ಸಾವು ಮತ್ತು ಸಾಯುವಿಕೆಯ ಕುರಿತು ಬೌದ್ಧ ಸಲಹೆ

05:16
ನಾವೆಲ್ಲರೂ ಸಾವನ್ನು ಎದುರಿಸಲಿದ್ದೇವೆ, ಆದ್ದರಿಂದ ನಾವು ಅದನ್ನು ನಿರ್ಲಕ್ಷಿಸಬಾರದು. ನಮ್ಮ ಮರಣದ ಬಗ್ಗೆ ವಾಸ್ತವಿಕವಾಗಿರುವುದರಿಂದ ನಾವು ಸಂಪೂರ್ಣವಾದ ಅರ್ಥಪೂರ್ಣ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಭಯದಿಂದ ಸಾಯುವ ಬದಲು, ನಾವು ಸಂತೋಷದಿಂದ ಸಾಯಬಹುದು ಏಕೆಂದರೆ ನಾವು ನಮ್ಮ ಜೀವನವನ್ನು ಸದುಪಯೋಗಪಡಿಸಿಕೊಂಡಿರುತ್ತೇವೆ.

ಅರ್ಥಪೂರ್ಣವಾದ ಜೀವನವನ್ನು ನಡೆಸುವುದು 

ಕಾಲಾಂತರವಾಗಿ, ವರ್ಷಗಳಲ್ಲಿ, ನಮ್ಮ ದೇಹಗಳು ಬದಲಾಗಿವೆ. ಸಾಮಾನ್ಯವಾಗಿ, ಆಧ್ಯಾತ್ಮಿಕತೆ ಅಥವಾ ಧ್ಯಾನ ಕೂಡ ಇದನ್ನು ಸಂಭವಿಸುವುದರಿಂದ ತಡೆಯಲು ಸಾಧ್ಯವಿಲ್ಲ. ನಾವು ಅಶಾಶ್ವತರು, ಯಾವಾಗಲೂ ಬದಲಾಗುತ್ತಿರುತ್ತೇವೆ, ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿದ್ದೇವೆ; ಇದು ಪ್ರಕೃತಿಯ ಭಾಗವಾಗಿರುತ್ತದೆ. ಸಮಯ ಯಾವಾಗಲೂ ಚಲಿಸುತ್ತಿರುತ್ತದೆ; ಯಾವುದೇ ಶಕ್ತಿಯು ಅದನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ, ನಿಜವಾದ ಪ್ರಶ್ನೆಯು ನಾವು ಸಮಯವನ್ನು ಸರಿಯಾಗಿ ಬಳಸುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬುದಾಗಿರುತ್ತದೆ. ನಾವು ಇತರರಿಗೆ ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಲು ಸಮಯವನ್ನು ಬಳಸುತ್ತಿದ್ದೇವೆಯೇ, ಅದು ಅಂತಿಮವಾಗಿ ನಮ್ಮನ್ನು ಆಳವಾಗಿ ಅತೃಪ್ತಗೊಳಿಸುತ್ತದೆಯೇ? ಇದು, ಸಮಯವನ್ನು ಬಳಸಿಕೊಳ್ಳುವ ತಪ್ಪು ಮಾರ್ಗ ಎಂದು ನಾನು ಭಾವಿಸುತ್ತೇನೆ. 

