ಮೂರು ತರಬೇತಿಗಳು (ತ್ರಿಶಿಕ್ಷಾ)

ಮೂಲಭೂತ ಬೌದ್ಧ ಆಚರಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ನಮ್ಮ ಯೋಗಕ್ಷೇಮದ ಮೇಲಿನ ಕಾಳಜಿಯಿಂದಾಗಿ ನಮ್ಮ ಸ್ವಂತ ಸಮಸ್ಯೆಗಳು ಮತ್ತು ದುಃಖಗಳನ್ನು ಜಯಿಸಲು ನಾವು ಅವುಗಳ ತರಬೇತಿಯನ್ನು ಪಡೆಯಬಹುದು. ಅಥವಾ ಇತರರಿಗೆ ಹೆಚ್ಚು ಪ್ರಯೋಜನಕಾರಿಯಾಗುವಂತೆ ನಾವು ಪ್ರೀತಿ ಮತ್ತು ಸಹಾನುಭೂತಿಯಿಂದ ಅವುಗಳ ತರಬೇತಿಯನ್ನು ಪಡೆಯಬಹುದು. 

ಈ ಮೂರು ತರಬೇತಿಗಳು ಯಾವುವು? 

  • ನೈತಿಕ ಶಿಸ್ತು - ವಿನಾಶಕಾರಿ ನಡವಳಿಕೆಯನ್ನು ತಡೆಯುವ ಸಾಮರ್ಥ್ಯ. ಇದನ್ನು ಅಭಿವೃದ್ಧಿಪಡಿಸುವ ಮಾರ್ಗವು ರಚನಾತ್ಮಕ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿದೆ. ಈ ಮೊದಲ ತರಬೇತಿಯು ಸ್ವಯಂ-ಶಿಸ್ತಿನದ್ದಾಗಿದೆ - ನಾವು ಇತರ ಜನರಿಗಾಗಿ ಶಿಸ್ತುಕ್ರಮವನ್ನು ನೀಡಲು ಪ್ರಯತ್ನಿಸುತ್ತಿಲ್ಲ. 
  • ಏಕಾಗ್ರತೆ - ನಾವು ಎಲ್ಲಾ ರೀತಿಯ ಬಾಹ್ಯ ಆಲೋಚನೆಗಳಿಂದ ಮಾನಸಿಕ ಅಲೆದಾಡುವಿಕೆಯನ್ನು ಅನುಭವಿಸದಿರುವಂತೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವ ಸಾಮರ್ಥ್ಯ. ನಾವು ನಮ್ಮ ಮನಸ್ಸನ್ನು ಚುರುಕಾಗಿರುವಂತೆ ಮತ್ತು ಕೇಂದ್ರೀಕರಿಸುವಂತೆ ತರಬೇತು ನೀಡುತ್ತೇವೆ, ಮಂದವಾಗಿರ ಅಲ್ಲ. ಮಾನಸಿಕ ಸ್ಥಿರತೆಯ ಹೊರತಾಗಿ, ನಮ್ಮ ಮನಸ್ಸು ಕೋಪ, ಬಾಂಧವ್ಯ, ಅಸೂಯೆ ಮತ್ತು ಮುಂತಾದವುಗಳಿಂದ ಉದ್ವೇಗಗೊಳಗಾಗದಂತೆ, ಭಾವನಾತ್ಮಕ ಸ್ಥಿರತೆಯನ್ನು ಬೆಳೆಸಿಕೊಳ್ಳುವುದು ಸಹ ಅಗತ್ಯವಾಗಿದೆ. 
  • ವಿವೇಚನಾತ್ಮಕ ಅರಿವು - ಯಾವುದನ್ನು ಅಳವಡಿಸಿಕೊಳ್ಳಬೇಕು ಮತ್ತು ಯಾವುದನ್ನು ತ್ಯಜಿಸಬೇಕು ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ. ಇದು ತರಕಾರಿಗಳನ್ನು ಖರೀದಿಸುವಾಗ, “ಇದು ಚೆನ್ನಾಗಿಲ್ಲ, ಆದರೆ ಅದು ತುಂಬಾ ಚೆನ್ನಾಗಿದೆ" ಎಂದು ನೀವು ವ್ಯತ್ಯಾಸವನ್ನು ಹೇಳಬಲ್ಲ ಸಾಮರ್ಥ್ಯಕ್ಕೆ ಸಮವಾಗಿರುತ್ತದೆ. ಇಲ್ಲಿ, ನಾವು ನಡವಳಿಕೆಯ ಪರಿಭಾಷೆಯಲ್ಲಿ ವ್ಯತ್ಯಾಸವನ್ನು ಗುರುತಿಸುತ್ತೇವೆ - ನಾವಿರುವ ಸನ್ನಿವೇಶಗಳ ಮೇಲೆ ಮತ್ತು ನಾವು ಯಾರೊಂದಿಗೆ ಇದ್ದೇವೆ ಎಂಬುದರ ಮೇಲೆ, ಯಾವುದು ಸೂಕ್ತವಲ್ಲ ಮತ್ತು ಯಾವುದು ಸೂಕ್ತವಾಗಿದೆ ಎಂಬುದರ ನಡುವೆ. ಆಳವಾದ ಮಟ್ಟದಲ್ಲಿ, ನಿಜವಾಗಿಯೂ ಯಾವುದು ವಾಸ್ತವಿಕವಾಗಿದೆ ಮತ್ತು ಯಾವುದು ಕೇವಲ ನಮ್ಮ ಕಲ್ಪನೆಯಾಗಿದೆ ಎಂಬುದರ ನಡುವಿನ ವ್ಯತ್ಯಾಸವನ್ನು ನಾವು ಗುರುತಿಸುತ್ತೇವೆ. 

ಬೌದ್ಧ ವಿಜ್ಞಾನ, ಬೌದ್ಧ ತತ್ವಶಾಸ್ತ್ರ ಮತ್ತು ಬೌದ್ಧ ಧರ್ಮ 

ನಾವು ಈ ಮೂರು ತರಬೇತಿಗಳನ್ನು ಯಾವುದೇ ಕಾರಣಕ್ಕಾದರೂ ಅಭ್ಯಾಸ ಮಾಡಲಿ - ನಮ್ಮ ಸ್ವಂತ ಲಾಭಕ್ಕಾಗಿ ಅಥವಾ ಇತರರ ಪ್ರಯೋಜನಕ್ಕಾಗಿ, ಅವರೆಡನ್ನೂ ನಾವು ಎರಡು ದೃಷ್ಟಿಕೋನಗಳಿಂದ ನೋಡಬಹುದು. ಪರಮಪೂಜ್ಯ ದಲೈ ಲಾಮಾ ಅವರ ಪ್ರೇಕ್ಷಕರೊಂದಿಗಿನ ಸಂವಹನದಲ್ಲಿನ ಒಂದು ಭಾಗದಿಂದ ಇವೆರಡು ಹುಟ್ಟಿಕೊಂಡಿವೆ. ಇಲ್ಲಿ, ಬೌದ್ಧ ಧರ್ಮವು ಮೂರು ಭಾಗಗಳನ್ನು ಹೊಂದಿದೆ ಎಂದು ಅವರು ವಿವರಿಸುತ್ತಾರೆ: ಬೌದ್ಧ ವಿಜ್ಞಾನ, ಬೌದ್ಧ ತತ್ವಶಾಸ್ತ್ರ ಮತ್ತು ಬೌದ್ಧ ಧರ್ಮ. 

