ಪುನರವಲೋಕನ
ನಾವು ಎರಡು ಸತ್ಯಗಳನ್ನು ಅರ್ಥಮಾಡಿಕೊಳ್ಳುವುದರಿಂದ ನಾಲ್ಕು ಆರ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದು, ಮತ್ತು ಅಮೂಲ್ಯವಾದ ತ್ರಿರತ್ನಗಳಲ್ಲಿ ವಿಶ್ವಾಸಗಳಿಸುವುದು ಹೇಗೆ ಎಂಬುದನ್ನು ವಿವರಿಸುವ ಪರಮಪೂಜ್ಯ ದಲೈ ಲಾಮಾ ಅವರ ಈ ನಿರ್ದಿಷ್ಟ ಪದ್ಯದ ಮೇಲಿನ ನಮ್ಮ ಚರ್ಚೆಯನ್ನು ಮುಂದುವರಿಸುತ್ತಿದ್ದೇವೆ. ಎರಡು ಸತ್ಯಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ:
- ಸಾಪೇಕ್ಷ ಅಥವಾ ಸಾಂಪ್ರದಾಯಿಕ ಸತ್ಯ; ನಮಗೆ ನಿಜವಾಗಿ ಗೋಚರಿಸುವ ವಿಷಯವು ಕಾರಣಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿ ಉದ್ಭವಿಸುತ್ತವೆ. ಈ ಜಗತ್ತಿನಲ್ಲಿ ವಿಷಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ನೋಡಿದರೆ, ನಾವು ಇದನ್ನೇ ಗಮನಿಸುತ್ತೇವೆ. ಆದರೆ ದುರದೃಷ್ಟವಶಾತ್, ನಾವು ಈ ರೀತಿಯ ವಿಷಯಗಳನ್ನು ಸಾಮಾನ್ಯವಾಗಿ ನೋಡುವುದಿಲ್ಲ.
- ಸತ್ಯದ ಆಳವಾದ ಮಟ್ಟದಲ್ಲಿ, ನಮ್ಮ ಗೊಂದಲವು ಪ್ರಕ್ಷೇಪಿಸುವ ಅಸಾಧ್ಯವಾದ ರೀತಿಯಲ್ಲಿ ವಿಷಯಗಳು ಅಸ್ತಿತ್ವದಲ್ಲಿರುವುದಿಲ್ಲ. ಉದಾಹರಣೆಗೆ, ಯಾವುದೇ ಕಾರಣಗಳು, ಪರಿಸ್ಥಿತಿಗಳು, ಭಾಗಗಳು ಅಥವಾ ಇನ್ನಾವುದೇ ಇಲ್ಲದೆ ವಿಷಯಗಳು ಸ್ವತಂತ್ರವಾಗಿ, ತಮ್ಮ ಸ್ವಂತ ಶಕ್ತಿಯಿಂದ ಉದ್ಭವಿಸುತ್ತದೆ ಎಂದು ನಾವು ಭಾವಿಸುತ್ತೇವೆ; ಆದರೆ ಇದು ಸುಳ್ಳಾಗಿರುತ್ತದೆ.
ಹೀಗೆ ಇದೊಂದು ಅಡಿಪಾಯವಾಗಿರುತ್ತದೆ.
ಚತುರಾರ್ಯ ಸತ್ಯಗಳು, ವಾಸ್ತವವನ್ನು ಸರಿಯಾಗಿ ನೋಡುವುದರ ಸುತ್ತಲಿರುವ ನಮ್ಮ ಗೊಂದಲದ ಬಗ್ಗೆ ಮಾತನಾಡುತ್ತದೆ. ನಾವು ವಾಸ್ತವದ ಬಗ್ಗೆ ಗೊಂದಲಗೊಂಡಾಗ, ಇದು ದುಃಖಕ್ಕಾಗಿರುವ ಒಂದು ಕಾರಣವಾಗಿ ಕಾರ್ಯನಿರ್ವಹಿಸುತ್ತದೆ: ಕಾರಣವು ಎರಡನೆಯ ಆರ್ಯ ಸತ್ಯವಾಗಿರುತ್ತದೆ ಮತ್ತು ದುಃಖವು ಮೊದಲನೆಯದಾಗಿರುತ್ತದೆ. ಮತ್ತೊಂದೆಡೆ, ನಾವು ವಾಸ್ತವವನ್ನು ಸರಿಯಾಗಿ ನೋಡಿದರೆ ಮತ್ತು ಸಾರ್ವಕಾಲಿಕವಾಗಿ ಅದರ ಮೇಲೆ ಕೇಂದ್ರೀಕೃತವಾಗಿರಲು ಸಾಧ್ಯವಾದರೆ, ನಾವು ಮೂರನೇ ಆರ್ಯ ಸತ್ಯವಾದ ದುಃಖದ ನಿಜವಾದ ನಿಲುಗಡೆಯನ್ನು ಹೊಂದಿರುತ್ತೇವೆ. ತಿಳುವಳಿಕೆಯು, ನಿಜವಾದ ಮಾರ್ಗವಾಗಿರುತ್ತದೆ, ಇದು ನಾಲ್ಕನೇ ಆರ್ಯ ಸತ್ಯವಾಗಿದ್ದು, ಇದು ನಿಜವಾದ ನಿಲುಗಡೆಗೆ ಕಾರಣವಾಗುತ್ತದೆ.
ನಾವು ವಾಸ್ತವದ ಬಗ್ಗೆ ಅಸ್ಪಷ್ಟರಾಗಿರುವಾಗ, ನಾವು ಅರಿವಿಲ್ಲದಿರುವಿಕೆ ಮತ್ತು ಗೊಂದಲದ ಆಧಾರದ ಮೇಲೆ ನಡೆಯುತ್ತೇವೆ ಮತ್ತು ನಮ್ಮ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ನಾವು ಶಾಶ್ವತಗೊಳಿಸುತ್ತೇವೆ. ನಾವು ಈ ಅಜ್ಞಾನದಿಂದ ನಮ್ಮನ್ನು ಬೇರ್ಪಡಿಸಿದರೆ, ನಾವು ಸಂಸಾರಿಕ ಪುನರ್ಜನ್ಮದಿಂದ ಹಿಂತಿರುಗಬಹುದು - ಅಥವಾ ಹೊರಬರಬಹುದು.
ಅಮೂಲ್ಯವಾದ ತ್ರಿರತ್ನಗಳು
ಈಗ ನಾವು ಪದ್ಯದ ಮೂರನೇ ಸಾಲನ್ನು ನೋಡೋಣ:
ಮಾನ್ಯವಾದ ಅರಿವಿನಿಂದ ಉದ್ಭವಿಸಿ, ಮೂರು ಆಶ್ರಯಗಳು ಸತ್ಯವೆಂಬ ವಿಷಯದಲ್ಲಿ ನಮ್ಮ ಮನವರಿಕೆಯು ದೃಢವಾಗುತ್ತದೆ.
ನಾವು ಈಗಾಗಲೇ ನೋಡಿದಂತೆ, ಮೂರು ಆಶ್ರಯಗಳು ಬುದ್ಧ, ಧರ್ಮ ಮತ್ತು ಸಂಘವನ್ನು ಉಲ್ಲೇಖಿಸುತ್ತವೆ. ಇವು ಸಂಸ್ಕೃತ ಪದಗಳಾಗಿವೆ. ಬುದ್ಧ ಶಾಕ್ಯಮುನಿ ಮತ್ತು ಇತರ ಎಲ್ಲಾ ಬುದ್ಧರು ಜ್ಞಾನೋದಯವನ್ನು ತಲುಪಿದವರು ಮತ್ತು ನಾವು ಅದನ್ನು ಹೇಗೆ ಸಾಧಿಸಬೇಕೆಂಬುದನ್ನು ನಮಗೆ ಕಲಿಸುತ್ತಾರೆ. ಅವರ ಬೋಧನೆಯೇ ಧರ್ಮ. ಸಂಘವು ಹೆಚ್ಚು ಅರಿತುಕೊಂಡ ಸಮುದಾಯವಾಗಿರುತ್ತದೆ. ಇದು ತಿಳುವಳಿಕೆಯ ಒಂದು ಹಂತವಾಗಿದೆ, ಆದರೆ ಇವುಗಳಿಗೆ ಆಳವಾದ ಅರ್ಥವೂ ಇದೆ.
ಇದರ ಆಳವಾದ ಅರ್ಥವನ್ನು ನೋಡಿದರೆ, ಧರ್ಮವು ನಿಜವಾದ ಸಾಧನೆಗಳನ್ನು ಸೂಚಿಸುತ್ತದೆ - ಅವುಗಳೆಂದರೆ ಮೂರನೇ ಮತ್ತು ನಾಲ್ಕನೇ ಆರ್ಯ ಸತ್ಯಗಳ ಸಾಧನೆ. ನಿಮಗೆ ನೆನಪಿರುವಂತೆ, ಮೂರನೆಯದು ದುಃಖ ಮತ್ತು ಅದರ ಕಾರಣಗಳ ನಿಜವಾದ ನಿಲುಗಡೆಯಾಗಿರುತ್ತದೆ ಮತ್ತು ಇದು ಹಂತ-ಹಂತವಾಗಿ ಸಂಭವಿಸುತ್ತದೆ. ನಾವು ಅದನ್ನು ಪೂರ್ಣವಾಗಿ ಸಾಧಿಸಿದಾಗ, ನಾವು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ (ಸಂಸಾರ) ಮುಕ್ತಿಯನ್ನು ಪಡೆಯುತ್ತೇವೆ. ಪ್ರತಿಯೊಬ್ಬರನ್ನು ವಿಮೋಚನೆಯತ್ತ ಉತ್ತಮವಾಗಿ ಹೇಗೆ ಕೊಂಡೊಯ್ಯುವುದು ಎಂದು ತಿಳಿಯಲು, ಕಾರಣ ಮತ್ತು ಪರಿಣಾಮದ ಎಲ್ಲಾ ವಿವರಗಳನ್ನು ತಿಳಿದುಕೊಳ್ಳುವುದರಿಂದ ನಮ್ಮನ್ನು ತಡೆಯುವ ಕಾರಣಗಳನ್ನು ನಿವಾರಿಸಿದಾಗ, ನಾವು ಪ್ರಬುದ್ಧ ಬುದ್ಧರಾಗುತ್ತೇವೆ. ನಾಲ್ಕನೆಯ ಸತ್ಯವು ಈ ನಿಜವಾದ ನಿಲುಗಡೆಗಳನ್ನು ತರುವ ತಿಳುವಳಿಕೆಯಾಗಿರುತ್ತದೆ ಮತ್ತು ಅದು ನಿಜವಾದ ನಿಲುಗಡೆಗಳಿಂದ ಉಂಟಾಗುತ್ತದೆ.
ಇವೆರಡು ಆಶ್ರಯವನ್ನು ರೂಪಿಸುತ್ತವೆ. ಹಾಗಾದರೆ ಆಶ್ರಯವು ನಮ್ಮನ್ನು ದುಃಖದಿಂದ ಮತ್ತು ಇತರರಿಗೆ ಸಹಾಯ ಮಾಡುವಲ್ಲಿ ಇರುವ ನಮ್ಮ ಅಸಮರ್ಪಕತೆಯಿಂದ ರಕ್ಷಿಸುವ ವಿಷಯವಾಗಿರುತ್ತದೆ. ನಾವು ನಿಜವಾದ ನಿಲುಗಡೆಗಳನ್ನು ಮತ್ತು ನಿಜವಾದ ಮನಸ್ಸಿನ ಮಾರ್ಗವನ್ನು ಸಾಧಿಸಿದರೆ, ನಾವು ದುಃಖವನ್ನು ಅನುಭವಿಸುವುದನ್ನು ಮತ್ತು ಇತರರಿಗೆ ಸಹಾಯ ಮಾಡುವ ಬಗೆಗಿರುವ ಅಸಮರ್ಥತೆಯನ್ನು ದೂರವಿಡುತ್ತೇವೆ. ಯಾರೋ ಬೇರೊಬ್ಬರು ಇದನ್ನು ಸಾಧಿಸಿದ್ದರಿಂದ, ನಾವು ಅವರಿಗೆ ನಮ್ಮನ್ನು ಒಪ್ಪಿಸುತ್ತೇವೆ ಮತ್ತು ನಾವು ಮಾಂತ್ರಿಕವಾಗಿ ಸುರಕ್ಷಿತಗೊಳ್ಳುತ್ತೇವೆ ಎಂದಾಗಿರುವುದಿಲ್ಲ.
