ಧ್ಯಾನವು ಮೂರು ಹಂತಗಳಿರುವ ಪ್ರಕ್ರಿಯೆಯ ಭಾಗವಾಗಿರುವುದನ್ನು ನಾವು ತಿಳಿದುಕೊಂಡಿದ್ದೇವೆ, ಅದು ಬೋಧನೆಗಳನ್ನು ಆಲಿಸುವುದು, ಅವುಗಳ ಬಗ್ಗೆ ಯೋಚಿಸುವುದು ಮತ್ತು ನಂತರ ಅವುಗಳನ್ನು ಧ್ಯಾನಿಸುವುದಾಗಿರುತ್ತದೆ. ಮೂರನೇ ಹಂತವಾದ ಧ್ಯಾನವು, ನಮ್ಮ ಜೀವನದಲ್ಲಿ ಬೋಧನೆಗಳನ್ನು ಹೇಗೆ ಸಂಯೋಜಿಸುತ್ತೇವೆ ಎಂಬುದರ ಬಗ್ಗೆಯಾಗಿದ್ದು, ಅವುಗಳನ್ನು ಪುನರಾವರ್ತನೆಯ ಮೂಲಕ ಅಳವಡಿಸಿಕೊಳ್ಳಬಹುದು. ಮೂಲಭೂತವಾಗಿ, ನಾವು ಸಾಧಿಸಲು ಬಯಸುವ ಸಕಾರಾತ್ಮಕ ಮನಸ್ಥಿತಿಯನ್ನು ಪುನರಾವರ್ತಿಸುವ ಮೂಲಕ ನಿರ್ಮಿಸುತ್ತೇವೆ, ಹೀಗೆ ಮಾಡುವುದರಿಂದ ಅದು ಅಭ್ಯಾಸವಾಗುತ್ತದೆ.
ನಾವು ಬೋಧನೆಗಳನ್ನು ಆಲಿಸುತ್ತೇವೆ ಮತ್ತು ಇದರಿಂದ ನಾವು ವಿವೇಚನೆಯ ಅರಿವನ್ನು ಪಡೆಯುತ್ತೇವೆ, ಆಗ ನಾವು "ಹೌದು, ಇದು ಬುದ್ಧನ ಬೋಧನೆ" ಎಂದು ಪ್ರತ್ಯೇಕಿಸಬಹುದು ಮತ್ತು ಅದರ ಬಗ್ಗೆ ಖಚಿತವಾಗಿರಬಹುದು. ನಾವು ಬೋಧನೆಗಳೊಂದಿಗೆ ಪೂರ್ವಭಾವಿಯಾಗಿ ಸಂಬಂಧಿಸುವುದನ್ನು ಗಮನಿಸುತ್ತೇವೆ; ನಾವು ಎಲ್ಲಾ ಬೋಧನೆಗಳನ್ನು ಅರ್ಥಮಾಡಿಕೊಳ್ಳಬೇಕಾಗಿಲ್ಲ, ಆದರೆ ಕನಿಷ್ಠಪಕ್ಷ ನಮ್ಮಲ್ಲಿ ಪ್ರೇರಣೆ ಮತ್ತು ಆಸಕ್ತಿಯಿರುವುದರಿಂದ, ನಾವು ಸಾಬೀತುಪಡಿಸುವವರೆಗೆ ಅವುಗಳನ್ನು ನಿಜವೆಂದು ಭಾವಿಸುತ್ತೇವೆ. ಏನಾದರೂ ನಿಜವಲ್ಲ ಎಂದು ನಾವು ಕಂಡುಕೊಂಡರೆ, ನಾವು ಅದನ್ನು ಮರೆತುಬಿಡಬಹುದು. ಆದರೆ ಒಂದನ್ನು ನಿಜವೆಂದು ಪೂರ್ವಭಾವಿಯಾಗಿ ಕಲ್ಪಿಸಿಕೊಳ್ಳಲು, ಅದು ನಿಜವಾಗಿದೆಯೇ ಇಲ್ಲವೇ ಎಂದು ನೋಡಲು, ಅದನ್ನು ಪರೀಕ್ಷಿಸುವ ಮುಕ್ತ ಮನಸ್ಸನ್ನು ಹೊಂದಿರುವುದು ಮುಖ್ಯವಾಗಿರುತ್ತದೆ. ಮತ್ತು ವಿಟಮಿನ್‌ಗಳಂತೆಯೇ ಇವು ಪ್ರಯೋಜನಕಾರಿ ಎಂದು ನಾವು ಭಾವಿಸಬೇಕು. ನೀವು ವಿಷವನ್ನು, "ಇದು ನಿಜವಾಗಿಯೂ ನನ್ನನ್ನು ಕೊಲ್ಲುತ್ತದೆಯೇ ಎಂದು ನೋಡಲು ನಾನು ಅದನ್ನು ಪರೀಕ್ಷಿಸುತ್ತೇನೆ" ಎಂದು ಯೋಚಿಸಿ ತೆಗೆದುಕೊಳ್ಳುವುದಿಲ್ಲ, ಆದರೆ ನೀವು ವಿಟಮಿನ್ಗಳನ್ನು ಹಾಗೆ ಸೇವಿಸುತ್ತೀರಿ. ಆದ್ದರಿಂದ ಇದು ಪ್ರಯೋಜನಕಾರಿ ಎಂದು ನಾವು ಭಾವಿಸುತ್ತೇವೆ, ಏಕೆಂದರೆ ಅನೇಕರು ಹೀಗೆ ಹೇಳಿರುವುದರಿಂದ, ನಾವೇ ಅದನ್ನು ಪ್ರಯತ್ನಿಸಿ ನೋಡಬಹುದು.
ನಾವು ಬೋಧನೆಗಳ ಬಗ್ಗೆ ಯೋಚಿಸುವಾಗ, "ಚಿಂತನೆಯಿಂದ ಬರುವ ವಿವೇಚನೆಯ ಅರಿವು" ಎಂಬ ಪ್ರಕ್ರಿಯೆಯ ಅಂತ್ಯವನ್ನು ತಲುಪಲು ನಾವು ಅವುಗಳನ್ನು ಪರಿಶೀಲಿಸುತ್ತಿರುತ್ತೇವೆ. ಈ ಹಂತದಲ್ಲಿ ನಾವು ಬೋಧನೆಯನ್ನು ಅರ್ಥಮಾಡಿಕೊಂಡಿದ್ದೇವೆ, ಬುದ್ಧನು ಬೋಧಿಸಿದ್ದು ನಿಜ, ಅದು ನಿಜವಾಗಿಯೂ ಪ್ರಯೋಜನಕಾರಿಯಾಗಿದೆ ಮತ್ತು ನಾವು ಅದನ್ನು ಸಾಧಿಸಲು ಬಯಸುತ್ತೇವೆ ಮತ್ತು ಅದನ್ನು ಸಾಧಿಸಲು ನಿಜವಾಗಿಯೂ ಸಾಧ್ಯ ಎಂದು ನಮಗೆ ಸಂಪೂರ್ಣವಾಗಿ ಮನವರಿಕೆಯಾಗಿರುತ್ತದೆ. ಅನೇಕರಂತೆ, ಜನರು ಈ ಮೇಲಿನ ಹಂತಗಳನ್ನು ತೊರೆದಾಗ, ಸ್ವಲ್ಪ ಸಮಯದ ನಂತರ ಅವರು "ನಿರ್ಣಾಯಕ ಅಲೆದಾಡುವಿಕೆ” ಯಲ್ಲಿರುತ್ತಾರೆ, ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ನಿಜವಾಗಿಯೂ ಸಾಧ್ಯವೇ ಎಂಬುದನ್ನು ಅವರು ಖಚಿತವಾಗಿ ತಿಳಿದಿರುವುದಿಲ್ಲ. ತದನಂತರ ಅವರು ಅದನ್ನು ತೊರೆದುಬಿಡುತ್ತಾರೆ.
ವಿಮೋಚನೆ ಎಂದರೇನು?
ನಾವು ವಿಮೋಚನೆ ಅಥವಾ ಜ್ಞಾನೋದಯ ಮತ್ತು ಅವುಗಳನ್ನು ಸಾಧಿಸುವ ವಿಧಾನಗಳ ಬಗ್ಗೆ ಓದುವಾಗ, ವಿಮೋಚನೆಯ ಅರ್ಥವೇನೆಂದು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಪ್ರಬುದ್ಧರಾಗುವುದರ ಅರ್ಥವೇನು? ಮತ್ತು ಅದರ ನಂತರ ಏನಾಗುತ್ತದೆ? ಬುದ್ಧನು ಸರ್ವಜ್ಞ, ಎಲ್ಲವನ್ನೂ ಸರಿಯಾಗಿ ಮತ್ತು ಏಕಕಾಲದಲ್ಲಿ ತಿಳಿದಿರುತ್ತಾನೆ ಎಂದು ಬೋಧನೆಗಳು ಹೇಳುತ್ತವೆ. ಒಬ್ಬ ಬುದ್ಧನು, ಪ್ರತಿಯೊಂದು ಜೀವಿಯ ಬಗ್ಗೆಯೂ ಸಮಾನ ಕಾಳಜಿಯನ್ನು ಹೊಂದಿರುತ್ತಾರೆ ಮತ್ತು ಅವರಿಗೆ ಪ್ರತಿಯೊಂದರೊಂದಿಗೂ ಸಂಪೂರ್ಣವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಒಬ್ಬ ಬುದ್ಧನು ಎಲ್ಲರಿಗೂ ಉತ್ತಮವಾದ ರೀತಿಯಲ್ಲಿ ಸಹಾಯ ಮಾಡುತ್ತಾರೆ.
