ನಮ್ಮ ಅನಿಯಂತ್ರಿತವಾದ ಪುನರಾವರ್ತಿತ ಪುನರ್ಜನ್ಮವನ್ನು ಶಾಶ್ವತಗೊಳಿಸಲು ನಿಜವಾದ ಕಾರಣಗಳಾಗಿ ಅರಿವಿಲ್ಲದಿರುವಿಕೆ, ಗೊಂದಲಮಯ ಭಾವನೆಗಳು ಮತ್ತು ಪ್ರಚೋದಿತ ನಡವಳಿಕೆ
ಅಸಂತೋಷ ಮತ್ತು ಅತೃಪ್ತಿಕರ ಸಂತೋಷದ ನೋವುಗಳನ್ನು ಅನುಭವಿಸಲು ಸೀಮಿತ ದೇಹ ಮತ್ತು ಮನಸ್ಸನ್ನು ಆಧಾರವಾಗಿಟ್ಟುಕೊಂಡು, ಅರಿವಿಲ್ಲದಿರುವಿಕೆ, ಗೊಂದಲಮಯ ಭಾವನೆಗಳು ಮತ್ತು ಕರ್ಮದ ಪ್ರಚೋದನೆಗಳು ನಮ್ಮ ಅಸ್ತಿತ್ವವನ್ನು ಬಲವಂತವಾಗಿ ಶಾಶ್ವತಗೊಳಿಸಲು ನಿಜವಾದ ಕಾರಣಗಳಾಗಿವೆಯೆಂದು ಬುದ್ಧ ಬೋಧಿಸಿದನು. ಈ ಭಾವನೆಗಳ ಬಗೆಗಿರುವ ನಮ್ಮ ಗೊಂದಲಮಯ ವರ್ತನೆಗಳೇ ನಮ್ಮ ಅನಿಯಂತ್ರಿತವಾಗಿ ಪುನರಾವರ್ತಿಸುವ ಅಸ್ತಿತ್ವದ ನಿಜವಾದ ಕಾರಣ, ನಮ್ಮ "ಸಂಸಾರ”ದ ನಿಜವಾದ ಕಾರಣವೆಂದು ಬುದ್ಧನು ಸೂಚಿಸಿದನು.
ಅಲ್ಪಾವಧಿಯ ಸಂತೋಷವು ಉದ್ಭವಿಸಿದಾಗ, ಅದು ಎಂದಿಗೂ ಕೊನೆಗೊಳ್ಳಬಾರದು ಎಂದು ನಾವು ಹಂಬಲಿಸುತ್ತೇವೆ, ಆದರೂ ಅದು ಎಂದಿಗೂ ಉಳಿಯುವುದಿಲ್ಲವಾದ್ದರಿಂದ ಅದು ನಿಷ್ಪ್ರಯೋಜಕವಾಗಿರುತ್ತದೆ. ನಾವು ಅತೃಪ್ತರಾದಾಗ, ಅದು ಶಾಶ್ವತವಾಗಿ ಹೋಗಬೇಕೆಂದು ನಾವು ಹಂಬಲಿಸುತ್ತೇವೆ, ಆದರೂ ನಮ್ಮ ಪ್ರಚೋದಿತ ನಡವಳಿಕೆಯು ಇದು ಇನ್ನೂ ಹೆಚ್ಚು ಉದ್ಭವವಾಗಲು ಕಾರಣವಾಗುತ್ತವೆ. ನಾವು ಏನನ್ನೂ ಅನುಭವಿಸದಿರುವಂತೆ ಬಲವಾದ ನೋವು ನಿವಾರಕಗಳನ್ನು ತೆಗೆದುಕೊಂಡರೂ ಅಥವಾ ಅದೇ ರೀತಿ ಏನನ್ನೂ ಅನುಭವಿಸದ ಆಳವಾದ ಏಕಾಗ್ರತೆಯ ಸ್ಥಿತಿಯಲ್ಲಿ ಮುಳುಗಿದರೂ, ಏನೂ ಅನುಭವಿಸದಿರುವ ಆ ಸ್ಥಿತಿಗಾಗಿ ನಾವು ಹಂಬಲಿಸುತ್ತೇವೆ, ಆದರೂ ಅದು ಅನಿವಾರ್ಯವಾಗಿ ಹಾದುಹೋಗುತ್ತದೆ.
