ಆಧ್ಯಾತ್ಮಿಕ ಗುರಿಯತ್ತ ಕೆಲಸ ಮಾಡುವುದು
ನಾವು ಆಧ್ಯಾತ್ಮಿಕ ಗುರಿಯನ್ನು ಸಾಧಿಸುವ ಎರಡು ಮಾರ್ಗಗಳಿವೆ:
- ನಂಬಿಕೆಯ ಆಧಾರದ ಮೇಲೆ - ಆ ಗುರಿಯನ್ನು ಸಾಧಿಸುವುದು ಸಾಧ್ಯ ಎಂಬ ನಂಬಿಕೆ ನಮಗಿದೆ. ಈ ನಂಬಿಕೆಯ ಆಧಾರದ ಮೇಲೆ ನೀವು ಅದರೆಡೆಗೆ ಕೆಲಸ ಮಾಡುತ್ತೀರಿ, ಮತ್ತು ನಿಮ್ಮ ತರಬೇತಿಯಲ್ಲಿ ನೀವು ಮುಂದುವರಿದಂತೆ, ಈ ಗುರಿಯನ್ನು ಸಾಧಿಸಲು ಸಾಧ್ಯ ಎಂದು ನಿಮಗೆ ಕೊನೆಯಲ್ಲಿ ಮನವರಿಕೆಯಾಗುತ್ತದೆ. ಉದಾಹರಣೆಗೆ, ನಿಮ್ಮ ಗುರಿಯು, ದುಃಖವನ್ನು ಶಾಶ್ವತವಾಗಿ ಜಯಿಸುವುದು ಮತ್ತು ನಿವಾರಿಸುವುದಾಗಿದ್ದು, ಅದು ಸಾಧ್ಯ ಎಂದು ನೀವು ನಂಬಿದರೆ, ನೀವು ಅದಕ್ಕಾಗಿ ಕೆಲಸ ಮಾಡುವಾಗ, ನಿಮ್ಮ ದುಃಖವು ಕ್ಷೀಣಿಸಿದರೆ, ನಿಮ್ಮ ಗುರಿಯನ್ನು ಸಾಧಿಸುವುದು ಸಾಧ್ಯ ಎಂದು ನಿಮಗೆ ಮನವರಿಕೆಯಾಗುತ್ತದೆ. ನಿಮ್ಮ ಪ್ರಗತಿಯ ಭಾಗವಾಗಿ, ನೀವು ಹೆಚ್ಚು ಅಧ್ಯಯನ ಮತ್ತು ಧ್ಯಾನ ಮಾಡುತ್ತೀರಿ, ಮತ್ತು ಇದರ ಮೂಲಕ ಈ ಗುರಿಯನ್ನು ಸಾಧಿಸಬಹುದು ಎಂದು ನೀವು ತಾರ್ಕಿಕವಾಗಿ ಮನವರಿಕೆ ಮಾಡಿಕೊಳ್ಳುತ್ತೀರಿ.
- ಮನವರಿಕೆಯ ಆಧಾರದ ಮೇಲೆ – ಮೊದಲು ನೀವು ಕಾರಣ ಮತ್ತು ತರ್ಕದ ಮೂಲಕ ನಿಮ್ಮ ಗುರಿಯನ್ನು ಸಾಧಿಸಬಹುದು ಎಂದು ಮನವರಿಕೆ ಮಾಡಿಕೊಳ್ಳುತ್ತೀರಿ ಮತ್ತು ನಂತರ ನೀವು ಅದರೆಡೆಗೆ ಕೆಲಸ ಮಾಡುತ್ತೀರಿ.
ಇವನ್ನು ಶಾಸ್ತ್ರೀಯ ಬೌದ್ಧ ಸೂತ್ರದ ವಿಷಯವಾಗಿ ನೋಡುವುದಾದರೆ, ಇವು ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುವ ಎರಡು ವಿಧಾನಗಳ ವಿಷಯದಲ್ಲಿ, ಸಾಮಾನ್ಯವಾಗಿ ಚರ್ಚಿಸಲಾಗುವ ಎರಡು ವಿಧಾನಗಳಾಗಿರುತ್ತವೆ.
ಮೊದಲಿಗೆ, ನಮ್ಮ ಭವಿಷ್ಯದ ಜ್ಞಾನೋದಯವನ್ನೇ ಗುರಿಯಾಗಿಟ್ಟುಕೊಂಡು - ಇದು ಇನ್ನೂ ಸಂಭವಿಸಿಲ್ಲ, ಆದರೆ ಸಂಭವಿಸಬಹುದು - ನಾವು ಸಾಪೇಕ್ಷ ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುತ್ತೇವೆ. ಎಲ್ಲರಿಗೂ ಉಪಕಾರಿಯಾಗಲು ನಾವು ಹೀಗೆ ಮಾಡಲು ಬಯಸುತ್ತೇವೆ, ಏಕೆಂದರೆ ನಾವು ಎಲ್ಲರಿಗೂ ಸಹಾಯ ಮಾಡಬಹುದಾದ ಏಕೈಕ ಮಾರ್ಗವು ಈ ಸ್ಥಿತಿಯನ್ನು ಸಾಧಿಸುವುದಾಗಿರುತ್ತದೆ, ಇಲ್ಲಿ ನಾವು ಕಾರಣ ಮತ್ತು ಪರಿಣಾಮವನ್ನು ಮತ್ತು ಇತರರಿಗೆ ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ. ಇದಲ್ಲದೆ, ಅದನ್ನು ಸಾಧಿಸುವುದು ಸಾಧ್ಯವಿದೆ ಎಂಬ ನಂಬಿಕೆ ನಮಗಿರುತ್ತದೆ.
ನಾವು ಮತ್ತಷ್ಟು ಮುಂದುವರೆದಂತೆ, ನಾವು ಆಳವಾದ ಬೋಧಿಚಿತ್ತಾ ಎಂದು ಕರೆಯಲ್ಪಡುವುದನ್ನು ಅಭಿವೃದ್ಧಿಪಡಿಸುತ್ತೇವೆ, ಇದು ಶೂನ್ಯತೆಯ (ಖಾಲಿತನ) ತಿಳುವಳಿಕೆಯನ್ನು ಸೂಚಿಸುತ್ತದೆ – ಅಂದರೆ ಅಸಾಧ್ಯವಾದ ರೀತಿಯಲ್ಲಿ ವಸ್ತುಗಳು ಅಸ್ತಿತ್ವದಲ್ಲಿರುವುದಿಲ್ಲ. ನಾವು ವಾಸ್ತವವನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಮನಸ್ಸಿನ ಸ್ವಭಾವವು ಕಲ್ಪನೆಯನ್ನು ಪ್ರಕ್ಷೇಪಿಸುವುದಾಗಿರುವುದಿಲ್ಲ, ಬದಲಿಗೆ ವಾಸ್ತವವನ್ನು ಸ್ವತಃ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ನಾವು ಗಮನಿಸುತ್ತೇವೆ. ಅದನ್ನು ಅರ್ಥಮಾಡಿಕೊಳ್ಳುವ ಮೂಲಕ, ನಮ್ಮ ಗುರಿಯನ್ನು ಸಾಧಿಸಬಹುದು ಎಂದು ನಾವು ತಾರ್ಕಿಕವಾಗಿ ಮನವರಿಕೆ ಮಾಡಿಕೊಳ್ಳುತ್ತೇವೆ. ನಮ್ಮ ನಂಬಿಕೆಯು ನಂತರ ಮನವರಿಕೆಯಾಗಿ ಮಾರ್ಪಾಡುತ್ತದೆ.
ಇನ್ನೊಂದು ವಿಧಾನವೆಂದರೆ, ವಾಸ್ತವದ ಈ ತಿಳುವಳಿಕೆಯನ್ನು ಮೊದಲು ಅಭಿವೃದ್ಧಿಪಡಿಸುವುದು, ಅಂದರೆ ಜ್ಞಾನೋದಯವು ಸಾಧ್ಯ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ - ಅಂದರೆ ಆಳವಾದ ಬೋಧಿಚಿತ್ತವು ಮೊದಲು ಬರುತ್ತದೆ. ಇದರ ಆಧಾರದ ಮೇಲೆ, ನಾವು ಜ್ಞಾನೋದಯವನ್ನು ಪಡೆಯಬಹುದು ಎಂಬುದನ್ನು ಮನವರಿಕೆ ಮಾಡಿಕೊಳ್ಳುತ್ತೇವೆ ಮತ್ತು ಈ ಮನವರಿಕೆಯಿಂದಾಗಿ, ನಾವು ಅದನ್ನು ಸಾಧಿಸುವತ್ತ ಕೆಲಸ ಮಾಡುತ್ತೇವೆ. ಈ ಎರಡನೆಯ ವಿಧಾನವು ನಾಗಾರ್ಜುನ, ಎಂಬ ಶ್ರೇಷ್ಠ ಭಾರತೀಯ ಗುರುವಿನ, "ಬೋಧಿಚಿತ್ತದ ವಿವರಣೆ" (ಸಂಸ್ಕೃತ ವಿವರಣಾ) ಎಂಬ ಗ್ರಂಥದಲ್ಲಿ ಕಂಡುಬರುತ್ತದೆ.
ಈ ವಿಧಾನವನ್ನು ನಾವು ನೋಡಿದ ಪದ್ಯದಲ್ಲಿ ಪ್ರಸ್ತುತಪಡಿಸಲಾಗಿದೆ, ಹೇಗೆ ನಾವು ಚತುರಾರ್ಯ ಸತ್ಯಗಳನ್ನು ಎರಡು ಸತ್ಯಗಳಿಂದ ಪಡೆಯುತ್ತೇವೆ ಮತ್ತು ಚತುರಾರ್ಯ ಸತ್ಯಗಳಿಂದ ತ್ರಿರತ್ನಗಳಿಂದ ಪಡೆಯುತ್ತೇವೆ. ಈ ಪ್ರಸ್ತುತಿಯ ಉದ್ದೇಶವು, ‘ವಿಮೋಚನೆ ಮತ್ತು ಜ್ಞಾನೋದಯವು ಸಾಧ್ಯ ಏಕೆಂದರೆ ಅವು ವಾಸ್ತವವನ್ನು ಆಧರಿಸಿವೆ’ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವುದಾಗಿರುತ್ತದೆ.
- ವಿಮೋಚನೆ ಎಂದರೆ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಶಾಶ್ವತವಾಗಿ ಮುಕ್ತವಾಗಿರುವ ಸ್ಥಿತಿ: ಸಂಸಾರದಿಂದ ಸಂಪೂರ್ಣವಾಗಿ ಮುಕ್ತರಾಗುತ್ತೇವೆ, ಇದರಿಂದ ನಾವು ಶಾಶ್ವತವಾಗಿ ದುಃಖ ಮುಕ್ತರಾಗುತ್ತೇವೆ. ವಿಮೋಚನೆಯನ್ನು ಪಡೆದವರು "ಅರ್ಹತ್ಗಳು," ಅಂದರೆ ವಿಮೋಚನೆಗೊಂಡ ಜೀವಿಗಳಾಗಿರುತ್ತಾರೆ.
- ಜ್ಞಾನೋದಯವು, ಎಲ್ಲಾ ಅಸ್ಪಷ್ಟತೆಗಳಿಂದ ಮತ್ತು ಎಲ್ಲಾ ಸೀಮಿತ ಜೀವಿಗಳಿಗೂ ವಿಮೋಚನೆ ಮತ್ತು ಜ್ಞಾನೋದಯವನ್ನು ಪಡೆಯಲು ಸಹಾಯ ಮಾಡುವ ಅತ್ಯಂತ ಪರಿಣಾಮಕಾರಿಯಾದ ಮಾರ್ಗಗಳನ್ನು ಅರ್ಥಮಾಡಿಕೊಳ್ಳುವುದನ್ನು ತಡೆಯುವುದರಿಂದ ಶಾಶ್ವತವಾಗಿ ಮುಕ್ತವಾಗಿರುವ ಸ್ಥಿತಿಯಾಗಿರುತ್ತದೆ. ಪ್ರಬುದ್ಧ ಜೀವಿಗಳನ್ನು "ಬುದ್ಧರು" ಎಂದು ಕರೆಯಲಾಗುತ್ತದೆ.
