ಧರ್ಮ ಬೋಧನೆಗಳನ್ನು ಆಲಿಸುವುದು

ಧ್ಯಾನ ಏನು ಮಾಡುತ್ತದೆ 

ಧ್ಯಾನವು ನಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸುಧಾರಿಸುವ ಒಂದು ವಿಧಾನವಾಗಿರುತ್ತದೆ. ಹೇಗೆ? ನಮ್ಮ ಜೀವನವು ನಮ್ಮ ವ್ಯಕ್ತಿತ್ವ ಮತ್ತು ಮನಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ, ಅವುಗಳು ಪ್ರತಿಯಾಗಿ ನಮ್ಮ ಜೀವನ ಮತ್ತು ಆರ್ಥಿಕ ಪರಿಸ್ಥಿತಿಗಳಿಂದ, ನಮ್ಮ ಸುತ್ತಮುತ್ತ ಇರುವ ಜನರು ಇತ್ಯಾದಿಗಳಿಂದ ಪ್ರಭಾವಿತವಾಗಿರುತ್ತದೆ. ನಮಗೆ ಜೀವನದ ಅನುಭವವಿದ್ದಲ್ಲಿ, ಕೆಲಸ, ಸಂಪತ್ತು ಮತ್ತು ಸ್ನೇಹಿತರಂತಹ ಬಾಹ್ಯ ವಿಷಯಗಳಲ್ಲಿನ ಬದಲಾವಣೆಗಳ ಹೊರತಾಗಿಯೂ, ನಮ್ಮ ವರ್ತನೆಗಳು ಮತ್ತು ಮನಸ್ಥಿತಿ ಬದಲಾಗದೇ ಇದ್ದರೆ, ನಮಗೆ ಯಾವಾಗಲೂ ಒಂದೇ ರೀತಿಯ ಸಮಸ್ಯೆಗಳು ಏಳುತ್ತವೆ ಎಂಬುದರ ಅರಿವಿರುತ್ತದೆ. ನಮಗೆ ಎಷ್ಟೇ ಸ್ನೇಹಿತರಿದ್ದರೂ, ನಾವು ಅಭದ್ರತೆಯ ಭಾವನೆಯನ್ನು ಅನುಭವಿಸಬಹುದು. ನಾವು ಎಷ್ಷೇ ಶ್ರೀಮಂತರಾಗಿದ್ದರೂ, ನಾವು ಕೋಪಗೊಳ್ಳಬಹುದು ಮತ್ತು ನಿರಾಶೆಗೊಳ್ಳಬಹುದು. ನಮ್ಮ ಬಾಹ್ಯ ಸನ್ನಿವೇಶಗಳನ್ನು ಬದಲಾಯಿಸುವುದರಿಂದ, ಇಂತಹ ವಿಷಯಗಳು ಬದಲಾಗುವುದಿಲ್ಲ. 

ಈ ವಿಷಯದಲ್ಲಿ ಧ್ಯಾನವು ನಮಗೆ ಸಹಾಯ ಮಾಡುತ್ತದೆ, ಏಕೆಂದರೆ ನಮ್ಮ ಜೀವನದ ಗುಣಮಟ್ಟದಲ್ಲಿ ನಿಜವಾದ ಬದಲಾವಣೆಯನ್ನು ತರಲು, ನಾವು ನಮ್ಮ ಮನಸ್ಸಿನ ಮೇಲೆ ಕೆಲಸ ಮಾಡಬೇಕಾಗುತ್ತದೆ. ಇದು ಕೇವಲ ಬೌದ್ಧಿಕ ಗುಣಗಳನ್ನು ಅಥವಾ ಏಕಾಗ್ರತೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಸೋಮಾರಿತನವನ್ನು ನಿವಾರಿಸುವುದಾಗಿರುವುದಿಲ್ಲ. ಇವುಗಳಿಗಾಗಿ ಶ್ರಮ ಪಡಬೇಕಾಗಿರುವುದು ಮುಖ್ಯ, ಆದರೆ ನಮ್ಮ ಭಾವನಾತ್ಮಕ ಪರಿಸ್ಥಿತಿಯ ವಿಷಯದ ಬಗ್ಗೆ, ಅಂದರೆ ನಮ್ಮ ಮೂಲಭೂತ ಅಭದ್ರತೆ ಮತ್ತು ಜೀವನದ ಬಗೆಗಿರುವ ಗೊಂದಲದ ಬಗ್ಗೆ ನಾವು ಆಳವಾಗಿ ಯೋಚಿಸಬೇಕಾಗಿದೆ.

ಬೌದ್ಧ ಸಂದರ್ಭದಲ್ಲಿ ಧ್ಯಾನ 

ಇಂದು ನಾವು ಧ್ಯಾನವನ್ನು, ಬೌದ್ಧಧರ್ಮದಲ್ಲಿ ಮಾತ್ರವಲ್ಲದೆ, ವಿವಿಧ ವ್ಯವಸ್ಥೆಗಳಲ್ಲಿಯೂ ಕಾಣುತ್ತೇವೆ. ಬೌದ್ಧ ಸಂದರ್ಭದಲ್ಲಿ, ಧ್ಯಾನದ ಅರ್ಥವು, ಪುನರಾವರ್ತನೆಯ ಮೂಲಕ ಸಕಾರಾತ್ಮಕ ಮನಸ್ಥಿತಿಯನ್ನು ವಾಸ್ತವೀಕರಿಸುವುದಾಗಿರುತ್ತದೆ. ಇದು ಅಥ್ಲೆಟಿಕ್ ತರಬೇತಿ ಅಥವಾ ಸಂಗೀತ ವಾದ್ಯವನ್ನು ನುಡಿಸುವುದನ್ನು ಕಲಿಯುವಾಗ ಅದನ್ನು ಮತ್ತೆ ಮತ್ತೆ ಪುನರಾವರ್ತಿಸುವಂತೆ ಇರುತ್ತದೆ; ಆದರೆ ಧ್ಯಾನದ ಅಭ್ಯಾಸದಲ್ಲಿ ನಾವು ಸಕಾರಾತ್ಮಕ ಮನಸ್ಥಿತಿಯನ್ನು ಉತ್ಪಾದಿಸುವ ಮೂಲಕ ಅದರೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ. ಆರಂಭದಲ್ಲಿ ಅದು ಬಲವಂತ ಮತ್ತು ಕೃತಕವೆನಿಸುತ್ತದೆ, ಆದರೆ ಕಾಲಾನಂತರದಲ್ಲಿ ನಾವು ಮನಸ್ಥಿತಿಯೊಂದಿಗೆ ಎಷ್ಟು ಪರಿಚಿತರಾಗುತ್ತೇವೆ ಎಂದರೆ, ಅದು ನಮ್ಮ ಸ್ವಾಭಾವಿಕ ಭಾಗವಾಗುತ್ತದೆ. 

