ಬೋಧಿಚಿತ್ತಕ್ಕಾಗಿ ಇರುವ ಏಳು-ಭಾಗದ ಕಾರಣ ಮತ್ತು ಪರಿಣಾಮದ ಧ್ಯಾನ

ಬೋಧಿಚಿತ್ತವು, ಇತರರಿಗೆ ಸಾಧ್ಯವಾದಷ್ಟು ಸಂಪೂರ್ಣವಾಗಿ ಸಹಾಯ ಮಾಡಲು ಬುದ್ಧತ್ವವನ್ನು ಪಡೆಯುವ ಗುರಿಯಾಗಿರುತ್ತದೆ. ಈ ಗುರಿಯನ್ನು ಉತ್ಪಾದಿಸಲು ಮತ್ತು ನಾವು ಅದನ್ನು ಅಭಿವೃದ್ಧಿಪಡಿಸಿದ ನಂತರ ಅದನ್ನು ಬಲಪಡಿಸಲು ಇರುವ ಏಳು ಭಾಗದ ಕಾರಣ ಮತ್ತು ಪರಿಣಾಮಗಳ ವಿಧಾನವು, ಸಮಚಿತ್ತದಿಂದ ಶುರುವಾಗಿ ಎಲ್ಲರೂ ನಮ್ಮ ತಾಯಂದಿರು ಎಂದು ಗುರುತಿಸುವ ಮೂಲಕ, ತಾಯಿಯ ಪ್ರೀತಿಯನ್ನು ನೆನಪಿಸಿಕೊಳ್ಳುವ ಮೂಲಕ, ಕೃತಜ್ಞತೆಯಿಂದ, ಆ ದಯೆಯನ್ನು ಮರುಪಾವತಿಸಲು ಬಯಸುವ ಭಾವನೆಗಳು ಮತ್ತು ತಿಳುವಳಿಕೆಗಳ ಮೂಲಕ, ಅನುಕ್ರಮವಾಗಿ, ನಮ್ಮನ್ನು ಕರೆದೊಯ್ಯುತ್ತದೆ. ಇದು ಎಲ್ಲರಿಗೂ ಸಮಾನವಾಗಿ ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಲು, ಅಸಾಧಾರಣ ಸಂಕಲ್ಪವನ್ನು ಮತ್ತು ಈ ಕಾರಣದ ಅನುಕ್ರಮದ ಪರಿಣಾಮವಾಗಿ, ಬೋಧಿಚಿತ್ತವನ್ನು ಗುರಿಯಾಗಿಸಲು ಕಾರಣವಾಗಿರುತ್ತದೆ.

ಪರಿಚಯ 

ಬೌದ್ಧ ಮಾರ್ಗವನ್ನು ಅನುಸರಿಸಲು ನಮಗೆ ಅನುಮತಿಸುವ ಎಲ್ಲಾ ರೀತಿಯ ವಿಶ್ರಾಂತಿ ಮತ್ತು ಪುಷ್ಟೀಕರಣಗಳನ್ನು ಒಳಗೊಂಡಿರುವ ಅಮೂಲ್ಯವಾದ ಮಾನವ ಜೀವನವನ್ನು ನಾವು ಹೊಂದಿದ್ದೇವೆ. ಆದರೆ, ಈ ಸ್ವಾತಂತ್ರ್ಯಗಳು ಮತ್ತು ಅವಕಾಶಗಳು ಶಾಶ್ವತವಾಗಿ ಉಳಿಯುವುದಿಲ್ಲ. ಆದ್ದರಿಂದ, ನಮಗಿರುವ ಅವಕಾಶಗಳನ್ನು ನಾವು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. 

ನಮ್ಮ ಅಮೂಲ್ಯವಾದ ಮಾನವ ಜೀವನವನ್ನು ಬಳಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ ಅದನ್ನು ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸಲು ಬಳಸುವುದಾಗಿರುತ್ತದೆ. ಬೋಧಿಚಿತ್ತದ ಗುರಿಯ ಮನಸ್ಸು ಮತ್ತು ಹೃದಯವು, ಇನ್ನೂ ಸಂಭವಿಸದ ನಮ್ಮ ಸ್ವಂತ ವೈಯಕ್ತಿಕ ಜ್ಞಾನೋದಯಗಳ ಮೇಲೆ ಕೇಂದ್ರೀಕರಿಸುತ್ತದೆ, ಆದರೆ ನಮ್ಮ ಬೌದ್ಧ-ಪ್ರಕೃತಿ ಅಂಶಗಳ ಆಧಾರದ ಮೇಲೆ, ನಮ್ಮ ಮಾನಸಿಕ ನಿರಂತರತೆಗಳ ಆಧಾರದ ಮೇಲೆ, ಅದನ್ನು ಸಾಧಿಸಲು ನಮಗೆ ಅನುವು ಮಾಡಿಕೊಡುತ್ತದೆ. ಈ ಅಂಶಗಳೆಂದರೆ, ನಮ್ಮ ಸಕಾರಾತ್ಮಕ ಶಕ್ತಿ ಮತ್ತು ಆಳವಾದ ಅರಿವಿನ ಜಾಲಗಳು, ನಮ್ಮ ವಿವಿಧ ಉತ್ತಮ ಗುಣಗಳು ಮತ್ತು ನಮ್ಮ ಮನಸ್ಸಿನ ನೈಸರ್ಗಿಕ ಶುದ್ಧತೆಯಾಗಿರುತ್ತವೆ. ಈ ಬೋಧಿಚಿತ್ತ ಗುರಿಯು ಎರಡು ಉದ್ದೇಶಗಳನ್ನು ಒಳಗೊಂಡಿರುತ್ತದೆ: ಸಾಧ್ಯವಾದಷ್ಟು ಬೇಗ ಆ ಜ್ಞಾನೋದಯವನ್ನು ಸಾಧಿಸುವುದು ಮತ್ತು ಅದರ ಮೂಲಕ ಎಲ್ಲಾ ಜೀವಿಗಳಿಗೆ ಪ್ರಯೋಜನಕಾರಿಯಾಗಿರುವುದು.  

ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುವಾಗ, ನಾವು ಎರಡು ಉದ್ದೇಶಗಳನ್ನು ವಿರುದ್ಧ ಕ್ರಮದಲ್ಲಿ ಅಭಿವೃದ್ಧಿಪಡಿಸುತ್ತೇವೆ. ಮೊದಲಾಗಿ ನಾವು ಎಲ್ಲಾ ಸೀಮಿತ ಜೀವಿಗಳಿಗೆ ಉಪಕಾರಿಯಾಗಲು ಬಯಸುತ್ತೇವೆ, ಕೇವಲ ಮನುಷ್ಯರಿಗಲ್ಲ. ಇದು ನಮ್ಮ ಪ್ರೀತಿ, ಸಹಾನುಭೂತಿ ಮತ್ತು ಅಸಾಧಾರಣ ಸಂಕಲ್ಪದಿಂದ ಉಂಟಾಗುತ್ತದೆ, ಇದನ್ನು ನಾವು ಈ ಉಪನ್ಯಾಸದಲ್ಲಿ ಮುಂದೆ ಚರ್ಚಿಸುತ್ತೇವೆ. ಇವುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಪ್ರಯೋಜನಕಾರಿಯಾಗುವ ಸಲುವಾಗಿ, ನಾವು ಸಂಪೂರ್ಣವಾಗಿ ಜ್ಞಾನೋದಯವನ್ನು ಪಡೆಯಲು ಮತ್ತು ಬುದ್ಧರಾಗಲು ಉದ್ದೇಶಿಸುತ್ತೇವೆ. ನಮ್ಮ ಎಲ್ಲಾ ಮಿತಿಗಳು ಮತ್ತು ನ್ಯೂನತೆಗಳನ್ನು ನಿವಾರಿಸಲು ನಾವು ಜ್ಞಾನೋದಯವನ್ನು ಪಡೆಯಬೇಕು, ಏಕೆಂದರೆ ಅವು ಇತರರಿಗೆ ಸಹಾಯ ಮಾಡಲು ಉತ್ತಮ ಅವಕಾಶಗಳನ್ನು ಪಡೆಯುವುದರಿಂದ ನಮ್ಮನ್ನು ತಡೆಯುತ್ತವೆ ಎಂಬುದನ್ನು ನಾವು ಗಮನಿಸುತ್ತೇವೆ. ಉದಾಹರಣೆಗೆ, ನಾವು ಇತರರ ಮೇಲೆ ಕೋಪಗೊಂಡರೆ, ಆ ಸಮಯದಲ್ಲಿ ನಾವು ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ? ಅಲ್ಲದೆ, ನಮ್ಮ ಎಲ್ಲಾ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ನಾವು ಜ್ಞಾನೋದಯವನ್ನು ಪಡೆಯಬೇಕು. ಇತರರಿಗೆ ಪ್ರಯೋಜನವಾಗುವಂತೆ ಅವುಗಳನ್ನು ಬಳಸಲು, ನಾವು ಅವುಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಆದ್ದರಿಂದ, ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸುವಾಗ, ನಾವು ಬುದ್ಧರಾಗಲು ಬಯಸಲು ಇರುವ ಮೊದಲ ಕಾರಣವು ಅದು ಅತ್ಯುನ್ನತ ಸ್ಥಿತಿಯೆಂಬುದಾಗಿದ್ದು ಮತ್ತು ನಾವು ಇತರರಿಗೆ ಸಹಾಯಮಾಡಬೇಕೆಂಬ ನಂತರದ ಕಾರಣವು ನಾವು ಪಾವತಿಸಬೇಕಾದ ಕೆಟ್ಟ ತೆರಿಗೆಯಂತೆ ಆಗಿರುವುದಿಲ್ಲ. 

ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸುವ ಎರಡು ಮುಖ್ಯ ವಿಧಾನಗಳಿವೆ. ಒಂದು, ಏಳು-ಭಾಗಗಳ ಕಾರಣ ಮತ್ತು ಪರಿಣಾಮ ಬೋಧನೆಯ ಮೂಲಕ, ಇನ್ನೊಂದು ಸ್ವಯಂ ಮತ್ತು ಇತರರ ಬಗ್ಗೆ ನಮ್ಮ ವರ್ತನೆಗಳನ್ನು ಸಮೀಕರಿಸುವುದು ಮತ್ತು ವಿನಿಮಯ ಮಾಡಿಕೊಳ್ಳುವುದಾಗಿರುತ್ತದೆ. ಇಲ್ಲಿ ನಾವು ಎರಡು ವಿಧಾನಗಳಲ್ಲಿ ಮೊದಲನೆಯದನ್ನು ಚರ್ಚಿಸುತ್ತೇವೆ. 

ಸಮಚಿತ್ತತೆಯನ್ನು ಅಭಿವೃದ್ಧಿಪಡಿಸುವುದು 

ಏಳು-ಭಾಗಗಳ ಕಾರಣ ಮತ್ತು ಪರಿಣಾಮದ ಬೋಧನೆಯು ಏಳನೆಯ ಹೆಜ್ಜೆಯಾಗಿರುವ, ಬೋಧಿಚಿತ್ತ ಗುರಿಯ ನಿಜವಾದ ಬೆಳವಣಿಗೆಗೆ ಕಾರಣಗಳಾಗಿ ಕಾರ್ಯನಿರ್ವಹಿಸುವ ಆರು ಹಂತಗಳನ್ನು ಹೊಂದಿರುತ್ತದೆ. ಇದು ಏಳು ಹಂತಗಳ ಎಣಿಕೆಯಲ್ಲಿ ಸೇರಿಸದ ಪ್ರಾಥಮಿಕ ಹಂತದೊಂದಿಗೆ ಪ್ರಾರಂಭವಾಗುತ್ತದೆ. ಇದು, ನಾವು ಕೆಲವು ಜೀವಿಗಳತ್ತ ಆಕರ್ಷಿತರಾಗುವುದನ್ನು ಅಥವಾ ಬಂಧಿಯಾಗುವುದನ್ನು, ಇತರ ಬಗ್ಗೆ ಅಸಹ್ಯ ಪಡುವುದನ್ನು ಮತ್ತು ಇನ್ನಿತರರ ಬಗ್ಗೆ ಅಸಡ್ಡೆಯಾಗಿರುವುದನ್ನು ಮೀರಿಸುವ ಸಮಚಿತ್ತತೆಯ ಬೆಳವಣಿಗೆಯಾಗಿರುತ್ತದೆ. ಈ ಪ್ರಾಥಮಿಕ ಹಂತದ ಗುರಿಯೆಂದರೆ, ಎಲ್ಲರೊಂದಿಗೆ ಸಮಾನವಾಗಿ ಮುಕ್ತಮನಸ್ಸಿನವರಾಗಿರುವುದಾಗಿರುತ್ತದೆ.  

ಎಲ್ಲರಿಗೂ ಸಮಾನವಾಗಿ ಮುಕ್ತಮನಸ್ಸಿನವರಾಗಿರಲು ಅಗತ್ಯವಿರುವ ‘ಎಲ್ಲರೂ ಸಮಾನರು’ ಎಂಬ ತಿಳುವಳಿಕೆಯು, ಮಾನಸಿಕ ನಿರಂತರತೆ ಅಥವಾ ಮನಸ್ಸಿನ ಹರಿವಿಗೆ ಯಾವುದೇ ಆರಂಭ ಮತ್ತು ಅಂತ್ಯವಿಲ್ಲ ಎಂದು ಅರಿತುಕೊಳ್ಳುವುದರಿಂದ ಬರುತ್ತದೆ. ಆದ್ದರಿಂದ, ಎಲ್ಲರೂ ಒಂದು ಕಾಲದಲ್ಲಿ ನಮ್ಮ ಸ್ನೇಹಿತರಾಗಿರುತ್ತಾರೆ, ಎಲ್ಲರೂ ಒಂದು ಕಾಲದಲ್ಲಿ ನಮ್ಮ ಶತ್ರುಗಳಾಗಿರುತ್ತಾರೆ, ಎಲ್ಲರೂ ಒಂದು ಸಮಯದಲ್ಲಿ ಅಪರಿಚಿತರಾಗಿರುತ್ತಾರೆ ಮತ್ತು ಈ ಸ್ಥಿತಿಯು ಯಾವಾಗಲೂ ಬದಲಾಗುತ್ತಿರುತ್ತದೆ. ಈ ಅರ್ಥದಲ್ಲಿ, ನಾವೆಲ್ಲರೂ ಒಂದೇ ಆಗಿರುತ್ತೇವೆ. 

