ಕ್ರಿಯೆಯಲ್ಲಿ ಸಹಾನುಭೂತಿ: ಬೌದ್ಧ ದೃಷ್ಟಿಕೋನ

ಸಹಾನುಭೂತಿ - ಇತರರು ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಬೇಕೆಂಬ ಬಯಕೆ - ಮಾನವೀಯತೆಯ ಅತ್ಯಂತ ಸುಂದರವಾದ ಗುಣಗಳಲ್ಲಿ ಒಂದಾಗಿದೆ. ಆದರೆ ಒಂದು ಆಲೋಚನೆಯಾಗಿ ಸಹಾನುಭೂತಿಯು ಉನ್ನತಿಗೇರಿಸುವಂತಹದ್ದಾಗಿದ್ದರೂ, ನಾವು ಅದನ್ನು ವಾಸ್ತವದಲ್ಲಿ ಕಾರ್ಯರೂಪಕ್ಕೆ ತಂದಾಗ ಮಾತ್ರ ಅದು ನಿಜವಾಗಿಯೂ ಶಕ್ತಿಯುತವಾಗಿರುತ್ತದೆ. ಬೌದ್ಧ ಅಭ್ಯಾಸಿಗರಾದ ನಮಗೆ ಕಾರ್ಯರೂಪದ ಸಹಾನುಭೂತಿಯು, ನಮ್ಮ ಆಳವಾದ ಮೌಲ್ಯಗಳ ಸಾಕಾರವಾಗಿರುತ್ತದೆ. ಇದು ಎಲ್ಲಾ ಜೀವಿಗಳ ಯೋಗಕ್ಷೇಮಕ್ಕಾಗಿ ಇರುವ ನಮ್ಮ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಯಾಗಿರುತ್ತದೆ. ನಾವು ನಮ್ಮ ಸಹಾನುಭೂತಿಯಿಂದ ತುಂಬಿದ ಉದ್ದೇಶಗಳನ್ನು ನಿಜವಾದ, ಅರ್ಥಪೂರ್ಣವಾದ ಕ್ರಿಯೆಗಳಾಗಿ ಪರಿವರ್ತಿಸಿದಾಗ, ನಮ್ಮ ಸುತ್ತಲಿನ ಪ್ರಪಂಚಕ್ಕೆ ನಾವು ಪರಿಹಾರವನ್ನು ತರಬಹುದು. ಇದಕ್ಕಿಂತ ಅರ್ಥಪೂರ್ಣವಾದದ್ದು ಇನ್ನೇನು ಇರಬಹುದು? 

