ನಾವು ಜ್ಞಾನೋದಯಕ್ಕಾಗಿ ಶ್ರಮಿಸುತ್ತಿರುವಾಗ, ಬುದ್ಧನಾಗಿ ಇತರರಿಗೆ ಸಹಾಯ ಮಾಡಲು ನಮಗೆ ಅಗತ್ಯವಿರುವ ಎಲ್ಲಾ ಉತ್ತಮ ಗುಣಗಳನ್ನು ಪ್ರಬುದ್ಧತೆಗೆ ತರಲು ನಾವು ಆರು ದೂರಗಾಮಿ ವರ್ತನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಆದರೆ ಇತರರೆಲ್ಲರೂ ತಮ್ಮದೇ ಆದ ಉತ್ತಮ ಗುಣಗಳನ್ನು ಪ್ರಬುದ್ಧತೆಗೆ ತರುವಂತೆ ಸಹಾಯ ಮಾಡಲು, ಮೊದಲು ನಾವು ಅವರನ್ನು ನಮ್ಮ ಸಕಾರಾತ್ಮಕ ಪ್ರಭಾವದ ಅಡಿಯಲ್ಲಿ ಒಗ್ಗೂಡಿಸಬೇಕಾಗಿದೆ. ಇದನ್ನು ನಾಲ್ಕು ಹಂತಗಳಲ್ಲಿ, ಪರಿಣಾಮಕಾರಿಯಾಗಿ ಹೇಗೆ ಸಾಧಿಸಹುದು ಎಂದು ಬುದ್ಧ ಕಲಿಸಿದರು:
1. ಔದಾರ್ಯದಿಂದ ಕೂಡಿರುವುದು
ನಮಗೆ ಸಾಧ್ಯವಾದಲ್ಲೆಲ್ಲಾ, ನಾವು ಇತರರೊಂದಿಗೆ ಉದಾರವಾಗಿರಬೇಕು. ಯಾರಾದರೂ ನಮ್ಮನ್ನು ಭೇಟಿ ಮಾಡಲು ಬಂದಾಗ, ನಾವು ಅವರಿಗೆ ಉಪಹಾರವನ್ನು ನೀಡುತ್ತೇವೆ; ನಾವು ಊಟಕ್ಕಾಗಿ ಹೊರಗೆ ಹೋದರೆ, ಅವರನ್ನು ಸತ್ಕರಿಸಲು, ಅವರ ಖರ್ಚುಗಳಿಗೆ ಹಣ ನೀಡಲು ಬಯಸಬಹುದು. ಉದಾರಿಯಾಗಿರುವುದು ಎಂದರೆ ಯಾರಿಗಾದರೂ ಏನನ್ನಾದರೂ ನೀಡುವುದು ಎಂದರ್ಥವಲ್ಲ. ನಮ್ಮ ಸಮಯವನ್ನು ಉದಾರವಾಗಿ ಬಳಸುವುದು ನಿಜವಾಗಿಯೂ ಮುಖ್ಯ. ಒಬ್ಬರ ಬಗ್ಗೆ ತಿಳಿದುಕೊಳ್ಳಲು, ಅವರ ಸಮಸ್ಯೆಗಳನ್ನು ನಿಜವಾದ ಆಸಕ್ತಿ ಮತ್ತು ಕಾಳಜಿಯಿಂದ ಕೇಳಲು ಮತ್ತು ಅವರ ಜೀವನವನ್ನು ಗಂಭೀರವಾಗಿ ಪರಿಗಣಿಸಲು ಸಿದ್ಧರಿರುವುದು ಒಂದು ದೊಡ್ಡ ಕೊಡುಗೆಯಾಗಿದ್ದು, ಅದನ್ನು ನಾವು ಎಂದಿಗೂ ಕಡಿಮೆ ಎಂದು ಪರಿಗಣಿಸಾರದು. ಇದು ಜನರನ್ನು ಆಲಂಗಿಸಿಕೊಂಡಂತೆ, ಅವರನ್ನು ನಿರಾಳವಾಗಿಸುತ್ತದೆ ಮತ್ತು ಇದರ ಪರಿಣಾಮವಾಗಿ, ಅವರು ಸಂತೋಷವಾಗಿರುತ್ತಾರೆ ಮತ್ತು ನಮ್ಮೊಂದಿಗೆ ಹಾಯಾಗಿರುತ್ತಾರೆ. ನಮ್ಮ ಸಕಾರಾತ್ಮಕ ಪ್ರಭಾವಕ್ಕೆ ತೆರೆದುಕೊಳ್ಳಲು ಇದು ಅವರ ಮೊದಲ ಹೆಜ್ಜೆಯಾಗಿರುತ್ತದೆ.
