ನಮ್ಮ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು
ಈ ಎಲ್ಲಾ ವಿಷಯಗಳನ್ನು ಸಾಧಿಸುವುದು ಸಾಧ್ಯವಾಗುತ್ತದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆಯೇ ಮತ್ತು ಅದನ್ನು ಸಾಧಿಸಲು ನಾನು ಸಮರ್ಥನಾಗಿದ್ದೇನೆಯೇ ಎಂಬುದರ ಕುರಿತು ನಾವು ಹೆಚ್ಚಾಗಿ ಮಾತನಾಡಿಲ್ಲ. ಇದು ಬುದ್ಧ- ಸ್ವಭಾವದ ಬಗೆಗಿರುವ ಬೃಹತ್ ಗಾತ್ರದ ಚರ್ಚೆಗೆ ಸೇರಿದ್ದು, ಮೂಲಭೂತವಾಗಿ ಇದು ಬುದ್ಧನಾಗಿ ರೂಪಾಂತರಗೊಳ್ಳಲು ನಮಗೆಲ್ಲರಿಗೂ ಅವಕಾಶ ನೀಡುವ ಅಂಶಗಳನ್ನು ಒಳಗೊಂಡಿರುತ್ತದೆ. ಪ್ರಾಥಮಿಕವಾಗಿ ಇದು ಮನಸ್ಸಿನ ಗುಣಲಕ್ಷಣಗಳೊಂದಿಗೆ ವ್ಯವಹರಿಸುತ್ತದೆ.
ನಾವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥರಾಗಿದ್ದೇವೆಯೇ? ಹೌದು. ನಾವು ಒಂದು ವಿಷಯದ ಬಗ್ಗೆ ಸಾರ್ವಕಾಲಿಕವಾಗಿ ಜಾಗರೂಕರಾಗಿರಲು ಸಮರ್ಥರಾಗಿದ್ದೇವೆಯೇ? ನಾವು ಒಂದು ವಿಷಯದ ಬಗ್ಗೆ, ಅಲ್ಪ ಸಮಯದವರೆಗೆ ಜಾಗರೂಕರಾಗಿರಬಹುದು, ಹಾಗಾದರೆ ಆ ಸಮಯವನ್ನು ಹೆಚ್ಚಿಸಬಹುದೇ? ಹೌದು. ಧ್ಯಾನ ಮತ್ತು ಪರಿಚಿತತೆಯ ವಿಧಾನಗಳ ಮೂಲಕ ನಾವು ಅದನ್ನು ಹೆಚ್ಚಿಸಬಹುದು, ಆದರೆ ಸರಳವಾಗಿ ಹೇಳುವುದಾದರೆ, ಇಲ್ಲಿನ ಯಶಸ್ಸು, ನಮ್ಮ ಸ್ವಂತ ಆಸಕ್ತಿ ಮತ್ತು ಪ್ರೇರಣೆಯನ್ನು ಅವಲಂಬಿಸಿರುತ್ತದೆ. ಇದು ನಮಗೆ ಮುಖ್ಯವಾಗಿರಬೇಕು ಮತ್ತು ಪ್ರಸ್ತುತವಾಗಿರಬೇಕು.
ಇದು, ನೀವು ಶಾಪಿಂಗ್‌ಗೆ ಹೋಗುವಾಗ ನಿಮ್ಮ ಬಳಿ ಎಷ್ಟು ಹಣವಿದೆ ಎಂಬುದರ ಬಗ್ಗೆ ಜಾಗರೂಕರಾಗಿರುವಂತೆ ಇರುತ್ತದೆ, ನೀವು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಲು ಹೋಗುವುದಿಲ್ಲ. ಉಳಿದ ಸಮಯಗಳಲ್ಲಿ, ನೀವು ಮನೆಯಲ್ಲಿ ಕುಳಿತಿರುವಾಗ, ನಿಮ್ಮ ಜೇಬಿನಲ್ಲಿ ಎಷ್ಟು ಹಣವಿದೆ ಎನ್ನುವುದು ಮುಖ್ಯವಾಗಿರುವುದಿಲ್ಲ. ಇದು ಅಪ್ರಸ್ತುತವಾಗಿರುತ್ತದೆ ಮತ್ತು ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಹಾಗೆಯೇ, ನಾವು ಬೋಧನೆಗಳ ಬಗ್ಗೆ ಯೋಚಿಸುವಾಗ, ಅವು ನಮಗೆ ಪ್ರಸ್ತುತವಾಗಿರಬೇಕು. ಅವು ಪ್ರಸ್ತುತವಾಗಿವೆ ಎಂದು ಭಾವಿಸಲು, ನಾವು ಅವುಗಳ ಕಾರ್ಯವನ್ನು ಮತ್ತು ಅವು ಏಕೆ ಮುಖ್ಯವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ನಾವು "ಕಾಳಜಿಯ ಮನೋಭಾವನೆ"ಯ ಮನಸ್ಥಿತಿಯೆಂದು ಸಂಕ್ಷಿಪ್ತವಾಗಿ ಅರ್ಥೈಸಬಹುದು, ಇಲ್ಲಿ ನಾವು ನಮ್ಮ ಬಗ್ಗೆ ಮತ್ತು ನಮಗೆ ಏನಾಗುತ್ತದೆ ಮತ್ತು ನಾವು ಏನನ್ನು ಅನುಭವಿಸುತ್ತೇವೆ ಎಂಬುದರ ಬಗ್ಗೆ ಕಾಳಜಿ ವಹಿಸುತ್ತೇವೆ.
ನಮ್ಮ ಬಗ್ಗೆ ಕಾಳಜಿ ವಹಿಸುವುದು
ಈ ಕಾಳಜಿಯುಳ್ಳ ವರ್ತನೆಯನ್ನು ಇತರರತ್ತ ನಿರ್ದೇಶಿಸಿದಾಗ, ಬಹುಶಃ ಅದರ ಕಾರ್ಯವಿಧಾನವನ್ನು ನಾವು ಇನ್ನಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ನಾನು ಇತರರ ಬಗ್ಗೆ ಕಾಳಜಿ ವಹಿಸದಿದ್ದರೆ, ನಾನು ಏನು ಮಾಡುತ್ತೇನೆ ಅಥವಾ ಹೇಳುತ್ತೇನೆ ಅಥವಾ ಅವರು ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗಿರುವುದಿಲ್ಲ. ಆದರೆ ನಾನು ಅವರನ್ನು ಮುಖ್ಯವೆಂದು ಪರಿಗಣಿಸಿದರೆ, ನನ್ನ ನಡವಳಿಕೆಯು ಅವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ನಾನು ಕಾಳಜಿ ವಹಿಸುತ್ತೇನೆ. ನಾವು ನಮ್ಮ ಬಗ್ಗೆಯೂ ಇದೇ ರೀತಿಯ ಕಾಳಜಿಯನ್ನು ಬೆಳೆಸಿಕೊಳ್ಳಬೇಕು, ನಾನು ನನ್ನ ಸಮಯವನ್ನು ವ್ಯರ್ಥ ಮಾಡಿದರೆ ಮತ್ತು ನನ್ನ ಅಮೂಲ್ಯವಾದ ಮಾನವ ಜೀವನದ ಲಾಭವನ್ನು ಪಡೆಯದಿದ್ದರೆ, ಒಂದು ಹಂತದಲ್ಲಿ ನಾನು ಈ ತಪ್ಪಿಸಿಕೊಂಡ ಅವಕಾಶದ ಬಗ್ಗೆ ನಂಬಲಾಗದಷ್ಟು ಪಶ್ಚಾತ್ತಾಪ ಪಟ್ಟು ಸಾವನಪ್ಪುತ್ತೇನೆ.