"ಅಬ್ರಹಾಮಿಕ್ ಧರ್ಮಗಳು" ಎಂದು ಕರೆಯಲ್ಪಡುವವು - ಜುದಾಯಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮಗಳು - ಇವುಗಳನ್ನು ಇತಿಹಾಸ-ಆಧಾರಿತ ಧರ್ಮಗಳು ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಧರ್ಮವು ಒಂದು ಐತಿಹಾಸಿಕ ವ್ಯಕ್ತಿಯನ್ನು ಹೊಂದಿರುತ್ತದೆ, ಅವರು ಐತಿಹಾಸಿಕ ಘಟನೆಯಲ್ಲಿ, ದೇವರಿಂದ ಒಂದು ರೀತಿಯ ದಿವ್ಯಜ್ಞಾನವನ್ನು ಪಡೆದಿರುತ್ತಾರೆ. ನಂತರ ಅವರು ಈ ಸತ್ಯವನ್ನು ಬಹಿರಂಗಪಡಿಸಿರುತ್ತಾರೆ ಮತ್ತು ಅದು ಅಂತಿಮವಾಗಿರುತ್ತದೆ. ಮೋಸೆಸ್ ಅಥವಾ ಯೇಸು ಅಥವಾ ಮೊಹಮ್ಮದ್ ಮಾಡಿದ್ದನ್ನು ನಾವು ಮಾಡಲು ಸಾಧ್ಯವಿಲ್ಲ, ನಾವು ಅವರಲ್ಲಿ ನಂಬಿಕೆಯಿಡಬೇಕು, ಅದರ ಮೂಲಕ ನಾವು ನಮ್ಮ ದುಃಖದಿಂದ ರಕ್ಷಿಸಲ್ಪಡುತ್ತೇವೆ. ಇಲ್ಲಿ ನಂಬಿಕೆಯೆಂದರೆ, ಯಾವುದೇ ವ್ಯಕ್ತಿಯ ಮೇಲಿರುವ ವೈಯಕ್ತಿಕ ನಂಬಿಕೆ ಅಥವಾ ಅವರು ಕಲಿಸಿದ ಮತ್ತು ಬಹಿರಂಗಪಡಿಸಿದಿರುವುದರ ಮೇಲಿರುವ ನಂಬಿಕೆಯನ್ನು ಸೂಚಿಸುತ್ತದೆ, ಉದಾಹರಣೆಗೆ ದೇವರು ಮೋಸೆಸ್ಗೆ ನೀಡಿದ ಹತ್ತು ಕಮಾಂಡ್ಮೆಂಟ್ಸ್ನ ಐತಿಹಾಸಿಕ ಘಟನೆ, ಅಥವಾ ಯೇಸು ಹೊಸ ಟೆಸ್ಟಂಮೆಂಟ್ ಅನ್ನ ಬಹಿರಂಗಪಡಿಸಿದ್ದು ಅಥವಾ ಮೊಹಮ್ಮದ್ ಕುರಾನ್ ಅನ್ನು ಬಹಿರಂಗಪಡಿಸಿದ್ದ ಘಟನೆ. ಈ ಮಹತ್ವದ ಐತಿಹಾಸಿಕ ಘಟನೆಗಳು ಈ ಧರ್ಮಗಳ ಕೇಂದ್ರದಲ್ಲಿವೆ.
ಹಿಂದೂ ಧರ್ಮ, ಬೌದ್ಧ ಮತ್ತು ಜೈನ ಧರ್ಮದಂತಹ ಭಾರತೀಯ ಧರ್ಮಗಳನ್ನು "ಧಾರ್ಮಿಕ ಧರ್ಮಗಳು" ಎಂದು ಕರೆಯಬಹುದಾಗಿದ್ದು, ಇವುಗಳು ಸಂಪೂರ್ಣವಾಗಿ ವಿಭಿನ್ನವಾಗಿರುತ್ತವೆ. ಬುದ್ಧ, ಅಥವಾ ಕೃಷ್ಣ, ಅಥವಾ ಮಹಾವೀರರ (ಜೈನ ಧರ್ಮದ ಸ್ಥಾಪಕ) ಐತಿಹಾಸಿಕ ಸಂಗತಿಗಳು ಇಲ್ಲಿನ ಕೇಂದ್ರ ಬಿಂದುವಾಗಿರುವುದಿಲ್ಲ. ಬದಲಿಗೆ, ನಾವು ಸೇರಿದಂತೆ ಎಲ್ಲರೂ ಈ ಜೀವಿಗಳು ಸಾಧಿಸಿರುವ ಸ್ಥಿತಿಯನ್ನೇ ಸಾಧಿಸಬಹುದು. ಬೌದ್ಧ ಧರ್ಮದ ವಿಷಯದಲ್ಲಿ, ನಾವೆಲ್ಲರೂ ವಿಮೋಚನೆ ಮತ್ತು ಜ್ಞಾನೋದಯವನ್ನು ಪಡೆಯಬಹುದು ಮತ್ತು ಇತರ ಧಾರ್ವಿುಕ ಧರ್ಮಗಳು ಸಹ ವಿಮೋಚನೆಯ ತಮ್ಮದೇ ಆದ ವ್ಯಾಖ್ಯಾನವನ್ನು ಪ್ರಸ್ತುತಪಡಿಸುತ್ತವೆ. ಇದು ಪಾಶ್ಚಾತ್ಯ, ಅಬ್ರಹಾಮಿಕ್ ಧರ್ಮಗಳು ಮತ್ತು ಭಾರತೀಯ ಧರ್ಮಗಳ ನಡುವಿನ ಮೂಲಭೂತ ವ್ಯತ್ಯಾಸಗಳಲ್ಲಿ ಒಂದಾಗಿರುತ್ತದೆ.
ನಾವು ಮೂರು ಆಶ್ರಯಗಳನ್ನು ನೋಡುವಾಗ, ನಮಗೆ ಪರಿಚಯವಿರುವ ಅಬ್ರಹಾಮಿಕ್ ಧರ್ಮಗಳ ಪ್ರಕ್ಷೇಪದ ಮೂಲಕ ಅವುಗಳನ್ನು ನೋಡದಿರುವುದು ಮುಖ್ಯವಾಗಿರುತ್ತದೆ. ಜ್ಞಾನೋದಯವನ್ನು ಪಡೆದವನು ಬುದ್ಧನೊಬ್ಬನೇ ಆಗಿರುವುದಿಲ್ಲ, ಮತ್ತು ನಾವು ಅವನನ್ನು ನಂಬಿದರೆ, ನಾವು ಉಳಿಯುತ್ತೇವೆ ಎಂದಾಗಿರುವುದಿಲ್ಲ. ಆದ್ದರಿಂದ ನಾನು "ಆಶ್ರಯ" ಎಂಬ ಪದವನ್ನು ಸಾಮಾನ್ಯವಾಗಿ ಬಳಸುವುದಿಲ್ಲ ಏಕೆಂದರೆ ಅದು ನಿಷ್ಕ್ರಿಯವಾದ ಅರ್ಥವನ್ನು ನೀಡುತ್ತದೆ, "ಬುದ್ಧ, ನನ್ನನ್ನು ರಕ್ಷಿಸು!" ಎಂದರೆ ಸಾಕು, ನಾವು ಉಳಿದುಕೊಳ್ಳುತ್ತೇವೆ ಎಂಬಂತೆ ಇರುತ್ತದೆ. ಅದು ಬೌದ್ಧ ಧರ್ಮವಾಗಿರುವುದಿಲ್ಲ. ನಾನು "ಸುರಕ್ಷಿತ ನಿರ್ದೇಶನ" ಎಂಬ ಪದವನ್ನು ಬಳಸಲು ಬಯಸುತ್ತೇನೆ, ಇಲ್ಲಿ ಬುದ್ಧ, ಧರ್ಮ ಮತ್ತು ಸಂಘವು ನಾವು ಸಾಗಬೇಕಾದ ಸುರಕ್ಷಿತ ದಿಕ್ಕನ್ನು ಸೂಚಿಸುತ್ತದೆ, ಇಲ್ಲಿ ನಾವು ಬುದ್ಧ ಸಾಧಿಸಿದ್ದನ್ನು ನಮಗಾಗಿ ಸಾಧಿಸಿಕೊಳ್ಳಬಹುದು. ನಮ್ಮನ್ನು ರಕ್ಷಿಸಿಕೊಳ್ಳಲು ಬುದ್ಧನು ಒಂದು ಮಾರ್ಗವನ್ನು ಕಲಿಸಿದ್ದರೂ, ಅದನ್ನು ನಾವೇ ಆಚರಣೆಗೆ ಕರೆತರಬೇಕಾಗಿರುತ್ತದೆ. ನಮ್ಮ ಸ್ವಂತ ಸಾಧನೆಗಾಗಿ ನಮ್ಮ ಸ್ವಂತ ಶ್ರಮ ಬೇಕು, ಅದು ನಮ್ಮನ್ನು ದುಃಖದಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಧರ್ಮ ರತ್ನ
ನಾವು ಆಳವಾದ ಧರ್ಮದ ರತ್ನ ಅಥವಾ ಮುತ್ತಿನ – ಅದನ್ನು ನೀವು ಹೇಗಾದರೂ ಕರೆಯಬಹುದು - ಬಗ್ಗೆ ಮಾತನಾಡುವಾಗ, ಇದು ಅಪರೂಪದ ಮತ್ತು ಅಮೂಲ್ಯವಾದ ಸಂಗತಿಯಾಗಿರುತ್ತದೆ, ಇದು ಟಿಬೆಟಿಯನ್ನರು ರತ್ನವನ್ನು ಅನುವಾದಿಸಿದ ಎರಡು ಉಚ್ಚಾರಾಂಶಗಳ ಅಕ್ಷರಶಃ ಅರ್ಥವಾಗಿದೆ. ಇಲ್ಲಿ ನಾವು ನಿಜವಾದ ನಿಲುಗಡೆಗಳ ನಿಜವಾದ ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದೇವೆ ಮತ್ತು ಅವುಗಳನ್ನು ತರುವ ಮತ್ತು ಅವುಗಳಿಂದ ಉಂಟಾಗುವ ನಿಜವಾದ ಮಾರ್ಗ ಮನಸ್ಸುಗಳ ಸಾಧನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇವುಗಳು ನಾವೇ ಸಾಧಿಸಬೇಕಾದ ವಿಷಯಗಳಾಗಿರುತ್ತವೆ, ಆದ್ದರಿಂದ ಅವುಗಳನ್ನು ಸಾಧಿಸಲು ಸಾಧ್ಯ ಎಂದು ನಾವು ಮನವರಿಕೆ ಮಾಡಿಕೊಳ್ಳಬೇಕು. ಎರಡು ಸತ್ಯಗಳು ಮತ್ತು ನಾಲ್ಕು ಸತ್ಯಗಳ ಬಗೆಗಿರುವ ನಮ್ಮ ಚರ್ಚೆಯು ವಿಮೋಚನೆ ಮತ್ತು ಜ್ಞಾನೋದಯದಂತಹ ವಿಷಯಗಳಿವೆಯೆಂದೂ ಮತ್ತು ನಾವೇ ಅವುಗಳನ್ನು ಸಾಧಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.
ಬುದ್ಧ ರತ್ನ
ಬುದ್ಧರು ವಿಮೋಚನೆ ಮತ್ತು ಆನಂತರ ಪೂರ್ಣವಾಗಿ ಜ್ಞಾನೋದಯವನ್ನು ಪಡೆದವರಾಗಿರುತ್ತಾರೆ. ಇದು ಕೇವಲ ಬುದ್ಧ ಶಾಕ್ಯಮುನಿಯನ್ನಲ್ಲದೆ, ಇತರ ಅನೇಕ ಬುದ್ಧರನ್ನೂ ಸೂಚಿಸುತ್ತದೆ. ಆ ಸ್ಥಿತಿಯನ್ನು ನಾವೇ ಸಾಧಿಸುವ ಮಾರ್ಗವನ್ನು ಅವರು ಕಲಿಸಿದ್ದಾರೆ ಮತ್ತು ಸೂಚಿಸಿದ್ದಾರೆ. ಅವರು ನಮಗೆ ಸೂಚಿಸುವ ಎರಡು ಮಾರ್ಗಗಳಿವೆ: ಅವರ ತಿಳುವಳಿಕೆ ಮತ್ತು ಜ್ಞಾನೋದಯದ ಆಧಾರದ ಮೇಲೆ, ಮತ್ತು ಅವರ ಬೋಧನೆಗಳು ಮತ್ತು ಅವರ ಉದಾಹರಣೆಗಳ ಮೂಲಕ. ಇದು ಒಂದು ಮುಖ್ಯ ಅಂಶವಾಗಿರುತ್ತದೆ, ಏಕೆಂದರೆ ನಾವು ಇತರರಿಗೆ ಮೌಖಿಕ ಬೋಧನೆಗಳೊಂದಿಗೆ ಕಲಿಯಲು ಸಹಾಯ ಮಾಡವುದಲ್ಲದೆ, ನಾವು ಬೋಧಿಸುತ್ತಿರುವುದರ ಜೀವಂತ ಉದಾಹರಣೆಯಾಗಬಹುದು. ಧರ್ಮವು ಒಂದು ರೀತಿಯ ಅಮೂರ್ತ ಬೋಧನೆಯಾಗಿರುವುದಿಲ್ಲ, ಬದಲಿಗೆ ಜನರು ಮತ್ತು ನಾವು ವಾಸ್ತವವಾಗಿ ಸಾಕಾರಗೊಳಿಸಬಹುದಾದ ಸಂಗತಿಯಾಗಿರುತ್ತದೆ.