ಒಂದು ಉತ್ತಮ ಮಾರ್ಗವೆಂದರೆ ಪ್ರತಿದಿನ ನಮ್ಮ ಮನಸ್ಸನ್ನು ಸರಿಯಾದ ಪ್ರೇರಣೆಯೊಂದಿಗೆ ರೂಪಿಸಲು ಪ್ರಯತ್ನಿಸುವುದು ಮತ್ತು ನಂತರ ಆ ರೀತಿಯ ಪ್ರೇರಣೆಯೊಂದಿಗೆ ಉಳಿದ ದಿನವನ್ನು ಮುಂದುವರಿಸುವುದಾಗಿರುತ್ತದೆ. ಇದರರ್ಥ, ಸಾಧ್ಯವಾದಲ್ಲಿ, ಇತರರಿಗೆ ಸೇವೆ ಸಲ್ಲಿಸುವುದು; ಇಲ್ಲದಿದ್ದರೆ, ಕನಿಷ್ಠಪಕ್ಷ ಇತರರಿಗೆ ಹಾನಿಯುಂಟುಮಾಡುವುದರಿಂದ ತಡೆಯುವುದಾಗಿರುತ್ತದೆ. ಈ ವಿಷಯವಾಗಿ, ವೃತ್ತಿಗಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ನಿಮ್ಮ ವೃತ್ತಿ ಏನೇ ಇರಲಿ, ನೀವು ಸಕಾರಾತ್ಮಕ ಪ್ರೇರಣೆಯನ್ನು ಹೊಂದಿರಬಹುದು. ನಮ್ಮ ಸಮಯವನ್ನು ಐದು ವರ್ಷಗಳವರೆಗೆ ಮಾತ್ರವಲ್ಲದೆ ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು - ದಶಕಗಳಲ್ಲಿ ಈ ರೀತಿಯಾಗಿ ಬಳಸಿದರೆ - ನಮ್ಮ ಜೀವನವು ಅರ್ಥಪೂರ್ಣವಾಗಿರುತ್ತದೆ. ಕನಿಷ್ಠ ಪಕ್ಷ, ನಾವು ನಮ್ಮ ಸ್ವಂತ ವೈಯಕ್ತಿಕ ಸಂತೋಷದ ಮಾನಸಿಕ ಸ್ಥಿತಿಗೆ ಒಂದು ರೀತಿಯ ಕೊಡುಗೆಯನ್ನು ನೀಡುತ್ತಿದ್ದೇವೆ. ಪ್ರಸ್ತುತವಾಗಿ ಅಥವಾ ಭವಿಷ್ಯದಲ್ಲಿ ನಮ್ಮ ಅಂತ್ಯ ಬರುತ್ತದೆ, ಮತ್ತು ಆ ದಿನ ನಮಗೆ ಯಾವುದೇ ವಿಷಾದವಿರುವುದಿಲ್ಲ; ನಾವು ನಮ್ಮ ಸಮಯವನ್ನು ರಚನಾತ್ಮಕವಾಗಿ ಬಳಸಿದ್ದೇವೆ ಎಂಬುದರ ಬಗ್ಗೆ ನಮಗೆ ಅರಿವಿರುತ್ತದೆ.  

ಸಾವಿನ ಬಗ್ಗೆ ವಾಸ್ತವಿಕ ಮನೋಭಾವವನ್ನು ಹೊಂದಿರುವುದು 

ಆದಾಗ್ಯೂ, ನಮ್ಮ ಪ್ರಸ್ತುತ ಜೀವನವು ಶಾಶ್ವತವಲ್ಲ. ಆದರೆ "ಸಾವು ನಮ್ಮ ಶತ್ರು" ಎಂದು ಯೋಚಿಸುವುದು ಅಕ್ಷರಶಃ ತಪ್ಪಾಗಿರುತ್ತದೆ. ಸಾವು ನಮ್ಮ ಜೀವನದ ಭಾಗವಾಗಿರುತ್ತದೆ. ಹೌದು, ಬೌದ್ಧ ದೃಷ್ಟಿಕೋನದಿಂದ, ಈ ದೇಹವು ಒಂದು ಅರ್ಥದಲ್ಲಿ ಶತ್ರುವೇ. ಮೋಕ್ಷಕ್ಕಾಗಿ - ಅಂದರೆ ವಿಮೋಚನೆಗಾಗಿ - ನಿಜವಾದ ಬಯಕೆಯನ್ನು ಬೆಳೆಸಿಕೊಳ್ಳಲು ನಮಗೆ ಆ ರೀತಿಯ ಮನೋಭಾವ ಬೇಕು: ಈ ಜನ್ಮ, ಈ ದೇಹದ ಸ್ವಭಾವವೇ ಬಳಲಿಕೆ, ಆದ್ದರಿಂದ ನಾವು ಅದನ್ನು ನಿಲ್ಲಿಸಲು ಬಯಸುತ್ತೇವೆ. ಆದರೆ ಈ ಮನೋಭಾವವು ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು. ನೀವು ಸಾವನ್ನು ಶತ್ರು ಎಂದು ಪರಿಗಣಿಸಿದರೆ, ಈ ದೇಹವು ಸಹ ಶತ್ರುವಾಗಿರುತ್ತದೆ, ಮತ್ತು ಇಡೀ ಜೀವನವೇ ಶತ್ರುವಾಗಿರುತ್ತದೆ. ಇದು ಸ್ವಲ್ಪ ಮಿತಿಮೀರುತ್ತದೆ. 