ಒಮ್ಮೆ ನಾವು, ಇದು ಸಾಧ್ಯವಷ್ಟೇ ಅಲ್ಲ, ನಾವೂ ಸಹ - ಕೇವಲ ಬುದ್ಧ ಶಾಕ್ಯಮುನಿಯಲ್ಲ - ವಿಮೋಚನೆ ಮತ್ತು ಜ್ಞಾನೋದಯವನ್ನು ಸಾಧಿಸಬಹುದು ಎಂದು ಮನವರಿಕೆ ಮಾಡಿಕೊಂಡರೆ, ಅದು ನಮ್ಮ ಆಧ್ಯಾತ್ಮಿಕ ಅಭ್ಯಾಸದಲ್ಲಿ ಹೆಚ್ಚಿನ ಶಕ್ತಿ ಮತ್ತು ಧೃಡತೆಯನ್ನು ನೀಡುತ್ತದೆ. ಆದರೂ, ಅದನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ, ಆದರೆ ಅದು ಸುಲಭ ಎಂದು ಯಾರೂ ಹೇಳಿಲ್ಲ!
ಎರಡು ಸತ್ಯಗಳು
ನಮ್ಮ ಮೊದಲ ಅಧಿವೇಶನದಲ್ಲಿ, ನಾವು ಮೊದಲ ಸಾಲಿನ ಬಗ್ಗೆ ಚರ್ಚಿಸಿದ್ದೇವೆ:
ಎಲ್ಲಾ ವಿಷಯಗಳ ಅಡಿಪಾಯವಾದ, ಎಲ್ಲಾ ವಿಷಯಗಳು ಅನುಸರಿಸುವ ಮಾರ್ಗವಾದ, ಎರಡು ಸತ್ಯಗಳ ಅರ್ಥವನ್ನು ತಿಳಿದುಕೊಳ್ಳುವುದರಿಂದ,
ಇಲ್ಲಿನ ಸಂಪೂರ್ಣ ಚರ್ಚೆಯ ಅಡಿಪಾಯವು ಎರಡು ಸತ್ಯಗಳ ಪ್ರಸ್ತುತಿಯಾಗಿರುತ್ತದೆ, ಇದು ಎಲ್ಲವೂ ಹೇಗೆ ಅಸ್ತಿತ್ವದಲ್ಲಿದೆ ಮತ್ತು ಕಾರ್ಯನಿರ್ವಹಿಸುತ್ತದೆ - ಬೇರೆ ರೀತಿಯಲ್ಲಿ ಹೇಳುವುದಾದರೆ, ಎಲ್ಲಾ ವಿಷಯಗಳು ಬದ್ಧವಾಗಿರುವ ರೀತಿಯ ಪ್ರಸ್ತುತಿಯಾಗಿರುತ್ತದೆ. ಈ ಎರಡು ಸತ್ಯಗಳು, ಎಲ್ಲದರ ಬಗ್ಗೆ, ಮಾನ್ಯವೂ ಮತ್ತು ನಿಜವಾಗಿರುತ್ತದೆ:
- ಸಾಪೇಕ್ಷ ಸತ್ಯ: ಕಾರಣಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿ ವಿಷಯಗಳು ಉದ್ಭವಿಸುತ್ತವೆ. ಹೌದು, ಅವುಗಳ ಭಾಗಗಳು ಮತ್ತು ಅವುಗಳನ್ನು ಉಲ್ಲೇಖಿಸುವ ಪರಿಕಲ್ಪನೆಗಳಂತಹ ವಿಷಯಗಳನ್ನು ಅವಲಂಬಿಸುವ ಇತರ ಮಟ್ಟಗಳಿರುತ್ತವೆ. ಇಲ್ಲಿನ ಮುಖ್ಯ ಅಂಶವೆಂದರೆ, ಅನುಭವದ ಮೇಲೆ, ಕಾರಣ ಮತ್ತು ಪರಿಣಾಮವು, ಕರ್ಮದ ಪ್ರಚೋದನೆಗೆ ಸಂಬಂಧಿಸಿದಂತೆ ನಮ್ಮ ಸಂತೋಷ ಮತ್ತು ಅಸಂತೋಷದ ಅನುಭವದ ವಿಷಯವಾಗಿರುತ್ತದೆ.
- ಆಳವಾದ ಸತ್ಯ: ವಿಷಯಗಳು ಅವಲಂಬಿತವಾಗಿ ಉದ್ಭವಿಸದಂತೆ ನಮಗೆ ಕಂಡರೂ, ಅಸ್ತಿತ್ವದಲ್ಲಿರುವ ಅಸಾಧ್ಯ ಮಾರ್ಗಗಳು ವಂಚಿಸುವ ರೂಪಗಳು ವಾಸ್ತವಕ್ಕೆ ಹೊಂದುವುದಿಲ್ಲ. ನಮ್ಮ ಪ್ರಕ್ಷೇಪಗಳಿಗೆ ಅನುಗುಣವಾಗುವ ವಾಸ್ತವಿಕ ವಾಸ್ತವವು ಇರುವುದೇ ಇಲ್ಲ. ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಸ್ವತಂತ್ರವಾಗಿ ತಮ್ಮದೇ ಆದ ಅಸ್ತಿತ್ವದಲ್ಲಿರುವ ವಿಷಯಗಳು, ಈ ಸಂಪೂರ್ಣ ಅನುಪಸ್ಥಿತಿಯನ್ನು "ಶೂನ್ಯತೆ" ಅಥವಾ "ಖಾಲಿತನ" ಎಂದು ಕರೆಯಲಾಗುತ್ತದೆ.
ಚತುರಾರ್ಯ ಸತ್ಯಗಳು
ಎರಡು ಸತ್ಯಗಳ ಮಾನ್ಯತೆಯ ಆಧಾರದ ಮೇಲೆ, ಬುದ್ಧನಿಗೆ ಚತುರಾರ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ರೂಪಿಸಲು ಸಾಧ್ಯವಾಯಿತು. ಇದನ್ನು ಎರಡನೇ ಸಾಲಿನಲ್ಲಿ ತೋರಿಸಲಾಗಿದೆ:
ನಾಲ್ಕು ಸತ್ಯಗಳ ಮೂಲಕ ನಾವು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ಪ್ರವೇಶಿಸುತ್ತೇವೆಯಾದರೂ, ಅದನ್ನು ಹೇಗೆ ಹಿಮ್ಮೆಟ್ಟಿಸಬಹುದು ಎಂಬುದರ ಬಗ್ಗೆ ನಮಗೆ ಮನವರಿಕೆಯಾಗುತ್ತದೆ.
ಚತುರಾರ್ಯ ಸತ್ಯಗಳನ್ನು ಹೆಚ್ಚು ಅರಿತುಕೊಂಡ ಜೀವಿಗಳು ಸತ್ಯವಾಗಿರುವುದನ್ನು ಗಮನಿಸಿರುತ್ತಾರೆ. ಇದೊಂದು ಕುತೂಹಲಕಾರಿ ವಿಷಯವಾಗಿರುತ್ತದೆ, ಏಕೆಂದರೆ ಇದರರ್ಥ ಕೇವಲ ಬುದ್ಧರು ಈ ಸತ್ಯಗಳನ್ನು ನಿಜವೆಂದು ನೋಡುವುದಲ್ಲದೆ, ಬುದ್ಧತ್ವದ ಮುನ್ನ, ಒಂದು ನಿರ್ದಿಷ್ಟ ಹಂತವನ್ನು ತಲುಪುವುದರಿಂದ ಬಹಳಾ ದೂರವಿರುವವರು ಸಹ ಇದನ್ನು ಒಪ್ಪಿಕೊಳ್ಳುತ್ತಾರೆ. ನಾವು ಶೂನ್ಯತೆಯ ಪರಿಕಲ್ಪನೆಯಿಲ್ಲದ ಅರಿವನ್ನು ಹೊಂದಿರುವಾಗ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಆಳವಾದ ವಾಸ್ತವತೆಯನ್ನು ಹೊಂದಿರುವಾಗ ಇದು ಸಂಭವಿಸುತ್ತದೆ. ಈ ತಿಳುವಳಿಕೆಯು ಅಕ್ಷರಶಃ ನಿಖರವಾಗಿರುತ್ತದೆ ಮತ್ತು ನಿರ್ಣಾಯಕವಾಗಿರುತ್ತದೆ. ಇದು ಪರಿಕಲ್ಪನೆಯಲ್ಲದ ಕಾರಣ, ನಾವು ಅನೇಕ ವರ್ಗಗಳ ಮೂಲಕ ವಿಷಯಗಳನ್ನು ಗ್ರಹಿಸುತ್ತಿಲ್ಲ ಎಂದರ್ಥವಾಗಿರುತ್ತದೆ.
ನಾವು "ನಾಯಿ" ನಂತಹ ವರ್ಗದ ಮೂಲಕ ಯೋಚಿಸಿದಾಗ, ನಿಮ್ಮ ಬಳಿ ನಾಯಿಯನ್ನು ಪ್ರತಿನಿಧಿಸುವ ಒಂದು ವಿಷಯವಿರುತ್ತದೆ. ಈ ಪ್ರಾತಿನಿಧ್ಯವು ಪ್ರತಿ ವ್ಯಕ್ತಿಗೆ ವಿಭಿನ್ನವಾಗಿರಬಹುದು, ಆದರೆ ನಾವು ಬೀದಿಯಲ್ಲಿ ಅಥವಾ ಎಲ್ಲಿಯಾದರೂ ಒಂದು ನಾಯಿಯನ್ನು ನೋಡಿದಾಗ, ಈ ವರ್ಗದ ಮೂಲಕ ನಾವು ಅದನ್ನು ಗ್ರಹಿಸುತ್ತೇವೆ. ನಮ್ಮ ಬಳಿಯಿರುವ ನಾಯಿಯ ಚಿತ್ರದ ಮೂಲಕ – ಒಂದು ನಿರ್ದಿಷ್ಟವಾದ ಚಿತ್ರಣದ ಅಗತ್ಯವಿಲ್ಲ - ನಾವು ನಾಯಿಯ ಗ್ರಹಿಕೆಗೆ ಒಟ್ಟಾರೆಯಾಗಿ ಹೊಂದಿಕೊಳ್ಳುತ್ತೇವೆ. ನಾವು ಕಲ್ಪನಾರಹಿತವಾಗಿ ಏನನ್ನಾದರೂ ಗ್ರಹಿಸಿದಾಗ, ಅದು ಯಾವುದೇ ವರ್ಗ ಅಥವಾ ಅದನ್ನು ಪ್ರತಿನಿಧಿಸುವ ಯಾವುದಕ್ಕೂ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿಯೇ ಇದನ್ನು "ಬೇರ್ ಕಾಗ್ನಿಷನ್" ಎಂದು ಕರೆಯಲಾಗುತ್ತದೆ. ನೀವು ವಿಷಯಗಳನ್ನು ಒಂದು ಚೌಕಟ್ಟಿನಲ್ಲಿ ಇರಿಸದೇ ಅವುಗಳನ್ನು ಗ್ರಹಿಸುತ್ತೀರಿ.