ಇದನ್ನು ನಾವು ನಮ್ಮ ದೈನಂದಿನ ಜೀವನದ ಸಾಮಾನ್ಯ ವಿಷಯಗಳ ಕಡೆಗೂ ನಿರ್ದೇಶಿಸಬಹುದು. ನಾನು ನನ್ನ ಮಕ್ಕಳನ್ನು ಹೇಗೆ ಬೆಳೆಸುತ್ತೇನೆ, ನನ್ನ ಕೆಲಸವನ್ನು ಹೇಗೆ ಮಾಡುತ್ತೇನೆ ಎಂಬುದರ ಬಗ್ಗೆ ಕಾಳಜಿ ವಹಿಸುತ್ತೇನೆ; ನನ್ನ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಸಾಮಾನ್ಯ ಸ್ಥಿತಿಯ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಈ ರೀತಿಯ ಮನೋಭಾವದಿಂದ, ಬೋಧನೆಗಳು ನಮಗೆ ಮುಖ್ಯವೆಂದು ಪರಿಗಣಿಸುತ್ತೇವೆ. ನಿಧಾನವಾಗಿ, ಬೋಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ, ನಾವು ಅವುಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ, ಎಲ್ಲಾ ಸಮಯದಲ್ಲೂ ಸಾದ್ಯವಾಗದಿದ್ದರೆ, ಕನಿಷ್ಠಪಕ್ಷ ಬೇಕಾದಷ್ಟು ಸಮಯ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಧ್ಯಾನವು, ಬೋಧನೆಗಳನ್ನು ನಮ್ಮ ಮನಸ್ಸಿಗೆ ಮತ್ತೆ ಮತ್ತೆ ಪರಿಚಯಿಸುವ ಮೂಲಕ, ಅದನ್ನು ನಮ್ಮ ಮನಸ್ಸಿನ ಸಹಜವಾದ ಭಾಗವಾಗಿಸುವ ವಿಧಾನವಾಗಿರುತ್ತದೆ, ಇಲ್ಲಿ ನಾವು ಅವುಗಳನ್ನು ನೆನಪಿಟ್ಟುಕೊಳ್ಳಲು ಯಾವುದೇ ಪ್ರಯತ್ನಪಡಬೇಕಾಗಿಲ್ಲ.
ಈ ಒಳನೋಟಗಳನ್ನು ಪಡೆಯಲು ನಾವು ಸಮರ್ಥರಾಗಿದ್ದೇವೆ ಎಂದು ನಮಗೆ ಮನವರಿಕೆಯಾಗಿದ್ದರೆ, ನಾವು ಹಾಗೆ ಮಾಡಲು ನಮ್ಮ ಮನಸ್ಸಿಟ್ಟು ಶ್ರಮ ಪಡುತ್ತೇವೆ. ಅದು ಮನವರಿಕೆಯಾಗದಿದ್ದಲ್ಲಿ, ಅದಕ್ಕಾಗಿ ಶ್ರಮಪಡುವುದು, ಹಕ್ಕಿಯಂತೆ ಹಾರಲು ನಮ್ಮ ತೋಳುಗಳನ್ನು ಬೀಸುವಂತಿದೆ: ಅದರ ಬಗ್ಗೆ ನೀವು ಯಾಕೆ ತಲೆಕೆಡಿಸಿಕೊಳ್ಳಬೇಕು? ಪ್ರಾರಂಭದಲ್ಲಿ ನಮಗೆ ವಿಮೋಚನೆ ಅಥವಾ ಜ್ಞಾನೋದಯ ಎಂದರೆ ಏನು ಎಂದು ತಿಳಿದಿರುವುದಿಲ್ಲ, ಆದರೆ ಇದನ್ನು ಅರ್ಥಮಾಡಿಕೊಳ್ಳಲು ಮತ್ತು ಇದಕ್ಕಾಗಿ ಪ್ರಯತ್ನಪಡಲು ನಾವು ದೀರ್ಘಕಾಲೀನ ಗುರಿಯೊಂದನ್ನು ಹೊಂದಿದ್ದೇವೆ, ಜೊತೆಗೆ ಸಾವಿನ ಅರಿವು ನಮ್ಮ ಜೀವನವನ್ನು ವ್ಯರ್ಥ ಮಾಡದಂತೆ ಉತ್ತೇಜಿಸಲು ಸಹಾಯ ಮಾಡುತ್ತದೆ.
ಸಹಾನುಭೂತಿಯ ಮೇಲೆ ಧ್ಯಾನ
ಈಗ ನಾವು ಪ್ರಕ್ರಿಯೆಯ ಮೂರನೇ ಹಂತವಾದ ಧ್ಯಾನದತ್ತ ನೋಡಲು ಸಿದ್ಧರಾಗಿದ್ದೇವೆ. ಈ ವಿಷಯವನ್ನು ಪರಿಚಯಿಸುವ ಸಲುವಾಗಿ, ಮಹಾನ್ ಟಿಬೆಟಿಯನ್ ಬೌದ್ಧ ಗುರುವಾದ ತ್ಸೋಂಗ್‌ಖಾಪಾ ಅವರು ಬಹಳ ಸಹಾಯಕವಾದ ಸಲಹೆಗಳನ್ನು ಬರೆದಿದ್ದಾರೆ. ಎ ಲೆಟರ್ ಆಫ್ ಪ್ರಾಕ್ಟಿಕಲ್ ಅಡ್ವೈಸ್ ಆನ್ ಸೂತ್ರ ಆಂಡ್ ತಂತ್ರ (ಸೂತ್ರ ಮತ್ತು ತಂತ್ರದ ಕುರಿತಾದ ಪ್ರಾಯೋಗಿಕ ಸಲಹೆಯ ಪತ್ರ) ದಲ್ಲಿ, ಧ್ಯಾನಿಸಲು "ನಾವು ಸಾಧಿಸಲು ಪ್ರಯತ್ನಿಸುತ್ತಿರುವ ಮನಸ್ಸಿನ ಸ್ಥಿತಿಯ ಕಾರಣಗಳು ಯಾವುವು ಎಂಬುದನ್ನು ವಿವೇಚಿಸಬೇಕು" ಎಂದು ಅವರು ಬರೆದಿದ್ದಾರೆ. ಉದಾಹರಣೆಗೆ, ನಾವು ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಬಯಸಿದರೆ, ಯಾವ ಕಾರಣಗಳು ಅದರ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು.
