ಪ್ರೇರಣೆಯ ಮಧ್ಯಂತರ ಮತ್ತು ಉನ್ನತ ಮಟ್ಟಗಳು

ಪುನರವಲೋಕನ 

ನಾವು ಆಧ್ಯಾತ್ಮಿಕ ಪಥದ ಕ್ರಮವಾದ ಹಂತಗಳ ಬಗ್ಗೆ ಮಾತನಾಡುತ್ತಿದ್ದು, ಇಲ್ಲಿ ನಾವು ನಮ್ಮ ಪ್ರೇರಣೆಯನ್ನು, ಸಣ್ಣದೊಂದು ವ್ಯಾಪ್ತಿಯಿಂದ ಪ್ರಾರಂಭಿಸಿ, ಅದನ್ನು ವಿಸ್ತರಿಸಲು ಮತ್ತು ವೃದ್ಧಿಪಡಿಸಲು ಪ್ರಯತ್ನಿಸುತ್ತೇವೆ. ಈ ರೀತಿಯಾಗಿ, ಪ್ರತಿ ಹಂತವು ಹಿಂದಿನ ಹಂತದ ಆಧಾರದ ಮೇಲೆ ನಿರ್ಮಿತವಾಗುತ್ತದೆ. 

ಈ ಬೆಳವಣಿಗೆಯನ್ನು ಅನುಸರಿಸುವ ಎರಡು ಮಾರ್ಗಗಳಿವೆ ಎಂಬುದನ್ನು ನಾವು ನೋಡಿದ್ದೇವೆ. ನಾವು ಧರ್ಮ-ಲೈಟ್ ವಿಧಾನವನ್ನು ಅನುಸರಿಸಬಹುದು, ಅದರೊಂದಿಗೆ ಈ ಜೀವಿತಾವಧಿಯನ್ನು ಸುಧಾರಿಸಲು ಮತ್ತು ನಮ್ಮ ಜೀವನವನ್ನು ಉತ್ತಮಗೊಳಿಸುವತ್ತ ನಾವು ಕಾಳಜಿ ವಹಿಸುತ್ತೇವೆ.

ನಮ್ಮಲ್ಲಿ ಹೆಚ್ಚಿನವರು, ಇಲ್ಲಿಂದಲೇ ಪ್ರಾರಂಭಿಸಬೇಕು. ಆದರೆ, ಸಾಂಪ್ರದಾಯಿಕವಾದ ಪ್ರಸ್ತುತಿಯು ಈ ಮಟ್ಟವನ್ನೂ ಸಹ ಪರಿಗಣಿಸುವುದಿಲ್ಲ ಏಕೆಂದರೆ ಅದು ಆರಂಭ ಮತ್ತು ಅಂತ್ಯವಿಲ್ಲದ ಪುನರ್ಜನ್ಮದಲ್ಲಿ ನಂಬಿಕೆಯಿಡುತ್ತದೆ. ನಿಜವಾದ ಕೋಕಾ-ಕೋಲಾದಂತಿರುವ ನಿಜವಾದ ಧರ್ಮವು, ಪುನರ್ಜನ್ಮದ ವಿಷಯವನ್ನು ಒಳಗೊಂಡಂತೆ, ಈ ಬೆಳವಣಿಗೆಯ ಬಗ್ಗೆ ಮಾತನಾಡುತ್ತದೆ. 

ಎಲ್ಲಾ ಹಂತದ ಪ್ರೇರಣೆಯಂತೆ ಆರಂಭಿಕ ಹಂತದ ಪ್ರೇರಣೆಯು, ಒಂದು ಗುರಿಯನ್ನು ಹೊಂದಿರುತ್ತದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ, ಆ ಗುರಿಯನ್ನು ಸಾಧಿಸಲು ಇರುವ ಒಂದು ಕಾರಣ ಮತ್ತು ಅದರ ಹಿಂದೆಯಿರುವ ಒಂದು ಭಾವನೆಯು ಆ ಗುರಿಯನ್ನು ಸಾಧಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಆರಂಭಿಕ ಹಂತದಲ್ಲಿ, ನಾವು ನಮ್ಮ ಭವಿಷ್ಯದ ಜೀವನವನ್ನು ಸುಧಾರಿಸಲು ನೋಡುತ್ತಿದ್ದೇವೆ, ನಾವು ಅಮೂಲ್ಯವಾದ ಮಾನವ ಪುನರ್ಜನ್ಮವನ್ನು ಮುಂದುವರಿಸುವಂತೆ ಖಚಿತಪಡಿಸಿಕೊಳ್ಳುತ್ತೇವೆ, ಆಗ ಹೆಚ್ಚಿನ ಗುರಿಗಳನ್ನು ತಲುಪಲು ನಾವು ನಮ್ಮನ್ನು ಅಭಿವೃದ್ಧಿಪಡಿಸಿಕೊಳ್ಳುವುದನ್ನು ಮುಂದುವರಿಸಬಹುದು. ಕೇವಲ ಈ ಜೀವಿತಾವಧಿಯಲ್ಲಿ ಅಂತಿಮ ಗುರಿಗಳನ್ನು ಸಾಧಿಸುವುದು ಕಷ್ಟ ಎಂದು ನಾವು ಅರಿತುಕೊಂಡಿದ್ದೇವೆ. ಇದು ಬಹಳಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ಉತ್ತಮ ಪುನರ್ಜನ್ಮಗಳನ್ನು ಪಡೆಯುವಂತೆ ಶ್ರಮ ಪಡುವ ಕಾರಣವು, ನಾವು ಈ ಹಾದಿಯಲ್ಲಿ ಮುಂದುವರಿಯಬಹುದು ಎಂಬುದಾಗಿರುತ್ತದೆ. 

ಅಮೂಲ್ಯವಾದ ಮಾನವ ಪುನರ್ಜನ್ಮದ ಈ ಗುರಿಯನ್ನು ಸಾಧಿಸುವ ಮೂಲಕ, ನಾವು ಇದನ್ನೇ ಮಾಡಲು ಯೋಜಿಸುತ್ತೇವೆ. ನಾವು ನಮ್ಮ ಮುಂದಿನ ಜೀವಿತಾವಧಿಯಲ್ಲಿ ಸ್ವರ್ಗಕ್ಕೆ ಹೋಗುವುದರ ಬಗ್ಗೆ ಮತ್ತು ಒಳ್ಳೆಯ ಸಮಯವನ್ನು ಆನಂದಿಸುವುದರ ಬಗ್ಗೆ ಮಾತನಾಡುತ್ತಿಲ್ಲ. ಈ ವ್ಯಾಪ್ತಿಯೊಳಗೆ, ಉತ್ತಮ ಪುನರ್ಜನ್ಮವನ್ನು ಪಡೆಯಲು ನಮ್ಮನ್ನು ಪ್ರೇರೇಪಿಸುವ ಭಾವನೆಯು, ಕೆಟ್ಟ ಪುನರ್ಜನ್ಮವನ್ನು ಪಡೆಯುವ ಭಯವಾಗಿರುತ್ತದೆ. ಈ ಕೆಟ್ಟ ಸ್ಥಿತಿಗಳಲ್ಲಿ, ನಮ್ಮ ಮೇಲೆ ಕೆಲಸ ಮಾಡಲು ಮತ್ತು ನಮ್ಮನ್ನು ಸುಧಾರಿಸಿಕೊಳ್ಳುವ ಯಾವುದೇ ಅವಕಾಶಗಳಿರುವುದಿಲ್ಲ. ಆದರೆ, ಇದನ್ನು ತಪ್ಪಿಸಲು ಒಂದು ಮಾರ್ಗವಿದೆ ಎಂಬ ವಿಶ್ವಾಸ ನಮಗಿರುತ್ತದೆ. ಸುರಕ್ಷಿತ ನಿರ್ದೇಶನ ಅಥವಾ ಆಶ್ರಯದ ವಿಷಯವಾಗಿ ನಾವು ಇದನ್ನು ಚರ್ಚಿಸಿದ್ದೇವೆ. ಈ ನಿರ್ದೇಶನವು, ನಮ್ಮ ಮಾನಸಿಕ ಚಟುವಟಿಕೆಯೊಂದಿಗೆ, ನಮ್ಮ ನಡವಳಿಕೆಯಲ್ಲಿನ ಎಲ್ಲಾ ಮಿತಿಗಳು ಮತ್ತು ನಕಾರಾತ್ಮಕ ಅಂಶಗಳನ್ನು ಶಾಶ್ವತವಾಗಿ ನಿವಾರಿಸಲು ಪ್ರಯತ್ನಿಸುತ್ತದೆ ಮತ್ತು ಅವನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಇದರೊಂದಿಗೆ, ನಾವು ರಚನಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸಲು ಬಯಸುತ್ತೇವೆ. ನಾವು ಹೊಂದಿರುವ ಈ ಅಮೂಲ್ಯವಾದ ಮಾನವ ಜೀವನದ ಅವಕಾಶಗಳನ್ನು ಪ್ರಶಂಸಿಸುವ ಮೂಲಕ ಮತ್ತು ಸಾವಿನ ಸಮಯದಲ್ಲಿ ನಾವು ಖಂಡಿತವಾಗಿಯೂ ಇದನ್ನು ಕಳೆದುಕೊಳ್ಳುತ್ತೇವೆ ಎಂಬ ತಿಳುವಳಿಕೆಯೊಂದಿಗೆ ನಾವು ಹೀಗೆ ಮಾಡುತ್ತೇವೆ. ಸಾವು ಖಂಡಿತವಾಗಿ ಸಂಭವಿಸುತ್ತದೆ ಮತ್ತು ಇದು ಯಾವಾಗ ಸಂಭವಿಸುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. 

ಅತ್ಯುತ್ತಮವಾದ ಪುನರ್ಜನ್ಮದ ಸ್ಥಿತಿಗಳೂ ಅತೃಪ್ತಿಕರವಾಗಿರುತ್ತವೆ 

ಮಧ್ಯಂತರ ವ್ಯಾಪ್ತಿಯೊಂದಿಗೆ, ನಾವು ಇನ್ನಷ್ಟು ವಿಶ್ಲೇಷಿಸುತ್ತೇವೆ. ನಾವು ಉತ್ತಮವಾದ ಪುನರ್ಜನ್ಮಗಳನ್ನು ಹೊಂದಿದ್ದರೂ ಅಥವಾ ಅಮೂಲ್ಯವಾದ ಮಾನವ ಪುನರ್ಜನ್ಮಗಳನ್ನು ಹೊಂದಿದ್ದರೂ ಸಹ, ಹಾಗೆ ಮುಂದುವರಿಯುವುದು ಅತೃಪ್ತಿಕರವಾಗಿರುತ್ತದೆ. ಜೀವನವು ಮುಂದುವರಿಯುತ್ತದೆ ಮತ್ತು ಮುಂಬರುವ ಕ್ಷಣದಲ್ಲಿ ನಾವು ಹೇಗೆ ಭಾವಿಸುತ್ತೇವೆ ಎಂಬುದರ ಬಗ್ಗೆ ಯಾವುದೇ ಖಚಿತತೆಯಿಲ್ಲದೆ ಮೇಲೆ-ಕೆಳಗೆ ಹೋಗುವುದೇ ಅದರ ಸ್ವಭಾವವಾಗಿರುತ್ತದೆ. ನಾವು ಈಗ ಸಂತೋಷವಾಗಿರಬಹುದು, ಆದರೆ ಮುಂದಿನ ಕ್ಷಣದಲ್ಲಿ ನಾವು ಇದ್ದಕ್ಕಿದ್ದಂತೆ ಅತೃಪ್ತಿ, ದುಃಖ ಅಥವಾ ಖಿನ್ನತೆಯನ್ನು ಅನುಭವಿಸಬಹುದು. ಚಿಕ್ಕಪುಟ್ಟ ವಿಷಯಗಳು ನಮ್ಮನ್ನು ಅಸಮಾಧಾನಗೊಳಿಸುತ್ತವೆ ಮತ್ತು ಸಹಜವಾಗಿ ನಾವು ಪುನರಾವರ್ತಿತ ಸಮಸ್ಯೆಗಳನ್ನು ಹೊಂದಿರುತ್ತೇವೆ, ಪ್ರತಿ ಜೀವನದಲ್ಲಿ ಜನ್ಮ ಪಡೆದು, ನಮ್ಮ ದೈಹಿಕ ಕಾರ್ಯಗಳ ಮೇಲೆ ಯಾವುದೇ ನಿಯಂತ್ರಣವಿಲ್ಲದ ಮಗುವಾಗಿರಬೇಕಾಗುತ್ತದೆ. ನಾವು ಹೇಗೆ ನಡೆಯಬೇಕು ಮತ್ತು ಮಾತನಾಡಬೇಕು ಎಂಬುದನ್ನು ಕಲಿಯಬೇಕು ಮತ್ತು ಪದೇ ಪದೇ ಹಾಗೆ ಮಾಡುವುದು ನಿಜವಾಗಿಯೂ ನೀರಸವಾಗಿರುತ್ತದೆ. ನಾವು ಮತ್ತೆ ಶಾಲೆಗೆ ಹೋಗಬೇಕಾಗುತ್ತದೆ, ಅದು ಯಾರಿಗೆ ತಾನೆ ಬೇಕು!? ನಾವು ಸಂಗಾತಿ ಮತ್ತು ಉದ್ಯೋಗವನ್ನು ಹುಡುಕಬೇಕು ಮತ್ತು ಮತ್ತೊಮ್ಮೆ ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣವನ್ನು ನಮ್ಮಲ್ಲಿ ಮಾತ್ರವಲ್ಲದೆ ನಾವು ಪ್ರೀತಿಸುವವರಲ್ಲಿಯೂ ಸಹ ಎದುರಿಸಬೇಕಾಗುತ್ತದೆ. 