ಹೆಚ್ಚು ಅರಿತುಕೊಂಡ ಜೀವಿಗಳು ಅಥವಾ ಸಂಸ್ಕೃತದಲ್ಲಿ ಆರ್ಯರು ಎಂದು ಕರೆಯಲ್ಪಡುವರು, "ಈಗ ನಾನು ವಾಸ್ತವವನ್ನು ನೋಡುತ್ತಿದ್ದೇನೆ" ಎಂದು "ವಾಸ್ತವ"ವನ್ನು, ವಾಸ್ತವ ಎಂಬ ಚೌಕಟ್ಟಿನಲ್ಲಿ ಇರಿಸದೆಯೇ ಗ್ರಹಿಸುತ್ತಾರೆ. ಅವರು ವಾಸ್ತವವನ್ನು ಯಾವುದೇ ಚೌಕಟ್ಟಿನಲ್ಲಿ ಅಥವಾ ವರ್ಗದಲ್ಲಿ ಇರಿಸದೆಯೇ, ಅವರು ಗ್ರಹಿಸುತ್ತಿರುವುದನ್ನು ಸಂಪೂರ್ಣವಾಗಿ, ನಿಖರವಾಗಿ ಮತ್ತು ನಿರ್ಣಾಯಕವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದು ಅಷ್ಟು ಸುಲಭವಾಗಿರುವುದಿಲ್ಲ. ನಾವು ಮೌಖಿಕವಾಗಿ, ವಿಷಯಗಳನ್ನು ಇರಿಸುವ ಚೌಕಟ್ಟಿನ ಬಗ್ಗೆ ಮಾತನಾಡದಿದ್ದರೂ, ಇದು ಎಲ್ಲವನ್ನೂ ಗ್ರಹಿಸುವ ಸಾಮಾನ್ಯ ವಿಧಾನವಾಗಿರುತ್ತದೆ. ಈ ವಿಷಯಗಳು ಬೇರೆಲ್ಲದರಿಂದ ಪ್ರತ್ಯೇಕವಾಗಿ, ತಮ್ಮ ಪಾಡಿಗೆ ತಾವೇ ಚೌಕಟ್ಟಿನಲ್ಲಿ ಇರುವಂತೆ ನಾವು ಅವನ್ನು ಚೌಕಟ್ಟಿನಲ್ಲಿ ಇರಿಸುತ್ತೇವೆ.
ಇಲ್ಲಿ ಪರಿಕಲ್ಪನಾ ಅರಿವಿನ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ. ಈ ರೀತಿಯಲ್ಲಿ ವಾಸ್ತವವನ್ನು ಗ್ರಹಿಸಲು ನೀವು ಬುದ್ಧರೇ ಆಗಿರಬೇಕಾಗಿಲ್ಲ ಎಂಬುದು ಮುಖ್ಯವಾದ ವಿಷಯವಾಗಿರುತ್ತದೆ. ನಾವು ವಾಸ್ತವವನ್ನು ಕಲ್ಪನಾರಹಿತವಾಗಿ ಗ್ರಹಿಸಿದಾಗ, ನಾವು ಚತುರಾರ್ಯ ಸತ್ಯಗಳನ್ನು ನಿಜವೆಂದು ನೋಡುತ್ತೇವೆ ಮತ್ತು ಅವುಗಳ ಬಗ್ಗೆ ನಾವು ಧೃಡವಾಗಿರುತ್ತೇವೆ.
ಈ ನಾಲ್ಕು ಸತ್ಯಗಳು ಯಾವುವು? ಮೊದಲನೆಯದು ದುಃಖವಾಗಿರುತ್ತದೆ. ಎರಡನೆಯದು ದುಃಖದ ಕಾರಣವಾಗಿರುತ್ತದೆ. ಮೂರನೆಯದು ದುಃಖ ಮತ್ತು ಅದರ ಕಾರಣಗಳನ್ನು ನಿಲ್ಲಿಸುವುದಾಗಿರುತ್ತದೆ. ನಾಲ್ಕನೆಯದು ಮಾರ್ಗ ಅಥವಾ ತಿಳುವಳಿಕೆಯು ದುಃಖವನ್ನು ನಿಲ್ಲಿಸಲು ಕಾರಣವಾಗುತ್ತದೆ. ಈ ಸತ್ಯಗಳನ್ನು "ನಿಜವಾದ ದುಃಖ", "ನಿಜವಾದ ಕಾರಣ" ಮತ್ತು ಮುಂತಾದವುಗಳೆಂದು ಕರೆಯಲಾಗುತ್ತದೆ.
ಇದರ ಸಂಪೂರ್ಣ ಚರ್ಚೆಯು ಪುನರ್ಜನ್ಮದ ವಿಷಯವಾಗಿ ಇರುತ್ತದೆ - ಆರಂಭವಿಲ್ಲದ ಮತ್ತು ಅಂತ್ಯವಿಲ್ಲದ ಮಾನಸಿಕ ನಿರಂತರತೆಗಳು. ಪುನರ್ಜನ್ಮವೇ ಅಡಿಪಾಯವಾಗಿರುತ್ತದೆ. ನಾವು ವಿಷಯಗಳ, ಕ್ಷಣದಿಂದ ಕ್ಷಣದ ಪ್ರತ್ಯೇಕವಾದ ಅನುಭವಗಳ ಬಗ್ಗೆ ಮಾತನಾಡಿದ್ದೇವೆ, ಅವು ಕಾರಣ ಮತ್ತು ಪರಿಣಾಮದ ವಿಷಯವಾಗಿ ಕಾರ್ಯನಿರ್ವಹಿಸಿದರೆ, ಅವು ಶೂನ್ಯದಿಂದ ಪ್ರಾರಂಭವಾಗುವ ಶುದ್ಧ ಆರಂಭವನ್ನು ಹೊಂದಿರಲು ಸಾಧ್ಯವಿಲ್ಲ. ಅಂತೆಯೇ, ಶೂನ್ಯವಾಗುವ ಕೊನೆಯ ಕ್ಷಣವೂ ಇರಲಾಗುವುದಿಲ್ಲ. ಇದು ಅಸಾಧ್ಯ. ಕಾರಣ ಮತ್ತು ಪರಿಣಾಮದ ಮೂಲಭೂತ ಸತ್ಯದಿಂದ, ವೈಯಕ್ತಿಕ ಮಾನಸಿಕ ನಿರಂತರತೆಗೆ ಯಾವುದೇ ಆರಂಭ ಅಥವಾ ಅಂತ್ಯವಿಲ್ಲ ಎಂದು ನಾವು ತೀರ್ಮಾನಿಸಬೇಕಾಗಿದೆ, ಆದ್ದರಿಂದ ಪುನರ್ಜನ್ಮವು ನಿಜವಾಗಿರಲೇಬೇಕು.
ನಿಜವಾದ ದುಃಖ
ನಿಜವಾದ ದುಃಖಕ್ಕೆ ಮೂರು ಅಂಶಗಳಿವೆ:
- ಮೊದಲನೆಯದು ನಮ್ಮ ಸಾಮಾನ್ಯ ಅಸಂತೋಷವಾಗಿರುತ್ತದೆ, ಇದನ್ನು ನಾವು ದುಃಖದ ದುಃಖ ಎಂದು ಕರೆಯುತ್ತೇವೆ. ನಾವೆಲ್ಲರೂ ದುಃಖವನ್ನು ಅನುಭವಿಸಿದ್ದೇವೆ. ಅಸಂತೋಷವು ನೋವೇ ಆಗಿರಬೇಕೆಂದೇನೂ ಇಲ್ಲ. ಸಂತೋಷ ಮತ್ತು ಅಸಂತೋಷ ಮತ್ತು ಆನಂದ ಮತ್ತು ನೋವು ಎರಡು ವಿಭಿನ್ನ ವಿಷಯಗಳಾಗಿರುತ್ತವೆ. ಆನಂದ ಮತ್ತು ನೋವು ದೈಹಿಕ ಸಂವೇದನೆಗಳಾಗಿರುತ್ತವೆ, ಆದರೆ ಸಂತೋಷ ಮತ್ತು ಅಸಂತೋಷವು ಮನಸ್ಥಿತಿಗಳಾಗಿರುತ್ತವೆ. ಒಬ್ಬರು ನೋವನ್ನು ಅನುಭವಿಸಬಹುದು ಆದರೆ ಅವರು ಅದರ ಬಗ್ಗೆ ಸಂತೋಷವಾಗಿರಬಹುದು, ಉದಾಹರಣೆಗೆ ಒಂದು ಅತ್ಯುತ್ತಮವಾದ ದೈಹಿಕ ವ್ಯಾಯಾಮ ನಡೆಸಿದ ನಂತರ. ಒಬ್ಬರು ಸಂತೋಷವನ್ನು ಅನುಭವಿಸಬಹುದು ಆದರೆ ಅವರು ಅದರ ಬಗ್ಗೆ ಬಹಳಾ ಅಸಂತೋಷವಾಗಿರಬಹುದು, ಉದಾಹರಣೆಗೆ ಬಲಾತ್ಕಾರವಾಗಿ ಲೈಂಗಿಕ ಕ್ರಿಯೆಯಲ್ಲಿ ಭಾಗವಾಹಿಸುವುದು. ಹೀಗೆ ಇವೆರಡು ವಿಭಿನ್ನ ಅಸ್ಥಿರತೆಗಳಾಗಿರುತ್ತವೆ. ಇಲ್ಲಿ ನಾವು ಅಸಂತೋಷದ ಬಗ್ಗೆ ಮಾತನಾಡುತ್ತಿದ್ದೇವೆ, ಇದು ನಮಗೆಲ್ಲರಿಗೂ ತಿಳಿದಿದೆ, ಮತ್ತು ಇದನ್ನು ಎಲ್ಲಾ ರೀತಿಯ ದುಃಖದಿಂದ ತುಂಬಿದ ಮರುಜನ್ಮದ ಹದಗೆಟ್ಟಿದ ಪ್ರಕಾರಗಳಲ್ಲಿ ವಿವರಿಸಲಾಗಿದೆ.
- ಎರಡನೆಯ ವಿಧವನ್ನು ಬದಲಾವಣೆಯ ದುಃಖ ಎಂದು ಕರೆಯಲಾಗುತ್ತದೆ ಮತ್ತು ಇದು ನಮ್ಮ ಸಾಮಾನ್ಯ ಸಂತೋಷವನ್ನು ಸೂಚಿಸುತ್ತದೆ. ನಮ್ಮ ಸಾಮಾನ್ಯ ಸಂತೋಷದ ಸಮಸ್ಯೆಯೆಂದರೆ ಅದು ಎಂದಿಗೂ ಉಳಿಯುವುದಿಲ್ಲ ಅಥವಾ ನಮ್ಮನ್ನು ತೃಪ್ತಿಪಡಿಸುವುದಿಲ್ಲ. ನಾವು ಯಾವಾಗಲೂ ಹೆಚ್ಚಿನದನ್ನು ಬಯಸುತ್ತೇವೆ, ಆದರೆ ನಮ್ಮಲ್ಲಿ ಹೆಚ್ಚಿದ್ದರೆ, ನಾವು ಕಿರಿಕಿರಿಗೊಳ್ಳುತ್ತೇವೆ ಮತ್ತು ಅದು ಅಸಂತೋಷವಾಗುತ್ತದೆ. ಒಂದು ಸುಲಭವಾದ ಉದಾಹರಣೆಯೆಂದರೆ ನಿಮ್ಮ ನೆಚ್ಚಿನ ಆಹಾರವನ್ನು ಅತಿಯಾಗಿ ಸೇವಿಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಆಗ ನೀವು ಇನ್ನು ಹೆಚ್ಚು ತಿನ್ನಲು ಬಯಸುವುದಿಲ್ಲ, ಆದ್ದರಿಂದ ನೀವು ಅತೃಪ್ತಿಗೊಳ್ಳುತ್ತೀರಿ. ಆದ್ದರಿಂದ ಇಲ್ಲಿನ ಸಮಸ್ಯೆಯೆಂದರೆ ನಮ್ಮ ಸಾಮಾನ್ಯ ಸಂತೋಷವು ತೃಪ್ತಿಕರವಾಗಿರುವುದಿಲ್ಲ ಅಥವಾ ಸ್ಥಿರವಾಗಿರುವುದಿಲ್ಲ. ನಮ್ಮ ಸಾಮಾನ್ಯ ಜೀವನವು ಮೇಲಕ್ಕೆ ಕೆಳಕ್ಕೆ ಹೋಗುತ್ತಿರುತ್ತದೆ, ಮತ್ತು ಕೆಲವೊಮ್ಮೆ ನಾವು ಸಂತೋಷವಾಗಿರುತ್ತೇವೆ ಮತ್ತು ಕೆಲವೊಮ್ಮೆ ನಾವು ಅತೃಪ್ತರಾಗಿರುತ್ತೇವೆ, ಆದರೆ ಇದಕ್ಕಾಗಿ ಯಾವುದೇ ಭದ್ರತೆಯಿರುವುದಿಲ್ಲ. ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಹೊರತಾಗಿಯೂ, ಮುಂದಿನ ಕ್ಷಣದಲ್ಲಿ ನಾವು ಹೇಗೆ ಭಾವಿಸುತ್ತೇವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಇದ್ದಕ್ಕಿದ್ದಂತೆ, ನಾವು ಅತೃಪ್ತಿ ಅಥವಾ ಬೇಸರ ಅಥವಾ ಖಿನ್ನತೆಯನ್ನು ಅನುಭವಿಸಬಹುದು. ಇದು ನಿರಂತರವಾಗಿ ಮೇಲಕ್ಕೆ-ಕೆಳಕ್ಕೆ, ಮೇಲಕ್ಕೆ-ಕೆಳಕ್ಕೆ ಹೋಗುತ್ತಲೇ ಇರುತ್ತದೆ.