ಹೌದು, ಸಾವು ಎಂದರೆ, ಕನಿಷ್ಠ ಈ ದೇಹ ಇನ್ನು ಮುಂದೆ ಅಸ್ತಿತ್ವದಲ್ಲಿರದೆ ಇರುವುದಾಗಿರುತ್ತದೆ. ಈ ಜೀವಿತಾವಧಿಯಲ್ಲಿ ನಾವು ನಿಕಟ ಸಂಪರ್ಕವನ್ನು ಬೆಳೆಸಿಕೊಂಡ ಎಲ್ಲಾ ವಿಷಯಗಳಿಂದ ನಾವು ಬೇರ್ಪಡಬೇಕಾಗುತ್ತದೆ. ಪ್ರಾಣಿಗಳು ಸಾವನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಮನುಷ್ಯರು ಸಹ ಸ್ವಾಭಾವಿಕವಾಗಿ ಹೀಗೆ ವರ್ತಿಸುತ್ತಾರೆ. ಆದರೆ ನಾವು ಪ್ರಕೃತಿಯ ಭಾಗವಾದ್ದರಿಂದ, ಸಾವು ನಮ್ಮ ಜೀವನದ ಭಾಗವಾಗಿರುತ್ತದೆ. ತಾರ್ಕಿಕವಾಗಿ, ಜೀವನಕ್ಕೆ ಒಂದು ಆರಂಭ ಮತ್ತು ಅಂತ್ಯವಿದೆ - ಜನನ ಮತ್ತು ಮರಣ. ಆದ್ದರಿಂದ ಇದು ಅಸಾಮಾನ್ಯವಲ್ಲ. ಆದರೆ ಸಾವಿನ ಬಗ್ಗೆ ನಮ್ಮ ಅವಾಸ್ತವಿಕ ವಿಧಾನಗಳು ಮತ್ತು ದೃಷ್ಟಿಕೋನಗಳು ನಮಗೆ ಹೆಚ್ಚುವರಿ ಚಿಂತೆ ಮತ್ತು ಆತಂಕವನ್ನು ಉಂಟುಮಾಡುತ್ತವೆ ಎಂದು ನಾನು ಭಾವಿಸುತ್ತೇನೆ. 

ಆದ್ದರಿಂದ ಬೌದ್ಧ ಸಾಧಕರಾಗಿ, ಸಾವು ಮತ್ತು ಅಶಾಶ್ವತತೆಯ ಬಗ್ಗೆ ಪ್ರತಿದಿನ ನಮ್ಮನ್ನು ನೆನಪಿಸಿಕೊಳ್ಳುವುದು ಬಹಳಾ ಉಪಯುಕ್ತವಾಗಿರುತ್ತದೆ. ಅಶಾಶ್ವತತೆಯ ಎರಡು ಹಂತಗಳಿವೆ: ಒಂದು ಸ್ಥೂಲ ಮಟ್ಟ [ಉತ್ಪತ್ತಿಯಾಗುವ ಎಲ್ಲಾ ವಿದ್ಯಮಾನಗಳು ಕೊನೆಗೊಳ್ಳುತ್ತವೆ] ಮತ್ತು ಸೂಕ್ಷ್ಮ ಮಟ್ಟ [ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತವಾದ ಎಲ್ಲಾ ವಿದ್ಯಮಾನಗಳು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತವೆ]. ವಾಸ್ತವದಲ್ಲಿ, ಅಶಾಶ್ವತತೆಯ ಸೂಕ್ಷ್ಮ ಮಟ್ಟವು ಬೌದ್ಧಧರ್ಮದ ನಿಜವಾದ ಬೋಧನೆಯಾಗಿರುತ್ತದೆ; ಆದರೆ ಸಾಮಾನ್ಯವಾಗಿ, ಅಶಾಶ್ವತತೆಯ ಸ್ಥೂಲ ಮಟ್ಟವು ಅಭ್ಯಾಸದ ಒಂದು ಪ್ರಮುಖ ಭಾಗವಾಗಿರುತ್ತದೆ ಏಕೆಂದರೆ ಅದು ನಾವು ಶಾಶ್ವತವಾಗಿ ಉಳಿಯುತ್ತೇವೆ ಎಂಬ ಭಾವನೆಯನ್ನು ಆಧರಿಸಿದ ನಮ್ಮ ಕೆಲವು ವಿನಾಶಕಾರಿ ಭಾವನೆಗಳನ್ನು ಕಡಿಮೆ ಮಾಡುತ್ತದೆ. 

