಗಳು

ಬೌದ್ಧಧರ್ಮದಲ್ಲಿ, ಸಹಾನುಭೂತಿ ಕೇವಲ ಒಂದು ಉದಾತ್ತ ಆದರ್ಶಕ್ಕಿಂತ ಹೆಚ್ಚಿನದಾಗಿರುತ್ತದೆ; ಇದು ನಮ್ಮ ಆಧ್ಯಾತ್ಮಿಕ ಅಭ್ಯಾಸದ ಹೃದಯಭಾಗದಲ್ಲಿರುವ ಪ್ರಬಲ ಮತ್ತು ಪರಿವರ್ತಕ ಶಕ್ತಿಯಾಗಿರುತ್ತದೆ. ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು ಸಂಪೂರ್ಣವಾಗಿ ಅವಶ್ಯಕವಾಗಿದೆ, ನಮ್ಮ ವೈಯಕ್ತಿಕ ಬೆಳವಣಿಗೆಗೆ ಮಾತ್ರವಲ್ಲದೆ, ನಾವೆಲ್ಲರೂ ಬಯಸುವ ಹೆಚ್ಚು ಶಾಂತಿಯುತ ಮತ್ತು ಸಾಮರಸ್ಯದ ಜಗತ್ತನ್ನು ಸೃಷ್ಟಿಸಲು ಸಹ. ನಮ್ಮೊಳಗೆ ವಿಶಾಲವಾದ ಸಹಾನುಭೂತಿಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ, ನಾವು ಇತರರ ಜೀವನವನ್ನು ನಂಬಲಾಗದ ರೀತಿಯಲ್ಲಿ ಸ್ಪರ್ಶಿಸಬಹುದು, ಕತ್ತಲೆ ಇರುವ ಸ್ಥಳಗಳಿಗೆ ಬೆಳಕನ್ನು ತರಬಹುದು ಮತ್ತು ದುಃಖವಿರುವಲ್ಲಿ ಸಾಂತ್ವನವನ್ನು ನೀಡಬಹುದು. ಇದೇ ಸಹಾನುಭೂತಿಯ ಶಕ್ತಿ. 

ನಾವು ಸಹಾನುಭೂತಿಯನ್ನು ಏಕೆ ಬೆಳೆಸಿಕೊಳ್ಳಬೇಕು? 

ನಮ್ಮಲ್ಲಿ ಕೆಲವರು, "ನಾನು ಸಹಾನುಭೂತಿಯನ್ನು ಏಕೆ ಬೆಳೆಸಿಕೊಳ್ಳಬೇಕು?" ಎಂದು ಕೇಳಬಹುದು. ನಾವು ನಮ್ಮ ಜೀವನದಲ್ಲಿ ಸಂತೋಷ ಮತ್ತು ಯಶಸ್ಸನ್ನು ಅನುಭವಿಸಬಹುದು ಮತ್ತು ನಮಗೆ ಹೆಚ್ಚು ಪ್ರಯೋಜನಕಾರಿಯಲ್ಲ ಎಂದು ತೋರುವ ಯಾವುದನ್ನಾದರೂ ಅಭಿವೃದ್ಧಿಪಡಿಸುವ ಅಗತ್ಯವಿಲ್ಲ ಎಂದು ಭಾವಿಸಬಹುದು. ಆದರೆ ನಾವು ಸಂತೋಷ ಮತ್ತು ಯಶಸ್ಸನ್ನು ಅನುಭವಿಸಿದರೆ, ಇದರಲ್ಲಿ ಎಷ್ಟು ಭಾಗ ಇತರರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ನಾವು ಪರಿಶೀಲಿಸಬಹುದು ಮತ್ತು ನೋಡಬಹುದು, ಉದಾಹರಣೆಗೆ ನಾವು ತಿನ್ನುವ ಆಹಾರವನ್ನು ಬೆಳೆಯುವವರು ಮತ್ತು ನಾವು ಬಳಸುವ ರಸ್ತೆಗಳನ್ನು ನಿರ್ವಹಿಸುವವರು ಬೇರೆಯವರಾಗಿರುತ್ತಾರೆ. ಇತರರು ಇಲ್ಲದಿದ್ದರೆ, ನಾವು ಎಲ್ಲಿರುತ್ತಿದ್ದೆವು? 

ವಾಸ್ತವದಲ್ಲಿ ನಮ್ಮ ಸುತ್ತಲಿನ ಪ್ರಪಂಚಕ್ಕೆ ನಾವು ಬಹಳಷ್ಟು ಋಣಿಯಾಗಿದ್ದೇವೆ ಎಂದು ನಾವು ಅರ್ಥಮಾಡಿಕೊಂಡಾಗ, ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು, ಹತ್ತಿರದ ಮತ್ತು ದೂರದ ಜನರೊಂದಿಗೆ ಇನ್ನೂ ಆಳವಾದ ಸಂಪರ್ಕವನ್ನು ತೆರೆಯುವ ಕೀಲಿಕೈಯಾಗಿದೆ ಎಂದು ನಾವು ನೋಡುತ್ತೇವೆ. ಬುದ್ಧನು ಎಲ್ಲಾ ಜೀವಿಗಳು ಪರಸ್ಪರ ಸಂಬಂಧ ಹೊಂದಿವೆ, ಆದ್ದರಿಂದ ಇತರರ ಸಂತೋಷ ಮತ್ತು ದುಃಖಗಳು ನಮ್ಮೊಂದಿಗೆ ಸಂಕೀರ್ಣವಾಗಿ ಸಂಬಂಧ ಹೊಂದಿವೆ ಎಂದು ಕಲಿಸಿದನು. 

