ಜೀವನದ ಮೇಲಿನ ಬೌದ್ಧ ದೃಷ್ಟಿಕೋನ

ದೈನಂದಿನ ಜೀವನದಲ್ಲಿ, ಅತ್ಯಂತ ಮುಖ್ಯವಾದ ವಿಷಯವೆಂದರೆ ಎಲ್ಲಾ ರೀತಿಯ ವಿನಾಶಕಾರಿ ನಡವಳಿಕೆ, ಮಾತನಾಡುವ ಮತ್ತು ಯೋಚಿಸುವ ವಿಧಾನಗಳನ್ನು ಸಾಧ್ಯವಾದಷ್ಟು ತಪ್ಪಿಸುವುದು ಮತ್ತು ಎಲ್ಲಾ ರೀತಿಯ ಸಕಾರಾತ್ಮಕ, ರಚನಾತ್ಮಕ ಮಾರ್ಗಗಳನ್ನು ಸಾಧ್ಯವಾದಷ್ಟು ಬೆಳೆಸಿಕೊಳ್ಳುವುದು. ಹೀಗೆ ಮಾಡಲು, ಮನಸ್ಸಿನಲ್ಲಿ ವಾಸ್ತವದ ಬಗೆಗಿರುವ ಮತ್ತು ನಡವಳಿಕೆಯ ಕಾರಣ ಮತ್ತು ಪರಿಣಾಮದ ಬಗೆಗಿರುವ ಗೊಂದಲವನ್ನು ನಿವಾರಿಸಿ, ಅದನ್ನು ಪಳಗಿಸುವ ಅಗತ್ಯವಿದೆ. ನಾವು ಈ ರೀತಿಯಾಗಿ ನಮ್ಮ ಜೀವನವನ್ನು ನಡೆಸಿದಾಗ, ನಮ್ಮ ಜೀವನದಲ್ಲಿ ಬೌದ್ಧ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುತ್ತೇವೆ.

ನಮ್ಮ ವಿಷಯವಾದ, ಜೀವನದ ಮೇಲಿನ ಬೌದ್ಧ ದೃಷ್ಟಿಕೋನ ವು, ನಾವು ಬುದ್ಧನ ಬೋಧನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಅನ್ವಯಿಸುತ್ತೇವೆ ಎಂಬುದರ ಬಗ್ಗೆಯಾಗಿದೆ. ನಮ್ಮ ಜೀವನದಲ್ಲಿ ಅವುಗಳ ನಿಜವಾದ ಬೆಲೆಯೇನು? ಇದು ಬಹಳಾ ಮಹತ್ವದ ವಿಷಯವಾಗಿರುತ್ತದೆ. ನಾವು ಬೋಧನೆಗಳನ್ನು ಅಧ್ಯಯನ ಮಾಡಬಹುದು ಮತ್ತು ದೈನಂದಿನ ಧ್ಯಾನದ ಅಭ್ಯಾಸವನ್ನು ಪಾಲಿಸಬಹುದು, ಆದರೆ ಇವುಗಳನ್ನು ನಮ್ಮ ನಿಜವಾದ ದೈನಂದಿನ ಜೀವನಕ್ಕೆ ಹೇಗೆ ಸಂಬಂಧಿಸುವುದು ಎಂಬುದು ಸ್ಪಷ್ಟವಾಗಿರುವುದಿಲ್ಲ. ಪ್ರಾಯೋಗಿಕ ಪರಿಭಾಷೆಯಲ್ಲಿ ಅವುಗಳ ಅರ್ಥವೇನು? ಅವುಗಳು ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತವೆ ಅಥವಾ ವೈಯಕ್ತಿಕವಾಗಿ ನಮ್ಮನ್ನು ಹೇಗೆ ಪ್ರಭಾವಿಸುತ್ತವೆ? ಬೌದ್ಧ ಆಚರಣೆಯು ಬದಿಯಲ್ಲಿ ನಡೆಸುವ ಹವ್ಯಾಸವೇ ಅಥವಾ ನಮ್ಮ ಜೀವನದಲ್ಲಿನ ತೊಂದರೆಗಳಿಂದ ಪಾರಾಗಲು ಸಹಾಯಮಾಡುವಂತಹ ವಿಷಯವೇ? ನಾವು ಒಂದು ಸುಂದರವಾದ ದೃಶ್ಯೀಕರಣ ಅಥವಾ ಕಾಲ್ಪನಿಕ ಜಗತ್ತಿನಲ್ಲಿ ಕಳೆದುಹೋಗುತ್ತೇವೆಯೇ ಅಥವಾ ನಮ್ಮ ಅಭ್ಯಾಸವು ಬಹಳಾ ಉಪಯುಕ್ತವಾಗಿದ್ದು, ವಾಸ್ತವದಲ್ಲಿ ನಮ್ಮ ಜೀವನದಲ್ಲಿ ಸಹಾಯ ಮಾಡುತ್ತದೆಯೇ? ಅಂತಿಮವಾಗಿ, ನಮ್ಮ ಜೀವನದಲ್ಲಿನ ದುಃಖ ಮತ್ತು ಸಮಸ್ಯೆಗಳನ್ನು ಜಯಿಸಲು ನಮಗೆ ಸಹಾಯ ಮಾಡುವುದೇ ಬೌದ್ಧ ಧರ್ಮದ ಉದ್ದೇಶವಾಗಿರುತ್ತದೆ. 

ಸಹಾಯಕ ಮಾರ್ಗಸೂಚಿ 

ದೈನಂದಿನ ಜೀವನದಲ್ಲಿ ಬೋಧನೆಗಳನ್ನು ಅನ್ವಯಿಸಲು, ನಾವು ಒಂದು ಸಣ್ಣ ಪ್ರಾರ್ಥನೆಯಲ್ಲಿ ಬಹಳ ಸಹಾಯಕವಾದ ಮಾರ್ಗಸೂಚಿಯನ್ನು ಕಾಣಬಹುದು, ಇದನ್ನು ನಿರಂತರವಾಗಿ ಪಾಲಿಸಬೇಕಾದ ಮೂರು ಅಭ್ಯಾಸಗಳು ಎಂದು ಕರೆಯಲಾಗುತ್ತದೆ, ಮತ್ತು ಸಾಮಾನ್ಯವಾಗಿ, ಬಹಳಷ್ಟು ಬೋಧನೆಗಳ ಮೊದಲು ಇದನ್ನು ಪಠಿಸಲಾಗುತ್ತದೆ. ಇಲ್ಲಿ, ನಾವು ಈ ಸಾಲನ್ನು ಕಾಣಬಹುದು: 

ನಕಾರಾತ್ಮಕವಾದದ್ದನ್ನು ಮಾಡಬೇಡಿ; ರಚನಾತ್ಮಕವಾಗಿರುವುದನ್ನು ಅದ್ಭುತವಾಗಿ ಜಾರಿಗೊಳಿಸಿ; ನಿಮ್ಮ ಸ್ವಂತ ಮನಸ್ಸನ್ನು ಸಂಪೂರ್ಣವಾಗಿ ನಿಗ್ರಹಿಸಿ. ಇವು ಬುದ್ಧನ ಬೋಧನೆಗಳಾಗಿವೆ. 

ಇವು ಬೌದ್ಧ ಬೋಧನೆಗಳ ಪ್ರಮುಖ ಅಂಶಗಳಾಗಿವೆ. ನಕಾರಾತ್ಮಕವಾದದ್ದನ್ನು ಮಾಡಬೇಡಿ, ಎಂಬ ಮೊದಲ ಸಾಲಿನಲ್ಲಿ, ನಕಾರಾತ್ಮಕ ಎಂದರೆ ಸ್ವಯಂ-ವಿನಾಶಕಾರಿಯಾದ, ಇತರರಿಗೆ ಮತ್ತು ನಮಗೆ, ದೀರ್ಘಾವಧಿಯಲ್ಲಿ ಸಮಸ್ಯೆಗಳನ್ನು ಮತ್ತು ಅಸಮಾಧಾನವನ್ನು ಉಂಟುಮಾಡುವ ವಿಷಯವಾಗಿರುತ್ತದೆ. ಆದ್ದರಿಂದ, ಬೌದ್ಧ ಆಚರಣೆಯಲ್ಲಿ, ನಾವು ಮಾಡುವ ಮೊಟ್ಟ ಮೊದಲ ಕೆಲಸವೆಂದರೆ, ಇತರರಿಗೆ ಅಥವಾ ನಮಗೆ ಹಾನಿಯುಂಟುಮಾಡದಂತೆ ಇರಲು ಪ್ರಯತ್ನಿಸುವುದಾಗಿರುತ್ತದೆ. ಎರಡನೆಯ ಸಾಲಾದ, ರಚನಾತ್ಮಕವಾದದ್ದನ್ನು ಅದ್ಭುತವಾಗಿ ಜಾರಿಗೊಳಿಸಿಯಲ್ಲಿ, ರಚನಾತ್ಮಕ ಎಂದರೆ ಇತರರಿಗೆ ಮತ್ತು ನಮಗೆ ಒಳ್ಳೆಯದನ್ನು ಮಾಡುವ ಮತ್ತು ಸಂತೋಷವನ್ನು ತರುವ ವಿಷಯವಾಗಿರುತ್ತದೆ. 

ಹೀಗೆ ಮಾಡಲು, ನಿಮ್ಮ ಸ್ವಂತ ಮನಸ್ಸನ್ನು ಸಂಪೂರ್ಣವಾಗಿ ನಿಗ್ರಹಿಸಿ, ಎಂದು ಮೂರನೇ ಸಾಲು ಹೇಳುತ್ತದೆ. ಇದು ನಮ್ಮ ವಿನಾಶಕಾರಿ ಮತ್ತು ರಚನಾತ್ಮಕ ಕ್ರಿಯೆಗಳೆರಡರ ಮೂಲವನ್ನು ಸೂಚಿಸುತ್ತದೆ. ಮೊದಲನೆಯದನ್ನು ತ್ಯಜಿಸಲು ಮತ್ತು ಎರಡನೆಯದನ್ನು ಜಾರಿಗೊಳಿಸಲು, ನಾವು ನಮ್ಮ ಮೇಲೆ ಕೆಲಸ ಮಾಡಬೇಕಾಗುತ್ತದೆ – ಅಂದರೆ ನಮ್ಮ ವರ್ತನೆಗಳು ಮತ್ತು ನಮ್ಮ ಭಾವನೆಗಳು, ಮತ್ತು ಇವುಗಳು ನಮ್ಮ ಮನಸ್ಸಿನಿಂದ ಬರುತ್ತವೆ. ನಮ್ಮ ವರ್ತನೆಗಳು ಮತ್ತು ಭಾವನೆಗಳು, ನಾವು ಇತರರೊಂದಿಗೆ ಹೇಗೆ ಸಂಬಂಧ ಹೊಂದಿದ್ದೇವೆ ಮತ್ತು ಜೀವನದಲ್ಲಿ ನಾವು ಹೇಗೆ ವರ್ತಿಸುತ್ತೇವೆ, ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದು ಕೊನೆಯ ಸಾಲಾಗಿರುತ್ತದೆ - ಇವೇ ಬುದ್ಧನ ಬೋಧನೆಗಳು

ವಾಸ್ತವವನ್ನು ಅರ್ಥಮಾಡಿಕೊಳ್ಳುವುದು

ನನ್ನ ಬೌದ್ಧ ಶಿಕ್ಷಕ ಮಿತ್ರರೊಬ್ಬರು ಸೂಚಿಸಿದಂತೆ, ನಾವು ಸ್ವಲ್ಪ ಹೆಚ್ಚು ಆಳವಾಗಿ ನೋಡಿದರೆ, ಬೌದ್ಧಧರ್ಮದ ಮೂಲ ವಿಧಾನವು ವಾಸ್ತವಿಕವಾಗಿರುವುದಾಗಿರುತ್ತದೆ: ವಾಸ್ತವ ಏನೆಂದು ತಿಳಿದುಕೊಳ್ಳಿ ಮತ್ತು ಅದನ್ನು ವಾಸ್ತವಿಕ ರೀತಿಯಲ್ಲಿ ನಿಭಾಯಿಸಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ನಡವಳಿಕೆ ಮತ್ತು ತಿಳುವಳಿಕೆ ವಾಸ್ತವವನ್ನು ಆಧರಿಸಿರಬೇಕು. 

ವಾಸ್ತವ ಎಂದರೇನು? ವಾಸ್ತವವು ಕಾರಣ ಮತ್ತು ಪರಿಣಾಮವಾಗಿರುತ್ತದೆ ಅಥವಾ "ಅವಲಂಬಿತವಾದ ಉದ್ಭವ" ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಕಾರಣ ಮತ್ತು ಪರಿಣಾಮದ ಆಧಾರದ ಮೇಲೆ ವಿಷಯಗಳು ಉದ್ಭವಿಸುತ್ತವೆ ಅಥವಾ ಸಂಭವಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ವಿನಾಶಕಾರಿ ಅಥವಾ ರಚನಾತ್ಮಕ ಕ್ರಿಯೆಗಳು, ಕಾರಣಗಳಿಂದ ಹುಟ್ಟುತ್ತವೆ. ನಾವು ನಮ್ಮ ನಡವಳಿಕೆಯನ್ನು ಗಮನಿಸಿದರೆ, ಅದು ನಮಗೆ ಮತ್ತು ಇತರರಿಗೆ, ಸಮಸ್ಯೆಗಳನ್ನು ಉಂಟುಮಾಡುತ್ತದೆ ಅಥವಾ ಹೆಚ್ಚಿನ ಸಂತೋಷ ಮತ್ತು ಪ್ರಯೋಜನವನ್ನು ತರುತ್ತದೆ ಎಂದು ನಾವು ತಿಳಿಯುತ್ತೇವೆ. ಆದರೆ ನಾವು ನಮ್ಮ ನಡವಳಿಕೆಯನ್ನು, ಪೂರ್ವಾಗ್ರಹಗಳಿಲ್ಲದೆ ನೋಡಬೇಕು. ನಾವು ಜೀವನದೊಂದಿಗೆ ವ್ಯವಹರಿಸುವಾಗ, ಪೂವರ್ವಾಗ್ರಹರಹಿತವಾಗಿರುವುದು ಬಹಳಾ ಮುಖ್ಯ. 

ಬೌದ್ಧ ನೀತಿಗಳು, ಯಾವುದೋ ದೈವಿಕ ಜೀವಿಗಳು ಒದಗಿಸಿದ ಅಥವಾ ಕೆಲವು ಶಾಸಕರು ಅಥವಾ ಆಡಳಿತಗಾರರು ನೀಡಿದ ಕಾನೂನುಗಳನ್ನು ಅನುಸರಿಸುವುದನ್ನು ಆಧರಿಸಿರುವುದಿಲ್ಲ. ಅಂತಹ ಕಾನೂನು ಆಧಾರಿತ ನೈತಿಕತೆಯನ್ನು ನಾವು ಹೊಂದಿದ್ದರೆ, ನಮಗೆ ತೀರ್ಪುಗಳಿರುತ್ತಿದ್ದವು. ನಾವು ಕಾನೂನುಗಳು ಮತ್ತು ನಿಯಮಗಳನ್ನು ಪಾಲಿಸಿದರೆ, ನಮ್ಮನ್ನು ಒಳ್ಳೆಯವರೆಂದು ಪರಿಗಣಿಸಲಾಗುತ್ತದೆ ಮತ್ತು ಪ್ರತಿಫಲವನ್ನು ಪಡೆಯುತ್ತೇವೆ; ನಾವು ಅವುಗಳನ್ನು ಪಾಲಿಸದಿದ್ದರೆ - ನಾವು ಕಾನೂನುಗಳನ್ನು ಉಲ್ಲಂಘಿಸಿದರೆ - ನಮ್ಮನ್ನು ಕೆಟ್ಟವರೆಂದೂ, ಶಿಕ್ಷೆಗೊಳಗಾಗಲು ಅರ್ಹರೆಂದು ಪರಿಗಣಿಸಲಾಗುತ್ತದೆ. ಇದು ಬೌದ್ಧ ನೀತಿ ಅಥವಾ ಬೌದ್ಧ ಜೀವನದೊಂದಿಗೆ ವ್ಯವಹರಿಸುವ ವಿಧಾನವಾಗಿರುವುದಿಲ್ಲ. ನಾವು ನಮ್ಮ ಬಗ್ಗೆ ಅತಿಯಾಗಿ ವಿಮರ್ಶಾತ್ಮಕವಾದಾಗ, ಇದನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ನಮ್ಮ ಮನೋಭಾವದಲ್ಲಿ ಆಗಬೇಕಾದ ಆಳವಾದ ಬದಲಾವಣೆಗಳಲ್ಲಿ ಇದು ಒಂದಾಗಿರುತ್ತದೆ: ನಮ್ಮ ಬಗ್ಗೆ ಅತಿಯಾಗಿ ವಿಮರ್ಶಾತ್ಮಕವಾಗಿರುವುದನ್ನು ನಿಲ್ಲಿಸಬೇಕು - ಉದಾಹರಣೆಗೆ, ನಾವು ಕೆಟ್ಟವರು, ಒಳ್ಳೆಯವರಲ್ಲ, ಬೇಕಾದಷ್ಟು ಒಳ್ಳೆಯವರಲ್ಲ ಅಥವಾ ನಾವು ಬಹಳಾ ಭಯಂಕರವಾದ ತಪ್ಪನ್ನು ಮಾಡಿದ್ದೇವೆ ಎಂದ ಭಾವಿಸುವುದನ್ನು ನಿಲ್ಲಿಸಬೇಕು. 

ಬದಲಾಗಿ, ನಮ್ಮ ಜೀವನವನ್ನು ವ್ಯವಹರಿಸುವ ವಿಧಾನವನ್ನು, ಕಾರಣ ಮತ್ತು ಪರಿಣಾಮದ ದೃಷ್ಟಿಯಿಂದ ನೋಡಬೇಕಾಗಿದೆ. ನಾವು ಸಮಸ್ಯೆಗಳನ್ನು ಉಂಟುಮಾಡಿದರೆ ಮತ್ತು ಗೊಂದಲಕ್ಕೊಳಗಾಗಿದ್ದರೆ, ಇದು ಕಾರಣಗಳು ಮತ್ತು ಪರಿಸ್ಥಿತಿಗಳಿಂದಾಗಿ ಉದ್ಭವಿಸುತ್ತದೆ. ನಾವು ಕೆಟ್ಟವರು ಎಂಬ ಕಾರಣಕ್ಕಾಗಿ ಅಲ್ಲ. ನಾವು ಆಳವಾಗಿ ನೋಡಿದರೆ, ನಾವು ಪರಿಸ್ಥಿತಿಯ ಬಗ್ಗೆ ಗೊಂದಲಕ್ಕೊಳಗಾಗಿದ್ದೇವೆ ಎಂದು ನಾವು ಕಂಡುಕೊಳ್ಳುತ್ತೇವೆ; ನಮಗೆ ವಿಷಯ ಅರ್ಥವಾಗಿರುವುದಿಲ್ಲ. ಅಂತಿಮವಾಗಿ, ಇದು ಪ್ರಕ್ಷೇಪಣಗಳ ಬಗ್ಗೆಯಾಗಿರುತ್ತದೆ. ನಾವು ವಿಷಯಗಳನ್ನು ಉತ್ಪ್ರೇಕ್ಷಿಸಲು ಇಚ್ಛಿಸುತ್ತೇವೆ ಮತ್ತು ನಮ್ಮ ಮೇಲೆ, ಸನ್ನಿವೇಶಗಳ ಮೇಲೆ ಮತ್ತು ನಮ್ಮ ಸುತ್ತಮುತ್ತಲಿನ ಜನರ ಮೇಲೆ ಎಲ್ಲಾ ರೀತಿಯ ಅಸಂಬದ್ಧತೆಗಳನ್ನು ಹೇರುತ್ತೇವೆ. ನಂತರ, ಈ ಪ್ರಕ್ಷೇಪಣಗಳು ವಾಸ್ತವಕ್ಕೆ ಅನುಗುಣವಾಗಿರುತ್ತವೆ ಎಂದು ನಾವು ನಂಬುತ್ತೇವೆ, ಆದರೆ ಹಾಗಾಗಿರುವುದಿಲ್ಲ. ನಾವು ವಿನಾಶಕಾರಿ ರೀತಿಯಲ್ಲಿ ಏಕೆ ವರ್ತಿಸುತ್ತಿದ್ದೇವೆ ಎಂದು ನಮ್ಮನ್ನು ನಾವು ಪರೀಕ್ಷಿಸಿಕೊಂಡರೆ, ಸಾಮಾನ್ಯವಾಗಿ, ಈ ಪರಿಸ್ಥಿತಿಯಲ್ಲಿ ಒಳಗೊಂಡಿರುವ ವಿಷಯದ ಮೇಲೆ, ಒಂದು ರೀತಿಯ ಅಸಂಬದ್ಧತೆಯನ್ನು ನಾವು ಪ್ರಕ್ಷೇಪಿಸಿದ್ದೇವೆ ಎಂಬುದನ್ನು ನಾವು ಕಂಡುಕೊಳ್ಳಬಹುದು, ಮತ್ತು ಈ ನಮ್ಮ ಪ್ರಕ್ಷೇಪಣಗಳಿಗೆ ನಾವು ಪ್ರತಿಕ್ರಿಯಿಸುತ್ತಿದ್ದೇವೆ ಎಂಬುದನ್ನು ಕಂಡುಕೊಳ್ಳಬಹುದು.  

ಎರಡು ಸತ್ಯಗಳು 

ಇತ್ತೀಚೆಗೆ, ಪರಮಪೂಜ್ಯ ದಲೈ ಲಾಮಾ ಅವರು, ಜನರ ಜೀವನಗಳಲ್ಲಿ ಸಮಸ್ಯೆಗಳು ಕಡಿಮೆಯಾಗುವಂತೆ ಸಹಾಯ ಮಾಡುವ ಸಾರ್ವತ್ರಿಕ ಮಾರ್ಗ ಯಾವುದು ಎಂಬುದರ ಕುರಿತು ಹೆಚ್ಚಾಗಿ ಮಾತುಕತೆ ನಡೆಸುತ್ತಿದ್ದಾರೆ. ಇಲ್ಲಿ ಅವರು ಕೇವಲ ಬೌದ್ಧ ಪ್ರೇಕ್ಷಕರಿಗೆ ಸೀಮಿತಗೊಳ್ಳದೆ, ಸಾರ್ವತ್ರಿಕವಾದ ಕಾಳಜಿಯಿಂದ ಮಾತನಾಡುತ್ತಿದ್ದಾರೆ. ನಾವು ಎರಡು ಸತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಪ್ರಾರಂಭಿಸಬೇಕು ಎಂದು ಅವರು ಹೇಳುತ್ತಾರೆ. ಇದು ಅತ್ಯಂತ ಮೂಲಭೂತವಾದ ವಿಷಯವಾಗಿದೆ. ನಾವು ಎರಡು ಸತ್ಯಗಳನ್ನು ತೀರಾ ಅತ್ಯಾಧುನಿಕವಾದ ರೀತಿಯಲ್ಲಿ ನೋಡಬೇಕಾಗಿಲ್ಲ, ಬದಲಿಗೆ ಎಲ್ಲರೂ ಸಂಬಂಧಿಸಬಹುದಾದ ಮೂಲಭೂತ ರೀತಿಯಲ್ಲಿ ನೋಡಬೇಕಾಗಿದೆ. ಒಂದೆಡೆ, ನಮ್ಮ ಉತ್ಪ್ರೇಕ್ಷೆಗಳ ಅಥವಾ ಕಾಡು ಕಲ್ಪನೆಗಳ ಆಧಾರದ ಮೇಲಿನ ಪ್ರಕ್ಷೇಪಣಗಳಿವೆ; ಮತ್ತೊಂದೆಡೆ, ವಾಸ್ತವವಿದೆ. ಇವೇ ಎರಡು ಸತ್ಯಗಳು. 

