ಜೀವನದಲ್ಲಿನ ಸಮಸ್ಯೆಗಳನ್ನು ಎದುರಿಸಲು ಧರ್ಮ
ಧರ್ಮಾಚರಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು, ನಾವು ಮಾಡಬೇಕಾದ ಮೊದಲ ಕೆಲಸವು, ಜೀವನದಲ್ಲಿನ ವಿವಿಧ ರೀತಿಯ ಸಮಸ್ಯೆಗಳು ಅಥವಾ ತೊಂದರೆಗಳನ್ನು ಗುರುತಿಸುವುದಾಗಿರುತ್ತದೆ. ಮುಂದಿನದು, ಧರ್ಮಾಚರಣೆಯು ಈ ಸಮಸ್ಯೆಗಳನ್ನು ನಿವಾರಿಸಲು ನಮಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಅರಿತುಕೊಳ್ಳುವುದಾಗಿರುತ್ತದೆ.
ಧರ್ಮದ ಆಚರಣೆಯು ಕೇವಲ ಒಳ್ಳೆಯದನ್ನು ಅನುಭವಿಸುವ ಅಥವಾ ಒಳ್ಳೆಯ ಹವ್ಯಾಸದಂತಹ ಅಥವಾ ಟ್ರೆಂಡಿಯಾಗಿರುವಂತಹ ವಿಷಯವಾಗಿರುವುದಿಲ್ಲ. ಧರ್ಮದ ಆಚರಣೆಗೆ, ನಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಉದ್ದೇಶವಿರುತ್ತದೆ. ಅಂದರೆ ಧರ್ಮವನ್ನು ವಾಸ್ತವಿಕವಾಗಿ ಅಭ್ಯಾಸ ಮಾಡುವುದು ಆಹ್ಲಾದಕರವಾದ ಪ್ರಕ್ರಿಯೆಯಾಗಿರುವುದಿಲ್ಲ ಎಂದು ನಾವು ಅರಿತುಕೊಳ್ಳಬೇಕಾಗಿರುತ್ತದೆ. ನಮ್ಮ ಜೀವನದಲ್ಲಿನ ಅಹಿತಕರವಾದ ವಿಷಯಗಳನ್ನು, ತೊಂದರೆಗಳನ್ನು ನಾವು ದಿಟ್ಟವಾಗಿ ನೋಡಬೇಕು ಮತ್ತು ಎದುರಿಸಬೇಕು - ಅವುಗಳಿಂದ ಓಡಿಹೋಗದೆ, ನಾವು ಅವುಗಳನ್ನು ಎದುರಿಸಲು ಪ್ರಯತ್ನಿಸುತ್ತೇವೆ ಎಂಬ ಮನೋಭಾವದಿಂದ ಅವುಗಳನ್ನು ಎದುರಿಸಬೇಕು.
ನಮ್ಮ ಸಮಸ್ಯೆಗಳು ಹಲವಾರು ರೂಪಗಳನ್ನು ಪಡೆಯಬಹುದು. ಅವುಗಳಲ್ಲಿ ಹೆಚ್ಚಿನವುಗಳೊಂದಿಗೆ ನಾವು ಪರಿಚಿತರಾಗಿದ್ದೇವೆ - ನಾವು ಅಸುರಕ್ಷಿತರಾಗಿದ್ದೇವೆ; ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿ ತೊಂದರೆಗಳಿವೆ; ನಾವು ಪರಕೀಯ ಭಾವನೆಯನ್ನು ಅನುಭವಿಸುತ್ತೇವೆ; ನಮ್ಮ ಭಾವನೆಗಳು ಮತ್ತು ಮನೋಭಾವನೆಗಳೊಂದಿಗೆ ನಮಗೆ ತೊಂದರೆಗಳಿವೆ – ಇವೆಲ್ಲವೂ ನಾವೆಲ್ಲರೂ ಎದುರಿಸುವ ಸಾಮಾನ್ಯ ಸಂಗತಿಗಳಾಗಿವೆ. ನಮ್ಮ ಕುಟುಂಬಗಳೊಂದಿಗೆ ಮತ್ತು ನಮ್ಮ ಪೋಷಕರೊಂದಿಗೆ ವ್ಯವಹರಿಸುವಾಗ ನಮಗೆ ತೊಂದರೆಗಳಿವೆ; ಅವರು ಅನಾರೋಗ್ಯದಿಂದ ಬಳಲುತ್ತಾರೆ ಮತ್ತು ವೃದ್ಧರಾಗುತ್ತಾರೆ. ನಮ್ಮ ಸ್ವಂತ ಕಾಯಿಲೆಗಳು ಮತ್ತು ವೃದ್ಧಾಪ್ಯವನ್ನು ನಿಭಾಯಿಸುವಲ್ಲಿ ನಮಗೆ ತೊಂದರೆಗಳಿವೆ. ನಾವು ಯುವಕರಾಗಿದ್ದರೆ, ನಮ್ಮ ಜೀವನದಲ್ಲಿ ನಾವು ಏನು ಮಾಡಲಿದ್ದೇವೆ, ಜೀವನವನ್ನು ಹೇಗೆ ನಡೆಸುವುದು, ಯಾವ ದಿಕ್ಕಿನಲ್ಲಿ ಹೋಗಬೇಕು, ಇತ್ಯಾದಿಗಳನ್ನು ಕಂಡುಹಿಡಿಯುವಲ್ಲಿ ನಮಗೆ ತೊಂದರೆಗಳಿವೆ. ಇಂತಹ ಎಲ್ಲಾ ವಿಷಯಗಳತ್ತ ನಾವು ನೋಡಬೇಕಾಗಿದೆ.
ಗೊಂದಲ
ನಾವೆಲ್ಲರೂ ಅನುಭವಿಸುವ ಈ ಸಮಸ್ಯೆಗಳು ಕಾರಣಗಳಿಂದ ಉದ್ಭವಿಸುತ್ತವೆ ಎಂದು ಅರಿತುಕೊಳ್ಳುವುದು ಬೌದ್ಧಧರ್ಮದ ಪ್ರಮುಖ ಅಂಶಗಳಲ್ಲಿ ಒಂದಾಗಿರುತ್ತದೆ. ಯಾವುದೇ ಕಾರಣವಿಲ್ಲದೆ ಅವುಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಈ ಸಮಸ್ಯೆಗಳ ಮೂಲ ನಮ್ಮೊಳಗೇ ಇದೆ. ಇದೊಂದು ಮಹಾನ್ ಒಳನೋಟವಾಗಿರುತ್ತದೆ ಮತ್ತು ಬಹಳಷ್ಟು ಜನರಿಗೆ ಇದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು, ಇತರರ ಮೇಲೆ ಅಥವಾ ಬಾಹ್ಯ ಸನ್ನಿವೇಶಗಳ ಮೇಲೆ ನಮ್ಮ ಸಮಸ್ಯೆಗಳ ಕಾರಣಗಳ ಆರೋಪವನ್ನು ಹೊರಿಸುತ್ತಾರೆ. ನಾವು ಹೀಗೆ ಭಾವಿಸುತ್ತೇವೆ, “ನಿಮ್ಮ ಕೃತ್ಯದಿಂದ ನಾನು ಅಸಂತೋಷಗೊಂಡಿದ್ದೇನೆ - ನೀವು ನನ್ನನ್ನು ಕರೆಯಲಿಲ್ಲ; ನೀನು ನನ್ನ ಕೈಬಿಟ್ಟೆ; ನೀವು ನನ್ನನ್ನು ಪ್ರೀತಿಸುವುದಿಲ್ಲ. ಇದು ನಿಮ್ಮ ತಪ್ಪು." ಅಥವಾ ನಾವು ನಮ್ಮ ಹೆತ್ತವರ ಮೇಲೆ ಆಪಾದನೆಯನ್ನು ಹಾಕುತ್ತೇವೆ - ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮ ಪೋಷಕರು ನಮಗೆ ಏನು ಮಾಡಿದರು ಅಥವಾ ಏನು ಮಾಡಲಿಲ್ಲ ಎಂಬುದರ ಬಗ್ಗೆ. ಅಥವಾ ನಾವು ಆಪಾದನೆಯನ್ನು ಆರ್ಥಿಕ ಪರಿಸ್ಥಿತಿ ಅಥವಾ ರಾಜಕೀಯ ಪರಿಸ್ಥಿತಿ, ಸಾಮಾಜಿಕ ಪರಿಸ್ಥಿತಿ ಇತ್ಯಾದಿಗಳ ಮೇಲೆ ಹೊರಿಸುತ್ತೇವೆ. ಸಹಜವಾಗಿ, ಈ ಎಲ್ಲಾ ಅಂಶಗಳು ನಮ್ಮ ಜೀವನದ ಅನುಭವದಲ್ಲಿ ಪಾತ್ರವಹಿಸುತ್ತವೆ. ಬೌದ್ಧಧರ್ಮವು ಅವುಗಳನ್ನು ನಿರಾಕರಿಸುವುದಿಲ್ಲ. ಆದರೆ ಅತ್ಯಂತ ಮುಖ್ಯವಾದ ಕಾರಣ, ನಮ್ಮ ಸಮಸ್ಯೆಗಳ ಆಳವಾದ ಕಾರಣ, ನಮ್ಮೊಳಗೇ ಇರುತ್ತದೆ - ಇದು ನಮ್ಮ ಸ್ವಂತ ವರ್ತನೆಗಳು, ವಿಶೇಷವಾಗಿ ನಮ್ಮ ಗೊಂದಲವಾಗಿರುತ್ತದೆ.