ಈ ಮಹಾನ್ ರಾಜರು ಅಥವಾ ರಾಜಾಧಿರಾಜರನ್ನು ಮತ್ತು ಅವರ ದೊಡ್ಡ ಕೋಟೆಗಳು ಮತ್ತು ಅರಮನೆಗಳನ್ನು ನೋಡಿ - ಪಶ್ಚಿಮದಲ್ಲಿಯೂ ಸಹ. ಈ ಚಕ್ರವರ್ತಿಗಳು ತಮ್ಮನ್ನು ತಾವು ಅಮರರೆಂದು ಪರಿಗಣಿಸಿದ್ದರು. ಆದರೆ ಈಗ ನಾವು ಈ ರಚನೆಗಳನ್ನು ನೋಡಿದಾಗ, ಅದು ಮೂರ್ಖತನವೆನಿಸುತ್ತದೆ. ಚೀನಾದ ಮಹಾಗೋಡೆಯನ್ನು ನೋಡಿ. ಅದನ್ನು ನಿರ್ಮಿಸಿದ ಪ್ರಜೆಗಳಿಗೆ ಅದು ಅಪಾರ ದುಃಖವನ್ನುಂಟುಮಾಡಿತು. ಆದರೆ ಈ ಕೆಲಸಗಳನ್ನು "ನನ್ನ ಶಕ್ತಿ ಮತ್ತು ಸಾಮ್ರಾಜ್ಯ ಶಾಶ್ವತವಾಗಿ ಉಳಿಯುತ್ತದೆ" ಮತ್ತು "ನಮ್ಮ ಚಕ್ರವರ್ತಿಯು ಶಾಶ್ವತವಾಗಿ ಉಳಿಯುತ್ತಾನೆ" ಎಂಬ ಭಾವನೆಯೊಂದಿಗೆ ನಡೆಸಲಾಗಿತ್ತು. ಬರ್ಲಿನ್ ಗೋಡೆಯಂತೆ - ಕೆಲವು ಪೂರ್ವ ಜರ್ಮನ್ ಕಮ್ಯುನಿಸ್ಟ್ ನಾಯಕರು ಇದು ಸಾವಿರ ವರ್ಷಗಳ ಕಾಲ ಉಳಿಯುತ್ತದೆ ಎಂದು ಹೇಳಿದ್ದರು. ಈ ಎಲ್ಲಾ ಭಾವನೆಗಳು, ತಮ್ಮನ್ನು ಮತ್ತು ತಮ್ಮ ಪಕ್ಷ ಅಥವಾ ತಮ್ಮ ನಂಬಿಕೆಗಳನ್ನು ಗ್ರಹಿಸುವುದರಿಂದ ಮತ್ತು ಅವು ಶಾಶ್ವತವಾಗಿ ಉಳಿಯುತ್ತವೆ ಎಂದು ಯೋಚಿಸುವುದರಿಂದ ಬರುತ್ತವೆ. 

ನಮಗೆ ನಮ್ಮ ಪ್ರೇರಣೆಯ ಭಾಗವಾಗಿ ಸಕಾರಾತ್ಮಕ ಬಯಕೆ ಇರಬೇಕು ಎಂಬುದು ನಿಜ - ಬಯಕೆ ಇಲ್ಲದೆ ಯಾವುದೇ ಚಲನೆ ಇಲ್ಲ. ಆದರೆ ಬಯಕೆ ಅಜ್ಞಾನದೊಂದಿಗೆ ಸೇರಿಕೊಂಡರೆ ಅಪಾಯಕಾರಿ. ಉದಾಹರಣೆಗೆ, "ನಾನು ಶಾಶ್ವತವಾಗಿ ಉಳಿಯುತ್ತೇನೆ" ಎಂಬ ದೃಷ್ಟಿಕೋನವನ್ನು ಸೃಷ್ಟಿಸುವ ಶಾಶ್ವತತೆಯ ಭಾವನೆ ಇದೆ. ಅದು ಅವಾಸ್ತವಿಕ. ಅದು ಅಜ್ಞಾನ. ಮತ್ತು ನೀವು ಅದನ್ನು ಬಯಕೆಯೊಂದಿಗೆ ಸಂಯೋಜಿಸಿದಾಗ - ಇನ್ನೂ ಹೆಚ್ಚಿನದನ್ನು, ಇನ್ನೂ ಹೆಚ್ಚಿನದನ್ನು, ಇನ್ನೂ ಹೆಚ್ಚಿನದನ್ನು ಬಯಸುವುದು - ಅದು ಇನ್ನಷ್ಟು ತೊಂದರೆ ಮತ್ತು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಆದರೆ, ಬುದ್ಧಿವಂತಿಕೆಯೊಂದಿಗೆ ಇರುವ ಬಯಕೆಯು ಬಹಳಾ ಸಕಾರಾತ್ಮಕವಾಗಿರುತ್ತದೆ, ಆದ್ದರಿಂದ ನಮಗೆ ಅದು ಬೇಕಾಗಿರುತ್ತದೆ. 

