ಯಾವುದೇ ಕ್ರಿಯೆಯ ಫಲಿತಾಂಶವು ಅದರ ಪ್ರೇರಣೆಯನ್ನು ಅವಲಂಬಿಸಿರುತ್ತದೆ. ಅದರ ಹಿಂದೆ ಗೊಂದಲದ ಭಾವನೆ ಅಥವಾ ಸಕಾರಾತ್ಮಕ ಭಾವನೆ ಇದೆಯೇ ಎಂಬುದನ್ನು ಅವಲಂಬಿಸಿ, ಅದೇ ಕ್ರಿಯೆಯು ವಿಭಿನ್ನ ಫಲಿತಾಂಶಗಳನ್ನು ತರುತ್ತದೆ. ಸಹಾನುಭೂತಿಯಂತಹ ಸಾಮಾನ್ಯ ಭಾವನೆಯು ಕ್ರಿಯೆಯನ್ನು ಪ್ರೇರೇಪಿಸಿದಾಗಲೂ ಸಹ, ಆ ಭಾವನೆಯ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲಗಳು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ.
ಸಹಾನುಭೂತಿಯ ಮೂರು ವಿಧಗಳು
ಉದಾಹರಣೆಗೆ, ಸಹಾನುಭೂತಿಯನ್ನು ನೋಡಿ. ಇದರ ಮೂರು ವಿಧಗಳಿವೆ:
- ಮೊದಲನೆಯದು ಸಂಬಂಧಿಕರು ಮತ್ತು ಪ್ರೀತಿಪಾತ್ರರ ಕಡೆಗೆ ನಿರ್ದೇಶಿಸಲ್ಪಟ್ಟಿರುತ್ತದೆ. ಆದರೆ, ಬಾಂಧವ್ಯವನ್ನು ಆಧರಿಸಿರುವುದರಿಂದ, ಇದು ವ್ಯಾಪ್ತಿಯಲ್ಲಿ ಸೀಮಿತವಾಗಿರುತ್ತದೆ. ಸಣ್ಣದೊಂದು ವಿಷಯದಿಂದ, ಇದು ತಕ್ಷಣವೇ ಕೋಪ ಅಥವಾ ದ್ವೇಷವಾಗಿಯೂ ಬದಲಾಗಬಹುದು.
- ಎರಡನೇ ರೀತಿಯ ಸಹಾನುಭೂತಿಯು ಬಳಲುತ್ತಿರುವ ಜೀವಿಗಳಿಗಾಗಿ ಇರುವ ಕರುಣೆಯೆ ಆಧಾರದ ಮೇಲೆ, ಅವುಗಳ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಈ ರೀತಿಯ ಸಹಾನುಭೂತಿಯಿಂದ, ನಾವು ಅವರನ್ನು ಕೀಳಾಗಿ ಕಾಣುತ್ತೇವೆ ಮತ್ತು ಅವರಿಗಿಂತ ನಾವು ಉತ್ತಮವೆಂದು ಭಾವಿಸುತ್ತೇವೆ. ಈ ಎರಡು ರೀತಿಯ ಸಹಾನುಭೂತಿಯು ಗೊಂದಲಮಯ ಭಾವನೆಗಳಿಂದ ಉದ್ಭವಿಸುತ್ತವೆ, ಇದರಿಂದಾಗಿ ಅವು ತೊಂದರೆಗೆ ಕಾರಣವಾಗುತ್ತವೆ.