ಸಂಘ ರತ್ನ
ಈ ತೃತೀಯ ರತ್ನವಾದ ಆರ್ಯ ಸಂಘವು ಏಕೆ ಬೇಕು ಎಂದು ಕೆಲವರು ಯೋಚಿಸಬಹುದು. ಕೇವಲ ಬುದ್ಧ ಮತ್ತು ಧರ್ಮ ಸಾಕಲ್ಲವೇ? ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ಸಂಘವನ್ನು ಪ್ರತಿನಿಧಿಸುತ್ತಾರೆಯಾದರೂ, ಅದು ನಿಜವಾದ ಸಂಘ ರತ್ನವಾಗಿರುವುದಿಲ್ಲ. ಪ್ರತಿಮೆಗಳು ಮತ್ತು ವರ್ಣಚಿತ್ರಗಳು ಬುದ್ಧರನ್ನು ಪ್ರತಿನಿಧಿಸುವಂತೆ ಮತ್ತು ಗ್ರಂಥಗಳು ಧರ್ಮವನ್ನು ಪ್ರತಿನಿಧಿಸುವಂತೆ, ಅವು ಕೇವಲ ಪ್ರಾತಿನಿಧ್ಯಗಳಾಗಿರುತ್ತವೆ. ಬುದ್ಧ, ಧರ್ಮ ಮತ್ತು ಸಂಘವನ್ನು ಪ್ರತಿನಿಧಿಸುವ ವಿಷಯಗಳಾಗಿ, ಈ ಪ್ರತಿಮೆಗಳು, ಪುಸ್ತಕಗಳು ಮತ್ತು ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ನಮಗೆ ಗೌರವವನ್ನು ತೋರಿಸಬೇಕೆಂಬುದರ ಸಂಕೇತವಾಗಿರುತ್ತಾರೆ, ಏಕೆಂದರೆ ಅಮೂರ್ತ ವಿಷಯಗಳಿಗೆ ಗೌರವವನ್ನು ತೋರಿಸುವುದು ಸುಲಭವಾಗಿರುವುದಿಲ್ಲ. ಸಹಜವಾಗಿ, ಎಲ್ಲದಕ್ಕೂ ಆಳವಾದ ಅರ್ಥವಿರುತ್ತದೆ.
ಸಂಘ ರತ್ನವು ಬಹಳ ಮುಖ್ಯವಾಗಿರುತ್ತದೆ. ಸಂಘವು ಆರ್ಯರನ್ನು ಅಥವಾ ಎರಡು ಸತ್ಯಗಳ ಆಧಾರದ ಮೇಲೆ ಚತುರಾರ್ಯ ಸತ್ಯಗಳನ್ನು ಪರಿಕಲ್ಪನಾರಹಿತವಾಗಿ ನೋಡಿದವರನ್ನು ಸೂಚಿಸುತ್ತದೆ. ಅವರು ಇವುಗಳನ್ನು ಕಲ್ಪನಾರಹಿತವಾಗಿ ಅರಿತಿರುವುದರಿಂದ, ಅವರು ಒಂದು ಹಂತದ ನಿಜವಾದ ನಿಲುಗಡೆಗಳನ್ನು ಸಾಧಿಸಿರುತ್ತಾರೆ ಮತ್ತು ಒಂದು ಹಂತದ ನಿಜವಾದ ಮಾರ್ಗ ಮನಸ್ಸುಗಳನ್ನು ಸಾಧಿಸಿರುತ್ತಾರೆ, ಆದರೆ ಸಂಪೂರ್ಣವಾಗಿ ಅಲ್ಲ. ಹಂತಹಂತವಾಗಿ ಹೆಚ್ಚು ಮುಂದುವರಿದ ಆರ್ಯರು ಎರಡರಲ್ಲೂ ಹೆಚ್ಚಿನದನ್ನು ಸಾಧಿಸುತ್ತಾರೆ ಮತ್ತು ಅಂತಿಮವಾಗಿ ವಿಮೋಚನೆಯನ್ನು ಪಡೆಯುತ್ತಾರೆ ಮತ್ತು ಅಂತಿಮವಾಗಿ ಅವರಿಗೆ ಜ್ಞಾನೋದಯವಾಗುತ್ತದೆ. ಆರ್ಯ ಸತ್ಯಗಳನ್ನು ಹೀಗೆ ಏಕೆ ವ್ಯಾಖ್ಯಾನಿಸಲಾಗುತ್ತದೆಯೆಂದರೆ, ಆರ್ಯರು - ವಾಸ್ತವದ ಪರಿಕಲ್ಪನೆಯಿಲ್ಲದ ಅರಿವನ್ನು ಹೊಂದಿರುವವರು - ಅದನ್ನು ಸತ್ಯವೆಂದು ನೋಡುತ್ತಾರೆ. ಇದು ನಮಗೆ ಹೀಗೆ ಹೇಳುತ್ತದೆ:
- ಇವೆಲ್ಲವನ್ನೂ ಗ್ರಹಿಸುವ ಮತ್ತು ನಿಜವಾದ ನಿಲುಗಡೆಗಳು ಮತ್ತು ನಿಜವಾದ ಮಾರ್ಗ ಮನಸ್ಸುಗಳನ್ನು ಸಾಧಿಸುವವರು ಕೇವಲ ಬುದ್ಧರಲ್ಲ. ಬದಲಿಗೆ, ಇದು ಹಂತಹಂತವಾದ ಪ್ರಕ್ರಿಯೆಯಾಗಿರುತ್ತದೆ.
- ವಿಮೋಚನೆ ಅಥವಾ ಜ್ಞಾನೋದಯವನ್ನು ಪಡೆಯುವ ಮುಂಚೆಯೇ, ನಾವು ನಿಜವಾದ ದುಃಖಗಳ ವಿವಿಧ ಅಂಶಗಳನ್ನು ದೂರವಾಗಿಸಲು ಪ್ರಾರಂಭಿಸುತ್ತೇವೆ ಮತ್ತು ನಿವಾರಿಸಲು ಪ್ರಾರಂಭಿಸುತ್ತೇವೆ, ಏಕೆಂದರೆ ನಾವು ಅವುಗಳ ನಿಜವಾದ ಕಾರಣಗಳ ವಿವಿಧ ಹಂತಗಳನ್ನು ನಿವಾರಿಸುತ್ತೇವೆ.
ವಿಮೋಚನೆ ಮತ್ತು ಜ್ಞಾನೋದಯವು ಕ್ರಮೇಣ ಪ್ರಕ್ರಿಯೆಗಳಾಗಿರುತ್ತವೆ, ಇವು ನಾವು ಬುದ್ಧ ಅಥವಾ ವಿಮೋಚನೆಗೊಳ್ಳುವ ಮುಂಚೆಯೇ ಪ್ರಾರಂಭವಾಗುತ್ತವೆ. ಬುದ್ಧರಿಗಿಂತ ಹೆಚ್ಚಾಗಿ ಆರ್ಯರೊಂದಿಗೆ ಸಂಬಂಧ ಕಲ್ಪಿಸಲು ಸುಲಭ, ಏಕೆಂದರೆ ಅವರಿಗೆ ಇನ್ನೂ ಕೆಲವು ಸಮಸ್ಯೆಗಳಿರುತ್ತವೆ ಮತ್ತು ಇನ್ನೂ ಕೆಲವು ಸಮಸ್ಯೆಗಳು ಮತ್ತು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಸಂಪೂರ್ಣವಾಗಿ ಮುಕ್ತವಾಗಿರುವುದಿಲ್ಲ, ಅವರು ಭಾಗಶಃ ಮುಕ್ತರಾಗಿರುತ್ತಾರೆ. ಈ ರೀತಿಯಾಗಿ, ಅವರೊಂದಿಗೆ ಸಂಬಂಧ ಕಲ್ಪಿಸಲು ಸ್ವಲ್ಪ ಸುಲಭವಾಗಿರುತ್ತದೆ.
ಆರ್ಯ ಸಂಘವು ನಮಗೆ ಪ್ರೋತ್ಸಾಹ ಮತ್ತು ಸ್ಫೂರ್ತಿಯನ್ನು ನೀಡುತ್ತದೆ, ಹಂತ ಹಂತವಾಗಿ, ನಾವು ಅವರು ನಡೆದ ಸುರಕ್ಷಿತ ದಿಕ್ಕಿನಲ್ಲಿ ನಡೆದರೆ, ನಾವು ಕೂಡ ವಿಮೋಚನೆ ಮತ್ತು ಜ್ಞಾನೋದಯದ ಅಂತಿಮ ಗುರಿಗಳನ್ನು ತಲುಪಬಹುದು. ನಾವು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗದಿದ್ದರೂ, ಸದ್ಯಕ್ಕೆ, ನಾವು ಸ್ವಲ್ಪ ಮಟ್ಟಿಗೆ ದುಃಖದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ, ಏಕೆಂದರೆ ನಾವು ದುಃಖವನ್ನು ಉಂಟುಮಾಡುವ ಒಂದು ಹಂತದ ಅರಿವಿನ ಕೊರತೆಯಿಂದ ನಮ್ಮನ್ನು ಮುಕ್ತಗೊಳಿಸುತ್ತೇವೆ. ವಾಸ್ತವದ ಮೇಲೆ ನಾವು ಎಷ್ಟು ಸಂಪೂರ್ಣವಾಗಿ ಗಮನಹರಿಸಬಹುದು ಎಂಬುದು ಇಲ್ಲಿ ಮುಖ್ಯವಾಗಿರುತ್ತದೆ. ನೀವು ಇನ್ನೂ ಆರ್ಯರಾಗಿದ್ದರೆ, ನೀವು ಸಾರ್ವಕಾಲಿಕವಾಗಿ ಗಮನವಿಡಲು ಸಾಧ್ಯವಾಗುವುದಿಲ್ಲ, ಆದರೆ ನೀವು ಬುದ್ಧರಾಗಿದ್ದರೆ, ಹಾಗೆ ಮಾಡಬಹುದು.
ವಿಮೋಚನೆ ಮತ್ತು ಜ್ಞಾನೋದಯ ಒಂದೇ ಆಗಿರುವುದಿಲ್ಲ. ನಾವು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ಮುಕ್ತರಾದಾಗ ಅದು ವಿಮೋಚನೆಯಾಗಿರುತ್ತದೆ, ಅಂದರೆ ನಾವು ಅರ್ಹತ್ ಗಳು, ವಿಮೋಚನೆಗೊಂಡ ಜೀವಿಗಳು. ಜ್ಞಾನೋದಯವೆಂದರೆ ನಾವು ಕೇವಲ ಭಾವನಾತ್ಮಕ ಅಸ್ಪಷ್ಟತೆಗಳಿಂದ - ಗೊಂದಲದ ಭಾವನೆಗಳು ಮತ್ತು ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಅರಿವಿಲ್ಲದಿರುವುದು – ಮುಕ್ತರಾಗಿರುವುದಲ್ಲದೆ, ನಾವು ಅರಿವಿನ ಅಸ್ಪಷ್ಟತೆಗಳಿಂದ - ಅರಿವಿನ ನಿರಂತರ ಅಭ್ಯಾಸಗಳು - ಮುಕ್ತರಾಗಿರುತ್ತೇವೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಅಸಾಧ್ಯವಾದ ಪ್ರಕ್ಷೇಪಗಳನ್ನು ನಂಬುವ ನಮ್ಮ ಅಭ್ಯಾಸದಿಂದಾಗಿ - ನಮ್ಮ ಮಾನಸಿಕ ಚಟುವಟಿಕೆಯು, ಪ್ರಕ್ಷೇಪಗಳನ್ನು ನಿರ್ಮಿಸುವುದನ್ನು ಮುಂದುವರೆಸುತ್ತದೆ ಮತ್ತು ಅವು ವಾಸ್ತವಕ್ಕೆ ಅನುಗುಣವಾಗಿರುತ್ತವೆ ಎಂದು ನಾವು ನಂಬುತ್ತೇವೆ. ಇದರಿಂದ ನಾವು ನಮ್ಮ ಗೊಂದಲಮಯ ಭಾವನೆಗಳನ್ನು ಪಡೆಯುತ್ತೇವೆ. ಈ ವಂಚನೆಯ ದೃಶ್ಯಗಳು ವಾಸ್ತವಕ್ಕೆ ಹೊಂದಿಕೆಯಾಗುತ್ತವೆ ಎಂದು ನಾವು ನಂಬುವುದನ್ನು ನಿಲ್ಲಿಸಿದಾಗ ನಾವು ವಿಮೋಚನೆಯನ್ನು ಪಡೆಯುತ್ತೇವೆ. ಇದೆಲ್ಲವೂ ಅಸಂಬದ್ಧ ಮತ್ತು ವಿಷಯಗಳು ಈ ರೀತಿಯಾಗಿ ಕಾಣಿಸಬಹುದಾದರೂ, ಅವು ನಿಜವಾಗಿ ಹಾಗೆ ಇರುವುದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಗ್ರಹಿಕೆ ಇನ್ನೂ ಸೀಮಿತವಾಗಿರುತ್ತದೆ ಮತ್ತು ವಿಷಯಗಳನ್ನು ಚೌಕಟ್ಟಿನಲ್ಲಿರಿಸಿ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವಂತೆ ನೋಡಲು ನಾವು ಬಯಸುತ್ತೇವೆ ಆದರೆ ಅವು ನಿಜವಾಗಿ ಹಾಗೆ ಇರುವುದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ.