ತಾಂತ್ರಿಕ ಆಚರಣೆಯಲ್ಲಿ, ತಲೆಬುರುಡೆಗಳಂತಹ ವಸ್ತುಗಳೊಂದಿಗೆ ನಾವು ಅಶಾಶ್ವತತೆಯ ನೆನಪೋಲೆಗಳನ್ನು ಸಹ ನೋಡುತ್ತೇವೆ ಮತ್ತು ಕೆಲವು ಮಂಡಲಗಳಲ್ಲಿ ನಾವು ಸ್ಮಶಾನಗಳು, ದೇಗುಲದ ಮೈದಾನಗಳನ್ನು ದೃಶ್ಯೀಕರಿಸುತ್ತೇವೆ. ಇವೆಲ್ಲವೂ ನಮಗೆ ಅಶಾಶ್ವತತೆಯನ್ನು ನೆನಪಿಸುವ ಸಂಕೇತಗಳಾಗಿರುತ್ತವೆ. ಒಂದು ದಿನ ನನ್ನ ಕಾರು ಸ್ಮಶಾನದ ಮೂಲಕ ಹಾದುಹೋಯಿತು, ಆದ್ದರಿಂದ ನಾನು ಅದನ್ನು ನಂತರದ ಸಾರ್ವಜನಿಕ ಭಾಷಣಯೊಂದರಲ್ಲಿ ಉಲ್ಲೇಖಿಸಿದಾಗ ಅದು ನನ್ನ ಮನಸ್ಸಿನಲ್ಲಿ ತಾಜಾವಾಗಿತ್ತು: "ನಾನು ಸ್ಮಶಾನದ ಮೂಲಕ ಹಾದು ಹೋಗುತ್ತಿದ್ದೆ. ಅದು ನಮ್ಮ ಅಂತಿಮ ತಾಣ. ನಾವು ಅಲ್ಲಿಗೆ ಹೋಗಬೇಕು." ಶಿಲುಬೆಯ ಮೇಲಿರುವ ಯೇಸು ಕ್ರಿಸ್ತನು, ತನ್ನ ಅನುಯಾಯಿಗಳಿಗೆ ಅಂತಿಮವಾಗಿ ಸಾವು ಬರುತ್ತದೆ ಎಂದು ತೋರಿಸಿದನು. ಮತ್ತು ಬುದ್ಧನು ಅದೇ ರೀತಿಯಾಗಿ ಮಾಡಿದನು. ಅಲ್ಲಾನ ಬಗ್ಗೆ ನನಗೆ ಗೊತ್ತಿಲ್ಲ – ಅಲ್ಲಾಹನಿಗೆ ಯಾವುದೇ ರೂಪವಿಲ್ಲ – ಆದರೆ ಖಂಡಿತವಾಗಿಯೂ ಮುಹಮ್ಮದ್ ಇದನ್ನೇ ಪ್ರದರ್ಶಿಸಿದ್ದರು. 

ಆದ್ದರಿಂದ, ಸಾವು ಇಂದು ಅಥವಾ ನಾಳೆ ಬಂದೇ ಬರುತ್ತದೆ ಎಂಬುದರ ಬಗ್ಗೆ ನಾವು ವಾಸ್ತವಿಕವಾಗಿರಬೇಕು. ಸಾವು ಬರುತ್ತದೆ ಎಂಬ ಮನೋಭಾವವನ್ನು ನೀವು ಆರಂಭದಿಂದಲೇ ಬೆಳೆಸಿಕೊಂಡರೆ; ಸಾವು ನಿಜವಾಗಿಯೂ ಬಂದಾಗ, ನೀವು ಕಡಿಮೆ ಚಿಂತಿತರಾಗಿರುತ್ತೀರಿ. ಆದ್ದರಿಂದ, ಬೌದ್ಧ ಧರ್ಮದ ಅನುಯಾಯಿಗಳಿಗೆ, ಇದನ್ನು ಪ್ರತಿದಿನವೂ ನೆನಪಿಸಿಕೊಳ್ಳುವುದು ಬಹಳ ಮುಖ್ಯ.