- ಮೂರನೇ ವಿಧದ ದುಃಖವನ್ನು ಸರ್ವವ್ಯಾಪಿ ದುಃಖ ಎಂದು ಕರೆಯಲಾಗುತ್ತದೆ, ಮತ್ತು ಇದು ಅಸಂತೋಷ ಮತ್ತು ಸಾಮಾನ್ಯ ಸಂತೋಷದ ಏರಿಳಿತಗಳನ್ನು ಅನುಭವಿಸುವುದರ ಆಧಾರವಾಗಿರುತ್ತದೆ. ಇಲ್ಲಿನ ಆಧಾರವು ನಮ್ಮ ಅನಿಯಂತ್ರಿತವಾದ ಪುನರಾವರ್ತಿತ ಅಸ್ತಿತ್ವ ಅಥವಾ ಪುನರ್ಜನ್ಮವಾಗಿರುತ್ತದೆ, ಇದನ್ನು ಸಂಸ್ಕೃತದಲ್ಲಿ ಸಂಸಾರ ಎಂದು ಕರೆಯಲಾಗುತ್ತದೆ. ಜೀವನದ ಏರಿಳಿತಗಳು ಅಥವಾ ಸಾಮಾನ್ಯ ಸಂತೋಷ ಮತ್ತು ಅಸಂತೋಷಗಳನ್ನು ಅನುಭವಿಸಲು ಆಧಾರವಾಗಿರುವ ದೇಹ ಮತ್ತು ಮನಸ್ಸಿನೊಂದಿಗೆ ನಾವು ಮತ್ತೆ ಮತ್ತೆ ಮರುಜನ್ಮ ಪಡೆಯುತ್ತಲೇ ಇರುತ್ತೇವೆ. ಇದೇ ನಿಜವಾದ ದುಃಖ, ನಮ್ಮ ನಿಜವಾದ ಸಮಸ್ಯೆ. ನಾವು ವಾಸ್ತವವನ್ನು ನೋಡಿದರೆ ನಾವು ನೋಡುವ ಪ್ರಮುಖ ದುಃಖವೇ ಇದು.
ದುಃಖದ ನಿಜವಾದ ಕಾರಣಗಳು
ನೀವು ವಾಸ್ತವವನ್ನು ನೋಡಿದರೆ, ನಾವು ಏನನ್ನು ಅನುಭವಿಸುತ್ತೇವೋ ಅದು ಮೇಲಕ್ಕೆ ಕೆಳಕ್ಕೆ ಹೋಗುತ್ತಲೇ ಇರುತ್ತದೆ ಎಂಬ ಅಂಶವು ನಿಜವೆಂದು ನೀವು ನೋಡುತ್ತೀರಿ, ಇದರ ಆಧಾರದ ಮೇಲೆ ಅದು ಮುಂದುವರಿಯುತ್ತಲೇ ಇರುತ್ತದೆ ಎಂಬುದನ್ನೂ ನೀವು ಗಮನಿಸುತ್ತೀರಿ. ನಾವು ಇದನ್ನು ನೋಡಿದಾಗ, ಇದು ಒಂದು ಕಾರಣದಿಂದ ಉದ್ಭವವಾಗಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಸಾಪೇಕ್ಷ ಸತ್ಯದ ಮುಖ್ಯ ಅಂಶವೆಂದರೆ ಎಲ್ಲಾ ವಿಷಯಗಳು ಕಾರಣಗಳಿಂದ ಉದ್ಭವಿಸುತ್ತವೆ, ಹಾಗಾದರೆ ಪದ್ಯದಲ್ಲಿ ಉಲ್ಲೇಖಿಸಿದಂತೆ ನಾವು ನಿರಂತರವಾಗಿ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ಪ್ರವೇಶಿಸುವ ನಿಜವಾದ ಕಾರಣವೇನು? ಬೇರೆ ರೀತಿಯಲ್ಲಿ ಹೇಳುವುದಾದರೆ, ಅದು ಹೇಗೆ ಸಂಭವಿಸುತ್ತದೆ? ಈ ಪುನರಾವರ್ತಿತ ಚಕ್ರವನ್ನು ಶಾಶ್ವತಗೊಳ್ಳುವುದರ ಹಿಂದಿನ ಕಾರಣವೇನು?
ನಮ್ಮ ಕೊನೆಯ ಅಧಿವೇಶನದಲ್ಲಿ, ನಾವು ಅಸಂತೋಷವನ್ನು ಅನುಭವಿಸಿದರೆ, ಅದು ವಿನಾಶಕಾರಿ ನಡವಳಿಕೆಯ ಫಲಿತಾಂಶವಾಗಿರುವುದು ಮತ್ತು ನಾವು ಸಾಮಾನ್ಯ ಸಂತೋಷವನ್ನು ಅನುಭವಿಸಿದರೆ, ಅದು ರಚನಾತ್ಮಕ ನಡವಳಿಕೆಯ ಫಲಿತಾಂಶವಾಗಿರುವುದು ಎಂಬುದನ್ನು ನೋಡಿದ್ದೇವೆ. ಇದಕ್ಕೆ ನಾವು ಕರ್ಮವನ್ನು ಸೇರಿಸುತ್ತೇವೆ, ಇದನ್ನು ನಾನು ಆಗಾಗ್ಗೆ ಪ್ರಚೋದನೆ ಎಂದು ಅನುವಾದಿಸುತ್ತೇನೆ. ನಮ್ಮ ಬಳಿ ಪ್ರಚೋದಿತ ವಿನಾಶಕಾರಿ ನಡವಳಿಕೆ ಮತ್ತು ಪ್ರಚೋದಿತ ರಚನಾತ್ಮಕ ನಡವಳಿಕೆಯಿರುತ್ತದೆ. ಇದು ಬುದ್ಧನ ರಚನಾತ್ಮಕ ನಡವಳಿಕೆಯಂತಿರುವುದಿಲ್ಲ – ಬದಲಿಗೆ ಪ್ರಚೋದಿತ ನಡವಳಿಕೆಯಾಗಿರುತ್ತದೆ, ಇಲ್ಲಿ ನಾವು ಅಹಂಕಾರದ ಆಧಾರದ ಮೇಲೆ ಪ್ರಚೋದಿತವಾಗಿ ಒಳ್ಳೆಯದನ್ನು ಮಾಡುತ್ತೇವೆ ಅಥವಾ ಬಲವಂತವಾಗಿ ಪರಿಪೂರ್ಣರಾಗಿರಬೇಕು ಮತ್ತು ಎಲ್ಲವನ್ನೂ ಸರಿಯಾಗಿ ಮಾಡಬೇಕು ಎಂದು ಭಾವಿಸುತ್ತೇವೆ. ಇದು ಹುಚ್ಚುತನವಾಗಿರುತ್ತದೆ.
ನಾವು ಪ್ರಚೋದಿತ ರೀತಿಯಲ್ಲಿ ವರ್ತಿಸುತ್ತಿದ್ದರೆ, ಅದರ ಕಾರಣ ನಾವು ಪ್ರಚೋದಿತವಾದ ವಿನಾಶಕಾರಿ ನಡವಳಿಕೆಯ ವಿಷಯವಾಗಿ ಚರ್ಚಿಸಿದ ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳ ಪ್ರಭಾವಕ್ಕೆ ಒಳಗಾಗಿರುವುದಾಗಿರುತ್ತದೆ. ಕೋಪದಿಂದ, ನಾವು ಒಬ್ಬರನ್ನು ಕೊಲ್ಲುತ್ತೇವೆ; ದುರಾಶೆಯಿಂದ ನಾವು ಏನನ್ನಾದರೂ ಕದಿಯುತ್ತೇವೆ; ನಿಷ್ಕಪಟತೆಯಿಂದ, ನಮ್ಮ ಕ್ರಿಯೆಗಳಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ, "ನಾನು ಸಿಕ್ಕಿಹಾಕಿಕೊಳ್ಳುವುದಿಲ್ಲ. ಏನೂ ಆಗುವುದಿಲ್ಲ, ನಾನು ಕಳ್ಳತನ ಮಾಡಿದರೆ, ಅದು ಮಜವಾಗಿರುತ್ತದೆ!”
ಈ ರೀತಿಯ ಪ್ರಚೋದಿತ ವಿನಾಶಕಾರಿ ನಡವಳಿಕೆಯ ಹಿಂದೆ ಅರಿವಿರುವುದಿಲ್ಲ, ಇದನ್ನು ನಾವು ಸಾಮಾನ್ಯವಾಗಿ "ಅಜ್ಞಾನ" ಎಂದು ಅನುವಾದಿಸುತ್ತೇವೆ, ಆದರೆ ಇದರರ್ಥ ನಾವು ಮೂರ್ಖರೆಂದಲ್ಲ, ಕೇವಲ ಗೊಂದಲಕ್ಕೊಳಗಾಗಿದ್ದೇವೆ ಎಂದರ್ಥ. ನಮಗೆ ಯಾವುದರ ಅರಿವಿಲ್ಲ? ಮೊದಲನೆಯದಾಗಿ, ನಮಗೆ ಕಾರಣ ಮತ್ತು ಪರಿಣಾಮದ ಬಗ್ಗೆ ತಿಳಿದಿಲ್ಲ, ಅದನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಂಡರೆ ಮತ್ತು ಮನವರಿಕೆ ಮಾಡಿಕೊಂಡರೆ, ನಾವು ವಿನಾಶಕಾರಿಯಾಗಿ ವರ್ತಿಸುವುದಿಲ್ಲ. ಇದು ನಮಗೆ ದುಃಖವನ್ನು ಉಂಟುಮಾಡುತ್ತದೆ ಎಂದು ನಾವು ಸಹಜವಾಗಿ ತಿಳಿದಿರುತ್ತೇವೆ, ಅದು ಶಿಕ್ಷೆಯಾಗಿರುವುದಿಲ್ಲ, ಬದಲಿಗೆ ನಾವು ಸೃಷ್ಟಿಸುವ ಕಾರಣಗಳ ಫಲಿತಾಂಶವಾಗಿರುತ್ತದೆ.
