ಮೂರನೇ ಆರ್ಯ ಸತ್ಯ: ದುಃಖದ ನಿಜವಾದ ನಿಲುಗಡೆ

ನಾವು ಜೀವನದಲ್ಲಿ ಅನುಭವಿಸುವ ನಿಜವಾದ ದುಃಖಗಳನ್ನು ಗುರುತಿಸಿ, ಅವುಗಳ ನಿಜವಾದ ಕಾರಣಗಳನ್ನು ಗುರುತಿಸಿದ ನಂತರ, ನಾವು ಅವುಗಳನ್ನು ನಿಜವಾಗಿಯೂ ನಿವಾರಿಸಲು ಬಯಸಿದರೆ, ಅವುಗಳನ್ನು ಎಂದಿಗೂ ಮರುಕಳಿಸದಂತೆ ತಡೆಯಬೇಕು. ಬುದ್ಧನು ತನ್ನ ಸ್ವಂತ ಅನುಭವದಿಂದ ಅರಿತುಕೊಂಡ ಮತ್ತು ನಂತರ ಬೋಧಿಸಿದ ಮೂರನೇ ಆರ್ಯ ಸತ್ಯವೆಂದರೆ, ಎಲ್ಲಾ ದುಃಖಗಳು ಮತ್ತು ಅವುಗಳ ಕಾರಣಗಳು ಎಂದಿಗೂ ಮರುಕಳಿಸದಂತಹ ನಿಜವಾದ ನಿಲುಗಡೆಯು ಸಾಧ್ಯವಾಗಿರುತ್ತದೆ. ಮನಸ್ಸಿನ ಸ್ವರೂಪವು ಶುದ್ಧವಾಗಿರುವುದರಿಂದ ಇದು ಸಾಧ್ಯವಾಗಿರುತ್ತದೆ.

ನಿಜವಾದ ದುಃಖಗಳು ಮತ್ತು ಈ ದುಃಖಗಳ ನಿಜವಾದ ಕಾರಣಗಳು 

ಜೀವನದಲ್ಲಿ ನಾವು ಎದುರಿಸುವ ಅನೇಕ ವೈಯಕ್ತಿಕ ಸಮಸ್ಯೆಗಳಿದ್ದರೂ, ನಿಜವಾದ ದುಃಖವೆಂದರೆ ನಾವು ನಮ್ಮ ದುಃಖಗಳ ಪುನರಾವರ್ತಿತ ಹೊರಹೊಮ್ಮುವಿಕೆಯನ್ನು ನಾವು ಶಾಶ್ವತಗೊಳಿಸುತ್ತೇವೆ ಎಂಬ ಅಂಶವಾಗಿದೆ ಎಂದು ಬುದ್ಧನು ಕಲಿಸಿದನು. ನಾವು ಅಸಂತೋಷ ಮತ್ತು ಅತೃಪ್ತಿಕರ ಸಂತೋಷವನ್ನು ಅನಿಯಂತ್ರಿತವಾಗಿ, ಮೇಲಕ್ಕೆ-ಕೆಳಕ್ಕೆ ಅನುಭವಿಸುತ್ತಾ ಶಾಶ್ವತಗೊಳಿಸುತ್ತೇವೆ ಮತ್ತು ಪ್ರತಿ ಪುನರ್ಜನ್ಮದಲ್ಲಿ ನಾವು ಸೀಮಿತ ದೇಹ ಮತ್ತು ಮನಸ್ಸನ್ನು ಹೊಂದಿದ್ದೇವೆ, ಅದರ ಆಧಾರದ ಮೇಲೆ ನಾವು ಈ ಭಾವನಾತ್ಮಕ ಏರಿಳಿತಗಳನ್ನು ಅನುಭವಿಸುತ್ತೇವೆ. ಇವುಗಳನ್ನು ಶಾಶ್ವತಗೊಳಿಸುವ ನಿಜವಾದ ಕಾರಣಗಳು ನಮ್ಮ ಸ್ವಂತ ಮನಸ್ಸಿನಲ್ಲಿಯೇ ಇವೆ ಎಂದು ಬುದ್ಧನು ಕಲಿಸಿದನು. 