ಈ ಆಲೋಚನಾ ವಿಧಾನದ ಹಿಂದೆ ಇರುವ, ನಾವು ಅರ್ಥಮಾಡಿಕೊಳ್ಳಬೇಕಾದ ಮುಖ್ಯ ಅಂಶವೆಂದರೆ ‘ಆರಂಭವಿಲ್ಲದ ಮನಸ್ಸು’. ಇದು ಬೌದ್ಧಧರ್ಮದಲ್ಲಿ ಒಂದು ಮೂಲಭೂತ ಊಹೆಯಾಗಿದೆ. ಪುನರ್ಜನ್ಮವು ಅನುಭವದ ನಿರಂತರತೆಗೆ ಸಂಬಂಧಿಸಿರುತ್ತದೆ. ಮಾನಸಿಕ ನಿರಂತರತೆಗಳು ಅನುಭವದ ನಿರಂತರತೆಗಳಾಗಿರುತ್ತವೆ. ಅವು ವೈಯಕ್ತಿಕವಾಗಿದ್ದು, ಮಾನವ, ಪ್ರಾಣಿ, ಗಂಡು ಅಥವಾ ಹೆಣ್ಣು ಎಂಬ ಅಂತರ್ಗತ ಗುರುತುಗಳನ್ನು ಹೊಂದಿರುವುದಿಲ್ಲ. ಯಾವುದೇ ನಿರ್ದಿಷ್ಟ ಪುನರ್ಜನ್ಮದಲ್ಲಿ ಮಾನಸಿಕ ನಿರಂತರತೆಯು ವ್ಯಕ್ತವಾಗುವ ಜೀವ ರೂಪ ಮತ್ತು ಲಿಂಗವು, ಹಿಂದಿನ ಕರ್ಮ ನಡವಳಿಕೆ ಮತ್ತು ಅದರ ನಂತರದ ಪರಿಣಾಮಗಳನ್ನು ಅವಲಂಬಿಸಿರುತ್ತದೆ. 

ಆರಂಭವಿಲ್ಲದ ಮನಸ್ಸಿನ ಬಗೆಗಿರುವ ಈ ಅಂಶವು ಬೋಧಿಚಿತ್ತವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವ ಮೂಲಭೂತ, ಅಗತ್ಯವಾದ ತಿಳುವಳಿಕೆಯಾಗಿರುತ್ತದೆ, ಏಕೆಂದರೆ ಈ ತಿಳುವಳಿಕೆಯ ಆಧಾರದ ಮೇಲೆ, ಎಲ್ಲರ ಬಗ್ಗೆ ಪ್ರೀತಿಯ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಸಂಪೂರ್ಣವಾಗಿ ಸಾಧ್ಯವಾಗುತ್ತದೆ. ಉದಾಹರಣೆಗೆ, ನಾವು ಇತರ ಜೀವಿಗಳನ್ನು ಕೇವಲ ಸೊಳ್ಳೆಯಾಗಿ ನೋಡುವುದಿಲ್ಲ. ಬದಲಾಗಿ, ಈ ಜೀವಿತಾವಧಿಯಲ್ಲಿ ಅದರ ಕರ್ಮದಿಂದಾಗಿ ಸೊಳ್ಳೆಯ ರೂಪವನ್ನು ಹೊಂದಿರುವ ಅನಂತವಾದ ದೀರ್ಘ ವೈಯಕ್ತಿಕ ಮಾನಸಿಕ ನಿರಂತರತೆಯಾಗಿ ಇದನ್ನು ಪರಿಗಣಿಸುತ್ತೇವೆ; ಅದು ಅಂತರ್ಗತವಾಗಿ ಸೊಳ್ಳೆಯಾಗಿರುವುದಿಲ್ಲ. ಇದರಿಂದ ನಮ್ಮ ಹೃದಯವು ಮನುಷ್ಯರಿಗೆ ತೆರೆದಂತೆ ಸೊಳ್ಳೆಗಾಗಿಯೂ ತೆರೆದಿರುತ್ತದೆ. ಬೋಧಿಚಿತ್ತದ ಶಕ್ತಿಯು, ಅದದ ಮೂಲಕ ನಾವು ಎಲ್ಲರಿಗೂ ಸಂಪೂರ್ಣವಾಗಿ ಪ್ರಯೋಜನಕಾರಿಯಾಗಲು ಉದ್ದೇಶಿಸಿರುತ್ತೇವೆ ಎಂಬ ಅಂಶದಿಂದ ಹುಟ್ಟಿಕೊಂಡಿರುತ್ತದೆ. ಇದು ಖಂಡಿತವಾಗಿಯೂ ಸುಲಭವಲ್ಲ. 

ಎಲ್ಲರೂ ನಮ್ಮ ತಾಯಿಯಾಗಿದ್ದಾರೆಂದು ಗುರುತಿಸುವುದು 

ಒಮ್ಮೆ ನಮಗೆ, ಸಮಚಿತ್ತದಿಂದ ಎಲ್ಲಾ ಜೀವಿಗಳನ್ನು ವೈಯಕ್ತಿಕವಾದ, ಆರಂಭವಿಲ್ಲದ ಮಾನಸಿಕ ನಿರಂತರತೆಗಳಾಗಿ, ಈ ಜೀವತಾವಧಿಯಲ್ಲಿ ಅವುಗಳ ರೂಪಗಳನ್ನು ನಿರಾಕರಿಸದಂತೆ ನೋಡಲು ಸಾಧ್ಯವಾದರೆ, 7 ಭಾಗಗಳ ಕಾರಣ ಮತ್ತು ಪರಿಣಾಮದ ಧ್ಯಾನದಲ್ಲಿ ನಾವು ಮೊದಲ ಹೆಜ್ಜೆ ಇಡಲು ಸಿದ್ಧರಾಗಿರುತ್ತೇವೆ. ಪ್ರತಿಯೊಂದು ಜೀವಿಯೂ, ಒಂದು ಹಂತದಲ್ಲಿ ನಮ್ಮ ತಾಯಿಯಾಗಿರುತ್ತದೆ ಎಂದು ಗುರುತಿಸುವುದು ಇದರ ಉದ್ದೇಶವಾಗಿರುತ್ತದೆ. ಈ ಜೀವತಾವಧಿಯಲ್ಲಿ ನಮಗೆ ತಾಯಿ ಇರುವಂತೆಯೇ, ನಾವು ಗರ್ಭ ಅಥವಾ ಮೊಟ್ಟೆಯಿಂದ ಜನಿಸಿದ ಪ್ರತಿಯೊಂದು ಜೀವತಾವಧಿಯಲ್ಲಿಯೂ ನಮಗೆ ತಾಯಿ ಇದ್ದಾರೆ ಎಂದು ಯೋಚಿಸುವ ತಾರ್ಕಿಕ ಮಾರ್ಗವಿದು. ಆರಂಭವಿಲ್ಲದ ಪುನರ್ಜನ್ಮದ ತರ್ಕದಿಂದ ಮತ್ತು ಸೀಮಿತವಾದ, ಲೆಕ್ಕವಿಲ್ಲದಷ್ಟು ಜೀವಿಗಳಿವೆ ಎಂಬ ಅಂಶದಿಂದ, ಪ್ರತಿಯೊಬ್ಬರೂ ಆರಂಭವಿಲ್ಲದ ಸಮಯಗಳಲ್ಲಿ ನಮ್ಮ ತಾಯಿಯಾಗಿರುತ್ತಾರೆ - ಮತ್ತು ನಾವು ಕೂಡ ಅವರ ತಾಯಂದಿರಾಗಿರುತ್ತೇವೆ. ಅವರು ನಮ್ಮ ತಂದೆ, ನಮ್ಮ ಹತ್ತಿರದ ಸ್ನೇಹಿತರು ಇತ್ಯಾದಿ ಕೂಡ ಆಗಿರುತ್ತಾರೆ. 

ಎಲ್ಲರನ್ನೂ ನಮ್ಮ ತಾಯಿಯೆಂದು ನೋಡುವಾಗ, ನಮ್ಮ ತಾಯಿಯಾಗಿರುವುದನ್ನು ಯಾರ ಅಂತರ್ಗತ ಗುರುತಾಗಿಯೂ ನೋಡದಂತೆ ನಾವು ಜಾಗರೂಕರಾಗಿರಬೇಕು, ಏಕೆಂದರೆ ಅದು ಸ್ವಲ್ಪ ಸಮಸ್ಯಾತ್ಮಕವಾಗಬಹುದು. ಶೂನ್ಯತೆ, ಅಂದರೆ ಅಂತರ್ಗತವಾದ ಸ್ಥಿರ ಗುರುತುಗಳ ಅಭಾವವನ್ನು ನಾವು ಎಂದಿಗೂ ಕಳೆದುಕೊಳ್ಳಬಾರದು. 

ಪ್ರತಿಯೊಬ್ಬರನ್ನು ನಮ್ಮ ತಾಯಿ ಎಂದು ಗುರುತಿಸುವುದು, ಇತರರೊಂದಿಗೆ ಸಂಬಂಧ ಹೊಂದುವ ನಮ್ಮ ವಿಧಾನವನ್ನು ಆಮೂಲಾಗ್ರವಾಗಿ ಬದಲಾಯಿಸುತ್ತದೆ. ಇಲ್ಲಿ ನಾವು ಎಲ್ಲರ ಬಗ್ಗೆ ಸಮಚಿತ್ತತೆಯನ್ನು ಹೊಂದುವುದನ್ನು ಮೀರಿ ಹೋಗುತ್ತಿದ್ದೇವೆ. ನಾವು ಎಲ್ಲರೊಂದಿಗೆ ಬಹಳ ನಿಕಟವಾದ, ಸಹೃದಯದ, ಪ್ರೀತಿಯ ಸಂಬಂಧವನ್ನು ಹೊಂದಿದ್ದೇವೆ, ಮತ್ತು ಭವಿಷ್ಯದಲ್ಲಿಯೂ ಇದನ್ನು ಹೊಂದಬಹುದು ಎಂಬುದನ್ನು ನಾವು ಗಮನಿಸುತ್ತೇವೆ. 

ಮಾತೃ ಪ್ರೀತಿಯ ದಯೆಯನ್ನು ನೆನಪಿಸಿಕೊಳ್ಳುವುದು 

ಏಳು ಹಂತಗಳಲ್ಲಿ ಎರಡನೆಯದು ತಾಯಿಯ ಪ್ರೀತಿಯ ದಯೆಯನ್ನು ನೆನಪಿಸಿಕೊಳ್ಳುವುದಾಗಿರುತ್ತದೆ. ಅನೇಕ ಪಾಶ್ಚಿಮಾತ್ಯರಿಗೆ, ಇದು ಧ್ಯಾನದಲ್ಲಿರುವ ಒಂದು ಸಮಸ್ಯಾತ್ಮಕ ಹೆಜ್ಜೆಯಾಗಿದೆ, ಏಕೆಂದರೆ ಭಾರತೀಯರು ಮತ್ತು ಟಿಬೆಟಿಯನ್ನರು ಈ ಜೀವಿತಾವಧಿಯಲ್ಲಿ ಯಾವಾಗಲೂ ತಮ್ಮ ತಾಯಿಯ ಉದಾಹರಣೆಯನ್ನು ತೆಗೆದುಕೊಳ್ಳುತ್ತಾರೆ. ಆ ಸಮಾಜದಲ್ಲಿನ ಹೆಚ್ಚಿನವರು, ಪಾಶ್ಚಿಮಾತ್ಯ ಸಮಾಜಗಳಿಗಿಂತ ತಮ್ಮ ತಾಯಂದಿರೊಂದಿಗೆ ಕಡಿಮೆ ಕಷ್ಟಕರ ಸಂಬಂಧಗಳನ್ನು ಹೊಂದಿದ್ದಾರೆಂದು ತೋರುತ್ತದೆ. ಸಹಜವಾಗಿ, ಅದು ನಿಜವೋ ಅಲ್ಲವೋ ಎಂಬುದು ವೈಯಕ್ತಿಕ ಪ್ರಕರಣಗಳ ಮೇಲೆ ಆಧಾರಿತವಾಗಿ ಬದಲಾಗುತ್ತದೆ. ಆದರೆ 29 ವರ್ಷಗಳ ಕಾಲ ಟಿಬೆಟಿಯನ್ ಮತ್ತು ಭಾರತೀಯ ಸಮಾಜಗಳಲ್ಲಿ ವಾಸಿಸುತ್ತಿರುವ ನನ್ನ ಅವಲೋಕನದಿಂದ ನಾನು ಇಲ್ಲಿ ಮಾತನಾಡುತ್ತಿದ್ದೇನೆ, ಅಲ್ಲಿ ಬೆಳೆದ ಮಕ್ಕಳು ಮತ್ತು ಅವರ ತಾಯಂದಿರ ನಡುವಿನ ಸಂಬಂಧವು ಪಶ್ಚಿಮಕ್ಕಿಂತ ಕಡಿಮೆ ಗೊಂದಲಮಯವಾಗಿರುವುದಾಗಿ ತೋರುತ್ತದೆ. 

ಧ್ಯಾನದ ಈ ಹಂತವು, ನಮ್ಮ ತಾಯಿಯು ಎಷ್ಟು ಕರುಣಾಮಯಿಯಾಗಿರುವಳು - ಅಥವಾ ಅವರು ತೀರಿಹೋಗಿದ್ದಲ್ಲಿ – ಎಷ್ಟು ಕರುಣಾಮಯಿಯಾಗಿದ್ದಳು, ನಮ್ಮನ್ನು ಗರ್ಭದಲ್ಲಿ ಹೊತ್ತುಕೊಂಡಿರುವ ಸಮಯದಿಂದ ಅವಳನ್ನು ನೆನಪಿಸಿಕೊಳ್ಳಬೇಕು. ನಂತರ, ಹಿಂದಿನ ಜನ್ಮಗಳಲ್ಲಿ, ಹೇಗೆ ಎಲ್ಲರೂ ನಮಗೆ ಇದೇ ರೀತಿಯ ದಯೆಯನ್ನು ತೋರಿಸಿದ್ದಾರೆ ಎಂಬ ಯೋಚನೆಯನ್ನು ನಾವು ವಿಸ್ತರಿಸುತ್ತೇವೆ. 

ಹಲವರು, ಇದನ್ನು ಪಾಶ್ಚಿಮಾತ್ಯರಿಗೆ ಕಲಿಸುವಾಗ, ‘ಸರಿ, ನಿಮ್ಮ ತಾಯಿಯೊಂದಿಗೆ ಸಮಸ್ಯೆಗಳಿದ್ದರೆ, ನಿಮ್ಮ ತಂದೆ, ಆಪ್ತ ಸ್ನೇಹಿತ ಅಥವಾ ನಿಮಗೆ ಹೆಚ್ಚಿನ ದಯೆ ತೋರಿಸಿದ ಯಾರನ್ನಾದರೂ ಯೋಚಿಸಬಹುದು’ ಎಂದು ಹೇಳುತ್ತಾರೆ. ಈ ರೀತಿಯಾಗಿ, ಈ ಧ್ಯಾನವನ್ನು ಮಾಡಲು ಪ್ರಯತ್ನಿಸುತ್ತಿರುವಾಗ ನೀವು ಸಿಕ್ಕಿಹಾಕಿಕೊಳ್ಳುವುದಿಲ್ಲ. ಇದು ಸಹಾಯಕವಾದ ವಿಧಾನ ಎಂದು ನಾನು ಭಾವಿಸುತ್ತೇನೆ. ಆದರೆ, ನಮ್ಮ ತಾಯಂದಿರೊಂದಿಗಿನ ನಮ್ಮ ಸಂಬಂಧಗಳಲ್ಲಿ ನಮಗೆ ಸಮಸ್ಯೆಗಳಿದ್ದರೆ, ಅದನ್ನು ನಿರ್ಲಕ್ಷಿಸದೆ ನಿಭಾಯಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಮ್ಮ ತಾಯಂದಿರೊಂದಿಗೆ ನಾವು ಆರೋಗ್ಯಕರ ಸಂಬಂಧಗಳನ್ನು ಹೊಂದಲು ಸಾಧ್ಯವಾಗದಿದ್ದರೆ, ಬೇರೆಯವರೊಂದಿಗೆ ಆರೋಗ್ಯಕರ ಪ್ರೀತಿಯ ಸಂಬಂಧಗಳನ್ನು ಹೊಂದುವುದು ಬಹಳಾ ಕಷ್ಟಕರವಾಗಿರುತ್ತದೆ. ಇದು ಯಾವಾಗಲೂ ಇರುವ ಸಮಸ್ಯೆಯಾಗಿರುತ್ತದೆ. ಆದ್ದರಿಂದ, ನಮ್ಮ ತಾಯಂದಿರೊಂದಿಗಿನ ನಮ್ಮ ನಿಜವಾದ ಸಂಬಂಧಗಳನ್ನು ನೋಡಿ, ಅದು ಎಷ್ಟೇ ಕಷ್ಟಕರವಾಗಿದ್ದರೂ, ಅಥವಾ ಪ್ರಸ್ತುತವಾಗಿ ಕಷ್ಟಕರವಾಗಿದ್ದರೂ, ಅವರ ದಯೆಯನ್ನು ಗುರುತಿಸಲು ಪ್ರಯತ್ನಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. 