ನಾವು ರೆಸ್ಟೊರೆಂಟ್‌ನಲ್ಲಿ ಸೇವಿಸಲು ಇಚ್ಛಿಸುವ ಆಹಾರವು ಮುಗಿದುಹೋಗಿದ್ದರೆ ಅಥವಾ ನಾವು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು, ನಾವು ಎಂದಿಗೂ ಮನೆ ತಲುಪುವುದಿಲ್ಲ ಎಂದು ನಾವು ಭಾವಿಸಿದಾಗ, ಗೊಂದಲಕ್ಕೊಳಗಾದ ನಮ್ಮ ಮನಸ್ಸಿಗೆ, "ನಾನು ಸೋತವನು, ನಾನು ನಿಷ್ಪ್ರಯೋಜಕ, ಯಾರೂ ನನ್ನನ್ನು ಪ್ರೀತಿಸುವುದಿಲ್ಲ" ಅಥವಾ "ಇದೇ ವಿಶ್ವದ ಅತಿದೊಡ್ಡ ವಿಪತ್ತು" ಎಂಬಂತಹ ಪ್ರಕ್ಷೇಪಣಗಳು ನಿಜವೆಂದು ತೋರುತ್ತದೆ. ಇವುಗಳು ಸಂಭವಿಸಬಹುದಾದ ಅತ್ಯಂತ ಭಯಾನಕ ಸಂಗತಿಗಳು ಮತ್ತು ನಾವು ಟ್ರಾಫಿಕ್‌ನಲ್ಲಿ ಶಾಶ್ವತವಾಗಿ ಸಿಲುಕಿಕೊಂಡಿರುತ್ತೇವೆ, ಎಂದು ನಾವು ಉತ್ಪ್ರೇಕ್ಷಿಸುತ್ತೇವೆ. ನಾವು ಈ ಪ್ರಕ್ಷೇಪಣಗಳನ್ನು ನಿಜವೆಂದು ಪರಿಗಣಿಸುತ್ತೇವೆ. ಇದು ಸಾಂಪ್ರದಾಯಕ ಸತ್ಯವಾಗಿರುತ್ತದೆ: ಗೊಂದಲಕ್ಕೊಳಗಾದ ಮನಸ್ಸು, ತಪ್ಪಾಗಿ ಪರಿಗಣಿಸುವುದನ್ನೇ ನಿಜವೆಂದು ಒಪ್ಪಿಕೊಳ್ಳುವುದು.

ಇನ್ನೊಂದೆಡೆ, ಆಳವಾದ ಸತ್ಯವಾದ ವಾಸ್ತವವಿದೆ. ವಾಸ್ತವವೆಂದರೆ, ಕಾರಣಗಳು ಮತ್ತು ಸಂದರ್ಭಗಳಿಂದಾಗಿ ಟ್ರಾಫಿಕ್ ಉಂಟಾಗಿದೆ; ಇದು ರಶ್ ಆವರ್ ಆಗಿದ್ದು, ಪ್ರತಿಯೊಬ್ಬರೂ ಮನೆಗೆ ಹೋಗಲು ಚಡಪಡಿಸುತ್ತಾರೆ. ನಾವು ಬೇರೆ ಏನನ್ನು ನಿರೀಕ್ಷಿಸಲಾಗುತ್ತದೆ? ಚಳಿಗಾಲದಲ್ಲಿ ಚಳಿಯಿದೆ ಎಂದು ದೂರುವಂತಾಗಿರುತ್ತದೆ. ಚಳಿಗಾಲದಲ್ಲಿ ಚಳಿಯನ್ನು ಬಿಟ್ಟು ಬೇರೆ ಏನನ್ನು ನಿರೀಕ್ಷಿಸಲಾಗುತ್ತದೆ? ಇದುವು ಹಾಗೆಯೇ ಇರುತ್ತದೆ. 

ನಮಗೆ ಎರಡು ಸತ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಬೇಕು ಮತ್ತು ನಾವು ಉತ್ಪ್ರೇಕ್ಷೆ ಮತ್ತು ಅಸಂಬದ್ಧತೆಯನ್ನು ಪ್ರಕ್ಷೇಪಿಸುತ್ತಿದ್ದೇವೆ ಎಂದು ಗುರುತಿಸಿದಾಗ, ಈ ಅಸಂಬದ್ಧತೆಯನ್ನು ವಿಮರ್ಶಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಾವು ಎರಡು ಸತ್ಯಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ತಿಳುವಳಿಕೆಯನ್ನು ನಮ್ಮ ಜೀವನದಲ್ಲಿ ಸಂಯೋಜಿಸಬೇಕು. ಇದು ಅತ್ಯಗತ್ಯ. 

ಪ್ರಾರ್ಥನೆಯ ಮುಂದಿನ ಸಾಲಿನಲ್ಲಿ ಇದೇ ಅಂಶವನ್ನು ಸೂಚಿಸಲಾಗುತ್ತದೆ: 

ನಕ್ಷತ್ರಗಳಂತೆ, ಮಸುಕಿನಂತೆ, ಅಥವಾ (ಗಿರಿಗಿರಿ ಸುತ್ತುವ) ಪಂಜಿನಂತೆ, ಭ್ರಮೆಯಂತೆ, ಇಬ್ಬನಿಯ ಹನಿಗಳಂತೆ, ಅಥವಾ ನೀರ್ಗುಳ್ಳೆಯಂತೆ, ಕನಸಿನಂತೆ, ಮೋಡಗಳ ಅಥವಾ ಮಿಂಚಿನ ಮಿಂಚಿನಂತೆ, ಪ್ರಭಾವಿತ ವಿದ್ಯಮಾನಗಳನ್ನು ಪರಿಗಣಿಸಿ. 

ನಮ್ಮ ಜೀವನದಲ್ಲಿ, , ಒಂದು ಚಿಕ್ಕ ವಿಷಯವನ್ನು ನಾವು ಉತ್ಪ್ರೇಕ್ಷಿಸುವಾಗ ಮತ್ತು ಪ್ರಕ್ಷೇಪಿಸುವಾಗ, ಅದನ್ನು ನಾವು ಗುರುತಿಸಬೇಕಾಗಿದೆ. ನಿಜವಾಗಿ ತೋರುವುದು ಒಂದು ಭ್ರಮೆ, ಕನಸು, ನೀರ್ಗುಳ್ಳೆಯಂತೆ ಇರುವುದು ಎಂಬುದನ್ನು ನಾವು ಗುರುತಿಸಬೇಕು. ಇದು ತೋರಿಕೆಯಲ್ಲಿರುವಂತೆ, ವಾಸ್ತವದಲ್ಲಿ ಘನವಾಗಿವಾಗಿರುವುದಿಲ್ಲ. ಆದ್ದರಿಂದ, ಇದು ವಾಸ್ತವಕ್ಕೆ ಅನುಗುಣವಾಗಿದೆ ಎಂದು ನಾವು ನಂಬುವುದಿಲ್ಲ. ಅದನ್ನು ನಂಬದಿರುವುದು ನಮ್ಮ ಕಲ್ಪನೆಯ ಬಲೂನ್ ಅನ್ನು ಒಡೆಯುವಂತಾಗಿರುತ್ತದೆ. 

ಪ್ರಕ್ಷೇಪಣೆ 

ಮೂಲಭೂತವಾಗಿ, ಎರಡು ರೀತಿಯ ಪ್ರಕ್ಷೇಪಣಗಳಿರುತ್ತವೆ; ಕೆಲವು ಉಪಯುಕ್ತವಾಗಿರುತ್ತವೆ, ಮತ್ತು ಇತರವು ಹಾನಿಕಾರಕವಾಗಿರುತ್ತವೆ. ಯಾವ ಪ್ರಕ್ಷೇಪಣಗಳು ಉಪಯುಕ್ತವಾಗಿರುತ್ತವೆ? ನಾವು ಸಕಾರಾತ್ಮಕವಾದ ಅಥವಾ ತಟಸ್ಥ ಉದ್ದೇಶವನ್ನು ಹೊಂದಿರಬಹುದು; ಉದಾಹರಣೆಗೆ, ನಾವು ಪ್ರವಾಸವನ್ನು ಆಯೋಜಿಸುವ ಉದ್ದೇಶವನ್ನು ಹೊಂದಿರಬಹುದು. ನಾವು ಇಲ್ಲಿಂದ ಅಲ್ಲಿಗೆ ಪ್ರಯಾಣಿಸಲಿದ್ದು, ಭವಿಷ್ಯದ ಬಗ್ಗೆ ಯೋಚಿಸುತ್ತೇವೆ. ಅದು ಪ್ರಕ್ಷೇಪಣೆಯಾಗಿರುತ್ತದೆ: ನಾವು ಇದನ್ನು ಅಥವಾ ಅದನ್ನು ಮಾಡಬೇಕಾಗಿದೆ, ಇದನ್ನು ಅಥವಾ ಅದನ್ನು ನಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಾಗಿದೆ, ಕಾಯ್ದಿರಿಸುವಿಕೆ ಮಾಡಬೇಕಾಗಿದೆ, ಇತ್ಯಾದಿ. ಕೆಲಸದ ದಿನಚರಿ ಅಥವಾ ಅಂಗಡಿಗಾಗಿ ಬೇಕಾದ ಶಾಪಿಂಗ್ ಪಟ್ಟಿಗೂ ಸಹ, ಈ ರೀತಿಯ ಪ್ರಕ್ಷೇಪಣೆಯನ್ನು ಅನ್ವಯಿಸಬಹುದು. ಇವುಗಳು, ನಾವು ಏನು ಮಾಡಲು ಉದ್ದೇಶಿಸಿದ್ದೇವೆ ಎಂಬುದರ ಕುರಿತಾದ ಪ್ರಕ್ಷೇಪಣೆಗಳಾಗಿರುತ್ತವೆ, ನಾವು ಒಂದು ಕಾರ್ಯವನ್ನು ಹೇಗೆ ಸಾಧಿಸುತ್ತೇವೆ ಎಂಬುದರ ಪ್ರಕ್ಷೇಪಣೆಯಾಗಿರುತ್ತದೆ. ಒಂದು ವರ್ಷದ ಕೆಲಸದಲ್ಲಿ ನಾವು ಏನನ್ನು ಸಾಧಿಸಬೇಕು ಎಂಬುದರ ಪ್ರಕ್ಷೇಪಣೆಯನ್ನು ಆಗಾಗ್ಗೆ ರಚಿಸುತ್ತಿರುತ್ತೇವೆ.   

ಆದರೆ, ನಮ್ಮ ಪ್ರಕ್ಷೇಪಣೆಯಲ್ಲಿನ ಯೋಜನೆಯು ಕನಸಿನಂತೆ ಇರುವುದು ಎಂಬುದನ್ನು ನಾವು ಅರಿತುಕೊಳ್ಳಬೇಕು. ಪ್ರಾಯೋಗಿಕ ಮಟ್ಟದಲ್ಲಿ ಇದರ ಅರ್ಥವೇನು? ಇದರರ್ಥ ನಾವು ಹೊಂದಿಕೊಳ್ಳಲು ತಯಾರಾಗಿರಬೇಕು. ಪ್ರಾರ್ಥನೆಯಲ್ಲಿ ಹೇಳುವಂತೆ, ಇವುಗಳು ಪ್ರಭಾವಿತ ವಿದ್ಯಮಾನಗಳಾಗಿರುತ್ತವೆ. ಅವುಗಳು ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತವೆ; ಅವುಗಳನ್ನು ಕೆಲವೊಮ್ಮೆ "ನಿಯಂತ್ರಿತ ವಿದ್ಯಮಾನಗಳು" ಎಂದೂ ಕರೆಯಲಾಗುತ್ತದೆ. ಕಾರಣಗಳು ಮತ್ತು ಪರಿಸ್ಥಿತಿಗಳ ಆಧಾರದ ಮೇಲೆ, ವಿಷಯಗಳು ಉದ್ಭವಿಸುತ್ತವೆ, ಆದ್ದರಿಂದ ನಾವು ಯೋಜನೆಯೊಂದನ್ನು ತಯಾರಿಸಿದಾಗ, ಅವುಗಳು ಸನ್ನಿವೇಶದ ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತರಾಗಬಹುದು ಮತ್ತು ಬದಲಾಗಬಹುದು. ಬದಲಾವಣೆಯ ಉದಾಹರಣೆಯೆಂದರೆ, ನಮಗೆ ನಿರ್ದಿಷ್ಟವಾಗಿ ಬೇಕಾದ ವಿಮಾನದಲ್ಲಿ ಆಸನಗಳು ಲಭ್ಯವಾಗದೇ ಇರುವುದು. ಆ ವಿಮಾನವನ್ನು ಉಪಯೋಗಿಸಲು ನಾವು ಯೋಜಿಸಿದ್ದರೂ, ನಾವು ನಮ್ಮ ಯೋಜನೆಯನ್ನು ಬದಲಾಯಿಸಬೇಕಾಗಿರುತ್ತದೆ. ಅದರ ಬಗ್ಗೆ ದೂರುವ ಬದಲು ಮತ್ತು ಅಸಮಾಧಾನಗೊಳ್ಳುವ ಬದಲು, ನಾವು ವಾಸ್ತವವನ್ನು ಒಪ್ಪಿಕೊಳ್ಳಬೇಕು. ಹೀಗೆ ಮಾಡಲು ನಾವು ನಮಗೆ ತರಬೇತಿ ನೀಡಬೇಕಾಗಿದೆ. ನಾವು ನಮ್ಮ ಮೂಲ ಯೋಜನೆಯಲ್ಲಿ ಸಿಲುಕಿಕೊಂಡಾಗ, ಮೂಲ ಯೋಜನೆಯು ಭ್ರಮೆಯಂತೆ ಅಥವಾ ನೀರ್ಗುಳ್ಳೆಯಂತೆ ಮತ್ತು ಪ್ರಾರ್ಥನೆಯಲ್ಲಿನ ಸಾದೃಶ್ಯಗಳಂತೆ ಎಂದು ಅರಿತುಕೊಳ್ಳುವ ನಮ್ಯತೆಯನ್ನು ಹೊಂದಿಲ್ಲದಿದ್ದರೆ, ನಾವು ಅದನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತೇವೆ. 

ಅದು ಏನನ್ನು ಉತ್ಪಾದಿಸುತ್ತದೆ? ಇದು ಅತ್ಯಂತ ಅತೃಪ್ತ ಮನಸ್ಥಿತಿಯನ್ನು ಉತ್ಪಾದಿಸುತ್ತದೆ. ನಾವು ತುಂಬಾ ಕೋಪಗೊಳ್ಳಬಹುದು ಅಥವಾ ನಿರಾಶೆಗೊಳ್ಳಬಹುದು. ಇದು ನಮ್ಮನ್ನು ಶೋಚನೀಯವಾಗಿಸುತ್ತದೆ ಮತ್ತು ಪರಿಸ್ಥಿತಿಯನ್ನು ಸ್ವಲ್ಪವೂ ಬದಲಾಯಿಸುವುದಿಲ್ಲ. ನಾವು ಟ್ರಾಫಿಕ್ನಲ್ಲಿ ಸಿಲುಕಿಕೊಂಡಾಗ ಅದನ್ನು ಶಪಿಸುವುದರಿಂದ ಯಾವುದೇ ಸಹಾಯವಾಗುವುದಿಲ್ಲ; ಹಾರ್ನ್ ಮಾಡುವುದು ಸಹಾಯ ಮಾಡುವುದಿಲ್ಲ. ನಾವು ನಿರೀಕ್ಷಿಸಿದ ಪರಿಸ್ಥಿತಿ ಬದಲಾಗಿದೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದು ಮಾತ್ರ ಸಹಾಯ ಮಾಡುತ್ತದೆ. ಉದಾಹರಣೆಗೆ, ನಾವು ಒಂದು ನಿರ್ದಿಷ್ಟ ಸಮಯದಲ್ಲಿ ತಲುಪಲು ಯೋಜಿಸಿದ್ದೇವೆ; ರೈಲು ತಪ್ಪಿಸಿಕೊಂಡರೆ ಅಥವಾ ರೈಲು ತಡವಾದರೆ, ಅದರ ಬಗ್ಗೆ ನಾವು ಏನೂ ಮಾಡಲಾಗುವುದಿಲ್ಲ. ಹೀಗೆ ಬೋಧನೆಗಳನ್ನು, ನಮ್ಮ ಜೀವನದಲ್ಲಿ ಉಪಯುಕ್ತವಾಗುವ ರೀತಿಯಲ್ಲಿ ನಾವು ಅನ್ವಯಿಸುತ್ತೇವೆ. 

ವಿಷಯಗಳನ್ನು ಪರಿಗಣಿಸುವ ಸರಿಯಾದ ಮತ್ತು ತಪ್ಪಾದ ಮಾರ್ಗವಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಬದಲಾಗುತ್ತಿರುವ ಪರಿಸ್ಥಿತಿಗಳಿಂದ ನಿರಂತರವಾಗಿ ಪರಿಣಾಮಗೊಳ್ಳುವ ವಿಷಯವು ನಿಶ್ಚಲ ಮತ್ತು ಸ್ಥಿರವಾಗಿದೆ ಎಂದು ಯೋಚಿಸುವುದು ತಪ್ಪಾದ ಮಾರ್ಗವಾಗಿದೆ – ಉದಾಹರಣೆಗೆ, ಕೆಲವು ಯೋಜನೆಗಳು ಸ್ಥಿರವಾಗಿರಬೇಕು ಎಂದು ಯೋಚಿಸುವುದು. ಹಾಗೆ ಯೋಚಿಸುವುದು ಬಹಳಾ ಸಾಮಾನ್ಯವಾದ ವಿಷಯ. ಯೋಜನೆಗಳನ್ನು ಬದಲಾಯಿಸಬೇಕಾದಾಗ ಮತ್ತು ನಮ್ಮ ಯೋಜನೆಗೆ ಅನುಗುಣವಾಗಿ ನಡೆಯದಿದ್ದಾಗ, ನಾವು ಬದಲಾವಣೆಗಳಿಗಾಗಿ ಸಿದ್ಧರಾಗಿರಬೇಕು. ಉದಾಹರಣೆಗೆ, ನಾವು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳಬಹುದು ಅಥವಾ ಜನರು ಭೇಟಿವ್ಯವಸ್ಥೆ ಇತ್ಯಾದಿ ವಿಷಯಗಳನ್ನು ರದ್ದುಗೊಳಿಸಬಹುದು. ಇದಕ್ಕಾಗಿ, ಎನ್ಗೇಂಜಿಗ್ ವಿತ್ ಬೋಧಿಸತ್ವ ಬಿಹೇವಿಯರ್ (ಬೋಧಿಸತ್ವ ವರ್ತನೆಯಲ್ಲಿ ತೊಡಗಿಸಿಕೊಳ್ಳುವುದು)ರಲ್ಲಿ, ಶಾಂತಿದೇವ ಉತ್ತಮ ಸಲಹೆಯನ್ನು ನೀಡುತ್ತಾರೆ: 

ಅದನ್ನು ನಿವಾರಿಸಲು ಸಾಧ್ಯವಾದರೆ, ಅದರ ಬಗ್ಗೆ ಶೋಚನೀಯ ಮನಸ್ಥಿತಿಯಲ್ಲಿ ಏಕೆ ಇರಬೇಕು? ಮತ್ತು ಅದನ್ನು ನಿವಾರಿಸಲಾಗದಿದ್ದರೆ, ಅದರ ಬಗ್ಗೆ ಶೋಚನೀಯ ಮನಸ್ಥಿತಿಯಲ್ಲಿರುವುದರಿಂದ ಹೇಗೆ ಸಹಾಯವಾಗುತ್ತದೆ?  

ಇದು ಅತ್ಯಂತ ಮೂಲಭೂತವಾದ ಸಲಹೆಯಾಗಿದೆ, ಇದನ್ನು ನಾವು ಜೀರ್ಣಿಸಿಕೊಂಡು, ನಮ್ಮ ಜೀವನವನ್ನು ವ್ಯವಹರಿಸುವ ರೀತಿಯ ಭಾಗವನ್ನಾಗಿ ಮಾಡಬೇಕಾಗಿದೆ. ನಾವು ಜೀವನದಲ್ಲಿ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ ಮತ್ತು ನಾವು ಅದನ್ನು ಬದಲಾಯಿಸಬಹುದಾದರೆ, ಅದನ್ನು ಸುಮ್ಮನೆ ಬದಲಾಯಿಸಿ. ನಾವು ಅದನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ ಮತ್ತು ಅದರ ಬಗ್ಗೆ ನಾವು ಏನೂ ಮಾಡಲಾಗದಿದ್ದರೆ, ಆಗ ಅಸಮಾಧಾನಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಉದಾಹರಣೆಗೆ, ನಮ್ಮ ಪ್ರವಾಸದಲ್ಲಿ, ನಮ್ಮ ಸಾಮಾನು ಕಳೆದುಹೋಗಿದೆ ಮತ್ತು ಕೆಲವು ದಿನಗಳವರೆಗೆ ನಾವು ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಾವು ಆ ವಾಸ್ತವವನ್ನು ಒಪ್ಪಿಕೊಳ್ಳಬೇಕು.  