ಬೌದ್ಧ ವಿಜ್ಞಾನವು ಮುಖ್ಯವಾಗಿ ಮನಸ್ಸಿನ ವಿಜ್ಞಾನವನ್ನು ಪ್ರಸ್ತಾಪಿಸುತ್ತದೆ - ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ನಮ್ಮ ಭಾವನೆಗಳು ಮತ್ತು ದಲೈ ಲಾಮಾ ಅವರು ‘ಮಾನಸಿಕ ಮತ್ತು ಭಾವನಾತ್ಮಕ ನೈರ್ಮಲ್ಯ’ವೆಂದು ಕರೆಯಲು ಇಷ್ಟಪಡುವ ವಿಷಯದ ಬಗ್ಗೆ ವಿವರಿಸುತ್ತದೆ. ಬೌದ್ಧಧರ್ಮದಲ್ಲಿ, ಎಲ್ಲಾ ರೀತಿಯ ವಿವಿಧ ಭಾವನಾತ್ಮಕ ಸ್ಥಿತಿಗಳ ಬಗ್ಗೆ ಮತ್ತು ಅವು ಹೇಗೆ ಕೆಲಸ ಮಾಡುತ್ತವೆ ಮತ್ತು ಒಟ್ಟಾಗಿರುತ್ತವೆ ಎಂಬುದರ ಬಗ್ಗೆ ವಿವರವಾದ ವಿಶ್ಲೇಷಣೆಗಳು ಲಭ್ಯವಿದೆ. 

ಬೌದ್ಧ ವಿಜ್ಞಾನದಲ್ಲಿ ಇವುಗಳೂ ಸೇರಿವೆ: 

  • ಅರಿವಿನ ವಿಜ್ಞಾನ - ನಮ್ಮ ಗ್ರಹಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ, ಪ್ರಜ್ಞೆಯ ಸ್ವರೂಪ ಮತ್ತು ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು ನಮಗೆ ಸಹಾಯ ಮಾಡುವ ವಿವಿಧ ತರಬೇತಿಯ ವಿಧಾನಗಳು 
  • ಕಾಸ್ಮೊಗೊನಿ - ಬ್ರಹ್ಮಾಂಡವು ಹೇಗೆ ಪ್ರಾರಂಭವಾಗುತ್ತದೆ, ಅಸ್ತಿತ್ವದಲ್ಲಿರುತ್ತದೆ ಮತ್ತು ಕೊನೆಗೊಳ್ಳುತ್ತದೆ ಎಂಬುದರ ವಿವರವಾದ ವಿಶ್ಲೇಷಣೆ 
  • ಮ್ಯಾಟರ್ - ಮ್ಯಾಟರ್, ಶಕ್ತಿ, ಉಪಪರಮಾಣು ಕಣಗಳು ಮತ್ತು ಮುಂತಾದವುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ವಿವರವಾದ ವಿಶ್ಲೇಷಣೆ 
  • ವೈದ್ಯಶಾಸ್ತ್ರ - ದೇಹದೊಳಗಿನ ಶಕ್ತಿಯು ಹೇಗೆ ಕೆಲಸ ಮಾಡುತ್ತದೆ. 

ಮೇಲಿನ ವಿಷಯಗಳನ್ನು ಯಾರಾದರೂ ಅಧ್ಯಯನ ಮಾಡಬಹುದು, ಕಲಿಯಬಹುದು ಮತ್ತು ಅವುಗಳ ಪ್ರಯೋಜನವನ್ನು ಪಡೆಯಬಹುದು, ದಲೈ ಲಾಮಾ ಅವರು ಈ ವಿಷಯಗಳ ಬಗ್ಗೆ ವಿಜ್ಞಾನಿಗಳೊಂದಿಗೆ ಆಗಾಗ್ಗೆ ಚರ್ಚೆಗಳನ್ನು ನಡೆಸುತ್ತಿರುತ್ತಾರೆ. 

ಎರಡನೆಯ ವಿಭಾಗವಾದ ಬೌದ್ಧ ತತ್ತ್ವಶಾಸ್ತ್ರವು, ಈ ರೀತಿಯ ವಿಷಯಗಳನ್ನು ಒಳಗೊಂಡಿದೆ:

  • ನೈತಿಕತೆ – ಕೇವಲ ಯಾವುದೋ ಒಂದು ಧರ್ಮಕ್ಕೆ ಸಂಬಂಧಿಸದೆ, ಎಲ್ಲರಿಗೂ ಉಪಯುಕ್ತವಾಗುವ ಮೂಲಭೂತ ಮಾನವ ಮೌಲ್ಯಗಳಾದ ದಯೆ ಮತ್ತು ಔದಾರ್ಯಗಳ ಚರ್ಚೆ.
  • ತರ್ಕ ಮತ್ತು ಮೆಟಾಫಿಸಿಕ್ಸ್ - ಸೆಟ್ ಥಿಯರಿ, ಸಾರ್ವತ್ರಿಕಗಳು, ವಿವರಗಳು, ಗುಣಗಳು, ಗುಣಲಕ್ಷಣಗಳು ಮತ್ತು ಮುಂತಾದವುಗಳು ಸೇರಿದಂತೆ, ಅವುಗಳು ಒಟ್ಟಿಗೆ ಹೇಗೆ ಕೆಲಸ ಮಾಡುತ್ತವೆ ಮತ್ತು ನಾವು ಅವುಗಳನ್ನು ಹೇಗೆ ತಿಳಿದಿದ್ದೇವೆ ಎಂಬುದರ ವಿವರವಾದ ಪ್ರಸ್ತುತಿ.
  • ಕಾರಣ ಮತ್ತು ಪರಿಣಾಮ - ಕಾರಣದ, ವಾಸ್ತವವೆಂದರೆ ಏನು ಮತ್ತು ನಮ್ಮ ಪ್ರಕ್ಷೇಪಗಳು ಹೇಗೆ ವಾಸ್ತವವನ್ನು ವಿರೂಪಗೊಳಿಸುತ್ತವೆ ಎಂಬುದರ ವಿವರವಾದ ವಿಶ್ಲೇಷಣೆ. 

ಬೌದ್ಧ ತತ್ವಶಾಸ್ತ್ರವು ಕೂಡ ಕೇವಲ ಬೌದ್ಧರಿಗೆ ಸೀಮಿತವಾಗಿರುವುದಿಲ್ಲ, ಬದಲಿಗೆ ಪ್ರತಿಯೊಬ್ಬರೂ ಪ್ರಯೋಜನ ಪಡೆಯಬಹುದಾದ ವಿಷಯವಾಗಿರುತ್ತದೆ. 

ಮೂರನೆಯ ವಿಭಾಗವಾದ ಬೌದ್ಧ ಧರ್ಮವು, ಬೌದ್ಧ ಆಚರಣೆಯ ನಿಜವಾದ ಕ್ಷೇತ್ರವನ್ನು ಒಳಗೊಂಡಿರುತ್ತದೆ ಮತ್ತು ಕರ್ಮ, ಪುನರ್ಜನ್ಮ, ಧಾರ್ಮಿಕ ಆಚರಣೆಗಳು, ಮಂತ್ರಗಳು ಮತ್ತು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಬೌದ್ಧ ಮಾರ್ಗವನ್ನು ಅನುಸರಿಸುತ್ತಿರುವವರಿಗೆ ಇದು ನಿರ್ದಿಷ್ಟವಾಗಿರುತ್ತದೆ. 