‘ದೈನಂದಿನ ಜೀವನದಲ್ಲಿ ಬೌದ್ಧಧರ್ಮವನ್ನು ಅಭ್ಯಾಸ ಮಾಡುವುದು’ ಎಂಬುದರ ಅರ್ಥವೇನು ಎಂಬುದರ ಕುರಿತಾದ ಬೌದ್ಧ ಧೋರಣೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಒಂದು ಅಂಶವನ್ನು ನಾವು ಕಂಡುಹಿಡಿಯಲು ಬಯಸಿದರೆ, ನಾನು ಇದನ್ನೇ ಮುಂದಿಡುತ್ತೇನೆ. ನಾವು ತೊಂದರೆಗಳನ್ನು ಎದುರಿಸುತ್ತಿರುವಾಗ, ಅದರ ಮೂಲವನ್ನು ಕಂಡುಹಿಡಿಯಲು ನಾವು ನಮ್ಮೊಳಗೆ ನೋಡುತ್ತೇವೆ ಮತ್ತು ಒಮ್ಮೆ ನಾವು ಅದನ್ನು ಗುರುತಿಸಿದಾಗ, ನಾವು ಒಳಗಿನಿಂದ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತೇವೆ. ನಾವು ಒಳಗೆ ನೋಡುವ ಮತ್ತು ನಮ್ಮ ಸಮಸ್ಯೆಗಳ ಮೂಲವನ್ನು ಕಂಡುಹಿಡಿಯುವುದೆಂದರೆ, ನಾನು ಕೆಟ್ಟ ವ್ಯಕ್ತಿ ಮತ್ತು ನಾನು ಬದಲಾಗಬೇಕು ಮತ್ತು ಒಳ್ಳೆಯವನಾಗಬೇಕು ಎಂಬ ನೈತಿಕ ತೀರ್ಮಾನವನ್ನು ತೆಗೆದುಕೊಳ್ಳುವುದಾಗಿರುವುದಿಲ್ಲ. ಬೌದ್ಧಧರ್ಮದಲ್ಲಿ ನೈತಿಕ ತೀರ್ಮಾನದ ಪರಿಕಲ್ಪನೆಯಿಲ್ಲ. ನಮ್ಮ ಸಮಸ್ಯೆಗಳ ಮೂಲವನ್ನು ನಮ್ಮೊಳಗೆ ಹುಡುಕಲು ಪ್ರಯತ್ನಿಸುತ್ತೇವೆ ಏಕೆಂದರೆ ನಾವು ಬಳಲುತ್ತಿದ್ದೇವೆ ಮತ್ತು ನಮ್ಮ ಸಮಸ್ಯೆಗಳು ಮತ್ತು ಅತೃಪ್ತಿಗಳನ್ನು ನಿವಾರಿಸಲು ನಾವು ಬಯಸುತ್ತೇವೆ ಮತ್ತು ಅವುಗಳ ಮುಖ್ಯ ಮೂಲವು ನಮ್ಮ ಸ್ವಂತ ವರ್ತನೆಗಳಾಗಿರುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಮ್ಮ ಸಮಸ್ಯೆಗಳು ಮತ್ತು ದುಃಖಗಳ ಆಳವಾದ ಕಾರಣವು ನಮ್ಮ ಗೊಂದಲವಾಗಿರುತ್ತದೆ ಎಂದು ಬುದ್ಧ ಹೇಳಿದರು. ಆದ್ದರಿಂದ, ನಾವು ಏನು ಮಾಡಬೇಕಾಗಿದೆ ಎಂಬುದರ ಕುರಿತು ನಾವು ಹೇಗೆ ಗೊಂದಲಕ್ಕೊಳಗಾಗಿದ್ದೇವೆ ಮತ್ತು ಸರಿಯಾದ ತಿಳುವಳಿಕೆಯನ್ನು ಪಡೆಯುವ ಮೂಲಕ ನಾವು ಅದನ್ನು ಹೇಗೆ ಸರಿಪಡಿಸಬಹುದು ಎಂಬುದನ್ನು ಕಂಡುಹಿಡಿಯಬೇಕಾಗಿದೆ.
ನಮ್ಮ ಗೊಂದಲ ಯಾವುದರ ಬಗ್ಗೆ ಆಗಿರುತ್ತದೆ? ಹಲವಾರು ವಿಷಯಗಳ ಬಗ್ಗೆ ಆಗಿರುತ್ತದೆ. ಒಂದು ವಿಷಯವು, ವರ್ತನೆಯ ಕಾರಣ ಮತ್ತು ಪರಿಣಾಮವಾಗಿರುತ್ತದೆ. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಿದರೆ ಅದರಿಂದ ಯಾವುದೇ ಪರಿಣಾಮವಾಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಉದಾಹರಣೆಗೆ, "ನಾನು ತಡವಾಗಿ ಬರಬಹುದು, ನಿಮ್ಮನ್ನು ನಿರ್ಲಕ್ಷಿಸಬಹುದು, ಆದರೆ ಅದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ." ಎಂದು ನಾವು ಭಾವಿಸುತ್ತೇವೆ. ಅದು ತಪ್ಪು; ಅದು ಗೊಂದಲಕ್ಕೊಳಗಾದ ವರ್ತನೆಯಾಗಿರುತ್ತದೆ. ಅಥವಾ ನಮ್ಮ ಕೆಲಸ ಅಥವಾ ನಮ್ಮ ವರ್ತನೆಯು ಒಂದು ನಿರ್ದಿಷ್ಟವಾದ ಪರಿಣಾಮ ಬೀರುತ್ತದೆ ಎಂದು ನಾವು ಯೋಚಿಸುತ್ತೇವೆ ಆದರೆ ಅದು ಅಸಂಬದ್ಧವಾಗಿರುತ್ತದೆ ಮತ್ತು ಬಹುಶಃ ಅದು ಎಂದೂ ಸಂಭವಿಸದಂತಹ ವಿಷಯವಾಗಿರುತ್ತದೆ. ಉದಾಹರಣೆಗೆ, " ನೀವು ನನ್ನನ್ನು ಪ್ರೀತಿಸಲಿ ಎಂಬ ಕಾರಣದಿಂದ ನಾನು ನಿಮ್ಮೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದ್ದೆ. ನಿಮಗಾಗಿ ನಾನು ಒಳ್ಳೆಯ ಉಡುಗೊರೆಯನ್ನು ಖರೀದಿಸಿದೆ, ಆದರೆ ಈಗ ನೀವು ನನ್ನನ್ನು ಏಕೆ ಪ್ರೀತಿಸುತ್ತಿಲ್ಲ?” ಈ ರೀತಿಯ ಆಲೋಚನೆಗಳೊಂದಿಗೆ, ನಮ್ಮ ಕಾರ್ಯಗಳು ಮತ್ತು ನಡವಳಿಕೆಗಳು ಅಸಾಧ್ಯವಾದ ಪರಿಣಾಮವನ್ನು ಬೀರುತ್ತವೆ ಎಂದು ನಾವು ಊಹಿಸುತ್ತೇವೆ ಅಥವಾ ಅವುಗಳ ಗಂಭೀರತೆಯನ್ನು ಹೆಚ್ಚಿಸುತ್ತೇವೆ, ಅವುಗಳ ಸಂಭವನೀಯ ಪರಿಣಾಮಕ್ಕಿಂತ ಹೆಚ್ಚಿನ ಪರಿಣಾಮವನ್ನು ಉಂಟುಮಾಡಬಹುದು ಎಂದು ಉತ್ಪ್ರೇಕ್ಷಿಸುತ್ತೇವೆ. ಅಲ್ಲದೆ, ಕೆಲವು ವಿಷಯಗಳು ಒಂದೇ ರೀತಿಯ ಪರಿಣಾಮವನ್ನು ತರುತ್ತವೆ ಎಂದು ನಾವು ಭಾವಿಸಬಹುದು; ಆದರೆ, ವಾಸ್ತವದಲ್ಲಿ, ಅವುಗಳು ವಿರುದ್ಧವಾದ ಪರಿಣಾಮವನ್ನು ಕರೆತರಬಹುದು. ಉದಾಹರಣೆಗೆ, ಯಾವಾಗಲೂ ಕುಡಿಯುವುದರಿಂದ ನಾವು ಸಂತೋಷವಾಗಿರಬಹುದು ಎಂದು ನಾವು ಭಾವಿಸುತ್ತೇವೆ. ಆದರೆ ಇದು ಸಂತೋಷಕ್ಕಿಂತ, ಹೆಚ್ಚಿನ ಸಮಸ್ಯೆಗಳನ್ನು ಕರೆತರುತ್ತದೆ.