ಈ ರೀತಿಯಾಗಿ ಉತ್ಪನ್ನವಾದ ಮಾತ್ರಕ್ಕೆ, ಅದು ಅನುಚಿತವಾಗಿರುತ್ತದೆ ಎಂದು ಹೇಳಲಾಗುವುದಿಲ್ಲ. ನಾವು ಹೊಸ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರೆ, ಅದು ಸ್ವಾಭಾವಿಕವಾಗಿರುವುದಿಲ್ಲ ಎಂದು ನಾವು ಭಾವಿಸಬಾರದು. ಬಹಳಷ್ಟು ಜನರು ತಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸದೆ, ನಾವು ಸ್ವಾಭಾವಿಕವಾಗಿ ಉಳಿದರೇ ಉತ್ತಮ ಎಂದು ಭಾವಿಸುತ್ತಾರೆ. ಆದರೆ ನಾವು ಸ್ವಾಭಾವಿಕ ಸ್ಥಿತಿಯಲ್ಲೇ ಉಳಿದರೆ, ನಾವು ಇನ್ನೂ ನಮ್ಮ ಪ್ಯಾಂಟ್ನಲ್ಲಿಯೇ ಮೂತ್ರ/ಮಲ ವಿಸರ್ಜನೆ ಮಾಡುತ್ತಿದ್ದೆವು. ಆದರೆ ನಮ್ಮ ಜೀವನವನ್ನು ಸುಧಾರಿಸಲು ನಾವು ವಿವಿಧ ವಿಧಾನಗಳ ತರಬೇತಿಯನ್ನು ಪಡೆದಿದ್ದೇವೆ. ನಾವು ನಮ್ಮ ಮನಸ್ಸಿನೊಂದಿಗೂ ಇದನ್ನೇ ಮಾಡಬಹುದು ಮತ್ತು ಮಾಡಬೇಕು. 

ನಾವು ಸ್ವಾಭಾವಿಕವಾಗಿರುವುದನ್ನು ಕಾಪಾಡಿಕೊಳ್ಳಬೇಕು, ಆಗ ಎಲ್ಲವೂ ಚೆನ್ನಾಗಿರುತ್ತದೆ ಎಂಬ ವಾದವನ್ನು ಬಳಸಲಾಗುವುದಿಲ್ಲ. ಏಕೆಂದರೆ ಸ್ವಾಭಾವಿಕವಾದದ್ದು, ಯಾವಾಗಲೂ ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ. ಒಂದು ಮಗು ಅಳುತ್ತಿದ್ದರೆ, ನನಗೆ ಕೋಪ ನೆತ್ತಿಗೇರಿದಾಗ, ಅದನ್ನು ನಿಲ್ಲಿಸಲು ಹೊಡೆಯುವುದು ಸ್ವಭಾವಿಕವೆಂದು ತೋರುತ್ತದೆ; ಆದರೆ ಅದೇನು ಒಳ್ಳೆಯ ವಿಷಯವಲ್ಲ, ಅಲ್ಲವೇ? ಮಗುವು ಮಧ್ಯರಾತ್ತಿಯಲ್ಲಿ ಕಿರುಚಾಡಲು ಪ್ರಾರಂಭಿಸಿದಾಗ, ನಮಗೆ ಸ್ವಾಭಾವಿಕವಾಗಿ ಮೊದಲು ತೋಚುವ ಯೋಚನೆಯು ಅದನ್ನು ಹೊಡೆಯುವುದಾಗಿದ್ದರೂ, ಅದು ಸೂಕ್ತ ವರ್ತನೆಯಲ್ಲ ಎಂದು ನಮಗೆ ತಿಳಿದಿದೆ. 

ಆದ್ದರಿಂದ ನಮಗೆ ಧ್ಯಾನದ ಅಭ್ಯಾಸವಿದ್ದು, ಇದು ಬೌದ್ಧಧರ್ಮದ ಅಧ್ಯಯನ ಮತ್ತು ಅಭ್ಯಾಸದಲ್ಲಿ ಬಹಳಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಧ್ಯಯನ ಮತ್ತು ಧ್ಯಾನವು ಎರಡು ಪ್ರತ್ಯೇಕ ವಿಷಯಗಳು ಎಂದು ಜನರು ತಪ್ಪಾಗಿ ಯೋಚಿಸುತ್ತಾರೆ, ಆದರೆ ಬೌದ್ಧ ಬೋಧನೆಗಳಲ್ಲಿ ಹಾಗಿರುವುದಿಲ್ಲ. 

ಪ್ರಯೋಜನಕಾರಿ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು 

ಪ್ರಯೋಜನಕಾರಿ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು, ಅವುಗಳು ಏನೆಂದು ನಾವು ಅಧ್ಯಯನ ಮಾಡಬೇಕಾಗಿದೆ, ಆದರೆ ಇದು ಕೇವಲ ಈ ಕಲಿಕೆಯಿಂದ ಮುಗಿಯುವುದಿಲ್ಲ. ನಾವು ಇದನ್ನು ಏಕೀಕರಿಸಬೇಕು ಮತ್ತು ನಮ್ಮ ಭಾಗವಾಗಿ ಮಾಡಿಕೊಳ್ಳಬೇಕು, ಮತ್ತು ಇದನ್ನೇ ಧ್ಯಾನವು ಸಾಧಿಸುತ್ತದೆ. ನಾವು ಆಹಾರವನ್ನು ಬಾಯೊಳಗೆ ಇರಿಸಿ, ಅದನ್ನು ಮೊದಲು ಅಗಿಯದಿದ್ದರೆ ಅದು ಹೇಗೆ ಜೀರ್ಣವಾಗುವುದಿಲ್ಲವೋ, ಹಾಗೆಯೇ ನಮ್ಮ ಬೋಧನೆಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಅದರ ಬಗ್ಗೆ ಯೋಚಿಸದಿದ್ದರೆ, ಅವುಗಳನ್ನು ಧ್ಯಾನದ ಮೂಲಕ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತು ಆಹಾರದಂತೆಯೇ, ಕೇವಲ ಅಗಿದು, ಅದನ್ನು ನಂತರ ಉಗುಳುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಅದರ ಪ್ರಯೋಜನವನ್ನು ಪಡೆಯಲು, ನಾವು ಆಹಾರವನ್ನು ನುಂಗಿ ಜೀರ್ಣಿಸಿಕೊಳ್ಳಬೇಕು. 

ನಾವು ಧ್ಯಾನಿಸಲು ಹೇಗೆ ಪ್ರಾರಂಭಿಸಬಹುದು? ನಾವು ನೋಡಿದಂತೆ, ಧ್ಯಾನವು ಮೂರು ಭಾಗಗಳ ಪ್ರಕ್ರಿಯೆಯಲ್ಲಿನ ಮೂರನೇ ಹಂತವಾಗಿರುತ್ತದೆ. ಈ ರೀತಿಯ ರಚನೆಯು, ಎಲ್ಲಾ ಭಾರತೀಯ ವ್ಯವಸ್ಥೆಗಳಲ್ಲಿ ಕಂಡುಬರುತ್ತದೆ, ಉದಾಹರಣೆಗೆ, ಹಿಂದೂ ಸಂಪ್ರದಾಯದಲ್ಲಿನ ಉಪನಿಷತ್ತುಗಳಲ್ಲಿಯೂ ಇದನ್ನು ಕಾಣಬಹುದು. ಬೌದ್ಧಧರ್ಮದಲ್ಲಿ ನಾವು ಬಳಸುವ ಹೆಚ್ಚಿನ ವಿಧಾನಗಳು ಇತರ ಸಾಂಪ್ರದಾಯಿಕ ಭಾರತೀಯ ವ್ಯವಸ್ಥೆಗಳಲ್ಲೂ ಕಾಣಬಹುದು ಎಂಬ ವಿಷಯವನ್ನು ಅನೇಕ ಜನರು ಪ್ರಶಂಸಿಸುವುದಿಲ್ಲ. ಆದರೆ ವಿಧಾನಗಳು ಸಾಮಾನ್ಯವಾಗಿದ್ದರೂ, ಬೌದ್ಧಧರ್ಮಕ್ಕೆ ವಿಶಿಷ್ಟವಾದದ್ದು ಸನ್ನಿವೇಶವಾಗಿರುತ್ತದೆ: ನಮ್ಮ ಗುರಿ ಏನು, ವಾಸ್ತವದ ಬಗೆಗಿರುವ ನಮ್ಮ ತಿಳುವಳಿಕೆ ಏನು ಮತ್ತು ನಮ್ಮ ಪ್ರೇರಣೆ ಏನು. 