ಈ ಮೂರು ತರಬೇತಿಗಳನ್ನು ಸೂಕ್ತವಾದ ಬೌದ್ಧ ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ಪರಿಭಾಷೆಯಲ್ಲಿ, ಎಲ್ಲರೂ ಅನ್ವಯಿಸಬಹುದಾದ ರೀತಿಯಲ್ಲಿ, ಸರಳವಾಗಿ ಪ್ರಸ್ತುತಪಡಿಸಬಹುದು, ಅಥವಾ ಅವುಗಳ ಜೊತೆಗೆ ಬೌದ್ಧ ಧರ್ಮದ ಪರಿಭಾಷೆಯಲ್ಲೂ ಪ್ರಸ್ತುತಪಡಿಸಬಹುದು. ಇದು ನಾನು "ಧರ್ಮ-ಲೈಟ್" ಮತ್ತು "ನಿಜವಾದ ಧರ್ಮ" ಎಂದು ಕರೆಯುವ ಒಂದು ವಿಭಾಗಕ್ಕೆ ಅನುರೂಪವಾಗಿದೆ. 

  • ಧರ್ಮ-ಲೈಟ್ - ಈ ಜೀವಿತಾವಧಿಯನ್ನು ಸುಧಾರಿಸುವ ಸಲುವಾಗಿ ಬೌದ್ಧ ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ವಿಧಾನಗಳನ್ನು ಅಭ್ಯಾಸ ಮಾಡುವುದು. 
  • ನಿಜವಾದ ಧರ್ಮ - ಮೂರು ತರಬೇತಿಗಳನ್ನು ಮೂರು ಬೌದ್ಧ ಗುರಿಗಳಿಗಾಗಿ: ಉತ್ತಮ ಪುನರ್ಜನ್ಮ, ಪುನರ್ಜನ್ಮದಿಂದ ವಿಮೋಚನೆ ಮತ್ತು ಜ್ಞಾನೋದಯಕ್ಕಾಗಿ ಅಳವಡಿಸಿಕೊಳ್ಳುವುದು. 

ಸಾಮಾನ್ಯವಾಗಿ, ಹೇಗೆ ಧರ್ಮ-ಲೈಟ್ ನಿಜವಾದ ಧರ್ಮಕ್ಕಾಗಿ ಬೇಕಾಗಿರುವ ಪ್ರಾಥಮಿಕ ಹಂತವಾಗಿದೆ ಎಂದು ನಾನು ಮಾತನಾಡುತ್ತೇನೆ, ಏಕೆಂದರೆ ನಾವು ಹೆಚ್ಚಾದ ಆಧ್ಯಾತ್ಮಿಕ ಗುರಿಗಳ ಬಗ್ಗೆ ಯೋಚಿಸುವ ಮೊದಲು, ನಮ್ಮ ಸಾಮಾನ್ಯ ಜೀವನವನ್ನು ಸುಧಾರಿಸಬೇಕಾಗಿರುವುದನ್ನು ನಾವು ಗುರುತಿಸಬೇಕಾಗಿದೆ. ಬೌದ್ಧ ವಿಜ್ಞಾನ ಮತ್ತು ತತ್ತ್ವಶಾಸ್ತ್ರವು ಬೌದ್ಧ ಧರ್ಮಕ್ಕೆ ಪೂರ್ವಭಾವಿಯಾಗಿರಬೇಕಾಗಿಲ್ಲ, ಆದ್ದರಿಂದ ಬೌದ್ಧ ಮಾರ್ಗಕ್ಕೆ ಪೂರ್ವಭಾವಿಯಾಗಿರಲಿ, ಇರದಿರಲಿ, ನಾವು ಈ ಮೂರು ತರಬೇತಿಗಳಿಂದ ನಮ್ಮ ಜೀವನವನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಯೋಚಿಸಬಹುದು.

ಚತುರಾರ್ಯ ಸತ್ಯಗಳು

ಬೌದ್ಧ ತತ್ತ್ವಶಾಸ್ತ್ರದಲ್ಲಿ, ಬೌದ್ಧ ಚಿಂತನೆಯು ಕಾರ್ಯನಿರ್ವಹಿಸುವ ವಿಧಾನದ ಸಾಮಾನ್ಯವಾದ ಪ್ರಸ್ತುತಿಯನ್ನು ನಾವು ಹೊಂದಿದ್ದೇವೆ, ಇದನ್ನು ಸಾಮಾನ್ಯವಾಗಿ ಚತುರಾರ್ಯ ಸತ್ಯಗಳು ಎಂದು ಕರೆಯಲಾಗುತ್ತದೆ. ನಾವು ಅವುಗಳನ್ನು ಜೀವನದ ನಾಲ್ಕು ವಾಸ್ತವಗಳೆಂದು ಪರಿಗಣಿಸಬಹುದು, ಅವು ಈ ಕೆಳಗಿನಂತಿವೆ: 

  • ನಾವೆಲ್ಲರೂ ಎದುರಿಸುತ್ತಿರುವ ದುಃಖಗಳು ಮತ್ತು ಸಮಸ್ಯೆಗಳನ್ನು ನೋಡಿದರೆ ನಮಗೆ ಇದು ಅರಿವಾಗುತ್ತದೆ - ಜೀವನವು ಕಷ್ಟಕರವಾಗಿದೆ ಎಂಬುದು ಮೊದಲ ಸತ್ಯ. 
  • ಎರಡನೆಯ ಸತ್ಯವೆಂದರೆ ನಮ್ಮ ಜೀವನದಲ್ಲಿ, ನಮ್ಮ ಸಮಸ್ಯೆಗಳು ಕಾರಣಗಳಿಂದ ಹುಟ್ಟುತ್ತವೆ. 
  • ಮೂರನೇ ಸತ್ಯವೆಂದರೆ ನಾವು ಸಮಸ್ಯೆಗಳನ್ನು ನಿಲ್ಲಿಸಬಹುದು; ನಮ್ಮ ಸಮಸ್ಯೆಗಳನ್ನು ನಾವು ಸುಮ್ಮನೆ ಒಪ್ಪಿಕೊಳ್ಳಬೇಕಾಗಿಲ್ಲ, ನಾವು ಅವುಗಳನ್ನು ಪರಿಹರಿಸಬಹುದು. 
  • ನಾಲ್ಕನೆಯ ಸತ್ಯವೆಂದರೆ, ಕಾರಣವನ್ನು ತೆಗೆದುಹಾಕುವ ಮೂಲಕ ನಾವು ನಮ್ಮ ಸಮಸ್ಯೆಗಳನ್ನು ತೊಡೆದುಹಾಕುತ್ತೇವೆ. ಹೇಗೆ ವರ್ತಿಸಬೇಕು, ಮಾತನಾಡಬೇಕು ಮತ್ತು ಮುಂತಾದವುಗಳ ಕುರಿತು ಸಲಹೆಯನ್ನು ನೀಡುವ ಜ್ಞಾನದ ಮಾರ್ಗವನ್ನು ಅನುಸರಿಸುವ ಮೂಲಕ ನಾವು ಹೀಗೆ ಮಾಡುತ್ತೇವೆ. 