ವಾಸ್ತವವಾಗಿ, ಅರಿವಿಲ್ಲದಿರುವಿಕೆಯ ಎರಡು ವಿಧಗಳಿವೆ. ವಿನಾಶಕಾರಿಯಾಗಿ ವರ್ತಿಸುವುದರಿಂದ ನಮಗೆ ಅಂತಿಮವಾಗಿ ಅಸಂತೋಷ ಸಿಗುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ, ಅಥವಾ ನಾವು ವ್ಯತಿರಿಕ್ತವಾಗಿ ಯೋಚಿಸುತ್ತೇವೆ, "ನಾನು ವಿನಾಶಕಾರಿಯಾಗಿ ವರ್ತಿಸಿದರೆ, ಅದು ನನಗೆ ಸಂತೋಷವನ್ನು ತರುತ್ತದೆ. ನನಗೆ ಬೇಕಾದುದನ್ನು ಕದ್ದರೆ, ಅದು ನನಗೆ ಸಂತೋಷವನ್ನು ನೀಡುತ್ತದೆ. ನಾನು ನನ್ನ ಶತ್ರುವನ್ನು ಕೊಂದರೆ, ಅದು ನನಗೆ ಸಂತೋಷವನ್ನು ನೀಡುತ್ತದೆ.” ವಿನಾಶಕಾರಿಯಾಗಿ ವರ್ತಿಸಿದ ಸದ್ಯದಲ್ಲಿ ನಮಗೆ ಸಂತೋಷವಾಗಬಹುದು - "ಓಹ್, ನಾನು ಆ ಸೊಳ್ಳೆಯನ್ನು ಸಾಯಿಸಿದೆ, ಈಗ ನಾನು ವಿಶ್ರಮಿಸಬಹುದು!” - ಅದೇನೇ ಇದ್ದರೂ, ದೀರ್ಘಾವಧಿಯ ಪರಿಣಾಮಗಳ ವಿಷಯವಾಗಿ ಮಾತನಾಡುವುದಾದರೆ, ಅಂದರೆ ಏನೇ ಆದರೂ ಅಸಂತೋಷವನ್ನು ಅನುಭವಿಸುವುದು, ಈ ರೀತಿಯ ವಿನಾಶಕಾರಿ ನಡವಳಿಕೆಯಿಂದಾಗಿ ಬರುತ್ತದೆ. ಹೀಗಾಗಿ ವಿನಾಶಕಾರಿ ನಡವಳಿಕೆಯು ಕಾರಣ ಮತ್ತು ಪರಿಣಾಮದ ಅರಿವಿಲ್ಲದಿರುವುದರಿಂದ ಉದ್ಭವಿಸುತ್ತದೆ, ಬೇರೆ ರೀತಿಯಲ್ಲಿ ಹೇಳುವುದಾದರೆ ಸಾಪೇಕ್ಷ ಸತ್ಯದ ಅರಿವಿಲ್ಲದಿರುವುದು. ಇದೆಲ್ಲವನ್ನೂ ಅರ್ಥಮಾಡಿಕೊಳ್ಳುವುದು ಸುಲಭ ಎಂಬಂತೆ ನಾನು ನಡೆದುಕೊಳ್ಳುವುದಿಲ್ಲ, ಏಕೆಂದರೆ ಇದು ಸುಲಭವಲ್ಲ, ಆದರೆ ನಾವು ಇದರ ಮೇಲೆ ಕೆಲಸ ಮಾಡಬಹುದಾಗಿದೆ.
ಈ ಅಂಶವನ್ನು ಸಂಕ್ಷಿಪ್ತಗೊಳಿಸುವುದಾದರೆ, ನಾನು ಆಗಾಗ್ಗೆ ಅಸಂತೋಷಗೊಳ್ಳುವ ಕಾರಣವು ಕಾರಣ ಮತ್ತು ಪರಿಣಾಮವನ್ನು ಅರ್ಥಮಾಡಿಕೊಳ್ಳದಿರುವುದಾಗಿರುತ್ತದೆ. ನನ್ನ ಮನಸ್ಸಿನಲ್ಲಿ ಕೋಪ, ದುರಾಸೆ, ಅಸೂಯೆಯಂತಹ ಮುಂತಾದವುಗಳು ತುಂಬಿರುವಾಗ, ಅದು ನನ್ನನ್ನು ವಿನಾಶಕಾರಿ ರೀತಿಯಲ್ಲಿ ಪ್ರಚೋದಿತವಾಗಿ ವರ್ತಿಸುವಂತೆ ಮಾಡುತ್ತದೆ. ವಾಸ್ತವದಲ್ಲಿ ಇದು ಸ್ವಯಂ-ವಿನಾಶಕಾರಿಯಾಗಿರುತ್ತದೆ, ಏಕೆಂದರೆ ಇದರ ಪರಿಣಾಮವಾಗಿ ನಾನು ಬಹಳಷ್ಟು ಸಮಯ ಅಸಂತೋಷವಾಗಿರುತ್ತೇನೆ. ಇದೇ ನಾವು ಅರಿಯಬೇಕಾದ ಸಂಬಂಧವಾಗಿರುತ್ತದೆ.
ನಾವು ಅನುಭವಿಸುವ ಸಂತೋಷವು ಅರಿವಿಲ್ಲದಿರುವಿಕೆಯಿಂದ ಬರುತ್ತದೆ, ಆದರೆ ಈ ಸಂದರ್ಭದಲ್ಲಿ, ವಿಷಯಗಳ ಆಳವಾದ ಸತ್ಯದ ಅರಿವಿಲ್ಲದಿರುವುದರಿಂದ. ಹೆಚ್ಚು ನಿಖರವಾಗಿರಲು, ಅರಿವಿಲ್ಲದಿರುವಿಕೆಯು ರಚನಾತ್ಮಕ ಮತ್ತು ವಿನಾಶಕಾರಿ ವರ್ತನೆಗಳೆರಡರ ಆಧಾರವಾಗಿರುತ್ತದೆ ಎಂದು ನಾವು ಹೇಳಬಹುದು. ವಿನಾಶಕಾರಿ ನಡವಳಿಕೆಗಾಗಿ, ಆಳವಾದ ಸತ್ಯ ಮತ್ತು ಸಾಪೇಕ್ಷ ಸತ್ಯ ಎರಡರ ಬಗ್ಗೆ ನಮಗೆ ತಿಳಿದಿರುವುದಿಲ್ಲ. ರಚನಾತ್ಮಕ ನಡವಳಿಕೆಗಾಗಿ, ನಮಗೆ ಕೇವಲ ಆಳವಾದ ಸತ್ಯದ ಅರಿವಿರುವುದಿಲ್ಲ. ನಮ್ಮ ತಲೆಯಲ್ಲಿ ಒಂದು ರೀತಿಯ ಧ್ವನಿ ಇರುತ್ತದೆ, ಅದು ಹೀಗೆ ಯೋಚಿಸುತ್ತದೆ, "ನಾನು ಏನು ಮಾಡಲಿ? ನಾನು ಹೇಳಿದ ಹಾಗೆಯೇ ನಡೆಯಬೇಕು! ನಾನು ಚಿಂತಾಕ್ರಾಂತನಾಗಿದ್ದೇನೆ." ನಾವು ನಿಜವಾಗಿಯೂ ಹುಡುಕಬಹುದಾದ ಚಿಕ್ಕದೊಂದು "ನಾನು" ಮಾತನಾಡುತ್ತಿರುವಂತೆ ತೋರುತ್ತದೆ. ಆದರೆ ಇದು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ. ಅಂತಹದ್ದೇನೂ ಇರುವುದಿಲ್ಲ. ಇದು ನಮ್ಮ ಆಲೋಚನೆಗಳ ಒಂದು ಮೌಖಿಕ ಅಂಶವಾಗಿರುತ್ತದೆ ಮತ್ತು ದೂರು ಮತ್ತು ಚಿಂತೆ ಮಾಡುವ "ನಾನು" ಆಗಿರುವುದಿಲ್ಲ. ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲದಿದ್ದಾಗ, ಆಳವಾದ ವಾಸ್ತವತೆಯ ಬಗ್ಗೆ ನಮಗೆ ತಿಳಿದಿಲ್ಲದಿರುವಾಗ, ನಮ್ಮೊಳಗಿನ ಕಾಲ್ಪನಿಕ "ನಾನು"ವಿನ ಈ ಪ್ರಕ್ಷೇಪದೊಂದಿಗೆ ನಾವು ಗುರುತಿಸಿಕೊಳ್ಳುತ್ತೇವೆ. ಇದು ವಾಸ್ತವಕ್ಕೆ ಹೊಂದಿಕೆಯಾಗದ ಕಾರಣ, ನಾವು ಅದರ ಬಗ್ಗೆ ಅಸುರಕ್ಷಿತರಾಗಿರುತ್ತೇವೆ ಮತ್ತು ನಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ನಾವು ಎಂದಿಗೂ ಯಶಸ್ವಿಯಾಗುವುದಿಲ್ಲ.
ಆ ಕಾಲ್ಪನಿಕ ಚಿಕ್ಕ "ನನ್ನನ್ನು" ಸುರಕ್ಷಿತವಾಗಿಸಲು ನಾವು ಬಳಸುವ ಒಂದು ಕಾರ್ಯವಿಧಾನವು ನಮ್ಮ ಗೊಂದಲಮಯ ಭಾವನೆಗಳಾಗಿರುತ್ತವೆ. "ನಾನು ಏನನ್ನಾದರೂ ಪಡೆಯಲು ಸಾಧ್ಯವಾದರೆ, ನಾನು ಸುರಕ್ಷಿತವಾಗಿರುತ್ತೇನೆ" ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ನಾವು ದುರಾಶೆ ಮತ್ತು ಬಾಂಧವ್ಯ ಮತ್ತು ಕಾಮವನ್ನು ಹೊಂದಿರುತ್ತೇವೆ. ಆಗ ನಮಗೆ ಹೀಗೆ ಅನಿಸುತ್ತದೆ, "ನಾನು ಅದನ್ನು ನನ್ನಿಂದ ದೂರವಿಟ್ಟರೆ, ನನಗೆ ಸುರಕ್ಷಿತವೆನಿಸುತ್ತದೆ" ಮತ್ತು ಹೀಗೆ ನಮ್ಮಲ್ಲಿ ಕೋಪ ಮತ್ತು ವಿಕರ್ಷಣೆ ಇರುತ್ತದೆ. ಅಥವಾ ನಾವು ನಿಷ್ಕಪಟರಾಗಿರಬಹುದು ಮತ್ತು "ನನ್ನನ್ನು ಬೆದರಿಸುವ ಯಾವುದೂ ಅಸ್ತಿತ್ವದಲ್ಲಿಲ್ಲ ಎಂಬಂತೆ ನಾನು ನಡೆದುಕೊಂಡರೆ, ಅದು ನನ್ನನ್ನು ಸುರಕ್ಷಿತವಾಗಿಸುತ್ತದೆ" ಎಂದು ಯೋಚಿಸಬಹುದು. ಇದರ ಆಧಾರದ ಮೇಲೆ, ನಮ್ಮ ಬೆಳೆಯುತ್ತಿರುವ ಒತ್ತಡದ ಮಟ್ಟವನ್ನು ನಿರ್ಲಕ್ಷಿಸುವಂತಹ ವಿನಾಶಕಾರಿ ನಡವಳಿಕೆಯನ್ನು ಸಹ ನಾವು ಹೊಂದಿರುತ್ತೇವೆ. ಕೋಪದ ಆಧಾರದ ಮೇಲೆ ನಾವು ಇತರರ ಮೇಲೆ ರೇಗಾಡುತ್ತೇವೆ, ಅವರನ್ನು ನಿಂದಿಸುತ್ತೇವೆ ಮತ್ತು ಕೊಲ್ಲುತ್ತೇವೆ. ದುರಾಶೆಯಿಂದ ನಾವು ಕದಿಯುತ್ತೇವೆ ಅಥವಾ ಇತರರನ್ನು ನೋಯಿಸುವ ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗುತ್ತೇವೆ. ನಿಷ್ಕಪಟತೆಯಿಂದ, ನಾವು ಕಾರ್ಯಪ್ರವೃತ್ತರಾಗುತ್ತೇವೆ, ಅನಾರೋಗ್ಯಕರ ಆಹಾರವನ್ನು ಸೇವಿಸುತ್ತೇವೆ ಮತ್ತು ಎಂದಿಗೂ ವ್ಯಾಯಾಮ ಮಾಡುವುದಿಲ್ಲ. ಆದ್ದರಿಂದ ಇದೆಲ್ಲವೂ ಆಳವಾದ ಸತ್ಯದ ಬಗೆಗಿರುವ - ಅಂದರೆ ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ - ಮತ್ತು ಕಾರಣ ಮತ್ತು ಪರಿಣಾಮದ ಬಗೆಗಿರುವ ನಿಷ್ಕಪಟತೆಯಿಂದ ಬರುತ್ತದೆ.