ಮೂರು ಭಾಗಗಳು ಕೇಳುವುದು, ಯೋಚಿಸುವುದು ಅಥವಾ ಅಲೋಚಿಸುವುದು ಮತ್ತು ನಂತರ ಧ್ಯಾನಿಸುವುದಾಗಿರುತ್ತದೆ. ನಾವು ಬೌದ್ಧ ಸಂದರ್ಭದಲ್ಲಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರೆ, ಬೌದ್ಧ ಬೋಧನೆಗಳನ್ನು ಜೀರ್ಣಿಸಿಕೊಳ್ಳಲು ನಾವು ಅದನ್ನು ಬಳಸುತ್ತೇವೆ.

ಬೋಧನೆಗಳನ್ನು ಆಲಿಸುವುದು 

ನಾವು ಮೊದಲ ಭಾಗವನ್ನು "ಆಲಿಸುವುದು" ಎಂದು ಏಕೆ ಕರೆಯುತ್ತೇವೆ? ಮೊದಲನೆಯದಾಗಿ, ಬುದ್ಧನ ಕಾಲದಲ್ಲಿ, ಯಾವುದೇ ಬೋಧನೆಗಳನ್ನು ಬರೆದಿಟ್ಟಿರಲಿಲ್ಲ, ಆದ್ದರಿಂದ ಅವುಗಳನ್ನು ಕಲಿಯಬಹುದಾದ ಏಕೈಕ ಮಾರ್ಗವು, ಒಬ್ಬರು ಜ್ಞಾಪಕಶಕ್ತಯಿಂದ ಅವುಗಳನ್ನು ಪಠಿಸುವುದನ್ನು ಮತ್ತು ವಿವರಿಸುವುದನ್ನು ಕೇಳುವುದಾಗಿತ್ತು. ಇಂದಿನ ದಿನಗಳಲ್ಲಿ, ನಾವು ಎಲ್ಲಾ ಬೋಧನೆಗಳನ್ನು ಓದಬಹುದಾದ್ದರಿಂದ ಅವುಗಳನ್ನು ಕೇಳುವುದರ ಪ್ರಯೋಜನವಿದೆಯೇ? ಇದರ ಪ್ರಯೋಜನವೆಂದರೆ, ಇದು ನಮಗೆ, ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಹೇಳಿಕೊಡುವ ಬಯಕೆಯಿರುವ ಗುರುಗಳೊಂದಿಗೆ ನೇರ ಸಂಪರ್ಕವನ್ನು ನೀಡುತ್ತದೆ. ಅವರು ವಿಷಯಗಳನ್ನು ವಿವಿಧ ರೀತಿಯಲ್ಲಿ ವಿವರಿಸಬಹುದು ಮತ್ತು ನಿಮ್ಮ ಬಳಿ ಪ್ರಶ್ನೆಯಿದ್ದಲ್ಲಿ, ನೀವು ಅವರನ್ನು ಕೇಳಬಹುದು, ಇದನ್ನು ಪುಸ್ತಕದೊಂದಿಗೆ ಮಾಡಲಾಗುವುದಿಲ್ಲ.  

ಆಲಿಸುವಿಕೆಯ ಅನನುಕೂಲವೆಂದರೆ ನೀವು ಗಮನವನ್ನು ಕಳೆದುಕೊಂಡಲ್ಲಿ, ನೀವು ಪುಟವನ್ನು ಹಿಂತಿರುಗಿಸಲು ಅಥವಾ ಮರುಕಳಿಸಲು ಸಾಧ್ಯವಾಗುವುದಿಲ್ಲ. ನೀವು ದೊಡ್ಡ ಗುಂಪಿನಲ್ಲಿದ್ದರೆ, ನೀವು ಕೇಳಿಸಿಕೊಳ್ಳಲಿಲ್ಲಎಂಬ ಕಾರಣದಿಂದ, ಶಿಕ್ಷಕರಿಗೆ ಹಿಂದೆ ಹೋಗಿ, ಪುನರಾವರ್ತಿಸುವಂತೆ ಕೋರುವುದು ಮುಜುಗರವಾಗಿರುತ್ತದೆ. ನೀವು ಹಿಂದೆ ಕುಳಿತಿರುವುದರಿಂದ, ಸರಿಯಾಗಿ ಕೇಳಲಾಗದೇ ಇರಬಹುದು. ಕೊಠಡಿಯಲ್ಲಿ ಬಿಸಿಗಾಳಿಯಿದ್ದು, ನಿಮ್ಮ ಕಣ್ಣೆಳೆಯುತ್ತಿರಬಹುದು. ಹೀಗೆ ಅನಾನುಕೂಲತೆಗಳಿರುತ್ತವೆ. ಆದರೆ ಇದರರ್ಥವು ನೀವು ಹೆಚ್ಚಿನ ಪ್ರಯತ್ನ ಮಾಡಬೇಕು ಎಂದಾಗಿರುತ್ತದೆ ಮತ್ತು ಇದು ಬೌದ್ಧ ಬೋಧನೆಗಳಲ್ಲಿ ಬೆಳೆಸಿಕೊಳ್ಳಬೇಕಾದ ಗುಣವಾಗಿದೆ. ಬೌದ್ಧಧರ್ಮವನ್ನು ಕಲಿಯುವುದು ಮತ್ತು ಅಭ್ಯಾಸ ಮಾಡುವುದು ನಿಷ್ಕ್ರಿಯ ವಿಧಾನವಾಗಿರುವುದಿಲ್ಲ.  

ವಾಸ್ತವದಲ್ಲಿ, ವಿದ್ಯಾರ್ಥಿಗಳಿಗೆ ತುಂಬಾ ಸುಲಭವಾಗುವಂತೆ, ಮೊದಲ ಬಾರಿಗೆ ವಿಷಯಗಳನ್ನು ಸ್ಪಷ್ಟವಾಗಿ ವಿವರಿಸಬಾರದು ಎಂದು ಶಿಕ್ಷಕರಿಗೆ ಸೂಚನೆಗಳನ್ನು ನೀಡಲಾಗುತ್ತದೆ. ನನ್ನಂತಹ ಕೆಲವರಿಗೆ, ಅದು ಕಷ್ಟಕರವಾಗಿರುತ್ತದೆ, ಏಕೆಂದರೆ ನಾನು ಬಹಳಾ ಸ್ಪಷ್ಟವಾಗಿರಲು ಇಚ್ಛಿಸುತ್ತೇನೆ. ನಾನು ನನ್ನ ಗುರುಗಳಾದ ಸೆರ್ಕಾಂಗ್ ರಿಂಪೋಚೆ ಅವರ ಅನುವಾದಕನಾಗಿದ್ದಾಗ, ಹೇಗೆ ಕಲಿಸಬೇಕೆಂದು ಅವರು ನನಗೆ ಹೇಳಿಕೊಟ್ಟ ಸೂಚನೆಗಳನ್ನು ಪ್ರಜ್ಞಾಪೂರ್ವಕವಾಗಿ ಅನುಸರಿಸುವುದಾದರೆ, “ಆರಂಭದಲ್ಲಿ ಸ್ಪಷ್ಟವಾಗಿ ವಿವರಿಸಬೇಡ, ಏಕೆಂದರೆ ನೀನು, ನಿಜವಾಗಿಯೂ ಆಸಕ್ತಿ ಹೊಂದಿರುವವರನ್ನು, ಬೇರೆ ಯವುದೋ ಕಾರಣದಿಂದ ಅಲ್ಲಿರುವವರಿಂದ ಪ್ರತ್ಯೇಕಿಸಬೇಕು. ಆಸಕ್ತಿಯುಳ್ಳವರು ಹೆಚ್ಚಿನ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ವಿದ್ಯಾರ್ಥಿಗಳು ಹೆಚ್ಚಿನದನ್ನು ಕಲಿಯಲು ತಮ್ಮದೇ ಆದ ಬಲವಾದ ಬಯಕೆಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿರುತ್ತದೆ.” 