ಈ ಅಮೂಲ್ಯವಾದ ಮಾನವ ಜೀವನದಲ್ಲಿಯೂ ಸಹ, ಹಲವಾರು ಅತೃಪ್ತಿಕರ ವಿಷಯಗಳಿರುತ್ತವೆ, ಮತ್ತು ನಮ್ಮ ಎಲ್ಲಾ ಭಾವನಾತ್ಮಕ ಸಮಸ್ಯೆಗಳು ಇನ್ನೂ ಅಸ್ತಿತ್ವದಲ್ಲಿರುತ್ತವೆ. ನಾವು ಕೋಪಗೊಳ್ಳುತ್ತೇವೆ ಮತ್ತು ಅಸಮಾಧಾನಗೊಳ್ಳುತ್ತೇವೆ ಮತ್ತು ನಾವು ದುರಾಸೆ ಪಡುತ್ತೇವೆ. ನಮಗೆ ಜನರು ಮತ್ತು ವಸ್ತುಗಳೊಂದಿಗೆ ಬಹಳಷ್ಟು ಬಾಂಧವ್ಯವಿರುತ್ತದೆ. ನಾವು ಕಾರಣ ಮತ್ತು ಪರಿಣಾಮ ಮತ್ತು ವಾಸ್ತವದ ಬಗ್ಗೆ ನಿಷ್ಕಪಟರಾಗಿರುತ್ತೇವೆ, ಆದ್ದರಿಂದ ನಾವು ವರ್ತಿಸುವ ಮತ್ತು ಮಾತನಾಡುವ ರೀತಿಯು ಇತರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯೋಚಿಸುವಂತಹ ಮೂರ್ಖತನದಿಂದ ವರ್ತಿಸುತ್ತೇವೆ. ಇತರರು ಅಸ್ತಿತ್ವದಲ್ಲಿಲ್ಲದಿರುವಂತೆ ಮತ್ತು ಭಾವನೆಗಳನ್ನು ಹೊಂದಿರದಂತೆ ನಾವು ವರ್ತಿಸುತ್ತೇವೆ. ಅದು ನಿಜವಾಗಿಯೂ ಬೆಪ್ಪತನವಾಗಿರುತ್ತದೆ, ಅಲ್ಲವೇ? 

ಈ ಎಲ್ಲಾ ಸಮಸ್ಯೆಗಳು ಮುಂದುವರಿಯುತ್ತವೆ ಮತ್ತು ಎಷ್ಟೇ ಅದೃಷ್ಟಶಾಲಿ ಪುನರ್ಜನ್ಮವಾಗಿರಲಿ, ನಾವು ಈ ಏರಿಳಿತಗಳನ್ನು ಹೊಂದಿರುತ್ತೇವೆ. ನಾವು ಅದೃಷ್ಟದಿಂದ ದುರದೃಷ್ಟಕರ, ಉತ್ತಮವಾದ ಮರುಜನ್ಮಗಳು ಮತ್ತು ಸನ್ನಿವೇಶಗಳಿಂದ ಭೀಕರವಾದವುಗಳಿಗೆ ಹೋಗುವ ಸಮಯವೂ ಬರುತ್ತದೆ. ಇದು ಮುಂದುವರಿಯುತ್ತಲೇ ಇರುತ್ತದೆ. ಇದನ್ನೇ ನಾವು "ಅನಿಯಂತ್ರಿತವಾದ ಪುನರಾವರ್ತಿತ ಅಸ್ತಿತ್ವ ಅಥವಾ ಪುನರ್ಜನ್ಮ" ಎಂದು ಕರೆಯುತ್ತೇವೆ, ಇದಕ್ಕಾಗಿ ಇರುವ ಸಂಸ್ಕೃತ ಪದವೇ "ಸಂಸಾರ". 

ತ್ಯಾಗ: ಮುಕ್ತರಾಗುವ ಸಂಕಲ್ಪಕ್ಕಾಗಿ ವಿಮೋಚನೆಯ ಗುರಿಯಿಟ್ಟುಕೊಳ್ಳುವುದು 

ಮಧ್ಯಂತರ ಮಟ್ಟದಲ್ಲಿ, ಎಲ್ಲದರಿಂದಿರುವ ವಿಮೋಚನೆಯು ನಾವು ಸಾಧಿಸಲು ಬಯಸುವ ಗುರಿಯಾಗಿರುತ್ತದೆ. ನಮ್ಮ ಮಾನಸಿಕ ನಿರಂತರತೆಗೆ ಯಾವುದೇ ಆರಂಭ ಮತ್ತು ಅಂತ್ಯವಿಲ್ಲ, ಮತ್ತು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದ ಈ ಅಂತ್ಯವಿಲ್ಲದ ಚಕ್ರದಲ್ಲಿ ಮುಂದುವರಿಯಲು ನಾವು ಬಯಸುವುದಿಲ್ಲ. "ಎಂದಿಗೂ ಅಂತ್ಯವಿಲ್ಲ" ಎಂದರೆ, ನಾವು ಅದಕ್ಕಾಗಿ ಯಾವುದೇ ಹೆಜ್ಜೆಯನ್ನು ಕೈಗೊಳ್ಳದಿದ್ದರೆ, ಅದು ಶಾಶ್ವತವಾಗಿ ಮುಂದುವರಿಯುತ್ತದೆ ಎಂದು ಅರ್ಥ. ನಾವು ಅದನ್ನು ಕೊನೆಗೊಳಿಸಬೇಕು ಮತ್ತು ಸಂಸಾರದ ನಿಜವಾದ ನಿಲುಗಡೆಯನ್ನು ಅನುಭವಿಸಬೇಕು. ಏಕೆ? ಏಕೆಂದರೆ ನಾವು ದುಃಖವನ್ನು ನಿಲ್ಲಿಸಲು ಬಯಸುತ್ತೇವೆ. ನಮಗಾಗಿ ಇರುವ ಸಮಸ್ಯೆಗಳು ಭಯಾನಕವಲ್ಲದಿದ್ದರೂ, ನಾವು ಇನ್ನೂ ಹೆಚ್ಚು ಸೂಕ್ಷ್ಮವಾದ ಸಮಸ್ಯೆಗಳನ್ನು ನಿಲ್ಲಿಸಲು ಬಯಸುತ್ತೇವೆ. ಇದೇ ವಿಮೋಚನೆಯನ್ನು ಸಾಧಿಸಲು ಬಯಸುವ ಕಾರಣವಾಗಿರುತ್ತದೆ. 

ಸಂಸ್ಕೃತದಲ್ಲಿ, ವಿಮೋಚನೆಯನ್ನು "ನಿರ್ವಾಣ" ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ, ಇದರೆಡೆಗೆ ನಮ್ಮನ್ನು ಪ್ರೇರೇಪಿಸುವ ಭಾವನೆಯನ್ನು "ತ್ಯಾಗ" ಎಂದು ಕರೆಯಲಾಗುತ್ತದೆ. ಇದು ಉತ್ತಮವಾದ ಅನುವಾದವಾಗಿರುವುದಿಲ್ಲ, ಆದರೆ ಇದು ಸ್ವತಂತ್ರವಾಗಿರಲು ಇರುವ ಬಲವಾದ ನಿರ್ಣಯವನ್ನು ಸೂಚಿಸುತ್ತದೆ. ತ್ಯಾಗದೊಂದಿಗೆ, ನಾವು ಸಾಕಷ್ಟು ದುಃಖ ಪಟ್ಟಿದ್ದೇವೆ ಎಂದು ನಾವು ನಿರ್ಧರಿಸುತ್ತೇವೆ. ನಾವು ಅದರಿಂದ ಬೇಸರಗೊಂಡಿದ್ದೇವೆ ಮತ್ತು ಆಳವಾದ ಮಟ್ಟದಲ್ಲಿ ನಾವು ಎಲ್ಲದರಿಂದ ತೀವ್ರವಾಗಿ ಬೇಸರಗೊಂಡಿರುತ್ತೇವೆ. ಇದು ಸಾಕು: ನಾವು ಮುಕ್ತರಾಗಲು ಬಯಸುತ್ತೇವೆ. 

ನಮ್ಮ ಗೊಂದಲಮಯ ಭಾವನೆಗಳನ್ನು ಬಿಟ್ಟುಕೊಡಲು ಸಿದ್ಧರಾಗಿರುವುದು  

ಮುಕ್ತರಾಗಲು, ನಮ್ಮ ಎಲ್ಲಾ ಸಮಸ್ಯೆಗಳು ಮತ್ತು ಸಂಕಟಗಳ ಕಾರಣಗಳನ್ನು ನಾವು ನಿವಾರಿಸಬೇಕಾಗಿದೆ ಎಂದು ನಾವು ಗಮನಿಸಬಹುದು. ನಾವು ಕೇವಲ ದುಃಖವನ್ನು ಬಿಟ್ಟುಕೊಡಲು ಸಂಪೂರ್ಣವಾಗಿ ಸಿದ್ಧರಾಗಿರುವುದಲ್ಲದೆ, ಅದರ ಕಾರಣಗಳನ್ನೂ ಬಿಟ್ಟುಕೊಡಲು ನಾವು ಸಿದ್ಧರಾಗಿರಬೇಕು. ನಾವು ಐಸ್ ಕ್ರೀಮ್ ಅಥವಾ ಚಾಕೊಲೇಟ್ ಅಂತಹದ್ದನ್ನು ತ್ಯಜಿಸುವ ಬಗ್ಗೆ ಮಾತನಾಡುತ್ತಿಲ್ಲ. ಅದು ತ್ಯಾಗದ ಅತ್ಯಂತ ಕ್ಷುಲ್ಲಕ ತಿಳುವಳಿಕೆಯಾಗಿರುತ್ತದೆ. ನಾವು ನಮ್ಮ ಕೋಪ, ದುರಾಶೆ ಮತ್ತು ಬಾಂಧವ್ಯದಿಂದ ಮುಕ್ತರಾಗಲು ನಿರ್ಧರಿಸುತ್ತೇವೆ. ಚಾಕೊಲೇಟ್‌ನ ವಿಷಯದಲ್ಲಿ, ಅದರ ಉತ್ತಮ ಗುಣಗಳ ಉತ್ಪ್ರೇಕ್ಷೆಯ ಆಧಾರದ ಮೇಲಿರುವ ಬಾಂಧವ್ಯವನ್ನು ನಾವು ತ್ಯಜಿಸಬೇಕಾಗುತ್ತದೆ. ಉದಾಹರಣೆಗೆ, ನಾವು ಹೀಗೆ ಯೋಚಿಸುತ್ತೇವೆ, "ಇದು ವಿಶ್ವದಲ್ಲಿನ ಅತ್ಯಂತ ಅದ್ಭುತ ಮತ್ತು ರುಚಿಕರವಾದ ತಿನಿಸು, ಇದರಿಂದ ನನಗೆ ಸಂತೋಷ ಸಿಗುತ್ತದೆ, ಎಲ್ಲಿಲದ ಆನಂದ ಸಿಗುತ್ತದೆ!" ನಿಜವಾಗಿಯೂ ಚಾಕೊಲೇಟಿಗೆ ಹೀಗೆ ಮಾಡುವ ಶಕ್ತಿಯಿದ್ದರೆ, ನಾವು ಅದನ್ನು ಹೆಚ್ಚು ತಿಂದಷ್ಟು ಸಂತೋಷವಾಗಿರುತ್ತಿದ್ದೆವು. ಆದರೆ ಹಾಗೆ ಮಾಡಿದ್ದಲ್ಲಿ, ನಾವು ಎಷ್ಟೇ ಚಾಕೊ-ಪ್ರಿಯರಾಗಿರಲಿ, ನಾವು ಅದರ ಬಗ್ಗೆ ಬೇಸತ್ತು, ಮತ್ತೊಮ್ಮೆ ಚಾಕೊಲೇಟ್ ಅನ್ನು ನೋಡಲೂ ಬಯಸುವುದಿಲ್ಲ. 

ನಮ್ಮ ಬಾಂಧವ್ಯಗಳು, ಕೋಪ ಮತ್ತು ಮುಂತಾದವುಗಳನ್ನು ತ್ಯಜಿಸುವ ನಮ್ಮ ಆಶಯದಲ್ಲಿ ಪ್ರಾಮಾಣಿಕವಾಗಿರುವುದು ಬಹಳಾ ಗಹನವಾದ ವಿಷಯ ಮತ್ತು ಬಹಳಾ ಕಷ್ಟವಾದ ವಿಷಯವಾಗಿರುತ್ತದೆ. ನಾವು ಅದನ್ನು ಕ್ಷುಲ್ಲಕಗೊಳಿಸಬಾರದು. ಇದು ಯಾರೋ ಒಬ್ಬರು ತಮ್ಮ ತಲೆಯನ್ನು ಗೋಡೆಗೆ ಬಡಿಯುವ ಹಾಸ್ಯದಂತಿದೆ, ಅವರು ನಿಲ್ಲಿಸಲು ಹೆದರುತ್ತಾರೆ ಏಕೆಂದರೆ ಅವರು ತಮ್ಮ ತಲೆಯನ್ನು ಬಡಿಯುವುದನ್ನು ನಿಲ್ಲಿಸಿದಾಗ, ಅದು ಹದಗೆಡುತ್ತದೆಯೇ ಎಂದು ಅವರಿಗೆ ತಿಳಿದಿರುವುದಿಲ್ಲ. ನಾವು ಅದಕ್ಕೇ ಸಂಪೂರ್ಣವಾಗಿ ಒಗ್ಗಿಕೊಂಡಿರುವುದರಿಂದ, ನಾವು ನಮ್ಮ ತಲೆಯನ್ನು ಗೋಡೆಗೆ ಬಡಿದುಕೊಳ್ಳುತ್ತೇವೆ. ಹೌದು ಇದೊಂದು ವಿಪರೀತದ ಉದಾಹರಣೆಯಾಗಿದೆ. ಹೆಚ್ಚು ಸಾಮಾನ್ಯವಾದ ಉದಾಹರಣೆಯೆಂದರೆ, ನಾವು ಒಬ್ಬರೊಂದಿಗೆ ಆರೋಗ್ಯಕರವಲ್ಲದ ಸಂಬಂಧದಲ್ಲಿದೇವೆ, ಆದರೆ ನಾವು ಏಕಾಂಗಿಯಾಗಿರಲು ಭಯಪಡುವ ಕಾರಣ, ಅದನ್ನು ಅಂತ್ಯಗೊಳಿಸಲು ನಾವು ಹಿಂಜರಿಯುತ್ತೇವೆ. ಇದರ ಪರಿಣಾಮವಾಗಿ, ನಾವು ಈ ಅನಾರೋಗ್ಯಕರ ಸಂಬಂಧವನ್ನು ಮುಂದುವರಿಸುತ್ತೇವೆ ಮತ್ತು ಶೋಚನೀಯ ಸ್ಥಿತಿಯಲ್ಲಿರುತ್ತೇವೆ. 

ಇದು ಸರ್ವೇಸಾಮಾನ್ಯವಾದ ವಿಷಯ, ಅಲ್ಲವೇ? ಕೆಲವು ಜನರು ನಮ್ಮ ಕೈಬಿಡಬಹುದು ಎಂಬ ಭಯದಿಂದಾಗಿ, ನಾವು ಅವರಿಗೆ ಕೆಲವು ವಿಷಯಗಳನ್ನು ಹೇಳಲು ಬಯಸುವುದಿಲ್ಲ. ಇಲ್ಲಿ ನಾವು ಯಾವುದೇ ವಿಚಿತ್ರವಾದ ಅನುಭವಗಳ ಬಗ್ಗೆ ಮಾತನಾಡುತ್ತಿಲ್ಲ, ಬದಲಿಗೆ ನಾವೆಲ್ಲರೂ ಎಲ್ಲಾ ಸಮಯದಲ್ಲೂ ಅನುಭವಿಸುವ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇವೆ. 

ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ವಿಮೋಚನೆಯನ್ನು ಪಡೆಯುವುದು ಸಾಧ್ಯವೇ ಮತ್ತು ನಾನು ಅದನ್ನು ಸಾಧಿಸುವ ಸಾಮರ್ಥ್ಯ ಹೊಂದಿದ್ದೇನೆಯೇ

ಈ ವಿಮೋಚನೆಯ ಗುರಿಯನ್ನು ಸಾಧಿಸಲು ಮತ್ತು ಅಂತಿಮವಾಗಿ ಜ್ಞಾನೋದಯವನ್ನು ಸಾಧಿಸುವ ಮೊದಲು, ಇದು ಸಾಧ್ಯವೆಂದೂ ಮತ್ತು ನಾವು ಅದನ್ನು ಹೇಗೆ ಸಾಧಿಸಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಇವುಗಳು ಸಂಕೀರ್ಣವಾದ ವಿಷಯಗಳಾಗಿರುತ್ತವೆ ಮತ್ತು ಇವುಗಳು ನಾವು ಸಾಧಿಸಬಹುದಾದ, ತಲುಪಬಹುದಾದ ಗುರಿಗಳೆಂದು ಪ್ರದರ್ಶಿಸಲು ಕಷ್ಟವಾದ್ದರಿಂದ, ಅನೇಕರು ಅವುಗಳನ್ನು ಬಿಟ್ಟುಬಿಡುತ್ತಾರೆ. ಇದು ಒಂದು ದೊಡ್ಡ ತಪ್ಪು, ಏಕೆಂದರೆ ಈ ಗುರಿಗಳನ್ನು ಸಾಧಿಸಬಹುದು ಎಂದು ನಮಗೆ ಮನವರಿಕೆಯಾಗದಿದ್ದರೆ, ನಾವು ಅವುಗಳಿಗಾಗಿ ಕೆಲಸ ಮಾಡುವುದರ ಬಗ್ಗೆ ಏಕೆ ಯೋಚಿಸುವೆವು? ನಾವು ಕೇವಲ ಆಟವಾಡುತ್ತೇವೆ ಮತ್ತು ಅಂತಿಮವಾಗಿ ನಾವು ಅದನ್ನು ಹಾಸ್ಯಾಸ್ಪದವಾಗಿ ಪರಿಗಣಿಸುವ ಮತ್ತು ಬಿಟ್ಟುಕೊಡುವ ಹಂತವನ್ನು ತಲುಪುತ್ತೇವೆ. 

ಬುದ್ಧ-ಸ್ವಭಾವ (ವಿಮೋಚನೆ ಮತ್ತು ಜ್ಞಾನೋದಯಕ್ಕೆ ಅನುವು ಮಾಡಿಕೊಡುವ ಅಂಶಗಳು), ಮನಸ್ಸಿನ ನೈಸರ್ಗಿಕ ಶುದ್ಧತೆ ಇತ್ಯಾದಿ ವಿಷಯಗಳನ್ನು ನಾವು ಆಳವಾಗಿ ಪರಿಶೀಲಿಸಬೇಕಾಗಿದೆ. ನಮ್ಮ ಗೊಂದಲಮಯ ಭಾವನೆಗಳು ಮತ್ತು ಗಲಿಬಿಲಿಗಳು ನಮ್ಮ ಮನಸ್ಸಿನ ಮೂಲಭೂತ ಭಾಗವೇ? ಹಾಗಾಗಿದ್ದರೆ, ಅವುಗಳು ಪ್ರತಿಕ್ಷಣವು ಅಸ್ತಿತ್ವದಲ್ಲಿರಬೇಕು ಎಂದು ಅರ್ಥ. ಹಾಗಿಲ್ಲದಿದ್ದರೆ, ಅವು ತಾತ್ಕಾಲಿಕವಾಗಿರುತ್ತವೆ, ಹಾಗಾದರೆ ಅವುಗಳನ್ನು ಎಂದಿಗೂ ಹಿಂತಿರುಗದಂತೆ ತೆಗೆದುಹಾಕಬಹುದೇ? 

ಇದನ್ನು ಪ್ರಶ್ನಿಸುವುದು ಮತ್ತು ಇದನ್ನು ಕುರಿತು ಚರ್ಚಿಸುವುದು ಅತ್ಯಗತ್ಯ. ಇದು ಖಂಡಿತವಾಗಿಯೂ, ನಾವು ಕುರುಡು ನಂಬಿಕೆಯಿಂದ ಒಪ್ಪಿಕೊಳ್ಳಬೇಕಾದ ವಿಷಯವಲ್ಲ. ನಿಜ ಹೇಳಬೇಕೆಂದರೆ, ನಾವು ಅದನ್ನು ಹೆಚ್ಚು ಪ್ರಶ್ನಿಸಿದಷ್ಟು ಒಳ್ಳೆಯದಾಗಿರುತ್ತದೆ, ಏಕೆಂದರೆ ನಾವು ನಮ್ಮ ಎಲ್ಲಾ ಅನುಮಾನಗಳನ್ನು ತೆರವುಗೊಳಿಸಬೇಕು ಮತ್ತು ನಾವು ಏನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಬಲವಾದ ವಿಶ್ವಾಸವನ್ನು ಹೊಂದಿರಬೇಕು. ನಾವು 100% ಮನವರಿಕೆಯಾಗುವವರೆಗೆ ಕಾಯಬೇಕೇ? ಅದು ಸುಲಭವಾದ ಪ್ರಶ್ನೆಯಲ್ಲ. ನಮಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ ಎಂದು ನಮಗೆ ಹೇಗೆ ತಿಳಿಯುತ್ತದೆ? ಇದು ಬಹಳಷ್ಟು ಸಮಯ ತೆಗೆದುಕೊಳ್ಳಬಹುದು. 

ಇದು ಅಸಂಬದ್ಧ ಎಂದು ನಾವು ಯೋಚಿಸಿದರೆ, ಇದರೊಂದಿಗೆ ಕೆಲಸ ಮಾಡುವುದು ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ. ಆದರೆ ಬಹುಶಃ ಇದು ಸಾಧ್ಯ ಎಂದು ಪರಿಗಣಿಸುವ ದಿಕ್ಕಿನಲ್ಲಿ ನಡೆದಾಗ, ನಾವು ಮುಂದೆ ಸಾಗಬಹುದು. ಆದರೆ, ಅದನ್ನು ನಿಜವೆಂದು ನಂಬುವುದು ಒಂದು ರೀತಿಯ ಕಾರಣವನ್ನು ಆಧರಿಸಿರಬೇಕು, ಕೇವಲ ಕುರುಡು ನಂಬಿಕೆಯಾಗಿರಬಾರದು, ಅಥವಾ "ನನ್ನ ಗುರುಗಳು ಹಾಗೆ ಹೇಳಿದರು" ಎಂಬ ಕಾರಣದಿಂದಾಗಿರಬಾರದು. ಬುದ್ಧನೇ ಹೀಗೆ ಹೇಳುತ್ತಾರೆ, "ನನ್ನ ಮೇಲಿನ ನಂಬಿಕೆಯಿಂದ ನಾನು ಹೇಳಿದ್ದನ್ನು ನಂಬಬೇಡಿ, ಬದಲಿಗೆ ನೀವು ಚಿನ್ನವನ್ನು ಖರೀದಿಸುತ್ತಿರುವಂತೆ ಅದನ್ನು ಪರೀಕ್ಷಿಸಿ." ಅದು ನಿಜವೇ ಎಂಬುದನ್ನು ನಾವು ಪರಿಶೀಲಿಸಬೇಕು. 

ಪುನರ್ಜನ್ಮದ ಬಗ್ಗೆ ಮನವರಿಕೆ: ಎರಡು ಜೀವಿತಾವಧಿಯಲ್ಲಿನ ಸೆರ್ಕಾಂಗ್ ರಿಂಪೋಚೆ ಅವರ ಪ್ರಕರಣ 

ಪುನರ್ಜನ್ಮವನ್ನು ಸತ್ಯವೆಂದು ನಂಬುವ ಕ್ರಿಯೆಯು ಬಹಳ ದೀರ್ಘವಾಗಿರುತ್ತದೆ. ನಾನು ನನ್ನ ಸ್ವಂತ ಅನುಭವವನ್ನು ಹಂಚಿಕೊಳ್ಳಬಹುದು, ಏಕೆಂದರೆ ನಾನು ಇದರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಾನು 45 ವರ್ಷಗಳಿಗೂ ಹೆಚ್ಚು ಕಾಲ ಬೌದ್ಧಧರ್ಮವನ್ನು ಅಧ್ಯಯನ ಮಾಡುತ್ತಿದ್ದೇನೆ ಮತ್ತು ಒಂದು ಹಂತದಲ್ಲಿ, ನಾನು ಖಂಡಿತವಾಗಿಯೂ ಕಾರಣದ ಆಧಾರದ ಮೇಲೆ, ಪುನರ್ಜನ್ಮವು ಏಕೆ ಅರ್ಥಪೂರ್ಣವಾಗಿದೆ ಎಂಬುದರ ಬೌದ್ಧಿಕ ತಿಳುವಳಿಕೆಯನ್ನು ತಲುಪಿದ್ದೇನೆ. ಆದರೆ ಆ ರೇಖೆಯನ್ನು ದಾಟಿ, ಭಾವನಾತ್ಮಕ ಮಟ್ಟದಲ್ಲಿ ನನಗೆ ಮನವರಿಕೆ ಮಾಡಿಕೊಟ್ಟದ್ದು, ಎರಡು ಜೀವಿತಾವಧಿಯಲ್ಲಿನ ನನ್ನ ಶಿಕ್ಷಕರೊಂದಿಗಿನ ನನ್ನ ಸಂಬಂಧವಾಗಿದೆ. ಅವರ ಹೆಸರು ಸೆರ್ಕಾಂಗ್ ರಿಂಪೋಚೆ ಮತ್ತು ಅವರು ಪರಮಪೂಜ್ಯ ದಲೈ ಲಾಮಾ ಅವರ ಗುರುಗಳಲ್ಲಿ ಒಬ್ಬರಾಗಿರುವರು; ಅವರ ಅತ್ಯಂತ ನಿಕಟ ಶಿಷ್ಯರಲ್ಲಿ ನಾನೂ ಒಬ್ಬನಾಗಿರಲು ಬಹಳಾ ಅದೃಷ್ಟಶಾಲಿಯಾಗಿದ್ದೆನು. ನಾನು ಒಂಬತ್ತು ವರ್ಷಗಳ ಕಾಲ ಅವರೊಂದಿಗೆ ಇದ್ದೆ, ಆ ಸಮಯದಲ್ಲಿ ನಾನು ಅವರ ಅನುವಾದಕನಾಗಿದ್ದೆ ಮತ್ತು ಅವರ ವೈಯಕ್ತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ನಾನು ಅವರ ಎಲ್ಲಾ ವಿದೇಶ ಪ್ರವಾಸಗಳಿಗಾಗಿ ವ್ಯವಸ್ಥೆ ಮಾಡುತ್ತಿದ್ದೆ ಮತ್ತು ಅವರೊಂದಿಗೆ ಬಹಳಾ ನಿಕಟವಾಗಿ ಕೆಲಸ ಮಾಡುತ್ತಿದ್ದೆ. ಅವರು 1983 ರಲ್ಲಿ ನಿಧನರಾದರು ಮತ್ತು ಮರುಜನ್ಮ ಪಡೆದರು ಮತ್ತು ಟಿಬೆಟಿಯನ್ ವ್ಯವಸ್ಥೆಯ ತುಲ್ಕುಸ್‌ ಮೂಲಕ ಪತ್ತೆಯಾದರು. 

ಅವರಿಗೆ ಈಗ 25 ವರ್ಷ ಮತ್ತು ಹಿಂದಿನಂತೆಯೇ, ಈಗಲೂ ನಾನು ಅವರೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದ್ದೇನೆ. ಹೌದು, ವಯಸ್ಸಿನ ವ್ಯತ್ಯಾಸದಲ್ಲಿ ಈಗ ವ್ಯತಿರಿಕ್ತ ಅಸಮಾನತೆ ಇದೆ!

ಹೊಸ ಸೆರ್ಕಾಂಗ್ ರಿಂಪೋಚೆ ಅವರು ಕೇವಲ ನಾಲ್ಕು ವರ್ಷದವರಾಗಿದ್ದಾಗ ನಾನು ಅವರನ್ನು ಭೇಟಿ ಮಾಡಿದೆ, ಮತ್ತು ನಾನು ಮೊದಲು ಕೋಣೆಗೆ ಕಾಲಿಟ್ಟಾಗ, ಅವನ ಪರಿಚಾರಕರು ಅವರಿಗೆ ಕೇಳಿದರು, "ಇದು ಯಾರೆಂದು ನಿಮಗೆ ತಿಳಿದಿದೆಯೇ?" "ಮೂರ್ಖತನದ ಮಾತಾಡಬೇಡಿ, ಖಂಡಿತವಾಗಿಯೂ ಇದು ಯಾರೆಂದು ನನಗೆ ತಿಳಿದಿದೆ" ಎಂಬುದು ಅವರ ಉತ್ತರವಾಗಿತ್ತು. ಮೊದಲಿನಿಂದಲೂ, ನಾಲ್ಕು ವರ್ಷದವರಾಗಿದ್ದರಿಂದಲೂ, ಅವರು ಇತರರಿಗಿಂತ ಹೆಚ್ಚಾಗಿ, ನನಗಾಗಿ ಅತ್ಯಂತ ನಿಕಟತೆ ಮತ್ತು ಪ್ರೀತಿಯನ್ನು ಹೊಂದಿದ್ದರು. ಅವರು ಬೆಳೆದಂತೆ, ಈ ಸಂಬಂಧ ಹಾಗೆಯೇ ಉಳಿದುಕೊಂಡಿದೆ. 

ಬಹಳಷ್ಟು ಸಮಯಗಳಲ್ಲಿ, ನಾವಿಬ್ಬರು ಅವರ ಹಿಂದಿನ ಜೀವನದ ವೀಡಿಯೊಗಳನ್ನು ವೀಕ್ಷಿಸಿದ್ದೇವೆ ಮತ್ತು ಅವರು ನನಗೆ ಹೀಗೆ ಹೇಳುತ್ತಿದ್ದರು - ಅವರು ನನ್ನೊಂದಿಗೆ ಅಸಂಬದ್ಧವಾದದ್ದನ್ನು ಮಾತನಾಡುವುದಿಲ್ಲ - "ಓಹ್, ನಾನು ಅದನ್ನು ಹೇಳಿದ್ದು ನೆನಪಿದೆ." ಎಲ್ಲಾ ತರ್ಕ ಮತ್ತು ತಾರ್ಕಿಕತೆಯ ಜೊತೆಗೆ, ಈ ಅನುಭವವೇ ನನಗೆ "ಬಹುಶಃ, ಬಹುಶಃ..." ಎಂಬ ಭಾವನೆಯನ್ನು ಮೀರಲು ಸಹಾಯ ಮಾಡಿತು, ಇದು ನನಗೆ ಖಚಿತತೆಯನ್ನು ನೀಡಿತು. 

