ಇತರರಿಗೆ ಸಹಾಯ ಮಾಡುವ 11 ವಿಧಾನಗಳು

11 ways to help others

ಪ್ರತಿನಿತ್ಯ ಎಷ್ಟೋ ಜನರು ಮತ್ತು ಪ್ರಾಣಿಗಳು ನರಳುತ್ತಿರುತ್ತಾರೆ. ಅವರಿಗೆ ಸಹಾಯ ಮಾಡಲು ಹಲವು ಮಾರ್ಗಗಳಿವೆ, ಆದರೆ ಇದು ಅವರ ಪರಿಸ್ಥಿತಿಯನ್ನು ಗುರುತಿಸಿ, ಸಹಾಯ ಮಾಡುವ ಅತ್ಯುತ್ತಮ ಮಾರ್ಗವನ್ನು ಅರ್ಥಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಸಹಾನುಭೂತಿ ಮತ್ತು ಕೌಶಲ್ಯಪೂರ್ಣತೆ ಸಾಕಾಗುವುದಿಲ್ಲ - ನಾವು ನಮ್ಮ ಸಮಯದೊಂದಿಗೆ ಉದಾರವಾಗಿರಬೇಕು ಮತ್ತು ಸ್ವಯಂ ಶಿಸ್ತು, ತಾಳ್ಮೆ, ಪರಿಶ್ರಮ, ಏಕಾಗ್ರತೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿರಬೇಕು. ಇತರರಿಗೆ ಸಹಾಯ ಮಾಡುವ ಹನ್ನೊಂದು ಮಾರ್ಗಗಳು ಇಲ್ಲಿವೆ. ಇವು ಬೇಕಾದವರಿಗೆ ಸಹಾಯ ಮಾಡುವುದಲ್ಲದೆ, ನಮ್ಮ ಒಂಟಿತನದಿಂದ ಹೊರಬರಲು ಮತ್ತು ನಮ್ಮ ಜೀವನವನ್ನು ಅರ್ಥಪೂರ್ಣವಾಗಿಸಲು ಸಹಾಯ ಮಾಡುತ್ತವೆ: 

1. ಬಳಲುತ್ತಿರುವವರಿಗೆ ಕಾಳಜಿ ತೋರಿಸಿ

ಅನಾರೋಗ್ಯ, ಅಂಗವಿಕಲತೆ ಅಥವಾ ನೋವಿನಿಂದ ಬಳಲುತ್ತಿರುವವರನ್ನು ನಾವು ನೋಡಿಕೊಳ್ಳಬೇಕು. ಭಾರವಾದ ಹೊರೆ ಅಥವಾ ಕಠಿಣವಾದ ಕೆಲಸದಿಂದ ಯಾರಾದರೂ ಕಷ್ಟಪಡುತ್ತಿರುವುದನ್ನು ನಾವು ನೋಡಿದರೆ, ನಾವು ಮುಂದೆ ಬಂದು, ಅವರ ಹೊರೆಯನ್ನು ಹಗುರಮಾಡಬೇಕು.