ಸಹಾನುಭೂತಿಯನ್ನು ಏಕೆ ಕಾರ್ಯರೂಪಕ್ಕೆ ತರಬೇಕು 

ದುಃಖವನ್ನು ಪರಿಹಾರವಾಗಿ ಪರಿವರ್ತಿಸುವುದು 

ನಾಲ್ಕು ಆರ್ಯ ಸತ್ಯಗಳಲ್ಲಿ ಮೊದಲನೆಯದು, ಹುಟ್ಟಿನಿಂದ ಮರಣದವರೆಗೆ ಜೀವನವು ದುಃಖ ಮತ್ತು ಅತೃಪ್ತಿಯಿಂದ ತುಂಬಿರುತ್ತದೆ ಎಂದು ಕಲಿಸುತ್ತದೆ. ಬುದ್ಧಿವಂತಿಕೆಯ ಜೊತೆಗೆ, ಸಹಾನುಭೂತಿಯು ಈ ದುಃಖಕ್ಕಾಗಿ ಇರುವ ಪ್ರತಿವಿಷವಾಗಿದೆ. ಆದರೆ, ಸಹಾನುಭೂತಿಯು, ತನ್ನ ಸಂಪೂರ್ಣ ಅರ್ಥದಲ್ಲಿ ಕೇವಲ ತಿಳುವಳಿಕೆ ಅಥವಾ ಅನುಭೂತಿಯೊಂದಿಗೆ ನಿಲ್ಲುವುದಿಲ್ಲ - ಅದು ಕ್ರಿಯೆಯನ್ನು ಬಯಸುತ್ತದೆ. ಸಹಾನುಭೂತಿಯನ್ನು ಕಾರ್ಯರೂಪಕ್ಕೆ ತರುವ ಮೂಲಕ, ನಾವು ಇತರರ ದುಃಖವನ್ನು ನೇರವಾಗಿ ನಿವಾರಿಸಬಹುದು. ಅಗತ್ಯವಿರುವ ಸ್ನೇಹಿತರಿಗೆ ಸಹಾಯ ಮಾಡುವುದರ ಮೂಲಕ, ಒಂದು ಉದ್ದೇಶವನ್ನು ಬೆಂಬಲಿಸುವ ಮೂಲಕ ಅಥವಾ ಕಷ್ಟಪಡುತ್ತಿರುವ ಯಾರೊಂದಿಗಾದರೂ ಸುಮ್ಮನೆ ಜೊತೆಗಿರುವ ಮೂಲಕ, ನಮ್ಮ ಸಹಾನುಭೂತಿಯಿಂದ ತುಂಬಿದ ಕ್ರಿಯೆಗಳು ಇತರರ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನುಂಟುಮಾಡಬಹುದು. ಕ್ರಿಯೆಯಲ್ಲಿರುವ ಸಹಾನುಭೂತಿಯು ನಮ್ಮನ್ನು ಪರಿವರ್ತಿಸುತ್ತದೆ. ನಾವು ದಯಾಮಯಿ ಕ್ರಿಯೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ, ನಾವು ನಿಧಾನವಾಗಿ, ಜಗತ್ತಿಗಾಗಿ ಉದಾರವಾದ ಮತ್ತು ಮುಕ್ತವಾಗಿರುವ ಹೃದಯವನ್ನು ಬೆಳೆಸಿಕೊಳ್ಳುತ್ತೇವೆ. 

ಸಕರಾತ್ಮಕ ಕರ್ಮ ಸಾಮರ್ಥ್ಯವನ್ನು ಸೃಷ್ಟಿಸುವುದು 

ಬೌದ್ಧಧರ್ಮದಲ್ಲಿ, ನಮ್ಮ ಕ್ರಿಯೆಗಳ ಉದ್ದೇಶಗಳು ನಿರ್ಣಾಯಕವಾಗಿರುತ್ತವೆ. ನಿಜವಾದ ಸಹಾನುಭೂತಿಯಿಂದ ಪ್ರೇರೇಪಿಸಲ್ಪಟ್ಟ ಕ್ರಿಯೆಗಳು ಸಕಾರಾತ್ಮಕ ಸಾಮರ್ಥ್ಯವನ್ನು ಉತ್ಪಾದಿಸುತ್ತವೆ, ಇದು ಬುದ್ಧ ಹೇಳುವಂತೆ ಭವಿಷ್ಯದ ಸಂತೋಷಕ್ಕೆ ಕಾರಣವಾಗುತ್ತದೆ. ನಾವು ಸಹಾನುಭೂತಿಯಿಂದ ವರ್ತಿಸಿದಾಗ, ನಮ್ಮ ಸ್ವಂತ ಜೀವನದಲ್ಲಿ ಮತ್ತು ಇತರರ ಜೀವನದಲ್ಲಿ ಫಲ ನೀಡುವ ದಯೆಯ ಬೀಜಗಳನ್ನು ನಾವು ಬಿತ್ತುತ್ತೇವೆ. ಸಹಾನುಭೂತಿಯಿಂದ ತುಂಬಿದ ಕ್ರಿಯೆಯು ವಿನಾಶಕಾರಿ ಸಾಮರ್ಥ್ಯಗಳ ಚಕ್ರವನ್ನು ಸಹ ಒಡೆದುಹಾಕುತ್ತದೆ. ಕೋಪ ಅಥವಾ ಸ್ವಾರ್ಥಕ್ಕಿಂತ ಹೆಚ್ಚಾಗಿ, ದಯೆ ಮತ್ತು ತಿಳುವಳಿಕೆಯೊಂದಿಗೆ ಸನ್ನಿವೇಶಗಳೊಂದಿಗೆ ಪದೇ ಪದೇ ಪ್ರತಿಕ್ರಿಯಿಸುವ ಮೂಲಕ, ನಮ್ಮ ಮನಸ್ಸು ಮತ್ತು ಹೃದಯಗಳನ್ನು ರಚನಾತ್ಮಕ ಕ್ರಿಯೆಗಳಿಗೆ, ಅವು ಸಹಜ ಸ್ವಭಾವವಾಗುವವರೆಗೆ, ಒಗ್ಗಿಸಲು ಪ್ರಾರಂಭಿಸುತ್ತೇವೆ. ಇದು, ಹೆಚ್ಚಿನ ಆಂತರಿಕ ಶಾಂತಿ ಮತ್ತು ಜ್ಞಾನೋದಯಕ್ಕಾಗಿ ಇರುವ ಮಾರ್ಗವು ಹೆಚ್ಚು ಸ್ಪಷ್ಟವಾಗಲು ಕಾರಣವಾಗುತ್ತದೆ. 