ಪರಮಾಣು ಭೌತಶಾಸ್ತ್ರದ ಅತ್ಯಂತ ಸರಳ ಮಟ್ಟದಲ್ಲಿಯೂ ಸಹ, ಪರಮಾಣುಗಳು ಮತ್ತು ಶಕ್ತಿ ಕ್ಷೇತ್ರಗಳಿರುತ್ತವೆ, ಆದರೆ ಯಾವುದೇ ವಸ್ತುವಿನ ಸುತ್ತಲೂ ಈ ರೀತಿಯ ಧೃಡ ರೇಖೆಯಿರುವುದಿಲ್ಲ - "ರೇಖೆಯ ಈ ಬದಿಯಲ್ಲಿ ವಸ್ತುವಿರುತ್ತದೆ. ಆ ಬದಿಯಲ್ಲಿ ಇರುವುದಿಲ್ಲ.” ವಿಷಯಗಳು ತೋರುವಷ್ಟು ದೃಡವಾಗಿರುವುದಿಲ್ಲ. ಈ ವಂಚನೆಯ ದೃಶ್ಯಗಳನ್ನು ನಿರ್ಮಿಸಲು ಕಾರಣವಾಗುವ ಅರಿವಿನ ಅಸ್ಪಷ್ಟತೆಗಳನ್ನು ನಾವು ನಿವಾರಿಸಿದರೆ, ಮನಸ್ಸು ಅವುಗಳನ್ನು ಪ್ರಕ್ಷೇಪಿಸುವುದನ್ನು ನಿಲ್ಲಿಸುತ್ತದೆ ಮತ್ತು ನಾವು ಜ್ಞಾನವನ್ನು ಪಡೆಯುತ್ತೇವೆ. ನಾವು ಜ್ಞಾನೋದಯವನ್ನು ಪಡೆದಾಗ, ನಾವು ಸಂಪೂರ್ಣವಾಗಿ ಎಲ್ಲದರ ಪರಸ್ಪರ ಸಂಬಂಧವನ್ನು ಏಕಕಾಲದಲ್ಲಿ ನೋಡುತ್ತೇವೆ. ಇದು ಇತರರನ್ನು ಅವರ ಸ್ವಂತ ವಿಮೋಚನೆ ಮತ್ತು ಜ್ಞಾನೋದಯಕ್ಕೆ ಕರೆದೊಯ್ಯುವ ಅತ್ಯಂತ ಕೌಶಲ್ಯಪೂರ್ಣ ಮಾರ್ಗವನ್ನು ನೋಡಲು ನಮಗೆ ಅನುಮತಿಸುತ್ತದೆ.
ನಾವು ಆರ್ಯರ ಬಗ್ಗೆ ಮಾತನಾಡುವಾಗ, ನಾವು ಕೇವಲ ಜ್ಞಾನೋದಯವನ್ನು ಗುರಿಯಾಗಿಸಿಕೊಂಡ ಬೋಧಿಸತ್ವ ಆರ್ಯರ ಬಗ್ಗೆ ಮಾತನಾಡುವುದಿಲ್ಲ. ನಾವು ಕೇವಲ ವಿಮೋಚನೆಯ ಗುರಿಯನ್ನು ಹೊಂದಿರುವ ಆರ್ಯರ ಬಗ್ಗೆಯೂ ಮಾತನಾಡುತ್ತಿದ್ದೇವೆ. ನಾವು ಸುರಕ್ಷಿತ ದಿಕ್ಕಿನ ವಿಷಯವಾಗಿ ತ್ರಿರತ್ನಗಳ ಬಗ್ಗೆ ಮಾತನಾಡುವಾಗ, ನಾವು ಕೇವಲ ವಿಮೋಚನೆಯನ್ನು ಅಥವಾ ವಿಮೋಚನೆ ಮತ್ತು ಜ್ಞಾನೋದಯ ಎರಡನ್ನೂ ಗುರಿಯಾಗಿಸಿಕೊಂಡವರ ಬಗ್ಗೆ ಮಾತನಾಡುತ್ತೇವೆ, ಕೇವಲ ಜ್ಞಾನೋದಯದ ಗುರಿಯನ್ನು ಹೊಂದಿರುವ ಬೋಧಿಸತ್ವಗಳ ಬಗ್ಗೆ ಅಲ್ಲ.
ಆಧ್ಯಾತ್ಮಿಕ ಹಾದಿಯಲ್ಲಿ ಮುನ್ನಡೆಯುವುದು
ಈಗ ನಾಲ್ಕನೇ ಸಾಲನ್ನು ನೋಡೋಣ:
ವಿಮೋಚನೆಗೆ ಕಾರಣವಾಗುವ ಮಾರ್ಗ ಮನಸ್ಸಿನ ಈ ಮೂಲವನ್ನು ಅಳವಡಿಸಲು ನನ್ನನ್ನು ಪ್ರೇರೇಪಿಸಿ.
ನಾವು ವಿಮೋಚನೆಯ ಮಾರ್ಗದ ಮನಸ್ಸಿನ ಬಗ್ಗೆ ಮಾತನಾಡುವಾಗ, ಅದನ್ನು ಹಲವು ವಿಧಗಳಲ್ಲಿ ಪ್ರಸ್ತುತಪಡಿಸಬಹುದು, ಅವುಗಳಲ್ಲಿ ಒಂದು ಪ್ರೇರಣೆಯ ಮೂರು ವ್ಯಾಪ್ತಿಗಳಾಗಿರುತ್ತವೆ, ಇದನ್ನು ಸಾಮಾನ್ಯವಾಗಿ ಟಿಬೆಟಿಯನ್ ಪದ "ಲ್ಯಾಮ್-ರಿಮ್" (ಕ್ರಮವಾದ ಹಂತಗಳು) ಎಂದು ಕರೆಯಲಾಗುತ್ತದೆ. ಈ ಕ್ರಮವಾದ ಮಾರ್ಗವು ಮೂರು ಪ್ರಗತಿಶೀಲ ಗುರಿಗಳಾಗಿರುತ್ತವೆ:
- ಮೊದಲ ವ್ಯಾಪ್ತಿಯು ಕೆಟ್ಟ ಪುನರ್ಜನ್ಮಗಳನ್ನು ತಪ್ಪಿಸುವುದು ಮತ್ತು ಉತ್ತಮ ಪುನರ್ಜನ್ಮಗಳನ್ನು ಪಡೆಯುವುದಾಗಿರುತ್ತದೆ. ನಾವು ಕಡಿಮೆ ಸಂಕಟಗಳೊಂದಿಗೆ ಉತ್ತಮ ಪುನರ್ಜನ್ಮಗಳನ್ನು ಹೊಂದಲು ಬಯಸುತ್ತೇವೆ, ಏಕೆಂದರೆ ಆಧ್ಯಾತ್ಮಿಕ ಹಾದಿಯಲ್ಲಿ ಮುಂದುವರಿಯಲು ಇದು ನಮಗೆ ಅತ್ಯುತ್ತಮವಾದ ಪರಿಸ್ಥಿತಿಗಳನ್ನು ನೀಡುತ್ತದೆ. ನಾವು ಜಿರಳೆಯಾಗಿ ಮರುಜನ್ಮ ಪಡೆದರೆ, ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಹೆಚ್ಚು ಸಾಧಿಸಲು ಸಾಧ್ಯವಿಲ್ಲ. ಕೆಟ್ಟ ಪುನರ್ಜನ್ಮಗಳನ್ನು ತಪ್ಪಿಸಲು, ಕಾರಣ ಮತ್ತು ಪರಿಣಾಮದ ಸಂಬಂಧಿತ ಸತ್ಯದ ಬಗೆಗಿರುವ ನಮ್ಮ ಗೊಂದಲವನ್ನು ನಾವು ನಿವಾರಿಸಬೇಕು. ಕೆಟ್ಟ ಪುನರ್ಜನ್ಮಗಳ ಮುಖ್ಯ ಕಾರಣವೆಂದರೆ ವಿನಾಶಕಾರಿ ನಡವಳಿಕೆಗಳು, ನಮ್ಮ ಕ್ರಿಯೆಗಳ ಪರಿಣಾಮಗಳ ಬಗ್ಗೆ ನಮಗೆ ತಿಳಿದಿಲ್ಲದ ಕಾರಣ ನಾವು ವಿನಾಶಕಾರಿಯಾಗಿ ವರ್ತಿಸುತ್ತೇವೆ ಅಥವಾ ಅವು ನಮ್ಮನ್ನು ಸಂತೋಷಪಡಿಸುತ್ತವೆ ಎಂದು ನಾವು ಭಾವಿಸುತ್ತೇವೆ.
- ಮಧ್ಯಂತರ ವ್ಯಾಪ್ತಿಯು, ಎಲ್ಲಾ ಮೂರು ರೀತಿಗಳ ದುಃಖಗಳಿಂದ ವಿಮೋಚನೆಯನ್ನು ಪಡೆಯುವ ಗುರಿಯಾಗಿರುತ್ತದೆ – ಅಸಂತೋಷ, ನಮ್ಮ ಸಾಮಾನ್ಯ ಸಂತೋಷ ಮತ್ತು ಈ ಎರಡಕ್ಕೂ ಆಧಾರವಾಗಿರುವ ನಮ್ಮ ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮ. ಹೀಗೆ ಮಾಡಲು ನಾವು ಶೂನ್ಯತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಆಳವಾದ ಸತ್ಯದ ಬಗೆಗಿರುವ ನಮ್ಮ ಗೊಂದಲವನ್ನು ನಿವಾರಿಸಬೇಕು. ವಾಸ್ತವದಲ್ಲಿ, ನಾವು ಎಲ್ಲಾ ನಾಲ್ಕು ಆರ್ಯ ಸತ್ಯಗಳ ಬಗ್ಗೆ ಸಾರ್ವಕಾಲಿಕ ತಿಳುವಳಿಕೆಯನ್ನು ಪಡೆಯಬೇಕು. ಎಲ್ಲಾ ಸಮಯದಲ್ಲೂ, ಏಕಕಾಲದಲ್ಲಿ ಗಮನಹರಿಸುವುದು ಬಹಳಾ ಕಷ್ಟವಾಗಿರುತ್ತದೆ, ಆದ್ದರಿಂದ ನಾವು ಇನ್ನೂ ಮುಂದೆ ಸಾಗಬೇಕಾಗಿದೆ.
- ಸುಧಾರಿತ ವ್ಯಾಪ್ತಿಯು ಬುದ್ಧನ ಪ್ರಬುದ್ಧ ಸ್ಥಿತಿಯನ್ನು ಸಾಧಿಸುವುದಾಗಿರುತ್ತದೆ, ಇದರಿಂದ ನಾವು ಇತರರಿಗೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸಹಾಯ ಮಾಡಬಹುದು. ಆಳವಾದ ಸತ್ಯದ ಮೇಲೆ ಕೇಂದ್ರೀಕೃತವಾಗಿರುವಾಗ, ನಾವು ಸಾಪೇಕ್ಷ ಸತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇವೆ. ಕೇವಲ ಬುದ್ಧರು ಸಾರ್ವಕಾಲಿಕವಾಗಿ ಎರಡು ಸತ್ಯಗಳ ಮೇಲೆ ಏಕಕಾಲದಲ್ಲಿ ಗಮನಹರಿಸಬಲ್ಲರು.