2. ಕಷ್ಟಕರ ಸಂದರ್ಭಗಳಿಂದ ಹೊರಬರಲು ಪರದಾಡುತ್ತಿರುವವರಿಗೆ ಮಾರ್ಗದರ್ಶನ ನೀಡಿ 

ಕಷ್ಟಕರ ಸಂದರ್ಭಗಳಲ್ಲಿ ಏನು ಮಾಡಬೇಕೆಂದು ತೋಚದೇ ಇದ್ದು ಗೊಂದಲದಲ್ಲಿರುವವರಿಗೆ, ಅವರು ಕೇಳಿದಲ್ಲಿ ನಾವು ಸಲಹೆ ನೀಡಬೇಕು ಅಥವಾ ಕನಿಷ್ಠಪಕ್ಷ ಅವರು ಹೊಂಚಿಕೊಳ್ಳಲು ಇಚ್ಛಿಸುವುದನ್ನು ಕಿವಿಗೊಟ್ಟು ಕೇಳಬೇಕು. ನಮ್ಮ ನಾಯಿ ಅಥವಾ ಬೆಕ್ಕು ಕೋಣೆಯಲ್ಲಿ ಸಿಲುಕಿಕೊಂಡಿದ್ದರೆ, ಅವನ್ನು ಹೊರಬಿಡಲು ನಾವು ಬಾಗಿಲು ತೆರೆಯುತ್ತೇವೆ. ಹಾಗೆಯೇ ಒಂದು ನೊಣವು ಕಿಟಕಿಯ ಸುತ್ತಮುತ್ತ ಹಾರುತ್ತಿದ್ದರೆ, ನಾವು ಇದೇ ರೀತಿ ನಡೆದುಕೊಳ್ಳುತ್ತೇವೆ. ಆ ನೊಣವು ನಮ್ಮ ಕೋಣೆಯಲ್ಲಿ ಇರಲು ಬಯಸುವುದಿಲ್ಲ; ಅದು ಹೊರಹೋಗಲು ಬಯಸುತ್ತದೆ, ಆದ್ದರಿಂದ ಅದನ್ನು ಹೊರಬಿಡಲು ನಾವು ಕಿಟಕಿಯನ್ನು ತೆರೆಯುತ್ತೇವೆ. 

3. ನಮಗೆ ಸಹಾಯ ಮಾಡಿದವರ ದಯೆಯನ್ನು ಪ್ರತಿಯಾಗಿ ನೀಡಿ 

ಜಗತ್ತನ್ನು ನಡೆಸುವಲ್ಲಿ ಕಷ್ಟಪಡುವವರೆಲ್ಲರ ಕೆಲಸಗಳ ಬೆಲೆಯನ್ನು ಅರ್ಥಮಾಡಿಕೊಂಡು ಶ್ಲಾಘಿಸುವುದು ಬಹಳ ಮುಖ್ಯವಾಗಿದೆ ಮತ್ತು ನಮ್ಮ ಒಳಿತಿಗಾಗಿ ಬಹಳಷ್ಟು ಉತ್ತಮ ಕಾರ್ಯಗಳನ್ನು ನಿರ್ವಹಿಸುವವರಿಗಾಗಿ, ಉದಾಹರಣೆಗೆ, ನಮ್ಮ ಹೆತ್ತವರಿಗಾಗಿ, ಸಹಾಯ ಮಾಡಲು ಪ್ರಯತ್ನಿಸಿ. ಇದು ಪ್ರಾಮಾಣಿಕವಾದ ಕೃತಜ್ಞತೆಯ ಭಾವನೆಯಾಗಿರಬೇಕೇ ಹೊರತು, ತಪ್ಪಿತಸ್ಥ ಭಾವನೆ ಅಥವಾ ಬಾಧ್ಯತೆಯ ಭಾವನೆಯಲ್ಲ. 

4. ಭಯಭೀತರಾದವರಿಗೆ ಸಾಂತ್ವನ ನೀಡಿ ಮತ್ತು ಅವರನ್ನು ರಕ್ಷಿಸಿ 

ಭಯಭೀತರಾಗಿರುವ ಜನರು ಮತ್ತು ಪ್ರಾಣಿಗಳನ್ನು ಸಾಂತ್ವನಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಯಾರಾದರೂ ಒಂದು ಅಪಾಯಕಾರಿ ಸ್ಥಳಕ್ಕೆ ಹೋಗಬೇಕಾದಲ್ಲಿ, ಅಲ್ಲಿ ಅವರು ಘಾಸಿಗೊಳ್ಳುವ ಸಾಧ್ಯತೆಯಿದ್ಧಲ್ಲಿ, ನಾವು ಅವರನ್ನು ರಕ್ಷಿಸಲು ಅವರೊಂದಿಗೆ ಹೋಗಲು ಮುಂದಾಗಬೇಕು. ಹಿಂಸಾತ್ಮಕ ಕಾಲದಿಂದ ತಪ್ಪಿಸಿಕೊಂಡ ನಿರಾಶ್ರಿತರಿಗೆ, ನಾವು ಸುರಕ್ಷತೆಯನ್ನು ನೀಡಬೇಕು ಮತ್ತು ನೆಲೆಗೊಳ್ಳಲು ಸಹಾಯ ಮಾಡಬೇಕು. ವಿಶೇಷವಾಗಿ ಯುದ್ಧ ಅಥವಾ ಶೋಷಣೆಯಿಂದ ನೋವನ್ನು ಅನುಭವಿಸಿದವರಿಗೆ, ಅವರ ಭಾವನಾತ್ಮಕ ಯಾತನೆಯನ್ನು ನಿವಾರಿಸಲು ನಮ್ಮ ಸಹಾನುಭೂತಿ ಮತ್ತು ಸಹಾಯದ ಅಗತ್ಯವಿರುತ್ತದೆ. 