ನಮ್ಮ ನಡವಳಿಕೆಯು ನಮ್ಮ ಮೇಲೆ ಮತ್ತು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮತ್ತು ನಾವು, ಇತರರೆಲ್ಲರೂ ಮತ್ತು ಎಲ್ಲಾ ವಿದ್ಯಮಾನಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಬಗ್ಗೆ ನಮ್ಮ ಮನಸ್ಸುಗಳು ಸುಳ್ಳು ವಾಸ್ತವವನ್ನು ಪ್ರಕ್ಷೇಪಿಸುತ್ತವೆ. ನಾವು "ನಾನು" ಎಂದು ಕರೆಯಲ್ಪಡುವ, ಒಂದು ರೀತಿಯ ಸ್ಥಿರವಾದ, ಸ್ವಯಂ-ಸಂಪೂರ್ಣ ಅಸ್ತಿತ್ವವಾಗಿ ಅಸ್ತಿತ್ವದಲ್ಲಿದ್ದೇವೆ ಎಂದು ತಪ್ಪಾಗಿ ಊಹಿಸುತ್ತೇವೆ. ಜೊತೆಗೆ ನಮ್ಮ ಮನಸ್ಸುಗಳು ನಮ್ಮ ತಲೆಯಲ್ಲಿರುವ, ಒಂದು ರೀತಿಯ ಸ್ಥಿರವಾದ ಅಸ್ತಿತ್ವಗಳಾಗಿವೆ ಎಂದು ನಾವು ತಪ್ಪಾಗಿ ಊಹಿಸುತ್ತೇವೆ, ಏಕೆಂದರೆ ನಮ್ಮ ತಲೆಯಲ್ಲಿರುವ ಧ್ವನಿಯು ನಮ್ಮ ಮನಸ್ಸಿನಲ್ಲಿರುವಂತೆ ತೋರುತ್ತದೆ, ಅಥವಾ ನಾವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಯೋಚಿಸಲು ಬಳಸುವ ಸಾಧನದಂತೆ ನಾವು ಪರಿಗಣಿಸುತ್ತೇವೆ. ಈ ಯಾವುದೇ ಪ್ರಕ್ಷೇಪಣಗಳು ವಾಸ್ತವಕ್ಕೆ ಹೊಂದಿಕೆಯಾಗುತ್ತವೆಯೇ ಎಂಬುದು ನಮಗೆ ತಿಳಿದಿಲ್ಲ ಆದರೆ ಇನ್ನೂ ಹದಗೆಟ್ಟಿದ ವಿಷಯವೆಂದರೆ, ಅವು ಹಾಗೆ ಮಾಡುತ್ತವೆ ಎಂದು ನಾವು ನಂಬುತ್ತೇವೆ.