“ಎರಡು ಸತ್ಯಗಳಿಂದ, ನಾಲ್ಕು ಸತ್ಯಗಳು; ನಾಲ್ಕು ಸತ್ಯಗಳಿಂದ, ಮೂರು ಆಶ್ರಯಗಳು,” – ಈ ಸಾಲನ್ನು ಆಳವಾಗಿ ನೋಡಿದರೆ, ಇದು ಮೇಲಿನ ಮೂರು ವ್ಯಾಪ್ತಿಗಳ ಮೂಲವಾಗಿದೆ ಮತ್ತು ಈ ಗುರಿಗಳಿಗೆ ಕಾರಣವಾಗುವ ಅಭ್ಯಾಸಗಳಾಗಿವೆ ಎಂಬುದನ್ನು ನೋಡಬಹುದು. ಇದು ಬೇರಾಗಿರುತ್ತದೆ, ಮತ್ತು ಬೇರು ಬೀಜವಲ್ಲ. ಬೇರು ಎಂದರೆ ಸಸ್ಯಕ್ಕೆ ಧೃಡತೆ ಮತ್ತು ಶಕ್ತಿಯನ್ನು ನೀಡುವುದಾಗಿರುತ್ತದೆ. ತರ್ಕದ ಆಧಾರದ ಮೇಲೆ ನಾವು ಮೂರು ಗುರಿಗಳನ್ನು ಸಾಧಿಸಬಹುದು, ಅವು ಅಸ್ತಿತ್ವದಲ್ಲಿವೆ ಮತ್ತು ಅವುಗಳನ್ನು ನಾವೇ ಸಾಧಿಸಬಹುದು ಎಂಬುದು ವಾಸ್ತವಿಕವಾಗಿದ್ದರೆ, ಅದು ನಮಗೆ ದೃಢತೆಯನ್ನು ನೀಡುತ್ತದೆ, ಗುರಿಗಾಗಿ ಇರುವ ಸಂಪೂರ್ಣ ಆಧ್ಯಾತ್ಮಿಕ ಮಾರ್ಗವನ್ನು ಬೆಂಬಲಿಸುತ್ತದೆ.
ಮೂರು ವ್ಯಾಪ್ತಿಗಳ ಮೂಲವು ಆಧ್ಯಾತ್ಮಿಕ ಶಿಕ್ಷಕರೊಂದಿಗಿರುವ ಆರೋಗ್ಯಕರ ಸಂಬಂಧವಾಗಿದೆ ಎಂದು ಇತರ ಪ್ರಸ್ತುತಿಗಳು ಹೇಳುತ್ತವೆ ಮತ್ತು ನೀವು ಇವನ್ನು ಸಾಮಾನ್ಯವಾಗಿ ಎಲ್ಲಾ ಲ್ಯಾಮ್-ರಿಮ್ ಪಠ್ಯಗಳಲ್ಲಿ ಕಾಣಬಹುದು. ಈ ಆರೋಗ್ಯಕರ ಸಂಬಂಧವು ಸಂಪೂರ್ಣ ಆಧ್ಯಾತ್ಮಿಕ ಮಾರ್ಗದ ಮೂಲವಾಗಿದೆ, ಅಂದರೆ ನಾವು ಶಿಕ್ಷಕರಿಂದ ಸ್ಫೂರ್ತಿ ಪಡೆಯುತ್ತೇವೆ ಮತ್ತು ಈ ಸ್ಫೂರ್ತಿಯೇ ನಮಗೆ ಗುರಿಗಳತ್ತ ಮುಂದುವರಿಯಲು ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡುತ್ತದೆ.
ನಾವು ಆಧ್ಯಾತ್ಮಿಕ ಹಾದಿಯಲ್ಲಿ ಧೃಡವಾದ ರೀತಿಯಲ್ಲಿ ಹೇಗೆ ಮುಂದುವರಿಯಬಹುದು ಎಂಬುದರಲ್ಲಿ ಎರಡು ವ್ಯತ್ಯಾಸಗಳನ್ನು ಮತ್ತೊಮ್ಮೆ ಕಂಡುಕೊಳ್ಳುತ್ತೇವೆ:
- ನಮ್ಮ ಆಧ್ಯಾತ್ಮಿಕ ಶಿಕ್ಷಕರೊಂದಿಗಿನ ನಮ್ಮ ಸಂಬಂಧದಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಬಳಸುವುದು ಒಂದು ಮಾರ್ಗವಾಗಿದೆ. ಅದರ ಆಧಾರದ ಮೇಲೆ, ನಾವು ಈ ಒಂದು ತಾರ್ಕಿಕ ಚಿಂತನೆಯನ್ನು ಬಳಸುತ್ತೇವೆ: “ನನ್ನ ಶಿಕ್ಷಕರು ಮಾಹಿತಿಯ ಮಾನ್ಯ ಮೂಲವಾಗಿದ್ದಾರೆ. ಆದುದರಿಂದ ಜ್ಞಾನೋದಯವನ್ನು ಗಳಿಸಲು ಸಾಧ್ಯ ಎಂದು ನನ್ನ ಗುರುಗಳು ಹೇಳಿದ್ದು ಸರಿಯಾಗಿದೆ. ಅದರ ಬಗ್ಗೆ ಊಹಾಪೋಹ ಹೇಳಲು ನನ್ನ ಶಿಕ್ಷಕರಿಗೆ ಯಾವುದೇ ಕಾರಣವಿಲ್ಲ.” ಆದ್ದರಿಂದ ಇಲ್ಲಿ ಒಂದು ನಿರ್ದಿಷ್ಟ ರೀತಿಯ ತರ್ಕವು ಇದೆ. ಆದರೆ ಹೆಚ್ಚಿನ ಜನರು ಅದನ್ನು ಭಾವನಾತ್ಮಕ ಮಟ್ಟದಲ್ಲಿ ಹೆಚ್ಚಾಗಿ ಅನುಭವಿಸುತ್ತಾರೆ, ಇಲ್ಲಿ ಶಿಕ್ಷಕರು ನಮ್ಮನ್ನು ಭಾವನಾತ್ಮಕವಾಗಿ ಎಷ್ಟು ಸ್ಫೂರ್ತಿಗೊಳಿಸುತ್ತಾರೆ ಎಂದರೆ ಅದು ನಮಗೆ ಈ ಹಾದಿಯಲ್ಲಿ ನಡೆಯಲು ನಂಬಲಾಗದ ಶಕ್ತಿಯನ್ನು ನೀಡುತ್ತದೆ. ಇದು ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುವ ಎರಡು ವಿಧಾನಗಳಲ್ಲಿ ಮೊದಲನೆಯದನ್ನು ಹೋಲುತ್ತದೆ. ಇಲ್ಲಿ ನಾವು ಸಾಪೇಕ್ಷ ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಪ್ರಾರಂಭಿಸುತ್ತೇವೆ, ಇಲ್ಲಿ ನಾವು ಇತರರಿಗೆ ಸಹಾಯ ಮಾಡಲು ಆಕರ್ಷಿತಗೊಳ್ಳುತ್ತೇವೆ ಮತ್ತು ಅಲ್ಲಿಂದ ಅದು ಸಾಧ್ಯ ಎಂಬ ನಂಬಿಕೆಯ ಆಧಾರದ ಮೇಲೆ ಜ್ಞಾನೋದಯವನ್ನು ಪಡೆಯಲು ನಾವು ಆಕರ್ಷಿತಗೊಳ್ಳುತ್ತೇವೆ. ನಂತರವೇ, ಅದನ್ನು ಸಾಧಿಸಬಹುದು ಎಂಬುದು ನಮಗೆ ತರ್ಕದಿಂದ ಮನವರಿಕೆಯಾಗುತ್ತದೆ.
- ಮತ್ತೊಂದೆಡೆ, ನಾವು ಮೊದಲು ಆಳವಾದ ಬೋಧಿಚಿತ್ತವನ್ನು ಅಭಿವೃದ್ಧಿಪಡಿಸುವ ಅಭ್ಯಾಸದ ವಿಧಾನದ ಬಗ್ಗೆ ಅವಲೋಕಿಸುವಾಗ, ಪದ್ಯದಲ್ಲಿ ವಿವರಿಸಿದಂತೆ ನಾವು ಶೂನ್ಯತೆಯ ಬಗ್ಗೆ ದೃಢತೆಯನ್ನು ಬೆಳೆಸಿಕೊಳ್ಳುತ್ತೇವೆ. ಮೊದಲು ನಾವು ಅದನ್ನು ಸಾಧಿಸಲು ಸಾಧ್ಯ ಎಂದು ಮನವರಿಕೆ ಮಾಡಿಕೊಳ್ಳುತ್ತೇವೆ ಮತ್ತು ನಂತರ ನಾವು ನಿಜವಾಗಿಯೂ ಜ್ಞಾನೋದಯಕ್ಕಾಗಿ ಕೆಲಸ ಮಾಡುವ ಭಾವನಾತ್ಮಕ ಹಾದಿಯಲ್ಲಿ ನಡೆಯುತ್ತೇವೆ, ನಮ್ಮ ಹೃದಯವನ್ನು ತೆರೆಯುತ್ತೇವೆ, ಇತ್ಯಾದಿ.
ಇವೆರಡೂ ಆಧ್ಯಾತ್ಮಿಕ ಮಾರ್ಗವನ್ನು ಸಮೀಪಿಸುವ ಮಾನ್ಯ ಮಾರ್ಗಗಳಾಗಿವೆ, ಮತ್ತು ಇದು ನಮ್ಮ ಸ್ವಂತ ವ್ಯಾಪ್ತಿ ಅಥವಾ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಅತ್ಯಂತ ತೀಕ್ಷ್ಣವಾದ ಸಾಮರ್ಥ್ಯಗಳು ಮತ್ತು ಬುದ್ಧಿಶಕ್ತಿ ಹೊಂದಿರುವವರು ತಾರ್ಕಿಕ ಪ್ರಸ್ತುತಿಯನ್ನು ಅವಲಂಬಿಸುವುದು ತಮ್ಮ ವ್ಯಕ್ತಿತ್ವಕ್ಕೆ ಹೆಚ್ಚು ಸೂಕ್ತವೆಂದು ಕಂಡುಕೊಳ್ಳುತ್ತಾರೆ ಮತ್ತು ತೀಕ್ಷ್ಣವಲ್ಲದವರು ಭಾವನಾತ್ಮಕ ಮಟ್ಟದಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಾರೆ ಎಂದು ಪಠ್ಯಗಳಲ್ಲಿ ವಿವರಿಸಲಾಗಿದೆ. ಈ ಎರಡನೇ ಗುಂಪಿಗೆ, ಶಿಕ್ಷಕರಿಂದ ಸ್ಫೂರ್ತಿ ಮತ್ತು ಪ್ರೀತಿ ಮತ್ತು ಸಹಾನುಭೂತಿಯ ಆಧಾರದ ಮೇಲೆ ಅಭಿವೃದ್ಧಿಪಡಿಸಿದ ಭಾವನೆಯನ್ನು ಅವಲಂಬಿಸುವುದು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
ಅನೇಕ ವಿಧಗಳಲ್ಲಿ, ಎರಡೂ ವಿಧಾನಗಳನ್ನು ಸಮತೋಲಿತವಾಗಿ ಬಳಸುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಮತ್ತು ನಾವು ಎಲ್ಲದಕ್ಕೂ ಮೂರನೇ, ಭಕ್ತಿಯ ಅಂಶವನ್ನು ಸೇರಿಸಬಹುದು. ಕೆಲವರು, ಸಹಸ್ರಾರು ವರ್ಷಗಳಿಂದ ಅಭ್ಯಾಸಿಗರು ತೊಡಗಿಸಿಕೊಂಡಿರುವ ಆಚರಣೆಗಳಿಗೆ ಹಾಜರಾಗುವ ಮತ್ತು ಅವನ್ನು ನಿರ್ವಹಿಸುವ ಮೂಲಕ ಜ್ಞಾನೋದಯದ ಮಾರ್ಗವನ್ನು ಅನುಸರಿಸುವ ಸ್ಫೂರ್ತಿಯನ್ನು ಪಡೆಯುತ್ತಾರೆ. ಒಂದು ನಿರ್ದಿಷ್ಟ ಶೈಲಿಯಲ್ಲಿ ಇದನ್ನು ಪಾಲಿಸುವುದು ನಮಗೆ ಹೆಚ್ಚು ಆರಾಮದಾಯಕವಾಗಿರುವ ಕಾರಣ ನಾವು ಬೌದ್ಧ ಮಾರ್ಗವನ್ನು ಸಮೀಪಿಸುವ ಇತರ ಮಾರ್ಗಗಳನ್ನು ಕೆಳಗೆ ನೋಡಬಾರದು. ನಾವು ನಮ್ಮನ್ನು ಮತ್ತು ನಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಬೇಕಾದರೆ, ನಾವು ಮೂರೂ ವಿಧಾನಗಳನ್ನು ಸಂಪೂರ್ಣವಾಗಿ ಸಮತೋಲನಗೊಳಿಸಬೇಕಾಗಿದೆ.