ಇದು ಸಾಧ್ಯವೇ ಅಥವಾ ಇದೊಂದು ಕಟ್ಟುಕಥೆಯೇ? ಇದು ಹಾಸ್ಯಾಸ್ಪದವೆನಿಸಿದರೆ, ಅದನ್ನು ನಾವೇಕೆ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ? ಇದು ಒಂದು ಕಟ್ಟು ಕಥೆ ಎಂದು ನಾವು ಭಾವಿಸಿದರೆ, ಅದನ್ನು ಸಾಧಿಸಲು ಸಾಧ್ಯವಿದೆ ಎಂದು ನಮಗೆ ನಿಸ್ಸಂಶಯವಾದ ನಂಬಿಕೆಯಿಲ್ಲ. ಬೌದ್ಧಧರ್ಮದಲ್ಲಿ ಚರ್ಚಿಸಲಾದ ಗುರಿಗಳನ್ನು ನಾವು ವಿಮರ್ಶಾತ್ಮಕವಾಗಿ ನೋಡಬೇಕು ಮತ್ತು ನಮ್ಮ ಸ್ವಂತ ಪ್ರೇರಣೆಯನ್ನು ಪರಿಶೀಲಿಸಬೇಕು.
ನಮ್ಮ ಗುರಿ ಏನು?
"ಪ್ರೇರಣೆ" ಎಂಬ ಪದಕ್ಕೆ ಬೌದ್ಧಧರ್ಮದಲ್ಲಿ ಬಹಳ ನಿರ್ದಿಷ್ಟವಾದ ಅರ್ಥವಿದೆ. "ನಿಮ್ಮ ಪ್ರೇರಣೆಯನ್ನು ಮರುದೃಢೀಕರಿಸಿ ಅಥವಾ ಉತ್ಪಾದಿಸಿ" ಎಂದು ನಾವು ಸಾಮಾನ್ಯವಾಗಿ ಹೇಳುತ್ತೇವೆ, ಇದರಲ್ಲಿ ಎರಡು ಭಾಗಗಳಿವೆ. ಒಂದು ಗುರಿ - ನಾವು ಹೊಂದಿರುವ ಗುರಿ - ಮತ್ತು ಇನ್ನೊಂದು, ಆ ಗುರಿಯನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸುವ ಭಾವನೆ ಅಥವಾ ಮನೋಭಾವನೆ. ಸಾಮಾನ್ಯವಾಗಿ ಇಂಗ್ಲಿಷ್‌ನಲ್ಲಿ, ಪ್ರೇರಣೆ ಎಂಬ ಪದವು, ಎರಡನೇ ಭಾಗವನ್ನು ಹೆಚ್ಚಾಗಿ ಅರ್ಥೈಸುತ್ತದೆ, ಅಂದರೆ ನಮ್ಮನ್ನು ಪ್ರೇರೇಪಿಸುವ ವಿಷಯವನ್ನು ಅರ್ಥೈಸುತ್ತದೆ.
ಬೌದ್ಧ ಬೋಧನೆಗಳಾದ "ಧರ್ಮ"ವನ್ನು ಅಭ್ಯಾಸ ಮಾಡುವ ಬಹಳಷ್ಟು ವ್ಯಕ್ತಿಗಳು ಪ್ರಾಮಾಣಿಕರಾಗಿದ್ದಲ್ಲಿ, ಅವರ ಗುರಿಯು ಈ ಜೀವನವನ್ನು ಸ್ವಲ್ಪ ಸುಲಭ ಮತ್ತು ಹೆಚ್ಚು ಸಂತೋಷದಾಯಕವಾಗಿಸುವುದಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಒಳ್ಳೆಯದೇ - ಇದನ್ನು ನಾನು “ನಿಜವಾದ ಧರ್ಮ" ಎನ್ನುವುದಕ್ಕಿಂತ "ಧರ್ಮ- ಲೈಟ್" ಎಂದು ಕರೆಯುತ್ತೇನೆ. ಇದು ಮೊದಲ ಹೆಜ್ಜೆಯಾಗಿರುತ್ತದೆ. ನಿಜವಾದ ವಿಷಯವು ಉತ್ತಮ ಪುನರ್ಜನ್ಮಕ್ಕಾಗಿ ಕೆಲಸ ಮಾಡುವುದಾಗಿರುತ್ತದೆ, ಅಂದರೆ ಈ ಜೀವಿತಾವಧಿಯ ನಂತರ ಅಮೂಲ್ಯವಾದ ಮಾನವ ಪುನರ್ಜನ್ಮ ಜೀವಿತಾವಧಿಯನ್ನು ಮುಂದುವರಿಸುವುದಾಗಿರುತ್ತದೆ. ಆದರೆ ನಿಮಗೆ ಪುನರ್ಜನ್ಮದಲ್ಲಿ ನಂಬಿಕೆ ಇರದಿದ್ದರೆ, ಒಳ್ಳೆಯ ಪುನರ್ಜನ್ಮವನ್ನು ಪಡೆಯುವ ಗುರಿಯನ್ನು ನೀವು ಹೇಗೆ ತಾನೆ ಪ್ರಾಮಾಣಿಕವಾಗಿ ಹೊಂದಬಹುದು? ಪುನರ್ಜನ್ಮವನ್ನು ಅರ್ಥಮಾಡಿಕೊಳ್ಳಲು, ನಾವು ಅದನ್ನು ಅರ್ಥಮಾಡಿಕೊಳ್ಳಬೇಕು, ಮನಸ್ಸಿನ ನಿರಂತರತೆಯ ಸ್ವರೂಪ, ಸ್ವಯಂ ಸ್ವಭಾವ, ಇತ್ಯಾದಿಯನ್ನು ಅರ್ಥಮಾಡಿಕೊಳ್ಳಬೇಕು. ವಾಸ್ತವದಲ್ಲಿ, ಉತ್ತಮ ಪುನರ್ಜನ್ಮದ ಗುರಿಯಿಡುವುದು ಬೌದ್ಧಧರ್ಮಕ್ಕೆ ಪ್ರತ್ಯೇಕವಾಗಿರುವುದಿಲ್ಲ. ಕ್ರಿಶ್ಚಿಯನ್ನರು ಮತ್ತು ಇತರ ಧರ್ಮಗಳು ಸಹ ಇದನ್ನು ಗುರಿಯಾಗಿಸಿಕೊಂಡಿರುತ್ತವೆ; ಕ್ರಿಶ್ಚಿಯನ್ ಧರ್ಮದ ವಿಷಯದಲ್ಲಿ, ಇದು ಸ್ವರ್ಗದಲ್ಲಿನ ಪುನರ್ಜನ್ಮವಾಗಿರುತ್ತದೆ.
ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ವಿಮೋಚನೆಯನ್ನು ಸಾಧಿಸುವುದು ಮುಂದಿನ ಗುರಿಯಾಗಿರುತ್ತದೆ. ಹಿಂದೂ ಧರ್ಮಗಳು ಸಹ ಇದನ್ನೇ ಗುರಿಯಾಗಿಸಿಕೊಂಡಿರುತ್ತವೆ. ಆದ್ದರಿಂದ ಬೌದ್ಧಧರ್ಮದಲ್ಲಿನ ಈ ವಿಮೋಚನೆಯ ಅರ್ಥವೇನು ಮತ್ತು ಅದನ್ನು ಸಾಧಿಸುವ ವಿಧಾನಗಳು ಯಾವುವು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆನಂತರ, ಸಹಜವಾಗಿ, ಬುದ್ಧನ ಪ್ರಬುದ್ಧ ಸ್ಥಿತಿಯನ್ನು ಗುರಿಯಾಗಿಸುವುದು ಅಂತಿಮ ಗುರಿಯಾಗಿರುತ್ತದೆ - ಇದು ಬೌದ್ಧಧರ್ಮಕ್ಕೆ ವಿಶಿಷ್ಟವಾಗಿರುತ್ತದೆ.
ಹೆಜ್ಜೆ ಮೇಲೆ ಹೆಜ್ಜೆ
ನಾವು ಬೌದ್ಧ ಬೋಧನೆಗಳನ್ನು ನೋಡಿದಾಗ, ಅವು ಹಂತಗಳಲ್ಲಿವೆ ಎಂದು ನಾವು ಗಮನಿಸಬಹುದು. ಒಂದು ಒಳನೋಟವು ಇನ್ನೊಂದನ್ನು ಅನುಸರಿಸುತ್ತದೆ, ಮತ್ತು ಇದನ್ನು ಗೌರವಿಸುವುದು ಮುಖ್ಯ ಏಕೆಂದರೆ ನಾವು ಯಾವುದೇ ಆಧಾರವಿಲ್ಲದೆ "ನಾನು ಬುದ್ಧನಾಗಲು ಬಯಸುತ್ತೇನೆ, ಆಗ ನಾನು ಎಲ್ಲಾ ಪ್ರಜ್ಞಾಪೂರ್ವಕ ಜೀವಿಗಳಿಗೆ ಸಹಾಯ ಮಾಡಬಹುದು" ಎಂದು ಹೇಳಿದರೆ, ಅವು ಕೇವಲ ಅರ್ಥಹೀನ ಪದಗಳಾಗಿರುತ್ತವೆ. ವಿಶ್ವದಲ್ಲಿರುವ ಪ್ರತಿಯೊಂದು ಕೀಟವನ್ನು ವಿಮೋಚನೆಗೊಳಿಸಲು ಮತ್ತು ಜ್ಞಾನೋದಯಕ್ಕೆ ತರುವ ಗುರಿಯನ್ನು ನಾವು ನಿಜವಾಗಲೂ ಹೊಂದಿದ್ದೇವೆಯೇ? ಬಹುಷಃ ಇಲ್ಲ. ವಾಸ್ತವಿಕವಾಗಿ ಇದನ್ನು ಗುರಿಯಾಗಿಸಲು ಮತ್ತು ಇದನ್ನು ನಿಜವಾಗಿಯೂ ಅರ್ಥೈಸಲು, ಇದು ಊಹಿಸಲಾಗದಂತಹ ಮನಸ್ಸಿನ ವ್ಯಾಪ್ತಿಯನ್ನು ಬಯಸುತ್ತದೆ, ಹೀಗಾಗಿ ನಾವು ಅದನ್ನು ಕ್ರಮೇಣವಾಗಿ ನಿರ್ಮಿಸಬೇಕಾಗಿದೆ. ಇದನ್ನು ನಾವು ಬೋಧನೆಗಳನ್ನು ಪರೀಕ್ಷಿಸುವ ಮೂಲಕ ಮಾಡಬೇಕಾಗಿದೆ, ಮತ್ತು ಇದನ್ನು ನಾನು "ನಾಲ್ಕು ಮೂಲತತ್ವಗಳು" ಎಂದು ಭಾಷಾಂತರಿಸಿದ್ದು, ಇವುಗಳು ಒಂದು ವಿಷಯವನ್ನು ಪರೀಕ್ಷಿಸುವ ನಾಲ್ಕು ದೃಷ್ಟಿಕೋನಗಳಾಗಿರುತ್ತವೆ. ನಾವು ಧರ್ಮದ ಅತ್ಯಂತ ಮೂಲಭೂತ ಅಂಶಗಳೊಂದಿಗೆ ಪ್ರಾರಂಭಿಸುತ್ತೇವೆ.
