ಧ್ಯಾನಕ್ಕಾಗಿ ಬೇಕಾದ ಪೂರ್ವಸಿದ್ಧತೆಗಳು

Week%203%20preliminaries%20to%20meditation%20%281%29

ಧ್ಯಾನಕ್ಕೆ ಅನುಕೂಲಕರವಾದ ಪರಿಸರ 

ವಾಸ್ತವಿಕವಾಗಿ ಧ್ಯಾನದಲ್ಲಿ ತೊಡಗಿಸಿಕೊಳ್ಳಲು, ಅದಕ್ಕಾಗಿ ಅನುಕೂಲಕರವಾದ ಸಂದರ್ಭಗಳು ಅಗತ್ಯವಿರುತ್ತವೆ. ಧ್ಯಾನಕ್ಕಾಗಿ ಅನುಕೂಲವಾಗುವ ಅಂಶಗಳ ಅನೇಕ ಪಟ್ಟಿಗಳಿವೆ, ಆದರೆ ಸಾಮಾನ್ಯವಾಗಿ, ಅವುಗಳನ್ನು ಧ್ಯಾನದ ಏಕಾಂತವಾಸದ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ ಅಥವಾ ಪ್ರಸ್ತುತಪಡಿಸಲಾಗುತ್ತದೆ, ಆದರೆ ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿಯೇ ಧ್ಯಾನಿಸುತ್ತೇವೆ. 

ಮನೆಯಲ್ಲಿದ್ದಾಗ, ಗೊಂದಲವಿಲ್ಲದಿದ್ದರೆ, ಅದು ಹೆಚ್ಚು ಸಹಾಯಕವಾಗಿರುತ್ತದೆ. ಪರಿಸರವು ಸಾಧ್ಯವಾದಷ್ಟು ಶಾಂತವಾಗಿರಬೇಕು. ನಮ್ಮಲ್ಲಿ ಅನೇಕರು ಟ್ರಾಫಿಕ್ ಇರುವ ಗದ್ದಲದ ಬೀದಿಗಳಲ್ಲಿ ವಾಸಿಸುತ್ತೇವೆ, ಆದ್ದರಿಂದ ಟ್ರಾಫಿಕ್ ಕಡಿಮೆ ಇರುವಾಗ, ಬೆಳಿಗ್ಗೆ ಅಥವಾ ತಡರಾತ್ರಿಯ ಸಮಯದಲ್ಲಿ ಧ್ಯಾನ ಮಾಡುವುದು ಉತ್ತಮ. ಜೊತೆಗೆ, ಪಕ್ಕದ ಕೋಣೆಯಿಂದ ಸಂಗೀತ ಮತ್ತು ದೂರದರ್ಶನದ ಸದ್ದುಗದ್ದಲ ಇರಬಾರದು. ಈ ರೀತಿಯ ವಿಷಯಗಳು ಬಹಳ ಮುಖ್ಯ. ಶಾಂತವಾದ ವಾತಾವರಣವಿರುವುದು ಸಾಧ್ಯವಾಗದಿದ್ದರೆ, ಇಯರ್‌ಪ್ಲಗ್‌ಗಳನ್ನು ಉಪಯೋಗಿಸಲು ಪ್ರಯತ್ನಿಸಿ. ಅವು ಎಲ್ಲಾ ಶಬ್ದಗಳನ್ನು ನಿರ್ಬಂಧಿಸುವುದಿಲ್ಲವಾದರೂ, ಅವುಗಳ ತೀವ್ರತೆಯನ್ನು ಖಂಡಿತವಾಗಿಯೂ ಕಡಿಮೆಗೊಳಿಸುತ್ತವೆ.  

ನಮ್ಮಲ್ಲಿ ಅನೇಕರಿಗೆ ಪ್ರತ್ಯೇಕವಾದ ಧ್ಯಾನದ ಕೊಠಡಿಯನ್ನು ಹೊಂದುವ ಸವಲತ್ತು ಇಲ್ಲ. ನಿಮಗೆ ಲಭ್ಯವಿರುವ ಯಾವುದೇ ಜಾಗವನ್ನು ನೀವು ಬಳಸಬಹುದು. ಅಗತ್ಯವಿದ್ದರೆ, ನಿಮ್ಮ ಹಾಸಿಗೆಯ ಮೇಲೆ ಕುಳಿತು ಧ್ಯಾನಿಸಿ, ಪರವಾಗಿಲ್ಲ. ಭಾರತದಲ್ಲಿ ವಾಸಿಸುವ ಹೆಚ್ಚಿನ ಟಿಬೆಟಿಯನ್ನರು ತಮ್ಮ ಹಾಸಿಗೆಯ ಮೇಲೆ ಕುಳಿತು ಧ್ಯಾನಿಸುತ್ತಾರೆ.  

ಮತ್ತೊಂದು ಮುಖ್ಯ ಅಂಶವು ಒಂದು ಸ್ವಚ್ಛವಾದ, ಅಚ್ಚುಕಟ್ಟಾಗಿರುವ ಕೋಣೆಯನ್ನು ಹೊಂದಿರುವುದಾಗಿರುತ್ತದೆ. ಪರಿಸರವು ಸ್ವಚ್ಛವಾಗಿ, ಅಚ್ಚುಕಟ್ಟಾಗಿದ್ದರೆ, ಅದು ಮನಸ್ಸಿನ ಮೇಲೆ, ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿರುವಂತೆ ಪ್ರಭಾವ ಬೀರುತ್ತದೆ. ಕೊಠಡಿಯು ದೊಗಲೆಯಾಗಿ, ಗಲೀಜಾಗಿ ಅಥವಾ ಕೊಳಕಾಗಿದ್ದರೆ, ಮನಸ್ಸು ಕೂಡ ಅದೇ ರೀತಿ ಇರುತ್ತದೆ. ಈ ಕಾರಣದಿಂದಾಗಿ, ಧ್ಯಾನದ ಅಗತ್ಯತೆಯ ಪಟ್ಟಿಯಲ್ಲಿ ಸದಾ ಇರುವ ಪೂರ್ವಸಿದ್ಧತಾ ಅಂಶವೆಂದರೆ, ಧ್ಯಾನದ ಕೋಣೆಯನ್ನು ಸ್ವಚ್ಛಗೊಳಿಸುವುದು ಮತ್ತು ಒಂದು ರೀತಿಯ ಅರ್ಪಣೆಯನ್ನು ಮುಂದಿಡುವುದು, ಅದು ಕೇವಲ ಒಂದು ಕಪ್ ನೀರು ಕೂಡ ಆಗಿರಬಹುದು. ನಾವು ಮಾಡುವ ಕಾರ್ಯಕ್ಕಾಗಿ ಗೌರವವನ್ನು ತೋರಿಸಲು ಬಯಸುತ್ತೇವೆ ಮತ್ತು ಬುದ್ಧರು ಮತ್ತು ಬೋಧಿಸತ್ವರ ಸಾನಿಧ್ಯಕ್ಕಾಗಿ, ಅವರನ್ನು ಆಹ್ವಾನಿಸಲು ಯೋಚಿಸುತ್ತಿದ್ದರೆ, ನಾವು ಅವರನ್ನು ಸ್ವಚ್ಛವಾದ ಕೋಣೆಗೆ ಆಹ್ವಾನಿಸಲು ಬಯಸುತ್ತೇವೆ, ಗಲೀಜಾದ, ಕೊಳಕು ಕೋಣೆಗೆ ಅಲ್ಲ. ಸಾಮಾನ್ಯವಾದ ಮಾನಸಿಕ ಮಟ್ಟದಲ್ಲಿಯೂ ಸಹ, ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಗೌರವವನ್ನು ಹೊಂದಿರುವುದು ಮತ್ತು ಅದನ್ನು ವಿಶೇಷವಾದದ್ದು ಎಂದು ಪರಿಗಣಿಸುವುದು ಮುಖ್ಯವಾಗಿರುತ್ತದೆ. "ವಿಶೇಷ" ಎಂದರೆ ಹಾಲಿವುಡ್ ಚಲನಚಿತ್ರದಲ್ಲಿರುವಂತೆ ಧೂಪದ್ರವ್ಯ ಮತ್ತು ಮೇಣದಬತ್ತಿಗಳನ್ನು ಹೊಂದಿಸಿದ ವಿಸ್ತಾರವಾದ ವಾತಾವರಣವನ್ನು ಸೃಷ್ಟಿಸುವುದು ಎಂದಲ್ಲ, ಆದರೆ ಸರಳವಾದ, ಅಚ್ಚುಕಟ್ಟಾದ, ಸ್ವಚ್ಛವಾದ ಮತ್ತು ಗೌರವಾನ್ವಿತ ಪರಿಸರವನ್ನು ಸೃಷ್ಟಿಸುವುದಾಗಿರುತ್ತದೆ. 