ಮೊದಲು, ನಾವು ಆದರ್ಶವಾದ ತಾಯಿಯ ಪ್ರೀತಿಯನ್ನು ನೋಡಬೇಕು. ಶಾಸ್ತ್ರೀಯ ಗ್ರಂಥಗಳಲ್ಲಿ ಇದರ ವಿವರಣೆಗಳು ತುಂಬಿವೆ: ಉದಾಹರಣೆಗೆ, ನೀವು ಅದನ್ನು ಅನೇಕ ಪ್ರಾಣಿಗಳಲ್ಲಿ ನೋಡುತ್ತೀರಿ. ತಾಯಿ ಹಕ್ಕಿಯು ಎಷ್ಟೇ ಚಳಿಪಟ್ಟು, ಒದ್ದೆಯಾಗಿದ್ದರೂ ತನ್ನ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತದೆ, ಮತ್ತು ಮೊಟ್ಟೆಯಿಂದ ಮರಿಯಾದಾಗ, ಅದು ಕೀಟಗಳನ್ನು ಹಿಡಿದು ಅಗಿಯುತ್ತದೆ, ಆದರೆ ಅವುಗಳನ್ನು ನುಂಗದೆ ತನ್ನ ಮರಿಗಳಿಗೆ ಆಹಾರವಾಗಿ ನೀಡುತ್ತದೆ. ಇದು ನಿಜಕ್ಕೂ ಅಸಾಧಾರಣವಾಗಿರುತ್ತದೆ. 

ಹೌದು, ಪ್ರಾಣಿ ಮತ್ತು ಕೀಟ ಪ್ರಪಂಚದಿಂದ ತಾಯಂದಿರು ತಮ್ಮ ಶಿಶುಗಳನ್ನು ತಿನ್ನುವ ಉದಾಹರಣೆಗಳಿವೆ, ಆದರೂ ಅವುಗಳು ಜನ್ಮ ನೀಡಲು ಸಾಕಷ್ಟು ಕಷ್ಟಗಳನ್ನು ಅನುಭವಿಸಿರುತ್ತವೆ. ನಮ್ಮ ಜೈವಿಕ ತಾಯಿಯಾಗಿರಲಿ ಅಥವಾ ಕೇವಲ ಪಾಲಿಸಿದ ತಾಯಿಯಾಗಿರಲಿ, ಯಾರೋ ಒಬ್ಬರು ನಮ್ಮನ್ನು ತಮ್ಮ ಗರ್ಭದಲ್ಲಿ ಹೊತ್ತೊಯ್ದಿರುವರು. ನಾವು ಟೆಸ್ಟ್ ಟ್ಯೂಬ್‌ನಲ್ಲಿ ಗರ್ಭಧರಿಸಿದ್ದರೂ ಸಹ, ಯಾರೋ ಒಬ್ಬರು ಟೆಸ್ಟ್ ಟ್ಯೂಬ್ ಮೇಲೆ ನಿಗಾ ಇಟ್ಟು, ಅದನ್ನು ಸರಿಯಾದ ತಾಪಮಾನದಲ್ಲಿ ಇರಿಸಿರುವರು. ನಮ್ಮ ತಾಯಿಗೆ ನಮ್ಮನ್ನು ಹೊರಲು ಇಷ್ಟವಿತ್ತೋ ಇಲ್ಲವೋ ಎಂಬುದು ಅಪ್ರಸ್ತುತ. ನಮ್ಮನ್ನು ಗರ್ಭಪಾತ ಮಾಡದೆ ತನ್ನ ಗರ್ಭದಲ್ಲಿ ಹೊತ್ತುಕೊಂಡು ಹೋಗುವುದು ನಂಬಲಾಗದ ದಯೆಯಾಗಿದೆ; ಅದು ಅವಳಿಗೆ ಆರಾಮದಾಯಕವಾಗಿರಲಿಲ್ಲ. ನಮ್ಮ ಜನನದ ಸಮಯದಲ್ಲಿ ಅವಳು ಬಹಳಷ್ಟು ನೋವನ್ನು ಅನುಭವಿಸಿರುವಳು. ಇದಲ್ಲದೆ, ನಾವು ಶಿಶುಗಳಾಗಿದ್ದಾಗ, ಯಾರಾದರೂ ಮಧ್ಯರಾತ್ರಿಯಲ್ಲಿ ಎದ್ದು, ನಮಗೆ ಆಹಾರ ನೀಡಬೇಕಾಗಿತ್ತು ಮತ್ತು ನಮ್ಮನ್ನು ನೋಡಿಕೊಳ್ಳಬೇಕಾಗಿತ್ತು; ಇಲ್ಲದಿದ್ದರೆ, ನಾವು ಬದುಕುಳಿಯುತ್ತಿರಲಿಲ್ಲ. ಈ ರೀತಿಯ ವಿಷಯಗಳನ್ನು ಶಾಸ್ತ್ರೀಯ ಪಠ್ಯಗಳಲ್ಲಿ ಒತ್ತಿಹೇಳಲಾಗಿದೆ. 

ನಮ್ಮ ತಾಯಂದಿರೊಂದಿಗೆ ನಮಗೆ ತೊಂದರೆಗಳಿದ್ದರೆ, ಐದನೇ ದಲೈ ಲಾಮಾ ಅವರ ಲ್ಯಾಮ್-ರಿಮ್ ಪಠ್ಯದಲ್ಲಿನ ಗುರು ಧ್ಯಾನಗಳ ಮೂಲಕ ನಾವು ಹೇಗೆ ಮುಂದುವರಿಯಬಹುದು ಎಂಬುದರಲ್ಲಿ ನಾವು ಸುಳಿವು ಪಡೆಯಬಹುದು ಎಂದು ನಾನು ಭಾವಿಸುತ್ತೇನೆ. ಉತ್ತಮ ಗುಣಗಳನ್ನು ಮಾತ್ರ ಹೊಂದಿರುವ ಆಧ್ಯಾತ್ಮಿಕ ಶಿಕ್ಷಕರನ್ನು ಕಂಡುಹಿಡಿಯುವುದು ಅಸಾಧ್ಯ ಎಂದು ಅನೇಕ ಹಿಂದಿನ ಪಠ್ಯಗಳು ಹೇಳಿವೆ. ಯಾವುದೇ ಆಧ್ಯಾತ್ಮಿಕ ಗುರುಗಳು ಪರಿಪೂರ್ಣ ಮಾದರಿಯಾಗಿರುವುದಿಲ್ಲ; ಪ್ರತಿಯೊಬ್ಬರೂ ಬಲವಾದ ಮತ್ತು ದುರ್ಬಲ ಅಂಶಗಳ ಮಿಶ್ರಣವನ್ನು ಹೊಂದಿರುತ್ತಾರೆ. ಆಧ್ಯಾತ್ಮಿಕ ಗುರುಗಳ ಮೇಲಿನ ಧ್ಯಾನದ ವಿಷಯದಲ್ಲಿ ನಾವು ಮಾಡಬೇಕಾಗಿರುವುದು ಏನೆಂದರೆ ಅಪಾರ ಗೌರವ, ಸ್ಫೂರ್ತಿ ಮತ್ತು ಮೆಚ್ಚುಗೆಯನ್ನು ಬೆಳೆಸಿಕೊಳ್ಳಲು ಗುರುಗಳ ಉತ್ತಮ ಗುಣಗಳು ಮತ್ತು ದಯೆಯ ಮೇಲೆ ಕೇಂದ್ರೀಕರಿಸಬೇಕು. ಇದರಿಂದ ಈ ಉತ್ತಮ ಗುಣಗಳು ಮತ್ತು ದಯೆಗಳನ್ನು ನಾವೇ ಬೆಳೆಸಿಕೊಳ್ಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.  

ಈ ಪ್ರಕ್ರಿಯೆಯಲ್ಲಿ, ನಾವು ಗುರುಗಳ ನ್ಯೂನತೆಗಳು ಮತ್ತು ದೋಷಗಳನ್ನು ನಿರಾಕರಿಸುವ ಅಗತ್ಯವಿಲ್ಲ ಎಂದು ಐದನೇ ದಲೈ ಲಾಮಾ ವಿವರಿಸಿರುವರು. ಅದು ನಿಷ್ಕಪಟತೆಯಾಗಿರುತ್ತದೆ. ನಾವು ನ್ಯೂನತೆಗಳನ್ನು ಒಪ್ಪಿಕೊಳ್ಳುತ್ತೇವೆ, ಆದರೆ ಅವುಗಳನ್ನು ತಾತ್ಕಾಲಿಕವಾಗಿ ಪಕ್ಕಕ್ಕೆ ಇರಿಸಿರುತ್ತೇವೆ, ಏಕೆಂದರೆ ಶಿಕ್ಷಕರ ದೋಷಗಳ ಬಗ್ಗೆ ಯೋಚಿಸುವುದರಿಂದ, ಅದು ದೂರು ನೀಡುವ ಮತ್ತು ನಕಾರಾತ್ಮಕ ಮನೋಭಾವಕ್ಕೆ ಕಾರಣವಾಗುತ್ತದೆ. ಅದು ಸ್ಪೂರ್ತಿದಾಯಕವಾಗಿರುವುದಿಲ್ಲ. ಒಳ್ಳೆಯ ಗುಣಗಳು ಮತ್ತು ದಯೆಯ ಮೇಲೆ ಕೇಂದ್ರೀಕರಿಸುವ ಮೂಲಕ ಮಾತ್ರ ನಮಗೆ ಸ್ಫೂರ್ತಿ ಸಿಗುತ್ತದೆ. 

ಆದ್ದರಿಂದ ಮೊದಲು, ನಾವು ನ್ಯೂನತೆಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಇವು ನಿಜವಾದ ನ್ಯೂನತೆಗಳೇ ಅಥವಾ ನಮ್ಮ ಪ್ರಕ್ಷೇಪಣಗಳೇ ಎಂದು ನಾವು ಪ್ರಾಮಾಣಿಕವಾಗಿ ಪರಿಶೀಲಿಸಬೇಕು. ನ್ಯೂನತೆಗಳು ಕೇವಲ ಪ್ರಕ್ಷೇಪಿಸಲ್ಪಟ್ಟಿದ್ದು ಮತ್ತು ನಿಜವಲ್ಲದಿದ್ದರೆ, ನಾವು ಅವುಗಳನ್ನು ಸಂಪೂರ್ಣವಾಗಿ ಕೈಬಿಡಬೇಕು. ನಂತರ ನಾವು ಕಾಲ್ಪನಿಕವಲ್ಲದ ನ್ಯೂನತೆಗಳು ಶಿಕ್ಷಕರಿಗೆ ಪ್ರಸ್ತುತವಾಗಿವೆಯೇ ಅಥವಾ ನಾವು ಬಿಡಲು ಬಯಸದ ಹಳೆಯ ಇತಿಹಾಸವೇ ಎಂಬುದನ್ನು ಪರಿಶೀಲಿಸಬೇಕು. ದೋಷಗಳು ಪ್ರಸ್ತುತವಾಗಿಲ್ಲದಿದ್ದರೆ, ನಾವು ಅವುಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತೇವೆ: ಅವು ಇನ್ನು ಪ್ರಸ್ತುತವಾಗಿರುವುದಿಲ್ಲ. ನಿಜವಾದ ಪ್ರಸ್ತುತ ದೋಷಗಳು ಯಾವುವು ಎಂಬುದು ನಮಗೆ ಸ್ಪಷ್ಟವಾದ ನಂತರ, ಅವು ಅವನ ಅಥವಾ ಅವಳ ಪ್ರಸ್ತುತ ದೋಷಗಳು ಎಂದು ಹೇಳುತ್ತೇವೆ. ನಂತರ, ನಾವು ಅವುಗಳನ್ನು ಸಹ ತಾತ್ಕಾಲಿಕವಾಗಿ ಬದಿಗಿಟ್ಟು, ಒಳ್ಳೆಯ ಗುಣಗಳ ಮೇಲೆ ಮಾತ್ರ ಗಮನಹರಿಸುತ್ತೇವೆ. 