"ಯಾರೂ ನನ್ನನ್ನು ಪ್ರೀತಿಸುವುದಿಲ್ಲ; ಯಾರಿಗೂ ನನ್ನ ಅವಶ್ಯಕತೆ ಇಲ್ಲ" ಎಂದು ಯೋಚಿಸುತ್ತಾ ನೀವು ಎಂದಾದರೂ ನಿಮ್ಮ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದೀರಾ? ಅಥವಾ ಸಂಪೂರ್ಣವಾಗಿ ಒತ್ತಡಕ್ಕೊಳಗಾಗಿ, "ನನಗೆ ವಿಷಯಗಳನ್ನು ನಿಭಾಯಿಸಲು ಸಾಧ್ಯವಿಲ್ಲ; ಅದು ನನಗೆ ತುಂಬಾ ಕಷ್ಟ" ಎಂದು ಭಾವಿಸಿರುವಿರಾ? ಇವು ಸಂತೋಷದ ಮನಸ್ಥಿತಿಗಳೇ? ಖಂಡಿತವಾಗಿಯೂ ಅಲ್ಲ. ನಾವು ಸ್ವಯಂ-ಕರುಣೆ ಮತ್ತು ಅತೃಪ್ತಿಯಲ್ಲಿ ಮುಳುಗಬಹುದು, ಆದರೆ ಈ ಭಾವನೆಗಳು ಹೋಗಬೇಕೆಂದು ನಾವು ಹಾತೊರೆಯುತ್ತೇವೆ. ಸಮಸ್ಯೆಯು ನಾವು ಈ ಪರಿಸ್ಥಿತಿಯನ್ನು ಹೇಗೆ ಗ್ರಹಿಸುತ್ತೇವೆ ಎಂಬುದಾಗಿರುತ್ತದೆ. ಈ ಅತೃಪ್ತಿಯು ಬಣ್ಣಿಸುವ ಪುಸ್ತಕದಲ್ಲಿನ ಒಂದು ಕಪ್ಪು ಮೋಡದಂತಿದ್ದು, ಇದರ ಸುತ್ತಲೂ ಘನ ರೇಖೆಯಿದ್ದು, ಇದು ‘ನಾನು’ ಎಂಬ ಪದದ ಮೇಲೆ ನೇತಾಡುತ್ತಿರುತ್ತದೆ, ಇದು ಕೂಡ ಘನ ರೇಖೆಯೊಳಗೆ ಇರುತ್ತದೆ. ಈ ಮೋಸಗೊಳಿಸುವ ನೋಟವು ವಾಸ್ತವಕ್ಕೆ ಅನುಗುಣವಾಗಿದೆ ಎಂದು ನಂಬುವುದರ ಆಧಾರದ ಮೇಲೆ - ಅದು ಹಾಗೆ ಭಾಸವಾಗುವುದರಿಂದ - ಒಬ್ಬರು ನಮ್ಮನ್ನು ಪ್ರೀತಿಸಬೇಕೆಂಬ ಹಂಬಲ ಅಥವಾ ಅವರು ನಮಗೆ ಪ್ರೀತಿಯನ್ನು ತೋರಿಸದಿದ್ದಾಗ ಅವರ ಮೇಲೆ ಕೋಪದಂತಹ ಗೊಂದಲಮಯ ಭಾವನೆಗಳನ್ನು ಬೆಳೆಸಿಕೊಳ್ಳುತ್ತೇವೆ. ಈ ಗೊಂದಲಮಯ ಭಾವನೆಗಳು, ಯಾರಾದರೂ ನಮ್ಮೊಂದಿಗೆ ಸಮಯ ಕಳೆಯಲು ಮತ್ತು ನಮಗೆ ಪ್ರೀತಿಯನ್ನು ತೋರಿಸಬೇಕೆಂಬ ಅಸಮಂಜಸ ಬೇಡಿಕೆಯನ್ನು ಮುಂದಿಡುವಂತೆ, ಬಲವಾದ ಕರ್ಮದ ಪ್ರಚೋದನೆಯನ್ನು ಪ್ರಚೋದಿಸುತ್ತವೆ. ಅವರು ನಮ್ಮ ಬೇಡಿಕೆಗೆ ಒಪ್ಪಿಕೊಂಡರೂ ಸಹ, ನಾವು ಅನುಭವಿಸುವ ಯಾವುದೇ ಅಲ್ಪಾವಧಿಯ ಸಂತೋಷವು ಎಂದಿಗೂ ಸಾಕಾಗುವುದಿಲ್ಲ, ಮತ್ತು ನಾವು ಹೆಚ್ಚಿನದನ್ನು ಬೇಡುತ್ತೇವೆ, ಅತೃಪ್ತ ಪರಿಸ್ಥಿತಿಯನ್ನು ಶಾಶ್ವತಗೊಳಿಸುತ್ತೇವೆ. 

ಅಂತಹ ಒಂದು ಲೂಪ್‌ನಲ್ಲಿ, ನಮ್ಮ ಮನಸ್ಸುಗಳು ಗೊಂದಲಮಯವಾಗಿರುತ್ತವೆ ಮತ್ತು ಮೋಡ ಕವಿದಿರುತ್ತವೆ. ನಾವು ನೇರವಾಗಿ ಯೋಚಿಸುವುದಿಲ್ಲ, ಮತ್ತು ನಮ್ಮ ನಡವಳಿಕೆಯ ಮೇಲೆ ನಿಯಂತ್ರಣವಿರುವುದಿಲ್ಲ. ಆದರೆ ಗೊಂದಲವು ಮನಸ್ಸಿನ ಸ್ವಭಾವದ ಭಾಗವೇ? ಈ ಪ್ರಶ್ನೆಯನ್ನು ಉತ್ತರಿಸಲು, ಬೌದ್ಧಧರ್ಮದಲ್ಲಿ "ಮನಸ್ಸು" ಎಂದರೆ ಏನು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಮನಸ್ಸು ನಮ್ಮ ತಲೆಯಲ್ಲಿರುವ ಒಂದು ರೀತಿಯ ಸ್ವಯಂಪೂರ್ಣ "ವಸ್ತು" ಅಲ್ಲ, ಬದಲಿಗೆ ಅದು ಮಾನಸಿಕ ಚಟುವಟಿಕೆಯನ್ನು ಸೂಚಿಸುತ್ತದೆ. ಇದು ವಿಷಯಗಳನ್ನು ಅನುಭವಿಸುವ ವೈಯಕ್ತಿಕ, ವ್ಯಕ್ತಿನಿಷ್ಠ ಮಾನಸಿಕ ಚಟುವಟಿಕೆಯಾಗಿದೆ. ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನ ವಿಷಯಗಳನ್ನು ಅನುಭವಿಸಿದಂತೆ ಅದು ನಿರಂತರವಾಗಿ ಬದಲಾಗುತ್ತಿರುತ್ತದೆ, ಆದರೆ ಅದರ ಸಾಂಪ್ರದಾಯಿಕ ಸ್ವಭಾವವು ಯಾವಾಗಲೂ ಒಂದೇ ಆಗಿರುತ್ತದೆ. ಇದರ ಆಳವಾದ ಸ್ವಭಾವವು ಯಾವಾಗಲೂ ಒಂದೇ ಆಗಿರುತ್ತದೆ – ಇದು ಒಂದು ರೀತಿಯ ಅಸಾಧ್ಯ ರೀತಿಯಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. 