ಈ ವಿಷಯಗಳು ಸುಲಭವಲ್ಲ. ನಿಜವಾಗಿಯೂ ವಿಮೋಚನೆಯನ್ನು ಪಡೆಯಲು ಸಾಧ್ಯವೇ? ಮನಸ್ಸಿನ ಸ್ವಭಾವವು ನಿಜವಾಗಿಯೂ ಶುದ್ಧವಾಗಿದೆಯೇ? ನಾವು ಅದನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಂಡರೂ, ಅದನ್ನು ಭಾವನಾತ್ಮಕವಾಗಿ ಅರ್ಥಮಾಡಿಕೊಳ್ಳಲು ಹೆಚ್ಚು ಆಳವಾಗಿ ಹೋಗಬೇಕು. ಆದರೆ, ನಿಧಾನವಾಗಿ, ನಾವು ಅದರೊಂದಿಗೆ ಕೆಲಸ ಮಾಡಬಹುದು. 

ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದ ಕಾರಣವಾಗಿ ವಾಸ್ತವದ ಬಗೆಗಿರುವ ಗೊಂದಲ 

ಲ್ಯಾಮ್-ರಿಮ್‌ನ ಮಧ್ಯಂತರ ಹಂತದ ಪ್ರೇರಣೆಯೊಂದಿಗೆ, ಅವಲಂಬಿತ ಉದ್ಭವದ 12 ಕೊಂಡಿಗಳೊಂದಿಗೆ, ಪುನರ್ಜನ್ಮದ ಕಾರ್ಯವಿಧಾನದ ಬಗ್ಗೆ ಬಹಳ ವಿವರವಾದ ವಿವರಣೆಯನ್ನು ನಾವು ಹೊಂದಿದ್ದೇವೆ. ಇದು ಕರ್ಮ, ಕರ್ಮದ ನಂತರದ ಪರಿಣಾಮ ಮತ್ತು ಮುಂತಾದವುಗಳ ಸಮಸ್ಯೆಯೊಂದಿಗೆ ಸಂಪೂರ್ಣವಾಗಿ ವ್ಯವಹರಿಸುವ ಅತ್ಯಂತ ಸಂಕೀರ್ಣವಾದ ಕಾರ್ಯವಿಧಾನದ ಹೆಸರಾಗಿದೆಯಷ್ಟೆ. ಕೋಪ ಮತ್ತು ದುರಾಸೆಯಂತಹ ವಿವಿಧ ರೀತಿಯ ಗೊಂದಲಮಯ ಭಾವನೆಗಳು ಏಕೆ ಉದ್ಭವಿಸುತ್ತವೆ ಮತ್ತು ಅವುಗಳಿಗೆ ಆಧಾರವೇನು ಎಂಬುದನ್ನು ನಾವು ಆಳವಾಗಿ ಅರ್ಥಮಾಡಿಕೊಳ್ಳಬೇಕು. ಅತ್ಯಂತ ಸರಳವಾದ ಭಾಷೆಯಲ್ಲಿ, ನಾನು ಈ ಆಧಾರವಾಗಿರುವ ಅಂಶವನ್ನು "ಗೊಂದಲ" ಎಂದು ಕರೆಯುತ್ತೇನೆ, ನಮ್ಮ ನಡವಳಿಕೆಯಿಂದ, ಇತರರ ಮೇಲೆ ಮತ್ತು ನಮ್ಮ ಮೇಲೆ ಆಗುವ ಪರಿಣಾಮದ ಬಗ್ಗೆ ನಾವು ಗೊಂದಲಕ್ಕೊಳಗಾಗಿರುತ್ತೇವೆ. ಹೆಚ್ಚು ಆಳವಾಗಿ ನೋಡಿದರೆ, ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ, ಇತರರು ಹೇಗೆ ಅಸ್ತಿತ್ವದಲ್ಲಿದ್ದಾರೆ ಮತ್ತು ಎಲ್ಲವೂ ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಕುರಿತು ನಾವು ಗೊಂದಲಕ್ಕೊಳಗಾಗಿರುತ್ತೇವೆ. 

ಮೂಲತಃ, ವಸ್ತುಗಳು ಸ್ವತಂತ್ರವಾಗಿ, ತಮ್ಮದೇ ಆದ ಶಕ್ತಿಯಿಂದ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುವಂತೆ, ಪ್ಲಾಸ್ಟಿಕ್ನಲ್ಲಿ ಇರಿಸಿರುವ ವಸ್ತುವಿನಂತೆ ಎಲ್ಲದರಿಂದ ಪ್ರತ್ಯೇಕವಾಗಿರುತ್ತದೆ ಎಂದು ನಾವು ಯೋಚಿಸುತ್ತೇವೆ. ಎಲ್ಲವೂ ಪರಸ್ಪರವಾಗಿ ಸಂಬಂಧ ಹೊಂದಿವೆ ಎಂದು ನಾವು ಭಾವಿಸಿದರೂ ಸಹ, ಅವು ಪ್ಲಾಸ್ಟಿಕ್‌ನಲ್ಲಿ ಇದ್ದು, ಕಡ್ಡಿಗಳಿಂದ ಸಂಪರ್ಕಗೊಂಡಿರುವ ವಸ್ತುಗಳಂತೆ ನಾವು ಪರಿಗಣಿಸುತ್ತೇವೆ. ಅಸ್ತಿತ್ವದಲ್ಲಿರುವ ಅಸಾಧ್ಯವಾದ ಮಾರ್ಗಗಳ ಬಗ್ಗೆ ನಾವು ಅರ್ಥಮಾಡಿಕೊಳ್ಳಬೇಕಾದ ಹಲವು ಹಂತದ ಸೂಕ್ಷ್ಮತೆಗಳಿವೆ. ನಿಖರವಾಗಿ ಯಾವುದು ಅಸಾಧ್ಯವಾದದ್ದು, ಮತ್ತು ನಮ್ಮ ಗೊಂದಲವು ಎಲ್ಲರಿಗೂ ಮತ್ತು ಎಲ್ಲದರ ಮೇಲೆ ಏನನ್ನು ಪ್ರಕ್ಷೇಪಿಸುತ್ತದೆ ಎಂಬುದನ್ನು ನಾವು ನಿಖರವಾಗಿ ಅರ್ಥಮಾಡಿಕೊಳ್ಳಬೇಕು. 

ಶೂನ್ಯತೆ (ಖಾಲಿತನ): ಅಸ್ತಿತ್ವದಲ್ಲಿರುವ ಅಸಾಧ್ಯ ಮಾರ್ಗಗಳ ಸಂಪೂರ್ಣ ಅನುಪಸ್ಥಿತಿ 

ನಾವು ಅರ್ಥಮಾಡಿಕೊಳ್ಳಬೇಕಾದುದನ್ನು "ಶೂನ್ಯತೆ" ಅಥವಾ "ಖಾಲಿತನ" ಎಂದು ಕರೆಯಲಾಗುತ್ತದೆ. ಶೂನ್ಯತೆ ಎಂದರೆ ಸಂಪೂರ್ಣ ಅನುಪಸ್ಥಿತಿ; ಇಲ್ಲಿ ಏನೂ ಇಲ್ಲ. ಇಲ್ಲಿ ಏನು ಇಲ್ಲವೋ, ಅದು ಈ ಅಸಾಧ್ಯವಾದ ಪ್ರಕ್ಷೇಪಗಳ ನಿಜವಾದ ಉಲ್ಲೇಖವಾಗಿರುತ್ತದೆ. ಅವುಗಳು ನಿಜವಾದ ಯಾವುದಕ್ಕೂ ಹೊಂದಿಕೆಯಾಗುವುದಿಲ್ಲ. 

ನಾವು ಸಾಂಟಾ ಕ್ಲಾಸ್ನ ಉದಾಹರಣೆಯನ್ನು ಬಳಸಬಹುದು. ಉದ್ದನೆಯ ಬಿಳಿ ಗಡ್ಡವಿರುವ, ಕೆಂಪು ಸೂಟ್‌ ಅನ್ನು ಧರಿಸಿರುವವರನ್ನು ನಾವು ನೋಡಿ, ಅವರನ್ನು "ಸಾಂಟಾ ಕ್ಲಾಸ್" ಎಂದು ನಾವು ಕರೆಯಬಹುದು ಎಂದು ಊಹಿಸಿಕೊಳ್ಳಿ. ಅವರು ಸಾಂಟಾ ಕ್ಲಾಸ್ ಎಂದು ನಾವು ಭಾವಿಸುತ್ತೇವೆ, ಆದರೆ ಏಕೆ? ಏಕೆಂದರೆ ಅವರು ಸಾಂಟಾ ಕ್ಲಾಸ್‌ನಂತೆ ಕಾಣುತ್ತಾರೆ. ಆದರೆ, ಸಾಂಟಾ ಕ್ಲಾಸ್ನ ವೇಷಭೂಷಣವು ನಿಜವಾದ ಯಾವುದಕ್ಕೂ ಹೊಂದಿಕೆಯಾಗುವುದಿಲ್ಲ, ಏಕೆಂದರೆ ಸಾಂಟಾ ಕ್ಲಾಸ್ ನಿಜವಾಗಿಯೂ ಇಲ್ಲ. ಈ ವ್ಯಕ್ತಿಯ ರೂಪಕ್ಕೆ ಅನುಗುಣವಾಗಬೇಕಿರುವ ನಿಜವಾದ ಸಾಂಟಾ ಕ್ಲಾಸ್‌ನ ಅನುಪಸ್ಥಿತಿಯ ಬಗ್ಗೆಯೇ ಶೂನ್ಯತೆ ಮಾತನಾಡುತ್ತದೆ. ಅಲ್ಲಿ ಒಬ್ಬ ವ್ಯಕ್ತಿಯಿದ್ದಾರೆ ಮತ್ತು ಅವರು ಸಾಂಟಾ ಕ್ಲಾಸ್‌ನಂತೆ ಕಾಣುತ್ತಾರೆ ಎಂಬುದನ್ನು ಇದು ಯಾವುದೇ ರೀತಿಯಲ್ಲಿ ನಿರಾಕರಿಸುವುದಿಲ್ಲ. ಈ ವ್ಯಕ್ತಿಯು ನಮಗೆ ತೋರುವ ರೀತಿಯು ಮೋಸದಾಯಕವಾಗಿರುತ್ತದೆ ಎಂಬುದನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ. ಇವರು ಸಾಂಟಾ ಕ್ಲಾಸ್‌ನಂತೆ ಕಾಣುತ್ತಾರೆ, ಆದರೆ ಇದು ನಿಜವಾಗಿಯೂ ಸಾಂಟಾ ಕ್ಲಾಸ್ ಆಗಿರುವುದಿಲ್ಲ, ಏಕೆಂದರೆ ಅಂತಹ ಯಾವುದೇ ವಿಷಯ ಅಸ್ತಿತ್ವದಲ್ಲಿಲ್ಲ. 

ನಮ್ಮ ಮನಸ್ಸು ಸದಾ ಹೀಗೆಯೇ ಕೆಲಸ ಮಾಡುತ್ತದೆ. ಈ ವ್ಯಕ್ತಿ ಅತ್ಯಂತ ಸುಂದರವಾದ ವ್ಯಕ್ತಿ, ಅಥವಾ ಆ ವ್ಯಕ್ತಿಯು ಅತ್ಯಂತ ಭಯಾನಕ ವ್ಯಕ್ತಿ, ಅಥವಾ ನಾವು ಜಗತ್ತಿಗಾಗಿ ಇರುವ ದೇವರ ಕೊಡುಗೆ ಅಥವಾ ಬದಲಾಗಿ, ನಾವು ಸಂಪೂರ್ಣವಾಗಿ ನಿಷ್ಪ್ರಯೋಜಕರಾಗಿದ್ದೇವೆ ಎಂದು ನಾವು ಎಲ್ಲಾ ರೀತಿಯ ಅಸಂಬದ್ಧತೆಯನ್ನು ಪ್ರದರ್ಶಿಸುತ್ತೇವೆ. ಈ ವಿಷಯಗಳನ್ನು, ನಾವು ಅಥವಾ ಅವರು, ಉಳಿದೆಲ್ಲವುಗಳಿಂದ ಸಂಪೂರ್ಣವಾಗಿ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವಂತೆ, ಮತ್ತು ಇದೇ ಸತ್ಯ ಮತ್ತು ಬದಲಾಗದ ವಿಷಯವೆಂದು ನಾವು ಪ್ರಕ್ಷೇಪಿಸುತ್ತೇವೆ. 

ವಾಸ್ತವದಲ್ಲಿ, ಅಂತಹವರು ಯಾರೂ ಅಸ್ತಿತ್ವದಲ್ಲಿರುವುದಿಲ್ಲ. ಇದು ಅಸಾಧ್ಯ, ಏಕೆಂದರೆ ಎಲ್ಲವೂ ಇತರ ವಿಷಯಗಳೊಂದಿಗೆ ಸಂಬಂಧ ಹೊಂದಿ, ಅಸ್ತಿತ್ವದಲ್ಲಿರುತ್ತದೆ. ಪರಮಪೂಜ್ಯರಾದ ದಲೈ ಲಾಮಾ ಅವರು ನಮ್ಮ ಬೆರಳುಗಳ ಉದಾಹರಣೆಯನ್ನು ಯಾವಾಗಲೂ ಬಳಸುತ್ತಾರೆ. ನಮ್ಮ ನಾಲ್ಕನೇ ಬೆರಳು ದೊಡ್ಡದೋ ಚಿಕ್ಕದೋ? ಇದು ಐದನೇ ಬೆರಳಿಗೆ ಹೋಲಿಸಿದರೆ ದೊಡ್ಡದಾಗಿರುತ್ತದೆ, ಆದರೆ ಮಧ್ಯದ ಬೆರಳಿಗೆ ಹೋಲಿಸಿದರೆ ಚಿಕ್ಕದಾಗಿರುತ್ತದೆ. ಹಾಗಾದರೆ ತನ್ನದೇ ಆದ ಕಡೆಯಿಂದ, ತನ್ನದೇ ಆದ ಶಕ್ತಿಯಿಂದ, ಅದು ದೊಡ್ಡದೋ ಚಿಕ್ಕದೋ? ಇದಕ್ಕೆ ಯಾವುದೇ ಉತ್ತರವಿಲ್ಲ ಏಕೆಂದರೆ ಇದು ಇತರ ವಿಷಯಗಳ ಸಂಬಂಧಲ್ಲಿ ದೊಡ್ಡದಾಗಿರುತ್ತದೆ ಅಥವಾ ಚಿಕ್ಕದಾಗಿರುತ್ತದೆ. ಇದು ಸಂಪೂರ್ಣವಾಗಿ ಇತರ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಯಾವುದು ದೊಡ್ಡದು ಮತ್ತು ಚಿಕ್ಕದು ಎಂಬ ನಮ್ಮ ಪರಿಕಲ್ಪನೆಯನ್ನು ಅವಲಂಬಿಸಿರುತ್ತದೆ. ನಿಮಗೆ ಇದು ಅರ್ಥವಾಯಿತು ಎಂದು ನಾನು ಭಾವಿಸುತ್ತೇನೆ. 