ಭಂಗಿ 

ಏಷ್ಯಾದ ವಿವಿಧ ಸಂಸ್ಕೃತಿಗಳಾದ್ಯಂತ, ಜನರು ಧ್ಯಾನಕ್ಕಾಗಿ ಬಳಸುವ ಭಂಗಿಯು ಬದಲಾಗುತ್ತಿರುತ್ತದೆ. ಭಾರತ/ಟಿಬೆಟ್, ಚೀನಾ/ಜಪಾನ್ ಮತ್ತು ಥೈಲ್ಯಾಂಡ್‌ನ ಧ್ಯಾನದ ಭಂಗಿಗಳು ವಿಭಿನ್ನವಾಗಿವೆ, ಆದ್ದರಿಂದ ನಾವು ಒಂದು ನಿರ್ದಿಷ್ಟ ಭಂಗಿ ಮಾತ್ರ ಸರಿಯಾದದ್ದು ಎಂದು ಹೇಳಲು ಸಾಧ್ಯವಿಲ್ಲ. ಭಾರತೀಯರು ಮತ್ತು ಟಿಬೆಟಿಯನ್ನರು ಅಡ್ಡಗಾಲಿಟ್ಟು ಕುಳಿತುಕೊಳ್ಳುತ್ತಾರೆ. ಆಗಾಗ್ಗೆ, ಜಪಾನೀಯರು ಮತ್ತು ಕೆಲವು ಚೀನಿಯರು ತಮ್ಮ ಕಾಲುಗಳನ್ನು ತಮ್ಮ ಕೆಳಗೆ ಮಡಚಿಕೊಳ್ಳುತ್ತಾರೆ. ಥೈಲ್ಯಾಂಡ್ನವರು ತಮ್ಮ ಕಾಲುಗಳನ್ನು ಬದಿಗೆ ಚಾಚಿ ಕುಳಿತುಕೊಳ್ಳುತ್ತಾರೆ. ತಂತ್ರದ ಅಭ್ಯಾಸಕ್ಕಾಗಿ, ನಾವು ದೇಹದ ಶಕ್ತಿಗಳೊಂದಿಗೆ ಕೆಲಸ ಮಾಡುತ್ತಿರುವುದರಿಂದ, ಸಂಪೂರ್ಣ ಪದ್ಮಾಸನದ ಅಗತ್ಯವಿರುತ್ತದೆ, ಆದರೆ ನಮ್ಮಲ್ಲಿ ಹೆಚ್ಚಿನವರು ಅಭ್ಯಾಸದ ಆ ಹಂತದಲ್ಲಿಲ್ಲ. ಆ ರೀತಿಯ ಅಭ್ಯಾಸವನ್ನು ಮಾಡಲು ನೀವು ಬಯಸಿದರೆ, ಪೂರ್ಣ ಪದ್ಮಾಸನದ ಭಂಗಿಯಲ್ಲಿ ಕುಳಿತುಕೊಳ್ಳಲು, ನೀವು ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಬೇಕೆಂದು ನಾನು ಸಲಹೆ ನೀಡುತ್ತೇನೆ, ಏಕೆಂದರೆ ನಂತರದ ಜೀವನದಲ್ಲಿ ಈ ಆಸನವನ್ನು ಬಳಸಲು ಪ್ರಾರಂಭಿಸುವುದು ಬಹಳಾ ಕಷ್ಟವಾಗಿರುತ್ತದೆ. ಪಾಶ್ಚಿಮಾತ್ಯ ಜನರಿಗೆ, ನೀವು ಈ ಸಾಂಪ್ರದಾಯಿಕ ಏಷ್ಯನ್ ಭಂಗಿಗಳಲ್ಲಿ ಯಾವುದಾದರೂ ಒಂದರಲ್ಲಿ ಕುಳಿತುಕೊಳ್ಳಬಹುದಾದರೆ, ಅದು ಒಳ್ಳೆಯದು; ಇಲ್ಲದಿದ್ದರೆ, ಕುರ್ಚಿಯಲ್ಲಿ ಕುಳಿತುಕೊಂಡರೂ ನಡೆಯುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ನಿಮ್ಮ ಬೆನ್ನು ನೇರವಾಗಿರಬೇಕು. 

ದೃಷ್ಟಿಕೋನವನ್ನು ನಿರ್ದೇಶಿಸುವುದು 

ಕಣ್ಣುಗಳಿಗೆ ಸಂಬಂಧಿಸಿದಂತೆ, ಕೆಲವು ಧ್ಯಾನಗಳನ್ನು ನಿಮ್ಮ ಕಣ್ಣುಮುಚ್ಚಿ ಮಾಡಲಾಗುತ್ತದೆ, ಕೆಲವುಗಳಲ್ಲಿ ನಿಮ್ಮ ಕಣ್ಣುಗಳು ತೆರೆದಿರುತ್ತವೆ, ಇನ್ನೂ ಕೆಲವುಗಳಲ್ಲಿ ನಿಮ್ಮ ಕಣ್ಣುಗಳು ಕೆಳಗೆ ನೋಡುತ್ತಿರುತ್ತವೆ, ಕೆಲವಲ್ಲಿ ನಿಮ್ಮ ಕಣ್ಣುಗಳು ಮೇಲಕ್ಕೆ ನೋಡುತ್ತಿರುತ್ತವೆ; ಇದು ಪ್ರತ್ಯೇಕ ಧ್ಯಾನವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಟಿಬೆಟಿಯನ್ನರು, ಕಣ್ಣುಮುಚ್ಚಿ ಧ್ಯಾನ ಮಾಡುವುದನ್ನು ವಿರೋಧಿಸುತ್ತಾರೆ. ನಿಮ್ಮ ಕಣ್ಣುಗಳನ್ನು ಮುಚ್ಚಿದಾಗ ನಿದ್ದೆಗೀಡಾಗುವುದು ಬಹಳಾ ಸುಲಭವಲ್ಲದೆ, ಧ್ಯಾನಿಸಲು ನಿಮ್ಮ ಕಣ್ಣುಗಳನ್ನು ಮುಚ್ಚಲೇಬೇಕು ಎಂಬ ಮಾನಸಿಕ ಅಡಚಣೆಯನ್ನು ನಿಮ್ಮಲ್ಲಿ ನಿರ್ಮಿಸುತ್ತದೆ. ನೀವು ಹಾಗೆ ಭಾವಿಸಿದರೆ, ನೀವು ಧ್ಯಾನದಲ್ಲಿ ಅಭಿವೃದ್ಧಿಪಡಿಸುತ್ತಿರುವುದನ್ನು, ನಿಜ ಜೀವನದಲ್ಲಿ ಸಂಯೋಜಿಸಲು ಹೆಚ್ಚು ಕಷ್ಟಕರವಾಗುತ್ತದೆ. ಉದಾಹರಣೆಗೆ, ನಾನು ಯಾರೊಂದಿಗಾದರೂ ಮಾತನಾಡುತ್ತಿದ್ದರೆ ಮತ್ತು ಪ್ರೀತಿಯ ಭಾವನೆಯನ್ನು ಹುಟ್ಟುಹಾಕಲು ನಾನು ನನ್ನ ಕಣ್ಣುಗಳನ್ನು ಮುಚ್ಚಬೇಕಾದರೆ ಅದು ವಿಚಿತ್ರವಾಗಿರುತ್ತದೆ. ಆದ್ದರಿಂದ, ಟಿಬೆಟಿನ ಸಂಪ್ರದಾಯದಲ್ಲಿನ ಹೆಚ್ಚಿನ ಧ್ಯಾನಗಳಿಗಾಗಿ, ನೀವು ನಿಮ್ಮ ಕಣ್ಣುಗಳನ್ನು ಅರ್ಧ-ತೆರೆದಿಡುವಿರಿ, ಸಡಿಲವಾಗಿ ಕೇಂದ್ರೀಕರಿಸಿ, ನೆಲದ ಕಡೆಗೆ ನೋಡುತ್ತೀರಿ. 

ದಿಂಬು 

ನೀವು ಅಡ್ಡಗಾಲಿಟ್ಟು ಕುಳಿತರೆ, ಕುಳಿತುಕೊಳ್ಳಲು ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಮುಖ್ಯ. ಕೆಲವರು ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳುತ್ತಾರೆ, ಮತ್ತು ಅವರ ಕಾಲುಗಳು ನಿಶ್ಚೇಷ್ಟಿತವಾಗುವುದಿಲ್ಲ. ಉದಾಹರಣೆಗೆ, ಪರಮಪೂಜ್ಯ ದಲೈ ಲಾಮಾ ಅವರು ಬೋಧಿಸುವಾಗ, ತಮ್ಮ ಬೋಧನಾ ಸಿಂಹಾಸನದ ಮೇಲೆ ಹಾಗೆ ಕುಳಿತುಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ದಿಂಬಿಲ್ಲದೆ ಕುಳಿತರೆ, ನಮ್ಮ ಕಾಲುಗಳು ಹೆಚ್ಚು ವೇಗವಾಗಿ ನಿಶ್ಚೇಷ್ಟಿತವಾಗುತ್ತವೆ. ಆದ್ದರಿಂದ ನಿಮಗೆ ಅಂತಹ ಸಮಸ್ಯೆ ಇದ್ದರೆ, ನಿಮ್ಮ ಸೊಂಟವು ನಿಮ್ಮ ಮೊಣಕಾಲುಗಳಿಗಿಂತ ಎತ್ತರವಾಗಿರುವಂತೆ ನಿಮ್ಮ ಹಿಂಭಾಗವನ್ನು ದಿಂಬಿನ ಮೇಲೆ ಇರಿಸಿ ಕುಳಿತುಕೊಳ್ಳಲು ಪ್ರಯತ್ನಿಸಿ. ನಿಮಗೆ ಸರಿಹೊಂದುವ ದಿಂಬಿನ ಪ್ರಕಾರವನ್ನು ಆರಿಸಿ: ದಪ್ಪದಾದ ಅಥವಾ ತೆಳ್ಳಗಿನ, ಗಟ್ಟಿಯಾದ ಅಥವಾ ಮೃದುವಾದ, ಇತ್ಯಾದಿ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾಗಿರುತ್ತಾರೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಆರಾಮವಾಗಿರುವುದು ಮತ್ತು ನಿಮ್ಮ ದಿಂಬು ನಿಮ್ಮ ಕಾಲುಗಳನ್ನು ನಿಶ್ಚೇಷ್ಟಿತರಾಗುವುದರಿಂದ ತಡೆಯುವುದು, ಏಕೆಂದರೆ ಅದು ಬಹಳಾ ಅಹಿತಕರವಾಗಿರುತ್ತದೆ. ಅನೇಕ ಬೌದ್ಧ ಕೇಂದ್ರಗಳಲ್ಲಿ ದಪ್ಪದಾದ, ದುಂಡಗಿನ ಅಥವಾ ಚೌಕಾಕಾರದ ಝಫುಸ್ ಅನ್ನು ಕಾಣಬಹುದು, ಆದರೆ ಆ ಝೆನ್ ಝಫುಗಳು ಜಪಾನಿನ, ಕಾಲುಗಳನ್ನು ಮಡಚಿಟ್ಟುಕೊಳ್ಳುವ ಭಂಗಿಯಲ್ಲಿ ಕುಳಿತುಕೊಳ್ಳಲು ಉಪಯುಕ್ತವಾಗಿರುತ್ತದೆ. ಬಹುಶಃ ಕೆಲವರು ಅಡ್ಡಗಾಲು ಹಾಕಿ, ಇದರ ಮೇಲೆ ಆರಾಮವಾಗಿ ಕುಳಿತುಕೊಳ್ಳಬಹುದು. ಆದರೆ ಹೆಚ್ಚಿನವರಿಗೆ ಇದು ತುಂಬಾ ಎತ್ತರವಾಗಿರುತ್ತದೆ ಮತ್ತು ತುಂಬಾ ಕಷ್ಟವಾಗಿರುತ್ತದೆ. ನಿಮ್ಮ ಕೇಂದ್ರದಲ್ಲಿ ಕೇವಲ ದಪ್ಪ ಜಾಫುಸ್ ಅನ್ನು ನೀಡುತ್ತಿದ್ದರೆ, ಮತ್ತು ನೀವು ಅಡ್ಡಗಾಲು ಹಾಕಿ ಕುಳಿತಿದ್ದರೆ, ನಿಮ್ಮ ಸ್ವಂತ ದಿಂಬನ್ನು ತರುವುದು ಉತ್ತಮ. 