ಹೀಗಾಗಿ, ನಾವು ವರ್ತಿಸುವ ಅಥವಾ ಮಾತನಾಡುವ ರೀತಿಯು ನಮಗೆ ಸಮಸ್ಯೆಗಳನ್ನು ಉಂಟುಮಾಡಿದರೆ, ನಾವು ಅದನ್ನು ಬದಲಾಯಿಸಬೇಕು. ನಮ್ಮ ಸಮಸ್ಯೆಗಳ ಕಾರಣಗಳನ್ನು ತೊಡೆದುಹಾಕಲು ನಮಗೆ ಬೇಕಾದ ಅಗತ್ಯತೆಗಳಲ್ಲಿ ಮೂರು ತರಬೇತಿಗಳೂ ಒಂದಾಗಿರುತ್ತದೆ. ಮೂರು ತರಬೇತಿಗಳನ್ನು ಅರ್ಥಮಾಡಿಕೊಳ್ಳಲು ಇದು ಬಹಳಾ ಉಪಯುಕ್ತವಾಗಿದೆ, ಏಕೆಂದರೆ ನಾವು ಅವುಗಳನ್ನು ಏಕೆ ಕಲಿಯುತ್ತೇವೆ ಎಂಬುದನ್ನು ಇದು ಪ್ರಸ್ತಾಪಿಸುತ್ತದೆ. ಆದ್ದರಿಂದ, ನಾವು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಾವು ಹೀಗೆ ನೋಡುತ್ತೇವೆ: 

  • ನನ್ನ ನೈತಿಕ ಶಿಸ್ತಿನಲ್ಲಿ, ನಾನು ಹೇಗೆ ವರ್ತಿಸುತ್ತೇನೆ ಮತ್ತು ಮಾತನಾಡುತ್ತೇನೆ ಎಂಬುದರ ಕುರಿತು ಏನಾದರೂ ತೊಂದರೆಯಿದೆಯೇ? 
  • ನನ್ನ ಏಕಾಗ್ರತೆಯಲ್ಲಿ ಏನಾದರೂ ಸಮಸ್ಯೆ ಇದೆಯೇ – ನನ್ನ ಮನಸ್ಸು ಎಲ್ಲೆಂದರಲ್ಲಿ ಹರಿದಾಡಿದ್ದು, ನಾನು ಭಾವನಾತ್ಮಕವಾಗಿ ಗೊಂದಲಕ್ಕೀಡಾಗಿದ್ದೇನೆಯೇ? 
  • ವಿಶೇಷವಾಗಿ, ವಾಸ್ತವತೆ ಮತ್ತು ನನ್ನ ಹುಚ್ಚುತನದ ಪ್ರಕ್ಷೇಪಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ನನ್ನ ವಿಧಾನದಲ್ಲಿ ಏನಾದರೂ ಸಮಸ್ಯೆ ಇದೆಯೇ? 

ಇವನ್ನು, ಈ ಜೀವಿತಾವಧಿಯಲ್ಲಿನ ನಮ್ಮ ಸಾಮಾನ್ಯ ಜೀವನಕ್ಕೆ ಅನ್ವಯಿಸಬಹುದು ಅಥವಾ ಮುಂದಿನ ಜೀವನದಲ್ಲಿ ನಾವು ಎದುರಿಸಬಹುದಾದ ಸಮಸ್ಯೆಗಳಿಗೆ ವಿಸ್ತರಿಸಬಹುದು. ಆರಂಭಿಕ ಮಟ್ಟದಲ್ಲಿ, ನಾವು ಈ ತರಬೇತಿಗಳನ್ನು ನಮ್ಮ ದೈನಂದಿನ ಜೀವನದ ಪರಿಭಾಷೆಯಲ್ಲಿ ಪರಿಗಣಿಸಬೇಕು: ಅವುಗಳು ನಮಗೆ ಹೇಗೆ ಸಹಾಯ ಮಾಡಬಹುದು? ನಮಗೆ ಸಮಸ್ಯೆಗಳು ಉಂಟಾಗವಂತೆ ನಾವು ಏನು ಮಾಡುತ್ತಿದ್ದೇವೆ? ಅವುಗಳನ್ನು ನಿವಾರಿಸಲು ನಾವು ಏನು ಮಾಡಬಹುದು? 

ದುಃಖದ ಕಾರಣ 

ಬೌದ್ಧ ತತ್ತ್ವಶಾಸ್ತ್ರದ ದೃಷ್ಟಿಕೋನದಿಂದ, ನಮ್ಮ ದುಃಖಕ್ಕೆ ಕಾರಣವು ಅರಿವಿಲ್ಲದಿರುವುದಾಗಿದೆ. ನಿರ್ದಿಷ್ಟವಾಗಿ, ಎರಡು ವಿಷಯಗಳ ಬಗ್ಗೆ ನಮಗೆ ಅರಿವಿರುವುದಿಲ್ಲ ಅಥವಾ ನಾವು ಗೊಂದಲಕ್ಕೊಳಗಾಗಿರುತ್ತೇವೆ.  

ನಮಗೆ ತಿಳಿದಿರದ ಮೊದಲ ವಿಷಯವೆಂದರೆ ಕಾರಣ ಮತ್ತು ಪರಿಣಾಮ, ವಿಶೇಷವಾಗಿ ನಮ್ಮ ನಡವಳಿಕೆಯ ವಿಷಯದಲ್ಲಿ. ಕೋಪ, ದುರಾಸೆ, ಬಾಂಧವ್ಯ, ಹೆಮ್ಮೆ, ಅಸೂಯೆ ಮುಂತಾದ ಗೊಂದಲದ ಭಾವನೆಗಳು ನಮ್ಮಲ್ಲಿ ಇದ್ದರೆ, ನಾವು ವಿನಾಶಕಾರಿಯಾಗಿ ವರ್ತಿಸುತ್ತೇವೆ. ನಾವು ಕೋಪಗೊಂಡು, ಜನರ ಮೇಲೆ ಕೂಗಾಡುತ್ತೇವೆ, ನಾವು ಅಸೂಯೆಪಟ್ಟು, ಜನರಿಗೆ ಹಾನಿಯುಂಟುಮಾಡಲು ಪ್ರಯತ್ನಿಸುತ್ತೇವೆ, ನಾವು ಬಾಂಧವ್ಯಕ್ಕೊಳಗಾಗಿ ಜನರಿಗೆ ಅಂಟಿಕೊಳ್ಳುತ್ತೇವೆ - ಇವೆಲ್ಲವೂ ನಮಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಈ ಭಾವನೆಗಳು ನಮ್ಮನ್ನು ವಿನಾಶಕಾರಿಯಾಗಿ ಅಥವಾ ಸ್ವಯಂ-ವಿನಾಶಕಾರಿಯಾಗಿ ವರ್ತಿಸುವಂತೆ ಮಾಡುವುದರಿಂದ, ಇದರ ಅಂತಿಮ ಫಲಿತಾಂಶವು ಅಸಂತೋಷವಾಗಿರುತ್ತದೆ. 