ವಿದ್ಯಾರ್ಥಿಯಾಗಿ, ಶಿಕ್ಷಕರು ಸ್ಪಷ್ಟವಾಗಿಲ್ಲ ಎಂದು ನೀವು ದೂರಿದರೆ, ಮತ್ತು ಆ ಕಾರಣದಿಂದಾಗಿ ನೀವು ಹಿಂತಿರುಗಲು ಬಯಸುವುದಿಲ್ಲವಾದರೆ, ಶಿಕ್ಷಕರ ಗುಣಮಟ್ಟವನ್ನು ನೀವು ಪರಿಶೀಲಿಸಬೇಕು. ಶಿಕ್ಷಕರು ನಿಜವಾಗಲೂ ಅನರ್ಹರಾಗಿದ್ದಾರೆಯೇ ಮತ್ತು ಸ್ಪಷ್ಟವಾಗಿ ವಿವರಿಸುವುದು ಹೇಗೆ ಎಂಬುದನ್ನು ತಿಳಿದಿಲ್ಲವೇ? ಇಂತಹ ಅನೇಕ ಪ್ರಶ್ನೆಗಳಿವೆ. ಅಥವಾ ಪರಿಶ್ರಮ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುವ ಸಲುವಾಗಿ, ಶಿಕ್ಷಕರು ಉದ್ದೇಶಪೂರ್ವಕವಾಗಿ ನಿಮಗೆ ಎಲ್ಲಾ ವಿವರಗಳನ್ನು ನೀಡುತ್ತಿಲ್ಲವೇ? ಆಲಿಸುವುದರ ಸಂಪೂರ್ಣ ಉದ್ದೇಶವು, ಎರಡನೇ ಹಂತವಾದ ಬೋಧನೆಗಳ ಬಗ್ಗೆ ಯೋಚಿಸುವುದಾಗಿದೆ. ಶಿಕ್ಷಕರು ತಕ್ಷಣವೇ ಉತ್ತರವನ್ನು ನೀಡದಿದ್ದರೆ ಅದು ಹೆಚ್ಚು ಸಹಾಯಕವಾಗಿರುತ್ತದೆ ಏಕೆಂದರೆ ಅದು ನಿಮ್ಮನ್ನು ಮೊದಲು ಯೋಚಿಸುವಂತೆ ಮಾಡುತ್ತದೆ, ಇದು ಬೋಧನೆಗಳನ್ನು ನೀವೇ ಪರೀಕ್ಷಿಸುವ ಗುಣವನ್ನು ಅಭಿವೃದ್ಧಿಪಡಿಸುತ್ತದೆ. 

ಬೋಧನೆಗಳನ್ನು ಪರಿಶೀಲಿಸುವುದು

ಬೋಧನೆಗಳನ್ನು ಪರಿಶೀಲಿಸುವುದು ಮತ್ತು ಅವು ನಿಮಗೆ ಅರ್ಥವಾಗಿದೆಯೇ ಎಂದು ಪರಿಶೀಲಿಸುವುದು ಬಹಳ ಮುಖ್ಯ. ಅದರ ಬಗ್ಗೆ ನೀವು ಏನು ಯೋಚಿಸುತ್ತೀರಿ ಎಂಬುದನ್ನು ಗಮನಿಸಿ, ತದನಂತರ ನಿಮ್ಮ ಆಲೋಚನೆಗಳನ್ನು ಕುರಿತು, ಪ್ರತಿಕ್ರಿಯೆಗಳನ್ನು ಪಡೆಯಿರಿ. ದೊಡ್ಡ ಗುಂಪಿನಲ್ಲಿದ್ದರೆ ಮತ್ತು ನಿಮ್ಮ ಶಿಕ್ಷಕರನ್ನು ವರ್ಷಕ್ಕೊಮ್ಮೆ ಮಾತ್ರ ಭೇಟಿ ಮಾಡಿದರೆ ಇದು ಕಷ್ಟಕರವಾಗಿರುತ್ತದೆ. ಇಲ್ಲಿ ನಾನು ಒಂದು ಆದರ್ಶವಾದ ಸನ್ನಿವೇಶದ ಬಗ್ಗೆ ಮಾತನಾಡುತ್ತಿದ್ದೇನೆ. ಶಿಕ್ಷಕರು ಯಾವಾಗಲೂ ಇಲ್ಲದಿರುವ ಅನೇಕ ಬೌದ್ಧ ಕೇಂದ್ರಗಳಲ್ಲಿ, ನೀವು ಓದುವ ಮತ್ತು ಆಡಿಯೊ ಸಾಮಗ್ರಿಗಳನ್ನು ಉಪಯೋಗಿಸಿ ಬಹಳಷ್ಟು ಕಲಿಯಬಹುದಾಗಿದೆ. ಇದನ್ನು ಒಂದು ಕಾದಂಬರಿಯಾಗಿ ಅಥವಾ ನೀವು ಟಾಯ್ಲೆಟ್‌ ಸೀಟ್ನಲ್ಲಿ ಕುಳಿತು ಓದುವ ಪುಸ್ತಕದಂತೆ ಪರಿಗಣಿಸಬಾರದು; ಬದಲಿಗೆ ಅವುಗಳನ್ನು ಗೌರವಯುತ ಮನಸ್ಥಿತಿಯೊಂದಿಗೆ ಅಧ್ಯಯನ ಮಾಡಬೇಕು. ನಾವು ಸಾವಕಾಶವಾಗಿ ಓದಿ, ಅವುಗಳ ಅಂಶಗಳ ಬಗ್ಗೆ ಯೋಚಿಸಬೇಕು. ನೀವು ಶಿಕ್ಷಕರಿಲ್ಲದ ಕೇಂದ್ರದಲ್ಲಿದ್ದರೂ, ನೀವೆಲ್ಲರೂ ಒಟ್ಟಿಗೆ ಓದಿ ಅವುಗಳ ಬಗ್ಗೆ ಚರ್ಚಿಸಬಹುದು. ಕೆಲವರ ಬಳಿ ಹೆಚ್ಚು ತಿಳುವಳಿಕೆಯಿದ್ದು, ಇತರರಿಗೆ ಒಳನೋಟಗಳನ್ನು ನೀಡಬಹುದು. ನಾವು "ಆಶ್ರಯವಿಲ್ಲದ ಅಭ್ಯಾಸಕಾರ”ರಾಗಿದ್ದರೆ, ಮತ್ತು ನಮ್ಮ ಬಳಿ ಯಾವುದೇ ಬೌದ್ಧ ಕೇಂದ್ರವಿಲ್ಲದಿದ್ದರೆ ಅಥವಾ ಅಲ್ಲಿಗೆ ಹೋಗಲು ಇಚ್ಛಿಸದಿದ್ದರೆ, ನಮಗೆ ಸರಿಹೊಂದುವ ಆನ್‌ಲೈನ್ ಬೌದ್ಧ ಚರ್ಚಾ ಗುಂಪುಗಳನ್ನು ಸೇರಬಹುದು.  

