ಸಾವಿನ ಬಗ್ಗೆ ಎಚ್ಚರದಿಂದಿರುವುದು
ಸಾವು ಖಚಿತ
ನಮ್ಮಲ್ಲಿ ಎಂತಹ ಅಮೂಲ್ಯವಾದ ಮಾನವ ದೇಹವಿದೆ ಎಂಬುದನ್ನು ಕುರಿತು ಯೋಚಿಸಿದರೆ, ಅದು ಕಲ್ಲು ಅಥವಾ ಲೋಹದಿಂದ ಮಾಡಲ್ಪಟ್ಟಿಲ್ಲ. ಹಾಗಿದ್ದಲ್ಲಿ, ಅದು ದೀರ್ಘಕಾಲ ಉಳಿಯಬಹುದಾಗಿತ್ತು. ವಾಸ್ತವದಲ್ಲಿ, ನಮ್ಮೊಳಗೆ ಏನಿದೆ ಎಂದು ನೋಡಲು ನಾವು ನಮ್ಮ ದೇಹವನ್ನು ಕತ್ತರಿಸಿ ತೆರೆದರೆ, ಅಲ್ಲಿ ಬಹಳಷ್ಟು ರಕ್ತ ಮತ್ತು ಕರುಳಿರುತ್ತದೆ, ಮಾರುಕಟ್ಟೆಯಲ್ಲಿ ಮಾಂಸವನ್ನು ಖರೀದಿಸಿದ ನಂತರ ಜನರು ತಮ್ಮ ಮನೆಗಳಲ್ಲಿ ನೇತಾಡುವ ಪ್ರಾಣಿಗಳ ಕರುಳುಗಳಂತೆ. ನಮ್ಮ ಒಳಭಾಗವು ಗಡಿಯಾರದ ಒಳಭಾಗದಷ್ಟು ಸೂಕ್ಷ್ಮವಾಗಿರುತ್ತದೆ.
ನಾವು ಸಾವಿನ ಬಗ್ಗೆ ಮತ್ತು ಎಷ್ಟು ಜನರು ಸತ್ತಿದ್ದಾರೆ ಎಂಬುದರ ಬಗ್ಗೆ ಯೋಚಿಸಿದರೆ, ಪ್ರತಿ ಮಣಿಯೊಂದಿಗೆ ಅವುಗಳನ್ನು ಎಣಿಸುವ ಮೂಲಕ ಬಹಳಷ್ಟು ಜಪಮಾಲೆಗಳನ್ನು ಎಣಿಸಬಹುದು. ಧರ್ಮಶಾಲಾಗೆ ಬಂದ ನಂತರ ಎಷ್ಟು ಟಿಬೆಟಿಯನ್ನರು ಸತ್ತಿದ್ದಾರೆ ಎಂದು ನಾನು ಯೋಚಿಸಿದರೆ, ನಾನು ನನ್ನ ಸಂಪೂರ್ಣ ಜಪಮಾಲೆಯಲ್ಲಿನ ಮಣಿಗಳನ್ನು ಬೇಗನೆ ಎಣಿಸಬಹುದು.
ಮನುಷ್ಯ ದೇಹದೊಂದಿಗೆ ಸಾಯದೆ ಇರುವವರು ಯಾರೂ ಇಲ್ಲ. ಮತ್ತು ಸಸ್ಯಗಳು ಮತ್ತು ಮರಗಳು ಹೇಗೆ ಸಾಯುತ್ತವೆ ಎಂದು ನೀವು ಯೋಚಿಸಿದರೆ, ನೀವು ಸಾಯಲು ಕೆಲವೇ ಕ್ಷಣಗಳಿವೆ ಎಂದು ನೀವು ನೋಡಬಹುದು. ಹುಟ್ಟುವುದರ ನೈಸರ್ಗಿಕ ತೀರ್ಮಾನವು ಸಾವಾಗಿರುತ್ತದೆ. ಇದರ ಬಗ್ಗೆ ಏನೂ ಮಾಡಲಾಗುವುದಿಲ್ಲ. ಇಲ್ಲಿ ನಾವು ಒಟ್ಟಿಗೆ ಸೇರುವುದರ ಅಂತ್ಯವು ಚದುರಿಹೋಗುವುದಾಗಿರುತ್ತದೆ, ಮತ್ತು ಮೇಲಕ್ಕೆ ಹೋಗುವುದರ ಅಂತ್ಯವು ಕೆಳಗೆ ಬರುವುದಾಗಿರುತ್ತದೆ. ನಮಗೆ ಸಾಯುವುದನ್ನು ಬಿಟ್ಟು ಬೇರೆ ಏನೂ ಇಲ್ಲ ಎಂದು ಅರಿತುಕೊಂಡು, ಸಾವು ಬರುವ ಮೊದಲು ಸಾಧ್ಯವಾದಷ್ಟು ಧರ್ಮವನ್ನು ಆಚರಿಸಲು ಪ್ರಯತ್ನಿಸಬೇಕು.
ಆದ್ದರಿಂದ ನಾವು ಹೇಗೆ ಸಾಯುತ್ತೇವೆ ಎಂಬುದರ ಬಗ್ಗೆ ಯೋಚಿಸಬೇಕು. ನೀವು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತೀರಿ ಎಂದು ಕಲ್ಪಿಸಿಕೊಳ್ಳಿ, ಮತ್ತು ನಿಮ್ಮ ತ್ವಚೆಯು ಭಯಾನಕ ಬಣ್ಣಕ್ಕೆ ತಿರುಗುತ್ತದೆ ಮತ್ತು ನೀವು ತುಂಬಾ ದುರ್ಬಲರಾಗುತ್ತೀರಿ. ನಿಮ್ಮ ಎಲ್ಲಾ ಸಂಬಂಧಿಕರು ಕಣ್ಣೀರಿಡುತ್ತಿದ್ದಾರೆ ಮತ್ತು ಎಷ್ಟು ದುಖಃಕರ ವಿಷಯ ಎಂದು ಹೇಳುತ್ತಿದ್ದಾರೆ, ಮತ್ತು ವೈದ್ಯರು ನಿಮಗೆ ಔಷಧಿಯನ್ನು ನೀಡುತ್ತಾರೆ, ಆದರೆ ನಂತರ ತಲೆಯಲ್ಲಾಡಿಸಿ, ಇದು ಬಹಳಾ ಬೇಸರದ ವಿಷಯ ಎಂದು ಹೇಳುತ್ತಾರೆ.
ನಾವು ಯಾವುದೇ ಸಮಯದಲ್ಲಾದರೂ ಸಾಯಬಹುದು
ಅಲ್ಲದೆ, ನೀವು ಯಾವಾಗ ಸಾಯುತ್ತೀರಿ ಎಂಬುದರ ಕುರಿತು ಯಾವುದೇ ಖಚಿತತೆ ಇಲ್ಲ. ಬಿಳಿ ಕೂದಲಿರುವ ವಯಸ್ಸಾದ ಪೋಷಕರು ತಮ್ಮ ಮಕ್ಕಳ ಶವಗಳನ್ನು ಹೂಳುವುದನ್ನು ಕಾಣಬಹುದು. ಮತ್ತು ಅನೇಕರು ಸಾಮಾನ್ಯ ಆಹಾರವನ್ನು ಸೇವಿಸುವುದರಿಂದ ಉಸಿರುಗಟ್ಟಿ ಸಾಯುತ್ತಾರೆ.