2. ಆಹ್ಲಾದಕರ ರೀತಿಯಲ್ಲಿ ಮಾತನಾಡುವುದು
ಜನರು ನಮ್ಮೊಂದಿಗೆ ಇನ್ನಷ್ಟು ಮುಕ್ತರಾಗಿರಲು, ನಾವು ಅವರೊಂದಿಗೆ ದಯೆ ಮತ್ತು ಆಹ್ಲಾದಕರ ರೀತಿಯಲ್ಲಿ ಮಾತನಾಡಬೇಕು. ಇದರರ್ಥ ಅವರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ, ಅವರಿಗೆ ಸಂಬಂಧಿಸಬಹುದಾದ ಭಾಷೆಯನ್ನು ಬಳಸಿ, ಅವರಿಗೆ ಆಸಕ್ತಿಯಿರುವ ವಿಷಯಗಳ ಬಗ್ಗೆ ಮಾತನಾಡಬೇಕು. ಮೂಲಭೂತವಾಗಿ, ನಾವು ಇತರರಿಗೆ ನಮ್ಮೊಂದಿಗಿರಲು ಆರಾಮದಾಯಕವಾಗಿಸಬೇಕಾಗಿದೆ. ನಾವು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತೇವೆ ಮತ್ತು ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಆಸಕ್ತಿ ತೋರಿಸುತ್ತೇವೆ. ಯಾರಾದರೂ ಫುಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿದ್ದರೆ, ನಾವು "ಅದು ಮೂರ್ಖತನ, ಎಂತಹ ಸಮಯ ವ್ಯರ್ಥ!" ಎಂದು ಹೇಳುವುದಿಲ್ಲ. ಇದು ಒಂದು ಮುಖ್ಯವಾದ ಅಂಶ, ಏಕೆಂದರೆ ನಾವು ಹಾಗೆ ಹೇಳಿದರೆ, ಅವರು ನಮ್ಮನ್ನು ಸ್ವೀಕರಿಸುವುದಿಲ್ಲ. ನಾವು ಅವರನ್ನು ಕೀಳಾಗಿ ಕಾಣುತ್ತಿದ್ದೇವೆ ಎಂದು ಅವರಿಗೆ ಅನಿಸುತ್ತದೆ. ಇಂದಿನ ಪಂದ್ಯವನ್ನು ಯಾರು ಗೆದ್ದರು ಎಂದು ಹೆಚ್ಚಿನ ವಿವರಗಳಿಗೆ ಹೋಗುವ ಅಗತ್ಯವಿಲ್ಲ, ಆದರೆ ನಾವು ಅವರನ್ನು ಒಪ್ಪಿಕೊಂಡಿದ್ದೇವೆಂದು ಭಾಸವಾಗುವಂತೆ ನಾವು ಅದರ ಬಗ್ಗೆ ಸ್ವಲ್ಪ ಮಾತನಾಡಬಹುದು. ನಾವು ಇತರರಿಗೆ ಸಹಾಯ ಮಾಡಲು ಬಯಸಿದರೆ, ಪ್ರತಿಯೊಬ್ಬರ ಬಗ್ಗೆ ಮತ್ತು ಅವರು ಆಸಕ್ತಿ ಹೊಂದಿರುವ ವಿಷಯದಲ್ಲಿ ಆಸಕ್ತಿ ವಹಿಸುವುದು ಮುಖ್ಯ. ನಾವು ಹೀಗೆ ಮಾಡದಿದ್ದರೆ, ನಾವು ಇತರರೊಂದಿಗೆ ಹೇಗೆ ತಾನೆ ಸಂಬಂಧ ಹೊಂದಬಹುದು?