ಇತರರೊಂದಿಗೆ ಈ ರೀತಿಯ ಸಂವಹನ ನಡೆಸುವುದು ಬಹಳಾ ಸಹಾಯಕವಾಗಿರುತ್ತದೆ, ಇಲ್ಲದಿದ್ದರೆ ಬೋಧನೆಗಳನ್ನು ಕಲಿಯುವ ವಿಧಾನವು ತೀರಾ ಬೌದ್ಧಿಕವಾಗಿದ್ದು, ವಾಸ್ತವಿಕ ಜೀವನದೊಂದಿಗೆ ಅನುಗುಣವಾಗಿರುವುದಿಲ್ಲ. ನಾವು ಇದರ ಬಗ್ಗೆ ಗಂಭೀರವಾಗಿರಬೇಕು. ನಾವು ನೆಟ್ಟಗೆ, ನಗದೆ ಕುಳಿತಿರಬೇಕು ಎಂದು ಹೇಳುತ್ತಿಲ್ಲ, ಬದಲಿಗೆ ನಾವು ಧರ್ಮದ ಬಗ್ಗೆ ಗಂಭೀರವಾಗಿ ಮಾತನಾಡುತ್ತೇವೆ. ಯಾರಾದರೂ ತಮಾಷೆ ಮಾಡಿದಾಗ ಅಥವಾ ತಪ್ಪು ಮಾಡಿದಾಗ ನಾವು ನಗಬಹುದು. 

ಕೆಲವು ಪಾಶ್ಚಿಮಾತ್ಯರಿಗೆ ಒಂದೇ ಸಮಯದಲ್ಲಿ ಆರಾಮವಾಗಿರಲು ಮತ್ತು ಗಂಭೀರವಾಗಿರಲು ಬಹಳಾ ಕಷ್ಟವೆನಿಸುತ್ತದೆ. ಇದು, ನಿಮ್ಮ ಜೀವನದಲ್ಲಿ ನೀವು ಬೋಧನೆಗಳನ್ನು ಹೇಗೆ ಸಂಯೋಜಿಸುತ್ತೀರಿ ಎಂಬುದರ ಸೂಚನೆಯಾಗಿರುತ್ತದೆ. ಅಂತಿಮವಾಗಿ, ಇದರ ಮೂಲ ಉದ್ದೇಶವು ನಿಮ್ಮನ್ನು ಸಂತೋಷಪಡಿಸುವುದಾಗಿರುತ್ತದೆ. ನಾವು ಸೈನ್ಯದಲ್ಲಿರುವಂತೆ ಔಪಚಾರಿಕವಾಗಿದ್ದರೆ, ಅದು ಸಂತೋಷದ ಮನಸ್ಥಿತಿಯಾಗಿರುವುದಿಲ್ಲ. ನಾವು ಪರಿಪೂರ್ಣರಾಗಿಲ್ಲ ಮತ್ತು ನಾವು ತಪ್ಪು ಮಾಡಿದರೆ ಶಿಕ್ಷೆಗೆ ಒಳಗಾಗುತ್ತೇವೆಯೇನೋ ಎಂದು ಭಯಪಡುತ್ತೇವೆ. ಬೌದ್ಧ ಧರ್ಮ ಹಾಗಿರುವುದಿಲ್ಲ!  

ತಲೆಕೆಳಗಾದ ಹೂದಾನಿ, ಕೊಳಕು ಹೂದಾನಿ, ಬಿರುಕು ಬಿಟ್ಟ ಹೂದಾನಿ 

ಆದ್ದರಿಂದ, ಆಲಿಸುವಿಕೆಗೆ ಹಿಂತಿರುಗಿ ನೋಡೋಣ. ಹೂದಾನಿಯಂತೆ ಇರಬಾರದು ಎಂಬ ಆಧಾರದ ಮೇಲೆ ಬೋಧನೆಗಳನ್ನು ಹೇಗೆ ಆಲಿಸಬೇಕು ಎಂಬುದರ ಕುರಿತು ನಮಗೆ ಸಲಹೆ ನೀಡಲಾಗುತ್ತದೆ. ಮೊದಲನೆಯದಾಗಿ, ನಾವು ತಲೆಕೆಳಗಾದ ಹೂದಾನಿಯಂತೆ ಇರಬಾರದು, ಏಕೆಂದರೆ ಆಗ ಏನೂ ತಲೆಯೊಳಗೆ ಹೋಗುವುದಿಲ್ಲ; ನಾವು ಮುಕ್ತ ಮನಸ್ಸನ್ನು ಹೊಂದಿರಬೇಕು. ನಾವು ಬಿರುಕುಬಿಟ್ಟ ಹೂದಾನಿಯಂತೆ ಇರಬಾರದು, ಅಲ್ಲಿ ಒಳಗೆ ಹೋದ ಎಲ್ಲವೂ ನಂತರ ಸೋರಿಹೋಗುತ್ತದೆ. ಅಂತಿಮವಾಗಿ, ನಾವು ಕೊಳಕು ಹೂದಾನಿಯಂತೆ ಇರಬಾರದು, ಅಂದರೆ ಬೋಧನೆಗಳು ಸಂಪೂರ್ಣವಾಗಿ ಗೊಂದಲಕ್ಕೊಳಗಾಗಲು ಕಾರಣವಾಗುವ ಅನೇಕ ಪೂರ್ವಗ್ರಹಗಳನ್ನು ನಾವು ಹೊಂದಿರಬಾರದು. 

ನೀವು ಬೌದ್ಧ ಬೋಧನೆಗಳನ್ನು ಆಲಿಸುವಾಗ, ನೀವು ಅವುಗಳನ್ನು ಇತರ ವ್ಯವಸ್ಥೆಗಳೊಂದಿಗೆ ಹೋಲಿಸುವುದನ್ನು ನಿಜವಾಗಿಯೂ ನಿಲ್ಲಿಸಬೇಕು. "ಹಿಂದೂ ಧರ್ಮದಲ್ಲಿ ಹೀಗೆ ಹೇಳಲಾಗುತ್ತದೆ ಮತ್ತು ತಾವೊ ತತ್ತ್ವದಲ್ಲಿ ಹಾಗೆ ಹೇಳಲಾಗುತ್ತದೆ" ಎಂದು ನೀವು ಯೋಚಿಸಬಹುದು. ನನ್ನ ಶಿಕ್ಷಕರೊಬ್ಬರು ಹೀಗೆ ಹೇಳುತ್ತಿದ್ದರು, “ನೀವು ಎರಡು ವಿಷಯಗಳನ್ನು ಹೋಲಿಸಲು ಪ್ರಯತ್ನಿಸಿದರೆ, ನೀವು ಎರಡರಲ್ಲಿ ಒಂದನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಲಾಗುವುದಿಲ್ಲ, ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ. ನೀವು ಗೊಂದಲದಲ್ಲಿಯೇ ಉಳಿಯುತ್ತೀರಿ.” ನಿಮಗೆ ಎರಡು ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯಿದ್ದರೆ, ನೀವು ಯೋಗ್ಯವಾದ ಹೋಲಿಕೆಗಳನ್ನು ನಂತರ ಮಾಡಬಹುದು. ಆದರೆ ನಿಮಗೆ ಬೌದ್ಧ ಬೋಧನೆಗಳು ಅರ್ಥವಾಗದಿದ್ದರೆ, ನೀವು "ಇದು ಹೀಗಿದೆಯೇ ಅಥವಾ ಹಾಗಿದೆಯೇ" ಎಂಬ ಆಲೋಚನೆಗಳನ್ನು ಮೊದಲು ಬದಿಗಿಟ್ಟು, ವಾಸ್ತವದಲ್ಲಿರುವ ಬೋಧನೆಗಳನ್ನು ಸ್ವತಃ ಆಲಿಸಬೇಕು. ಇಲ್ಲದಿದ್ದರೆ, ನಿಮ್ಮ ಪೂರ್ವಗ್ರಹಿಕೆಗಳನ್ನು ಇದರಲ್ಲಿ ಬೆರೆಸುತ್ತೀರಿ, ಅದು ಕೇವಲ ತಪ್ಪಾಗಿರುವುದಿಲ್ಲ, ಜೊತೆಗೆ ಅಪ್ರಸ್ತುತವಾಗಿರುತ್ತದೆ. 