ಕೆಲವು ವಾರಗಳ ಹಿಂದೆ, ನನಗೆ ಒಂದು ಬಹಳಾ ಆಸಕ್ತಿದಾಯಕವಾದ ಅನುಭವವಾಯಿತು. ಹಾಲೆಂಡ್‌ನಲ್ಲಿ ಪರಮಪೂಜ್ಯ ದಲೈ ಲಾಮಾ ಅವರ ಬೋಧನೆಗಳನ್ನು ಪ್ರಚಾರಿಸಲು ಪ್ರಯಾಣಿಸುತ್ತಿದ್ದೆ. ನಾನು ಆಮ್‌ಸ್ಟರ್‌ಡ್ಯಾಮ್‌ಗೆ ತಲುಪಲು, ವಿಮಾನ ನಿಲ್ದಾಣಕ್ಕೆ ಹೋದೆ, ಚೆಕ್-ಇನ್‌ಗಾಗಿ ಸಾಲಿನಲ್ಲಿ ಕಾಯುತ್ತಿದ್ದೆ. ಕಂಪ್ಯೂಟರ್ ಸಿಸ್ಟಮ್ ಹಾಳಾಗಿತ್ತು ಮತ್ತು ಬಹಳ ಉದ್ದವಾದ ಸಾಲು ಇತ್ತು. ಪ್ರತಿಯೊಬ್ಬರೂ, ತಮ್ಮ ವಿಮಾನಗಳಿಗಾಗಿ ಸರಿಯಾದ ಸಮಯದಲ್ಲಿ ಚೆಕ್-ಇನ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಭಯಭೀತರಾಗಿದ್ದರು. ಒಂದು ಕ್ಷಣದಲ್ಲಿ, ಸಾಲಿನಲ್ಲಿ ನನ್ನ ಮುಂದೆ ಇದ್ದ ಜನರು ತಮ್ಮ ಟಿಕೆಟ್‌ಗಳು ಮತ್ತು ಪಾಸ್‌ಪೋರ್ಟ್‌ಗಳನ್ನು ಹೊರತೆಗೆದುಕೊಂಡರು, ಮತ್ತು ನಾನು ಅದೇ ರೀತಿ ಮಾಡಲು ಹೋದಾಗ, ನನ್ನ ಪಾಸ್‌ಪೋರ್ಟ್ ಅನ್ನು ನನ್ನೊಂದಿಗೆ ತರಲು ನಾನು ಮರೆತುಬಿಟ್ಟಿದ್ದೆ ಎಂದು ನಾನು ಅರಿತುಕೊಂಡೆ. ಪಾಸ್‌ಪೋರ್ಟ್ ಇಲ್ಲದೆ ಚೆಕ್-ಇನ್ ಮಾಡಲು ನನಗೆ ಸಾಧ್ಯವಿರಲಿಲ್ಲ ಮತ್ತು ನನ್ನ ಬಳಿ ಜರ್ಮನ್ ಐಡಿ ಕಾರ್ಡ್ ಇರಲಿಲ್ಲ. 

ನನ್ನ ಜೀವನದಲ್ಲೇ ಮೊದಲ ಬಾರಿಗೆ ಇಂತಹ ಸಂಗತಿ ಸಂಭವಿಸಿತ್ತು. ನಾನೇನು ಮಾಡಬಹುದು? ನಾನು ವಿಮಾನ ನಿಲ್ದಾಣದಲ್ಲಿದ್ದೆ ಮತ್ತು ವಿಮಾನವನ್ನು ಸರಿಯಾದ ಸಮಯಕ್ಕೆ ಏರಲು, ನನ್ನ ಅಪಾರ್ಟ್ಮೆಂಟ್ಗೆ ಹಿಂತಿರುಗಿ, ನನ್ನ ಪಾಸ್‌ಪೋರ್ಟ್‌ನೊಂದಿಗೆ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಯಾವುದೇ ಮಾರ್ಗವಿರಲಿಲ್ಲ. ಇದರ ಬಗ್ಗೆ ನಾನು ಅಸಮಾಧಾನಗೊಳ್ಳಲೇ? ಅದರಿಂದ ಯಾವುದೇ ಸಹಾಯವಾಗುವುದಿಲ್ಲ. ನಾನು ಕೋಪಗೊಳ್ಳಲೇ? ಅದರಿಂದಲೂ ಸಹಾಯವಾಗುವುದಿಲ್ಲ. ನಾನು ಮಾಹಿತಿ ಮೇಜಿನ ಬಳಿ, ಸ್ವಲ್ಪ ಸಮಯದ ನಂತರ ಯಾವುದದಾರೂ ವಿಮಾನವಿದೆಯೇ ಎಂದು ಕೇಳಿದೆ ಮತ್ತು ಆ ವಿಮಾನ ನಿಲ್ದಾಣದಿಂದ ಒಂದೂ ಇರಲಿಲ್ಲ; ಆದರೆ ಆ ರಾತ್ರಿ, ಪಟ್ಟಣದ ಇನ್ನೊಂದು ಬದಿಯಲ್ಲಿರುವ ಇನ್ನೊಂದು ವಿಮಾನ ನಿಲ್ದಾಣದಿಂದ ಒಂದು ವಿಮಾನ ಇತ್ತು. ಇದರರ್ಥ ನಾನು ಹಾಜರಾಗಲು ಯೋಜಿಸಿದ ಸಂಜೆಯ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಳ್ಳಬೇಕಾಗಿತ್ತು. ಏನು ಮಾಡೋದು? ನಾನು ಮನೆಗೆ ಹಿಂದುರಿಗಿದೆ, ಇನ್ನೊಂದು ವಿಮಾನವನ್ನು ಕಾಯ್ದಿರಿಸಿದೆ, ಮತ್ತು ಆ ಸಂಜೆ, ಆ ವಿಮಾನವೇರಿದೆ ಅಷ್ಟೆ. 

ಈ ರೀತಿಯ ಅನುಭವಗಳು, ನಮ್ಮ ಜೀವನದಲ್ಲಿ ಬೋಧನೆಗಳನ್ನು ನಾವು ಹೇಗೆ ಸಂಯೋಜಿಸಿದ್ದೇವೆ ಎಂಬುದರ ಒಂದು ಪರೀಕ್ಷೆಯಾಗಿರುತ್ತವೆ. ನಾವು ವಿಷಯದ ಬಗ್ಗೆ ಅಸಮಾಧಾನಗೊಂಡು, ವಿಲಕ್ಷಣವಾಗಿ ವರ್ತಿಸುತ್ತೇವೆಯೇ? ನಾವು ಕೋಪಗೊಂಡರೆ, ಅದರಿಂದ ನಮಗೇ ಹಾನಿಯುಂಟಾಗುತ್ತದೆ ಮತ್ತು ಅದು ನಮ್ಮನ್ನು ದುಃಖಿತರನ್ನಾಗಿ ಮಾಡುತ್ತದೆ. ನಾವು ಪರಿಸ್ಥಿತಿಯ ವಾಸ್ತವತೆಯನ್ನು ತಕ್ಷಣವೇ ಒಪ್ಪಿಕೊಳ್ಳಬೇಕು ಮತ್ತು ನಾವು ಮಾಡಬೇಕಾದುದರ ಮೇಲೆ ಗಮನಹರಿಸಬೇಕು. ಪ್ರಾಯೋಗಿಕ ಮಟ್ಟದಲ್ಲಿ, ಬುದ್ಧನ ಅಶಾಶ್ವತತೆಯ ಬೋಧನೆಗಳನ್ನು ನಾವು ಹೀಗೆ ಸಂಯೋಜಿಸಬೇಕು ಮತ್ತು ಬಳಸಿಕೊಳ್ಳಬೇಕು, ಉದಾಹರಣೆಗೆ, ಸಂಜೆಯ ಕಾರ್ಯಕ್ರಮಕ್ಕಾಗಿ, ನಿರ್ದಿಷ್ಟ ವಿಮಾನವನ್ನು ತೆಗೆದುಕೊಳ್ಳಲು, ಆಮ್ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಿಂದ ರೋಟರ್‌ಡ್ಯಾಮ್‌ಗೆ ರೈಲಿನಲ್ಲಿ ಹೋಗಲು ನಾನು ಯೋಜಿಸಿದೆ. ಅದು ಒಂದು ಕನಸಿನಂತೆ ಆಗಿತ್ತು ಮತ್ತು ಆ ರೀತಿಯಾಗಿ ಆಗಲಿಲ್ಲ. ಸರಿ, ಹಾಗಾದರೆ ಈಗ ಒಂದು ಪರ್ಯಾಯ ಯೋಜನೆಯನ್ನು ನಾನು ತಯಾರಿಸಬೇಕು.  

ಇದು ಧ್ಯಾನಕ್ಕಾಗಿ ನೀಡಲಾಗುವ ಮೂಲಭೂತ ಸೂಚನೆಗೆ ಸಂಬಂಧಿಸಿರುತ್ತದೆ: ನಾವು ಯಾವುದೇ ನಿರೀಕ್ಷೆಗಳಿಲ್ಲದೆ ಧ್ಯಾನ ಮಾಡಬೇಕಾಗಿದೆ. ನಮಗೆ ಯಾವುದೇ ನಿರೀಕ್ಷೆಗಳಿಲ್ಲದಿದ್ದರೆ, ನಮಗೆ ಯಾವುದೇ ನಿರಾಶೆಯಿರುವುದಿಲ್ಲ. ಬೌದ್ಧಧರ್ಮದ ಪ್ರಾಯೋಗಿಕ ಅನ್ವಯಕ್ಕೆ ಇದು ಅತ್ಯಂತ ಮೂಲಭೂತವಾಗಿದೆ. 

ನನ್ನ ತಂಗಿಗೆ ಇಬ್ಬರು ಗಂಡು ಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳಿದ್ದಾರೆ. ಅವಳ ಮಕ್ಕಳು ಅಥವಾ ಮೊಮ್ಮಕ್ಕಳು ಅವಳಿಗೆ ಕರೆ ನೀಡುತ್ತಾರೆ ಎಂದು ನಿರೀಕ್ಷಿಸಬಾರದೆಂದು ನಾನು ಅವಳಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ನಾವು ಅದನ್ನು ನಿರೀಕ್ಷಿಸಿದರೆ, ಅವರು ಹಾಗೆ ಮಾಡದಿರುವ ಕಾರಣದಿಂದ ನಾವು ನಿರಾಶೆಗೊಳ್ಳುತ್ತೇವೆ. ಯಾರೊಂದಿಗಾದರೂ ಮಾತನಾಡಲು ನಾವು ಬಯಸಿದರೆ, ನಾವು ಅವರಿಗೆ ಕರೆ ಮಾಡಬಹುದು. ಇದು ಬಹಳಾ ಸರಳವಾಗಿದೆ; ನಾವು ವಾಸ್ತವವನ್ನು ಒಪ್ಪಿಕೊಳ್ಳುತ್ತೇವೆ. ನಾವು ಅದನ್ನು ಬದಲಾಯಿಸಬಹುದಾದರೆ, ಅದನ್ನು ಬದಲಾಯಿಸಿ. ನಾವು ಅದನ್ನು ಬದಲಾಯಿಸಲು ಸಾಧ್ಯವಾಗದಿದ್ದರೆ, ನಾವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಕಳೆದುಹೋದ ಸಾಮಾನುಗಳು, ಅವುಗಳು ತಲುಪುವುದಕ್ಕೂ ಮುನ್ನ ನಮಗೆ ಸಿಗುವುದಿಲ್ಲ. ಅದನ್ನು ನಾವು ಒಪ್ಪಿಕೊಳ್ಳಬೇಕು.  

ಮತ್ತೊಮ್ಮೆ ಹೇಳುವುದಾದರೆ, ಎರಡು ರೀತಿಯ ಪ್ರಕ್ಷೇಪಣಗಳಿರುತ್ತವೆ. ಉಪಯುಕ್ತವಾದದ್ದು - ನಾವು ಕೆಲವು ಯೋಜನೆಗಳನ್ನು ಮಾಡಬೇಕು. ನಾವು ಎಲ್ಲೋ ಹೋಗಬೇಕಾದರೆ, ವಿಮಾನ ಕಾಯ್ದಿರಿಸುವಿಕೆಯನ್ನು ಮಾಡಬೇಕಾಗಿರುತ್ತದೆ. ಆದರೆ ಇತರವುಗಳು, ಉಪಯುಕ್ತವಾಗದೇ ಇರುವುದಲ್ಲದೆ, ಹಾನಿಕಾರಕವಾಗಿರುತ್ತವೆ. 

ಪ್ರತಿಫಲನ ಮತ್ತು ಪ್ರಾಯೋಗಿಕ ಅನ್ವಯ 

ನಮ್ಮ ಹಾನಿಕಾರಕ ಪ್ರಕ್ಷೇಪಗಳನ್ನು ವಿಶ್ಲೇಷಿಸುವ ಮೊದಲು, ನಮ್ಮ ಸ್ವಂತ ಪರಿಸ್ಥಿತಿಯ ಮೇಲೆ ಪ್ರತಿಫಲಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಉತ್ತಮ. ನಾವು ಎಷ್ಟು ಹೊಂದಿಕೊಳ್ಳುವವರಾಗಿದ್ದೇವೆ? ನಾವು ಯೋಜಿಸಿದ ರೀತಿಯಲ್ಲಿ ವಿಷಯಗಳು ನಡೆಯದಿದ್ದಾಗ, ನಾವು ಎಷ್ಟು ಅಸಮಾಧಾನಗೊಳ್ಳುತ್ತೇವೆ? ಒಂದು ನಿಗದಿತ ವೇಳಾಪಟ್ಟಿಯೊಳಗೆ ನಾವು ಎಷ್ಟರ ಮಟ್ಟಿಗೆ ಸಿಲುಕಿಕೊಳ್ಳುತ್ತೇವೆ; ಉದಾಹರಣೆಗೆ, ಈ ಕೆಲಸವನ್ನು, ನಿಖರವಾಗಿ ಇಷ್ಟೇ ಸಮಯದಲ್ಲಿ ಮಾಡಿ ಮುಗಿಸಬೇಕು; ಅಥವಾ ನಾವು ರೆಸ್ಟೋರೆಂಟ್‌ಗೆ ಹೋದಾಗ, ನಾವು ಇಷ್ಟಪಡುವ ನಿಖರವಾದ ಆಹಾರವನ್ನೇ ಸೇವಿಸಬೇಕು ಮತ್ತು ಅದನ್ನು ತ್ವರಿತವಾಗಿ ಬಡಿಸಬೇಕು. ಒಂದು ರೀತಿಯ ಯೋಜನೆ ಮತ್ತು ನಿರೀಕ್ಷೆಗೆ ನಾವು ಎಷ್ಟರ ಮಟ್ಟಿಗೆ ಅಂಟಿಕೊಳ್ಳುತ್ತೇವೆ? ನಾವು ನಿರಾಶೆಗೊಂಡಾಗ ಅದು ಎಷ್ಟು ಅಹಿತಕರವಾಗಿರುತ್ತದೆ ಎಂಬುದನ್ನು ಗಮನಿಸಲು ಪ್ರಯತ್ನಿಸಿ. ನಮ್ಮ ನಿರೀಕ್ಷೆಗಳಿಂದಾಗಿ ನಾವು ನಿರಾಶೆಗೊಳ್ಳುತ್ತೇವೆ. ವಾಸ್ತವದಲ್ಲಿ ವಿಷಯಗಳು ಹೇಗೆ ಕೆಲಸಮಾಡುತ್ತವೆ ಎಂಬುದಕ್ಕೆ ನಮ್ಮ ಯೋಜನೆಯು ಅನುಗುಣವಾಗಿರಬೇಕು ಎಂದು ನಾವು ಭಾವಿಸುತ್ತೇವೆ. 

ಆದರೆ ಎಲ್ಲವೂ ಕಾರಣಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ. ರೆಸ್ಟೋರೆಂಟ್‌ಗಳಲ್ಲಿ, ನಾವು ಬಯಸಿದ ಖಾದ್ಯವು ಖಾಲಿಯಾಗಿರಬಹುದು. ಇವು ಕಾರಣಗಳು ಮತ್ತು ಪರಿಸ್ಥಿತಿಗಳಾಗಿರುತ್ತವೆ. ರೈಲು ತಡವಾಯಿತು; ನಾವು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡೆವು ಮತ್ತು ವಿಮಾನವು ನಮ್ಮ ಕೈತಪ್ಪಿತು. ಇವೆಲ್ಲವೂ ಕಾರಣಗಳು ಮತ್ತು ಪರಿಸ್ಥಿತಿಗಳು. ನೀವು ಎಷ್ಟರ ಮಟ್ಟಿಗೆ ಹೊಂದಿಕೊಳ್ಳುವಿರಿ ಎಂಬುದನ್ನು ಕೆಲವು ನಿಮಿಷಗಳ ಕಾಲ ಪರೀಕ್ಷಿಸಿ. ಇದರ ಮೇಲೆ ನೀವು ಕೆಲಸ ಮಾಡಬೇಕೇ? ಕೇವಲ ಅಶಾಶ್ವತತೆಯ ಬಗ್ಗೆ ಕಲಿಯುವುದು ಅಥವಾ ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಮತ್ತು ಉಸಿರಾಟವು ಅಶಾಶ್ವತವಾಗಿದೆ ಎಂದು ತಿಳಿದುಕೊಳ್ಳುವುದು ಸಾಕಾಗುವುದಿಲ್ಲ. ಇದೆಲ್ಲವೂ ಬಹಳಾ ಒಳ್ಳೆಯದು, ಆದರೆ ನಾವು ಅದನ್ನು ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಬಹುದು? ಇದು ಅಶಾಶ್ವತತೆಯನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ ಇರುವ ನಿರ್ಣಾಯಕ ಅಂಶವಾಗಿರುತ್ತದೆ. 

ಒಂದು ತಟ್ಟೆಯನ್ನು ಬೀಳಿಸುವ ಮತ್ತು ಅದು ಒಡೆದುಹೋಗುವಂತಹ ಪ್ರಾಯೋಗಿಕ ಉದಾಹರಣೆಯೊಂದನ್ನು ಯೋಚಿಸಿ. ಅದಕ್ಕೆ ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆ ಏನಾಗಿರುತ್ತದೆ? ಅಡುಗೆ ಮಾಡುತ್ತಿರುವಾಗ ಅದನ್ನು ಹೊತ್ತಿಸುತ್ತೀರಿ. ನೀವು ಅದನ್ನು ಭಾವನಾತ್ಮಕವಾಗಿ ಹೇಗೆ ಎದುರಿಸುತ್ತೀರಿ? ಇಲ್ಲಿಯೇ ನಮ್ಮ ಪ್ರಗತಿ ಬಹಿರಂಗವಾಗುತ್ತದೆ. ನಾವು ಕಂಪ್ಯೂಟರ್ ಅಥವಾ ಫೋನ್‌ನಲ್ಲಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಅದು ಕೆಲಸ ಮಾಡುವುದಿಲ್ಲ. ನೀವು ತಕ್ಷಣವೇ ಬೇರೆ ಏನಾದರೂ ಪ್ರಯತ್ನಿಸುತ್ತೀರೇ? ಅಥವಾ ನೀವು ಅಸಮಾಧಾನಗೊಳ್ಳುವಿರೇ? ನೀವು ಶಪಿಸುತ್ತೀರೇ? 

ಇವು ಬೋಧನೆಗಳ ಪ್ರಾಯೋಗಿಕ ಅನ್ವಯಗಳಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ ನಾವು ಅಸಮಾಧಾನಗೊಂಡರೆ ಮತ್ತು ಪ್ಲಾನ್ Bಗೆ ಬದಲಾಯಿಸಲು ಸಾಧ್ಯವಾಗದಿದ್ದರೆ - ಫೋನ್, ಕಂಪ್ಯೂಟರ್ ಮತ್ತು ಮುಂತಾದವುಗಳ ಮುಖಾಂತರ ಏನನ್ನಾದರೂ ಮಾಡುವ ಇನ್ನೊಂದು ಮಾರ್ಗ ಇದ್ದೇ ಇರುತ್ತದೆ - ನಾವು ಅಸಮಾಧಾನಗೊಂಡರೆ, ಈ ವಿಷಯಗಳ ಮೇಲೆ ನಾವು ಕೆಲಸ ಮಾಡಬೇಕಾಗಿದೆ ಎಂದು ಇದು ಸೂಚಿಸುತ್ತದೆ. 

ಹಾನಿಕಾರಕ ಪ್ರಕ್ಷೇಪಣೆಗಳು 

ಮೊದಲೇ ಹೇಳಿದಂತೆ, ಎರಡು ರೀತಿಯ ಪ್ರಕ್ಷೇಪಣೆಗಳಲ್ಲಿ, ಒಂದು ಯೋಜನೆ ಮತ್ತು ವೇಳಾಪಟ್ಟಿಯನ್ನು ತಯಾರಿಸಲು ಉಪಯುಕ್ತವಾಗಿರುತ್ತದೆ ಮತ್ತು ಇನ್ನೊಂದು ಹಾನಿಕಾರಕವಾಗಿರುತ್ತದೆ. “ನಾನು ಸೋತವನು; ಯಾರೂ ನನ್ನನ್ನು ಪ್ರೀತಿಸುವುದಿಲ್ಲ; ಈ ವ್ಯಕ್ತಿಯು ಬಹಳಾ ಕೆಟ್ಟ ವ್ಯಕ್ತಿ, ಇತ್ಯಾದಿ” ಹಾನಿಕಾರಕವಾಗಿರುತ್ತದೆ. ಅಥವಾ ನಮ್ಮ ಊಟ ಹೊತ್ತುಹೋಗಿದ್ದರೆ ಅಥವಾ ನಮ್ಮ ರೈಲು ತಪ್ಪಿದ್ದರೆ, ಅದು ಸಂಪೂರ್ಣವಾದ ಅನಾಹುತ ಎಂದು ಯೋಚಿಸುವುದು ಹಾನಿಕಾರಕವಾಗಿರುತ್ತದೆ. ಇಂತಹ ಹಾನಿಕಾರಕ ಪ್ರಕ್ಷೇಪಣೆಗಳು ಉತ್ಪ್ರೇಕ್ಷೆಯನ್ನು ಆಧರಿಸಿರುತ್ತವೆ. 

ಕೋಪದಿಂದ, ನಾವು ಒಂದು ವಿಷಯದ ನಕಾರಾತ್ಮಕ ಗುಣಗಳನ್ನು ಉತ್ಪ್ರೇಕ್ಷಿಸುತ್ತೇವೆ ಮತ್ತು ಅದರ ಬಗ್ಗೆ ದೊಡ್ಡ ಗದ್ದಲ ಮಾಡುತ್ತೇವೆ. ಸುರಂಗಮಾರ್ಗ ಅಥವಾ ಮೆಟ್ರೋದಲ್ಲಿ ಅನೇಕ ಜನರು ಇದನ್ನು ಅನುಭವಿಸಿರುತ್ತಾರೆ: ನಾವು ಮೆಟ್ಟಿಲುಗಳಿಂದ ಕೆಳಗೆ ಇಳಿದಂತೆಯೇ, ರೈಲು ಹೊರಟುಹೋಗುತ್ತದೆ. ನಾವು ಅದನ್ನು ಹೇಗೆ ಎದುರಿಸುತ್ತೇವೆ? ನಾವು ಶಾಪ ಹಾಕುತ್ತೇವೆಯೇ? ಐದು ಅಥವಾ ಹತ್ತು ನಿಮಿಷಗಳ ಕಾಲ ಕಾಯುವುದು ವಿಶ್ವದಲ್ಲಿನ ಅತ್ಯಂತ ಕೆಟ್ಟ ವಿಷಯವಾಗಿರುವುದಿಲ್ಲ. ಆದರೆ ನಾವು ಅದನ್ನು ದೊಡ್ಡ ವಿಷಯವಾಗಿಸಿ, ಕೋಪದಿಂದ ಪ್ರತಿಕ್ರಿಯಿಸುತ್ತೇವೆ ಮತ್ತು ಅಸಮಾಧಾನಗೊಳ್ಳುತ್ತೇವೆ. ಇದು ನಮ್ಮನ್ನು ಅತೃಪ್ತಿಗೊಳಿಸುತ್ತದೆ ಮತ್ತು ಅದರಿಂದ ಸಹಾಯವಾಗುವುದಿಲ್ಲ, ಅಲ್ಲವೇ? 