- ಮೂರನೇ ರೀತಿಯ ಸಹಾನುಭೂತಿಯು ಪಕ್ಷಪಾತವಿಲ್ಲದದ್ದಾಗಿರುತ್ತದೆ. ಇದು ತಿಳುವಳಿಕೆ ಮತ್ತು ಗೌರವವನ್ನು ಆಧರಿಸಿರುತ್ತದೆ. ಇದರೊಂದಿಗೆ, ಇತರರು ನಮ್ಮಂತೆಯೇ ಇರುವರು ಎಂದು ನಾವು ಅರಿತುಕೊಳ್ಳುತ್ತೇವೆ: ಅವರು ಸಂತೋಷವಾಗಿರಲು ಮತ್ತು ನಮ್ಮಂತೆ ಬಳಲದಿರುವ ಹಕ್ಕನ್ನು ಹೊಂದಿರುತ್ತಾರೆ. ಈ ತಿಳುವಳಿಕೆಯಿಂದಾಗಿ, ನಾವು ಅವರ ಬಗ್ಗೆ ಪ್ರೀತಿ, ಸಹಾನುಭೂತಿ ಮತ್ತು ವಾತ್ಸಲ್ಯವನ್ನು ಅನುಭವಿಸುತ್ತೇವೆ. ಈ ಮೂರನೇ ರೀತಿಯ ಸಹಾನುಭೂತಿಯು ಧೃಡವಾದ ವಿಧವಾಗಿರುತ್ತದೆ. ಇದು ತರಬೇತಿ, ಶಿಕ್ಷಣ ಮತ್ತು ಕಾರಣದಿಂದ ಅಭಿವೃದ್ಧಿಗೊಳ್ಳುತ್ತದೆ. ಸಹಾನುಭೂತಿಯು ಹೆಚ್ಚು ಧೃಡವಾದಷ್ಟು ಇದು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
ಈ ಮೂರು ರೀತಿಯ ಸಹಾನುಭೂತಿಯು ಎರಡು ಸಾಮಾನ್ಯ ವರ್ಗಗಳಿಗೆ ಸೇರುತ್ತವೆ. ಮೊದಲ ಎರಡು ವಿಧಗಳು ನರರೋಗದ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಉದ್ಭವಿಸುವ ಭಾವನೆಗಳಾಗಿವೆ. ಮೂರನೆಯದು ಕಾರಣದ ಆಧಾರದ ಮೇಲೆ ಉದ್ಭವಿಸುವ ಭಾವನೆಯಾಗಿರುತ್ತದೆ.
ಸಹಾನುಭೂತಿ ಆಧಾರಿತ ಜಾತ್ಯತೀತ ನೀತಿಶಾಸ್ತ್ರ
ಮಗುವಿಗೆ, ಪ್ರೀತಿಯು ಧರ್ಮ, ಕಾನೂನುಗಳು ಅಥವಾ ಪೊಲೀಸ್ ಜಾರಿಯನ್ನು ಆಧರಿಸಿರುವುದಿಲ್ಲ. ಅದು ಸಹಜವಾಗಿಯೇ ಬರುತ್ತದೆ. ಆದ್ದರಿಂದ ಧರ್ಮಗಳು ಕಲಿಸುವ ಸಹಾನುಭೂತಿಯು ಒಳ್ಳೆಯದಾಗಿದ್ದರೂ, ಸಹಾನುಭೂತಿಯ ನಿಜವಾದ ಬೀಜವು, ಸಹಾನುಭೂತಿಯ ನಿಜವಾದ ಆಧಾರವು ಜೈವಿಕವಾಗಿರುತ್ತದೆ. ನಾನು "ಜಾತ್ಯತೀತ ನೀತಿಶಾಸ್ತ್ರ" ಎಂದು ಕರೆಯುವುದಕ್ಕೆ ಇದು ಆಧಾರವಾಗಿರುತ್ತದೆ. ಧರ್ಮವು ಈ ಬೀಜವನ್ನು ಬಲಪಡಿಸಬೇಕು.