ಬಿರುಕು ಬಿಟ್ಟಿರುವ ಹೂದಾನಿಯಂತೆ ಇರಬಾರದು ಎಂದು ಸಲಹೆ ನೀಡಿದಾಗ, ನಾವು ಕಲಿತದ್ದನ್ನು ನೆನಪಿಟ್ಟುಕೊಳ್ಳದಿರುವುದರ ಬಗ್ಗೆ ಮಾತನಾಡುತ್ತಿದ್ದೇವೆ. ಬಹಳಷ್ಟು ಜನರಿಗೆ ಟಿಪ್ಪಣಿಗಳನ್ನು ಬರೆದಿಟ್ಟುಕೊಂಡರೆ ಸಹಾಯವಾಗುತ್ತದೆ, ಅವುಗಳನ್ನು ಒಮ್ಮೆ ನಂತರ ಓದಿದರೆ ಸಹಾಯಕವಾಗಿರುತ್ತದೆ. ಏನೇ ಆಗಲಿ, ನಮಗೆ ಜ್ಞಾಪಕಶಕ್ತಿ ಕಡಿಮೆಯಿದ್ದಲ್ಲಿ, ಅಗತ್ಯ ವಿಷಯಗಳನ್ನು ಬರೆದಿಟ್ಟುಕೊಳ್ಳುವುದು ಒಳ್ಳೆಯದು.

ಪಶ್ಚಿಮದಲ್ಲಿನ ಮನೋವಿಜ್ಞಾನವು ಆಸಕ್ತಿದಾಯಕವಾಗಿದೆ, ಇಲ್ಲಿ ನಮಗೆ ಪರೀಕ್ಷೆಯಿಲ್ಲದಿದ್ದರೆ, ನಾವು ಸಾಮಾನ್ಯವಾಗಿ ಏನನ್ನೂ ಕಲಿಯಲು ಪ್ರಯತ್ನಿಸುವುದಿಲ್ಲ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಕಲಿಯುತ್ತೇವೆ ಮತ್ತು ನಮಗೆ ಮೋಸ ಮಾಡಲು ಸಾಧ್ಯವಾದರೆ, ನಾವು ಹಾಗೆ ಏಕೆ ಮಾಡಬಾರದು? ಆದರೆ, ಅದು ಇಲ್ಲಿ ಕೆಲಸ ಮಾಡುವುದಿಲ್ಲ. ಇಲ್ಲಿ ಯಾವುದೇ ಪರೀಕ್ಷೆ ಇಲ್ಲ, ಉತ್ತಮ ದರ್ಜೆ ಇಲ್ಲ ಅಥವಾ ಶಿಕ್ಷಕರ ಅನುಮೋದನೆ ಇಲ್ಲ. ಇಲ್ಲಿನ ಮೊಟ್ಟಮೊದಲ ಗುರಿಯೆಂದರೆ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಪ್ರಯತ್ನಿಸುವುದು ಮತ್ತು ಬುದ್ಧನು ಕಲಿಸಿದ ಎಲ್ಲವೂ – ನಮಗೆ ಅವರಲ್ಲಿ ನಿಜವಾಗಿಯೂ ವಿಶ್ವಾಸವಿದ್ದರೆ - ಇತರರ ಪ್ರಯೋಜನಕ್ಕಾಗಿ ಆಗಿತ್ತು. ಇತರರೊಂದಿಗೆ ಯಾವುದೇ ಸ್ಪರ್ಧೆಯಿಲ್ಲ, ನಾವು ನಮ್ಮ ವಿಷಯದಲ್ಲಿ ಮಾತ್ರ ಬೋಧನೆಗಳ ಬಗ್ಗೆ ಯೋಚಿಸಬೇಕು. "ಆ ವ್ಯಕ್ತಿಗೆ ಕೋಪವಿದೆ, ನನಗೆ ಇಲ್ಲ" ಎಂದು ನಾವು ಯೋಚಿಸುವುದಿಲ್ಲ. ಧರ್ಮದ ಕನ್ನಡಿಯು ನಿಮ್ಮನ್ನು ಎದುರಿಸಬೇಕು, ನಿಮ್ಮ ಹೊರಗಲ್ಲ. 