ಇದು ಅವಲಂಬನೆಯ ಮೂಲತತ್ವವಾಗಿದೆ - ಇತರರು ದುಃಖದಿಂದ ಮತ್ತು ದುಃಖದ ಕಾರಣಗಳಿಂದ ಮುಕ್ತರಾಗಬೇಕೆಂಬ ಇಚ್ಛೆಯನ್ನು ಅಭಿವೃದ್ಧಿಪಡಿಸಲು (ಇದು ಬೌದ್ಧ ಧರ್ಮದಲ್ಲಿರುವ ಸಹಾನುಭೂತಿಯ ವ್ಯಾಖ್ಯಾನವಾಗಿರುತ್ತದೆ), ನಾವು ಅವರೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದೇವೆ ಎಂದು ಗುರುತಿಸಬೇಕು. ಇಲ್ಲದಿದ್ದರೆ, ನಾವು ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದ್ದರಿಂದ ನಮ್ಮ ಸಂಪೂರ್ಣ ಅಸ್ತಿತ್ವವು, ಪ್ರತಿಯೊಬ್ಬರ ಕಠಿಣ ಪರಿಶ್ರಮ ಮತ್ತು ದಯೆಯ ಮೇಲೆ ಹೇಗೆ ಅವಲಂಬಿತವಾಗಿದೆ ಎಂಬುದನ್ನು ನಾವು ಪರಿಗಣಿಸಬೇಕಾಗಿದೆ - ನಮ್ಮ ಆಹಾರವನ್ನು ಬೆಳೆಯುವವರು, ನಮ್ಮ ರಸ್ತೆಗಳನ್ನು ನಿರ್ಮಿಸುವವರು ಇತ್ಯಾದಿ. ನಮ್ಮ ಜೀವನವನ್ನು ಸುಧಾರಿಸಲು ಅವರು ಪಟ್ಟ ಶ್ರಮವನ್ನು ನೆನಪಿಸಿಕೊಳ್ಳುವುದರಿಂದ, ನಾವು ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ಬೆಳೆಸಿಕೊಳ್ಳುತ್ತೇವೆ. ಪ್ರಾಮಾಣಿಕವಾಗಿ ಮತ್ತು ಆಳವಾಗಿ ಭಾವಿಸಿದಾಗ, ಸಹಜವಾಗಿ, ನಮ್ಮ ಕೃತಜ್ಞತೆಯ ಭಾವನೆಯು ಹೃದಯವನ್ನು ಬೆಚ್ಚಗಿರಿಸುವ ಪ್ರೀತಿಯನ್ನು ಕರೆತರುತ್ತದೆ, ಅದರೊಂದಿಗೆ ನಾವು ಅವರನ್ನು ಹೆಚ್ಚು ಪ್ರೀತಿಸುತ್ತೇವೆ ಮತ್ತು ಅವರಿಗೆ ಏನಾದರೂ ಕೆಟ್ಟದ್ದು ಸಂಭವಿಸಿದರೆ ನಾನು ಅದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತೇವೆ. ಅದು ಪ್ರೀತಿಗೆ ಕಾರಣವಾಗುತ್ತದೆ: ಅವರು ಸಂತೋಷವಾಗಿರಲು ಮತ್ತು ಸಂತೋಷಕ್ಕೆ ಕಾರಣಗಳನ್ನು ಪಡೆಯುವಂತೆ ಬಯಸುತ್ತೇವೆ. ಆದರೆ ಅವರು ಸಂತೋಷವಾಗಿರದೆ, ಎಲ್ಲಾ ರೀತಿಯ ದುಃಖಗಳಿಂದ ಬಳಲುತ್ತಿರುವುದನ್ನು ನಾವು ನೋಡಿದಾಗ, ನಾವು ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ. ನಮ್ಮ ಸಹಾನುಭೂತಿಯ ಬೆಳವಣಿಗೆಯು, ಈ ಎಲ್ಲಾ ಹಂತಗಳನ್ನು, ಅವುಗಳ ಸರಿಯಾದ ಅನುಕ್ರಮದಲ್ಲಿ ಪಾಲಿಸುವುದನ್ನು ಅವಲಂಬಿಸಿರುತ್ತದೆ.
ಸಹಾನುಭೂತಿಯು, ಪರಿತ್ಯಾಗವನ್ನು ಅವಲಂಬಿಸಿರುತ್ತದೆ, ಅಂದರೆ ನಮ್ಮ ಸ್ವಂತ ದುಃಖಗಳನ್ನು ಗುರುತಿಸುವುದು, ಅವುಗಳಿಂದ ಮುಕ್ತರಾಗಲು ನಿರ್ಧರಿಸುವುದು, ಮತ್ತು ನಂತರ ಎಲ್ಲರಿಗೂ ಒಂದೇ ರೀತಿಯ ದುಃಖವಿದೆ ಮತ್ತು ಒಂದೇ ಆಶಯವಿದೆ ಎಂದು ಅರಿತುಕೊಳ್ಳುವುದಾಗಿರುತ್ತದೆ. ಪರಿತ್ಯಾಗವು ಇದೇ ಆಗಿರುತ್ತದೆ - ದುಃಖದಿಂದ ಮುಕ್ತವಾಗುವ ಸಂಕಲ್ಪ. ಇತರರ ದುಃಖದ ಕಡೆಗೆ ನಿರ್ದೇಶಿಸಲಾಗುವ ನಿರ್ಣಾತ್ಮಕ ಸಹಾನುಭೂತಿಯು, ನಿಸ್ಸಂಶಯವಾಗಿ, ನಮ್ಮ ಬಗ್ಗೆಯೂ ಅದೇ ರೀತಿಯ ನಿರ್ಣಯವನ್ನು ಹೊಂದಿರುವುದರ ಮೇಲೆ ಅವಲಂಬಿತವಾಗಿರುತ್ತದೆ.
ಆದ್ದರಿಂದ ನಾವು ನಮ್ಮ ಧ್ಯಾನದಲ್ಲಿ ಸಹಾನುಭೂತಿಯ ಸ್ಥಿತಿಯನ್ನು ಸೃಷ್ಟಿಸುವಂತೆ ಶ್ರಮಪಡಲು ಬಯಸಿದರೆ, ಈ ಅವಲಂಬನೆಯ ಹಂತವು ಬಹಳಾ ಮಹತ್ವದ್ದಾಗಿರುತ್ತದೆ, ಏಕೆಂದರೆ ಅಂತಿಮವಾಗಿ, ಹೆಚ್ಚಿನ ಅಭ್ಯಾಸ ಮತ್ತು ಪರಿಚಿತತೆಯೊಂದಿಗೆ ನಾವು ಅದನ್ನು ತಕ್ಷಣವೇ ಉತ್ಪಾದಿಸಲು ಸಾಧ್ಯವಾಗುತ್ತದೆಯಾದರೂ, ಪ್ರಾರಂಭದಲ್ಲಿ ನಾವು ಹಂತ-ಹಂತವಾಗಿ, ಅದನ್ನು ಪ್ರಾಮಾಣಿಕವಾಗಿ ಅನುಭವಿಸುವ ಮಟ್ಟಕ್ಕೆ ನಮ್ಮನ್ನು ಬೆಳೆಸಿಕೊಳ್ಳಬೇಕಾಗಿದೆ. ಸಹಾನುಭೂತಿಯ ಬಗ್ಗೆ ನಿಜವಾಗಿಯೂ ಧ್ಯಾನಿಸಲು, ಅದು ಅವಲಂಬಿಸಿರುವ ಹಂತಗಳು ಅಥವಾ ಕಾರಣಗಳನ್ನು ನಾವು ಮೊದಲು ತಿಳಿದುಕೊಳ್ಳಬೇಕು.