ನಾವು ಹೇಗೆ ಅಸ್ತಿತ್ವದಲ್ಲಿದ್ದೇವೆ, ಇತರರು ಹೇಗೆ ಅಸ್ತಿತ್ವದಲ್ಲಿದ್ದಾರೆ ಮತ್ತು ಜಗತ್ತು ಹೇಗೆ ಅಸ್ತಿತ್ವದಲ್ಲಿದೆ ಎಂಬುದರ ಕುರಿತು ಗೊಂದಲಕ್ಕೊಳಗಾಗುವುದು ಇನ್ನೊಂದು ವಿಷಯವಾಗಿರುತ್ತದೆ. ಉದಾಹರಣೆಗೆ, ವಯಸ್ಸಾಗುವ ಕಾರಣದಿಂದ ಮತ್ತು ಅನಾರೋಗ್ಯಕ್ಕೆ ಒಳಗಾಗುವುದರಿಂದ ನಾವು ಬಳಲುತ್ತೇವೆ ಮತ್ತು ಅತೃಪ್ತರಾಗುತ್ತೇವೆ. ಆದರೆ ಮನುಷ್ಯರಾದ ಮೇಲೆ ನಾವು ಇನ್ನೇನು ನಿರೀಕ್ಷಿಸಲಾಗುತ್ತದೆ? ನಾವು ಚಿಕ್ಕ ವಯಸ್ಸಿನಲ್ಲೇ ಮರಣಹೊಂದಿಲ್ಲದಿದ್ದರೆ, ಮನುಷ್ಯರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಮನುಷ್ಯರಿಗೆ ವಯಸ್ಸಾಗುತ್ತದೆ – ಇದು ಆಶ್ಚರ್ಯಕರ ಸಂಗತಿಯೇನಲ್ಲ. ಕನ್ನಡಿಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳಲು ಶುರುವಾದಾಗ, ಅದರ ಬಗ್ಗೆ ಅತೃಪ್ತಿ ಮತ್ತು ಆಘಾತಕ್ಕೊಳಗಾದಾಗ, ಇದು ಜಗತ್ತಿನ ಅಸ್ತಿತ್ವದ ಬಗ್ಗೆ, ನಮ್ಮ ಅಸ್ತಿತ್ವದ ಬಗ್ಗೆ ಇರುವ ಅವಾಸ್ತವಿಕ ಗೊಂದಲ ಮತ್ತು ಗಲಿಬಿಲಿಯಾಗಿರುತ್ತದೆ.
ವಯಸ್ಸಾಗುವುದರ ಬಗ್ಗೆ ನಮಗೆ ಸಮಸ್ಯೆ ಇದೆ ಎಂದು ಹೇಳೋಣ. ಅದರ ಬಗೆಗಿರುವ ನಮ್ಮ ಗೊಂದಲದಿಂದಾಗಿ - ನಾವು ಅದರ ವಾಸ್ತವತೆಯನ್ನು ಒಪ್ಪಿಕೊಳ್ಳುವುದಿಲ್ಲ, ಅದರಿಂದಾಗಿ - ನಾವು ಗೊಂದಲಮಯ ಭಾವನೆಗಳು ಮತ್ತು ವರ್ತನೆಗಳ ಪ್ರಭಾವದಡಿಯಲ್ಲಿ ವಿನಾಶಕಾರಿಯಾಗಿ ವರ್ತಿಸುತ್ತೇವೆ. ಉದಾಹರಣೆಗೆ, ಬಲವಂತವಾಗಿ, ಯುವಚೈತನ್ಯದಿಂದ ಕೂಡಿರುವಂತೆ, ಆಕರ್ಷಕವಾಗಿ ಕಾಣಲು ಪ್ರಯತ್ನಿಸುವುದು, ಇದರಿಂದ ಇತರರ ಗಮನ ಮತ್ತು ಪ್ರೀತಿ ಸೇರಿದಂತೆ, ನಮಗೆ ಆಕರ್ಷಕವೆನಿಸುವ ಯುವಕರಿಗೆ/ಯುವತಿಯರಿಗೆ ನಾವು ಆಕರ್ಷಕವಾಗಿ ಕಾಣಲು ಪ್ರಯತ್ನಿಸುತ್ತೇವೆ – ಇದು ನಮ್ಮ ಇಚ್ಛೆಯನ್ನು ಈಡೇರಿಸುತ್ತದೆ ಎಂದು ಭಾವಿಸಿ, ಹಾತೊರೆಯುವ ಬಯಕೆಯಿಂದ ವರ್ತಿಸುತ್ತೇವೆ. ಸಾಮಾನ್ಯವಾಗಿ, ಈ ರೋಗಲಕ್ಷಣದ ಹಿಂದೆ, ನಾನು ಜಗತ್ತಿನ ಅತ್ಯಂತ ಪ್ರಮುಖ ವ್ಯಕ್ತಿ ಎಂಬ ಗೊಂದಲ ಇರುತ್ತದೆ - ನಾನೇ ಬ್ರಹ್ಮಾಂಡದ ಕೇಂದ್ರಬಿಂದು ಎಂಬ ಗೊಂದಲ. ಹಾಗಾಗಿ ಎಲ್ಲರೂ ನನ್ನತ್ತ ಗಮನ ಹರಿಸಬೇಕು. ನಾನು ಹೇಗಿದ್ದರೂ, ಎಲ್ಲರಿಗೂ ನಾನು ಆಕರ್ಷಕವಾಗಿ ಕಾಣಬೇಕು ಮತ್ತು ಅವರೆಲ್ಲರೂ ನನ್ನನ್ನು ಇಷ್ಟಪಡಬೇಕು. ಯಾರಾದರೂ ನಮ್ಮನ್ನು ಆಕರ್ಷಕವಾಗಿ ಕಾಣದಿದ್ದರೆ ಅಥವಾ ಅವರು ನಮ್ಮನ್ನು ಇಷ್ಟಪಡದಿದ್ದರೆ, ಅದು ನಮ್ಮನ್ನು ಹುಚ್ಚರನ್ನಾಗಿ ಮಾಡುತ್ತದೆ. ಅವರು ನಮ್ಮನ್ನು ನಿರ್ಲಕ್ಷಿಸಿದರೆ ಅದು ನಮ್ಮನ್ನು ಇನ್ನಷ್ಟು ಹುಚ್ಚರನ್ನಾಗಿ ಮಾಡುತ್ತದೆ - ದೈಹಿಕವಾಗಿ ಅಲ್ಲದಿದ್ದರೂ, ಅವರು ನಮ್ಮನ್ನು ಯಾವುದೋ ಒಂದು ರೀತಿಯಲ್ಲಿ ಆಕರ್ಷಕವಾಗಿ ಕಾಣಲಿ ಎಂದು ಹಂಬಲಿಸುತ್ತೇವೆ. ಆದರೆ ಶಾಕ್ಯಮುನಿ ಬುದ್ಧರನ್ನೇ ಎಲ್ಲರೂ ಇಷ್ಟಪಡಲಿಲ್ಲ; ಹಾಗಾದರೆ ಎಲ್ಲರೂ ನಮ್ಮನ್ನು ಇಷ್ಟಪಡಬೇಕೆಂಬ ಭರವಸೆ ಎಲ್ಲಿಂದ ತಾನೆ ಸಿಗಲು ಸಾಧ್ಯ!
ಎಲ್ಲರಿಗೂ ಇಷ್ಟವಾಗಬೇಕೆಂಬ ನಮ್ಮ ಆಶಯವು ಅವಾಸ್ತವಿಕ ನಿರೀಕ್ಷೆಯಾಗಿರುತ್ತದೆ. ಇದು ವಾಸ್ತವವಾಗಿರುವುದಿಲ್ಲ. ಇದು, ಪ್ರತಿಯೊಬ್ಬರೂ ನಮ್ಮನ್ನು ಆಕರ್ಷಕವಾಗಿ ಕಾಣಬೇಕು ಮತ್ತು ನಮ್ಮತ್ತ ಗಮನ ಹರಿಸಬೇಕು ಎಂಬ ಗೊಂದಲ, ಹಾತೊರೆಯುವ ಬಯಕೆ ಮತ್ತು ಬಾಂಧವ್ಯವನ್ನು ಆಧರಿಸಿರುತ್ತದೆ. ಅದರ ತಳಹದಿಯು ನಿಷ್ಕಪಟತೆಯ ಗೊಂದಲದ ವರ್ತನೆಯಾಗಿರುತ್ತದೆ. ನಾವು ಬಹಳಾ ಮುಖ್ಯರು ಮತ್ತು ಪ್ರೀತಿಪಾತ್ರರು, ಪ್ರತಿಯೊಬ್ಬರೂ ನಮ್ಮನ್ನು ಇಷ್ಟಪಡಬೇಕು ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ಒಬ್ಬ ವ್ಯಕ್ತಿಯು ನಮ್ಮನ್ನು ಇಷ್ಟಪಡದಿದ್ದರೆ, ಅವರಲ್ಲೇನೋ ತಪ್ಪಿದೆ ಎಂದು ಯೋಚಿಸುತ್ತೇವೆ. ಅಥವಾ ಇನ್ನೂ ಹದಗೆಟ್ಟಿರುವ ಹೆಜ್ಜೆಯಾಗಿ, ನಮ್ಮನ್ನೇ ಅನುಮಾನಿಸಲು ಪ್ರಾರಂಭಿಸುತ್ತೇವೆ: "ನನ್ನಲ್ಲಿ ಏನೋ ಕೊರತೆಯಿದೆ, ಅದಕ್ಕಾಗಿಯೇ ಈ ವ್ಯಕ್ತಿಯು ನನ್ನನ್ನು ಇಷ್ಟಪಡುತ್ತಿಲ್ಲ” ಎಂದು ಯೋಚಿಸಿ, ನಾವು ಕೆಟ್ಟವರು ಅಥವಾ ತಪ್ಪಿತಸ್ಥರೆಂದು ಭಾವಿಸುತ್ತೇವೆ. ಇದೆಲ್ಲ ನಿಷ್ಕಪಟತೆಯಾಗಿರುತ್ತದೆ.