ಯಾರಾದರೂ ಮುಕ್ತರಾಗಿದ್ದರೆ ಮತ್ತು ನಮ್ಮಿಂದ ಅಂಗೀಕರಿಸಲ್ಪಟ್ಟಿದ್ದಾರೆಂದು ಅವರಿಗೆ ಭಾಸವಾದ ನಂತರ, ನಮ್ಮ ಆಹ್ಲಾದಕರವಾಗಿ ಮಾತನಾಡುವ ವಿಧಾನವು ಹೆಚ್ಚು ಅರ್ಥಪೂರ್ಣ ವಿಷಯಗಳಿಗೆ ತಿರುಗಬಹುದು. ಸೂಕ್ತ ಸಮಯದಲ್ಲಿ, ಸೂಕ್ತ ಸಂದರ್ಭಗಳಲ್ಲಿ, ಬೌದ್ಧ ಬೋಧನೆಗಳ ಪ್ರಸ್ತುತ ಮತ್ತು ವ್ಯಕ್ತಿಗೆ ಸಹಾಯಕವಾಗುವ ಅಂಶಗಳ ಬಗ್ಗೆ ನಾವು ಮಾತನಾಡಬಹುದು. ಹಾಗೆ ಮಾಡುವುದರಿಂದ ಅವರು ಪಡೆಯುವ ಕೆಲವು ಪ್ರಯೋಜನಗಳನ್ನು ನಾವು ಸೂಚಿಸಬೇಕು.
ಸಲಹೆ ನೀಡುವಾಗ ನಮ್ಮ ಧ್ವನಿಯ ಸ್ವರವು ಬಹಳ ಮುಖ್ಯವಾಗಿರುತ್ತದೆ. ನಾವು ಒತ್ತಾಯಪೂರ್ವಕವಾಗಿ, ಕೀಳಾಗಿ ಅಥವಾ ಕನಿಕರದಿಂದ ಧ್ವನಿಸುವುದನ್ನು ತಪ್ಪಿಸಬೇಕು. ಆಹ್ಲಾದಕರವಾಗಿ ಮಾತನಾಡುವುದು ಅಂದರೆ ಇದನ್ನೇ ಸೂಚಿಸುತ್ತದೆ. ನಾವು ಇತರ ವ್ಯಕ್ತಿಯು ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗುವ ರೀತಿಯಲ್ಲಿ, ಬೆದರಿಕೆ ಅಥವಾ ಅನಗತ್ಯ ಸಲಹೆಗಳಿಲ್ಲದೆ ಮಾತನಾಡಬೇಕು. ಇದಕ್ಕೆ ಉತ್ತಮ ಸಂವೇದನೆ ಮತ್ತು ಕೌಶಲ್ಯದ ಅಗತ್ಯವಿದೆ, ಸಲಹೆ ನೀಡಲು ಸರಿಯಾದ ಕ್ಷಣ ಮತ್ತು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳಬೇಕು. ನಾವು ಅತಿಯಾಗಿ, ತೀವ್ರವಾಗಿ ಮತ್ತು ಯಾವಾಗಲೂ ಆಳವಾದ ಮತ್ತು ಅರ್ಥಪೂರ್ಣವಾದ ಸಂಭಾಷಣೆಯನ್ನು ಒತ್ತಾಯಿಸಿದರೆ, ಜನರು ನಮ್ಮೊಂದಿಗೆ ಇರುವುದು ಬೇಸರದ ಸಂಗತಿ ಎಂದು ಕಂಡುಕೊಳ್ಳುತ್ತಾರೆ ಮತ್ತು ನಮ್ಮ ಮಾತುಗಳನ್ನು ಗ್ರಹಿಸುವುದಿಲ್ಲ. ಅದಕ್ಕಾಗಿಯೇ ನಾವು ಕೆಲವೊಮ್ಮೆ ಸಂಭಾಷಣೆಯ ಸ್ವರವನ್ನು ಹಗುರಗೊಳಿಸಲು, ವಿಶೇಷವಾಗಿ ನಾವು ಸಲಹೆ ನೀಡುವಾಗ, ವ್ಯಕ್ತಿಯು ರಕ್ಷಣಾತ್ಮಕವಾಗಲು ಪ್ರಾರಂಭಿಸಿದರೆ, ಹಾಸ್ಯವನ್ನು ಬಳಸಬೇಕಾಗುತ್ತದೆ.
