ಧ್ಯಾನಕ್ಕಾಗಿ ಬೇಕಿರುವ ಮಾನಸಿಕ ಅಂಶಗಳು

ವಿವೇಚನಾಶೀಲ ಧ್ಯಾನ 

ಸಾಮಾನ್ಯವಾಗಿ, ಧ್ಯಾನದಲ್ಲಿ ಎರಡು ಹಂತಗಳಿರುತ್ತವೆ: ವಿವೇಚನಾಶೀಲ ಧ್ಯಾನ ಮತ್ತು ಮತ್ತು ಸ್ಥಿರಗೊಳಿಸುವ ಧ್ಯಾನ. ವಿವೇಚನಾಶೀಲ ಧ್ಯಾನದಲ್ಲಿ, ಆಲೋಚನಾ ಪ್ರಕ್ರಿಯೆಯಂತೆ, ನಾವು ನಮ್ಮನ್ನು ಪರಿಚಿತರಾಗಲು ಪ್ರಯತ್ನಿಸುತ್ತಿರುವ ಮನಸ್ಥಿತಿಯನ್ನು ನಿರ್ಮಿಸಲು, ಪ್ರಗತಿಶೀಲ ಹಂತಗಳ ಮೂಲಕ ಅಥವಾ ತಾರ್ಕಿಕವಾದ ಮಾರ್ಗದ ಮೂಲಕ ನಡೆಯುತ್ತೇವೆ. ಸಹಾನುಭೂತಿಯ ವಿಷಯದಲ್ಲಿ, ನಾವು ನಮ್ಮ ಸ್ವಂತ ದುಃಖಗಳ ಬಗ್ಗೆ ಯೋಚಿಸುವ ಮೂಲಕ ಪ್ರಾರಂಭಿಸುತ್ತೇವೆ ಮತ್ತು ಅವುಗಳಿಂದ ಮುಕ್ತರಾಗುವ ಸಂಕಲ್ಪವನ್ನು ಹುಟ್ಟುಹಾಕುತ್ತೇವೆ. ನಂತರ, ಇದನ್ನು ಆಧಾರವಾಗಿಟ್ಟುಕೊಂಡು, ನಮ್ಮ ಸುತ್ತಲಿನ ಜೀವಿಗಳ ಬೃಹತ್ ಸಮೂಹವೊಂದನ್ನು ಕಲ್ಪಿಸಿಕೊಳ್ಳುತ್ತೇವೆ ಮತ್ತು ಮೊದಲು ಬಾಂಧವ್ಯ, ವಿಕರ್ಷಣೆ ಮತ್ತು ಉದಾಸೀನತೆಯಿಂದ ಮುಕ್ತವಾಗಿ, ಪ್ರತಿಯೊಬ್ಬರಿಗೂ ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆಯುತ್ತೇವೆ. ನಂತರ, ಈ ಎಲ್ಲಾ ಜೀವಿಗಳ ಮೇಲೆ ಕೇಂದ್ರೀಕರಿಸುತ್ತಿರುವಾಗಲೇ, ಅವರೊಂದಿಗಿರುವ ನಮ್ಮ ಪರಸ್ಪರ ಸಂಬಂಧವನ್ನು ಮತ್ತು ಪರಸ್ಪರ ಅವಲಂಬನೆಯನ್ನು ನೆನಪಿಟ್ಟುಕೊಳ್ಳುವುದರೊಂದಿಗೆ ಪ್ರಾರಂಭಿಸಿ, ಅನುಕ್ರಮವಾಗಿ ಮುಂದೆ ಸಾಗುತ್ತೇವೆ. 

ನಂತರ, ಈ ಜೀವಿಗಳ ಮೇಲೆ ಕೇಂದ್ರೀಕರಿಸುವಾಗಲೇ, ಅವರು ಅನುಭವಿಸುವ ಎಲ್ಲಾ ದುಃಖಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಆಗಾಗ್ಗೆ ಅವರು ಅತೃಪ್ತಿ ಮತ್ತು ಹತಾಶೆಗೆ ಒಳಗಾಗುತ್ತಾರೆ, ಮತ್ತು ಅವರು ಬಳಿ ಇರುವ ಸಂತೋಷವು ಎಂದಿಗೂ ಉಳಿಯುವುದಿಲ್ಲ ಮತ್ತು ಎಂದಿಗೂ ತೃಪ್ತಿಕರವಾಗಿರುವುದಿಲ್ಲ. ಅವರು ಸಂತೋಷವಾಗಿರಲು ಪ್ರಯತ್ನಿಸುತ್ತಾರೆ, ಆದರೆ ಅವರು ತಮ್ಮನ್ನು ತಾವು ಸಂತೋಷಪಡಿಸಿಕೊಳ್ಳಲು ಮಾಡುವ ಪ್ರಯತ್ನಗಳೆಲ್ಲವೂ ಎಂದಿಗೂ ಕೆಲಸ ಮಾಡುವುದಿಲ್ಲ, ಉದಾಹರಣೆಗೆ ಅವರ ನೋಟದ ಬಗೆಗಿರುವ ಗೀಳು ಅಥವಾ ಹೆಚ್ಚಿನ ವಿಷಯಗಳ ಸಂಗ್ರಹಣೆ; ಬದಲಿಗೆ ಅವುಗಳು ಹೆಚ್ಚಿನ ಸಮಸ್ಯೆಗಳನ್ನು ತರುತ್ತವೆ. ನಾವೆಲ್ಲರೂ ಒಂದೇ ಪರಿಸ್ಥಿತಿಯಲ್ಲಿ ಒಟ್ಟಿಗೆ ಇದ್ದೇವೆ ಮತ್ತು ನಮಗೆ ಪರಸ್ಪರರ ಸಹಾಯ ಬೇಕು ಎಂದು ನಾವು ನೆನಪಿಸಿಕೊಳ್ಳುತ್ತೇವೆ, ಏಕೆಂದರೆ ಪ್ರತಿಯೊಬ್ಬರೂ ಸ್ವಾರ್ಥಿಗಳಾಗಿದ್ದರೆ, ನಾವೆಲ್ಲರೂ ಬಳಲುತ್ತೇವೆ. 

ಈ ರೀತಿಯಾಗಿ, ನಾವು ಸಹಾನುಭೂತಿಯ ಭಾವನೆಯನ್ನು ಬೆಳೆಸಿಕೊಳ್ಳುತ್ತೇವೆ, ಅದರೊಂದಿಗೆ ಈ ಜೀವಿಗಳ ಸಮೂಹದ ಮೇಲೆ ಕೇಂದ್ರೀಕರಿಸುತ್ತೇವೆ, ಅವರೆಲ್ಲರಿಗೂ ಸಮಾನವಾಗಿ, ಅವರ ಎಲ್ಲಾ ದುಃಖಗಳಿಂದ ಮುಕ್ತರಾಗುವಂತೆ, ಜೊತೆಗೆ, ನಾವು ವೈಯಕ್ತಿಕವಾಗಿ ಅವರ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡಲು ಏನಾದರೂ ಮಾಡುವಂತೆ ಬಯಸುವ ಉದ್ದೇಶವಿರುತ್ತದೆ. 

ವಿವೇಚನಾಶೀಲ ಧ್ಯಾನದಿಂದ, ಈ ಜೀವಿಗಳ ಸಮೂಹದ ಮೇಲೆ ಸಹಾನುಭೂತಿಯಿಂದ ಗಮನಹರಿಸುವುದನ್ನು ಮುಂದುವರಿಸುತ್ತೇವೆ, ಆದರೆ ಅದೇ ಸಮಯದಲ್ಲಿ, ನಮ್ಮ ಸಹಾನುಭೂತಿಯ ಭಾವನೆಯನ್ನು ನಿರ್ಮಿಸಲು, ನಾವು ಹಾದುಹೋಗುವ ಎಲ್ಲಾ ವಿವರಗಳು ಮತ್ತು ಅಂಶಗಳನ್ನು ಗ್ರಹಿಸುತ್ತೇವೆ, ಅಂದರೆ ಅವನ್ನು ಗ್ರಹಿಸುತ್ತೇವೆ ಮತ್ತು ಗುರುತಿಸುತ್ತೇವೆ. ಇದಕ್ಕಾಗಿ, ನಮ್ಮ ಸಹಾನುಭೂತಿಯ ಮನಸ್ಥಿತಿಯು, ಸಮಸ್ತ ಪತ್ತೆಹಚ್ಚುವಿಕೆ ಮತ್ತು ಸೂಕ್ಷ್ಮ ವಿವೇಚನೆಯ ಅಂಶಗಳನ್ನು ಒಳಗೊಂಡಿದೆ. ಮೊದಲನೆಯದರೊಂದಿಗೆ, ನಮ್ಮ ಗಮನದಲ್ಲಿರುವ ವಸ್ತುವಿನ ಬಗೆಗಿರುವ ಅತ್ಯಂತ ಸಾಮಾನ್ಯವಾದ ಅಂಶವನ್ನು ಪತ್ತೆಹಚ್ಚುತ್ತೇವೆ, ಅಂದರೆ ಈ ಸಂದರ್ಭದಲ್ಲಿ ಅವರು ಬಳಲುತ್ತಿದ್ದಾರೆ ಎಂಬ ವಿಷಯವನ್ನು ಪತ್ತೆಹಚ್ಚುತ್ತೇವೆ. ಎರಡನೆಯದರೊಂದಿಗೆ, ಅವರು ಅನುಭವಿಸುವ ವಿವಿಧ ರೀತಿಯ ಸಂಕಟಗಳ ಎಲ್ಲಾ ವಿವರಗಳನ್ನು ನಾವು ಪ್ರತ್ಯೇಕಿಸುತ್ತೇವೆ. ಇವೆರಡರ ಸಂಯೋಜನೆಯೊಂದಿಗೆ, ಒಂದು ವಸ್ತುವಿನ ಬಗ್ಗೆ ಇರುವ ಎಲ್ಲಾ ಅಂಶಗಳನ್ನು ನಾವು ಗ್ರಹಿಸುತ್ತೇವೆ ಮತ್ತು ಗುರುತಿಸುತ್ತೇವೆ, ಮತ್ತು ಒಂದು ಮನಸ್ಥಿತಿಯಾಗಿ ಸಂಯೋಜಿಸುತ್ತೇವೆ. ಸ್ವಲ್ಪಮಟ್ಟಿಗೆ ಇದು ವಿವರವಾದ, ಆಳವಾದ ತಿಳುವಳಿಕೆಯಂತೆ ಆಗಿರುತ್ತದೆಯಾದರೂ, ನಮ್ಮ ಮನಸ್ಸಿನಲ್ಲಿ, ಪ್ರತಿ ಅಂಶವನ್ನು ಒಂದೊಂದಾಗಿ ಗ್ರಹಿಸುವುದಿಲ್ಲ ಅಥವಾ ಮೌಖಿಕವಾಗಿಸುವುದಿಲ್ಲ. ಈ ವಿವರಗಳ ಬಗೆಗಿರುವ ನಮ್ಮ ಪತ್ತೆಹಚ್ಚುವಿಕೆ ಮತ್ತು ವಿವೇಚನೆಯು ದುರ್ಬಲವಾಗಿದ್ದರೆ, ನಾವು ಎಲ್ಲಾ ಅಂಶಗಳನ್ನು ಮತ್ತೊಮ್ಮೆ ಒಂದೊಂದಾಗಿ ಪರಿಶೀಲಿಸುತ್ತೇವೆ ಮತ್ತು ಮತ್ತೊಮ್ಮೆ ಸಹಾನುಭೂತಿಯನ್ನು ಉತ್ಪಾದಿಸುತ್ತೇವೆ, ಇದು ಸಮಸ್ತ ಪತ್ತೆಹಚ್ಚುವಿಕೆ ಮತ್ತು ಸೂಕ್ಷ್ಮ ವಿವೇಚನೆ ಮತ್ತು ಏಕಾಗ್ರತೆಯಿಂದ ತುಂಬಿರುತ್ತದೆ.