ರಚನಾತ್ಮಕ ನಡವಳಿಕೆಗಳ ವಿಷಯದಲ್ಲಿ, ಅವುಗಳ ಆಧಾರ ಗೊಂದಲಮಯ ಭಾವನೆಗಳಾಗದಿದ್ದರೂ, ಅವುಗಳ ಅಡಿಪಾಯದಲ್ಲಿ ನಿಷ್ಕಪಟತೆಯನ್ನು ಇನ್ನೂ ಕಾಣಬಹುದು. ನಾವು ಪರಿಪೂರ್ಣರಾಗಲು ಅಥವಾ ಒಳ್ಳೆಯವರಾಗಿ ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಅಥವಾ ಸ್ಥಾಪಿಸಲು ಪ್ರಯತ್ನಿಸುತ್ತೇವೆ, ಎಲ್ಲರಿಗಿಂತ ಅತ್ಯುತ್ತಮ ಪೋಷಕರಾಗಬೇಕು - "ಇದು ನನ್ನ ತಲೆಯಲ್ಲಿರುವ ಈ ಚಿಕ್ಕ 'ನನ್ನನ್ನು' ಸುರಕ್ಷಿತವಾಗಿರಿಸುತ್ತದೆ" – ಎಂದು ಯೋಚಿಸುತ್ತೇವೆ, ಆದರೆ ಇದು ಎಂದಿಗೂ ಯಶಸ್ವಿಯಾಗುವುದಿಲ್ಲ. ನಾವು ಎಂದಿಗೂ ಭದ್ರತೆಯನ್ನು ಅನುಭವಿಸುವುದಿಲ್ಲ. ಇತರರಿಗೆ ಸಹಾಯ ಮಾಡುವುದರಿಂದ ನಾವು ಸ್ವಲ್ಪ ಸಂತೋಷವನ್ನು ಅನುಭವಿಸುತ್ತೇವೆಯಾದರೂ, ಅದು ಇನ್ನೂ ಸಾಮಾನ್ಯ ಸಂತೋಷವಾಗಿರುತ್ತದೆ ಮತ್ತು ಇದು ಶಾಶ್ವತವಾಗಿರುವುದಿಲ್ಲ. ನಾವು ಅದರೊಂದಿಗೆ ಎಂದಿಗೂ ತೃಪ್ತರಾಗುವುದಿಲ್ಲ, ಏಕೆಂದರೆ ನಾವು ಇನ್ನೂ ಅರ್ಹರಲ್ಲ, ಪರಿಪೂರ್ಣರಲ್ಲ ಎಂದು ಅನಿವಾರ್ಯವಿಲ್ಲದೆ ಭಾವಿಸುತ್ತೇವೆ. ನಾವು ಇನ್ನೂ ಏನನ್ನಾದರೂ ಸಾಬೀತುಪಡಿಸಬೇಕು ಎಂದು ಭಾವಿಸುತ್ತೇವೆ. ಖಂಡಿತವಾಗಿಯೂ ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಆಳವಾದ ಮಟ್ಟದಲ್ಲಿರುವ ಅಜ್ಞಾನವನ್ನು ಇದು ಆಧರಿಸಿರುತ್ತದೆ.
ಮೂರನೇ ವಿಧದ ದುಃಖದ ವಿಷಯವಾಗಿ, ಅತೃಪ್ತಿ ಮತ್ತು ಸಾಮಾನ್ಯ ಸಂತೋಷದ ಏರಿಳಿತಗಳನ್ನು ಅನುಭವಿಸುವ ಆಧಾರದ ಮೇಲೆ, ನಾವು "12 ಅವಲಂಬಿತ ಕೊಂಡಿಗಳು" ಎಂಬ ಅತ್ಯಂತ ಸಂಕೀರ್ಣವಾದ ಯೋಜನೆಯನ್ನು ಹೊಂದಿದ್ದೇವೆ, ಅದರ ಬಗ್ಗೆ ನಾನು ಇಲ್ಲಿ ಯಾವುದೇ ವಿವರಣೆಗಳನ್ನು ನೀಡುವುದಿಲ್ಲವಾದರೂ, ಅದು ಕರ್ಮದ ಕಾರ್ಯವಿಧಾನದ ಬಗ್ಗೆ ಮಾತನಾಡುತ್ತದೆ.
ಸರಳವಾದ ರೀತಿಯಲ್ಲಿ ಹೇಳುವುದಾದರೆ, ಕರ್ಮವು ಪ್ರಚೋದನೆಯನ್ನು ಸೂಚಿಸುತ್ತದೆ, ಅದರ ಆಧಾರದ ಮೇಲೆ ನಾವು ವಿನಾಶಕಾರಿಯಾಗಿ ಅಥವಾ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ. ಪ್ರಚೋದನೆಯ ನಿಜವಾದ ಅರ್ಥವೇನು? ಪ್ರಚೋದನೆಯನ್ನ ನೀವು ನಿಯಂತ್ರಸಲಾಗುವುದಿಲ್ಲ, ಉದಾಹರಣೆಗೆ ತಮ್ಮ ಬೆರಳುಗಳನ್ನು ಟ್ಯಾಪ್ ಮಾಡುವಂತಹ ಅಭ್ಯಾಸ. ಏನನ್ನಾದರೂ ಮಾಡಬೇಕೆಂಬ ಭಾವನೆಯಿಂದ ಇದು ಉದ್ಭವಿಸುತ್ತದೆ. ಟಿಬೆಟಿಯನ್ ಪದದ ಅರ್ಥವು, "ನಾನು ಅದನ್ನು ಮಾಡಲು ಬಯಸುತ್ತೇನೆ, ನನಗೆ ಅದನ್ನು ಮಾಡುವ ಇಚ್ಛೆಯಿದೆ, ನಾನು ಅದನ್ನು ಮಾಡಲು ಇಷ್ಟಪಡುತ್ತೇನೆ" ಆಗಿರುತ್ತದೆ, ಇದು ಕೂಗುವುದು, ಅಥವಾ ತಬ್ಬಿಕೊಳ್ಳುವುದು ಅಥವಾ ತಿನ್ನುವುದಾಗಿರಬಹುದು. ನಂತರ ಪ್ರಚೋದನೆಯ ಅಂಶವು ಉದ್ಭವಿಸುತ್ತದೆ, ಮತ್ತು ನಾವು ಅದನ್ನು ಮಾಡುತ್ತೇವೆ. ಸರಳವಾಗಿ, ಇದು ಕ್ರಿಯೆಯನ್ನು ಪುನರಾವರ್ತಿಸುವ ಒಂದು ನಿರ್ದಿಷ್ಟ ಪ್ರವೃತ್ತಿಯನ್ನು ನಿರ್ಮಿಸುತ್ತದೆ ಮತ್ತು ಅದು ವಿನಾಶಕಾರಿ ಕ್ರಿಯೆಯಾಗಿದ್ದಲ್ಲಿ ಅಸಂತೋಷ ಮತ್ತು ರಚನಾತ್ಮಕ ಕ್ರಿಯೆಯಾಗಿದ್ದಲ್ಲಿ ಸಂತೋಷವನ್ನು ಅನುಭವಿಸುವ ಪ್ರವೃತ್ತಿಯನ್ನು ನಿರ್ಮಿಸುತ್ತದೆ. ಈ ಪ್ರವೃತ್ತಿಯು ಕೆಲವು ಷರತ್ತುಗಳ ಅಡಿಯಲ್ಲಿ ಕೆಲವು ಹಂತಗಳಲ್ಲಿ ಸಕ್ರಿಯಗೊಳ್ಳುತ್ತದೆ. ಅದು ಫಲಕಾರಿಯಾದಾಗ ನಾವು ಸಂತೋಷವನ್ನು ಅನುಭವಿಸುತ್ತೇವೆ, ಅಥವಾ ಅಸಂತೋಷವನ್ನು ಅನುಭವಿಸುತ್ತೇವೆ, ಅಥವಾ ನಾವು ಮತ್ತೆ ಕೂಗುತ್ತೇವೆ, ಅಥವಾ ನಮಗೆ ಮತ್ತೆ ತಬ್ಬಿಕೊಳ್ಳುವಂತೆ ಅನಿಸುತ್ತದೆ.
ಇದು ಶಾಶ್ವತವಾದ ಯೋಜನೆಯಾಗಿದೆ, ಇದು ಮುನ್ನಡೆಯುತ್ತಲೇ ಇರುತ್ತದೆ, ಏಕೆಂದರೆ ಈ ರೀತಿಯ ನಡವಳಿಕೆಯನ್ನು ಮುಂದುವರಿಸಲು ನಾವು ಈ ಬಯಕೆಯನ್ನು ನಿರಂತರವಾಗಿ ಅನುಭವಿಸುತ್ತಿರುತ್ತೇವೆ. ಆನಂತರ, ನಡವಳಿಕೆಯ ಈ ಮಾದರಿಯು ಅಂತ್ಯವಿಲ್ಲದೆ ಪುನರಾವರ್ತಿಸುತ್ತದೆ, ಏಕೆಂದರೆ ನಾವು ಅದನ್ನು ನಿರಂತರವಾಗಿ ಬಲಪಡಿಸುತ್ತಲೇ ಇರುತ್ತೇವೆ. ಹೀಗೆ ನಾವು ಸಂತೋಷ ಮತ್ತು ಅಸಂತೋಷದ ಏರಿಳಿತವನ್ನು ಅನುಭವಿಸುತ್ತಲೇ ಇರುತ್ತೇವೆ.
ಇಲ್ಲಿ, ಅತ್ಯಂತ ಪ್ರಸ್ತುತವಾದ ಪ್ರಶ್ನೆಯೆಂದರೆ, ಒಂದು ಫಲಿತಾಂಶವನ್ನು ಉತ್ಪಾದಿಸಲು, ನಮ್ಮ ನಡವಳಿಕೆಯನ್ನು ಪುನರಾವರ್ತಿಸುವಂತೆ ಬಯಸಲು, ನಮ್ಮ ಈ ಪ್ರವೃತ್ತಿಗಳನ್ನು ಹೇಗೆ ಸಕ್ರಿಯಗೊಳಿಸಬಹುದು? ಇದು ತುಂಬಾ ಸಂಕೀರ್ಣವಾಗಿದ್ದರೂ, 12 ಕೊಂಡಿಗಳೊಂದಿಗೆ ಇದನ್ನು ಬಹಳ ಸೊಗಸಾಗಿ ವಿವರಿಸಲಾಗಿದೆ. ನಾವು ನಿರಂತರವಾದ ಏರಿಳಿತವನ್ನು ಹೊಂದಿರುತ್ತೇವೆ ಮತ್ತು ಇದು ವಿಶೇಷವಾಗಿ ಗಮನಾರ್ಹವಾಗಬೇಕಾಗಿಲ್ಲ. ನಾವು ನಿದ್ರಿಸುತ್ತಿರುವಾಗಲೂ ಬಹುಶಃ ನಾವು ಚೆನ್ನಾಗಿ ನಿದ್ದೆ ಮಾಡದ ಮತ್ತು ನಾವು ತುಂಬಾ ಸಂತೋಷವಾಗಿಲ್ಲದ ಮಧ್ಯಸ್ಥಿತಿಯಲ್ಲಿರಬಹುದು. ಹಾಗಾದರೆ ನಾವು ಅಸಂತೋಷ ಮತ್ತು ಸಾಮಾನ್ಯ ಸಂತೋಷವನ್ನು ಅನುಭವಿಸಿದಾಗ ನಮ್ಮ ಮನಸ್ಥಿತಿ ಹೇಗಿರುತ್ತದೆ? ಇದಕ್ಕಾಗಿ ಇರುವ ಸಂಸ್ಕೃತ ಪದವು ‘ತೃಷ್ಣ’, ಅಂದರೆ "ಬಾಯಾರಿಕೆ" ಎಂದಾಗಿರುತ್ತದೆ. ಇದನ್ನು ಸಾಮಾನ್ಯವಾಗಿ "ಕಡುಬಯಕೆ" ಎಂದು ಅನುವಾದಿಸಲಾಗುತ್ತದೆ, ಆದರೆ ಇದರ ನಿಜವಾದ ಪದದ ಅರ್ಥವು ಕೇವಲ ಬಾಯಾರಿಕೆಯಾಗಿರುತ್ತದೆ.