ಪರಸ್ಪರ ಸಂಬಂಧವನ್ನು ಅರ್ಥಮಾಡಿಕೊಳ್ಳುವುದು 

ಕಾರ್ಯರೂಪದಲ್ಲಿರುವ ಸಹಾನುಭೂತಿಯು ಎಲ್ಲಾ ಜೀವಿಗಳ ಪರಸ್ಪರ ಸಂಬಂಧವನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ. ದುಃಖವನ್ನು ಬಯಸುತ್ತಾ ಎಚ್ಚರಗೊಳ್ಳುವ ಒಂದೇ ಒಂದು ಜೀವಿಯು ವಿಶ್ವದಲ್ಲಿ ಇಲ್ಲ; ನಾವೆಲ್ಲರೂ ಸಮಾನವಾಗಿ ಸಂತೋಷವನ್ನು ಬಯಸುತ್ತೇವೆ. ನಾವು ಸಹಾನುಭೂತಿಯಿಂದ ವರ್ತಿಸಿದಾಗ, ನಾವೆಲ್ಲರೂ ಈ ದೊಡ್ಡ ಸಮಗ್ರತೆಯ ಭಾಗವಾಗಿದ್ದೇವೆ ಮತ್ತು ಇತರರ ಸಂತೋಷ ಮತ್ತು ದುಃಖವು ನಮ್ಮೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಈ ಅರಿವು ನಮ್ಮಲ್ಲಿ ಏಕತೆಯ ಭಾವವನ್ನು ಬೆಳೆಸುತ್ತದೆ. ಇದು ಆಗಾಗ್ಗೆ ದುಃಖವನ್ನು ಉಂಟುಮಾಡುವ ಪ್ರತ್ಯೇಕತೆ ಮತ್ತು ಒಂಟಿತನದ ಅಡೆತಡೆಗಳನ್ನು ಒಡೆಯುತ್ತದೆ. ಆಗಾಗ್ಗೆ ವಿಭಜಿತವಾಗುವ ಜಗತ್ತಿನಲ್ಲಿ, ಕಾರ್ಯರೂಪದಲ್ಲಿರುವ ಸಹಾನುಭೂತಿಯು ಪ್ರಬಲ ಶಕ್ತಿಯಾಗಿದ್ದು, ನಾವೆಲ್ಲರೂ ಇದರಲ್ಲಿ ಒಟ್ಟಾಗಿ ಇದ್ದೇವೆ ಮತ್ತು ಪರಸ್ಪರ ಬೆಂಬಲದ ಮೂಲಕ ನಾವು ಹೆಚ್ಚು ಸಾಮರಸ್ಯದ ಜಗತ್ತನ್ನು ರಚಿಸಬಹುದು ಎಂದು ನಮಗೆ ನೆನಪಿಸುತ್ತದೆ. 