ನಮ್ಮ ತಾಯಂದಿರ ದಯೆಯನ್ನು ಪರಿಗಣಿಸುವಾಗಲೂ ಇದೇ ರೀತಿಯ ಕಾರ್ಯವಿಧಾನವು ಸೂಕ್ತವಾಗಿರುತ್ತದೆ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಯಾರ ತಾಯಿಯೂ ಆದರ್ಶಪ್ರಾಯಳಲ್ಲ. ನಾವು ಪೋಷಕರಾಗಿದ್ದರೆ, ಆದರ್ಶ ಪೋಷಕರಾಗುವುದು ನಂಬಲಾಗದಷ್ಟು ಕಷ್ಟ ಎಂದು ನಮಗೆ ತಿಳಿದಿದೆ, ಆದ್ದರಿಂದ ನಮ್ಮ ಹೆತ್ತವರು ಸಹ ಆದರ್ಶಪ್ರಾಯರು ಎಂದು ನಾವು ನಿರೀಕ್ಷಿಸಬಾರದು. ನಂತರ, ನಮ್ಮ ತಾಯಂದಿರು ಹೊಂದಿರುವ ಅಥವಾ ಹೊಂದಿದ್ದ ದೋಷಗಳು ಮತ್ತು ನ್ಯೂನತೆಗಳನ್ನು ನಾವು ಪರಿಗಣಿಸುತ್ತೇವೆ ಮತ್ತು ಈ ನ್ಯೂನತೆಗಳಿಗೆ ಕಾರಣವಾದ ಕಾರಣಗಳು ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಯಾವುದೇ ಮಾನಸಿಕ ನಿರಂತರತೆಯು ಅಂತರ್ಗತವಾಗಿ ಸೊಳ್ಳೆಯಲ್ಲದಂತೆಯೇ (ಇದು ಅಂತರ್ಗತವಾಗಿ ಕಿರಿಕಿರಿ ಉಂಟುಮಾಡುವುದಿಲ್ಲ) ಅವಳು ಅಂತರ್ಗತವಾಗಿ ಕೆಟ್ಟ ವ್ಯಕ್ತಿಯಲ್ಲ. ನಾವು ನಮ್ಮ ತಾಯಂದಿರ ಮೇಲೆ ನ್ಯೂನತೆಗಳನ್ನು ಪ್ರಕ್ಷೇಪಿಸುತ್ತಿಲ್ಲ ಅಥವಾ ಇತಿಹಾಸದ ಬಗ್ಗೆ ಯೋಚಿಸುತ್ತಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಮತ್ತು ನಂತರ ನಾವು ಎಲ್ಲಾ ಕಾಲ್ಪನಿಕ ದೋಷಗಳನ್ನು ಮತ್ತು ಸದ್ಯಕ್ಕೆ, ಹಿಂದಿನ ಮತ್ತು ಪ್ರಸ್ತುತದ ದೋಷಗಳನ್ನು ಬದಿಗಿಡುತ್ತೇವೆ. ಸರಿ, ಅವಳಲ್ಲಿ ತಪ್ಪುಗಳಿವೆ ಅಥವಾ ಇದ್ದವು, ಆದರೆ ಅವಳು ಎಲ್ಲರಂತೆಯೇ ಒಬ್ಬ ಮನು‍ಷ್ಯಳು ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ: ನಾವೆಲ್ಲರೂ ದೋಷಗಳನ್ನು ಹೊಂದಿದ್ದೇವೆ. ನಂತರ ಅವಳು ನಮಗೆ ತೋರಿಸಿದ ಒಳ್ಳೆಯ ಗುಣಗಳು ಮತ್ತು ದಯೆಯನ್ನು ಪರಿಗಣಿಸುತ್ತೇವೆ.

ಒಬ್ಬ ಪಾಶ್ಚಿಮಾತ್ಯ ಧರ್ಮ ಗುರುಗಳು - ಅದು ಯಾರೆಂದು ನನಗೆ ಸರಿಯಾಗಿ ನೆನಪಿಲ್ಲ - ಧ್ಯಾನದ ಒಂದು ವಿಧಾನವನ್ನು ಸೂಚಿಸಿದ್ದಾರೆ, ಇದು ತುಂಬಾ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಹಂತದಲ್ಲಿ, ನಮ್ಮ ತಾಯಂದಿರ ನಕಾರಾತ್ಮಕ ಗುಣಗಳನ್ನು ಬದಿಗಿಟ್ಟು, ನಾವು ಐದು ಅಥವಾ ಹತ್ತು ವರ್ಷಗಳ ಘಟಕಗಳಲ್ಲಿ ನಮ್ಮ ಜೀವನವನ್ನು ಪರಿಗಣಿಸುತ್ತೇವೆ. ನಾವು ಐದು ನಿಮಿಷಗಳು, ಅರ್ಧ ಗಂಟೆ, ಒಂದು ಗಂಟೆ ಅಥವಾ ಎಷ್ಟು ಸಮಯ ಬೇಕಾದರೂ ಕಳೆಯಬಹುದು, ಪ್ರತಿ ಐದು ಅಥವಾ ಹತ್ತು ವರ್ಷಗಳ ಅವಧಿಯಲ್ಲಿ ನಮ್ಮ ತಾಯಂದಿರು ನಮಗಾಗಿ ಮಾಡಿದ ಎಲ್ಲಾ ದಯಾಮಯಿ ಕಾರ್ಯಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಮೊದಲನೆಯದಾಗಿ, ನಾವು ಗರ್ಭದಲ್ಲಿದ್ದಾಗಿನಿಂದ ಐದು ವರ್ಷದವರೆಗೆ, ಅವಳು ನಮ್ಮ ಕೊಳಕು ಡೈಪರ್‌ಗಳನ್ನು ಬದಲಾಯಿಸಿದಳು, ನಮಗೆ ಆಹಾರ ನೀಡಿದಳು, ಸ್ನಾನ ಮಾಡಿಸಿದಳು ಮತ್ತು ಈ ಎಲ್ಲಾ ಕೆಲಸಗಳನ್ನು ಮಾಡಿದಳು ಎಂದು ನಮಗೆ ನೆನಪಿದೆ. ನಂತರ ನಾವು ಐದರಿಂದ ಹತ್ತು ವರ್ಷ ವಯಸ್ಸಿನವರೆಗೆ ನೆನಪಿಸಿಕೊಳ್ಳುತ್ತೇವೆ ಇತ್ಯಾದಿ. ಅವಳು ನಮ್ಮನ್ನು ಶಾಲೆಗೆ ಕರೆದೊಯ್ದಳು – ನಮ್ಮ ಹೋಮ್ವರ್ಕ್ನಲ್ಲಿ ಸಹಾಯ ಮಾಡಿರಬಹುದು ಇಲ್ಲದಿರಬಹುದು, ಆದರೆ ಆಕೆ ನಮಗಾಗಿ ಅಡುಗೆ ಮಾಡಿ ನಮ್ಮ ಬಟ್ಟೆಗಳನ್ನು ಒಗೆದಿದ್ದಳು. ನಾವು ಹದಿಹರೆಯದವರಾಗಿದ್ದಾಗ, ಅವಳು ಬಹುಶಃ ನಮಗೆ ಖರ್ಚು ಮಾಡಲು ಹಣವನ್ನು ನೀಡುತ್ತಿದ್ದಳು. ನಮ್ಮ ತಾಯಂದಿರು ಎಷ್ಟೇ ಭಯಾನಕರಾಗಿದ್ದರೂ, ನಮ್ಮ ಜೀವನದ ಪ್ರತಿ ಅವಧಿಯಲ್ಲೂ ಅವರು ನಮಗೆ ತೋರಿಸಿದ ದಯೆಗಳು ನಿಸ್ಸಂದೇಹವಾಗಿ ಬಹಳಷ್ಟಿದ್ದವು. 

ನಂತರ ನಾವು ನಮ್ಮ ತಂದೆಯೊಂದಿಗೆ ಮತ್ತು ಇತರ ಸಂಬಂಧಿಕರು, ಸ್ನೇಹಿತರು ಮತ್ತು ಇತರರ ಬಗ್ಗೆ ಇದೇ ರೀತಿಯಾಗಿ ಯೋಚಿಸುತ್ತೇವೆ. ಇದು ಧ್ಯಾನದಲ್ಲಿ ಬಹಳಾ ಸಹಾಯಕವಾಗಿರುತ್ತದೆ. "ನನ್ನನ್ನು ಯಾರೂ ಪ್ರೀತಿಸುವುದಿಲ್ಲ" ಎಂದು ನಾವು ಭಾವಿಸಿದಾಗ ನಾವು ಕೆಲವೊಮ್ಮೆ ಅನುಭವಿಸುವ ಖಿನ್ನತೆಗೆ ಇದು ವಿಶೇಷವಾಗಿ ಬಲವಾದ ಪ್ರತಿವಿಷವಾಗಿರುತ್ತದೆ. ಈ ರೀತಿಯಾಗಿ, ಈ ಜೀವನದಲ್ಲಿ ನಮ್ಮ ತಾಯಂದಿರ ದಯೆಯನ್ನು ನಾವು ನೋಡಬಹುದಾದರೆ, ಎಲ್ಲರೂ ನಮಗೆ ಅದೇ ರೀತಿಯಾಗಿ ದಯೆ ತೋರಿದ್ದಾರೆಂದು ಗುರುತಿಸಲು ಇದು ನಮಗೆ ಸಹಾಯ ಮಾಡುತ್ತದೆ. ಯಾರೂ ಆದರ್ಶ ಮಾದರಿಯ ತಾಯಿಯಾಗಿರುವುದಿಲ್ಲ - ಖಂಡಿತವಾಗಿಯೂ, ಅವಳು ಇನ್ನೊಂದು ಜೀವಿತಾವಧಿಯಲ್ಲಿ, ಒಂದು ಹಂತದಲ್ಲಿ ನಮ್ಮನ್ನು ತಿಂದುಹಾಕಿರಬಹುದು, ಆದರೆ ಅವಳು ನಮಗೆ ದಯೆಯನ್ನು ಸಹ ತೋರಿಸಿದ್ದಾಳೆ.

ಮಾತೃ ಪ್ರೀತಿಯ ದಯೆಯನ್ನು ಮರುಪಾವತಿಸುವುದು 

ಏಳು ಭಾಗಗಳ ಬೋಧನೆಯ ಮೂರನೇ ಹಂತವೆಂದರೆ ನಾವು ಪಡೆದ ಮಾತೃ ಪ್ರೀತಿಯ ದಯೆಯನ್ನು ಮರುಪಾವತಿಸುವ ಬಯಕೆಯನ್ನು ಬೆಳೆಸಿಕೊಳ್ಳುವುದು. ಇದಕ್ಕಾಗಿ, ನಮ್ಮ ತಾಯಂದಿರು ಕುರುಡರಾಗಿದ್ದಾರೆ ಎಂದೂ ಮತ್ತು ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದಾರೆ ಮತ್ತು ಸಂಪೂರ್ಣವಾಗಿ ಅಸಮಾಧಾನಗೊಂಡಿದ್ದಾರೆ, ಬಂಡೆಯ ಅಂಚಿನಲ್ಲಿ ನಿಂತು, ದುಃಖದ ಪ್ರಪಾತಕ್ಕೆ ಬೀಳಲಿದ್ದಾರೆ ಎಂದು ನಾವು ಊಹಿಸುತ್ತೇವೆ. ಅವರ ಪುತ್ರರು ಮತ್ತು ಪುತ್ರಿಯರಾದ ನಾವು, ಅವರ ಪತನವನ್ನು ತಪ್ಪಿಸಲು ಅವರಿಗೆ ಹೇಗೆ ಸಹಾಯ ಮಾಡಬೇಕೆಂದು ತಿಳಿದಿದೆ ಮತ್ತು ಅವರ ಪಕ್ಕದಲ್ಲಿ ನಿಂತಿದ್ದೇವೆ ಎಂದು ನಾವು ಊಹಿಸಿಕೊಳ್ಳುತ್ತೇವೆ. ಅವರ ಮಕ್ಕಳಾದ ನಾವೇ ಅವರಿಗೆ ಸಹಾಯ ಮಾಡದಿದ್ದರೆ, ಇನ್ನಾರು ಮಾಡುತ್ತಾರೆ? ಅವರು ಯಾರ ಕಡೆಗೆ ತಿರುಗಬಹುದು? ಅಂತಹ ಆಲೋಚನೆಗಳು, ಅವರನ್ನು ಎಲ್ಲಾ ರೀತಿಯ ದುಃಖಗಳಿಂದ ಮುಕ್ತಗೊಳಿಸಲು ಸಹಾಯ ಮಾಡುವ ಮೂಲಕ ಅವರ ದಯೆಯನ್ನು ಮರುಪಾವತಿಸುವ ಈ ಹೃತ್ಪೂರ್ವಕ ಬಯಕೆಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. 

ನಮ್ಮ ಆಶಯವನ್ನು ಬಲಪಡಿಸಲು, ನಮಗೆ ತೋರಿಸಲಾದ ಮಾತೃತ್ವದ ದಯೆಯನ್ನು ನೆನಪಿಸಿಕೊಳ್ಳಲು ನಾವು ಈಗ ವಿವರಿಸಿರುವ ಧ್ಯಾನದ ಮತ್ತೊಂದು ರೂಪಾಂತರವನ್ನು ನೋಡಬಹುದು. ಮತ್ತೊಮ್ಮೆ, ನಾವು ನಮ್ಮ ಜೀವನದ ಐದು ಅಥವಾ ಹತ್ತು ವರ್ಷಗಳ ಅವಧಿಗಳಲ್ಲಿ ಹಾದುಹೋಗಿ, ನಮ್ಮ ತಾಯಂದಿರಿಗೆ ನಾವು ಯಾವ ರೀತಿಯಲ್ಲಿ ದಯೆಯನ್ನು ತೋರಿಸಿದ್ದೇವೆ ಎಂಬುದನ್ನು ಪರಿಶೀಲಿಸುತ್ತೇವೆ. ನಮ್ಮ ತಂದೆ, ನಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಇತರರೊಂದಿಗೂ ನಾವು ಇದೇ ರೀತಿಯಾಗಿ ಮಾಡುತ್ತೇವೆ. 

ನಾವು ಎಷ್ಟು ಪ್ರೀತಿ ಮತ್ತು ಸಹಾಯವನ್ನು ಪಡೆದಿದ್ದೇವೆ ಮತ್ತು ಎಷ್ಟು ನೀಡಿದ್ದೇವೆ ಎಂಬುದನ್ನು ಹೋಲಿಸಿದರೆ, ನಮ್ಮಲ್ಲಿ ಹೆಚ್ಚಿನವರು ನಾವು ನೀಡಿದ್ದಕ್ಕಿಂತ ಹೆಚ್ಚಿನದನ್ನು ಪಡೆದಿದ್ದೇವೆ ಎಂದು ಗಮನಿಸುತ್ತೇವೆ. ಇದರ ಉದ್ದೇಶವು ನಾವು ತಪ್ಪಿತಸ್ಥರೆಂದು ಭಾವಿಸುವುದಲ್ಲ, ಇದು ಸಾಮಾನ್ಯವಾಗಿ ಗೊಂದಲಮಯವಾದ ಪಾಶ್ಚಿಮಾತ್ಯ ಪ್ರತಿಕ್ರಿಯೆಯಾಗಿರುತ್ತದೆ. ಬೋಧಿಚಿತ್ತ ಧ್ಯಾನದ ಮುಂದಿನ ಹಂತಕ್ಕೆ ನಮಗೆ ಸಹಾಯ ಮಾಡುವುದು, ಅಂದರೆ, ನಾವು ಪಡೆದ ದಯೆಯನ್ನು ಗುರುತಿಸುವುದು, ಆಳವಾದ ಕೃತಜ್ಞತೆಯ ಭಾವನೆ ಮತ್ತು ಆ ದಯೆಯನ್ನು ಮರುಪಾವತಿಸುವ ಬಯಕೆಯನ್ನು ಬೆಳೆಸುವುದಾಗಿರುತ್ತದೆ. 