ಧ್ಯಾನವನ್ನು ಸ್ಥಿರಗೊಳಿಸುವುದು 

ನಾವು ವಿವೇಚನಾಶೀಲ ಧ್ಯಾನವನ್ನು, ಸ್ಥಿರಗೊಳಿಸುವ ಧ್ಯಾನದೊಂದಿಗೆ ಅನುಸರಿಸುತ್ತೇವೆ. ಈಗ ನಾವು ಅದೇ ಸಹಾನುಭೂತಿಯೊಂದಿಗೆ, ಈ ಜೀವಿಗಳ ಸಮೂಹದ ಮೇಲೆ ಕೇಂದ್ರೀಕರಿಸುವುದನ್ನು ಮುಂದುವರಿಸುತ್ತೇವೆ, ಈ ಬಾರಿ ಅವರ ದುಃಖಗಳ ಸಮಸ್ತ ಹಚ್ಚುವಿಕೆ ಅಥವಾ ಸೂಕ್ಷ್ಮ ವಿವೇಚನೆಯಿಲ್ಲದೆ, ಅವರು ಬಳಲುತ್ತಿದ್ದಾರೆ ಎಂಬ ವಿಷಯದ ಬಗ್ಗೆ ನಾವು ತಿಳಿವಳಿಕೆ ಮತ್ತು ಸಾವಧಾನತೆಯೊಂದಿಗೆ ಕೇಂದ್ರೀಕರಿಸುತ್ತೇವೆ. 

ನೀವು ಒಂದನ್ನು ಹೇಗೆ ಸಂಯೋಜಿಸುತ್ತೀರಿ, ಅದನ್ನು ನಿಮ್ಮೊಂದಿಗೆ ಹೇಗೆ ಅಳವಡಿಸಿಕೊಂಡು ಅಭ್ಯಾಸ ಮಾಡುತ್ತೀರಿ ಎಂಬುದೇ ಧ್ಯಾನದ ಪ್ರಕ್ರಿಯೆಯಾಗಿರುತ್ತದೆ. ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವಂತಹ ಧ್ಯಾನದ ಬಗ್ಗೆ ಮಾತನಾಡುತ್ತಿರಬಹುದು, ಅಥವಾ ನೀವು ಒಂದು ಮನಸ್ಥಿತಿಯಲ್ಲಿ ಉಳಿಯುವ ಒಂದು ರೀತಿಯ ಧ್ಯಾನದ ಬಗ್ಗೆ ಮಾತನಾಡುತ್ತಿರಬಹುದು ಅಥವಾ ಎರಡನ್ನೂ ಸಂಯೋಜಿಸುವ ಒಂದು ರೀತಿಯ ಧ್ಯಾನದ ಬಗ್ಗೆ ಮಾತನಾಡುತ್ತಿರಬಹುದು, ಈ ಎಲ್ಲದರ ವಿಷಯದಲ್ಲಿ ಕಾರ್ಯವಿಧಾನಗಳು ಮತ್ತು ವಿವರಗಳು ಒಂದೇ ಆಗಿರುತ್ತವೆ. 

ವಿವೇಚನಾಶೀಲ ಮತ್ತು ಸ್ಥಿರಗೊಳಿಸುವ ಧ್ಯಾನಗಳನ್ನು ಪ್ರತ್ಯೇಕಿಸುವುದು 

ನಿಮ್ಮ ಮಾನಸಿಕ ಚಟುವಟಿಕೆಗಳ ಶಕ್ತಿಗಳ ಮೂಲಕ, ವಿವೇಚನಾಶೀಲ ಧ್ಯಾನ ಮತ್ತು ಸ್ಥಿರಗೊಳಿಸುವ ಧ್ಯಾನದ ನಡುವಿನ ವ್ಯತ್ಯಾಸವನ್ನು ಪರಮಪೂಜ್ಯ ದಲೈ ಲಾಮಾ ಅವರು ವಿವರಿಸುತ್ತಾರೆ. ಇದು, ಇವೆರಡನ್ನು ಪ್ರತ್ಯೇಕಿಸುವ ಅತ್ಯಂತ ಸೂಕ್ಷ್ಮವಾದ, ಪರಿಷ್ಕೃತ ಮಾರ್ಗವಾಗಿದೆ. ವಿವೇಚನಾಶೀಲ ಧ್ಯಾನದಲ್ಲಿ, ನಿಮ್ಮ ಗಮನದ ಶಕ್ತಿಯು, ಒಂದು ವಿಷಯದಲ್ಲಿನ ಎಲ್ಲಾ ವಿವರಗಳನ್ನು ಗ್ರಹಿಸುವುದಕ್ಕಾಗಿ ನಿಮ್ಮಿಂದ ಹೊರಹೋಗುತ್ತದೆ. ಸ್ಥಿರಗೊಳಿಸುವ ಧ್ಯಾನದಲ್ಲಿ, ನಿಮ್ಮ ಗಮನದ ಶಕ್ತಿಯು ಒಳಮುಖವಾಗಿ ಹೋಗುತ್ತದೆ, ಅಂದರೆ ವಿವೇಚನಾಶೀಲ ಧ್ಯಾನದಿಂದ ಅರಿತುಕೊಂಡ ಮುಖ್ಯ ಅಂಶಗಳ ಸಾವಧಾನತೆಯ ಆಧಾರದ ಮೇಲಿರುವ ಭಾವನೆ ಅಥವಾ ತಿಳುವಳಿಕೆಯಲ್ಲಿ ಮಗ್ನರಾಗುವುದರ ಮೇಲೆ ಕೇಂದ್ರೀಕರಿಸುತ್ತದೆ. ವಿವೇಚನಾಶೀಲ ಧ್ಯಾನದಲ್ಲಿ ನಡೆಯುವಂತೆ, ಇಲ್ಲಿ ಶಕ್ತಿಯು ವಿವರಗಳಿಗೆ ಅನುಗುಣವಾಗಿ ಹರಡುವುದಿಲ್ಲ, ಬದಲಿಗೆ ಕಿರಿದಾಗಿ ಕೇಂದ್ರೀಕರಿಸಿ, ಮುಖ್ಯ ಅಂಶವನ್ನು ಗೌರವಿಸುತ್ತದೆ. 

ಒಬ್ಬರನ್ನು ಸಹಾನುಭೂತಿಯಿಂದ ವಿವೇಚಿಸುವುದು - ಅಂದರೆ ಎಲ್ಲಾ ವಿವರಗಳತ್ತ ಸಾಗುತ್ತಿರುವ ಶಕ್ತಿ - ಮತ್ತು ಈ ಸಹಾನುಭೂತಿಯನ್ನು ಸ್ಥಿರಗೊಳಿಸುವುದು – ಈ ಶಕ್ತಿಯು ಹೆಚ್ಚು ಕೇಂದ್ರಿಕೃತವಾಗಿರುತ್ತದೆ – ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದು ಅತ್ಯಂತ ಸೂಕ್ಷ್ಮದ್ದಾಗಿರುತ್ತದೆ. ಮನಸ್ಸನ್ನು ಶಾಂತಗೊಳಿಸುವುದರಿಂದ ಆಗುವ ಪ್ರಯೋಜನಗಳಲ್ಲಿ ಇದು ಒಂದಾಗಿರುತ್ತದೆ. ನಿಮ್ಮ ತಲೆಯಲ್ಲಿ ಓಡುತ್ತಿರುವ ಎಲ್ಲಾ ಶಬ್ದಗಳನ್ನು (ನಿರಂತರವಾಗಿ ಮಾತನಾಡುವುದು, ನಿರಂತರವಾಗಿ ಟೀಕಿಸುವುದು, ನಿಮ್ಮ ಐಪಾಡ್‌ನಲ್ಲಿ ಕೇಳುವ ನಿರಂತರವಾದ ಸಂಗೀತ) ಶಾಂತಗೊಳಿಸುವಲ್ಲಿ ನೀವು ಸ್ವಲ್ಪ ಮಟ್ಟಿಗಾದರೂ ಯಶಸ್ವಿಯಾದರೆ, ನಿಮ್ಮ ಶಕ್ತಿಯತ್ತ ನೀವು ಸೂಕ್ಷ್ಮವಾಗಿರಲು ಪ್ರಾರಂಭಿಸಬಹುದು, ಮತ್ತು ನಿಮ್ಮ ಮಾನಸಿಕ ಶಕ್ತಿಯು ಯಾವ ಸ್ಥಿತಿಯಲ್ಲಿದೆ ಎಂದು ನೀವು ಅಂದಾಜಿಸಬಹುದು. 

