
ಬೌದ್ಧ ಧರ್ಮದ ಆಚರಣೆಯ ಮೂಲಾಧಾರವೇ ಸ್ವಯಂ ಸಹಾನುಭೂತಿ, ಆದರೂ ನಮ್ಮ ದೈನಂದಿನ ಜೀವನದಲ್ಲಿ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಅಥವಾ ಹೆಚ್ಚಾಗಿ ಕಡೆಗಣಿಸಲಾಗುತ್ತದೆ. ನಮ್ಮಲ್ಲಿ ಎಷ್ಟೋ ಜನರಿಗೆ ಇತರರೊಂದಿಗೆ ದಯೆ ಮತ್ತು ಸಹಾನುಭೂತಿಯಿಂದ ವರ್ತಿಸಲು ಕಲಿಸಲಾಗುತ್ತದೆ, ಆದರೆ ನಾವು ಅದೇ ದಯೆಯನ್ನು ನಮಗೆ ನಾವೇ ತೋರಿಸಲು ಹೋರಾಟ ಮಾಡುತ್ತೇವೆ. ಬೌದ್ಧ ಧರ್ಮದಲ್ಲಿ, ಸ್ವಯಂ ಸಹಾನುಭೂತಿ ಕೇವಲ ದಯೆಯ ಕ್ರಿಯೆಯಾಗಿರುವುದಿಲ್ಲ, ಅದು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಯೋಗಕ್ಷೇಮಕ್ಕೆ ಅಗತ್ಯವಾದ ಮುಖ್ಯ ಅಡಿಪಾಯವಾಗಿರುತ್ತದೆ.
ವೇಗವಾಗಿ ಹರಿಯುತ್ತಿರುವ ಮತ್ತು ಉಬ್ಬಿ ಹರಿಯುವ ನದಿಗೆ ಇಳಿಯುತ್ತಿರುವ ಯಾರಾದರೂ ಪ್ರವಾಹದಲ್ಲಿ ಕೊಚ್ಚಿಹೋದರೆ, ಅವರು ಇತರರನ್ನು ಹೇಗೆ ತಾನೆ ದಾಟಿಸಲು ಸಾಧ್ಯ? - ಬುದ್ಧ
ಸ್ವಯಂ ಸಹಾನುಭೂತಿ ಎಂದರೇನು?
ಮೂಲಭೂತವಾಗಿ, ಸ್ವಯಂ ಸಹಾನುಭೂತಿ ಎಂದರೆ, ನಾವು ಆತ್ಮೀಯ ಸ್ನೇಹಿತರಿಗೆ ನೀಡುವಂತಹ ಕಾಳಜಿ ಮತ್ತು ತಿಳುವಳಿಕೆಯೊಂದಿಗೆ ನಮ್ಮನ್ನು ನಾವು ನಡೆಸಿಕೊಳ್ಳುವುದಾಗಿರುತ್ತದೆ. ಸ್ನೇಹಿತರು ಮತ್ತು ಅವರ ಸಮಸ್ಯೆಗಳ ಬಗ್ಗೆ ಹೆಚ್ಚು ಯೋಚಿಸದೆ ಕಿವಿಗೊಡುವುದು ನಮಗೆ ತುಲನಾತ್ಮಕವಾಗಿ ಸುಲಭವಾಗಿರುತ್ತದೆ, ಆದರೆ ಅದೇ ನಮ್ಮ ವಿಷಯಕ್ಕೆ ಬಂದಾಗ, ನಾವು ಅದಕ್ಕೆ ಅರ್ಹರಲ್ಲ ಎಂದು ಭಾವಿಸುತ್ತೇವೆ. ಸ್ವಯಂ ಸಹಾನುಭೂತಿ ಎಂದರೆ ಕಠಿಣ ತೀರ್ಪು ಕೊಡದೆ ನಮ್ಮ ಅಪೂರ್ಣತೆಗಳು, ವೈಫಲ್ಯಗಳು ಮತ್ತು ಹೋರಾಟಗಳನ್ನು ಒಪ್ಪಿಕೊಳ್ಳುವುದಾಗಿರುತ್ತದೆ. ನಮ್ಮ ನ್ಯೂನತೆಗಳಿಗಾಗಿ ನಮ್ಮನ್ನು ನಾವು ಟೀಕಿಸುವ ಬದಲು, ಸ್ವೀಕಾರ ಮತ್ತು ತಿಳುವಳಿಕೆಯನ್ನು ನೀಡುವುದಾಗಿರುತ್ತದೆ. ಈ ಸಹಾನುಭೂತಿಯ ವಿಧಾನವು ಸ್ವಯಂ-ಭೋಗ ಅಥವಾ ತಪ್ಪುಗಳ ಮನ್ನಿಸುವಿಕೆಯ ಬಗ್ಗೆಯಾಗಿರುವುದಿಲ್ಲ, ಬದಲಿಗೆ ಎಲ್ಲರೂ - ನಾವು ಸೇರಿದಂತೆ - ಎದುರಿಸಬೇಕಾದ ಅನಿವಾರ್ಯ ಸವಾಲುಗಳನ್ನು ಗುರುತಿಸುವುದರ ಬಗ್ಗೆಯಾಗಿರುತ್ತದೆ.