ಉದಾಹರಣೆಯಾಗಿ, ನಾಲ್ಕು ಮೂಲತತ್ವಗಳನ್ನು ಬಳಸಿ, ಸಾವು ಮತ್ತು ಅಶಾಶ್ವತತೆಯ ಬಗ್ಗೆ ಯೋಚಿಸೋಣ ಮತ್ತು ಧ್ಯಾನಿಸೋಣ. ಬಹುಶಃ ನಾನು ಇದನ್ನು ಸ್ವಲ್ಪ ಸ್ವಾರ್ಥ ಕಾರಣದಿಂದ ಆರಿಸಿದ್ದೇನೆ, ಏಕೆಂದರೆ ನನ್ನ ಹತ್ತಿರದ ಸ್ನೇಹಿತರೊಬ್ಬರು ಕಳೆದ ವಾರ ನಿಧನಗೊಂಡರು. ಅದು ಇರಲಿ, ಈ ನಾಲ್ಕು ಮೂಲತತ್ವಗಳೆಂದರೆ:
- ಅವಲಂಬನೆಯ ಮೂಲತತ್ವ - ನಾವು ಸೃಷ್ಟಿಸಲು ಬಯಸುವ ಮನಸ್ಸಿನ ಸ್ಥಿತಿಯಾದ ಸಾವಿನ ಅರಿವು ಯಾವುದನ್ನು ಅವಲಂಬಿಸಿರುತ್ತದೆ?
- ಕ್ರಿಯಾತ್ಮಕತೆಯ ಮೂಲತತ್ವ - ನಾವು ಈ ಮನಸ್ಥಿತಿಯನ್ನು ಸಾಧಿಸಿದರೆ, ಅದು ಏನು ಮಾಡುತ್ತದೆ ಮತ್ತು ಅದರ ಅನುಕೂಲಗಳು ಅಥವಾ ಅನಾನುಕೂಲಗಳು ಯಾವುವು?
- ಕಾರಣದ ಮೂಲತತ್ವ - ಇದು ನಿಜವೇ ಎಂದು ನಿರ್ಧರಿಸಲು ನಾವು ಬೋಧನೆಯನ್ನು ಪರಿಶೀಲಿಸಿದರೆ, ಅದು ಬುದ್ಧನ ಉಳಿದ ಬೋಧನೆಗಳೊಂದಿಗೆ ಸರಿಹೊಂದುತ್ತದೆಯೇ? ಇದು ತಾರ್ಕಿಕವಾಗಿದೆಯೇ? ನಾವು ಅದನ್ನು ಅಭ್ಯಸಿಸಿದಾಗ, ಅದು ಹೇಳಿದ ಪರಿಣಾಮವನ್ನು ನೀಡುತ್ತದೆಯೇ?
- ಪ್ರಕೃತಿಯ ಮೂಲತತ್ವ - ಸಾವು ವಸ್ತುಗಳ ಸ್ವರೂಪದ ಉದಾಹರಣೆಯಾಗಿರುತ್ತದೆಯೇ? ಎಲ್ಲರೂ ಸಾವನಪ್ಪುತ್ತಾರೆಯೇ?
ಇಲ್ಲ ನಾವು ಏನು ಮಾಡುತ್ತೇವೆಯೆಂದರೆ, ಸಾವಿನಂತಹ ಒಂದು ನಿರ್ದಿಷ್ಟ ಬೋಧನೆಯೊಂದನ್ನು ಕೈಗೆತ್ತಿಕೊಂಡು, ಅದನ್ನು ಈ ನಾಲ್ಕು ಮೂಲತತ್ವಗಳ ದೃಷ್ಟಿಕೋನದಿಂದ ವಿಶ್ಲೇಷಿಸುತ್ತೇವೆ, ಮತ್ತು ಹೀಗೆ ಮಾಡಲು ನಮಗೆ ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳುತ್ತೇವೆ. ನೀವು ಇದಕ್ಕಾಗಿ ಹತ್ತು ನಿಮಿಷಗಳು ಕಳೆಯಬೇಕು, ಮತ್ತೊಂದರ ಮೇಲೆ ಇಪ್ಪತ್ತು ನಿಮಿಷಗಳನ್ನು ಕಳೆಯಬೇಕು ಎಂದು ಹೇಳುವ ಯಾವುದೇ ಸೂತ್ರವಿಲ್ಲ. ಆದರೆ ಬೇಗನೇ ಮುಂದುವರೆಯದಿರುವುದು ಒಳ್ಳೆಯದು, ಏಕೆಂದರೆ ಆಗ ನೀವು ಕೇಂದ್ರೀಕರಿಸುತ್ತಿರುವ ವಿಷಯಕ್ಕೆ ಯಾವುದೇ ಅರ್ಥವಿರುವುದಿಲ್ಲ. ಒಂದು ವಿಷಯದಲ್ಲಿ ಮಗ್ನರಾಗಿ, ಅದರೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಒಳ್ಳೆಯದಾಗಿರುತ್ತದೆ.
ಸಂಪೂರ್ಣ ತಿಳುವಳಿಕೆಯನ್ನು ಪಡೆಯುವುದು
ಸರಳ ಮಾತುಗಳಲ್ಲಿ ಹೇಳುವುದಾದರೆ, ನಾವು ವಿಷಯವನ್ನು ಅರ್ಥಮಾಡಿಕೊಂಡಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಲು ನಾವು ಬಯಸುತ್ತೇವೆ, ಮತ್ತು ನಾವು ವಿಷಯಗಳ ಬಗ್ಗೆ ಅರ್ಥಮಾಡಿಕೊಳ್ಳದೇ ಹಿಂದು-ಮುಂದು ನೋಡಲು ಬಯಸುವುದಿಲ್ಲ. ಇದಕ್ಕಾಗಿಯೇ ಟಿಬೆಟಿಯನ್ನರು ಚರ್ಚೆಯ ಶೈಕ್ಷಣಿಕ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ, ಇದು ನಮ್ಮ ತಿಳುವಳಿಕೆಯನ್ನು ಪ್ರಶ್ನಿಸುವಂತೆ ಉತ್ತೇಜಿಸುತ್ತದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು - ನೀವು ತರಗತಿಯಲ್ಲಿ ಹಿಂದಿನ ಮೂಲೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ಒಬ್ಬ ವ್ಯಕ್ತಿಯು ಏನನ್ನಾದರೂ ಹೇಳುತ್ತಾರೆ, ಮತ್ತು ಎದುರಾಳಿಯು ಅದನ್ನು ಒಪ್ಪಿಕೊಳ್ಳಬೇಕು ಅಥವಾ ತಿರಸ್ಕರಿಸಬೇಕು. ಈ ಎಲ್ಲದರ ಮುಖ್ಯ ಉದ್ದೇಶವು ಸರಿಯಾದ ಉತ್ತರವನ್ನು ಕಂಡುಹಿಡಿಯುವುದಾಗಿರುವುದಿಲ್ಲ, ಬದಲಿಗೆ ಒಂದು ವಿಷಯದ ಬಗೆಗಿರುವ ನಮ್ಮ ತಿಳುವಳಿಕೆಯಲ್ಲಿನ ಖಚಿತತೆಯನ್ನು ಪಡೆಯುವುದಾಗಿರುತ್ತದೆ. ಇದೊಂದು ಅತ್ಯುತ್ತಮ ವಿಧಾನವಾಗಿದೆ, ಏಕೆಂದರೆ ಇತರರು ನಮ್ಮ ಆಲೋಚನೆಯನ್ನು ನಮಗಿಂತ ಹೆಚ್ಚಾಗಿ ಸವಾಲು ಮಾಡುತ್ತಾರೆ. ಚರ್ಚೆಗಳ ನಡುವೆ, ಇತರರು ತಮ್ಮನ್ನು ತಾವೇ ವಿರೋಧಿಸಲು ಕಾರಣರಾದಾಗ, ಜನರು ಬಹಳಷ್ಟು ಮೋಜು ಮಾಡುತ್ತಾರೆ ಮತ್ತು ನಗುತ್ತಾರೆ ಮತ್ತು ಅಪಾರ ಪ್ರಮಾಣದಲ್ಲಿ ಹುರುಪು ಇರುತ್ತದೆ. ಆದರೆ ಇವೆಲ್ಲವೂ ದುಗುಡವಿಲ್ಲದ ಹಾಸ್ಯದೊಂದಿಗೆ ನಡೆಯುವುದರಿಂದ, ಪ್ರತಿಯೊಬ್ಬರೂ ಅದನ್ನು ಆನಂದಿಸುತ್ತಾರೆ.