ನಿಮ್ಮ ಶಕ್ತಿಗೆ ಸಂವೇದನಾಶೀಲರಾಗಲು ಪ್ರಾರಂಭಿಸುವ ಉತ್ತಮ ಮಾರ್ಗವೆಂದರೆ, ನಿಮ್ಮ ಶಕ್ತಿಯು ಅಸ್ತವ್ಯಸ್ತವಾಗಿದೆಯೇ ಅಥವಾ ಶಾಂತವಾಗಿದೆಯೇ ಎಂಬುದರ ಬಗ್ಗೆ ಕೇಂದ್ರೀಕರಿಸುವುದಾಗಿರುತ್ತದೆ. ಉದಾಹರಣೆಗೆ, ನೀವು ಕೋಪ, ಭಯ, ಆತಂಕ, ದುರಾಸೆ, ಅಥವಾ ದುರಹಂಕಾರದಂತಹ ಪ್ರಕ್ಷುಬ್ಧ ಭಾವನೆಗಳ ಪ್ರಭಾವಕ್ಕೆ ಒಳಗಾಗಿರುವಿರೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವ ವಿಧಾನವು, ನಿಮ್ಮ ಶಕ್ತಿಯು ಶಾಂತಿಯುತವಾಗಿಲ್ಲ ಎಂದು ತೋರಿಸುತ್ತದೆ. ನೀವು ಒಬ್ಬರೊಂದಿಗೆ ಮಾತನಾಡುವಾಗ, ನಿಮ್ಮ ಹೊಟ್ಟೆಯಲ್ಲಿ ಬಿಗಿತವನ್ನು ಅನುಭವಿಸಿದರೆ, ನಿಮ್ಮ ಶಕ್ತಿಯು ಸ್ವಲ್ಪಮಟ್ಟಿಗೆ ಅಸಮಾಧಾನಗೊಂಡಿದೆ ಎಂದು ಇದು ಸೂಚಿಸುತ್ತದೆ, ಇದು ಕೆಲವು ರೀತಿಯ ಗೊಂದಲದ ಭಾವನೆಯನ್ನು ಒಳಗೊಂಡಿರುತ್ತದೆ ಎಂಬುದಕ್ಕೆ ಉತ್ತಮ ಸುಳಿವಾಗಿರುತ್ತದೆ. ನೀವು ಆ ವ್ಯಕ್ತಿಯ ಮೆಚ್ಚುಗೆಯನ್ನು ಪಡೆಯಲು ಪ್ರಯತ್ನಿಸುತ್ತಿರಬಹುದು, ಅಥವಾ ಅವರಿಗೆ ಏನನ್ನಾದರೂ ಮನವರಿಕೆ ಮಾಡಲು ಪ್ರಯತ್ನಿಸುತ್ತಿರಬಹುದು, ಅಥವಾ ಒಂದು ರೀತಿಯ ಆಕ್ರಮಣಶೀಲತೆಯ ಭಾವನೆಯನ್ನು ತೋರಿಸುತ್ತಿರಬಹುದು - ಅವುಗಳೆಲ್ಲವೂ ನಿಮ್ಮ ಮನಸ್ಸಿನಲ್ಲಿ ಏನೋ ಗೊಂದಲವಿದೆ ಎಂಬುದನ್ನು ಸೂಚಿಸುತ್ತವೆ. ಏನೋ ಸರಿಯಿಲ್ಲ ಎಂದು ಒಮ್ಮೆ ನೀವು ಗುರುತಿಸಿದರೆ, ನಿಮ್ಮ ಆಲೋಚನಾ ಪ್ರಕ್ರಿಯೆಯನ್ನು ಮರುಪ್ರಾರಂಭಿಸಲು ನಿಮಗೆ ಅವಕಾಶವಿದೆ - ಒಂದು ಅರ್ಥದಲ್ಲಿ ನಿಮ್ಮ ಮನಸ್ಸನ್ನು ರೀಬೂಟ್ ಮಾಡುವಂತೆ, ಅಂದರೆ ನಿಮ್ಮ ಸಂವಹನದ ಹಿಂದಿರುವ ಭಾವನೆಗಳನ್ನು ಹೆಚ್ಚು ಆರೋಗ್ಯಕರ ಭಾವನೆಗಳನ್ನಾಗಿ ಬದಲಾಯಿಸುವುದಾಗಿರುತ್ತದೆ. ವಿಶೇಷವಾಗಿ, ಒಬ್ಬರೊಂದಿಗೆ ನಡೆಯುವ ಪರಸ್ಪರ ವಿನಿಮಯದಲ್ಲಿ, ನೀವು ನಿಮ್ಮ ಗೊಂದಲದ ಭಾವನೆಗಳನ್ನು ಹೆಚ್ಚಾಗಿ ಪತ್ತೆಹಚ್ಚಬೇಕಾಗಿರುತ್ತದೆ. 

ಕಾಲಾನಂತರದಲ್ಲಿ, ಅಭ್ಯಾಸದೊಂದಿಗೆ, ನೀವು ವಿವೇಚನಾಶೀಲ ಧ್ಯಾನದ ಬಾಹ್ಯ ವ್ಯಾಪಕ ಶಕ್ತಿ ಮತ್ತು ಸ್ಥಿರಗೊಳಿಸುವ ಧ್ಯಾನದ ಆಂತರಿಕವಾದ, ಕಿರಿದಾಗಿ ಕೇಂದ್ರಿಕೃತವಾದ ಶಕ್ತಿಯನ್ನು ಪ್ರತ್ಯೇಕಿಸಲು ಸಾಧ್ಯವಾಗುವಷ್ಟು ಸಂವೇದನಾಶೀಲರಾಗುತ್ತೀರಿ. 

ಏಕಾಗ್ರತೆಯನ್ನು ಪಡೆಯಲು ಅಗತ್ಯವಾದ ಅಂಶಗಳು 

ಏಕಾಗ್ರತೆಯನ್ನು ಪಡೆಯಲು ಅಗತ್ಯವಾದ ಅಂಶಗಳು, ವಿವೇಚನಾಶೀಲ ಮತ್ತು ಸ್ಥಿರಗೊಳಿಸುವ ಧ್ಯಾನಗಳೆರಡಕ್ಕೂ ಸಾಮಾನ್ಯವಾಗಿರುತ್ತವೆ. ತಮ್ಮ ಪಠ್ಯವಾದ ಎನ್ಗೇಜಿಂಗ್ ಇನ್ ಬೋಧಿಸತ್ವ ಬಿಹೇವಿಯರ್ (ಬೋಧಿಸತ್ವ ವರ್ತನೆಯಲ್ಲಿ ತೊಡಗಿಸಿಕೊಳ್ಳುವುದು)ನಲ್ಲಿ, ಶಾಂತಿದೇವ, ನೈತಿಕ ಶಿಸ್ತನ್ನು ಅಭಿವೃದ್ಧಿಪಡಿಸುವ ವಿಷಯದ ಬಗ್ಗೆ ಚರ್ಚಿಸುತ್ತಾರೆ. ಆದ್ದರಿಂದ, ಮೊದಲು ನಾವು ಹೇಗೆ ವರ್ತಿಸುತ್ತೇವೆ ಮತ್ತು ಮಾತನಾಡುತ್ತೇವೆ ಎಂಬುದರ ಕುರಿತು ನಮ್ಮ ಸಮಸ್ತ ನಡವಳಿಕೆಯಲ್ಲಿ ಈ ವಿಧಾನಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ನಂತರ ಅವುಗಳನ್ನು ನಮ್ಮ ಮನಸ್ಸಿಗೆ ಅನ್ವಯಿಸಬೇಕು. 

ಎರಡೂ ಸಂದರ್ಭಗಳಲ್ಲಿ ನಮಗೆ ಅಗತ್ಯವಿರುವ ಮತ್ತು ಬಳಸುವ ಮುಖ್ಯ ಮಾನಸಿಕ ಅಂಶವು ಸಾವಧಾನತೆಯಾಗಿರುತ್ತದೆ, ಇದು ಮನಸ್ಥಿತಿ ಅಥವಾ ನಡವಳಿಕೆಯ ವಿಧಾನಗಳನ್ನು ಹಿಡಿದಿಟ್ಟುಕೊಳ್ಳುವ ಮಾನಸಿಕ ಅಂಟಿನ ಹಾಗೆ ಕಾರ್ಯನಿರ್ವಹಿಸುತ್ತದೆ. ಇದು "ನೆನಪಿಟ್ಟುಕೊಳ್ಳುವುದು" ಎಂಬುದಕ್ಕೆ ಇರುವ ಪದವೇ ಆಗಿದೆ, ಆದರೆ ನಾವು ನಮ್ಮ ಜ್ಞಾಪಕ ಶಕ್ತಿಯನ್ನು ಬಳಸಿ, ಒಂದು ವಿಷಯವನ್ನು ಹೊರತೆಗೆದು, ಅದನ್ನು ನೆನಪಿಸಿಕೊಳ್ಳುವ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. ಇದು ಹಾಗಿರುವುದಿಲ್ಲ. ಇದು ಒಂದನ್ನು ಹಿಡಿದಿಟ್ಟುಕೊಳ್ಳುವುದಾಗಿರುತ್ತದೆ; ನೆನಪಿಸಿಕೊಳ್ಳುವುದಾಗಿರುತ್ತದೆ. ನಾವು ಕೇಂದ್ರೀಕರಿಸುವ ವಸ್ತು ಮತ್ತು ನಮ್ಮ ಮನಸ್ಸು ಅದರೊಂದಿಗೆ ಸಂಬಂಧಿಸುವ ರೀತಿಗಾಗಿ, ಮಾನಸಿಕ ಅಂಟಿನ ಅಗತ್ಯವಿರುತ್ತದೆ.  