ನಮ್ಮ ಮನಸ್ಸು ಹೀಗೆ ಅಸ್ತಿತ್ವದಲ್ಲಿದೆ ಎಂದು ನಾವು ತಪ್ಪಾಗಿ ಊಹಿಸಿಕೊಳ್ಳುವ ಬಹಳಾ ಅಸಾಧ್ಯವಾದ ಮಾರ್ಗಗಳಿವೆ. ಉದಾಹರಣೆಗೆ, ಮನಸ್ಸನ್ನು "ನಾನು" ಎಂಬ ಸ್ಥಿರವಾದ ಅಸ್ತಿತ್ವದೊಂದಿಗೆ ಅಥವಾ ಅಂತಹ "ನಾನು" ಬಳಸುವ ಯಾವುದನ್ನಾದರೂ ಹೋಲುವ ಸ್ಥಿರವಾದ ಅಸ್ತಿತ್ವ ಎಂದು ನಾವು ಭಾವಿಸುತ್ತೇವೆ. ಈ ಯಾವುದೇ ತಪ್ಪು ದೃಷ್ಟಿಕೋನಗಳು ಮನಸ್ಸಿನ ನಿಜವಾದ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ - ಅವು ಕೇವಲ ಕಲ್ಪನೆಗಳು, ಆದ್ದರಿಂದ ಮನಸ್ಸಿನ ಸ್ವಭಾವದ ಭಾಗವಲ್ಲ - ಈ ಸುಳ್ಳು ದೃಷ್ಟಿಕೋನಗಳನ್ನು ಆಧರಿಸಿದ ಎಲ್ಲಾ ಮಾನಸಿಕ ಸ್ಥಿತಿಗಳು ಸಹ ಮನಸ್ಸಿನ ಸ್ವಭಾವದ ಭಾಗಗಳಲ್ಲ. ಈ ಮಾನಸಿಕ ಸ್ಥಿತಿಗಳಲ್ಲಿ "ನಾನು" ಎಂಬ ನಮ್ಮ ತಪ್ಪು ಕಲ್ಪನೆಗಳು, ಆ "ನಾನು" ಅನ್ನು ಸುರಕ್ಷಿತವಾಗಿಸಲು ಪ್ರಯತ್ನಿಸುವ ಗೊಂದಲಮಯ ಭಾವನೆಗಳು ಮತ್ತು ಆ "ನನ್ನನ್ನು" ಬೆಂಬಲಿಸಲು ವ್ಯರ್ಥ ಕ್ರಿಯೆಗಳಿಗೆ ನಮ್ಮನ್ನು ಸೆಳೆಯುವ ಬಲವಾದ ಪ್ರಚೋದನೆಗಳು ಸೇರಿರುತ್ತವೆ. ಇವುಗಳಲ್ಲಿ ಯಾವುದೂ ಮನಸ್ಸಿನ ಸ್ವಭಾವದ ಭಾಗಗಳಾಗದೆ ಇರುವುದರಿಂದ ಮತ್ತು ಆ ಸ್ವಭಾವದ ತಪ್ಪು ಕಲ್ಪನೆಗಳನ್ನು ಆಧರಿಸಿರುವುದರಿಂದ, ಆ ತಪ್ಪು ಕಲ್ಪನೆಗಳನ್ನು, ಸರಿಯಾದ ತಿಳುವಳಿಕೆಯಿಂದ ಬದಲಾಯಿಸಿದ ನಂತರ ಅವುಗಳನ್ನು ಶಾಶ್ವತವಾಗಿ ತೆಗೆದುಹಾಕಬಹುದು. ಮತ್ತೊಂದೆಡೆ, ಪ್ರೀತಿ ಮತ್ತು ಸಹಾನುಭೂತಿಯಂತಹ ರಚನಾತ್ಮಕ ಭಾವನೆಗಳು ಮನಸ್ಸಿನ ಸ್ವಭಾವದ ತಪ್ಪು ಕಲ್ಪನೆಗಳನ್ನು ಆಧರಿಸಿರುವುದಿಲ್ಲ. ಆ ದೊಡ್ಡ ವ್ಯತ್ಯಾಸದಿಂದಾಗಿ, ಸರಿಯಾದ ತಿಳುವಳಿಕೆ ಅವುಗಳನ್ನು ಸ್ಥಳಾಂತರಿಸುವುದಿಲ್ಲ. 