ಬೌದ್ಧಧರ್ಮದಲ್ಲಿ ಸ್ವಯಂ ಸಹಾನುಭೂತಿ ಏಕೆ ಮುಖ್ಯ?
ಸಹಾನುಭೂತಿ ನಮ್ಮೊಳಗೇ ಪ್ರಾರಂಭವಾಗುತ್ತದೆ
ಸಾಮಾನ್ಯವಾಗಿ, ಇತರರ ಬಗೆಗಿರುವ ನಿಜವಾದ ಸಹಾನುಭೂತಿಯು ನಮ್ಮನ್ನು ಕುರಿತು ಹೊಂದಿರುವ ಸಹಾನುಭೂತಿಯಿಂದಲೇ ಪ್ರಾರಂಭವಾಗುತ್ತದೆ ಎಂದು ಹೇಳಬಹುದು. ನಾವು ನಮ್ಮ ಮೇಲೆ ಕಠಿಣವಾಗಿದ್ದರೆ, ನಿರಂತರವಾಗಿ ವಿಮರ್ಶಿಸುತ್ತಿದ್ದರೆ, ಇತರರಿಗೆ ನಿಜವಾದ ಸಹಾನುಭೂತಿಯನ್ನು ತೋರಿಸುವುದು ಎಷ್ಟು ಸವಾಲಿನ ಸಂಗತಿ ಎಂದು ಊಹಿಸಿ. ಸ್ವಯಂ ಸಹಾನುಭೂತಿಯ ಅಭ್ಯಾಸದ ಮೂಲಕ, ನಾವು ಸ್ವಾಭಾವಿಕವಾಗಿ ಹೊರಹೊಮ್ಮುವ ದಯೆ ಮತ್ತು ಸೌಮ್ಯ ಮನೋಭಾವವನ್ನು ಬೆಳೆಸಿಕೊಳ್ಳುತ್ತೇವೆ. ಇತರರೊಂದಿಗೆ ಇನ್ನಷ್ಟು ಆಳವಾದ ಸಹಾನುಭೂತಿಯ ಸಂಬಂಧವನ್ನು ನಿರ್ಮಿಸಲು ಸಹಾಯ ಮಾಡುತ್ತೇವೆ.
ಇದು ಭಾವನಾತ್ಮಕ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ
ಜೀವನವು ಏರಿಳಿತಗಳಿಂದ ತುಂಬಿರುತ್ತದೆ, ಮತ್ತು ನಾವು ನಮ್ಮ ಸ್ವಂತ ಬಳಲಿಕೆಗೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಯೋಗಕ್ಷೇಮದಲ್ಲಿ ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಕಷ್ಟದ ಸಮಯದಲ್ಲಿ ಸ್ವಯಂ ಸಹಾನುಭೂತಿಯು, ಸಾಂತ್ವನ ನೀಡುವ ಮುಲಾಮಿನಂತೆ ಕಾರ್ಯನಿರ್ವಹಿಸುತ್ತದೆ. ಇದು ನಮ್ಮ ನೋವನ್ನು ಎದುರಿಸಲು ಹಾಗು ಅದಕ್ಕಾಗಿ ಮುಕ್ತವಾಗಿರಲು ಅನುವು ಮಾಡಿಕೊಡುತ್ತದೆ. ನಾವು ಬಹಳ ಸುಲಭವಾಗಿ ಹಿನ್ನಡೆಗಳಿಂದ ಚೇತರಿಸಿಕೊಳ್ಳುವಂತೆ ಇದು ಸಹಾಯ ಮಾಡುತ್ತದೆ.