ಈ ಕಲಿಕೆಯ ಶೈಲಿಯ ಇನ್ನೊಂದು ಪ್ರಯೋಜನವೆಂದರೆ, ನೀವು ಯಾರೇ ಆಗಿರಲಿ, ಒಂದು ಹಂತದಲ್ಲಿ ನೀವು ನಿಮ್ಮನ್ನು ವಿರೋಧಿಸುತ್ತೀರಿ ಮತ್ತು ಮೂರ್ಖತನದ ಮಾತುಗಳನ್ನು ಆಡುತ್ತೀರಿ, ಇದು ನಮ್ಮ ಅಹಂಕಾರ ಮತ್ತು ಹೆಮ್ಮೆಯನ್ನು ತಗ್ಗಿಸಲು ಒಳ್ಳೆಯದಾಗಿರುತ್ತದೆ. ಇದು ಸಂಕೋಚವನ್ನು ಸಹ ಮೀರಿಸುತ್ತದೆ - ನೀವು ಸಭೆಯ ಮುಂದೆ ವಾದಿಸಲು ಎದ್ದೇಳಲು ಖಂಡಿತವಾಗಿಯೂ ನಾಚಿಕೆಪಡುವಂತಿಲ್ಲ.
ನಾವು ಚರ್ಚೆಯನ್ನು, “ಓಹ್, ಇದು ಬೌದ್ಧಿಕ ವಿಷಯ; ನಾನು ಅರ್ಥಗರ್ಭಿತನಾಗಿರಲು ಮತ್ತು ಧ್ಯಾನಿಸಲು ಬಯಸುತ್ತೇನೆ.” ಎಂದು ಬದಿಗೆ ತಳ್ಳುವಂತಿಲ್ಲ. ಚರ್ಚೆಯು ನಿಮಗೆ ಧ್ಯಾನಿಸಲು ಸಹಾಯ ಮಾಡುತ್ತದೆ, ಇದೇ ಅದರ ಸಂಪೂರ್ಣ ಉದ್ದೇಶವಾಗಿರುತ್ತದೆ. ಚರ್ಚೆಯ ನಂತರ, ನಿಮಗೆ ಯಾವುದೇ ಸಂದೇಹವಿರುವುದಿಲ್ಲ ಮತ್ತು ನಿಮ್ಮ ತಿಳುವಳಿಕೆಯನ್ನು ನೀವು ಖಚಿತಪಡಿಸಿಕೊಳ್ಳುತ್ತೀರಿ, ನಂತರ, ಸಂಪೂರ್ಣ ವಿಶ್ವಾಸದಿಂದ ಈ ಒಳನೋಟವನ್ನು ಸಂಯೋಜಿಸಲು ನೀವು ಧ್ಯಾನಿಸಬಹುದು. ಇಲ್ಲದಿದ್ದರೆ, ನಿಮ್ಮ ಧ್ಯಾನವು ಅಷ್ಟು ದೃಢವಾಗಿರುವುದಿಲ್ಲ. ಸಹಜವಾಗಿ, ನೀವು ಇಲ್ಲಿ ಔಪಚಾರಿಕವಾಗಿ ಪರಸ್ಪರ ಚರ್ಚೆ ಮಾಡದಿರಬಹುದು, ಆದರೆ ಹೆಮ್ಮೆ ಅಥವಾ ಅಹಂಕಾರವಿಲ್ಲದೆ ಮತ್ತು ರಕ್ಷಣಾತ್ಮಕವಾಗಿರದೆ, ಇತರ ವ್ಯಕ್ತಿಯು ನಮ್ಮ ಮೇಲೆ ವೈಯಕ್ತಿಕವಾಗಿ ಆಕ್ರಮಣ ಮಾಡುತ್ತಿದ್ದಾರೆ ಎಂದು ಭಾವಿಸದೆ, ಬೋಧನೆಗಳನ್ನು ಚರ್ಚಿಸುವುದು ಒಳ್ಳೆಯದಾಗಿರುತ್ತದೆ.
ಇನ್ನೂ ಎರಡು ತಾಂತ್ರಿಕ ಬೌದ್ಧ ಪದಗಳೆಂದರೆ "ಒಂದು ಸತ್ಯವನ್ನು ನಿಜವೆಂದು ನಂಬುವುದು," ಮತ್ತು "ದೃಢವಾದ ಮನವರಿಕೆ". ನಾವು ತಪ್ಪಾಗಿರುವ ವಿಷಯವನ್ನು ಸರಿ ಎಂದು ನಂಬಬಹುದು, ಆದ್ದರಿಂದ ನಾವು ಬೋಧನೆಗಳ ಪರೀಕ್ಷೆಯಲ್ಲಿ ಜಾಗರೂಕರಾಗಿದ್ದು, ನಮಗೆ ಸರಿಯಾದ ತಿಳುವಳಿಕೆ ಇಲ್ಲದಿದ್ದಾಗ, ಅದು ಹಾಗಿರುವುದು ಎಂಬ ತೀರ್ಮಾನಕ್ಕೆ ನಾವು ಬರಬಾರದು. ಯಾವುದೇ ವಿಷಯವು ನಮ್ಮ ನಂಬಿಕೆಯನ್ನು ಛಿದ್ರಗೊಳಿಸುವುದಿಲ್ಲ ಎಂದು ನಮಗೆ ಮನವರಿಕೆಯಾದಾಗ ಅದು ದೃಢವಾದ ಮನವರಿಕೆಯಾಗಿರುತ್ತದೆ, ಅದನ್ನೇ ನಾವು ನಿಜವಾಗಿಯೂ ಅಭಿವೃದ್ಧಿಪಡಿಸಬೇಕಾಗಿದೆ.
ಮುಂದೆ ಸಾಗುತ್ತಿರಿ
ಇವೆಲ್ಲವೂ ಮೊಂಡುತನ ಮತ್ತು ಸಂಕುಚಿತ ಮನಸ್ಥಿತಿಯಾಗಿ ವಿರೂಪಗೊಳ್ಳಬಹುದು. ನಾವು ತಪ್ಪು ತಿಳುವಳಿಕೆಯನ್ನು ಪಡೆದುಕೊಂಡಿದ್ದು, ಯಾರೂ ನಮ್ಮನ್ನು ಸರಿಪಡಿಸಲು ಸಾಧ್ಯವಿಲ್ಲದಷ್ಟು ಮೊಂಡರಾಗುತ್ತೇವೆ - ಇದನ್ನು ಕೆಲವೊಮ್ಮೆ "ತಪ್ಪು ದೃಷ್ಟಿಕೋನ" ಎಂದು ಕರೆಯಲಾಗುತ್ತದೆ. ನಾವು ತಪ್ಪಾದ ಒಂದು ವಿಷಯವನ್ನು ಎಷ್ಟು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತೇವೆ ಮತ್ತು ಅದರ ಬಗ್ಗೆ ಎಷ್ಟು ಮೊಂಡುತನವನ್ನು ವ್ಯಕ್ತಪಡಿಸುತ್ತೇವೆ ಎಂದರೆ, ವಿಭಿನ್ನವಾದದನ್ನು ಹೇಳಲು ಪ್ರಯತ್ನಿಸುವವರ ವಿರುದ್ಧ ಪ್ರತಿಕೂಲರಾಗುತ್ತೇವೆ ಮತ್ತು ಅವರ ಮೇಲೆ ಎಗರಾಡುತ್ತೇವೆ.
