ಪರಿಚಯ
ಚತುರಾರ್ಯ ಸತ್ಯಗಳು
ಸುಮಾರು 2500 ವರ್ಷಗಳ ಹಿಂದೆ ಬುದ್ಧ ಭಾರತದಲ್ಲಿ ವಾಸಿಸುತ್ತಿದ್ದರು. ಅವರ ಶಿಷ್ಯರು ವಿಭಿನ್ನ ಸ್ವಭಾವ ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದರಿಂದ, ಅವರಲ್ಲಿ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬಹುದಾದ ವೈಯಕ್ತಿಕ ರೀತಿಯಲ್ಲಿ ಉತ್ತಮವಾಗಿ ಕಲಿಸಿದರು. ಆದರೆ ಅವರು ಎಲ್ಲರಿಗೂ ಕಲಿಸಿದ ಮೊದಲ ವಿಷಯವು, ಅವರು ಜ್ಞಾನೋದಯವನ್ನು ಸಾಧಿಸಿದ್ದು ಹೇಗೆ ಎಂಬುದರ ಮೂಲಭೂತ ಒಳನೋಟ: ಅವರು "ಚತುರಾರ್ಯ ಸತ್ಯಗಳು” ಎಂದು ಕರೆಯಲಾಗುವುದನ್ನು ಕಲಿಸಿದರು. ಇವುಗಳು ಜೀವನದ ಬಗೆಗಿರುವ ನಾಲ್ಕು ನಿಜವಾದ ಸಂಗತಿಗಳಾಗಿದ್ದು, ಇವನ್ನು ಸಾಮಾನ್ಯ ಜನರು ಸತ್ಯವೆಂದು ಪರಿಗಣಿಸುವುದಿಲ್ಲ, ಆದರೆ ವಾಸ್ತವವನ್ನು ಪರಿಕಲ್ಪನಾರಹಿತವಾಗಿ ಗಮನಿಸುವ ಹೆಚ್ಚು ಅರಿತುಕೊಂಡ ಜೀವಿಗಳಾದ ಆರ್ಯರು, ಅವುಗಳನ್ನು ನಿಜವೆಂದು ಪರಿಗಣಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ನಾಲ್ಕು ಸತ್ಯಗಳು ಈ ಕೆಳಗಿನ ಪ್ರಶ್ನೆಗಳನ್ನು ಉತ್ತರಿಸುತ್ತವೆ:
- ಜೀವನದಲ್ಲಿ ಪ್ರತಿಯೊಬ್ಬರೂ ಅನುಭವಿಸುವ ನಿಜವಾದ ರೀತಿಯ ದುಃಖಗಳು ಮತ್ತು ಸಮಸ್ಯೆಗಳು ಯಾವುವು?
- ಅವುಗಳ ಕಾರಣಗಳೇನು?
- ಈ ಸಮಸ್ಯೆಗಳನ್ನು ನಿಜವಾಗಿಯೂ ನಿವಾರಿಸಲು ಸಾಧ್ಯವೇ, ಅವುಗಳು ಮತ್ತೆ ಎಂದಿಗೂ ಮರುಕಳಿಸದಂತೆ ಅವುಗಳನ್ನು ನಿಲ್ಲಿಸಲು ಸಾಧ್ಯವೇ?
- ದುಃಖದ ಕಾರಣಗಳನ್ನು ನಿವಾರಿಸಿ, ನಿಲುಗಡೆಗೆ ಕಾರಣವಾಗುವ ತಿಳುವಳಿಕೆಯು ಯಾವುದು?
ಈ ಪ್ರಶ್ನೆಗಳಿಗಿರುವ ಉತ್ತರಗಳನ್ನೇ ಬುದ್ಧನು ತನ್ನ ಜೀವನದುದ್ದಕ್ಕೂ ಆಳವಾಗಿ ಬೋಧಿಸಿದರು, ಇವು ಮೂಲಭೂತ ರಚನೆಯನ್ನು ರೂಪಿಸಿದ್ದು, ಇವನ್ನು ಅವರು ಮೊದಲು ಕಲಿಸಿದರು.
ಈ ಚತುರಾರ್ಯ ಸತ್ಯಗಳನ್ನು ನೋಡಿದಾಗ, ಅವುಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಅವುಗಳು ಆಧಾರವೊಂದರಿಂದ ಬೆಳೆಯುತ್ತವೆ ಮತ್ತು ಅವುಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಾಗ ಗುರಿಯತ್ತ ಮುನ್ನಡೆಯಲು ಅವು ಅನುವು ಮಾಡಿಕೊಡುತ್ತವೆ. ಸರಳವಾಗಿ ಹೇಳುವುದಾದರೆ, ಈ ನಾಲ್ಕು ಸತ್ಯಗಳ ಆಧಾರವು - ಈ ನಾಲ್ಕು ಜೀವನದ ಸತ್ಯಗಳ ಆಧಾರವು - ವಾಸ್ತವವಾಗಿರುತ್ತದೆ.
ನಾವು ಬೌದ್ಧ ಧರ್ಮವನ್ನು ಒಂದೇ ಪದವಾಗಿ ಸಂಕ್ಷೇಪಿಸಲು ಬಯಸಿದರೆ, ಬೌದ್ಧ ಶಿಕ್ಷಕರೂ ಆಗಿರುವ ನನ್ನ ಸ್ನೇಹಿತರೊಬ್ಬರು ಹೇಳಿದಂತೆ, ಆ ಪದವು "ವಾಸ್ತವಿಕತೆ" ಆಗಿರುತ್ತದೆ.
ನಾವು ವಾಸ್ತವವನ್ನು ನೋಡಲು ಸಾಧ್ಯವಾದರೆ ಮತ್ತು ಅಸಾಧ್ಯವಾದ ಮತ್ತು ಅವಾಸ್ತವದ ಪ್ರಕ್ಷೇಪಗಳಿಲ್ಲದೆ ಅದನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವೀಕರಿಸಲು ಸಾಧ್ಯವಾದರೆ, ಜೀವನದಲ್ಲಿ ನಮ್ಮ ಸಮಸ್ಯಾತ್ಮಕ ಸಂದರ್ಭಗಳನ್ನು ವಾಸ್ತವಿಕ ರೀತಿಯಲ್ಲಿ ಎದುರಿಸಲು ನಮಗೆ ಸಾಧ್ಯವಾಗುತ್ತದೆ.
ಆದ್ದರಿಂದ ವಾಸ್ತವದ ಮೇಲಿರುವ ಬೋಧನೆಗಳು ಈ ನಾಲ್ಕು ಸತ್ಯಗಳ ಆಧಾರವಾಗಿರುತ್ತವೆ. ಆದರೆ ವಾಸ್ತವವು, ವಿಷಯಗಳು ಹೇಗೆ ಅಸ್ತಿತ್ವದಲ್ಲಿವೆ ಮತ್ತು ಅವು ಜೀವನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಬುದ್ಧನು ಅವೆಲ್ಲವನ್ನೂ ಕಲಿಸಿದರು.
ತ್ರಿರತ್ನಗಳು
ಈ ಚತುರಾರ್ಯ ಸತ್ಯಗಳಿಂದ, ನಮ್ಮ ಜೀವನದಲ್ಲಿ ನೋವು ಮತ್ತು ಸಮಸ್ಯೆಗಳನ್ನು ಜಯಿಸಲು ಯಾವ ದಿಕ್ಕಿನಲ್ಲಿ ನಡೆಯಬೇಕು ಎಂಬುದು ಸ್ಪಷ್ಟವಾಗುತ್ತದೆ. ಈ ದಿಕ್ಕನ್ನು ಬೌದ್ಧ ಪರಿಭಾಷೆಯು "ಅಮೂಲ್ಯ ತ್ರಿರತ್ನಗಳು" ಅಥವಾ "ಆಶ್ರಯದ ತ್ರಿರತ್ನಗಳು" ಎಂದು ಕರೆಯುತ್ತದೆ - ಬುದ್ಧ, ಧರ್ಮ, ಸಂಘ. ಪ್ರತಿಯೊಂದೂ ಹಲವಾರು ಹಂತಗಳ ಅರ್ಥವನ್ನು ಹೊಂದಿರುತ್ತವೆ, ಆದರೆ ಆಳವಾದ ಮಟ್ಟದಲ್ಲಿ, ಅವು ಈ ಕೆಳಗಿನದ್ದನ್ನು ಸೂಚಿಸುತ್ತವೆ:
- ಧರ್ಮ - ನಾವು ಶ್ರಮಿಸುತ್ತಿರುವ ಗುರಿ, ಅವುಗಳೆಂದರೆ ನಮ್ಮ ಸಮಸ್ಯೆಗಳು ಮತ್ತು ಅವುಗಳ ಕಾರಣಗಳನ್ನು ನಮ್ಮಿಂದ ನಿವಾರಿಸುವುದು ಮತ್ತು ಅವುಗಳನ್ನು ಶಾಶ್ವತವಾಗಿ ನಿವಾರಿಸುವ ಸಂಪೂರ್ಣ ತಿಳುವಳಿಕೆಯನ್ನು ಸಾಧಿಸುವುದು
- ಬುದ್ಧರು - ಈ ಗುರಿಯನ್ನು ಪೂರ್ಣವಾಗಿ ಸಾಧಿಸಿದವರು ಮತ್ತು ನಾವೇ ಅದನ್ನು ಹೇಗೆ ಸಾಧಿಸಬಹುದು ಎಂಬುದನ್ನು ಕಲಿಸುವವರು
- ಸಂಘ - ಈ ಬೋಧನೆಗಳನ್ನು ಅನುಸರಿಸುತ್ತಿರುವವರು ಮತ್ತು ಗುರಿಯನ್ನು ಭಾಗಶಃ ತಲುಪಿದವರು, ಆದರೆ ಪೂರ್ಣವಾಗಿ ಅಲ್ಲ.
17 ನಳಂದ ಗುರುಗಳಿಗೆ ಒಂದು ಪ್ರಾರ್ಥನೆ
ಪುರಾತನ ಭಾರತದ ಮಹಾನ್ ಬೌದ್ಧ ಮಠದ 17 ಮಹಾನ್ ಬೌದ್ಧ ಗುರುಗಳಿಂದ ಸ್ಫೂರ್ತಿಗಾಗಿ ವಿನಂತಿಸಿ ಪರಮಪೂಜ್ಯ ದಲೈ ಲಾಮಾ ಅವರು ಬಹಳ ಸುಂದರವಾದ ಪಠ್ಯವನ್ನು ಬರೆದಿದ್ದರು. ಇದನ್ನು ನಳಂದಾ ಎಂದು ಕರೆಯಲಾಗಿತ್ತು ಮತ್ತು ಸುಮಾರು ಒಂದು ಸಾವಿರ ವರ್ಷಗಳ ಕಾಲ ಇದು ನಡೆಯಿತು. ಇದು ಆಶ್ರಮದಂತೆ ಕಾರ್ಯನಿರ್ವಹಿಸಿದ್ದು, ಅಂದಿನ ಅತ್ಯಂತ ಪ್ರಸಿದ್ಧ ವಿಶ್ವವಿದ್ಯಾನಿಲಯವಾಗಿತ್ತು ಮತ್ತು ಭಾರತೀಯ ಬೌದ್ಧ ಸಂಪ್ರದಾಯದ ಶ್ರೇಷ್ಠ ಗುರುಗಳನ್ನು ಹುಟ್ಟುಹಾಕಿತು. ದಲೈ ಲಾಮಾ ಅವರು ಈ 17 ಸುಪ್ರಸಿದ್ಧ ಗುರುಗಳಿಗಾಗಿ ಪ್ರಾರ್ಥನೆಯ ರೂಪದಲ್ಲಿ ಈ ಪಠ್ಯವನ್ನು ಬರೆದಿದ್ದಾರೆ: "ನಿಮ್ಮ ಹೆಜ್ಜೆಗಳನ್ನು ಅನುಸರಿಸುವಂತೆ ನನಗೆ ಸ್ಫೂರ್ತಿ ನೀಡಿ." ವೈಯಕ್ತಿಕ ವಿನಂತಿಯ ಈ ಪಂಕ್ತಿಗಳ ನಂತರ, ಪರಮಪೂಜ್ಯರು ಅವರೆಲ್ಲರನ್ನು ಉದ್ದೇಶಿಸಿ ಹಲವಾರು ಸಾಮಾನ್ಯ ಪಂಕ್ತಿಗಳೊಂದಿಗೆ ಮುಕ್ತಾಯಗೊಳಿಸಿದರು.
ಆ ಮುಕ್ತಾಯದ ಪಂಕ್ತಿಗಳಲ್ಲಿ ಒಂದರ ವ್ಯಾಖ್ಯಾನವನ್ನು ಪ್ರಸ್ತುತಪಡಿಸಲು ನಾನು ಇಚ್ಛಿಸುತ್ತೇನೆ. ವಾಸ್ತವ (ಎರಡು ಸತ್ಯಗಳು), ಚತುರಾರ್ಯ ಸತ್ಯಗಳು ಮತ್ತು ಆಶ್ರಯದ ತ್ರಿರತ್ನಗಳ ಬಗ್ಗೆ ನಾನು ವಿವರಿಸಿದ್ದನ್ನು ಇದು ಸಂಕ್ಷಿಪ್ತಗೊಳಿಸುತ್ತದೆ. ಆಶ್ರಯವೆಂದರೆ, ಈ ಮೂರೂ ಸೂಚಿಸಿದ ದಾರಿಯಲ್ಲಿ ನಡೆದರೆ ನಾವು ಸಂಕಟ, ಸಮಸ್ಯೆಗಳಿಂದ ಪಾರಾಗುತ್ತೇವೆ ಎಂಬುದಾಗಿರುತ್ತದೆ.