ನಾವು "ಅಂಶಗಳನ್ನು” ಸಹ ತಿಳಿದುಕೊಳ್ಳಬೇಕು ಎಂದು ತ್ಸೋಂಗ್‌ಖಾಪಾ ಹೇಳುತ್ತಾರೆ, ಅಂದರೆ ನಾವು ಸಹಾನುಭೂತಿಯನ್ನು ಉತ್ಪಾದಿಸಬೇಕಾದರೆ, ಪ್ರತಿಯೊಬ್ಬರೂ ಎಲ್ಲದರಿಂದ ಮುಕ್ತರಾಗಬೇಕೆಂದು ನಾವು ಬಯಸಿದ್ದಲ್ಲಿ, ನಾವು ದುಃಖದ ಎಲ್ಲಾ ವಿಭಿನ್ನ ಅಂಶಗಳನ್ನು ಮತ್ತು ದುಃಖದ ಕಾರಣಗಳ ವಿಭಿನ್ನ ಅಂಶಗಳನ್ನು ತಿಳಿದುಕೊಳ್ಳಬೇಕಾಗಿದೆ. ಇದು ಕೇವಲ ಅವರಿಗಾಗಿ ಕೆಲಸವನ್ನು ಹುಡುಕುವುದು ಅಥವಾ ತಿನ್ನಲು ಒಳ್ಳೆಯದನ್ನು ಹುಡುಕಲು ಸಹಾಯ ಮಾಡುವುದು ಆಗಿರುವುದಿಲ್ಲ - ನಾವು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದ (ಸಂಸಾರ) ಸರ್ವವ್ಯಾಪಿ ಸಂಕಟದ ಬಗ್ಗೆ ಮಾತನಾಡುತ್ತಿದ್ದೇವೆ ಮತ್ತು ಸಂಸಾರಿಕ ಅಸ್ತಿತ್ವವನ್ನು ಸೃಷ್ಟಿಸುವ ಮತ್ತು ಶಾಶ್ವತಗೊಳಿಸುವ ವಾಸ್ತವದ ಬಗ್ಗೆಗಿರುವ ಅತ್ಯಂತ ಮೂಲಭೂತವಾದ ಅರಿವು ಮತ್ತು ಗೊಂದಲದ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರೀತಿ ಮತ್ತು ಸಹಾನುಭೂತಿಯ ಬಗ್ಗೆ ಧ್ಯಾನಿಸಲು, ನೀವು ಸುಮ್ಮನೆ ಕುಳಿತುಕೊಂಡು, "ಆಹಾ ಎಷ್ಟು ಚೆನ್ನಾಗಿದೆ, ನಾನು ಎಲ್ಲರನ್ನು ಪ್ರೀತಿಸುತ್ತೇನೆ" ಎಂದು ಯೋಚಿಸುವುದಾಗಿರುವುದಿಲ್ಲ. ಅದು ಬಹಳಾ ಅಸ್ಪಷ್ಟವಾಗಿರುತ್ತದೆ - ನಾವು ಸೃಷ್ಟಿಸಲು ಬಯಸುವ ಮನಸ್ಥಿತಿಗಳು ಬಹಳ ನಿರ್ದಿಷ್ಟವಾಗಿರುತ್ತವೆ. ನಾವು ಕೆಲಸ ಮಾಡಲು ಪ್ರಯತ್ನಿಸುತ್ತಿರುವ ಮನಸ್ಥಿತಿಯನ್ನು ನಿರ್ದಿಷ್ಟಪಡಿಸಲು, ನಮಗೆ ಅನುವು ಮಾಡಿಕೊಡುವ ಎಲ್ಲಾ ವಿಷಯಗಳನ್ನು ತ್ಸೋಂಗ್‌ಖಾಪಾ ಉಲ್ಲೇಖಿಸಿದ್ದಾರೆ.
ನಂತರ, ನಾವು ಈ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವಾಗ, ನಾವು ಯಾವುದರ ಮೇಲೆ ಕೇಂದ್ರೀಕರಿಸುತ್ತದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ನಮ್ಮ ಮನಸ್ಸಿನಲ್ಲಿ ಏನು ಕಾಣಿಸಿಕೊಳ್ಳಬೇಕು? ಸಹಾನುಭೂತಿಯೊಂದಿಗೆ, ನಾವು ಇತರ ಜೀವಿಗಳು ಮತ್ತು ಅವರ ದುಃಖಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಮತ್ತು ಇದು ಕೇವಲ ಸಹಾನುಭೂತಿ ಅಲ್ಲ, ಬದಲಿಗೆ "ಮಹಾನ್ ಸಹಾನುಭೂತಿ"ಯಾಗಿದ್ದು, ಇದನ್ನು ಎಲ್ಲರ ಕಡೆಗೂ ಸಮಾನವಾಗಿ ನಿರ್ದೇಶಿಸಲಾಗುತ್ತದೆ. ಇಲ್ಲಿ ನಾವು ಬೃಹತ್ ಪ್ರಮಾಣದ ಜೀವಿಗಳ ಬಗ್ಗೆ ಮಾತನಾಡುತ್ತಿದ್ದೇವೆ – ನಿಜವಾಗಿಯೂ ಇದು ಎಲ್ಲರನ್ನೂ ಒಳಗೊಂಡಿರುತ್ತದೆ. ಇದು,"ನಾನು ವಿಶ್ವದಲ್ಲಿರುವ ಪ್ರತಿಯೊಂದು ಕೀಟಕ್ಕೂ ಸಹಾಯ ಮಾಡಲಿದ್ದೇನೆ" ಎಂದು ನಂಬಲಾಗದಷ್ಟು ದೊಡ್ಡ ವ್ಯಾಪ್ತಿಯಲ್ಲಿ ಯೋಚಿಸುವುದಾಗಿದೆ. ಇಲ್ಲಿ ನಾವು ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ನಿರಂತರತೆಯ ಬಗ್ಗೆ ಮಾತನಾಡುತ್ತಿದ್ದೇವೆ, ಅವರ ಕರ್ಮದಿಂದಾಗಿ ಅವರು ಇಂದು, ಒಂದು ಕೀಟವಾಗಿ ಜೀವತಾಳಿರಬಹುದು. ಅವರು ಎಂದೆಂದಿಗೂ ಕೀಟಗಳಾಗಿರುತ್ತಾರೆ ಎಂದು ಹೇಳಲಾಗುವುದಿಲ್ಲ - ಈ ಜೀವಿತಾವಧಿಯಲ್ಲಿನ ಒಂದು ಕೀಟವನ್ನು ನಾವು ವಿಮುಕ್ತಿಗೊಳಿಸಲಿದ್ದೇವೆ, ಆದರೆ ಅದು ಕೊನೆಯ ಜೀವಿತಾವಧಿಯಲ್ಲಿ ನನ್ನ ತಾಯಿಯಾಗಿರಬಹುದು. ಮತ್ತು ಈ ಜೀವಿತಾವಧಿಯಲ್ಲಿ ನಾವು ನಮ್ಮ ತಾಯಿಯನ್ನು ವಿಮುಕ್ತಿಗೊಳಿಸುತ್ತೇವೆ, ಆದರೆ ಕೊನೆಯ ಜೀವಿತಾವಧಿಯಲ್ಲಿ ಅವರು ಕೀಟವಾಗಿರಬಹುದು.