ಇದು ಪರಮಪೂಜ್ಯ ದಲೈ ಲಾಮಾ ಅವರ ನಿರ್ದಿಷ್ಟ ಪ್ರಾರ್ಥನೆಯಲ್ಲಿರುವ ಈ ನಿರ್ದಿಷ್ಟ ಪದ್ಯದ ಮೂಲ ಪ್ರಸ್ತುತಿಯಾಗಿದೆ. ನನ್ನ ಗುರುಗಳು ಯಾವಾಗಲೂ ಹೇಳುವಂತೆ ನೀವು ಹಸುವಿನಿಂದ ಹಾಲು ಕರೆದಂತೆ, ಈ ಸಣ್ಣ ಪದ್ಯದಿಂದ ಬಹಳಷ್ಟು ಅರ್ಥವನ್ನು ಪಡೆಯತ್ತಲೇ ಇರಬಹುದು.
ಪ್ರಶ್ನೆಗಳು ಮತ್ತು ಉತ್ತರಗಳು
ಚತುರಾರ್ಯ ಸತ್ಯಗಳ ಪ್ರಾಯೋಗಿಕ ಬಳಕೆ
ನನ್ನ ಸ್ನೇಹಿತನೊಬ್ಬ ಸದಾ ಚಿಂತಿಸುತ್ತಿದ್ದರೆ, ನಾನು ಅವನಿಗೆ ಹೀಗೆ ಹೇಳಬಲ್ಲೆ, ನೀನು ಆರಾಮವಾಗಿ ಇರು ಮತ್ತು ತಲೆಕೆಡಿಸಿಕೊಳ್ಳಬೇಡ. ಇದು ನಮಗೆ ಮತ್ತು ಇತರರಿಗೆ ನಾವು ನೀಡಬಹುದಾದ ಜ್ಞಾಪನೆಯಾಗಿದೆ. ಆದರೆ ನಾನು ಸ್ವಾರ್ಥಿಯಾಗಿರುವಾಗ ಮತ್ತು ನಾನು ಇತರರೊಂದಿಗೆ ವ್ಯವಹರಿಸುತ್ತಿರುವಾಗ, ನನ್ನ ಸ್ವ-ಕೇಂದ್ರಿತ ಮನಸ್ಸಿನ ಪ್ರಕ್ಷೇಪಣ ಎಲ್ಲಿದೆ ಮತ್ತು ವಾಸ್ತವ ಎಲ್ಲಿದೆ ಎಂಬುದನ್ನು ಪರೀಕ್ಷಿಸುವುದನ್ನು ಮರೆಯದಿರಲು, ನಾನು ಒಂದು ರೀತಿಯ ಮಂತ್ರ ಅಥವಾ ಜ್ಞಾಪನೆಯನ್ನು ಬಳಸಬಹುದೇ?
ಟಿಬೆಟಿನ ಮಹಾನ್ ಮಾಸ್ಟರ್ ತ್ಸೋಂಗ್‌ಖಾಪಾ ಅವರ ಪ್ರಕಾರ, ನಾವು ಶೂನ್ಯತೆಯ ಮೇಲೆ ಕಲ್ಪನಾರಹಿತವಾಗಿ ಗಮನಹರಿಸುವ ಸಮಯವನ್ನು ಹೊರತುಪಡಿಸಿದರೆ, ನಮ್ಮ ಮಾನಸಿಕ ಚಟುವಟಿಕೆಯು, ಅಸ್ತಿತ್ವದಲ್ಲಿರುವ ಅಸಾಧ್ಯವಾದ ಮಾರ್ಗಗಳನ್ನು ಯಾವಾಗಲೂ ಯೋಜಿಸುತ್ತಿರುತ್ತದೆ. ಇದು ಸಾರ್ವಕಾಲಿಕವಾಗಿ ನಡೆಯುತ್ತಿರುತ್ತದೆ. ಆಳವಾದ ಧ್ಯಾನದ ಹೊರತಾಗಿ ನಮ್ಮ ಅನುಭವದ ಪ್ರತಿ ಕ್ಷಣವೂ ನಿರಾಕರಣೆಯ ವಸ್ತುವಾಗಿರುತ್ತದೆ.
ನಾವು ಗ್ರಹಿಸುವ ವಂಚಿತ ನೋಟಗಳನ್ನು ನಿವಾರಿಸಲು ನಮಗೆ ಸಹಾಯ ಮಾಡುವ ಅನೇಕ ಸಣ್ಣ ವಿಷಯಗಳಿವೆ. ಇಲ್ಲಿ ಸಹಾಯಕವಾಗುವ ಒಂದು ದೃಶ್ಯವೆಂದರೆ ಕಲ್ಪನೆಯ "ಬಲೂನ್ ಅನ್ನು ಒಡೆಯುವುದು", ಆದರೆ ಇದನ್ನು ದ್ವಂದ್ವವಲ್ಲದ ರೀತಿಯಲ್ಲಿ ಮಾಡಬೇಕಾಗಿದೆ, ಇಲ್ಲಿ ಪಿನ್ ಹಿಡಿದಿರುವ "ನಾನು" ಇಲ್ಲ ಮತ್ತು ಅಲ್ಲಿ ದೊಡ್ಡ ಬಲೂನ್ ಇಲ್ಲ, ಮತ್ತು "ನಾನು" ಹೋಗಿ ಬಲೂನ್ ಅನ್ನು ಒಡೆಯುತ್ತೇನೆ ಎನ್ನುವುದಿಲ್ಲ. ಇಲ್ಲಿ ಬಲೂನ್ - ವಿಷಯಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬುದರ ಉತ್ಪ್ರೇಕ್ಷೆ – ಅನ್ನು ಒಡೆದು ಹಾಕಲಾಗಿದೆ. ಇಲ್ಲಿ ವಂಚಿಸುವ ನೋಟವು "ನೀನು ಬಹಳಾ ಕೆಟ್ಟವನು" ಅಥವಾ "ನಾನು ಇರುವ ಈ ಪರಿಸ್ಥಿತಿಯು ಬಹಳಾ ಭೀಕರವಾಗಿದೆ" ಎಂಬುದಾಗಿರಬಹುದು ಮತ್ತು ನಾವು ಎಲ್ಲಾ ಕಾರಣಗಳು ಮತ್ತು ಪರಿಸ್ಥಿತಿಗಳು ಮತ್ತು ಇದೇ ರೀತಿಯಾಗಿ ಅನುಭವವನ್ನು ಅನುಭವಿಸುವ ಪ್ರತಿಯೊಬ್ಬರ ವಿಷಯವಾಗಿ ನಾವು ಅದನ್ನು ನೋಡುವುದಿಲ್ಲ. ನಾವು ಹೀಗೆ ಯೋಚಿಸುತ್ತೇವೆ, "ನಾನು ಪಾಪದವನು!" ಇದೆಲ್ಲವೂ ಒಡೆದುಹೋಗುವಂತೆ ನಾವು ಊಹಿಸುತ್ತೇವೆ.
ಇನ್ನೊಂದು ದೃಶ್ಯವು ತೆರೆದ ಪುಸ್ತಕದ್ದಾಗಿರುತ್ತದೆ, ಒಂದು ಪುಟದಲ್ಲಿ "ಪಾಪದವನಾದ ನಾನು ಇದರಿಂದ ಬಳಲುತ್ತಿದ್ದೇನೆ" ಮತ್ತು ಇನ್ನೊಂದು ಪುಟವು ನಾವು ನಿಭಾಯಿಸಲು ಸಾಧ್ಯವಾಗದ ಭಯಾನಕ ಪರಿಸ್ಥಿತಿಯಾಗಿರುತ್ತದೆ. ಇದೊಂದು ಭಯಾನಕ ಕಾಲ್ಪನಿಕ ಕಥೆಯಂತಾಗಿರುತ್ತದೆ. ಪುಸ್ತಕವು ಮುಚ್ಚುವುದರ ಮಾನಸಿಕ ದೃಶ್ಯವನ್ನು ನಾವು ಹೊಂದಿರುತ್ತೇವೆ ಮತ್ತು ಅದು ಕಾಲ್ಪನಿಕ ಕಥೆಯ ಅಂತ್ಯವಾಗಿರುತ್ತದೆ. ಹೆಚ್ಚಿನ ಪರಿಭಾಷೆಯಲ್ಲಿ ಹೇಳುವುದಾದರೆ, ದ್ವಂದ್ವವಾದದ ಪುಸ್ತಕವನ್ನು ಮುಚ್ಚುವಂತೆ ನಾವು ಇದನ್ನು ಗ್ರಹಿಸುತ್ತೇವೆ!
ನಿಮಗೆ ಮಂತ್ರ ಬೇಕಾದರೆ, ನಮಗೆ ಗೋಚರಿಸುವುದು ಮೂಲತಃವಾಗಿ ಅಸಂಬದ್ಧ ಎಂಬುದನ್ನು ನೆನಪಿಟ್ಟುಕೊಳ್ಳಲು ನೀವು "ಅಸಂಬದ್ಧ" ಅಥವಾ “ತ್ಯಾಜ್ಯ" ಎಂದು ಹೇಳಬಹುದು. ಮುಖ್ಯ ಸಮಸ್ಯೆಯೆಂದರೆ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಬಲವಾದ ಗೊಂದಲಮಯ ಭಾವನೆಯನ್ನು ಅನುಭವಿಸುತ್ತಿರುವಾಗ ಇದು ಹೆಚ್ಚು ಅಗತ್ಯವಾಗಿರುತ್ತದೆ. ಟಿಬೆಟಿಯನ್ನರು ಬಳಸುವ ಉದಾಹರಣೆಯೆಂದರೆ ನೀವು ಯಾವುದೋ ಕೃತ್ಯ ಎಸಗಿದ್ದೀರಿ ಎಂದು ತಪ್ಪಾಗಿ ಆರೋಪಿಸಿದಾಗ, ನಿಮ್ಮಲ್ಲಿ ಎದ್ದು ಬರುವ ಭಾವನೆಯು “ನಾನು ಹಾಗೆ ಮಾಡಲಿಲ್ಲ! ನಿಮ್ಮ ಪ್ರಕಾರ ನಾನು ಸುಳ್ಳುಗಾರ ಮತ್ತು ಕಳ್ಳನೇ?!", ‘ನಾನು’ ಎಂಬುದರ ಬಲವಾದ ಅರ್ಥವಾಗಿರುತ್ತದೆ.
ಬೌದ್ಧಧರ್ಮ ಮತ್ತು ಇತರ ಧಾರ್ವಿುಕ ಧರ್ಮಗಳ ನಡುವಿನ ವ್ಯತ್ಯಾಸ
ಇತರ ಧಾರ್ವಿುಕ ಧರ್ಮಗಳಿವೆ ಮತ್ತು ಪ್ರತಿಯೊಂದರಲ್ಲೂ ಸಮಸ್ಯೆಗಳಿವೆ ಆದರೆ ಸಮಸ್ಯೆಗಳಿಂದ ವಿಮೋಚನೆಯಿದೆ ಎಂದು ಹೇಳಲಾಗುತ್ತದೆ ಎಂದು ನೀವು ಹೇಳಿದ್ದೀರಿ. ಸಹಜವಾಗಿ, ಪ್ರತಿಯೊಂದು ಧರ್ಮವು ಅದರ ವಿಧಾನಗಳು ಉತ್ತಮವೆಂದು ಹೇಳುತ್ತದೆ, ಹಾಗಾದರೆ ಈ ದೃಷ್ಟಿಕೋನದಿಂದ ಬೌದ್ಧಧರ್ಮಕ್ಕೆ ನಿರ್ದಿಷ್ಟವಾದುದನ್ನು ನೀವು ವಿವರಿಸಬಹುದೇ?