ನಾನು ಈಗಷ್ಟೇ ವಿವರಿಸಿದ ಧ್ಯಾನದ ರೂಪಾಂತರವು, ನಮ್ಮ ಹೃದಯ ಮುಟ್ಟಲು ನಿಜವಾಗಿಯೂ ಬಹಳ ಸಹಾಯಕವಾಗಿದೆ ಎಂದು ನಾನು ಕಂಡುಕೊಂಡಿದ್ದೇನೆ, ಇದರಿಂದ ನಾವು ನಿಜವಾಗಿಯೂ ಏನನ್ನಾದರೂ ಅನುಭವಿಸುತ್ತೇವೆ. ಇದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಪ್ರೀತಿ ಮತ್ತು ಸಹಾನುಭೂತಿಯ ಈ ಎಲ್ಲಾ ಧ್ಯಾನಗಳನ್ನು ಮಾಡುವ ಮತ್ತು ಹೊರಗೆ ಹೋಗಿ ಇತರರಿಗೆ ಸಹಾಯ ಮಾಡುವ ಅನೇಕ ಪಾಶ್ಚಿಮಾತ್ಯ ಬೌದ್ಧರನ್ನು ನಾನು ನೋಡಿದ್ದೇನೆ, ಆದರೆ ಅವರು ತಮ್ಮ ಹೆತ್ತವರೊಂದಿಗೆ ಶೋಚನೀಯ ಸಂಬಂಧವನ್ನು ಹೊಂದಿರುತ್ತಾರೆ ಮತ್ತು ಸಿಲುಕಿಕೊಂಡಿರುತ್ತಾರೆ. ಆ ಸಂಬಂಧದ ಮೇಲೆ ಕೆಲಸ ಮಾಡುವುದು ನಿಜವಾಗಿಯೂ ಸಹಾಯಕವಾಗಿರುತ್ತದೆ ಮತ್ತು ಅದು ಕಷ್ಟಕರವಾದ ಕಾರಣಕ್ಕೆ ಅದನ್ನು ಬದಿಗಿಡಬಾರದು ಎಂದು ನಾನು ಭಾವಿಸುತ್ತೇನೆ. 

ಅಭ್ಯಾಸವನ್ನು ಅನ್ವಯಿಸಲು ಸೂಚಿಸಲಾದ ವಿಧಾನ 

ಪ್ರತಿಯೊಂದು ಹಂತದಲ್ಲಿಯೂ ಇರುವ ಒಂದು ಪ್ರಮುಖ ವಿಷಯವೆಂದರೆ ನಮ್ಮ ಅಭ್ಯಾಸದ ವ್ಯಾಪ್ತಿಯಲ್ಲಿ ಎಲ್ಲಾ ಜೀವಿಗಳನ್ನು ಸೇರಿಸಿಕೊಳ್ಳುವುದು ಮತ್ತು ಅದನ್ನು ವಿಸ್ತರಿಸಲು ಪ್ರಯತ್ನಿಸುವುದಾಗಿರುತ್ತದೆ. ಪ್ರತಿಯೊಂದು ಹಂತದಲ್ಲಿಯೂ, ನಾವು ಚಿಕ್ಕದಾಗಿ ಪ್ರಾರಂಭಿಸಬಹುದು, ಆದರೆ ಕ್ರಮೇಣವಾಗಿ ನಾವು ನಮ್ಮ ವ್ಯಾಪ್ತಿಯನ್ನು ವಿಸ್ತರಿಸಬೇಕಾಗುತ್ತದೆ. ನಾವು ಇದನ್ನು ಸಮಚಿತ್ತತೆಯ ಆಧಾರದ ಮೇಲೆ ಮಾಡುತ್ತೇವೆ, ಪ್ರತಿಯೊಬ್ಬರನ್ನು ವೈಯಕ್ತಿಕ ಮಾನಸಿಕ ನಿರಂತರತೆಗಳಾಗಿ ನೋಡುತ್ತೇವೆ. ಹೀಗೆ ಮಾಡುವ ಒಂದು ಪರಿಣಾಮಕಾರಿ ಮಾರ್ಗವು, ಕೇವಲ ನಮ್ಮ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡುವುದಲ್ಲದೆ, ಅಮೂರ್ತವಾಗಿ "ಎಲ್ಲಾ ಸಂವೇದನಾಶೀಲ ಜೀವಿಗಳ" ಬಗ್ಗೆ ಯೋಚಿಸುವುದಾಗಿರುತ್ತದೆ. ಸಮತೋಲಿತ ಭಾವನೆಗಳನ್ನು ಬೆಳೆಸಲು, ಸೂಕ್ಷ್ಮತೆಯ ತರಬೇತಿಯಲ್ಲಿ ನಾನು ಸೂಚಿಸುವ ರೀತಿಯಲ್ಲಿಯೇ ಅಭ್ಯಾಸ ಮಾಡುವುದು ಹೆಚ್ಚು ಪರಿಣಾಮಕಾರಿ ಎಂದು ನಾನು ಭಾವಿಸುತ್ತೇನೆ. 

ಬೇರೆ ರೀತಿಯಲ್ಲಿ ಹೇಳುವುದಾದರೆ, ವಿವಿಧ ಜನರ ಕಡೆಗೆ ಈ ಸಕಾರಾತ್ಮಕ ವರ್ತನೆಗಳನ್ನು ಮೊದಲು ಬೆಳೆಸಲು ಪ್ರಯತ್ನಿಸಿ ಮತ್ತು ಅವರ ಫೋಟೋಗಳ ಮೇಲೆ ಕೇಂದ್ರೀಕರಿಸಿ - ಸ್ನೇಹಿತರು, ನಮಗೆ ಇಷ್ಟವಿಲ್ಲದ ಜನರು ಮತ್ತು ಅಪರಿಚಿತರು. ನಂತರ ಧ್ಯಾನದ ಗುಂಪಿನಲ್ಲಿ ನಮ್ಮ ಸುತ್ತಲೂ ವೃತ್ತದಲ್ಲಿ ಕುಳಿತಿರುವ ನಿಜವಾದ ಜನರನ್ನು ನೋಡುವಾಗ ಈ ವರ್ತನೆಗಳನ್ನು ಬೆಳೆಸಲು ಪ್ರಯತ್ನಿಸಿ. ನಂತರ ಸಬ್‌ವೇ ಅಥವಾ ಬಸ್‌ನಲ್ಲಿರುವ ಜನರೊಂದಿಗೆ ಹೀಗೆ ಮಾಡಲು ಪ್ರಯತ್ನಿಸಿ. ಈ ರೀತಿಯಾಗಿ, ನಾವು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವ ಸಕಾರಾತ್ಮಕ ವರ್ತನೆಗಳನ್ನು ವಾಸ್ತವದಲ್ಲಿ ಇತರರಿಗಾಗಿ ಅನ್ವಯಿಸಬಹುದು. 

ನಾವು ಪ್ರಾಣಿಗಳು, ಕೀಟಗಳು ಮತ್ತು ಮುಂತಾದವುಗಳಿಗಾಗಿ ಅನ್ವಯಿಸಲು ಪ್ರಯತ್ನಿಸುತ್ತೇವೆ - ಕೇವಲ ನಮ್ಮ ಮನಸ್ಸಿನಲ್ಲಿ ಸೈದ್ಧಾಂತಿಕವಾಗಲ್ಲ, ಅವುಗಳನ್ನು ನಿಜವಾಗಿಯೂ ನೋಡಿದಾಗ. ಹಾಗೆ ಮಾಡುವಾಗ, ಟಿಬೆಟಿಯನ್ನರಲ್ಲಿ ನಾವು ಕೆಲವೊಮ್ಮೆ ನೋಡುವ ವಿಪರೀತತೆಯನ್ನು ತಪ್ಪಿಸಲು ಪ್ರಯತ್ನಿಸಬೇಕು - ಉದಾಹರಣೆಗೆ, ಮನುಷ್ಯರಿಗಿಂತ ಕೀಟಕ್ಕೆ ದಯೆ ತೋರಿಸುವುದು ಸುಲಭ. ದೇವಾಲಯದ ಮಧ್ಯದಲ್ಲಿ ಇರುವೆ ಇದ್ದರೆ, ಅದನ್ನು ನೋಯಿಸದಂತಿರಲು ಎಲ್ಲರೂ ವಿಪರೀತ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಆಗಾಗ್ಗೆ, ಮನುಷ್ಯರಿಗೆ ಇದೇ ರೀತಿಯ ಕಾಳಜಿ ಮತ್ತು ದಯೆಯನ್ನು ತೋರಿಸುವುದಿಲ್ಲ, ಉದಾಹರಣೆಗೆ ಭಾರತೀಯರು ಅಥವಾ ವಿದೇಶಿಯರು ಅವರ ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿ ಕಾಣುವ ವಿಷಯದ ಬಗ್ಗೆ ಏನಾದರೂ ತಿಳಿದುಕೊಳ್ಳಲು ಬಯಸುವವರಿಗೆ. ಇಲ್ಲಿ ನಾವು ಸರಿಯಾದ ದೃಷ್ಟಿಕೋನವನ್ನು ಪಾಲಿಸಬೇಕು. 

ಕೆಲವರು ಮನುಷ್ಯನಿಗೆ ಸಹಾಯ ಮಾಡುವುದಕ್ಕಿಂತ ಇರುವೆಗೆ ಸಹಾಯ ಮಾಡುವುದು ಸುಲಭ ಎಂದು ಹೇಳಬಹುದು. ಏಕೆಂದರೆ ಇರುವೆ ಹಿಂತಿರುಗಿ ಮಾತನಾಡುವುದಿಲ್ಲ ಮತ್ತು ನಿಮಗೆ ಕಷ್ಟವನ್ನುಂಟು ಮಾಡುವುದಿಲ್ಲ, ಆದರೆ ಜನರು ಆಗಾಗ್ಗೆ ಹಾಗೆ ಮಾಡುತ್ತಾರೆ. ಇರುವೆಯನ್ನು ಎತ್ತಿಕೊಂಡು ಹೊರಗೆ ಕರೆದೊಯ್ಯಬಹುದು, ಆದರೆ ಜನರು ಕಿರಿಕಿರಿ ಉಂಟುಮಾಡಿದರೆ ನೀವು ಅವರೊಂದಿಗೆ ಹಾಗೆ ಮಾಡಲು ಸಾಧ್ಯವಿಲ್ಲ. ಏನೇ ಇರಲಿ, ನಾನು ಏನು ಹೇಳಲು ಬಯಸುತ್ತೇನೆ ಎಂದರೆ, ಬಹಳಷ್ಟು ಜನರು ಈ ಧ್ಯಾನಗಳನ್ನು ಬಹಳ ಅಮೂರ್ತ ರೀತಿಯಲ್ಲಿ ಮಾಡುತ್ತಾರೆ - "ಎಲ್ಲಾ ಸಂವೇದನಾಶೀಲ ಜೀವಿಗಳು" - ಮತ್ತು ಇದನ್ನು "ವಾಸ್ತವ ಜಗತ್ತಿನಲ್ಲಿ" ನಿಜವಾದ ಜನರಿಗೆ ಎಂದಿಗೂ ಅನ್ವಯಿಸುವುದಿಲ್ಲ. ಇದು ಯಾವುದೇ ಪ್ರಗತಿಯನ್ನು ಸಾಧಿಸುವಲ್ಲಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತದೆ. 

ಮಹಾನ್ ಪ್ರೀತಿ 

ನಾವು ಪ್ರತಿಯೊಬ್ಬರನ್ನು ನಮ್ಮ ತಾಯಿ ಎಂದು ಗುರುತಿಸಿದಾಗ, ತಾಯಿಯ ಪ್ರೀತಿಯ ದಯೆಯನ್ನು ನೆನಪಿಸಿಕೊಂಡಾಗ ಮತ್ತು ಕೃತಜ್ಞತೆಯಿಂದ, ಆ ದಯೆಯನ್ನು ಮರುಪಾವತಿಸಲು ಯೋಚಿಸಿದಾಗ, ನಮ್ಮಲ್ಲಿ ಸ್ವಾಭಾವಿಕವಾಗಿ ಹೃದಯಸ್ಪರ್ಶಿ ಪ್ರೀತಿಯ ಭಾವನೆ ಉಂಟಾಗುತ್ತದೆ. ಇದು ನಾವು ಭೇಟಿಯಾಗುವ ಎಲ್ಲರಿಗಾಗಿ ಸ್ವಯಂಚಾಲಿತವಾಗಿ ಉದ್ಭವಿಸುವ ನಿಕಟತೆ ಮತ್ತು ಮಮತೆಯ ಭಾವನೆಯಾಗಿರುತ್ತದೆ. ಈ ಭಾವನೆಯನ್ನು ಬೆಳೆಸಿಕೊಳ್ಳಲು ಪ್ರತ್ಯೇಕವಾದ ಧ್ಯಾನ ಹಂತದ ಅಗತ್ಯವಿಲ್ಲ. ಇದನ್ನು ಮಮತೆಯುಳ್ಳ, ಕಾಳಜಿಯುಳ್ಳ ಪ್ರೀತಿ ಎಂದೂ ಕರೆಯಲಾಗುತ್ತದೆ, ನಾವು ಯಾರನ್ನಾದರೂ ಪ್ರೀತಿಸುವ, ಅವರ ಒಳಿತಿನ ಬಗ್ಗೆ ಕಾಳಜಿ ವಹಿಸುವ ಮತ್ತು ಅವರಿಗೆ ಏನಾದರೂ ಕೆಟ್ಟದು ಸಂಭವಿಸಿದರೆ ತುಂಬಾ ದುಃಖಿತರಾಗುವ ಪ್ರೀತಿಯಾಗಿರುತ್ತದೆ. 

ಹೃದಯಸ್ಪರ್ಶಿ ಪ್ರೀತಿಯ ಆಧಾರದ ಮೇಲೆ, ನಾವು ನಾಲ್ಕನೇ ಹೆಜ್ಜೆಯಿಡುತ್ತೇವೆ, ಇದೇ ಮಹಾನ್ ಪ್ರೀತಿಯ ಧ್ಯಾನ. ಪ್ರೀತಿ ಎಂದರೆ ಬೇರೆಯವರು ಸಂತೋಷವಾಗಿರಬೇಕೆಂಬ ಬಯಕೆ, ಇದು ಸಾಮಾನ್ಯವಾಗಿ ನಾವು ಇಷ್ಟಪಡುವವರಾಗಿರುತ್ತಾರೆ. ಆದರೆ, ಮಹಾನ್ ಪ್ರೀತಿ ಎನ್ನವುದು ಎಲ್ಲರೂ ಸಂತೋಷವಾಗಿರಲಿ ಮತ್ತು ಸಂತೋಷಕ್ಕೆ ಕಾರಣಗಳನ್ನು ಹೊಂದಿರಲಿ ಎಂಬ ಬಯಕೆಯಾಗಿರುತ್ತದೆ. ಅದು ಸಂತೋಷ ಮತ್ತು ಅದರ ಕಾರಣಗಳು ಎರಡೂ ಆಗಿರುವುದು ನಿಜಕ್ಕೂ ಬಹಳ ಮುಖ್ಯ. ಇದರರ್ಥ ಸಂತೋಷವು ಕಾರಣಗಳಿಂದ ಬರುತ್ತದೆ, ಕೇವಲ ದೇವರ ಅನುಗ್ರಹ ಅಥವಾ ಅದೃಷ್ಟವಾಗಿರುವುದಿಲ್ಲ, ಮತ್ತು ಅದರ ಕಾರಣವು ನಾನು ಆಗಿರುವುದಿಲ್ಲ ಎಂಬ ನಮ್ಮ ಸಂಪೂರ್ಣ ತಿಳುವಳಿಕೆ ಮುಖ್ಯವಾಗಿರುತ್ತದೆ. 