ಪದ್ಯವು ಹೀಗಿರುತ್ತದೆ:
ಎಲ್ಲದಕ್ಕೂ ಅಡಿಪಾಯವಾದ, ಎಲ್ಲವೂ ಬದ್ಧವಾಗಿರುವ ಎರಡು ಸತ್ಯಗಳ ಅರ್ಥವನ್ನು ತಿಳಿದುಕೊಳ್ಳುವುದರಿಂದ,
"ಬದ್ಧವಾಗಿರುವುದು" ಎಂದರೆ ವಸ್ತುಗಳು ಹೇಗೆ ಅಸ್ತಿತ್ವದಲ್ಲಿವೆ, ವಸ್ತುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವಾಸ್ತವವನ್ನು ತಿಳಿದುಕೊಳ್ಳುವುದಾಗಿರುತ್ತದೆ.
ನಾಲ್ಕು ಸತ್ಯಗಳ ಮೂಲಕ ನಾವು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮವನ್ನು ಪ್ರವೇಶಿಸುತ್ತೇವೆಯೆಂದೂ, ಆದರೆ ಅದನ್ನು ಹೇಗೆ ಹಿಮ್ಮೆಟ್ಟಿಸಬಹುದು ಎಂಬುದರ ಬಗ್ಗೆ ನಮಗೆ ಮನವರಿಕೆಯಾಗುತ್ತದೆ.
ನಾವು ವಾಸ್ತವವನ್ನು ಅರ್ಥಮಾಡಿಕೊಂಡರೆ, ಈ ಚತುರಾರ್ಯ ಸತ್ಯಗಳ ಮೂಲಕ, ನಮ್ಮ ಸಮಸ್ಯೆಗಳನ್ನು ನಾವು ಹೇಗೆ ಶಾಶ್ವತಗೊಳಿಸುತ್ತೇವೆ, ಮತ್ತು ನಾವು ಅವುಗಳನ್ನು ಹೇಗೆ ನಿವಾರಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತೇವೆ.
ಮಾನ್ಯವಾದ ಅರಿವಿನಿಂದ, ಮೂರು ಆಶ್ರಯಗಳು ಸತ್ಯವೆಂಬ ನಮ್ಮಲ್ಲಿನ ಮನವರಿಕೆಯು ದೃಢವಾಗುತ್ತದೆ.
ಮೂರು ಆಶ್ರಯಗಳು ನಾವು ಸಾಧಿಸಬಹುದಾದ ನಿಜವಾದ ಗುರಿಯ ವಿಷಯವಾಗಿ ರೂಪಿಸಲಾಗಿದೆ ಎಂಬುದನ್ನು ನೆನಪಿಡಿ - ನಮ್ಮ ಎಲ್ಲಾ ಸಮಸ್ಯೆಗಳ ಸಂಪೂರ್ಣ ನಿಲುಗಡೆ ಮತ್ತು ಅವು ಎಂದಿಗೂ ಮರುಕಳಿಸದಿರುವುದನ್ನು ಕರೆತರುವ ತಿಳುವಳಿಕೆಯಾಗಿರುತ್ತದೆ.
ನೀವು ಬೌದ್ಧ ಮಾರ್ಗವನ್ನು ಅಭ್ಯಸಿಸಲು ಬಯಸಿದರೆ, ನೀವು ಒಂದು ಗುರಿಯನ್ನು ಹೊಂದಿರುತ್ತೀರಿ. ಆ ಗುರಿಯನ್ನು ಸಾಧಿಸಲು ಸಾಧ್ಯ ಎಂದು ನಿಮಗೆ ಹೇಗೆ ಗೊತ್ತು? ಇದು ಕೇವಲ ಕಾಲ್ಪನಿಕವೇ? ಇದೊಂದು ಒಳ್ಳೆಯ ಕಥೆಯೇ ಅಥವಾ ವಾಸ್ತವವೇ? ಅನೇಕರು ಕೇವಲ ನಂಬಿಕೆಯ ಆಧಾರದ ಮೇಲೆ ಗುರಿಗಾಗಿ ಶ್ರಮಿಸುತ್ತಾರೆ: “ನನ್ನ ಶಿಕ್ಷಕರು ಹೀಗಿರುತ್ತದೆ ಎಂದು ಹೇಳಿದರು. ನಾನು ಅದನ್ನು ನಂಬಲು ಬಯಸುತ್ತೇನೆ, ಆದ್ದರಿಂದ ನಾನು ನಂಬುತ್ತೇನೆ.”
ಅದು ಅನೇಕರಿಗೆ ಕೆಲಸ ಮಾಡಬಹುದು, ಆದರೆ ಇದು ಯಾವಾಗಲೂ ಅಭ್ಯಾಸದ ಅತ್ಯಂತ ಧೃಡವಾದ ಮಾರ್ಗವಾಗಿರುವುದಿಲ್ಲ. ದೀರ್ಘಕಾಲದವರೆಗೆ ಅಭ್ಯಾಸ ಮಾಡಿದ ನಂತರ, ನಾನು ಏನು ಮಾಡುತ್ತಿದ್ದೇನೆ? ಎಂದು ನೀವು ಆಗಾಗ್ಗೆ ಪ್ರಶ್ನಿಸಲು ಪ್ರಾರಂಭಿಸುತ್ತೀರಿ. ಏಕೆಂದರೆ ನೀವು ಕೋಪ, ಬಾಂಧವ್ಯ, ಸ್ವಾರ್ಥ ಮತ್ತು ಹೆಚ್ಚಿನದನ್ನು ಇನ್ನೂ ಅನುಭವಿಸುತ್ತೀರಿ - ಇವೇ ನಿಜವಾದ ಕೀಟಲೆಗಾರರು – ಮತ್ತು ಇವನ್ನು ನಿವಾರಿಸುವುದು ನಿಜವಾಗಿಯೂ ಕಷ್ಟ. ಆದ್ದರಿಂದ ಪ್ರಗತಿಯು ಬಹಳಾ ನಿಧಾನವಾಗಿರುತ್ತದೆ. ಆದರೆ ಪ್ರಗತಿಯು ಎಂದಿಗೂ ರೇಖಾತ್ಮಕವಾಗಿರುವುದಿಲ್ಲ ಎಂಬುದನ್ನು ನೀವು ಅರಿತುಕೊಳ್ಳಬೇಕು: ಅದು ಯಾವಾಗಲೂ ಮೇಲಕ್ಕೆ ಕೆಳಕ್ಕೆ ಹೋಗುತ್ತಿರುತ್ತದೆ. ಕೆಲವು ದಿನಗಳು ಉತ್ತಮವಾಗಿರುತ್ತವೆ ಮತ್ತು ಕೆಲವು ದಿನಗಳು ಕೆಟ್ಟದಾಗಿರುತ್ತವೆ. ನೀವು ಕೇವಲ ನಂಬಿಕೆಯ ಆಧಾರದ ಮೇಲೆ ಬೌದ್ಧ ವಿಧಾನಗಳನ್ನು ಅಭ್ಯಾಸ ಮಾಡುತ್ತಿದ್ದರೆ, ನೀವು ನಿರುತ್ಸಾಹಗೊಳ್ಳಬಹುದು ಏಕೆಂದರೆ ನೀವು ಎಲ್ಲಿಯೂ ಪ್ರಗತಿಸುತ್ತಿರುವಂತೆ ತೋರುವುದಿಲ್ಲ. ಆಗ ನೀವು, "ಈ ಗುರಿಯನ್ನು ಸಾಧಿಸಲು ನಿಜವಾಗಿಯೂ ಸಾಧ್ಯವೇ?" ಎಂದು ಪ್ರಶ್ನಿಸಬಹುದು.
ಅದಕ್ಕಾಗಿಯೇ ಈ ಶ್ಲೋಕವು, "ಮಾನ್ಯವಾದ ಅರಿವಿನಿಂದ ಕರೆತರುವ" ಎಂದು ಹೇಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ನಿಜವಾಗಿಯೂ ಅರ್ಥಮಾಡಿಕೊಂಡಾಗ - ತರ್ಕ ಮತ್ತು ಕಾರಣದ ಆಧಾರದ ಮೇಲೆ - ಈ ಗುರಿಯು ಅಸ್ತಿತ್ವದಲ್ಲಿದೆ ಮತ್ತು ಅದನ್ನು ಸಾಧಿಸಲು ನಿಜವಾಗಿಯೂ ಸಾಧ್ಯ ಎಂದು ಅರ್ಥಮಾಡಿಕೊಂಡಾಗ, ಆ ಗುರಿಯ ಬಗೆಗಿರುವ ಮನವರಿಕೆ, ಅದನ್ನು ಸಾಧಿಸುವ ಕಾರ್ಯಸಾಧ್ಯತೆ ಮತ್ತು ಅದನ್ನು ಹೊಂದಿರುವ ಜನರ ಬಗೆಗಿನ ಮನವರಿಕೆಯು ಬಹಳಾ ದೃಢವಾಗುತ್ತದೆ. ಈ ಅಂಶಗಳನ್ನು ಯಾವುದೋ ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಿಗೆ ಅದು ನಿಜವೆಂದು ನೀವು ನಂಬುತ್ತೀರಿ. ಎರಡು ಸತ್ಯಗಳು ವಾಸ್ತವವಾದ್ದರಿಂದ, ಮತ್ತು ನಾಲ್ಕು ಸತ್ಯಗಳು ಮತ್ತು ಮೂರು ಆಶ್ರಯಗಳು ವಾಸ್ತವದ ಆಧಾರದ ಮೇಲೆ ತಾರ್ಕಿಕವಾಗಿ ವಾಸ್ತವವನ್ನು ಅನುಸರಿಸುವುದರಿಂದ ಅವು ನಿಜವೆಂದು ನೀವು ಮನವರಿಕೆ ಮಾಡಿಕೊಳ್ಳುತ್ತೀರಿ.
ವಿಮೋಚನೆಗೆ ಕಾರಣವಾಗುವ ಮಾರ್ಗ ಮನಸ್ಸುಗಳ ಈ ಮೂಲವನ್ನು ಅಳವಡಿಸಿಕೊಳ್ಳಲು ನನ್ನನ್ನು ಪ್ರೇರೇಪಿಸಿ.
ಸಾಮಾನ್ಯವಾಗಿ ನೀವು ಬೀಜವನ್ನು ಬಿತ್ತುತ್ತೀರಿ, ಆದರೆ ಇಲ್ಲಿ ನೀವು "ಬೇರ"ನ್ನು ಬಿತ್ತುತ್ತೀರಿ, ಬೀಜವನ್ನಲ್ಲ. ಈ ಪದಗಳ ಆಯ್ಕೆಯು, ಎರಡು ಸತ್ಯಗಳು, ನಾಲ್ಕು ಸತ್ಯಗಳು ಮತ್ತು ಮೂರು ಆಶ್ರಯಗಳ ರಚನೆಯು, ಇಡೀ ಬೌದ್ಧ ಆಧ್ಯಾತ್ಮಿಕ ಮಾರ್ಗದ ಮೂಲವಾಗಿವೆ ಎಂಬುದನ್ನು ಸೂಚಿಸುತ್ತದೆ, ಏಕೆಂದರೆ ಎಲ್ಲವೂ ಇದನ್ನು ಅನುಸರಿಸಿರುತ್ತವೆ. ಈ ಮೂಲವನ್ನು ನಿಮ್ಮ ಮನಸ್ಸಿನಲ್ಲಿ ದೃಢವಾಗಿ ಅಳವಡಿಸಿಕೊಂಡರೆ, ನಿಮ್ಮ ಎಲ್ಲಾ ಅಭ್ಯಾಸಗಳು ಮನವರಿಕೆಯನ್ನು ಆಧರಿಸಿರುತ್ತವೆ. ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ, ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ ಮತ್ತು ಆ ಗುರಿ ಏನೆಂದು ನೀವು ಅರ್ಥಮಾಡಿಕೊಳ್ಳಬಲ್ಲಿರಿ.