ಗೊಂದಲದ ಭಾವನೆಯ ವ್ಯಾಖ್ಯಾನವನ್ನು ತಿಳಿಯುವುದು ಸಹಾಯಕವಾಗಿರುತ್ತದೆ. ಇದೊಂದು ಮನಸ್ಸಿನ ಸ್ಥಿತಿಯಾಗಿದ್ದು, ಇದು ಸಿಡಿದೆಬ್ಬಿದಾಗ, ನಮ್ಮ ಮನಸ್ಸಿನ ಶಾಂತಿ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಾವು ಕೋಪದಿಂದ ಒಬ್ಬರ ಮೇಲೆ ಕೂಗಾಡಿದಾಗ, ಅದು ಅವರನ್ನು ಬೇಸರಗೊಳಿಸಬಹುದು, ಇಲ್ಲವಾಗಿರಬಹುದು. ನಾವು ಹೇಳಿದ್ದನ್ನು ಅವರು ಕೇಳದೇ ಇರಬಹುದು ಅಥವಾ ಅವರು ನಮ್ಮನ್ನು ನೋಡಿ ನಕ್ಕು, ನಾವು ಮೂರ್ಖರು ಎಂದು ಭಾವಿಸಬಹುದು. ಆದರೆ ನಾವು ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ ಮತ್ತು ನಾವು ಭಾವನಾತ್ಮಕವಾಗಿ ಅಸಮಾಧಾನಗೊಳ್ಳುತ್ತೇವೆ, ಇದರ ಪರಿಣಾಮವು, ಕೂಗಾಡಿದ ನಂತರವೂ ಹಿಂದುಳಿಯುತ್ತದೆ. ಇದೊಂದು ಅಹಿತಕರವಾದ ಅನುಭವವಾಗಿರುತ್ತದೆ. ಮತ್ತು ನಾವು ಸ್ವಯಂ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ, ನಾವು ನಂತರ ಪಶ್ಚಾತ್ತಾಪ ಪಡಬಹುದಾದಂತಹ ಮಾತುಗಳನ್ನಾಡಿರಬಹುದು. 

ನಾವು ಈ ರೀತಿಯಾಗಿ ಏಕೆ ವರ್ತಿಸುತ್ತೇವೆ ಎಂದರೆ: 

  • ನಾವು ಕಾರಣ ಮತ್ತು ಪರಿಣಾಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ನಾವು ಗೊಂದಲಮಯ ಭಾವನೆಗಳ ಪ್ರಭಾವದಡಿ ಒಂದು ರೀತಿಯಾಗಿ ವರ್ತಿಸಿದರೆ, ಅವು ನಮಗೆ ಅಸಂತೋಷವನ್ನು ತರುತ್ತವೆ ಎಂದು ನಮಗೆ ಆಗಾಗ್ಗೆ ಅರ್ಥವಾಗುವುದಿಲ್ಲ. 
  • ಅಥವಾ, ನಾವು ಕಾರಣ ಮತ್ತು ಪರಿಣಾಮದ ಬಗ್ಗೆ ಗೊಂದಲಕ್ಕೊಳಗಾಗಿ, ಅದನ್ನು ವಿರುದ್ಧವಾಗಿ ಅರ್ಥಮಾಡಿಕೊಳ್ಳುತ್ತೇವೆ. “ನಾನು ಈ ವ್ಯಕ್ತಿಯ ಮೇಲೆ ಕೂಗಾಡಿದರೆ ನನಗೆ ಸಮಾಧಾನವಾಗುತ್ತದೆ" ಎಂದು ನಾವು ಆಗಾಗ್ಗೆ ಯೋಚಿಸುತ್ತೇವೆ, ಆದರೆ ಹಾಗೆ ಎಂದಿಗೂ ಆಗುವುದಿಲ್ಲ. ಅಥವಾ, ನಾವು ಯಾರೊಂದಿಗಾದರೂ ಹೆಚ್ಚಾಗಿ ಬಾಂಧವ್ಯವನ್ನು ಹೊಂದಿದ್ದರೆ, ನಾವು ಹೀಗೆ ಹೇಳಬಹುದು, "ನೀವು ಏಕೆ ಹೆಚ್ಚಾಗಿ ಕರೆ ಮಾಡುವುದಿಲ್ಲ ಅಥವಾ ನನ್ನನ್ನು ಹೆಚ್ಚಾಗಿ ಭೇಟಿ ಮಾಡುವುದಿಲ್ಲ?" ಆದರೆ ಇದು ಅವರನ್ನು ದೂರ ಓಡಿಸುತ್ತದೆ, ಅಲ್ಲವೇ? ಏಕೆಂದರೆ ನಾವು ಕಾರಣ ಮತ್ತು ಪರಿಣಾಮವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಗೊಂದಲಕ್ಕೊಳಗಾಗಿರುವುದರಿಂದ, ನಮಗೆ ಬೇಕಾದುದನ್ನು ನಾವು ಸಾಧಿಸುವುದಿಲ್ಲ. 

ಎರಡನೆಯ ರೀತಿಯ ಅಜ್ಙಾನವು ವಾಸ್ತವಕ್ಕೆ ಸಂಬಂಧಿಸಿರುತ್ತದೆ. ನಾವು ವಾಸ್ತವದ ಬಗ್ಗೆ ಗೊಂದಲಕ್ಕೊಳಗಾಗಿರುವುದರಿಂದ, ನಾವು ಗೊಂದಲಮಯವಾಗಿ ವರ್ತಿಸುತ್ತೇವೆ. ಇದರ ಒಂದು ಉದಾಹರಣೆಯೆಂದರೆ ಸ್ವಯಂ-ಆಸಕ್ತಿ, ಅಂದರೆ ನಾವು ಯಾವಾಗಲೂ ನಮ್ಮ ಬಗ್ಗೆ, ಕೇವಲ ನಮ್ಮ ಬಗ್ಗೆ ಯೋಚಿಸುತ್ತಿರುತ್ತೇವೆ. ಇದು ಅತಿಯಾಗಿ ವಿವೇಚನಾಶೀಲವಾಗಿದ್ದು, ನಾವು ಪರಿಪೂರ್ಣರಾಗಿರಬೇಕು ಎಂದು ಭಾವಿಸುವ ನರಳಾಟಕ್ಕೆ ಮಾರ್ಪಾಡಾಗಬಹುದು. ನಾವು ರಚನಾತ್ಮಕವಾಗಿ ವರ್ತಿಸಿದರೂ, ಪರಿಪೂರ್ಣವಾಗಲು ಪ್ರಯತ್ನಿಸಿದರೂ, ಎಲ್ಲವನ್ನೂ ಕ್ರಮವಾಗಿ ಮಾಡಲು ಪ್ರಯತ್ನಿಸಿದರೂ, ಇದು ಬಹಳಾ ಉದ್ವೇಗದಿಂದ ಕೂಡಿರುತ್ತದೆ. ನಾವು ತಾತ್ಕಾಲಿಕವಾಗಿ ಸಂತೋಷವಾಗಿದ್ದರೂ, ಅದು ಬೇಗನೇ ಅಸಮಾಧಾನಕ್ಕೆ ಬದಲಾಗುತ್ತದೆ, ಏಕೆಂದರೆ ನಾವು "ನಾನು ಇನ್ನೂ ಅರ್ಹನಾಗಿಲ್ಲ" ಎಂದು ಭಾವಿಸುತ್ತೇವೆ ಮತ್ತು ಸುಧಾರಿಸಲು ನಮ್ಮನ್ನು ನಾವೇ ಮತ್ತಷ್ಟು ತಳ್ಳುತ್ತೇವೆ. 