 

ಸಾವಿನ ಸಮಯದಲ್ಲಿ ಏನು ಮಾಡಬೇಕು 

ನಮ್ಮ ಅಂತಿಮ ದಿನ ಬಂದಾಗ, ನಾವು ಅದನ್ನು ಸ್ವೀಕರಿಸಬೇಕು ಮತ್ತು ಅದನ್ನು ವಿಚಿತ್ರವಾಗಿ ನೋಡಬಾರದು. ಬೇರೆ ದಾರಿಯಿಲ್ಲ. ಆ ಸಮಯದಲ್ಲಿ, ಆಸ್ತಿಕ ಧರ್ಮದಲ್ಲಿ ನಂಬಿಕೆಯಿರುವ ಯಾರಾದರೂ ಹೀಗೆ ಯೋಚಿಸಬೇಕು, “ಈ ಜೀವನವೇ ದೇವರಿಂದ ಸೃಷ್ಟಿಸಲ್ಪಟ್ಟಿದೆ, ಆದ್ದರಿಂದ ಅಂತ್ಯವು, ದೇವರ ಯೋಜನೆಯ ಪ್ರಕಾರವೇ ಆಗಿದೆ. ನನಗೆ ಸಾವು ಇಷ್ಟವಿಲ್ಲವಾದರೂ, ದೇವರು ಅದನ್ನು ಸೃಷ್ಟಿಸಿದನು, ಆದ್ದರಿಂದ ಅದಕ್ಕೆ ಸ್ವಲ್ಪವಾದರೂ ಅರ್ಥವಿರಬೇಕು.” ಸೃಷ್ಟಿಕರ್ತ ದೇವರನ್ನು ನಿಜವಾಗಿಯೂ ನಂಬುವ ಜನರು ಈ ರೀತಿಯಾಗಿ ಯೋಚಿಸಬೇಕು. 

ಭಾರತೀಯ ಸಂಪ್ರದಾಯಗಳನ್ನು ಅನುಸರಿಸುವವರು ಮತ್ತು ಪುನರ್ಜನ್ಮದಲ್ಲಿ ನಂಬಿಕೆ ಇಡುವವರು, ಚಿಂತೆ, ಚಿಂತೆ ಮಾಡುವ ಬದಲು, ತಮ್ಮ ಭವಿಷ್ಯದ ಜೀವನದ ಬಗ್ಗೆ ಯೋಚಿಸಬೇಕು ಮತ್ತು ಉತ್ತಮ ಭವಿಷ್ಯದ ಜೀವನಕ್ಕಾಗಿ ಸರಿಯಾದ ಕಾರಣಗಳನ್ನು ಸೃಷ್ಟಿಸಲು ಸ್ವಲ್ಪವಾದರೂ ಪ್ರಯತ್ನಿಸಬೇಕು. ಉದಾಹರಣೆಗೆ, ಸಾಯುವ ಸಮಯದಲ್ಲಿ ನಿಮ್ಮ ಮುಂದಿನ ಜೀವನವು ಉತ್ತಮ ಜೀವನವಾಗುವಂತೆ ನೀವು ನಿಮ್ಮ ಎಲ್ಲಾ ಸದ್ಗುಣಗಳನ್ನು ಅರ್ಪಿಸಬಹುದು. ತದನಂತರ, ನಮ್ಮ ನಂಬಿಕೆಗಳು ಏನೇ ಇರಲಿ, ಸಾಯುವ ಸಮಯದಲ್ಲಿ, ಮಾನಸಿಕ ಸ್ಥಿತಿ ಶಾಂತವಾಗಿರಬೇಕು. ಕೋಪ, ಅತಿಯಾದ ಭಯ - ಇವು ಒಳ್ಳೆಯದಲ್ಲ. 