ಕೆಲವರು ನೈತಿಕ ನೀತಿಶಾಸ್ತ್ರವು ಧಾರ್ಮಿಕ ನಂಬಿಕೆಯನ್ನು ಮಾತ್ರ ಆಧರಿಸಿರಬೇಕು ಎಂದು ಭಾವಿಸುತ್ತಾರೆ. ತರಬೇತಿಯ ಮೂಲಕ ನೀತಿಶಾಸ್ತ್ರದ ಪ್ರಜ್ಞೆಯನ್ನು ಬೆಳೆಸಿಕೊಳ್ಳಬಹುದು ಎಂದು ಇತರರು ಭಾವಿಸುತ್ತಾರೆ. "ಜಾತ್ಯತೀತ" ಎಂದರೆ ಧರ್ಮವನ್ನು ತಿರಸ್ಕರಿಸುವುದು ಎಂದು ಕೆಲವರು ಭಾವಿಸುತ್ತಾರೆ. "ಜಾತ್ಯತೀತ" ಎಂದರೆ ಭಾರತದ ಸಂವಿಧಾನದಲ್ಲಿರುವಂತೆ, ನಂಬಿಕೆಯಿಲ್ಲದವರಿಗೆ ಗೌರವ ಸೇರಿದಂತೆ, ಪಕ್ಷಪಾತವಿಲ್ಲದೆ ಎಲ್ಲಾ ಧರ್ಮಗಳಿಗೆ ಗೌರವವನ್ನು ನೀಡುವುದು ಎಂದು ಇತರರು ಭಾವಿಸುತ್ತಾರೆ. ಈ ಕೊನೆಯ ರೀತಿಯ ನೀತಿಶಾಸ್ತ್ರವು, ವಿಶೇಷವಾಗಿ ಸಹಾನುಭೂತಿ ಆಧಾರಿತ ನೀತಿಶಾಸ್ತ್ರವು, ಪ್ರವೃತ್ತಿಯಲ್ಲಿ ಬೇರೂರಿರುತ್ತವೆ. ತಾಯಿ ಮತ್ತು ನವಜಾತ ಶಿಶುವಿನ ವಿಷಯದಲ್ಲಿರುವಂತೆ, ಅವು ಬದುಕುಳಿಯುವ ಅಗತ್ಯದಿಂದಾಗಿ ಸ್ವಯಂಚಾಲಿತವಾಗಿ ಉದ್ಭವಿಸುತ್ತವೆ. ಆ ಜೈವಿಕ ಆಧಾರದಿಂದಾಗಿ, ಅವು ಹೆಚ್ಚು ಸ್ಥಿರವಾಗಿರುತ್ತವೆ.
ನಾವು ಹೆಚ್ಚು ಸಹಾನುಭೂತಿಯುಳ್ಳವರಾಗಿರುವಾಗ, ನಮ್ಮ ಮನಸ್ಸುಗಳು ಮತ್ತು ಹೃದಯಗಳು ಹೆಚ್ಚು ಮುಕ್ತವಾಗಿರುತ್ತವೆ ಮತ್ತು ನಾವು ಹೆಚ್ಚು ಸುಲಭವಾಗಿ ಸಂವಹನ ನಡೆಸುತ್ತೇವೆ.
ಮಕ್ಕಳು ಆಟವಾಡುವಾಗ, ಅವರು ಧರ್ಮ, ಜನಾಂಗ, ರಾಜಕೀಯ ಅಥವಾ ಕುಟುಂಬದ ಹಿನ್ನೆಲೆಯ ಬಗ್ಗೆ ಯೋಚಿಸುವುದಿಲ್ಲ. ಅವರು ಯಾರೇ ಆಗಿರಲಿ, ಅವರು ತಮ್ಮ ಆಟದ ಸಹಪಾಠಿಗಳಿಂದ ನಗುವನ್ನು ಮೆಚ್ಚುತ್ತಾರೆ ಮತ್ತು ಪ್ರತಿಕ್ರಿಯೆಯಾಗಿ, ಅವರಿಗೆ ಒಳ್ಳೆಯವರಾಗಿರುತ್ತಾರೆ. ಅವರ ಮನಸ್ಸು ಮತ್ತು ಹೃದಯಗಳು ಮುಕ್ತವಾಗಿರುತ್ತವೆ. ಮತ್ತೊಂದೆಡೆ, ವಯಸ್ಕರು ಸಾಮಾನ್ಯವಾಗಿ ಈ ಇತರ ಅಂಶಗಳನ್ನು ಒತ್ತಿಹೇಳುತ್ತಾರೆ - ಜನಾಂಗೀಯ ಮತ್ತು ರಾಜಕೀಯ ವ್ಯತ್ಯಾಸಗಳು, ಇತ್ಯಾದಿ. ಅದಕ್ಕಾಗಿಯೇ ಅವರ ಮನಸ್ಸು ಮತ್ತು ಹೃದಯಗಳು ಸಂಕುಚಿತವಾಗಿರುತ್ತವೆ.