ದುರಾಶೆ ಮತ್ತು ಬಾಂಧವ್ಯದಿಂದ, ನಾವು ವಿಶ್ವದ ಅತ್ಯಂತ ಅದ್ಭುತವಾದ ವಸ್ತು ಅಥವಾ ಅತ್ಯಂತ ಅದ್ಭುತವಾದ ವ್ಯಕ್ತಿಯೊಂದಿಗೆ ಇದ್ದೇವೆ ಎಂದು ಭಾವಿಸುತ್ತೇವೆ. ನಾವು ಉತ್ಪ್ರೇಕ್ಷೆಗೆ ಒಳಗಾಗಿ, ಪ್ರೀತಿಯೊಳಗೆ ಬೀಳುತ್ತೇವೆ ಮತ್ತು ಆ ವ್ಯಕ್ತಿಯ ಉತ್ತಮ ಉತ್ಪ್ರೇಕ್ಷಿತ ರೀತಿಗಳನ್ನು ಮಾತ್ರ ನೋಡುತ್ತೇವೆ. ಆ ವ್ಯಕ್ತಿಯು ನಮ್ಮ ಉತ್ಪ್ರೇಕ್ಷೆಗಳಿಗೆ ತಕ್ಕಂತೆ ಬದುಕಬೇಕೆಂದು ನಾವು ನಿರೀಕ್ಷಿಸುತ್ತೇವೆ, ಆದರೆ ಹಾಗೆ ಮಾಡಲು ಯಾರಿಗೂ ಸಾಧ್ಯವಿಲ್ಲ. ಆನಂತರ ನಾವು ನಿರಾಸೆಗೊಳ್ಳುತ್ತೇವೆ.  

ಅಂತಹ ವರ್ತನೆಗಳು ಸಮಸ್ಯಾತ್ಮಕವಾಗಿರುತ್ತವೆ. ಸಾಮಾನ್ಯವಾಗಿ ಏನಾಗುತ್ತದೆ ಎಂದರೆ, ನಾವು ವಿಷಯಗಳನ್ನು ಬಹಳಾ ಸಂಕುಚಿತ ದೃಷ್ಟಿಕೋನದಿಂದ ನೋಡುತ್ತೇವೆ. ಉದಾಹರಣೆಗೆ, ನಮ್ಮ ಜೀವನದಲ್ಲಿ ನಾವು ಕೆಲವು ಹೆಜ್ಜೆ ಹಿಂದಿಡಬೇಕಾದಾಗ ಅಥವಾ ಯಾರಾದರೂ ನಮ್ಮನ್ನು ತಿರಸ್ಕರಿಸಿದಾಗ ಅಥವಾ ಯಾರಾದರೂ ನಮಗೆ ಅಹಿತಕರವಾದದ್ದನ್ನು ಮಾಡಿದಾಗ ಇದು ಸಂಭವಿಸಬಹುದು. ನಮ್ಮೊಂದಿಗೆ ಸಂಬಂಧವಿರುವ ವ್ಯಕ್ತಿಯೊಬ್ಬರು ನಮಗೆ ಇಷ್ಟವಿಲ್ಲದದ್ದನ್ನು ಮಾಡಬಹುದು, ನಮ್ಮ ಜನ್ಮದಿನದಂದು ನಮ್ಮನ್ನು ಕರೆ ಮಾಡದಿರಬಹುದು ಅಥವಾ ಕೋಪಗೊಂಡು, ನಮ್ಮ ಮೇಲೆ ರೇಗಾಡಬಹುದು ಅಥವಾ ಈ ರೀತಿಯ ಯಾವುದೇ ವರ್ತನೆಯಾಗಿರಬಹುದು. ನಾವು ಕೇವಲ ಆ ಒಂದು ಘಟನೆಯ ಮೇಲೆ ಕೇಂದ್ರೀಕರಿಸುತ್ತೇವೆ. ಇಡೀ ಸಂಬಂಧದ ದೊಡ್ಡ ಚಿತ್ರವನ್ನು ನಾವು ನೋಡುವುದಿಲ್ಲ. ನಾವು ಅವರನ್ನು ಈ ಚಿಕ್ಕ ವಿಷಯದಿಂದ ಮಾತ್ರ ಗುರುತಿಸುತ್ತೇವೆ ಮತ್ತು ತುಂಬಾ ಕೋಪಗೊಳ್ಳುತ್ತೇವೆ. 

ನಮಗೆ ಕಷ್ಟ ಅಥವಾ ಕಾಯಿಲೆಯಿದ್ದರೆ, ನಾವು ಹೀಗೆ ಯೋಚಿಸಬಹುದು, “ನಾನು ಪಾಪದವನು; ನಾನು ಮಾತ್ರ ಈ ರೀತಿಯಾಗಿ ಬಳಲುತ್ತಿದ್ದೇನೆ.” ಮತ್ತೊಮ್ಮೆ, ಇದು ಬಹಳ ಕಿರಿದಾದ ದೃಷ್ಟಿಕೋನವಾಗಿದೆ. ಇದು ದೊಡ್ಡ ಚಿತ್ರವನ್ನು ನೋಡದೆ ಇರುವ ಪ್ರಕ್ಷೇಪಣವಾಗಿದೆ. ಉದಾಹರಣೆಗೆ, "ಯಾರೂ ನನ್ನನ್ನು ಪ್ರೀತಿಸುವುದಿಲ್ಲ." ಎಂದು ಯೋಚಿಸುವುದು. ನಾವು ನಮ್ಮ ಜೀವನವನ್ನು ವಿಶ್ಲೇಷಿಸಿದರೆ, ಜೀವನಪೂರ್ತಿ ನಮ್ಮನ್ನು ಯಾರೂ ಪ್ರೀತಿಸಿಲ್ಲವೇ? ನಮ್ಮ ನಾಯಿ ನಮ್ಮನ್ನು ಪ್ರೀತಿಸುವುದಿಲ್ಲವೇ? ಯಾರೂ ನಮ್ಮೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿಲ್ಲವೇ ಅಥವಾ ನಮ್ಮ ಬಗ್ಗೆ ಕಾಳಜಿ ವಹಿಸಲಿಲ್ಲವೇ? ಇನ್ನೊಂದು ಉದಾಹರಣೆಯೆಂದರೆ, "ನಾನು ಸೋತವನು." ಎಂದು ಯೋಚಿಸುವುದು. ಅದು ನಿಜವೇ? ನಾವು ಎಂದಿಗೂ, ಯಾವುದರಲ್ಲೂ ಯಶಸ್ವಿಯಾಗಲಿಲ್ಲ ಎಂಬುದು ನಿಜವೇ? ನಾವು ನಡೆಯಲು ಕಲಿತಿದ್ದೇವೆ ಮತ್ತು ಶೌಚಾಲಯ ತರಬೇತಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ, ಆದ್ದರಿಂದ, ಖಂಡಿತವಾಗಿಯೂ ನಾವು ಒಂದಲ್ಲ ಒಂದು ವಿಷಯದಲ್ಲಿ ಯಶಸ್ವಿಯಾಗಿದ್ದೇವೆ. 

ಮತ್ತೊಮ್ಮೆ ಹೇಳುವುದಾದರೆ, ನಮ್ಮ ಪ್ರಕ್ಷೇಪಣಗಳು ವಾಸ್ತವಕ್ಕೆ ಅನುಗುಣವಾಗಿರುವುದಿಲ್ಲ; ಆದರೆ ಅವು ಅನುಗುಣವಾಗಿರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ಅವು ಅನುಗುಣವಾಗಿವೆ ಎಂದು ನಾವು ನಂಬುತ್ತೇವೆ. ನಮ್ಮ ಸಂಗಾತಿಯು ವಿಶ್ವದ ಅತ್ಯಂತ ಅದ್ಭುತವಾದ, ವಿಶೇಷವಾದ ವ್ಯಕ್ತಿಯಾಗಿರಬೇಕೆಂದು ನಾವು ಬಯಸುತ್ತೇವೆ. ಅಂಟಾರ್ಕ್ಟಿಕಾದಲ್ಲಿರುವ ಪೆಂಗ್ವಿನ್‌ಗಳು ತಮ್ಮ ಜೀವನದುದ್ದಕ್ಕೂ ಒಂದೇ ಒಂದು ಸಂಗಾತಿಯನ್ನು ಹೊಂದುವುದು ಇದರ ಉತ್ತಮ ಉದಾಹರಣೆಯಾಗಿದೆ. ನಮ್ಮ ಕಣ್ಣಿಗೆ ಅವೆಲ್ಲವೂ ಒಂದೇ ರೀತಿ ಕಾಣುತ್ತವೆ, ಆದರೆ ಪೆಂಗ್ವಿನ್‌ಗಳಿಗೆ, ಅವುಗಳೆಲ್ಲದರಲ್ಲಿ ಒಂದು ಪೆಂಗ್ವಿನ್ ವಿಶೇಷವಾಗಿರುತ್ತದೆ. ಸಹಜವಾಗಿ, ಪೆಂಗ್ವಿನ್‌ಗಳ ದೃಷ್ಟಿಕೋನದಿಂದ, ಮಾನವರೆಲ್ಲರೂ ಒಂದೇ ರೀತಿ ಕಾಣುತ್ತಾರೆ; ಆದರೆ, ನಮಗೆ, ಬೇರೆಯವರು ನಮ್ಮನ್ನು ಪ್ರೀತಿಸಲಿ ಬಿಡಲಿ ಅದರ ಪರಿವೆಯಿರುವುದಿಲ್ಲ. ಇಲ್ಲ, ನನಗೆ ಬೇಕಾಗಿರುವುದು ಕೇವಲ ನೀನು - ಅತ್ಯಂತ ವಿಶೇಷವಾದ ವ್ಯಕ್ತಿಯಾದ ನೀನು - ನೀನು ನನ್ನನ್ನು ಪ್ರೀತಿಸಿದರೆ ಸಾಕು. ಈ ರೀತಿಯ ಉತ್ಪ್ರೇಕ್ಷೆಯು ಉಪಯುಕ್ತವಾಗಿರುವುದಿಲ್ಲ. 

ವಾಸ್ತವವನ್ನು ನಿರಾಕರಿಸುವುದು 

ಹಾನಿಕಾರಕ ಪ್ರಕ್ಷೇಪಣಗಳ ಮತ್ತೊಂದು ತಳಿಯು ವಾಸ್ತವವನ್ನು ನಿರಾಕರಿಸುವುದಾಗಿರುತ್ತದೆ, ಇತರರ ವಾಸ್ತವತೆಯನ್ನು ನೋಡದೆ, ಅದನ್ನು ನಿರಾಕರಿಸುವುದಾಗಿರುತ್ತದೆ. ನಾವು ಜನರನ್ನು, ವಸ್ತುನಿಷ್ಠಗೊಳಿಸಿ, ಅವರನ್ನು ವಸ್ತುಗಳನ್ನಾಗಿ ನೋಡಿದಾಗ ಮತ್ತು ಭಾವನೆಗಳಿರುವ ಜೀವಿಗಳಂತೆ ಪರಿಗಣಿಸದೆ ಇದ್ದಾಗ, ಇದು ಸಂಭವಿಸುತ್ತದೆ. ಬೌದ್ಧಧರ್ಮದಲ್ಲಿ ಬಹಳ ಪ್ರಸಿದ್ಧವಾದ ಒಂದು ಸಾಲಿದೆ: "ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ ಮತ್ತು ಯಾರೂ ಅಸಂತೋಷವಾಗಿರಲು ಬಯಸುವುದಿಲ್ಲ." ಇತರರ ವಿಷಯದಲ್ಲಿ ನಾವು ಅದನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೇವೆ? ಆಗಾಗ್ಗೆ, ನಾವು ಇದನ್ನು ನಿರ್ಲಕ್ಷಿಸುತ್ತೇವೆ ಮತ್ತು ನಾವು ಒಬ್ಬರೊಂದಿಗೆ ನಡೆದುಕೊಳ್ಳುವ ರೀತಿ ಮತ್ತು ಮಾತನಾಡುವ ರೀತಿಯು ಮುಖ್ಯವಲ್ಲ ಎಂಬಂತೆ ವರ್ತಿಸುತ್ತೇವೆ. ಕಾರಣ ಮತ್ತು ಪರಿಣಾಮವು ಇಲ್ಲಿ ಅನ್ವಯಿಸುವುದಿಲ್ಲ, ಮತ್ತು ಬೇರೆ ಯಾರಿಗೂ ಭಾವನೆಗಳಿಲ್ಲಎಂಬಂತೆ ವರ್ತಿಸುತ್ತೇವೆ. 

ಉದಾಹರಣೆಗೆ, ನಮ್ಮ ಕಚೇರಿಯಲ್ಲಿ ಒಬ್ಬ ಅಸಹ್ಯಕರ ಮತ್ತು ಅಹಿತಕರ ವ್ಯಕ್ತಿಯಿರುವರು. ಆದರೆ, ಈ ವ್ಯಕ್ತಿಯೂ ಸಹ ಸಂತೋಷವಾಗಿರಲು ಬಯಸುತ್ತಾರೆ ಮತ್ತು ಅಸಂತೋಷವಾಗಿರಲು ಬಯಸುವುದಿಲ್ಲ. ಜನರು ತಮ್ಮನ್ನು ಇಷ್ಟಪಡಬೇಕೆಂದು ಅವರು ಬಯಸುತ್ತಾರೆ, ಅವರನ್ನು ಇಷ್ಟಪಡಬಾರದು ಎಂದು ಬಯಸುವುದಿಲ್ಲ. ಅವರು ಏಕೆ ಅಹಿತಕರವಾಗಿ ವರ್ತಿಸುತ್ತಾರೆ ಎಂದರೆ, ಸಂತೋಷವನ್ನು ಗಳಿಸುವ ರೀತಿಯ ಬಗ್ಗೆ ಅವರು ತುಂಬಾ ಗೊಂದಲಕ್ಕೊಳಗಾಗಿರುತ್ತಾರೆ. ನಾವು ಪೂರ್ವಾಗ್ರಹಗಳನ್ನು ಹಿಡಿದಿಟ್ಟುಕೊಳ್ಳಬಾರದು ಎಂಬ ವಿಷಯಕ್ಕೆ ಇಲ್ಲಿ, ಮತ್ತೊಮ್ಮೆ, ಹಿಂತಿರುಗುತ್ತೇವೆ. ಶಾಂತಿದೇವ ಹೇಳಿದಂತೆ, ನಮ್ಮ ಸಂತೋಷವು, ನಮ್ಮ ಶತ್ರುವೆಂಬಂತೆ ನಾವು ಅದನ್ನು ನಾಶಪಡಿಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಅಸಂತೋಷದ ಕಾರಣಗಳ ಕಡೆಗೆ ಓಡುತ್ತೇವೆ. ಒಬ್ಬರು ತಾಳಲಾರದ ಸ್ವಾರ್ಥಿಯಾಗಿ ವರ್ತಿಸುತ್ತಿದ್ದರೆ, ಅದು, ಎಲ್ಲರೂ ಅವರನ್ನು ತಿರಸ್ಕರಿಸುವಂತೆ ಮಾಡುತ್ತದೆ. ಅವರ ವರ್ತನೆಯು ಯಾರಿಗೂ ಇಷ್ಟವಾಗುವುದಿಲ್ಲ, ಆದರೆ ಅದು ಅವರಿಗೆ ಸಂತೋಷವನ್ನು ನೀಡುತ್ತದೆ ಎಂದು ಆ ವ್ಯಕ್ತಿಯು ಭಾವಿಸುತ್ತಾರೆ. 

ಇದು ಬಹಳ ಮುಖ್ಯವಾದುದು: ಇತರರನ್ನು ಭೇಟಿಯಾದಾಗ, ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, "ನನ್ನಂತೆಯೇ ನೀವು ಸಂತೋಷವಾಗಿರಲು ಬಯಸುತ್ತೀರಿ. ನನ್ನಂತೆಯೇ ನಿಮಗೂ ಭಾವನೆಗಳಿವೆ. ನನ್ನಂತೆಯೇ, ನೀವು ಅಸಂತೋಷವಾಗಿರಲು ಬಯಸುವುದಿಲ್ಲ ಮತ್ತು ಎಲ್ಲರಿಗೂ ಇಷ್ಟವಾಗಲು ಇಚ್ಛಿಸುತ್ತೀರಿ. ನನ್ನಂತೆಯೇ ನೀವು, ಇಷ್ಟವಾಗದಿರಲು ಅಥವಾ ತಿರಸ್ಕಾರವನ್ನು ಎದುರಿಸಲು ಬಯಸುವುದಿಲ್ಲ.” ನಾವು ಬಸ್‌ನಲ್ಲಿ ಅಥವಾ ಟ್ರಾಫಿಕ್‌ನಲ್ಲಿರುವಾಗ, ಇದನ್ನು ಅಭ್ಯಾಸ ಮಾಡುವುದರಿಂದ ಬಹಳಾ ಸಹಾಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಗಮ್ಯಸ್ಥಾನವನ್ನು ತಲುಪಲು ಬಯಸುತ್ತಾರೆ ಮತ್ತು ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳಲು ಯಾರೂ ಬಯಸುವುದಿಲ್ಲ. ಇತರ ಜನರ ಮೇಲೆ ಕೋಪಗೊಳ್ಳಲು ಯಾವುದೇ ಕಾರಣವಿಲ್ಲ. ನಮ್ಮಂತೆಯೇ ಪ್ರತಿಯೊಬ್ಬರಿಗೂ ಭಾವನೆಗಳಿರುತ್ತವೆ. 

ಅತ್ಯಂತ ಸಹಾಯಕವಾದ ಸಾಲು ಹೀಗಿದೆ: “ಎಲ್ಲರೂ ಬುದ್ಧನನ್ನು ಇಷ್ಟಪಡಲಿಲ್ಲ; ಹಾಗಾದರೆ ಎಲ್ಲರೂ ನಮ್ಮನ್ನು ಇಷ್ಟಪಡಬೇಕು ಎಂದು ನಾವು ಏಕೆ ನಿರೀಕ್ಷಿಸಬೇಕು?” ಅಥವಾ, "ಅವರು ಯೇಸುವನ್ನು ಶಿಲುಬೆಗೇರಿಸಿದರು, ಹಾಗಾದರೆ ನಮಗಾಗಿ ನಾವು ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?", ಎಲ್ಲರೂ ನಮ್ಮನ್ನು ಪ್ರೀತಿಸಲಿ ಎಂಬ ನಿರೀಕ್ಷೆಯೇ? ಯಾರಾದರೂ ನಮ್ಮನ್ನು ಇಷ್ಟಪಡದಿದ್ದಾಗ ಅಥವಾ ನಾವು ಇಷ್ಟಪಡುವ ಸಕಾರಾತ್ಮಕ ರೀತಿಯಲ್ಲಿ ನಮಗೆ ಪ್ರತಿಕ್ರಿಯಿಸದಿದ್ದಾಗ, ಇದು ಬಹಳಾ ಸಹಾಯಕವಾಗಿರುತ್ತದೆ. ನಮ್ಮ ಅವಾಸ್ತವಿಕ ನಿರೀಕ್ಷೆಗಳು ಮತ್ತು ಪ್ರಕ್ಷೇಪಣಗಳನ್ನು ಎದುರಿಸಲು, ಪ್ರಾಯೋಗಿಕ ಮಟ್ಟದಲ್ಲಿ, ಜೀವನದಲ್ಲಿ ಬಹಳ ಸಹಾಯಕವಾಗಬಲ್ಲ ಸಾಲುಗಳು ಇವು. "ನಾನು ಯಾವಾಗಲೂ ಸರಿಯಾಗಿರಬೇಕು ಮತ್ತು ಎಲ್ಲರೂ ನನ್ನ ಮಾತನ್ನು ಕೇಳಬೇಕು" ಎಂದು ನಾವು ಯೋಚಿಸಬಹುದು. ಆದರೆ ಅವರು ಹಾಗೆ ಏಕೆ ಮಾಡಬೇಕು? 

ನೆನಪಿಡಿ, ಇಲ್ಲಿ ನಾವು ವಾಸ್ತವಿಕವಾದದ್ದು ಯಾವುದು ಮತ್ತು ಯಾವುದಲ್ಲ ಎಂಬುದರ ನಡುವಿನ ವ್ಯತ್ಯಾಸವನ್ನು ವಿವೇಚಿಸುತ್ತಿದ್ದೇವೆ. ನಮ್ಮ ಉದ್ದೇಶವು, ಉತ್ತಮವಾಗಿರುವುದು, ಸುಧಾರಣೆ, ಹೆಚ್ಚು ಏಕಾಗ್ರತೆಯನ್ನು ಪಡೆಯುವುದು ಅಥವಾ ಇಂತಹ ಯಾವುದೇ ವಿಷಯವಾಗಿರಬಹುದು. ನಾವು ಸುಧಾರಿತರಾಗಲು ಸಮರ್ಥರಾಗಿರುವಾಗ, ಹಾಗೆ ಮಾಡುವುದು ವಾಸ್ತವಿಕ ನಿರೀಕ್ಷೆಯಾಗಿರುತ್ತದೆ. ಆದರೆ ನಾವು ಹೀಗೆ ಯೋಚಿಸಿದಾಗ, "ನಿಮ್ಮ ಜೀವನದಲ್ಲಿ, ಎಂದೆಂದಿಗೂ ನಾನೇ ಅತ್ಯಂತ ಪ್ರಮುಖ ವ್ಯಕ್ತಿಯಾಗಿರಬೇಕು. ನೀವು ಯಾವಾಗಲೂ ನನಗಾಗಿ ಲಭ್ಯವಿರಬೇಕು” - ನಮ್ಮ ಸಂಗಾತಿಯು ಕೆಲಸದಿಂದ ಮನೆಗೆ ಹಿಂದಿರುಗಿದಾಗ, ಬೆಳಗಿನ ಹೊತ್ತು ಅವನ ಅಥವಾ ಅವಳ ಜೀವನದಲ್ಲಿ ಏನೂ ಸಂಭವಿಸಿಲ್ಲ ಎಂಬಂತೆ ಮತ್ತು ಅವರೊಂದಿಗೆ ಏನೂ ಆಗಿಲ್ಲ ಎಂಬಂತೆ ಅವರು ನಮಗೆ ಪೂರ್ಣವಾಗಿ ಲಭ್ಯವಿರಬೇಕೆಂದು ಯೋಚಿಸುವುದು, ಅವಾಸ್ತವಿಕ ನಿರೀಕ್ಷೆಯಾಗಿರುತ್ತದೆ, ಅಲ್ಲವೇ? 