ಉದಾಹರಣೆಗೆ, ಟಿಬೆಟ್‌ನಿಂದ ಬಂದ ಈ ಉದಾಹರಣೆಯನ್ನು, ಆಧಾರವಾಗಿರಿಸಿ ನೀವು ಯೋಚಿಸಬಹುದು. ಒಬ್ಬ ವ್ಯಕ್ತಿಯು ಕೆಲವು ದೊಡ್ಡ ಮಾಂಸದ ತುಂಡುಗಳನ್ನು ಪಕ್ಕಕ್ಕೆ ಇರಿಸಿ ಅವುಗಳನ್ನು ಬೆಳಿಗ್ಗೆ ತಿನ್ನುತ್ತೇನೆ ಎಂದು ಹೇಳಿದನು, ಆದರೆ ಆ ಮಾಂಸದ ತುಂಡುಗಳು ಅವನಿಗಿಂತ ಹೆಚ್ಚು ಕಾಲ ಉಳಿದವು. ಇನ್ನೊಂದು ಉದಾಹರಣೆ: ಶಿಮ್ಲಾದಲ್ಲಿನ ಆಲೂಗಡ್ಡೆ ರೈತನೊಬ್ಬ ನನಗೆ ಪರಿಚಯವಿದ್ದ, ಅವನು ಊಟಕ್ಕಾಗಿ ಹುರಿದ ಬ್ರೆಡ್ ಮಾಡಲು ಹೊರಟಿದ್ದನು, ಆದರೆ ಬ್ರೆಡ್ ಬೇಯುವಾಗಲೇ ಸತ್ತನು.
ಅಶಾಶ್ವತತೆ ಮತ್ತು ಸಾವಿನ ಬಗ್ಗೆ ಮೆಚ್ಚುಗೆಯನ್ನು ಪಡೆಯುವ ಉತ್ತಮ ಮಾರ್ಗವು ಪುಸ್ತಕಗಳಿಂದ ಅವುಗಳ ಬಗ್ಗೆ ಓದುವುದು ಅಲ್ಲ, ಬದಲಿಗೆ ನಮಗೆ ತಿಳಿದಿರುವ ಸಾವನಪ್ಪಿದ ಇತರರ ಬಗ್ಗೆ ಯೋಚಿಸುವುದಾಗಿರುತ್ತದೆ.
ಸಾವಿನ ಸಮಯದಲ್ಲಿ ಕೇವಲ ಧರ್ಮ ನಮಗೆ ಸಹಾಯ ಮಾಡುತ್ತದೆ
ಸಾವಿನ ಬಗ್ಗೆ ಧ್ಯಾನಿಸುವುದರ ಪ್ರಾಮುಖ್ಯತೆ ಏನು? ಅದು ನಾವು ಮಾಡಬೇಕಾದ ಏಕೈಕ ಯೋಗ್ಯವಾದ ಕೆಲಸವು ಧರ್ಮವನ್ನು ಅಭ್ಯಾಸ ಮಾಡುವುದು ಎಂಬುದನ್ನು ತೋರಿಸುತ್ತದೆ.
ನಾವು ಭೌತಿಕ ವಸ್ತುಗಳ ವಿಷಯವಾಗಿ ಯೋಚಿಸಿದರೆ, ನಾವು ನಮ್ಮೊಂದಿಗೆ ಯಾವುದನ್ನೂ ಕೊಂಡೊಯ್ಯಲು ಸಾಧ್ಯವಿಲ್ಲ ಎಂಬುದನ್ನು ನೀವು ಗಮನಿಸುತ್ತೀರಿ. ಉದಾಹರಣೆಗೆ, ನೀವು ಬಹಳಷ್ಟು ಹಣವನ್ನು ಗಳಿಸಿದ ಶ್ರೀಮಂತ ವ್ಯಾಪಾರಿಯಾಗಿದ್ದರೆ, ನಿಮ್ಮ ದೇಹವನ್ನು ದಹನ ಮಾಡಲು, ಅದನ್ನು ಸುತ್ತಲು ಹೆಚ್ಚು ದುಬಾರಿಯಾದ ಬಟ್ಟೆಯ ತುಂಡನ್ನು ನೀವು ಹೊಂದಿರಬಹುದು ಅಷ್ಟೆ. ಈ ಸಂಪತ್ತನ್ನು ಸಂಗ್ರಹಿಸಲು ಈ ವ್ಯಾಪಾರಿ ದೇಶದಿಂದ ದೇಶಕ್ಕೆ ಪ್ರಯಾಣಿಸುವಾಗ ಮಾಡಿದ ವಿನಾಶಕಾರಿ ಕ್ರಿಯೆಗಳ ಪ್ರಮಾಣವು ಅಗಾಧವಾಗಿರಬಹುದು.
ನಿಮ್ಮ ಬಳಿ ಬಹಳಾ ಸೇವಕರು ಅಥವಾ ಕೆಲಸಗಾರರಿದ್ದರೆ ಅಥವಾ 100,000 ಸೈನಿಕರನ್ನು ನಿಯಂತ್ರಿಸುವ ಜನರಲ್ ಆಗಿದ್ದರೆ, ನೀವು ಸಾಯುವಾಗ ಯಾರೂ ನಿಮ್ಮೊಂದಿಗೆ ಬರಲು ಸಾಧ್ಯವಿಲ್ಲ. ಸಂಬಂಧಿಕರಿಂದ ತುಂಬಿರುವ ದೇಶವೂ ಸಹಾಯ ಮಾಡಲು ಸಾಧ್ಯವಿಲ್ಲ: ನೀವು ಸಾಯುವಾಗ ಅವರು ಮಾಡಬಹುದಾದದ್ದು, ಕೇವಲ ನಿಂತು ನಿಮ್ಮನ್ನು ತೊಂದರೆಗೊಳಿಸುವುದಷ್ಟೆ ಮತ್ತು ನಿಮ್ಮ ಶಾಂತಿಯುತ ಸಾವು ಮತ್ತು ಪುನರ್ಜನ್ಮಕ್ಕೆ ಅಡ್ಡಿಯಾಗುತ್ತಾರೆ.
ಸಾವಿನ ಸಮಯದಲ್ಲಿ ಸಹಾಯವಾಗುವ ಏಕೈಕ ವಿಷಯವೆಂದರೆ ಧರ್ಮಾಚರಣೆ, ಏಕೆಂದರೆ, ನೀವು ರಚನಾತ್ಮಕ ಕ್ರಿಯೆಗಳಿಂದ ಸಾಕಷ್ಟು ಸಕಾರಾತ್ಮಕ ಕರ್ಮ ಶಕ್ತಿಯನ್ನು ನಿರ್ಮಿಸಿದ್ದರೆ, ಅದು ನಿಮ್ಮ ಭವಿಷ್ಯದ ಪುನರ್ಜನ್ಮಗಳಿಗೆ ಹೆಚ್ಚು ಉಪಕಾರಿಯಾಗಿರುತ್ತದೆ; ಆದರೆ ನಕಾರಾತ್ಮಕ ಕರ್ಮದ ಬಲವು ಅವುಗಳನ್ನು ಇನ್ನಷ್ಟು ಹದಗೆಡಿಸುತ್ತದೆ. ಸಾವಿನ ಬಗ್ಗೆ ಯೋಚಿಸದೆಯೇ ನೀವು ಅರ್ಥಮಾಡಿಕೊಳ್ಳಬಹುದಾದ ವಿಷಯ ಇದು. ಟಿಬೆಟ್ನಲ್ಲಿನ ಅನೇಕ ಟಿಬೆಟಿಯನ್ನರು ಬಹಳ ಶ್ರೀಮಂತರಾಗಿದ್ದರು, ಆದರೆ ಅವರು ಆ ಸಮಯದಲ್ಲಿ ತಮ್ಮ ಜ್ಞಾನ ಮತ್ತು ಆಂತರಿಕ ಗುಣಗಳನ್ನು ಮಾತ್ರ ಹೊತ್ತುಕೊಂಡು ಹೋಗಬೇಕಾಯಿತು. ಆದ್ದರಿಂದ ನಾವು ನಮ್ಮ ಜೀವಿತಾವಧಿಯಲ್ಲಿ ಧರ್ಮವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡಬೇಕು ಮತ್ತು ಲೌಕಿಕ ಚಟುವಟಿಕೆಗಳಲ್ಲಿ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
ಗೋಧಿಯ ಹೊಟ್ಟಿನಂತೆ, ಈ ಜೀವನದ ಎಲ್ಲಾ ಲೌಕಿಕ ಚಟುವಟಿಕೆಗಳು ನಿಷ್ಪ್ರಯೋಜಕವೆಂದು ನಾವು ಪರಿಗಣಿಸಬೇಕು. ಲೌಕಿಕ ಚಟುವಟಿಕೆಗಳಿಗೆ ಯಾವುದೇ ಸಾರವಿಲ್ಲ. ನಾವು ಲೌಕಿಕ ಚಟುವಟಿಕೆಗಳನ್ನು, ಮಕ್ಕಳು ನಿರ್ಮಿಸುವ ಮರಳು ಕೋಟೆಯಂತೆ ಪರಿಗಣಿಸಬೇಕು. ಅವುಗಳೊಂದಿಗೆ ಆಟವಾಡುವುದನ್ನು ಮುಗಿಸಿದ ನಂತರ, ಅವರು ಅವುಗಳನ್ನು ಹಿಂದೆ ಬಿಟ್ಟು ಹೋಗುತ್ತಾರೆ. ನಾವು ಲೌಕಿಕ ಚಟುವಟಿಕೆಗಳನ್ನು ಹೀಗೆಯೇ ಪರಿಗಣಿಸಬೇಕು.