5. ಸಹಿಸಲಾಗದಷ್ಟು ದುಃಖದಲ್ಲಿರುವವರನ್ನು ಸಮಾಧಾನಪಡಿಸಿ 

ವಿಚ್ಛೇದನೆ ಅಥವಾ ಪ್ರೀತಿಪಾತ್ರರ ಮರಣದಿಂದ ಜನರು ದುಃಖದಲ್ಲಿರುವಾಗ, ನಾವು ಅವರನ್ನು ಸಹಾನುಭೂತಿಯಿಂದ ಸಾಂತ್ವನಗೊಳಿಸಲು ಪ್ರಯತ್ನಿಸಬೇಕು. ನಾವು ಎಂದಿಗೂ ಅವರನ್ನು “ಅಯ್ಯೋ ಬಡಪಾಯಿ ಜೀವವೇ” ಎಂದು ಮರುಕಪಡುವ ರೀತಿಯಲ್ಲಿ ನೋಡಬಾರದು, ಬದಲಿಗೆ ನಮ್ಮನ್ನು ಅವರ ಜಾಗದಲ್ಲಿ ಭಾವಿಸಿ, ಅವರ ನೋವನ್ನು ಹಂಚಿಕೊಳ್ಳಬೇಕು. 

6. ಬಡವರಿಗೆ ಭೌತಿಕ ವಸ್ತುಗಳನ್ನು ನೀಡುವ ಮೂಲಕ ನೆರವು ನೀಡಿ 

ದಾನಕ್ಕಾಗಿ ದೇಣಿಗೆ ನೀಡುವುದು ಒಳ್ಳೆಯದು, ಆದರೆ ನಾವು ಬೀದಿಗಳಲ್ಲಿ ನೋಡುವ ಭಿಕ್ಷುಕರಿಗೂ ಸಹ ದಾನ ಮಾಡುವುದು ಮುಖ್ಯ. ನಾವು ಮುಗುಳ್ನಕ್ಕು, ಗೌರವದಿಂದ ನಡೆದುಕೊಳ್ಳುವುದನ್ನು ಬಿಡಿ, ನಾವು ನೋಡಲು ಸಹ ಬಯಸದೇ ಇರುವಂತಹ ಬೀದಿಪಾಲಾದ, ಕೊಳಕಾಗಿ, ಅಂದವಾಗಿ ಕಾಣದೇ ಇರುವ ಭಿಕ್ಷುಕರಿಗೆ ಕೈಚಾಚಲು, ನಾವು ನಮ್ಮಲ್ಲಿರುವ ಹಿಂಜರಿಕೆಯನ್ನು ತೊರೆಯಬೇಕು. ಒಮ್ಮೆ ಊಹಿಸಿಕೊಳ್ಳಿ, ಆ ಬೀದಿಪಾಲಾದ ವ್ಯಕ್ತಿಯು ನಿಮ್ಮ ತಾಯಿ ಅಥವಾ ಮಗನಾಗಿದ್ದರೆ, ನೀವು ಕಲ್ಲು ಹೃದಯದಿಂದ ಅವರನ್ನು ಕಾಲ ಕೆಳಗಿನ ಕಸದ ಹಾಗೆ ಕಂಡು, ಮೂಗು ತಿರುಗಿಸಿ ಹೋಗುತ್ತಿದ್ದರೇ?