ಈ ಮಧ್ಯಂತರ ಹಂತದಲ್ಲಿ, ಶೂನ್ಯತೆಯ ಬಗ್ಗೆ ತಿಳುವಳಿಕೆಯನ್ನು ಪಡೆಯುವ ಮೂಲಕ ಈ ಮೂಲಭೂತ ತಪ್ಪುಗ್ರಹಿಕೆಯನ್ನು ನಿವಾರಿಸಲು ನಾವು ಶ್ರಮಪಡುತ್ತೇವೆ. 12 ಅವಲಂಬಿತ ಉದ್ಭವಗಳ ಕೊಂಡಿಗಳ ಸಂಕೀರ್ಣ ಕಾರ್ಯವಿಧಾನದಲ್ಲಿ ವಿವರಿಸಿದಂತೆ, ಈ ಗೊಂದಲವೇ ಅನಿಯಂತ್ರಿತವಾಗಿ ಮರುಕಳಿಸುವ ಮರುಜನ್ಮವನ್ನು ಉಂಟುಮಾಡುತ್ತದೆ, ಏಕೆಂದರೆ ಇದು ಕರ್ಮ ಮತ್ತು ಕರ್ಮದ ನಂತರದ ಪರಿಣಾಮಗಳನ್ನು ಸಕ್ರಿಯಗೊಳಿಸುತ್ತದೆ. 

ಏಕಾಗ್ರತೆ ಮತ್ತು ನೈತಿಕ ಸ್ವಯಂ-ಶಿಸ್ತಿನ ಅಗತ್ಯತೆ 

ಶೂನ್ಯತೆಯ ಬಗ್ಗೆ ತಿಳುವಳಿಕೆಯನ್ನು ಪಡೆಯಲು, ನಾವು ಏಕಾಗ್ರತೆಯನ್ನು ಹೊಂದಿರಬೇಕು. ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು, ನಾವು ನೈತಿಕ ಶಿಸ್ತನ್ನು ಹೊಂದಿರಬೇಕು. ಮರವೊಂದನ್ನು ಕಡಿಯುವುದರ ಉದಾಹರಣೆಯನ್ನು ಇಲ್ಲಿ ನೀಡಲಾಗುತ್ತದೆ. ತಿಳುವಳಿಕೆಯು ಹರಿತಾದ ಕೊಡಲಿಯಂತೆ ಇರುತ್ತದೆ, ಆದರೆ ಮರವನ್ನು ನಿಜವಾಗಿಯೂ ಬೀಳಿಸಲು, ನಾವು ಒಂದೇ ಸ್ಥಳದಲ್ಲಿ ಪದೇ-ಪದೇ ಹೊಡೆಯಬೇಕು. ಅದೇ ಸ್ಥಳದಲ್ಲಿ ನಿರಂತರವಾಗಿ ಹೊಡೆಯುವುದು ಏಕಾಗ್ರತೆಯಂತಿರುತ್ತದೆ. ವಾಸ್ತವದಲ್ಲಿ, ಕೊಡಲಿಯನ್ನು ಎತ್ತಿಕೊಂಡು, ಅದನ್ನು ಜೋರಾಗಿ ಬೀಸಿ, ಒಂದೇ ಸ್ಥಳದಲ್ಲಿ ಹೊಡೆಯಲು, ನಮಗೆ ಶಕ್ತಿ ಬೇಕು. ಈ ಶಕ್ತಿಯು ನೈತಿಕ ಸ್ವಯಂ-ಶಿಸ್ತಿನಿಂದ ಬರುತ್ತದೆ, ಇಲ್ಲಿ ನಾವು ವಿನಾಶಕಾರಿಯಾಗಿ ವರ್ತಿಸುವುದನ್ನು ತಡೆಯುತ್ತೇವೆ. 

ಮಧ್ಯಂತರ ಹಂತವು, ನಾವು ತೆಗೆದುಕೊಳ್ಳಬಹುದಾದ ವಿವಿಧ ಪ್ರತಿಜ್ಞೆಗಳನ್ನು ಸಹ ಪ್ರಸ್ತುತಪಡಿಸುತ್ತದೆ. ಇದು ಸನ್ಯಾಸಿ ಅಥವಾ ಸನ್ಯಾಸಿನಿಯರ ಪೂರ್ಣ ಅಥವಾ ಅನನುಭವಿ ಪ್ರತಿಜ್ಞೆಗಳು, ಜೊತೆಗೆ ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ, ಗೃಹಸ್ಥರ ಪ್ರತಿಜ್ಞೆಗಳನ್ನು ಸಹ ಒಳಗೊಂಡಿರುತ್ತದೆ. ಗೃಹಸ್ಥನೆಂದರೆ, ಆಶ್ರಮದಲ್ಲಿ ಬ್ರಹ್ಮಚರ್ಯ ಜೀವನವನ್ನು ನಡೆಸದ ವ್ಯಕ್ತಿ, ಆದರೆ ಇದರರ್ಥ, ನೀವು ಕುಟುಂಬವನ್ನು ಹೊಂದಿರಲೇಬೇಕು ಎಂದಲ್ಲ; ಇದು ಒಬ್ಬಂಟಿಯಾಗಿರುವವರನ್ನು ಸಹ ಒಳಗೊಂಡಿರುತ್ತದೆ. ಪುರಾತನ ಕಾಲದ ಭಾರತದಲ್ಲಿ, ಗೃಹಸ್ಥರು ಯಾವಾಗಲೂ ಕುಟುಂಬವನ್ನು ಹೊಂದಿದ್ದರಿಂದ ಇದು ಬಹಳ ವಿರಳವಾಗಿತ್ತು. ಈ ಸನ್ಯಾಸಿ ಮತ್ತು ಗೃಹಸ್ಥ ಪ್ರತಿಜ್ಞೆಗಳನ್ನು ಒಟ್ಟಾಗಿ "ವೈಯಕ್ತಿಕ ವಿಮೋಚನೆಗಾಗಿರುವ ಪ್ರತಿಜ್ಞೆಗಳು" ಎಂದು ಕರೆಯಲಾಗುತ್ತದೆ, ಏಕೆಂದರೆ ಅವುಗಳು ನಮ್ಮ ಸ್ವಂತ ವಿಮೋಚನೆಯನ್ನು ಗುರಿಯಾಗಿರಿಸಿರುತ್ತವೆ. ಗೊಂದಲಮಯ ಭಾವನೆಗಳಿಂದ ಪ್ರೇರೇಪಿಸಲ್ಪಟ್ಟ ವಿವಿಧ ರೀತಿಯ ನಡವಳಿಕೆಯನ್ನು ತಪ್ಪಿಸಲು ಈ ಪ್ರತಿಜ್ಞೆಗಳು ನಮಗೆ ಸಹಾಯ ಮಾಡುತ್ತವೆ, ಅವು ನಮ್ಮ ಧ್ಯಾನದ ಅಭ್ಯಾಸದಂತಹ ಸಕಾರಾತ್ಮಕ ವಿಷಯಗಳಿಗೆ ಅಡ್ಡಿಪಡಿಸುತ್ತವೆ. 

ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಏಕೆ? ಏಕೆಂದರೆ ನಾವು ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದಾಗ, ಅದು ನಮ್ಮನ್ನು ನಿರ್ಣಯಿಸುವುದರಿಂದ ಮುಕ್ತಗೊಳಿಸುತ್ತದೆ. ಉದಾಹರಣೆಗೆ, ನಾವು ಮದ್ಯಪಾನ ಅಥವಾ ಸಿಗರೇಟುಗಳನ್ನು ತ್ಯಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಊಹಿಸೋಣ. ಪ್ರತಿ ಬಾರಿ ನಾವು ಮದ್ಯಪಾನ ಮಾಡುವ ಅಥವಾ ಧೂಮಪಾನ ಮಾಡುವ ಜನರೊಂದಿಗೆ ಇದ್ದಾಗ, ನಾವು ಅವನ್ನು ಸೇವಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ನಾವು ನಿಜವಾಗಿಯೂ ಬಿಟ್ಟುಕೊಡಲು ಪ್ರಯತ್ನಿಸುತ್ತಿದ್ದರೂ, ಪ್ರತಿ ಬಾರಿ ಈ ಪರಿಸ್ಥಿತಿ ಸಂಭವಿಸಿದಾಗ ನಾವು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ, ಮತ್ತು ಇದು ಒತ್ತಡವಲ್ಲದಿದ್ದರೂ ಸವಾಲಾಗಿರುತ್ತದೆ. 

ನಾವು ಪ್ರತಿಜ್ಞೆ ಮಾಡಿದರೆ, ಅದು ಅಂತಿಮವಾಗಿರುತ್ತದೆ. ನಾವು ಹೀಗೆ ನಿರ್ಧರಿಸಿದ್ದೇವೆ, "ನಾನು ಕುಡಿಯುವುದಿಲ್ಲ. ನಾನು ಧೂಮಪಾನ ಮಾಡುವುದಿಲ್ಲ”, ಅಥವಾ ಅದು ಏನೇ ಆಗಿರಬಹುದು. ಆಗ ನಮ್ಮ ಸುತ್ತಲಿರುವ ಪ್ರತಿಯೊಬ್ಬರೂ ಕುಡಿಯುತ್ತಿದ್ದರೆ ಅದು ನಿಜವಾಗಿಯೂ ಅಪ್ರಸ್ತುತವಾಗಿರುತ್ತದೆ, ಏಕೆಂದರೆ ನಾವು ನಮ್ಮ ಮನಸ್ಸು ಮಾಡಿರುತ್ತೇವೆ. ನಿರ್ಬಂಧ ಅಥವಾ ಶಿಕ್ಷೆಯ ಬದಲಿಗೆ, ಈ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ಸಾಕಷ್ಟು ಶಕ್ತಿ ಸಿಗುತ್ತದೆ ಮತ್ತು ನಿರ್ಧಾರ ಮಾಡುವುದರಿಂದ, ನಮ್ಮ ಅಂತಿಮ ವಿಮೋಚನೆಯ ಸಾಧನೆಯ ದಾರಿಯಲ್ಲಿರುವ ಹಾನಿಕಾರಕವಾದ ವಿಷಯಗಳಿಂದ ವಿಶೇಷವಾಗಿ ನಮ್ಮನ್ನು ಮುಕ್ತಗೊಳಿಸುತ್ತದೆ. 

ಬೌದ್ಧಧರ್ಮದಲ್ಲಿ, ಯಾವುದೇ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಬಾಧ್ಯತೆ ಇಲ್ಲ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ನೀವು ಈ ಅಥವಾ ಆ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಎಂದು ಯಾರೂ ಹೇಳಲಾರರು ಮತ್ತು ನೀವು ಸನ್ಯಾಸಿ ಅಥವಾ ಸನ್ಯಾಸಿನಿಯಾಗಿರಬೇಕು ಮತ್ತು ಮಠದಲ್ಲಿ ವಾಸಿಸಬೇಕು ಎಂದು ಯಾರೂ ಹೇಳುವುದಿಲ್ಲ. ಆದರೆ, ನೀವು ಸಂಸಾರದಿಂದ ಮುಕ್ತಿ ಪಡೆಯುವುದರ ಬಗ್ಗೆ ಮತ್ತು ಕೋಪ, ಬಾಂಧವ್ಯ, ದುರಾಸೆ ಮತ್ತು ಮುಂತಾದವುಗಳನ್ನು ಶಾಶ್ವತವಾಗಿ ನಿವಾರಿಸುವ ಬಗ್ಗೆ ನಿಜವಾಗಿಯೂ ಗಂಭೀರವಾಗಿದ್ದರೆ, ಕೆಲವು ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವುದರಿಂದ ಇದು ಖಂಡಿತವಾಗಿಯೂ ಸುಲಭವಾಗಿರುತ್ತದೆ. ಬಹುಶಃ ನಾವು ಸದ್ಯಕ್ಕೆ ಅದಕ್ಕಾಗಿ ಸಿದ್ಧರಾಗಿಲ್ಲ, ಪರವಾಗಿಲ್ಲ. ನಾವು ನಮ್ಮನ್ನು ಮತ್ತು ನಮ್ಮ ಸ್ವಂತ ಸನ್ನಿವೇಶಗಳನ್ನು ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡಬೇಕು. 

ಇದು ಮಧ್ಯಂತರ ಹಂತವಾಗಿರುತ್ತದೆ. ಏಕಾಗ್ರತೆ ಮತ್ತು ಶೂನ್ಯತೆಯು ಅದರ ಒಂದು ಭಾಗವಾಗಿದ್ದರೂ, ಅವುಗಳನ್ನು ಇನ್ನೂ ಪೂರ್ಣವಾಗಿ ಚರ್ಚಿಸಲಾಗಿಲ್ಲ. ಈ ವಿಷಯಗಳನ್ನು ಉನ್ನತ ಹಂತದ ಬೋಧನೆಗಳಲ್ಲಿ ಸಂಪೂರ್ಣವಾಗಿ ಚರ್ಚಿಸಲಾಗುತ್ತದೆ.