ಹಾಗಿದ್ದಲ್ಲಿ, ದುಃಖದ ನಿಜವಾದ ನಿಲುಗಡೆ ಎಂದರೆ ನಮ್ಮ ಮನಸ್ಸಿನ ನಿಲುಗಡೆಯಲ್ಲ. ಪ್ರೀತಿ, ಸಹಾನುಭೂತಿ ಮತ್ತು ಸರಿಯಾದ ತಿಳುವಳಿಕೆಯಂತಹ ಎಲ್ಲಾ ಉತ್ತಮ ಗುಣಗಳೊಂದಿಗೆ ನಮ್ಮ ಮನಸ್ಸುಗಳು ಜೀವಿತಾವಧಿಯಿಂದ ಜೀವಿತಾವಧಿಗೆ ಹರಿಯುತ್ತವೆ. ಇಲ್ಲಿ ಅಂತ್ಯಗೊಳ್ಳುವ ವಿಷಯಗಳೆಂದರೆ, ಅರಿವಿಲ್ಲದಿರುವಿಕೆ, ಗೊಂದಲಮಯ ಭಾವನೆಗಳು ಮತ್ತು ಬಲವಾದ ಕರ್ಮದ ಪ್ರಚೋದನೆಗಳ ನಿಯಂತ್ರಣದಲ್ಲಿರುವ, ಸೀಮಿತ ದೇಹಗಳು ಮತ್ತು ಸೀಮಿತ ಮನಸ್ಸುಗಳಿಂದ ಕೂಡಿದ ನಮ್ಮ ಅನಿಯಂತ್ರಿತವಾಗಿ ಪುನರಾವರ್ತಿತವಾಗುವ ಪುನರ್ಜನ್ಮ. 

ನಿಜವಾದ ನಿಲುಗಡೆಯ ನಾಲ್ಕು ಅಂಶಗಳು 

ಮೂರನೆಯ ಆರ್ಯ ಸತ್ಯವಾದ ನಿಜವಾದ ನಿಲುಗಡೆಯು ನಾಲ್ಕು ಅಂಶಗಳನ್ನು ಹೊಂದಿದೆ. 