ಹಾಗಾದರೆ, ಇಲ್ಲಿರುವ ಮುಖ್ಯ ವಿಷಯವು, ನಮ್ಮ ಮೇಲೆ ನಾವು ಕೆಲಸ ಮಾಡುವುದಾಗಿರುತ್ತದೆ. ಧರ್ಮಾಚರಣೆಯು ಇದೇ ಆಗಿರುತ್ತದೆ. ಪರಿಸ್ಥಿತಿ ಏನೇ ಇರಲಿ - ನಮಗೆ ತೊಂದರೆಗಳಿದ್ದರೆ, ಅಭದ್ರತೆಯ ಭಾವನೆಯೇನಾದರೂ ಇದ್ದರೆ, ಏನಾಗುತ್ತಿದೆ ಎಂಬುದನ್ನು ಗಮನಿಸಲು ನಾವು ನಮ್ಮಲ್ಲಿಯೇ ನೋಡಬೇಕು. ನಾನು ಅನುಭವಿಸುತ್ತಿರುವ ಈ ಗೊಂದಲದ ಭಾವನೆಯ ಹಿಂದಿರುವ ಗಲಿಬಿಲಿ ಎಲ್ಲಿದೆ? ಆದರೆ, ನಾವಿರುವ ಸಂಬಂಧದಲ್ಲಿ ಸಮಸ್ಯೆಗಳು ಉದ್ಭವಿಸಿರುವುದನ್ನು ನಾವು ಗಮನಿಸಿದರೆ, ಕೇವಲ ನಾವು ಗೊಂದಲಕ್ಕೊಳಗಾಗಿಲ್ಲ ಎಂದು ನಾವು ಅರಿತುಕೊಳ್ಳಬೇಕು. ನಿಸ್ಸಂಶಯವಾಗಿ, ಇತರ ವ್ಯಕ್ತಿಗೂ ಗೊಂದಲವಿರುತ್ತದೆ. ಇಲ್ಲಿರುವ ಮುಖ್ಯ ವಿಷಯವೆಂದರೆ, ನಾವು ಹೀಗೆ ನುಡಿಯದಿರುವುದು, “ನೀವು ಬದಲಾಗಬೇಕು; ನಾನು ಮಾಡುತ್ತಿರುವುದೆಲ್ಲವೂ ಸರಿಯಾಗಿದೆ ಮತ್ತು ಅತ್ಯುತ್ತಮವಾಗಿದೆ; ನೀವು ಬದಲಾಗಬೇಕಾದವರು." ಮತ್ತೊಂದೆಡೆ, ನಾನು ಮಾತ್ರ ಬದಲಾಗಬೇಕು ಎಂದು ನಾವು ಯೋಚಿಸಬಾರದು, ಏಕೆಂದರೆ ಅದು ಹುತಾತ್ಮರ ಮನೋಭಾವವಾಗಿ ಹದಗೆಡಬಹುದು. ನಾವು ಇತರ ವ್ಯಕ್ತಿಯೊಂದಿಗೆ ವಿಷಯಗಳನ್ನು ಮುಕ್ತವಾಗಿ ಚರ್ಚಿಸಲು ಪ್ರಯತ್ನಿಸಬೇಕು - ಸಹಜವಾಗಿ, ಆ ವ್ಯಕ್ತಿಯು ಇದನ್ನು ಒಪ್ಪಿಕೊಳ್ಳುವ ಅಗತ್ಯವಿದೆ. ನಾವಿಬ್ಬರೂ ಗೊಂದಲಕ್ಕೊಳಗಾಗಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಬೇಕು. ನಮ್ಮ ಸಂಬಂಧದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತಿದ್ದೇವೆ ಎಂಬ ವಿಷಯವಾಗಿ ನಮ್ಮಿಬ್ಬರಲ್ಲೂ ಸಮಸ್ಯೆ ಇದೆ, ಆದ್ದರಿಂದ ನಮ್ಮಿಬ್ಬರಲ್ಲಿರುವ ಗೊಂದಲವನ್ನು ನಿವಾರಿಸಲು ಪ್ರಯತ್ನಿಸಬೇಕು. ಇದು, ಮುಂದೆ ಸಾಗಲು ಇರುವ ಅತ್ಯಂತ ವಾಸ್ತವಿಕವಾದ ಮತ್ತು ಧಾರ್ವಿುಕವಾದ ಮಾರ್ಗವಾಗಿರುತ್ತದೆ.
ಆಚರಣೆಗೆ ತರುವ ಮೊದಲು ಧರ್ಮವನ್ನು ಅರ್ಥಮಾಡಿಕೊಳ್ಳುವುದು
ಬೌದ್ಧ ಆಚರಣೆಯ ಹಲವು ವಿಧಗಳಿವೆ. ಅವುಗಳನ್ನು ಚಮತ್ಕಾರಗಳಂತೆ ಪರಿಗಣಿಸಿ, ಅವುಗಳನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಸೂಚನೆಗಳನ್ನು ಪಡೆಯುವುದು ಸಾಕಾಗುವುದಿಲ್ಲ. ಎಲ್ಲಾ ಆಚರಣೆಗಳಂತೆ, ನಮ್ಮ ಸಮಸ್ಯೆಗಳನ್ನು ನಿವಾರಿಸಲು ಅವು ನಮಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆಚರಣೆಗಳನ್ನು ಯಾವಾಗ ಮತ್ತು ಹೇಗೆ ಅನ್ವಯಿಸಬೇಕು ಎಂಬುದನ್ನು ಮಾತ್ರವಲ್ಲ, ಅದರ ಹಿಂದಿನ ಚಿಂತನೆಯನ್ನು ಸಹ ನಾವು ಕಲಿಯಬೇಕಾಗಿದೆ. ಇದರರ್ಥ ನಾವು ಸುಧಾರಿತ ಅಭ್ಯಾಸಗಳೊಂದಿಗೆ ಪ್ರಾರಂಭಿಸುವುದಿಲ್ಲ. ನಾವು ಮೊದಲಿನಿಂದ ಪ್ರಾರಂಭಿಸುತ್ತೇವೆ ಮತ್ತು ಅಡಿಪಾಯವೊಂದನ್ನು ನಿರ್ಮಿಸುತ್ತೇವೆ, ಇದರಿಂದ ಧರ್ಮ ಬೋಧನೆಗಳು ನಿರ್ಮಾಣಗೊಳ್ಳುವ ಅನುಕ್ರಮದ ಜೊತೆಗೆ, ಯಾವುದೇ ಒಂದು ಅಭ್ಯಾಸದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿಯುತ್ತದೆ.
"ನಿಮಗೆ ಔಷಧವನ್ನು ನೀಡಿದರೆ, ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಬೇಡಿ, ಔಷಧಿಯನ್ನು ಸುಮ್ಮನೆ ತೆಗೆದುಕೊಳ್ಳಿ!" ಎಂದು ಹೇಳುವ ಬೋಧನೆಗಳನ್ನು ನಾವು ಓದುತ್ತೇವೆ ಎಂಬುದು ನಿಜ. ಇದು ಉತ್ತಮ ಸಲಹೆಯಾಗಿದ್ದರೂ, ಇದು ವಿಪರೀತತೆಯ ವಿರುದ್ಧ ಇರುವ ಒಂದು ಎಚ್ಚರಿಕೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. ವಿಪರೀತದ ವಿಷಯವೆಂದರೆ, ಬೋಧನೆಗಳನ್ನು ಸುಮ್ಮನೆ ಅಧ್ಯಯನ ಮಾಡುವುದು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ಆದರೆ ನಾವು ಕಲಿಯುವ ಯಾವುದನ್ನೂ ಆಚರಣೆಗೆ ತರದೇ ಇರುವುದು. ಆ ವಿಪರೀತತೆಯನ್ನು ನಾವು ತಪ್ಪಿಸಲು ಬಯಸುತ್ತೇವೆ. ಇನ್ನೊಂದು ವಿಪರೀತತೆಯನ್ನೂ ನಾವು ಸಮಾನವಾಗಿ ತಪ್ಪಿಸಬೇಕಾಗಿದೆ. ಕೆಲವು ಆಚರಣೆಗಳಿಗೆ ಸಂಬಂಧಿಸಿದ ಕೆಲವು ಧರ್ಮ ಸೂಚನೆಗಳನ್ನು ನಾವು ಕೇಳಿದಾಗ, ಕುರುಡು ನಂಬಿಕೆಯಿಂದ, ನಾವು ಏನು ಮಾಡುತ್ತಿದ್ದೇವೆ ಅಥವಾ ಏಕೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆ ಅದನ್ನು ಮಾಡುವುದು. ಆ ವಿಪರೀತದಿಂದ ಬರುವ ಮುಖ್ಯ ಸಮಸ್ಯೆಯೆಂದರೆ, ದೈನಂದಿನ ಜೀವನಕ್ಕೆ ಈ ಅಭ್ಯಾಸವನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ನಾವು ನಿಜವಾಗಿಯೂ ಅರ್ಥಮಾಡಿಕೊಳ್ಳುವುದಿಲ್ಲ. ಯಾವುದೇ ಅಭ್ಯಾಸದ ಹಿಂದಿನ ಮಹತ್ವವನ್ನು ನಾವು ಅರ್ಥಮಾಡಿಕೊಂಡರೆ - ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಉದ್ದೇಶ ಏನು ಎಂದು ನಾವು ಅರ್ಥಮಾಡಿಕೊಂಡರೆ - ದೈನಂದಿನ ಜೀವನದಲ್ಲಿ ಅದನ್ನು ಹೇಗೆ ಅನ್ವಯಿಸಬೇಕು ಎಂದು ನಮಗೆ ಬೇರೆಯವರು ಹೇಳುವ ಅಗತ್ಯವಿಲ್ಲ. ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅದನ್ನು ನಮಗಾಗಿ ಹೇಗೆ ಅನ್ವಯಿಸಬೇಕು ಎಂದು ನಮಗೆ ತಿಳಿದಿರುತ್ತದೆ.