ಇದಲ್ಲದೆ, ನಾವು "ನಾನು” ಎಂಬುದರ ಮೇಲೆ, ಅದೊಂದು ನಿರ್ದಿಷ್ಟ ಅಸ್ತಿತ್ವವಾಗಿರುವಂತೆ, “ಬಡಪಾಯಿ ನಾನು” ಎಂಬ ಆಲೋಚನೆಗಳೊಂದಿಗೆ ಕೇಂದ್ರೀಕರಿಸುತ್ತೇವೆ: "ನಾನು ಈ ಸಂತೋಷದಿಂದ ಬೇರ್ಪಡಲು ಬಯಸುವುದಿಲ್ಲ; ನಾನು ಈ ಅಸಂತೋಷದಿಂದ ಬೇರ್ಪಡಲು ಬಯಸುತ್ತೇನೆ; ಏನೂ ಇಲ್ಲದ ಈ ಭಾವನೆ ಮಾಯವಾಗಬಾರದು ಎಂದು ನಾನು ಬಯಸುತ್ತೇನೆ." ನಾವು ಸಾಯುತ್ತಿರುವಾಗ "ನಾನು" ಎಂಬ ನಮ್ಮ ಗೊಂದಲಮಯ ಕಲ್ಪನೆ ಮತ್ತು ನಮ್ಮ ಭಾವನೆಗಳೆಡೆ ಇರುವ ಈ ಗೊಂದಲಮಯ ಭಾವನೆಗಳ ಸ್ಥಿರೀಕರಣವು ಸಂಭವಿಸಿದಾಗ, ಅವು ಕರ್ಮದ ಪ್ರಚೋದನೆಯನ್ನು ಸಕ್ರಿಯಗೊಳಿಸುತ್ತವೆ, ಇದೊಂದು ಬಲವಾದ ಮಾನಸಿಕ ಪ್ರಚೋದನೆಯಾಗಿರುತ್ತದೆ, ಇದು ಒಂದು ಆಯಸ್ಕಾಂತದಂತೆ, ನಾವು ಇವುಗಳೊಂದಿಗೆ ಬದುಕುವುದನ್ನು ಮುಂದುವರಿಸುವಂತೆ, ನಮ್ಮ ಮನಸ್ಸನ್ನು ಮತ್ತು ಈ ಗೊಂದಲಮಯ ಭಾವನೆಗಳನ್ನು ಪುನರ್ಜನ್ಮದ ಸ್ಥಿತಿಯ ದೇಹದ ಕಡೆಗೆ ಸೆಳೆಯುತ್ತವೆ. ಇದು ಬದುಕುಳಿಯುವ ಪ್ರವೃತ್ತಿಯ ಬೌದ್ಧ ಆವೃತ್ತಿಯಂತಿರುತ್ತದೆ.
ದುಃಖದ ನಿಜವಾದ ಕಾರಣಗಳ ನಾಲ್ಕು ಅಂಶಗಳು
ಹಾಗಾದರೆ, ನಮ್ಮ ಗೊಂದಲಮಯ ವರ್ತನೆಗಳು ನಮ್ಮ ನಿಜವಾದ ದುಃಖಗಳ ನಿಜವಾದ ಕಾರಣಗಳಾಗಿರುತ್ತವೆ. ವಾಸ್ತವವೆಂದರೆ, ನಾವು ನಮ್ಮ ದುಃಖಗಳ ಅನಿಯಂತ್ರಿತ ಪುನರಾವರ್ತನೆಯನ್ನು ಶಾಶ್ವತಗೊಳಿಸುತ್ತೇವೆ. ನಿರ್ದಿಷ್ಟವಾಗಿ, ನಾವು ಮತ್ತೆ ಮತ್ತೆ ಪುನರ್ಜನ್ಮ ಪಡೆಯುವುದನ್ನು ಉಲ್ಲೇಖಿಸಿ, ನಮ್ಮ ಬಳಿ ನಾಲ್ಕು ಅಂಶಗಳಿವೆ. ಈ ಅಂಶಗಳಿಂದ, ಅವು ಸಾಮಾನ್ಯವಾಗಿ ದುಃಖದ ನಿಜವಾದ ಕಾರಣಗಳಾಗಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು:
- ಮೊದಲನೆಯದಾಗಿ, ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ ಎಂಬುದರ ಬಗ್ಗೆ ಅರಿವಿಲ್ಲದಿರುವುದು, ಗೊಂದಲಮಯ ಭಾವನೆಗಳು ಮತ್ತು ಬಲವಾದ ಕರ್ಮದ ಪ್ರಚೋದನೆಗಳು ನಮ್ಮ ಎಲ್ಲಾ ದುಃಖಗಳಿಗೆ ನಿಜವಾದ ಕಾರಣಗಳಾಗಿರುತ್ತವೆ. ನಮ್ಮ ದುಃಖವು ಯಾವುದೇ ಕಾರಣದಿಂದ ಅಥವಾ ಜ್ಯೋತಿಷ್ಯ ಸಂರಚನೆ ಅಥವಾ ಕೇವಲ ದುರದೃಷ್ಟದಂತಹ ಸೂಕ್ತವಲ್ಲದ ಕಾರಣದಿಂದ ಬರುವುದಿಲ್ಲ.