ಧ್ಯಾನಕ್ಕಾಗಿ ಸಮಯವನ್ನು ಆರಿಸಿಕೊಳ್ಳುವುದು 

ಬಹಳಷ್ಟು ಜನರಿಗೆ, ಬೆಳಿಗ್ಗಿನ ಮೊಟ್ಟಮೊದಲ ಕಾರ್ಯವು ಧ್ಯಾನವಾಗಿರುವುದು ಉತ್ತಮವಾಗಿರುತ್ತದೆ ಅಥವಾ ಅವರ ರಾತ್ರಿಯ ಕೊನೆಯ ಕಾರ್ಯವಾಗಿರುತ್ತದೆ, ಹೀಗೆ ಮಾಡುವುದರಿಂದ, ಅವರ ದೈನಂದಿನ ಚಟುವಟಿಕೆಗಳ ವಿಷಯದಲ್ಲಿ ಕಡಿಮೆ ಗೊಂದಲಗಳಿರುತ್ತವೆ. ಕೆಲವರು, ಬೆಳಿಗ್ಗೆ ಹೆಚ್ಚು ಎಚ್ಚರವಾಗಿರುತ್ತಾರೆ, ಮತ್ತು ಇತರರು ರಾತ್ರಿಹೊತ್ತು ಹೆಚ್ಚು ಎಚ್ಚರವಾಗಿರುತ್ತಾರೆ – ಇವರನ್ನು "ಮಾರ್ನಿಂಗ್ ಪೀಪಲ್‌” ಮತ್ತು "ನೈಟ್ ಔಲ್ಸ್‌” ಎಂದು ಕರೆಯಲಾಗುತ್ತದೆ. ನಿಮ್ಮನ್ನು ಮತ್ತು ನಿಮ್ಮ ಜೀವನಶೈಲಿಯನ್ನು ಬೇರೆಯವರಿಗಿಂತ ಉತ್ತಮವಾಗಿ ನೀವೇ ತಿಳಿದಿರುವಿರಿ, ಆದ್ದರಿಂದ ದಿನದ ಯಾವ ಸಮಯ ಉತ್ತಮವಾಗಿರುತ್ತದೆ ಎಂಬುದನ್ನು ನೀವು ನಿರ್ಧರಿಸಬಹುದು. 

ನಿದ್ದೆಗೀಡಾಗಿದ್ದಾಗ, ಧ್ಯಾನ ಮಾಡುವಂತೆ ಎಂದಿಗೂ ಸಲಹೆ ನೀಡಲಾಗುವುದಿಲ್ಲ. ನಿಮಗೆ ರಾತ್ರಿಹೊತ್ತು ನಿದ್ದೆ ಬರುತ್ತಿದ್ದರೆ ಮತ್ತು ನೀವು ಮಲಗುವ ಮುನ್ನ ಧ್ಯಾನಿಸಲು ಪ್ರಯತ್ನಿಸಿದರೆ, ನಿಮ್ಮ ಧ್ಯಾನದ ಮಧ್ಯದಲ್ಲಿ ನೀವು ನಿದ್ರಿಸಲು ಪ್ರಾರಂಭಿಸಬಹುದು, ಅದರಿಂದ ಸಹಾಯವಾಗುವುದಿಲ್ಲ. ಅಂತೆಯೇ, ಮುಂಜಾನೆ ಹೊತ್ತು ನೀವು ಇನ್ನೂ ಅರೆನಿದ್ರೆಯ ಸ್ಥಿತಿಯಲ್ಲಿದ್ದರೆ, ನಿಮ್ಮ ಧ್ಯಾನವು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವೇ ನಿರ್ಣಯಿಸಿ. ನೀವು ಬೆಳಿಗ್ಗೆ ಬೇಗನೆ ಧ್ಯಾನಿಸುವ ಮೊದಲು ಕಾಫಿ ಅಥವಾ ಚಹಾವನ್ನು ಸೇವಿಸುವುದರಿಂದ ಯಾವುದೇ ಸಮಸ್ಯೆ ಇಲ್ಲ, ಆದರೆ ಹೆಚ್ಚಿನ ಟಿಬೆಟಿಯನ್ನರಿಗೆ ಈ ಅಭ್ಯಾಸವಿರುವುದಿಲ್ಲ. 

ನನ್ನ ಶಿಕ್ಷಕರಾದ ತ್ಸೆನ್ಜಾಬ್ ಸೆರ್ಕಾಂಗ್ ರಿನ್ಪೋಚೆ ಅವರು, ಪರಮಪೂಜ್ಯ ದಲೈ ಲಾಮಾ ಅವರ ಶಿಕ್ಷಕರಲ್ಲಿ ಒಬ್ಬರಾಗಿದ್ದರು. ಅವರು ತರಬೇತಿ ಪಡೆದ ಟಿಬೆಟ್‌ನ ತಾಂತ್ರಿಕ ಕಾಲೇಜು ಮಠಗಳಲ್ಲಿ ಅವರು ಹೇಗೆ ಧ್ಯಾನಿಸುತ್ತಿದ್ದರು ಎಂಬುದನ್ನು ಅವರು ವಿವರಿಸಿದರು. ಎಲ್ಲಾ ಸನ್ಯಾಸಿಗಳು ಧ್ಯಾನ ಮಂದಿರದಲ್ಲಿ ಕುಳಿತುಕೊಳ್ಳುತ್ತಿದ್ದರು, ಮತ್ತು ಅವರು ಅಲ್ಲಿಯೇ ಮಲಗುತ್ತಿದ್ದರು, ತಮ್ಮ ಸ್ಥಳಗಳಲ್ಲಿ ಕುಳಿತು, ತಮ್ಮ ನೆರೆಹೊರೆಯವರ ಮಡಿಲಲ್ಲಿ ತಲೆಯಿರಿಸಿ ಮಲಗುತ್ತಿದ್ದರು. ಟಿಬೆಟಿಯನ್ನರಿಗೆ ದೈಹಿಕ ಸಂಪರ್ಕದಿಂದ ಯಾವುದೇ ಸಮಸ್ಯೆ ಇಲ್ಲ. ಬೆಳಿಗ್ಗೆ ಬೇಗನೆ ಏಳಲು ಗಂಟೆ ಬಾರಿಸುತ್ತಿತ್ತು, ಮತ್ತು ಅವರು ಹಾಗೆಯೇ ಎದ್ದು ಕುಳಿತು ತಮ್ಮ ಧ್ಯಾನ, ಪಠಣಗಳು ಇತ್ಯಾದಿಗಳನ್ನು ಪ್ರಾರಂಭಿಸುವಂತೆ ನಿರೀಕ್ಷಿಸಲಾಗುತ್ತಿತ್ತು. ಆದರೆ ನೀವು, ಮಧ್ಯರಾತ್ರಿಯಲ್ಲಿ ಎಬ್ಬಿಸಿದಾಗ, ತಕ್ಷಣವೇ ಎದ್ದು ಶಸ್ತ್ರಚಿಕಿತ್ಸೆಯನ್ನು ಮಾಡಲು ಒಗ್ಗಿಕೊಂಡಿರುವ ವೈದ್ಯರಲ್ಲದಿದ್ದರೆ, ಎಚ್ಚರವಾದ ತಕ್ಷಣ ಧ್ಯಾನವನ್ನು ಪ್ರಾರಂಭಿಸುವುದು ಬಹಳಾ ಕಷ್ಟಕರವಾಗಿರುತ್ತದೆ. 

ಎಷ್ಟು ಹೊತ್ತು ಧ್ಯಾನಿಸಬೇಕು?  

ನೀವು ಕೇವಲ ಧ್ಯಾನದ ಅಭ್ಯಾಸವನ್ನು ಪ್ರಾರಂಭಿಸುತ್ತಿರುವಾಗ, ನಿಮ್ಮ ಧ್ಯಾನದ ಅವಧಿಗಳು ಸಂಕ್ಷಿಪ್ತವಾಗಿದ್ದು, ಅದನ್ನು ಪದೇ ಪದೇ ಮಾಡುವುದು ಮುಖ್ಯ. ಪ್ರಾರಂಭಿಕರಾಗಿ, ಗಂಟೆಗಟ್ಟಲೆ ಕುಳಿತು ಧ್ಯಾನ ಮಾಡಲು ಪ್ರಯತ್ನಿಸುವುದು ಅಗ್ನಿಪರೀಕ್ಷೆಯಂತಿರುತ್ತದೆ. ಕೆಲವು ಸ್ಥಳಗಳಲ್ಲಿ ಈ ವಿಧಾನವನ್ನುಅನುಸರಿಸುತ್ತಾರೆ, ಆದರೆ ಸಾಮಾನ್ಯವಾಗಿ, ಟಿಬೆಟಿಯನ್ನರು ಇದನ್ನು ವಿರೋಧಿಸುತ್ತಾರೆ, ಏಕೆಂದರೆ ಧ್ಯಾನವು ಅಗ್ನಿಪರೀಕ್ಷೆಯಾಗಿದ್ದರೆ, ನೀವು ಅದನ್ನು ಮಾಡಲು ಬಯಸುವುದಿಲ್ಲ! ಅಧಿವೇಶನ ಮುಗಿಯುವುದನ್ನು ನೀವು ಕಾತರದಿಂದ ಕಾಯುತ್ತಿರುತ್ತೀರಿ. ಆದ್ದರಿಂದ ಆರಂಭದಲ್ಲಿ, ಕೇವಲ ಐದು ನಿಮಿಷಗಳ ಕಾಲ ಧ್ಯಾನಿಸಿ - ಅದು ಸಾಕು. ಥೆರವಾದ ಮಠಗಳಲ್ಲಿ, ಒಂದೇ ರೀತಿಯ ಅಭ್ಯಾಸವನ್ನು ಹೆಚ್ಚು ಸಮಯದ ಕಾಲ ಮಾಡದೆ ಇರಲು, ನಡೆಯುವ ಧ್ಯಾನದೊಂದಿಗೆ ಕುಳಿತುಕೊಳ್ಳುವ ಧ್ಯಾನವನ್ನು ಪರ್ಯಾಯವಾಗಿ ನಡೆಸುತ್ತಾರೆ. 