ನಾವು ನಮ್ಮ ಸಮಸ್ಯೆಗಳನ್ನು ನಿವಾರಿಸುವುದರ ಬಗ್ಗೆ ಮಾತನಾಡುವಾಗ, ನಾವು ಕೇವಲ ನಮ್ಮ ವೈಯಕ್ತಿಕ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಮಾತನಾಡುತ್ತಿಲ್ಲ, ಇತರರಿಗೆ ಸಹಾಯ ಮಾಡುವಲ್ಲಿ ನಮಗಿರುವ ತೊಂದರೆಗಳನ್ನು ನಿವಾರಿಸುವುದರ ಬಗ್ಗೆಯೂ ಮಾತನಾಡುತ್ತಿರುತ್ತೇವೆ. "ಸೋಮಾರಿತನ ಅಥವಾ ಸ್ವಾರ್ಥದಿಂದಾಗಿ ಅಥವಾ ತುಂಬಾ ಕಾರ್ಯನಿರತರಾಗಿರುವ ಕಾರಣದಿಂದಾಗಿ ಇತರರಿಗೆ ಸಹಾಯ ಮಾಡಲಾಗುತ್ತಿಲ್ಲ." ಅಥವಾ, "ನಿಮ್ಮ ಸಮಸ್ಯೆ ಏನೆಂದು ನನಗೆ ಅರ್ಥವಾಗುತ್ತಿಲ್ಲ ಮತ್ತು ನಿಮಗೆ ಸಹಾಯ ಮಾಡಲು ಏನು ಮಾಡಬೇಕೆಂದು ನನಗೆ ತಿಳಿದಿಲ್ಲ." ಇದೇ ನಮಗಿರುವ ದೊಡ್ಡ ತಲೆನೋವು, ಅಲ್ಲವೇ? ಇತರರಿಗೆ ಸಹಾಯ ಮಾಡುವಲ್ಲಿ ಇರುವ ಈ ಎಲ್ಲಾ ತೊಂದರೆಗಳು ನಮ್ಮ ಗೊಂದಲದಿಂದಾಗಿವೆ ಅಲ್ಲವೇ? ಉದಾಹರಣೆಗೆ, ‘ನಾನು ಸರ್ವಶಕ್ತ ದೇವರಂತೆ, ನಾನು ಮಾಡಬೇಕಾಗಿರುವುದು ಒಂದೇ ಒಂದು ಕೆಲಸ, ಅದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ, ಇದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸದಿದ್ದರೆ, ನಿಮ್ಮಲ್ಲಿಯೇ ಏನೋ ಕೊರತೆಯಿದೆ’ ಎಂಬ ಗೊಂದಲ. ‘ನೀವು ಅದನ್ನು ಸರಿಯಾಗಿ ಮಾಡಲಿಲ್ಲ, ಆದ್ದರಿಂದ ನೀವೇ ತಪ್ಪಿತಸ್ಥರು.’ ಎಂಬ ಗೊಂದಲ. ‘ಅಥವಾ ನಾನೇ ತಪ್ಪಿತಸ್ಥನು, ಏಕೆಂದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನನಗೆ ಸಾಧವಾಗಿರಬೇಕಿತ್ತು ಆದರೆ ಹಾಗಾಗಲಿಲ್ಲ, ಆದ್ದರಿಂದ ನಾನು ಒಳ್ಳೆಯವನಲ್ಲ’, ಎಂಬ ಗೊಂದಲ. ಮತ್ತೊಮ್ಮೆ ಹೇಳುವುದಾದರೆ, ಇದು ಕಾರಣ ಮತ್ತು ಪರಿಣಾಮದ ಬಗೆಗಿರುವ ಗೊಂದಲವಾಗಿರುತ್ತದೆ.
ಧರ್ಮದಲ್ಲಿ ದೃಢವಿಶ್ವಾಸ
ಇನ್ನೊಂದು ಮಾತೆಂದರೆ, ದೈನಂದಿನ ಜೀವನದಲ್ಲಿ, ಚಿಂತಾಕ್ರಾಂತರಾಗದೆ, ಧರ್ಮವನ್ನು ಪರಿಣಾಮಕಾರಿಯಾಗುವಂತಹ ರೀತಿಯಲ್ಲಿ ಅನ್ವಯಿಸಲು, ನಮ್ಮ ಸಮಸ್ಯೆಗಳನ್ನು ನಿವಾರಿಸಲು ನಿಜವಾಗಿಯೂ ಸಾಧ್ಯವಿದೆ ಎಂಬ ದೃಢತೆಯು ನಮ್ಮಲಿರಬೇಕು. ಮೂಲಭೂತ ಬೌದ್ಧ ವಿಧಾನವನ್ನು ಅನುಸರಿಸುವ ಮೂಲಕ ನಮ್ಮ ಗೊಂದಲವನ್ನು ನಿವಾರಿಸಲು ಸಾಧ್ಯವಿದೆ ಎಂದು ನಾವು ಮನವರಿಕೆ ಮಾಡಿಕೊಳ್ಳಬೇಕು: ಯಾವುದೇ ವಿಷಯವನ್ನು ನಿವಾರಿಸಲು, ಅದು ಸಂಭವಿಸಲು ಇರುವ ಕಾರಣಗಳನ್ನು ನಾವು ಪರಿಣಿಸಬೇಕು. ಸಹಜವಾಗಿ, ನಮ್ಮ ಎಲ್ಲಾ ಗೊಂದಲಗಳನ್ನು ನಿವಾರಿಸಲು ಸಾಧ್ಯವಿದೆ ಎಂಬ ಆಳವಾದ, ದೃಢವಾದ ನಂಬಿಕೆಯನ್ನು ಪಡೆಯುವುದು ಬಹಳಾ ಕಷ್ಟ, ಇದೆಂದಿಗೂ ಮರುಕಳಿಸುವುದಿಲ್ಲ, ಜೊತೆಗೆ ವಿಮೋಚನೆ ಮತ್ತು ಜ್ಞಾನೋದಯವನ್ನು ಪಡೆಯಲು ಸಾಧ್ಯ ಎಂಬ ದೃಢವಿಶ್ವಾಸವನ್ನು ಬೆಳೆಸಿಕೊಳ್ಳುವುದು ಸಹ ಕಷ್ಟವಾಗಿರುತ್ತದೆ. ವಿಶೇಷವಾಗಿ, ವಿಮೋಚನೆ ಮತ್ತು ಜ್ಞಾನೋದಯ ಏನೆಂದು ನಮಗೆ ನಿಜವಾಗಿಯೂ ಅರ್ಥವಾಗದಿದ್ದಾಗ ಇದು ಹೆಚ್ಚಾಗಿ ಕಷ್ಟಕರವಾಗಿರುತ್ತದೆ. ಹಾಗಾದರೆ ಅವುಗಳನ್ನು ಸಾಧಿಸುವುದು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ನಾವು ಹೇಗೆ ಪರಿಗಣಿಸಬಹುದು? ಅದು ಸಾಧ್ಯವಿಲ್ಲವೆಂದು ನಾವು ಭಾವಿಸಿದರೆ, ಅಸ್ತಿತ್ವದಲ್ಲಿರದ ವಿಷಯವನ್ನು ಸಾಧಿಸುವ ಗುರಿಯನ್ನಿಟ್ಟುಕೊಳ್ಳುವುದು ಬೂಟಾಟಿಕೆಯ ವರ್ತನೆ ಅಲ್ಲವೇ? ನಂತರ ಇದು ಒಂದು ರೀತಿಯ ಹುಚ್ಚಾಟಿಕೆಯಾಗಿ ಮಾರ್ಪಾಡಾಗುತ್ತದೆ; ನಮ್ಮ ಧರ್ಮದ ಆಚರಣೆಯು ನೈಜವಾಗಿರುವುದಿಲ್ಲ.