ಇದು ಬೌದ್ಧಧರ್ಮಕ್ಕಾಗಿರುವ ಬಹಳ ಮುಖ್ಯವಾದ ವಿಧಾನ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಬೇಕೆಂದರೆ, ಅದು ವಾಸ್ತವಿಕವಾದದ್ದು ಎಂದು ಮನವರಿಕೆಯಾಗುವುದು ಬಹಳ ಮುಖ್ಯ. ಇದು ನಮ್ಮ ಭಾವನೆಯಿಂದ ಹೊರಬರುವ ಸಂಪೂರ್ಣವಾಗಿ ಅಸಾಧ್ಯವಾದ ಒಂದು ರೀತಿಯ ಆದರ್ಶವಾದಿ ಕಲ್ಪನೆಯಾಗಿರುವುದಿಲ್ಲ. ನಮ್ಮ ಆಧ್ಯಾತ್ಮಿಕ ಜೀವನದಲ್ಲಿನ ನಮ್ಮ ಅಭ್ಯಾಸವು ವಾಸ್ತವಿಕವಾಗಿದೆ ಎಂದು ನಮಗೆ ಮನವರಿಕೆಯಾದರೆ, ನಾವು ಅದರೊಳಗೆ ಆರೋಗ್ಯಕರ ಭಾವನೆಗಳನ್ನು ಅಳವಡಿಸಿಕೊಳ್ಳಬಹುದು. ನಮಗೆ ಎರಡರ ಸಮತೋಲನ ಬೇಕು: ತಿಳುವಳಿಕೆ ಮತ್ತು ಆರೋಗ್ಯಕರ ಭಾವನೆಗಳಾದ ಸಹಾನುಭೂತಿ, ಉತ್ಸಾಹ, ತಾಳ್ಮೆ ಮುಂತಾದವು.
ಎರಡು ಸತ್ಯಗಳು
ಸಾಪೇಕ್ಷವಾದ, ಸಾಂಪ್ರದಾಯಿಕ ಸತ್ಯ
ಎಲ್ಲದರ ಅಡಿಪಾಯವಾದ, ಎಲ್ಲಾ ವಿಷಯಗಳು ಬದ್ಧವಾಗಿರುವ ಮಾರ್ಗವಾದ, ಎರಡು ಸತ್ಯಗಳ ಅರ್ಥವನ್ನು ತಿಳಿದುಕೊಳ್ಳುವುದರಿಂದ,
ಪದ್ಯದಲ್ಲಿನ ಮೊದಲ ಸಾಲು ಎರಡು ಸತ್ಯಗಳ ಬಗ್ಗೆ ಮಾತನಾಡುತ್ತವೆ: "ಸಾಪೇಕ್ಷ ಸತ್ಯ" ಅಥವಾ "ಸಾಂಪ್ರದಾಯಿಕ ಸತ್ಯ" ಮತ್ತು "ಆಳವಾದ ಸತ್ಯ" - ಬೇರೆ ರೀತಿಯಲ್ಲಿ ಹೇಳುವುದಾದರೆ, ಎಲ್ಲದರ ವಾಸ್ತವತೆಯ ಬಗೆಗಿರುವ ಎರಡು ಸತ್ಯ ಸಂಗತಿಗಳು. ಒಂದು ಹೆಚ್ಚು ಬಾಹ್ಯ, ಮೇಲ್ಮಟ್ಟದ್ದಾಗಿರುತ್ತದೆ, ಮತ್ತು ಇನ್ನೊಂದು ಆಳವಾದ ಮಟ್ಟವಾಗಿರುತ್ತದೆ. ಎರಡೂ ಮಾನ್ಯವಾಗಿರುತ್ತವೆ ಹೌದು, ಆದರೆ ವಿಭಿನ್ನ ದೃಷ್ಟಿಕೋನಗಳಿಂದ. ಇವೆರಡರ ಅನೇಕ ಪ್ರಸ್ತುತಿಗಳಿವೆ, ಆದರೆ ಸಾಮಾನ್ಯ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ಪರಮಪೂಜ್ಯ ದಲೈ ಲಾಮಾ ಅವರು ಸಾಮಾನ್ಯವಾಗಿ ಬಳಸುವ ಪ್ರಸ್ತುತಿಯನ್ನು ಇಲ್ಲಿ ಅನುಸರಿಸೋಣ.
ಕಾರಣ ಮತ್ತು ಪರಿಣಾಮ
ನಾವು ಅನುಭವಿಸುವ ಎಲ್ಲದರ ಸತ್ಯದ ಮೇಲ್ಮಟ್ಟ ಎಷ್ಟು? ನಾವು ಅನುಭವಿಸುತ್ತಿರುವ ಪ್ರಸ್ತುತವಾಗಿ ಸಂಭವಿಸುತ್ತಿರುವ ಎಲ್ಲವೂ ಅವುಗಳ ಹಿಂದಿನ ಕಾರಣಗಳೊಂದಿಗಿನ ಸಂಬಂಧದಿಂದಾಗಿರುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಎಲ್ಲವೂ ಕಾರಣ ಮತ್ತು ಪರಿಣಾಮದ ಮೇಲೆ ಅವಲಂಬಿತವಾಗಿ ಉದ್ಭವಿಸುತ್ತವೆ ಅಥವಾ ಸಂಭವಿಸುತ್ತವೆ. ಭೌತಶಾಸ್ತ್ರವು ಕೂಡ ಈ ಕಾರಣದ ತತ್ವವನ್ನು ಕಲಿಸುತ್ತದೆ, ಆದರೆ ಚೆಂಡನ್ನು ಒದೆಯುವುದು ಅಥವಾ ಚೆಂಡು ಚಲಿಸುವುದರ ನಡುವಿನ ಸಂಬಂಧದಂತಹ ಭೌತಿಕ ವಿದ್ಯಮಾನಗಳ ಬಗ್ಗೆ ಮಾತ್ರ ಕಲಿಸುತ್ತದೆ. ಈ ಸಂಬಂಧವು ಸರಳ ಯಂತ್ರಶಾಸ್ತ್ರವಾದ ಕಾರಣ ಮತ್ತು ಪರಿಣಾಮವಾಗಿರುತ್ತದೆ.
ನಿಸ್ಸಂಶಯವಾಗಿ, ಒಂದು ವಿಷಯ ಸಂಭವಿಸುವ ಎಲ್ಲಾ ಅಂಶಗಳನ್ನು ನೀವು ಪರಿಗಣಿಸಿದಾಗ, ಹೆಚ್ಚು ಸಂಕೀರ್ಣವಾದ ಮಟ್ಟದಲ್ಲಿ ಸಂಭವನೀಯತೆಯನ್ನು ವಿವರಿಸಬಹುದು. ಉದಾಹರಣೆಗೆ, ನೀವು ಆರ್ಥಿಕ ಸಮಸ್ಯೆಗಳು, ಜಾಗತಿಕ ತಾಪಮಾನ ಏರಿಕೆ, ಪ್ರಾದೇಶಿಕ ಯುದ್ಧಗಳು ಮತ್ತು ಮುಂತಾದವುಗಳನ್ನು ನೋಡಿದರೆ, ಅವು ಕೇವಲ ಒಂದು ಕಾರಣದಿಂದ ಉದ್ಭವಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅವವು ಯಾವುದೇ ಕಾರವಿಲ್ಲದೆ ಹುಟ್ಟುವುದಿಲ್ಲ, ಅಪ್ರಸ್ತುತ ಕಾರಣಗಳಿಂದ ಹುಟ್ಟುವುದಿಲ್ಲ. ಬದಲಾಗಿ, ಅಂತಹ ಎಲ್ಲಾ ಸಂದರ್ಭಗಳು ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿ ಉದ್ಭವಿಸುತ್ತವೆ. ಇವು ಪ್ರಸ್ತುತವಾಗಿ ಏನು ನಡೆಯುತ್ತಿದೆ ಎಂಬುದನ್ನು ಮಾತ್ರವಲ್ಲ, ಹಿಂದೆ ಏನಾಯಿತು ಎಂಬುದನ್ನು ಸಹ ಒಳಗೊಂಡಿರುತ್ತವೆ. ಉದಾಹರಣೆಗೆ, ಈ ದೇಶವಾದ ಉಕ್ರೇನ್ನಿನ ಪ್ರಸ್ತುತ ಪರಿಸ್ಥಿತಿಯನ್ನು, ಭೂತಕಾಲದ ಸೋವಿಯತ್ ಅಥವಾ ಎರಡನೆಯ ಮಹಾಯುದ್ಧ ಇತ್ಯಾದಿಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಇತಿಹಾಸದುದ್ದಕ್ಕೂ ಸಂಭವಿಸಿದ ಎಲ್ಲದರ ಪರಿಣಾಮವಾಗಿ ಇಂದಿನ ಆರ್ಥಿಕ ಮತ್ತು ಪರಿಸರ ಪರಿಸ್ಥಿತಿಗಳು ಉದ್ಭವಿಸಿವೆ. ಹಾಗಾಗಿ ಈಗ ನಡೆಯುತ್ತಿರುವುದು ಕೇವಲ ಒಬ್ಬ ವ್ಯಕ್ತಿಯ ಅಥವಾ ಸಂಭವಿಸಿದ ಒಂದು ವಿಷಯದ ತಪ್ಪು ಎಂದು ನೀವು ಹೇಳಲು ಸಾಧ್ಯವಿಲ್ಲ. ಕಾರಣಗಳು ಮತ್ತು ಪರಿಸ್ಥಿತಿಗಳ ಬೃಹತ್ ಜಾಲವನ್ನು ಅವಲಂಬಿಸಿ ವಿಷಯಗಳು ಉದ್ಭವಿಸುತ್ತವೆ. ಇದು ವಾಸ್ತವ, ಅಲ್ಲವೇ?
ಅಥವಾ ನೀವು ಮನೋವಿಜ್ಞಾನದ ಪರಿಭಾಷೆಯಲ್ಲಿ ನೋಡಿದರೆ: ನಿಮಗೆ ಕುಟುಂಬದಲ್ಲಿ ಸಮಸ್ಯೆ ಇದ್ದರೆ, ಅದು ಕೇವಲ ಒಂದು ಕಾರಣದಿಂದ ಅಥವಾ ಯಾವುದೇ ಕಾರಣವಿಲ್ಲದೆ ಹುಟ್ಟಿದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಕುಟುಂಬದ ಪ್ರತಿಯೊಬ್ಬ ಸದಸ್ಯ ಕುಟುಂಬದ ಸಮಸ್ಯೆಗೆ ಕಾರಣವಾಗುವ ರೀತಿಯಲ್ಲಿ ನಡೆದುಕೊಂಡಿರುತ್ತಾರೆ. ಅಂತೆಯೇ, ಪ್ರತಿಯೊಬ್ಬರೂ ವರ್ತಿಸುವ ರೀತಿಯು ಕೆಲಸದಲ್ಲಿ, ಶಾಲೆಯಲ್ಲಿ ಮತ್ತು ಅವರ ಸ್ನೇಹಿತರೊಂದಿಗೆ ಏನಾಗುತ್ತಿದೆ ಎಂಬುದರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನೀವು ಹೇಳಲಾಗುವುದಿಲ್ಲ. ಎಲ್ಲವೂ ಪ್ರಭಾವ ಬೀರುತ್ತದೆ. ಇದಲ್ಲದೆ, ಕುಟುಂಬದ ಪರಿಸ್ಥಿತಿಯು ಸಮಾಜ ಮತ್ತು ಅದರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳಿಂದ ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವುದಿಲ್ಲ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಯ ಮೇಲೆ ಪ್ರಭಾವ ಬೀರುತ್ತವೆ.
ಹಾಗಾದರೆ ವಾಸ್ತವತೆಯು, ಎಲ್ಲವೂ ಪರಸ್ಪರ ಸಂಬಂಧ ಹೊಂದಿದೆ ಮತ್ತು ಎಲ್ಲವನ್ನೂ ಪ್ರಭಾವಿಸುತ್ತದೆ ಎಂಬ ಅಂಶವನ್ನು ಸೂಚಿಸುತ್ತದೆ. ಸಂಭವಿಸುವ ಎಲ್ಲವೂ ಕಾರಣಗಳು ಮತ್ತು ಪರಿಸ್ಥಿತಿಗಳ ಬೃಹತ್ ಸಂಕೀರ್ಣ ಜಾಲದ ಪರಿಣಾಮವಾಗಿ ನಡೆಯುತ್ತದೆ. ಇದೇ ವಾಸ್ತವಿಕತೆ.