ನಮಗಿರುವ ಅವಾಸ್ತವಿಕ ನಿರೀಕ್ಷೆಗಳನ್ನು ಪರಿಗಣಿಸಲು, ಸ್ವಲ್ಪ ಸಮಯ ತೆಗೆದುಕೊಳ್ಳೋಣ. ನಮ್ಮಲ್ಲಿ ಎಷ್ಟೊಂದು ಅವಾಸ್ತವಿಕ ನಿರೀಕ್ಷೆಗಳಿವೆ ಮತ್ತು ನಾವು ಅವುಗಳನ್ನು ಎಷ್ಟು ಚೆನ್ನಾಗಿ ಗುರುತಿಸಬಲ್ಲೆವು? ನಾವು ಅವುಗಳನ್ನು ನಂಬಿದಾಗ, ಅವು ಹಾನಿಕಾರಕವಾಗಿವೆ ಮತ್ತು ನಮಗೆ ಹಾನಿಯನ್ನುಂಟುಮಾಡುತ್ತವೆ ಎಂದು ನಾವು ಗುರುತಿಸಬಲ್ಲೆವೇ? ಅವುಗಳು ಭಾವನಾತ್ಮಕ ನೋವನ್ನು ಹೇಗೆ ಉಂಟುಮಾಡುತ್ತವೆ ಎಂಬುದನ್ನು ನಾವು ಗುರುತಿಸಬಲ್ಲೆವೇ? ಇವುಗಳನ್ನು ದಲೈ ಲಾಮಾ, ನಮ್ಮ ಆಂತರಿಕ ಕೀಟಲೆಗಾರರು ಎಂದು ಕರೆಯಲು ಇಷ್ಟಪಡುತ್ತಾರೆ. 

ಪಶ್ಚಿಮದಲ್ಲಿ, ಅನೇಕರು ಇಂತಹ ಪೂರ್ವಾಗ್ರಹ ಪೀಡಿತ ತತ್ವಗಳಿಂದ ಪ್ರಭಾವಿತರಾಗಿರುತ್ತಾರೆ. ನಮ್ಮಲ್ಲಿ ಅನೇಕರಿಗೆ, ನಾವು ಯೋಗ್ಯರಲ್ಲ ಎಂಬ ಯೋಚನೆಯಿರುತ್ತದೆ, ಇದು ಅತ್ಯಂತ ತೊಂದರೆದಾಯಕ ಆಲೋಚನೆಗಳಲ್ಲಿ ಒಂದಾಗಿರುತ್ತದೆ. ಇದು ಬಹಳಾ ಪೂರ್ವಾಗ್ರಹ ಪೀಡಿತವಾದ ಸಂಗತಿಯಾಗಿರುತ್ತದೆ. ಯಾರೂ ನಮ್ಮ ಗುಣಲಕ್ಷಣಗಳನ್ನು ನಿರ್ಣಯಿಸುತ್ತಿಲ್ಲ ಮತ್ತು ನಾವು ಖಂಡಿತವಾಗಿಯೂ ನಮ್ಮನ್ನು ನಿರ್ಣಯಿಸುವ ಅಗತ್ಯವಿಲ್ಲ ಎಂಬುದನ್ನು ನಾವು ಗುರುತಿಸಬೇಕು. ನಾವು ಗೊಂದಲಕ್ಕೊಳಗಾಗಬಹುದು; ಆದರೆ ಅದರರ್ಥ ನಮ್ಮಲ್ಲಿ ಕೊರತೆಯಿದೆ ಅಥವಾ ನಾವು ಕೆಟ್ಟವರು ಎಂದಲ್ಲ. ಇದು ಬಹಳಾ ಸ್ವಯಂ-ವಿನಾಶಕಾರಿಯಾದ ಪ್ರಕ್ಷೇಪಣವಾಗಿರುತ್ತದೆ.  

ಎರಡು ಸತ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅತ್ಯಗತ್ಯ. ನಮಗೆ ನಿಜವೆಂದು ತೋರುವುದು – ಉದಾಹರಣೆಗೆ ನಾವು ಯೋಗ್ಯರಲ್ಲ ಎಂಬುವುದು - ವಾಸ್ತವದಲ್ಲಿ ಸುಳ್ಳಾಗಿರುತ್ತದೆ. ಹಾಗೆ ನಂಬಲು ಯಾವುದೇ ಕಾರಣವಿಲ್ಲವಾದ್ದರಿಂದ, ನಾವು ಅದನ್ನು ನಂಬುವುದನ್ನು ನಿಲ್ಲಿಸಬೇಕು ಮತ್ತು ಕಾರಣ ಮತ್ತು ಪರಿಣಾಮದ ವಿಷಯವಾಗಿ ಜೀವನವನ್ನು ನಡೆಸಲು ಪ್ರಯತ್ನಿಸಬೇಕು. ನಾವು ಏನನ್ನಾದರೂ ಸಾಧಿಸಲು ಬಯಸಿದರೆ, ನಾವು ಕಾರಣಗಳನ್ನು ಕರೆತರಬೇಕು. ಅದು ಸಾಧ್ಯವಾದರೆ, ಹಾಗೆ ಮಾಡಿರಿ; ಅದು ಸಾಧ್ಯವಾಗದಿದ್ದರೆ, ವಾಸ್ತವವನ್ನು ಒಪ್ಪಿಕೊಳ್ಳಿ. ಉದಾಹರಣೆಗೆ, ನಾವು ಉತ್ತಮ ಉದ್ಯೋಗವನ್ನು ಬಯಸಿದರೆ, ನಾವು ಅದನ್ನು ಹುಡುಕಬೇಕು, ಆಕಾಶದಿಂದ ಅದು ಬೀಳುತ್ತದೆ ಅಥವಾ ಯಾರಾದರೂ ನಮಗೆ ನೀಡುತ್ತಾರೆ ಎಂದು ಕಾಯುತ್ತಾ ಕೂರಬಾರದು. ಇದು ಕಾರಣ ಮತ್ತು ಪರಿಣಾಮವಾಗಿರುತ್ತದೆ. ನಾವು ಸಾಧ್ಯತೆಗಳನ್ನು ಗ್ರಹಿಸಬೇಕು ಮತ್ತು ಅವುಗಳ ಲಾಭವನ್ನು ಪಡೆದುಕೊಳ್ಳಬೇಕು, ಅವುಗಳು ಬಹಳಾ ಭಯಂಕರವಾಗಿವೆ ಎಂದು ಭಾವಿಸುವ ಪರಿಸ್ಥಿತಿಗೆ ಸಿಲುಕಿಕೊಳ್ಳಬಾರದು, ಆಗ ನಾವು ಎಂದಿಗೂ ಮುಂದೆ ಬರುವುದಿಲ್ಲ ಮತ್ತು ಅದರ ಬಗ್ಗೆ ಏನನ್ನೂ ಮಾಡಲಾಗುವುದಿಲ್ಲ. ಈ ರೀತಿಯ ಆಲೋಚನೆಯು ಬಹಳಾ ನಕಾರಾತ್ಮಕವಾಗಿರುತ್ತದೆ. ಪ್ರಾರ್ಥನೆಯು ಹೇಳುವಂತೆ: ನಕಾರಾತ್ಮಕವಾದ ಏನನ್ನೂ ಮಾಡಬೇಡಿ. ಇದು ಕೇವಲ ಮಾಡುವ ಅಥವಾ ಮಾತನಾಡುವ ವಿಷಯವಲ್ಲದೆ, ಆಲೋಚನೆಗೂ ಅನ್ವಯವಾಗುತ್ತದೆ. ನಾವು ನಮ್ಮನ್ನು ಮತ್ತು ಇತರರನ್ನು ಹೇಗೆ ಪರಿಗಣಿಸುತ್ತೇವೆ ಎಂಬುದನ್ನು ಇದು ಒಳಗೊಂಡಿರುತ್ತದೆ.

ಚತುರಾರ್ಯ ಸತ್ಯಗಳು  

ವಾಸ್ತವದಿಂದ ಪ್ರಕ್ಷೇಪಣವನ್ನು ಪ್ರತ್ಯೇಕಿಸುವ ಈ ವಿಧಾನದ ಮೂಲಕ ನಾವು ನಮ್ಮ ಜೀವನದಲ್ಲಿ ಚತುರಾರ್ಯ ಸತ್ಯಗಳನ್ನು ಅನ್ವಯಿಸಬಹುದು. ಪರಮಪೂಜ್ಯರು ಒತ್ತಿಹೇಳುವಂತೆ, ನಾವು ಎರಡು ಸತ್ಯಗಳಿಂದ ನಾಲ್ಕು ಸತ್ಯಗಳಿಗೆ ಹೋಗಬೇಕಾಗಿದೆ. ಮೊದಲ ಆರ್ಯ ಸತ್ಯವಾದ ನಮ್ಮ ಸಮಸ್ಯೆಗಳು, ಎರಡನೇ ಆರ್ಯ ಸತ್ಯವಾದ ಕಾರಣಗಳಿಂದ ಬರುತ್ತವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಮೊದಲಿಗೆ ನಾವು ಈ ಪ್ರಕ್ಷೇಪಣಗಳನ್ನು ಹೊಂದಿದ್ದೇವೆ ಮತ್ತು ಹೆಚ್ಚುವರಿಯಾಗಿ, ಈ ಪ್ರಕ್ಷೇಪಣಗಳು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುದರ ಬಗ್ಗೆ ನಮ್ಮಲ್ಲಿಅಜ್ಞಾನವಿದೆ ಅಥವಾ ಅರಿವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಅದನ್ನು ನಿಲ್ಲಿಸಲು ಬಯಸಿದರೆ - ಮೂರನೆಯ ಆರ್ಯ ಸತ್ಯ - ಅದನ್ನು ತೊಡೆದುಹಾಕಲು, ನಾವು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು - ನಾಲ್ಕನೇ ಆರ್ಯ ಸತ್ಯ - ಮತ್ತು ನಮ್ಮ ಕಲ್ಪನೆಯ ಬಲೂನ್ ಅನ್ನು ಒಡೆದುಹಾಕಬೇಕು. 

ಇದನ್ನು ಅನ್ವಯಿಸಲು ನಾವು ಬೌದ್ಧರಾಗಬೇಕಾಗಿಲ್ಲ. ದಲೈ ಲಾಮಾ ಹೇಳುವಂತೆ, ಇದು ಸಾರ್ವತ್ರಿಕ ವಿಧಾನವಾಗಿದೆ ಮತ್ತು ಅದನ್ನು ನಾವು ಚತುರಾರ್ಯ ಸತ್ಯಗಳೆಂದು ಉಲ್ಲೇಖಿಸಬೇಕಾಗಿಲ್ಲ. ನಾವು ಅದನ್ನು ಯಾವ ಹೆಸರಿನಿಂದಲೂ ಕರೆಯಬೇಕಾಗಿಲ್ಲ. ಈ ರೀತಿಯಾಗಿ, ಅವುಗಳನ್ನು ಉಲ್ಲೇಖಿಸದೇ, ಅವುಗಳು ತ್ರಿರತ್ನಗಳತ್ತ ನಮ್ಮನ್ನು ಕರೆದೊಯ್ಯುತ್ತವೆ. ನಮ್ಮ ಸಮಸ್ಯೆಗಳ ಕಾರಣವನ್ನು ನಾವು ತೊಡೆದುಹಾಕಿದರೆ, ಸಮಸ್ಯೆಗಳು ದೂರವಾಗುತ್ತವೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಎಲ್ಲಾ ಕಾರಣಗಳು ಮತ್ತು ಸಮಸ್ಯೆಗಳು ಹೋದ ಸ್ಥಿತಿ ಮತ್ತು ಇದನ್ನು ಕರೆತರುವ ತಿಳುವಳಿಕೆಯು ಧರ್ಮದ ರತ್ನವಾಗಿರುತ್ತದೆ. ಇವು ಮೂರನೆಯ ಮತ್ತು ನಾಲ್ಕನೆಯ ಆರ್ಯ ಸತ್ಯಗಳಾಗಿರುತ್ತವೆ. ಇದನ್ನು ಸಂಪೂರ್ಣವಾಗಿ ಸಾಧಿಸಿದವರು ಬುದ್ಧರಾಗಿರುತ್ತಾರೆ ಮತ್ತು ಇದನ್ನು ಭಾಗಶಃ ಸಾಧಿಸಿದವರು ಸಂಘದವಾಗಿರುತ್ತಾರೆ. 

ಈ ರೀತಿಯಾಗಿ, ನಮ್ಮಲ್ಲಿ ಎರಡು ಸತ್ಯಗಳು, ನಾಲ್ಕು ಸತ್ಯಗಳು ಮತ್ತು ಮೂರು ರತ್ನಗಳಿರುತ್ತವೆ ಮತ್ತು ಇದಕ್ಕಾಗಿ ನಾವು ಬೌದ್ಧರಾಗಬೇಕಾಗಿಲ್ಲ. ಬೌದ್ಧರಾಗಲು ಇರುವ ರೇಖೆಯು, ಭವಿಷ್ಯದ ಜೀವನವನ್ನು ಸುಧಾರಿಸಲು ಕೆಲಸ ಮಾಡುವ ಗುರಿಯಾಗಿರುತ್ತದೆ. ಆದರೆ, ಈ ವಿಧಾನಕ್ಕಾಗಿ, ಹಿಂದಿನ ಮತ್ತು ಭವಿಷ್ಯದ ಜೀವನದಲ್ಲಿ ನಂಬಿಕೆಯಿಡುವುದು ಅಗತ್ಯವಾಗಿರುತ್ತದೆ. ಪರಮಪೂಜ್ಯರು ಸೂಚಿಸಿದಂತೆ, ಅತಿಶ ಅವರ ಸಮಯದಲ್ಲಿ, ಟಿಬೆಟ್‌ನಲ್ಲಿ ಪರಿಚಯಿಸಲಾದ ನಮ್ಮ ಸಾಂಪ್ರದಾಯಿಕ ಸೂತ್ರಗಳ ವಿಧಾನವು ಲ್ಯಾಮ್-ರಿಮ್ ಆಗಿತ್ತು, ಇವು ಪ್ರೇರಣೆಯ ಮೂರು ಹಂತಗಳಾಗಿರುತ್ತವೆ. ಇವುಗಳೆಂದರೆ - ಭವಿಷ್ಯದ ಜೀವನವನ್ನು ಸುಧಾರಿಸುವುದು, ಅನಿಯಂತ್ರಿತವಾಗಿ ಮರುಕಳಿಸುವ ಭವಿಷ್ಯದ ಜೀವನದಿಂದ ವಿಮೋಚನೆಯನ್ನು ಪಡೆಯುವುದು ಮತ್ತು ಎಲ್ಲರಿಗೂ ಭವಿಷ್ಯದ ಜೀವನದಿಂದ ವಿಮೋಚನೆಯನ್ನು ಪಡೆಯುವಂತೆ ಸಹಾಯ ಮಾಡಲು ಸಾಧ್ಯವಾಗಲು ಜ್ಞಾನೋದಯವನ್ನು ಸಾಧಿಸುವುದು. ಈ ಸಂಪೂರ್ಣ ರಚನೆಯು ಭವಿಷ್ಯದ ಜೀವನ ಮತ್ತು ಪುನರ್ಜನ್ಮದ ಮೇಲೆ ಅವಲಂಬಿತವಾಗಿರುತ್ತದೆ. ಮನಸ್ಸನ್ನು ಧರ್ಮದ ಕಡೆಗೆ ತಿರುಗಿಸುವ ನಾಲ್ಕು ಆಲೋಚನೆಗಳಲ್ಲಿರುವುದು ಇದೊಂದೇ ವಿಷಯ - ಪುನರ್ಜನ್ಮ. ಇಲ್ಲಿರುವ ಸಂಪೂರ್ಣ ಮಾರ್ಗವು, ಪುನರ್ಜನ್ಮದ ವಿಷಯದ ಬಗೆಗಿರುವ ನಂಬಿಕೆಯ ಮೇಲೆ ಆಧಾರಿತವಾಗಿರುತ್ತದೆ. 

ಪಾಶ್ಚಾತ್ಯರಿಗಾಗಿ ಅಥವಾ ಸರ್ವೇಸಾಮಾನ್ಯವಾದ ವಿಧಾನಕ್ಕಾಗಿ, ಎರಡು ಸತ್ಯಗಳು, ನಾಲ್ಕು ಸತ್ಯಗಳು ಮತ್ತು ಮೂರು ರತ್ನಗಳೊಂದಿಗೆ ಪ್ರಾರಂಭಿಸುವುದು ಉತ್ತಮವಾಗಿರುತ್ತದೆ. ಇದರ ನಂತರ, ನಾವು ಕಾರಣ ಮತ್ತು ಪರಿಣಾಮದ ಚರ್ಚೆಯನ್ನು ಪರಿಚಯಿಸಬಹುದು; ಆದರೆ ನಾವು ನಿರ್ದಿಷ್ಟ ಆರಂಭವೊಂದನ್ನು ಹೊಂದಿರದಿದ್ದರೆ, ಕಾರಣ ಮತ್ತು ಪರಿಣಾಮಕ್ಕೆ ಯಾವುದೇ ಅರ್ಥವಿರುವುದಿಲ್ಲ. ಇದು ಆರಂಭವಿಲ್ಲದ ಮನಸ್ಸಿಗೆ ಕಾರಣವಾಗುತ್ತದೆ; ಮತ್ತು ನಾವು ಆರಂಭವಿಲ್ಲದ ಮನಸ್ಸನ್ನು ಅರ್ಥಮಾಡಿಕೊಂಡರೆ, ನಾವು ಪುನರ್ಜನ್ಮವನ್ನು ಅರ್ಥಮಾಡಿಕೊಳ್ಳುತ್ತೇವೆ. ಈ ಹಂತದಲ್ಲಿ, ಭವಿಷ್ಯದ ಜೀವನಕ್ಕಾಗಿ ಪ್ರಯೋಜನವನ್ನು ಪಡೆಯಲು ಮತ್ತು ಸಂಸಾರದಿಂದ ಮತ್ತು ಅನಿಯಂತ್ರಿತವಾಗಿ ಮರುಕಳಿಸುವ ಪುನರ್ಜನ್ಮದಿಂದ ವಿಮೋಚನೆಯನ್ನು ಪಡೆಯಲು ಪ್ರಾಮಾಣಿಕವಾಗಿ ಬಯಸಬಹುದು. ಲ್ಯಾಮ್-ರಿಮ್ನ ಕ್ರಮವಾದ ಮಾರ್ಗದಲ್ಲಿ, ನಮ್ಮ ನಿಶ್ಚಿತಾರ್ಥವು ಪುನರ್ಜನ್ಮದ ನಂಬಿಕೆಯನ್ನು ಆಧರಿಸಿದ್ದರೂ, ಅದು ಸ್ಥಿರವಾಗಿರುವುದಿಲ್ಲ. ಈ ಆಧಾರದ ಮೇಲೆ ಲ್ಯಾಮ್-ರಿಮ್ ಅನ್ನು ಅಭ್ಯಾಸ ಮಾಡುವುದು ನಿಷ್ಪ್ರಯೋಜಕವಾಗಿರುತ್ತದೆ ಎಂದಲ್ಲ; ಆದರೆ ಸಾಂಪ್ರದಾಯಿಕವಾಗಿ, ಟಿಬೆಟಿಯನ್ನರು ಪ್ರಾರಂಭಿಸುವ ಸ್ಥಳದಿಂದ ನಾವು ಶುರುಮಾಡಿದರೆ, ಅಂದರೆ ಪುನರ್ಜನ್ಮದಲ್ಲಿನ ಧೃಡವಾದ ನಂಬಿಕೆಯಿಂದ ಶುರುಮಾಡಿದರೆ, ಅದು ಹೆಚ್ಚು ಸ್ಥಿರವಾಗಿರುತ್ತದೆ.  

ಎರಡು ಸತ್ಯಗಳು ಮತ್ತು ಮುಂತಾದವುಗಳ ಈ ಯೋಜನೆಯು, ನಾವು ನಮ್ಮ ಜೀವನದಲ್ಲಿ ಬೋಧನೆಗಳನ್ನು ಸಂಯೋಜಿಸುವ ಮಾರ್ಗವನ್ನು ಸೂಚಿಸುತ್ತವೆ. ಇದು ನಮ್ಮ ಪ್ರಕ್ಷೇಪಣಗಳು ಮತ್ತು ವಾಸ್ತವತೆಯ ನಡುವಿನ ವ್ಯತ್ಯಾಸವನ್ನು ಗುರುತಿಸುವುದರಿಂದ, ಅಂದರೆ ನಾವು ಯಾವಾಗ ಪ್ರಕ್ಷೇಪಣವನ್ನು ರಚಿಸುತ್ತಿದ್ದೇವೆ ಎಂಬುದನ್ನು ಗುರುತಿಸುವುದು ಮತ್ತು ಆ ಪ್ರಕ್ಷೇಪಣಗಳಲ್ಲಿ ನಮ್ಮ ತಪ್ಪು ನಂಬಿಕೆಯಿರುವುದನ್ನು ಗುರುತಿಸುವುದರಿಂದ ಪ್ರಾರಂಭವಾಗುತ್ತದೆ. ಇವೆಲ್ಲವನ್ನೂ ಪೂರ್ವಾಗ್ರಹಗಳಿಲ್ಲದೆ ಸಾಧಿಸಬೇಕು. ಉದಾಹರಣೆಗೆ, "ನೀನು ಅದರೊಂದಿಗೆ ನನಗೆ ಸಹಾಯ ಮಾಡುವೆ ಎಂದು ಭಾವಿಸಿದೆ, ಆದರೆ ನೀನು ಹಾಗೆ ಮಾಡಲಿಲ್ಲ" ಅಥವಾ "ನೀವು ಅದನ್ನು ಸರಿಯಾಗಿ ಮಾಡುತ್ತೀರಿ ಎಂದು ನಾನು ಭಾವಿಸಿದೆ ಆದರೆ ನೀವು ಮಾಡಲಿಲ್ಲ." ನಮ್ಮ ಕೆಲಸದಲ್ಲಿ, ಒಬ್ಬರು ಒಂದು ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ನಾವು ಅವರಿಗೆ ಆ ಕೆಲಸವನ್ನು ನಿಯೋಜಿಸಿದ್ದೇವೆ ಮತ್ತು ಅವರು ಹಾಗೆ ಮಾಡಲಿಲ್ಲ. ಆಗ ನಾವು ಏನು ಮಾಡಬಹುದು? ಅದನ್ನು ನಾವೇ ಮಾಡುತ್ತೇವೆ. ನಾವು ಆ ವ್ಯಕ್ತಿಯ ಮೇಲೆ ಕೋಪಗೊಳ್ಳಬೇಕೇ? ಇದರಿಂದ ಸಹಾಯವಾಗುವುದಿಲ್ಲ. ಭವಿಷ್ಯದಲ್ಲಿ ಅವರಿಗೆ ಆ ರೀತಿಯ ನಿಯೋಜನೆಗಳನ್ನು ನೀಡಬೇಡಿ ಅಥವಾ ಅದನ್ನು ಸರಿಯಾಗಿ ಹೇಗೆ ಮಾಡಬೇಕೆಂದು ಅವರಿಗೆ ಕಲಿಸಿ. ವಾಸ್ತವದೊಂದಿಗೆ ವ್ಯವಹರಿಸಿ. ಯಾವುದೇ ಮಾರ್ಗದರ್ಶನವಿಲ್ಲದೆ ಆ ವ್ಯಕ್ತಿಯು ಅದನ್ನು ಸರಿಯಾಗಿ ಮಾಡುತ್ತಾರೆ ಎಂಬ ನಮ್ಮ ನಿರೀಕ್ಷೆಯಿಂದಾಗಿ ನಾವು ಅಸಮಾಧಾನಗೊಳ್ಳುತ್ತೇವೆ. ಅವರು ಹಾಗೆ ಮಾಡುತ್ತಾರೆ ಎಂದು ನಾವು ಭಾವಿಸಬಹುದು; ಅದು ವಿಭಿನ್ನವಾಗಿರುತ್ತದೆ. ಯಾವುದೇ ನಿರೀಕ್ಷೆಗಳಿಲ್ಲದೆ ಯಾವುದೇ ನಿರಾಶೆಗಳಿರುವುದಿಲ್ಲ.