ಮೂಲತಃ, ನಾವು ಅಸಂತೋಷವನ್ನು ಅನುಭವಿಸಿದಾಗ, ನೀವು ಬಾಯಾರಿಕೆಯನ್ನು ನಿವಾರಿಸಲು ಬಯಸುವಂತೆಯೇ ನಾವು ಅದನ್ನು ನಿವಾರಿಸಲು ಹಾತೊರೆಯುತ್ತಿರುತ್ತೇವೆ. ನಾವು ಸಂತೋಷವನ್ನು ಅನುಭವಿಸಿದಾಗ, ನಾವು ಅದರಿಂದ ದೂರವಾಗಲು ಬಯಸುವುದಿಲ್ಲ, ಬದಲಿಗೆ ಹೆಚ್ಚಿನದಕ್ಕಾಗಿ ಹಾತೊರೆಯುತ್ತೇವೆ. ಇದು ನಿಮಗೆ ನಿಜವಾಗಿಯೂ ಬಾಯಾರಿಕೆಯಾದಾಗ ನಿಮಗೆ ಸಿಗುವ ನೀರಿನ ಮೊದಲ ಹನಿಯಂತೆ ಇರುತ್ತದೆ - ಅದು ಸಾಕಾಗುವುದಿಲ್ಲ, ಅಲ್ಲವೇ? ನೀವು ಅದರಿಂದ ಬೇರ್ಪಡಲು ಬಯಸುವುದಿಲ್ಲ, ಬದಲಿಗೆ ಅದನ್ನು ಹೆಚ್ಚು ಹೆಚ್ಚು ಬಯಸುತ್ತೀರಿ. ನಂತರ, ಒಂದು ಘನವಾದ ಆಸೆಯು ನಮ್ಮನ್ನು ಹಿಡಿದಿಟ್ಟುಕೊಳ್ಳುವುದು, ಆಗ ನಾವು ಹೀಗೆ ಯೋಚಿಸಲಾರಂಭಿಸುತ್ತೇವೆ, "ನಾನು ಈ ದುಃಖವನ್ನು ನಿವಾರಿಸಬೇಕು," "ನಾನು ಈ ಸಂತೋಷವನ್ನು ಬಿಡಬಾರದು" ಮತ್ತು ಇದು ಕರ್ಮದ ಪ್ರವೃತ್ತಿಯನ್ನು ಸಕ್ರಿಯಗೊಳಿಸುತ್ತದೆ. ಇದು ಸರ್ವವ್ಯಾಪಿ ದುಃಖದ ನಿಜವಾದ ಕಾರಣ. ಹೀಗೆ, ಸಂತೋಷ ಮತ್ತು ಅಸಂತೋಷ ಮತ್ತು ಮುಂತಾದವುಗಳನ್ನು ಅನುಭವಿಸುವ ಪ್ರವೃತ್ತಿಗಳು, ನಮ್ಮ ಗೊಂದಲಮಯ ಭಾವನೆಗಳೊಂದಿಗೆ ಬೆರೆಸಿದ ನಮ್ಮ ಪ್ರಚೋದಿತ ನಡವಳಿಕೆಯಿಂದ ಬರುತ್ತವೆ, ಪ್ರತಿಯಾಗಿ ಇವುಗಳು ನಮ್ಮ ಆಳವಾದ ಮಟ್ಟದಲ್ಲಿನ ವಾಸ್ತವದ ಅರಿವಿಲ್ಲದಿರುವಿಕೆಯಿಂದ ಬರುತ್ತವೆ - ನಮ್ಮ ಭಾವನೆಗಳು ಹೇಗೆ ಅಸ್ತಿತ್ವದಲ್ಲಿವೆ (ಅವು ಸಾರ್ವಕಾಲಿಕವಾಗು ಬದಲಾಗುತ್ತಿರುತ್ತೇವೆ) ಮತ್ತು ನಾವು ವಾಸ್ತವದಲ್ಲಿ ಹೇಗೆ ಅಸ್ತಿತ್ವದಲ್ಲಿದ್ದೇವೆ (ನಮ್ಮ ತಲೆಯಲ್ಲಿರುವ ಒಂದು ರೀತಿಯ ಅಸುರಕ್ಷಿತ ಘಟಕವನ್ನು ಗ್ರಹಿಸುವ ಮೂಲಕವೇ ಸುರಕ್ಷಿತಗೊಳಿಸಬಹುದಾದಂತ ವಿಷಯವಾಗಿರುವುದಿಲ್ಲ).
ಈ ಅರಿವಿಲ್ಲದಿರುವಿಕೆಯೇ ಮೂಲ ಕಾರಣ, ಮತ್ತು ಇದು ನಮ್ಮ ರಚನಾತ್ಮಕ ಮತ್ತು ವಿನಾಶಕಾರಿ ನಡವಳಿಕೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ಇದು ಸಂತೋಷ, ಅಸಂತೋಷ ಮತ್ತು ನಮ್ಮ ನಡವಳಿಕೆಯನ್ನು ಪುನರಾವರ್ತಿಸುವ ಪ್ರವೃತ್ತಿಯನ್ನು ಅಸ್ತಿತ್ವದಲ್ಲಿರುವಂತೆ ಉಂಟುಮಾಡುವ ನಿಜವಾದ ತರಲೆ ಇದಾಗಿರುತ್ತದೆ. ನಾವು ಈ ಬಾಯಾರಿಕೆಯನ್ನು ಗಮನಿಸಿದರೆ, ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಬಗೆಗಿರುವ ಅರಿವಿಲ್ಲದಿರುವಿಕೆಯೊಂದಿಗೆ ಇದು ಆಂತರಿಕವಾದ ಸಂಬಂಧವನ್ನು ಹೊಂದಿರುತ್ತದೆ. ನಾವು ಹೀಗೆ ಯೋಚಿಸುತ್ತೇವೆ, "ನಾನು 'ನಾನು' ಒಬ್ಬನೇ ಮುಖ್ಯ, ಹಾಗಾಗಿ ನಾನು ಈ ಸಂತೋಷದಿಂದ ಬೇರ್ಪಡಬಾರದು. ನಾನು ಅಸಂತೋಷವಾಗಿರದೇ ಇರುವುದು ಬಹಳಾ ಮುಖ್ಯ," ಮತ್ತು ಹೀಗೆ ಯೋಚಿಸುವುದಿಲ್ಲ, "ಸರಿ, ನಾನು ಸಂತೋಷವಾಗಿದ್ದೇನೆ ಅಥವಾ ಅಸಂತೋಷಗೊಂಡಿದ್ದೇನೆ ... ಹಾಗಾದರೆ ಏನಾಗುತ್ತದೆ?". ನಮ್ಮ ನಿರಂತರವಾದ ಅನಿಯಂತ್ರಿತ ಪುನರಾವರ್ತಿತ ಪುನರ್ಜನ್ಮಕ್ಕೆ ನಿಜವಾದ ಕಾರಣವೆಂದರೆ ಎರಡು ಸತ್ಯಗಳ ಬಗ್ಗೆ ನಮ್ಮ ಅರಿವಿಲ್ಲದಿರುವುದು.
ದುಃಖದ ಕಾರಣಗಳ ನಿಜವಾದ ನಿಲುಗಡೆ
ಮೂರನೆಯ ಸತ್ಯವು ನಿಜವಾದ ನಿಲುಗಡೆಯಾಗಿರುತ್ತದೆ, ಇಲ್ಲಿ ದುಃಖದ ಕಾರಣಗಳನ್ನು ನಿಲ್ಲಿಸಲಾಗುತ್ತದೆ ಮತ್ತು ದುಃಖವನ್ನು ಸಹ ನಿಲ್ಲಿಸಲಾಗುತ್ತದೆ. ವಾಸ್ತವದ ಬಗೆಗಿನ ಈ ಅರಿವಿಲ್ಲದಿರುವಿಕೆಯನ್ನು ಶಾಶ್ವತವಾಗಿ ನಿವಾರಿಸಲು ಹೇಗೆ ಸಾಧ್ಯ? ವಾಸ್ತವಕ್ಕೆ ಹೊಂದಿಕೆಯಾಗದಿರುವುದನ್ನು ನೀವು ಗ್ರಹಿಸಿದಾಗ, ಅದಕ್ಕೆ ಯಾವುದೇ ಅಡಿಪಾಯವಿರುವುದಿಲ್ಲ. ಇದು ನಿಜವಾದ ಯಾವುದಕ್ಕೂ ಹೊಂದಿಕೆಯಾಗುವುದಿಲ್ಲವಾದ್ದರಿಂದ ಅದನ್ನು ಎತ್ತಿಹಿಡಿಯುವ ಯಾವುದೂ ಇರುವುದಿಲ್ಲ.
ಉದಾಹರಣೆಗೆ, ಒಂದು ನಾಟಕದ ನಿರ್ಮಾಣದಲ್ಲಿ ಕೆಲವು ದೃಶ್ಯಾವಳಿಗಳಿರುವಾಗ, ಅದನ್ನು ಎತ್ತಿಹಿಡಿಯುವ ಕೋಲುಗಳು ಹಿಂದಿರುತ್ತವೆ. ಟಿಬೆಟಿನ ಪದದ ಅರ್ಥವೆಂದರೆ, ಅಸಾಧ್ಯವಾದ ನಮ್ಮ ಪ್ರಕ್ಷೇಪಗಳನ್ನು ಹಿಡಿದಿಟ್ಟುಕೊಳ್ಳುವಂತಹ ಕೋಲುಗಳಿರುವುದಿಲ್ಲ. ದೃಶ್ಯಾವಳಿಗಳನ್ನು ಹಿಡಿದಿಟ್ಟುಕೊಳ್ಳಲು ಏನೂ ಇಲ್ಲದಿದ್ದಾಗ, ಏನಾಗುತ್ತದೆ? ಅದು ಕೆಳಗೆ ಬೀಳುತ್ತದೆ.
ಒಮ್ಮೆ ನೀವು ನಮ್ಮಲ್ಲಿರುವ ಸುಳ್ಳು ಪ್ರಕ್ಷೇಪಗಳನ್ನು ಹಿಡಿದಿಟ್ಟುಕೊಳ್ಳುವ ಯಾವುದೂ ಇಲ್ಲ ಎಂಬ ಅಂಶದ ಮೇಲೆ ಕೇಂದ್ರೀಕರಿಸಲು ಸಾಧ್ಯವಾದರೆ, ಅಭ್ಯಾಸದೊಂದಿಗೆ ಅಂತಿಮವಾಗಿ, ಈ ಅರಿವಿಕೆಯ ಮೇಲೆ ನೀವು ಶಾಶ್ವತವಾಗಿ ಗಮನಹರಿಸಬಹುದು. ಈ ದೃಶ್ಯಾವಳಿಗಳು ಹಿಂತಿರುಗಿ ನಿಲ್ಲಲು ಸಾಧ್ಯವೇ ಇಲ್ಲ. ನನ್ನ ತಲೆಯಲ್ಲಿರುವ ಚಿಕ್ಕ ನಾನುವಿನ, "ನಾನು ಏನು ಮಾಡಬೇಕು?" ಮತ್ತು "ನಾನು ಪರಿಪೂರ್ಣನಾಗಿರಬೇಕು" ಮತ್ತು "ನಾನು ಹೇಳಿದಂತೆಯೇ ನಡೆಯಬೇಕು” ಎಂಬ ನಾಟಕವು ನಿಲ್ಲುತ್ತದೆ. ನಮ್ಮ ಪ್ರಕ್ಷೇಪಗಳನ್ನು ಹಿಡಿದಿಟ್ಟುಕೊಳ್ಳುವ ಯಾವುದೂ ಇಲ್ಲ ಎಂದು ನಾವು ನೋಡಿದಾಗ, ನಮ್ಮ ಮನಸ್ಸು ಇನ್ನು ಮುಂದೆ ಅಸಾಧ್ಯವಾದ ಯಾವುದನ್ನೂ ಪ್ರದರ್ಶಿಸುವುದಿಲ್ಲ. ಈ ಆಧಾರದ ಮೇಲೆ, ನಾವು ಇನ್ನು ಮುಂದೆ ಆ ಪ್ರವೃತ್ತಿಗಳನ್ನು ಸಕ್ರಿಯಗೊಳಿಸುವುದಿಲ್ಲ, ಏಕೆಂದರೆ ಅವುಗಳನ್ನು ಸಕ್ರಿಯಗೊಳಿಸುವ ಯಾವುದೂ ಇರುವುದಿಲ್ಲ. "ನಾನು, ನಾನು, ನಾನು. ನಾನು ಸಂತೋಷವಾಗಿರಬೇಕು ಮತ್ತು ನಾನು ಅಸಂತೋಷವಾಗಿರಬಾರದು!” ಎಂಬುದು ಇನ್ನು ಮುಂದೆ ಇರುವುದಿಲ್ಲ.