ಟಿಬೆಟಿಯನ್ನರು ಬಳಸುವ ಸಾದೃಶ್ಯವೇನೆಂದರೆ, ಒಬ್ಬ ಸ್ನೇಹಿತ ಭೇಟಿ ನೀಡುತ್ತಿದ್ದರೆ ಮತ್ತು ಅವರು ತುಂಬಾ ಹೊತ್ತು ಉಳಿದುಕೊಂಡರೆ, ಆ ವ್ಯಕ್ತಿಯು ಹೊರಡುವುದನ್ನೇ ಕಾಯುತ್ತಾ ನೀವು ಅಸಹನೆಗೊಳಗಾಗುತ್ತೀರಿ. ಮತ್ತು ನಿಮ್ಮ ಸ್ನೇಹಿತ ಹೊರಟ ನಂತರ, ನೀವು ಅವರನ್ನು ಮತ್ತೆ ನೋಡಲು ತುಂಬಾ ಉತ್ಸುಕರಾಗಿರುವುದಿಲ್ಲ. ಆದರೆ ನೀವು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಲು ಬಯಸುವ ಸಮಯದಲ್ಲೇ ನಿಮ್ಮ ಸ್ನೇಹಿತ ಹೊರಟುಹೋದರೆ, ಆ ಸ್ನೇಹಿತನನ್ನು ಶೀಘ್ರದಲ್ಲೇ ಮತ್ತೆ ಭೇಟಿಮಾಡಲು ನೀವು ತುಂಬಾ ಸಂತೋಷಪಡುತ್ತೀರಿ. ಅಂತೆಯೇ, ನಮ್ಮ ಧ್ಯಾನದ ಭಂಗಿ, ಧ್ಯಾನದ ಆಸನ ಮತ್ತು ಧ್ಯಾನದ ಅವಧಿಯು ಆರಾಮದಾಯಕವಾಗಿರಬೇಕು, ಆಗ ನಾವು ನಮ್ಮ ಅಭ್ಯಾಸದ ಬಗ್ಗೆ ಉತ್ಸಾಹಭರಿತರಾಗಿರುತ್ತೇವೆ. 

ಉದ್ದೇಶವನ್ನು ಇಟ್ಟುಕೊಳ್ಳುವುದು  

ಧ್ಯಾನಿಸುವ ಮೊದಲು, ನಿಮ್ಮ ಉದ್ದೇಶವನ್ನು ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ವಾಸ್ತವದಲ್ಲಿ, ಬೆಳಬೆಳಿಗ್ಗೆ, ನಿಮ್ಮ ಕಣ್ಣುಗಳನ್ನು ತೆರೆದ ತಕ್ಷಣವೇ, ಮೊದಲ ವಿಷಯವು ನಿಮ್ಮ ಉದ್ದೇಶವನ್ನು ಇಟ್ಟುಕೊಳ್ಳುವುದಾಗಿರಬೇಕು ಎಂದು ಸಲಹೆ ನೀಡಲಾಗುತ್ತದೆ. ನೀವು ಎದ್ದ ತಕ್ಷಣ, ಹಾಸಿಗೆಯಲ್ಲಿರುವಾಗಲೇ, ನಿಮ್ಮ ದಿನದ ಉದ್ದೇಶವನ್ನು ನಿರ್ಧರಿಸಬಹುದು. ನೀವು ಹೀಗೆ ಯೋಚಿಸಬಹುದು: “ಇಂದು ನಾನು ಕೋಪಗೊಳ್ಳದಿರಲು ಪ್ರಯತ್ನಿಸುತ್ತೇನೆ. ನಾನು ಹೆಚ್ಚು ಸಹಿಷ್ಣುವಾಗಿರಲು ಪ್ರಯತ್ನಿಸುತ್ತೇನೆ. ನಾನು ಇತರರ ಬಗ್ಗೆ ಹೆಚ್ಚು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಈ ದಿನವನ್ನು ಅರ್ಥಪೂರ್ಣ ದಿನವನ್ನಾಗಿ ಮಾಡಲು ಪ್ರಯತ್ನಿಸುತ್ತೇನೆ ಮತ್ತು ಅದನ್ನು ವ್ಯರ್ಥ ಮಾಡುವುದಿಲ್ಲ.” 

ಒಂದು ಅದ್ಭುತವಾದ ಝೆನ್ ಕೋವಾನ್ ಇದೆ, ಇದು ನನ್ನ ನೆಚ್ಚಿನದ್ದಾಗಿದೆ: "ಸಾವು ಯಾವಾಗ ಬೇಕಾದರೂ ಬರಬಹುದು: ಶಾಂತವಾಗಿರಿ!" ನೀವು ಅದರ ಬಗ್ಗೆ ಯೋಚಿಸಿದರೆ, ಅದು ಬಹಳಾ ಗಹನವಾದ ಆಲೋಚನೆಯಾಗಿದೆ. ನೀವು ತುಂಬಾ ತಲೆಕೆಡಿಸಿಕೊಂಡರೆ, ಸಾವು ಯಾವಾಗ ಬೇಕಾದರೂ ಬರಬಹುದು ಎಂದು ನೀವು ಬಹಳಾ ಭಯಭೀತರಾಗಿದ್ದರೆ ಮತ್ತು ಅಸಮಾಧಾನಗೊಂಡಿದ್ದರೆ, ನೀವು ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನೀವು ಈ ರೀತಿಯ ಆಲೋಚನೆಗಳನ್ನು ಹೊಂದಿರಬಹುದು: "ನಾನು ಸಾಕಷ್ಟು ಪ್ರಯತ್ನಪಡುತ್ತಿಲ್ಲ; ನಾನು ಅಷ್ಟು ಒಳ್ಳೆಯವನಲ್ಲ." ಆದರೆ ಸಾವು ಯಾವ ಸಮಯದಲ್ಲಾದರೂ ಬರಬಹುದು ಎಂದು ನಿಮಗೆ ತಿಳಿದಿದ್ದರೆ ಮತ್ತು ಅದರ ಬಗ್ಗೆ ನೀವು ನಿರಾಳರಾಗಿದ್ದರೆ, ನೀವು ಆತಂಕ ಅಥವಾ ಉದ್ವೇಗವಿಲ್ಲದೆ, ಆಸಕ್ತಿಯಿಂದ, ಅರ್ಥಪೂರ್ಣವಾದ, ವಾಸ್ತವಿಕ ರೀತಿಯಲ್ಲಿ ನೀವು ಮಾಡಬಹುದಾದ ಎಲ್ಲವನ್ನೂ ಮಾಡುತ್ತೀರಿ. ಆದ್ದರಿಂದ ಸಾವು ಯಾವುದೇ ಸಮಯದಲ್ಲಾದರೂ ಬರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ ಮತ್ತು ಶಾಂತಿಯಿಂದಿರಿ!  

ಧ್ಯಾನಿಸುವ ಮೊದಲು, "ನಾನು 'x' ನಿಮಿಷಗಳವರೆಗೆ ಧ್ಯಾನಿಸಲು ಪ್ರಯತ್ನಿಸುತ್ತೇನೆ. ನಾನು ಕೇಂದ್ರೀಕರಿಸಲು ಪ್ರಯತ್ನಿಸುತ್ತೇನೆ. ನನಗೆ ನಿದ್ದೆ ಬಂತಾದರೆ, ನಾನು ಎಚ್ಚರಗೊಳ್ಳುತ್ತೇನೆ. ನನ್ನ ಗಮನವು ಅಲೆದಾಡಿದರೆ, ನಾನು ಅದನ್ನು ಮರಳಿ ತರಲು ಪ್ರಯತ್ನಿಸುತ್ತೇನೆ.” ಎಂಬ ಉದ್ದೇಶವನ್ನು ಇಟ್ಟುಕೊಳ್ಳುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಇದು ಕೇವಲ ಬಾಯಿ ಮಾತಾಗಿರಬಾರದು - ನಿಮ್ಮ ಉದ್ದೇಶವನ್ನು ನಿಜವಾಗಿಯೂ ಮನಸ್ಸಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಿ ಮತ್ತು ಅದನ್ನು ಅನುಸರಿಸಿ. ನಿಮ್ಮ ಉದ್ದೇಶವನ್ನು ನಿಜವಾಗಿ ಪಾಲಿಸುವುದು ಬಹಳಾ ಕಷ್ಟಕರವಾಗಿರುತ್ತದೆ. ಇತರ ವಿಷಯಗಳ ಬಗ್ಗೆ ಯೋಚಿಸಲು, ಅವುಗಳು ಇತರ ಧರ್ಮದ ಪರಿಕಲ್ಪನೆಗಳೇ ಆಗಿರಬಹುದು, ಅವುಗಳಿಗಾಗಿ ನಿಮ್ಮ ಧ್ಯಾನದ ಅವಧಿಯನ್ನು ಬಳಸುವ ಕೆಟ್ಟ ಅಭ್ಯಾಸವನ್ನು ನೀವು ಬೆಳೆಸಿಕೊಂಡರೆ, ಅದನ್ನು ಮುರಿಯುವುದು ಬಹಳಾ ಕಷ್ಟಕರವಾಗಿರುತ್ತದೆ. ಇದರ ಬಗ್ಗೆ ನಾನು ಅನುಭವದಿಂದ ಮಾತನಾಡುತ್ತಿದ್ದೇನೆ: ಇದನ್ನು ಮುರಿಯುವುದು ನಿಜವಾಗಿಯೂ ಕಷ್ಟಕರವಾದ ಅಭ್ಯಾಸವಾಗಿರುತ್ತದೆ, ಆದ್ದರಿಂದ ನಿಮ್ಮ ಧ್ಯಾನದ ಅವಧಿಯ ಮೊದಲು ಸರಿಯಾದ ಉದ್ದೇಶವನ್ನು ಇಟ್ಟುಕೊಳ್ಳಲು ಮತ್ತು ಅನುಸರಿಸಲು ಪ್ರಯತ್ನಿಸಿ. 