ಯಾವಾಗಲೂ ಸ್ವಚ್ಛಗೊಳಿಸುವ ಹುಚ್ಚಾಟಿಕೆಯಿರುವ ಒಬ್ಬ ವ್ಯಕ್ತಿಯನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ – ಅವರು ತಮ್ಮ ಮನೆಯನ್ನು ಸ್ವಚ್ಛವಿಡುವ ವಿಷಯದಲ್ಲಿ ಪರಿಪೂರ್ಣತಾವಾದಿ. ಅವರು ಎಲ್ಲವನ್ನೂ ನಿಯಂತ್ರಿಸಬಹುದು ಮತ್ತು ಎಲ್ಲವನ್ನೂ ಸ್ವಚ್ಛವಾಗಿ ಮತ್ತು ಕ್ರಮವಾಗಿ ಇರಿಸಬಹುದು ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಇದು ಅಸಾಧ್ಯ! ನೀವು ಎಲ್ಲವನ್ನೂ ಸ್ವಚ್ಛಗೊಳಿಸುತ್ತೀರಿ, ಉತ್ತಮವಾಗಿರಿಸುತ್ತೀರಿ, ನೀವು ಖುಷಿಪಡುತ್ತೀರಿ, ನಂತರ ಮಕ್ಕಳು ಮನೆಗೆ ಬಂದು ಎಲ್ಲವನ್ನೂ ಗಲೀಜುಗೊಳಿಸುತ್ತಾರೆ; ನೀವು ಅತೃಪ್ತರಾಗುತ್ತೀರಿ ಮತ್ತು ಅವೆಲ್ಲವನ್ನು ಮತ್ತೆ ಸ್ವಚ್ಛಗೊಳಿಸಬೇಕು. ಈ ರೀತಿಯಾಗಿ ಅದು ಬಹಳಾ ಪ್ರಚೋದಿತವಾಗಿರುತ್ತದೆ. ಮತ್ತು ಪ್ರತಿ ಬಾರಿ, “ಆಹಾ, ಈಗ ಎಲ್ಲವೂ ಕ್ರಮಬದ್ಧವಾಗಿದೆ” ಎಂದು ಸ್ವಲ್ಪ ಸಂತೋಷವನ್ನು ಅನುಭವಿಸಿದಾಗಲೂ, ಆ ಭಾವನೆಯು ಬೇಗನೇ ಮಾಯವಾಗುತ್ತದೆ. ನಿಮ್ಮಿಂದ ತಪ್ಪಿಸಿಕೊಂಡ ಒಂದು ಕಲೆ ಯಾವಾಗಲೂ ಇದ್ದೇ ಇರುತ್ತದೆ! 

ಈ ಮನಸ್ಸಿನ ಸ್ಥಿತಿಗಳನ್ನು ಪುನರಾವರ್ತಿಸುವ ಮೂಲಕ - ಅವು ಗೊಂದಲದ ಭಾವನೆಗಳಾಗಿರಬಹುದು ಅಥವಾ ಗೊಂದಲದ ವರ್ತನೆಗಳಾಗಿರಬಹುದು ಮತ್ತು ಈ ರೀತಿಯ ಪ್ರಚೋದಿತವಾದ ನಡವಳಿಕೆಯ ಪುನರಾವರ್ತನೆಯ ಮೂಲಕ, ನೀವು "ತಪ್ಪಿಸಿಕೊಳ್ಳಲಾಗದ ದುಃಖ"ದಿಂದ ಬಳಲುತ್ತೀರಿ. ನಮ್ಮ ಸಮಸ್ಯೆಗಳು ಶಾಶ್ವತವಾಗುವಂತೆ ಹೇಗೆ ನಮ್ಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತೇವೆ ಎಂಬುದರ ಬಗ್ಗೆ ಇದಾಗಿರುತ್ತದೆ.  

ಇದು ನಮ್ಮ ಮೇಲೆ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಸಹ ಪರಿಣಾಮ ಬೀರುತ್ತದೆ. ಉದಾಹರಣೆಗೆ, ನಾವು ಯಾವಾಗಲೂ ಕೋಪಗೊಂಡಿದ್ದರೆ, ನಮ್ಮ ರಕ್ತದೊತ್ತಡವು ಹೆಚ್ಚಾಗುತ್ತದೆ ಮತ್ತು ನಾವು ಚಿಂತಿಸುವುದರಿಂದ ಹುಣ್ಣು ಹುಟ್ಟಿಕೊಳ್ಳುತ್ತದೆ, ಇತ್ಯಾದಿ. ಅಥವಾ, ನಿಮಗೆ ಯಾವಾಗಲೂ ಸ್ವಚ್ಛಗೊಳಿಸುವ ಹುಚ್ಚಾಟಿಕೆಯಿದ್ದರೆ, ವಿಶ್ರಾಂತಿಯಿಂದಿರುವುದು ಕಷ್ಟವಾಗಿರುತ್ತದೆ. ಯಾವಾಗಲೂ, ಎಲ್ಲವೂ ಪರಿಪೂರ್ಣವಾಗಿರಬೇಕು ಎಂದು ನೀವು ಉದ್ವಿಗ್ನರಾಗಿರುತ್ತೀರಿ, ಆದರೆ ಹಾಗೆ ಎಂದೂ ಆಗುವುದಿಲ್ಲ. 

ನಮ್ಮ ಸಮಸ್ಯೆಗಳ ಕಾರಣಗಳನ್ನು ತೊಡೆದುಹಾಕಲು ಮೂರು ತರಬೇತಿಗಳು ಹೇಗೆ ಸಹಾಯ ಮಾಡುತ್ತವೆ 

ನಮಗೆ ನಿಜವಾಗಿಯೂ ಬೇಕಾಗಿರುವುದು ಮೂರು ತರಬೇತಿಗಳು: 