ನೀವು ಇದನ್ನೆಲ್ಲಾ ಯೋಚಿಸಿದರೆ, ಅದು ನಿಮ್ಮ ಧರ್ಮಾಚರಣೆಗೆ ಬಹಳ ಸಹಾಯಕವಾಗಿರುತ್ತವೆ.
ಪ್ರೇರಣೆಯ ಎರಡು ಕಡಿಮೆ ವ್ಯಾಪ್ತಿಗಳು
ಆರಂಭಿಕ ವ್ಯಾಪ್ತಿ
ನಾವು ಎಲ್ಲಾ ಲೌಕಿಕ ಚಟುವಟಿಕೆಗಳನ್ನು ಅನಗತ್ಯ ಮತ್ತು ಹೆಚ್ಚಿನ ಪ್ರಾಮುಖ್ಯತೆಯಿಲ್ಲ ಎಂದು ಪರಿಗಣಿಸಿದರೆ, ನಮ್ಮ ಧರ್ಮಾಚರಣೆ ಮಾತ್ರ ಮುಖ್ಯ ಎಂದು ನಾವು ಅರಿತುಕೊಳ್ಳುತ್ತೇವೆ. ಧರ್ಮಾಚರಣೆ ಎಂದರೆ ನಿಮ್ಮ ಭವಿಷ್ಯದ ಪುನರ್ಜನ್ಮಗಳಿಗೆ ಪ್ರಯೋಜನಕಾರಿಯಾದದ್ದನ್ನು ಮಾಡುವುದಾಗಿರುತ್ತದೆ. ಉದಾಹರಣೆಗೆ, "ಈಗ ನಾನು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಪಡೆದಿದ್ದೇನೆ; ಭವಿಷ್ಯದ ಜೀವನದಲ್ಲಿ ಕೆಟ್ಟ ಲೋಕಗಳಿಗೆ ಬೀಳುವುದನ್ನು ತಡೆಯಲು ನಾನು ಅದನ್ನು ಬಳಸಲಿದ್ದೇನೆ" ಎಂಬ ಮನೋಭಾವವನ್ನು ಹೊಂದಿರುವುದು, ನಮ್ಮ ಅಮೂಲ್ಯವಾದ ಜೀವನದ ಲಾಭವನ್ನು ಪಡೆಯುವುದರ ಕನಿಷ್ಠ ಮಟ್ಟವಾಗಿರುತ್ತದೆ.
ಮೂರು ಕೆಟ್ಟ ಲೋಕಗಳಿಗೆ ಬೀಳದಂತೆ ನಮ್ಮನ್ನು ತಡೆಯುವುದು, ಕಟ್ಟುನಿಟ್ಟಾದ ನೈತಿಕ ಸ್ವಯಂ-ಶಿಸ್ತನ್ನು ಪಾಲಿಸುವುದಾಗಿರುತ್ತದೆ. ಆದರೆ ನಾವು ನೈತಿಕ ಸ್ವಯಂ-ಶಿಸ್ತನ್ನು ಪಾಲಿಸುವ ದೃಢವಾದ ಬಯಕೆಯನ್ನು ಹೊಂದಿದ್ದರೂ ಸಹ, ಅದು ಕ್ರಮೇಣವಾಗಿ ಕ್ಷೀಣಿಸುತ್ತದೆ. ಆದ್ದರಿಂದ ಕೆಟ್ಟ ಪುನರ್ಜನ್ಮಕ್ಕೆ ಬೀಳದಂತೆ ತಡೆಯಲು, ನಾವು ನಮ್ಮ ಗೊಂದಲಮಯ ಭಾವನೆಗಳನ್ನು ನಮ್ಮಿಂದ ನಿವಾರಿಸಬೇಕು. ಇದು ಅತ್ಯಂತ ಕೊಳಕಾದ ಬಟ್ಟೆಯನ್ನು ತೊಳೆಯುವಂತಿರುತ್ತದೆ - ಮೊದಲು ನೀವು ಸ್ವಲ್ಪ ಶಕ್ತಿಯನ್ನು ಬಳಸುತ್ತೀರಿ ಮತ್ತು ನಂತರ ನಿಧಾನವಾಗಿ ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತೀರಿ. ಗೊಂದಲಮಯ ಭಾವನೆಗಳಿಂದ ನಿಮ್ಮನ್ನು ಮುಕ್ತಗೊಳಿಸಲು, ನೀವು ಸಾವಾಕಾಶವಾಗಿ ಮತ್ತು ನಿಧಾನವಾಗಿ ಪ್ರಾರಂಭಿಸಿ, ಕಾಲಕ್ರಮೇಣ ಪೂರ್ಣ ಶಕ್ತಿಯನ್ನು ಬಳಸುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತೀರಿ. ಆದ್ದರಿಂದ ನೈತಿಕ ಸ್ವಯಂ-ಶಿಸ್ತನ್ನು ಕಾಪಾಡಿಕೊಳ್ಳಲು, ನೀವು ಅದನ್ನು ನಿಧಾನವಾಗಿ ಅನ್ವಯಿಸಬೇಕು ಮತ್ತು ಕಾಲಕ್ರಮೇಣವಾಗಿ ಅನ್ವಯಿಸುವ ಮೂಲಕ ನೀವು ನಿಮ್ಮನ್ನು ಗೊಂದಲಮಯ ಭಾವನೆಗಳಿಂದ ಮುಕ್ತಗೊಳಿಸಬಹುದು; ಇಲ್ಲದಿದ್ದರೆ ನಿಮ್ಮ ಪ್ರಯತ್ನವು ಸುಲಭವಾಗಿ ಕ್ಷೀಣಿಸಬಹುದು.
ಮೂರು ಕೆಟ್ಟ ಲೋಕಗಳಲ್ಲಿ ಪುನರ್ಜನ್ಮವನ್ನು ತಪ್ಪಿಸಲು ನೀವು ನೈತಿಕ ಸ್ವಯಂ-ಶಿಸ್ತನ್ನು ಅನುಸರಿಸಿದರೆ, ಇದು ಧರ್ಮವನ್ನು ಅಭ್ಯಾಸ ಮಾಡುವ ಕನಿಷ್ಠ ಮಟ್ಟವಾಗಿರುತ್ತದೆ.