ಸಾವಧಾನತೆಯಿಂದ ಧ್ಯಾನಿಸುವಾಗ, ನಾವು ನಮ್ಮ ಮಾನಸಿಕ ಹಿಡಿತದ ಮೇಲೆ ನಿಗಾ ಇಡುತ್ತೇವೆ. ಸಾಮಾನ್ಯವಾಗಿ, ನಮ್ಮ ಮನಸ್ಥಿತಿಯು ಗೊಂದಲದ ಭಾವನೆಗಳು, ಮಾನಸಿಕ ಅಲೆದಾಟ ಅಥವಾ ಮಂದತೆಯ ಪ್ರಭಾವದ ಅಡಿಯಲ್ಲಿದೆಯೇ ಎಂದು ನೋಡಲು ನಾವು ಇಲ್ಲಿ ಸಮಸ್ತ ಪತ್ತೆಹಚ್ಚುವಿಕೆಯ ಮಾನಸಿಕ ಅಂಶವನ್ನು ಬಳಸುತ್ತೇವೆ ಎಂದು ತ್ಸೋಂಗ್‌ಖಾಪಾ ವಿವರಿಸುತ್ತಾರೆ. ಅವರು ಸೂಕ್ಷ್ಮವಾದ ವಿವೇಚನೆಯ ಬದಲಿಗೆ ಸಮಸ್ತ ಪತ್ತೆಹಚ್ಚುವಿಕೆಯನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡುತ್ತಾರೆ ಎಂಬುದು ಗಮನಾರ್ಹವಾಗಿದೆ. ಸೂಕ್ಷ್ಮವಾದ ವಿವೇಚನೆಯು, ಸೂಕ್ಷ್ಮವಾದ ವಿವರಗಳನ್ನು ಪರಿಶೀಲಿಸುವುದರಲ್ಲಿ ಗಾಢವಾಗಿ ತೊಡಗಿಸಿಕೊಳ್ಳುತ್ತದೆ, ಆದ್ದರಿಂದ ನಮ್ಮ ಗಮನವು, ನಮ್ಮ ಗಮನದಲ್ಲಿರಬೇಕಾದ ವಸ್ತುವಿನ ಮೇಲೆ ಹೆಚ್ಚಾಗಿ ಇರುವುದಿಲ್ಲ. ಧ್ಯಾನದಲ್ಲಿನ ಒಂದು ದೊಡ್ಡ ಅಪಾಯವೆಂದರೆ, ನಾವು ವಸ್ತುವನ್ನು ಕಳೆದುಕೊಳ್ಳುತ್ತೇವೆ ಮತ್ತು ನಾವು ಅಲೆದಾಡಲು ಪ್ರಾರಂಭಿಸುತ್ತೇವೆ ಎಂಬುದರ ಬಗ್ಗೆ ಅತಿಯಾಗಿ ಮತಿಭ್ರಮಿತರಾಗಿ, ನಾವು ಬಿಗುಮಾನದಿಂದಿರುತ್ತೇವೆ. ಇದೊಂದು ದೊಡ್ಡ ಸಮಸ್ಯೆಯಾಗುತ್ತದೆ. ಮತ್ತೊಂದೆಡೆ, ನೀವು ತೀರಾ ವಿಶ್ರಾಂತಿಯಿಂದ ಮತ್ತು ಸಡಿಲವಾಗಿರಬಾರದು; ಅದರಿಂದ ಸಹಾಯವಾಗುವುದಿಲ್ಲ. 

ಆಗ ನಮಗೆ ಎಚ್ಚರಿಕೆಯ ಅಗತ್ಯವಿದೆ, ಅದೊಂದು ಅಲರಾಂ ವ್ಯವಸ್ಥೆಯಂತಿರುತ್ತದೆ. ನಮ್ಮ ಧ್ಯಾನದಲ್ಲಿರುವ ವಸ್ತುವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನಾವು ಪತ್ತೆಹಚ್ಚಿದಾಗ, ಎಚ್ಚರಿಕೆಯು, ಏನನ್ನೋ ಸರಿಪಡಿಸಬೇಕಾಗಿದೆ ಎಂದು ಅಲಾರಾಂ ಬಾರಿಸುತ್ತದೆ. ನಂತರ ಗಮನದ ಮೂಲಕ, ನಮ್ಮ ಲಕ್ಷ್ಯವನ್ನು ವಾಪಸ್ಸು ಕರೆತರುತ್ತೇವೆ. 

ಸರಿಪಡಿಸಬೇಕಾದ ದೋಷಗಳು 

ನಾವು ನಿವಾರಿಸಲು ಪ್ರಯತ್ನಿಸುತ್ತಿರುವ ಎರಡು ದೋಷಗಳು, ಎರಡು ಮುಖ್ಯ ವರ್ಗಗಳ ಅಡಿಯಲ್ಲಿರುತ್ತವೆ: "ಮಾನಸಿಕ ಅಸ್ಥಿರತೆ" ಮತ್ತು "ಮಾನಸಿಕ ಮಂದತೆ." ಬಾಂಧವ್ಯ ಅಥವಾ ಬಯಕೆಯ ಕಾರಣದಿಂದಾಗಿ ನಮ್ಮ ಮನಸ್ಸು ಅಲೆದಾಡುತ್ತಿದ್ದರೆ, ಅದು ಮಾನಸಿಕ ಅಸ್ಥಿರತೆಯಾಗಿರುತ್ತದೆ. ಇದು ಮೌಖಿಕ ಚಿಂತನೆ ಅಥವಾ ಮಾನಸಿಕ ಚಲನಚಿತ್ರಗಳ ರೂಪವನ್ನು ತೆಗೆದುಕೊಳ್ಳಬಹುದು. ಹೆಚ್ಚಿನ ಸಾಂಪ್ರದಾಯಿಕ ಪಠ್ಯಗಳು, ಈ ಅಸ್ಥಿರತೆಯನ್ನು ಲೈಂಗಿಕ ಬಾಂಧವ್ಯದ ವಿಷಯದಲ್ಲಿ ಚರ್ಚಿಸುತ್ತವೆ, ಬಹುಶಃ ಆ ಸಮಯದಲ್ಲಿ, ಇದರ ಮುಖ್ಯ ಪ್ರೇಕ್ಷಕರು ಬ್ರಹ್ಮಚಾರಿ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಾಗಿದ್ದ ಕಾರಣ, ಅವರಿಗೆ ಲೈಂಗಿಕ ಬಾಂಧವ್ಯವನ್ನು ಜಯಿಸುವುದು ಮುಖ್ಯ ವಿಷಯವಾಗಿತ್ತು. ಆದರೆ ಇದು ಆಹಾರ ಅಥವಾ ಸಂಗೀತ, ಹೀಗೆ ಯಾವುದರ ಬಾಂಧವ್ಯ ಬೇಕಾದರೂ ಆಗಿರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಮಾನಸಿಕ ಅಲೆದಾಟವು ಯಾವುದೇ ಗೊಂದಲದ ಭಾವನೆ, ಆಲೋಚನೆ, ಅಥವಾ ಶಬ್ದ ಅಥವಾ ಇತರ ಸಂವೇದನಾ ಒಳನುಗ್ಗುವಿಕೆಯಿಂದ ಉಂಟಾಗಬಹುದು. ಸರ್ವೇಸಾಮಾನ್ಯವಾಗಿ, ಮಾನಸಿಕ ಅಲೆದಾಟವನ್ನು "ವ್ಯಾಕುಲತೆ" ಎಂದೂ ಕರೆಯಬಹುದು. 

ಮಾನಸಿಕ ಅಸ್ಥಿರತೆಯ ಹಲವಾರು ಹಂತಗಳಿವೆ, ಇವು ವಸ್ತು ಅಥವಾ ಭಾವನೆಯ ಮೇಲೆ ನಮ್ಮ ಗಮನದ ಇರಿಸುವಿಕೆಯೊಂದಿಗೆ ವ್ಯವಹರಿಸುತ್ತವೆ. 

  • ಸಮಸ್ತ ಅಸ್ಥಿರತೆ - ನೀವು ವಸ್ತುವಿನ ಮೇಲಿನ ಹಿಡಿತವನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೀರಿ ಮತ್ತು ಎಲ್ಲಾ ರೀತಿಯ ವಿಷಯಗಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ. ಮಾನಸಿಕ ಅಂಟಾದ ಸಾವಧಾನತೆ, ಎಷ್ಟು ದುರ್ಬಲವಾಗಿದೆಯೆಂದರೆ, ನೀವು ವಸ್ತುವನ್ನು ಸಂಪೂರ್ಣವಾಗಿ ಮರೆತುಬಿಡುತ್ತೀರಿ. 
  • ಸೂಕ್ಷ್ಮವಾದ ಹಾರಾಟ - ನೀವು ವಸ್ತುವನ್ನು ಸಂಪೂರ್ಣವಾಗಿ ಬಿಡುವುದಿಲ್ಲ ಆದರೆ ವಸ್ತುವನ್ನು ಹಿಡಿದಿಟ್ಟುಕೊಳ್ಳುವ ಸಮಯದಲ್ಲೇ, ನಿಮ್ಮಲ್ಲಿ ಬೇರೆ ವಿಷಯದ ಯೋಚನೆಯ ಒಳಹರಿವಿರುತ್ತದೆ. 
  • ಸೂಕ್ಷ್ಮವಾದ ಹಾರಾಟ - ನಿಮ್ಮಲ್ಲಿ ಈ ಒಳಹರಿವಿರುವುದಿಲ್ಲ, ಆದರೆ ಈ ವಸ್ತುವನ್ನು ಬಿಟ್ಟು ಬೇರೆ ಏನಾದರೂ ಯೋಚಿಸಬೇಕೆಂಬ ಒಂದು ಬಲವಾದ ಬಯಕೆಯಿರುತ್ತದೆ. ವಾಸ್ತವದಲ್ಲಿ, ಮಾನಸಿಕ ಹಿಡಿತವು ತುಂಬಾ ಬಿಗಿಯಾಗಿರುವಾಗ ಇದು ಸಂಭವಿಸಬಹುದು. 