ನಾವು ಸಹಾನುಭೂತಿಯನ್ನು ಬೆಳೆಸಿಕೊಂಡಾಗ, ಗಮನಾರ್ಹವಾದದ್ದು ಸಂಭವಿಸುತ್ತದೆ: ನಾವು ನಮ್ಮನ್ನು ಮತ್ತು ನಮ್ಮ ವೈಯಕ್ತಿಕ ಅಗತ್ಯಗಳು, ಬಯಕೆಗಳು ಮತ್ತು ಚಿಂತೆಗಳನ್ನು ಮೀರಿ ನೋಡಲು ಪ್ರಾರಂಭಿಸುತ್ತೇವೆ. ಇತರರ ಸಂತೋಷ ಮತ್ತು ಯೋಗಕ್ಷೇಮವು ನಮ್ಮಷ್ಟೇ ಮುಖ್ಯ ಎಂದು ನಾವು ಗುರುತಿಸಲು ಪ್ರಾರಂಭಿಸುತ್ತೇವೆ. ಟಿಬೆಟಿಯನ್ ಗುರುಗಳು ಕಲಿಸಿದ ಒಂದು ಸುಂದರವಾದ ವ್ಯಾಯಾಮವೆಂದರೆ ಒಂದು ಬದಿಯಲ್ಲಿ ನಮ್ಮನ್ನು, ನಮ್ಮ ಅಗತ್ಯಗಳು ಮತ್ತು ಆಸೆಗಳೊಂದಿಗೆ ಏಕಾಂಗಿಯಾಗಿ ಚಿತ್ರಿಸಿಕೊಳ್ಳುವುದು, ಆದರೆ ಇನ್ನೊಂದು ಬದಿಯಲ್ಲಿ, ಎಲ್ಲರೂ ಇರುತ್ತಾರೆ - ಎಲ್ಲಾ ಜೀವಿಗಳು, ಪ್ರತಿಯೊಂದೂ ತಮ್ಮ ಭರವಸೆಗಳು ಮತ್ತು ಹೋರಾಟಗಳೊಂದಿಗೆ. ತದನಂತರ ನಾವು ನಮ್ಮನ್ನು ಕೇಳಿಕೊಳ್ಳುತ್ತೇವೆ: ಯಾರ ಅಗತ್ಯಗಳು ಹೆಚ್ಚು, ನನ್ನದು ಮಾತ್ರವೇ, ಅಥವಾ ಎಲ್ಲರ ಲೆಕ್ಕವಿಲ್ಲದಷ್ಟು ಅಗತ್ಯಗಳೇ? ದೃಷ್ಟಿಕೋನದಲ್ಲಿನ ಈ ಬದಲಾವಣೆಯು ಇತರರಿಗೆ ಸಹಾಯ ಮಾಡುವುದರ ಬಗ್ಗೆ ಮಾತ್ರವಾಗಿರುವುದಿಲ್ಲ - ಇದು ನಮ್ಮ ಸ್ವಂತ ಸ್ವಾರ್ಥದಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ, ಕೇವಲ ನಮ್ಮ ಬಗ್ಗೆ ಯೋಚಿಸುವುದರಿಂದ ನಮ್ಮನ್ನು ಮುಕ್ತಗೊಳಿಸುತ್ತದೆ. 

ನೀವು ಇತರರು ಸಂತೋಷವಾಗಿರಬೇಕೆಂದು ಬಯಸಿದರೆ, ಸಹಾನುಭೂತಿಯನ್ನು ಅಭ್ಯಾಸ ಮಾಡಿ. ನೀವು ಸಂತೋಷವಾಗಿರಲು ಬಯಸಿದರೆ, ಸಹಾನುಭೂತಿಯನ್ನು ಅಭ್ಯಾಸ ಮಾಡಿ. — ಪರಮಪೂಜ್ಯ 14 ನೇ ದಲೈ ಲಾಮಾ 

ಇದಲ್ಲದೆ, ಬುದ್ಧನ ಪ್ರಕಾರ, ಸಹಾನುಭೂತಿಯು ನಿಜವಾದ ಸಂತೋಷದ ಮೂಲವಾಗಿದೆ. ನಮ್ಮ ವೃತ್ತಿಜೀವನದಲ್ಲಿ ಭೌತಿಕ ವಸ್ತುಗಳು ಅಥವಾ ಸಾಧನೆಗಳನ್ನು ಬೆನ್ನಟ್ಟುವುದಕ್ಕಿಂತ - ಇದು ತಾತ್ಕಾಲಿಕ ತೃಪ್ತಿಯನ್ನು ಮಾತ್ರ ನೀಡುತ್ತದೆ - ಸಹಾನಭೂತಿಯು ಶಾಶ್ವತವಾದ ನೆರವೇರಿಕೆಯನ್ನು ನೀಡುತ್ತದೆ. ಇದು ನಮಗೆ ಸಣ್ಣ, ದೈನಂದಿನ ಕ್ಷಣಗಳಲ್ಲಿ ಸಂತೋಷವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ - ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ನೀಡುವುದು ಅಥವಾ ಅಪರಿಚಿತರನ್ನು ನೋಡಿ ನಗುವುದು. ಈ ಸಂತೋಷವು ಬಾಹ್ಯ ಸಂದರ್ಭಗಳನ್ನು ಅವಲಂಬಿಸಿರುವುದಿಲ್ಲ; ಇದು ಇತರರಿಗಾಗಿ ಕಾಳಜಿ ವಹಿಸುವ ಮೂಲಕ ಮತ್ತು ನಮ್ಮಂತೆಯೇ ಸಂತೋಷವಾಗಿರಲು ಬಯಸುವ ಮನುಷ್ಯರಾಗಿ ಅವರೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಸ್ವಾಭಾವಿಕವಾಗಿ ಉದ್ಭವಿಸುತ್ತದೆ. 

ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದರ ಪ್ರಯೋಜನಗಳು 

ಮೊದಮೊದಲು, ಇತರರ ದುಃಖದ ಮೇಲೆ ಕೇಂದ್ರೀಕರಿಸುವುದು ಮತ್ತು ಅದರ ಬಗ್ಗೆ ಏನಾದರೂ ಮಾಡಲು ಬಯಸುವುದು ನಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತದೆ ಎಂಬಂತೆ ತೋರುತ್ತದೆ. ಆದರೆ ಇದಕ್ಕೆ ವಿರೋಧಾಭಾಸವಾಗಿ, ನಾವು ಸಹಾನುಭೂತಿಯನ್ನು ಹೆಚ್ಚು ಬೆಳೆಸಿಕೊಂಡಷ್ಟೂ, ನಾವು ನಮ್ಮನ್ನು ಹೆಚ್ಚು ಉನ್ನತೀಕರಿಸಿಕೊಳ್ಳುತ್ತೇವೆ, ನಮ್ಮ ಸ್ವಂತ ಜೀವನದಲ್ಲಿ ಹೆಚ್ಚಿನ ಶಾಂತಿ ಮತ್ತು ಉದ್ದೇಶವನ್ನು ಕಂಡುಕೊಳ್ಳುತ್ತೇವೆ. ಸರಳವಾಗಿ ಹೇಳುವುದಾದರೆ, ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದರಿಂದ ನಮಗೆ ಮತ್ತು ನಮ್ಮ ಸುತ್ತಲಿನ ಪ್ರಪಂಚಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. 

ವೈಯಕ್ತಿಕ ಮಟ್ಟದಲ್ಲಿ, ಸಹಾನುಭೂತಿಯು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ಭಾವನಾತ್ಮಕ ಶಕ್ತಿಯನ್ನು ನಿರ್ಮಿಸಲು, ಜೀವನದ ಎಲ್ಲಾ ಸವಾಲುಗಳನ್ನು ಎದುರಿಸಲು ಸುಲಭವಾಗುವಂತೆ ನಮಗೆ ಸಹಾಯ ಮಾಡುತ್ತದೆ. ಸಹಾನುಭೂತಿಯು ನಮ್ಮ ವೈಯಕ್ತಿಕ ಸಂಬಂಧಗಳನ್ನು ಸಮೃದ್ಧಗೊಳಿಸುತ್ತದೆ, ನಾವು ಕಾಳಜಿ ವಹಿಸುವವರನ್ನು ಹೆಚ್ಚು ಅರ್ಥಮಾಡಿಕೊಳ್ಳುವಂತೆ, ಅವರ ಬಗ್ಗೆ ತಾಳ್ಮೆಯಿಂದಿರಲು ಮತ್ತು ಬೆಂಬಲಿಸುವವರನ್ನಾಗಿ ಮಾಡುತ್ತದೆ. 

ವಿಶಾಲವಾದ ಮಟ್ಟದಲ್ಲಿ, ಸಹಾನುಭೂತಿಯು ಸಮಾಜವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಸಹಾನುಭೂತಿಯಿಂದ ವರ್ತಿಸಿದಾಗ, ನಾವು ದಯೆ ಮತ್ತು ಸಹಾನುಭೂತಿಯ ಸಂಸ್ಕೃತಿಗೆ ಕೊಡುಗೆ ನೀಡುತ್ತೇವೆ. ಇದು ಜನರು ಮೌಲ್ಯಯುತರು ಮತ್ತು ಬೆಂಬಲಿತರಾಗಲು ಅರ್ಹರು ಎಂದು ಭಾವಿಸುವ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಹೆಚ್ಚಿನ ಸಾಮಾಜಿಕ ಸಾಮರಸ್ಯ ಮತ್ತು ಏಕತೆಗೆ ಕಾರಣವಾಗುತ್ತದೆ. 

ಆದರೆ, ಸಹಾನುಭೂತಿಯ ದೊಡ್ಡ ಪ್ರಯೋಜನವೆಂದರೆ ಅದು ನಮ್ಮ ನಿಜವಾದ ಸ್ವಭಾವದೊಂದಿಗೆ ಸಂಪರ್ಕ ಹೊಂದುವ ವಿಧಾನವಾಗಿದೆ. ಸಹಾನುಭೂತಿಯು ಪ್ರತ್ಯೇಕತೆಯ ಭ್ರಮೆಯನ್ನು ಮೀರಿ ನೋಡಲು ನಮಗೆ ಸಹಾಯ ಮಾಡುತ್ತದೆ, ಎಲ್ಲಾ ಜೀವನದ ಪರಸ್ಪರ ಸಂಬಂಧವನ್ನು ಬಹಿರಂಗಪಡಿಸುತ್ತದೆ. ಈ ಸಾಕ್ಷಾತ್ಕಾರದಲ್ಲಿ, ನಾವು ಉದ್ದೇಶದ ಪ್ರಜ್ಞೆಯನ್ನು ಮಾತ್ರವಲ್ಲದೆ ದೀರ್ಘಕಾಲೀನ ಶಾಂತಿ ಮತ್ತು ನೆರವೇರಿಕೆಯ ಮಾರ್ಗವನ್ನೂ ಕಂಡುಕೊಳ್ಳುತ್ತೇವೆ. 