ಪ್ರೇರಣೆ 

ಮುಂದಿನ ವಿಷಯ ಪ್ರೇರಣೆಯಾಗಿರುತ್ತದೆ. ಟಿಬೆಟಿನ ಬೌದ್ಧ ಸಂದರ್ಭದಲ್ಲಿ, ಪ್ರೇರಣೆ ಎರಡು ಭಾಗಗಳಿಂದ ರಚಿಸಲ್ಪಟ್ಟಿರುತ್ತದೆ. ಮೊದಲನೆಯದು ಗುರಿಯಾಗಿರುತ್ತದೆ: ನಾವು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ? ಸಾಮಾನ್ಯವಾದ ಗುರಿಗಳನ್ನು "ಮಾರ್ಗದ ಕ್ರಮವಾದ ಹಂತಗಳು" (ಲ್ಯಾಮ್-ರಿಮ್) ನಲ್ಲಿ ವಿವರಿಸಲಾಗಿದೆ. ಲ್ಯಾಮ್-ರಿಮ್ನಲ್ಲಿ ವಿವರಿಸಿದಂತೆ, ಗುರಿಗಳೆಂದರೆ: (ಅ) ಭವಿಷ್ಯದ ಜೀವನವನ್ನು ಸುಧಾರಿಸುವುದು, (ಆ) ಪುನರ್ಜನ್ಮದಿಂದ ಸಂಪೂರ್ಣ ವಿಮೋಚನೆಯನ್ನು ಪಡೆಯುವುದು ಮತ್ತು (ಇ) ಬೇರೆಯವರು ಪುನರ್ಜನ್ಮದಿಂದ ವಿಮೋಚನೆಯನ್ನು ಪಡೆಯುವಂತೆ ಸಹಾಯಮಾಡಲು ಜ್ಞಾನೋದಯವನ್ನು ತಲುಪುವುದು. ಎರಡನೆಯ ಭಾಗವು ಆ ಗುರಿಯನ್ನು ತಲುಪಲು ನಮ್ಮನ್ನು ಪ್ರೇರೇಪಿಸುವ ಭಾವನೆಯಾಗಿರುತ್ತದೆ. 

ನಮ್ಮ ಪ್ರೇರಣೆಯ ಬಗ್ಗೆ ಯೋಚಿಸುವಾಗ, ನಮ್ಮೊಂದಿಗೆ ಪ್ರಾಮಾಣಿಕವಾಗಿರುವುದು ಮುಖ್ಯ. ನಾನು ಪುನರ್ಜನ್ಮವನ್ನು ನಿಜವಾಗಿಯೂ ನಂಬುತ್ತೇನೆಯೇ? ನಮ್ಮಲ್ಲಿ ಹೆಚ್ಚಿನವರು ಹೀಗೆ ಹೇಳುವುದಿಲ್ಲ, "ನನ್ನ ಮುಂದಿನ ಜೀವನದಲ್ಲಿ ಮತ್ತೊಂದು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾನು ಹೀಗೆ ಮಾಡುತ್ತಿದ್ದೇನೆ" ಅಥವಾ "ಪುನರ್ಜನ್ಮದಿಂದ ಸಂಪೂರ್ಣವಾಗಿ ವಿಮೋಚನೆಯನ್ನು ಪಡೆಯಲು ನಾನು ಹೀಗೆ ಮಾಡುತ್ತಿದ್ದೇನೆ,” ಅಥವಾ “ನಾನು ಪ್ರಬುದ್ಧನಾಗಲು ಇದನ್ನು ಮಾಡುತ್ತಿದ್ದೇನೆ, ಆಗ ನಾನು ಎಲ್ಲರಿಗೂ ಪುನರ್ಜನ್ಮದಿಂದ ವಿಮೋಚನೆಯನ್ನು ಪಡೆಯಲು ಸಹಾಯ ಮಾಡಬಲ್ಲೆ” – ನೀವು ಪುನರ್ಜನ್ಮವನ್ನು ನಂಬದಿದ್ದರೆ ಇವೆಲ್ಲವೂ ಕೇವಲ ಹುಸಿನುಡಿಗಳಾಗಿರುತ್ತವೆ. 

ಹಾಗಾಗಿ, ನಾನು "ಧರ್ಮ-ಲೈಟ್" ಎಂದು ಕರೆಯುವುದರ ಭಾಗವಾಗಿ ನೀವು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರೆ, ಅದು ಪುನರ್ಜನ್ಮವಿಲ್ಲದ ಬೌದ್ಧಧರ್ಮವಾಗಿರುತ್ತದೆ, ಅದರಿಂದ ಯಾವುದೇ ಸಮಸ್ಯೆಯಿಲ್ಲ. ನಿಮ್ಮ ಪ್ರೇರಣೆಯನ್ನು ಬೇರೆಯವರೊಂದಿಗೆ ಹೇಳಿಕೊಳ್ಳಬೇಕಾಗಿಲ್ಲ, ಆದರೆ ನೀವು ನಿಮ್ಮೊಂದಿಗೆ ಪ್ರಾಮಾಣಿಕವಾಗಿರಬೇಕು: "ಈ ಜೀವಿತಾವಧಿಯಲ್ಲಿನ ನನ್ನ ಪರಿಸ್ಥಿತಿಯನ್ನು ಸುಧಾರಿಸಲು ನಾನು ಇದನ್ನು ಮಾಡುತ್ತಿದ್ದೇನೆ." ನಾವು ಅದರ ಬಗ್ಗೆ ಪ್ರಾಮಾಣಿಕರಾಗಿರುವವರೆಗೆ ಅದು ಸಮರ್ಥನೀಯ ಪ್ರೇರಣೆಯಾಗಿರುತ್ತದೆ. ಮತ್ತೊಂದೆಡೆ, "ನಿಜವಾದ ಧರ್ಮ" ಎಂದು ನಾನು ಕರೆಯುವ ಅಧಿಕೃತವಾದ, ದೀರ್ಘಕಾಲೀನ ಗುರಿಯ ಬಗ್ಗೆ ಗೌರವದಿಂದ ಇರುವುದು ಮುಖ್ಯವಾಗಿರುತ್ತದೆ ಮತ್ತು ಬೌದ್ಧಧರ್ಮದ ಅಭ್ಯಾಸವು, ಈ ಜೀವಿತಾವಧಿಯಲ್ಲಿನ ವಿಷಯಗಳನ್ನು ಸುಧಾರಿಸಲು ಮಾತ್ರ ಇರುವುದು ಎಂದು ಯೋಚಿಸಬಾರದು.

ನಮ್ಮ ಪ್ರೇರಣೆಯ ಎರಡನೇ ಭಾಗಕ್ಕೆ ಸಂಬಂಧಿಸಿದಂತೆ, - ನಮ್ಮ ಗುರಿಯನ್ನು ತಲುಪಲು ನಮ್ಮನ್ನು ಪ್ರೇರೇಪಿಸುವ ಭಾವನೆ – ನೈಜ ವಿಷಯವಾದ ಪ್ರೇರಣೆಯ ಮೊದಲ ಹಂತವೆಂದರೆ "ನಾನು ಭವಿಷ್ಯದ ಜೀವನದಲ್ಲಿ, ಅಮೂಲ್ಯವಾದ ಮಾನವ ಪುನರ್ಜನ್ಮದ (ಗುರಿ) ಗುರಿಯನ್ನು ಹೊಂದಿದ್ದೇನೆ ಏಕೆಂದರೆ ನನಗೆ ನೊಣ, ಅಥವಾ ಜಿರಳೆ, ಅಥವಾ ಯಾವುದೇ ಅಲ್ಪಜೀವಿಯಾಗಿ ಮರುಜನ್ಮ ಪಡೆಯುವುದು ಭಯಾನಕವಾಗಿರುತ್ತದೆ (ಭಾವನೆ) ಎಂಬ ಭಯವಿದೆ. ಅಂತಹ ಭವಿಷ್ಯವನ್ನು ತಪ್ಪಿಸಲು ನಾನು ಬಯಸುತ್ತೇನೆ ಮತ್ತು ಅದನ್ನು ತಪ್ಪಿಸಲು ಒಂದು ನಿಜವಾದ ಮಾರ್ಗವಿದೆ ಎಂದು ನನಗೆ ವಿಶ್ವಾಸವಿದೆ.” ಇದರ ಧರ್ಮ-ಲೈಟ್ ರೂಪಾಂತರವು “ಮುಂಬರುವ ದಿನಗಳಲ್ಲಿ, ಎಲ್ಲಾ ವಿಷಯಗಳು ಉತ್ತಮವಾಗಿ ನಡೆಯಲಿ ಮತ್ತು ಅತ್ಯುತ್ತಮವಾಗಿ ಮುಂದುವರೆಯಲಿ ಎಂಬ ಗುರಿಯನ್ನು (ಗುರಿ) ಹೊಂದಿದ್ದೇನೆ, ಏಕೆಂದರೆ ವಿಷಯಗಳು ಹದಗೆಟ್ಟರೆ ಅದು ಎಷ್ಟು ಭೀಕರವಾಗಿರಬಹುದು (ಭಾವನೆ) ಎಂಬ ಭಯವಿದೆ ಮತ್ತು ಅದನ್ನು ತಪ್ಪಿಸಲು ನಾನು ಮಾಡಬಹುದಾದ ರಚನಾತ್ಮಕ ವಿಷಯಗಳಿವೆ ಎಂದು ನನಗೆ ತಿಳಿದಿದೆ.” ಈ ಎರಡೂ ಸಂದರ್ಭಗಳಲ್ಲಿ, ಇದು ನಮ್ಮನ್ನು ಗರಿಬಡಿದಂತಾಗಿಸುವ ಭಯವಾಗಿರುವುದಿಲ್ಲ, ಉದಾಹರಣೆಗೆ “ನಮ್ಮ ಪರಿಸ್ಥಿತಿಯು ಎಷ್ಟು ಹತಾಶವಾಗಿದೆ. ನನ್ನ ಅವನತಿಯು ಹತ್ತಿರವಾಗುತ್ತಿದೆ”, ಎಂಬುದಾಗಿರುವುದಿಲ್ಲ, ಬದಲಿಗೆ, "ನನಗೆ ನಿಜವಾಗಿಯೂ ಅದು ಬೇಡ, ಮತ್ತು ಅದನ್ನು ತಪ್ಪಿಸುವ ಒಂದು ಮಾರ್ಗವಿದೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ” ಎಂಬ ಆರೋಗ್ಯಕರ ಅರ್ಥವಾಗಿರುತ್ತದೆ. ನಾವು ಗಾಡಿಯನ್ನು ಚಲಾಯಿಸುವಂತೆ ಇರುತ್ತದೆ – ನಾವು ಜಾಗರೂಕನಾಗಿರುತ್ತೇವೆ, ಆದರೆ ಅಪಘಾತ ಸಂಭವಿಸುವ ಭಯದಿಂದ ಗರಿಬಡಿದಂತಾಗಿ ಚಲಾಯಿಸದೇ ಇರುವುದಿಲ್ಲ.  