ಸಂತೋಷಕ್ಕೆ ಕಾರಣಗಳನ್ನು ಕರ್ಮದ ಕುರಿತಾದ ಬೋಧನೆಗಳಲ್ಲಿ ನೀಡಲಾಗಿದೆ: ಜನರು ಬಾಂಧವ್ಯ, ಕೋಪ ಇತ್ಯಾದಿಗಳಿಲ್ಲದೆ ರಚನಾತ್ಮಕವಾಗಿ ವರ್ತಿಸಿದರೆ, ಅವರು ಸಂತೋಷವನ್ನು ಅನುಭವಿಸುತ್ತಾರೆ. ಆದ್ದರಿಂದ, ನಾವು ಹೀಗೆ ಯೋಚಿಸಬೇಕಾಗಿದೆ, "ನಿಮಗೆ ಸಂತೋಷ ಮತ್ತು ಸಂತೋಷಕ್ಕೆ ಕಾರಣಗಳು ಸಿಗಲಿ. ನೀವು ನಿಜವಾಗಿಯೂ ರಚನಾತ್ಮಕ ಮತ್ತು ಆರೋಗ್ಯಕರ ರೀತಿಯಲ್ಲಿ ವರ್ತಿಸುವಂತೆ ಆಗಲಿ, ಇದರಿಂದ ನೀವು ಸಂತೋಷವನ್ನು ಅನುಭವಿಸುವಿರಿ." 

ಈ ಬೋಧಿಚಿತ್ತ ಧ್ಯಾನಗಳಲ್ಲಿ ನಾವು ಎಲ್ಲರಿಗೂ ಸಹಾಯ ಮಾಡಲು ಬುದ್ಧರಾಗಲು ಶ್ರಮಿಸುತ್ತಿದ್ದೇವೆ, ಆದರೆ ಅವರಿಗೆ ಸಹಾಯ ಮಾಡುವಲ್ಲಿ ನಾವು ವಹಿಸಬಹುದಾದ ಪಾತ್ರವನ್ನು ಹಿಗ್ಗಿಸದೆ ಹೀಗೆ ಮಾಡಬೇಕು ಎಂಬುದು ಈ ಹಂತದಿಂದ ಈಗಾಗಲೇ ಸ್ಪಷ್ಟವಾಗಿದೆ. ನಾವು ಇತರರಿಗೆ ದಾರಿ ತೋರಿಸಬಹುದು, ಆದರೆ ಅವರು ಸಂತೋಷಕ್ಕೆ ಕಾರಣಗಳನ್ನು ಸ್ವತಃ ನಿರ್ಮಿಸಬೇಕಾಗಿದೆ. 

ಮಹಾನ್ ಸಹಾನುಭೂತಿ 

ಐದನೇ ಹೆಜ್ಜೆಯು, ಮಹಾನ್ ಸಹಾನುಭೂತಿಯಾಗಿರುತ್ತದೆ: ಪ್ರತಿಯೊಬ್ಬರೂ ದುಃಖ ಮತ್ತು ದುಃಖದ ಕಾರಣಗಳಿಂದ ಮುಕ್ತರಾಗಬೇಕೆಂಬ ಬಯಕೆ. ಅವರ ನೋವು ಕಾರಣಗಳಿಂದ ಬರುತ್ತದೆ ಮತ್ತು ಅವರು ತಮ್ಮ ದುಃಖವನ್ನು ನಿವಾರಿಸಲು ಆ ಕಾರಣಗಳನ್ನು ನಿವಾರಿಸಬೇಕು ಎಂಬುದು ಸಂಪೂರ್ಣ ತಿಳುವಳಿಕೆಯಾಗಿರುತ್ತದೆ. ಇದು ಬಹಳ ವಾಸ್ತವಿಕವಾದ ದೃಷ್ಟಿಕೋನವಾಗಿರುತ್ತದೆ. ಮಹಾನ್ ಪ್ರೀತಿ ಮತ್ತು ಮಹಾನ್ ಸಹಾನುಭೂತಿ ಕೇವಲ "ಎಲ್ಲರೂ ಬಳಲುತ್ತಿದ್ದಾರೆ ಎಂಬುದರ ಬಗ್ಗೆ ನಾನು ಬಹಳಾ ವಿಷಾದಿಸುತ್ತೇನೆ" ಎಂಬಂತಹ ಭಾವನಾತ್ಮಕ ಭಾವನೆಗಳಲ್ಲ, ಬದಲಾಗಿ, ಅವು ವರ್ತನೆಯ ಕಾರಣ ಮತ್ತು ಪರಿಣಾಮದ ತಿಳುವಳಿಕೆಯೊಂದಿಗೆ ಬರುತ್ತವೆ. 

ಮಹಾನ್ ಸಹಾನುಭೂತಿ ಹಲವಾರು ರೀತಿಗಳಲ್ಲಿ ಸಾಮಾನ್ಯ ಸಹಾನುಭೂತಿಯನ್ನು ಮೀರಿಸುತ್ತದೆ. 

  • ಇದು ಕೆಲವರಲ್ಲದೆ, ಎಲ್ಲಾ ಸೀಮಿತ ಜೀವಿಗಳನ್ನು ಸಮಾನವಾಗಿ ಗುರಿಯಾಗಿರಿಸಿಕೊಂಡಿರುತ್ತದೆ. 
  • ಮಹಾನ್ ಪ್ರೀತಿಯಂತೆ, ಇದು ತನ್ನ ಏಕೈಕ ಮಗುವಿನ ಕಡೆಗೆ ಇರುವ ಪ್ರೀತಿಯ ಮತ್ತು ಕಾಳಜಿಯುಳ್ಳ ತಾಯಿಯಂತೆ, ಪ್ರತಿಯೊಬ್ಬರ ಬಗ್ಗೆಯೂ ಕಾಳಜಿ ವಹಿಸುವುದು ಮತ್ತು ಅವರನ್ನು ರಕ್ಷಿಸುವ ಬಯಕೆಯನ್ನು ಒಳಗೊಂಡಿರುತ್ತದೆ. 
  • ಗೊಂದಲದಿಂದ ಬರುವ, ಗೊಂದಲದೊಂದಿಗೆ ಬೆರೆತು, ಹೆಚ್ಚು ಗೊಂದಲವನ್ನು ಉಂಟುಮಾಡುವ ಮತ್ತು ದುಃಖವನ್ನು ಶಾಶ್ವತಗೊಳಿಸುವ ಒಟ್ಟುಗೂಡಿಗಳೊಂದಿಗೆ ಪದೇ ಪದೇ, ಅನಿಯಂತ್ರಿತವಾಗಿ ಮರುಜನ್ಮ ಪಡೆಯುವ ಸರ್ವವ್ಯಾಪಿ ದುಃಖದಿಂದ ಪ್ರತಿಯೊಬ್ಬರೂ ಮುಕ್ತರಾಗಬೇಕೆಂಬ ಬಯಕೆಯಾಗಿರುತ್ತದೆ. ಹೀಗಾಗಿ, ಇದು ಇತರರು ನೋವಿನಿಂದ ಅಥವಾ ಬದಲಾವಣೆಯ ದುಃಖದಿಂದ ಮುಕ್ತರಾಗಬೇಕೆಂಬ ಬಯಕೆ ಮಾತ್ರವಲ್ಲ. ಬದಲಾವಣೆಯ ನೋವು ಸಾಮಾನ್ಯ ಲೌಕಿಕ ಸಂತೋಷವಾಗಿದ್ದು ಅದು ಎಂದಿಗೂ ಉಳಿಯುವುದಿಲ್ಲ ಮತ್ತು ಎಂದಿಗೂ ತೃಪ್ತಿಪಡಿಸುವುದಿಲ್ಲ. ಮಹಾನ್ ಸಹಾನುಭೂತಿ ಎಂದರೆ ಜೀವಿಗಳು ಆ ಸಮಸ್ಯೆಯಿಂದ ಪಾರಾಗಲು ಸ್ವರ್ಗಕ್ಕೆ ಹೋಗಬೇಕೆಂಬ ಬಯಕೆಯಾಗಿರುವುದಿಲ್ಲ. 
  • ಇದು, ಎಲ್ಲಾ ಸೀಮಿತ ಜೀವಿಗಳು ತಮ್ಮ ಸರ್ವವ್ಯಾಪಿ ದುಃಖದಿಂದ ಮುಕ್ತಿ ಪಡೆಯುವುದು ಸಾಧ್ಯ ಎಂಬ ದೃಢ ನಂಬಿಕೆಯನ್ನು ಆಧರಿಸಿರುತ್ತದೆ. ಇದು ಕೇವಲ ಒಂದು ಒಳ್ಳೆಯ ಆಶಯವಾಗಿರುವುದಿಲ್ಲ. 

ಸಹಾನುಭೂತಿಯನ್ನು ಯಾವಾಗಲೂ ತ್ಯಾಗಕ್ಕೆ ಹೋಲುವ ಮನೋಭಾವ, ಸ್ವತಂತ್ರರಾಗುವ ದೃಢಸಂಕಲ್ಪ ಎಂದು ವಿವರಿಸಲಾಗುತ್ತದೆ. ತ್ಯಾಗವು ನಮ್ಮ ಸ್ವಂತ ದುಃಖ, ಅದರ ಕಾರಣಗಳು ಮತ್ತು ನಾವು ಅವುಗಳಿಂದ ಮುಕ್ತರಾಗಬೇಕೆಂಬ ಬಯಕೆಯನ್ನು ಗುರಿಯಾಗಿರಿಸಿಕೊಳ್ಳುವ ಮನೋಭಾವವಾಗಿರುತ್ತದೆ. ನಮ್ಮ ಸ್ವಂತ ದುಃಖಗಳು ಮತ್ತು ಅವುಗಳ ಕಾರಣಗಳಿಂದ ಮುಕ್ತರಾಗಬೇಕೆಂಬ ನಮ್ಮ ದೃಢಸಂಕಲ್ಪದ ಆಧಾರದ ಮೇಲೆ, ನಾವು ಇತರರ ಬಗ್ಗೆ ಸಹಾನುಭೂತಿಯನ್ನು ಬೆಳೆಸಿಕೊಳ್ಳಬಹುದು. ನಾವು ಏನು ಮಾಡುತ್ತೇವೆಯೆಂದರೆ, ಅದೇ ಮನೋಭಾವವನ್ನು ಬದಲಾಯಿಸಿ, ಅದನ್ನು ಇತರರ ಕಡೆಗೆ, ಅವರ ದುಃಖ ಮತ್ತು ಅವರ ದುಃಖದ ಕಾರಣಗಳ ಕಡೆಗೆ ಮತ್ತು ಅವರು ಅದರಿಂದ ಮುಕ್ತರಾಗಬೇಕೆಂಬ ಬಯಕೆಯನ್ನು ನಾವು ನಮಗಾಗಿ ಬಯಸುವಂತಹ ತೀವ್ರತೆಯೊಂದಿಗೆ ಅದನ್ನು ನಿರ್ದೇಶಿಸುತ್ತೇವೆ.  

ನಾವು ನಮ್ಮ ಸ್ವಂತ ದುಃಖದ ಬಗ್ಗೆ ಯೋಚಿಸಿ ಅದರಿಂದ ಮುಕ್ತರಾಗಬೇಕೆಂದು ಬಯಸದಿದ್ದರೆ, ಇತರರ ಬಗ್ಗೆ ಸಹಾನುಭೂತಿ ಹೊಂದುವುದು ಮತ್ತು ನಿಜವಾಗಿಯೂ ಕರುಣೆ ಹೊಂದುವುದು ಕಷ್ಟ ಎಂದು ಯಾವಾಗಲೂ ಹೇಳಲಾಗುತ್ತದೆ. ಇತರರು ನಿಜವಾಗಿಯೂ ಅವರ ದುಃಖದಿಂದ ನೋವನ್ನು ಅನುಭವಿಸುತ್ತಾರೆ ಮತ್ತು ಅವರ ದುಃಖವು ನಮ್ಮ ಸ್ವಂತ ದುಃಖವು ನಮ್ಮನ್ನು ನೋಯಿಸುವಷ್ಟೇ ಅವರನ್ನು ನೋಯಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇದನ್ನು ಅರ್ಥಮಾಡಿಕೊಳ್ಳುವುದು ನಮ್ಮ ಸ್ವಂತ ದುಃಖ ನೋವುಂಟುಮಾಡುತ್ತದೆ ಎಂದು ಒಪ್ಪಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲದಿದ್ದರೆ, ನಾವು ಇತರರ ನೋವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನೆನಪಿರಲಿ, ನಮಗೆ ಬಹಳಾ ದಯೆ ತೋರಿದ, ನಮ್ಮ ತಾಯಂದಿರು ಸಂತೋಷವಾಗಿರಲು ಮತ್ತು ದುಃಖದಿಂದ ಮುಕ್ತರಾಗಲಿ ಎಂಬುದನ್ನು ನಾವು ಬಯಸುತ್ತೇವೆ. ನಮ್ಮ ಧ್ಯಾನದಲ್ಲಿ ಸ್ವಲ್ಪ ಭಾವನೆಯಿರಲಿ ಎಂದು ನಾವು ನಮ್ಮ ತಾಯಂದಿರೊಂದಿಗೆ ಧ್ಯಾನವನ್ನು ಪ್ರಾರಂಭಿಸುತ್ತೇವೆ. 

ಕಡಿಮೆ ಸ್ವಾಭಿಮಾನವನ್ನು ನಿವಾರಿಸಲು ಸಹಾಯ ಮಾಡುವ ವಿಧಾನವನ್ನು ವಿಸ್ತರಿಸುವುದು 

ನಾವು ಮೊದಲು ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಲು ಬಯಸಿದರೆ ಮಾತ್ರ ಸಹಾನುಭೂತಿ ಪ್ರಾಮಾಣಿಕವಾಗಿ ಬೆಳೆಯುತ್ತದೆ ಎಂದು ಪಠ್ಯಗಳು ಹೇಳುವಂತೆ, ಪ್ರೀತಿಯ ಬಗ್ಗೆಯೂ ನಾವು ಅದೇ ತತ್ವವನ್ನು ರೂಪಿಸಬಹುದು ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಕಡಿಮೆ ಸ್ವಾಭಿಮಾನದಿಂದ ಬಳಲುತ್ತಿರುವವರಿಗೆ ಇದು ವಿಶೇಷವಾಗಿ ಪ್ರಸ್ತುತವಾಗಿದೆ. ಕಡಿಮೆ ಸ್ವಾಭಿಮಾನವು ಹೆಚ್ಚಾಗಿ ಪಾಶ್ಚಿಮಾತ್ಯ ವಿದ್ಯಮಾನವಾಗಿದೆ, ಟಿಬೆಟಿಯನ್ನರಲ್ಲಿ ಅಥವಾ ಭಾರತೀಯರಲ್ಲಿ ಆಗಾಗ್ಗೆ ಕಂಡುಬರುವುದಿಲ್ಲ. ಇತರರು ಸಂತೋಷವಾಗಿರಲು ಮತ್ತು ಸಂತೋಷದ ಕಾರಣಗಳನ್ನು ಹೊಂದಬೇಕೆಂದು ನಾವು ಪ್ರಾಮಾಣಿಕವಾಗಿ ಬಯಸುವ ಮೊದಲು, ನಾವು ಸಂತೋಷವಾಗಿರಲು ಮತ್ತು ಸಂತೋಷದ ಕಾರಣಗಳನ್ನು ಹೊಂದಬೇಕೆಂದು ಪ್ರಾಮಾಣಿಕವಾಗಿ ಬಯಸಬೇಕು. ನಾವೇ ಸಂತೋಷವಾಗಿರಲು ಅರ್ಹರಲ್ಲ ಎಂದು ನಾವು ಭಾವಿಸಿದರೆ, ಬೇರೆಯವರು ಸಂತೋಷವಾಗಿರಲು ಏಕೆ ಅರ್ಹರಾಗಿರುತ್ತಾರೆ? 