ಸಹಾನುಭೂತಿಯನ್ನು ಬೆಳೆಸಿಕೊಳ್ಳುವ ಮಾರ್ಗಗಳು 

ಬುದ್ಧನು ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಹಲವು ಮಾರ್ಗಗಳನ್ನು ಕಲಿಸಿದನು. ಸಾಧ್ಯವಾದಷ್ಟು ಹೆಚ್ಚಿನ ಜನರೊಂದಿಗೆ ನಮ್ಮನ್ನು ನಾವು ತರಬೇತಿ ಮಾಡಿಕೊಳ್ಳುವ ಮೂಲಕ, ನಮ್ಮ ಸಹಾನುಭೂತಿಯು ನಿಧಾನವಾಗಿ ಇತರರಿಗಾಗಿ ಆಗಿರುವ ಸ್ವಯಂಚಾಲಿತ ಪ್ರತಿಕ್ರಿಯೆಯಾಗುತ್ತದೆ ಮತ್ತು ಸ್ವಯಂಪ್ರೇರಿತ ದಯೆಯ ಕ್ರಿಯೆಗಳಿಗೆ ಕಾರಣವಾಗುತ್ತದೆ. 

ಇತರರ ದುಃಖವನ್ನು ಕುರಿತು ಚಿಂತಿಸುವುದು 

ಹೆಚ್ಚುತ್ತಿರುವ ಸಂಖ್ಯೆಯಲ್ಲಿ ಜನರು "ಸಹಾನುಭೂತಿಯ ಆಯಾಸ" ಎನ್ನುವುದನ್ನು ಅನುಭವಿಸುತ್ತಿದ್ದಾರೆ ಎಂಬ ವರದಿಯಿರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ನಮ್ಮ ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯುದ್ಧಗಳು, ಕ್ಷಾಮಗಳು ಮತ್ತು ಇತರ ವಿಪತ್ತುಗಳ ಚಿತ್ರಗಳು ನಿರಂತರವಾಗಿ ನಮ್ಮ ಮೇಲೆ ದಾಳಿ ಮಾಡುತ್ತಿವೆ, ನಮ್ಮಲ್ಲಿ ಅನೇಕರು ಅತಿಯಾದ ಭಾವನೆಯನ್ನು ಅನುಭವಿಸುತ್ತೇವೆ ಮತ್ತು ಇನ್ನು ಮುಂದೆ ಯಾವುದೇ ದುಃಖವನ್ನು ಅನುಭವಿಸಲು ಇಷ್ಟಪಡುವುದಿಲ್ಲ. 

ಆದರೆ, ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಇತರರ ದುಃಖದ ಬಗ್ಗೆ ಸಕ್ರಿಯವಾಗಿ ಚಿಂತಿಸುವುದು. ಆದ್ದರಿಂದ, ನಾವು ಒಂದು ದುರಂತವು ಸಂಭವಿಸಿದ ಸುದ್ದಿಯನ್ನು ಕೇಳಿದಾಗ, ನಾವು ಕೇವಲ "ಓಹ್, ಎಷ್ಟು ಭಯಾನಕವಾಗಿದೆ" ಎಂದು ಯೋಚಿಸಿ, ತಕ್ಷಣವೇ ಮುಂದುವರಿಯುವುದಿಲ್ಲ. ನಿರಾಶ್ರಿತರ ಬಗ್ಗೆ ಒಂದು ಕಥೆಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಅಪರಿಚಿತರಿಗಾಗಿ ತಮ್ಮ ತಾಯ್ನಾಡನ್ನು ಮತ್ತು ಇಡೀ ಜೀವನವನ್ನು ಬಿಟ್ಟು ಹೋಗಬೇಕಾಗಿರುವುದು ಎಷ್ಟು ಭಯಾನಕ ಪರಿಸ್ಥಿತಿ ಎಂದು ನಾವು ಸ್ವಲ್ಪ ಸಮಯ ಯೋಚಿಸಬಹುದು. ಸುರಕ್ಷತೆಯನ್ನು ಹುಡುಕಲು ಅವರು ಆಗಾಗ್ಗೆ ಅಪಾಯಕಾರಿ ಪ್ರಯಾಣಗಳಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಾರೆ, ಇದಲ್ಲದೆ, ಅವರು ಅಂತಿಮವಾಗಿ ಆಗಮಿಸಿದಾಗ, ಅವರನ್ನು ಅನುಮಾನ, ಭಯ ಅಥವಾ ಉದಾಸೀನತೆಯಿಂದ ನಡೆಸಿಕೊಳ್ಳಲಾಗುತ್ತದೆ. ನಾವು ಅಥವಾ ನಮ್ಮ ಪ್ರೀತಿಪಾತ್ರರು ಆ ಪರಿಸ್ಥಿತಿಯಲ್ಲಿದ್ದರೆ ಅದು ಎಷ್ಟು ಭಯಾನಕವಾಗಿರುತ್ತದೆ ಎಂದು ಯೋಚಿಸಿ, ಮತ್ತು ಇದರಿಂದ ಸ್ವಾಭಾವಿಕವಾಗಿ, ಸಹಾನುಭೂತಿಯ ಭಾವನೆಯು ಉದ್ಭವಿಸುತ್ತದೆ: "ಯಾರೂ ಅಂತಹ ದುಃಖವನ್ನು ಅನುಭವಿಸಬೇಕಾಗಿಲ್ಲ." 

ಇಲ್ಲಿ, ದುಃಖದ ಬಗ್ಗೆ ಚಿಂತಿಸುವುದು ಎಂದರೆ ನೋವು ಅಥವಾ ದುಃಖದೊಂದಿಗೆ ವಾಸಿಸುವುದು ಮತ್ತು ಅದರಲ್ಲಿ ಮುಳುಗಿರುವುದು ಎಂದಲ್ಲ, ಬದಲಾಗಿ ದುಃಖವು ಸಾರ್ವತ್ರಿಕ ಅನುಭವ ಎಂದು ಗುರುತಿಸುವುದಾಗಿರುತ್ತದೆ ಎಂದು ನಾವು ನೋಡಬಹುದು. ಇತರರು - ನಮ್ಮ ಸುತ್ತಮುತ್ತಲಿನವರು ಮತ್ತು ದೂರದ ದೇಶಗಳಲ್ಲಿರುವವರು - ಎದುರಿಸುವ ಸವಾಲುಗಳನ್ನು ಒಪ್ಪಿಕೊಳ್ಳುವ ಮೂಲಕ, ಅವರ ದುಃಖವನ್ನು ನಿವಾರಿಸುವ ನಿಜವಾದ ಬಯಕೆಯನ್ನು ನಾವು ಬೆಳೆಸಿಕೊಳ್ಳಬಹುದು. 

ದಯೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು 

ಮೊದಲೇ ಹೇಳಿದಂತೆ, ಸಹಾನುಭೂತಿಯು ನಾವು ಅನುಭವಿಸುವ ವಿಷಯವಲ್ಲ, ಅದು ನಾವು ಮಾಡುವ ವಿಷಯ. ಸಣ್ಣ ದಯೆಯ ಕ್ರಿಯೆಗಳು ಸಹ - ಅದು ಸಹಾಯ ಹಸ್ತ ನೀಡುವುದಾಗಿರಬಹುದು, ಯಾರಾದರೂ ಮಾತನಾಡಬೇಕಾದಾಗ ಕೇಳುವುದು ಅಥವಾ ಅಪರಿಚಿತರನ್ನು ನೋಡಿ ನಗುವುದಾಗಿರಬಹುದು - ನಮ್ಮ ದಯೆಯನ್ನು ಆಚರಣೆಗೆ ತರಲು ನಮಗೆ ಅವಕಾಶ ನೀಡುತ್ತದೆ. 

ದಯೆಯ ಈ ಸಣ್ಣ ಕ್ರಿಯೆಗಳು ಅತ್ಯಲ್ಪವೆಂದು ತೋರುತ್ತದೆ, ಆದರೆ ಅವು ದೊಡ್ಡ ಪರಿಣಾಮವನ್ನು ಬೀರಬಹುದು, ನಾವು ಅರಿತುಕೊಳ್ಳುವುದಕ್ಕಿಂತ ಹೆಚ್ಚಿನ ಜೀವಗಳನ್ನು ಸ್ಪರ್ಶಿಸಬಹುದು. ದಯೆಯು ಒಂದು ಸ್ನಾಯುವಿನಂತಿದೆ, ಆದ್ದರಿಂದ ನಾವು ಮಾಡುವ ಪ್ರತಿಯೊಂದು ದಯೆಯ ಕ್ರಿಯೆಯು, ಅದು ಎಷ್ಟೇ ಚಿಕ್ಕದಾಗಿರಲಿ, ನಮ್ಮ ಸ್ವಂತ ಸಹಾನುಭೂತಿಯನ್ನು ಬಲಪಡಿಸುತ್ತದೆ, ಭವಿಷ್ಯದಲ್ಲಿ ಸಹಾನುಭೂತಿ ಮತ್ತು ಕಾಳಜಿಯೊಂದಿಗೆ ಪ್ರತಿಕ್ರಿಯಿಸಲು ಸುಲಭವಾಗುತ್ತದೆ. ವಿಭಜಿತಗೊಂಡ ಜಗತ್ತಿನಲ್ಲಿ, ಈ ಸಣ್ಣ ದಯೆಯ ಕ್ರಿಯೆಗಳು ನಿಜವಾಗಿಯೂ ನಮ್ಮನ್ನು ಇತರ ಜೀವಿಗಳಿಗೆ ಹತ್ತಿರವಾಗಲು ಮತ್ತು ಜಗತ್ತನ್ನು ಸ್ವಲ್ಪ ಪ್ರಕಾಶಮಾನವಾಗಿ ಅನುಭವಿಸಲು ಸಹಾಯ ಮಾಡುತ್ತದೆ. 

ಪರಹಿತಚಿಂತನೆಯ ಪ್ರೀತಿಯನ್ನು ಅಭ್ಯಾಸ ಮಾಡುವುದು 

ಪರಹಿತಚಿಂತನೆಯ ಪ್ರೀತಿ, ಇತರರು ಸಂತೋಷವಾಗಿರಬೇಕೆಂಬ ನಿಜವಾದ ಬಯಕೆ, ಸಹಾನುಭೂತಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿರುತ್ತದೆ. ಇದು ಒಂದು ಪ್ರಬಲ ಅಭ್ಯಾಸವಾಗಿದ್ದು, ಅದರ ಮೂಲಕ ನಾವು ನಮ್ಮ ಗಮನವನ್ನು ಸ್ವಾರ್ಥಪರ ಕಾಳಜಿಯಿಂದ ಎಲ್ಲಾ ಜೀವಿಗಳನ್ನು ಒಳಗೊಳ್ಳುವ ವಿಶಾಲ ಪ್ರೀತಿಗೆ ಬದಲಾಯಿಸಲು ತರಬೇತಿ ನೀಡುತ್ತೇವೆ. ಹಾಗೆ ಮಾಡುವುದರಿಂದ, ನಾವು ನಮ್ಮೊಳಗೆ ಇರುವ ಶಾಂತಿ ಮತ್ತು ತೃಪ್ತಿಯ ಮೂಲವನ್ನು ಸಂಪೂರ್ಣವಾಗಿ ಪಡೆಯಲು ಪ್ರಾರಂಭಿಸುತ್ತೇವೆ. 