ಉನ್ನತ ಮಟ್ಟದ ಪ್ರೇರಣೆ: ಇತರರೆಲ್ಲರ ಬಗ್ಗೆ ಯೋಚಿಸುವುದು 

ಸುಧಾರಿತ ವ್ಯಾಪ್ತಿಯೊಂದಿಗೆ, ವಿಶ್ವದಲ್ಲಿ ನಾವೊಬ್ಬರೇ ವಾಸಿಸುತ್ತಿಲ್ಲ ಎಂಬ ವಿಷಯವಾಗಿ ಯೋಚಿಸುತ್ತೇವೆ. ಇನ್ನುಳಿದವರೂ ಇರುವರು, ಮತ್ತು ಎಲ್ಲರೂ ನಮ್ಮಂತೆಯೇ ಸಮರೂಪದ ಪರಿಸ್ಥಿತಿಯಲ್ಲಿದ್ದಾರೆ. ಉಳಿದವರೆಲ್ಲರೂ ಬಳಲುತ್ತಿದ್ದಾರೆ ಮತ್ತು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ಎದುರಿಸುತ್ತಿರುತ್ತಾರೆ. ನಾವು ಧೃಡವಾದ ಸಂತೋಷವನ್ನು ಬಯಸುತ್ತೇವೆ ಮತ್ತು ದುಃಖವನ್ನು ತಪ್ಪಿಸಲು ಬಯಸುತ್ತೇವೆ, ಹಾಗೆಯೇ ಉಳಿದವರೆಲ್ಲರೂ ಬಯಸುತ್ತಾರೆ. ಈ ವಿಷಯದಲ್ಲಿ ನಾವೆಲ್ಲರೂ ಸಂಪೂರ್ಣವಾಗಿ ಸಮಾನರಾಗಿದ್ದೇವೆ. ಇದು ಕೇವಲ ನಾನು ಮತ್ತು ಕೆಲವು ಆಯ್ದ ಇತರರಿಗೆ ಸೀಮಿತವಾಗಿರುವುದಿಲ್ಲ, ಆದರೆ ಪ್ರತಿಯೊಂದು ಜೀವಿಗೂ ಅನ್ವಯವಾಗುತ್ತದೆ. ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿರುತ್ತೇವೆ ಮತ್ತು ಪರಸ್ಪರ ಅವಲಂಬಿತರಾಗಿರುತ್ತೇವೆ. ನಾವೆಲ್ಲರೂ ಸ್ವತಂತ್ರವಾಗಿ ಅಸ್ತಿತ್ವದಲ್ಲಿಲ್ಲ. ನಿಜವಾಗಿಯೂ, ನಮಗೆ ಹಾಗೆ ಬದುಕಲು ಸಾಧ್ಯವಾಗುವುದಿಲ್ಲ. 

ಎಲ್ಲರನ್ನೂ ಸಮಾನವಾಗಿ ನೋಡುವಂತೆ ನಮ್ಮ ಹೃದಯವನ್ನು ವಿಸ್ತರಿಸಲು, ಕೆಲವು ಅತ್ಯಾಧುನಿಕ ವಿಧಾನಗಳಿವೆ. ಹಿಂದಿನ ಜೀವತಾವಧಿಗಳಲ್ಲಿ, ಇತರ ಎಲ್ಲಾ ಜೀವಿಗಳನ್ನು ನಮ್ಮ ತಾಯಂದಿರು ಎಂದು ಗುರುತಿಸುವ ಬಗ್ಗೆ ಮತ್ತು ಅವರು ನಮಗಾಗಿ ಬಹಳಷ್ಟು ದಯೆ ತೋರಿದ ಬಗ್ಗೆ ನಾವು ಈಗಾಗಲೇ ಸ್ವಲ್ಪ ಚರ್ಚಿಸಿದ್ದೇವೆ. ಧರ್ಮ-ಲೈಟ್ ಆವೃತ್ತಿಯಲ್ಲಿ, ಇತರರು ನಮ್ಮನ್ನು ತಾಯಿಯಂತೆ ನೋಡಿಕೊಳ್ಳುವಲ್ಲಿ ಹೇಗೆ ಸಮರ್ಥರು ಎಂಬುದನ್ನು ನಾವು ನೋಡಬಹುದು. ಆದರೆ, ಇದಕ್ಕೊಂದು ಮಿತಿಯಿರುತ್ತದೆ, ಏಕೆಂದರೆ ನಮ್ಮ ಸ್ನೇಹಿತರಾದ ಸೊಳ್ಳೆಗಳಿಗೆ ಇದನ್ನು ಅನ್ವಯಿಸುವುದು ಕಷ್ಟ. 

ಪ್ರೀತಿ 

ನಮ್ಮ ಹೃದಯವನ್ನು ವಿಸ್ತರಿಸಲು, ನಾವು "ಪ್ರೀತಿ" ಎಂಬುದನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರಾರಂಭಿಸುತ್ತೇವೆ. ಈ ಪ್ರಕ್ರಿಯೆಯು ವಾಸ್ತವವಾಗಿ ಸಮಚಿತ್ತದಿಂದ ಪ್ರಾರಂಭವಾಗುತ್ತದೆ, ಅಂದರೆ ನಾವು ಕೇವಲ ಕೆಲವರತ್ತ ಆಕರ್ಷಿತರಾಗಿರುವುದಿಲ್ಲ, ಇತರರನ್ನು ದೂರವಿರಿಸುವುದಿಲ್ಲ ಮತ್ತು ಉಳಿದವರೊಂದಿಗೆ ಅಸಡ್ಡೆಯಿಂದ ವರ್ತಿಸುವುದಿಲ್ಲ. ನಾವು ಎಲ್ಲರಿಗಾಗಿ ನಮ್ಮ ಹೃದಯವನ್ನು ತೆರೆದಿಡಲು ಕೆಲಸ ಮಾಡುತ್ತೇವೆ ಮತ್ತು ಈ ಆಧಾರದ ಮೇಲೆ ನಾವು ಎಲ್ಲರೊಂದಿಗೆ ಇರುವ ನಮ್ಮ ಅಂತರ್ಸಂಪರ್ಕವನ್ನು ಗುರುತಿಸುತ್ತೇವೆ. ಪ್ರತಿಯೊಬ್ಬರೂ ಹಿಂದಿನ ಜನ್ಮದಲ್ಲಿ ನಮ್ಮ ತಾಯಿಯಾಗಿರಬಹುದು ಮತ್ತು ನಮಗಾಗಿ ದಯೆ ತೋರಿರಬಹುದು ಅಥವಾ ನಾವು ಆನಂದಿಸುವ ಮತ್ತು ಬಳಸಿಕೊಳ್ಳುವ ಎಲ್ಲವೂ ಇತರರ ಶ್ರಮದಿಂದ ಬರುತ್ತದೆ ಎಂಬುದನ್ನು ಗುರುತಿಸುವ ಮೂಲಕ ಇದನ್ನು ಅಭಿವೃದ್ಧಿಪಡಿಸಬಹುದು. ನಿಮ್ಮ ಕೆಳಗಿರುವ ನೆಲವನ್ನು ನೋಡಿ, ನೀವು ಇರುವ ಕಟ್ಟಡ, ನೀವು ಕುಡಿಯುವ ನೀರು ಎಲ್ಲವೂ ಎಲ್ಲಿಂದ ಬಂದಿತು ಎಂದು ನಾವು ಯೋಚಿಸುತ್ತೇವೆಯೇ? ನಮ್ಮ ನೀರು ಮತ್ತು ಆಹಾರ ಇಲ್ಲಿಗೆ ಹೇಗೆ ಬಂದಿತು? ಇದೆಲ್ಲವೂ ಇತರರ ಕೆಲಸದಿಂದ, ನಮ್ಮ ಸುತ್ತಲಿರುವ ಪ್ರತಿಯೊಬ್ಬರ ಪ್ರಯತ್ನದಿಂದ ಬರುತ್ತದೆ. ನಾವೆಲ್ಲರೂ ಸಮಾನರು, ಆದ್ದರಿಂದ ನಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡುವುದು ತರ್ಕಬದ್ಧವಲ್ಲ, ಏಕೆಂದರೆ ನಿಜವಾಗಿ ನಮಗೆ ಲಾಭವಾಗಲು, ನಾವು ಎಲ್ಲರಿಗೂ ಉಪಯುಕ್ತವಾಗಬೇಕು. 

ಈ ಆಧಾರದ ಮೇಲೆ, ನಮಗೆ ಎಲ್ಲರಿಗಾಗಿ ಸಮಾನವಾದ ಪ್ರೀತಿಯನ್ನು ಬೆಳೆಸಲು ಸಾಧ್ಯವಾಗುತ್ತದೆ. ಈ ಪ್ರೀತಿಯನ್ನು, ಪ್ರತಿ ಜೀವಿಯು ಸಂತೋಷವಾಗಿರಲು ಮತ್ತು ಸಂತೋಷಕ್ಕಾಗಿ ಕಾರಣಗಳನ್ನು ಹೊಂದಿರಬೇಕೆಂಬ ಬಯಕೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಪ್ರಣಯ ಪ್ರೀತಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ, ಅದು ಸಾಮಾನ್ಯವಾಗಿ ಹೆಚ್ಚಿನ ಬಾಂಧವ್ಯದೊಂದಿಗೆ ಬೆರೆತುಹೋಗಿರುತ್ತದೆ. "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ನಾವು ಹೇಳಿದಾಗ, "ನನಗೆ ನೀನು ಬೇಕು. ನನ್ನನ್ನು ಎಂದಿಗೂ ಬಿಡಬೇಡ. ನೀನಿಲ್ಲದೆ ನಾನು ಬದುಕಲಾರೆ." ಎಂಬ ಅರ್ಥವಿರುತ್ತದೆ. ನಾವು ಆ ವ್ಯಕ್ತಿಯಿಂದ ಬಯಸಿದ ಗಮನವನ್ನು ಪಡೆಯದಿದ್ದಾಗ ಅಥವಾ ಅವರು ಅಸಂಬದ್ಧವಾದದ್ದನ್ನು ಹೇಳಿದಾಗ, ಅದು ಶೀಘ್ರದಲ್ಲೇ "ನಾನು ಇನ್ನು ಮುಂದೆ ನಿನ್ನನ್ನು ಪ್ರೀತಿಸುವುದಿಲ್ಲ" ಎಂದು ಬದಲಾಗಬಹುದು. 

ಬೌದ್ಧಧರ್ಮದಲ್ಲಿ, ನಾವು ಮಾತನಾಡುವ ಪ್ರೀತಿಯ ಪ್ರಕಾರವು, ಇತರರು ಹೇಗೆ ವರ್ತಿಸುತ್ತಾರೆ ಅಥವಾ ಅವರು ನಮಗಾಗಿ ಏನು ಮಾಡುತ್ತಾರೆ ಎಂಬುದರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಇದು ಕೇವಲ ಒಂದು ಬಯಕೆಯಾಗಿರುತ್ತದೆ: ನೀವು ಸಂತೋಷವಾಗಿರಿ. ಉಳಿದವರೆಲ್ಲರೂ ನಮ್ಮ ದೇಹದ ಒಂದು ಭಾಗವಾಗಿರುವಂತೆ ಊಹಿಸಿಕೊಳ್ಳಿ: ನಮ್ಮ ಕಾಲ್ಬೆರಳುಗಳಲ್ಲಿ ಕೆಲವಷ್ಟೇ ಅಲ್ಲ, ನಮ್ಮ ಎಲ್ಲಾ ಕಾಲ್ಬೆರಳುಗಳು ಸಂತೋಷವಾಗಿರಲಿ ಎಂದು ನಾವು ಬಯಸುತ್ತೇವೆ. ನಮ್ಮ ಕಾಲ್ಬೆರಳುಗಳು ನಮಗಾಗಿ ಏನು ಮಾಡುತ್ತವೆ ಎಂಬುದು ಮುಖ್ಯವಲ್ಲ. 

ಸಹಾನುಭೂತಿ 

ಪ್ರೀತಿಯಿಂದ, ನಾವು "ಸಹಾನುಭೂತಿಯನ್ನು" ಬೆಳೆಸಿಕೊಳ್ಳುತ್ತೇವೆ. ಇದು ಇತರರು ದುಃಖ ಮತ್ತು ದುಃಖದ ಕಾರಣಗಳಿಂದ ಮುಕ್ತರಾಗಿರಬೇಕೆಂಬ ಆಶಯವಾಗಿರುತ್ತದೆ. ಇದು ಸಂಕಟದ ಮೇಲ್ನೋಟದ ಮಟ್ಟ, ಜೀವನದ ಏರಿಳಿತಗಳನ್ನು ಮಾತ್ರವಲ್ಲದೆ, ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಂತಹ ಆಳವಾದ ದುಃಖಗಳ ಬಗ್ಗೆಯೂ ಮಾತನಾಡುತ್ತದೆ. ಸಹಾನುಭೂತಿ ಹೊಂದುವುದು ಎಂದರೆ ನಾವು ಇತರರನ್ನು ಕೀಳಾಗಿ ಕಾಣುತ್ತೇವೆ ಮತ್ತು "ಅಯ್ಯೋ ಬಡಪಾಯಿಯೇ" ಎಂದು ಅವರನ್ನು ಕನಿಕರದಿಂದ ನೋಡುತ್ತೇವೆ ಎಂದಲ್ಲ. ಬೌದ್ಧ ಸಹಾನುಭೂತಿಯು, ಇತರರೆಲ್ಲರೂ ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಲು ಸಾಧ್ಯವಿದೆ ಎಂಬ ಗೌರವ ಮತ್ತು ತಿಳುವಳಿಕೆಯನ್ನು ಆಧರಿಸಿರುತ್ತದೆ. ಇದು ಕೇವಲ ಒಳ್ಳೆಯ ಆಶಯ ಅಥವಾ ಸುಂದರವಾದ ಪದಗಳಾಗಿರುವುದಿಲ್ಲ. ಸಹಾನುಭೂತಿಯೊಂದಿಗೆ, ನಾವು ವಾಸ್ತವಿಕವಾಗಿ ದುಃಖ ಮುಕ್ತ ಸ್ಥಿತಿಯನ್ನು ಕರೆತರುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಹೀಗೆ ಮಾಡಲು ಬಹಳಾ ಧೈರ್ಯ ಬೇಕಾಗಿರುತ್ತದೆ. 

ನಾವು "ಮಹಾನ್ ಸಹಾನುಭೂತಿ" ಎಂದು ಕರೆಯಲ್ಪಡುವುದನ್ನು ಅಭಿವೃದ್ಧಿಪಡಿಸಿದಾಗ, ನಮ್ಮ ಸಹಾನುಭೂತಿಯು ಎಲ್ಲಾ ಜೀವಿಗಳಿಗಾಗಿ ಸಮಾನವಾಗಿರುತ್ತದೆ ಮತ್ತು ಒಬ್ಬ ಕಾಳಜಿಯುಳ್ಳ, ಮಮತೆಯಿಂದ ಕೂಡಿದ ತಾಯಿ ತನ್ನ ಏಕೈಕ ಮಗುವನ್ನು ಪ್ರೀತಿಯಿಂದ ಪರಿಗಣಿಸುವಂತೆ ನಾವು ಪ್ರತಿಯೊಂದು ಜೀವಿಯನ್ನೂ ಪರಿಗಣಿಸುತ್ತೇವೆ. ನಮ್ಮ ಮಹಾನ್ ಸಹಾನುಭೂತಿಯ ಭಾವನೆಯು, ಪ್ರತಿ ಜೀವಿಯು ಹೆಚ್ಚಿನ ದುಃಖವನ್ನು ಸಹಿಸದಂತೆ, ಅದನ್ನು ರಕ್ಷಿಸುವ ಬಯಕೆಯನ್ನು ಒಳಗೊಂಡಿರುತ್ತದೆ. 