ಒಬ್ಬರಿಗೆ ಬೋಧನೆಗಳನ್ನು ವಿವರಿಸುವಾಗ ನಾವು ಆಹ್ಲಾದಕರವಾದ ಮತ್ತು ಅರ್ಥಪೂರ್ಣವಾದ ರೀತಿಯಲ್ಲಿ ದಯೆಯಿಂದ ಮಾತನಾಡುವ ಪರಿಣಾಮವಾಗಿ, ನಾವು ಸಲಹೆ ನೀಡಿದ ಗುರಿಗಳನ್ನು ಸಾಧಿಸುವಲ್ಲಿ ಅವರು ಆಸಕ್ತಿ ವಹಿಸುತ್ತಾರೆ. ಏಕೆಂದರೆ ಅವರು ಸಲಹೆ ಏನೆಂಬುದರ ಬಗ್ಗೆ ಸ್ಪಷ್ಟವಾಗಿರುತ್ತಾರೆ ಮತ್ತು ವಿಶ್ವಾಸ ಹೊಂದಿರುತ್ತಾರೆ ಮತ್ತು ಅದರ ಪ್ರಯೋಜನಗಳನ್ನು ಅರಿತುಕೊಳ್ಳುವ ಮೂಲಕ ಅದನ್ನು ಗೌರವಿಸುತ್ತಾರೆ.
3. ಇತರರು ತಮ್ಮ ಗುರಿಗಳನ್ನು ತಲುಪುವಂತೆ ಪ್ರೇರೇಪಿಸುವುದು
ನಾವು ನೀಡುವ ಯಾವುದೇ ಸಲಹೆಯನ್ನು ಕೇವಲ ಬೌದ್ಧ ಸಿದ್ಧಾಂತದ ಮಟ್ಟದಲ್ಲಿ ಬಿಡಬಾರದು; ಬೋಧನೆಯನ್ನು ಇತರ ವ್ಯಕ್ತಿಯ ವೈಯಕ್ತಿಕ ಪರಿಸ್ಥಿತಿಗೆ ಹೇಗೆ ಅನ್ವಯಿಸಬೇಕು ಎಂಬುದನ್ನು ನಾವು ಸ್ಪಷ್ಟವಾಗಿ ವಿವರಿಸಬೇಕಾಗಿದೆ. ಈ ರೀತಿಯಾಗಿ ನಾವು ಇತರರನ್ನು ನಮ್ಮ ಸಲಹೆಯನ್ನು ಆಚರಣೆಗೆ ತರುವಂತೆ ಪ್ರೇರೇಪಿಸುತ್ತೇವೆ, ಇದರಿಂದ ಅವರು ಬೋಧನೆಯ ಗುರಿಗಳನ್ನು ಸಾಧಿಸಬಹುದು. ಬೋಧನೆಯನ್ನು ಹೇಗೆ ಅನ್ವಯಿಸಬೇಕು - ಹಂತ ಹಂತವಾಗಿ, ನಿಖರವಾಗಿ ಏನು ಮಾಡಬೇಕು – ಎಂಬುದು ಅವರಿಗೆ ತಿಳಿದಾಗ ಮಾತ್ರ ಅವರು ಅದನ್ನು ಪ್ರಯತ್ನಿಸಲು ಉತ್ಸಾಹಭರಿತರಾಗುತ್ತಾರೆ.