ಪ್ರತಿಯೊಂದು ಜೀವಿಯನ್ನು ದೃಶ್ಯೀಕರಿಸುವುದು ಅಷ್ಟು ಸುಲಭವಲ್ಲ, ಆದರೆ ವಿಶಾಲ ಮನಸ್ಸಿನ ಮಹಾಯಾನ ಬೌದ್ಧ ಆಚರಣೆಯನ್ನು ಅಭ್ಯಾಸ ಮಾಡುವಾಗ, ನಮ್ಮ ಸುತ್ತ-ಮುತ್ತಲು, ಜೀವಿಗಳ ದೊಡ್ಡ ಸಮೂಹವನ್ನು ಕಲ್ಪಿಸಿಕೊಂಡು, ಅವರ ಎಲ್ಲಾ ದುಃಖಗಳನ್ನು ನಾವು ನಿವಾರಿಸುತ್ತಿದ್ದೇವೆ ಎಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅನೇಕ ಮಹಾಯಾನ ಸೂತ್ರಗಳ ಪ್ರಾರಂಭದಲ್ಲಿ, ಸಾವಿರಾರು ಮಿಲಿಯನ್ ಜೀವಿಗಳು ಪ್ರೇಕ್ಷಕರಾಗಿರುವರು ಎಂದು ವಿವರಿಸುತ್ತದೆ, ಇದು ವ್ಯಾಪ್ತಿಗಾಗಿ ಒಂದು ಕಲ್ಪನೆಯನ್ನು ಒದಗಿಸಿಕೊಡುತ್ತದೆ.
ಈ ರೀತಿಯಾದ ಸಾರ್ವತ್ರಿಕ ಸಹಾನುಭೂತಿಯನ್ನು ಎಲ್ಲರಿಗಾಗಿ ಸಮಾನವಾಗಿ ಹೊಂದಿರುವುದು, ನಿಜವಾಗಿಯೂ ನಂಬಬಹುದಾದ ವಿಷಯವಾಗಿದೆ. ಅದರ ಆಧಾರವು ಸಮಚಿತ್ತತೆಯಾಗಿರುತ್ತದೆ, ಅಂದರೆ ನಾವು ನಮ್ಮ ಮನಸ್ಸನ್ನು ಇತರರಿಗಾಗಿ ತೆರೆಯುತ್ತೇವೆ. ಸಹಾನುಭೂತಿಯ ಬಗ್ಗೆ ಸರಿಯಾಗಿ ಧ್ಯಾನಿಸಲು ನಾವು ಈ ಎಲ್ಲವನ್ನೂ ತಿಳಿದುಕೊಳ್ಳಬೇಕು.
ಇದಲ್ಲದೆ, ನಾವು ಗಮನಹರಿಸುತ್ತಿರುವ ವಿಷಯಕ್ಕೆ ಮನಸ್ಸು ಹೇಗೆ ಸಂಬಂಧಿಸುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಾವು ಸಹಾನುಭೂತಿಯ ಬಗ್ಗೆ ಧ್ಯಾನಿಸುತ್ತಿದ್ದರೆ, ಅವರು ದುಃಖದಿಂದ ಮುಕ್ತರಾಗಬೇಕು ಮತ್ತು ಅವರ ದುಃಖದ ಎಲ್ಲಾ ಕಾರಣಗಳು ನಾಶವಾಗಲಿ ಎಂದು ನಾವು ಬಯಸುತ್ತೇವೆ. ಬೇರೊಬ್ಬರು ಅವರಿಗೆ ಸಹಾಯ ಮಾಡಲು ಮುಂದಾಗಲಿ ಅಥವಾ ಅವರ ದುಃಖವು ಕಣ್ಮರೆಯಾಗಲಿ ಎಂಬ ಸಾಮಾನ್ಯವಾದ ಆಶಯವಾಗಿರುವುದಿಲ್ಲ, ಬದಲಿಗೆ ಅದನ್ನು ಜಯಿಸಲು ನಾವೇ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ.
ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಯಾವುದು ಪ್ರಯೋಜನಕಾರಿಯಾಗಲಿದೆ ಮತ್ತು ನಮಗೆ ಸಹಾಯ ಮಾಡುತ್ತದೆ ಮತ್ತು ಯಾವುದು ಹಾನಿಕಾರಕ ಮತ್ತು ವಿನಾಶಕಾರಿಯಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂಬ ವಿಷಯವನ್ನು ತ್ಸೋಂಗ್‌ಖಾಪಾ ಮತ್ತಷ್ಟು ಒತ್ತಿ ಹೇಳುತ್ತಾರೆ. ಜನರು ದುಃಖದಿಂದ ಮುಕ್ತರಾಗಲು ನಿಜವಾಗಿಯೂ ಸಾಧ್ಯ ಎಂಬ ಮನವರಿಕೆಯು, ಕೇವಲ ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯಕವಾಗಿರುವುದಲ್ಲದೆ, ನಮಗೆ ಸಂಪೂರ್ಣವಾಗಿ ಅವಶ್ಯಕವಾಗಿರುತ್ತದೆ. ಇದು ಸಾಧ್ಯ ಎಂದು ನಾವು ಭಾವಿಸದಿದ್ದರೆ, ನಾವು ಅದನ್ನು ಹೇಗೆ ತಾನೆ ಬಯಸಲು ಸಾಧ್ಯ ಮತ್ತು ಅದರತ್ತ ಶ್ರಮಪಡಲು ಸಾಧ್ಯ? ಇದರ ಆಧಾರವು, ನಾನು ನನ್ನ ದುಃಖದಿಂದ ಮುಕ್ತನಾಗಬಲ್ಲೆ ಮತ್ತು ಇತರರ ದುಃಖವನ್ನು ನಿವಾರಿಸಲು ಸಹಾಯ ಮಾಡುವಲ್ಲಿ ನಾನು ಸಮರ್ಥನಾಗಿದ್ದೇನೆ ಎಂಬ ಆತ್ಮವಿಶ್ವಾಸದ ನಂಬಿಕೆಯಾಗಿರುತ್ತದೆ. ಇದಕ್ಕಾಗಿ, ನಮ್ಮ ಸಮರ್ಥತೆ ಮತ್ತು ಬುದ್ಧನ ಸಮರ್ಥತೆಯ ಬಗ್ಗೆ ನಾವು ವಾಸ್ತವಿಕವಾದ ತಿಳುವಳಿಕೆಯನ್ನು ಹೊಂದಿರಬೇಕು. ಹಾಗಾದರೆ ನಮ್ಮ ಸಹಾನುಭೂತಿಯ ಬೆಳವಣಿಗೆಗೆ ಹಾನಿಕರವಾದದ್ದು ಸ್ವ-ಕೇಂದ್ರಿತತೆ ಮತ್ತು ಸ್ವಾರ್ಥ ಮಾತ್ರವಲ್ಲ, ಜೊತೆಗೆ ನಿರುತ್ಸಾಹ ಮತ್ತು ಆತ್ಮ ವಿಶ್ವಾಸದ ಕೊರತೆಯಾಗಿರುತ್ತದೆ. ಇನ್ನೊಬ್ಬರ ಕಾಲಿನಲ್ಲಿರುವ ಮುಳ್ಳಿನಂತೆ ದುಃಖವನ್ನು ತೆಗೆದುಹಾಕಲಾಗುವುದಿಲ್ಲ ಎಂದು ಬುದ್ಧನು ಹೇಳಿದ್ದಾರೆ. ಬುದ್ಧನು ಕೇವಲ ದಾರಿಯನ್ನು ಮಾತ್ರ ತೋರಿಸಬಲ್ಲರು, ಆದರೆ ಕಠಿಣ ಪರಿಶ್ರಮವನ್ನು ಇತರರೇ ಪಡಬೇಕಾಗಿದೆ. ನಾವು ಬುದ್ಧನನ್ನು ಮೀರಿಸಲು ಸಾಧ್ಯವಾಗುತ್ತದೆ ಎಂದು ಹೇಗೆ ತಾನೆ ನಿರೀಕ್ಷಿಸಬಹುದು?