ನಾವು ಬುದ್ಧರಾಗುವವರೆಗೆ, ನಾವು ವಿಷಯಗಳನ್ನು ಹೆಚ್ಚು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಆದ್ದರಿಂದ ನಮಗೆ ಹೀಗೆ ಯಾವಾಗಲೂ ಹೇಳಲಾಗುತ್ತದೆ, "ನಿಮ್ಮ ತಿಳುವಳಿಕೆಯ ಮಟ್ಟದಿಂದ, ನಿಮ್ಮ ಸಾಧನೆಯ ಮಟ್ಟದಿಂದ ಎಂದಿಗೂ ತೃಪ್ತರಾಗಬೇಡಿ, ಏಕೆಂದರೆ ನೀವು ಬುದ್ಧರಾಗುವವರೆಗೆ ನೀವು ಇನ್ನೂ ಹೆಚ್ಚು ಆಳದ ಮಟ್ಟವನ್ನು ತಲುಪಬಹುದು, ಇನ್ನೂ ಉನ್ನತವಾದ ಸಾಧನೆಯನ್ನು ತಲುಪಬಹುದು." ಆದ್ದರಿಂದ ನಾವು ಸರಿಯಾದ ತಿಳುವಳಿಕೆಯನ್ನು ಹೊಂದಿದ್ದರೂ, ಅದು ಆಳವಾದ ತಿಳುವಳಿಕೆಯಾಗಿರುವುದಿಲ್ಲ. ಪರಮಪೂಜ್ಯ ದಲೈ ಲಾಮಾ ಅವರ ಶಿಕ್ಷಕರಲ್ಲಿ ಒಬ್ಬರಾದ ಟ್ರಿಜಾಂಗ್ ರಿಂಪೋಚೆ ಅವರು ಹೀಗೆ ಹೇಳುತ್ತಿದ್ದರು, "ನಾನು ಲ್ಯಾಮ್-ರಿಮ್ ಚೆನ್-ಮೊ (ಸಾಂಗ್‌ಖಾಪಾ ಅವರ ದಿ ಗ್ರಾಂಡ್ ಪ್ರಸೆಂಟೇಷನ್ ಆಫ್ ದಿ ಗ್ರೇಡೆಡ್ ಸ್ಟೇಜಸ್ ಆಫ್ ದಿ ಪಾತ್ (ಕ್ರಮವಾದ ಮಾರ್ಗದ ಹಂತ-ಹಂತವಾದ ಮಹಾ ಪ್ರಸ್ತುತಿ) - ಮೂಲಭೂತವಾದದ್ದು ಮತ್ತು ಬೃಹತ್ ಪಠ್ಯ) ಅನ್ನು ನೂರು ಸಲ ಓದಿದ್ದೇನೆ, ಮತ್ತು ಪ್ರತಿ ಬಾರಿ ಅದನ್ನು ಓದಿದಾಗ, ನಾನು ವಿಭಿನ್ನವಾದ ಮತ್ತು ಆಳವಾದ ತಿಳುವಳಿಕೆಯನ್ನು ಪಡೆದುಕೊಂಡಿದ್ದೇನೆ.” ಪ್ರಾರಂಭದಲ್ಲಿಯೇ ಸರಿಯಾದ ತಿಳುವಳಿಕೆಯನ್ನು ಪಡೆದರೂ, ನಾವು ಇನ್ನಷ್ಟು ಆಳವಾಗಿ ಹೇಗೆ ಮುಂದುವರಿಯಬೇಕು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಸಾವಿನ ಧ್ಯಾನ
ಈಗ ನಾವು ಸಾವಿನ ಧ್ಯಾನಕ್ಕೆ ಸಂಬಂಧಿಸಿದ ನಾಲ್ಕು ಅಂಶಗಳನ್ನು ನೋಡಬಹುದು, ಅವು ಏನನ್ನು ಉಲ್ಲೇಖಿಸುತ್ತವೆ ಮತ್ತು ಅವುಗಳನ್ನು ಹೇಗೆ ಅನ್ವಯಿಸಬೇಕು ಎಂಬುದರ ಉದಾಹರಣೆಗಳನ್ನು ನಾವು ಪಡೆದುಕೊಳ್ಳಬಹುದು. ಸಹಜವಾಗಿ, ನಾವು ಸಾವಿನ ಬಗ್ಗೆ ಮತ್ತು ಸಾವಿನ ಧ್ಯಾನದ ಬಗ್ಗೆ ಬೋಧನೆಗಳನ್ನು ಸ್ವೀಕರಿಸಿದ ನಂತರವೇ ಹೀಗೆ ಮಾಡುತ್ತೇವೆ. ಸಾವನ್ನು ಪರಿಗಣಿಸುವಾಗ, ನಾವು ಈ ಮೂರು ಮೂಲಭೂತ ಸಂಗತಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ:
- ಸಾವು ಅನಿವಾರ್ಯವಾಗಿರುತ್ತದೆ.
- ಸಾವಿನ ಸಮಯ ಅನಿಶ್ಚಿತವಾಗಿರುತ್ತದೆ.
- ಸಾವಿನ ಸಮಯದಲ್ಲಿ, ಧರ್ಮವನ್ನು ಹೊರತುಪಡಿಸಿ ಬೇರೇನೂ ಸಹಾಯ ಮಾಡುವುದಿಲ್ಲ.
ನಾವೆಲ್ಲರೂ ಸಾಯುತ್ತೇವೆ. ನನಗೆ, ನಿಮಗೆ, ನಾವು ವೈಯಕ್ತಿಕವಾಗಿ ತಿಳಿದಿರುವ ಪ್ರತಿಯೊಬ್ಬರಿಗೂ, ಮತ್ತು ಎಲ್ಲರಿಗೂ ಇದು ಅನಿವಾರ್ಯವಾಗಿರುತ್ತದೆ. ಸಾವು ಯಾವಾಗ ಬರುತ್ತದೆ ಎಂದು ನಮಗೆ ತಿಳಿದಿಲ್ಲ, ಮತ್ತು ನಾವು ಸತ್ತಾಗ, ನಾವು ನಿರ್ಮಿಸಿದ, ನಮ್ಮ ಮಾನಸಿಕ ನಿರಂತರತೆಯ ಭಾಗವಾಗಿರುವ ಸಕಾರಾತ್ಮಕ ಅಭ್ಯಾಸಗಳನ್ನು ಹೊರತುಪಡಿಸಿ ಬೇರೆ ಯಾವುದೂ ನಮಗೆ ಸಹಾಯ ಮಾಡುವುದಿಲ್ಲ.
ಸಾವು ಅನಿವಾರ್ಯ, ಆದರೆ ಇದು ಯಾವುದನ್ನು ಅವಲಂಬಿಸಿದೆ (ಅವಲಂಬನೆಯ ಮೂಲತತ್ವ)? ಇದನ್ನು ನಾವು ಹಲವಾರು ಹಂತಗಳಲ್ಲಿ ವಿಶ್ಲೇಷಿಸಬಹುದು. ಮೊದಲನೆಯದಾಗಿ, ಸಾವು, ಜೀವದ ಮೇಲೆ ಅವಲಂಬಿತವಾಗಿರುತ್ತದೆ. ಜೀವಂತವಾಗಿರದೆ, ನೀವು ಸಾಯಲು ಸಾಧ್ಯವಿಲ್ಲ. ಮತ್ತು ಪ್ರತಿದಿನ, ನಮಗೆ ವಯಸ್ಸಾಗುತ್ತಿದೆ, ಆರಂಭದಲ್ಲಿ ಸಾಕಷ್ಟು ಧೃಡಕಾಯವಾಗಿರುವ ನಮ್ಮ ದೇಹಗಳು ಕ್ರಮೇಣವಾಗಿ ದುರ್ಬಲಗೊಳ್ಳುತ್ತವೆ. ಆದ್ದರಿಂದ ಸಾವು ಅನಾರೋಗ್ಯಕ್ಕೆ ಒಳಗಾಗುವ, ಕಾರಿಗೆ ಡಿಕ್ಕಿ ಹೊಡೆಯುವಂತಹ ದೇಹದ ಮೇಲೆ ಕೂಡ ಅವಲಂಬಿತವಾಗಿರುತ್ತದೆ.
ಸಾವಿನ ಬಗ್ಗೆ ಏಕೆ ಯೋಚಿಸಬೇಕು?
ಅವಲಂಬನೆಯ ಮೂಲತತ್ವದ ಆಳವಾದ ಮಟ್ಟದಲ್ಲಿ, ಸಾವಿನ ಧ್ಯಾನದ ಮೊದಲು ನಾವು ಅರ್ಥಮಾಡಿಕೊಳ್ಳಬೇಕಾದದ್ದು ನಮಗಿರುವ ಅದ್ಭುತವಾದ, ಅಮೂಲ್ಯವಾದ ಮಾನವ ಜೀವನ. ಸಾವಿನ ಅರಿವು ಈ ಅಮೂಲ್ಯವಾದ ಮಾನವ ಜೀವನದ ಉಪಯೋಗವನ್ನು ಪಡೆಯಲು ನಮ್ಮನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿರುತ್ತದೆ. ನಮ್ಮ ಜೀವನವನ್ನು ಮತ್ತು ನಮ್ಮ ಮೇಲೆ ನಾವು ಕೆಲಸ ಮಾಡುವ ಅವಕಾಶವನ್ನು ನಾವು ಪ್ರಶಂಸಿಸದಿದ್ದರೆ, ನಮ್ಮ ಜೀವನವನ್ನು ಕಳೆದುಕೊಳ್ಳುವ ಬಗ್ಗೆ ನಾವು ನಿಜವಾಗಿಯೂ ಯೋಚಿಸುವುದಿಲ್ಲ. ಏಕೆಂದರೆ ಬಹಳಷ್ಟು ಜನರು "ನಾನು ಜೀವಂತವಾಗಿದ್ದೇನೆ ಮತ್ತು ನನ್ನ ದೇಹ ಮತ್ತು ಮನಸ್ಸನ್ನು ರಚನಾತ್ಮಕವಾದದ್ದನ್ನು ಸಾಧಿಸಲು ನಾನು ಬಳಸಬಹುದು" ಎಂದು ಪ್ರಶಂಸಿಸದ ಕಾರಣ, ಅವರು ತಮ್ಮ ಜೀವನವನ್ನು ವ್ಯರ್ಥ ಮಾಡುತ್ತಾರೆ. ಆದ್ದರಿಂದ, ವಾಸ್ತವದಲ್ಲಿ, ಸಾವಿನ ಅರಿವು ಜೀವನದ ಅರಿವಿನ ಮೇಲೆ ಅವಲಂಬಿತವಾಗಿರುತ್ತದೆ.