ಇದು ನಕಾರಾತ್ಮಕ ಸ್ವ-ಚರ್ಚೆಯನ್ನು ಕಡಿಮೆ ಮಾಡುತ್ತದೆ
ನಮ್ಮಲ್ಲಿ ಅನೇಕರಲ್ಲಿ ಒಬ್ಬ ಆಂತರಿಕ ವಿಮರ್ಶಕ ಇರುತ್ತಾನೆ. ಅವನು ನಮ್ಮನ್ನು ನಿರಂತರವಾಗಿ ನಿರ್ಣಯಿಸುತ್ತಾನೆ ಮತ್ತು ಕೀಳಾಗಿ ಕಾಣುತ್ತಾನೆ. ಕೆಲವು ಜನರಲ್ಲಿ, ಈ ಆಂತರಿಕ ವಿಮರ್ಶಕ ಎಂದಿಗೂ ಬಾಯಿ ಮುಚ್ಚುವುದೇ ಇಲ್ಲ! ಇದು ಅಷ್ಟು ಗಂಭೀರವಾಗಿ ಕಾಣಿಸದಿರಬಹುದು, ಆದರೆ ಈ ನಕಾರಾತ್ಮಕ ಸ್ವ-ಚರ್ಚೆ ನಂಬಲಾಗದಷ್ಟು ಹಾನಿಕಾರಕವಾಗಿರುತ್ತದೆ. ಇದು ಅಸಮರ್ಪಕತೆ ಮತ್ತು ಕಡಿಮೆ ಸ್ವಾಭಿಮಾನದ ಭಾವನೆಗಳಿಗೆ ಕಾರಣವಾಗುತ್ತದೆ. ಸ್ವಯಂ ಸಹಾನುಭೂತಿಯನ್ನು ಅಭ್ಯಾಸ ಮಾಡುವ ಮೂಲಕ - ಉದಾಹರಣೆಗೆ ನಮ್ಮ "ಬುದ್ಧ-ಸ್ವಭಾವ"ವನ್ನು ಗುರುತಿಸುವ ಮೂಲಕ, ನಾವೆಲ್ಲರೂ ಬುದ್ಧರಾಗುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬ ಅರಿವನ್ನು ಗುರುತಿಸುವ ಮೂಲಕ, ನಾವು ಈ ಆಂತರಿಕ ವಿಮರ್ಶಕನನ್ನು ಶಾಂತಗೊಳಿಸಬಹುದು. ಅಲ್ಲದೇ, ಕಠಿಣ ತೀರ್ಪುಗಳ ಬದಲಿಗೆ ಬೆಂಬಲ ಮತ್ತು ಪ್ರೋತ್ಸಾಹದಾಯಕ ಆಲೋಚನೆಗಳನ್ನು ಬೆಳೆಸಬಹುದು. ಈ ಬದಲಾವಣೆಯು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ನಮ್ಮ ಮನಸ್ಸಿನಲ್ಲಿ ಹೆಚ್ಚು ಸಕಾರಾತ್ಮಕವಾದ ಸ್ವ-ಚಿತ್ರಣವನ್ನು ರೂಪಿಸುತ್ತದೆ.
ಇದು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ಕೆಲವರು ಸ್ವಯಂ ಸಹಾನುಭೂತಿಯನ್ನು ಸ್ವಾರ್ಥಪರತೆ ಎಂದು ಭಾವಿಸುತ್ತಾರೆ, ಅಂದರೆ ನಾವು ಮಾಡುವುದೆಲ್ಲವೂ ನಮ್ಮನ್ನು ನಾವು ನೋಡಿಕೊಳ್ಳುವುದು, ನಮ್ಮ ತಪ್ಪುಗಳಿಗೆ ಜವಾಬ್ದಾರಿಯನ್ನು ತಪ್ಪಿಸುವುದು, ಅಥವಾ ನಮ್ಮ ನ್ಯೂನತೆಗಳನ್ನು ನಿರ್ಲಕ್ಷಿಸುವುದು. ಆದರೆ ವಾಸ್ತವದಲ್ಲಿ, ಇದಕ್ಕೆ ವಿರುದ್ಧವಾಗಿ, ಇದು ನಮ್ಮ ತಪ್ಪುಗಳು ಮತ್ತು ಅಪೂರ್ಣತೆಗಳನ್ನು ಒಪ್ಪಿಕೊಳ್ಳಲು ಸುರಕ್ಷಿತ ಸ್ಥಳವನ್ನು ಒದಗಿಸುತ್ತದೆ. ಆಗ ಮಾತ್ರ ನಾವು ನಿಜವಾಗಿಯೂ ಅವುಗಳಿಂದ ಕಲಿಯಲು ಮತ್ತು ಬೆಳೆಯಲು ಸಾಧ್ಯ. ಕೆಲವರು ಕಠಿಣ ಸ್ವ-ವಿಮರ್ಶೆಯಿಂದ ಪ್ರಯೋಜನ ಪಡೆಯಬಹುದು, ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ದಯೆ ಮತ್ತು ತಿಳುವಳಿಕೆಯ ವಿಧಾನವೇ ಸ್ವಯಂ ಸುಧಾರಣೆಗೆ ಹೆಚ್ಚು ಕಾರಣವಾಗುತ್ತದೆ.