ಸಂಕ್ಷಿಪ್ತವಾಗಿ ಹೇಳುವುದಾದರೆ, ಸಹಾನುಭೂತಿಯಂತಹ ನಿರ್ದಿಷ್ಟ ಮನಸ್ಥಿತಿಯನ್ನು ಹುಟ್ಟಿಸುವ ನಿಶ್ಚಿತಗಳ ಬಗ್ಗೆ ನಮಗೆ ತಿಳುವಳಿಕೆ ಇಲ್ಲದಿದ್ದರೆ, ನಾವು ಹೆಚ್ಚು ದೂರ ಹೋಗುವುದಿಲ್ಲ. ಈ ರೀತಿಯಾಗಿ, ಧ್ಯಾನವು ಎಷ್ಟು ನಿಖರ ಮತ್ತು ಅತ್ಯಾಧುನಿಕವಾಗಿದೆ ಎಂಬುದನ್ನು ನಾವು ಪ್ರಶಂಸಿಸಲು ಪ್ರಾರಂಭಿಸಬಹುದು; ಇದನ್ನು ನಾವು "ಮನೋವಿಜ್ಞಾನ" ಎಂದೂ ಕರೆಯಬಹುದು.
ಧ್ಯಾನದ ಅವಧಿಗಳ ನಡುವೆ
ಧ್ಯಾನದ ಅವಧಿಗಳ ನಡುವಿನ ಸಮಯವೂ ಬಹಳ ಮುಖ್ಯ ಎಂದು ತ್ಸೋಂಗ್‌ಖಾಪಾ ಸೂಚಿಸುತ್ತಾರೆ. ನಾವು ಏನನ್ನು ಧ್ಯಾನಿಸುತ್ತಿದ್ದೇವೆ ಎಂಬುದರ ಕುರಿತಾದ ವಿವಿಧ ಗ್ರಂಥಗಳ ಪಠ್ಯಗಳನ್ನು ಓದಲು ಅವರು ಸಲಹೆ ನೀಡುತ್ತಾರೆ. ಒಂದೆಡೆ, ಇದು ನಾವು ಮಾಡುತ್ತಿರುವ ಕಾರ್ಯವು ಬುದ್ಧನ ಬೋಧನೆಗೆ ಅನುಗುಣವಾಗಿದೆ ಎಂಬ ನಮ್ಮ ಮನವರಿಕೆಗಳನ್ನು ಖಚಿತಪಡಿಸುತ್ತದೆ, ಮತ್ತೊಂದೆಡೆ, ಮಹಾನ್ ಗುರುಗಳು ಏನು ಸಾಧಿಸಿದ್ದಾರೆ ಎಂಬುದರ ಕುರಿತು ಓದುವ ಮೂಲಕ ನಮಗೆ ಸ್ಫೂರ್ತಿ ಸಿಗುತ್ತದೆ. ಇದಲ್ಲದೆ, ನಾವು ನಮ್ಮ ಸಕಾರಾತ್ಮಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಮತ್ತು ನಕಾರಾತ್ಮಕ ಶಕ್ತಿಗಳಿಂದ ನಮ್ಮನ್ನು ಶುದ್ಧೀಕರಿಸಬೇಕು ಎಂದು ತ್ಸೋಂಗ್‌ಖಾಪಾ ಹೇಳುತ್ತಾರೆ.
"ಮೆರಿಟ್" ಪದದ ಬದಲಿಗೆ "ಸಕಾರಾತ್ಮಕ ಶಕ್ತಿ" ಎಂಬ ಪದವನ್ನು ನಾನು ಬಳಸುತ್ತೇನೆ, ಏಕೆಂದರೆ ಅದು ತಪ್ಪು ಕಲ್ಪನೆಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಮೆರಿಟ್ ಪದವು, ನೀವು ಅಂಕಗಳನ್ನು ಸಂಗ್ರಹಿಸುತ್ತಿರುವಂತೆ ಮತ್ತು ನೂರು ಅಂಕ ತಲುಪಿದರೆ, ನೀವು ಗೆಲ್ಲುತ್ತೀರಿ ಎಂಬ ಅರ್ಥವನ್ನು ನೀಡುವಂತೆ ತೋರುತ್ತದೆ. ಹೇಗೆ ಸೆಲ್ ಫೋನ್‌ಗಾಗಿ ಸಾಕಷ್ಟು ವಿದ್ಯುತ್ ಶಕ್ತಿಯ ಅಗತ್ಯವಿದೆಯೋ, ಅಂತೆಯೇ, ನಾವು ಶ್ರಮಪಡಲು ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತೇವೆ. ಆದ್ದರಿಂದ ನಿಮಗೆ ಯಾವುದೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನೀವು ಭಾವಿಸಿದಾಗ, ಮಾನಸಿಕ ನಿರ್ಬಂಧಗಳನ್ನು ನಿವಾರಿಸಲು ಸಹಾಯ ಮಾಡಲು, ನಮ್ಮ ಮನಸ್ಸಿಗಾಗಿ ಶುದ್ಧೀಕರಣದ ಅಭ್ಯಾಸಗಳನ್ನು ನಾವು ಬಳಸಬೇಕಾಗುತ್ತದೆ. ಭಾವನಾತ್ಮಕ ನಿರ್ಬಂಧಗಳೂ ಇರಬಹುದು. ಸಕಾರಾತ್ಮಕ ಶಕ್ತಿಯನ್ನು ನಿರ್ಮಿಸುವುದು ಮತ್ತು ವಿವಿಧ ಶುದ್ಧೀಕರಣದ ಅಭ್ಯಾಸಗಳನ್ನು ನಡೆಸುವುದರಿಂದ ಈ ನಿರ್ಬಂಧಗಳನ್ನು ಭೇದಿಸಲು ನಮಗೆ ಸಾಧ್ಯವಾಗುತ್ತದೆ, ಹೀಗೆ ನಾವು ಒಳನೋಟ ಮತ್ತು ತಿಳುವಳಿಕೆಯನ್ನು ಪಡೆಯಬಹುದಾಗಿದೆ.