7. ನಮ್ಮೊಂದಿಗೆ ಬಾಂಧ್ಯವದಲ್ಲಿರುವವರಿಗೆ ಧರ್ಮವನ್ನು ಪರಿಚಯಿಸಿ 

ನಮ್ಮೊಂದಿಗೆ ಯಾವಾಗಲೂ ಇರಲು ಬಯಸುವವರಿಗಾಗಿ ಸಹಾಯಮಾಡಲು ನಾವು ಪ್ರಯತ್ನಿಸಬೇಕು. ಅವರು ನಮ್ಮ ಮೇಲೆ ಅವಲಂಬಿತರಾಗಬಾರದು - ಆದರೆ ಅವರು ನಮ್ಮೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರೆ ಮತ್ತು ಅವರು ಆಸಕ್ತಿ ತೋರಿಸಿದ್ದಲ್ಲಿ, ನಾವು ಅವರಿಗೆ ಸಂತೋಷವನ್ನು ಸಾಧಿಸುವ ಮತ್ತು ಇತರರಿಗೆ ಸಹಾಯ ಮಾಡುವ ಮೂಲಭೂತ ಬೌದ್ಧ ವಿಧಾನಗಳನ್ನು ಕಲಿಸುವುದರ ಮೂಲಕ ಅವರಿಗೆ ಸಹಾಯ ಮಾಡಬಹುದು. ಇದರ ಉದ್ದೇಶ ಜನರನ್ನು ಪರಿವರ್ತಿಸುವುದಾಗಿರುವುದಿಲ್ಲ ಬದಲಿಗೆ ಅವರಿಗೆ ಸಾಮಾನ್ಯ ಸಹಾಯ ಮತ್ತು ಸಲಹೆಗಳನ್ನು ನೀಡುವುದಾಗಿರುತ್ತದೆ. ಈ ರೀತಿಯಾಗಿ, ನಾವು ನಮ್ಮ ಸಂಬಂಧಗಳನ್ನು ಅರ್ಥಪೂರ್ಣಗೊಳಿಸಬಹುದು. 

8. ಇತರರ ಇಚ್ಛೆಗೆ ಅನುಗುಣವಾಗಿ ಅವರಿಗೆ ಸಹಾಯ ಮಾಡಿ 

ಇತರರಿಗೆ ಸೂಕ್ತವಾಗುವ ರೀತಿಯಲ್ಲಿ ನಾವು ಅವರಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು. ನಮಗೊಬ್ಬರು ಏನಾದರೂ ಹೇಳಿಕೊಡಲು ವಿನಂತಿಸಿದರೆ, ಅದು ನಮಗೆ ಅಷ್ಟಾಗಿ ಇಷ್ಟವಿಲ್ಲದಿದ್ದರೂ, ನಮಗೆ ಸಾಧ್ಯವಾಗಿದ್ದಲ್ಲಿ ಮತ್ತು ಅವರಿಗೆ ಸೂಕ್ತವಾಗಿದ್ದಲ್ಲಿ, ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇದು ಹೇಗಿದೆ ಎಂದರೆ, ನಾವು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ಗೆ ಹೋದರೆ, ಕೇವಲ ನಾವು ಇಷ್ಟಪಡುವ ಆಹಾರವನ್ನು ಸೇವಿಸುವಂತೆ ಯಾವಾಗಲೂ ಒತ್ತಾಯಿಸುವುದು ಸ್ವಾರ್ಥ ಮತ್ತು ಅಸಭ್ಯವಾಗಿರುತ್ತದೆ. ಕೆಲವೊಮ್ಮೆ ಇತರರು ಇಷ್ಟಪಡುವುದನ್ನು ನಾವು ಒಪ್ಪಿಕೊಳ್ಳಬೇಕು. ಅದೇ ರೀತಿ, ಒಂದು ಸಂಬಂಧದಲ್ಲಿ, ನಮ್ಮ ಬಯಕೆ ಮತ್ತು ಅವರ ಬಯಕೆಯ ನಡುವೆ ನಾವು ರಾಜಿ ಮಾಡಿಕೊಳ್ಳಬೇಕು. ನಮ್ಮ ಆಸೆ-ಆಕಾಂಕ್ಷೆಗಳಂತೆಯೇ ಯಾವಾಗಲೂ ನಡೆಯುವುದು ಅನಿವಾರ್ಯವಲ್ಲ.