ಸಹಾನಭೂತಿಯನ್ನು ಕಾರ್ಯರೂಪಕ್ಕೆ ತರುವ ವಿಧಾನಗಳು 

ಔದಾರ್ಯ 

ಆರು ದೂರಗಾಮಿ ವರ್ತನೆಗಳಲ್ಲಿ ಮೊದಲನೆಯದಾದ ಔದಾರ್ಯವು ಕಾರ್ಯರೂಪದಲ್ಲಿರುವ ಸಹಾನುಭೂತಿಯನ್ನು ಅಭ್ಯಾಸ ಮಾಡಲು ಇರುವ ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ನಮಗೆ ಸಾಧ್ಯವಾದಲ್ಲಿ, ಅಗತ್ಯವಿರುವವರಿಗೆ ಭೌತಿಕ ವಸ್ತುಗಳನ್ನು ನೀಡುವ ಮೂಲಕ ಬೆಂಬಲಿಸುವಂತಹ ಹಲವು ರೂಪಗಳನ್ನು ಇದು ತೆಗೆದುಕೊಳ್ಳಬಹುದು. ನಾವು ನಮ್ಮ ಸಮಯ ಮತ್ತು ಶಕ್ತಿಯನ್ನು ವಿವಿಧ ರೀತಿಯಲ್ಲಿ ಹಂಚಿಕೊಳ್ಳಬಹುದು. ಬೌದ್ಧಧರ್ಮದಲ್ಲಿ, ದಾನವು ಕೇವಲ ಸ್ವೀಕರಿಸುವವರ ಬಗ್ಗೆ ಆಗಿರುವುದಿಲ್ಲ; ಅದು ಕೊಡುವವರ ಬಗ್ಗೆಯೂ ಆಗಿರುತ್ತದೆ. ನಾವು ಶುದ್ಧ ಮತ್ತು ಸಂತೋಷದ ಹೃದಯದಿಂದ ನೀಡಿದಾಗ, ವಿಶೇಷವಾಗಿ ನಾವು ಪ್ರತಿಯಾಗಿ ಏನನ್ನೂ ಪಡೆಯುವ ಯಾವುದೇ ಆಶಯವಿಲ್ಲದೆ ನೀಡಬಹುದಾದರೆ, ನಾವು ನಮ್ಮ ಸ್ವಂತ ಆಸೆಗಳನ್ನು ಬಿಟ್ಟು, ನಿಸ್ವಾರ್ಥತೆಯ ಸಂತೋಷಕ್ಕೆ ನಮ್ಮನ್ನು ತೆರೆದುಕೊಳ್ಳುತ್ತೇವೆ. 

ಭಾವನಾತ್ಮಕ ಬೆಂಬಲ ಮತ್ತು ಸಾಂತ್ವನ ನೀಡುವುದು 

ಯಾರಾದರೂ ಕಷ್ಟದ ಸಮಯದಲ್ಲಿರುವಾಗ, ಅವರಿಗೆ ಆಗಾಗ್ಗೆ ಸಲಹೆಯ ಅಗತ್ಯವಿರುವುದಿಲ್ಲ - ಅವರ ಪಕ್ಕದಲ್ಲಿ ಯಾರಾದರೂ ಇರಬೇಕು ಅಷ್ಟೇ ಎಂಬುದನ್ನು ನೀವು ಗಮನಿಸಿದ್ದೀರಾ? ಕೆಲವೊಮ್ಮೆ, ನಾವು ಮಾಡಬಹುದಾದ ಅತ್ಯಂತ ಕರುಣಾಮಯಿ ಕೆಲಸವು, ಸುಮ್ಮನೆ ಒಬ್ಬರ ಜೊತೆಗಿರುವುದಾಗಿರುತ್ತದೆ. ಭಾವನಾತ್ಮಕ ಬೆಂಬಲವನ್ನು ನೀಡುವುದು – ಕರುಣೆಯಿಂದ ಕೂಡಿದ ಮಾತುಗಳು, ಅಪ್ಪುಗೆ, ಅಥವಾ ಪೂರ್ವಾಭಿಪ್ರಾಯವಿಲ್ಲದೆ ಆಲಿಸುವುದು - ಅಪಾರ ಸಾಂತ್ವನ ಮತ್ತು ಪರಿಹಾರವನ್ನು ನೀಡುತ್ತದೆ. ಈ ರೀತಿಯ ಸಹಾನುಭೂತಿಯ ಕ್ರಿಯೆಗೆ ಭವ್ಯವಾದ ಕಾರ್ಯಗಳ ಅಗತ್ಯವಿಲ್ಲ; ಆಗಾಗ್ಗೆ, ಈ ಸಣ್ಣ ದಯೆಯ ಕ್ರಿಯೆಗಳು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ. ಇತರರ ಅಗತ್ಯದ ಸಮಯದಲ್ಲಿ ಅವರೊಂದಿಗೆ ಇರುವ ಮೂಲಕ, ನಾವು ಕಾಳಜಿ ತೋರಿಸುತ್ತೇವೆ ಮತ್ತು ಅವರು ಒಬ್ಬಂಟಿಯಾಗಿಲ್ಲ ಎಂದು ನಾವು ತೋರಿಸುತ್ತೇವೆ. 