ಪ್ರಾಯೋಗಿಕ ಮಟ್ಟದಲ್ಲಿ ಇದರ ಅರ್ಥವೇನು? ಪ್ರಾಯೋಗಿಕ ಮಟ್ಟದಲ್ಲಿ ಇದರ ಅರ್ಥ: ನಾವು ಏನನ್ನಾದರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಇದು ನಮ್ಮ ಕೆಲಸವೂ ಆಗಿರಬಹುದು, ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ, ನಾವು ವಿರಾಮ ತೆಗೆದುಕೊಳ್ಳುತ್ತೇವೆ. ನಾವು ಒಂದಲ್ಲ ಒಂದು ರೀತಿಯಲ್ಲಿ ಇತರರಿಗೆ ಏನಾದರೂ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಹಾಗೆ ಮಾಡಿದ ನಂತರ ನೀವು ಹಿಂತಿರುಗಿದಾಗ, ಸಾಮಾನ್ಯವಾಗಿ ನಿಮ್ಮ ಮನಸ್ಸು ಹೆಚ್ಚು ಸಕಾರಾತ್ಮಕವಾದ, ಉತ್ತಮವಾದ ಸ್ಥಿತಿಯಲ್ಲಿರುತ್ತದೆ ಮತ್ತು ಹೆಚ್ಚಾದ ಸ್ವಾಭಿಮಾನದ ಪ್ರಜ್ಞೆಯಿಂದ, ಹತಾಶೆಗಿಂತ, ನಾವು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ಯಾರೇ ಆಗಿರಲಿ, ನಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬಹುದು, ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಸಂಬಂಧಿಕರನ್ನು ಭೇಟಿಮಾಡಬಹುದು, ಹೀಗೆ, ಇತರರಿಗೆ ಪ್ರಯೋಜನಕಾರಿಯಾದ ಕೆಲವು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಸಕಾರಾತ್ಮಕವಾದದ್ದನ್ನು ಮಾಡುವುದು ಬಹಳ ಮುಖ್ಯ. ನಾವು ಮಾಡಬಹುದಾದ ಅನೇಕ ಆಚರಣೆಗಳಿದ್ದರೂ, ನಿಜ ಜೀವನದ ಅಭ್ಯಾಸವು ಹೆಚ್ಚು ಪ್ರಬಲವಾಗಿರುತ್ತದೆ.
ನಮ್ಮ ಪ್ರಗತಿಯನ್ನು ಪರಿಶೀಲಿಸುವುದು
ನಮ್ಮಲ್ಲಿ, ಹೆಚ್ಚಿನವರ ಬಳಿ ನಮ್ಮ ಪ್ರಗತಿಯನ್ನು ಪರಿಶೀಲಿಸಬಹುದಾದ ವೈಯಕ್ತಿಕ ಶಿಕ್ಷಕರಿರುವುದಿಲ್ಲ, ಆದರೆ ಲೊಜಾಂಗ್ ಅಥವಾ ಮಾನಸಿಕ ತರಬೇತಿಯ ಬೋಧನೆಗಳು, ನಮಗೆ ನಾವೇ ಅತ್ಯುತ್ತಮ ಸಾಕ್ಷಿ ಎಂದು ಯಾವಾಗಲೂ ಹೇಳುತ್ತವೆ. ನಮ್ಮ ಏಕಾಗ್ರತೆ ಚೆನ್ನಾಗಿದೆಯೇ ಇಲ್ಲವೇ, ಅಥವಾ ನಮ್ಮಲ್ಲಿ ಮಾನಸಿಕ ಅಲೆದಾಟ ಹೆಚ್ಚಿದೆಯೇ ಇಲ್ಲವೇ ಎಂದು ನಾವು ನಮ್ಮನ್ನು ಕೇಳಿಕೊಳ್ಳಬೇಕು - ಇದನ್ನು ಬೇರೆ ಯಾರೂ ನಮಗಾಗಿ ನಿರ್ಣಯಿಸಲು ಸಾಧ್ಯವಿಲ್ಲ! ಎಲ್ಲಾ ಬೋಧನೆಗಳು ಮತ್ತು ಅಭ್ಯಾಸಗಳು ನಮ್ಮ ಸ್ವಂತ ಭಾವನಾತ್ಮಕ ಸ್ಥಿತಿಯನ್ನು ಸುಧಾರಿಸಲು, ನಾವು ನಮ್ಮ ಮೇಲೆ ಕೆಲಸ ಮಾಡಲು ಉದ್ದೇಶಿಸಲಾಗಿವೆ. ಆದ್ದರಿಂದ ನಾವು ಇನ್ನೂ ಹೆಚ್ಚಾಗಿ ಕೋಪಗೊಳ್ಳುತ್ತಿದ್ದೇವೆ ಅಥವಾ ನಮ್ಮ ಕೋಪ ಕಡಿಮೆಯಾಗಿದೆಯೇ ಎಂದು ನೋಡಲು ನಾವೇ ಅತ್ಯುತ್ತಮ ತೀರ್ಪುಗಾರರಾಗಿರುತ್ತೇವೆ.
ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ತತ್ವವೆಂದರೆ ಜೀವನದಲ್ಲಿ ಏರಿಳಿತಗಳು ಇರುತ್ತವೆ, ಆದ್ದರಿಂದ ಪ್ರಗತಿ ಎಂದಿಗೂ ರೇಖಾತ್ಮಕವಾಗಿರುವುದಿಲ್ಲ. ಇದು ದಿನದಿಂದ ದಿನಕ್ಕೆ ಏರುತ್ತಾ ಹೋಗುವುದಿಲ್ಲ. ನಾವು ವಿಮೋಚನೆಗೊಳ್ಳುವವರೆಗೆ, ಅದು ಮೇಲೆ, ಕೆಳಗೆ ಹೋಗುತ್ತಲೇ ಇರುತ್ತದೆ. ನಾವು ದೀರ್ಘಕಾಲ ಅಭ್ಯಾಸ ಮಾಡುತ್ತಿದ್ದರೂ ಮತ್ತು ಸಾಮಾನ್ಯವಾಗಿ ಕೋಪಗೊಳ್ಳದಿದ್ದರೂ, ನಾವು ಕೆಲವೊಮ್ಮ ಕೋಪಗೊಳ್ಳುತ್ತೇವೆ. ಆದರೆ ಇದು ನಿರುತ್ಸಾಹಗೊಳ್ಳುವಂತಹ ವಿಷಯವಲ್ಲ. ಒಂದೆಡೆ, ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಶ್ರಮಿಸಬೇಕು, ಆದರೆ ಮತ್ತೊಂದೆಡೆ, ನಮ್ಮಿಂದ ತಪ್ಪಾದಾಗ, ನಮ್ಮನ್ನು ನಾವು ತಪ್ಪಿತಸ್ಥರೆಂದು ಭಾವಿಸಿಕೊಂಡು ಶಿಕ್ಷಿಸಿಕೊಳ್ಳಬಾರದು. ನಾವು ಮಾಡಿರುವ ಪ್ರಗತಿಯನ್ನು ಅಂದಾಜಿಸುವಾಗ, ನಾವು ಕೇವಲ ಒಂದು ವಾರವಲ್ಲ, ಐದು ವರ್ಷಗಳ ಅವಧಿಯನ್ನು ನೋಡಬೇಕು ಎಂದು ಪರಮಪೂಜ್ಯರಾದ ದಲೈ ಲಾಮಾ ಅವರು ಹೇಳುತ್ತಾರೆ. ಐದು ವರ್ಷಗಳ ಹಿಂದೆ ನಾವು ಹೇಗೆ ವ್ಯವಹರಿಸಿದ್ದೆವು ಎಂಬುದನ್ನು ಪ್ರಸ್ತುತಕ್ಕೆ ಹೋಲಿಸಿದರೆ, ನಮ್ಮ ಪ್ರಗತಿಯನ್ನು ನಾವು ಸ್ಪಷ್ಟವಾಗಿ ನೋಡಬಹುದು.