ಎರಡನೆಯ ನೈಜ ವಿಷಯವೆಂದರೆ "ಪುನರ್ಜನ್ಮವನ್ನು ಒಳಗೊಂಡಿರುವ ಎಲ್ಲಾ ರೀತಿಯ ದುಃಖಗಳಿಂದ ನಾನು ಸಂಪೂರ್ಣವಾಗಿ ಅಸಹ್ಯಗೊಂಡಿದ್ದೇನೆ, ಬೇಸರಗೊಂಡಿದ್ದೇನೆ ಮತ್ತು ಬೇಸತ್ತು ಹೋಗಿದ್ದೇನೆ (ಭಾವನೆ) ಮತ್ತು ನಾನು ಅದರಿಂದ ಹೊರಬರಲು (ಗುರಿ) ಬಯಸುತ್ತೇನೆ." ಪರಿತ್ಯಾಗದ ಹಿಂದಿನ ಭಾವನೆಯ ಸಾರವೆಂದರೆ “ಮತ್ತೆ ಮಗುವಾಗುವುದು, ಅತ್ಯಂತ ಬೇಸರವಾದ ವಿಷಯ, ಏಕೆಂದರೆ ಎಲ್ಲವನ್ನೂ ಮತ್ತೆ ಕಲಿಯಬೇಕು, ಶಿಕ್ಷಣವನ್ನು ಪಡೆಯಬೇಕು ಮತ್ತು ಜೀವನವನ್ನು ಹೇಗೆ ನಡೆಸಬೇಕೆಂಬ ಲೆಕ್ಕಾಚಾರ ಮಾಡಬೇಕು. ಅನಾರೋಗ್ಯಕ್ಕೆ ಒಳಗಾಗುವುದು ಮತ್ತು ವಯಸ್ಸಾಗುವುದು ಬೇಸರದ ಸಂಗತಿಯಾಗಿರುತ್ತದೆ. ಒಂದು ಕೆಟ್ಟ ಸಿನಿಮಾವನ್ನು ಮತ್ತೆ ಮತ್ತೆ ನೋಡಿದಂತೆ ಇರುತ್ತದೆ. ನನ್ನ ಪ್ರಕಾರ, ಇದು ಬಹಳಾ ನೀರಸವಾಗಿರುತ್ತದೆ. ನನಗೆ ಸಾಕಾಗಿ ಹೋಗಿದೆ!” 

ಅತ್ಯಂತ ಅತ್ಯಾಧುನಿಕವಾದ ಪ್ರೇರಣೆಯು, ಪ್ರಬುದ್ಧರಾಗಲು, ಬೋಧಿಚಿತ್ತದ ಗುರಿಯನ್ನು (ಗುರಿ) ಹೊಂದಿರುವುದಾಗಿರುತ್ತದೆ ಮತ್ತು ಇದು ಸಹಾನುಭೂತಿಯಿಂದ (ಭಾವನೆ) ಪ್ರೇರಿತವಾಗಿರುತ್ತದೆ: “ಪ್ರತಿಯೊಬ್ಬರೂ ಇಷ್ಟೊಂದು ಬಳಲುತ್ತಿರುವುದನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ದುಃಖವನ್ನು ನಿವಾರಿಸಲು ಎಲ್ಲರಿಗೂ ಸಹಾಯ ಮಾಡುವ ಸ್ಥಿತಿಯನ್ನು ನಾನು ತಲುಪಬೇಕು.” 

ನಮ್ಮ ಗುರಿಯನ್ನು ಸಾಧಿಸಿದ ನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ಸಹ ಪ್ರೇರಣೆ ಒಳಗೊಂಡಿರುತ್ತದೆ. ನಾವು ಮಹಾಯಾನ ಸಂಪ್ರದಾಯದಲ್ಲಿ ಅಭ್ಯಾಸ ಮಾಡುತ್ತಿರುವಾಗ, ಅಂತಿಮವಾಗಿ, ಪ್ರೇರಣೆಯ ಪ್ರತಿಯೊಂದು ಹಂತಗಳು, ಜ್ಞಾನೋದಯದ ಕಡೆಗೆ ಕೆಲಸ ಮಾಡುವತ್ತ ಆಗಿರುತ್ತವೆ. ಹಾಗಾದರೆ, ಜ್ಞಾನೋದಯವನ್ನು ತಲುಪುವುದು, ನಾವು ನಮ್ಮ ಗುರಿಯನ್ನು ತಲುಪಿದ ನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ಬಣ್ಣಿಸುತ್ತದೆ. 

ಧರ್ಮ-ಲೈಟ್ನ ಮಟ್ಟದಲ್ಲಿ, ನಾವು ಈ ಜೀವಿತಾವಧಿಯಲ್ಲಿ, ಜ್ಞಾನೋದಯದ ಕಡೆಗೆ ಸಾಧ್ಯವಾದಷ್ಟು ಪ್ರಗತಿಯನ್ನು ಸಾಧಿಸಲು ಬಯಸುತ್ತೇವೆ, ಅದು ಸುಲಭ ಎಂದು ನಾವು ಭಾವಿಸುವಷ್ಟು ನಾವು ನಿಷ್ಕಪಟರಾಗಿರಬಾರದು ಮತ್ತು ನಮ್ಮ ಮರಣವು ಸಮೀಪಿಸಿದಾಗ, ನಾವು ಇನ್ನೂ ಅಪ್ರಬುದ್ದರಾಗಿದ್ದೇವೆ ಎಂದು ನಾವು ನಿರಾಶೆಗೊಳಗಾಗಬಾರದು ಮತ್ತು ಖಿನ್ನತೆಗೆ ಒಳಗಾಗಬಾರದು. 

  • ಪ್ರೇರಣೆಯ ಮೂರು ನೈಜ ವಿಷಯಗಳ ಹಂತಗಳಲ್ಲಿ, ಮೊದಲನೆಯದು "ಜ್ಞಾನೋದಯದ ಹಾದಿಯಲ್ಲಿ ಮುಂದುವರಿಯಲು, ನಾನು ಮತ್ತೊಂದು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆಯಲು ಬಯಸುತ್ತೇನೆ, ಏಕೆಂದರೆ ನನ್ನ ಗುರಿಯನ್ನು ಸಾಧಿಸಲು, ಅನೇಕ ಜೀವಿತಾವಧಿಗಳು ಬೇಕಾಗುತ್ತವೆ." 
  • ಎರಡನೆಯದು "ನಾನು ಕರ್ಮ ಮತ್ತು ಗೊಂದಲದ ಭಾವನೆಗಳಿಂದ ವಿಮೋಚನೆಯನ್ನು ಪಡೆಯಲು ಬಯಸುತ್ತೇನೆ, ಏಕೆಂದರೆ ನಾನು ಇತರರ ಮೇಲೆ ಕೋಪಗೊಳ್ಳುತ್ತಿದ್ದರೆ, ನಾನು ಅವರೊಂದಿಗೆ ಅಂಟಿಕೊಂಡರೆ ಅಥವಾ ನಾನು ಪ್ರಚೋದಿತ ನಡವಳಿಕೆಯನ್ನು ಹೊಂದಿದ್ದರೆ, ನಾನು ಅವರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ನಾನು ಅದರ ಬಗ್ಗೆ ಹೆಮ್ಮೆ ಮತ್ತು ಅಹಂಕಾರದಿಂದಿದ್ದರೆ, ನಾನು ನಿಜವಾಗಿಯೂ ಇತರರಿಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾನು ನನ್ನ ಸ್ವಂತ ಮುಕ್ತಿಯನ್ನು ಪಡೆಯಬೇಕು.” 
  • ಅತ್ಯುನ್ನತವಾದ ಪ್ರೇರಣೆಯು "ನಾನು ಜ್ಞಾನೋದಯವನ್ನು ಪಡೆಯಲು ಬಯಸುತ್ತೇನೆ, ಇದರಿಂದ, ಪ್ರತಿಯೊಬ್ಬ ವ್ಯಕ್ತಿಗೆ, ಪ್ರತ್ಯೇಕವಾಗಿ ಸಹಾಯ ಮಾಡುವ ಅತ್ಯುತ್ತಮ ಮಾರ್ಗದ ಸಂಪೂರ್ಣ ಜ್ಞಾನವನ್ನು ನಾನು ಹೊಂದಿರುತ್ತೇನೆ." ಎಂಬುದಾಗಿರುತ್ತದೆ.