ಮಾನಸಿಕ ಮಂದತೆಯು ವಸ್ತುವಿನ ಸ್ಪಷ್ಟತೆಯೊಂದಿಗೆ ವ್ಯವಹರಿಸುತ್ತದೆ, ಈ ಸ್ಪಷ್ಟತೆಯು ದೃಶ್ಯೀಕರಣವಾಗಿದ್ದರೆ, ಅದು ರೂಪತಾಳಬಹುದು ಅಥವಾ ಅದು ಸಹಾನುಭೂತಿಯಂತಹ ಮನಸ್ಥಿತಿಯಾಗಿದ್ದರೆ, ಅದು ಭಾವನೆಯಾಗಿರಬಹುದು. 

  • ಸಮಸ್ತ ಮಂದತೆ - ನಿಮ್ಮ ಮನಸ್ಸಿನ "ರೂಪತಾಳಿಕೆ" ಕಾರ್ಯವು ತುಂಬಾ ದುರ್ಬಲವಾಗಿದ್ದು, ಅದಕ್ಕೆ ಯಾವುದೇ ದೃಶ್ಯೀಕರಣ ಅಥವಾ ಭಾವನೆಯನ್ನು ಹುಟ್ಟುಹಾಕಲು ಸಾಧ್ಯವಿರುವುದಿಲ್ಲ. ಇದು "ಮಂಜಾದ ಮನಸ್ಸು" ಎಂದು ಕರೆಯಲ್ಪಡುವ ಎರಡು ಇತರ ಅಂಶಗಳ ಜೊತೆಗೂಡಬಹುದು, ಇದು ದೇಹ ಮತ್ತು ಮನಸ್ಸಿನಲ್ಲಿ ಭಾರವಾದ ಭಾವನೆ, ಅಥವಾ ನಿದ್ರಾಹೀನತೆ ಮತ್ತು ನಿದ್ರೆಯನ್ನು ಸೂಚಿಸುತ್ತದೆ. 
  • ಸೂಕ್ಷ್ಮವಾದ ಮಂದತೆ - ಒಂದು ರೂಪವಿದೆ, ಆದರೆ ಅದರ ಮೇಲಿನ ಹಿಡಿತವು ಸಾಕಷ್ಟು ಬಿಗಿಯಾಗಿಲ್ಲದ ಕಾರಣ, ಅದು ಸ್ಪಷ್ಟವಾಗಿರುವುದಿಲ್ಲ. ಇಲ್ಲಿ ನಾವು ಕೇವಲ ದೃಶ್ಯೀಕರಣದ ವಿವರಗಳ ಮೇಲಿರುವ ತೀಕ್ಷ್ಣವಾದ ಗಮನದ ಬಗ್ಗೆ ಮಾತನಾಡುತ್ತಿಲ್ಲ, ಸಹಾನುಭೂತಿಯಂತಹ ಭಾವನೆಗಳಿಗೂ ಇದು ಅನುಗುಣವಾಗಿರುತ್ತದೆ. ಇದು ಬಹಳಾ ಅನಿಶ್ಚಿತವಾದ ಭಾವನೆಯಾಗಿರಬಹುದು, "ಎಲ್ಲರಿಗಾಗಿ ಪ್ರೀತಿ ಮತ್ತು ಶಾಂತಿ, ನಾನು ಎಲ್ಲರನ್ನು ಪ್ರೀತಿಸುತ್ತೇನೆ" - ನೀವು ಈ ಭಾವನೆಯನ್ನು ಉತ್ಪಾದಿಸುತ್ತಿದ್ದೀರಿ, ಆದರೆ ಪ್ರತಿಯೊಬ್ಬರೂ ದುಃಖದಿಂದ ಮತ್ತು ದುಃಖದ ಕಾರಣಗಳಿಂದ ಮುಕ್ತರಾಗಲಿ ಎಂಬ ನಿರ್ದಿಷ್ಟ ವಿವರವನ್ನು ಹೊಂದಿರುವುದಿಲ್ಲ. ನಾವು ಸೃಷ್ಟಿಸಲು ಬಯಸುವ ಮನಸ್ಸಿನ ಸ್ಥಿತಿಯ ಪ್ರತಿಯೊಂದು ವಿವರ, ಪ್ರತಿಯೊಂದು ಅಂಶವು ಬಹಳಾ ನಿರ್ದಿಷ್ಟವಾಗಿರಬೇಕು ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು - ಅದು ಅಸ್ಪಷ್ಟವಾಗಿರಬಾರದು. 
  • ಅತಿಸೂಕ್ಷ್ಮವಾದ ಮಂದತೆ - ನಿಮ್ಮ ಮನಸ್ಸು, ಒಂದು ವಸ್ತುವನ್ನು ಹುಟ್ಟುಹಾಕಿದಾಗ, ನೀವು ತೀಕ್ಷ್ಣವಾದ ಗಮನವನ್ನು ಹೊಂದಿರುತ್ತೀರಿ, ಆದರೆ ನಿರ್ವಹಣೆ ತುಂಬಾ ಬಿಗಿಯಾಗಿಲ್ಲದ ಕಾರಣ, ಅದು ಲವಲವಿಕೆಯಿಂದ ಎದ್ದುಕಾಣುವುದಿಲ್ಲ ಅಥವಾ ಜೀವಂತವಾಗಿ ಕಾಣುವುದಿಲ್ಲ. ಇದು ಪ್ರತಿ ಕ್ಷಣದಲ್ಲಿಯು ಲವಲವಿಕೆಯಿಂದ ಕೂಡಿರಬೇಕು, ಹಳಸಿದ ಮತ್ತು ಗಟ್ಟಿಯಾದ ಹಳೆಯ ಬ್ರೆಡ್‌ನಂತೆ ಇರಬಾರದು. 

ನಾವು "ಸ್ಪೇಸ್ ಔಟ್" ಎಂದಾಗ, ಅದು ಈ ಮೇಲಿನ ಯಾವುದೇ ದೋಷಗಳನ್ನು ಬೇಕಾದರೂ ಉಲ್ಲೇಖಿಸಬಹುದು, ಆದ್ದರಿಂದ ಇವುಗಳಲ್ಲಿ ಯಾವುದಾದರೂ ಉದ್ಭವಿಸಿದಾಗ ನಾವು ಅವನ್ನು ಪತ್ತೆಹಚ್ಚಲು ಸಾಧ್ಯವಾಗಬೇಕು. ಮೊದಲಿಗೆ, ವಸ್ತು ಅಥವಾ ಮನಸ್ಥಿತಿಯ ಮೇಲೆ ನಿಮ್ಮ ಮಾನಸಿಕ ಹಿಡಿತವನ್ನು ಇರಿಸಿ. ನಂತರ ಮಾನಸಿಕ ಅಂಟಾದ ಸಾವಧಾನತೆಯೊಂದಿಗೆ, ಅದನ್ನು ಬಿಡಬೇಡಿ. 

ಯಶಸ್ವಿ ಧ್ಯಾನಕ್ಕೆ ಇದೇ ಅತ್ಯಂತ ಪ್ರಮುಖ ಅಂಶವಾಗಿರುತ್ತದೆ. ಹಿಡಿದಿಟ್ಟುಕೊಳ್ಳಿ, ಆದರೆ ತುಂಬಾ ಬಿಗಿಯಾಗಿ ಅಲ್ಲ, ತುಂಬಾ ಸಡಿಲವಾಗಿ ಅಲ್ಲ. ಉದಾಹರಣೆಗೆ, ನೀವು ಆಹಾರಕ್ರಮವೊಂದನ್ನು ಅನುಸರಿಸುತ್ತಿರುವಾಗ ಮತ್ತು ಬೇಕರಿಯ ಮುಂದೆ ನಡೆದಾಗ ಮತ್ತು ಕಿಟಕಿಯಲ್ಲಿ ಎಲ್ಲಾ ರೀತಿಯ ರುಚಿಯಾದ ಕೇಕ್‌ಗಳು ಇದ್ದಾಗ, ನೀವು ನಿಮ್ಮ ಆಹಾರಕ್ರಮವನ್ನು ಹಿಡಿದಿಟ್ಟುಕೊಳ್ಳಬೇಕು, ಹಿಡಿದುಕೊಳ್ಳಿ ಮತ್ತು ಬಿಡಬೇಡಿ, ಮತ್ತು ನೀವು ಒಳಗೆ ಹೋಗಿ ಒಂದು ಚಾಕೊಲೇಟ್ ಕೇಕ್ನ ತುಂಡನ್ನು ಖರೀದಿಸದಂತೆ ಇರಲು, ಅಂಗಡಿಯತ್ತ ಹೋಗಬೇಡಿ. ಅಥವಾ, ನಿಮ್ಮೊಂದಿಗಿರುವವರೆಲ್ಲರಿಗೂ ಐಸ್ ಕ್ರೀಮ್ ಅನ್ನು ನೀಡುತ್ತಿದ್ದರೆ, ನೀವು ಹಿಡಿದಿಟ್ಟುಕೊಳ್ಳಿ, "ಇಲ್ಲ ಧನ್ಯವಾದಗಳು, ನಾನು ಆಹಾರಕ್ರಮವನ್ನು ಅನುಸರಿಸುತ್ತಿದ್ದೇನೆ", ಹೀಗೆ ನಿಮ್ಮ ಆಹಾರಕ್ರಮವನ್ನು ಬಿಡಬೇಡಿ.