ಗೊಂದಲದ ಭಾವನೆಗಳು 

ನಾವು ನಕಾರಾತ್ಮಕವಾದ ಏನನ್ನೂ ಮಾಡಬಾರದು ಎಂಬ ಮಾರ್ಗವನ್ನು ಅನುಸರಿಸಲು ಬಯಸಿದಾಗ, ನಾವು ಗೊಂದಲದ ಭಾವನೆಗಳ ಪ್ರಭಾವದ ಅಡಿಯಲ್ಲಿ ವರ್ತಿಸುವುದನ್ನು, ಮಾತನಾಡುವುದನ್ನು ಅಥವಾ ಯೋಚಿಸುವುದನ್ನು ಗುರುತಿಸಬೇಕು. ಗೊಂದಲದ ಭಾವನೆಯು ಅಬಿವೃದ್ಧಿಗೊಂಡಾಗ, ಅದು ನಮ್ಮ ಮನಸ್ಸಿನ ಶಾಂತಿ ಮತ್ತು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂಬುದು ಅದರ ವ್ಯಾಖ್ಯಾನವಾಗಿರುತ್ತದೆ. ನಾವು ಕೋಪಗೊಂಡಾಗ, ನಮ್ಮ ಮನಸ್ಸಿಗೆ ಶಾಂತಿ ಇರುವುದಿಲ್ಲ ಮತ್ತು ನಾವು ನಂತರ ವಿಷಾದಿಸುವಂತಹ ವಿಷಯಗಳನ್ನು ನುಡಿಯುತ್ತೇವೆ ಮತ್ತು ಮಾಡುತ್ತೇವೆ. ನಾವು ದುರಾಸೆಯಿಂದಿರವಾಗ ಅಥವಾ ಒಬ್ಬರೊಂದಿಗೆ ಅಂಟಿಕೊಂಡಾಗ, ಅದು ಶಾಂತಿಯುತ ಮನಸ್ಥಿತಿಯಾಗಿರುವುದಿಲ್ಲ, ಮತ್ತು ನಾವು ನಂತರ ಅಪಹಾಸ್ಯಕರ ಎಂದು ಪರಿಗಣಿಸಬಹುದಾದ ವಿಷಯಗಳನ್ನು ನುಡಿಯಬಹುದು. ಆಗಾಗ್ಗೆ, ಈ ರೀತಿಯ ಅತಿಯಾದ ಬೇಡಿಕೆ ಮತ್ತು ಅಂಟಿಕೊಳ್ಳುವ ನಡೆವಳಿಕೆಯ ಕಾರಣದಿಂದ, ಆ ವ್ಯಕ್ತಿಯು ದೂರ ಓಡಿಹೋಗಬಹುದು. 

ನಾವು ಗೊಂದಲದ ಭಾವನೆಯ ಪ್ರಭಾವದ ಅಡಿಯಲ್ಲಿ ವರ್ತಿಸುತ್ತಿರುವಾಗ, ಅದನ್ನು ನಾವು ಗುರುತಿಸಬೇಕಾಗಿದೆ. ನಾವು ನಮ್ಮ ಸ್ವಂತ ಶಕ್ತಿಗಳನ್ನು ಸ್ವಲ್ಪ ಸೂಕ್ಷ್ಮತೆಯಿಂದ ಪರಿಗಣಿಸಿದಾಗ, ಒಂದು ರೀತಿಯ ಹಗೆತನ ಅಥವಾ ಗ್ರಹಿಕೆಯ ಆಧಾರದ ಮೇಲೆ, ನಾವು ಉದ್ವೇಗಕ್ಕೆ ಒಳಗಾಗಿದ್ದೇವೆ ಎಂದು ನಾವು ತಿಳಿಯಬಹುದು. ಈ ವಿನಾಶಕಾರಿ ಮತ್ತು ಗೊಂದಲದ ಭಾವನೆಗಳು ನಮ್ಮ ಅಜ್ಞಾನ, ನಮ್ಮಲ್ಲಿ ಅರಿವಿಕೆಯಿಲ್ಲದಿರುವುದರಿಂದ ಬರುತ್ತವೆ. ನಮಗೆ ಕಾರಣ ಮತ್ತು ಪರಿಣಾಮದ ಅರಿವಿರುವುದಿಲ್ಲ. ನಾವು ಮೂರ್ಖರು ಎಂದು ಹೇಳುತ್ತಿಲ್ಲ; ವಿಷಯಗಳು ಕಾರಣ ಮತ್ತು ಪರಿಣಾಮಗಳಿಂದ ಹುಟ್ಟುತ್ತವೆ ಮತ್ತು ನಮ್ಮ ಪ್ರಕ್ಷೇಪಣಗಳು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ನಮಗೆ ತಿಳಿದಿರುವುದಿಲ್ಲ.

ಸಪ್ತಬಿಂದು ಚಿತ್ತ ಸಾಧನ, ಸಂಕ್ಷಿಪ್ತವಾಗಿ ಹೀಗೆ ಹೇಳುತ್ತದೆ: 

ಎಲ್ಲಾ ಆಪಾದನೆಗಳನ್ನು ಒಂದು ವಿಷಯದ ಮೇಲೆ ಇರಿಸಿ, ಸ್ವಯಂ-ಪೋಷಣೆ. 

ಇದರರ್ಥ, ನಾವು ಯಾವಾಗಲೂ ವಿಷಯಗಳನ್ನು ನಮ್ಮ ರೀತಿಯಲ್ಲಿ, ನಾವು ಬಯಸಿದ ರೀತಿಯಲ್ಲಿ ನಡೆಯಬೇಕೆಂದು ಗ್ರಹಿಸುತ್ತೇವೆ. ಇದು "ನಾನೇ ಮೊದಲು" ಎಂಬ ಮನೋಭಾವವಾಗಿರುತ್ತದೆ: "ನಾನು ಯೋಜಿಸುವ ಮತ್ತು ನಿರೀಕ್ಷಿಸುವ ಮಾರ್ಗದಲ್ಲೇ ವಿಷಯಗಳು ನಡೆಯಬೇಕು." ಅಂತಹ ವರ್ತನೆಗಳಿಗಾಗಿ ನಮ್ಮ ಸಮಸ್ಯೆಗಳನ್ನು ದೂಷಿಸುವುದು ಬಹಳ ಸಹಾಯಕವಾದ ಸಲಹೆಯಾಗಿರುತ್ತದೆ. ಉದಾಹರಣೆಗಳೆಂದರೆ: "ಈ ರೆಸ್ಟೋರೆಂಟ್ ಅತ್ಯುತ್ತಮವಾಗಿರಬೇಕೆಂದು ನಾನು ಬಯಸುತ್ತೇನೆ" ಅಥವಾ "ಈ ಸಂಜೆ ಅತ್ಯುತ್ತಮವಾಗಿರಬೇಕೆಂದು ನಾನು ಬಯಸುತ್ತೇನೆ" ಅಥವಾ "ನೀವು ನನಗಾಗಿ ಈ ರೀತಿಯಾಗಿ ವರ್ತಿಸಬೇಕೆಂದು ನಾನು ಬಯಸುತ್ತೇನೆ." ಇದೆಲ್ಲವೂ "ನಾನು, ನಾನು, ನಾನು" ಎಂಬುದರಿಂದ ಬರುತ್ತದೆ. ನಾನು ಕೇವಲ ನನ್ನ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ, ನಿಮ್ಮ ಬಗ್ಗೆ ಅಲ್ಲ. ಒಬ್ಬರು ಆಯಾಸಕರ ದಿನವನ್ನು ಅನುಭವಿಸಿರಬಹುದು ಅಥವಾ ಬೇರೆ ಯಾವುದರಲ್ಲೋ ಮಗ್ನರಾಗಿರಬಹುದು ಎಂಬುದರ ಬಗ್ಗೆ ನಾವು ಯೋಚಿಸುವುದಿಲ್ಲ. ಇದು ಕೇವಲ "ನನ್ನ" ಬಗ್ಗೆ ಆಗಿರುತ್ತದೆ ಮತ್ತು ನಾನು ಏನು ಬಯಸುತ್ತೇನೆ ಎಂಬುದರ ಬಗ್ಗೆ ಆಗಿರುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಇಂತಹ ಸಮಸ್ಯೆಗಳ ಮೇಲೆ ಗಮನಹರಿಸಲು ಮತ್ತು ಇವನ್ನು ಬದಲಾಯಿಸಲು ಬಯಸಬೇಕಾಗಿದೆ. ಜೀವನದ ಮೇಲಿನ ಬೌದ್ಧ ದೃಷ್ಟಿಕೋನದ ಪ್ರಕಾರ, ನಮ್ಮ ಎಲ್ಲಾ ಸಮಸ್ಯೆಗಳ ಕಾರಣವು ಸ್ವಯಂ-ಪೋಷಣೆಯಾಗಿರುತ್ತದೆ. ಇದರರ್ಥ ಸ್ವಾರ್ಥಿಯಾಗಿರುವುದು ಮತ್ತು ಸ್ವಂತದ ಮೇಲೆ ಕೇಂದ್ರೀಕೃತವಾಗಿರುವುದಾಗಿರುತ್ತದೆ. ಇದರರ್ಥ ನಾವು ನಮ್ಮ ಅಗತ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬೇಕು ಎಂದಲ್ಲ, ಆದರೆ ನಮ್ಮ ಅಗತ್ಯಗಳೇ ಅತ್ಯಂತ ಮಹತ್ವದ, ಏಕೈಕ ವಿಷಯವೆಂದು ಪರಿಗಣಿಸಬಾರದು ಮತ್ತು ಇತರರ ಅಗತ್ಯಗಳನ್ನು ನಿರ್ಲಕ್ಷಿಸಬಾರದು ಎಂದಾಗಿರುತ್ತದೆ. ಇದು ಅತ್ಯಂತ ಮೂಲಭೂತ ವಿಧಾನವಾಗಿರುತ್ತದೆ. 

ರಚನಾತ್ಮಕವಾದುದನ್ನು ಅದ್ಭುತವಾಗಿ ಜಾರಿಗೊಳಿಸುವುದು ಎಂದರೆ ತಿಳುವಳಿಕೆಯಿಂದ, ಕೋಪಗೊಳ್ಳದೆ, ದುರಾಸೆಯಿಲ್ಲದೆ ಅಥವಾ ದಾರಿದ್ರ್ಯವಿಲ್ಲದೆ ವರ್ತಿಸುವುದಾಗಿರುತ್ತದೆ. ಅನುಮೋದನೆಯ ಅಗತ್ಯವಿರುವ ಮತ್ತು ಯಾವಾಗಲೂ ನಿಗಾ ಇಡಬೇಕಾದ ವ್ಯಕ್ತಿಯಾಗುವುದನ್ನು ತಪ್ಪಿಸಲು ನಾವು ಬಯಸಬೇಕು. ಈ ವರ್ತನೆಗಳ ಪ್ರಭಾವದಡಿ ನಾವು ವರ್ತಿಸಿದಾಗ, ನಾವು ತೊಂದರೆ ಉಂಟುಮಾಡುತ್ತೇವೆ, ಅಲ್ಲವೇ? ನಾವು ಇತರರ ಮೇಲೆ ಅವಾಸ್ತವಿಕ ಬೇಡಿಕೆಗಳನ್ನು ಹೇರುತ್ತೇವೆ ಮತ್ತು ನಿರಾಶೆಗೊಳ್ಳುತ್ತೇವೆ. ರಚನಾತ್ಮಕವಾಗಿ ವರ್ತಿಸುವುದು ಎಂದರೆ ಹೀಗೆ ವರ್ತಿಸದಿರುವುದಾಗಿರುತ್ತದೆ. ಆಳವಾದ ಮಟ್ಟದಲ್ಲಿ, ಈ ಗೊಂದಲದ ಭಾವನೆಗಳು ಮತ್ತು ವರ್ತನೆಗಳಿಗಾಗಿ ನಾವು ನಿಜವಾದ ನಿಲುಗಡೆಯನ್ನು ಸಾಧಿಸಿದ್ದೇವೆ ಎಂಬುದು ಇದರ ಅರ್ಥವಾಗಿರುವುದಿಲ್ಲ; ಬದಲಿಗೆ ಅವುಗಳ ಬಲವಾದ ಪ್ರಭಾವದ ಅಡಿಯಲ್ಲಿ ಕಾರ್ಯನಿರ್ವಹಿಸದಿರಲು ಸಮರ್ಥರಾಗಿದ್ದೇವೆ ಎಂಬ ಅರ್ಥವಾಗಿರುತ್ತದೆ. 

ಜೀವನವೇ ನಮ್ಮ ತರಬೇತಿ ಕೇಂದ್ರ 

ನಾವು ನಿಷ್ಕಪಟವಾಗಿರಲು ಬಯಸುವುದಿಲ್ಲ ಮತ್ತು ಇತರರ ಗುಣಗಳನ್ನು ಗುರುತಿಸದೇ ಇರಲು ಬಯಸುವುದಿಲ್ಲ. ನಮ್ಮಲ್ಲಿ ಭಾವನೆಗಳಿರುವಂತೆ ಇತರರಿಗೂ ಭಾವನೆಗಳಿವೆ ಎಂಬುದನ್ನು ನಾವು ಗುರುತಿಸಬೇಕು. ನಾವು ಹೇಗೆ ತಿರಸ್ಕಾರವನ್ನು ಅಥವಾ ನಿರ್ಲಕ್ಷೆಯನ್ನು ಪಡೆಯಲು ಬಯಸುವುದಿಲ್ಲವೋ, ಅಂತೆಯೇ ಇತರರು ಸಹ ನಿರ್ಲಕ್ಷೆ ಅಥವಾ ತಿರಸ್ಕಾರವನ್ನು ಇಷ್ಟಪಡುವುದಿಲ್ಲ. ಇವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅರಿವಿಕೆಗಳಾಗಿವೆ. ಹೀಗೆ ಮಾಡಲು, ಪ್ರಾರ್ಥನೆಯ ಮೂರನೇ ಸಾಲಿನಲ್ಲಿ ಹೇಳುವಂತೆ ನಾವು ನಮ್ಮ ಮನಸ್ಸನ್ನು ಸಂಪೂರ್ಣವಾಗಿ ನಿಗ್ರಹಿಸಬೇಕಾಗಿದೆ

ನಮ್ಮ ಜೀವನವನ್ನು ತರಬೇತಿ ಕೇಂದ್ರವಾಗಿ ನೋಡುವುದು ಬಹಳಾ ಸಹಾಯಕವಾಗಿರುತ್ತದೆ. ಇದೇ ಅಭ್ಯಾಸವಾಗಿರುತ್ತದೆ. ಖಂಡಿತವಾಗಿಯೂ ಇದು ಮೇಣದಬತ್ತಿಗಳು, ಧೂಪದ್ರವ್ಯ, ಯಾವುದೇ ರೀತಿಯ ಅಳುವ ಶಿಶುವಿರದ ಮೌನಾವೃತವಾದ ಪರಿಸರದಲ್ಲಿ, ದಿಂಬಿನ ಮೇಲೆ ಕುಳಿತುಕೊಳ್ಳುವುದಕ್ಕೆ ಸೀಮಿತವಾಗಿರುವುದಿಲ್ಲ. 

ಒಮ್ಮೆ ನಾನು ಒಂದು ಬೌದ್ಧ ಕೇಂದ್ರದಲ್ಲಿ ಆಗಮಿಸಿದೆ, ಅಲ್ಲಿ ನನ್ನ ವಿದ್ಯಾರ್ಥಿಯೊಬ್ಬರು ಪಾಠ ಮಾಡುತ್ತಿದ್ದರು ಮತ್ತು ಯಾರೋ ಒಬ್ಬರು ತಮ್ಮ ಎರಡು ವರ್ಷದ ಶಿಶುವನ್ನು ಕರೆತಂದಿದ್ದರು. ಅಧಿವೇಶನ ನಡೆಯುತ್ತಿರುವಾಗ ಆ ಎರಡು ವರ್ಷದ ಮಗುವು ಬೋಧನಾ ಕೊಠಡಿಯಲ್ಲಿ ಓಡಾಡುತ್ತಿತ್ತು. ಎರಡು ವರ್ಷದ ಮಗುವಿನಿಂದ ನಾವು ಏನನ್ನು ತಾನೇ ನಿರೀಕ್ಷಿಸಲಾಗುತ್ತದೆ - ಅದು ಒಂದೂವರೆ ಗಂಟೆಗಳ ಕಾಲ ಸುಮ್ಮನೆ ಕುಳಿತುಕೊಳ್ಳಲಿ ಎಂದೇ? ಅಂಬೆಗಾಲಿಡುವ ಈ ಶಿಶುವನ್ನು ತರಗತಿಗೆ ಕರೆತಂದಿದ್ದು ಅತ್ಯುತ್ತಮವಾದ ವಿಷಯ ಎಂದು ಶಿಕ್ಷಕರು ಸೂಚಿಸಿದರು; ನಾವು ಧ್ಯಾನಿಸಲು ಪ್ರಯತ್ನಿಸುತ್ತಿರುವಾಗ, ಈ ಪುಟ್ಟ ಮಗು ಓಡಾಡುವುದು ಮತ್ತು ಸಾಕಷ್ಟು ಶಬ್ದ ಮಾಡುವುದು ಅದ್ಭುತ ಸವಾಲಾಗಿತ್ತು. ಇದು ನಿಜವಾದ ಅಭ್ಯಾಸವಾಗಿರುತ್ತದೆ. ನಾವು ಅಸಮಾಧಾನಗೊಳ್ಳದೆ ಅಥವಾ ವಿಚಲಿತರಾಗದೆ ಅಭ್ಯಾಸ ಮಾಡಬಹುದೇ? ಮಗುವಿಗೆ ಪಟ್ಟಾಗದಂತೆ ಪೋಷಕರು ಗಮನ ಹರಿಸಬಾರದು ಎಂದು ಹೇಳುತ್ತಿಲ್ಲ. ಆದರೆ ನಾವು ಹೊರಗಿದ್ದಾಗ, ಜೋರಾದ ಟ್ರಾಫಿಕ್ ಶಬ್ದಗಳೊಂದಿಗೆ ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಾಗಲೂ ಅಭ್ಯಾಸ ಮಾಡಬಹುದೇ? 

ಇದು ಜೀವನ, ಮತ್ತು ಜೀವನವು ನಮ್ಮ ತರಬೇತಿ ಕೇಂದ್ರವಾಗಿರಬೇಕು, ನಮ್ಮ ಅಜ್ಞಾನ, ಮೌಢ್ಯ ಮತ್ತು ಗೊಂದಲದ ಭಾವನೆಗಳ ವಿರುದ್ಧದ ನಿಜವಾದ ಯುದ್ಧಭೂಮಿಯಾಗಿರಬೇಕು. ಬೋಧಿಸತ್ವನ ರತ್ನಮಾಲೆಯಲ್ಲಿ, ಅತಿಶ ಹೀಗೆ ಸ್ಪಷ್ಟವಾಗಿ ಹೇಳುತ್ತಾನೆ: 

ಹಲವರ ಮಧ್ಯೆ ಇರುವಾಗ ನನ್ನ ಮಾತಿನ ಮೇಲೆ ನಿಗಾ ಇರಲಿ. ಏಕಾಂಗಿಯಾಗಿರುವಾಗ, ನನ್ನ ಮನಸ್ಸಿನ ಮೇಲೆ ನಿಗಾ ಇರಲಿ. 

ಇದು ತುಂಬಾ ಸಹಾಯಕವಾಗಿದೆ. ನಾವು ಇತರರೊಂದಿಗೆ ಇರುವಾಗ, ನಾವು ಅವರೊಂದಿಗೆ ಹೇಗೆ ಮಾತನಾಡುತ್ತೇವೆ ಎಂಬುದರ ಬಗ್ಗೆ ಗಮನವಿರಲಿ. ಕೇವಲ ಪದಗಳಲ್ಲದೆ, ಧ್ವನಿಯ ಕೋಮಲತೆ, ಭಾವನೆಗಳು ಮತ್ತು ಅವುಗಳ ಹಿಂದಿನ ವರ್ತನೆಗಳ ಮೇಲೆ ಗಮನವಿರಲಿ. ನಾವು ಹಗೆತನ ಅಥವಾ ದುರಹಂಕಾರದಿಂದ ಮಾತನಾಡುತ್ತಿದ್ದೇವೆ ಎಂದು ನಾವು ಗಮನಿಸಿದರೆ, ಅದನ್ನು ಗುರುತಿಸಿ ಮತ್ತು ಅದನ್ನು ಕಡಿಮೆ ಮಾಡಿ. ನಾವು ಏಕಾಂಗಿಯಾಗಿರುವಾಗ, ನಮ್ಮ ಮನಸ್ಸಿನ ಬಗ್ಗೆಯೂ ಇದೇ ವಿಷಯವನ್ನು ಪಾಲಿಸಬೇಕು. ನಾವು ಏನನ್ನು ಆಲೋಚಿಸುತ್ತಿದ್ದೇವೆ ಎಂಬುದನ್ನು ಗಮನಿಸಿ, ಇದು " ನಾವು ಪಾಪದವರು, ಯಾರೂ ನಮಗೆ ಮೆಚ್ಚುಗೆಯನ್ನು ನೀಡುವುದಿಲ್ಲ" ಎಂಬ ಸಿಂಡ್ರೋಮ್ ಆಗಿರಬಹುದು. 