ಭೌತಿಕ ವಸ್ತುಗಳು, ಹಾಗೆಯೇ ಜಾಗತಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಸಮಸ್ಯೆಗಳ ವಿಷಯದಲ್ಲಿ ಇದು ನಿಜವಾಗಿದ್ದರೆ, ನಮ್ಮಲ್ಲಿ ಪ್ರತಿಯೊಬ್ಬರೊಂದಿಗೆ, ವೈಯಕ್ತಿಕವಾದ ಮಟ್ಟದಲ್ಲಿ ಇದು ನಿಜವೇ? ಸಂತೋಷ ಮತ್ತು ಅಸಂತೋಷದ ಬಗ್ಗೆ ಏನು ಮಾಡುವುದು? ಅವುಗಳಿಗೆ ಕಾರಣವಿದೆಯೇ? ಅವು ಯಾವುದೇ ಕಾರಣವಿಲ್ಲದೆ ಬಂದಿವೆಯೇ? ಏನೇ ಆಗಲಿ ನಾನು ಕೆಲವೊಮ್ಮೆ ಸಂತೋಷವನ್ನು ಅನುಭವಿಸುತ್ತೇನೆ, ಕೆಲವೊಮ್ಮೆ ಸಂತೋಷವನ್ನು ಅನುಭವಿಸುವುದಿಲ್ಲ, ಮತ್ತು ಮುಂದಿನ ಕ್ಷಣದಲ್ಲಿ ನಾನು ಏನನ್ನು ಅನುಭವಿಸುತ್ತೇನೆ ಎಂದು ತಿಳಿಯುವ ಮಾರ್ಗವಿಲ್ಲ. ಹಾಗಾದರೆ ಇದು ಯಾವುದೇ ಕಾರಣವಿಲ್ಲದೆ ನಡೆಯುತ್ತಿದೆಯೇ? ಅಥವಾ ನಾನು ಪ್ರಸ್ತುತವಾಗಿ ಏನು ಮಾಡುತ್ತಿದ್ದೇನೆ ಎಂಬುದರ ಮೇಲೆ ಅವಲಂಬಿತವಾಗಿ ನಡೆಯುತ್ತಿದೆಯೇ? ಅದಕ್ಕೆ ಅರ್ಥವಿಲ್ಲ, ಅಲ್ಲವೇ? ನಾನು ಎರಡು ವಿಭಿನ್ನ ದಿನಗಳಲ್ಲಿ ಒಂದೇ ಆಹಾರವನ್ನು ಸೇವಿಸಬಹುದು, ಒಂದು ದಿನ ಅದನ್ನು ತಿನ್ನುವಾಗ ನನಗೆ ಸಂತೋಷವಾಗುತ್ತದೆ ಮತ್ತು ಇನ್ನೊಂದು ದಿನ ಅದನ್ನು ತಿನ್ನುವಾಗ ನಾನು ದುಃಖವನ್ನು ಅನುಭವಿಸುತ್ತೇನೆ, ಆದ್ದರಿಂದ ಆ ಭಾವನೆಗಳು ಆಹಾರದಿಂದ ಬರುವುದಿಲ್ಲ. ನಾನು ಬಹಳಾ ಪ್ರೀತಿಸುವ ಯಾರೊಂದಿಗಾದರೂ ಇದ್ದಾಗಲೂ ನಾನು ಕೆಲವೊಮ್ಮೆ ಸಂತೋಷವಾಗಿರುತ್ತೇನೆ, ಕೆಲವೊಮ್ಮೆ ಅಸಂತೋಷವನ್ನು ಅನುಭವಿಸುತ್ತೇನೆ. ನಾನು ಶ್ರೀಮಂತನಾಗಿರಬಹುದು ಮತ್ತು ನನಗೆ ಒಳ್ಳೆಯದಾದರೂ ನಾನು ಅಸಂತೋಷವನ್ನು ಅನುಭವಿಸಬಹುದು.
ಹಾಗಾದರೆ ಈ ಸಂತೋಷ ಮತ್ತು ಅಸಂತೋಷ ಎಲ್ಲಿಂದ ಬರುತ್ತದೆ? ಕೆಲವೊಮ್ಮೆ ನಾನು ಸಂತೋಷವಾಗಿರಬೇಕು ಮತ್ತು ಕೆಲವೊಮ್ಮೆ ಅಸಂತೋಷವಾಗಿರಬೇಕು ಎಂದು ಬಟನ್ ಒತ್ತುವ ಒಂದು ರೀತಿಯ ದೈವ ಜೀವಿಗಳಿಂದ ಅವುಗಳನ್ನು ಕಳುಹಿಸಲಾಗುತ್ತದೆಯೇ? ಕ್ಷಮಿಸಿ, ನಾನು ನಿಂದಿಸಲು ಹಾಗೆ ಹೇಳಲಿಲ್ಲ. ನಾನು ಇದನ್ನು ತೀವ್ರ ಮೂರ್ಖತನದೆಡೆಗೆ ಕರೆದೊಯ್ಯತ್ತಿದ್ದೇನೆ. ಆದರೆ, ನೀವು ಅನುಭವಿಸುವ ಎಲ್ಲವೂ - ಭೌತಿಕ ವಸ್ತುಗಳು ಚಲಿಸುವುದು ಅಥವಾ ನೀವು ಆಕಸ್ಮಿಕವಾಗಿ ಬಿಸಿ ಒಲೆಯನ್ನು ಮುಟ್ಟಿದಾಗ ನಿಮ್ಮ ಕೈ ಸುಡುವುದು ಮತ್ತು ನೋವುಂಟಾಗುವುದು - ಇವೆಲ್ಲವೂ ಕಾರಣ ಮತ್ತು ಪರಿಣಾಮದ ನಿಯಮಗಳನ್ನು ಅನುಸರಿಸಿದರೆ, ಸಂತೋಷ ಮತ್ತು ಅಸಂತೋಷವು ಸಹ ಅರ್ಥವಾಗುವ ಕಾರಣದ ನಿಯಮಗಳನ್ನು ಅನುಸರಿಸಬೇಕಲ್ಲವೇ? ಈ ಪದ್ಯದ ಸನ್ನಿವೇಶದಲ್ಲಿರುವ ಸಾಪೇಕ್ಷ ಸತ್ಯವು, ಈ ವಾಸ್ತವತೆಯ ಮುಖ್ಯ ಪ್ರಶ್ನೆ ಮತ್ತು ಅಂಶವನ್ನು ಉಲ್ಲೇಖಿಸಿರುತ್ತದೆ. ಇದು ನಮ್ಮ ನಡವಳಿಕೆಯ ನಡುವಿನ ಸಾಂದರ್ಭಿಕ ಸಂಬಂಧದ ವಾಸ್ತವತೆಯನ್ನು ಸೂಚಿಸುತ್ತದೆ ಮತ್ತು ಅದರ ಪರಿಣಾಮವಾಗಿ ನಮ್ಮ ಸಂತೋಷ ಅಥವಾ ಅಸಂತೋಷದ ಅನುಭವವನ್ನು ಸೂಚಿಸುತ್ತದೆ.
ಕರ್ಮ
ಇದು ಕರ್ಮದ ಮೂಲಭೂತ ಬೌದ್ಧ ಬೋಧನೆಗಳೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಕರ್ಮ ಎಂದರೇನು? ಇದು ಸುಲಭವಾದ ವಿಷಯವಲ್ಲ. ಇಲ್ಲಿ ಹಲವಾರು ವಿವರಣೆಗಳು ಮತ್ತು ಬಹಳಷ್ಟು ತಪ್ಪುಗ್ರಹಿಕೆಗಳಿವೆ, ಆದರೆ ಸಂಕ್ಷಿಪ್ತವಾಗಿ ಹೇಳುವುದಾದರೆ:
ಕರ್ಮವು ನಮ್ಮ ನಡೆವಳಿಕೆ, ಮಾತನಾಡುವಿಕೆ ಮತ್ತು ಚಿಂತನೆಯ ವಿಧಾನಗಳನ್ನು ಪ್ರೇರೇಪಿಸುವ ಮತ್ತು ನಿರೂಪಿಸುವ ಪ್ರಚೋದನೆಯನ್ನು ಸೂಚಿಸುತ್ತದೆ.
ನಮ್ಮ ನಡವಳಿಕೆಯು ವಿನಾಶಕಾರಿ, ರಚನಾತ್ಮಕ ಅಥವಾ ತಟಸ್ಥವಾಗಿರಲಿ, ನೀವು ಅದರ ಬಗ್ಗೆ ಯೋಚಿಸಿದರೆ ಅದು ಪ್ರಚೋದಿತವಾಗಿರುತ್ತದೆ.
- ನನಗೆ ಸಿಟ್ಟೇರಿದೆ ಮತ್ತು ಒಬ್ಬರ ಮೇಲೆ ಕೂಗಬೇಕೇಂದೆನಿಸುತ್ತದೆ ಮತ್ತು ನಂತರ ನಾನು ಪ್ರಚೋದಿತವಾಗಿ, ಕೂಗುತ್ತೇನೆ.
- ನಾನು ಅತಿಯಾಗಿ ಕಾಳಜಿ ತೋರಿಸುತ್ತೇನೆ, ನನ್ನ ಮಗು ಸರಿಯಾಗಿದೆಯೇ ಎಂದು ನೋಡಲು ಬಯಸುತ್ತೇನೆ ಮತ್ತು ನಂತರ, ಪ್ರಚೋದಿತವಾಗಿ ಅಗತ್ಯಕ್ಕಿಂತ ಹೆಚ್ಚು ಅಥವಾ ಆರೋಗ್ಯಕರವಾಗಿರದಷ್ಟು ಸಲ ಪದೇ ಪದೇ ಪರಿಶೀಲಿಸುತ್ತೇನೆ.
- ನನಗೆ ಹಸಿವಾಗಿದೆ ಮತ್ತು ತಿಂಡಿಗಾಗಿ ರೆಫ್ರಿಜರೇಟರ್ ಬಳಿ ಹೋಗಬೇಕೆನಿಸುತ್ತದೆ ಮತ್ತು ನಂತರ ಪ್ರಚೋದಿತವಾಗಿ ನಾನು ಹೋಗುತ್ತೇನೆ.
ಈ ಪ್ರಚೋದನೆ ಎಲ್ಲಿಂದ ಬರುತ್ತದೆ? ಮತ್ತು, ಇದು ಯಾವುದಕ್ಕೆ ಕಾರಣವಾಗುತ್ತದೆ? ಇವು ಕರ್ಮದ ಬೋಧನೆಗಳು ಕೇಳುವ ಪ್ರಶ್ನೆಗಳಾಗಿರುತ್ತವೆ. ಬೌದ್ಧರ ವಿವರಣೆಯ ಪ್ರಕಾರ, ನೀವು ಪ್ರಚೋದಿತವಾದ ರೀತಿಯಲ್ಲಿ ವರ್ತಿಸಿದಾಗ, ಮಾತನಾಡಿದಾಗ ಅಥವಾ ಯೋಚಿಸಿದಾಗ, ಅದು ನಿಮ್ಮ ಮಾನಸಿಕ ನಿರಂತರತೆಯಲ್ಲಿ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳನ್ನು ನಿರ್ಮಿಸಿದ್ದು, ಅವು ನಿಮ್ಮ ಅನುಭವದ ಪ್ರತಿ ಕ್ಷಣದೊಂದಿಗೆ ಮುಂದುವರಿಯುತ್ತವೆ. ವಿವಿಧ ಸಂದರ್ಭಗಳಲ್ಲಿ ಪ್ರಚೋದಿತವಾದಾಗ, ಅವು ನಡವಳಿಕೆಯ ಮಾದರಿಯನ್ನು ಪುನರಾವರ್ತಿಸುವ ನಿಮ್ಮ ಭಾವನೆಗೆ ಕಾರಣವಾಗುತ್ತವೆ. ಆ ಭಾವನೆಯ ಆಧಾರದ ಮೇಲೆ, ಪ್ರಚೋದನೆಯು ಹುಟ್ಟುತ್ತದೆ ಮತ್ತು ಅದು ನಿಮ್ಮನ್ನು ಅನಿಯಂತ್ರಿತವಾಗಿ ಕ್ರಿಯೆಯನ್ನು ಪುನರಾವರ್ತಿಸುವಂತೆ ಮಾಡುತ್ತದೆ. ಈ ಪ್ರಚೋದನೆಯೇ ಇಲ್ಲಿರುವ ನಿಜವಾದ ಕರ್ಮವಾಗಿರುತ್ತದೆ.
ಹೌದು, ಈ ವಿದ್ಯಮಾನವನ್ನು ನೀವು ಶಾರೀರಿಕ ಮಟ್ಟದಲ್ಲಿಯೂ ವಿವರಿಸಬಹುದು: ಒಂದು ನಿರ್ದಿಷ್ಟ ರೀತಿಯಲ್ಲಿನ ನಡವಳಿಕೆಯು ನರಗಳ ಮಾರ್ಗವನ್ನು ನಿರ್ಮಿಸುತ್ತದೆ ಮತ್ತು ಬಲಪಡಿಸುತ್ತದೆ, ಇದರಿಂದಾಗಿ ನೀವು ಆ ನಡವಳಿಕೆಯ ಮಾದರಿಯನ್ನು ಹೆಚ್ಚು ಸುಲಭವಾಗಿ ಅನುಸರಿಸುತ್ತೀರಿ. ಖಂಡಿತವಾಗಿಯೂ ಬೌದ್ಧಧರ್ಮವು ಈ ಭೌತಿಕ ಆಧಾರವನ್ನು ನಿರಾಕರಿಸುವುದಿಲ್ಲ; ಆದರೆ ಇದು ಕೇವಲ ಅನುಭವದ ದೃಷ್ಟಿಕೋನದಿಂದ ವಿದ್ಯಮಾನವನ್ನು ಸಮೀಪಿಸುತ್ತದೆ, ಮತ್ತು ಕಾರಣ ಮತ್ತು ಪರಿಣಾಮದ ಉದಾಹರಣೆಯಾಗಿ ಅದನ್ನು ವಿಶ್ಲೇಷಿಸುತ್ತದೆ.