ಈ ಎರಡರ ನಡುವಿನ ವ್ಯತ್ಯಾಸಗಳನ್ನು ನೋಡಿ. ನಾವು ಹೆಚ್ಚು ಸಹಾನುಭೂತಿಯುಳ್ಳವರಾಗಿರುವಾಗ, ನಮ್ಮ ಮನಸ್ಸು ಮತ್ತು ಹೃದಯಗಳು ಹೆಚ್ಚು ಮುಕ್ತವಾಗಿರುತ್ತವೆ ಮತ್ತು ನಾವು ಹೆಚ್ಚು ಸುಲಭವಾಗಿ ಸಂವಹನ ನಡೆಸುತ್ತೇವೆ. ನಾವು ಸ್ವಾರ್ಥಿಗಳಾಗಿದ್ದಾಗ, ನಮ್ಮ ಮನಸ್ಸು ಮತ್ತು ಹೃದಯಗಳು ಮುಚ್ಚಲ್ಪಟ್ಟಿರುತ್ತವೆ ಮತ್ತು ಇತರರೊಂದಿಗೆ ಸಂವಹನ ನಡೆಸುವುದು ನಮಗೆ ಕಷ್ಟಕರವಾಗಿರುತ್ತದೆ. ಕೋಪವು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಆದರೆ ಸಹಾನುಭೂತಿ ಮತ್ತು ದಯಾಮಯಿ ಹೃದಯವು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸಬಹುದು. ಕೋಪ ಮತ್ತು ಭಯದಿಂದ, ನಮಗೆ ನಿದ್ರೆ ಬರುವುದಿಲ್ಲ ಮತ್ತು ನಾವು ನಿದ್ರಿಸಿದರೂ ಸಹ, ನಮಗೆ ದುಃಸ್ವಪ್ನಗಳು ಬರುತ್ತವೆ. ನಮ್ಮ ಮನಸ್ಸು ಶಾಂತವಾಗಿದ್ದರೆ, ನಾವು ಚೆನ್ನಾಗಿ ನಿದ್ರಿಸುತ್ತೇವೆ. ನಮಗೆ ಯಾವುದೇ ಶಾಂತಗೊಳಿಸುವ ಔಷಧಿಗಳ ಅಗತ್ಯವಿಲ್ಲ - ನಮ್ಮ ಶಕ್ತಿಯು ಸಮತೋಲಿತವಾಗಿರುತ್ತದೆ. ಉದ್ವೇಗದಲ್ಲಿರುವಾಗ, ನಮ್ಮ ಶಕ್ತಿಯು ಎಲ್ಲೆಂದರಲ್ಲಿ ಓಡುತ್ತದೆ ಮತ್ತು ನಾವು ತಳಮಳಗೊಳ್ಳುತ್ತೇವೆ.