ಈ ಅಮೂಲ್ಯವಾದ ಮಾನವ ಜೀವನವನ್ನು ಹೊಂದಿದ್ದೇವೆ ಮತ್ತು ಜೀವಂತವಾಗಿರುವುದರ ಪ್ರಯೋಜನವನ್ನು ಪಡೆಯಲು ಸಾಧ್ಯವಾಗದಂತೆ ತಡೆಗಟ್ಟುವ ಕೆಟ್ಟ ಸಂದರ್ಭಗಳಿಂದ ಮುಕ್ತರಾಗಿದ್ದೇವೆ ಎಂದು ನಾವು ಗುರುತಿಸುತ್ತೇವೆ. ಕಾಲ ಕೆಳಗೆ ತುಣಿಯಲು ಬಯಸುವ ಜಿರಳೆಯಾಗಿ ನಾವು ಹುಟ್ಟಿಲ್ಲ. ದೊಡ್ಡ ಮೀನು ಜೀವಂತವಾಗಿ ತಿನ್ನುವ ಸಣ್ಣ ಮೀನಾಗಿ ನಾವು ಹುಟ್ಟಿಲ್ಲ. ನಾವು ನೊಣಗಳಾಗಿ ಹುಟ್ಟಿಲ್ಲ. ಅದರ ಬಗ್ಗೆ ಯೋಚಿಸಿ, ನಾವು ನೊಣವಾಗಿ ಜನಿಸಿದರೆ ನಾವು ಏನು ಮಾಡಬಹುದು ಅಥವಾ ಸಾಧಿಸಬಹುದು? ಏನೂ ಇಲ್ಲ, ನಾವು ನಮ್ಮ ಜೀವನವಿಡೀ ಮಲ ಮತ್ತು ಕಸಕ್ಕೆ ಆಕರ್ಷಿತರಾಗಿ ಕಳೆಯುತ್ತೇವೆ!
ಹೀಗಾಗಿ, ಸಾವಿನ ಬಗ್ಗೆ ತಿಳಿದಿರುವ ಉದ್ದೇಶವು (ಕಾರ್ಯಶೀಲತೆಯ ಮೂಲತತ್ವ), “ಓಹ್ ಇದು ಎಷ್ಟು ಭಯಾನಕವಾಗಿದೆ! ನಾನು ಖಂಡಿತವಾಗಿಯೂ ಸಾಯುತ್ತೇನೆ!” ಎಂದು ಯೋಚಿಸುತ್ತಾ ಖಿನ್ನತೆಗೆ ಒಳಗಾಗುವುದಾಗಿರುವುದಿಲ್ಲ, ಇಲ್ಲಿ ನಾವು ಹಾಗೆ ಹೇಳುತ್ತಿಲ್ಲ. ಪ್ರಸ್ತುತವಾಗಿ, ನಮ್ಮ ಬಳಿಯಿರುವ ಅಮೂಲ್ಯ ಸಮಯದ ಲಾಭವನ್ನು ಪಡೆಯಲು ಬಯಸುವುದು ಇದರ ಉದ್ದೇಶವಾಗಿದೆ, ಏಕೆಂದರೆ ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ. ನನ್ನ ಸ್ನೇಹಿತನಂತೆ, ಕಳೆದ ವಾರ ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದರು ಮತ್ತು ಹೆಚ್ಚಾಗಿ ವಯಸ್ಸೇನು ಆಗಿರಲಿಲ್ಲ. ಅವರು ಧೂಮಪಾನ ಮಾಡಲಿಲ್ಲ ಅಥವಾ ಮದ್ಯಪಾನ ಮಾಡಲಿಲ್ಲ, ಅವರಿಗೆ ಅಧಿಕ ರಕ್ತದೊತ್ತಡ ಇರಲಿಲ್ಲ, ಅವರು ಸಾಕಷ್ಟು ವ್ಯಾಯಾಮ ಮಾಡುತ್ತಿದ್ದರು, ಅವರು ತೀವ್ರವಾದ ಧ್ಯಾನದ ಅಭ್ಯಾಸಕಾರರಾಗಿದ್ದರು. ಆದರೆ ಕಳೆದ ವಾರ, ಒಂದು ಮುಂಜಾನೆ, ಅವರು ಸ್ನಾನ ಮಾಡಿದರು, ಹೃದಯಾಘಾತಕ್ಕೆ ಒಳಗಾಗಿ ಸಾವನಪ್ಪಿದರು. ಹಟಾತ್ತಾಗಿ.
ಈ ಅಮೂಲ್ಯವಾದ ಜೀವನವನ್ನು ನಾವು ಯಾವಾಗ ಕಳೆದುಕೊಳ್ಳುತ್ತೇವೆ ಎಂಬುದರ ಕುರಿತು ಯಾವುದೇ ಖಚಿತತೆಯಿಲ್ಲ, ಮತ್ತು ಸಾವು ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬರುತ್ತದೆ. ಸಾಯಲು ನಿಮಗೆ ವಯಸ್ಸಾಗಿರುವ ಅಥವಾ ಅನಾರೋಗ್ಯಕ್ಕೆ ಒಳಗಾಗಿರುವ ಅಗತ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ತಿಳಿದಿರುವ ಮುಖ್ಯ ಉದ್ದೇಶವೆಂದರೆ, ಸೋಮಾರಿತನ ಮತ್ತು ಆಲಸ್ಯವನ್ನು ಜಯಿಸುವುದು, ಯಾವಾಗಲೂ ವಿಷಯಗಳನ್ನು ನಾಳೆಯವರೆಗೆ ಮುಂದೂಡುವುದನ್ನು ಮೀರಿಸುವುದು. ಸಾವಿಗೆ ಶರಣಾದ ನನ್ನ ಸ್ನೇಹಿತ ಅಲನ್, ಉತ್ತಮ ಉದಾಹರಣೆಯಾಗಿದ್ದಾರೆ. ಅವರ ತಾಯಿಗೆ ತುಂಬಾ ವಯಸ್ಸಾಗಿತ್ತು ಮತ್ತು ಅವರ ಆರೋಗ್ಯ ಸರಿಯಾಗಿರಲಿಲ್ಲ, ಆದ್ದರಿಂದ ಅವರಿಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಸಹಾಯ ಮಾಡಲು ಅಲನ್ ನಿಜವಾಗಿಯೂ ಬಯಸಿದ್ದರು. ಆದ್ದರಿಂದ ಅವರು ತಮ್ಮ ತಾಯಿಯನ್ನು ನೋಡಿಕೊಳ್ಳಲು ಸಹಾಯ ಮಾಡಲು, ಪ್ರತಿ ವಾರಾಂತ್ಯದಲ್ಲಿ ಅವರ ಬಳಿ ಹೋಗುತ್ತಿದ್ದರು - ಶಾಪಿಂಗ್ ಇತ್ಯಾದಿ ವಿಷಯಗಳಿಗಾಗಿ. ತನ್ನ ತಾಯಿ ತೀರಿಕೊಂಡ ತಕ್ಷಣ ಕೆಲಸದಿಂದ ನಿವೃತ್ತಿ ಹೊಂದುವುದಾಗಿ ಮತ್ತು ಎಲ್ಲಕ್ಕಿಂತ ಮೊದಲು ಶುದ್ಧೀಕರಣಕ್ಕಾಗಿ ಒಂದು ವರ್ಷದ ವಜ್ರಸತ್ತ್ವದ ಏಳಿಗೆಯನ್ನು ಮಾಡುವುದಾಗಿ ಅವರು ಯಾವಾಗಲೂ ಹೇಳುತ್ತಿದ್ದರು. ಇದು ಅವರ ಉದ್ದೇಶವಾಗಿತ್ತು.
ನಾನು ಮೊದಲೇ ಹೇಳಿದಂತೆ, ಅವರು ತುಂಬಾ ತೀವ್ರವಾದ ಅಭ್ಯಾಸಕಾರರಾಗಿದ್ದರು, ಆದರೆ ಅವರು ಎಂದಿಗೂ ಧ್ಯಾನದಿಂದ ಹಿಮ್ಮೆಟ್ಟಲಿಲ್ಲ ಏಕೆಂದರೆ ಅವರು ತಮ್ಮ ತಾಯಿಗೆ ಸಹಾಯ ಮಾಡಲು ಮತ್ತು ನೋಡಿಕೊಳ್ಳಲು ಸಾಧ್ಯವಾಗಿರಬೇಕೆಂದು ಬಯಸಿದರು, ಆದ್ದರಿಂದ ಅವರು ಕೆಲಸ ಮಾಡಬೇಕಾಗಿತ್ತು. ಅವರು ತಮ್ಮ ತಾಯಿಗೆ ಸಹಾಯ ಮಾಡುವುದನ್ನು ಮುಂದುವರಿಸಬೇಕಿತ್ತೇ ಅಥವಾ ಅವರಿಗೆ ಅವಕಾಶವಿದ್ದಾಗ ಒಂದು ಹೆಜ್ಜೆ ಹಿಂದೆ ತೆಗೆದುಕೊಂಡು, ಅವರ ತಾಯಿಯನ್ನು ನೋಡಿಕೊಳ್ಳುವುದನ್ನು ಇತರರಿಗೆ ಬಿಡಬೇಕಿತ್ತೇ? ಧರ್ಮವು ನಮಗೆ ಏನು ಮಾಡಬೇಕೆಂದು ಸೂಚಿಸುತ್ತದೆ? ಸಾವಿನ ಕುರಿತಾದ ಬೋಧನೆಗಳು ಏನು ಮಾಡಬೇಕೆಂದು ನಮ್ಮನ್ನು ಪ್ರೇರೇಪಿಸುತ್ತವೆ? ಅಂತಹ ಪರಿಸ್ಥಿತಿಯಲ್ಲಿ ನಾನು ಏನು ಮಾಡುತ್ತಿದ್ದೆ? ಎಂದು ಯೋಚಿಸುವುದು ಒಳ್ಳೆಯದು.