"ಜಗತ್ತಿನ ಅತ್ಯಂತ ಸಂತೋಷವಾಗಿರುವ ವ್ಯಕ್ತಿ" ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಬೌದ್ಧ ಸನ್ಯಾಸಿ ಮ್ಯಾಥ್ಯೂ ರಿಕಾರ್ಡ್ ಹೇಳುವಂತೆ, "ಪರಹಿತಚಿಂತನೆಯು ಬೆಳೆಸಿಕೊಳ್ಳಬೇಕಾದ ಉತ್ತಮ ಮನಸ್ಸಿನ ಸ್ಥಿತಿಯಾಗಿದೆ ಏಕೆಂದರೆ ಅದು ನಮಗೂ ಮತ್ತು ಇತರರಿಗೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ." ನಾವು ಪ್ರತಿದಿನವೂ ಪರಹಿತಚಿಂತನೆಯ ಪ್ರೀತಿಯನ್ನು ಅಭ್ಯಾಸ ಮಾಡಲು ಪ್ರಯತ್ನಿಸಿದಾಗ, ನಾವು ಸ್ವಾಭಾವಿಕವಾಗಿ ಹೆಚ್ಚು ಸಹಾನುಭೂತಿ ಮತ್ತು ಮುಕ್ತ ಹೃದಯವನ್ನು ಬೆಳೆಸಿಕೊಳ್ಳುತ್ತೇವೆ. 

ಈ ಅಭ್ಯಾಸಕ್ಕೆ ಭವ್ಯ ಸನ್ನೆಗಳ ಅಗತ್ಯವಿಲ್ಲ; ದಿನವಿಡೀ ನಾವು ಎದುರಿಸುವ ಜನರಿಗೆ ನಿಜವಾಗಿಯೂ ಸಂತೋಷವನ್ನು ಬಯಸುವಷ್ಟು ಸರಳವಾದ ವಿಷಯದಿಂದ ಇದು ಪ್ರಾರಂಭವಾಗಬಹುದು. ಬೀದಿಯಲ್ಲಿರುವ ಅಪರಿಚಿತರಿಗೆ ಮೌನವಾಗಿ ಶುಭ ಹಾರೈಕೆಗಳನ್ನು ಸಲ್ಲಿಸುವುದು, ಸ್ನೇಹಿತನಿಗೆ ಶಾಂತಿ ಸಿಗಲಿ ಎಂದು ಆಶಿಸುವುದು ಅಥವಾ ಪ್ರಪಂಚದಾದ್ಯಂತ ಬಳಲುತ್ತಿರುವವರಿಗೆ ಪ್ರೀತಿಯನ್ನು ಕಳುಹಿಸುವುದು, ಈ ಸಣ್ಣ, ಉದ್ದೇಶಪೂರ್ವಕ ದಯೆಯ ಕ್ರಿಯೆಗಳು, ಪ್ರೀತಿ ಮತ್ತು ಸಹಾನುಭೂತಿಯ ನಮ್ಮ ಸಾಮರ್ಥ್ಯವನ್ನು ವಿಸ್ತರಿಸಲು ಸಹಾಯ ಮಾಡುತ್ತವೆ. 

ಕೆಲವೊಮ್ಮೆ, ಬಹಿರಂಗವಾಗಿ ಬಳಲುತ್ತಿರುವಂತೆ ಕಾಣುವವರ ಬಗ್ಗೆ ಪರಹಿತಚಿಂತನೆಯ ಪ್ರೀತಿಯನ್ನು ಅನುಭವಿಸುವುದು ನಮಗೆ ಸುಲಭವಾಗುತ್ತದೆ. ನಾವು ಬೀದಿಯಲ್ಲಿ ಒಬ್ಬ ಭಿಕ್ಷುಕನನ್ನು ನೋಡಬಹುದು ಮತ್ತು ತಕ್ಷಣವೇ "ಓಹ್, ಅವರು ತಮ್ಮ ಹೋರಾಟಗಳಿಂದ ಸಂತೋಷ ಮತ್ತು ಪರಿಹಾರವನ್ನು ಕಂಡುಕೊಳ್ಳಲಿ" ಎಂಬ ಭಾವನೆಯನ್ನು ಹೊಂದಿರಬಹುದು. ಆದರೆ ನಂತರ, ಶ್ರೀಮಂತರಾಗಿ ಕಾಣುವ ಮತ್ತು ಎಲ್ಲವನ್ನೂ ಹೊಂದಿರುವಂತೆ ಕಾಣುವ ವ್ಯಕ್ತಿಯನ್ನು ನಾವು ನೋಡಿದಾಗ, "ಅವರು ಸಂತೋಷವಾಗಿರಬೇಕೆಂದು ನಾನು ಏಕೆ ಬಯಸಬೇಕು? ಅವರ ಬಳಿ ಈಗಾಗಲೇ ಎಲ್ಲವೂ ಇದೆ!" ಎಂದು ನಾವು ಯೋಚಿಸುತ್ತೇವೆ, ಆದರೆ ಪರಹಿತಚಿಂತನೆಯ ಪ್ರೀತಿಯು ಬಾಹ್ಯ ಅನುಭವಗಳನ್ನು ಮೀರಿರುತ್ತದೆ. ಯಾರಾದರೂ ಕಷ್ಟಪಡುತ್ತಿರುವಂತೆ ಅಥವಾ ಅಭಿವೃದ್ಧಿ ಹೊಂದುತ್ತಿರುವಂತೆ ತೋರುತ್ತಿದ್ದರೂ, ಎಲ್ಲರೂ ಸಂತೋಷಕ್ಕೆ ಅರ್ಹರು ಎಂಬುದನ್ನು ನಾವು ನೆನಪಿನಲ್ಲಿಡಬೇಕು. 