ಸಂತೋಷ ಮತ್ತು ಅಸಂತೋಷದ ವಿಷಯದಲ್ಲಿ ಏನಾಗುತ್ತದೆ? ಬೌದ್ಧಧರ್ಮವು ಇವುಗಳನ್ನು ಕರ್ಮದ ಕಾರಣ ಮತ್ತು ಪರಿಣಾಮದ ವಿಷಯವಾಗಿಯೇ ವಿವರಿಸುತ್ತದೆ. ನೀವು ಅಸಂತೋಷವನ್ನು ಅನುಭವಿಸಿದರೆ, ಇದು ಗೊಂದಲದ ಭಾವನೆಗಳ ಪ್ರಭಾವದ ಅಡಿಯಲ್ಲಿ ನಿಮ್ಮ ಪ್ರಚೋದಿತವಾದ ವಿನಾಶಕಾರಿ ನಡವಳಿಕೆಯ ದೀರ್ಘಾವಧಿಯ ಫಲಿತಾಂಶವಾಗಿರುತ್ತದೆ. ನೀವು ಸಾಮಾನ್ಯವಾದ ಸಂತೋಷವನ್ನು ಅನುಭವಿಸಿದರೆ - ಅಂದರೆ ಶಾಶ್ವತವಾಗಿ ಉಳಿಯದ ಮತ್ತು ತೃಪ್ತಿಪಡಿಸದ ಸಂತೋಷ, ಆದರೂ ಇದು ಉತ್ತಮವಾಗಿರುತ್ತದೆ - ಇದು ತಾಳ್ಮೆ ಮತ್ತು ದಯೆಯಂತಹ ಸಕಾರಾತ್ಮಕ ಭಾವನೆಗಳ ಪ್ರಭಾವದ ಅಡಿಯಲ್ಲಿ ಹುಟ್ಟಿದ ರಚನಾತ್ಮಕ ನಡವಳಿಕೆಯ ದೀರ್ಘಾವಧಿಯ ಫಲಿತಾಂಶವಾಗಿರುತ್ತದೆ. ಹಾಗಾದರೂ, ಇದು ಇನ್ನೂ ಪ್ರಚೋದಿತವಾಗಿರುತ್ತದೆ, ಏಕೆಂದರೆ ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಗೊಂದಲವು ಇದರಲ್ಲಿ ಬೆರೆತಿರುತ್ತದೆ, ಇದು ಪ್ರಚೋದಿತವಾಗಿ ಒಳ್ಳೆಯ ಕೆಲಸ ಮಾಡುವವ ಅಥವಾ ಪ್ರಚೋದಿತವಾದ ‘ಪರ್ಫೆಕ್ಷನಿಸ್ಟ್’ ಆಗಿರುವಂತೆ ಇರುತ್ತದೆ.
ಈ ಸಾಂದರ್ಭಿಕ ಸಂಬಂಧಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು? ಮೊದಲನೆಯದಾಗಿ, ನಾವು ರಚನಾತ್ಮಕ ಮತ್ತು ವಿನಾಶಕಾರಿ ನಡವಳಿಕೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಇವೆರಡರ ನಡುವಿನ ವ್ಯತ್ಯಾಸವನ್ನು, ನಿಮ್ಮ ನಡವಳಿಕೆಯು ಬೇರೆಯವರ ಮೇಲಾಗುವ ಪರಿಣಾಮದ ಅಳತೆಯಲ್ಲಿ ನೋಡಲಾಗುವುದಿಲ್ಲ. ಉದಾಹರಣೆಗೆ, ನೀವು ಯಾರೊಂದಿಗಾದರೂ ತುಂಬಾ ಕೋಪಗೊಂಡಿದ್ದರೆ ಮತ್ತು ನೀವು ಅವರನ್ನು ಚಾಕುವಿನಿಂದ ಇರಿಯುತ್ತಿದ್ದರೆ, ಅದು ವಿನಾಶಕಾರಿಯಾಗಿರುತ್ತದೆ. ಮತ್ತೊಂದೆಡೆ, ಶಸ್ತ್ರಚಿಕಿತ್ಸಕರಾಗಿ, ಜೀವ ಉಳಿಸುವ ಕಾರ್ಯಾಚರಣೆಯಲ್ಲಿ, ನೀವು ಯಾರನ್ನಾದರೂ ಚಾಕುವಿನಿಂದ ತೆರೆದರೆ, ಅದು ರಚನಾತ್ಮಕವಾಗಿರುತ್ತದೆ. ನಿಸ್ಸಂಶಯವಾಗಿ, ಒಬ್ಬರನ್ನು ಚಾಕುವಿನಿಂದ ಇರಿಯುವ ಕ್ರಿಯೆಯು ರಚನಾತ್ಮಕವೇ ಅಥವಾ ವಿನಾಶಕಾರಿಯೇ ಎಂಬುದನ್ನು ಇಲ್ಲಿ ನಿರ್ಧರಿಸಲಾಗುತ್ತಿಲ್ಲ. ಇದೆಲ್ಲವೂ ಪ್ರೇರಣೆಯನ್ನು ಅವಲಂಬಿಸಿರುತ್ತದೆ: ಕ್ರಿಯೆಯನ್ನು ಮಾಡಿದ ಮನಸ್ಸಿನ ಸ್ಥಿತಿ ಮತ್ತು ಆ ಕ್ರಿಯೆಯ ಮೂಲಕ ನೀವು ತಲುಪಲು ಉದ್ದೇಶಿಸಿರುವ ಗುರಿ.
ಕ್ರಿಯೆಯು ಕೋಪ, ಬಾಂಧವ್ಯ, ಆಕ್ರಮಣ, ದುರಾಶೆ, ನಿಷ್ಕಪಟತೆ, ಅಸೂಯೆ, ದುರಹಂಕಾರ, ಸ್ವಾರ್ಥ ಮತ್ತು ಈ ರೀತಿಯ ಗೊಂದಲಮಯ ಭಾವನೆಗಳಿಂದ ಪ್ರೇರಿತವಾಗಿದ್ದರೆ, ಅದು ಸ್ವಂತವಾಗಿ ಒಳ್ಳೆಯದೇ ಆಗಿದ್ದರೂ ಅದು ವಿನಾಶಕಾರಿಯಾಗಿರುತ್ತದೆ. ಉದಾಹರಣೆಗೆ, ನೀವು ಒಬ್ಬರ ಮೇಲಿನ ಹಾತೊರೆಯುವ ಬಯಕೆಯಿಂದ ಮತ್ತು ಲೈಂಗಿಕ ಕಿರುಕುಳದ ಬಯಕೆಯಿಂದ ಉತ್ತಮವಾದ ಮಸಾಜ್ ನೀಡಿದರೆ, ನಿಮ್ಮ ಕ್ರಿಯೆಯು ವಿನಾಶಕಾರಿಯಾಗಿರುತ್ತದೆ. ಮತ್ತೊಂದೆಡೆ, ಈ ಕ್ರಿಯೆಯು, ಗೊಂದಲಮಯ ಭಾವನೆಗಳಿಂದ ತುಲನಾತ್ಮಕವಾಗಿ ಮುಕ್ತವಾಗಿದ್ದರೆ, ಆ ಕ್ರಿಯೆಯು ಚೆನ್ನಾಗಿಲ್ಲದಿದ್ದರೂ, ಅದು ರಚನಾತ್ಮಕವಾಗಿರುತ್ತದೆ. ಉದಾಹರಣೆಗೆ, ಪೋಷಕರಾಗಿ, ನೀವು ನಿಮ್ಮ ಅಸಭ್ಯವಾಗಿ ವರ್ತಿಸುವ ಮಗುವನ್ನು ಅದರ ಕೋಣೆಗೆ ಕಳುಹಿಸುತ್ತೀರಿ, ಇದು ಕೋಪದಿಂದ ಅಲ್ಲ, ಬದಲಿಗೆ ಅವರಿಗೆ ತುಂಟತನ ಮಾಡದಂತೆ ಕಲಿಸಲು ಇರುವ ಪ್ರೀತಿ ಮತ್ತು ಕಾಳಜಿಯಿಂದ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ, ರಚನಾತ್ಮಕ ಕ್ರಿಯೆಗಳು ಪ್ರಚೋದಿತವಾಗಿಯೇ ಇರುತ್ತದೆ ಏಕೆಂದರೆ ನಿಮ್ಮ ಕ್ರಿಯೆಯಿಂದ ನಿಜವಾದ ಗುರುತಿನ ಪ್ರಜ್ಞೆಯನ್ನು ಪಡೆಯುವ ಸುಪ್ತಾವಸ್ಥೆಯ ಹಂಗಿನೊಂದಿಗೆ ಅದು ಬೆರೆತಿರುತ್ತದೆ - ಈ ಸಂದರ್ಭದಲ್ಲಿ, ಅದು ಉತ್ತಮ ಪೋಷಕರಾಗಿರುವುದಾಗಿರುತ್ತದೆ.
ಹಾಗಾದರೆ, ಗೊಂದಲದ ಭಾವನೆಗಳ ಆಧಾರದ ಮೇಲೆ ಅಸಂತೋಷ ಮತ್ತು ವಿನಾಶಕಾರಿ ನಡವಳಿಕೆಯ ನಡುವಿನ ಸಾಂದರ್ಭಿಕ ಸಂಬಂಧವನ್ನು ಮತ್ತು ಗೊಂದಲಮಯ ಭಾವನೆಗಳಿಂದ ತುಲನಾತ್ಮಕವಾಗಿ ಮುಕ್ತವಾಗಿರುವ ಸಂತೋಷ ಮತ್ತು ರಚನಾತ್ಮಕ ನಡವಳಿಕೆಯ ನಡುವಿನ ಸಾಂದರ್ಭಿಕ ಸಂಬಂಧವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು? ಇದು ಬಹಳಾ ಆಸಕ್ತಿದಾಯಕವಾದ ಪ್ರಶ್ನೆಯಾಗಿರುವುದಲ್ಲದೆ, ಬಹಳಾ ಮುಖ್ಯವಾದದ್ದಾಗಿರುತ್ತದೆ, ಏಕೆಂದರೆ ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಬಗೆಗಿರುವ ಗೊಂದಲಮಯ ಭಾವನೆಗಳಿಗೆ ಕಾರಣವು ಕರ್ಮ, ನಮ್ಮ ಗೊಂದಲಮಯ ಭಾವನೆಗಳು ಮತ್ತು ಗಲಿಬಿಲಿಯೆಂದು ಬುದ್ದ ಗುರುತಿಸಿದನು. ಅವುಗಳು ಅಸಂತೋಷ ಮತ್ತು ಅತೃಪ್ತ ಸಾಮಾನ್ಯ ಸಂತೋಷಕ್ಕೆ ಕಾರಣವಾಗಿರುತ್ತವೆ. ಎರಡೂ ರೀತಿಯ ಭಾವನೆಗಳು ಉಂಟುಮಾಡುವ ದುಃಖದಿಂದ ಮುಕ್ತವಾಗಲು ನಾವು ಇವೆರಡನ್ನೂ ಮೀರಬೇಕು.
ಅದರ ಬಗ್ಗೆ ಯೋಚಿಸೋಣ. ಉದಾಹರಣೆಗೆ, ನೀವು ಒಬ್ಬರೊಂದಿಗೆ ಅಥವಾ ಒಂದು ವಿಷಯದೊಂದಿಗೆ ಕೋಪದಿಂದ ವರ್ತಿಸುವಾಗ, ಮಾತನಾಡುವಾಗ ಅಥವಾ ಯೋಚಿಸುವಾಗ, ನೀವು ನಿರಾಳವಾಗಿರುತ್ತೀರಾ? ನಿಮ್ಮ ಶಕ್ತಿ ಶಾಂತವಾಗಿರುತ್ತದೆಯೇ? ಇಲ್ಲ, ಅದು ಶಾಂತವಾಗಿರುವುದಿಲ್ಲ; ಅದು ಪ್ರಕ್ಷುಬ್ಧವಾಗಿರುತ್ತದೆ. ಅಂತಹ ಸಮಯದಲ್ಲಿ ನೀವು ಸಂತೋಷವಾಗಿರುತ್ತೀರಾ? ಕೋಪ ಅಥವಾ ಇತರ ಯಾವುದೇ ಗೊಂದಲಮಯ ಭಾವನೆಗಳನ್ನು ಅನುಭವಿಸುತ್ತಿರುವಾಗ ಅವರು ಸಂತೋಷವಾಗಿದ್ದಾರೆ ಎಂದು ಯಾರೂ ಹೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅಂತೆಯೇ, ನೀವು ದುರಾಸೆಯನ್ನು ಅನುಭವಿಸುತ್ತಿರುವಾಗ ನಿಮ್ಮ ಶಕ್ತಿಯನ್ನು ಗಮನಿಸಿದರೆ, ನೀವು ನಿರಾಳವಾಗಿರುವುದಿಲ್ಲ; ನಿಮಗೆ ಸಾಕಷ್ಟು ಸಿಗುವುದಿಲ್ಲ ಎಂದು ನೀವು ಭಯಪಡುತ್ತೀರಿ. ನೀವು ಯಾರೊಂದಿಗಾದರೂ ಬಹಳಾ ಅಂಟಿಕೊಂಡಾಗ ಅಥವಾ ಬಹಳಾ ನೆನಪಿಸಿಕೊಳ್ಳುತ್ತಿದ್ದಾಗ ನೀವು ನಿರಾಳವಾಗಿರುವುದಿಲ್ಲ; ನಿಮ್ಮ ಶಕ್ತಿಯು ಬಹಳಾ ತೊಂದರೆಗೀಡಾಗಿರುತ್ತದೆ. ಆದರೆ ನೀವು ಯಾವುದೇ ಕೋಪ, ದುರಾಸೆ, ಸ್ವಾರ್ಥ ಅಥವಾ ಅಂತಹ ವಿಷಯಗಳನ್ನು ಅನುಭವಿಸದಿದ್ದಾಗ ಮತ್ತು ನೀವು ದಯೆ ತೋರಲು ಪ್ರಯತ್ನಿಸುವಾಗ, ನಿಮ್ಮ ಮನಸ್ಸು ತುಲನಾತ್ಮಕವಾಗಿ ಶಾಂತವಾಗಿರುತ್ತದೆ, ನಿಮ್ಮ ಶಕ್ತಿಯು ನಯವಾಗಿರುತ್ತದೆ, ಅಲ್ಲವೇ? ನೀವು ಸಂತೋಷವನ್ನು ಅನುಭವಿಸುತ್ತೀರಿ, ಇದು ಅತ್ಯಂತ ಸೌಮ್ಯ ರೀತಿಯದ್ದಾಗಿರಬಹುದು, ಹೆಚ್ಚಿನದ್ದೇನಲ್ಲ. ನೀವು ಪ್ರಚೋದಿತವಾಗಿ "ಒಳ್ಳೆಯದನ್ನು ಮಾಡಲು" ಮತ್ತು ಎಲ್ಲವನ್ನೂ ಪರಿಪೂರ್ಣವಾಗಿಸಲು ಬಯಸಿದರೆ, ನಿಮ್ಮ ಶಕ್ತಿಯು ಕೋಪದಿಂದ ವರ್ತಿಸುವುದಕ್ಕಿಂತ ಹೆಚ್ಚು ಶಾಂತವಾಗಿರುತ್ತದೆ ಮತ್ತು ನೀವು ಪ್ರಯೋಜನಕಾರಿಯಾದದ್ದನ್ನು ಮಾಡುವುದರಿಂದ ನೀವು ಸಂತೋಷವಾಗಿರುತ್ತೀರಿ. ಹೌದು, ನೀವು ಸಕಾರಾತ್ಮಕವಾದ ಏನನ್ನಾದರೂ ಮಾಡುವಾಗ ನೀವು ತಪ್ಪು ಮಾಡಬಹುದು ಅಥವಾ ಚೆನ್ನಾಗಿ ಮಾಡುತ್ತಿಲ್ಲ ಎಂದು ಭಯಪಡುತ್ತಿದ್ದರೆ, ಅಂತಹ ಆಲೋಚನೆಗಳು ಮತ್ತು ಚಿಂತೆಗಳಿಂದ ನೀವು ಖಂಡಿತವಾಗಿಯೂ ನಿರಾಳವಾಗಿರುವುದಿಲ್ಲ.