ಆದ್ದರಿಂದ ನಾವು ದಾರಿ ತಪ್ಪುತ್ತಿದ್ದೇವೆಯೇ ಎಂದು ನೋಡಲು ನಮಗೆ ಪತ್ತೆಹಚ್ಚುವಿಕೆಯ ಅಗತ್ಯವಿದೆ. “ನನ್ನ ಮಾನಸಿಕ ನಿಯೋಜನೆ ಮತ್ತು ವಸ್ತುವಿನ ಮೇಲಿರುವ ಹಿಡಿತದಲ್ಲಿ ದೋಷವಿದೆಯೇ? ನನ್ನ ಮನಸ್ಸು ಈ ವಸ್ತು ಅಥವಾ ಭಾವನೆಯನ್ನು ಹುಟ್ಟುಹಾಕುವುದರಲ್ಲಿ ಏನಾದರೂ ತಪ್ಪಿದೆಯೇ?” ನಾವು ಕೆಲವು ದೋಷಗಳನ್ನು ಪತ್ತೆಹಚ್ಚಿದರೆ, ಎಚ್ಚರಿಕೆಯು ಆಂತರಿಕ ಅಲರಾಂ ಅನ್ನು ಹೊಡೆಯುತ್ತದೆ ಮತ್ತು ಗಮನವು ನಮ್ಮ ಲಕ್ಷ್ಯವನ್ನು ಮರಳಿ ತರುತ್ತದೆ. ಅದೇ ಸಮಯದಲ್ಲಿ, ನಾವು ಅದರ ಬಗ್ಗೆ ಮತಿಭ್ರಮಿತ ಪೋಲೀಸ್ ಆಗಿರಬಾರದು, ಇಲ್ಲಿ ಪೊಲೀಸ್ ಎಂಬ “ನಾನು” ಮತ್ತು ಧ್ಯಾನ ಮಾಡುತ್ತಿರುವ "ನಾನು"ಗಳ ನಡುವೆ ಈ ದ್ವಂದ್ವತೆ ಇರುತ್ತದೆ. ಅಂತಹ ದ್ವಂದ್ವ ಧ್ಯಾನವನ್ನು ತಪ್ಪಿಸಲು, ನಾವು ಸ್ವಯಂ ಶೂನ್ಯತೆಯ ಬಗ್ಗೆ ಸ್ವಲ್ಪ ತಿಳಿದಿರಬೇಕು - ಈ ಅಸಾಧ್ಯವಾದ ದ್ವಂದ್ವ ರೀತಿಯಲ್ಲಿ ನಾವು ಅಸ್ತಿತ್ವದಲ್ಲಿರಲಾಗುವುದಿಲ್ಲ.

ಧ್ಯಾನದಲ್ಲಿ ತರಬೇತಿ ಪಡೆದ ಕೌಶಲ್ಯಗಳ ಪ್ರಾಯೋಗಿಕ ಉಪಯೋಗಗಳು 

ಒಂದು ವಸ್ತುವಿನ ಮೇಲೆ ಸಾವಧಾನತೆ ಮತ್ತು ಏಕಾಗ್ರತೆಯೊಂದಿಗೆ ಕೇಂದ್ರೀಕರಿಸುವ ಸಾಮರ್ಥ್ಯವು ನಮ್ಮ ದೈನಂದಿನ ಜೀವನದಲ್ಲಿ ಬೇಕಾಗಿರುತ್ತದೆ. ಅದಕ್ಕಾಗಿಯೇ ನಾವು ಧ್ಯಾನಿಸುತ್ತೇವೆ: ನಾವು ಬೆಳೆಸಿಕೊಳ್ಳುವ ಪ್ರಯೋಜನಕಾರಿ ಅಭ್ಯಾಸಗಳನ್ನು ನಮ್ಮ ಜೀವನದಲ್ಲಿ ಅನ್ವಯಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ, ನಾವು ಒಬ್ಬರೊಂದಿಗೆ ಮಾತನಾಡುವಾಗ ಅಥವಾ ಅವರ ಮಾತನ್ನು ಕೇಳುವಾಗ, ನಾವು ಗಮನ ಹರಿಸಬೇಕು. ನಾವು ಏಕಾಗ್ರತೆಯಿಂದಿರಬೇಕು ಮತ್ತು ಊಟದ ಬಗ್ಗೆ ಯೋಚಿಸಬಾರದು ಅಥವಾ "ಬಾಯಿ ಮುಚ್ಚಿ ಹೊರಡಿ" ಎಂದು ಮನಸ್ಸಿನಲ್ಲಿ ಯೋಚಿಸಬಾರದು. ಆದ್ದರಿಂದ ವೈಯಕ್ತಿಕ ಸಂವಹನಗಳು, ನಮ್ಮ ಕೆಲಸ, ನಮ್ಮ ಅಧ್ಯಯನ ಮತ್ತು ಮುಂತಾದವುಗಳು ಏಕಾಗ್ರತೆಯನ್ನು ಅಭ್ಯಾಸ ಮಾಡುವ ಅತ್ಯುತ್ತಮ ಕ್ಷೇತ್ರಗಳಾಗಿರುತ್ತವೆ. 

ನಾಲ್ಕು ಆಧಾರ ಸ್ತಂಭಗಳು 

ನಮ್ಮ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಲು ಶ್ರಮಪಡುವಾಗ, ನಮಗೆ ಅಗತ್ಯವಿರುವ ಎರಡು ವಿಷಯಗಳೆಂದರೆ ಪ್ರಾಬಲ್ಯ (ಸಾಮಾನ್ಯವಾಗಿ "ಪರಿಶ್ರಮ" ಎಂದು ಕರೆಯಲಾಗುತ್ತದೆ) ಮತ್ತು ತಾಳ್ಮೆ. ಪ್ರಾಬಲ್ಯವು ಸಕಾರಾತ್ಮಕವಾದದ್ದನ್ನು ಸಾಧಿಸಲು ಬೇಕಾದ ಬಲಶಾಲಿಯಾದ, ವೀರೋಚಿತವಾದ ಧೈರ್ಯ ಮತ್ತು ಪ್ರಯತ್ನವಾಗಿರುತ್ತದೆ; ತಾಳ್ಮೆಯು ಎಲ್ಲಾ ಕಷ್ಟಗಳನ್ನು ಮತ್ತು ತೊಂದರೆಗಳನ್ನು, ನಿರುತ್ಸಾಹಗೊಳ್ಳದೆ ಅಥವಾ ಕೋಪಗೊಳ್ಳದೆ ಸಹಿಸಿಕೊಳ್ಳುವ ಸಾಮರ್ಥ್ಯವಾಗಿರುತ್ತದೆ. ಶಾಂತಿದೇವ ತಮ್ಮ ಪಠ್ಯವಾದ, ಎನ್ಗೇಜಿಂಗ್ ಇನ್ ಬೋಧಿಸತ್ವ ಬಿಹೇವಿಯರ್ ನಲ್ಲಿ, ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವ ಆರು ಅಂಶಗಳನ್ನು ವಿವರಿಸುತ್ತಾರೆ. ಅವುಗಳನ್ನು ನಾಲ್ಕು ಆಧಾರಸ್ತಂಭಗಳು ಮತ್ತು ಎರಡು ಶಕ್ತಿಗಳು ಎಂದು ಕರೆಯಲಾಗುತ್ತದೆ ಮತ್ತು ಅವುಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳೊಂದಿಗೆ ಕೆಲಸ ಮಾಡುವುದು ಉಪಯುಕ್ತವಾಗಿರುತ್ತದೆ. 

ಮೊದಲನೆಯದನ್ನು ದೃಢ ವಿಶ್ವಾಸ ಅಥವಾ ದೃಢವಾದ ಆಕಾಂಕ್ಷೆ ಎಂದು ಕರೆಯಲಾಗುತ್ತದೆ. "ಆಕಾಂಕ್ಷೆ" ಆಶಯಕ್ಕಾಗಿ ಇರುವ ಬಲವಾದ ಪದವಾಗಿರುತ್ತದೆ ಮತ್ತು ಗುರಿಯನ್ನು ಸಾಧಿಸುವ ಪ್ರಯೋಜನಗಳು ಮತ್ತು ಅದನ್ನು ಸಾಧಿಸದಿರುವ ನ್ಯೂನತೆಗಳ ಬಗ್ಗೆ ದೃಢವಾಗಿ ಮನವರಿಕೆಯಾಗಿದೆ ಎಂದು ವ್ಯಾಖ್ಯಾನಿಸುತ್ತದೆ, ಆದ್ದರಿಂದ ಅದನ್ನು ಸಾಧಿಸುವ ಆಕಾಂಕ್ಷೆಯನ್ನು ತಿರುಗಿಸಲು ಅಥವಾ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ. ನಮ್ಮ ಬೌದ್ಧ ಆಚರಣೆಯೊಂದಿಗೆ ನಾವು ಸಾಧಿಸಲು ಬಯಸುವ ಮನಸ್ಸಿನ ವಿವಿಧ ಸ್ಥಿತಿಗಳ ಬಗ್ಗೆ ನಾವು ಓದಿದಾಗ, ಅದರ ಪ್ರಸ್ತುತಿಯ ಅದನ್ನು ಸಾಧಿಸುವ ಪ್ರಯೋಜನಗಳನ್ನು ಮತ್ತು ಸಾಧಿಸದೆ ಇರುವುದರ ನ್ಯೂನತೆಗಳನ್ನು ಯಾವಾಗಲೂ ವಿವರಿಸುತ್ತದೆ. ಇವುಗಳನ್ನು ಅಧ್ಯಯನ ಮಾಡುವುದು ಮುಖ್ಯವಾಗಿರುತ್ತದೆ. ಶಾಂತಿದೇವ ತಮ್ಮ ಪಠ್ಯದಲ್ಲಿ ಈ ಸ್ವರೂಪವನ್ನು ಅನುಸರಿಸುತ್ತಾರೆ, ಅದರ ಮೊದಲ ಅಧ್ಯಾಯವು ಬೋಧಿಚಿತ್ತದ ಬಗ್ಗೆಯಾಗಿದೆ. ಈ ಮನಸ್ಥಿತಿಯ ಪ್ರಯೋಜನಗಳ ಬಗ್ಗೆ ನಾವು ಮನವರಿಕೆ ಮಾಡಿಕೊಳ್ಳುತ್ತೇವೆ ಮತ್ತು ಇದು ನಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ಅದಕ್ಕಾಗಿ ಶ್ರಮಪಡಲು ನಮಗೆ ಸಂತೋಷವಾಗುತ್ತದೆ. ನಾವು ನಿರುತ್ಸಾಹಗೊಂಡಾಗಲೆಲ್ಲಾ, ನಾವು ಸಾಧಿಸಲು ಬಯಸುವ ಗುರಿಯ ಪ್ರಯೋಜನಗಳ ಬಗ್ಗೆ ನೆನಪಿಸಿಕೊಳ್ಳುವುದು ಒಳ್ಳೆಯದಾಗಿರುತ್ತದೆ. 