ಸ್ವಯಂ ಸಹಾನುಭೂತಿಯನ್ನು ಹೇಗೆ ಅಭ್ಯಾಸ ಮಾಡುವುದು
ನಿಮ್ಮ ದುಃಖವನ್ನು ಒಪ್ಪಿಕೊಳ್ಳಿ
ಸ್ವಯಂ ಸಹಾನುಭೂತಿಯನ್ನು ಅಭ್ಯಾಸ ಮಾಡುವಲ್ಲಿ ನಾವು ಮಾಡಬೇಕಾದ ಮೊದಲ ಕೆಲಸವೆಂದರೆ, ನಾವು ಬಳಲುತ್ತಿದ್ದೇವೆ ಎಂದು ಒಪ್ಪಿಕೊಳ್ಳುವುದು. ಇದು ಸರಳವಾಗಿ ಕಾಣಿಸಬಹುದು, ಆದರೆ ನಾವು ಕಷ್ಟಪಡುತ್ತಿದ್ದೇವೆ ಎಂದು ಒಪ್ಪಿಕೊಳ್ಳುವುದೇ ಕೆಲವೊಮ್ಮೆ ಸವಾಲಾಗಬಹುದು, ವಿಶೇಷವಾಗಿ ನಾವು ಬಲಶಾಲಿಯಾಗಿರಬೇಕು ಅಥವಾ ಯಾವಾಗಲೂ ನಿಯಂತ್ರಣದಲ್ಲಿರಬೇಕು ಎಂದು ಭಾವಿಸಿದಾಗ. ಆದ್ದರಿಂದ, ಮೊದಲನೆಯದಾಗಿ, ತೀರ್ಪು ನೀಡದೆ, ಮಾನಸಿಕವಾಗಲಿ, ದೈಹಿಕವಾಗಲಿ ನಿಮ್ಮ ನೋವನ್ನು ಗುರುತಿಸುವಂತೆ ನಿಮ್ಮನ್ನು ಅನುಮತಿಸಿ.
ನಿಮ್ಮನ್ನು ದಯೆಯಿಂದ ನಡೆಸಿಕೊಳ್ಳಿ
ಕಠಿಣ ಸಮಯವನ್ನು ಎದುರಿಸುತ್ತಿರುವ ಆಪ್ತ ಸ್ನೇಹಿತರಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ಊಹಿಸಿ. ನೀವು ಯಾವ ಪದಗಳನ್ನು ಬಳಸುತ್ತೀರಿ? ನೀವು ಹೇಗೆ ಬೆಂಬಲ ನೀಡುತ್ತೀರಿ? ಈಗ, ಅದೇ ದಯೆ ಮತ್ತು ತಿಳುವಳಿಕೆಯನ್ನು ನಿಮ್ಮತ್ತ ವಿಸ್ತರಿಸಲು ಪ್ರಯತ್ನಿಸಿ. ಸೌಮ್ಯವಾದ, ಬೆಂಬಲ ನೀಡುವ ಭಾಷೆಯಲ್ಲಿ ನಿಮ್ಮೊಂದಿಗೆ ಮಾತನಾಡಿ ಮತ್ತು ನಿಮಗೆ ಬೇಕಾದ ಸಾಂತ್ವನವನ್ನು ನೀಡಿ.