ಇಲ್ಲಿರುವ ಗಮನಾರ್ಹ ಸಂಗತಿಯೆಂದರೆ, ಈ ಅಸಂತೋಷದ ಅಥವಾ ಸಂಬಂಧಿತ ಸಂತೋಷದ ಭಾವನೆಯು, ನಿಮ್ಮ ಕ್ರಿಯೆಯು ಕೊನೆಗೊಂಡ ನಂತರವೂ ಸ್ವಲ್ಪ ಸಮಯದವರೆಗೆ ಇರುತ್ತದೆ. ನೀವು ಬೇರೆ ಯಾವುದನ್ನಾದರೂ ಮಾಡುತ್ತಿರುವಾಗ ನೀವು ಏನನ್ನು ಅನುಭವಿಸುತ್ತೀರೋ, ಅದರ ಮೇಲೆ ನೀವು ಮೊದಲು ಮಾಡಿದ ವಿಷಯವು ಪರಿಣಾಮ ಬೀರಬಹುದು ಎಂದು ಅದು ಸೂಚಿಸುತ್ತದೆ. ಬುದ್ಧ, ಕರ್ಮ ಮತ್ತು ನೀವು ಅನುಭವಿಸುವ ಸಂತೋಷ ಅಥವಾ ಅಸಂತೋಷದ ಮಟ್ಟಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡುವಾಗ, ಒಂದು ಕ್ರಿಯೆಯ ತದನಂತರ ನಾವು ಏನನ್ನು ಅನುಭವಿಸುತ್ತೇವೆ ಎಂಬುದರ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರು ದೀರ್ಘಾವಧಿಯ ಫಲಿತಾಂಶಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ, ನಮ್ಮ ಪ್ರಚೋದಿತ ಭಾವನಾತ್ಮಕ ನಡವಳಿಕೆ ಮತ್ತು ನಮ್ಮ ದೇಹದಲ್ಲಿ ನಮ್ಮ ಶಕ್ತಿಯು ಹರಿಯುವ ವಿಧಾನದ ನಡುವಿನ ಸಂಬಂಧದ ಬಗ್ಗೆ ನಾವು ಯೋಚಿಸಿದಾಗ ನಾವು ಅವರ ವಿಷಯವನ್ನು ಪ್ರಶಂಸಿಸಲು ಪ್ರಾರಂಭಿಸಬಹುದು.
ಹಾಗಾದರೆ ನಾವು ಅನುಭವಿಸುವ ಎಲ್ಲದರ ಬಗೆಗಿರುವ ಸಾಪೇಕ್ಷ ಸತ್ಯವೆಂದರೆ, ಎಲ್ಲವೂ ಕಾರಣಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ, ನಮ್ಮ ಸಾಮಾನ್ಯ ಮನಸ್ಥಿತಿ ಮತ್ತು ನಾವು ಏನು ಮಾಡಬೇಕೆಂದು ಭಾವಿಸುತ್ತೇವೆ ಎಂಬುದು ಮಾತ್ರವಲ್ಲದೆ, ನಾವು ಹೇಗೆ ಸಂತೋಷವಾಗಿರುತ್ತೇವೆ ಅಥವಾ ಅಸಂತೋಷವಾಗಿರುತ್ತೇವೆ ಎಂಬುದೂ ಕೂಡ. ಇದು ವಾಸ್ತವದ ಒಂದು ಅಂಶವಾಗಿರುತ್ತದೆ - ಪದ್ಯದಲ್ಲಿನ ಸಾಲು ಅದನ್ನು, ಎಲ್ಲಾ ವಿಷಯಗಳು ಬದ್ಧವಾಗಿರುವ ಅಡಿಪಾಯ ಎಂದು ಕರೆಯುತ್ತದೆ – ಅಂದರೆ, ಎಲ್ಲವೂ ಹೇಗೆ ಅಸ್ತಿತ್ವದಲ್ಲಿದೆ, ಕಾರ್ಯಗಳು ಮತ್ತು ಕೆಲಸ ಮಾಡುವ ವಿಧಾನವಾಗಿರುತ್ತದೆ.
ಆಳವಾದ ಸತ್ಯ
ಎಲ್ಲದರ ಬಗೆಗಿರುವ ಎರಡನೆಯ ಸತ್ಯವು ಆಳವಾದ ಮಟ್ಟದ ಮೇಲೆ ಗಮನಹರಿಸುತ್ತದೆ. ನಮ್ಮ ಕಾಲ್ಪನಿಕ ಪ್ರಕ್ಷೇಪಗಳ ಕಾರಣದಿಂದಾಗಿ ವಸ್ತುಗಳು ಅಸಾಧ್ಯವಾದ ರೀತಿಯಲ್ಲಿ ಅಸ್ತಿತ್ವದಲ್ಲಿವೆ ಮತ್ತು ಕಾರ್ಯನಿರ್ವಹಿಸುತ್ತವೆಯೆನಿಸಿದರೂ, ಅವು ಅಸ್ತಿತ್ವದಲ್ಲಿವೆ ಎಂದು ತೋರುವ ಅಸಾಧ್ಯ ಮಾರ್ಗಗಳು ವಾಸ್ತವಕ್ಕೆ ಹೋಲುವುದಿಲ್ಲ.
ನಮ್ಮ ಪ್ರಕ್ಷೇಪಗಳಿಗೆ ಅನುಗುಣವಾದ ಯಾವುದೇ ಕಂಡುಹಿಡಿಯಬಹುದಾದ ವಸ್ತುವಿನ ಒಟ್ಟು ಅನುಪಸ್ಥಿತಿಯನ್ನು "ಶೂನ್ಯತೆ" ಎಂದು ಕರೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ "ಖಾಲಿತನ" ಎಂದು ಅನುವಾದಿಸಲಾಗುತ್ತದೆ.
ನಮ್ಮ ಮನಸ್ಸುಗಳ ಗೊಂದಲಮಯ ಅಭ್ಯಾಸದಿಂದ ಅಸ್ತಿತ್ವದಲ್ಲಿರುವ ಅಸಾಧ್ಯವಾದ ಮಾರ್ಗಗಳಲ್ಲಿ ಹಲವು ಹಂತದ ಸೂಕ್ಷ್ಮತೆಗಳು ಹೊರಹೊಮ್ಮುತ್ತವೆಯಾದರೂ, ನಾವು ಈ ಆಳವಾದ ಸತ್ಯವನ್ನು ಸಾಮಾನ್ಯ ಮಟ್ಟದಲ್ಲಿ ಅರ್ಥಮಾಡಿಕೊಳ್ಳುವ ಮೂಲಕ ಪ್ರಾರಂಭಿಸಬಹುದು: ಅಸಾಧ್ಯವಾದ ರೀತಿಯಲ್ಲಿ ವಿಷಯಗಳು ಅಸ್ತಿತ್ವದಲ್ಲಿಲ್ಲ. ಅದು ಹೇಗೆ ತಾನೆ ಸಾಧ್ಯ? ವಾಸ್ತವವೆಂದರೆ ನಮ್ಮ ಗೊಂದಲಮಯ ಮನಸ್ಸುಗಳು ಯೋಜಿಸುವ ಅಸಾಧ್ಯವಾದ ಅಸಂಬದ್ಧತೆಗೆ ಹೊಂದಿಕೆಯಾಗುವ ಯಾವುದೂ ಇರುವುದಿಲ್ಲ. ಇದು ಖಡಾಖಂಡಿತವಾಗಿ ಇರುವುದಿಲ್ಲ, ಅಂತಹ ವಿಷಯಗಳೇ ಇಲ್ಲ.
ಒಂದು ಶ್ರೇಷ್ಠ ಉದಾಹರಣೆಯನ್ನು ಪರಿಗಣಿಸಿ: ಹಾಸಿಗೆಯ ಕೆಳಗೆ ಒಂದು ರಾಕ್ಷಸನಿದ್ದಾನೆ ಎಂದು ಮಗು ಭಾವಿಸುತ್ತದೆ. ವಾಸ್ತವದಲ್ಲಿ ಹಾಸಿಗೆಯ ಕೆಳಗೆ ಒಂದು ಬೆಕ್ಕು ಇದೆ, ಆದರೆ ಮಗು ಅದು ರಾಕ್ಷಸ ಎಂದು ಬೆಕ್ಕಿನ ಮೇಲೆ ಪ್ರಕ್ಷೇಪಿಸುತ್ತದೆ. ನಂತರ ಅಲ್ಲಿ ನಿಜವಾಗಿಯೂ ರಾಕ್ಷಸನಿದ್ದಾನೆ ಎಂದು ಮಗು ನಂಬುವುದರಿಂದ, ಅದು ಅಸಂಬದ್ಧವಾಗಿದ್ದರೂ, ಮಗು ಬಹಳಾ ಹೆದರುತ್ತದೆ. ಆದ್ದರಿಂದ ಈ ಅಸಂಬದ್ಧತೆಯ ಪ್ರಕ್ಷೇಪಣೆಯು ಮಗುವಿನ ಮೇಲೆ ಪರಿಣಾಮ ಬೀರುತ್ತದೆ, ಆದರೆ ಇದು ಖಂಡಿತವಾಗಿಯೂ ಬೆಕ್ಕನ್ನು ನಿಜವಾದ ರಾಕ್ಷಸನನ್ನಾಗಿ ಮಾಡುವುದಿಲ್ಲ, ಏಕೆಂದರೆ ರಾಕ್ಷಸರಂತಹ ಯಾವುದೇ ವಿಷಯವಿಲ್ಲ. ಹಾಗಾದರೆ ಶೂನ್ಯತೆ ಮಗುವಿನ ಕಲ್ಪನೆಗೆ ಅನುಗುಣವಾಗಿರುವ ನಿಜವಾದ ರಾಕ್ಷಸನ ಸಂಪೂರ್ಣ ಅನುಪಸ್ಥಿತಿಯಾಗಿರುತ್ತದೆ. ಅಲ್ಲಿ ಎಂದಿಗೂ ಯಾವುದೇ ರಾಕ್ಷಸನಿರಲಿಲ್ಲ ಮತ್ತು ಎಂದಿಗೂ ಇರಲು ಸಾಧ್ಯವಿಲ್ಲ. ಆದರೆ ಆ ಪ್ರಕ್ಷೇಪವನ್ನು ತೆಗೆದುಹಾಕಿದರೆ ಹಾಸಿಗೆಯ ಕೆಳಗೆ ಬೆಕ್ಕು ಇನ್ನೂ ಇದೆ; ಅಲ್ಲಿ ಏನೂ ಇಲ್ಲ ಎಂದು ಹೇಳಲಾಗುವುದಿಲ್ಲ.