ನಮಗೆ ನಿಜವಾಗಿಯೂ ಮನವರಿಕೆಯಾಗಬೇಕು, ಇದಕ್ಕಾಗಿ ಸಾಕಷ್ಟು ಅಧ್ಯಯನ ಮತ್ತು ತಿಳುವಳಿಕೆಯ ಅಗತ್ಯವಿರುತ್ತದೆ, ಜೊತೆಗೆ ಆಳವಾದ ಚಿಂತನೆ ಮತ್ತು ಧ್ಯಾನದ ಅಗತ್ಯವಿರುತ್ತದೆ. ಕೇವಲ ವಿಮೋಚನೆ ಮತ್ತು ಜ್ಞಾನೋದಯ ಸಾಧ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವುದಲ್ಲದೆ, ಅವುಗಳನ್ನು ಸಾಧಿಸಲು ನಮಗೆ ಸಾಧ್ಯವಾಗಿದೆ ಎಂಬ ಧೃಡ ವಿಶ್ವಾಸವಿರಬೇಕು. ಅವುಗಳನ್ನು ಸಾಧಿಸುವುದು ಶಾಕ್ಯಮುನಿಗೆ ಮಾತ್ರ ಸಾಧ್ಯ, ನಮಗಲ್ಲ ಎಂದು ಯೋಚಿಸಬಾರದು. ಬದಲಿಗೆ, ಅವುಗಳನ್ನು ಸಾಧಿಸಲು ನನಗೂ ಸಾಧ್ಯ, ಮತ್ತು ಅವುಗಳನ್ನು ಸಾಧಿಸಲು ಪ್ರತಿಯೊಬ್ಬರಿಗೂ ಸಾಧ್ಯವಿದೆ ಎಂದು ಯೋಚಿಸಬೇಕು. ನಮ್ಮ ಗೊಂದಲವನ್ನು ಹೋಗಲಾಡಿಸಲು ನಾವು ಏನು ಮಾಡಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮನ್ನು ಅವುಗಳಿಂದ ನಿಜವಾಗಿಯೂ ಮುಕ್ತಗೊಳಿಸುವುದು ಯಾವುದು? ನಮ್ಮನ್ನು ಗೊಂದಲದಿಂದ ನಿಜವಾಗಿಯೂ ಮುಕ್ತಗೊಳಿಸುವುದು ಸರಿಯಾದ ತಿಳುವಳಿಕೆ; ಆದ್ದರಿಂದ ಸರಿಯಾದ ತಿಳುವಳಿಕೆಯು, ಗೊಂದಲವನ್ನು ಹೇಗೆ ಮೀರಿಸುತ್ತದೆ ಮತ್ತು ಅದು ವಾಪಸ್ಸು ಬರದಂತೆ ಹೇಗೆ ನಿವಾರಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇವೆಲ್ಲದರ ಪರಿಣಾಮವಾಗಿ, ಧರ್ಮಾಚರಣೆಯ ನಿಜವಾದ ಕಾರ್ಯಸ್ಥಳವು ನಮ್ಮ ದೈನಂದಿನ ಜೀವನವಾಗಿದೆ ಎಂದು ನಾವು ಗಮನಿಸಬಹುದು; ಇದು ಕ್ಷಣದಿಂದ ಕ್ಷಣಕ್ಕೆ ನಮ್ಮ ಜೀವನದಲ್ಲಿನ ಸಮಸ್ಯೆಗಳು, ನಮ್ಮ ಗೊಂದಲಗಳು ಮತ್ತು ನಮ್ಮ ಕಷ್ಟಗಳನ್ನು ನಿಭಾಯಿಸುತ್ತದೆ.
ಧರ್ಮಾಚರಣೆಗೆ ಆತ್ಮಾವಲೋಕನ ಅಗತ್ಯ
ಧರ್ಮಾಚರಣೆಯು, ನಮ್ಮ ಜೀವನವನ್ನು ಎದುರಿಸುವುದರಿಂದ ತಪ್ಪಿಸಿಕೊಳ್ಳಲು, ನಮ್ಮ ಜೀವನದಿಂದ ಒಂದು ಹೆಜ್ಜೆ ಹೊರಗಿಟ್ಟು, ಉತ್ತಮವಾದ, ಶಾಂತವಾದ ಧ್ಯಾನದ ಗುಹೆಗೆ ಹೋಗುವುದು ಅಥವಾ ನಮ್ಮ ಕೋಣೆಗೆ ಹೋಗುವುದು ಮತ್ತು ಕುಶನ್ ಮೇಲೆ ಕುಳಿತುಕೊಳ್ಳುವುದಾಗಿರುವುದಿಲ್ಲ. ಓಡಿಹೋಗುವುದು ಧರ್ಮಾಚರಣೆಯ ಕೇಂದ್ರಬಿಂದುವಾಗಿರುವುದಿಲ್ಲ. ನಾವು ಧ್ಯಾನಿಸಲು ಶಾಂತವಾದ ಸ್ಥಳಕ್ಕೆ ಹೋದಾಗ, ಜೀವನದಲ್ಲಿನ ನಮ್ಮ ಸಮಸ್ಯೆಗಳನ್ನು ಎದುರಿಸಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನಾವು ಹಾಗೆ ಮಾಡುತ್ತೇವೆ. ಮುಖ್ಯ ಗಮನವು ಜೀವನದ ಮೇಲಿರುತ್ತದೆ. ಕುಳಿತುಕೊಂಡು ಧ್ಯಾನಿಸುವುದರಲ್ಲಿ ಒಲಿಂಪಿಕ್ ಪದಕ ಗೆಲ್ಲುವುದರ ಮೇಲೆ ಅಲ್ಲ! ಧರ್ಮಾಚರಣೆ ಎಂದರೆ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿತ್ತದೆ.
ಮೇಲಾಗಿ, ಧರ್ಮಾಚರಣೆಯು ಆತ್ಮಾವಲೋಕನದಿಂದ ಕೂಡಿರುತ್ತದೆ. ಅದರೊಂದಿಗೆ, ನಾವು ನಮ್ಮ ಭಾವನಾತ್ಮಕ ಸ್ಥಿತಿಗಳು, ನಮ್ಮ ಪ್ರೇರಣೆಗಳು, ನಮ್ಮ ವರ್ತನೆಗಳು, ನಮ್ಮ ಪ್ರಚೋದಿತ ನಡವಳಿಕೆಯ ಮಾದರಿಗಳ ಮೇಲೆ ಗಮನ ಹರಿಸಲು ಪ್ರಯತ್ನಿಸುತ್ತೇವೆ. ವಿಶೇಷವಾಗಿ ನಾವು ಗೊಂದಲದ ಭಾವನೆಗಳನ್ನು ಗಮನಿಸಬೇಕು. ಗೊಂದಲದ ಭಾವನೆ ಅಥವಾ ವರ್ತನೆಯ ವಿಶಿಷ್ಟ ಲಕ್ಷಣವೆಂದರೆ ಅದು ಉದ್ಭವಿಸಿದಾಗ, ಅದು ನಮಗೆ ಮತ್ತು/ಅಥವಾ ಇತರರಿಗೆ ಅನಾನುಕೂಲತೆಯನ್ನುಂಟು ಮಾಡುತ್ತದೆ. ನಾವು ನಮ್ಮ ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ ಮತ್ತು ನಿಯಂತ್ರಣವನ್ನು ಕಳೆದುಕೊಳ್ಳುತ್ತೇವೆ. ಇದು ಬಹಳ ಸಹಾಯಕವಾದ ವ್ಯಾಖ್ಯಾನವಾಗಿದೆ, ಏಕೆಂದರೆ ಇದನ್ನು ತಿಳಿದುಕೊಳ್ಳುವುದರಿಂದ, ನಾವು ಒಂದು ಗೊಂದಲಮಯ ಭಾವನೆಯ ಪ್ರಭಾವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಅದನ್ನು ಗುರುತಿಸಲು ನಮಗೆ ಸಹಾಯವಾಗುತ್ತದೆ. ನಾವು ಅನಾನುಕೂಲತೆಯನ್ನು ಅನುಭವಿಸಿದರೆ, ನಮ್ಮ ಮನಸ್ಸಿನಲ್ಲಿ ಏನೋ ಗೊಂದಲವಿದೆ ಎಂದು ನಾವು ತಿಳಿಯಬಹುದು. ಅಂತಹ ಸಮಯದಲ್ಲಿ, ನಮ್ಮೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಬೇಕು ಮತ್ತು ಅದನ್ನು ಸರಿಪಡಿಸಲು ಪ್ರತಿವಿಷಗಳನ್ನು ಅನ್ವಯಿಸಬೇಕು.