ಸಾಧ್ಯವಾದಲ್ಲಿ, ಬೌದ್ಧ ಧರ್ಮದ ಅನುಯಾಯಿಗಳು ತಮ್ಮ ಮುಂದಿನ ಜೀವನವನ್ನು ಎದುರು ನೋಡಲು ಈಗ ತಮ್ಮ ಸಮಯವನ್ನು ಬಳಸಬೇಕು. ಬೋಧಿಚಿತ್ತ ಪದ್ಧತಿಗಳು ಮತ್ತು ಕೆಲವು ತಾಂತ್ರಿಕ ಪದ್ಧತಿಗಳು ಇದಕ್ಕೆ ಒಳ್ಳೆಯದು. ತಾಂತ್ರಿಕ ಬೋಧನೆಗಳ ಪ್ರಕಾರ, ಸಾವಿನ ಸಮಯದಲ್ಲಿ ಅಂಶಗಳ ಎಂಟು-ಹಂತದ ಕರಗುವಿಕೆ ಇರುತ್ತದೆ - ದೇಹದ ಅಂಶಗಳ ಸ್ಥೂಲ ಮಟ್ಟಗಳು ಕರಗುತ್ತವೆ ಮತ್ತು ನಂತರ ಹೆಚ್ಚು ಸೂಕ್ಷ್ಮ ಮಟ್ಟಗಳು ಸಹ ಕರಗುತ್ತವೆ. ತಾಂತ್ರಿಕ ಸಾಧಕರು ಇದನ್ನು ತಮ್ಮ ದೈನಂದಿನ ಧ್ಯಾನದಲ್ಲಿ ಸೇರಿಸಿಕೊಳ್ಳಬೇಕು. ಪ್ರತಿದಿನ, ನಾನು ಸಾವಿನ ಬಗ್ಗೆ ಧ್ಯಾನಿಸುತ್ತೇನೆ - ವಿಭಿನ್ನ ಮಂಡಲ ಅಭ್ಯಾಸಗಳಲ್ಲಿ - ಕನಿಷ್ಠ ಐದು ಬಾರಿ, ಆದ್ದರಿಂದ ನಾನು ಇನ್ನೂ ಜೀವಂತವಾಗಿದ್ದೇನೆ! ಇಂದು ಬೆಳಿಗ್ಗೆಯೇ ನಾನು ಮೂರು ಸಾವುಗಳನ್ನು ಅನುಭವಿಸಿದ್ದೇನೆ. 

ಹೀಗೆ, ಮುಂದಿನ ಉತ್ತಮ ಜೀವನದ ಖಚಿತತೆಯನ್ನು ಸೃಷ್ಟಿಸುವ ವಿಧಾನಗಳು ಇವಾಗಿರುತ್ತವೆ. ಮತ್ತು ನಂಬಿಕೆಯಿಲ್ಲದವರಿಗೆ, ನಾನು ಮೊದಲೇ ಹೇಳಿದಂತೆ, ಅಶಾಶ್ವತತೆಯ ಸಂಗತಿಯ ಬಗ್ಗೆ ವಾಸ್ತವಿಕವಾಗಿರುವುದು ಮುಖ್ಯ. 

ಸಾಯುತ್ತಿರುವವರಿಗೆ ಹೇಗೆ ಸಹಾಯ ಮಾಡುವುದು

ವಾಸ್ತವದಲ್ಲಿ, ಸಾಯುತ್ತಿರುವ ಜನರ ಸುತ್ತಮುತ್ತಲಿನ ಜನರ ಬಳಿ ಸ್ವಲ್ಪ ಜ್ಞಾನವಿದ್ದರೆ [ಹೇಗೆ ಸಹಾಯ ಮಾಡಬೇಕೆಂದು] ಅದು ಒಳ್ಳೆಯದಾಗಿರುತ್ತದೆ. ನಾನು ಮೊದಲೇ ಹೇಳಿದಂತೆ, ಸೃಷ್ಟಿಕರ್ತ ದೇವರನ್ನು ನಂಬುವ ಸಾಯುತ್ತಿರುವ ಜನರಿಗೆ, ನೀವು ದೇವರನ್ನು ನೆನಪಿಸಬಹುದು. ದೇವರಲ್ಲಿನ ಏಕ-ನಿರಂತರ ನಂಬಿಕೆಯು, ಬೌದ್ಧ ದೃಷ್ಟಿಕೋನದಿಂದಲೂ ಸ್ವಲ್ಪ ಪ್ರಯೋಜನವನ್ನು ಹೊಂದಿರುತ್ತದೆ. ನಂಬಿಕೆಯಿಲ್ಲದ, ಧರ್ಮವಿಲ್ಲದ ಜನರೊಂದಿಗೆ, ನಾನು ಮೊದಲೇ ಹೇಳಿದಂತೆ, ವಾಸ್ತವಿಕವಾಗಿರಿ ಮತ್ತು ಅವರ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸುವುದು ಮುಖ್ಯ. 

