ಸಂತೋಷ ಮತ್ತು ಅಸಂತೋಷದ ಏರಿಳಿತಗಳು
ನಾವು ಎದುರಿಸುವ ಹಲವಾರು ರೀತಿಯ ಸಮಸ್ಯೆಗಳು ಮತ್ತು ಸಂಕಟಗಳಿವೆ. ಜೀವನವು ನಿರಾಶಾದಾಯಕವಾಗಿರಬಹುದು ಮತ್ತು ಒತ್ತಡದಿಂದ ಕೂಡಿರಬಹುದು. ನಮಗಾಗಿ ಸಂತೋಷದ ಜೀವನವನ್ನು ಸೃಷ್ಟಿಸಲು ನಾವು ಶ್ರಮಿಸುತ್ತೇವೆ, ಆದರೆ ಆಗಾಗ್ಗೆ ವಿಷಯಗಳು ನಾವು ನಿರೀಕ್ಷಿಸಿದ ರೀತಿಯಲ್ಲಿ ನಡೆಯುವುದಿಲ್ಲ. ನಮ್ಮ ಸಂಬಂಧಗಳು ಹದಗೆಟ್ಟುವುದು, ಜನರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವುದು, ಅನಾರೋಗ್ಯದಿಂದ ಬಳಲುವುದು, ನಮ್ಮ ಕೆಲಸವನ್ನು ಕಳೆದುಕೊಳ್ಳುವುದು ಇತ್ಯಾದಿಯಂತಹ ನಾವು ಎಂದಿಗೂ ಬಯಸದ ವಿಷಯಗಳು ಸಂಭವಿಸುತ್ತವೆ. ಇವುಗಳನ್ನು ತಪ್ಪಿಸಲು ನಾವು ಎಷ್ಟೇ ಪ್ರಯತ್ನಿಸಿದರೂ ಅವು ಬಂದೇ ಬರುತ್ತವೆ. ಆಗಾಗ್ಗೆ, ನಾವು ಅವುಗಳಿಂದ ಖಿನ್ನತೆಗೆ ಒಳಗಾಗುತ್ತೇವೆ ಅಥವಾ ಅದನ್ನೆಲ್ಲ ನಿರ್ಲಕ್ಷಿಸಲು ಪ್ರಯತ್ನಿಸುತ್ತೇವೆ, ಆದರೆ ಸಾಮಾನ್ಯವಾಗಿ ಅದರಿಂದ ವಿಷಯಗಳು ಇನ್ನಷ್ಟು ಹದಗೆಡುತ್ತವೆ. ನಾವು ಇನ್ನಷ್ಟು ಅತೃಪ್ತರಾಗುತ್ತೇವೆ.
ನಾವು ಸ್ವಲ್ಪ ಸಂತೋಷವನ್ನು ಅನುಭವಿಸುವಲ್ಲಿ ಯಶಸ್ವಿಯಾದಾಗಲೂ, ಆ ಸಂತೋಷದಲ್ಲಿ ಒಂದು ಸಮಸ್ಯೆ ಇರುತ್ತದೆ - ಅದು ಶಾಶ್ವತವಾಗಿರುವುದಿಲ್ಲ. ಅದು ನಮ್ಮನ್ನು ಎಂದಿಗೂ ತೃಪ್ತಿಪಡಿಸುವುದಿಲ್ಲ ಮತ್ತು ನಾವು ಇನ್ನೂ ಹೆಚ್ಚಿನದನ್ನು ಬಯಸುತ್ತೇವೆ. ವಾಸ್ತವದಲ್ಲಿ, ನಾವು ಈ "ಇನ್ನಷ್ಟು" ಎಂಬುದನ್ನು ಬೆನ್ನಟ್ಟಿ ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ನಾವು ಸಾಮಾಜಿಕ ಜಾಲತಾಣವೊಂದರಲ್ಲಿ ನಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡುವಾಗ ನಮ್ಮ ಮನೋಭಾವದ ಬಗ್ಗೆ ಯೋಚಿಸಿ. ಪ್ರತಿ ಬಾರಿಯೂ ನಮಗೆ ಸಂತೋಷದ ಡೋಪಮೈನ್ನಿಂದ ಭರಿತವಾದ "ಲೈಕ್" ಸಿಕ್ಕಾಗ, ಅದು ಎಷ್ಟು ಕಾಲ ಉಳಿಯುತ್ತದೆ? ನಮಗೆ ಇನ್ನೂ ಹೆಚ್ಚಿನ "ಲೈಕ್" ಬಂದಿವೆಯೇ ಎಂದು ನಾವು ಎಷ್ಟು ಬಾರಿ ಪರಿಶೀಲಿಸುತ್ತೇವೆ? ಮತ್ತು ಹೆಚ್ಚು ಇಲ್ಲದಿರುವಾಗ ನಮಗೆ ಎಷ್ಟು ಬೇಸರವಾಗುತ್ತದೆ? ಅದು ದುಃಖ, ಅಲ್ಲವೇ?