9. ಪ್ರಾಮಾಣಿಕವಾಗಿ ಜೀವನ ನಡೆಸುವವರನ್ನು ಪ್ರೋತ್ಸಾಹಿಸಿ 

ಪ್ರಾಮಾಣಿಕವಾದ ಜೀವನವನ್ನು, ಅಂದರೆ ಸಕಾರಾತ್ಮಕ ಮಾರ್ಗಗಳನ್ನು ಅನುಸರಿಸಿ, ಉತ್ತಮ ಕಾರ್ಯವನ್ನು ಮಾಡುವವರನ್ನು, ದುರಹಂಕಾರಿಗಳಾಗಿ ಮಾಡದಂತೆ ಎಚ್ಚರಿಕೆ ವಹಿಸಿ, ಪ್ರೋತ್ಸಾಹಿಸುವುದರ ಮೂಲಕ ಅವರಿಗೆ ಸಹಾಯಮಾಡಬಹುದು. ಸ್ವಾಭಿಮಾನದ ಕೊರತೆಯಿರುವವರೊಂದಿಗೆ ವ್ಯವಹರಿಸುವಾಗ ಇದು ವಿಶೇಷವಾಗಿ ಸಹಾಯಕವಾಗಿರುತ್ತದೆ. ಉತ್ತಮ ಗುಣಗಳನ್ನು ಹೊಂದಿರುವವರು ಈಗಾಗಲೇ ಅಹಂಕಾರಿಗಳಾಗಿದ್ದರೆ, ನಾವು ಅವರ ಬಗ್ಗೆ ಇತರರಿಗೆ ಹೊಗಳಬಹುದು, ಆದರೆ ಅವರ ಮುಂದೆ ಅಲ್ಲ. ಇತರರಿಗೆ ಉಪಕಾರಿಯಾಗವಂತೆ ಅವರ ಸಾಮರ್ಥ್ಯಗಳನ್ನು ಬಳಸಲು ನಾವು ಅವರನ್ನು ಇನ್ನೂ ಪ್ರೋತ್ಸಾಹಿಸಬಹುದು, ಆದರೆ ಅವರ ಹೆಮ್ಮೆಯನ್ನು ತಗ್ಗಿಸುವಂತೆ ಸಹಾಯಮಾಡಲು, ಅವರು ಮಾಡುವ ತಪ್ಪುಗಳನ್ನು ಗೋಚರಿಸಬಹುದು.

10. ವಿನಾಶಕಾರಿ ಜೀವನವನ್ನು ನಡೆಸುವವರಿಗೆ ರಚನಾತ್ಮಕ ನಡವಳಿಕೆಗಳನ್ನು ಕಲಿಸಿ 

ಅತೀವವಾದ ವಿನಾಶಕಾರಿ, ನಕಾರಾತ್ಮಕ ಜೀವನವನ್ನು ನಡೆಸುವವರನ್ನು ನಾವು ಎದುರಿಸಿದ್ದಲ್ಲಿ, ನಾವು ಅವರನ್ನು ಎಂದಿಗೂ ತಳ್ಳಿಹಾಕಬಾರದು, ತಿರಸ್ಕರಿಸಬಾರದು ಅಥವಾ ಖಂಡಿಸಬಾರದು. ಜನರನ್ನು ಟೀಕಿಸುವ ಬದಲು, ಅವರು ಬದಲಾಗಲು ಸಮ್ಮತಿಸಿದರೆ, ಅವರಿಗೆ ನಕಾರಾತ್ಮಕ ನಡವಳಿಕೆಯನ್ನು ಜಯಿಸುವ ಮಾರ್ಗಗಳನ್ನು ತೋರಿಸಲು ನಾವು ಪ್ರಯತ್ನಿಸಬೇಕು. 