  • ನಮ್ಮ ಗೊಂದಲವನ್ನು ಹೋಗಲಾಡಿಸಲು ನಮಗೆ ವಿವೇಚನಾತ್ಮಕ ಅರಿವಿನ ಅಗತ್ಯವಿದೆ. ಉದಾಹರಣೆಗೆ, ಸ್ವಚ್ಛಗೊಳಿಸುವಂತಹ ಹುಚ್ಚಾಟಿಕೆಯಿದ್ದಾಗ, "ಎಲ್ಲವೂ, ಯಾವಾಗಲೂ ಪರಿಪೂರ್ಣವಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು ಮತ್ತು ನಾನು ಎಲ್ಲವನ್ನೂ ನಿಯಂತ್ರಿಸಬೇಕು" ಎಂಬ ಕಲ್ಪನೆಯನ್ನು ನೀವು ಹೊಂದಿರುವಾಗ, ಅದನ್ನು ನೀವು "ನನ್ನ ಮನೆಯು ಖಂಡಿತವಾಗಿಯೂ ಗಲೀಜಾಗಲಿದೆ, ಅದನ್ನು ನಿಯಂತ್ರಿಸಲು ಯಾರಿಗೂ ಸಾಧ್ಯವಿಲ್ಲ." ಎಂಬುದರ ಜೊತೆಗೆ ಬದಲಿಸಬೇಕು. ಆಗ ನೀವು ಹೆಚ್ಚು ಶಾಂತರಾಗುತ್ತೀರಿ. ನೀವು ನಿಮ್ಮ ಮನೆಯನ್ನು ಇನ್ನೂ ಸ್ವಚ್ಛಗೊಳಿಸುತ್ತೀರಿ ಹೌದು, ಆದರೆ ನೀವು ಹಾಗೆ ಎಡಬಿಡದೆ ಮಾಡುವ ಅಗತ್ಯವಿಲ್ಲ ಎಂಬುದು ನಿಮಗೆ ಅರಿವಾಗುತ್ತದೆ. ಸಾಂಪ್ರದಾಯಿಕ ಪಠ್ಯಗಳಲ್ಲಿ, ಹರಿತವಾದ ಕೊಡಲಿಯಿಂದ ಮರವನ್ನು ಬೀಳಿಸುವ ಉದಾಹರಣೆಯನ್ನು ಬಳಸಲಾಗುತ್ತದೆ. 
  • ಈ ಕೊಡಲಿಯಿಂದ ಮರವನ್ನು ಬೀಳಿಸಲು, ನಾವು ಒಂದೇ ಜಾಗಕ್ಕೆ ಸತತವಾಗಿ ಕೊಡಲಿಯನ್ನು ಬೀಸಬೇಕು, ಇದೇ ಏಕಾಗ್ರತೆ. ನಮ್ಮ ಮನಸ್ಸು ಯಾವಾಗಲೂ ವಿಚಲಿತವಾಗಿದ್ದರೆ, ನೀವು ಆ ವಿವೇಚನಾತ್ಮಕ ಅರಿವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ನಾವು ಯಾವಾಗಲೂ ಒಂದೇ ಜಾಗಕ್ಕೆ ಕೊಡಲಿಯಿಂದ ಹೊಡೆಯಲು, ಏಕಾಗ್ರತೆಯನ್ನು ಹೊಂದಿರಬೇಕು. 
  • ಈ ಕೊಡಲಿಯನ್ನು ಬೀಸುವುದಕ್ಕೆ ಶಕ್ತಿಯಿರಬೇಕು. ನಿಮಗೆ ಶಕ್ತಿ ಇಲ್ಲದಿದ್ದರೆ, ನೀವು ಕೊಡಲಿಯನ್ನು ಎತ್ತಲು ಸಹ ಸಾಧ್ಯವಾಗುವುದಿಲ್ಲ, ಈ ಶಕ್ತಿಯು ನೈತಿಕ ಸ್ವಯಂ-ಶಿಸ್ತಿನಿಂದ ಬರುತ್ತದೆ. 

ಈ ರೀತಿಯಾಗಿ, ನಮ್ಮ ಸಮಸ್ಯೆಗಳ ಮೂಲವನ್ನು ಜಯಿಸಲು ಮೂರು ತರಬೇತಿಗಳು ನಮಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಇಲ್ಲಿ ಬೌದ್ಧ ಧರ್ಮದ ಯಾವುದೇ ಉಲ್ಲೇಖವಿಲ್ಲದಿರುವುದರಿಂದ, ಇದು ಎಲ್ಲರಿಗೂ ಸೂಕ್ತವಾಗಿದ್ದು, ನಾವು ಈ ಮೇಲಿನ ಎಲ್ಲವನ್ನೂ ಅನ್ವಯಿಸಬಹುದು. ನಾವು ಮುಂದುವರಿಯುವ ಮೊದಲು, ನಾವು ಕಲಿತದ್ದನ್ನು ಒಮ್ಮೆ ಮೆಲುಕು ಹಾಕೋಣ:  

  • ನಮ್ಮ ಸ್ವಂತ ನಡವಳಿಕೆಯಲ್ಲಿ ಕಾರಣ ಮತ್ತು ಪರಿಣಾಮವನ್ನು ಗುರುತಿಸುವ ಸಲುವಾಗಿ, ಕಲ್ಪನೆ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ವಿವೇಚನಾತ್ಮಕ ಅರಿವನ್ನು ಬಳಸುತ್ತೇವೆ. ನಮ್ಮಲ್ಲಿ ವಿವೇಚನಾತ್ಮಕ ಅರಿವು ಇಲ್ಲದಿದ್ದಾಗ, ನಮ್ಮ ನಡವಳಿಕೆ ಮತ್ತು ವರ್ತನೆಗಳು ನಮ್ಮಲ್ಲಿ ಅತೃಪ್ತಿ ಅಥವಾ ನಮ್ಮನ್ನು ಎಂದೂ ತೃಪ್ತಿಪಡಿಸದ ಸಂತೋಷವೊಂದನ್ನು ಸೃಷ್ಟಿಸುತ್ತವೆ. 
  • ಮೇಲಿನದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು, ನಾವು ಗಮನವಿಡಬೇಕಾದ್ದರಿಂದ, ನಾವು ಉತ್ತಮವಾದ ಏಕಾಗ್ರತೆಯನ್ನು ಹೊಂದಿರಬೇಕು. 
  • ನಮ್ಮ ಮನಸ್ಸು ಅಲೆದಾಡಿದಾಗ ಅದನ್ನು ಮರಳಿ ಪಡೆದು, ಉತ್ತಮ ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ನಮಗೆ ಶಿಸ್ತು ಬೇಕು.
  • ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು, ಈ ಮೂರು ತರಬೇತಿಗಳನ್ನು ಅನ್ವಯಿಸಬೇಕಾಗಿದೆ.  

ಈ ಎಲ್ಲದರಿಂದ ನಮಗೆ ಸಿಗುವ ಪ್ರಮುಖ ಒಳನೋಟವೆಂದರೆ, ನಮ್ಮ ಜೀವನದಲ್ಲಿ ನಾವು ಅನುಭವಿಸುವ ಸಂತೋಷ ಮತ್ತು ಅಸಂತೋಷವು ನಮ್ಮದೇ ಆದ ಗೊಂದಲಗಳಿಂದ ಬರುತ್ತವೆ. ನಮ್ಮ ಸಮಸ್ಯೆಗಳನ್ನು ಇತರರ ಮೇಲೆ ಅಥವಾ ಸಮಾಜ, ಅರ್ಥಶಾಸ್ತ್ರ ಮತ್ತು ಮುಂತಾದವುಗಳ ಮೇಲೆ ದೂಷಿಸುವ ಬದಲು ನಾವು ಆಳವಾದ ಮಟ್ಟದಲ್ಲಿ ಗಮನಹರಿಸುತ್ತೇವೆ. ಈ ಸನ್ನಿವೇಶಗಳನ್ನು ಎದುರಿಸುತ್ತಿರುವ ನಮ್ಮ ಮನಸ್ಥಿತಿಯನ್ನು ನಾವು ನೋಡುತ್ತೇವೆ. ನಾವು ಬಹಳಷ್ಟು ಕಷ್ಟಕರ ಸಂದರ್ಭಗಳನ್ನು ಎದುರಿಸಬಹುದು, ಆದರೆ ಇಲ್ಲಿ ನಾವು ನಮ್ಮ ಅತೃಪ್ತಿಯ ಭಾವನೆಯ ಬಗ್ಗೆ, ಅಂದರೆ ಕ್ಷಣಿಕವಾದ ಸಂತೋಷದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಇದಕ್ಕಿಂತ ಮೇಲೆ ನಮ್ಮ ಗುರಿಯನ್ನು ಇರಿಸಬೇಕು, ಇದು ಮನಸ್ಸಿನ ಶಾಂತಿಯೊಂದಿಗೆ ಬರುವ ಒಂದು ರೀತಿಯ ಸಂತೋಷವಾಗಿರುತ್ತದೆ, ಮತ್ತು ಇದು ಶಾಶ್ವತ ಮತ್ತು ಸ್ಥಿರವಾಗಿರುತ್ತದೆ. 