ನಮ್ಮ ಸೀಮಿತ ದೇಹಗಳಿಂದ ನಿರೂಪಿಸಲ್ಪಟ್ಟ ನಿಜವಾದ ದುಃಖದ ನಾಲ್ಕು ಅಂಶಗಳು
ಬುದ್ಧನು ನಮ್ಮ ಸೀಮಿತ ದೇಹಗಳ ನಾಲ್ಕು ಅಂಶಗಳೊಂದಿಗೆ ನಿಜವಾದ ದುಃಖವನ್ನು ಉದಾಹರಣೆಯಾಗಿ ತೋರಿಸಿದನು.
- ಮೊದಲನೆಯದಾಗಿ, ಅವು ಅಶಾಶ್ವತ. ಕೆಲವೊಮ್ಮೆ ನಾವು ಆರೋಗ್ಯಕರವಾಗಿರುತ್ತೇವೆ ಮತ್ತು ನಾವು ಒಳ್ಳೆಯದನ್ನು ಅನುಭವಿಸುತ್ತೇವೆ, ಆದರೆ ಚಿಕ್ಕ-ಚಿಕ್ಕ ವಿಷಯವು ನಮ್ಮ ದೇಹದ ಸಮತೋಲನವನ್ನು ಕ್ಷೋಭೆಗೊಳಿಸಬಹುದು, ಮತ್ತು ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ ಮತ್ತು ಅತ್ಯಂತ ಬೇಸರಗೊಳ್ಳುತ್ತೇವೆ. ನಮ್ಮ ದೇಹಗಳು ಎಷ್ಟು ದುರ್ಬಲವಾಗಿವೆ ಎಂಬುದನ್ನು ನೋಡಿ - ಸಣ್ಣ ವಿಷಯವು ಅದನ್ನು ಘಾಸಿಗೊಳಿಸಬಹುದು ಮತ್ತು ನೋವುಂಟುಮಾಡಬಹುದು. ಇದರ ಆಧಾರವೆಂದರೆ ಪ್ರತಿ ಕ್ಷಣವು, ನಮ್ಮನ್ನು ನಮ್ಮ ಸಾವಿನ ಹತ್ತಿರ ಕರೆದೊಯ್ಯುತ್ತದೆ. ನಾವು ನಮ್ಮ ದೇಹವನ್ನು ಶಾಶ್ವತವಾಗಿ ಆರೋಗ್ಯಕರವಾಗಿ ಮತ್ತು ಬಲವಾಗಿ ಇರಿಸಿಕೊಳ್ಳಬಹುದು ಎಂದು ನಾವು ಊಹಿಸುತ್ತೇವೆ ಮತ್ತು ನಮಗೆ ವಯಸ್ಸಾದಾಗಲೂ ಸಹ ನಾವು ಇದೇ ರೀತಿಯಾಗಿ ತಿನ್ನಬಹುದು ಮತ್ತು ನಾವು ಚಿಕ್ಕವರಾಗಿದ್ದಾಗ ಮಾಡುವ ಕೆಲಸಗಳನ್ನು ಮಾಡಬಹುದು ಎಂದು ಊಹಿಸುತ್ತೇವೆ. ಆದರೆ ನಾವು ನಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ; ಯೌವನದಿಂದಿರಲು ಇರುವ ನಮ್ಮ ಅಂತ್ಯವಿಲ್ಲದ ಹೋರಾಟವು ನಮಗೆ ಚಿಂತೆ ಮತ್ತು ಒತ್ತಡವನ್ನು ಉಂಟುಮಾಡುತ್ತದೆ.