ಪ್ರೇರಣೆಯು ಬಹಳ ಮುಖ್ಯ. ಧ್ಯಾನದ ಅವಧಿಯ ಆರಂಭದಲ್ಲಿ ಮಾತ್ರವಲ್ಲದೆ ಇಡೀ ದಿನದಲ್ಲಿ ನಾವು ಪ್ರೇರೇಪಣೆಯನ್ನು ಹೊಂದಿರಬೇಕು ಎಂದು ತ್ಸೋಂಗ್‌ಖಾಪಾ ಅವರು ಒತ್ತಿಹೇಳುತ್ತಾರೆ. ಮತ್ತು ಪ್ರೇರಣೆಯು ಕೇವಲ ಒಳ್ಳೆಯ ಪದಗಳಾಗಿರಬಾರದು; ನಾವು ಅವನ್ನು ನಿಜವಾಗಿ ಅರ್ಥೈಸಿಕೊಳ್ಳಬೇಕು. "ಅರ್ಥೈಸುವುದು" ಎಂದರೆ ಏನು? ಇದರ ಅರ್ಥವೇನೆಂದರೆ, ಧ್ಯಾನದ ಅಭ್ಯಾಸದ ಮೂಲಕ ನಾವು ಪ್ರೇರಣೆಯನ್ನು ಸಂಪೂರ್ಣವಾಗಿ ಆಂತರಿಕಗೊಳಿಸಬೇಕು, ಆಗ ಪ್ರೇರಣೆಯು ಅಧಿಕೃತವಾದ, ನೈಸರ್ಗಿಕ ಭಾವನೆಯಾಗಿರುತ್ತದೆ ಮತ್ತು ನಾವು ಪ್ರತಿದಿನ ನಮ್ಮ ದೈನಂದಿನ ಜೀವನವನ್ನು ಹೇಗೆ ನಡೆಸುತ್ತೇವೆ ಎಂಬುದರ ಅವಿಭಾಜ್ಯ ಅಂಗವಾಗಿರುತ್ತದೆ.

ಧ್ಯಾನದ ಮೊದಲು ಶಾಂತವಾಗುವುದು 

ಒಮ್ಮೆ ನಾವು ಸರಿಯಾದ ಭೌತಿಕ ವಾತಾವರಣವನ್ನು ರಚಿಸಿದ ನಂತರ ಮತ್ತು ನಮ್ಮ ಉದ್ದೇಶ ಮತ್ತು ಪ್ರೇರಣೆಯನ್ನು ಇಟ್ಟುಕೊಂಡ ನಂತರ, ನಾವು ಶಾಂತವಾಗಿರಬೇಕು. ಸಾಮಾನ್ಯವಾಗಿ, ಉಸಿರಾಟವನ್ನು ಎಣಿಸುವಂತಹ ಉಸಿರಾಟದ ಧ್ಯಾನದಿಂದ ಹಾಗೆ ಮಾಡಲಾಗುತ್ತದೆ. ಉಸಿರಿನೊಂದಿಗೆ ಮಾಡಬಹುದಾದ ಹಲವಾರು, ಹೆಚ್ಚು ವಿಸ್ತಾರವಾದ ವ್ಯಾಯಾಮಗಳಿವೆ, ಆದರೆ ಸಾಮಾನ್ಯವಾಗಿ, ಮೂಗಿನ ಮೂಲಕ ಉಸಿರಾಡುವುದು ಮತ್ತು ಒಳಗೆ-ಹೊರಗೆ ಹೋಗುವ ಉಸಿರಾಟದ ಹನ್ನೊಂದು ಸುತ್ತುಗಳನ್ನು ಎಣಿಸುವುದು ಸಾಕಾಗುತ್ತದೆ. ಈ ರೀತಿಯಾಗಿ ನಮ್ಮ ಮನಸ್ಸನ್ನು ಶಾಂತಗೊಳಿಸುವುದರಿಂದ ನಾವು ಇಲ್ಲಿಯವರೆಗೆ ಏನು ಮಾಡುತ್ತಿದ್ದೆವು ಮತ್ತು ಮುಂದೆ ನಾವು ಮಾಡಲಿರುವ ಧ್ಯಾನದ ನಡುವೆ, ಶಾಂತವಾದ ಅಂತರವನ್ನು ರಚಿಸುತ್ತೇವೆ. ಅಂತಹ ಅಂತರವನ್ನು ರಚಿಸುವುದರಿಂದ, ನಮ್ಮ ಬಿಡುವಿಲ್ಲದ ಜೀವನದಿಂದ, ಧ್ಯಾನಕ್ಕಾಗಿ ಪರಿವರ್ತನೆಯಾಗಲು ನಮಗೆ ಸಹಾಯ ಮಾಡುತ್ತದೆ. 

ಸಪ್ತಾಂಗ ಅಭ್ಯಾಸ 

ಅಧಿವೇಶನದ ಪ್ರಾರಂಭದಲ್ಲಿ ನಾವು ಒಂದು ರೀತಿಯ ಸಕಾರಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಸಾಮಾನ್ಯವಾಗಿ ಸಲಹೆ ನೀಡಲಾಗುತ್ತದೆ ಮತ್ತು ಅದಕ್ಕಾಗಿ ನಾವು "ಸಪ್ತಾಂಗ ಪ್ರಾರ್ಥನೆ" ಅಥವಾ "ಸಪ್ತಾಂಗ ಅಭ್ಯಾಸ" ಎಂದು ಕರೆಯಲ್ಪಡುವುದನ್ನು ಬಳಸುತ್ತೇವೆ. ಈ ಸಂದರ್ಭದಲ್ಲಿ, "ಅಂಗ" ಎಂದರೆ "ಹೆಜ್ಜೆ"ಯಾಗಿರುತ್ತದೆ. 

(1) ಆಶ್ರಯ ಮತ್ತು ಬೋಧಿಚಿತ್ತದೊಂದಿಗೆ ನಮಸ್ಕಾರ 

ಮೊದಲ ಅಂಗವು ಪ್ರಣಾಮವಾಗಿರುತ್ತದೆ, ಅಂದರೆ ಜ್ಞಾನೋದಯವನ್ನು ತಲುಪಿದವರಿಗೆ ಗೌರವವನ್ನು ತೋರಿಸುವುದು; ಬೋಧಿಚಿತ್ತದೊಂದಿಗೆ, ಸಾಧಿಸಲು ಗುರಿಯಾಗಿರಿಸಿಕೊಂಡ ಭವಿಷ್ಯದಲ್ಲಿನ ನಮ್ಮ ಸ್ವಂತ ಜ್ಞಾನೋದಯಕ್ಕೆ ಗೌರವವನ್ನು ತೋರಿಸುವುದು; ಮತ್ತು ಆ ಗುರಿಯನ್ನು ತಲುಪಲು ನಮಗೆ ಅನುವು ಮಾಡಿಕೊಡುವ ನಮ್ಮ ಸ್ವಂತ ಬುದ್ಧ-ಸ್ವಭಾವಕ್ಕೆ ಗೌರವವನ್ನು ತೋರಿಸುವುದು. ಹೀಗಾಗಿ, ನಮ್ಮ ಜೀವನದಲ್ಲಿ ಆಶ್ರಯ ಮತ್ತು ಬೋಧಿಚಿತ್ತದ ಗುರಿಯ ಸುರಕ್ಷಿತ ದಿಕ್ಕನ್ನು ಇರಿಸುವ ಸಂದರ್ಭದಲ್ಲಿ ನಮಸ್ಕಾರವನ್ನು ನೀಡಲಾಗುತ್ತದೆ. ನಾವು ಸಾಗಲು ಬಯಸುವ ಸುರಕ್ಷಿತ ದಿಕ್ಕನ್ನು ಬುದ್ಧರು, ಅವರ ಧರ್ಮ ಬೋಧನೆಗಳು ಮತ್ತು ಸಾಧನೆಗಳು ಮತ್ತು ಸ್ವತಃ ಮುಕ್ತಿ ಮತ್ತು ಜ್ಞಾನೋದಯದ ಹಾದಿಯಲ್ಲಿರುವ ಸಂಘ ಸಮುದಾಯದಿಂದ ಸೂಚಿಸಲಾಗುತ್ತದೆ. ಬೋಧಿಚಿತ್ತದ ಗುರಿಯೊಂದಿಗೆ, ನಾವೇ ಬುದ್ಧರಾಗಲು, ನಮ್ಮ ಮನಸ್ಸು ಮತ್ತು ಹೃದಯವನ್ನು ಸಜ್ಜಾಗಿಸುತ್ತೇವೆ. 

(2) ಅರ್ಪಣೆ 

ಎರಡನೇ ಹಂತವು ಅರ್ಪಣೆಗಳನ್ನು ನೀಡುವುದಾಗಿರುತ್ತದೆ, ಇದು ಕೂಡ ಗೌರವವನ್ನು ಸೂಚಿಸುತ್ತದೆ.

(3) ನ್ಯೂನತೆಗಳನ್ನು ಒಪ್ಪಿಕೊಳ್ಳುವುದು 

ಇದಾದ ನಂತರ, ನಮ್ಮ ತಪ್ಪುಗಳನ್ನು ಮತ್ತು ನ್ಯೂನತೆಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದಾಗಿರುತ್ತದೆ. ಇದರರ್ಥ ನಮ್ಮ ತಪ್ಪುಗಳ ಬಗ್ಗೆ ಅಪರಾಧಿಯ ಭಾವನೆಯನ್ನು ಹೊಂದಿರುವುದಲ್ಲ; ಅಪರಾಧಿಯ ಭಾವನೆಯು ಸೂಕ್ತವಾಗಿರುವುದಿಲ್ಲ. ಅಪರಾಧಿಯ ಪ್ರಜ್ಞೆಯು, ನಾವೆಸಗಿದ ಕೃತ್ಯ ಮತ್ತು ಅದನ್ನು ಎಸಗಿದ ನಮ್ಮನ್ನೇ ಹಿಡಿದಿಟ್ಟುಕೊಂಡು, ಎರಡನ್ನೂ ಕೆಟ್ಟದು ಎಂದು ಗುರುತಿಸಿ, ಅದನ್ನು ಎಂದಿಗೂ ಬಿಡದಾಗಿರುತ್ತದೆ. ಕಸವನ್ನು ಹೊರಗೆ ಎಸೆಯದೆ, ಅದನ್ನು ನಮ್ಮ ಮನೆಯಲ್ಲಿಯೇ ಇಟ್ಟುಕೊಂಡು ಹೀಗೆ ಯೋಚಿಸಿದಂತಾಗುತ್ತದೆ: “ಈ ಕಸವು ಬಹಳಾ ಅಸಹ್ಯವಾದದ್ದು. ಇದರಿಂದ ಬಹಳಾ ಕೆಟ್ಟ ವಾಸನೆ ಬರುತ್ತಿದೆ." ಮೂರನೇ ಅಂಗವು, ಅಪರಾಧಿಯ ಭಾವನೆಯ ಬದಲಿಗೆ, ನಮ್ಮ ತಪ್ಪುಗಳಿಗಾಗಿ, ಪಶ್ಚಾತ್ತಾಪವನ್ನು ವ್ಯಕ್ತಪಡಿಸುವುದಾಗಿರುತ್ತದೆ: “ನಾನು ನನ್ನ ಕೃತ್ಯಗಳಿಗಾಗಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಅವುಗಳನ್ನು ಪುನರಾವರ್ತಿಸದಿರಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನನ್ನ ನ್ಯೂನತೆಗಳನ್ನು ನಿವಾರಿಸಲು, ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ.” 