ವೈದ್ಯಶಾಸ್ತ್ರದೊಂದಿಗೆ ಹೋಲಿಕೆ

ಬೋಧನೆಗಳನ್ನು ಹೇಗೆ ಕೇಳಬೇಕು ಎಂಬುದರ ಕುರಿತು ಮತ್ತೊಂದು ಸೂಚನೆಯೆಂದರೆ, ನಮ್ಮನ್ನು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಎಂದು ಪರಿಗಣಿಸಬೇಕು, ಬುದ್ಧ ಮತ್ತು ಶಿಕ್ಷಕರನ್ನು ವೈದ್ಯರಂತೆ ಮತ್ತು ಬುದ್ಧನ ಬೋಧನೆಗಳನ್ನು ಔಷಧವಾಗಿ ಪರಿಗಣಿಸಬೇಕು. ಹೆಚ್ಚು ಅರಿತುಕೊಂಡ ಜನರನ್ನು ನಮಗೆ ಸಹಾಯ ಮಾಡುವ ದಾದಿಯರಂತೆ ನೋಡಬಹುದು. ಇನ್ನೂ ಸರಳವಾದ ಪದಗಳಲ್ಲಿ ಹೇಳುವುದಾದರೆ, "ನನಗೆ ಸಮಸ್ಯೆಗಳಿವೆ" ಎಂದು ಗುರುತಿಸಿ ನಾವು ಬೌದ್ಧಧರ್ಮದ ಅಭ್ಯಾಸವನ್ನು ಪ್ರಾರಂಭಿಸುತ್ತೇವೆ. ನಮಗೆ ಒಂದು ಕಾಯಿಲೆ ಇದೆ, ಅದು ನಮ್ಮ ಸ್ವಾರ್ಥ ಅಥವಾ ಕೋಪ ಅಥವಾ ಏನೇ ಆಗಿರಬಹುದು ಮತ್ತು ನಾವು ಅದನ್ನು ಗುಣಪಡಿಸಲು ಬಯಸುತ್ತೇವೆ. ಬುದ್ಧನು ಒಬ್ಬ ಸರ್ವೋಚ್ಚ ವೈದ್ಯರಾಗಿದ್ದಾರೆ, ನಾನು ಈ ಅದ್ಭುತ ಔಷಧವನ್ನು ಪಡೆಯಲಿದ್ದೇನೆ ಮತ್ತು ಅದರ ಬಗ್ಗೆ ಮರೆತುಬಿಡುವುದಿಲ್ಲ, ಬದಲಿಗೆ ಸೂಚನೆಗಳ ಪ್ರಕಾರ ನಾನು ಅದನ್ನು ತೆಗೆದುಕೊಳ್ಳುತ್ತೇನೆ. ನಾನು ಒಂದು ದಿನವೂ ತಪ್ಪಿಸದಿರಲು ಪ್ರಯತ್ನಿಸುತ್ತೇನೆ ಮತ್ತು ನಾನು ಖಂಡಿತವಾಗಿಯೂ ಇಡೀ ಬಾಟಲಿಯನ್ನು ಒಂದೇ ಬಾರಿಗೆ ಸೇವಿಸುವುದಿಲ್ಲ. ಸ್ವಲ್ಪಮಟ್ಟಿಗೆ, ಬೌದ್ಧಧರ್ಮವನ್ನು ಅಭ್ಯಾಸ ಮಾಡುವುದು, ಪ್ರತಿಜೀವಕಗಳನ್ನು ತೆಗೆದುಕೊಂಡಂತೆ ಇರುತ್ತದೆ! ನೀವು ಅದನ್ನು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಮೊತ್ತದಲ್ಲಿ ಸೇವಿಸಬೇಕು. ನೀವು ಅರ್ಧದಾರಿಯಲ್ಲೇ ನಿಲ್ಲಿಸಿದರೆ ಅಥವಾ ನೀವು ದಿನಗಳನ್ನು ತಪ್ಪಿಸಿದರೆ ಅದರಿಂದ ಹೆಚ್ಚು ಸಹಾಯವಾಗುವುದಿಲ್ಲ. ಬೌದ್ಧಧರ್ಮವನ್ನು ವೈದ್ಯಕೀಯ ಪರಿಸ್ಥಿತಿಯಂತೆ ಪರಿಗಣಿಸುವ ಇದೊಂದು ಸೂಚನೆಯಾಗಿದೆ. 

ಇನ್ನೊಂದು ಸೂಚನೆಯೆಂದರೆ, ನಾವು ಬೋಧನೆಗಳನ್ನು ಸ್ವೀಕರಿಸಿದಾಗ, ನಾವೊಂದು ಶುದ್ಧ ಭೂಮಿಯಲ್ಲಿ, ಗುರುವಾದ ಬುದ್ಧನಿಂದ, ಶುದ್ಧ ಬೋಧನೆಗಳನ್ನು ಸ್ವೀಕರಿಸುತ್ತಿದ್ದೇವೆ ಎಂದು ಊಹಿಸಬಹುದು. ಇದರರ್ಥ ನಮ್ಮ ಶಿಕ್ಷಕರು ನಿಜವಾಗಿಯೂ ಬುದ್ಧರು ಎಂದು ಭಾವಿಸಬೇಕು ಎಂದಲ್ಲ, ಬದಲಿಗೆ ನಾವು ಅವರ ಬಗ್ಗೆ ಮತ್ತು ನಮ್ಮ ಬಗ್ಗೆ ಮತ್ತು ಬೋಧನೆಗಳ ಬಗ್ಗೆ ಅದೇ ರೀತಿಯ ಗೌರವದ ಭಾವನೆಯನ್ನು ಹೊಂದಿರಬೇಕು. ನಾವು ಗಂಭೀರವಾಗಿರುವುದುನ್ನು ಮಾಡುತ್ತಿದ್ದೇವೆ, ಇದರರ್ಥ ನಾವು ಸಪ್ಪೆಮೋರೆ ಹಾಕಿಕೊಂಡು ಕುಳಿತುಕೊಳ್ಳಬೇಕು ಎಂದಲ್ಲ, ಆದರೆ ನಾವು ಸೆಖೆಯಲ್ಲಿ, ಉಸಿರುಕಟ್ಟಿಕೊಳ್ಳುವ ಕೋಣೆಯನ್ನು ನಿರ್ಲಕ್ಷಿಸಿ, ಮುಕ್ತ ಮನಸ್ಸಿನಿಂದ ನಮಗೆ ಏನು ಕಲಿಸಲಾಗುತ್ತಿದೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು. 

ಮುಕ್ತ ಮನಸ್ಸಿನವರಾಗಿರುವುದು  

ನಾವು ಚಿನ್ನವನ್ನು ಖರೀದಿಸುವಂತೆ ಬೋಧನೆಗಳನ್ನು ಪರೀಕ್ಷಿಸಬೇಕು ಎಂದು ಬುದ್ಧನು ಒತ್ತಿ ಹೇಳಿದ್ದರು. ಅವರಲ್ಲಿ ನಂಬಿಕೆ ಇರುವ ಮಾತ್ರಕ್ಕೆ ನಾವು ಎಲ್ಲವನ್ನೂ ನಂಬಬಾರದು. ಹೀಗೆ ಮಾಡಲು ನಮಗೆ ಮುಕ್ತ ಮನಸ್ಸು ಬೇಕು, ಹಾಗೆಯೇ ಬುದ್ಧನು ಮೋಜಿಗಾಗಿ ಮೂರ್ಖತನವನ್ನು ಕಲಿಸುವುದಿಲ್ಲ ಎಂಬ ಪೂರ್ವಕಲ್ಪನೆ ಇರಬೇಕು. ಇಂತಹ ಮನಸ್ಸಿನೊಂದಿಗೆ, ನಾವು ಬೋಧನೆಗಳ ಅರ್ಥವೇನು ಎಂದು ಪರಿಶೀಲಿಸಬಹುದು. ನಂತರ ನಾವು ನಿಜವಾದದ್ದನ್ನು ಮತ್ತು ಪ್ರಯೋಜನಕಾರಿಯಾಗುವುದನ್ನು ಅಳವಡಿಸಿಕೊಳ್ಳಬಹುದು. ಪೂರ್ವಕಲ್ಪನೆಯ ಉದಾಹರಣೆಯೊಂದನ್ನು ಹಿಂದಿನ ಮತ್ತು ಭವಿಷ್ಯದ ಜೀವನದ ಮೂಲಕ ನೀಡುತ್ತೇನೆ. 

ನಾನು ವಿಶಿಷ್ಟವಾದ ಪಾಶ್ಚಾತ್ಯ ಶೈಲಿಯಲ್ಲಿ ಬೆಳೆದಿದ್ದೇನೆ ಮತ್ತು ಬೌದ್ಧಧರ್ಮವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಮೊದಲಿಗೆ ಹಿಂದಿನ ಮತ್ತು ಭವಿಷ್ಯದ ಜೀವನಗಳಲ್ಲಿ ಖಂಡಿತವಾಗಿಯೂ ನಂಬಿಕೆ ಇರಲಿಲ್ಲ. ಪಶ್ಚಿಮದಲ್ಲಿನ ಹೆಚ್ಚಿನ ಜನರ ಆಲೋಚನಾ ವಿಧಾನಕ್ಕೆ ಇದು ಅನ್ಯವಾಗಿದೆ; ನಾವು ಮರಣಾನಂತರದ ಜೀವನದ ಬಗ್ಗೆ ಯೋಚಿಸಿದರೆ, ಅದು ಹೆಚ್ಚಾಗಿ ಕ್ರಿಶ್ಚಿಯನ್ ಶೈಲಿಯ ಸ್ವರ್ಗ ಅಥವಾ ನರಕದಂತಹ ಜಾಗವಾಗಿರುತ್ತದೆ. ಆದರೆ ಪ್ರತಿಯೊಬ್ಬರೂ ತಮ್ಮ ಹಿಂದಿನ ಜನ್ಮದಲ್ಲಿ ನನ್ನ ತಾಯಿಯಾಗಿರಬಹುದು ಎಂಬ ಯೋಚನೆಯು ಎಲ್ಲಾ ಬೋಧನೆಗಳಲ್ಲಿರುವುದರಿಂದ, ಅದನ್ನು ಬದಿಗೆ ತಳ್ಳಲು ಸಾಧ್ಯವಿಲ್ಲ. 