ಸಪ್ತಬಿಂದು ಚಿತ್ತ ಸಾಧನದಲ್ಲಿ ಮೂರು ಕಷ್ಟಕರ ವಿಷಯಗಳಿವೆ ಎಂದು ಹೇಳಲಾಗುತ್ತದೆ: ಎದುರಾಳಿಗಳ ಬಗ್ಗೆ ಎಚ್ಚರಿಕೆಯಿಂದಿರುವುದು – ಎಚ್ಚರಿಕೆಯಿಂದಿರುವುದು ಎಂದರೆ ಅವರನ್ನು ನೆನಪಿಟ್ಟುಕೊಳ್ಳುವುದು - ಅವುಗಳನ್ನು ಅನ್ವಯಿಸಲು ಮತ್ತು ಅವುಗಳನ್ನು ನಿರ್ವಹಿಸಲು ಎಚ್ಚರಿಕೆಯಿಂದಿರುವುದು. ಇವುಗಳು ಗಮನಹರಿಸಬೇಕಾದ ಅತ್ಯಂತ ಕಷ್ಟಕರವಾದ ಮತ್ತು ಮುಖ್ಯವಾದ ವಿಷಯಗಳಾಗಿವೆ. ನಾವು ಸಾವಧಾನತೆಯ ಅಭ್ಯಾಸದ ಬಗ್ಗೆ ಬಹಳಾ ಕೇಳುತ್ತೇವೆ, ಆದರೆ ಪಾಶ್ಚಾತ್ಯ ಸನ್ನಿವೇಶದಲ್ಲಿ ಇದನ್ನು ಅರ್ಥಮಾಡಿಕೊಂಡಂತೆ, ಇದರರ್ಥ ನಾವು ಪ್ರಸ್ತುತ ಕ್ಷಣದಲ್ಲಿರುವುದು ಎಂಬುದಾಗಿರುವುದಿಲ್ಲ. "ಸಾವಧಾನತೆ" ಎಂಬ ಪದವು ನೆನಪಿನಲ್ಲಿಡುವುದು ಎಂಬುದಾಗಿರುತ್ತದೆ. ನಾವು ಪ್ರಕ್ಷೇಪಿಸುತ್ತಿರುವುದು ಅಸಂಬದ್ಧ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ನಂತರ ಈ ಅರಿವನ್ನು ಅನ್ವಯಿಸಿ, ಅದನ್ನು ಮುಂದುವರಿಸಬೇಕು. ಇದೇ ದೈನಂದಿನ ಜೀವನದ ನಿಜವಾದ ಅಭ್ಯಾಸವಾಗಿರುತ್ತದೆ.

ಕಲ್ಪಿತವಲ್ಲದ ಮತ್ತು ಪರಿಕಲ್ಪನಾ ಸ್ಥಿತಿಗಳು 

ಕಲ್ಪಿತವಲ್ಲದ ಸ್ಥಿತಿಯಲ್ಲಿರಬೇಕು ಮತ್ತು ಪರಿಕಲ್ಪನಾತ್ಮಕವಾಗಿರಬಾರದು ಎಂಬ ಬೌದ್ಧ ಸಲಹೆಯನ್ನು ನಾವು ಕೇಳಿದ್ದೇವೆ. ಇದರರ್ಥ ಏನು? ನಾವು ಅದರ ತಾಂತ್ರಿಕ ವ್ಯಾಖ್ಯಾನ ಮತ್ತು ವಿಶ್ಲೇಷಣೆಯನ್ನು ನೀಡಬಹುದು; ಆದರೆ ಅದನ್ನು ಪ್ರಾಯೋಗಿಕ ಮಟ್ಟದಲ್ಲಿ ನೋಡಿದರೆ, ಈ ವಿಷಯಗಳನ್ನು ಅನ್ವಯಿಸಲು, ನಾವು ಈ ವಿಷಯಗಳ ಬಗ್ಗೆ ಯೋಚಿಸಬೇಕಾಗಿಲ್ಲ. ಫ್ಲೈಟ್ ಅಥವಾ ರೈಲು ತಪ್ಪಿಸಿಕೊಂಡ ಪರಿಸ್ಥಿತಿಯಲ್ಲಿನ ಗುರಿಯು, ಅಶಾಶ್ವತತೆಯ ಬಗ್ಗೆ ಯೋಚಿಸುವುದು, ಎಲ್ಲವೂ ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಹೇಗೆ ಪ್ರಭಾವಿತವಾಗಿರುತ್ತದೆ ಮತ್ತು ನಾವು ಕೋಪಗೊಂಡರೆ ಅದು ಹೇಗೆ ಅಸಹಾಯಕವಾಗಿರುತ್ತದೆ ಎಂದು ಯೋಚಿಸುವುದಾಗಿರುವುದಿಲ್ಲ. ಮೊದಲ ಹೆಜ್ಜೆಯಾಗಿ, ನಾವು ಈ ಅಂಶಗಳ ಬಗ್ಗೆ ಯೋಚಿಸಬಹುದು; ಆದರೆ ನಮ್ಮ ಬಯಕೆಯು ಇದು ಸ್ವಯಂಚಾಲಿತವಾಗಬೇಕು ಎನ್ನುವುದಾಗಿರುತ್ತದೆ. ನಾವು ಅದರ ಬಗ್ಗೆ ಯೋಚಿಸಬೇಕಾಗಿಲ್ಲ; ಅದು ತಾನಾಗಿಯೇ ಬರಬೇಕು. ಸ್ವಯಂಚಾಲಿತವಾಗಿ, ನಾವು ಅತಿಯಾಗಿ ಪ್ರತಿಕ್ರಿಯಿಸುವುದಿಲ್ಲ, ಬದಲಿಗೆ ಹೊಂದಿಕೊಳ್ಳುತ್ತೇವೆ. 

ಇದನ್ನೇ ನಾವು ಗುರಿಯಾಗಿಸಿಕೊಂಡಿರಬೇಕು. ಇದು ಯಾವುದೋ ಅತೀಂದ್ರಿಯ ಸ್ಥಿತಿಯಾಗಿರುವುದಿಲ್ಲ. ಬಹುಶಃ ಇದು ಸಂಪೂರ್ಣವಾಗಿ, ಆಳವಾದ ಪರಿಕಲ್ಪನೆಯಿಲ್ಲದ ಸ್ಥಿತಿಯಾಗಿರುವುದಿಲ್ಲ, ಆದರೆ ತಾಂತ್ರಿಕವಲ್ಲದ ರೀತಿಯಲ್ಲಿ, ನಾವು ಇದನ್ನೇ ಸಾಧಿಸಲು ಅಭ್ಯಾಸ ಮಾಡುತ್ತಿದ್ದೇವೆ. ನಮಗಾಗಿ ಮತ್ತು ಇತರರಿಗೆ ಹೆಚ್ಚು ಹೆಚ್ಚು ದುಃಖವನ್ನು ಸೃಷ್ಟಿಸುವುದನ್ನು ತಪ್ಪಿಸಲು, ಈ ಎಲ್ಲಾ ಬೋಧನೆಗಳನ್ನು ನಮ್ಮ ಜೀವನದಲ್ಲಿ ಸಂಯೋಜಿಸಲು ನಾವು ಅಭ್ಯಾಸ ಮಾಡುತ್ತೇವೆ ಅಷ್ಟೆ. 

ಪ್ರಶ್ನೆಗಳು 

ಯೋಜನೆಯನ್ನು ಅನುಸರಿಸುವಲ್ಲಿ ಯಾವಾಗ ಹೊಂದಿಕೊಳ್ಳಬೇಕು 

ನಾನು ಹೊಂದಿಕೊಳ್ಳುವವನಾಗಿದ್ದೇನೆ ಮತ್ತು ವಾಸ್ತವವನ್ನು ಎದುರಿಸಲು ಬಯಸುತ್ತೇನೆ ಎಂದು ನಾನು ಯೋಚಿಸಲು ಬಯಸುತ್ತೇನೆ, ಆದರೆ ಅದು ಯಾವಾಗಲೂ ನಿಜವಾಗಿರುವುದಿಲ್ಲ. ವಾಸ್ತವವನ್ನು ತಿಳಿದುಕೊಳ್ಳುವಲ್ಲಿ ನಾನು ಎದುರಿಸುತ್ತಿರುವ ಒಂದು ಸಮಸ್ಯೆಯೆಂದರೆ, ಯಾವಾಗ ಯೋಜನೆಯ ಕೈಬಿಡಬೇಕು ಮತ್ತು ಯಾವಾಗ ಬಿಟ್ಟುಕೊಡಬಾರದು, ಯಾವುದನ್ನು ಬದಲಾಯಿಸಬಹುದು ಮತ್ತು ಯಾವುದನ್ನು ಬದಲಾಯಿಸಲಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದಾಗಿರುತ್ತದೆ. ಉದಾಹರಣೆಗೆ, ರೈಲು ನನ್ನ ಕೈತಪ್ಪಿದಾಗ, ಓಡಿಹೋಗಿ, ಟ್ಯಾಕ್ಸಿ ತೆಗೆದುಕೊಂಡು, ಮುಂದಿನ ನಿಲ್ದಾಣದಲ್ಲಿ ರೈಲನ್ನು ಹಿಡಿದೆ. ನಮ್ಮ ಯೋಜನೆಗಾಗಿ ಹೋರಾಡಲು ಪ್ರಯತ್ನಿಸುವುದು ಯಾವಾಗ ಉಪಯುಕ್ತವೆಂದು ನಾವು ಹೇಗೆ ನಿರ್ಣಯಿಸಬಹುದು? 

ಒಂದು ಯೋಜನೆಯನ್ನು ಅನುಸರಿಸಲು ಅಥವಾ ಅದನ್ನು ಬಿಟ್ಟುಕೊಡಲು ಹಲವಾರು ಅಂಶಗಳು ಕಾರಣವಾಗಿರುತ್ತವೆ. ಪರ್ಯಾಯ ಮಾರ್ಗಗಳಿವೆಯೇ ಮತ್ತು ಅದನ್ನು ಬದಲಾಯಿಸಬಹುದೇ ಎಂದು ನಾವು ನೋಡಬೇಕು, ಉದಾಹರಣೆಗೆ, ನಿಮ್ಮ ಉದಾಹರಣೆಯಂತೆ, ಟ್ಯಾಕ್ಸಿ ತೆಗೆದುಕೊಂಡು ಮುಂದಿನ ನಿಲ್ದಾಣದಲ್ಲಿ ರೈಲು ಹಿಡಿಯುವುದು. ಟ್ಯಾಕ್ಸಿಗಳು ಲಭ್ಯವಿಲ್ಲದಿದ್ದರೆ, ನಾವು ಬಿಟ್ಟುಕೊಡಬೇಕಾಗುತ್ತದೆ. ಇದು ಪ್ರಾಯೋಗಿಕ ಮಟ್ಟದಲ್ಲಿನ ಒಂದು ಉದಾಹರಣೆಯಾಗಿರುತ್ತದೆ. ಆದರೆ ಇನ್ನೊಂದು ಮಟ್ಟದಲ್ಲಿ, ನಾವು ಶಾಲೆಯೊಂದಕ್ಕೆ ಸೇರಲು ಅರ್ಜಿ ಸಲ್ಲಿಸಿದ್ದೇವೆ ಮತ್ತು ಈ ವರ್ಷ ನಾವು ತಿರಸ್ಕರಿಸಲ್ಪಟ್ಟಿದ್ದೇವೆ ಎಂದು ಹೇಳೋಣ. ನಾವು ಬಿಟ್ಟುಕೊಡುತ್ತೇವೆಯೇ ಅಥವಾ ಮುಂದಿನ ವರ್ಷ ಮತ್ತೆ ಅರ್ಜಿ ಸಲ್ಲಿಸುತ್ತೇವೆಯೇ? ನಾವು ಮೌಲ್ಯಮಾಪನ ಮಾಡಬೇಕು. ಬೇರೆಲ್ಲಿಯೂ ನಮ್ಮನ್ನು ಸ್ವೀಕರಿಸದಿದ್ದರೆ, ಮುಂದಿನ ವರ್ಷ ಅರ್ಜಿ ಸಲ್ಲಿಸುವುದರಲ್ಲಿ ನಕಾರಾತ್ಮಕವಾದುದೇನಿಲ್ಲ. ಇಲ್ಲಿ ವಾಸ್ತವಿಕವಾದ ಹೆಜ್ಜೆ ಯಾವುದು ಎಂದು ಧೃಡಪಡಿಸಲು, ಪರಿಸ್ಥಿತಿಯನ್ನು ವಿಶ್ಲೇಷಸಬೇಕಾಗುತ್ತದೆ. ನಾವು ನಮ್ಮ ಸಾಮರ್ಥ್ಯ ಮತ್ತು ಅರ್ಹತೆಗಳನ್ನು ಉತ್ಪ್ರೇಕ್ಷಿಸುತ್ತಿದ್ದೇವೆಯೇ ಅಥವಾ ಇಲ್ಲವೇ? ನಾವು ಇತರರ ಅಭಿಪ್ರಾಯಗಳನ್ನೂ ಕೇಳಬೇಕು.

ಪ್ರತಿಯೊಂದು ವೈಯಕ್ತಿಕ ಆಯ್ಕೆಗೆ ವಿಶ್ಲೇಷಣೆಯ ಅಗತ್ಯವಿರುತ್ತದೆ; ಎಲ್ಲದಕ್ಕೂ ಒಗ್ಗುವ ಒಂದು ಏಕಸ್ವಾಮ್ಯ ಉತ್ತರವಿರುವುದಿಲ್ಲ. ನಮ್ಮ ಗುರಿಗಳ ಸಾಧನೆ ಯಾವುದರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ನಾವು ಪರಿಶೀಲಿಸಬೇಕಾಗಿದೆ, ಏಕೆಂದರೆ ಕಾರಣಗಳು ಮತ್ತು ಪರಿಸ್ಥಿತಿಗಳಿಂದಾಗಿ ವಿಷಯಗಳು ಉದ್ಭವಿಸುತ್ತವೆ. ಆ ಕಾರಣಗಳು ಮತ್ತು ಷರತ್ತುಗಳನ್ನು ಪೂರೈಸಬಹುದೇ? ಅವುಗಳನ್ನು ಈಗ ಪೂರೈಸಲು ಸಾಧ್ಯವಾಗದಿದ್ದರೆ, ಭವಿಷ್ಯದಲ್ಲಿ ಅವುಗಳನ್ನು ಪೂರೈಸುವ ಸಾಧ್ಯತೆ ಇದೆಯೇ? ಇತರ ಪರ್ಯಾಯ ಅವಕಾಶಗಳಿವೆಯೇ? ಈ ನಿರ್ಧಾರಗಳನ್ನು ಮತ್ತು ಬದಲಾವಣೆಗಳನ್ನು ನಾವು ಅತ್ಯಂತ ತರ್ಕಬದ್ಧ ರೀತಿಯಲ್ಲಿ ಸಮೀಪಿಸಬೇಕಾಗಿದೆ. 

ಬಹಳ ಭಾವನಾತ್ಮಕ ವ್ಯಕ್ತಿಯಾಗಿರುವುದು 

ನರಳುತ್ತಿರುವ ವೃತ್ತದಲ್ಲಿ ನನ್ನನ್ನು ನಾನೇ ಇರಿಸಿಕೊಂಡಿರುವುದನ್ನು ಗುರುತಿಸುವುದು ನನಗೆ ಹೊಸತಾಗಿದೆ. ನನ್ನ ಪ್ರಕ್ಷೇಪಣಗಳು ತರ್ಕಬದ್ಧವಾಗಿಲ್ಲ, ನನ್ನ ಭಾವನೆಗಳು ವಿಭಿನ್ನವಾಗಿವೆ ಎಂದು ನಾನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ, ಆದರೂ ನಾನು ಮತ್ತೆ ಮತ್ತೆ ಹಿಮ್ಮೆಟ್ಟಿತ್ತಿರುತ್ತೇನೆ. ಪ್ರಸ್ತುತವಾಗಿ ನೆನಪಿಟ್ಟುಕೊಳ್ಳುವುದು ಕಷ್ಟಕರವಾದ ಕಾರಣ, ನನ್ನನ್ನು ನಾನೇ ಅಪಮೌಲ್ಯಗೊಳಿಸದಿರಲು ನಾನು ಏನು ಮಾಡಬಹುದು? 

ಸಾಮಾನ್ಯವಾಗಿ, ನಮಗಾಗಿ ಯಾವುದು ಉಪಯುಕ್ತ ಮತ್ತು ಯಾವುದು ಉತ್ತಮ ಎಂದು ನಮಗೆ ತಿಳಿದಿರುತ್ತದೆ, ಆದರೆ ನಮ್ಮ ಭಾವನೆಗಳು ಎಷ್ಟು ಪ್ರಬಲವಾಗಿರುತ್ತವೆ ಎಂದರೆ, ಅದರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಕಷ್ಟವಾಗಿರುತ್ತದೆ. ಇದು ಸರ್ವೇಸಾಮಾನ್ಯವಾದ ಘಟನೆಯಾಗಿರುತ್ತದೆ. ನಾವು ಹೆಚ್ಚು ನಿರ್ಣಾಯಕರಾಗಿರಲು ಪ್ರಯತ್ನಿಸಬೇಕಾಗಿದೆ, ಅಂದರೆ ನಾನು ತುಂಬಾ ಭಾವನಾತ್ಮಕವಾಗಿ ಅಸಮಾಧಾನಗೊಂಡಿದ್ದರೂ, ಇದು ನಾನು ತೀರಾ ಗಂಭೀರವಾಗಿ ಪರಿಗಣಿಸುವ ವಿಷಯವಾಗಿರುವುದಿಲ್ಲ ಎಂದು ಮನವರಿಕೆ ಮಾಡಿಕೊಳ್ಳಬೇಕು.

ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳದಿರುವುದು ಮುಖ್ಯವಾಗಿರುತ್ತದೆ. ನಾವು ಒಂದು ವಿಷಯದಿಂದ ಬಹಳಾ ಅಸಮಾಧಾನಗೊಳ್ಳಬಹುದು ಅಥವಾ ಪ್ರೇರಿತರಾಗಬಹುದು; ಆದರೆ ಈ ವಿಷಯಗಳು ಹಾದುಹೋಗುತ್ತವೆ. ಮನಸ್ಥಿತಿಗಳು ಮತ್ತು ಭಾವನೆಗಳು ಹಾದುಹೋಗುತ್ತವೆ ಮತ್ತು ಬದಲಾಗುತ್ತವೆ. ನಾವು ಅವುಗಳನ್ನು ಗ್ರಹಿಸಲು ಮತ್ತು ಅವುಗಳೊಂದಿಗೆ ಗುರುತಿಸಿಕೊಳ್ಳಲು ಬಯಸಬಾರದು. ಉದಾಹರಣೆಗೆ, " ನನ್ನ ನಿರೀಕ್ಷೆಗೆ ತಕ್ಕಂತೆ ನಾನು ಮಾಡಲಿಲ್ಲ, ಆದ್ದರಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ ಮತ್ತು ಗೊಂದಲಕ್ಕೊಳಗಾಗಿದ್ದೇನೆ. ನಾನು ಅರ್ಹನಲ್ಲ”, ಎಂದು ಯೋಚಿಸಬಾರದು. ಆ ರೀತಿಯಾಗಿ ಯೋಚಿಸುವಾಗ, ನಾವು ನಮ್ಮ ಮನಸ್ಥಿತಿಯೊಂದಿಗೆ ಗುರುತಿಸಿಕೊಳ್ಳುತ್ತೇವೆ ಮತ್ತು ನಾವು ಅದನ್ನು ಹಿಡಿದಿಟ್ಟುಕೊಳ್ಳುತ್ತೇವೆ. ನಮ್ಮ ಭಾವನೆಯು ಬಹಳಾ ಮುಖ್ಯ ಅಥವಾ ವಿಶೇಷವೆಂದು ನಾವು ಪರಿಗಣಿಸುತ್ತೇವೆ, ಆದರೆ ಅದು ಹಾಗಿರುವುದಿಲ್ಲ. ಇದು ಕೇವಲ ಹಾದುಹೋಗುವ ಮನಸ್ಥಿತಿಯಾಗಿದೆ. ಇದು ನಮಗೆ ನಿಜವಾಗಿಯೂ ಬೇಕಾಗಿಲ್ಲ ಎಂದು ನಾವು ಮನವರಿಕೆ ಮಾಡಿಕೊಳ್ಳಬೇಕು. ಈ ಮನಸ್ಥಿತಿಯು ಹಾದುಹೋಗುತ್ತದೆ ಎಂದು ನಾವು ಮನವರಿಕೆ ಮಾಡಿಕೊಂಡು, ಅದನ್ನು ಹಾದುಹೋಗಲು ಬಿಡಬೇಕು. ಇದು ನಾವು ಹೊಂದಿದ್ದ ಅವಾಸ್ತವಿಕ ನಿರೀಕ್ಷೆ ಎಂದು ನಾವು ನಮ್ಮಲ್ಲಿ ಆಳವಾಗಿ ಅರ್ಥಮಾಡಿಕೊಂಡಿರುತ್ತೇವೆ. ನಾವು ನೊಂದಿರುತ್ತೇವೆ, ಆದರೆ ಈ ನೋವು ಹಾದುಹೋಗುತ್ತದೆ. ಆ ನೋವೇ ಪ್ರಪಂಚದ ಅಂತ್ಯ ಎಂಬಂತೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬಾರದು. 

ಸಾಂಪ್ರದಾಯಿಕವಾಗಿ, ಒಂದು ಮನಸ್ಥಿತಿಯನ್ನು, ಆಕಾಶದಲ್ಲಿನ ಒಂದು ಹಾದುಹೋಗುವ ಮೋಡ ಎಂದು ವಿವರಿಸಬಹುದು. ಅದನ್ನು ನಿಭಾಯಿಸಲು ಪ್ರಾರಂಭಿಸಲು, ಇದು ಏಕೈಕ ಮಾರ್ಗವಾಗಿರುತ್ತದೆ. ಅಲ್ಲದೆ, ಭಾವನೆಗಳಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ನಮ್ಮಲ್ಲಿ ಕೆಲವರು ಇತರರಿಗಿಂತ ಹೆಚ್ಚು ಭಾವನಾತ್ಮಕವಾಗಿರುತ್ತೇವೆ, ಸರಿ, ಅದರ ಬಗ್ಗೆ ನಾವು ವಿಮರ್ಶಾತ್ಮಕವಾಗಿರಬೇಕಿಲ್ಲ. ಇದು ವಾಸ್ತವವನ್ನು ಒಪ್ಪಿಕೊಳ್ಳುವ ಭಾಗವಾಗಿರುತ್ತದೆ. ವಾಸ್ತವವು ನಮ್ಮ ವರ್ತಮಾನವಾಗಿರುತ್ತದೆ; ನಾವು ತುಂಬಾ ಭಾವನಾತ್ಮಕವಾಗಬಹುದು ಮತ್ತು ಸುಲಭವಾಗಿ ಅಸಮಾಧಾನಗೊಳ್ಳಬಹುದು, ಆದರೆ ನಾವು ಅದನ್ನು ಹಿಡಿದಿಟ್ಟುಕೊಳ್ಳಬೇಕಾಗಿಲ್ಲ. ವಾಸ್ತವ ಏನೆಂಬುದನ್ನು ಮನವರಿಕೆ ಮಾಡಿಕೊಳ್ಳಲು ಹೆಚ್ಚು ಹೆಚ್ಚಾಗಿ ಕಾರ್ಯನಿರ್ವಹಿಸಿ. 