ಸಾಯುತ್ತಿರುವ ವ್ಯಕ್ತಿಯ ಸುತ್ತಲೂ ಅಳುವ ಸಂಬಂಧಿಕರಿರುವುದರಿಂದ, ಅವರಿಗೆ ಶಾಂತ ಮನಸ್ಸನ್ನು ಇಟ್ಟುಕೊಳ್ಳಲು ಹಾನಿಕಾರಕವಾಗಬಹುದು – ಇದು ಅತಿಯಾದ ಬಾಂಧವ್ಯವಾಗಿರುತ್ತದೆ. ಮತ್ತು ಅವರ ಸಂಬಂಧಿಕರ ಬಗೆಗಿರುವ ಹೆಚ್ಚಿನ ಬಾಂಧವ್ಯದಿಂದಾಗಿ, ಕೋಪವನ್ನು ಬೆಳೆಸಿಕೊಳ್ಳುವ ಮತ್ತು ಸಾವನ್ನು ಶತ್ರುವಾಗಿ ನೋಡುವ ಸಾಧ್ಯತೆಯಿರುತ್ತದೆ. ಆದ್ದರಿಂದ, ಅವರ ಮಾನಸಿಕ ಸ್ಥಿತಿಯನ್ನು ಶಾಂತವಾಗಿಡಲು ಪ್ರಯತ್ನಿಸುವುದು ಮುಖ್ಯ. ಇದು ಬಹಳಾ ಮುಖ್ಯ. 

ಬಹಳಾ ಸಂದರ್ಭಗಳಲ್ಲಿ ಬೌದ್ಧ ಧರ್ಮಶಾಲೆಗಳಿಗೆ ಹೋಗಲು ನನ್ನನ್ನು ವಿನಂತಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಸಾಯುತ್ತಿರುವ ಜನರನ್ನು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರನ್ನು ನೋಡಿಕೊಳ್ಳಲು ಸಂಪೂರ್ಣವಾಗಿ ಸಮರ್ಪಿತರಾಗಿರುವ ಸನ್ಯಾಸಿಗಳ ಆಶ್ರಮವಿದೆ. ನಮ್ಮ ದೈನಂದಿನ ಸಹಾನುಭೂತಿಯನ್ನು ಅಭ್ಯಾಸವಾಗಿ ಕಾರ್ಯರೂಪಕ್ಕೆ ತರಲು ಇದು ಒಂದು ಉತ್ತಮ ಮಾರ್ಗವಾಗಿರುತ್ತದೆ. ಇದು ಬಹಳ ಮುಖ್ಯವಾಗಿರುತ್ತದೆ. 

ಸಾರಾಂಶ 

ಸಾವು ವಿಚಿತ್ರವಾದದ್ದೇನಲ್ಲ. ಇದು ಪ್ರಪಂಚದಾದ್ಯಂತ ಪ್ರತಿದಿನ ಸಂಭವಿಸುತ್ತದೆ. ನಾವು ಖಂಡಿತವಾಗಿಯೂ ಸಾಯುತ್ತೇವೆ ಎಂದು ಅರ್ಥಮಾಡಿಕೊಳ್ಳುವುದರಿಂದ, ಅರ್ಥಪೂರ್ಣ ಜೀವನವನ್ನು ನಡೆಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಅದು ಯಾವುದೇ ಸಮಯದಲ್ಲಿ ಬರಬಹುದು ಎಂದು ನಾವು ನೋಡಿದಾಗ, ನಾವು ಸಣ್ಣ ವಿಷಯಗಳ ಬಗ್ಗೆ ಜಗಳವಾಡುವ ಮತ್ತು ವಾದಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಬದಲಾಗಿ, ಇತರರಿಗೆ ಸಾಧ್ಯವಾದಷ್ಟು ಉಪಯುಕ್ತವಾಗುವ ಮೂಲಕ ಜೀವನವನ್ನು ಸದುಪಯೋಗಪಡಿಸಿಕೊಳ್ಳಲು ನಾವು ಪ್ರೇರಿತರಾಗುತ್ತೇವೆ. 

Top