  • ಮೊದಲನೆಯದಾಗಿ, ಇದು ಎಲ್ಲಾ ರೀತಿಯ ದುಃಖಗಳ ಹೊರಹೊಮ್ಮುವಿಕೆಯನ್ನು ಶಾಶ್ವತಗೊಳಿಸುವ ನಿಜವಾದ ಕಾರಣಗಳ ನಿಜವಾದ ನಿಲುಗಡೆಯಾಗಿದೆ. ದುಃಖದ ಯಾವುದೇ ನಿರ್ದಿಷ್ಟ ಪ್ರಸಂಗವು ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ, ಏಕೆಂದರೆ ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತವಾದ ಎಲ್ಲವೂ ಅಶಾಶ್ವತ ಮತ್ತು ಅನಿವಾರ್ಯವಾಗಿ ನಿಲ್ಲುತ್ತದೆ. ಆದಾಗ್ಯೂ, "ನಿಜವಾದ ನಿಲುಗಡೆ" ಎಂದರೆ ಅಂತಹ ಪ್ರಸಂಗಗಳು ಎಂದಿಗೂ ಮರುಕಳಿಸುವುದಿಲ್ಲ. ಮನಸ್ಸಿನ ಸ್ವಭಾವವು ಶುದ್ಧವಾಗಿರುವುದರಿಂದ - ಈ ನಿಜವಾದ ಕಾರಣಗಳಿಂದ ಸಂಪೂರ್ಣವಾಗಿ ಹೊರಗುಳಿದಿರುವ ಅರ್ಥದಲ್ಲಿ - ಈ ಸಂಗತಿಯನ್ನು ಅರ್ಥಮಾಡಿಕೊಳ್ಳುವುದು, ನಿಜವಾದ ದುಃಖಗಳ ಹೊರಹೊಮ್ಮುವಿಕೆಯನ್ನು ನಿವಾರಿಸಲು ಯಾವುದೇ ಮಾರ್ಗವಿಲ್ಲ ಎಂಬ ತಪ್ಪು ಕಲ್ಪನೆಯನ್ನು ವಿರೋಧಿಸುತ್ತದೆ. 
  • ಎರಡನೆಯದಾಗಿ, ನಿಜವಾದ ನಿಲುಗಡೆಯು ಶಾಂತಿಯುತ ಸ್ಥಿತಿಯಾಗಿರುತ್ತದೆ, ಏಕೆಂದರೆ ಎಲ್ಲಾ ಗೊಂದಲಮಯ ಮಾನಸಿಕ ಅಂಶಗಳು ಶಾಂತವಾಗುತ್ತವೆ. ಬಲವಾದ ನೋವು ನಿವಾರಕವನ್ನು ತೆಗೆದುಕೊಂಡು ಏನನ್ನೂ ಅನುಭವಿಸದಿರುವಂತೆ, ಕೇಂದ್ರಿಕೃತ ಏಕಾಗ್ರತೆಯ ಆಳವಾದ ಸ್ಥಿತಿಯನ್ನು ಸಾಧಿಸುವುದು, ನಮ್ಮ ಎಲ್ಲಾ ಸಮಸ್ಯೆಗಳ ನಿಜವಾದ ನಿಲುಗಡೆ ಎಂಬ ತಪ್ಪು ಕಲ್ಪನೆಯನ್ನು ಇದು ವಿರೋಧಿಸುತ್ತದೆ. ನಾವು ಎಷ್ಟು ಸಮಯದವರೆಗೆ ನೋವು ಮತ್ತು ದುಃಖರಹಿತ ಸ್ಥಿತಿಗಳಲ್ಲಿದ್ದರೂ, ಅದು ನಮ್ಮ ಸಮಸ್ಯೆಗಳ ನಿಜವಾದ ಕಾರಣಗಳನ್ನು ತೆಗೆದುಹಾಕುವುದಿಲ್ಲ. ಇದು ಕೇವಲ ತಾತ್ಕಾಲಿಕ ವಿರಾಮವಾಗಿರುತ್ತದೆ. ಏಕಾಗ್ರತೆಯು ಕೊನೆಗೊಳ್ಳುತ್ತದೆ, ಮಾದಕತೆ ಕಡಿಮೆಯಾಗುತ್ತದೆ ಮತ್ತು ನಮ್ಮ ಸಮಸ್ಯೆಗಳು ಹಿಂತಿರುಗುತ್ತವೆ. 
  • ಮೂರನೆಯದಾಗಿ, ನಿಜವಾದ ನಿಲುಗಡೆಯು ಒಂದು ಅತ್ಯುನ್ನತ ಸ್ಥಿತಿಯಾಗಿದೆ. ಇದು ಲೌಕಿಕ ಕ್ಷೇತ್ರದಲ್ಲಿನ ಯಾವುದೇ ಸಾಧನೆಗಿಂತಲೂ ಶ್ರೇಷ್ಠವಾಗಿರುತ್ತದೆ. ನಾವು ಸೃಷ್ಟಿಸುವ ಮತ್ತು ತಪ್ಪಿಸಿಕೊಳ್ಳುವ ಕಾಲ್ಪನಿಕ ಜಗತ್ತು ಎಷ್ಟೇ ವಿಲಕ್ಷಣವಾಗಿದ್ದರೂ, ಅಲ್ಲಿ ಅಡಗಿಕೊಳ್ಳುವ ಮೂಲಕ ನಾವು ನಿಜವಾದ ದುಃಖಗಳು ಮತ್ತು ಅವುಗಳ ನಿಜವಾದ ಕಾರಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. "ನೈಜ ಪ್ರಪಂಚ" ಎಂದು ಕರೆಯಲ್ಪಡುವ ಸ್ಥಳದಲ್ಲಿ ನಮ್ಮ ಸಮಸ್ಯೆಗಳು ನಿವಾರಣೆಯಾಗಿರುವುದಿಲ್ಲ. 
  • ಕೊನೆಯದಾಗಿ, ನಿಜವಾದ ನಿಲುಗಡೆಯು ಎಲ್ಲಾ ನಿಜವಾದ ದುಃಖಗಳು ಮತ್ತು ಅವುಗಳ ನಿಜವಾದ ಕಾರಣಗಳಿಂದ ಒಂದು ನಿರ್ದಿಷ್ಟ ಹೊರಹೊಮ್ಮುವಿಕೆಯಾಗಿರುತ್ತದೆ, ಕೇವಲ ಭಾಗಶಃ ಅಥವಾ ತಾತ್ಕಾಲಿಕ ಹೊರಹೊಮ್ಮುವಿಕೆಯಿಂದಲ್ಲ. ಈ ಹೊರಹೊಮ್ಮುವಿಕೆಯು, ಹಂತ-ಹಂತವಾಗಿ ಸಂಭವಿಸುತ್ತದೆಯಾದರೂ - ಏಕೆಂದರೆ ನಾವು, ಇತರರು ಮತ್ತು ಎಲ್ಲವೂ ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಬಗ್ಗೆ ಅರಿವಿಲ್ಲದಿರುವುದು ಮತ್ತು ತಪ್ಪು ಕಲ್ಪನೆಗಳ ಅಭ್ಯಾಸಗಳು ಮತ್ತು ಪ್ರವೃತ್ತಿಗಳಾಗಿ ಆಳವಾಗಿ ಬೇರೂರಿವೆ - ಅವು ಎಂದಿಗೂ ಮರುಕಳಿಸದಂತೆ ಸಂಪೂರ್ಣ ತೆಗೆದುಹಾಕುವುದು ಸಾಧ್ಯವಿದೆ. ಏಕೆಂದರೆ ಅವು ಮನಸ್ಸಿನ ಸ್ವಭಾವದ ಭಾಗಗಳಲ್ಲ. ಅವು ಕ್ಷಣಿಕ ಕಳಂಕಗಳಾಗಿವೆ ಏಕೆಂದರೆ ಮನಸ್ಸು ಸ್ವಭಾವತಃ ಶುದ್ಧವಾಗಿರುತ್ತದೆ. 