ಉದಾಹರಣೆಗೆ, "ನಾನು ಏಕಾಂತವಾಸಕ್ಕೆ ಹೋದೆ ಮತ್ತು ಅಲ್ಲಿ ನಾನು ಅದ್ಭುತವಾದ ಏಕಾಗ್ರತೆಯನ್ನು ಪಡೆಯುವೆ ಎಂದು ಭಾವಿಸಿದೆ, ಆದರೆ ಅಷ್ಟೂ ಸಮಯ ನನ್ನ ಮನಸ್ಸು ಎಲ್ಲೆಂದರಲ್ಲಿ ಅಲೆದಾಡುತ್ತಿತ್ತು." ಸರಿ. ಇದರರ್ಥ, ನಾವು ಅವಾಸ್ತವಿಕವಾದ ನಿರೀಕ್ಷೆಯನ್ನು ಹೊಂದಿದ್ದೆವು. ಸಹಜವಾಗಿ, ನಮ್ಮ ಮನಸ್ಸು ಅಲೆದಾಡುತ್ತದೆ ಮತ್ತು ಸಹಜವಾಗಿ, ಅದು ತಕ್ಷಣವೇ ಉತ್ತಮವಾಗಿರುವುದಿಲ್ಲ. ನಿಮ್ಮ ನಿರೀಕ್ಷೆಯನ್ನು ಕಡಿಮೆ ಮಾಡಿ ಮತ್ತು ಅದರ ಬಗ್ಗೆ ಪ್ರಾಮಾಣಿಕವಾಗಿ ಭಾವಿಸಿ. ಉದಾಹರಣೆಗೆ, "ನಾನು ಅತ್ಯುನ್ನತ ಮಟ್ಟವನ್ನು ಸಾಧಿಸಬಲ್ಲೆ, ಆದರೆ ಅದು ಕಾರಣ ಮತ್ತು ಪರಿಣಾಮವನ್ನು ಅವಲಂಬಿಸದೇ ಇರುವುದಿಲ್ಲ. ನಾನು ಕಠಿಣ ಪರಿಶ್ರಮವನ್ನು ಪಡಬೇಕು.” 

ಅಲ್ಲದೆ, ನಾವು ತುಂಬಾ ಭಾವನಾತ್ಮಕವಾಗಿದ್ದರೆ, ಆ ಪ್ರವೃತ್ತಿಯನ್ನು ಪರಿವರ್ತಿಸಿ, ಸಕಾರಾತ್ಮಕ ಭಾವನೆಗಳನ್ನು ಉತ್ಪಾದಿಸಲು ಬಳಸಬಹುದು. ಆ ಸನ್ನಿವೇಶದಲ್ಲಿ, ನಾವು ಬಲವಾದ ಪ್ರೀತಿ ಮತ್ತು ಸಹಾನುಭೂತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಈ ಅರ್ಥದಲ್ಲಿ, ಭಾವನಾತ್ಮಕವಾಗಿರುವುದು ಸಕಾರಾತ್ಮಕ ವಿಷಯವಾಗಿದೆ. ಅಲ್ಲದೆ, ತೀರಾ ತರ್ಕಬದ್ಧವಾಗಿರುವ ಕೆಲವು ಜನರಿರುವರು, ಅವರಿಗೆ ಯಾವುದೇ ಭಾವನೆಯನ್ನು ಅನುಭವಿಸಲು ಬಹಳಾ ಕಷ್ಟವಾಗಿರುತ್ತದೆ. ಅವರಿಗೆ, ಪ್ರೀತಿ ಮತ್ತು ಸಹಾನುಭೂತಿಯನ್ನು ನಿಜವಾಗಿ ಅನುಭವಿಸುವುದು ಬಹಳಾ ಕಷ್ಟವಾಗಿರುತ್ತದೆ. ನೀವು ತುಂಬಾ ಭಾವನಾತ್ಮಕವಾದ ವ್ಯಕ್ತಿಯಾಗಿದ್ದರೆ, ಸಕಾರಾತ್ಮಕವಾದ ವಿಷಯವೊಂದು ಈಗಾಗಲೇ ಇದ್ದಲ್ಲಿ, ಅದನ್ನು ಪರಿವರ್ತಿಸಬೇಕು ಅಷ್ಟೆ. ನೀವು ಕಾರಣ ಮತ್ತು ಪರಿಣಾಮವನ್ನು ಅನ್ವಯಿಸಿದರೆ ಅದು ಕ್ರಮೇಣವಾಗಿ ಸಂಭವಿಸುತ್ತದೆ.

ನಮ್ಮಆರಾಮವಲಯದ ಹೊರಗೆ ಕೆಲಸ ಮಾಡುವುದು 

ನಾವು ಈ ಎಲ್ಲಾ ತರಬೇತಿಯನ್ನು ಪಡೆಯುತ್ತೇವೆ ಮತ್ತು ಸಮಾಜದಲ್ಲಿನ ಅನೇಕ ಸನ್ನಿವೇಶಗಳಲ್ಲಿ ಜನರು ಜವಾಬ್ದಾರಿ ವಹಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ನಾವು ಗಮನಿಸುತ್ತೇವೆ. ನಮ್ಮ ಆರಾಮವಲಯದಿಂದ ಹೊರಬರಲು ಮತ್ತು ಭಾವನಾತ್ಮಕವಾಗಿ ನಮಗೆ ಸವಾಲೊಡ್ಡುವ ವಿಷಯಗಳನ್ನು ಎದುರಿಸಲು, ನಾವು ಹೆಜ್ಜೆ ಇಡಲು ಸಿದ್ಧರಿದ್ದೇವೆಯೇ ಎಂದು ನಮಗೆ ಹೇಗೆ ತಿಳಿಯುತ್ತದೆ? 

ಇದು ರಚನಾತ್ಮಕ ಅಥವಾ ವಿನಾಶಕಾರಿಯಾಗಿರುವುದು ಯಾವುದು ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಉದಾಹರಣೆಗೆ, ನಮ್ಮ ಆರಾಮ ವಲಯದಿಂದ ಹೊರಗೆ ಹೆಜ್ಜೆಯಿಟ್ಟು, ಕುಡುಕರೊಂದಿಗೆ ಸಮಯ ಕಳೆಯಲು ಬಾರ್ಗೆ ಹೋಗುವುದು, ರಚನಾತ್ಮಕವಾಗಿರುವುದಿಲ್ಲ. ಬೋಧಿಸತ್ವನು ನರಕದಲ್ಲಿನ ಜೀವಿಗಳಿಗೆ ಸಹಾಯಮಾಡಲು ಅಲ್ಲಿಗೆ ಹೋಗುತ್ತಾನೆ ಎಂದು ನಾವು ಕಲಿಯಬಹುದು, ಆದರೆ ಅದು ನಮ್ಮಂತಹವರಿಗೆ ಸ್ವಲ್ಪ ಕಠಿಣವಾಗಬಹುದು. ಆದರೆ ರಚನಾತ್ಮಕವಾಗಿ ಏನನ್ನಾದರೂ ಮಾಡಲು ನಮ್ಮ ಆರಾಮವಲಯದಿಂದ ಹೊರಗೆ ಹೋಗುವುದು, ಉದಾಹರಣೆಗೆ ಬೀದಿಯಲ್ಲಿರುವ, ವಸತಿಯಿಲ್ಲದ ವ್ಯಕ್ತಿಗೆ, ಕೆಲವು ಒಳ್ಳೆಯ ಮಾತುಗಳನ್ನು ಹೇಳುವುದು ವಿಭಿನ್ನವಾಗಿರುತ್ತದೆ. 

ನಾವು ಸಾಧಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ, ನಮ್ಮ ಆರಾಮ ವಲಯದ ಹೊರಗಿರುವ ಪರಿಸ್ಥಿತಿಯು ಎಷ್ಟು ಸಹಾಯಕವಾಗಿರಬಹುದು ಎಂಬುದನ್ನು ನಾವು ಪ್ರತ್ಯೇಕಿಸಬೇಕಾದದ್ದು ಮೊದಲ ವಿಷಯವಾಗಿದೆ. ಕೆಲವು ಯುವಕರು ಕ್ಲಬ್‌ಗೆ ಹೋಗಿ, ಬೆಳಿಗ್ಗೆ ಆಗುವ ತನಕ, ರಾತ್ರಿಯಿಡೀ ಟೆಕ್ನೋ ಸಂಗೀತಕ್ಕೆ ಕುಣಿಯಬಹುದು. ನಾವು ನಮ್ಮ ಆರಾಮವಲಯದಿಂದ ಹೊರಗೆ ಹೋಗಿ ಹಾಗೆ ಮಾಡುವುದರಿಂದ ಏನಾದರೂ ಪ್ರಯೋಜನವಿದೆಯೇ? ಇದು ಆರಾಮ ವಲಯದ ಹೊರಗಿದೆ ಹೌದು, ಆದರೆ ನಾವು ನಮ್ಮ ನಕಾರಾತ್ಮಕ ಪೂರ್ವಾಗ್ರಹಗಳನ್ನು ಮೀರಿಸಲು ಪ್ರಯತ್ನಿಸುವುದನ್ನು ಬಿಟ್ಟರೆ ಇಲ್ಲಿ ಸಕಾರಾತ್ಮಕವಾದದ್ದು ಏನೂ ಇರುವುದಿಲ್ಲ. ಆದರೆ ನಾವು ಬೆಳಿಗ್ಗೆ ತನಕ ಕುಣಿಯದೆ, ಸಂಗೀತದಿಂದಾಗಿ ಕಿವುಡರಾಗದೆ, ಅವುಗಳನ್ನು ಮೀರಿಸಲು ಪ್ರಯತ್ನಪಡಬಹುದು. ಆದರೆ ನಿರಾಶ್ರಿತರೊಂದಿಗೆ ಕೆಲಸ ಮಾಡುವಂತಹ ನಮ್ಮ ಆರಾಮ ವಲಯಗಳಿಂದ ಹೊರಗಿರುವ ಇತರ ವಿಷಯಗಳಿವೆ. ಅವರೊಂದಿಗೆ ಕೆಲಸ ಮಾಡಲು ನಮ್ಮ ಆರಾಮವಲಯದಿಂದ ಹೊರಗೆ ಹೋಗುವುದು ರಚನಾತ್ಮಕ ಮತ್ತು ಸಕಾರಾತ್ಮಕವಾಗಿರುತ್ತದೆ ಮತ್ತು ನಮ್ಮ ಉದಾರತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. 

ಬರ್ಲಿನ್‌ನಲ್ಲಿ, ವಾರದಲ್ಲಿ ನಾನು ಸಣ್ಣ ಚರ್ಚಾ ತರಗತಿಯನ್ನು ನಡೆಸುತ್ತೇನೆ. ನಾವೆಲ್ಲರೂ ಸ್ನೇಹಿತರಾಗಿದ್ದು, ತರಗತಿಯ ನಂತರ ಒಟ್ಟಿಗೆ ಊಟಕ್ಕೆ ಹೋಗುತ್ತೇವೆ. ಅವರ ದೈನಂದಿನ ಜೀವನದಲ್ಲಿ ಧರ್ಮವು ಹೇಗೆ ಸಹಾಯ ಮಾಡುತ್ತದೆ ಎಂಬ ಪ್ರಶ್ನೆಯನ್ನು ನಾನು ಮುಂದಿಟ್ಟೆ. ತರಗತಿಯಲ್ಲಿರುವ ನನ್ನ ವಿದ್ಯಾರ್ಥಿಯೊಬ್ಬರು, ತಮ್ಮ ಆರಾಮ ವಲಯದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು, ಅವರು ಆಕರ್ಷಕರಾಗಿ ಕಾಣುವವರಿಗೆ ಹೆಚ್ಚು ಗಮನ ನೀಡುತ್ತಾರೆ ಮತ್ತು ಅಂತಹ ಜನರಿಗೆ ಹತ್ತಿರವಾಗುತ್ತಾರೆ ಎಂದು ವಿವರಿಸಿದರು. ಅಂದರೆ ಅವರನ್ನು ಇತರರಿಗಿಂತ ಹೆಚ್ಚು ಮುಖ್ಯವೆಂದು ಪರಿಗಣಿಸಿತ್ತಿದ್ದರು. ಆದ್ದರಿಂದ, ಅವರು ತಮ್ಮ ಕೆಲಸದಲ್ಲಿ, ತೀರಾ ಸ್ಥೂಲಕಾಯರಾದ, ಮುಖದ ಮೇಲೆ ವಿಚಿತ್ರವಾದ ಮಚ್ಚೆಯಿರುವ, ಆಕರ್ಷಕವಲ್ಲದ ವ್ಯಕ್ತಯೊಬ್ಬರೊಂದಿಗೆ ಸ್ನೇಹ ಬೆಳೆಸಲು ಮುಂದಾದರು. ಇವರೊಬ್ಬರು, ನಿಜವಾಗಿಯೂ ಸಂತೋಷವಾಗಿರಲು ಬಯಸುವ, ಇತರರಿಗೆ ಇಷ್ಟವಾಗಲು ಇಚ್ಛಿಸುವ ಮತ್ತು ಇಷ್ಟವಾಗದೇ ಇರುವುದನ್ನು ಅಥವಾ ನಿರ್ಲಕ್ಷಣೆಯನ್ನು ಬಯಸದ ವ್ಯಕ್ತಿಯೆಂದು ನೋಡಲು ಬಯಸಿದರು. ಈ ವ್ಯಕ್ತಿಯು ಒಬ್ಬ ಹೊಸದಾದ, ಬಂಗಾರದಂತಹ ಸ್ನೇಹಿತನಾಗಿರಬಹುದು. ಈ ವ್ಯಕ್ತಿಯನ್ನು ನಿರ್ಲಕ್ಷಿಸದಿರಲು ಅವರು ನಿರ್ಧರಿಸಿದರು. ನಮ್ಮ ಆರಾಮ ವಲಯಗಳಿಂದ ಹೊರಗೆ ಹೋಗಿ ಸಕಾರಾತ್ಮಕವಾದದ್ದನ್ನು ಮಾಡುವ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಇವಲ್ಲೆವೂ ನಾವೆಲ್ಲರೂ ಮಾಡಬಲ್ಲ ವಿಷಯವಾಗಿರುತ್ತವೆ. ನಾವು ನಮ್ಮ ಸಾಮಾನ್ಯ ಮಿತಿಗಳನ್ನು ಮೀರಿ ಹೋಗುವುದಾದರೆ, ಸಾಧ್ಯವಿರುವ ಹಂತಗಳಲ್ಲಿ ಮಾಡಿರಿ, ಪ್ರವೇಶಿಸಲಾಗದ ಹಂತಗಳಲ್ಲಿ ಮಾಡಬೇಡಿ. 

ಇನ್ನೊಬ್ಬ ಸ್ನೇಹಿತ ವಿಪರೀತದ ಹೆಜ್ಜೆಯನ್ನು ಇಟ್ಟನು. ಅವನು ಸದಾ ತನ್ನ ಆರಾಮ ವಲಯದಿಂದ ಹೊರಗೆ ಹೋಗಲು ಇಷ್ಟಪಡುತ್ತಾನೆ, ಆದ್ದರಿಂದ ಅವನು, ಉದ್ಯಾನದಲ್ಲಿ ಡ್ರಗ್ಸ್ ಮಾರಾಟ ಮಾಡುವ ಜಂಕಿಗಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ. ಈ ಜನರೊಂದಿಗೆ ಇರುವುದು ಅಹಿತಕರವಾದ ಕಾರಣ ಅವನು ಹಾಗೆ ಮಾಡಲು ಮುಂದಾದನು. ನಿಜವಾಗಿಯೂ ಇದರಲ್ಲಿ ಯಾವುದೇ ರೀತಿಯ ಪ್ರಯೋಜನವನ್ನು ನಾನು ಕಾಣುವುದಿಲ್ಲ. ಇದೊಂದು ಮಾಚೋ ಪ್ರದರ್ಶನದಂತೆ ಇರುತ್ತದೆ.  

ನಮ್ಮ ಆರಾಮವಲಯಗಳಿಂದ ಹೇಗೆ ಹೊರಗೆ ಹೋಗುವುದು ಮತ್ತು ನಮ್ಮ ಆರಾಮವಲಯವು ಏನು ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿರುತ್ತದೆ. ನಮ್ಮ ಆರಾಮ ವಲಯದಲ್ಲಿ ನಾವು ಸುರಕ್ಷಿತವಾಗಿರುತ್ತೇವೆ ಎಂಬ ಯೋಚನೆಯು ಎಷ್ಟರ ಮಟ್ಟಿಗೆ ಪ್ರಕ್ಷೇಪಣವಾಗಿರುತ್ತದೆ? ಆರಾಮ ವಲಯ ಎಂದರೇನು? ಇದು ನಾವೇ ವಿಶ್ಲೇಷಿಸಿಕೊಳ್ಳಬೇಕಾದ ವಿಷಯ. ಯಾವುದೇ ರೀತಿಯ ವ್ಯಕ್ತಿಯೊಂದಿಗೆ, ಯಾವುದೇ ಪರಿಸ್ಥಿತಿಯಲ್ಲಿ ನಾವು ಆರಾಮವಾಗಿರಬಹುದೇ? 

ಇದಕ್ಕಾಗಿ ಮುಖ್ಯವಾದದ್ದು, ಈ ವಿಷಯದ ಮೇಲೆ ಆಪಾದನೆಯನ್ನು ಹೊರಸುವುದಾಗಿದೆ: ಸ್ವಯಂ-ಪೋಷಣೆ. ಅನೇಕ ಸಂದರ್ಭಗಳಲ್ಲಿ, ಇತರರೊಂದಿಗೆ ಅಥವಾ ಸನ್ನಿವೇಶಗಳೊಂದಿಗೆ ನಮಗೆ ಅಹಿತಕರವೆನಿಸಿದಾಗ, ನಾವು "ನಾನು, ನಾನು, ನಾನು" ಎಂದು ಯೋಚಿಸುತ್ತಿರುವುದೇ ಇದಕ್ಕೆ ಕಾರಣವಾಗಿರುತ್ತದೆ. ಉದಾಹರಣೆಗೆ, "ನಾನು ಇದನ್ನು ಇಷ್ಟಪಡುವುದಿಲ್ಲ,ನನಗೆ ಅದನ್ನು ನಿಭಾಯಿಸಲು ಸಾಧ್ಯವಿಲ್ಲ," ಎಂದು ನಾವು ಯೋಚಿಸುತ್ತೇವೆ ಮತ್ತು ನಾವು ಇತರರ ಬಗ್ಗೆ ಯೋಚಿಸುವುದಿಲ್ಲ. ಇತರರ ಬಗ್ಗೆ ಆಸಕ್ತಿ ವಹಿಸುವ ಮತ್ತು ನಾವೆಲ್ಲರೂ ಮನುಷ್ಯರು ಎಂದು ನೋಡುವ ವಿಷಯ ಇದಾಗಿರುತ್ತದೆ.  

ಸಾರಾಂಶ 

ಇವು ಕೆಲವು ಮೂಲಭೂತ ತತ್ವಗಳಾಗಿವೆ. ನಾವು ಸ್ವಾರ್ಥಿ ಮತ್ತು ಸ್ವ-ಕೇಂದ್ರಿತವಾಗಿರುವುದನ್ನು ನಿಲ್ಲಿಸಿದರೆ, ನಾವು ಹೆಚ್ಚು ಸಂತೋಷವಾಗಿರುತ್ತೇವೆ. ನಾವು ಇನ್ನೊಬ್ಬ ವ್ಯಕ್ತಿಯೊಂದಿಗೆ ಇರುವಾಗ, ನಮ್ಮ ಬಗ್ಗೆ ಮಾತ್ರ ಮಾತನಾಡುವ ಬದಲು, ಇನ್ನೊಬ್ಬ ವ್ಯಕ್ತಿಯಲ್ಲಿ ಪ್ರಾಮಾಣಿಕ ಆಸಕ್ತಿಯನ್ನು ತೋರಿಸಿದರೆ ಮತ್ತು ಅವರ ಜೀವನದ ಬಗ್ಗೆ ಕೇಳಿದರೆ, ನಾವು ಹೆಚ್ಚು ಸಂತೋಷವಾಗಿರುತ್ತೇವೆ ಮತ್ತು ಅವರೂ ಸಂತೋಷವಾಗಿರುತ್ತಾರೆ. ಇವು, ಜೀವನ ಮತ್ತು ಇತರರೊಂದಿಗೆ ವ್ಯವಹರಿಸುವ ನಮ್ಮ ವಿಧಾನಗಳಲ್ಲಿ ಬೇಕಾದ ಮೂಲಭೂತ ಮತ್ತು ಪ್ರಾಯೋಗಿಕ ಬದಲಾವಣೆಗಳಾಗಿವೆ. ಇದನ್ನು ನೆನಪಿಟ್ಟುಕೊಳ್ಳುವುದು ನಾವು ಸಾಧಿಸಲು ಬಯಸುವ ಸಾವಧಾನತೆಯಾಗಿರುತ್ತವೆ. ನಾವು ಸ್ವಾರ್ಥಿಗಳಾಗಿದ್ದಾಗ ಅಥವಾ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತಿರುವಾಗ, ಈ ಸಲಹೆಯನ್ನು ಅನ್ವಯಿಸುವಂತೆ ನೆನಪಿಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಉದಾಹರಣೆಗೆ, ಇತರ ವ್ಯಕ್ತಿಯು ಕಾರ್ಯನಿರತರಾಗಿದ್ದಾರೆ ಮತ್ತು ಹೊರಡಲು ಬಯಸುತ್ತಾರೆ, ಆದರೆ ನಾವು ಮಾತನಾಡುತ್ತಲೇ ಇರುತ್ತೇವೆ. ನಾವು ಹೇಳಬೇಕಾದದ್ದು ಬಹಳಾ ಮುಖ್ಯ ಎಂದು ನಾವು ಯೋಚಿಸುತ್ತೇವೆ. ಆ ವ್ಯಕ್ತಿಯು ಅದನ್ನು ಕೇಳಲು ಬಯಸುತ್ತಾರೆಯೇ? ಇಲ್ಲ, ಆದರೆ ಅವರು ಬಯಸುತ್ತಾರೆ ಎಂದು ನಾವು ಪ್ರಕ್ಷೇಪಿಸುತ್ತೇವೆ. ನಾವು ಧರ್ಮವನ್ನು ಅಳವಡಿಸಿಕೊಳ್ಳಬೇಕಾದ ಜಾಗವೇ ಜೀವನ. 

Top