ನೀವು ಹೇಳಿದ್ದು ಸರಿ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ವಿಮೋಚನೆಯನ್ನು ಪಡೆಯುವ ಬಗ್ಗೆ ಮಾತನಾಡುತ್ತವೆ ಮತ್ತು ವಿಮೋಚನೆಯ ಸ್ಥಿತಿ ಹೇಗಿದೆ ಎಂಬುದನ್ನು ವಿವರಿಸುತ್ತವೆ. ಅವುಗಳಲ್ಲಿ ಪ್ರತಿಯೊಂದೂ, ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮೂಲಕ ವಿಮೋಚನೆಯನ್ನು ಪಡೆಯಬಹುದು ಎಂದು ಹೇಳುತ್ತವೆ, ಮತ್ತು ಅವು ವಾಸ್ತವವನ್ನು ವಿವರಿಸುತ್ತವೆ. ಈ ರೀತಿಯಾಗಿ, ಬೌದ್ಧಧರ್ಮವು ಭಾರತೀಯ ಧರ್ಮಗಳಲ್ಲಿ ಒಂದಾಗಿ ಸಂಪೂರ್ಣವಾಗಿ ಒಗ್ಗಿಕೊಳ್ಳುತ್ತದೆ. ಬೌದ್ಧಧರ್ಮದ ಬಗ್ಗೆ ವಿಶಿಷ್ಟವಾದದ್ದು ಚತುರಾರ್ಯ ಸತ್ಯಗಳಾಗಿರುತ್ತವೆ. ಬೌದ್ಧಧರ್ಮವು ಇವನ್ನು ಕಲಿಸುತ್ತದೆ:
- ಇತರರು ದುಃಖವನ್ನು ವಿವರಿಸಬಹುದು, ಆದರೆ ಬುದ್ಧನು ನಿಜವಾದ ದುಃಖದ ಬಗ್ಗೆ ಮಾತನಾಡುತ್ತಾನೆ;
- ಇತರರು ಒಂದು ನಿರ್ದಿಷ್ಟ ರೀತಿಯ ಅರಿವಿಲ್ಲದಿರುವುದು ದುಃಖಕ್ಕೆ ಕಾರಣ ಎಂದು ಹೇಳಬಹುದು, ಆದರೆ ಬುದ್ಧನು ನಿಜವಾದ ಕಾರಣವಾದ ಆಳವಾದ ರೀತಿಯ ಅರಿವಿಲ್ಲದಿರುವಿಕೆಯ ಬಗ್ಗೆ ಮಾತನಾಡುತ್ತಾನೆ.
- ಇತರ ಧಾರ್ವಿುಕ ಧರ್ಮಗಳಲ್ಲಿ ನಿಜವಾದ ನಿಲುಗಡೆ ಎಂದು ಪರಿಗಣಿಸಲಾಗುವುದು ಶಾಶ್ವತವಾಗಿ ಉಳಿಯುವುದಿಲ್ಲ ಅಥವಾ ಸಂಪೂರ್ಣವಾಗಿ ಸ್ವತಂತ್ರವಾಗಿರುವುದಿಲ್ಲ.
- ಇತರರು ಮಾತನಾಡುವ ತಿಳುವಳಿಕೆಯು ನಿಮ್ಮನ್ನು ಒಂದು ನಿರ್ದಿಷ್ಟ ಹಂತಕ್ಕೆ ಕೊಂಡೊಯ್ಯಬಹುದು, ಆದರೆ ಅದು ನಿಮ್ಮನ್ನು ವಿಮೋಚನೆಯ ಕಡೆಗೆ ಕೊಂಡೊಯ್ಯುವ ನಿಜವಾದ ಮಾರ್ಗ ಮನಸ್ಸು ಆಗಿರುವುದಿಲ್ಲ.
ಸಹಜವಾಗಿ, ಉಳಿದವರೆಲ್ಲರೂ ಬೌದ್ಧಧರ್ಮದ ಬಗ್ಗೆ ಇದನ್ನೇ ಹೇಳುತ್ತಾರೆ, ಆದ್ದರಿಂದ ವಾಸ್ತವ ಏನೆಂದು ನಿಜವಾಗಿಯೂ ಪರಿಶೀಲಿಸಬೇಕು. ನಾವು ಪದ್ಯದಲ್ಲಿ ನೋಡಿದಂತೆ, ಆಧ್ಯಾತ್ಮಿಕ ಮಾರ್ಗದ ಸಂಪೂರ್ಣ ಅಡಿಪಾಯ - ಇದು ಹಿಂದೂ ಧರ್ಮ ಮತ್ತು ಜೈನ ಧರ್ಮದ ವಿಷಯದಲ್ಲೂ ನಿಜವಾಗಿರುತ್ತದೆ, ಕೇವಲ ಬೌದ್ಧ ಧರ್ಮ ಅಲ್ಲ - ವಾಸ್ತವದ ದೃಷ್ಟಿಕೋನವಾಗಿರುತ್ತದೆ. ಇದನ್ನು ತರ್ಕ, ಅನುಭವ ಮತ್ತು ತಿಳುವಳಿಕೆಯಿಂದ ಪರೀಕ್ಷಿಸಬೇಕು.
ಈ ಜೀವನದಲ್ಲಿ ಹೆಚ್ಚು ದಯೆ, ಹೆಚ್ಚು ಸಹಾನುಭೂತಿಯುಳ್ಳ ವ್ಯಕ್ತಿಯಾಗಲು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವುದು ಮತ್ತು ವಿಮೋಚನೆಯನ್ನು ಪಡೆಯಲು ಬಯಸುವುದರ ನಡುವೆ ದೊಡ್ಡ ವ್ಯತ್ಯಾಸವಿರುತ್ತದೆ. ನಾವು ಜ್ಞಾನೋದಯದ ಬಗ್ಗೆ ಮಾತನಾಡಿದರೆ, ಯಾವ ವಿವರಣೆಯು ಹೆಚ್ಚು ಮಾನ್ಯವಾಗಿದೆ ಎಂಬುದನ್ನು ಕಂಡುಹಿಡಿಯಲು ನೀವು ತರ್ಕ ಮತ್ತು ಚರ್ಚೆಯ ಆಧಾರದ ಮೇಲೆ ಪರಿಶೀಲಿಸಬಹುದು. ಆದರೆ, ಆಧ್ಯಾತ್ಮಿಕ ಮಾರ್ಗವನ್ನು ಅಭ್ಯಾಸ ಮಾಡುವ ಹೆಚ್ಚಿನವರು ವಿಮೋಚನೆಯ ಗುರಿಯನ್ನು ನಿಜವಾಗಿಯೂ ಹೊಂದಿರುವುದಿಲ್ಲ. ಅವರು ಹಾಗೆ ಹೇಳಬಹುದಾದರೂ, ಇದರ ಅರ್ಥವೇನೆಂದು ಅವರಿಗೆ ತಿಳಿದಿರುವುದಿಲ್ಲ ಮತ್ತು ಈ ಜೀವಿತಾವಧಿಯಲ್ಲಿ ತಮ್ಮ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿರುತ್ತಾರೆ. ಇದು ಸರಿಯೇ, ಇದರಲ್ಲಿ ತಪ್ಪೇನಿಲ್ಲ.
ಆದ್ದರಿಂದ, ಪರಮಪೂಜ್ಯ ದಲೈ ಲಾಮಾ ಅವರಿಗೆ ಯಾವ ಧರ್ಮವು ಅತ್ಯುತ್ತಮವಾದದ್ದು ಎಂದು ಕೇಳಿದಾಗ, ಅವರು ದಯೆ ಮತ್ತು ಹೆಚ್ಚು ಸಹಾನುಭೂತಿಯುಳ್ಳ ವ್ಯಕ್ತಿಯಾಗಲು ವೈಯಕ್ತಿಕವಾಗಿ ನಿಮಗೆ ಸಹಾಯ ಮಾಡುವುದೇ ಅತ್ಯುತ್ತಮ ಧರ್ಮ ಎಂದು ಹೇಳಿದ್ದರು. ಪ್ರತಿಯೊಬ್ಬ ವ್ಯಕ್ತಿಯು ಭಿನ್ನ, ಆದ್ದರಿಂದ ಸಹಾನುಭೂತಿ, ದಯೆ, ತಾಳ್ಮೆ, ಕ್ಷಮೆ ಇತ್ಯಾದಿಯನ್ನು ಅಭಿವೃದ್ಧಿಪಡಿಸಲು ಒಂದು ಇನ್ನೊಂದಕ್ಕಿಂತ ಹೆಚ್ಚು ಮಾನ್ಯವಾದ ಮಾರ್ಗ ಎಂದು ನಾವು ಹೇಳಲು ಸಾಧ್ಯವಿಲ್ಲ. ವಿವಿಧ ಧರ್ಮಗಳ ಪ್ರಕಾರ ಅವುಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸಬಹುದು. ಇದು ಧಾರ್ಮಿಕ ಸಾಮರಸ್ಯಕ್ಕೆ ಆಧಾರವಾಗಿದೆ.
ಆಧ್ಯಾತ್ಮಿಕ ಹಾದಿಯಲ್ಲಿ ಹೇಗೆ ಪ್ರಗತಿ ಸಾಧಿಸುವುದು
ನಾನು ಈ ಹಾದಿಯಲ್ಲಿ ಪ್ರಗತಿ ಪಡೆಯುವುದರ ಬಗ್ಗೆ ಕೇಳಲು ಬಯಸುತ್ತೇನೆ. ಸೋವಿಯತ್ ಒಕ್ಕೂಟದಲ್ಲಿ, ನಾವು ಆರ್ಥಿಕ ಅಭಿವೃದ್ಧಿಗಾಗಿ 5 ವರ್ಷಗಳ ಯೋಜನೆಗಳನ್ನು ಹೊಂದಿದ್ದೇವೆ. ಬಹುಶಃ ನೀವು ಬೌದ್ಧ ಅಭ್ಯಾಸವನ್ನು ಪ್ರಾರಂಭಿಸುವವರಿಗೆ, ದಾರಿ ತಪ್ಪದಂತೆ ಒಂದು ಅಥವಾ ಮೂರು ಅಥವಾ ಐದು ವರ್ಷಗಳವರೆಗೆ ಏನು ಮಾಡಬಹುದು ಎಂಬುದರ ಕುರಿತು ಸಲಹೆ ನೀಡಬಹುದು.
ನಾನು ತರಬೇತಿ ಪಡೆದ ಸಂಪ್ರದಾಯಗಳಲ್ಲಿ, ಅತ್ಯಂತ ಸಾಮಾನ್ಯವಾದ ಮತ್ತು ವಿಶ್ವಾಸಾರ್ಹ ಮಾರ್ಗವೆಂದರೆ ಲ್ಯಾಮ್-ರಿಮ್ ಹಂತಗಳ ಮೂಲಕ ಕೆಲಸ ಮಾಡುವುದಾಗಿರುತ್ತದೆ. ಆಧ್ಯಾತ್ಮಿಕ ಪಥದಲ್ಲಿ ಪ್ರಗತಿ ಸಾಧಿಸಲು ನಾವು ಅರ್ಥಮಾಡಿಕೊಳ್ಳಬೇಕಾದ, ಜೀರ್ಣಿಸಿಕೊಳ್ಳಬೇಕಾದ ಮತ್ತು ಅಭಿವೃದ್ಧಿಪಡಿಸಬೇಕಾದುದನ್ನು ಇದು ಹಂತ ಹಂತವಾಗಿ ತೋರಿಸುತ್ತದೆ.
ಲ್ಯಾಮ್-ರಿಮ್ ಅನ್ನು ಅನುಸರಿಸುವ ಸಾಂಪ್ರದಾಯಿಕ ವಿಧಾನವೆಂದರೆ ನೀವು ಒಂದು ಹಂತವನ್ನು ತಲುಪಿ, ಮುಂದೆ ಏನಾಗುತ್ತಿದೆ ಎಂಬುದನ್ನು ತಿಳಿಯದೆ ನೀವು ಅದರೊಂದಿಗೆ ಕೆಲಸ ಮಾಡುತ್ತೀರಿ. ಒಮ್ಮೆ ನೀವು ಒಂದು ಭಾಗವನ್ನು ಅರ್ಥಮಾಡಿಕೊಂಡ ನಂತರ ನೀವು ಮುಂದಿನದಕ್ಕೆ ಹೋಗುತ್ತೀರಿ. ಇತ್ತೀಚಿನ ದಿನಗಳಲ್ಲಿ ಇಡೀ ಮಾರ್ಗವನ್ನು ಪುಸ್ತಕಗಳಲ್ಲಿ ಪ್ರಸ್ತುತಪಡಿಸಲಾಗಿದೆ ಆದ್ದರಿಂದ ನೀವು ಸಂಪೂರ್ಣ ವಿಷಯವನ್ನು ಒಂದೇ ಬಾರಿಗೆ ಓದಬಹುದು, ಆದರೆ ನೀವು ಈಗಲೂ ಪ್ರತಿ ಹಂತದಲ್ಲಿ ಸಾಕಷ್ಟು ಸಮಯವನ್ನು ನೀಡಬೇಕಾಗಿದೆ. ನೀವು ಸಂಪೂರ್ಣ ವಿಷಯವನ್ನು ಓದಿದ ನಂತರವೂ, ನೀವು ಹಿಂತಿರುಗಿ, ಪ್ರತಿಯೊಂದು ಬಿಂದುವು ಇತರ ಎಲ್ಲದರೊಂದಿಗೆ ಹೇಗೆ ಪರಸ್ಪರ ಸಂಬಂಧ ಹೊಂದಿದೆ ಎಂಬುದನ್ನು ನೋಡಬೇಕು.