(4) ಸಂತೋಷಪಡುವುದು 

ನಾಲ್ಕನೇ ಹಂತವು, ನಾವು ಮತ್ತು ಇತರರು ಮಾಡಿದ ಸಕಾರಾತ್ಮಕ ಕೆಲಸಗಳ ಬಗ್ಗೆ ಸಂತೋಷಪಡುವುದಾಗಿರುತ್ತದೆ, ಇದರಿಂದ ನಾವು ನಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಹೆಚ್ಚು ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತೇವೆ. 

(5) ಬೋಧನೆಗಳನ್ನು ವಿನಂತಿಸುವುದು 

ನಂತರ, ಗುರುಗಳು ಮತ್ತು ಬುದ್ಧರು ನಮಗೆ ಬೋಧಿಸುವಂತೆ ವಿನಂತಿಸುತ್ತೇವೆ: “ದಯವಿಟ್ಟು ನನಗೆ ಯಾವಾಗಲೂ ಬೋಧಿಸಿ. ನಾನು ಮುಕ್ತಮನಸ್ಸಿನವನಾಗಿದ್ದೇನೆ ಮತ್ತು ಸ್ವೀಕಾರಾರ್ಹನಾಗಿದ್ದೇನೆ.” 

(6) ಗುರುಗಳು ಹೊರಟುಹೋಗದಂತೆ ಬೇಡುವುದು 

ಮುಂದಿನ ಅಂಗವು ಇದಾಗಿರುತ್ತದೆ: “ದಯವಿಟ್ಟು ಹೋಗಬೇಡಿ; ನಮ್ಮನ್ನು ಅಗಲಬೇಡಿ. ನಾನು ನನ್ನ ಕಲಿಕೆಯ ಬಗ್ಗೆ ಬಹಳಾ ಗಂಭೀರವಾಗಿರುತ್ತೇನೆ, ಆದ್ದರಿಂದ ನಮ್ಮೊಂದಿಗೆ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇನೆ.” 

(7) ಸಮರ್ಪಣೆ 

ಅಂತಿಮವಾಗಿ, ಸಮರ್ಪಣೆ ಬರುತ್ತದೆ. ಒಂದರ್ಥದಲ್ಲಿ, ಸಮರ್ಪಣೆ ಎಂದರೆ ಶಕ್ತಿಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನಿರ್ದೇಶಿಸುವುದಾಗಿರುತ್ತದೆ. ನಾವು ಹೀಗೆ ಯೋಚಿಸುತ್ತೇವೆ: "ನಾನು ನಿರ್ಮಿಸಿದ ಎಲ್ಲಾ ಸಕಾರಾತ್ಮಕ ಶಕ್ತಿಯು, ಎಲ್ಲಾ ತಿಳುವಳಿಕೆಯು, ನನ್ನ ಉದ್ದೇಶವನ್ನು ಸಾಧಿಸುವತ್ತ ಆಗಿರುವ ಅರ್ಪಣೆಯಾಗಲಿ." ನಾನು ಬಳಸಲು ಇಷ್ಟಪಡುವ ಸಾದೃಶ್ಯವೆಂದರೆ, ನಮ್ಮ ಕೆಲಸವನ್ನು ಕಂಪ್ಯೂಟರ್‌ನಲ್ಲಿ ಉಳಿಸುವುದು. ನಾವು ಅದನ್ನು ವಿಶೇಷವಾದ ಫೋಲ್ಡರ್‌ನಲ್ಲಿ ಉಳಿಸದಿದ್ದರೆ, ಉದಾಹರಣೆಗೆ "ವಿಮೋಚನೆ" ಅಥವಾ "ಜ್ಞಾನೋದಯ" ಫೋಲ್ಡರ್, ಅದು ಡೀಫಾಲ್ಟ್ ಸೆಟ್ಟಿಂಗ್ ಪ್ರಕಾರ, ನಮ್ಮ ಕೆಲಸವನ್ನು ಸ್ವಯಂಚಾಲಿತವಾಗಿ, "ಸಂಸಾರವನ್ನು ಸುಧಾರಿಸಿ" ಎಂಬ ಫೋಲ್ಡರ್‌ನಲ್ಲಿ ಉಳಿಸುತ್ತದೆ. “ಸಂಸಾರವನ್ನು ಸುಧಾರಿಸಿ” ಫೋಲ್ಡರ್‌ನಲ್ಲಿ ನಮ್ಮ ಕೆಲಸವನ್ನು ಉಳಿಸುವುದರಲ್ಲಿ ತಪ್ಪೇನಿಲ್ಲ, ಆದರೆ ಅದು ನಮ್ಮ ಗುರಿಯಲ್ಲದಿದ್ದರೆ ಮತ್ತು ನಮ್ಮ ಶ್ರಮವನ್ನು ವಿಮೋಚನೆ ಅಥವಾ ಜ್ಞಾನೋದಯವನ್ನು ಪಡೆಯುವ ದಿಕ್ಕಿನೆಡೆಗೆ ಹಾಕಲು ಬಯಸಿದರೆ, ನಾವು ಅದನ್ನು ಉದ್ದೇಶಪೂರ್ವಕವಾಗಿ “ವಿಮೋಚನೆ” ಅಥವಾ “ಜ್ಞಾನೋದಯ”ದ ಫೋಲ್ಡರ್ನಲ್ಲಿ ಉಳಿಸಬೇಕಾಗಿದೆ. ಅದೇ ಸಮರ್ಪಣೆ. ಮತ್ತು ನಾವು ಅದನ್ನು ನಿಜವಾಗಿಯೂ ಮಾಡಬೇಕೆಂದಿದ್ದೇವೆ; ಅದು ಕೇವಲ ಬಾಯಿಮಾತಾಗಿರುವುದಿಲ್ಲ. ನಾವು ಸಕಾರಾತ್ಮಕ ಶಕ್ತಿಯ ಹಿಂದೆ ಸಹಾನುಭೂತಿಯಂತಹ ಭಾವನೆಯಿಟ್ಟು, ಅದನ್ನು ಸಮರ್ಪಿಸುತ್ತೇವೆ. 

ಸಪ್ತಾಂಗ ಪ್ರಾರ್ಥನೆಯ ನಂತರ ನಿಜವಾದ ಧ್ಯಾನ ಬರುತ್ತದೆ, ಮತ್ತು ಧ್ಯಾನದ ಕೊನೆಯಲ್ಲಿ, ನಾವು ಇನ್ನೊಂದು ಸಮರ್ಪಣೆಯನ್ನು ಮಾಡುತ್ತೇವೆ. 

ಸಾರಾಂಶ 

ಧ್ಯಾನವು ಅತ್ಯಾಧುನಿಕವಾದ ಪ್ರಕ್ರಿಯೆಯಾಗಿರುತ್ತದೆ ಮತ್ತು ಅದನ್ನು ಹೇಗೆ ಮಾಡಬೇಕೆಂಬುದರ ಸೂಚನೆಗಳು ಬಹಳಾ ನಿಖರವಾಗಿರುತ್ತವೆ. ಇಲ್ಲಿ, ಸಾಮಾನ್ಯವಾದ ಸೂಚನೆಗಳಲ್ಲಿ ಒಂದನ್ನು ಪ್ರಸ್ತುತಪಡಿಸಲಾಗಿದೆ; ಪ್ರತಿಯೊಂದು ನಿರ್ದಿಷ್ಟ ಧ್ಯಾನವು ತನ್ನದೇ ಆದ ನಿರ್ದಿಷ್ಟ ಸೂಚನೆಗಳನ್ನು ಹೊಂದಿರುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿ, ನಾವು ಏನು ಮಾಡುತ್ತಿದ್ದೇವೆ, ಹೇಗೆ ಮಾಡುತ್ತೇವೆ ಮತ್ತು ಏಕೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. 

ಝೆನ್‌ನಂತಹ ಕೆಲವು ಬೌದ್ಧ ಸಂಪ್ರದಾಯಗಳಲ್ಲಿ, ಹೀಗೆ ಹೇಳಲಾಗುತ್ತದೆ, "ಸುಮ್ಮನೆ ಕುಳಿತುಕೊಳ್ಳಿ, ಧ್ಯಾನಿಸಿ, ಮತ್ತು ನೀವು ಮುಂದೆ ಹೋದಂತೆ ನೀವು ಅದರ ಬಗ್ಗೆ ತಿಳಿಯುತ್ತೀರಿ." ಇದು ಕೆಲವರಿಗೆ ಕೆಲಸ ಮಾಡಬಹುದಾದರೂ, ಇತರರಿಗೆ ಬಹಳಾ ಕಷ್ಟವಾಗಿರಬಹುದು. ಅನೇಕರಿಗೆ ಆ ವಿಧಾನವು ಬಹಳ ಕಷ್ಟಕರವಾಗಿರುವುದರಿಂದ, ಇಲ್ಲಿ ಇಂಡೋ-ಟಿಬೆಟಿಯನ್ ಸಂಪ್ರದಾಯವನ್ನು ಪ್ರಸ್ತುತಪಡಿಸಲಾಗಿದೆ.  

Top