ಸಮುದಾಯದಲ್ಲಿ ಸ್ವಯಂಸೇವಕ ಸೇವೆ 

ಸ್ವಯಂಸೇವಕ ಸೇವೆಯು ನಾವು ಸಹಾನುಭೂತಿಯನ್ನು ಕಾರ್ಯರೂಪಕ್ಕೆ ತರುವ ಮತ್ತೊಂದು ಮಾರ್ಗವಾಗಿದೆ. ಹೆಚ್ಚಿನ ಸ್ಥಳಗಳಲ್ಲಿ, ಬಹಳಷ್ಟು ಅವಕಾಶಗಳಿವೆ: ಉದಾಹರಣೆಗೆ, ಆಹಾರ ಬ್ಯಾಂಕ್‌ಗಳಲ್ಲಿ ಸಹಾಯ ಮಾಡುವುದು ಅಥವಾ ಸಮುದಾಯ ಶುಚಿಗೊಳಿಸುವಿಕೆಯಲ್ಲಿ ಭಾಗವಹಿಸುವುದು. ಸ್ವಯಂಸೇವೆಯು ಇತರರ ಯೋಗಕ್ಷೇಮಕ್ಕೆ ನೇರವಾಗಿ ಕೊಡುಗೆ ನೀಡಲು ನಮಗೆ ಅನುವು ಮಾಡಿಕೊಡುತ್ತದೆ ಮತ್ತು ಜೀವನದಲ್ಲಿ ಬಲವಾದ ಉದ್ದೇಶವನ್ನು ನೀಡುತ್ತದೆ. ಇತರರಿಗೆ ಸಹಾಯ ಮಾಡಲು ನಮ್ಮ ಸಮಯ ಮತ್ತು ಶ್ರಮವನ್ನು ಮೀಸಲಿಡುವ ಮೂಲಕ, ನಾವು ತಾಳ್ಮೆ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಬಹುದು. ನಾವು ಬ್ರಹ್ಮಾಂಡದ ಕೇಂದ್ರವಲ್ಲ ಮತ್ತು ಪ್ರತಿಯೊಬ್ಬರೂ ಹೋರಾಟಗಳನ್ನು ಹೊಂದಿದ್ದಾರೆ ಎಂಬುದನ್ನು ಅರಿತುಕೊಂಡು ನಾವು ನಮ್ರತೆಯನ್ನು ಬೆಳೆಸಿಕೊಳ್ಳುತ್ತೇವೆ, ಇದು ನಮ್ಮ ಸಹಾನುಭೂತಿಯುಳ್ಳ ಮನಸ್ಸನ್ನು ಬಲಪಡಿಸುತ್ತದೆ. 

ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸುವುದು 

ಕಾರ್ಯರೂಪದಲ್ಲಿರುವ ಸಹಾನುಭೂತಿಯು ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸುವ ರೂಪವನ್ನು ಸಹ ತೆಗೆದುಕೊಳ್ಳಬಹುದು. ಇದು ಎಲ್ಲಾ ಜೀವಿಗಳ ಹಕ್ಕುಗಳು ಮತ್ತು ಘನತೆಯನ್ನು ಎತ್ತಿಹಿಡಿಯುವುದು, ಅನ್ಯಾಯವನ್ನು ಪ್ರಶ್ನಿಸುವುದು ಮತ್ತು ನ್ಯಾಯಯುತ ಮತ್ತು ಹೆಚ್ಚು ಕರುಣಾಮಯ ಸಮಾಜಕ್ಕಾಗಿ ಕೆಲಸ ಮಾಡುವುದು, ಅನ್ಯಾಯದ ವಿರುದ್ಧ ನಿಲ್ಲುವುದನ್ನು ಒಳಗೊಂಡಿರುತ್ತದೆ. ಜಾಗೃತಿ ಮೂಡಿಸುವ ಮೂಲಕ, ನೀತಿ ಬದಲಾವಣೆಗಳನ್ನು ಬೆಂಬಲಿಸುವ ಮೂಲಕ ಅಥವಾ ಶಾಂತಿಯುತ ಕ್ರಿಯಾಶೀಲತೆಯಲ್ಲಿ ಭಾಗವಹಿಸುವ ಮೂಲಕ ಅಥವಾ ಇಂತಹ ಕೆಲಸ ಮಾಡುವ ಸಂಸ್ಥೆಗಳಿಗೆ ದೇಣಿಗೆ ನೀಡುವ ಮೂಲಕ ನಾವು ಹೀಗೆ ಮಾಡಬಹುದು. ವಕಾಲತ್ತು ಸವಾಲೊಡ್ಡುವ ವಿಷಯವಾಗಿರುತ್ತದೆ, ಆದರೆ ಇದು ಸಹಾನುಭೂತಿಯನ್ನು ಕಾರ್ಯರೂಪಕ್ಕೆ ತರುವ ಪ್ರಬಲ ಮಾರ್ಗವಾಗಿರುತ್ತದೆ ಏಕೆಂದರೆ ಅದು ಸಮಾಜದಲ್ಲಿನ ಅಂಚಿನಲ್ಲಿರುವವರ ಮೇಲೆ ಹೆಚ್ಚಾಗಿ ಕೇಂದ್ರೀಕರಿಸುತ್ತದೆ. ಬಳಲುತ್ತಿರುವವರಿಗೆ ಸಹಾಯ ಮಾಡಲು ನಾವು ನಮ್ಮ ಶಕ್ತಿಯನ್ನು ಬಳಸಲು ಸಿದ್ಧರಿದ್ದೇವೆ ಎಂದು ಇದು ತೋರಿಸುತ್ತದೆ. 

ಸಹಾನುಭೂತಿಯನ್ನು ಕಾರ್ಯರೂಪಕ್ಕೆ ತರುವುದರ ಪ್ರಯೋಜನಗಳು 

ನಾವು ಸಹಾನುಭೂತಿಯಿಂದ ವರ್ತಿಸಿದಾಗ, ಅದು ಕೇವಲ ಇನ್ನೊಬ್ಬ ವ್ಯಕ್ತಿಗೆ ಸಹಾಯ ಮಾಡುವ ಕ್ರಿಯೆಯಾಗಿರುವುದಿಲ್ಲ; ಅದು ನಮಗಾಗಿ ಸಂತೋಷ ಮತ್ತು ಅರ್ಥದ ಮೂಲವಾಗುತ್ತದೆ. ನೀವು ನಿಜವಾಗಿಯೂ ಒಬ್ಬರ ಹೊರೆಯನ್ನು ಸ್ವಲ್ಪವಾದರೂ ಕಡಿಮೆ ಮಾಡಿದ್ದೀರಿ ಎಂದು ತಿಳಿದುಕೊಳ್ಳುವುದರಿಂದ ಉಂಟಾಗುವ ಸಂತೋಷವನ್ನು ಊಹಿಸಿ. ಈ ಸಂತೋಷವು ಲೌಕಿಕ ಭೌತಿಕ ಲಾಭಗಳ ತೃಪ್ತಿಯಂತೆ ಕ್ಷಣಿಕವಾಗಿರುವುದಿಲ್ಲ - ಇದು ಆಳವಾದ ಮತ್ತು ಧೃಡವಾದ, ದೀರ್ಘಕಾಲೀನ ಸಂತೋಷವಾಗಿರುತ್ತದೆ. ಮತ್ತು ಇದಕ್ಕೆ ಯಾವುದೇ ಹಣದ ಅಗತ್ಯವಿಲ್ಲ; ನಾವೆಲ್ಲರೂ ಭಾಗವಹಿಸಬಹುದು. ಇದಲ್ಲದೆ, ಪ್ರತಿಯೊಂದು ಸಹಾನುಭೂತಿಯ ಕ್ರಿಯೆಯು ನಮ್ಮ ಮನಸ್ಸಿನೊಳಗೆ ಸಹಾನುಭೂತಿಯ ಅಭ್ಯಾಸವನ್ನು ಬಲಪಡಿಸುತ್ತದೆ. ಶೀಘ್ರದಲ್ಲೇ, ನಾವು ಯಾವುದೇ ವ್ಯಕ್ತಿ ಅಥವಾ ಪರಿಸ್ಥಿತಿಯನ್ನು ಎದುರಿಸಿದರೂ, ಸಹಾನುಭೂತಿಯಿಂದ ವರ್ತಿಸುವುದು ಸಹಜಗುಣವಾಗುತ್ತದೆ.