ಮುಂದಿನದು ದೃಢತೆ ಅಥವಾ ಆತ್ಮ ವಿಶ್ವಾಸ. "ಧೃಡತೆ" ಎಂದರೆ ಸ್ಥಿರವಾಗಿ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡುವುದು, ಇದು ನಾವು ಬಯಸಿದ ಗುರಿಯನ್ನು ಸಾಧಿಸಲು ಸಾಧ್ಯವೇ ಎಂದು ಪರೀಕ್ಷಿಸುವುದರಿಂದ ಮತ್ತು ಹೌದು ಎಂದು ಮನದಟ್ಟಾಗುವುದರಿಂದ ಬರುತ್ತದೆ. ಆತ್ಮ ವಿಶ್ವಾಸವಿದ್ದಾಗ, ವಾಸ್ತವದಲ್ಲಿ ನಡೆಯುವಂತೆ, ಪ್ರಗತಿಯಲ್ಲಿ ಏರಿಳಿತವಿದ್ದರೂ ನಾವು ಧೃಡತೆಯಿಂದ ಮುಂದೆ ಸಾಗುತ್ತೇವೆ. ಕೆಲವು ದಿನಗಳು ಉತ್ತಮವಾಗಿ ಸಾಗುತ್ತವೆ, ಮತ್ತು ಇತರೆ ದಿನಗಳು ಕೆಟ್ಟದಾಗಿ ಸಾಗುತ್ತವೆ. ಕೆಲವು ದಿನಗಳಲ್ಲಿ ನಾವು ಮುಂದೆ ಸಾಗಲು ಸಜ್ಜಾಗಿರುತ್ತೇವೆ ಮತ್ತು ಇತರೆ ದಿನಗಳು ನಾವು ಯಾವುದೇ ರೀತಿಯ ಅಭ್ಯಾಸ ಮಾಡಲು ಬಯಸುವುದಿಲ್ಲ. ಆದರೆ ನಾವು ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿಕೊಂಡರೆ, ನಮ್ಮಲ್ಲಿ ರಕ್ಷಾಕವಚದಂತಿರುವ ಪರಿಶ್ರಮವಿದ್ದರೆ, ನಾವು ಹೀಗೆ ಯೋಚಿಸುತ್ತೇವೆ: “ಪರವಾಗಿಲ್ಲ. ಏನೇ ಏರಿಳಿತವಾದರೂ ನಾನು ಹೆದರುವುದಿಲ್ಲ, ನಾನು ಪ್ರತಿದಿನವೂ ಧೃಡವಾಗಿ ಮುಂದುವರಿಯುತ್ತೇನೆ. ಅಂತಿಮವಾಗಿ, ನನ್ನ ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂದು ನನಗೆ ತಿಳಿದಿದೆ.”

ನಾವು ದೀರ್ಘಾವಧಿಯ ಪ್ರಗತಿಯ ಮಾರ್ಗದಲ್ಲಿರುವಾಗ, ಕ್ರಮೇಣವಾಗಿ ಹೆಚ್ಚು ಏಕಾಗ್ರತೆಯಿಂದಿರುವುದನ್ನು ನಾವು ಗಮನಿಸುತ್ತೇವೆ ಮತ್ತು ಮುಂದಿನ ಆಧಾರಸ್ತಂಭವಾದ ಸಂತೋಷವನ್ನು ಅಭಿವೃದ್ಧಿಪಡಿಸುತ್ತೇವೆ.  ನಾವು ಕೇವಲ ಸಣ್ಣ ಪ್ರಗತಿಯಿಂದ ತೃಪ್ತರಾಗುವುದಿಲ್ಲ, ಆದ್ದರಿಂದ ನಾವು ಆತ್ಮತೃಪ್ತಿಯ ಭಾವನೆಯೊಂದಿಗೆ ಮತ್ತಷ್ಟು ಮುಂದೆ ಸಾಗಲು ತುಂಬಾ ಸಂತೋಷವನ್ನು ವ್ಯಕ್ತಪಡಿಸುತ್ತೇವೆ. ನಿಸ್ಸಂಶಯವಾಗಿ ಇದರ ಫಲಿತಾಂಶವು ಸಂತೋಷವಾಗಿರುವುದಾಗಿರುತ್ತದೆ, ಏಕೆಂದರೆ ಇದರ ಪೂರ್ಣ ಉದ್ದೇಶವು ದುಃಖವನ್ನು ನಿವಾರಿಸುವುದಾಗಿರುತ್ತದೆ. ನಮ್ಮ ಮನಸ್ಸು ಕಡಿಮೆ ವಿಚಲಿತವಾಗುವುದರಿಂದ, ಕಡಿಮೆ ಅಸಮಾಧಾನ ಮತ್ತು ಕಡಿಮೆ ತೊಂದರೆಕ್ಕೊಳಗಾಗುವುದರಿಂದ, ನಾವು ಸಂತೋಷವಾಗಿರುತ್ತೇವೆ. ಇದನ್ನು ನೋಡಿದಾಗ, ನಾವು ಪ್ರಗತಿಯನ್ನು ಸಾಧಿಸಲು, ಮತ್ತಷ್ಟು ಮುಂದುವರಿಯಲು ನಿಜವಾಗಿಯೂ ಉತ್ಸುಕರಾಗುತ್ತೇವೆ. 

ನಾಲ್ಕನೆಯ ಆಧಾರಸ್ತಂಭವು ವಿಶ್ರಾಂತಿಯಾಗಿದೆ, ಅಂದರೆ ನಾವು ದಣಿದಿರುವಾಗ ವಿರಾಮ ತೆಗೆದುಕೊಳ್ಳಬೇಕು. ಇದು ಸೋಮಾರಿತನದಿಂದಲ್ಲ, ಬದಲಿಗೆ ನಮ್ಮನ್ನು ಮರುಚೈತನ್ಯಗೊಳಿಸಲು ಮಾಡುತ್ತೇವೆ. ನಮ್ಮಲ್ಲಿರುವ ಬೆಳಕು ಆರಿಹೋಗುವಂತೆ, ನಮ್ಮ ಮೇಲೆ ನಾವೇ ಒತ್ತಡ ಹೇರುವುದಕ್ಕಿಂತ ಕೆಟ್ಟದಾಗಿ ಇನ್ನಾವುದೂ ನಮ್ಮ ಶ್ರಮವನ್ನು ನಾಶಪಡಿಸುವುದಿಲ್ಲ. ನಮ್ಮ ಮೇಲೆ ಅತಿಯಾಗಿ ಒತ್ತಡವನ್ನು ಹೇರುವುದರಿಂದ ನಮ್ಮ ದೇಹದಲ್ಲಿನ ಶಕ್ತಿಗಳು ಅಸಮಾಧಾನಗೊಳ್ಳುತ್ತವೆ - ಬಲೂನ್ ಅನ್ನು ಹಿಸುಕಿ ಒಡೆದುಹಾಕುವಂತೆ. ನಮ್ಮನ್ನು ನಾವು ನಿರ್ಣಯಿಸಲು ಮತ್ತು ನಮಗೆ ವಿಶ್ರಾಂತಿ ಬೇಕು ಎಂದು ನಿರ್ಧರಿಸುವಂತೆ ಸಾಧ್ಯವಾಗಬೇಕು – ಇದರ ಬಗ್ಗೆ ಅಪರಾಧ ಪ್ರಜ್ಞೆಯನ್ನು ಭಾವಿಸಬಾರದು! ವಿಶ್ರಾಂತಿ ಪಡೆಯಲು ಮತ್ತು ನಮ್ಮ ಗೊಂದಲಮಯ ಭಾವನೆಗಳನ್ನು ಹೆಚ್ಚಿಸದಿರಲು ನಮಗೆ ಸಹಾಯ ಮಾಡುವ ಯಾವುದೇ ವಿಷಯವನ್ನಾದರೂ ಆಯ್ಕೆ ಮಾಡುವುದು ಒಳ್ಳೆಯದು. ನಿಸ್ಸಂಶಯವಾಗಿ, ಇದು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಇವು ಪ್ರಾಬಲ್ಯದ ನಾಲ್ಕು ಆಧಾರಸ್ತಂಭಗಳಾಗಿರುತ್ತವೆ. 