ಹಾಗಾದರೆ, ನಾವು ಸಂತೋಷವಾಗಿರಲು ಬಯಸುವುದು ಧ್ಯಾನದಲ್ಲಿ ಒಂದು ಹೆಜ್ಜೆಯಾಗಿದೆ, ನಾವು ಕಡಿಮೆ ಸ್ವಾಭಿಮಾನದಿಂದ ಬಳಲುತ್ತಿದ್ದರೆ ಇದನ್ನು ನಿಸ್ಸಂದೇಹವಾಗಿ ಸೇರಿಸಬಹುದು ಎಂದು ನಾನು ಭಾವಿಸುತ್ತೇನೆ. ಇದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಸಂತೋಷವಾಗಿರಲು ಅರ್ಹರು ಎಂಬ ಈ ಆಲೋಚನಾ ಕ್ರಮಕ್ಕೆ ಬರಲು, ಬುದ್ಧ-ಸ್ವಭಾವವನ್ನು ನೆನಪಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ನಾವೆಲ್ಲರೂ ಕೆಟ್ಟವರಲ್ಲ; ಯಾರೂ ಕೆಟ್ಟವರಲ್ಲ. ನಾವೆಲ್ಲರೂ ಬುದ್ಧರಾಗಲು, ಇತರರಿಗೆ ಪ್ರಯೋಜನಕಾರಿಯಾಗಲು, ಸಂತೋಷವಾಗಿರುವ ಅವಕಾಶಗಳನ್ನು ಹೊಂದಿದ್ದೇವೆ. 

ಇನ್ನೊಂದು ವಿಷಯ: ಪ್ರೀತಿ ಮತ್ತು ಕರುಣೆಯನ್ನು ಥೆರವಾದ ಮತ್ತು ಇತರ ಹೀನಯಾನ ಶಾಲೆಗಳಲ್ಲಿಯೂ ಅಭಿವೃದ್ಧಿಪಡಿಸಲಾಗಿದೆ. ಆದರೆ, ಅಲ್ಲಿ ಧ್ಯಾನ ವಿಧಾನಗಳು ಕ್ರಮವಾದ ಹಂತಗಳನ್ನು ಅನುಸರಿಸುವುದಿಲ್ಲ, ಏಕೆಂದರೆ ಇಲ್ಲಿ ಈ ಏಳು ಕಾರಣಗಳ ಆಧಾರದ ಮೇಲೆ ಪ್ರೀತಿ ಮತ್ತು ಸಹಾನುಭೂತಿಯ ಭಾವನೆಯನ್ನು ಬೆಳೆಸಲು ನಮಗೆ ಸಹಾಯವಾಗುತ್ತದೆ, ಉದಾಹರಣೆಗೆ ತಾಯಿಯ ದಯೆಯನ್ನು ನೆನಪಿಸಿಕೊಳ್ಳುವುದು. ಆದರೆ, ಥೆರವಾದ ಸಂಪ್ರದಾಯದಲ್ಲಿ ಪ್ರೀತಿ ಮತ್ತು ಸಹಾನುಭೂತಿಯ ಧ್ಯಾನವು ಕಾಣೆಯಾಗಿದೆ ಎಂದು ನಾವು ಭಾವಿಸಬಾರದು. ಆದರೆ, ಬೋಧಿಚಿತ್ತ ಧ್ಯಾನದಲ್ಲಿ ಮುಂದಿನ ಹಂತಗಳಿರುವುದಿಲ್ಲ.

ಅಸಾಧಾರಣ ಸಂಕಲ್ಪ 

ಈ ಮುಂದಿನ ಆರನೇ ಹಂತವನ್ನು ವಿಭಿನ್ನ ಭಾಷಾಂತರಕಾರರು ವಿವಿಧ ರೀತಿಯಲ್ಲಿ ನಿರೂಪಿಸುತ್ತಾರೆ. ಕೆಲವರು ಇದನ್ನು "ಪರಿಶುದ್ಧ ನಿಸ್ವಾರ್ಥ ಆಶಯ" ಎಂದು ಕರೆಯುತ್ತಾರೆ. ಪರಮಪೂಜ್ಯ ದಲೈ ಲಾಮಾ "ಸಾರ್ವತ್ರಿಕ ಜವಾಬ್ದಾರಿ" ಎಂಬ ಪದವನ್ನು ಬಳಸುತ್ತಾರೆ. ನಾನು ಅದನ್ನು ಹಲವಾರು ವಿಧಗಳಲ್ಲಿ ಅನುವಾದಿಸಿದ್ದರೂ, ಈ ಸಮಯದಲ್ಲಿ ನಾನು "ಅಸಾಧಾರಣ ಸಂಕಲ್ಪ" ವನ್ನು ಬಯಸುತ್ತೇನೆ. ಮಹಾನ್ ಸಹಾನುಭೂತಿಯಿಂದ, ಎಲ್ಲಾ ಜೀವಿಗಳಿಗೆ ಸಹಾಯ ಮಾಡುವ ಸಂಪೂರ್ಣವಾದ ಆಶಯ ಮತ್ತು ಉದ್ದೇಶವನ್ನು ನಾವು ಹೊಂದಿದ್ದೇವೆ. ಈ ಹಂತದಲ್ಲಿ, ನಾವು ಖಂಡಿತವಾಗಿಯೂ ಹೀಗೆ ಮಾಡಲಿದ್ದೇವೆ ಎಂಬ ದೃಢ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಇತರರ ದುಃಖದ ಬಗ್ಗೆ ಏನಾದರೂ ಮಾಡುವ ಜವಾಬ್ದಾರಿಯನ್ನು ಕೂಡ ನಾವೇ ತೆಗೆದುಕೊಳ್ಳುತ್ತೇವೆ. ಯಾರಾದರೂ ಸರೋವರದಲ್ಲಿ ಮುಳುಗುತ್ತಿದ್ದರೆ, ನಾವು ದಡದಲ್ಲಿ ನಿಂತು "ಛೇ, ಛೇ, ಹೀಗಾಗಬಾರದಿತ್ತು ಎಂದು ನಾನು ಬಯಸುತ್ತೇನೆ" ಎಂದು ಹೇಳುವುದಲ್ಲ. ನಾವು ವಾಸ್ತವದಲ್ಲಿ ಜಿಗಿದು ಆ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸಬೇಕು. ಅದೇ ರೀತಿಯಾಗಿ, ಬೋಧಿಚಿತ್ತ ಧ್ಯಾನದಲ್ಲಿ, ಎಲ್ಲಾ ಜೀವಿಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಸಾರ್ವತ್ರಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾವು ಸಂಪೂರ್ಣವಾಗಿ ನಿರ್ಧರಿಸುತ್ತೇವೆ. 

ಬೋಧಿಚಿತ್ತ ಗುರಿ 

ಈ ಆರು-ಹಂತದ ಅಭಿವೃದ್ಧಿಯ ರೇಖೆಯನ್ನು ಒಂದು ಕಾರಣವಾಗಿರಿಸಿ, ಅದರ ಪರಿಣಾಮವಾಗಿ, ಏಳನೇ ಹಂತವು ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸುವುದಾಗಿರುತ್ತದೆ. ನಮ್ಮ ಪ್ರಸ್ತುತ ಮಿತಿಗಳು ಮತ್ತು ಗೊಂದಲದ ಭಾವನೆಗಳು ಮತ್ತು ವರ್ತನೆಗಳೊಂದಿಗೆ ನಾವು ಇತರರಿಗೆ ಹೇಗೆ ಹೆಚ್ಚಿನ ಪ್ರಯೋಜನಕಾರಿಯಾಗಬಹುದು ಎಂಬುದನ್ನು ಪರಿಶೀಲಿಸಿದಾಗ, ನಾವು ನಿಜವಾಗಿಯೂ ಹೆಚ್ಚು ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಮಗೆ ಅರಿವಾಗುತ್ತದೆ. ನಾನು ಸ್ವಾರ್ಥಿಯಾಗಿದ್ದರೆ ಮತ್ತು ಅಸಹನೆಯಿಂದ ಕೂಡಿದ್ದರೆ, ಕೆಲವು ಜನರತ್ತ ಆಕರ್ಷಿತನಾಗಿದ್ದರೆ ಮತ್ತು ಇತರರ ಮೇಲೆ ಕೋಪಗೊಂಡರೆ, ಮತ್ತು ಸೋಮಾರಿಯಾಗಿದ್ದರೆ, ನಾನು ಯಾವಾಗಲೂ ದಣಿದಿದ್ದರೆ, ನಾನು ಇತರರನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಮತ್ತು ನಾನು ಸರಿಯಾಗಿ ಸಂವಹನ ನಡೆಸಲು ಸಾಧ್ಯವಾಗದಿದ್ದರೆ, ನಾನು ಇತರರಿಂದ ಹೆದರುತ್ತಿದ್ದರೆ, ಅವರು ನನ್ನನ್ನು ಇಷ್ಟಪಡದೇ ಇರುವುದರಿಂದ ಅಥವಾ ಅವರಿಂದ ತಿರಸ್ಕರಿಸಲ್ಪಡುವ ಭಯದಲ್ಲಿದ್ದರೆ - ಈ ಎಲ್ಲಾ ವಿಷಯಗಳು ನಮ್ಮನ್ನು ಸಾಧ್ಯವಾದಷ್ಟು ಸಹಾಯ ಮಾಡುವುದರಿಂದ ತಡೆಯುತ್ತವೆ. ಆದ್ದರಿಂದ, ನಾವು ನಿಜವಾಗಿಯೂ ಸಹಾಯ ಮಾಡಲು ಬಯಸುವ ಕಾರಣ, ನಾವು ನಿಜವಾಗಿಯೂ ಈ ವಿಷಯಗಳನ್ನು ನಮ್ಮಿಂದ ನಿವಾರಿಸಬೇಕು. ನಾವು ನಿಜವಾಗಿಯೂ ನಮ್ಮ ಮೇಲೆ ಕೆಲಸ ಮಾಡಬೇಕು ಮತ್ತು ಈ ವಿಷಯಗಳಿಂದ ಮುಕ್ತಿ ಹೊಂದಬೇಕು, ಇದರಿಂದ ನಾವು ನಮ್ಮ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಮತ್ತು ಬುದ್ಧ-ಸ್ವಭಾವದ ಗುಣಗಳನ್ನು ಇತರರಿಗೆ ಪ್ರಯೋಜನವಾಗುವಂತೆ ಉಪಯೋಗಿಸಬಹುದು. ನಾವು ಯಾವಾಗಲೂ "ಸಾಧ್ಯವಾದಷ್ಟು" ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ - ನಾವು ಸರ್ವಶಕ್ತ ದೇವರುಗಳಾಗುವುದಿಲ್ಲ. ಈ ಚಿಂತನೆಯ ರೇಖೆಯನ್ನು ಆಧರಿಸಿ, ಎಲ್ಲರಿಗೂ ಸಾಧ್ಯವಾದಷ್ಟು ಸಂಪೂರ್ಣವಾಗಿ ಸಹಾಯ ಮಾಡಲು ನಾವು ಬುದ್ಧನಾಗಲು ನಮ್ಮ ಮನಸ್ಸು ಮತ್ತು ಹೃದಯಗಳನ್ನು ಧೃಡಪಡಿಸುತ್ತೇವೆ. ಇದೇ ಬೋಧಿಚಿತ್ತ ಗುರಿಯ ಬೆಳವಣಿಗೆಯಾಗಿರುತ್ತದೆ. ಇದರೊಂದಿಗೆ, ನಾವು ನಮ್ಮ ಇನ್ನೂ ಸಂಭವಿಸದ ವೈಯಕ್ತಿಕ ಜ್ಞಾನೋದಯಗಳ ಮೇಲೆ ಮತ್ತು ಇದನ್ನು ಸಾಧ್ಯವಾದಷ್ಟು ವೇಗವಾಗಿ ಸಾಧಿಸುವ ಮತ್ತು ಇದರಿಂದ ಇತರರಿಗೆ ಸಹಾಯ ಮಾಡುವ ಪೂರ್ಣ ಉದ್ದೇಶದ ಮೇಲೆ ನಾವು ಕೇಂದ್ರೀಕರಿಸುತ್ತೇವೆ. 

ಬೋಧಿಸತ್ವ ನಡವಳಿಕೆ 

ಒಮ್ಮೆ ನಾವು ಬೋಧಿಚಿತ್ತವನ್ನು ಅಭಿವೃದ್ಧಿಪಡಿಸಿದ ನಂತರ, ನಮ್ಮ ಮಿತಿಗಳ ಹೊರತಾಗಿಯೂ, ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಏಕೆಂದರೆ 7-ಭಾಗಗಳ ಕಾರಣ ಮತ್ತು ಪರಿಣಾಮದ ಬೋಧಿಚಿತ್ತ ಧ್ಯಾನದ ಹಿಂದಿನ ಹಂತಗಳಿಂದ ನಿರ್ಮಿಸಲಾದ ಸಹಾಯ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುವ ಅಸಾಧಾರಣ ಸಂಕಲ್ಪ ನಮ್ಮಲ್ಲಿದೆ.  