ಇತರರನ್ನು ತಮ್ಮ ಜೀವನದಲ್ಲಿ ಬೋಧನೆಗಳನ್ನು ಅನ್ವಯಿಸುವಂತೆ ಪ್ರೇರೇಪಿಸುವಾಗ, ಅವರಿಗೆ ಸುಲಭವಾಗುವ ಸಂದರ್ಭಗಳನ್ನು ಒದಗಿಸಲು ನಾವು ಪ್ರಯತ್ನಿಸುತ್ತೇವೆ. ಇದರರ್ಥ, ಮೊದಲಿಗೆ ವಿಷಯಗಳನ್ನು ಸರಳಗೊಳಿಸುವುದಾಗಿರುತ್ತದೆ, ವಿಶೇಷವಾಗಿ ಬೌದ್ಧಧರ್ಮದ ಅನುಭವವಿಲ್ಲದ ಜನರಿಗೆ. ಕಾಲಕ್ರಮೇಣವಾಗಿ ನಾವು ಅವರನ್ನು ಹೆಚ್ಚು ಸಂಕೀರ್ಣವಾದ, ಮುಂದುವರಿದ ವಿಧಾನಗಳೆಡೆಗೆ ಕರೆದೊಯ್ಯುತ್ತೇವೆ. ಪರಿಣಾಮವಾಗಿ, ಅವರು ವಿಧಾನಗಳೊಂದಿಗೆ ನಿರಂತರತೆಯನ್ನು ಕಾಪಾಡಿಕೊಳ್ಳಲು ಮತ್ತು ಮುಂದುವರಿಯಲು ಆತ್ಮವಿಶ್ವಾಸವನ್ನು ಪಡೆಯುತ್ತಾರೆ. ಅವರ ಪ್ರಸ್ತುತ ಮಟ್ಟವನ್ನು ಮೀರಿದ ಕೆಲವು ಬೋಧನೆಗಳನ್ನು ಅನ್ವಯಿಸಲು ಪ್ರಯತ್ನಿಸುವುದರಿಂದ ಅವರು ಹಿಂಜರಿಯುವುದಿಲ್ಲ.
4. ಈ ಗುರಿಗಳೊಂದಿಗೆ ನಿರಂತರವಾಗಿರುವುದು
ನಾವು ಸಲಹೆ ನೀಡುವ ಯಾರಾದರೂ ನಮ್ಮನ್ನು ಕಪಟಿ ಎಂದು ಪರಿಗಣಿಸುವುದು ಅತ್ಯಂತ ನಿರುತ್ಸಾಹಗೊಳಿಸುವ ವಿಷಯಗಳಲ್ಲಿ ಒಂದಾಗಿರುತ್ತದೆ. ಅವರು ಬೋಧನೆಗಳಿಂದ ವಿಮುಖರಾಗದಂತೆ ತಡೆಯಲು, ನಾವು ನೀಡುವ ಸಲಹೆಯಂತೆಯೇ ವರ್ತಿಸುವ ಮೂಲಕ ನಾವು ಉತ್ತಮ ಮಾದರಿಯನ್ನು ನೀಡಬೇಕಾಗಿದೆ. ಉದಾಹರಣೆಗೆ, ನಾವು ಯಾರಿಗಾದರೂ ಕೋಪವನ್ನು ಜಯಿಸಲು ಬೌದ್ಧ ವಿಧಾನಗಳನ್ನು ಕಲಿಸಿದ್ದು, ನಾವು ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿದ್ದಾಗ, ನಮ್ಮ ಆಹಾರ ಸಿಗಲು ಅರ್ಧ ಗಂಟೆಯಾದ ಕಾರಣಕ್ಕೆ ರಂಪಾಟ ಮಾಡಿದರೆ, ಕೋಪ ನಿರ್ವಹಣೆಯನ್ನು ಕುರಿತಾದ ಬೌದ್ಧ ಬೋಧನೆಗಳ ಬಗ್ಗೆ ಅವರು ಏನು ಯೋಚಿಸಬಹುದು? ಆ ವಿಧಾನಗಳು ನಿಷ್ಪರಿಣಾಮಕಾರಿ ಎಂದು ಅವರು ಭಾವಿಸುತ್ತಾರೆ ಮತ್ತು ಬಿಟ್ಟುಕೊಡುತ್ತಾರೆ. ಮತ್ತು ನಾವು ನೀಡಬಹುದಾದ ಯಾವುದೇ ಹೆಚ್ಚಿನ ಸಲಹೆಯನ್ನು ಅವರು ಖಂಡಿತವಾಗಿಯೂ ಸ್ವೀಕರಿಸುವುದಿಲ್ಲ. ಅದಕ್ಕಾಗಿಯೇ ನಾವು ವರ್ತಿಸುವ ರೀತಿಯು ನಾವು ಕಲಿಸುವ ವಿಷಯಕ್ಕೆ ಹೊಂದಿಕೆಯಾಗಬೇಕು. ಆ ಆಧಾರದ ಮೇಲೆ ಮಾತ್ರ ಇತರರು ನಾವು ಹೇಳುವುದನ್ನು ನಂಬುತ್ತಾರೆ.
ಸಹಜವಾಗಿ, ನಾವು ಇನ್ನೂ ಬುದ್ಧರಲ್ಲ, ಆದ್ದರಿಂದ ಯಾರಿಗೇ ಆಗಲಿ, ನಾವು ಪರಿಪೂರ್ಣ ಮಾದರಿಯಾಗುವಂತಹ ಯಾವುದೇ ಮಾರ್ಗವಿಲ್ಲ. ಆದರೂ, ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಕಪಟಿಯಾಗದೇ ಇರುವುದು ಎಂದರೆ ನಾವು ಸಹಾಯ ಮಾಡಲು ಪ್ರಯತ್ನಿಸುತ್ತಿರುವ ಯಾರೊಂದಿಗಾದರೂ ಇರುವಾಗ, ನಾವು ಬೋಧನೆಗಳನ್ನು ಅನುಸರಿಸುತ್ತೇವೆ ಎಂದು ಮೇಲ್ನೋಟಕ್ಕೆ ತೋರಿಸಿ, ನಾವು ಒಬ್ಬಂಟಿಯಾಗಿರುವಾಗ ಅಥವಾ ನಮ್ಮ ಕುಟುಂಬದೊಂದಿಗೆ ಇರುವಾಗ, ಅವಮಾನಕರವಾಗಿ ವರ್ತಿಸಬಹುದು ಎಂದಲ್ಲ. ಧರ್ಮದ ಗುರಿಗಳನ್ನು ನಿರಂತರವಾಗಿ, ಎಲ್ಲಾ ಸಮಯದಲ್ಲೂ ಅಭ್ಯಾಸಮಾಡಬೇಕು ಮತ್ತು ಪ್ರಾಮಾಣಿಕವಾಗಿರಬೇಕು.
ಸಾರಾಂಶ
ಬೌದ್ಧ ಬೋಧನೆಗಳ ಮೂಲಕ ಇತರರನ್ನು ಒಟ್ಟುಗೂಡಿಸುವ ಮತ್ತು ಪ್ರಬುದ್ಧತೆಯನ್ನು ಪಡೆಯಲು ಸಹಾಯ ಮಾಡುವ ನಾಲ್ಕು ಹಂತಗಳು ನಮ್ಮ ವೈಯಕ್ತಿಕ ಸಂಬಂಧಗಳಲ್ಲಿ ಮಾತ್ರವಲ್ಲದೆ, ಧರ್ಮವನ್ನು ಜಗತ್ತಿನಲ್ಲಿ ಲಭ್ಯವಾಗುವಂತೆ ಮಾಡುವ ದೊಡ್ಡ ವ್ಯಾಪ್ತಿಯಲ್ಲಿಯೂ ಪ್ರಸ್ತುತವಾಗಿವೆ.