11. ಉಳಿದೆಲ್ಲವೂ ವಿಫಲವಾದಾಗ, ಯಾವುದಾದರೊಂದು ಅಸಾಧಾರಣ ಸಾಮರ್ಥ್ಯವನ್ನು ಬಳಸಿ  

ನಮ್ಮಲ್ಲಿ ಕೆಲವರು ಅಸಾಮಾನ್ಯ ಸಾಮರ್ಥ್ಯಗಳನ್ನು ಹೊಂದಿದ್ದೇವೆ. ನಾವು ಸಮರ ಕಲೆಗಳ ತಜ್ಞರಾಗಿರಬಹುದು, ಆದರೆ ಇತರರ ಮುಂದೆ ತೋರಿಕೊಳ್ಳಲು ಇಷ್ಟಪಡದೇ ಇರಬಹುದು. ಆದರೆ ಯಾರಾದರೂ ಆಕ್ರಮಣಕ್ಕೆ ಒಳಗಾಗುವುದನ್ನು ನೋಡಿದರೆ, ಆಕ್ರಮಣಕಾರರನ್ನು ನಿಗ್ರಹಿಸಲು ಬೇರೆ ಯಾವುದೇ ಮಾರ್ಗವಿಲ್ಲದಿದ್ದರೆ, ನಾವು ನಮ್ಮ ಸಾಮರ್ಥ್ಯಗಳನ್ನು ಬಳಸಬೇಕು. 

ಇತರರಿಗೆ ಉಪಕಾರಿಯಾಗಲು ಬಹಳಾ ಮಾರ್ಗಗಳಿವೆ. ಇಲ್ಲಿನ ಕೌಶಲ್ಯವು, ಹೇಗೆ ಸಹಾಯ ಮಾಡಬೇಕು ಮತ್ತು ಯಾರಿಗೆ ಏನು ಸಹಾಯ ಮಾಡಬೇಕು ಎಂಬುದರ ಜೊತೆಗೆ ಅಂತಹ ಸಹಾಯವನ್ನು ಯಾವಾಗ ನೀಡಬೇಕು ಮತ್ತು ಯಾವಾಗ ಅವರು ತಮಗೆ ತಾವೇ ಸಹಾಯ ಮಾಡಿಕೊಳ್ಳಲು ಕಲಿಯಲು ಪ್ರೇರೇಪಿಸುವಂತೆ, ಒಂದು ಹೆಜ್ಜೆ ಹಿಂದೆಯಿಡಬೇಕು ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಇದೆ. ದೈಹಿಕವಾಗಿ ಅಥವಾ ಮಾನಸಿಕವಾಗಿ ಬಳಲುತ್ತಿರುವವರಿಗೆ ನಮ್ಮ ತಕ್ಷಣದ ಆರೈಕೆಯ ಅಗತ್ಯವಿರುತ್ತದೆ. ಆದರೆ ಸಹಾಯವನ್ನು ಸರಿಯಾದ ಪ್ರಮಾಣದಲ್ಲಿ ನೀಡಬೇಕು – ಹೆಚ್ಚಲ್ಲ ಕಡಿಮೆಯಲ್ಲ. ದುರದೃಷ್ಟವಂತರಿಗೆ, ತಮ್ಮ ಕಾಲಿನ ಮೇಲೆ ಮತ್ತೊಮ್ಮೆ ನಿಲ್ಲಲು ನಾವು ಸಹಾಯ ಮಾಡಬೇಕಾಗಿದೆ ಹೌದು, ಆದರೆ ದೀರ್ಘಕಾಲೀನವಾಗಿರುವ ಉತ್ತಮ ಸಹಾಯವೆಂದರೆ, ಇತರರು ನಡೆಯಲು ಮತ್ತು ತಮ್ಮನ್ನು ತಾವೇ ನೋಡಿಕೊಳ್ಳಲು ಸಾಧ್ಯವಾಗುವಂತೆ ಪರಿಸ್ಥಿತಿಗಳು ಮತ್ತು ಸಾಧನಗಳನ್ನು ಒದಗಿಸುವುದಾಗಿರುತ್ತದೆ.

Top