ಸಹಾನುಭೂತಿಯು ಶಾಂತ, ಮುಕ್ತ ಮನಸ್ಸನ್ನು ತರುತ್ತದೆ
ಸ್ಪಷ್ಟವಾಗಿ ನೋಡಲು ಮತ್ತು ಅರ್ಥಮಾಡಿಕೊಳ್ಳಲು, ನಮಗೆ ಶಾಂತ ಮನಸ್ಸು ಬೇಕು. ನಾವು ಉದ್ವೇಗಕ್ಕೊಳಗಾಗಿದ್ದರೆ, ನಾವು ವಾಸ್ತವವನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ, ಜಾಗತಿಕ ಮಟ್ಟದಲ್ಲಿಯೂ ಸಹ, ಹೆಚ್ಚಿನ ತೊಂದರೆಗಳು ಮಾನವ ನಿರ್ಮಿತ ತೊಂದರೆಗಳಾಗಿರುತ್ತವೆ. ವಾಸ್ತವವನ್ನು ನೋಡದ ಕಾರಣ, ನಾವು ಸನ್ನಿವೇಶಗಳನ್ನು ಕಳಪೆಯಾಗಿ ನಿರ್ವಹಿಸುವುದರಿಂದ ಅವು ಉದ್ಭವಿಸುತ್ತವೆ. ನಮ್ಮ ಕ್ರಿಯೆಗಳು ಭಯ, ಕೋಪ ಮತ್ತು ಉದ್ವೇಗವನ್ನು ಆಧರಿಸಿರುತ್ತವೆ. ಜಗತ್ತಿನಲ್ಲಿ ಬಹಳಾ ಒತ್ತಡವಿದೆ. ನಮ್ಮ ಮನಸ್ಸುಗಳು ಭ್ರಮೆಗೊಂಡಿರುವುದರಿಂದ ನಾವು ವಿಷಯನಿಷ್ಠರಾಗಿರುವುದಿಲ್ಲ. ಈ ನಕಾರಾತ್ಮಕ ಭಾವನೆಗಳು ಸಂಕುಚಿತ ಮನೋಭಾವಕ್ಕೆ ಕಾರಣವಾಗುತ್ತವೆ ಮತ್ತು ಅದು ತೊಂದರೆಯನ್ನು ಸೃಷ್ಟಿಸಲು ಕಾರಣವಾಗುತ್ತದೆ, ಅದು ಎಂದಿಗೂ ತೃಪ್ತಿದಾಯಕ ಫಲಿತಾಂಶಗಳನ್ನು ತರುವುದಿಲ್ಲ.
ಇನ್ನೊಂದೆಡೆ, ಸಹಾನುಭೂತಿಯು ಮುಕ್ತ ಮನಸ್ಸನ್ನು, ಶಾಂತ ಮನಸ್ಸನ್ನು ತರುತ್ತದೆ. ಅದರೊಂದಿಗೆ, ನಾವು ವಾಸ್ತವವನ್ನು ನೋಡುತ್ತೇವೆ ಮತ್ತು ಯಾರೂ ಬಯಸದಿದ್ದನ್ನು ಕೊನೆಗೊಳಿಸಲು ಮತ್ತು ಎಲ್ಲರೂ ಬಯಸುವುದನ್ನು ಸಾಧಿಸುವ ವಿಧಾನಗಳು ಯಾವುವು ಎಂಬುದನ್ನು ನೋಡುತ್ತೇವೆ. ಇದೊಂದು ಪ್ರಮುಖ ಅಂಶ ಮತ್ತು ವಿವೇಚನೆಯನ್ನು ಆಧರಿಸಿದ ಸಹಾನುಭೂತಿಯ ಉತ್ತಮ ಪ್ರಯೋಜನವಾಗಿರುತ್ತದೆ. ಆದ್ದರಿಂದ, ಜೀವಶಾಸ್ತ್ರವನ್ನು ಆಧರಿಸಿದ ಮತ್ತು ವಿವೇಚನೆಯಿಂದ ಬೆಂಬಲಿತವಾದ ಮಾನವ ಮೌಲ್ಯಗಳನ್ನು ಉತ್ತೇಜಿಸಲು, ತಾಯಂದಿರು ಮತ್ತು ತಾಯಿ ಮತ್ತು ಮಗುವಿನ ನಡುವಿನ ಸಹಜ ಪ್ರೀತಿ ಮತ್ತು ವಾತ್ಸಲ್ಯವು ಪ್ರಮುಖ ಪಾತ್ರ ವಹಿಸುತ್ತದೆ.