- ಔದಾರ್ಯ - ಬೋಧನೆಗಳನ್ನು ಉಚಿತವಾಗಿ ನೀಡಿ
- ಆಹ್ಲಾದಕರ ರೀತಿಯಲ್ಲಿ ಮಾತನಾಡುವುದು - ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯಲ್ಲಿ ಮತ್ತು ವ್ಯಾಪಕವಾದ ಮಾಧ್ಯಮ ಶ್ರೇಣಿಗಳ ಮೂಲಕ - ಪುಸ್ತಕಗಳು, ವೆಬ್‌ಸೈಟ್‌ಗಳು, ಪಾಡ್‌ಕ್ಯಾಸ್ಟ್‌ಗಳು, ವೀಡಿಯೊಗಳು, ಸಾಮಾಜಿಕ ಮಾಧ್ಯಮ, ಇತ್ಯಾದಿ - ಪ್ರವೇಶಿಸುವಂತೆ ಅನುವು ಮಾಡಿಕೊಡುವುದು.
- ಇತರರನ್ನು ತಮ್ಮ ಗುರಿಗಳನ್ನು ತಲುಪಲು ಪ್ರೇರೇಪಿಸುವುದು - ಹಂತ ಹಂತವಾಗಿ ವಿಷಯವನ್ನು ಹೇಗೆ ಅಧ್ಯಯನ ಮಾಡುವುದು ಮತ್ತು ಆಂತರಿಕಗೊಳಿಸುವುದು ಮತ್ತು ದೈನಂದಿನ ಜೀವನದಲ್ಲಿ ಬೋಧನೆಗಳನ್ನು ಹೇಗೆ ಅನ್ವಯಿಸುವುದು ಎಂಬುದನ್ನು ಸ್ಪಷ್ಟವಾಗಿ ಸೂಚಿಸುವುದು.
- ಈ ಗುರಿಗಳೊಂದಿಗೆ ನಿರಂತರವಾಗಿರುವುದು - ನೀವು ನಿಮ್ಮ ಜೀವನವನ್ನು ನಡೆಸುವ ರೀತಿಯಲ್ಲಿ ಮತ್ತು ಧರ್ಮ ಸಂಘಟನೆಯ ವಿಷಯದಲ್ಲಿ, ಸಂಸ್ಥೆಯನ್ನು ನಡೆಸುವ ರೀತಿಯಲ್ಲಿ ಬೌದ್ಧ ತತ್ವಗಳನ್ನು ಉದಾಹರಣೆಯಾಗಿ ತೋರಿಸಿ.
ಈ ನಾಲ್ಕು ಹಂತಗಳು, ಜ್ಞಾನೋದಯವನ್ನು ತಲುಪಲು ಪೂರ್ಣ ಬೋಧಿಚಿತ್ತ ಗುರಿಯಿಂದ ಬೆಂಬಲಿತವಾಗಿಲ್ಲವೆಂದರೂ, ಪ್ರಾಮಾಣಿಕ ಪರಹಿತಚಿಂತನೆಯ ಪ್ರೇರಣೆಯಿಂದ ಬೆಂಬಲಿತವಾಗಿದ್ದು, ಇತರರು ನಮ್ಮ ಸಕಾರಾತ್ಮಕ ಪ್ರಭಾವಕ್ಕೆ ಗ್ರಾಹಿಯಾಗುವಂತೆ ಮಾಡುವ ಅತ್ಯುತ್ತಮ ಮಾರ್ಗಗಳಾಗಿವೆ.