ಒಂದು ಉಪಾಯವೆಂದರೆ, ಅಲ್ಪಾವಧಿಯ ಹಿಮ್ಮೆಟ್ಟುವಿಕೆಗಳನ್ನು ಅನುಸರಿಸುವುದು ಮತ್ತು ಅದೇ ಸಮಯದಲ್ಲಿ ನಿಮ್ಮ ತಾಯಿಗೆ ಸಹಾಯ ಮಾಡುವುದು. ಹಿಮ್ಮೆಟ್ಟುವಿಕೆಗಳು ಪೂರ್ಣ ಪ್ರಮಾಣದ ಚಟುವಟಿಕೆಯಾಗಿರಬೇಕಾಗಿಲ್ಲ - ನಾವು ಬೆಳಿಗ್ಗೆಯ ಅಧಿವೇಶನ ಮತ್ತು ಸಂಜೆಯ ಅಧಿವೇಶನವನ್ನು ಮಾಡಬಹುದು ಮತ್ತು ಉಳಿದ ಸಮಯದಲ್ಲಿ ನಮಗೆ ಬೇಕಾದುದನ್ನು ನೋಡಿಕೊಳ್ಳಬಹುದು. ಹಿಮ್ಮೆಟ್ಟುವಿಕೆಯನ್ನು ಮಾಡುವುದು ಒಳ್ಳೆಯದು, ಆದರೆ ಎಲ್ಲಾ ಜೀವಿಗಳ ದಯೆಯನ್ನು ಮರುಪಾವತಿಸುವುದು ಎಂದೆಂದಿಗೂ ಮುಖ್ಯ ಎಂದು ಬೋಧನೆಗಳು ಹೇಳುತ್ತವೆ, ವಿಶೇಷವಾಗಿ ನಮಗೆ ಜನ್ಮ ನೀಡಿದ ತಾಯಿಗೆ. “ನನಗೆ ನನ್ನ ಕೆಲಸ ಇಷ್ಟವಿಲ್ಲ ಮತ್ತು ನಾನು ನಿವೃತ್ತಿ ಹೊಂದಲು ಬಯಸುತ್ತೇನೆ, ಆದ್ದರಿಂದ ಅವರು ಬೇಗನೇ ಸಾಯಬೇಕು” ಎಂಬ ಅಸಮಾಧಾನವಿಲ್ಲದೆ ನಿಮ್ಮ ಹೆತ್ತವರ ಬಗ್ಗೆ ನೀವು ಕಾಳಜಿ ವಹಿಸಿದಾಗ, ನೀವು ಸಕಾರಾತ್ಮಕ ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸುತ್ತೀರಿ. ನಾವು ನಮ್ಮ ಹೆತ್ತವರ ಬಗ್ಗೆ ಚಿಂತಿಸಬೇಕಿಲ್ಲದಿದ್ದರೆ, ಖಂಡಿತವಾಗಿಯೂ ನಾವು ನಮ್ಮ ಜೀವನವನ್ನು ಸಾಧ್ಯವಾದಷ್ಟು ಬಳಸಿಕೊಳ್ಳಬೇಕು.
ಸಾಮಾನ್ಯವಾಗಿ, ಟಿಬೆಟಿಯನ್ ಲಾಮಾಗಳು ಪಾಶ್ಚಿಮಾತ್ಯ ಧರ್ಮದ ವಿದ್ಯಾರ್ಥಿಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಏಕೆಂದರೆ ನಮ್ಮಲ್ಲಿ, ಅನೇಕರ ಬಳಿ ಧರ್ಮಕ್ಕೆ ಬೇಕಾದ ಸಮರ್ಪಣೆ ಮತ್ತು ಬದ್ಧತೆ ಇರುವುದಿಲ್ಲ ಮತ್ತು ಬಹಳಷ್ಟು ಟಿಬೆಟಿಯನ್ನರ ಬಳಿಯಿರುವ ಅದರ ಮೌಲ್ಯದ ಪ್ರಾಮಾಣಿಕ ಮೆಚ್ಚುಗೆಯು ನಮ್ಮಲ್ಲಿ ಇರುವುದಿಲ್ಲ. ಸಾಮಾನ್ಯವಾಗಿ ಪಾಶ್ಚಿಮಾತ್ಯರು ಬಹಳಾ ನಿರಾಳವಾದ ಮನೋಭಾವದವರಾಗಿರುತ್ತಾರೆ, "ಇಂದು ನಾನು ದಣಿದಿದ್ದೇನೆ, ಮುಂದಿನ ಬಾರಿ ಆ ಬೋಧನೆಗೆ ಹೋಗುತ್ತೇನೆ" ಎಂದು ಯೋಚಿಸುತ್ತಾರೆ. ಆದರೆ ನಾವು ನಿಜವಾಗಿಯೂ ಗಂಭೀರವಾಗಿದ್ದರೆ ಮತ್ತು ಸಾವಿನ ಬಗ್ಗೆ ಮತ್ತು ನಮಗಿರುವ ಈ ಅಮೂಲ್ಯವಾದ ಮಾನವ ಜೀವನದ ಬಗ್ಗೆ ಅರಿವಿದ್ದರೆ, ನಮ್ಮ ಭಾವನೆ ಏನೇ ಆಗಿದ್ದರೂ, ಬೋಧನೆಗಳು ಲಭ್ಯವಿರುವ ಪ್ರತಿದಿನವೂ ನಾವು ಹಾಜರಾಗಿರುತ್ತಿದ್ದೆವು.
ಸಾವು ಸಮೀಪಿಸುತ್ತಿದೆ: ಶಾಂತವಾಗಿರಿ!
ನಮ್ಮ ಅಮೂಲ್ಯ ಜೀವನವು ಕೊನೆಗೊಳ್ಳಲಿದೆ. ಯಾವಾಗ ಎಂದು ನಮಗೆ ಗೊತ್ತಿಲ್ಲ. ನಾವು ಹೃದಯಾಘಾತದಿಂದ ಶವರ್ನಲ್ಲಿ ಸಾವನಪ್ಪಬಹುದು; ನಮಗೆ ಒಂದು ಬಸ್ಸು ಬಂದು ಡಿಕ್ಕಿ ಹೊಡೆಯಬಹುದು. ನಾವು ನಮ್ಮ ಜೀವನವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಸಾವಿನ ಅರಿವು ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮಲ್ಲಿರುವ ಎಲ್ಲಾ ಅವಕಾಶಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಅನುಮತಿಸುತ್ತದೆ. ಆದರೆ, ಹಾಗೆ ಮಾಡುವಲ್ಲಿ, ಒತ್ತಡದಿಂದಿರದೆ, ಬಿಗಿಯಾಗದಿರುವುದು ಮುಖ್ಯ. ಸಾಮಾನ್ಯವಾಗಿ ನಾವು ಮುಖ್ಯವಲ್ಲದ, ಕ್ಷುಲ್ಲಕ ವಿಷಯಗಳಿಂದ ಬಹಳಾ ಬಿಗಿಗೊಂಡಿದ್ದು, ಎಷ್ಟೊಂದು ಒತ್ತಡದಲ್ಲಿರುತ್ತೇವೆ ಎಂದರೆ, ನಾವು ಧರ್ಮದ ಬಗ್ಗೆ ಬಿಗುಮಾನದೊಂದಿಗೆ ಇರುತ್ತೇವೆ. ನಾವು ನಮ್ಮ ಅಭ್ಯಾಸದಲ್ಲಿ ಪ್ರಾಮಾಣಿಕರಾಗಿರಬೇಕು, ಆದರೆ ಶಾಂತ ರೀತಿಯಲ್ಲಿ – ಇದರ ಅರ್ಥ ಸೋಮಾರಿಯಾಗಿರುವುದು ಎಂದಲ್ಲ. ನೀವು ಸಕಾರಾತ್ಮಕ ಅಭ್ಯಾಸಗಳನ್ನು ಬೆಳೆಸಿಕೊಂಡಾಗ, ಸಾವಿನ ಸಮಯದಲ್ಲಿ ಯಾವುದೇ ಸಮಸ್ಯೆಯಿರುವುದಿಲ್ಲ, ಏಕೆಂದರೆ ಆ ಅಭ್ಯಾಸಗಳು ನಿಮಗೆ ಸಹಾಯ ಮಾಡುತ್ತವೆ ಎಂದು ನಿಮಗೆ ತಿಳಿದಿರುತ್ತದೆ.
ಸಾವು ಜೀವನದ ತಾರ್ಕಿಕವಾದ ಅಂತ್ಯವಾಗಿದೆ
ನಂತರ, ಬೋಧನೆಗಳು ಬುದ್ಧನು ಕಲಿಕೆಯೊಂದಿಗೆ (ತಾರ್ಕಿಕ ತತ್ವ) ಅನುಗುಣವಾಗಿವೆಯೇ ಎಂಬುದನ್ನು ನಾವು ಕಾರಣದಿಂದ/ತರ್ಕದಿಂದ ಸ್ಥಾಪಿಸುತ್ತೇವೆ. ಹೀಗೆ ಮಾಡಲು ನಾವು ಸಾಮಾನ್ಯವಾಗಿ ಕೆಲವು ಬೋಧನೆಗಳನ್ನು ಕೇಳಿರಬೇಕು ಅಥವಾ ಸಾಕಷ್ಟು ಬೌದ್ಧ ಪುಸ್ತಕಗಳನ್ನು ಓದಿರಬೇಕು. ಅನೇಕ ಬೌದ್ಧ ಬೋಧನೆಗಳು ಅಶಾಶ್ವತತೆಯ ಬಗ್ಗೆ ಮಾತನಾಡುತ್ತವೆ ಮತ್ತು ಅವು ಬುದ್ಧನು ಕಲಿಸಿದ ವಿಷಯಕ್ಕೆ ಅನುಗುಣವಾಗಿರುತ್ತವೆ.