ಇದಕ್ಕಾಗಿ, ನಮ್ಮೊಳಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಬಹಳ ಸಂವೇದನಾಶೀಲರಾಗಿರಬೇಕು. ನಮ್ಮ ಗೊಂದಲಮಯ ಭಾವನಾತ್ಮಕ ಸ್ಥಿತಿಯನ್ನು ಬದಲಾಯಿಸಲು ಏನಾದರೂ ಮಾಡಲು, ನಾವು ಗೊಂದಲದ ಮತ್ತು ಗೊಂದಲಮಯ ರೀತಿಯಲ್ಲಿ ವರ್ತಿಸಿದರೆ, ಅದು ನಮಗೆ ಮತ್ತು ಇತರರಿಗೆ ಬಹಳಷ್ಟು ಅಸಂತೋಷವನ್ನು ಉಂಟುಮಾಡುತ್ತದೆ ಎಂಬುದರ ಅರಿವು ಅತ್ಯಗತ್ಯ. ನಮಗೆ ಅದು ಬೇಡ; ಅದರಿಂದ ಸಾಕಾಗಿ ಹೋಗಿದ್ದೇವೆ. ಅಲ್ಲದೆ, ನಾವು ಅಸಮಾಧಾನಗೊಂಡಿದ್ದರೆ, ನಾವು ಬೇರೆಯವರಿಗೆ ಹೇಗೆ ತಾನೆ ಸಹಾಯ ಮಾಡಲು ಸಾಧ್ಯ?
ಹೊಂದಿಕೊಳ್ಳುವಿಕೆ
ಧರ್ಮಾಚರಣೆಗೆ ಕೇವಲ ಒಂದಲ್ಲ ಎರಡಲ್ಲ, ಹಲವಾರು ವಿಭಿನ್ನ ಎದುರಾಳಿ ಶಕ್ತಿಗಳೊಂದಿಗಿನ ಪರಿಚಿತತೆಯ ಅಗತ್ಯವಿರುತ್ತದೆ. ನಮ್ಮ ಜೀವನವು ಬಹಳಾ ಸಂಕೀರ್ಣವಾಗಿದೆ ಮತ್ತು ಒಂದು ನಿರ್ದಿಷ್ಟ ಪ್ರತಿವಿಷವು, ಎಲ್ಲದರ ಮೇಲೆ ಕೆಲಸ ಮಾಡುವುದಿಲ್ಲ. ಪ್ರತಿಯೊಂದು ಸಂದರ್ಭದಲ್ಲಿ, ಒಂದೇ ಅಭ್ಯಾಸವು ಪರಿಣಾಮಕಾರಿಯಾಗಿರಲು ಸಾಧ್ಯವಿಲ್ಲ. ದೈನಂದಿನ ಜೀವನದಲ್ಲಿ ವಿಷಯಗಳನ್ನು ನಿಜವಾಗಿಯೂ ಅಳವಡಿಸಿಕೊಳ್ಳಲು ಸಾಧ್ಯವಾಗಲು ಹೆಚ್ಚಿನ ನಮ್ಯತೆ ಮತ್ತು ವಿವಿಧ ವಿಧಾನಗಳ ಅಗತ್ಯವಿರುತ್ತದೆ. ಇದು ಕೆಲಸ ಮಾಡದಿದ್ದರೆ, ಅದನ್ನು ಬಳಸುತ್ತೇವೆ; ಅದು ಕೆಲಸ ಮಾಡದಿದ್ದರೆ, ನಾವು ಇದನ್ನು ಪ್ರಯತ್ನಿಸುತ್ತೇವೆ.
ನೀವು ಜೀವನದಲ್ಲಿ ಏನೇ ಮಾಡಲು ಪ್ರಯತ್ನಿಸುವಾಗ, ಎರಡು ಅಥವಾ ಮೂರು ಪರ್ಯಾಯ ಯೋಜನೆಗಳನ್ನು ಯಾವಾಗಲೂ ಹೊಂದಿರಬೇಕು ಎಂದು ನನ್ನ ಶಿಕ್ಷಕರಾದ ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ ಅವರು ಹೇಳುತ್ತಿದ್ದರು. ನಂತರ, ಯೋಜನೆ A ಕೆಲಸ ಮಾಡದಿದ್ದರೆ, ನೀವು ಸುಮ್ಮನೆ ಬಿಟ್ಟುಕೊಡುವುದಿಲ್ಲ. ಏಕೆಂದರೆ ನಿಮ್ಮ ಬಳಿ ಬ್ಯಾಕಪ್ ಯೋಜನೆಯಾದ B ಅಥವಾ C ಇರುತ್ತದೆ. ಅಂತಿಮವಾಗಿ, ಅವುಗಳಲ್ಲಿ ಒಂದು ಕೆಲಸ ಮಾಡುತ್ತದೆ. ಇದು ಬಹಳಾ ಸಹಾಯಕವಾದ ಸಲಹೆ ಎಂದು ನಾನು ಕಂಡುಕೊಂಡೆ. ಧರ್ಮದಲ್ಲೂ ಇದನ್ನೇ ಅನ್ವಯಿಸಬಹುದು: ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ವಿಧಾನ A ಕಾರ್ಯನಿರ್ವಹಿಸದಿದ್ದರೆ, ನಾವು ಯಾವಾಗಲೂ ಬ್ಯಾಕಪ್ ಯೋಜನೆಯನ್ನು ಹೊಂದಿರಬೇಕು. ನಾವು ಬೇರೆ ವಿಷಯಗಳನ್ನೂ ಇಲ್ಲಿ ಉಪಯೋಗಿಸಬಹುದು. ನಿಸ್ಸಂಶಯವಾಗಿ, ದೈಹಿಕ ತರಬೇತಿಯಂತೆ, ಇವೆಲ್ಲವೂ ಅಧ್ಯಯನವನ್ನು ಆಧರಿಸಿರುತ್ತವೆ, ವಿವಿಧ ವಿಧಾನಗಳು ಮತ್ತು ಧ್ಯಾನಗಳನ್ನು ಕಲಿಯುವುದರ ಮೇಲೆ, ಅವುಗಳನ್ನು ನಂತರ ತಯಾರಿಯಲ್ಲಿ ಅಭ್ಯಾಸ ಮಾಡುವುದನ್ನು ಆಧರಿಸಿರುತ್ತವೆ. ಈ ವಿಧಾನಗಳೊಂದಿಗೆ ಪರಿಚಿತರಾಗಿರಲು ನಾವು ತರಬೇತಿಗೊಳ್ಳುತ್ತೇವೆ, ಆಗ ನಮಗೆ ಅಗತ್ಯವಿರುವಾಗ, ಇವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಬಹುದು. ಇದಕ್ಕಾಗಿ, ಧರ್ಮಾಚರಣೆಯನ್ನು ಹವ್ಯಾಸವಾಗಿ ನೋಡದೆ, ಪೂರ್ಣಾವಧಿಯ ಬದ್ಧತೆಯಾಗಿ ನೋಡಬೇಕಾಗುತ್ತದೆ.
ವಿಪರೀತಗಳನ್ನು ತಪ್ಪಿಸುವುದು
ನಾವು ನಮ್ಮ ಕುಟುಂಬಗಳ ವಿಷಯದಲ್ಲಿ ಧರ್ಮಾಚರಣೆಯನ್ನು ಅನ್ವಯಿಸುತ್ತೇವೆ. ನಮ್ಮ ಹೆತ್ತವರೊಂದಿಗೆ, ನಮ್ಮ ಮಕ್ಕಳೊಂದಿಗೆ ಮತ್ತು ಕೆಲಸದಲ್ಲಿರುವವರೊಂದಿಗೆ ವ್ಯವಹರಿಸುವಾಗ ನಾವು ಅದನ್ನು ಅನ್ವಯಿಸುತ್ತೇವೆ. ಹೀಗೆ ಮಾಡುವಾಗ, ನಾವು ವಿವಿಧ ರೀತಿಯ ವಿಪರೀತತೆಗಳನ್ನು ತಪ್ಪಿಸಬೇಕು. ಈಗಾಗಲೇ ಇದರ ಬಗ್ಗೆ ನಾವು ಸ್ವಲ್ಪ ಮಾತನಾಡಿದ್ದೇವೆ. ನಮ್ಮ ಸಮಸ್ಯೆಗಳ ಕಾರಣಗಳನ್ನು ಇತರರ ಮೇಲೆ ಅಥವಾ ಸಂಪೂರ್ಣವಾಗಿ ನಮ್ಮ ಮೇಲೆಯೇ ದೋಷಾರೋಪಣೆ ಮಾಡುವುದನ್ನು ನಿಲ್ಲಿಸಬೇಕು - ನಾವಿಬ್ಬರೂ ಕಾರಣರಾಗಿರುತ್ತೇವೆ. ನಾವು ಇತರರನ್ನು ಬದಲಾಯಿಸಲು ಪ್ರಯತ್ನಿಸಬಹುದು, ಆದರೆ ನಮ್ಮನ್ನು ನಾವೇ ಬದಲಾಯಿಸಿಕೊಳ್ಳುವುದು ಇನ್ನೂ ಸುಲಭ.