- ಎರಡನೆಯದಾಗಿ, ನಮ್ಮ ದೇಹಗಳು ಸ್ವತಃ ಸಮಸ್ಯಾತ್ಮಕವಾಗಿವೆ. ನಮ್ಮ ದೇಹವನ್ನು ಆಕರ್ಷಕವಾಗಿಸಲು ಸುಗಂಧ ದ್ರವ್ಯ ಮತ್ತು ಮೇಕಪ್ ಹಚ್ಚಿಕೊಂಡರೆ ಅಥವಾ ಹೆಚ್ಚಿನ ಸ್ನಾಯುಗಳನ್ನು ಬೆಳೆಸಿಕೊಂಡರೆ ನಾವು ಸಂತೋಷವಾಗಿರುತ್ತೇವೆ ಎಂದು ನಾವು ಭಾವಿಸಬಹುದು. ಆದರೆ ನಾವು ಎಷ್ಟೇ ಸುಂದರವಾಗಿ ಕಾಣಲು ಪ್ರಯತ್ನಿಸಿದರೂ, ನಾವು ಸುಂದರವಾಗಿ ಕಾಣುತ್ತಿಲ್ಲ ಅಥವಾ ನಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ನಾವು ಇನ್ನೂ ಹೆಚ್ಚಾಗಿ ಚಿಂತಿಸುತ್ತೇವೆ. ನಾವು ಎಷ್ಟೇ ಮೇಕಪ್ ಹಚ್ಚಿಕೊಂಡರೂ ಅಥವಾ ಸ್ನಾಯುಗಳನ್ನು ಬೆಳೆಸಿಕೊಂಡರೂ, ನಾವು ಎಷ್ಟೇ ಆರೋಗ್ಯಕರ ಆಹಾರವನ್ನು ಸೇವಿಸಿದರೂ, ನಮ್ಮ ದೇಹದ ಸಮಸ್ಯೆಯೆಂದರೆ ನಾವು ಇನ್ನೂ ಅನಾರೋಗ್ಯಕ್ಕೆ ಒಳಗಾಗುತ್ತೇವೆ, ನಮಗೆ ಇನ್ನೂ ವಯಸ್ಸಾಗುತ್ತೇವೆ ಮತ್ತು ನಾವು ಇನ್ನೂ ಅಪಘಾತಕ್ಕೊಳಗಾಗಬಹುದು ಮತ್ತು ಗಾಯಗೊಳ್ಳಬಹುದು.
- ಮೂರನೆಯದಾಗಿ, ನಾವು ನಮ್ಮ ದೇಹವನ್ನು ತೊಳೆಯದಿದ್ದರೆ ಅದು ದುರ್ವಾಸನೆ ಬೀರುತ್ತದೆ, ನಾವು ಹಲ್ಲುಜ್ಜದಿದ್ದರೆ ನಮ್ಮ ಉಸಿರು ದುರ್ವಾಸನೆ ಬೀರುತ್ತದೆ ಮತ್ತು ನಾವು ಹೊರಹಾಕುವ ಮೂತ್ರ ಮತ್ತು ಮಲವು ದುರ್ವಾಸನೆ ಬೀರುತ್ತದೆ. ನಾವು ಸ್ವಲ್ಪ ಅಗಿದ ಆಹಾರವನ್ನು ಉಗುಳಿ ಯಾರಿಗಾದರೂ ನೀಡಿದರೆ, ಅದು ಶುದ್ಧ ಮತ್ತು ತಿನ್ನಲು ಯೋಗ್ಯವೆಂದು ಯಾರಾದರು ಪರಿಗಣಿಸುತ್ತಾರೆಯೇ? ಇಲ್ಲಿನ ಸಮಸ್ಯೆ ಏನೆಂದರೆ, ನಾವು "ನಾನು" ಎಂದು ಕರೆಯಲ್ಪಡುವ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ಘಟಕಗಳಲ್ಲ, ನಮ್ಮ ದೇಹದಿಂದ ತಮ್ಮನ್ನು ಬೇರ್ಪಡಿಸಿಕೊಂಡು "ಸುಂದರ ದೇಹ" ಎಂಬ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸಲಾಗುವುದಿಲ್ಲ. ಈ ದೇಹಗಳ ನ್ಯೂನತೆಗಳ ಹೊರತಾಗಿಯೂ ನಾವು ಅವುಗಳಲ್ಲೇ ಸಿಲುಕಿಕೊಂಡಿದ್ದೇವೆ ಮತ್ತು ಅವುಗಳನ್ನು ನಾವು ನೋಡಿಕೊಳ್ಳಬೇಕು ಮತ್ತು ದುಃಖವನ್ನು ನಿವಾರಿಸಲು ಮತ್ತು ಇತರರಿಗೆ ಸಹಾಯ ಮಾಡುವ ನಮ್ಮ ಪ್ರಯತ್ನಗಳಲ್ಲಿ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.