ಇದಕ್ಕಾಗಿ, ಬುದ್ಧನು ಪ್ರೀತಿ-ದಯೆಯ ಧ್ಯಾನವನ್ನು ಕಲಿಸಿದನು. ಈ ಅಭ್ಯಾಸದಲ್ಲಿ, ನಾವು ನಮಗಾಗಿ ಪ್ರೀತಿ ಮತ್ತು ದಯೆಯ ಭಾವನೆಗಳನ್ನು ಉತ್ಪಾದಿಸುವ ಮೂಲಕ ಪ್ರಾರಂಭಿಸುತ್ತೇವೆ ಮತ್ತು ನಂತರ ಅದೇ ಭಾವನೆಗಳನ್ನು ಇತರರಿಗಾಗಿ ವಿಸ್ತರಿಸುತ್ತೇವೆ: ಮೊದಲು ಪ್ರೀತಿಪಾತ್ರರಿಗೆ, ನಂತರ ತಟಸ್ಥ ಜನರಿಗೆ, ಮತ್ತು ಅಂತಿಮವಾಗಿ ನಮಗೆ ಕಷ್ಟ ಅಥವಾ ಸವಾಲಾಗಿ ತೋರುವವರಿಗೆ. ನಮ್ಮ ಪ್ರೀತಿ ಮತ್ತು ಸಹಾನುಭೂತಿಯ ವಲಯವನ್ನು ಕ್ರಮೇಣವಾಗಿ, ವಿನಾಯಿತಿ ಇಲ್ಲದೆ ಎಲ್ಲಾ ಜೀವಿಗಳನ್ನು ಒಳಗೊಳ್ಳುವವರೆಗೆ ವಿಸ್ತರಿಸುವುದು ಗುರಿಯಾಗಿದೆ. ಕಾಲಾನಂತರದಲ್ಲಿ, ಸ್ವಾಭಾವಿಕವಾಗಿ ನಾವು ಎದುರಿಸುವ ಪ್ರತಿಯೊಬ್ಬರಿಗೂ ಸಂತೋಷವನ್ನು ಬಯಸುತ್ತೇವೆ. 

ಸಾವಧಾನತೆ ಮತ್ತು ಧ್ಯಾನ 

ಸಾವಧಾನತೆ ಎಂದರೆ ಸಂಪೂರ್ಣವಾಗಿ ಪ್ರಸ್ತುತವಾಗಿರುವುದು ಮತ್ತು ಪೂರ್ವಾಗ್ರಹಗಳಿಲ್ಲದೆ ನಮ್ಮ ಆಲೋಚನೆಗಳು, ಭಾವನೆಗಳು ಮತ್ತು ಸುತ್ತಮುತ್ತಲಿನ ಬಗ್ಗೆ ಅರಿವಿರುವುದರ ಅಭ್ಯಾಸವಾಗಿರುತ್ತದೆ. ನಾವು ಈ ಕೌಶಲ್ಯವನ್ನು ಅಭಿವೃದ್ಧಿಪಡಿಸಿದಾಗ – ಇದು ನಾವೆಲ್ಲರೂ ಸಾಧಿಸಬಹುದಾದ ವಿಷಯ - ನಮ್ಮ ಸ್ವಂತ ದುಃಖ ಮತ್ತು ಇತರರ ದುಃಖದ ಬಗ್ಗೆ ನಮಗೆ ಸ್ಪಷ್ಟವಾದ ತಿಳುವಳಿಕೆ ಸಿಗುತ್ತದೆ. ನಮ್ಮ ಅರಿವು ಹೆಚ್ಚಾದಂತೆ, ಸ್ವಾಭಾವಿಕವಾಗಿ ನಮ್ಮ ಸಹಾನುಭೂತಿಯೂ ಹೆಚ್ಚಾಗುತ್ತದೆ, ಏಕೆಂದರೆ ನಾವೆಲ್ಲರೂ ಅನುಭವಿಸುವ ಮಾನವ ಸ್ಥಿತಿಯ ಮೂಲಭೂತ ಭಾಗವೆಂದರೆ ದುಃಖ ಎಂದು ನಾವು ಗಮನಿಸಲು ಪ್ರಾರಂಭಿಸುತ್ತೇವೆ. 

ಮಹಾನ್ ಬೌದ್ಧ ಸನ್ಯಾಸಿ ಮತ್ತು ಶಿಕ್ಷಕ ಥಿಚ್ ನಾತ್ ಹನ್ಹ್ ಅವರು ಬಹಳ ಸ್ಪಷ್ಟವಾಗಿ ಹೇಳಿದಂತೆ, "ಮನಸ್ಸು ಸಹಾನುಭೂತಿಗೆ ಜನ್ಮ ನೀಡುತ್ತದೆ." ನಾವು ಹೆಚ್ಚು ಜಾಗರೂಕರಾದಾಗ, ಸ್ಪಷ್ಟವಾದ ಮಾರ್ಗಗಳನ್ನು ಮಾತ್ರವಲ್ಲದೆ, ನಾವು ಮತ್ತು ಇತರರು ನೋವು, ಭಯ ಮತ್ತು ಹತಾಶೆಯನ್ನು ಅನುಭವಿಸುವ ಸೂಕ್ಷ್ಮ ಮಾರ್ಗಗಳನ್ನು ಸಹ ಗಮನಿಸಲು ಪ್ರಾರಂಭಿಸುತ್ತೇವೆ. ಈ ತಿಳುವಳಿಕೆಯು ನಮ್ಮ ಹೃದಯಗಳನ್ನು ಮೃದುಗೊಳಿಸುತ್ತದೆ, ಇದರಿಂದ ಕಿರಿಕಿರಿ ಅಥವಾ ಹತಾಶೆಯಿಂದ ಪ್ರತಿಕ್ರಿಯಿಸುವ ಬದಲು ನಾವು ಸಹಾನುಭೂತಿ ಮತ್ತು ದಯೆಯಿಂದ ಪ್ರತಿಕ್ರಿಯಿಸಬಹುದು. 