ಅಭ್ಯಾಸದದಿಂದಾಗಿ, ನಮಗೆ ನಿಜವಾಗಿ ಗೋಚರಿಸುವ ರೀತಿಯಲ್ಲೇ ವಸ್ತುಗಳು ಅಸ್ತಿತ್ವದಲ್ಲಿವೆ ಎಂದು ನಾವು ಊಹಿಸುತ್ತೇವೆ. ನಮ್ಮ ಕಣ್ಣುಗಳ ಮುಂದೆ ಏನಿದೆ ಅಥವಾ ಪ್ರಸ್ತುತವಾಗಿ ನಾವು ನಿಜವಾಗಿ ಏನನ್ನು ಅನುಭವಿಸುತ್ತಿದ್ದೇವೆ ಎಂಬುದರ ಬಗ್ಗೆ ಮಾತ್ರ ನಾವು ತಿಳಿದಿರುತ್ತೇವೆ. ಉದಾಹರಣೆಗೆ, ನಾನು ಈಗ ಅಸಂತೋಷವಾಗಿದ್ದೇನೆ ಮತ್ತು ಅದು ಯಾವುದೇ ಕಾರಣವಿಲ್ಲದೆ ಸ್ವತಃ ತಾನಾಗಿಯೇ ಉದ್ಭವಿಸಿದೆ ಎಂದು ತೋರುತ್ತದೆ. ನಾನು ಕೇವಲ ಅಸಂತೋಷನಾಗಿದ್ದೇನೆ. ಏಕೆಂದು ನನಗೆ ಗೊತ್ತಿಲ್ಲ. ನನಗೆ ಬೇಸರವಾಗಿದೆ; ನನಗೆ ಬೇಜಾರಾಗಿದೆ; ನಾನು ಅಸಂತೋಷವಾಗಿದ್ದೇನೆ ಮತ್ತು ನಾನು ಏನು ಮಾಡುತ್ತಿದ್ದೇನೆ ಅಥವಾ ನನ್ನೊಂದಿಗೆ ಇರುವ ಜನರೊಂದಿಗೆ ಇದು ಸಂಬಂಧಿಸಿಲ್ಲ ಎಂದು ತೋರುತ್ತದೆ. ಇದ್ದಕ್ಕಿದ್ದಂತೆ ನಾನು ನೀರಸ ಭಾವನೆಯನ್ನು ಅನುಭವಿಸುತ್ತೇನೆ; ನನಗೆ ಅಸಂತೋಷವಾಗುತ್ತದೆ. ಇದು ನಾಟಕೀಯವಾಗಿರಬೇಕಾಗಿಲ್ಲ. ಇದು ಕಡಿಮೆ ಮಟ್ಟದ ಅಸಂತೋಷದ ಭಾವನೆಯಾಗಿರಬಹುದು. ಹಾಗಾದರೆ ಅದು ಹೇಗೆ ಕಾಣಿಸಿಕೊಳ್ಳುತ್ತದೆ? ಯಾವುದೇ ಕಾರಣವಿಲ್ಲದಂತೆ ಅದು ಕಾಣಿಸಿಕೊಳ್ಳುತ್ತದೆ. ಆದರೆ ಅದು ಅಸಾಧ್ಯ. ಅದು ವಾಸ್ತವಕ್ಕೆ ಹೋಲುವುದಿಲ್ಲ. ಇದೇ ಆಳವಾದ ಸತ್ಯ.
ಹಾಗಾದರೆ ಸಾಂಪ್ರದಾಯಿಕವಾದ, ಸಾಪೇಕ್ಷ ಸತ್ಯವೆಂದರೆ, ನನ್ನ ಅಸಂತೋಷ ಅಥವಾ ಸಂತೋಷ ಸೇರಿದಂತೆ ಎಲ್ಲವೂ ಕಾರಣ ಮತ್ತು ಪರಿಣಾಮದ ಪ್ರಕ್ರಿಯೆಯಿಂದ ಉದ್ಭವಿಸುತ್ತದೆ. ಅದು ನಿಜವಾಗಿದ್ದರೂ, ಅದು ನನಗೆ ಹಾಗೆ ಕಾಣಿಸುವುದಿಲ್ಲ. ನನ್ನ ಭಾವನೆಯು ಯಾವುದೇ ಕಾರಣವಿಲ್ಲದೆ ಎಲ್ಲಿಂದಲೋ ಉದ್ಭವವಾದ ಹಾಗೆ ನನಗೆ ತೋರುತ್ತದೆ. ಆಳವಾದ ಸತ್ಯವೆಂದರೆ ನನಗೆ ಕಾಣುವ ರೀತಿಯಲ್ಲಿ ಅದು ವಾಸ್ತವಕ್ಕೆ ಹೋಲಿಕೆಯಾಗುವುದಿಲ್ಲ - ಇದು ಅಸಾಧ್ಯವಾದ ವಿಷಯವೊಂದರ ಪ್ರಕ್ಷೇಪವಾಗಿರುತ್ತದೆ. ನೀವು ಅದರ ಬಗ್ಗೆ ಯೋಚಿಸಿದರೆ ಅದು ನಿಜವಾಗಿಯೂ ಗಹನವಾದ ವಿಷಯವಾಗಿದೆ.
ಇನ್ನೊಂದು ಉದಾಹರಣೆ ಕೊಡುತ್ತೇನೆ. ನನಗೆ ಒಬ್ಬ ಆಪ್ತ ಸ್ನೇಹಿತನಿದ್ದಾನೆ ಎಂದಿಟ್ಟುಕೊಳ್ಳಿ, ಅವರು ಕೆಲವೊಮ್ಮೆ ನನ್ನ ಮೇಲೆ ಕೂಗಾಡುತ್ತಾರೆ. ನಾವು ಅದ್ಭುತ ಸಂಬಂಧವನ್ನು ಹೊಂದಿದ್ದೇವೆ, ಆದರೆ ಇದ್ದಕ್ಕಿದ್ದಂತೆ ನನ್ನ ಸ್ನೇಹಿತ ಯಾವುದೋ ವಿಷಯದ ಬಗ್ಗೆ ಕೋಪಗೊಂಡು ನನ್ನ ಮೇಲೆ ರೇಗುತ್ತಾನೆ. ಅದು ನನಗೆ ಹೇಗೆ ಕಾಣುತ್ತದೆ? “ಇನ್ನು ಮುಂದೆ ನೀವು ನನ್ನನ್ನು ಪ್ರೀತಿಸುವುದಿಲ್ಲ" ಎಂದು ತೋರುತ್ತದೆ. ನಾನು ಬಹಳಾ ಅಸಮಾಧಾನಗೊಳ್ಳುತ್ತೇನೆ ಏಕೆಂದರೆ ನನ್ನ ಮನಸ್ಸಿನಲ್ಲಿ, ನನ್ನ ಸ್ನೇಹಿತನು ನನ್ನ ಮೇಲೆ ರೇಗಾಡಿದ್ದಾನೆ ಎಂಬುದನ್ನು ಮಾತ್ರ ಸಂಪೂರ್ಣವಾಗಿ ಗುರುತಿಸುತ್ತೇನೆ ಮತ್ತು ಬೇರಯದನ್ನು ಗುರುತಿಸುವುದಿಲ್ಲ. ಆದರೆ ಆ ಪ್ರಕ್ಷೇಪವು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ. ಆ ಕೂಗು, ನಮ್ಮ ದೀರ್ಘಕಾಲದ ಸ್ನೇಹದಲ್ಲಿನ ಒಂದು ಘಟನೆಯಾಗಿ, ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರುವಂತೆ ಎಲ್ಲಿಂದಲೋ ಉದ್ಭವಿಸಲಿಲ್ಲ. ಬಹುಶಃ ಇದು ನಿಮ್ಮೊಂದಿಗೂ ಸಂಭವಿಸಿರಬಹುದು.
ಇಲ್ಲಿ ಏನಾಗುತ್ತದೆ ಎಂದರೆ ನಾವು ನಮ್ಮ ಸ್ನೇಹಿತನೊಂದಿಗಿರುವ ಸಂಪೂರ್ಣ ಸಂಬಂಧದ - ನಾವು ಈ ವ್ಯಕ್ತಿಯೊಂದಿಗೆ ಇರುವ ಇತರ ಎಲ್ಲಾ ಸಮಯಗಳ, ನಮ್ಮ ಉಳಿದ ಎಲ್ಲಾ ಸಂವಹನಗಳ - ದೃಷ್ಟಿಯನ್ನು ಕಳೆದುಕೊಳ್ಳುತ್ತೇವೆ. ಆದರೆ ಅಷ್ಟೇ ಅಲ್ಲ; ನಾವು ಇಲ್ಲಿನ ದೊಡ್ಡ ಚಿತ್ರವನ್ನೂ ಸಹ ಕಳೆದುಕೊಳ್ಳುತ್ತೇವೆ. ನಮ್ಮ ಸ್ನೇಹಿತನ ಜೀವನದಲ್ಲಿ ನಾವು ಒಬ್ಬರೇ ಇಲ್ಲ ಮತ್ತು ನಮ್ಮ ಸ್ನೇಹವು ಅವರ ಜೀವನದಲ್ಲಿ ಸಂಭವಿಸುವ ಏಕೈಕ ವಿಷಯವಾಗಿರುವುದಿಲ್ಲ. ನಮ್ಮ ಸ್ನೇಹಿತನಿಗೆ ನಮ್ಮ ಹೊರತಾಗಿ ಇಡೀ ಜೀವನವಿರುತ್ತದೆ ಮತ್ತು ಇದು ಅವನು ಹೇಗೆ ಭಾವಿಸುತ್ತಾನೆ ಮತ್ತು ವರ್ತಿಸುತ್ತಾನೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಬಹುಶಃ ಅವರು ಕಷ್ಟಕರವಾದ ಕೆಲಸದ ದಿನವನ್ನು ಹೊಂದಿದ್ದರೇನೋ ಅಥವಾ ಅವರ ಪೋಷಕರೊಂದಿಗೆ ಏನಾದರೂ ಸಮಸ್ಯೆ ಉಂಟಾಗಿರಬಹುದು ಮತ್ತು ಇದು ನನ್ನ ಸ್ನೇಹಿತನಲ್ಲಿ ಕೆಟ್ಟ ಮನಸ್ಥಿತಿಗೆ ಕಾರಣವಾಗಿ, ಅವನು ನನ್ನ ಮೇಲೆ ರೇಗಾಡಿರಬಹುದು. ಆಳವಾದ ಸತ್ಯವೆಂದರೆ ನಾನು ಊಹಿಸಿದ್ದು ಅಸಾಧ್ಯವಾಗಿದೆ: ನಮ್ಮ ಸ್ನೇಹ ಮತ್ತು ಅವನ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಹೊರವಲಯದಲ್ಲಿ ಅವನು ನನ್ನ ಮೇಲೆ ರೇಗುವ ಕ್ರಿಯೆಯು ಸ್ವತಂತ್ರವಾಗಿ ಅಸ್ತಿತ್ವದಲ್ಲಿದೆ ಎಂಬುದು ವಾಸ್ತವವಲ್ಲ. ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ಘಟನೆಗಳ ಗೋಚರಿಸುವಿಕೆಗೆ ಅನುಗುಣವಾದ ವಾಸ್ತವಿಕ ವಾಸ್ತವವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ, ಅಂತಹ ಯಾವುದೇ ವಿಷಯವಿಲ್ಲ. ಅಂತಹ ಅಸ್ತಿತ್ವದ ರೀತಿಯ ಸಂಪೂರ್ಣ ಅನುಪಸ್ಥಿತಿಯನ್ನು ಸಂಸ್ಕೃತದಲ್ಲಿ "ಶೂನ್ಯತೆ," "ಶೂನ್ಯತ" ಎಂದು ಕರೆಯಲಾಗುತ್ತದೆ, ಇದು ಶೂನ್ಯಕ್ಕಾಗಿ (0) ಇರುವ ಪದವೇ ಆಗಿರುತ್ತದೆ.
ಆಗ ಎರಡು ಸತ್ಯಗಳ ಪರಿಭಾಷೆಯಲ್ಲಿ, ಅಸ್ತಿತ್ವದಲ್ಲಿರುವ ಪ್ರತ್ಯೇಕತೆ ಮತ್ತು ಸ್ವತಂತ್ರವಾಗಿ ವಸ್ತುಗಳು ಇಲ್ಲದಿರುವಾಗ, ಕಾರಣ ಮತ್ತು ಪರಿಣಾಮವು ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಕಾರಣ ಮತ್ತು ಪರಿಣಾಮವು ಪರಸ್ಪರ ಸಂಬಂಧಿಸಿ ಮತ್ತು ಅವಲಂಬಿತವಾಗಿ ಮಾತ್ರ ಅಸ್ತಿತ್ವದಲ್ಲಿರುತ್ತವೆ. ಯಾವುದೇ ಸಂಭವನೀಯ ಪರಿಣಾಮವಿಲ್ಲದೆ ಒಂದು ಕಾರಣಕ್ಕೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಯಾವುದೋ ಒಂದು ಪರಿಣಾಮವನ್ನು ಉಂಟುಮಾಡದಿದ್ದರೆ, ಅದು ಯಾವುದರ ಕಾರಣವಾಗಿ ಅಸ್ತಿತ್ವದಲ್ಲಿರುತ್ತದೆ? ಹಾಗಿದ್ದಲ್ಲಿ ಸಾಪೇಕ್ಷ ಸತ್ಯ, ವಸ್ತುಗಳ, ಅವುಗಳ ಸಾಂದರ್ಭಿಕ ಸಂಬಂಧಗಳು, ಎಲ್ಲದರ ಬಗೆಗಿರುವ ಆಳವಾದ ಸತ್ಯದ ಕಾರಣದಿಂದಾಗಿ ಮಾತ್ರ ಕಾರ್ಯನಿರ್ವಹಿಸಬಹುದು: ಎಲ್ಲದರಿಂದ ಸಂಪರ್ಕ ಕಡಿತಗೊಳ್ಳುವ ಅಸಾಧ್ಯ ರೀತಿಯಲ್ಲಿ ಯಾವುದೂ ಅಸ್ತಿತ್ವದಲ್ಲಿರುವುದಿಲ್ಲ.