ಇದರರ್ಥ ನಾವು ಇತರರನ್ನು ಎದುರಿಸಿದಾಗ ಮತ್ತು ಅವರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ನೋಡಿದಾಗ, ಉದಾಹರಣೆಗೆ ನಿರಾಶ್ರಿತರನ್ನು, ಕೇವಲ ನಿರಾಶ್ರಿತ ವ್ಯಕ್ತಿಗಳಾಗಿ ಮಾತ್ರ ನೋಡುವುದಿಲ್ಲ. ನಾವು ಅವರನ್ನು ನೋಡಿದಾಗ, ಅವರು ಅಂತರ್ಗತವಾಗಿ ಬಡವರು, ಸೋಮಾರಿಗಳು ಅಥವಾ ನಾವು ಪ್ರಕ್ಷೇಪಿಸಬಹುದಾದ ಯಾವುದೇ ಮೌಲ್ಯಮಾಪನದ ವಿಷಯವಾಗಿ ನಾವು ಯೋಚಿಸುವುದಿಲ್ಲ. ಬದಲಿಗೆ, ಈ ಜೀವಿತಾವಧಿಯಲ್ಲಿ ಮತ್ತು ಈ ಜೀವಿತಾವಧಿಯಲ್ಲಿನ ಈ ನಿರ್ದಿಷ್ಟ ಹಂತದಲ್ಲಿ, ಅವರು ಹಾಗೆ ಇದ್ದಾರೆ ಎಂದು ನಾವು ಅರಿತುಕೊಳ್ಳುತ್ತೇವೆ. ಆದರೆ, ಅವರ ಮಾನಸಿಕ ನಿರಂತರತೆಗಳು ಆರಂಭವಿಲ್ಲದವು ಮತ್ತು ಒಂದು ಹಂತದಲ್ಲಿ, ಅವರು ನಮ್ಮ ತಾಯಂದಿರಾಗಿದ್ದಾರೆ ಮತ್ತು ದಯೆಯಿಂದ ನಮ್ಮನ್ನು ನೋಡಿಕೊಂಡಿದ್ದಾರೆ. ಅವರು ನಮ್ಮನ್ನು ತಮ್ಮ ಗರ್ಭದಲ್ಲಿ ಹೊತ್ತುಕೊಂಡಿದ್ದಾರೆ, ನಮ್ಮ ಕೊಳಕು ಡೈಪರ್‌ಗಳನ್ನು ಬದಲಾಯಿಸಿದ್ದಾರೆ, ಆದ್ದರಿಂದ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇನೆ ಮತ್ತು ಈ ದಯೆಯನ್ನು ನಿಜವಾಗಿಯೂ ಮರುಪಾವತಿಸಲು ಬಯಸುತ್ತೇವೆ. ಅವರು ಸಂತೋಷವಾಗಿರಲಿ ಮತ್ತು ಸಂತೋಷದ ಕಾರಣಗಳನ್ನು ಹೊಂದಿರಲಿ ಮತ್ತು ಅವರು ತಮ್ಮ ಸಮಸ್ಯೆಗಳಿಂದ ಮತ್ತು ಅವರ ಸಮಸ್ಯೆಗಳ ಕಾರಣಗಳಿಂದ ಮುಕ್ತರಾಗಲಿ ಎಂದು ನಾವು ಬಯಸುತ್ತೇವೆ. ಅದರ ಬಗ್ಗೆ ಏನಾದರೂ ಮಾಡಲು ನಾವು ಜವಾಬ್ದಾರಿವಹಿಸುತ್ತೇವೆ. 

ಹಾಗಾದರೆ ನಾವು ಏನು ಮಾಡಬೇಕು? ನಮ್ಮ ನ್ಯೂನತೆಗಳನ್ನು ನಿವಾರಿಸಲು, ನಾವು ಕೇವಲ ಮನೆಗೆ ಹಿಂದಿರುಗಿ ಧ್ಯಾನಿಸಿ, ಅಂತಹ ಜನರಿಗೆ ಸಹಾಯ ಮಾಡಲು ವಾಸ್ತವದಲ್ಲಿ ಏನನ್ನೂ ಮಾಡದೆ ಇರಬಾರದು ಎಂದಲ್ಲ. ಹೌದು, ನಾವು ಹೆಚ್ಚಾಗಿ ಧ್ಯಾನಿಸಬೇಕಾಗಿದೆ, ಆದರೆ ಪ್ರಸ್ತುತವಾಗಿ ನಮ್ಮನ್ನು ನಮ್ಮ ಸಂಕೋಚ, ಹಿಂಜರಿಕೆ ಮತ್ತು ಜಿಪುಣತನದಿಂದ ನಿವಾರಿಸಲು ಮತ್ತು ವಾಸ್ತವದಲ್ಲಿ ಅವರಿಗೆ ಏನನ್ನಾದರೂ ನೀಡುವಂತೆ, ಕನಿಷ್ಠ ಅವರನ್ನು ನೋಡಿ ಮುಗುಳ್ನಗುವಂತೆ - ಕನಿಷ್ಠಪಕ್ಷ ಏನಾದರೂ ಮಾಡುವಂತೆ ಇದು ನಮ್ಮನ್ನು ಪ್ರೇರೇಪಿಸುತ್ತದೆ. 

ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ಮಿತಿಗಳನ್ನು ಸಾಧ್ಯವಾದಷ್ಟು ನಿವಾರಿಸಲು ಮತ್ತು ಸಹಾಯ ಮಾಡಲು, ನಮ್ಮ ಸಾಮರ್ಥ್ಯಗಳನ್ನು ಬಳಸುವಂತೆ ನಮ್ಮನ್ನು ಪ್ರೇರೇಪಿಸಲು ನಮ್ಮ ಅಸಾಧಾರಣ ಸಂಕಲ್ಪವನ್ನು ಬಳಸುತ್ತೇವೆ. ಖಂಡಿತ, ನಾವು ಮನೆಗೆ ಹೋದಾಗ ನಮ್ಮ ಮೇಲೆ ಹೆಚ್ಚು ಕೆಲಸ ಮಾಡಬೇಕು, ಆದರೆ ನಿರಾಶ್ರಿತರ ಬಗ್ಗೆ ಮರೆತು, ಕೇವಲ ಮನೆಗೆ ಹೋಗಿ ಧ್ಯಾನ ಮಾಡಬಾರದು. ನಮ್ಮ ಸಂಕಲ್ಪವು ಪ್ರಾಮಾಣಿಕವಾಗಿದ್ದರೆ, ಅದು ನಮ್ಮನ್ನು ಚಿಂತನಶೀಲರನ್ನಾಗಿ ಮಾಡುತ್ತದೆ. 

ಸಹಾಯದ ಅಗತ್ಯವಿರುವ ಇತರ ಜೀವಿಗಳನ್ನು ನಾವು ಎದುರಿಸಿದಾಗಲೇ, ಪ್ರತಿ ಕ್ಷಣದಲ್ಲಿಯೂ ನಮ್ಮ ಮೇಲೆ ನಾವು ಕೆಲಸ ಮಾಡುವಂತೆ ಬಲವಾದ ಪ್ರೇರಣೆ ಬರುವುದು. ಚಳಿಗಾಲದಲ್ಲಿ ಒಬ್ಬ ವೃದ್ಧ ಮಹಿಳೆ ಸುರಂಗಮಾರ್ಗ ನಿಲ್ದಾಣದ ಬಳಿ ತಣ್ಣನೆಯ ನೆಲದ ಮೇಲೆ ಕುಳಿತು ಭಿಕ್ಷೆ ಬೇಡುವುದನ್ನು ನಾವು ನೋಡುತ್ತೇವೆ ಮತ್ತು ಅದು ನನ್ನ ತಾಯಿಯಾಗಿದ್ದರೆ? ಎಂದು ನಾವು ಯೋಚಿಸುತ್ತೇವೆ. ಅವರು ಈ ಜೀವನದಲ್ಲಿನ ನಿಜವಾದ ತಾಯಿಯಾಗಿದ್ದರೆ, ನಾವು ಸುಮ್ಮನೆ ಹೊರಟುಹೋಗುತ್ತೇವೆಯೇ? ಅಥವಾ ಸುರಂಗಮಾರ್ಗದಲ್ಲಿರುವ ಯುವಕನೊಬ್ಬನು ನಿರಾಶ್ರಿತರ ತಾತ್ಕಾಲಿಕ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರೆ, ಅದು ನಮ್ಮ ಸ್ವಂತ ಮಗನಾಗಿದ್ದರೆ ನಮಗೆ ಹೇಗೆ ಅನಿಸುತ್ತದೆ? ಈ ಹುಡುಗನಿಗೂ ಪೋಷಕರು ಇರುತ್ತಾರೆ. ಇದು ಬಹಳ ಮುಖ್ಯ. ಭಾರತದಲ್ಲಿ, ನಾವು ಕುಷ್ಠರೋಗಿಗಳು ಮತ್ತು ಇತರ ವಿರೂಪಗೊಂಡ ಜನರನ್ನು ನೋಡುತ್ತೇವೆ ಮತ್ತು ಸಾಮಾನ್ಯವಾಗಿ ಈ ಕುಷ್ಠರೋಗಿಗಳಿಗೆ ಕುಟುಂಬಗಳಿವೆ ಎಂದು ನಾವು ಎಂದಿಗೂ ಭಾವಿಸುವುದಿಲ್ಲ. ಅವರಿಗೂ ಕುಟುಂಬಗಳಿವೆ. ಅವರನ್ನು ಮನುಷ್ಯರನ್ನಾಗಿಸಿ.  

ಖಂಡಿತವಾಗಿಯೂ, ಈ ನಿರಾಶ್ರಿತರ ಈ ಪರಿಸ್ಥಿತಿಯನ್ನು ಪ್ರತ್ಯೇಕಿಸಲು ನಮಗೆ ವಿವೇಚನಾತ್ಮಕ ಅರಿವಿನ ಅಗತ್ಯವಿದೆ. ಕೆಲವರು ಬೀದಿಗಳಲ್ಲಿ ಮಾದಕ ವಸ್ತುಗಳು ಅಥವಾ ಮದ್ಯಪಾನವನ್ನು ಖರೀದಿಸಲು, ಜನರನ್ನು ಹಣಕ್ಕಾಗಿ ಕಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ಬೌದ್ಧಧರ್ಮದ ಪ್ರಕಾರ "ಕೌಶಲ್ಯಪೂರ್ಣ ವಿಧಾನಗಳನ್ನು" ಬಳಸಬೇಕಾಗುತ್ತದೆ. ನಮಗೆ ಸಹಾಯ ಮಾಡುವ ಬಯಕೆ ಇದೆ, ಅವರ ದುಃಖಕ್ಕೆ ಕಾರಣ ಏನಾಗಿರಬಹುದು ಮತ್ತು ಅವರ ಸಂತೋಷಕ್ಕೆ ಕಾರಣ ಏನಾಗಿರಬಹುದು ಎಂಬುದರ ಬಗ್ಗೆ ನಮಗೆ ಸ್ವಲ್ಪ ಕಲ್ಪನೆ ಇದೆ. ನಂತರ, ಅವರಿಗೆ ನಿಜವಾಗಿಯೂ ಸಹಾಯಕವಾಗುವುದನ್ನು ನಾವು ಮಾಡಲು ಪ್ರಯತ್ನಿಸಬೇಕು. ಬಹುಶಃ ಅವರಿಗೆ ಹಣವನ್ನು ನೀಡುವುದು ಸಹಾಯಕವಾಗುವುದಿಲ್ಲ, ಅದನ್ನು ಅವರು ಹೆಚ್ಚಿನ ಮಾದಕ ವಸ್ತುಗಳು ಅಥವಾ ಮದ್ಯವನ್ನು ಖರೀದಿಸಲು ಮಾತ್ರ ಬಳಸುತ್ತಾರೆ, ಆದ್ದರಿಂದ ನಾವು ಅವರಿಗೆ ಹಣವನ್ನು ನೀಡುವುದಿಲ್ಲ. ನಮ್ಮಲ್ಲಿ ಸ್ವಲ್ಪ ಆಹಾರವಿದ್ದರೆ, ನಾವು ಅವರಿಗೆ ಅದನ್ನು ನೀಡಬಹುದು. ಆದರೆ, ಯಾವುದೇ ಸಂದರ್ಭದಲ್ಲಿ, ಅವರು ಭಯಾನಕ, ಅಸಹ್ಯಕರ ಮಾದಕ ವ್ಯಸನಿಗಳು ಅಥವಾ ಮದ್ಯವ್ಯಸನಿಗಳೆಂದು ಯೋಚಿಸದೆ ನಾವು ಅವರಿಗೆ ನಮ್ಮ ಕಾಳಜಿಯುಳ್ಳ ಮನೋಭಾವ ಮತ್ತು ಗೌರವವನ್ನು ನೀಡಬಹುದು. ಅವರೂ ಮನುಷ್ಯರೆ, ಬಳಲುತ್ತಿರುವ ಮನುಷ್ಯರು. 

ಒಬ್ಬರಿಗೆ ಸಹಾಯ ಮಾಡುವ ಅತ್ಯುತ್ತಮ ಮಾರ್ಗ ಯಾವುದು ಎಂದು ನಿರ್ಧರಿಸುವುದು ಸುಲಭವಲ್ಲ. ಸದ್ಯಕ್ಕೆ ನಾವು ಸೀಮಿತರಾಗಿದ್ದೇವೆ ಎಂದು ನಾವು ಗಮನಿಸುತ್ತೇವೆ. ನಮಗೆ ನಿಜವಾಗಿಯೂ ಯಾವುದು ಉತ್ತಮ ಎಂದು ತಿಳಿದಿಲ್ಲ. ನಿಜವಾಗಿಯೂ ತಿಳಿದುಕೊಳ್ಳಲು ನಾವು ಬುದ್ಧರಾಗಬೇಕು, ಆದರೆ ಕೆಲವೊಮ್ಮೆ ನಾವು ತಪ್ಪುಗಳನ್ನು ಮಾಡುತ್ತೇವೆ ಎಂಬುದನ್ನು ಅರಿತುಕೊಂಡು ನಾವು ಈಗ ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಕನಿಷ್ಠಪಕ್ಷ ನಾವು ಪ್ರಯತ್ನಿಸುತ್ತೇವೆ. 

ಸಾರಾಂಶ 

7 ಭಾಗಗಳ ಕಾರಣ ಮತ್ತು ಪರಿಣಾಮದ ವಿಧಾನದೊಂದಿಗೆ ನಮ್ಮನ್ನು ನಾವು ತರಬೇತಿ ಮಾಡಿಕೊಳ್ಳುವ ಮೂಲಕ ಬೋಧಿಚಿತ್ತ ಗುರಿಯನ್ನು ಅಭಿವೃದ್ಧಿಪಡಿಸಿದಾಗ, ಇತರರಿಗೆ ಉತ್ತಮ ಸಹಾಯವನ್ನು ನೀಡುವ ಬುದ್ಧತ್ವವನ್ನು ಪಡೆಯುವ ನಮ್ಮ ಗುರಿಯು, ಅನೇಕ ವೈಯಕ್ತಿಕ ಭಾವನೆಗಳನ್ನು ಒಟ್ಟಿಗೆ ಸೇರಿಸುವ ಬಲವಾದ ಭಾವನಾತ್ಮಕ ಸ್ಥಿತಿಯನ್ನು ಬೆಂಬಲಿಸುತ್ತದೆ. ಇವುಗಳಲ್ಲಿ ಎಲ್ಲರೊಂದಿಗೂ ನಿಕಟತೆ ಮತ್ತು ಸಂಪರ್ಕದ ಭಾವನೆ, ಇತರರು ತೋರಿಸಿದ ದಯೆಯ ಮೆಚ್ಚುಗೆ, ಕೃತಜ್ಞತೆ, ಕಾಳಜಿ, ಪ್ರೀತಿ ಮತ್ತು ಸಹಾನುಭೂತಿಯ ಆಳವಾದ ಭಾವನೆಗಳು, ಜೊತೆಗೆ ಎಲ್ಲರಿಗೂ ಸಾಧ್ಯವಾದಷ್ಟು ಸಹಾಯ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬಲವಾದ ಸಂಕಲ್ಪ ಸೇರಿವೆ. ಇಂತಹ ಭಾವನೆಯು ಆಧಾರವಾದ್ದರಿಂದ, ನಮ್ಮ ಬೋಧಿಚಿತ್ತದ ಗುರಿಯು ಬಲವಾಗಿ, ಹೃತ್ಪೂರ್ವಕವಾಗಿ ಮತ್ತು ಧೃಡವಾಗಿರುತ್ತದೆ.  

Top