ಸಾರಾಂಶ
ಧ್ಯಾನ ಮಾಡಲು ಯಾವುದೇ ವಿಶೇಷ ಸ್ಥಳದ ಅಗತ್ಯವಿಲ್ಲ, ಒಂದು ಶಾಂತ ಮತ್ತು ಸ್ವಚ್ಛವಾಗಿರುವ ಜಾಗವಿದ್ದರೆ ಸಾಕು, ಇದು ಲಭ್ಯವಿಲ್ಲದಿದ್ದರೂ ಪರವಾಗಿಲ್ಲ. ನನ್ನ ಸ್ನೇಹಿತರೊಬ್ಬರು ತಮ್ಮ ತಾಯಿಯೊಂದಿಗೆ ಚಿಕ್ಕ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಮೂಲತಃ ಒಂದು ಕೋಣೆ ಇತ್ತು, ಮತ್ತು ಅಲ್ಲಿ ಅವರ ತಾಯಿಯ ದೂರದರ್ಶನ ಮತ್ತು ರೇಡಿಯೊ ಇತ್ತು, ಮತ್ತು ಅವರು ಧ್ಯಾನ ಮಾಡಲು ಅಥವಾ ಅಂತಹದ್ದೇನಾದರೂ ಮಾಡಲು ಪ್ರಯತ್ನಿಸಿದರೆ, ಆಕೆಯ ತಾಯಿ ಅಸಮಾಧಾನಗೊಳ್ಳುತ್ತಿದ್ದರು. ಅವರಿಗೆ ಕೇವಲ ಶೌಚಾಲಯದ ಮೇಲೆ ಕುಳಿತಾಗ ಧ್ಯಾನಿಸಲಾಗುತ್ತಿತ್ತು. ಅಲ್ಲೇ ಅವರು ಪ್ರತಿದಿನ ತಮ್ಮ ಅಭ್ಯಾಸವನ್ನು ಮಾಡುತ್ತಿದ್ದರು ಮತ್ತು ಅದು ಕೆಲಸಮಾಡಿತು. ನಿಮಗೆ ಮೇಣದಬತ್ತಿಗಳು ಅಥವಾ ಧೂಪದ್ರವ್ಯ ಅಥವಾ ಅಂತಹ ಯಾವುದೇ ವಸ್ತುಗಳ ಅಗತ್ಯವಿಲ್ಲ - ಅವು ಕೇವಲ "ವಸ್ತು”ಗಳಾಗಿರುತ್ತವೆ. ಮಹತ್ವದ ವಿಷಯವು, ನಮ್ಮ ಮನಸ್ಸಿನೊಂದಿಗೆ ನಾವು ಏನು ಮಾಡುತ್ತಿದ್ದೇವೆ ಎಂಬುದಾಗಿರುತ್ತದೆ, ಮತ್ತು ಧ್ಯಾನವು ಒಂದು ನಿರ್ದಿಷ್ಟ ಮನಸ್ಥಿತಿಯನ್ನು ಅಭ್ಯಾಸ ಮಾಡುವುದಾಗಿರುತ್ತದೆ, ಇದನ್ನು ನಾವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮಾಡಬಹುದು. ನಾವು ಸುರಂಗಮಾರ್ಗ ಅಥವಾ ಬಸ್‌ನಲ್ಲಿರುವಾಗ, ಕೆಲವು ಮನಸ್ಥಿತಿಗಳನ್ನು ಅಭಿವೃದ್ಧಿಪಡಿಸುವುದು ಇನ್ನೂ ಸುಲಭವಾಗಬಹುದು. ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಲು ಬಯಸಿದಾಗ, ಎಲ್ಲರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ದುಃಖವನ್ನು ಬಯಸುವುದಿಲ್ಲ ಎಂದು ನೋಡಲು, ನಮ್ಮ ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತುಕೊಂಡು ಜನರನ್ನು ಕಲ್ಪಿಸಿಕೊಳ್ಳುವುದಕ್ಕಿಂತ, ಕಿಕ್ಕಿರಿದ ಬಸ್ ಉತ್ತಮ ಸ್ಥಳವಾಗಿರುತ್ತದೆ ಅಲ್ಲವೇ?
ಧ್ಯಾನದ ಅಭ್ಯಾಸದಲ್ಲಿ ಮುಖ್ಯವಾದುದು ನಾವು ಅದನ್ನು ಪ್ರತಿದಿನ ತಪ್ಪದೆ ಮಾಡುವುದಾಗಿರುತ್ತದೆ. ನಿಮ್ಮ ಹಲ್ಲುಗಳನ್ನು ಉಜ್ಜಲು ಅಥವಾ ಶೌಚಾಲಯಕ್ಕೆ ಹೋಗುವುದನ್ನು ಮರೆಯುವುದಿಲ್ಲ, ಹಾಗೆಯೇ ನೀವು ಧ್ಯಾನಿಸಲು ಮರೆಯಬಾರದು. ದಿನಕ್ಕೆ ಐದು ನಿಮಿಷಗಳಾದರೂ ಪರವಾಗಿಲ್ಲ, ಅದನ್ನು ನಾವು ನಮ್ಮ ಜೀವನದ ನಿರಂತರ ಭಾಗವನ್ನಾಗಿ ಮಾಡಿಕೊಳ್ಳಬೇಕು. ನಾವು ಯಾರೇ ಆಗಿರಲಿ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು, ಬೆಳಿಗ್ಗೆ ಐದು ನಿಮಿಷ ಮುಂಚಿತವಾಗಿ ಎಚ್ಚರಗೊಳ್ಳಬಹುದು. ಇದು ಒಂದು ಅಗ್ನಿಪರೀಕ್ಷೆಯಾಗಿರಬೇಕಿಲ್ಲ, ಬದಲಿಗೆ ಇದು ಹೆಚ್ಚಿನ ಸ್ಥಿರತೆಯನ್ನು ಸೇರಿಸಬಹುದು - ಮುಂಬರುವ ದಿನವು ಎಷ್ಟೇ ಹುಚ್ಚುತನದಿಂದ ಕೂಡಿರಲಿ, ನೀವು ಈ ಸಮಯವನ್ನು ನಿಮಗಾಗಿ ಇರಿಸುತ್ತೀರಿ ಮತ್ತು ಅದು ನಿರಂತರತೆಯನ್ನು ಒದಗಿಸುತ್ತದೆ.