ನಿಮ್ಮ ಸಾಮಾನ್ಯ ಮಾನವೀಯತೆಯನ್ನು ಗುರುತಿಸಿ
ಪ್ರತಿಯೊಬ್ಬರೂ ದುಃಖವನ್ನು ಅನುಭವಿಸುತ್ತಾರೆ ಎಂಬುದನ್ನು ನೆನಪಿಡಿ; ಎಂದಿಗೂ ತಪ್ಪುಗಳನ್ನು ಮಾಡದವರು ಯಾರೂ ಇಲ್ಲ. ಅದು ಮಾನವನಾಗಿರುವುದರ ಒಂದು ಭಾಗ. ನಿಮ್ಮ ಹೋರಾಟಗಳಲ್ಲಿ ನೀವು ಒಬ್ಬಂಟಿಯಾಗಿಲ್ಲ ಎಂಬುದನ್ನು ಗುರುತಿಸುವ ಮೂಲಕ, ನೀವು ಇತರರೊಂದಿಗೆ ಹೆಚ್ಚು ಸಂಪರ್ಕ ಹೊಂದುತ್ತೀರಿ ಮತ್ತು ನಿಮ್ಮ ಅನುಭವಗಳಲ್ಲಿ ಒಂಟಿತನ ಕಡಿಮೆ ಆಗುತ್ತದೆ.
ಸಚೇತನವಾದ ಅರಿವನ್ನು ಅಭ್ಯಾಸ ಮಾಡಿ
ನಿಮ್ಮ ಭಾವನೆಗಳಿಂದ ವಶವಾಗದೆ ಅವುಗಳೊಂದಿಗೆ ಪ್ರಸ್ತುತವಾಗಿರಿ. ನಿಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ಕುತೂಹಲ ಮತ್ತು ಮುಕ್ತತೆಯಿಂದ ಗಮನಿಸಿ, ಅವುಗಳನ್ನು ಬದಲಾಯಿಸಲು ಅಥವಾ ನಿಗ್ರಹಿಸಲು ಪ್ರಯತ್ನಿಸದೆ ಹಾಗೆಯೇ ಬಿಡಿ. ಈ ಜಾಗರೂಕ ವಿಧಾನವು ನಿಮಗೆ ನೆಲೆಗೊಳ್ಳಲು ಮತ್ತು ಆಂತರಿಕ ಶಾಂತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
ಮುಕ್ತಾಯ
ಬೌದ್ಧ ಆಚರಣೆಯಲ್ಲಿ ಸ್ವಯಂ ಸಹಾನುಭೂತಿ ಕೇವಲ ಒಂದು ಐಷಾರಾಮಿ ಅಥವಾ ಆನಂತರದ ಚಿಂತನೆಯಲ್ಲ; ಇದು ಕರುಣಾಳು ಜೀವನದ ಅತ್ಯಗತ್ಯ ಅಂಶವಾಗಿದೆ. ಸ್ವಯಂ ಸಹಾನುಭೂತಿಯನ್ನು ಬೆಳೆಸಿಕೊಳ್ಳುವ ಮೂಲಕ, ನಾವು ನಮ್ಮ ಸ್ವಂತ ಯೋಗಕ್ಷೇಮಕ್ಕೆ ಮತ್ತು ಇತರರಿಗಾಗಿ ಇರುವ ನಮ್ಮ ಸಾಮರ್ಥ್ಯಕ್ಕೆ ಘನವಾದ ಅಡಿಪಾಯವನ್ನು ನಿರ್ಮಿಸುತ್ತೇವೆ. ನೆನಪಿಡಿ, ನಿಮ್ಮ ಬಗ್ಗೆ ದಯೆ ತೋರುವುದು ಸ್ವಾರ್ಥವಲ್ಲ; ಅದು ಹೆಚ್ಚು ಕರುಣಾಳು, ಚಿಂತನಶೀಲ ಮತ್ತು ತೃಪ್ತಿಕರ ಜೀವನದತ್ತ ಆಗಿರುವ ಒಂದು ಪ್ರಮುಖ ಹೆಜ್ಜೆ. ಆದ್ದರಿಂದ, ಮೇಲಿನ ಅಂಶಗಳನ್ನು ಪರಿಶೀಲಿಸಲು ಈಗಲೇ ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ನಿಮಗೆ ಅರ್ಹವಾದ ಸಹಾನುಭೂತಿಯನ್ನು ನೀಡಿರಿ.