ಆರಂಭದಲ್ಲಿ ನಾನು ಇದನ್ನು ಈ ರೀತಿಯಾಗಿ ಸಮೀಪಿಸಿದೆ, “ಸರಿ, ಈ ಪುನರ್ಜನ್ಮದ ಕಲ್ಪನೆಯು ನನಗೆ ಸದ್ಯಕ್ಕೆ ಅರ್ಥವಾಗದಿದ್ದರೂ, ಅದು ಸರಿ ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಮನ್ನಿಸುವುದಿಲ್ಲ ಅಥವಾ ಅದನ್ನು ಬದಿಗೆ ತಳ್ಳುವುದಿಲ್ಲ, ಬದಲಿಗೆ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲು ನನ್ನ ಸಮಯವನ್ನು ತೆಗೆದುಕೊಳ್ಳುತ್ತೇನೆ.” ಕಾಲಾನಂತರದಲ್ಲಿ, ಪುನರ್ಜನ್ಮದ ಆಧಾರದ ಮೇಲೆ ನಿರ್ಮಿಸಲಾದ ಎಲ್ಲವೂ ನಿಜವಾಗಿಯೂ ಪ್ರಯೋಜನಕಾರಿಯಾಗಿದೆ ಮತ್ತು ಸರಿಯಾಗಿದೆ ಎಂದು ನಾನು ಗಮನಿಸಿದ್ದರಿಂದ, ಬಹುಶಃ ಪುನರ್ಜನ್ಮದ ಕಲ್ಪನೆಯು ನಿಜವಾಗಿರಬಹುದು.

ಪುನರ್ಜನ್ಮ ಏನು ಎಂಬುದರ ಕುರಿತು ಇರುವ ಬುದ್ಧನ ಬೋಧನೆಗಳು ನಿಮಗೆ ತಿಳಿದಿಲ್ಲದಿದ್ದರೆ, ನೀವು ಪುನರ್ಜನ್ಮವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನೀವು ನಂತರ ಅರ್ಥಮಾಡಿಕೊಳ್ಳುತ್ತೀರಿ. ನೀವು ಆ ಆಳವಾದ ಮಟ್ಟಕ್ಕೆ ಹೋಗಬೇಕು ಮತ್ತು ಅಲ್ಲಿ ನಿಮಗೆ ನರಕ ಮತ್ತು ಪ್ರೇತ ಕ್ಷೇತ್ರಗಳು ಅರ್ಥವಾಗಲು ಪ್ರಾರಂಭಿಸುತ್ತವೆ. ಮತ್ತು ನಾವು ಮನಸ್ಸಿನ ಸ್ವಭಾವವನ್ನು ಅರ್ಥಮಾಡಿಕೊಳ್ಳದಿದ್ದರೆ, ಅದರಲ್ಲಿ ಯಾವುದೂ ಅರ್ಥವಾಗುವುದಿಲ್ಲ. ಆದ್ದರಿಂದ ನಮಗೆ ಅರ್ಥವಾಗದ ಅಥವಾ ವಿಚಿತ್ರವಾಗಿ ತೋರುವ ಬೋಧನೆಗಳ ಭಾಗವನ್ನು ತಕ್ಷಣವೇ ತಿರಸ್ಕರಿಸದಿರುವುದು ಮುಖ್ಯವಾಗಿದೆ. ಇದನ್ನೇ ಮುಕ್ತವಾದ ಮನಸ್ಸನ್ನು ಹೊಂದಿರುವುದು ಮತ್ತು ವಿವೇಚನೆಯ ಅರಿವನ್ನು ಹೊಂದಿರುವುದು ಎನ್ನಲಾಗುತ್ತದೆ: “ಹೌದು, ಬುದ್ಧನು ಕಲಿಸಿದ್ದು ಇದನ್ನೇ. ಬುದ್ಧನು ಪುನರ್ಜನ್ಮದ ಬಗ್ಗೆ ಕಲಿಸಿದರು. ಕ್ಷಮಿಸಿ, ನಾನು ಅದನ್ನು ಇಷ್ಟಪಡದಿರಬಹುದು, ಆದರೆ ಅದು ಇಲ್ಲಿ ಇದೆ, ಮತ್ತು ನಾನು ಬೌದ್ಧಧರ್ಮದ ಬಗ್ಗೆ ಆಳವಾಗಿ ಕಲಿಯಲು ಬಯಸಿದ್ದಲ್ಲಿ ನಾನು ಅದನ್ನು ಎದುರಿಸಬೇಕಾಗುತ್ತದೆ.”

ಸಾರಾಂಶ 

ಬೌದ್ಧ ಗ್ರಂಥಗಳಲ್ಲಿ ನಮಗೆ ಕಂಡುಬರುವ ಸಲಹೆಗಳು, ಬೌದ್ಧ ಧರ್ಮವನ್ನು ಅಧ್ಯಯನ ಮಾಡುವಾಗ ಮಾತ್ರವಲ್ಲ, ನಮ್ಮ ದೈನಂದಿನ ಜೀವನಕ್ಕೂ ಉಪಯುಕ್ತವಾಗಿರುತ್ತವೆ. ಕೊಳಕು ಅಥವಾ ಬಿರುಕು ಬಿಟ್ಟ ಹೂದಾನಿಯಂತೆ ಇರುವುದು ಎಂದಿಗೂ ಒಳ್ಳೆಯದಲ್ಲ! ನಮ್ಮ ಜೀವನದಲ್ಲಿ ಬೌದ್ಧಧರ್ಮವನ್ನು ಅನ್ವಯಿಸುವುದು ಪೂರ್ವಭಾವಿ ಪ್ರಕ್ರಿಯೆಯಾಗಿರುತ್ತದೆ, ಇದು ಆಲಿಸುವಿಕೆಯಿಂದ ಪ್ರಾರಂಭವಾಗುತ್ತದೆ. ಒಮ್ಮೆ ಹೀಗೆ ಮಾಡಿದ ನಂತರ, ನಮಗೆ ಇನ್ನೂ ಸಂಪೂರ್ಣವಾಗಿ ಅರ್ಥವಾಗದ ವಿಷಯಗಳ ಬಗ್ಗೆ ಮುಕ್ತ ಮನಸ್ಸಿನೊಂದಿಗೆ, ನಾವು ವಜ್ರದ ಉಂಗುರವನ್ನು ಖರೀದಿಸುವಂತೆ ಬೋಧನೆಗಳನ್ನು ನಿಜವಾಗಿಯೂ ಪರಿಶೀಲಿಸಬಹುದು.

Top