ಮಧ್ಯಂತರ ವ್ಯಾಪ್ತಿ
ನಾವು ಮೂರು ಕೆಟ್ಟ ಲೋಕಗಳಲ್ಲಿ ಜನಿಸುವುದನ್ನು ತಪ್ಪಿಸಿದರೂ ಮತ್ತು ನಮ್ಮ ಮುಂದಿನ ಜನ್ಮದಲ್ಲಿ ದೇವಲೋಕದಲ್ಲಿ ಆನಂದ ಮತ್ತು ಸಂತೋಷಗಳ ನಡುವೆ ಅಥವಾ ಮಾನವನಾಗಿ ಜನಿಸಿದರೂ ಸಹ, ಎಲ್ಲಾ ಸಂಸಾರದ ಪುನರ್ಜನ್ಮಗಳು ಬಳಲಿಕೆಯಾಗಿರುತ್ತವೆ ಎಂಬುದನ್ನು ನಾವು ಅರಿತುಕೊಳ್ಳಲು ಪ್ರಯತ್ನಿಸಬೇಕು. ಇದನ್ನು ಲ್ಯಾಮ್-ರಿಮ್ ಬೋಧನೆಗಳಲ್ಲಿ ವ್ಯಾಪಕವಾಗಿ ಚರ್ಚಿಸಲಾಗಿದೆ, ಆದರೆ ಈ ಉದಾಹರಣೆಯಿಂದ ಅದನ್ನು ವಿವರಿಸಬಹುದು: ನೀವು ಸೂರ್ಯನ ಕೆಳಗೆ ನಿಂತಿದ್ದೀರಿ ಮತ್ತು ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದೀರಿ, ಆದ್ದರಿಂದ ನೀವು ಒಳಗೆ ಹೋಗುತ್ತೀರಿ. ಆಗ ನೀವು ಬಿಸಿಲಿನ ದುಃಖದಿಂದ ತಪ್ಪಿಸಿಕೊಂಡಿದ್ದೀರಿ, ಆದರೆ ಶೀತದ ದುಃಖದೊಂದಿಗೆ ಇದ್ದೀರಿ. ನಾವು ದುಃಖದಿಂದ ಮುಕ್ತರಾಗಿರುವ ಯಾವುದೇ ಸಂಸಾರದ ಪರಿಸ್ಥಿತಿ ಇಲ್ಲ.
ಗೊಂದಲಮಯ ಭಾವನೆಗಳು ನಮ್ಮನ್ನು ಸಂಸಾರದಲ್ಲಿ ಸುತ್ತುವಂತೆ ಮಾಡುತ್ತವೆ, ಇದೇ ಅನಿಯಂತ್ರಿತವಾಗಿರುವ ಪುನರಾವರ್ತಿತ ಪುನರ್ಜನ್ಮ. ಬೇರು - ಮರದ ಬೇರಿನಂತೆ – ನಿಜವಾಗಿಯೂ ಇರುವ ಸ್ವತಂತ್ರ ಗುರುತುಗಳಿಗಾಗಿ ಗ್ರಹಿಸುತ್ತದೆ. ಸಂಸಾರದಲ್ಲಿ ನಾವು ಸುತ್ತುವುದು, ಮೆರಿ-ಗೋ-ರೌಂಡ್ನಲ್ಲಿ ಸುತ್ತಾಡುತ್ತಾ ಎಲ್ಲಿಯೂ ತಲುಪದಂತೆ ಇರುತ್ತದೆ. ಅದರಿಂದ ಹೊರಬರಲು ಇರುವ ಏಕೈಕ ಮಾರ್ಗವೆಂದರೆ ನಮ್ಮನ್ನು ನಾವು ಉನ್ನತೀಕರಿಸಿಕೊಳ್ಳುವುದು, ಅದರ ಮೇಲೇರುವುದು, ಅದರಿಂದ ಮೇಲೇರುವುದು. ಹೀಗೆ ಮಾಡಲು, ನಾವು ಹೆಚ್ಚು ಅರಿತುಕೊಂಡ ಜೀವಿಯಾದ ಆರ್ಯರಾಗಬೇಕು, ಅಸ್ಪಷ್ಟತೆ, ಅಸಾಧ್ಯವಾದ "ಆತ್ಮದ" ಕೊರತೆಯನ್ನು ಅರಿತುಕೊಳ್ಳುವ ಪರಿಕಲ್ಪನಾ-ಅಲ್ಲದ ವಿವೇಚನಾತ್ಮಕ ಅರಿವನ್ನು ಹೊಂದಿರುವ ವ್ಯಕ್ತಿಯಾಗಬೇಕು. ಇದು ಶೂನ್ಯತೆಯ ವಿವೇಚನಾತ್ಮಕ ಅರಿವಾಗಿರುತ್ತದೆ.
ನಮ್ಮ ಮಾನಸಿಕ ನಿರಂತರತೆಗಳಲ್ಲಿ ಶೂನ್ಯತೆಯ ಈ ಸಾಕ್ಷಾತ್ಕಾರವನ್ನು ಬೆಳೆಸಲು, ಕ್ಷಮತವನ್ನು ಪಡೆಯುವುದು ಅವಶ್ಯಕ, ಇದು ನಿಶ್ಚಲವಾದ, ಸ್ಥಿರವಾದ ಮನಸ್ಥಿತಿಯಾಗಿರುತ್ತದೆ; ಮತ್ತು ಇದನ್ನು ಪಡೆಯಲು, ನಮಗೆ ನೈತಿಕ ಸ್ವಯಂ-ಶಿಸ್ತು ಬೇಕು. ಆದ್ದರಿಂದ ಮೂರು ಉನ್ನತ ತರಬೇತಿಗಳು - ನೈತಿಕ ಸ್ವಯಂ-ಶಿಸ್ತು, ಮಗ್ನನಾಗುವ ಏಕಾಗ್ರತೆ ಮತ್ತು ವಿವೇಚನಾತ್ಮಕ ಅರಿವಿನ ಉನ್ನತ ತರಬೇತಿಗಳು - ಅನಿಯಂತ್ರಿತವಾಗಿರುವ ಪುನರಾವರ್ತಿತ ಸಂಸಾರ ಪುನರ್ಜನ್ಮವನ್ನು ಮೀರಲು ನಮಗೆ ಅವಕಾಶ ಮಾಡಿಕೊಡುತ್ತವೆ. ನಾವು ಇವುಗಳನ್ನು ಅಭ್ಯಾಸ ಮಾಡಿದರೆ, ನಾವು ಸಂಸಾರದಲ್ಲಿನ ನಮ್ಮ ಸುತ್ತುವಿಕೆಯನ್ನು ಕೊನೆಗೊಳಿಸಬಹುದು.
ಆರ್ಯ ಸ್ಥಿತಿಗೆ ತಮ್ಮನ್ನು ತಾವು ಏರಿಸಿಕೊಂಡ ಜೀವಿಗಳ ಮೂರು ವರ್ಗೀಕರಣಗಳಿವೆ:
- ನೋಡುವ ಮಾರ್ಗ ಮನಸ್ಸನ್ನು (ನೋಡುವ ಮಾರ್ಗ) ಸಾಧಿಸಿದವರು
- ಒಗ್ಗಿಕೊಳ್ಳುವ ಮಾರ್ಗ ಮನಸ್ಸನ್ನು (ಧ್ಯಾನದ ಮಾರ್ಗ) ಸಾಧಿಸಿದವರು
- ಹೆಚ್ಚಿನ ತರಬೇತಿಯ ಅಗತ್ಯವಿಲ್ಲದ ಹಾದಿಯ ಮನಸ್ಸನ್ನು ಸಾಧಿಸಿದವರು.
ಮನಸ್ಸಿನ ನೋಡುವ ಮಾರ್ಗವನ್ನು ಹೊಂದಿರುವ ಜೀವಿಗಳು, ಹೊಸದಾಗಿ ಶೂನ್ಯತೆಯ ಪರಿಕಲ್ಪನಾತ್ಮಕವಲ್ಲದ ನೇರ ಅರಿವನ್ನು ಹೊಂದಿರುತ್ತಾರೆ. ಮನಸ್ಸಿನ ಒಗ್ಗಿಕೊಳ್ಳುವ ಮಾರ್ಗವನ್ನು ಹೊಂದಿರುವವರು ಮತ್ತಷ್ಟು ಧ್ಯಾನಿಸುತ್ತಾರೆ ಮತ್ತು ಶೂನ್ಯತೆಯ ಈ ಪರಿಕಲ್ಪನಾತ್ಮಕವಲ್ಲದ ಅರಿವಿನ ಅಭ್ಯಾಸಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಾರೆ ಅಥವಾ ಬೆಳೆಸಿಕೊಳ್ಳುತ್ತಾರೆ. ನೀವು ಧ್ಯಾನಿಸಿ-ಧ್ಯಾನಿಸಿ, ನಿಮ್ಮ ಮನಸ್ಸನ್ನು ಈ ಶೂನ್ಯತೆಯ ಅರಿವಿಗೆ ಸಂಪೂರ್ಣವಾಗಿ ಒಗ್ಗಿಸಿಕೊಂಡಿದ್ದರೆ ಮತ್ತು ವಿಮೋಚನೆಗೆ ಅಡ್ಡಿಯಾಗುವ ಭಾವನಾತ್ಮಕ ಅಸ್ಪಷ್ಟತೆಗಳನ್ನು ನಿಮ್ಮ ಮನಸ್ಸಿನಿಂದ ಶಾಶ್ವತವಾಗಿ ತೆಗೆದುಹಾಕಿದ್ದರೆ, ನೀವು ಅರ್ಹತ್, ವಿಮೋಚಿತ ಜೀವಿಯಾಗಿರುತ್ತೀರಿ.
ಪ್ರೇರಣೆಯ ಸುಧಾರಿತ ವ್ಯಾಪ್ತಿ
ಪ್ರೀತಿ ಮತ್ತು ಸಹಾನುಭೂತಿ
ಆದರೆ ಎಲ್ಲಾ ಸೀಮಿತ ಜೀವಿಗಳು (ಅರಿವಿರುವ ಜೀವಿಗಳು) ಇದೇ ಸಂಕಷ್ಟದಲ್ಲಿ ಸಿಲುಕಿರುವುದರಿಂದ ನಿಮ್ಮನ್ನು ಮಾತ್ರ ಮುಕ್ತಗೊಳಿಸುವುದು ಸಾಕಾಗುವುದಿಲ್ಲ. ಎಲ್ಲಾ ಸೀಮಿತ ಜೀವಿಗಳು ಒಂದೇ ಆಗಿರುತ್ತವೆ, ಏಕೆಂದರೆ ಅವರೆಲ್ಲರೂ ಬಳಲುತ್ತಿದ್ದಾರೆ ಮತ್ತು ಎಲ್ಲರೂ ಅದರಿಂದ ಹೊರಬರಲು ಬಯಸುತ್ತಾರೆ. ಎಲ್ಲಾ ಸೀಮಿತ ಜೀವಿಗಳು ದುಃಖದಿಂದ ಮುಕ್ತರಾಗಬೇಕೆಂದು ಬಯಸುವ ಮನಸ್ಸನ್ನು ನಾವು ಬೆಳೆಸಿಕೊಂಡರೆ, ಇದನ್ನು "ಸಹಾನುಭೂತಿ" ಎಂದು ಕರೆಯಲಾಗುತ್ತದೆ. ಆದರೆ ಎಲ್ಲಾ ಸೀಮಿತ ಜೀವಿಗಳು ದುಃಖದಿಂದ ಬೇರ್ಪಡಬೇಕೆಂಬ ಈ ಆಶಯವನ್ನು ಬೆಳೆಸಿಕೊಳ್ಳಲು, ನೀವು ದೀರ್ಘಕಾಲದವರೆಗೆ ನಿಮ್ಮ ಸ್ವಂತ ದುಃಖದ ಬಗ್ಗೆ ಧ್ಯಾನಿಸಿರಬೇಕು ಮತ್ತು ಅದು ಎಷ್ಟು ಭಯಾನಕವಾಗಿದೆ ಎಂಬುದನ್ನು ಅರಿತುಕೊಂಡ ನಂತರ, ನೀವು ತ್ಯಾಗವನ್ನು - ಮುಕ್ತರಾಗುವ ದೃಢಸಂಕಲ್ಪವನ್ನು - ಬೆಳೆಸಿಕೊಳ್ಳಬಹುದು. ದುಃಖ ಎಷ್ಟು ಭಯಾನಕವಾಗಿದೆ ಎಂಬ ಕಲ್ಪನೆಯನ್ನು ನೀವು ಪಡೆದ ನಂತರ, ಅದರಿಂದ ನೀವೇ ಹೊರಬರಲು ಬಯಸಿದರೆ, ನೀವು ಆ ಆಲೋಚನೆಯನ್ನು ಎಲ್ಲಾ ಜೀವಿಗಳಿಗೂ ಅನ್ವಯಿಸಬಹುದು. ಇದೇ ಸಹಾನುಭೂತಿ.
ಆದ್ದರಿಂದ, ತ್ಯಾಗವೆಂದರೆ ‘ನಾನು ದುಃಖದಿಂದ ಹೊರಬರಬೇಕೆಂಬ’ ಬಯಕೆ, ಆದರೆ ಸಹಾನುಭೂತಿ ಎಂದರೆ ಎಲ್ಲಾ ಜೀವಿಗಳು ದುಃಖದಿಂದ ಹೊರಬರಬೇಕೆಂಬ ಬಯಕೆ. ಸಹಾನುಭೂತಿ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವೆಂದರೆ, ಸಹಾನುಭೂತಿಯಿಂದ ನಾವು "ಎಲ್ಲಾ ಸೀಮಿತ ಜೀವಿಗಳು ದುಃಖ ಮತ್ತು ದುಃಖದ ಕಾರಣಗಳಿಂದ ಬೇರ್ಪಟ್ಟರೆ ಎಷ್ಟು ಅದ್ಭುತವಾಗಿರುತ್ತದೆ" ಎಂದು ಭಾವಿಸುತ್ತೇವೆ; ಆದರೆ ಪ್ರೀತಿ ಎಂದರೆ ಎಲ್ಲಾ ಜೀವಿಗಳು ಸಂತೋಷದಿಂದ ಮತ್ತು ಸಂತೋಷದ ಕಾರಣಗಳಿಂದ ತುಂಬಿರಬೇಕೆಂಬ ಬಯಕೆಯಾಗಿರುತ್ತದೆ.