ಪ್ರಗತಿಯು ಎಂದಿಗೂ ರೇಖಾತ್ಮಕವಾಗಿಲ್ಲ, ಬದಲಿಗೆ ಯಾವಾಗಲೂ ಮೇಲಕ್ಕೆ ಮತ್ತು ಕೆಳಕ್ಕೆ ಹೋಗುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಆದ್ದರಿಂದ ಒಂದು ದಿನ ಚೆನ್ನಾಗಿದ್ದರೆ, ಮುಂದಿನ ದಿನ ಹಾಗೆ ಆಗುವುದಿಲ್ಲ - ಇದರಲ್ಲಿ ವಿಶೇಷವಾದದ್ದು ಏನೂ ಇಲ್ಲ. ನೀವು ಸುಮ್ಮನೆ ಮುಂದುವರಿಯಬೇಕು. ಇದು ನನ್ನ ಶಿಕ್ಷಕರ ಯುವ ಪುನರ್ಜನ್ಮದ ನೆಚ್ಚಿನ ನುಡಿಗಟ್ಟು: "ಇದು ವಿಶೇಷವೇನೂ ಅಲ್ಲ." ನಿಮ್ಮ ಅನುಭವದಲ್ಲಿ ವಿಶೇಷವಾದದ್ದು ಏನೂ ಇಲ್ಲ. ಅದು ಚೆನ್ನಾಗಿರುತ್ತದೆ, ಅಥವಾ ಇಲ್ಲ. ಇದರಲ್ಲಿ ಏನು ವಿಶೇಷ?
ಆದ್ದರಿಂದ, 5-ವರ್ಷದ ಯೋಜನೆಯನ್ನು ಇಟ್ಟುಕೊಳ್ಳುವುದು ಅವಾಸ್ತವಿಕವಾಗಿದೆ ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿ ಪ್ರಗತಿ ಸಾಧಿಸುತ್ತಾನೆ. ಆದಾಗ್ಯೂ, ನೀವು ಪ್ರಗತಿಯನ್ನು ಸಾಧಿಸಿದ್ದೀರಾ ಎಂದು ತಿಳಿಯುವ ಮಾರ್ಗವು ದಿನದಿಂದ ದಿನಕ್ಕೆ ಅಥವಾ ತಿಂಗಳಿಂದ ತಿಂಗಳಿಗೆ ನೋಡದೆ, 5 ವರ್ಷಗಳ ಅವಧಿಗೆ ಅನುಗುಣವಾಗಿ ನೋಡಬೇಕು ಎಂದು ಪರಮಪೂಜ್ಯ ದಲೈ ಲಾಮಾ ಅವರು ಹೇಳುತ್ತಾರೆ. ನಾವು ಮೊದಲು ತೊಂದರೆಗಳನ್ನು ಹೇಗೆ ಎದುರಿಸಿತ್ತಿದ್ದೆವು ಮತ್ತು ಈಗ ನಾವು ಅವುಗಳನ್ನು ಹೇಗೆ ಎದುರಿಸುತ್ತೇವೆ ಎಂಬುದನ್ನು ಹೋಲಿಸಬಹುದು. ನಾವು ಹೆಚ್ಚು ಶಾಂತವಾಗಿದ್ದೇವೆಯೇ? ಆಗ ನಾವು ನಮ್ಮ ಪ್ರಗತಿಯನ್ನು ಪರಿಶೀಲಿಸಬಹುದು.
ನೀವು 100,000 ಪ್ರಣಾಮಗಳನ್ನು ಮಾಡುವ ಪ್ರಾಥಮಿಕ ಅಭ್ಯಾಸಗಳು, ಆಶ್ರಯ ಸೂತ್ರಗಳು ಮತ್ತು ಮುಂತಾದವುಗಳನ್ನು ಮಾಡುವಂತಹ ನ್ಗೋಂಡ್ರೋ ಶೈಲಿಗಳಂತಹ ಇತರ ಶೈಲಿಗಳೂ ಇವೆ. ಜನರು ಆಗಾಗ್ಗೆ ಈ ರೀತಿಯಾಗಿ ಪ್ರಾರಂಭಿಸುತ್ತಾರೆ. ಈ ಎರಡು ವಿಧಾನಗಳು ಧರ್ಮ ಬೋಧನೆಗಳನ್ನು ಸಮೀಪಿಸುವ ಎರಡು ವಿಧಾನಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಾನು ಭಾವಿಸುತ್ತೇನೆ. ನೀವು ನ್ಗೋಂಡ್ರೋವನ್ನು ಪ್ರಾರಂಭಿಸಿದಾಗ, ಇದು ಸಾಮಾನ್ಯವಾಗಿ ಶಿಕ್ಷಕರಿಂದ ಸ್ಫೂರ್ತಿಗೊಂಡ ಆಧಾರದ ಮೇಲಾಗಿರುತ್ತದೆ. ನಿಮಗೆ ಹೆಚ್ಚು ತಿಳಿದಿಲ್ಲದಿರಬಹುದು, ಆದರೆ ನೀವು ಶಿಕ್ಷಕರಿಂದ ಬಹಳಾ ಸ್ಫೂರ್ತಿಗೊಂಡಿದ್ದೀರಿ, ಮತ್ತು ಅವರು ವಿವರಿಸಿರುವುದು ಪ್ರಯೋಜನಕಾರಿ ಎಂದು ನೀವು ವಿಶ್ವಾಸ ಹೊಂದಿದ್ದೀರಿ, ಆದ್ದರಿಂದ ನೀವು 100,000 ನ್ಗೋಂಡ್ರೋ ಅಭ್ಯಾಸಗಳನ್ನು ಮಾಡುತ್ತೀರಿ.
ನಾನು ತರಬೇತಿ ಪಡೆದ ವಿಧಾನವನ್ನು ಈ ಪದ್ಯದಲ್ಲಿ ವಿವರಿಸಿದ್ದೇನೆ, ಇದು ದಲೈ ಲಾಮಾ ಅವರು ಸ್ವತಃ ಸಾಮಾನ್ಯವಾಗಿ ಕಲಿಸುವ ವಿಧಾನವಾಗಿದೆ. ಮೊದಲು ನೀವು ಮನವರಿಕೆ ಮಾಡಿಕೊಳ್ಳುತ್ತೀರಿ ಮತ್ತು ಮಾರ್ಗದ ತಿಳುವಳಿಕೆಯನ್ನು ಪಡೆಯುತ್ತೀರಿ - ಇದು ಸಾಧ್ಯ, ಈ ಗುರಿ ಯಾವುದು ಇತ್ಯಾದಿ - ಮತ್ತು ನಂತರ ನೀವು ನ್ಗೋಂಡ್ರೋವನ್ನು ಅಭ್ಯಸಿಸುತ್ತೀರಿ.
ನಿಸ್ಸಂಶಯವಾಗಿ, ಒಬ್ಬರು ಇವುಗಳ ನಡುವಿನ ಮಧ್ಯಮ ಮಾರ್ಗವನ್ನು ಪಾಲಿಸಬಹುದು. ನ್ಗೋಂಡ್ರೋನೊಂದಿಗೆ ಮೊದಲು ಪ್ರಾರಂಭಿಸುವಾಗ, ಗುರಿಯನ್ನು ಸಾಧಿಸಬಹುದಾದ ಸಾಧ್ಯತೆಯನ್ನು ಮನವರಿಕೆ ಮಾಡಿಕೊಳ್ಳಲು ನೀವು ಕೆಲಸ ಮಾಡುತ್ತೀರಿ. ಅಥವಾ ನೀವು ಈ ಅಧ್ಯಯನ ಮತ್ತು ಅಭ್ಯಾಸವನ್ನು ಮಾಡುತ್ತಿರುವಾಗಲೇ ನೀವು ನ್ಗೋಂಡ್ರೋವನ್ನು ಮಾಡಲು ಪ್ರಾರಂಭಿಸಬಹುದು. ಆದ್ದರಿಂದ ಅವುಗಳನ್ನು ಜೋಡಿಸಲು ವಿಭಿನ್ನ ಮಾರ್ಗಗಳಿವೆ. ನಾನು ವಿವರಿಸುವ ಈ ರಚನೆಯೊಳಗೆ, ಟಿಬೆಟಿನ ವಿವಿಧ ಶಿಕ್ಷಕರು ಧರ್ಮವನ್ನು ಕಲಿಸುವ ವಿಧಾನದ ಬಗ್ಗೆ ನಿಜವಾಗಿಯೂ ಯೋಚಿಸಲು ಪ್ರಾರಂಭಿಸಿದರೆ, ಇದು ಸರಿಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ನಾಗಾರ್ಜುನ ಮತ್ತು ಬೋಧಿಚಿತ್ತಾವನ್ನು ಅಭಿವೃದ್ಧಿಪಡಿಸುವ ಎರಡು ವಿಭಿನ್ನ ವಿಧಾನಗಳಿಗೆ ಹಿಂತಿರುಗುತ್ತದೆ – ಮೊದಲು ಸಾಪೇಕ್ಷ, ನಂತರ ಆಳವಾದ, ಅಥವಾ ಮೊದಲ ಆಳವಾದದ್ದು ಮತ್ತು ನಂತರ ಸಾಪೇಕ್ಷ. ತಮಗೆ ಯಾವುದು ಸೂಕ್ತವೆಂದು ಸ್ವತಃ ನಿರ್ಧರಿಸಬೇಕು.
ಸಾರಾಂಶ
ಚತುರಾರ್ಯ ಸತ್ಯಗಳು, ಎರಡು ಸತ್ಯಗಳಲ್ಲಿರುವ ವಾಸ್ತವದ ಬೌದ್ಧ ಬೋಧನೆಗಳಿಗೆ ಹೇಗೆ ಸಂಬಂಧಿಸಿವೆ ಮತ್ತು ಪ್ರತಿಯಾಗಿ ತ್ರಿರತ್ನಗಳಿಗೆ ಹೇಗೆ ಸಂಬಂಧಿಸಿವೆ ಎಂಬುದು ಬಹಳ ಮುಂದುವರಿದ ವಿಶ್ಲೇಷಣೆಯಾಗಿದೆ. ಇದು ಎಲ್ಲಾ ಸತ್ಯಗಳು ಮತ್ತು ರತ್ನಗಳ ಬಗ್ಗೆ ಬೆಳಕು ಬೀರುವುದಲ್ಲದೆ ಬೌದ್ಧ ತತ್ವಶಾಸ್ತ್ರ ಮತ್ತು ಆಚರಣೆಯಲ್ಲಿ ಸ್ಪಷ್ಟವಾದ ರಚನೆಯನ್ನು ಒದಗಿಸುತ್ತದೆ. ಈ ಸಾಕ್ಷಾತ್ಕಾರಗಳ ಹೆಚ್ಚಿನ ತನಿಖೆಗೆ ಆಧಾರವಾಗಿ ನಾವು ಪರಮಪೂಜ್ಯ ದಲೈ ಲಾಮಾ ಅವರ ಸಂಕ್ಷಿಪ್ತವಾದ ಆದರೆ ಸೂಕ್ಷ್ಮವಾದ ಪದ್ಯವನ್ನು ಬಳಸಿದ್ದೇವೆ. ಇಲ್ಲಿನ ಗಮನಾರ್ಹ ಫಲಿತಾಂಶವು ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವ ತಾರ್ಕಿಕ ಕ್ರಮವನ್ನು ಮಾತ್ರವಲ್ಲದೆ, ಪ್ರತಿಯೊಂದು ಅಗತ್ಯ ಬೌದ್ಧ ಸಾಕ್ಷಾತ್ಕಾರಗಳು ಇನ್ನೊಂದನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ತೋರಿಸುತ್ತದೆ. ಹೀಗಾಗಿ, ಒಂದು ಸಂಕೀರ್ಣವಾದ ಮತ್ತು ಅವಿಭಾಜ್ಯ ಆಧ್ಯಾತ್ಮಿಕ ಮಾರ್ಗವು ಬಹಿರಂಗಗೊಳ್ಳುತ್ತದೆ.