ನಾವು ತೊಂದರೆಗಳನ್ನು ಎದುರಿಸಿದಾಗ, ನಾವು ಖಿನ್ನತೆಗೆ ಒಳಗಾಗಿ, ಸಂಪೂರ್ಣವಾಗಿ ದುಃಖಿತರಾಗಬಹುದು. ಅಥವಾ ನಮ್ಮ ಮೇಲೆ ನಾವೇ ಕನಿಕರ ಪಡುವ ಬದಲು, ನಾವು ಅವನ್ನು ಹೆಚ್ಚು ಮನಃಶಾಂತಿಯಿಂದ ಎದುರಿಸಬಹುದು, ಹಾಗೆ ಮಾಡುವುದರಿಂದ ನಾವು ಪರಿಸ್ಥಿತಿಯನ್ನು ಹೆಚ್ಚು ಸ್ಪಷ್ಟವಾಗಿ ನೋಡುತ್ತೇವೆ, ಅದರಲ್ಲಿ ಏನಿದೆ ಮತ್ತು ಅದನ್ನು ಎದುರಿಸುವ ಮಾರ್ಗಗಳಾವುವು ಎಂದು ನಾವು ನೋಡುತ್ತೇವೆ. 

ನಿಮ್ಮ ಮಗುವು ರಾತ್ರಿ ಹೊತ್ತು ಹೊರಗೆ ಹೋದಾಗ ನೀವು ಬಹಳಾ ಚಿಂತಿತರಾಗಿರುತ್ತೀರಿ, "ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುತ್ತಾರೆಯೇ?". ಇಲ್ಲಿ ಮತ್ತೊಮ್ಮೆ, ನಮ್ಮ ಆತಂಕ ಮತ್ತು ಅತೃಪ್ತಿಯ ಮೂಲವು "ಹೇಗಾದರೂ ನಾನು ನನ್ನ ಮಗುವಿನ ಸುರಕ್ಷತೆಯನ್ನು ನಿಯಂತ್ರಿಸಬಹುದು" ಎಂಬ ವರ್ತನೆಯಾಗಿರುತ್ತದೆ, ಇದು ನಿಸ್ಸಂದೇಹವಾಗಿ ಒಂದು ಕಲ್ಪನೆಯಾಗಿರುತ್ತದೆ. ಅವರು ಸುರಕ್ಷಿತವಾಗಿ ಮನೆಗೆ ಹಿಂದಿರುಗಿದಾಗ ನಿಮಗೆ ಸಂತೋಷವಾಗುತ್ತದೆ, ಸಮಾಧಾನವಾಗುತ್ತದೆ, ಆದರೆ ಅವರು ಪುನಃ ಹೊರಗೆ ಹೋದಾಗ, ನೀವು ಪುನಃ ಚಿಂತಿಸುತ್ತೀರಿ. ಆದ್ದರಿಂದ ಆ ಸಮಾಧಾನದ ಭಾವನೆಯು ಉಳಿಯುವುದಿಲ್ಲ, ಅಲ್ಲವೇ? ತದನಂತರ ನಾವು ಯಾವಾಗಲೂ ಚಿಂತಿತರಾಗಿರುತ್ತೇವೆ, ಆದ್ದರಿಂದ ಅದು ಶಾಶ್ವತವಾಗಿ ಉಳಿಯುತ್ತದೆ - ನಾವು ಎಲ್ಲದರ ಬಗ್ಗೆ ಚಿಂತಿಸುವ ಹಾಗೆ ಆಗುತ್ತೇವೆ, ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಬಹಳಾ ಅಹಿತಕರವಾದ ಸ್ಥಿತಿಯಾಗಿರುತ್ತದೆ. 

ಇದಕ್ಕೆಲ್ಲಾ ಕಾರಣ ನಮ್ಮ ಗೊಂದಲ ಎಂದು ಅರ್ಥಮಾಡಿಕೊಳ್ಳುವುದೇ ನಿಜವಾದ ಕೀಲಿಕೈ. ನಮ್ಮ ಒಂದು ರೀತಿಯ ವರ್ತನೆಯು ಸಂತೋಷವನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ ಅಥವಾ ಎಲ್ಲವನ್ನೂ ನಿಯಂತ್ರಿಸುವ ಮನೋಭಾವವು ಸರಿಯಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ, ಆದರೆ ಅದು ನಿಜವಲ್ಲ. ಈ ಆಲೋಚನೆಯು “ಅಸಂಬದ್ಧ” ಎಂದು ಅರಿತು ನಾವು ಕಿತ್ತು ಹಾಕಬೇಕು ಮತ್ತು ಈ ಅರಿವಿಕೆಯ ಮೇಲೆ ಕೇಂದ್ರೀಕರಿಸಬೇಕು. 

ಸಾರಾಂಶ 

ಜೀವನದ ನಾಲ್ಕು ಸತ್ಯಗಳ ಬಗ್ಗೆ ಆಲೋಚಿಸುವಾಗ, ನಮ್ಮ ಸಮಸ್ಯೆಗಳು ಮತ್ತು ನಕಾರಾತ್ಮಕ ಭಾವನೆಗಳು ಸ್ಥಿರವಾಗಿರುವುದಿಲ್ಲ, ಅವುಗಳನ್ನು ಸುಧಾರಿಸಬಹುದು, ಜೊತೆಗೆ ಮುಂದೆ ಸಂಪೂರ್ಣವಾಗಿ ತೆಗೆದುಹಾಕಬಹುದು ಎಂದು ಅರಿಯುವ ಮೂಲಕ ನಾವು ಪ್ರೋತ್ಸಾಹಗೊಳ್ಳುತ್ತೇವೆ. ನಾವು ದುಃಖದ ಕಾರಣಗಳೊಂದಿಗೆ ಒಮ್ಮೆ ವ್ಯವಹರಿಸಿದಾಗ, ದುಃಖವು ಅಸ್ತಿತ್ವದಲ್ಲಿರುವುದಿಲ್ಲ, ಆದರೆ ಈ ಕಾರಣಗಳು ತಾವಾಗಿಯೇ ಕಣ್ಮರೆಯಾಗುವುದಿಲ್ಲ.

ನೈತಿಕತೆ, ಏಕಾಗ್ರತೆ ಮತ್ತು ವಿವೇಚನಾತ್ಮಕ ಅರಿವಿನ ಮೂರು ತರಬೇತಿಗಳೊಂದಿಗೆ ನಮ್ಮ ಜೀವನವನ್ನು ನಡೆಸುವುದು ಅತ್ಯುತ್ತಮವಾದ ಮಾರ್ಗವಾಗಿದೆ. ನಾವು ಯಾವಾಗಲೂ ಹುಡುಕುತ್ತಿರುವ ವಿಷಯವಾದ ಸಂತೋಷದ ಹತ್ತಿರ ನಮ್ಮನ್ನು ತರೆತರಲು ಅವುಗಳು ಏಕಕಾಲದಲ್ಲಿ, ಒಟ್ಟಿಗೆ ಕೆಲಸ ಮಾಡುತ್ತಿರುತ್ತವೆ. 

Top