ಸಮಚಿತ್ತತೆ ಮತ್ತು ಬೋಧಿಚಿತ್ತವನ್ನು ಹೇಗೆ ಬೆಳೆಸಿಕೊಳ್ಳುವುದು
ನಮಗೆ ಪ್ರೀತಿ ಮತ್ತು ಕರುಣೆ ಇಲ್ಲದಿರುವುದಕ್ಕೆ ಕಾರಣವೇನು? ನಾವೆಲ್ಲರೂ ದುಃಖದಿಂದ ಮುಕ್ತರಾಗಿ ಸಂತೋಷವನ್ನು ಹೊಂದಬೇಕೆಂದು ಏಕೆ ಬಯಸುವುದಿಲ್ಲ? ಏಕೆಂದರೆ ನಮ್ಮ ಮನಸ್ಸುಗಳು ಸುಗಮವಾಗಿಲ್ಲ - ಅವು ಒರಟಾಗಿರುತ್ತವೆ; ಅವು ಉನ್ನತಮಟ್ಟ ಮತ್ತು ಕೆಳಮಟ್ಟದ ಬಿಂದುಗಳನ್ನು ಹೊಂದಿರುತ್ತವೆ. ನಮ್ಮ ಮನಸ್ಸಿನ ಈ ಅಸಮಾನತೆ ಏನು? ನಮ್ಮ ಸಂಬಂಧಿಕರು ಮತ್ತು ನಮ್ಮ ಸ್ನೇಹಿತರ ಬಗ್ಗೆ ನಮಗೆ ಹೆಚ್ಚಿನ ಬಾಂಧವ್ಯವಿರುತ್ತದೆ, ಮತ್ತು ನಾವು ನಮ್ಮ ಶತ್ರುಗಳನ್ನು ಅಥವಾ ನಮಗೆ ಇಷ್ಟವಿಲ್ಲದ ಜನರನ್ನು ನೋಡಿದಾಗ, ನಮ್ಮಲ್ಲಿ ಹೆಚ್ಚಿನ ದ್ವೇಷವಿರುತ್ತದೆ.
ಹಾಗಾದರೆ ನಾವು ಹಳಿತಪ್ಪಿದ ರಸ್ತೆಯನ್ನು ಹೇಗೆ ಸಮಗೊಳಿಸುತ್ತೇವೆ? ಈ ಉದಾಹರಣೆಯ ಬಗ್ಗೆ ಯೋಚಿಸುವ ಮೂಲಕ ನಾವು ಅರ್ಥಮಾಡಿಕೊಳ್ಳಬಹುದು: ಒಬ್ಬ ವ್ಯಕ್ತಿ ನಿನ್ನೆ ನಿಮಗೆ 100 ರೂಪಾಯಿಗಳನ್ನು ನೀಡಿದರು, ಮತ್ತು ಇನ್ನೊಬ್ಬ ವ್ಯಕ್ತಿ ಇಂದು ನಿಮಗೆ 100 ರೂಪಾಯಿಗಳನ್ನು ನೀಡಿದರು. ನಿಮಗೆ ನಿನ್ನೆ 100 ರೂಪಾಯಿ ಕೊಟ್ಟವನು, ಇಂದು ಬೆಳಿಗ್ಗೆ ನಿಮ್ಮ ಮುಖದ ಮೇಲೆ ಹೊಡೆದನು, ಮತ್ತು ಇಂದು ನಿಮಗೆ 100 ರೂಪಾಯಿ ಕೊಟ್ಟವನು ನಿನ್ನೆ ನಿಮ್ಮ ಮುಖದ ಮೇಲೆ ಹೊಡೆದಿದ್ದನು. ನೀವು ಯಾರನ್ನು ಇಷ್ಟಪಡಬೇಕು ಮತ್ತು ಯಾರನ್ನು ಇಷ್ಟಪಡಬಾರದು?
ಈ ರೀತಿಯಾಗಿ, ನಮ್ಮ ಶತ್ರುಗಳು ಹೇಗೆ ನಮಗೆ ಮೊದಲು ಬಹಳಾ ಉಪಕಾರಿಯಾಗಿದ್ದರು ಮತ್ತು ಭವಿಷ್ಯದಲ್ಲಿ ಅವರು ನಮಗೆ ಹೆಚ್ಚಿನ ಸಹಾಯವನ್ನು ನೀಡಬಹುದು ಎಂದು ನಾವು ಯೋಚಿಸಬೇಕು. ಅದೇ ರೀತಿ, ನಮ್ಮ ಸ್ನೇಹಿತರು ಮೊದಲು ನಮಗೆ ಬಹಳಷ್ಟು ಹಾನಿಯುಂಟುಮಾಡಿದ್ದಾರೆ ಮತ್ತು ಭವಿಷ್ಯದಲ್ಲಿ ಮತ್ತೆ ಹಾಗೆ ಮಾಡಬಲ್ಲರು. ಇದಕ್ಕೆ ಕಾಲ ಕೂಡಬೇಕಷ್ಟೆ.
ಇನ್ನೊಂದು ಉದಾಹರಣೆ: ನರಭಕ್ಷಕರು, ಅಥವಾ ತೋಳಗಳು ಅಥವಾ ರಕ್ತಪಿಶಾಚಿಗಳು ಸಹ ಆಗಿರುವ ಬಹಳಾ ಜನರಿದ್ದಾರೆ. ಅವರು ನಮಗೆ ಆಕರ್ಷಕವಾಗಿ ಕಂಡು, ನಾವು ಅವರಲ್ಲಿ ಒಬ್ಬರನ್ನು ಮದುವೆಯಾಗಬಹುದು, ಆದರೆ ಒಂದು ರಾತ್ರಿ ಅವರ ಕೋರೆಹಲ್ಲುಗಳು ಹೊರಬಂದು ನಮ್ಮನ್ನು ತಿನ್ನಬಹುದು.
ನೀವು ಒಂದು ನಾಯಿಯನ್ನು ಹೊಡೆದಾಗ, ಅದು ಬೊಗಳುತ್ತದೆ ಮತ್ತು ನಿಮ್ಮನ್ನು ಕಚ್ಚುತ್ತದೆ. ಆದ್ದರಿಂದ ನಾವು ಶತ್ರುವಿನ ಮೇಲೆ ಕೋಪಗೊಂಡರೆ, ನಾವು ನಾಯಿಯಂತೆಯೇ ಪ್ರತಿಕ್ರಿಯಿಸುತ್ತೇವೆ. ನಾವು ಮನಸ್ಸಿನ ಈ ಅಸಮಾನತೆ, ನಮ್ಮಲ್ಲಿರುವ ಈ ಬಾಂಧವ್ಯ ಮತ್ತು ವಿಕರ್ಷಣೆಯನ್ನು ನಿವಾರಿಸಬೇಕು ಮತ್ತು ಮನಸ್ಸಿನ ಸಮಚಿತ್ತತೆಯನ್ನು ಸಾಧಿಸಬೇಕು. ಆ ಸಮಚಿತ್ತತೆಯ ಸ್ಥಿತಿಯ ಆಧಾರದ ಮೇಲೆ ನಾವು ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳಬಹುದು - ಒಂದು ಕಾರು ಮುಂದೆ ಸಾಗಲು ಹಳ್ಳವಿರುವ ರಸ್ತೆಯನ್ನು ಸುಸಜ್ಜಿತಗೊಳಿಸಿದಂತೆ.