- ನಾಲ್ಕನೆಯದಾಗಿ, ನಿಜ ಜೀವನದಲ್ಲಿ, ನಮ್ಮ ದೇಹಗಳನ್ನು ಹೊರತುಪಡಿಸಿ ಇತರರು ನಮ್ಮನ್ನು ಬೇರೆ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ವೀಡಿಯೊ ಗೇಮ್‌ನಲ್ಲಿ ನಮ್ಮನ್ನು ನಾವು ಆನ್‌ಲೈನ್ ಅವತಾರಗಳನ್ನಾಗಿ ರಚಿಸಬಹುದು, ಆದರೆ ಯಾರಾದರೂ ನಮ್ಮನ್ನು "ನೈಜ ಜಗತ್ತಿನಲ್ಲಿ" ಭೇಟಿಯಾದಾಗ, ಅವರು ನಮ್ಮ ದೇಹಗಳನ್ನು, ಅದು ಇರುವ ಹಾಗೆಯೇ ನೋಡುತ್ತಾರೆ. ನಾವು 60 ವರ್ಷ ವಯಸ್ಸಿನವರಾಗಿದ್ದಾಗ, ನಾವು 20 ವರ್ಷ ವಯಸ್ಸಿನವರಂತೆ ಕಾಣುತ್ತೇವೆ ಎಂದು ನಮ್ಮ ಮನಸ್ಸಿನಲ್ಲಿ ಊಹಿಸಿಕೊಂಡರೂ, ಉಳಿದವರು ನಮ್ಮನ್ನು ನೋಡಿದಾಗ ಅವರು 60 ವರ್ಷ ವಯಸ್ಸಿನ ದೇಹವನ್ನೇ ನೋಡುತ್ತಾರೆ. ನಾವು ಅದನ್ನು ಅರ್ಥಮಾಡಿಕೊಳ್ಳದಿದ್ದರೆ ಮತ್ತು ಒಪ್ಪಿಕೊಳ್ಳದಿದ್ದರೆ, ನಾವು ನಮ್ಮನ್ನು ಮೂರ್ಖರನ್ನಾಗಿ ಮಾಡಿಕೊಳ್ಳುತ್ತಿದ್ದೇವೆ ಮತ್ತು ವಯಸ್ಸಿಗೆ ಅನುಚಿತ ರೀತಿಯಲ್ಲಿ ವರ್ತಿಸುವ ಮೂಲಕ ಸಮಸ್ಯೆಗಳನ್ನು ಉಂಟುಮಾಡಬಹುದು.
ಸಾರಾಂಶ
ನಮ್ಮ ಸೀಮಿತ ದೇಹಗಳು ನಿಜವಾದ ದುಃಖದ ಉದಾಹರಣೆಗಳಾಗಿವೆ, ಅವುಗಳು ಅಶಾಶ್ವತ, ಸಮಸ್ಯಾತ್ಮಕ, ನಾವು ನಮ್ಮನ್ನು ಅವುಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಿಲ್ಲ, ಮತ್ತು ನಾವು ಇಷ್ಟಪಡಲಿ ಇಲ್ಲದಿರಲಿ, ಇತರರು ನಮ್ಮನ್ನು ಕಾಣುವ ರೀತಿಯಲ್ಲೇ ಅವು ಅಸ್ತಿತ್ವದಲ್ಲಿರುತ್ತವೆ. ಆ ರೀತಿಯ ದೇಹವನ್ನು ಹೊಂದಿರುವುದೇ ಸಾಕಷ್ಟು ಸಮಸ್ಯಾತ್ಮಕವಾಗಿದೆ, ಆದರೆ ಬುದ್ಧ ತೋರಿಸಿದ ಮತ್ತು ನಾವು ಗುರುತಿಸಬೇಕಾದ ನಿಜವಾದ ದುಃಖವೆಂದರೆ, ನಾವು ಜನ್ಮತಃ ಜೀವಿತಾವಧಿಯಲ್ಲಿ ಅಂತಹ ದೇಹವನ್ನು ಹೊಂದುವುದನ್ನು ಆಧಾರವಾಗಿಟ್ಟುಕೊಂಡು, ಅದರ ಮೇಲೆ ಅಂತ್ಯವಿಲ್ಲದ, ಮರುಕಳಿಸುವ ಅಸಂತೋಷ ಮತ್ತು ಅತೃಪ್ತಿಕರ ಆನಂದ ಮತ್ತು ಸಂತೋಷವನ್ನು ಅನುಭವಿಸುತ್ತೇವೆ. ನೀವು ನಿಜವಾಗಿಯೂ ಇದನ್ನೇ ಬಯಸುತ್ತೀರೇ?