ಎರಡು ಶಕ್ತಿಗಳು 

ಈಗ ಎರಡು ಶಕ್ತಿಗಳ ಬಗ್ಗೆ ಮಾತನಾಡೋಣ. ಮೊದಲನೆಯದು ಸ್ವಾಭಾವಿಕವಾಗಿ ಒಪ್ಪಿಕೊಳ್ಳುವುದಾಗಿರುತ್ತದೆ, ಅಂದರೆ ನಮ್ಮ ಗುರಿಗಳನ್ನು ತಲುಪಲು ನಾವು ಅಭ್ಯಾಸ ಮಾಡಬೇಕಾದುದನ್ನು ಮತ್ತು ನಾವು ನಿವಾರಿಸಬೇಕಾದುದನ್ನು ಸ್ವಾಭಾವಿಕವಾಗಿ ಒಪ್ಪಿಕೊಳ್ಳುವುದಾಗಿರುತ್ತದೆ. ನಾವು ನಮ್ಮ ಪರಿಸ್ಥಿತಿಯ ವಾಸ್ತವತೆಯನ್ನು ನೋಡುತ್ತೇವೆ, ಉದಾಹರಣೆಗೆ, ನಮ್ಮಲ್ಲಿ ಇರುವ ಗೊಂದಲಮಯ ಭಾವನೆಗಳನ್ನು ನಿವಾರಿಸುವುದರಲ್ಲಿ ಇರುವ ಕಷ್ಟಗಳನ್ನು ಸ್ವಾಭಾವಿಕವಾಗಿ ಸ್ವೀಕರಿಸುತ್ತೇವೆ. ಅದು ಕಷ್ಟವಾಗಬಹುದು ಎಂದು ನಾವು ನಂತರ ಆಚ್ಚರಿಗೊಳ್ಳದೆ ಇರಲು, ನಾವು ಮೊದಲಿನಿಂದಲೇ ವಾಸ್ತವಿಕರಾಗಿರಬೇಕು! 

ಪರಮಪೂಜ್ಯ ದಲೈ ಲಾಮಾ ಅವರು ಆಗಾಗ್ಗೆ ಹೇಳುವಂತೆ, "ಬೌದ್ಧ ಧರ್ಮವು ಸುಲಭ ಮತ್ತು ತ್ವರಿತ ಎಂದು ಪ್ರತಿಪಾದಿಸುವ ಯಾವುದೇ ಬೌದ್ಧ ಶಿಕ್ಷಕ ಅಥವಾ ವ್ಯಕ್ತಿ ಮತ್ತು ಅವರ ಪ್ರೇರಣೆಯ ಬಗ್ಗೆ ಬಹಳಾ ಅನುಮಾನದಿಂದಿರಿ, ಏಕೆಂದರೆ ಅದು ಸುಲಭ ಅಥವಾ ತ್ವರಿತವಾಗಿರುವುದಿಲ್ಲ. ನಾವು ಗೊಂದಲದ ಭಾವನೆಗಳಿಗೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ, ಅವುಗಳನ್ನು ನಿವಾರಿಸಲು ಮಾತ್ರೆ ತೆಗೆದುಕೊಂಡು ಗುಣಮುಖರಾಗುವಂತಹ ಸುಲಭವಾದ ಮಾರ್ಗವಿಲ್ಲ.” ನನ್ನ ಇನ್ನೊಬ್ಬ ಶಿಕ್ಷಕರಾದ ಗೆಶೆ ನ್ಗಾವಾಂಗ್ ದರ್ಗ್ಯೆ ಅವರು ಯಾವಾಗಲೂ ಹೀಗೆ ಹೇಳುತ್ತಿದ್ದರು, “ಒಬ್ಬರು ಬೌದ್ಧ ಧರ್ಮದಲ್ಲಿನ ಸುಲಭವಾದ ಮತ್ತು ತ್ವರಿತ ಮಾರ್ಗಗಳಿಗೆ ಆಕರ್ಷಿತರಾಗಿದ್ದರೆ, ಅದು ಮೂಲತಃ ಸೋಮಾರಿತನದಿಂದಾಗಿರುತ್ತದೆ. ಅವರು ಪ್ರಾಮಾಣಿಕವಾಗಿ, ಅವಶ್ಯಕವಿರುವ ಕಠಿಣ ಕೆಲಸವನ್ನು ಮಾಡಲು ತಯಾರಾಗಿರುವುದಿಲ್ಲ.” 

ಎರಡನೆಯ ಶಕ್ತಿಯು, ನಿಯಂತ್ರಣವನ್ನು ತೆಗೆದುಕೊಳ್ಳುವುದಾಗಿರುತ್ತದೆ, ಇದರರ್ಥ ನಾವು ಸಾಧಿಸಲು ಬಯಸುವ ವಿಷಯದ ನಿಯಂತ್ರಣವನ್ನು ತೆಗೆದುಕೊಳ್ಳುವುದು ಮತ್ತು ನಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳುವುದಾಗಿರುತ್ತದೆ. ನಮ್ಮ ಸೋಮಾರಿತನ ಅಥವಾ ಇತರ ಯಾವುದೇ ಗೊಂದಲದ ಭಾವನೆಗಳನ್ನು ನಿಯಂತ್ರಿಸುವ ಬದಲು, ಗುರಿಯನ್ನು ಸಾಧಿಸುವ ನಮ್ಮ ಆಕಾಂಕ್ಷೆಯು ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ. ನಾವು ನಮಗೆ ಹೀಗೆ ಹೇಳಿಕೊಳ್ಳುತ್ತೇವೆ: “ಮಗುವಿನಂತೆ ವರ್ತಿಸುವುದನ್ನು ನಿಲ್ಲಿಸು. ನಿನ್ನನ್ನು ನೀನು ಸಂಭಾಳಿಸಿಕೊಂಡು, ಕೆಲಸದಲ್ಲಿ ಮಗ್ನನಾಗು!” 

ದಣಿವೇ ಅಥವಾ ಸೋಮಾರಿತನವೇ

ದಣಿವು ಮತ್ತು ಸೋಮಾರಿತನದ ನಡುವಿನ ವ್ಯತ್ಯಾಸವನ್ನು ನಾವು ಹೇಗೆ ಪ್ರತ್ಯೇಕಿಸಬಹುದು ಎಂದು ನೀವು ಯೋಚಿಸಬಹುದು. ಮೊದಲನೆಯದಾಗಿ, ವಿವಿಧ ರೀತಿಯ ಸೋಮಾರಿತನಗಳಿವೆ, ಉದಾಹರಣೆಗೆ, ನಾವು ಕ್ಷುಲ್ಲಕ ವಿಷಯಗಳಿಂದ ವಿಚಲಿತರಾಗಬಹುದು. ನಮ್ಮ ಧ್ಯಾನ ಅಥವಾ ಅಧ್ಯಯನ ಅಥವಾ ಇನ್ನಿತರ ಕೆಲಸವನ್ನು ಮಾಡಲು ನಾವು ಬಹಳಾ ಸೋಮಾರಿಗಳಾಗಿದ್ದು, ಬದಲಿಗೆ ದೂರದರ್ಶನ ಕಾರ್ಯಕ್ರಮ ಅಥವಾ ಇಂಟರ್ನೆಟ್ ಸರ್ಫಿಂಗ್‌ನಿಂದ ವಿಚಲಿತರಾಗುತ್ತೇವೆ. ಇನ್ನೊಂದು ವಿಷಯವು ಮುಂದೂಡುವ ಸೋಮಾರಿತನವಾಗಿದೆ, ಅಲ್ಲಿ ನೀವು ವಿಷಯಗಳನ್ನು ಯಾವಾಗಲೂ ಮುಂದೂಡಬಹುದು ಎಂದು ಯೋಚಿಸುತ್ತೀರಿ. ಅಲ್ಲದೆ "ನಾನು ಅದನ್ನು ಮಾಡಲು ಸಾಧ್ಯವಿಲ್ಲ" ಎಂದು ಮನ್ನಿಸುವಂತಹ ಸೋಮಾರಿತನದ ಒಂದು ವಿಧವೂ ಇದೆ. 

ನಾವು ದಣಿದಿರುವಾಗ, ನಾವು ಅದನ್ನು ಇನ್ನೂ ಮಾಡಬೇಕೆಂದು ಬಯಸುತ್ತೇವೆ: "ನಾನು ಅದನ್ನು ಮಾಡಲು ಬಯಸುತ್ತೇನೆ, ಆದರೆ ಈಗ ನನ್ನ ಕಣ್ಣೆಳೆಯುತ್ತಿದೆ, ಆದ್ದರಿಂದ ನಾನು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ, ಆಗ, ನಾನು ನಂತರ, ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬಹುದು." ಇದು ಮನ್ನಿಸುವಿಕೆ ಆಗಿರುವುದಿಲ್ಲ ಅಥವಾ ಕಾಳಜಿ ವಹಿಸದೇ ಇರುವುದು ಎನ್ನಲಾಗುವುದಿಲ್ಲ. ಸೋಮಾರಿತನದಲ್ಲಿ, ಹೀಗೆ ಮುಂದುವರಿಯುವ ಬಯಕೆಯು ಇರುವುದಿಲ್ಲ. 

ಸಾರಾಂಶ 

ಧ್ಯಾನವು ಸುಲಭವಾಗಿರುವುದಿಲ್ಲ, ಮತ್ತು ನಂಬಲಾಗದ ಸಾಕ್ಷಾತ್ಕಾರಗಳನ್ನು ಸಾಧಿಸಲು ತ್ವರಿತ ಮಾರ್ಗಗಳಿವೆ ಎಂದು ಹೇಳಿಕೊಳ್ಳುವವರ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಸಾಮಾನ್ಯವಾಗಿ ಹೇಳುವುದಾದರೆ, ಇದು ಎಂದಿಗೂ ಸಂಭವಿಸುವುದಿಲ್ಲ. 

ನಮ್ಮ ಧ್ಯಾನವು ಸಕ್ರಿಯ ಪ್ರಕ್ರಿಯೆಯಾಗಿರಬೇಕು, ಮಂದ ಅಥವಾ ನೀರಸವಲ್ಲ, ಆಗ ನಾವು ಕೇಳಿದ ಮತ್ತು ಯೋಚಿಸಿದ ಬೋಧನೆಯನ್ನು ನಾವು ಆಳವಾಗಿ ಅರ್ಥಮಾಡಿಕೊಳ್ಳುತ್ತೇವೆ. ಇದನ್ನು ನಾವು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮಾಡಬಹುದಾದರೆ, ಬೋಧನೆಗಳು ಬೇರೂರುತ್ತವೆ ಮತ್ತು ಸಮಸ್ಯೆಗಳು ಅಥವಾ ನಕಾರಾತ್ಮಕ ಭಾವನೆಗಳು ಉದ್ಭವಿಸಿದಾಗ, ನಾವು ಅವುಗಳನ್ನು ಸಲೀಸಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. 

Top