ರಸ್ತೆಯನ್ನು ಸ್ಫೋಟಿಸಿ ಸಮತಟ್ಟಾಗಿಸುವ ಡೈನಮೈಟ್‌ನಂತಹ ಶಕ್ತಿಶಾಲಿ ಆಲೋಚನೆಗಳು ನಮ್ಮಲ್ಲಿರಬೇಕು. ಯಾವ ರೀತಿಯ ಆಲೋಚನೆಗಳು? ಇತರ ಸೀಮಿತ ಜೀವಿಗಳಿಗಾಗಿ ದಯೆತೋರುವುದರ ಬಗ್ಗೆ ಯೋಚಿಸುವುದು. ಉದಾಹರಣೆಗೆ, ನಾವು ಹಾಲು ಕುಡಿಯುತ್ತೇವೆ. ಇದು ಹಸುಗಳು ಮತ್ತು ಎಮ್ಮೆಗಳಿಂದ ಬರುತ್ತದೆ. ಅವು ಹೊರಗೆ ಹೋಗಿ ಹುಲ್ಲು ತಿನ್ನುತ್ತವೆ ಮತ್ತು ನೀರು ಕುಡಿಯುತ್ತವೆ, ಮತ್ತು ನಾವು ಕೇವಲ ಅವುಗಳಿಂದ ಹಾಲು ತೆಗೆದುಕೊಳ್ಳುತ್ತೇವೆಯಷ್ಟೇ. ಮೊಲಗಳು ಮತ್ತು ಇಲಿಗಳನ್ನು ವೈದ್ಯಕೀಯ ಪ್ರಯೋಗಗಳಲ್ಲಿ ಬಳಸಲಾಗುತ್ತದೆ, ಆದ್ದರಿಂದ ನಮಗಾಗಿರುವ ಔಷಧಿಗಳು, ತಮ್ಮ ಪ್ರಾಣವನ್ನು ನೀಡಿದ ಇಲಿಗಳು ಮತ್ತು ಮೊಲಗಳಿಂದ ಬರುತ್ತವೆ.
ನಮ್ಮ ಶತ್ರುಗಳೆಂದು ಮತ್ತು ನಮಗೆ ಹಾನಿಯುಂಟುಮಾಡುತ್ತವೆ ಎಂದು ಪರಿಗಣಿಸುವ ಕೆಲವು ಸೀಮಿತ ಜೀವಿಗಳಿವೆ. ಆದರೆ ಅವುಗಳು ನಮಗುಂಟುಮಾಡಿದ ಹಾನಿಯನ್ನು ಅವುಗಳ ದಯೆಯೊಂದಿಗೆ ಹೋಲಿಸಿದರೆ, ಎರಡನೆಯದು ಮೊದಲನೆಯದನ್ನು ಮೀರಿಸುತ್ತದೆ. ಮತ್ತು ಅವುಗಳ ಹಾನಿಯು, ವಾಸ್ತವದಲ್ಲಿ ಬಹಳಾ ಸಹಾಯಕವಾಗಿರಬಹುದು. ಬುದ್ಧನಾಗಲು, ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಇದಕ್ಕಾಗಿ ನಮಗೆ ಅಸಹ್ಯಕರ ಜನರು ಬೇಕು. ಎಲ್ಲರೂ ತುಂಬಾ ಒಳ್ಳೆಯವರಾಗಿದ್ದರೆ, ನಾವು ತಾಳ್ಮೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮೇಲೆ ಕೋಪಗೊಳ್ಳುವವರು ಸೀಮಿತ ಜೀವಿಗಳು, ಬುದ್ಧರಲ್ಲ; ಆದ್ದರಿಂದ ಅವರೇ ನಮಗೆ ತಾಳ್ಮೆಯನ್ನು ಕಲಿಸುತ್ತಾರೆ. ಉದಾಹರಣೆಗೆ, ಅತಿಶಾ ಟಿಬೆಟ್‌ಗೆ ಬಂದಾಗ, ತಮ್ಮೊಂದಿಗೆ ಅತ್ಯಂತ ಹಿಂಸಾತ್ಮಕ ಭಾರತೀಯನೊಬ್ಬನನ್ನು ಕರೆತಂದರು, ಅವನು ಯಾವಾಗಲೂ ಅವರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದನು. ಅವನನ್ನು ಏಕೆ ಕರೆತಂದರು ಎಂದು ಕೇಳಿದಾಗ, ಅವರು ತಾಳ್ಮೆಯನ್ನು ಅಭ್ಯಾಸ ಮಾಡುವುದಕ್ಕಾಗಿ ಎಂದು ಉತ್ತರಿಸಿದರು. ಆದ್ದರಿಂದ ಸೀಮಿತ ಜೀವಿಗಳು ಮತ್ತು ಬುದ್ಧರು, ನಮಗಾಗಿ ಇರುವ ದಯೆಯಲ್ಲಿ ಸಮಾನರು. ಇದಕ್ಕೆ ಶಾಂತಿದೇವನ "ಎಂಗೇಜಿಂಗ್ ಇನ್ ಬೋಧಿಸತ್ವ ಬಿಹೇವಿಯರ್ (ಬೋಧಿಸತ್ವ ವರ್ತನೆಯಲ್ಲಿ ತೊಡಗುವುದು)" ಸಾಕ್ಷಿಯಾಗಿದೆ.
ಬುದ್ಧನು ಕೋಪಗೊಳ್ಳದಿರಲು ಒಂದು ಕಾರಣವಿದೆ. ಏಕೆಂದರೆ ಅವನು ಎಲ್ಲಾ ತೊಂದರೆಗೊಳಿಸುವ ಭಾವನೆಗಳಿಂದ ಮುಕ್ತವಾದ ಏಕಾಗ್ರತೆಯನ್ನು ಹೊಂದಿರುತ್ತಾನೆ. ಬುದ್ಧನ ಬಳಿ ಈ ಕೇಂದ್ರೀಕೃತ ಏಕಾಗ್ರತೆ ಇರುವುದರಿಂದ, ಅವನು ಕೋಪಗೊಳ್ಳುವುದಿಲ್ಲ. ಆದ್ದರಿಂದ ನಾವು ಇದನ್ನು ಅಭಿವೃದ್ಧಿಪಡಿಸಬೇಕು. ನಾವು ಬೆಳಿಗ್ಗೆ ಎರಡು ಆಲೋಚನೆಗಳೊಂದಿಗೆ ಎಚ್ಚರಗೊಳ್ಳಬೇಕು:
- ಇಂದು ನಾನು ಇತರರು ಕೋಪಗೊಳ್ಳಲು ಕಾರಣವಾಗುವುದಿಲ್ಲ.
- ಇತರರು ನನ್ನನ್ನು ಕೋಪಗೊಳಿಸಲು ಬಿಡುವುದಿಲ್ಲ.
ನಾವು ಇದಕ್ಕೆ ಒಗ್ಗಿಕೊಂಡರೆ, ನಾವು ನಮ್ಮ ಗೊಂದಲಮಯ ಭಾವನೆಗಳನ್ನು ಕಡಿಮೆ ಮಾಡಲು ಮತ್ತು ಅಂತಿಮವಾಗಿ ಗೊಂದಲಮಯ ಭಾವನೆಗಳಿಂದ ಶಾಶ್ವತವಾಗಿ ಮುಕ್ತ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಮತ್ತು ಹೀಗೆ ಬುದ್ಧರಾಗಲು ಸಾಧ್ಯವಾಗುತ್ತದೆ.
ಬುದ್ಧರನ್ನು ಮೆಚ್ಚಿಸಲು ನಾವು ಏನು ಮಾಡಬಹುದು ಎಂದು ಕೇಳಿದರೆ, ಅದು ಸೀಮಿತ ಜೀವಿಗಳಿಗೆ ಸಹಾಯ ಮಾಡುವುದು ಮತ್ತು ದಯೆ ತೋರಿಸುವುದಾಗಿರುತ್ತದೆ. ಇದು ನಿಜವಾಗಿಯೂ ಬುದ್ಧರಿಗೆ ಮೆಚ್ಚುಗೆಯಾಗುತ್ತದೆ. ಉದಾಹರಣೆಗೆ, ಪೋಷಕರ ಬಳಿ ಅವರ ಮಕ್ಕಳಿದ್ದರೆ, ನಾವು ಕೇವಲ ಪೋಷಕರಿಗೆ ದಯೆ ತೋರುವ ಬದಲು ಅವರ ಮಕ್ಕಳೊಂದಿಗೂ ದಯೆ ತೋರಿದರೆ ಅವರು ಸಂತೋಷಪಡುತ್ತಾರೆ. ಅದೇ ರೀತಿ, ನಾವು ಬುದ್ಧರು ಸೇರಿದಂತೆ ಸೀಮಿತ ಜೀವಿಗಳಿಗೆ ದಯೆ ತೋರಿದರೆ, ಆಗ ಬುದ್ಧ ಹೆಚ್ಚು ಸಂತೋಷವಾಗಿರುತ್ತಾರೆ. ಆದ್ದರಿಂದ ಇವೆಲ್ಲದರ ಆಧಾರದ ಮೇಲೆ, ನಾವು ಬೋಧಿಚಿತ್ತದ ಗುರಿಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು: "ಎಲ್ಲಾ ಸೀಮಿತ ಜೀವಿಗಳಿಗೆ ಪ್ರಯೋಜನವಾಗುವಂತೆ ನಾನು ಬುದ್ಧನ ಸ್ಥಿತಿಯನ್ನು ಪಡೆಯಲಿದ್ದೇನೆ."