ಅಸಾಧಾರಣ ನಿರ್ಣಯ 

ನಾವು ಅಭಿವೃದ್ಧಿಪಡಿಸಬೇಕಾದ ಮುಂದಿನ ಹಂತವೆಂದರೆ "ಅಸಾಧಾರಣ ನಿರ್ಣಯ" ಎಂಬ ಮನಸ್ಥಿತಿ. ಇದು ಬಲವಾದ ನಿರ್ಧಾರವಾಗಿದ್ದು, ಇತರರಿಗೆ ಕೇವಲ ಮೇಲ್ನೋಟದ ರೀತಿಯಲ್ಲಿ ಮಾತ್ರವಲ್ಲದೆ, ಆಳವಾದ ರೀತಿಯಲ್ಲೂ ಸಹಾಯ ಮಾಡಲು ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಬುದ್ಧನ ಸಂಪೂರ್ಣ ಜ್ಞಾನೋದಯವಾದ ಸ್ಥಿತಿಯನ್ನು ತಲುಪಲು ಇತರರಿಗೆ ಸಹಾಯ ಮಾಡಲು ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರ್ಧರಿಸುತ್ತೇವೆ. ನಾವು ಇದನ್ನು ಕೇವಲ ಉದ್ದೇಶಿಸುವುದಲ್ಲದೆ, ನಮ್ಮ ಮನಸ್ಸನ್ನು ಮಾಡುತ್ತೇವೆ: ನಾವು ಖಂಡಿತವಾಗಿಯೂ ಹೀಗೆ ಮಾಡಲಿದ್ದೇವೆ. 

ಬೋಧಿಚಿತ್ತಾ: ಇತರರೆಲ್ಲರ ಪ್ರಯೋಜನಕ್ಕಾಗಿ ಜ್ಞಾನೋದಯವನ್ನು ಪಡೆಯುವ ಗುರಿ 

ಈ ಅನುಕ್ರಮದ ಅಂತಿಮ ಹಂತವು ನಾವು "ಬೋಧಿಚಿತ್ತಾ" ಎಂದು ಕರೆಯುವುದನ್ನು ಅಭಿವೃದ್ಧಿಪಡಿಸುವುದಾಗಿರುತ್ತದೆ, ಇದಕ್ಕೆ ಆಧಾರವೆಂದರೆ ಪ್ರೀತಿ, ಸಹಾನುಭೂತಿ ಮತ್ತು ಅಸಾಧಾರಣ ನಿರ್ಣಯ. ನಾವು ಬುದ್ಧನ ಸ್ಥಿತಿಯನ್ನು ಸಾಧಿಸಿದರೆ ಮಾತ್ರ ನಾವು ಎಲ್ಲರಿಗೂ ಉತ್ತಮವಾಗಿ ಸಹಾಯ ಮಾಡಬಹುದೆಂಬುದನ್ನು ನಾವು ಅರಿತುಕೊಳ್ಳುತ್ತೇವೆ. ಆದರೆ, ಈ ಆಕಾಂಕ್ಷೆಯನ್ನು ವಾಸ್ತವಿಕವಾಗಿಸಲು, ಬುದ್ಧ ಎಂದರೆ ಏನು, ಬುದ್ಧನು ಇತರರಿಗೆ ಸಹಾಯ ಮಾಡುವ ಮತ್ತು ಮಾಡಲಾಗದಿರುವ ವಿಧಾನಗಳನ್ನು ಅರ್ಥಮಾಡಿಕೊಳ್ಳಬೇಕು. ನೆನಪಿರಲಿ, ಬುದ್ಧನು ಚಿಟಿಕೆ ಹೊಡೆದು ಪ್ರತಿಯೊಬ್ಬರ ದುಃಖವನ್ನು ಹೋಗಲಾಡಿಸುವ ಸರ್ವಶಕ್ತ ದೇವರಲ್ಲ. ಒಬ್ಬ ಬುದ್ಧನು ಖಂಡಿತವಾಗಿಯೂ ಇತರರಿಗೆ ದಾರಿ ತೋರಿಸಬಹುದು ಮತ್ತು ಅವರಿಗಾಗಿ ಸ್ಫೂರ್ತಿ ನೀಡಬಹುದು ಆದರೆ ನಾವೇ ಎಲ್ಲಾ ಶ್ರಮವನ್ನು ಪಡಬೇಕು. ನಮಗಾಗಿ ಇತರರು ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಅದನ್ನು ನಾವೇ ಅರ್ಥಮಾಡಿಕೊಳ್ಳಬೇಕು. 

ಹೀಗಾಗಿ, ಪ್ರೀತಿ ಮತ್ತು ಸಹಾನುಭೂತಿಯಿಂದ ಸಾಗಲ್ಪಟ್ಟ ಬೋಧಿಚಿತ್ತಾ, ನಮ್ಮ ಸ್ವಂತ ಭವಿಷ್ಯದ ಜ್ಞಾನೋದಯದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದು ನಮ್ಮ ಸ್ವಂತ ಜ್ಞಾನೋದಯವಾಗಿರುತ್ತದೆ, ಬುದ್ಧ ಶಾಕ್ಯಮುನಿ ಅಥವಾ ಸಾಮಾನ್ಯವಾದ ಜ್ಞಾನೋದಯವಾಗಿರುವುದಿಲ್ಲ. ನಮ್ಮ ಜ್ಞಾನೋದಯವು ಇನ್ನೂ ಸಂಭವಿಸಿಲ್ಲ, ಆದರೆ ನಮ್ಮ ಮಾನಸಿಕ ನಿರಂತರತೆಯ ಬುದ್ಧ-ಸ್ವಭಾವದ ಅಂಶಗಳ ಆಧಾರದ ಮೇಲೆ ಅದು ಸಂಭವಿಸಲು ಸಾಧ್ಯ ಮತ್ತು ನಾವು ಅದನ್ನು ಸಾಧಿಸಬಹುದು. ಈ ಅಂಶಗಳು, ಬೋಧಿಚಿತ್ತದ ಮೂಲ ದೋಷವಿಲ್ಲದ ಸ್ವಭಾವವಾಗಿದ್ದು, ಅದರ ಎಲ್ಲಾ ಸಾಮರ್ಥ್ಯಗಳು ಮತ್ತು ಸಾಧ್ಯತೆಗಳನ್ನು ಒಳಗೊಂಡಿರುತ್ತವೆ. ನಾವು ಈ ಇನ್ನೂ ಸಂಭವಿಸದ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತೇವೆ, ಅದನ್ನು ಸಾಧಿಸುವ ಉದ್ದೇಶದಿಂದ ನಾವು ಇತರರಿಗೆ ಸಾಧ್ಯವಾದಷ್ಟು ಸಹಾಯಮಾಡಬಹುದು. ಜ್ಞಾನೋದಯದ ಹಾದಿಯಲ್ಲಿ, ನಾವು ಇತರರಿಗೆ ಸಾಧ್ಯವಾದಷ್ಟು ಉಪಯುಕ್ತವಾಗಲು ಬಯಸುತ್ತೇವೆ.  

ಇದೇ ಬೋಧಿಚಿತ್ತ. ಇದು ನಂಬಲಾಗದಷ್ಟು ವಿಶಾಲವಾದ ಮನಸ್ಥಿತಿಯಾಗಿದ್ದು, ಇದನ್ನು ನಾವು ಪ್ರೀತಿ ಮತ್ತು ಸಹಾನುಭೂತಿಯ ಧ್ಯಾನವೆಂದು ತಪ್ಪಾಗಿ ಗ್ರಹಿಸಬಾರದು. ಇದು ಅಷ್ಟೇ ಆಗಿರುವುದಿಲ್ಲ. ಪ್ರೀತಿ ಮತ್ತು ಸಹಾನುಭೂತಿಯು ಆಧಾರವಾಗಿರುತ್ತವೆ, ಆದರೆ ಬೋಧಿಚಿತ್ತವು ಅದಕ್ಕಿಂತ ಹಚ್ಚಿನದ್ದಾಗಿರುತ್ತದೆ.  

ಆರು ವ್ಯಾಪಕವಾದ ದೃಷ್ಟಿಕೋನಗಳು (ಆರು ಪರಿಪೂರ್ಣತೆಗಳು

ನಾವು ಮೊದಲೇ ನೋಡಿದಂತೆ, ಉನ್ನತ ಹಂತದ ವ್ಯಾಪ್ತಿಯ ಗುರಿಯು ಬುದ್ಧಸ್ಥಿತಿಯನ್ನು ಸಾಧಿಸುವುದಾಗಿರುತ್ತದೆ, ಇದರಿಂದ ನಾವು ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಸಾಧ್ಯವಾಗುತ್ತದೆ. ನಾವು ಪ್ರೀತಿ, ಸಹಾನುಭೂತಿ ಮತ್ತು ಅಸಾಧಾರಣ ನಿರ್ಣಯದಿಂದ ಪ್ರೇರಿತರಾಗಿರುತ್ತೇವೆ. ಆದರೆ ವಾಸ್ತವದಲ್ಲಿ ನಾವು ಈ ಜ್ಞಾನೋದಯವನ್ನು ಹೇಗೆ ಸಾಧಿಸಬಹುದು? ಇದು "ಆರು ಪರಿಪೂರ್ಣತೆಗಳು" ಎಂದು ಕರೆಯಲ್ಪಡುವ ಪ್ರಸ್ತುತಿಗೆ ನಮ್ಮನ್ನು ಕರೆತರುತ್ತದೆ, ಇದನ್ನು ನಾನು ಸಾಮಾನ್ಯವಾಗಿ ಸಂಸ್ಕೃತದ "ಆರು ಪರಮಿತಗಳು" ಎಂಬುದರಿಂದ "ಆರು ವ್ಯಾಪಕವಾದ ದೃಷ್ಟಿಕೋನಗಳು " ಎಂದು ಅನುವಾದಿಸುತ್ತೇನೆ. ನಾನು ಈ ಪದಗಳನ್ನು ಇಷ್ಟಪಡುತ್ತೇನೆ ಏಕೆಂದರೆ, ಅವು ನಮ್ಮನ್ನು ಬಹಳಾ ದೂರ ಕರೆದೊಯ್ಯುತ್ತವೆ, ಬುದ್ಧನ ಜ್ಞಾನೋದಯದ ಸ್ಥಿತಿಯವರೆಗೆ ನಮ್ಮನ್ನು ಕರೆದೊಯ್ಯುತ್ತವೆ. ಕೆಲವರಿಗೆ, "ಪರಿಪೂರ್ಣತೆಗಳು" ಎಂಬ ಪದವನ್ನು ಬಳಸುವುದರಿಂದ ಅವರು ಪರಿಪೂರ್ಣರಾಗಿರಬೇಕು ಮತ್ತು ಹಾಗಿಲ್ಲದಿದ್ದರೆ ಅವರು ಅಸಮರ್ಥರು ಎಂದು ಭಾವಿಸುತ್ತಾರೆ. ಈ ಪದವು, ಆ ಭಾವನೆಯನ್ನು ಹುಟ್ಟುಹಾಕಬಾರದು. 

ಔದಾರ್ಯ 

ನಾವು ಬೆಳೆಸಿಕೊಳ್ಳಬೇಕಾದ ಮೊದಲ ಮನೋಭಾವವೆಂದರೆ ಔದಾರ್ಯ, ನಾವು ಇತರರಿಗೆ ಕೇವಲ ಭೌತಿಕ ವಸ್ತುಗಳನ್ನು ನೀಡುವುದಲ್ಲದೆ ಸಲಹೆ, ಬೋಧನೆಗಳು ಮತ್ತು ಭಯದಿಂದ ಸ್ವಾತಂತ್ರ್ಯವನ್ನು ನೀಡುತ್ತೇವೆ. ನಮಗೆ ಯಾವುದೇ ಭೌತಿಕ ವಸ್ತು ನೀಡಲು ಇರದಿದ್ದರೂ, ಏನು ಬೇಕಾದರೂ ನೀಡುವ ಇಚ್ಛೆಯ ಮನೋಭಾವವನ್ನು ಬೆಳೆಸಿಕೊಳ್ಳುತ್ತೇವೆ. ನಾವು ಇತರೊಂದಿಗೆ ಹೇಗೆ ವರ್ತಿಸುತ್ತೇವೆ ಎಂಬುದು ನಾವು ನೀಡಬಹುದಾದ ಇನ್ನೊಂದು ಕೊಡುಗೆಯಾಗಿರುತ್ತದೆ. ಏಕೆಂದರೆ ನಾವು ಸಮಚಿತ್ತತೆಯನ್ನು ಬೆಳೆಸಿಕೊಂಡಿರುತ್ತೇವೆ, ಇದರರ್ಥ ಇತರರು ನಮ್ಮಿಂದ ಭಯಪಡಬೇಕಾಗಿಲ್ಲ. ನಾವು ಇತರರೊಂದಿಗೆ ಕೋಪಗೊಳ್ಳುವುದಿಲ್ಲ, ಅವರಿಗೆ ಅಂಟಿಕೊಳ್ಳುವುದಿಲ್ಲ ಅಥವಾ ಅವರಿಂದ ಏನನ್ನಾದರೂ ಪಡೆಯಲು ಬಯಸುವುದಿಲ್ಲ. ನಾವು ಇತರರನ್ನು ನಿರ್ಲಕ್ಷಿಸುವುದಿಲ್ಲ ಅಥವಾ ಅವರು ನಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡಿದಾಗ ಅವರನ್ನು ತಿರಸ್ಕರಿಸುವುದಿಲ್ಲ. ಹೆಚ್ಚುವರಿಯಾಗಿ, ನಾವು ಅವರಿಗಾಗಿ ಪ್ರಾಮಾಣಿಕವಾಗಿ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಅದು ನಾವು ಯಾರಿಗಾದರೂ ನೀಡಬಹುದಾದ ನಂಬಲಾಗದ ಉಡುಗೊರೆಯಾಗಿರುತ್ತದೆ, ಇದು ನಾವು ಉದಾರತೆಯಿಂದ ಅಭಿವೃದ್ಧಿಪಡಿಸಿದ ಅದ್ಭುತ ಕೊಡುಗೆಯಾಗಿರುತ್ತದೆ. 