ಪ್ರವೃತ್ತಿಯನ್ನು ಸಕ್ರಿಯಗೊಳಿಸುವ ಯಾವುದೂ ಇರದಿದ್ದರೆ, ನೀವು ಆ ಪ್ರವೃತ್ತಿಯನ್ನು ಹೊಂದಿದ್ದೀರಿ ಎಂದು ಹೇಳಲಾಗುವುದಿಲ್ಲ. ಒಂದು ವಿಷಯಕ್ಕೆ ಫಲಿತಾಂಶವಿದ್ದಲ್ಲಿ ಮಾತ್ರ ಅದು ಫಲಿತಾಂಶದ ಪ್ರವೃತ್ತಿಯಾಗಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಪ್ರವೃತ್ತಿಯ ಸಂಪೂರ್ಣ ಪರಿಕಲ್ಪನೆಯು ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಫಲಿತಾಂಶವಿಲ್ಲದಿದ್ದರೆ, ಅದನ್ನು ಉತ್ಪಾದಿಸುವ ಪ್ರವೃತ್ತಿಯು ಅಸ್ತಿತ್ವದಲ್ಲಿರುವುದಿಲ್ಲ.
ಹೀಗೆ ನಾವು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ಹಿಮ್ಮೆಟ್ಟಿಸಬಹುದು. ಆರಂಭವಿಲ್ಲದ ಕಾಲದಿಂದಲೂ ನಮ್ಮ ಮನಸ್ಸು ಪ್ರವೃತ್ತಿಗಳಿಂದ ತುಂಬಿದ್ದರೂ, ಅವುಗಳನ್ನು ಸಕ್ರಿಯಗೊಳಿಸಲು ಏನೂ ಇಲ್ಲದಿದ್ದರೆ, ಅವು ಅಸ್ತಿತ್ವದಲ್ಲಿರುವುದಿಲ್ಲ. ನಾವು ವಾಸ್ತವದ ಅರಿವಿನೊಂದಿಗೆ ಇರುವಾಗ, ಹೆಚ್ಚಿನ ಪ್ರವೃತ್ತಿಗಳನ್ನು ಕರೆತರುವಂತಹ ಪ್ರಚೋದಿತ ನಡವಳಿಕೆಯನ್ನು ನಾವು ನಿರ್ಮಿಸುವುದಿಲ್ಲ. ಹೀಗೆ, ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮ ಮತ್ತು ಏರಿಳಿತದ ನಮ್ಮ ಭಾವನೆಗಳ ಆಧಾರವು ಹೊರಟುಹೋಗುತ್ತದೆ, ಶಾಶ್ವತವಾಗಿ ಹೊರಟುಹೋಗುತ್ತದೆ. ಇದೇ ನಿಜವಾದ ನಿಲುಗಡೆಯಾಗಿರುತ್ತದೆ ಮತ್ತು ನಾವು ವಿಮೋಚನೆಯನ್ನು ಪಡೆಯುತ್ತೇವೆ.
ನಿಜವಾದ ನಿಲುಗಡೆಯನ್ನು ಕರೆತರುವ ನಿಜವಾದ ಮನಸ್ಸಿನ ಮಾರ್ಗ
ನಾಲ್ಕನೆಯ ಆರ್ಯ ಸತ್ಯವನ್ನು ಸಾಮಾನ್ಯವಾಗಿ "ನಿಜವಾದ ಮಾರ್ಗ" ಎಂದು ಅನುವಾದಿಸಲಾಗುತ್ತದೆ ಮತ್ತು ಇದು ಮನಸ್ಸಿನ ಅಥವಾ ತಿಳುವಳಿಕೆಯ ಸ್ಥಿತಿಗಳನ್ನು ಸೂಚಿಸುತ್ತದೆ, ಉದಾಹರಣೆಗೆ ನಿಮ್ಮ ಗುರಿಯತ್ತ ಕರೆದೊಯ್ಯುವ ಮಾರ್ಗ. ಇದೇ ಎರಡು ಸತ್ಯಗಳ ಸರಿಯಾದ ಮತ್ತು ನಿರ್ಣಾಯಕ ತಿಳುವಳಿಕೆಯಾಗಿರುತ್ತದೆ. ನಾವು ಅದನ್ನು ಅಂತಿಮವಾಗಿ ಸಾರ್ವಕಾಲಿಕವಾಗಿ ಹೊಂದಿರಲು, ಅದಕ್ಕೆ ಹೆಚ್ಚಾಗಿ ಒಗ್ಗಿಕೊಳ್ಳಬೇಕು, ಆಗ ಅದು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದ ನಿಜವಾದ ನಿಲುಗಡೆಗೆ ದಾರಿ ಮಾಡಿಕೊಡುತ್ತದೆ.
ಹಿನ್ನುಡಿ
ಎರಡು ಸತ್ಯಗಳಿಂದ ನಾಲ್ಕು ಸತ್ಯಗಳನ್ನು ಪಡೆಯುವ ವಿಧಾನ ಇದಾಗಿರುತ್ತದೆ.
ನಾವು ಸಂಸಾರವನ್ನು ಹೇಗೆ ಪ್ರವೇಶಿಸುತ್ತೇವೆ? ನಾವು ನೋಡುತ್ತಿರುವ ಪದ್ಯದಲ್ಲಿ, ಇದನ್ನು ನಾಲ್ಕು ಆರ್ಯ ಸತ್ಯಗಳಲ್ಲಿ ಮೊದಲ ಎರಡು, ಅಂದರೆ ನಿಜವಾದ ದುಃಖ ಮತ್ತು ನಿಜವಾದ ಕಾರಣಗಳ ಮೂಲಕ ಚರ್ಚಿಸಲಾಗಿದೆ. ಮೂಲಭೂತವಾಗಿ, ನಾವು ಎರಡು ಸತ್ಯಗಳ ಬಗೆಗಿರುವ ನಮ್ಮ ಗೊಂದಲದಿಂದ ಸಂಸಾರವನ್ನು ಪ್ರವೇಶಿಸುತ್ತೇವೆ. ಒಂದೋ ನಮಗೆ ವಾಸ್ತವ ತಿಳಿದಿರುವುದಿಲ್ಲ, ಅಥವಾ ಅದು ವಾಸ್ತವಕ್ಕಿಂತ ಭಿನ್ನವಾಗಿದೆ ಎಂದು ನಾವು ಊಹಿಸುತ್ತೇವೆ. ಇದರಿಂದ ಹೊರಬರುವುದು ಹೇಗೆ? ಮೂರನೆಯ ಮತ್ತು ನಾಲ್ಕನೆಯ ಆರ್ಯ ಸತ್ಯಗಳು, ಅಥವಾ ನಿಜವಾದ ನಿಲುಗಡೆ ಮತ್ತು ನಿಜವಾದ ಮಾರ್ಗ ಮನಸ್ಸುಗಳ ಮೂಲಕವಾಗಿರುತ್ತದೆ. ಹೀಗೆ ವಾಸ್ತವದ ಎರಡು ಸತ್ಯಗಳನ್ನು ತಿಳಿಯದೆ ಇರುವುದರಿಂದ ನಾವು ನಾಲ್ಕು ಆರ್ಯ ಸತ್ಯಗಳಲ್ಲಿನ ಮೊದಲ ಎರಡನ್ನು ಪಡೆಯುತ್ತೇವೆ ಮತ್ತು ಅದನ್ನು ತಿಳಿದುಕೊಳ್ಳುವುದರಿಂದ, ನಾವು ಕೊನೆಯ ಎರಡನ್ನು ಪಡೆಯುತ್ತೇವೆ.
ಇದು ಬಹಳ ಸಂಕೀರ್ಣವಾದ ವಿಷಯವಾಗಿದ್ದರೂ, ಬೌದ್ಧಧರ್ಮವು ವಿವರಿಸುವ ಗುರಿಗಳೊಂದಿಗೆ ನಾವು ಹೀಗೆ ಕೆಲಸಮಾಡುತ್ತೇವೆ ಮತ್ತು ನಾವು ನಮ್ಮ ಅಭ್ಯಾಸದ ಮೂಲಕ ಗುರಿಯಾಗಿರಿಸಿಕೊಂಡ, ಬೌದ್ಧ ಧರ್ಮವು ವಿವರಿಸುವ ಗುರಿಗಳನ್ನು ಸಾಧಿಸಬಹುದು ಎಂದು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಒಮ್ಮೆ ನಾವು ಎಲ್ಲವನ್ನೂ ನಿಖರವಾಗಿ ಅರ್ಥಮಾಡಿಕೊಂಡರೆ, ಅದು ಸೂಚಿಸುವ ಎಲ್ಲಾ ಇತರ ವಿಷಯಗಳೊಂದಿಗೆ ನಾವು ಅದನ್ನು ಒಟ್ಟುಗೂಡಿಸಬಹುದು. ಧ್ಯಾನದ ಮೂಲಕ, ನಾವು ಅದರೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳುತ್ತೇವೆ: ನಾವು ವಾಸ್ತವವನ್ನು ನೋಡಲು ಅಭ್ಯಾಸ ಮಾಡುತ್ತೇವೆ.
ಕೇಳುವ, ಯೋಚಿಸುವ ಮತ್ತು ಧ್ಯಾನಿಸುವ ಆಧಾರದ ಮೇಲೆ, ನಮ್ಮ ಅಭ್ಯಾಸದಿಂದ ನಾವು ಇಟ್ಟುಕೊಂಡಿರುವ ಗುರಿಯನ್ನು ಸಾಧಿಸಲು ನಿಜವಾಗಿಯೂ ಸಾಧ್ಯ, ಅದು ಸತ್ಯ, ಅದನ್ನು ಸಾಧಿಸಬಹುದು ಮತ್ತು ನಾವು ಶ್ರಮಪಟ್ಟರೆ ನಾವೇ ಅದನ್ನು ಸಾಧಿಸಬಹುದು ಎಂದು ನಾವು ಮನವರಿಕೆ ಮಾಡಿಕೊಳ್ಳಬಹುದು. ಈ ರೀತಿಯಾಗಿ, ನಮ್ಮ ಅಭ್ಯಾಸವು ಹೆಚ್ಚು ದೃಢವಾಗಿರುತ್ತದೆ, ಏಕೆಂದರೆ ಇದು ನಮ್ಮ ಗುರಿಯು ಸಾಧ್ಯವಾಗಬಹುದು ಎಂಬುದರ ಬಗ್ಗೆಯ ಅಸ್ತಿರವಾದ ನಂಬಿಕೆಯನ್ನು ಆಧರಿಸಿರುವುದಿಲ್ಲ. ಬದಲಾಗಿ, ನಾವು ಅದರ ಬಗ್ಗೆ ಧೃಡವಾಗಿರುತ್ತೇವೆ.