ಇದು ತಾರ್ಕಿಕವೇ? ಹೌದು, ಪ್ರತಿದಿನ ನಾವು ಸಾವಿಗೆ ಹತ್ತಿರವಾಗುತ್ತೇವೆ. ಒಂದು ಮಟ್ಟದಲ್ಲಿ ಈ ಕಾರ್ಯಕ್ರಮವು ಮುಗಿಯುತ್ತದೆ. ಸಾವು ಖಚಿತವಾಗಿ ಬರುತ್ತದೆ, ಏಕೆಂದರೆ ಸಾವು ಬಂದಾಗ ಅದನ್ನು ಹಿಂದಿರುಗಿಸುವ ಯಾವುದೇ ಸಂದರ್ಭವಿರುವುದಿಲ್ಲ. ನಮ್ಮ ಜೀವಿತಾವಧಿಯನ್ನು ವಿಸ್ತರಿಸಲಾಗುವುದಿಲ್ಲ, ನಮ್ಮ ಜೀವಿತಾವಧಿಯ ಉಳಿದ ಭಾಗವು ದಿನದಿಂದ ದಿನಕ್ಕೆ, ನಿಮಿಷದಿಂದ ನಿಮಿಷಕ್ಕೆ, ಕ್ಷಣದಿಂದ ಕ್ಷಣಕ್ಕೆ ಕಡಿಮೆಯಾಗುತ್ತಿರುತ್ತದೆ. ಇದರಲ್ಲಿ ಭಾವನಾತ್ಮಕವಾಗಿ ತಲ್ಲೀನರಾಗುವುದು ನಿಜವಾಗಿಯೂ ಅತ್ಯಂತ ಪರಮವಾದ ಅನುಭವವಾಗಿರುತ್ತದೆ, ಇದರ ಬಗ್ಗೆ ನಾವು ಸಂಪೂರ್ಣವಾಗಿ ವಿಚಲಿತರಾಗದೆ, ಅದನ್ನು ಗಂಭೀರವಾಗಿ ಪರಿಗಣಿಸಿದಾಗ, ನಾವು ಅದರ ಬಗ್ಗೆ ವಿಶ್ರಾಂತಿಯಿಂದಿರಬಹುದು. ಬದುಕಿರುವಾಗ ಧರ್ಮವನ್ನು ಆಚರಿಸಲು ನಮಗೆ ಸಮಯವಿಲ್ಲದಿದ್ದರೂ, ನಾವು ಸಾಯಬೇಕಾಗುತ್ತದೆ. ಇದುವರೆಗೆ ಬದುಕಿದವರೆಲ್ಲರೂ ಸಾವನಪ್ಪಿದ್ದಾರೆ.
ಪ್ರಯೋಜನಕಾರಿ ಫಲಿತಾಂಶಗಳು
ಇದರ ಫಲಿತಾಂಶವೇನು? ಸಾವು ಬರುತ್ತಿದೆ ಮತ್ತು ನಮ್ಮಲ್ಲಿ ಈ ಅಮೂಲ್ಯವಾದ ಮಾನವ ಜೀವನವಿದೆ ಎಂದು ನಾವು ನಿಜವಾಗಿಯೂ ಮನವರಿಕೆ ಮಾಡಿಕೊಂಡರೆ, ಅದರ ಫಲಿತಾಂಶವು ನಮ್ಮ ಸೋಮಾರಿತನವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮಲ್ಲಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ನಮ್ಮ ಸ್ವಂತ ಅನುಭವದಿಂದ ಇದು ಪ್ರಯೋಜನಕಾರಿಯಾಗಿದೆ ಎಂದು ನಾವು ನೋಡಬಹುದು.
ವಸ್ತುಗಳ ಸ್ವರೂಪಕ್ಕೆ ಸಂಬಂಧಿಸಿದ ನಾಲ್ಕನೇ ಮೂಲತತ್ವವು ಹೀಗೆ ಹೇಳುತ್ತದೆ, ಬದುಕಿರುವ ಎಲ್ಲದರ ಸ್ವಭಾವವು ಸಾವು ಆಗಿರುತ್ತದೆ. ಇದು ಇರುವುದೇ ಹೀಗೆ, ಇದು ವಾಸ್ತವ, ಮತ್ತು ಈ ಸತ್ಯವನ್ನು ಒಪ್ಪಿಕೊಳ್ಳುವುದನ್ನು ಹೊರತುಪಡಿಸಿ ನಮಗೆ ಬೇರೆ ದಾರಿಯಿಲ್ಲ.
ಬೋಧನೆಗಳನ್ನು ವಿಶ್ಲೇಷಿಸಲು, ನಮ್ಮ ಸ್ವಂತ ಅನುಭವಕ್ಕೆ ಸಂಬಂಧಿಸಿದ ಈ ನಾಲ್ಕು ಮೂಲತತ್ವಗಳನ್ನು ಹೇಗೆ ಬಳಸಬಹುದು ಎಂಬುದನ್ನು ಈ ಉದಾಹರಣೆಯ ಮೂಲಕ ನೋಡಬಹುದಾಗಿದೆ. ಇದು ಸದಾ ನಡೆಯುತ್ತಿರುವ ಪ್ರಕ್ರಿಯೆಯಾಗಿರುತ್ತದೆ, ಏಕೆಂದರೆ ಇದು 100% ಮನವರಿಕೆಯಾಗಲು ಮತ್ತು ಅದನ್ನು ನಮ್ಮ ಜೀವನದಲ್ಲಿ ಸಂಯೋಜಿಸಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಬೌದ್ಧಿಕವಾಗಿ ಮನವರಿಕೆಯಾಗುವುದು ಸುಲಭ, ಆದರೆ ಭಾವನಾತ್ಮಕವಾಗಿ ಮನವರಿಕೆಯಾಗುವುದು ಬಹಳಾ ಕಷ್ಟ. ಮನಸ್ಸು ಮತ್ತು ದೇಹವು ಸಹ ವಿಭಿನ್ನವಾಗಿರುತ್ತದೆ - ಉದಾಹರಣೆಗೆ ನನ್ನ ಸ್ನೇಹಿತನ ಸಾವಿನ ವಿಷಯದಲ್ಲಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ನಾನು ಸಾಕಷ್ಟು ಶಾಂತಿಯನ್ನು ಅನುಭವಿಸಿದ್ದೇನೆ, ಆದರೆ ನನ್ನ ದೇಹವು ಇನ್ನೂ ಶಕ್ತಿರಹಿತವಾಗಿದೆ.
ಆದ್ದರಿಂದ ದೈಹಿಕ ಮಟ್ಟದಲ್ಲಿ ದುಃಖವಿರುತ್ತದೆ, ಏಕೆಂದರೆ "ಎಲ್ಲರೂ ಸಾಯುತ್ತಾರೆ" ಎಂಬ ಭಾವನೆಯನ್ನು ದೈಹಿಕ ಮಟ್ಟದಲ್ಲಿ ಅನುಭವಿಸುವುದು ಕಷ್ಟವಾಗಿರುತ್ತದೆ. ಅಲ್ಲದೆ ದುಃಖವು ಕಾಲಕಾಲಕ್ಕೆ ಮಾನಸಿಕ ಮಟ್ಟದಲ್ಲಿ ಉದ್ಭವಿಸುತ್ತದೆ ಏಕೆಂದರೆ ಅದು ಸಹಜವಾಗಿರುತ್ತದೆ. ನಾವು ಬುದ್ಧರಲ್ಲ; ನಾವು ವಿಮೋಚನೆಗೊಂಡ ಜೀವಿಗಳಲ್ಲ. ನಾವು ಇನ್ನೂ ಎಲ್ಲಾ ಗೊಂದಲದ ಭಾವನೆಗಳು ಅಥವಾ ದುಃಖಗಳಿಂದ ಮುಕ್ತರಾಗಿಲ್ಲ. ಆದರೆ ಅದೇ ನಮ್ಮ ಗುರಿಯಾಗಿರುತ್ತದೆ.
ಸಾರಾಂಶ
ವಿಮೋಚನೆ ಮತ್ತು ಜ್ಞಾನೋದಯ ಏನು ಎಂದು ನಾವು ನಿಜವಾಗಿಯೂ ತಿಳಿದುಕೊಂಡ ನಂತರ, ನಾವು ನಮ್ಮ ಗುರಿಯನ್ನು ಅಳವಡಿಸಿಕೊಳ್ಳಬಹುದು. ನಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ನಾವು ಧೃಡೀಕರಿಸಿದಾಗ, ಅಲ್ಲಿಗೆ ತಲುಪುವ ಕ್ರಮಗಳನ್ನು ನಾವು ಕೈಗೊಳ್ಳಬಹುದು. ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಖಚಿತತೆಯನ್ನು ಪಡೆಯಲು ಸಹಾಯ ಮಾಡುವುದರಲ್ಲಿ ನಾಲ್ಕು ಮೂಲತತ್ವಗಳು ಉಪಯುಕ್ತವಾಗಿವೆ.
ನಾವು ಸಾವಿನ ಬಗ್ಗೆ ಧ್ಯಾನಿಸಿದಾಗ ಮತ್ತು ನಾವೆಲ್ಲರೂ ಸಾಯುತ್ತೇವೆ, ಆದರೆ ಯಾವಾಗ ಎಂದು ನಮಗೆ ತಿಳಿದಿಲ್ಲ ಎಂದು ನಾವು ನಿಜವಾಗಿಯೂ ಅರ್ಥಮಾಡಿಕೊಂಡಾಗ, ಅದು ನಮ್ಮನ್ನು ಅತ್ಯಂತ ಮುಖ್ಯವಾದುದನ್ನು ಪಡೆಯುವಂತೆ ಪ್ರೇರೇಪಿಸುತ್ತವೆ. ಸಾವಿನ ಅರಿವು ನಮ್ಮೊಳಗೆ ನಂಬಲಾಗದ ಬದಲಾವಣೆಯನ್ನು ತರುತ್ತದೆ, ಸೋಮಾರಿತನ ಅಥವಾ ಖಿನ್ನತೆಗೆ ಒಳಗಾಗುವುದು ಅಸಾಧ್ಯ ಮಾಡುತ್ತದೆ.