ಶ್ಲೋಕದಲ್ಲಿ ಉಲ್ಲೇಖಿಸಿರುವಂತೆ, ಎರಡು ಸತ್ಯಗಳು ಒಂದಕ್ಕೊಂದು ಆಸರೆಯಾಗಿರುತ್ತವೆ ಎಂಬುದೇ ತಳಪಾಯ, ಎಲ್ಲವೂ ಬದ್ಧವಾಗಿರುವುದರ ಆಧಾರವಾಗಿರುತ್ತವೆ. ಇಲ್ಲಿ "ಆಧಾರ"ವು ಮುಂದಿನ ಸಾಲಿನಲ್ಲಿ ಬರುವ ಎಲ್ಲದಕ್ಕೂ ಆಧಾರವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ. ವಾಸ್ತವವನ್ನು ನೋಡುವ ಆಧಾರವಾದ ಎರಡು ಸತ್ಯಗಳ ಮೇಲೆಯೇ, ಬುದ್ಧನು ನಾಲ್ಕು ಸತ್ಯಗಳನ್ನು ಅರ್ಥಮಾಡಿಕೊಂಡರು.
ಪ್ರಶ್ನೆಗಳು
ನಿಜವಾದ ವಾಸ್ತವವನ್ನು ಅನುಭವಿಸುವುದು
ನೀವು ಯಾವುದೇ ತಪ್ಪು ಕಲ್ಪನೆಗಳನ್ನು ಹೊಂದಿಲ್ಲದ ನಿಜವಾದ ವಾಸ್ತವವನ್ನು ನೇರವಾಗಿ ಅನುಭವಿಸಲು ಸಾಧ್ಯವೇ? ಅಥವಾ ಇದು ಅಸಾಧ್ಯವೇ?
ಇಲ್ಲ, ಇಲ್ಲ, ಅದು ಸಾಧ್ಯವೇ. ನಮ್ಮ ಮಾನಸಿಕ ಚಟುವಟಿಕೆಯು ಎಲ್ಲವನ್ನೂ ಅಸಾಧ್ಯ ರೀತಿಯಲ್ಲಿ ಅಸ್ತಿತ್ವದಲ್ಲಿರುವಂತೆ ತೋರಿಸುತ್ತದೆಯಾದರೂ, ಅವು ವಾಸ್ತವಕ್ಕೆ ಹೊಂದಿಕೆಯಾಗದ ಕಾರಣ ಆ ವಿರೂಪಕ್ಕೆ ಕಾರಣವಾಗುವುದನ್ನು ನಿವಾರಿಸಲು ಸಾಧ್ಯವಿದೆ. ಏಕೆಂದರೆ ವಾಸ್ತವದಂತಹ ವಿಷಯವಿದೆ ಮತ್ತು ವಾಸ್ತವವನ್ನು ವಿರೂಪಗೊಳಿಸುವುದು ಮಾನಸಿಕ ಚಟುವಟಿಕೆಯ ಮೂಲ ಸ್ವರೂಪದ ಭಾಗವಾಗಿರುವುದಿಲ್ಲ. ಮಾನಸಿಕ ಚಟುವಟಿಕೆಯು, ಯಾವುದೇ ಪ್ರಕ್ಷೇಪಗಳು ಅಥವಾ ವಿರೂಪಗಳಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಿದೆ.
ಅದರ ಆಧಾರದ ಮೇಲೆ, ನಮ್ಮ ಮಾನಸಿಕ ಚಟುವಟಿಕೆಯು ವಾಸ್ತವವನ್ನು ವಿರೂಪಗೊಳಿಸಿದಾಗ, ಅದು ನಮಗೆ ಸಮಸ್ಯೆಗಳು, ದುಃಖ ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಆ ಅಸ್ಪಷ್ಟತೆಯನ್ನು ಪ್ರದರ್ಶಿಸುವುದರಿಂದ ನಮ್ಮ ಮನಸ್ಸನ್ನು ತಡೆಯಲು ಸಾಧ್ಯವಾದ್ದರಿಂದ, ನಾವು ಇನ್ನು ಮುಂದೆ ನಮಗಾಗಿ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ ಮತ್ತು ಅನುಭವಿಸುವುದಿಲ್ಲ. ಒಮ್ಮೆ ನಾವು, ನಮ್ಮ ಮನಸ್ಸು ಈ ಗುರಿಯನ್ನು ಸಾಧಿಸಲು ಸಮರ್ಥವಾಗಿದೆ ಎಂದು ಅರ್ಥಮಾಡಿಕೊಂಡರೆ, ದುಃಖವನ್ನು ತಪ್ಪಿಸಲು ಮತ್ತು ತಡೆಯಲು ನಮ್ಮ ಜೀವನದಲ್ಲಿ ಈ ಸುರಕ್ಷಿತವಾದ ದಿಕ್ಕನ್ನು ಇರಿಸುವುದನ್ನು ನಾವು ಸಾಧಿಸುತ್ತೇವೆ. ಈ ಸುರಕ್ಷಿತ ದಿಕ್ಕನ್ನೇ ನಮ್ಮ "ಆಶ್ರಯ" ಎಂದು ಕರೆಯಲಾಗುತ್ತದೆ. ಆದರೆ ಗುರಿಯನ್ನು ಸಾಧಿಸಲು ಸಾಧ್ಯ ಎಂದು ನಮಗೆ ಮನವರಿಕೆಯಾದಾಗ ಮಾತ್ರ ಗುರಿಯನ್ನು ಸಾಧಿಸಬಹುದು. ನಾನು ಪ್ರಸ್ತಾಪಿಸಿದ್ದೆಲ್ಲವೂ ವಾಸ್ತವ ಮತ್ತು ಅದನ್ನು ಗ್ರಹಿಸುವ ನಮ್ಮ ಸಾಮರ್ಥ್ಯದ ಮೇಲೆ ಅದು ಆಧಾರಿತವಾಗಿದೆ ಎಂಬುದನ್ನು ಅರಿತುಕೊಳ್ಳುವುದರಿಂದ ನಮ್ಮ ಮನವರಿಕೆಯು ಹುಟ್ಟುತ್ತದೆ.
ಆದರೆ ಮಾನಸಿಕ ಅಡೆತಡೆಗಳನ್ನು ನಿವಾರಿಸಲು ವಾಸ್ತವದೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳಲು ದೀರ್ಘ ತರಬೇತಿಯ ಅಗತ್ಯವಿದೆ. ಇಲ್ಲಿ ಧ್ಯಾನವು ಉಪಕಾರಿಯಾಗಿರುತ್ತದೆ. ಈ ಸಂದರ್ಭದಲ್ಲಿ ಧ್ಯಾನವು, ವಾಸ್ತವವನ್ನು ಪ್ರಯೋಜನಕಾರಿ ಅಭ್ಯಾಸವಾಗಿ ನೋಡುವ ಮೂಲಕ ವಾಸ್ತವದೊಂದಿಗೆ ನಮ್ಮನ್ನು ಪರಿಚಯಿಸಿಕೊಳ್ಳುವ ತರಬೇತಿಯಾಗಿರುತ್ತದೆ. ನೀವು ಆ ಅಭ್ಯಾಸವನ್ನು ಬೆಳೆಸಿಕೊಂಡರೆ, ನೀವು ಯಾರನ್ನಾದರೂ ಭೇಟಿಯಾದಾಗ, ನಿಮ್ಮ ಕಣ್ಣುಗಳ ಮುಂದೆ ಅವರು ಕಾಣಿಸಿಕೊಳ್ಳುವ ರೀತಿಯಲ್ಲಿ ಮಾತ್ರ ಅವರನ್ನು ನೋಡದೇ ಇರುವುದಕ್ಕೆ ನೀವು ಒಗ್ಗಿಕೊಳ್ಳುವಿರಿ. ಬದಲಿಗೆ, ಅವರು ಒಮ್ಮೆ ಮಗುವಾಗಿದ್ದರು, ಅವರು ಬಾಲ್ಯ ಮತ್ತು ವಯಸ್ಕ ಜೀವನವನ್ನು ಹೊಂದಿದ್ದರು ಮತ್ತು ಅವರ ಜೀವನದುದ್ದಕ್ಕೂ ಅನೇಕ ವಿಷಯಗಳು ಅವರ ಮೇಲೆ ಪ್ರಭಾವ ಬೀರಿವೆ ಎಂಬುದರ ಸಂಪೂರ್ಣ ಅರಿವು ನಿಮಗಿರುತ್ತದೆ. ಬಹುಶಃ ಅವರಿಗೆ ಇನ್ನೂ ವಯಸ್ಸಾಗುತ್ತದೆ ಮತ್ತು ಇನ್ನೂ ಹೆಚ್ಚಿನ ವಿಷಯಗಳಿಂದ ಪ್ರಭಾವಿತರಾಗುತ್ತಾರೆ. ಈ ರೀತಿಯಾಗಿ, ಒಬ್ಬ ವ್ಯಕ್ತಿಯ ಜೀವನದ ಸಂಪೂರ್ಣ ಸನ್ನಿವೇಶದ ವಾಸ್ತವತೆಯನ್ನು ನೀವು ನೋಡುತ್ತೀರಿ ಮತ್ತು ಅದರಲ್ಲಿ ಸಂಭವಿಸಿದ ಎಲ್ಲವೂ ಪರಸ್ಪರ ಸಂಬಂಧ ಹೊಂದಿದೆಯೆಂದು ನೋಡುತ್ತೀರಿ. ವ್ಯಕ್ತಿಯ ವಾಸ್ತವತೆಯ ಈ ದೃಷ್ಟಿಕೋನವು, ನಿಮ್ಮ ಕಣ್ಣುಗಳ ಮುಂದಿರುವ ಛಾಯಾಚಿತ್ರದಲ್ಲಿರುವಂತೆ ಅವರನ್ನು ಕಿರುನೋಟದಿಂದ ನೋಡುವುದಕ್ಕಿಂತ, ಹೆಚ್ಚು ಪ್ರಯೋಜನಕಾರಿಯಾದ, ವಾಸ್ತವಿಕ ರೀತಿಯಲ್ಲಿ ನೋಡಲು ಮತ್ತು ಸಂವಹನ ನಡೆಸಲು ನಿಮ್ಮನ್ನು ಅನುಮತಿಸುತ್ತದೆ.
ಆದರೆ ಹೀಗೆ ಮಾಡಲು ನೀವೇ ತರಬೇತಿ ಪಡೆಯಬೇಕು. ನಿಸ್ಸಂದೇಹವಾಗಿ, ಅವರ ಜೀವನ ಮತ್ತು ಅದರ ಪ್ರಭಾವಗಳ ಎಲ್ಲಾ ವಿವರಗಳು ನಿಮಗೆ ವಾಸ್ತವವಾಗಿ ತಿಳಿದಿರುವುದಿಲ್ಲ, ಆದರೆ ಪರವಾಗಿಲ್ಲ. ಈ ವ್ಯಕ್ತಿಯು ಅನೇಕ ಪ್ರಭಾವಗಳಿರುವ ಇತಿಹಾಸವನ್ನು ಹೊಂದಿದ್ದಾನೆ ಮತ್ತು ಭವಿಷ್ಯವನ್ನು ಹೊಂದಿರುತ್ತಾನೆ ಎಂದು ತಿಳಿದಿರುವುದು ಒಬ್ಬ ವ್ಯಕ್ತಿಯ ವಾಸ್ತವತೆಯನ್ನು ತೆರೆದಿಡುತ್ತದೆ. ಆದ್ದರಿಂದ, ಉದಾಹರಣೆಗೆ, ನೀವು ಒಂದು ಮಗುವನ್ನು ನೋಡಿದರೆ, ಅದನ್ನು ಕೇವಲ ಮಗುವಿನಂತೆ ನೋಡುವುದಿಲ್ಲ; ಇಲ್ಲಿ ಒಬ್ಬ ಸಂಭಾವ್ಯ ವಯಸ್ಕನಿರುವನು, ಮತ್ತು ನಾನು ಈಗ ಮಾಡುವ ಎಲ್ಲವೂ ಈ ಮಗು ಹೇಗೆ ಬೆಳೆಯುತ್ತದೆ ಎಂಬುದರ ಮೇಲೆ ಪರಿಣಾಮ ಬೀರಲಿದೆ. ನೀವು ಪೂರ್ಣ ಚಿತ್ರವನ್ನು ನೋಡಿ. ಆಗ ನೀವು ವಾಸ್ತವದೊಂದಿಗೆ ಸಂಪರ್ಕದಲ್ಲಿರುವಿರಿ.