ನೈತಿಕ ಸ್ವಯಂ-ಶಿಸ್ತು 

ನಾವು ಅಭಿವೃದ್ಧಿಪಡಿಸುವ ಮುಂದಿನ ವ್ಯಾಪಕವಾದ ವರ್ತನೆಯು ನೈತಿಕ ಸ್ವಯಂ-ಶಿಸ್ತು ಆಗಿರುತ್ತದೆ, ಇಲ್ಲಿ ನಾವು ವಿನಾಶಕಾರಿಯಾಗಿ ಕಾರ್ಯನಿರ್ವಹಿಸದೆ, ಸಾಧ್ಯವಾದಷ್ಟು ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ. ನಾವು ಅಧ್ಯಯನ ಮಾಡುವ ಮತ್ತು ಧ್ಯಾನಿಸಲು ಇಚ್ಛಿಸುವ ಮತ್ತು ಇತರರಿಗೆ ಸಹಾಯ ಮಾಡುವ ಶಿಸ್ತನ್ನು ಹೊಂದಿರುತ್ತೇವೆ. ಒಬ್ಬರಿಗೆ ಸಹಾಯ ಮಾಡುವುದರಿಂದ ನಾವು ಬಳಲುವುದಿಲ್ಲ ಮತ್ತು ನಮಗೆ ಸಹಾಯ ಮಾಡಲು ಮನಸ್ಸಿಲ್ಲದ ಕಾರಣದಿಂದ ಇತರರನ್ನು ನಿರ್ಲಕ್ಷಿಸುವುದಿಲ್ಲ. 

ತಾಳ್ಮೆ 

ತಾಳ್ಮೆಯು, ಕೋಪಗೊಳ್ಳದೆ ಅಥವಾ ಅಸಮಾಧಾನಗೊಳ್ಳದೆ, ದುಃಖ ಮತ್ತು ತೊಂದರೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವಾಗಿರುತ್ತದೆ. ನಮ್ಮ ಮೇಲೆ ಕೆಲಸ ಮಾಡುವುದು ಮತ್ತು ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುವುದು ಸುಲಭವಲ್ಲ, ಮತ್ತು ಅನೇಕರಿಗೆ ಸಹಾಯ ಮಾಡುವುದು ಸುಲಭವಲ್ಲ. ಅವರೊಂದಿಗೆ ಕೆಲಸ ಮಾಡುವುದು ಕಠಿಣವಾಗಿರುತ್ತದೆ ಮತ್ತು ನಾವು ಕೋಪಗೊಳ್ಳದಿರಲು ನಮಗೆ ತಾಳ್ಮೆ ಬೇಕು. ಎಲ್ಲಾ ಇತರ ವ್ಯಾಪಕವಾದ ದೃಷ್ಟಿಕೋನದಂತೆ, ತಾಳ್ಮೆಯನ್ನು ಅಭಿವೃದ್ಧಿಪಡಿಸಲು ಸಹ ಹಲವು ವಿಧಾನಗಳಿವೆ. 

ಪರಿಶ್ರಮ 

ಮುಂದಿನ ವರ್ತನೆಯು ಪರಿಶ್ರಮವಾಗಿರುತ್ತದೆ, ನಾವು ಎಷ್ಟೇ ಕಷ್ಟಪಟ್ಟರೂ ಅದನ್ನು ಬಿಟ್ಟುಕೊಡದೇ ಇರುವುದು. ಈ ಅರ್ಥದಲ್ಲಿ, ಈ ವ್ಯಾಪಕವಾದ ವರ್ತನೆಯು ವೀರರ ಧೈರ್ಯದಂತಿರುತ್ತದೆ. ನಾವು ಬಿಟ್ಟುಕೊಡುವುದೇ ಇರುವುದಲ್ಲದೆ, ಇತರರಿಗೆ ಸಹಾಯ ಮಾಡುವಲ್ಲಿ ನಾವು ಸಂತೋಷಪಡುತ್ತೇವೆ ಮತ್ತು ಸಹಾಯ ಮಾಡುವ ಅವಕಾಶವನ್ನು ಹೊಂದಿದ್ದಕ್ಕಾಗಿ ನಿಜವಾಗಿಯೂ ಸಂತೋಷಪಡುತ್ತೇವೆ. ಇದನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಕುರಿತು ಹಲವು ಸೂಚನೆಗಳಿವೆ, ಇವು ಯಾವಾಗ ವಿಶ್ರಾಂತಿ ಪಡೆಯಬೇಕು ಮತ್ತು ವಿರಾಮ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದನ್ನು ಒಳಗೊಂಡಿರುತ್ತವೆ. ನಾವು ನಮ್ಮನ್ನು ಬಹಳಾ ದಣಿಸಿದರೆ, ನಾವು ಯಾರಿಗೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ, ನಮ್ಮ ಮೇಲೆ ಕೆಲಸ ಮಾಡುವುದನ್ನು ಮತ್ತು ಇತರರಿಗೆ ಸಹಾಯ ಮಾಡುವುದನ್ನು ತಡೆಯುವ ಸೋಮಾರಿತನವನ್ನು ಹೋಗಲಾಡಿಸಲು ಹಲವು ವಿಧಾನಗಳಿವೆ. 

ಮಾನಸಿಕ ಸ್ಥಿರತೆ 

ಇದಾದ ನಂತರ ನಾವು ಮಾನಸಿಕ ಸ್ಥಿರತೆಯನ್ನು ಅಭಿವೃದ್ಧಿಪಡಿಸುವ ಅಭ್ಯಾಸಗಳನ್ನು ಹೊಂದಿದ್ದೇವೆ. ಇದು ಏಕಾಗ್ರತೆಯೊಂದಿಗೆ ಭಾವನಾತ್ಮಕ ಸ್ಥಿರತೆಯನ್ನೂ ಒಳಗೊಂಡಿರುತ್ತದೆ. ನಾವು ಮಾನಸಿಕ ಅಲೆದಾಡುವಿಕೆಯ ಪ್ರಭಾವದ ಅಡಿಯಲ್ಲಿರದ, ನಮಗೆ ಆಕರ್ಷಕವಾಗಿರುವ ವಸ್ತುಗಳಿಗೆ ಹಾರಿಹೋಗದ ಮತ್ತು ಮಂದ ಮತ್ತು ನಿದ್ರೆಗೆ ಒಳಗಾಗದ ಸ್ಥಿರವಾದ ಮನಸ್ಥಿತಿಯನ್ನು ಬಯಸುತ್ತೇವೆ. ಅಂತಹ ಮನಸ್ಸು, ನಾವು ಯಾವುದರ ಮೇಲೆ ಕೇಂದ್ರೀಕರಿಸಬೇಕೆಂದು ಬಯಸುತ್ತೇವೋ ಅದರ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಉದಾಹರಣೆಗೆ, ಯಾರಾದರೂ ನಮ್ಮೊಂದಿಗೆ ಮಾತನಾಡುವಾಗ, ನಮ್ಮ ಮನಸ್ಸು ಇತರ ವಿಷಯಗಳ ಬಗ್ಗೆ ಯೋಚಿಸಲು ಅಲೆದಾಡುವುದಿಲ್ಲ. ಸ್ಥಿರತೆಗೆ ಭಂಗವಾಗುವ ಭಾವನೆಗಳು ನಮ್ಮಲ್ಲಿ ಇರದೆ ನಾವು ಸ್ಥಿರವಾಗಿರುತ್ತೇವೆ; ನಾವು ಹತಾಶರಾಗುವುದಿಲ್ಲ. ಇದರರ್ಥ ನಾವು ಅತಿ ಸೂಕ್ಷ್ಮ ಅಥವಾ ಸೂಕ್ಷ್ಮರಹಿತವಾಗಿರುವುದಿಲ್ಲ ಬದಲಿಗೆ ಸಮತೋಲಿತ ಮತ್ತು ಸ್ಥಿರವಾಗಿರುತ್ತೇವೆ. 

ವಿವೇಚನಾತ್ಮಕ ಅರಿವು 

ಇದನ್ನು ಸಾಮಾನ್ಯವಾಗಿ "ಬುದ್ಧಿವಂತಿಕೆ" ಎಂದು ಅನುವಾದಿಸಲಾಗುತ್ತದೆ ಮತ್ತು ಸಂಸ್ಕೃತದಲ್ಲಿ ಇದನ್ನು ಪ್ರಜ್ಞಾಪರಾಮಿತ ಎಂದು ಕರೆಯುತ್ತೇವೆ. ಈ ಅಂತಿಮ ವರ್ತನೆಯು, ಅಸ್ತಿತ್ವದಲ್ಲಿ ಯಾವುದು ಸಾಧ್ಯ ಮತ್ತು ಯಾವುದು ಅಸಾಧ್ಯ ಎಂಬುದರ ನಡುವಿನ ವ್ಯತ್ಯಾಸವನ್ನು ತೋರಿಸುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಇದು ಬಹಳ ನಿರ್ದಿಷ್ಟವಾದ ಅರಿವಾಗಿರುತ್ತದೆ, ಆದ್ದರಿಂದ "ಬುದ್ಧಿವಂತಿಕೆ" ಎಂಬ ಪದವು ಸ್ವಲ್ಪ ಅಸ್ಪಷ್ಟವಾಗಿರುತ್ತದೆ. ಯಾವುದು ಅಸಾಧ್ಯ ಎಂಬುದರ ಅರಿವಿನ ಬಗ್ಗೆ ನಾವು ನಿರ್ದಿಷ್ಟವಾಗಿ ಮಾತನಾಡುತ್ತಿದ್ದೇವೆ, ಇದು ಶೂನ್ಯತೆಯ (ಖಾಲಿತನ) ತಿಳುವಳಿಕೆಯನ್ನು ಒಳಗೊಂಡಿರುತ್ತದೆ. ಕೆಲವು ವಿಷಯಗಳು ಹಾಸ್ಯಾಸ್ಪದ, ಅಸಾಧ್ಯ ಮತ್ತು ಏನನ್ನೂ ಉಲ್ಲೇಖಿಸುವುದಿಲ್ಲ ಎಂಬುದನ್ನು ನಾವು ವಿವೇಚಿಸುತ್ತೇವೆ. 

ಈ ಅಭ್ಯಾಸಗಳು ಮತ್ತು ವಿಧಾನಗಳೊಂದಿಗೆ, ನಾವು ಆರು ವ್ಯಾಪಕವಾದ ವರ್ತನೆಗಳನ್ನು ಅಭಿವೃದ್ಧಿಪಡಿಸಲು, ನಮ್ಮ ಗುರಿ, ಪ್ರೇರಣೆ, ಸಂಕಲ್ಪ ಮತ್ತು ಬೋಧಿಚಿತ್ತಕ್ಕಾಗಿ ಕೆಲಸ ಮಾಡುತ್ತೇವೆ. ಇವೆಲ್ಲವೂ ಪ್ರೇರಣೆಯ ಉನ್ನತ ಹಂತವನ್ನು ಒಳಗೊಂಡಿರುತ್ತದೆ. 

ಸಾರಾಂಶ 

ಆರಂಭಿಕ ಹಂತವನ್ನು ಆಧರಿಸಿ, ಮಧ್ಯಂತರ ಹಂತದೊಂದಿಗೆ ನಾವು ಉತ್ತಮ ಸ್ಥಿತಿಯ ಪುನರ್ಜನ್ಮವನ್ನು ಪಡೆದರೂ ಸಹ, ನಾವು ಇನ್ನೂ ಬಳಲುತ್ತೇವೆ ಎಂಬುದನ್ನು ನಾವು ಅರಿತುಕೊಳ್ಳುತ್ತೇವೆ. ನಾವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತೇವೆ ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತೇವೆ ಮತ್ತು ಸಾಯತ್ತೇವೆ ಮತ್ತು ನಂತರ ಅದನ್ನು ಪುನರಾವರ್ತಿಸುತ್ತೇವೆ. ಮತ್ತೊಮ್ಮೆ ಹಾಗೆಯೇ ನಡೆಯುತ್ತದೆ. ಇದರಿಂದ ಬೇಸರಗೊಂಡು, ಅನಿಯಂತ್ರಿತವಾಗಿ ಮರುಕಳಿಸುವ ಈ ಎಲ್ಲಾ ಪುನರ್ಜನ್ಮಗಳಲ್ಲಿ ವಿಶೇಷವಾದದ್ದು ಏನೂ ಇಲ್ಲ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಇದರಿಂದ ನಾವು ವಿಮೋಚನೆಯ ಗುರಿಯನ್ನು ಬೆಳೆಸಿಕೊಳ್ಳುತ್ತೇವೆ. 

ನಾವು ಉನ್ನತ ಮಟ್ಟಕ್ಕೆ ಹೋದಾಗ, ನಾವು ಮಾತ್ರ ಪ್ರಮುಖ ಪಾತ್ರಧಾರಿಗಳು - ಬ್ರಹ್ಮಾಂಡದ ಕೇಂದ್ರಬಿಂದು - ಎಂದು ಯೋಚಿಸುವುದನ್ನು ನಿಲ್ಲಿಸುತ್ತೇವೆ. ಸಂತೋಷವನ್ನು ಬಯಸುವುದರಲ್ಲಿ ಮತ್ತು ದುಃಖವನ್ನು ತಪ್ಪಿಸಲು ಬಯಸುವುದರಲ್ಲಿ ಎಲ್ಲರೂ ನಮ್ಮಂತೆಯೇ ಸಮಾನರು ಎಂದು ನಾವು ಅರಿತುಕೊಳ್ಳುತ್ತೇವೆ. ಇಷ್ಟೇ ಅಲ್ಲ, ಹಿಂದಿನ ಜನ್ಮದಲ್ಲಿ ಮತ್ತು ಈ ಜನ್ಮದಲ್ಲಿ ಎಲ್ಲಾ ಜೀವಿಗಳು ನಮಗೆ ನಂಬಲಾಗದಷ್ಟು ದಯೆ ತೋರಿರುವುದನ್ನು ನಾವು ನೋಡುತ್ತೇವೆ. ಅವರಿಲ್ಲದೆ, ನಮಗೆ ತಿನ್ನಲು ಅಥವಾ ಕುಡಿಯಲು, ಓದಲು ಅಥವಾ ಬರೆಯಲು, ಅಂಗಡಿಗಳಿಗೆ ಹೋಗಲು, ಚಲನಚಿತ್ರಗಳನ್ನು ಆನಂದಿಸಲು ಅಥವಾ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಈ ದಯೆಯನ್ನು ನಿರ್ಲಕ್ಷಿಸುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿದು, ನಾವು ಅವರಿಗಾಗಿ ಸಹಾನುಭೂತಿ ಮತ್ತು ಪ್ರೀತಿಯಿಂದ, ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುತ್ತೇವೆ, ಆ ಮೂಲಕ ಇತರರಿಗೆ ನಿಜವಾಗಿಯೂ ಅತ್ಯುತ್ತಮವಾಗಿ ಉಪಯುಕ್ತವಾಗಲು ನಾವು ನಮ್ಮ ಸ್ವಂತ ಜ್ಞಾನೋದಯವನ್ನು ಪಡೆಯಲು ಬಯಸುತ್ತೇವೆ. 

Top