ಬೌದ್ಧಧರ್ಮವನ್ನು ಆಚರಿಸಲು ಬಯಸುವ ನಮಗೆ, ಸಹಾನುಭೂತಿಯು ಬಹುಶಃ, ಅತ್ಯಂತ ಅಮೂಲ್ಯವಾದ ಸಹಚರ ಎಂದು ಹೇಳಬಹುದು. ಸಹಾನುಭೂತಿಯಿಂದ, ಇತರ ಜೀವಿಗಳೊಂದಿಗೆ ಸಂಬಂಧ ಸಾಧಿಸುವುದರಿಂದ ತಡೆಯುವ ಅಡೆತಡೆಗಳನ್ನು ನಾವು ಕರಗಿಸಬಹುದು. ಮತ್ತು, ಪರಮಪೂಜ್ಯ ದಲೈ ಲಾಮಾ ಅವರು ನಮಗೆ ನಿರಂತರವಾಗಿ ನೆನಪಿಸುವಂತೆ, ನಾವು ಸಾಮಾಜಿಕ ಪ್ರಾಣಿಗಳು, ಮತ್ತು ಇತರರೊಂದಿಗಿನ ನಮ್ಮ ಸಂಬಂಧವು ನಿಜವಾಗಿಯೂ ಸಂತೋಷ ಮತ್ತು ಅರ್ಥಪೂರ್ಣವಾದ ಜೀವನವನ್ನು ಸೃಷ್ಟಿಸುತ್ತದೆ. 

ಮುಕ್ತಾಯ

ಕಾರ್ಯರೂಪದಲ್ಲಿರುವ ಸಹಾನುಭೂತಿಯು ಬೌದ್ಧ ಆಚರಣೆಯ ಹೃದಯವಾಗಿರುತ್ತದೆ; ಮತ್ತು ಇಂದಿನ ಜಗತ್ತಿಗೆ ಅದು ಬಹಳಾ ಅಗತ್ಯವಾಗಿದೆ. ಇದು ನಮ್ಮ ಮನಸ್ಸಿನಲ್ಲಿ ನಾವು ಹೊಂದಿರುವ ಸುಂದರವಾದ ಸಹಾನುಭೂತಿಯ ಉದ್ದೇಶಗಳನ್ನು, ದುಃಖವನ್ನು ನಿವಾರಿಸಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ನಿಜವಾದ, ಸ್ಪಷ್ಟವಾದ ಪ್ರಯತ್ನಗಳಾಗಿ ಪರಿವರ್ತಿಸುತ್ತದೆ. ಮೇಲೆ ತಿಳಿಸಿದ ಯಾವುದೇ ರೀತಿಯಲ್ಲಿ ಮತ್ತು ಇನ್ನೂ ಹಲವಾರು ರೀತಿಗಳಲ್ಲಿ, ಸಹಾನುಭೂತಿಯ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ನಾವು ಅಗತ್ಯವಿರುವವರಿಗೆ ಸಹಾಯ ಮಾಡುವುದಲ್ಲದೆ, ಜ್ಞಾನೋದಯದ ಹಾದಿಯಲ್ಲಿ ನಮ್ಮನ್ನು ಮುನ್ನಡೆಸುತ್ತೇವೆ.

Top