ಈ ಜನ್ಮದಲ್ಲಿ ಜ್ಞಾನೋದಯವನ್ನು ಸಾಧಿಸುವುದು
ಇನ್ನೂ ಹೆಚ್ಚಾಗಿ, ಎಲ್ಲಾ ಸೀಮಿತ ಜೀವಿಗಳ ಸಲುವಾಗಿ ಬುದ್ಧನ ಈ ಸ್ಥಿತಿಯನ್ನು ಇದೇ ಜನ್ಮದಲ್ಲಿ, ಈಗಲೇ ಪಡೆಯುವ ಬಲವಾದ ಉದ್ದೇಶವನ್ನು ಹೊಂದಿರಬೇಕು. ಈ ಜನ್ಮದಲ್ಲಿಯೇ ಜ್ಞಾನೋದಯವನ್ನು ಪಡೆಯಲು ಒಂದು ಮಾರ್ಗವಿದೆ ಎಂದು ಬುದ್ಧ ಹೇಳಿದರು. ಹಾಗಾದರೆ ಆ ಮಾರ್ಗವೇನು? ಅದು ತಾಂತ್ರಿಕ ಮಾರ್ಗವಾಗಿದೆ. ನೀವು ಇದನ್ನು ಅನುಸರಿಸಿದರೆ, ಈ ಜನ್ಮದಲ್ಲಿಯೇ ಜ್ಞಾನೋದಯವನ್ನು ಪಡೆಯಲು ಸಾಧ್ಯವಿದೆ.
ಈ ಜನ್ಮದಲ್ಲಿ ಜ್ಞಾನೋದಯವನ್ನು ಪಡೆಯಲು ನಮಗೆ ಬಲವಾದ ಉದ್ದೇಶವಿದ್ದರೂ, ಅದು ಸುಲಭ ಎಂದು ನಾವು ಭಾವಿಸಬಾರದು, ಏಕೆಂದರೆ ನಾವು ಆರಂಭವಿಲ್ಲದ ಸಮಯದಿಂದ ಬಹಳಷ್ಟು ವಿನಾಶಕಾರಿ ಕ್ರಿಯೆಗಳನ್ನು ಸಂಗ್ರಹಿಸಿರುತ್ತೇವೆ. ತಂತ್ರವು ವೇಗವಾಗಿರಬಹುದು, ಆದರೆ ಇದು ಬಹಳಾ ಕಷ್ಟಕರವಾದ ಮಾರ್ಗವಾಗಿದೆ. ತಾಂತ್ರಿಕ ಮಾರ್ಗವನ್ನು ಅಭ್ಯಾಸ ಮಾಡುವುದು ವಿಮಾನದಂತೆ ವೇಗವಾಗಿದೆ ಎಂದು ನಾವು ಭಾವಿಸಬಾರದು - ಅದು ಅಷ್ಟು ಸುಲಭವಲ್ಲ. ಉದಾಹರಣೆಗೆ, ಜೆಟ್ಸನ್ ಮಿಲರೆಪ ತನ್ನ ಗುರು ಮಾರ್ಪನೊಂದಿಗೆ ಅನೇಕ ಕಷ್ಟಗಳನ್ನು ಅನುಭವಿಸಿದರು - ಗೋಪುರಗಳನ್ನು ನಿರ್ಮಿಸುವುದು, ಹೊಡೆತಗಳನ್ನು ಸಹಿಸುವುದು ಮತ್ತು ಇಂತಹ ಬಹಳಷ್ಟು ದುಃಖಗಳನ್ನು ಅನುಭವಿಸಿದನು. ಈ ಕಾರಣಗಳಿಂದಾಗಿ, ಅವನು ಆ ಜೀವಿತಾವಧಿಯಲ್ಲಿಯೇ ಜ್ಞಾನೋದಯವನ್ನು ಸಾಧಿಸಲಾಯಿತು. ಆದರೆ ಮಿಲರೆಪ ಅನುಭವಿಸಿದ ಕಷ್ಟಗಳ ಒಂದು ಭಾಗವನ್ನೂ ಅನುಭವಿಸಲು ನಾವು ಸಿದ್ಧರಿಲ್ಲ.
ಈ ಜೀವಿತಾವಧಿಯಲ್ಲಿಯೇ ಜ್ಞಾನೋದಯವನ್ನು ಪಡೆಯುವ ಬಲವಾದ ಉದ್ದೇಶ ನಮಗಿದ್ದರೆ ಮತ್ತು ದೊಡ್ಡ ಕಷ್ಟಗಳನ್ನು ಅನುಭವಿಸಲು ಸಿದ್ಧರಾಗಿದ್ದರೆ, ಸ್ಥಿರವಾಗಿ ಅಭ್ಯಾಸ ಮಾಡಿದರೆ, ನಾವು ವಾಸ್ತವದಲ್ಲಿ ಬುದ್ಧತ್ವವನ್ನು ಪಡೆಯುವ ಅವಕಾಶವಿದೆ.
ಸಾರಾಂಶ
ಅಮೂಲ್ಯವಾದ ಮಾನವ ದೇಹದೊಂದಿಗೆ ಜನಿಸಿದ ನಂತರ, ನಾವು ಅದನ್ನು ಧರ್ಮವನ್ನು ಅಭ್ಯಾಸ ಮಾಡಲು ಮತ್ತು ಉತ್ತಮ ಪುನರ್ಜನ್ಮಗಳು, ವಿಮೋಚನೆ ಮತ್ತು ಜ್ಞಾನೋದಯವನ್ನು ಪಡೆಯಲು ಬಳಸಬಹುದು. ಇದಕ್ಕಾಗಿ, ನಾವು ಕ್ರಮವಾದ ಮಾರ್ಗವನ್ನು ಅನುಸರಿಸಬೇಕು. ಇದು ಹತ್ತು ವಿನಾಶಕಾರಿ ಕ್ರಿಯೆಗಳನ್ನು ತಪ್ಪಿಸುವುದು, ಗೊಂದಲಮಯ ಭಾವನೆಗಳಿಂದ ನಮ್ಮನ್ನು ಮುಕ್ತಗೊಳಿಸುವುದು ಮತ್ತು ಸಂಸಾರ ಮತ್ತು ಬೋಧಿಚಿತ್ತ ಗುರಿಯಿಂದ ಮುಕ್ತರಾಗುವ ದೃಢಸಂಕಲ್ಪದೊಂದಿಗೆ, ಕೇಂದ್ರಿಕೃತ ಏಕಾಗ್ರತೆ ಮತ್ತು ಶೂನ್ಯತೆಯ ಪರಿಕಲ್ಪನಾರಹಿತ ಸಾಕ್ಷಾತ್ಕಾರವನ್ನು ಪಡೆಯುವುದನ್ನು ಒಳಗೊಂಡಿರುತ್ತದೆ.