ಸಾವಧಾನತೆ ಮತ್ತು ಧ್ಯಾನದ ಮೂಲಕ, ಪ್ರತಿಯೊಬ್ಬರೂ, ಅವರ ಸಂದರ್ಭಗಳು ಏನೇ ಇದ್ದರೂ, ತಮ್ಮದೇ ಆದ ಹೋರಾಟಗಳು ಮತ್ತು ಸವಾಲುಗಳನ್ನು ಎದುರಿಸುತ್ತಿರುತ್ತಾರೆ ಎಂದು ನಾವು ಗುರುತಿಸುತ್ತೇವೆ. ಇದು ನಮಗೆ, ಕ್ಷಣಿಕವಾದ ಪೂರ್ವಾಗ್ರಹಗಳಿಂದ ಸುಲಭವಾಗಿ ತಲುಪಬಹುದಾದ ತೀರ್ಮಾನಗಳ ಜಾಗದಿಂದ ಹೊರಬರಲು ಸಹಾಯ ಮಾಡುತ್ತದೆ. ನಾವು ನಿಧಾನವಾಗಿ ಎಲ್ಲಾ ಜೀವಿಗಳಿಗೆ ನಮ್ಮ ಸಹಾನುಭೂತಿಯನ್ನು ವಿಸ್ತರಿಸುವುದನ್ನು ಅಭ್ಯಾಸ ಮಾಡುವಾಗ, ನಾವು ಪ್ರತ್ಯೇಕತೆಯ ಗೋಡೆಗಳನ್ನು ಮತ್ತು ಹೆಚ್ಚಾಗಿ, ಇತರರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುವುದನ್ನು ತಡೆಯುವ ಗರ್ವವನ್ನು ಒಡೆಯಲು ಪ್ರಾರಂಭಿಸುತ್ತೇವೆ. ಇದರೊಂದಿಗೆ, ನಾವು ಸಾಮಾಜಿಕ ಜೀವಿಗಳಾಗಿ ನಮ್ಮ ಸ್ವಂತ ಸಂತೋಷಕ್ಕೆ ಮತ್ತು ನಮ್ಮ ಸುತ್ತಲಿನ ಎಲ್ಲರ ಸಂತೋಷಕ್ಕಾಗಿ ಕೆಲಸ ಮಾಡುತ್ತೇವೆ. 

ಮುಕ್ತಾಯ: ನಿಜವಾದ ಸಹಾನುಭೂತಿಯ ಹಾದಿ 

ಥಿಚ್ ನಾಟ್ ಹನ್ಹ್ ಹೀಗೆ ಹೇಳಿದರು, "ಸಹಾನುಭೂತಿಯು ಒಂದು ಕ್ರಿಯಾಪದ." ಇದು ನಾವು ಸಕ್ರಿಯವಾಗಿ ಬೆಳೆಸಬೇಕಾದ ವಿಷಯ, ಬಹಿರಂಗವಾಗಿ ಹೋರಾಡುತ್ತಿರುವವರಿಗೆ ಮಾತ್ರವಲ್ಲದೆ ನಾವು ಎದುರಿಸುವ ಪ್ರತಿಯೊಬ್ಬರಿಗೂ. ಅದು ದಯೆಯ ಸಣ್ಣ ಕ್ರಿಯೆಗಳ ಮೂಲಕವಾಗಲಿ, ಇತರರ ದುಃಖದ ಬಗ್ಗೆ ಚಿಂತಿಸುವ ಮೂಲಕವಾಗಲಿ ಅಥವಾ ಪ್ರೀತಿಯ ದಯೆಯ ಧ್ಯಾನದ ಮೂಲಕವಾಗಲಿ, ನಮ್ಮೊಳಗಿನ ಸಹಾನುಭೂತಿಯ ಬೀಜವು ಎಲ್ಲಾ ಜೀವಿಗಳ ಬಗ್ಗೆ ನಿಜವಾದ ಕಾಳಜಿಯ ಹೂವಾಗಿ ಅರಳಬಹುದು. 

ಮನುಷ್ಯರಾಗಿ, ನಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಚಿಂತೆಗಳಲ್ಲಿ ಲೀನವಾಗುವುದು ಬಹಳಾ ಸುಲಭ, ಆದರೆ ಪ್ರತಿಯೊಬ್ಬರೂ, ಅವರು ಯಾರೇ ಆಗಿರಲಿ, ಎಲ್ಲಿಂದಲಾದರೂ ಬಂದವರಾಗಿರಲಿ ಅಥವಾ ಅವರು ಹೇಗೇ ಇದ್ದರೂ, ಸಂತೋಷ ಮತ್ತು ದುಃಖದಿಂದ ಪರಿಹಾರವನ್ನು ಬಯಸುತ್ತಾರೆ. ಇದು ನಾವು ಬದಲಾವಣೆಯನ್ನು ತರಲು ಹೆಜ್ಜೆ ಮುಂದಿಡಬಹುದಾದ ಜಾಗವಾಗಿದೆ. ನಾವು ಅತ್ಯಲ್ಪರು ಎಂದು ಭಾವಿಸಬಹುದು, ಆದರೆ ಬುದ್ಧನು ಎಲ್ಲವೂ ಮತ್ತು ಎಲ್ಲರೂ ಪರಸ್ಪರ ಸಂಬಂಧ ಹೊಂದಿದ್ದಾರೆಂದು ನಮಗೆ ಕಲಿಸಿದನು. ಇದರರ್ಥ ನಾವು ಅಪರಿಚಿತರಿಗೆ ನೀಡುವ ಪ್ರತಿಯೊಂದು ನಗು ಮತ್ತು ನಾವು ಪ್ರೀತಿಯ ದಯೆಯ ಧ್ಯಾನದಲ್ಲಿ ಕಳೆಯುವ ಪ್ರತಿ ನಿಮಿಷವೂ ನಮ್ಮ ಮೇಲೆ ಮತ್ತು ನಮ್ಮ ಸುತ್ತಮುತ್ತಲಿನವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Top