ಸಾರಾಂಶ 

ನಮ್ಮ ನಿಜವಾದ ದುಃಖಗಳನ್ನು ಶಾಶ್ವತಗೊಳಿಸುವ ನಿಜವಾದ ಕಾರಣಗಳಿಂದ ನಮ್ಮನ್ನು ಶಾಶ್ವತವಾಗಿ ಮುಕ್ತಗೊಳಿಸಲು ಸಾಧ್ಯವಾದಾಗ, ನಾವು ಅವುಗಳನ್ನು ಕಡಿಮೆ ಮಾಡಲು ಅಥವಾ ತಾತ್ಕಾಲಿಕವಾಗಿ ನಿಗ್ರಹಿಸಲು ಮಾತ್ರ ಏಕೆ ಒಪ್ಪಿಕೊಳ್ಳುತ್ತೇವೆ? ಹೌದು, ಅವುಗಳನ್ನು ಶಾಶ್ವತವಾಗಿ ನಿವಾರಿಸಲು ಕೆಲಸ ಮಾಡುವಾಗ, ನಾವು ಅವುಗಳ ಆವರ್ತನ ಮತ್ತು ತೀವ್ರತೆಯನ್ನು ಹಂತಹಂತವಾಗಿ ಕಡಿಮೆ ಮಾಡಬೇಕಾಗುತ್ತದೆ, ಆದರೆ ಬುದ್ಧನು ನಾವೆಲ್ಲರೂ ಅವುಗಳ ನಿಜವಾದ ನಿಲುಗಡೆಯನ್ನು ಪಡೆಯಬಹುದು ಎಂದು ಸೂಚಿಸಿದರು. ಹಾಗಿದ್ದಲ್ಲಿ ನಮ್ಮ ಗುರಿಗೆ ಏಕೆ ಕಡಿವಾಣವಿರಿಸಬೇಕು?

Top