- ಎರಡನೆಯದಾಗಿ, ಅವುಗಳು ನಮ್ಮ ದುಃಖಗಳು ಮತ್ತೆ ಮತ್ತೆ ಪುನರಾವರ್ತಿಸುವುದರ ಮೂಲವಾಗಿವೆ. ಪ್ರತಿಯೊಂದು ಸನ್ನಿವೇಶದಲ್ಲಿ, ದುಃಖವು ಎಂದಿಗೂ ಒಂದೇ ಕಾರಣದಿಂದ ಬರುವುದಿಲ್ಲ, ಬದಲಿಗೆ ಅನೇಕ ಕಾರಣಗಳು ಮತ್ತು ಪರಿಸ್ಥಿತಿಗಳ ಸಂಯೋಜನೆಯಿಂದ ಬರುತ್ತದೆ.
- ಮೂರನೆಯದಾಗಿ, ಅವು ನಮ್ಮ ದುಃಖದ ಬಲವಾದ ಆಂತರಿಕ ಉತ್ಪಾದಕರು. ನಮ್ಮ ದುಃಖವು ಬಾಹ್ಯ ಮೂಲಗಳಿಂದ ಬರುವುದಿಲ್ಲ, ಯಾವುದೋ ಒಂದು ಸರ್ವಶಕ್ತ ದೇವತೆಯಿಂದಲೂ ಬರುವುದಿಲ್ಲ.
- ನಾಲ್ಕನೆಯದಾಗಿ, ಅವು ನಮ್ಮ ದುಃಖಗಳು ಉದ್ಭವಿಸಲು ಇರುವ ಪರಿಸ್ಥಿತಿಗಳಾಗಿವೆ. ದುಃಖಗಳು ಲೌಕಿಕ ಚಟುವಟಿಕೆಗಳಿಂದ ಉದ್ಭವಿಸುವುದಿಲ್ಲ, ಬದಲಿಗೆ ಅವುಗಳ ಬಗೆಗಿರುವ ನಮ್ಮ ಗೊಂದಲಮಯ ವರ್ತನೆಗಳಿಂದ ಉದ್ಭವಿಸುತ್ತವೆ.
ಸಾರಾಂಶ
ಒಮ್ಮೆ ನಮ್ಮ ಪುನರಾವರ್ತಿತ ಸಮಸ್ಯೆಗಳು ಮತ್ತು ನೋವುಗಳ ನಿಜವಾದ ಕಾರಣಗಳು - ಇವು ನಮ್ಮಲ್ಲಿ ಯಾರೂ ನಿರಂತರವಾಗಿ ಅನುಭವಿಸಲು ಬಯಸುವುದಿಲ್ಲ - ನಮ್ಮ ಬಗೆಗಿರುವ ಸುಳ್ಳು ವಾಸ್ತವದ ನಮ್ಮದೇ ಆದ ಪ್ರಕ್ಷೇಪಣಗಳು, ಅವು ಕೇವಲ ಕಾಲ್ಪನಿಕ ಎಂಬುದರ ಬಗೆಗಿರುವ ನಮ್ಮ ಅರಿವಿಲ್ಲದಿರುವಿಕೆ ಮತ್ತು ಅವು ಉಂಟುಮಾಡುವ ಗೊಂದಲಮಯ ಭಾವನೆಗಳು ಮತ್ತು ಪ್ರಚೋದಿತ ನಡವಳಿಕೆ ಎಂದು ನಮಗೆ ತಿಳಿದ ನಂತರ, ಈ ತುಂಟಗಾರರಿಂದ ನಮ್ಮನ್ನು ನಾವು ಶಾಶ್ವತವಾಗಿ ಮುಕ್ತಗೊಳಿಸುವತ್ತ ಶ್ರಮ ಪಡುವುದು ಅರ್ಥಪೂರ್ಣವಾಗಿರುತ್ತದೆ ಅಲ್ಲವೇ?