ಹಾಗಾದರೆ, ಸ್ವಂತದ ಸುಧಾರಣೆಯು ನಮ್ಮ ಕೇಂದ್ರವಾಗಿರಬೇಕು; ಆದರೆ ಹೀಗೆ ಮಾಡುವಾಗ, ನಾವು ಆತ್ಮರತಿಯಿಂದ ಕೂಡಿದ ಸ್ವಯಂ-ತಲ್ಲೀನತೆಯ ತೀವ್ರತೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ಸ್ವಯಂ ತಲ್ಲೀನತೆಯೊಂದಿಗೆ, ನಾವು ಕೇವಲ ನಮ್ಮತ್ತ ನೋಡುತ್ತೇವೆ ಮತ್ತು ಬೇರೆಯವರತ್ತ ಗಮನ ಹರಿಸುವುದಿಲ್ಲ. ನಾವೇ ಬ್ರಹ್ಮಾಂಡದ ಕೇಂದ್ರಬಿಂದುವಾಗಿದ್ದೇವೆ ಮತ್ತು ನಮ್ಮ ಸಮಸ್ಯೆಗಳು ಜಗತ್ತಿನಲ್ಲಿ ಅತ್ಯಂತ ಮುಖ್ಯವಾದವು ಎಂಬ ಭಾವನೆಯನ್ನು ಇದು ಬಲಪಡಿಸುತ್ತದೆ. ಬೇರೆಯವರ ಸಮಸ್ಯೆಗಳು ಮುಖ್ಯವಲ್ಲ ಅಥವಾ ಅವರು ನೊಂದಿಲ್ಲ ಎಂಬ ಭಾವನೆಯನ್ನು ಇದು ಬಲಪಡಿಸುತ್ತದೆ.
ಇನ್ನೊಂದು ವಿಪರೀತವು, ನಾವೆಲ್ಲರೂ ಕೆಟ್ಟವರು ಅಥವಾ ನಾವೆಲ್ಲರೂ ಒಳ್ಳೆಯವರು ಎಂದು ಯೋಚಿಸುವುದಾಗಿರುತ್ತದೆ. ನಮ್ಮಲ್ಲಿರುವ ಕಷ್ಟಕರವಾದ ಅಂಶಗಳ ಮೇಲೆ ಕೆಲಸ ಮಾಡಬೇಕಾದುದನ್ನು ಗುರುತಿಸಬೇಕು ನಿಜ. ಆದರೆ ನಾವು ನಮ್ಮ ಸಕಾರಾತ್ಮಕ ಅಂಶಗಳನ್ನು, ನಮ್ಮ ಸಕಾರಾತ್ಮಕ ಗುಣಗಳನ್ನು ಸಹ ಗುರುತಿಸಬೇಕು, ಇದರಿಂದ ನಾವು ಅವುಗಳನ್ನು ಹೆಚ್ಚು ಹೆಚ್ಚಾಗಿ ಅಭಿವೃದ್ಧಿಪಡಿಸಬಹುದು. ನಮ್ಮಲ್ಲಿ ಅನೇಕ ಪಾಶ್ಚಾತ್ಯ ಜನರಲ್ಲಿ, ಕಡಿಮೆ ಸ್ವಾಭಿಮಾನವಿರುತ್ತದೆ. ನಮ್ಮ ಸಮಸ್ಯೆಗಳು ಮತ್ತು ಗೊಂದಲಗಳ ಮೇಲೆ ನಾವು ಹೆಚ್ಚಾಗಿ ಗಮನಹರಿಸಿದರೆ, ಇದು ನಮ್ಮ ಸ್ವಾಭಿಮಾನವು ಕಡಿಮೆಯಾಗುವ ಪ್ರಕ್ರಿಯೆಯನ್ನು ಬಲಪಡಿಸುತ್ತದೆ. ಇದು ಇಲ್ಲಿನ ಗುರಿಯಾಗಿರುವುದಿಲ್ಲ.
ನಮ್ಮ ಗೊಂದಲದ ಭಾವನೆಗಳ ಮೇಲೆ ನಿಗಾ ಇಡುವ ಸಮಯದಲ್ಲೇ, ನಮ್ಮ ಒಳ್ಳೆಯ ಗುಣಗಳನ್ನು ನೆನಪಿಸಿಕೊಳ್ಳುವುದರೊಂದಿಗೆ, ನಾವು ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಅತ್ಯಂತ ಕ್ರೂರ ಜನರಲ್ಲೂ ಒಳ್ಳೆಯ ಗುಣಗಳ ಅನುಭವವಿರುತ್ತದೆ. ನಿಸ್ಸಂದೇಹವಾಗಿ, ಅವರಿಗೂ, ತಮ್ಮ ಮಡಿಲಲ್ಲಿ ನಾಯಿಮರಿ ಅಥವಾ ಬೆಕ್ಕಿನಮರಿಯನ್ನು ಮುದ್ದಾಡಿದ ಅನುಭವವಿರುತ್ತದೆ. ಬಹುತೇಕವಾಗಿ, ಎಲ್ಲರಿಗೂ ಅಂತಹ ಅನುಭವವಾದರೂ ಇದ್ದೇ ಇರುತ್ತದೆ. ಆದ್ದರಿಂದ, ನಾವು ಈ ರೀತಿಯಾಗಿ ಹೃತ್ಪೂರ್ವಕವಾಗಿರಲು ಸಮರ್ಥರಾಗಿದ್ದೇವೆ ಎಂದು ಗುರುತಿಸುತ್ತೇವೆ ಮತ್ತು ಈ ರೀತಿಯಾಗಿ ನಮ್ಮ ಸಕಾರಾತ್ಮಕ ಅಂಶಗಳನ್ನು ಗುರುತಿಸುತ್ತೇವೆ. ಧರ್ಮಾಚರಣೆಯು ಕೇವಲ ನಮ್ಮ ನಕಾರಾತ್ಮಕ ಅಂಶಗಳ ಮೇಲೆ ಕೆಲಸ ಮಾಡುವುದಾಗಿರುವುದಿಲ್ಲ; ಅದು ಸಮತೋಲನದಲ್ಲಿರಬೇಕು. ನಮ್ಮ ಸಕಾರಾತ್ಮಕ ಅಂಶಗಳನ್ನು ಬಲಪಡಿಸಲು ಸಹ ನಾವು ಕೆಲಸ ಮಾಡಬೇಕಾಗಿದೆ.
ಹೀಗೆ ಮಾಡುವಾಗ, ನಮ್ಮ ನ್ಯೂನತೆಗಳನ್ನು ಮತ್ತು ನಮ್ಮ ಒಳ್ಳೆಯ ಗುಣಗಳ ನಡುವೆ ಸಮತೋಲನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಾಗ, ನಾವು ಇನ್ನೊಂದು ವಿಪರೀತತೆಯನ್ನು ತಪ್ಪಿಸಬೇಕಾಗಿದೆ. ಒಂದು ವಿಪರೀತವು ಅಪರಾಧಿ ಪ್ರಜ್ಞೆಯಾಗಿರುತ್ತದೆ, “ನಾನು ಕೆಟ್ಟವನು. ನಾನು ಅಭ್ಯಾಸ ಮಾಡಬೇಕು ಮತ್ತು ನಾನು ಹಾಗೆ ಮಾಡುತ್ತಿಲ್ಲವಾದ್ದರಿಂದ, ನಾನು ಇನ್ನೂ ಕೆಟ್ಟವನಾಗಿದ್ದೇನೆ.” ಧರ್ಮಾಚರಣೆಯನ್ನು ವಿಶ್ಲೇಷಿಸುವ ನಮ್ಮ ದೃಷ್ಟಿಕೋನದಿಂದ ಈ ‘ಮಾಡಬೇಕು’ ಎಂಬ ಪದವನ್ನು ತೆಗೆದುಹಾಕಬೇಕಾಗಿದೆ. ಇದು ಎಂದಿಗೂ "ಮಾಡಬೇಕಾದ" ವಿಷಯವಲ್ಲ. ನಾವು ನಮ್ಮಲ್ಲಿರುವ ಸಮಸ್ಯೆಗಳನ್ನು ನಿವಾರಿಸಲು ಮತ್ತು ಭವಿಷ್ಯದಲ್ಲಿನ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ, "ನನ್ನ ಸಮಸ್ಯೆಯನ್ನು ನಾನು ನಿವಾರಿಸಲು ಬಯಸಿದರೆ, ಈ ಅಭ್ಯಾಸದಿಂದ ಹಾಗಾಗುತ್ತದೆ" ಎಂದು ಸರಳವಾಗಿ ಯೋಚಿಸುವುದು ಆರೋಗ್ಯಕರ ಮನೋಭಾವವಾಗಿರುತ್ತದೆ. ಈಗ, ನಾವು ಆ ಅಭ್ಯಾಸವನ್ನು ಅಳವಡಿಸಿಕೊಳ್ಳುತ್ತೇವೋ ಇಲ್ಲವೋ, ಅದು ನಮ್ಮ ಸ್ವಂತ ಆಯ್ಕೆಯಾಗಿರುತ್ತದೆ. "ನೀವು ಇದನ್ನು ಮಾಡಲೇಬೇಕು ಮತ್ತು ನೀವು ಇದನ್ನು ಮಾಡದಿದ್ದರೆ, ನೀವು ಕೆಟ್ಟವರು" ಎಂದು ಯಾರೂ ಹೇಳುತ್ತಿಲ್ಲ.
ಆದರೆ, ನಾವು ಇನ್ನೊಂದು ರೀತಿಯ ವಿಪರೀತವನ್ನು ಸಹ ತಪ್ಪಿಸಬೇಕಾಗಿದೆ, ಅದು, “ನಾವೆಲ್ಲರೂ ಅತ್ಯುತ್ತಮರು; ನಿಮ್ಮ ಬುದ್ಧ-ಸ್ವಭಾವವನ್ನು ಒಪ್ಪಿಕೊಂಡರೆ ಸಾಕು, ಎಲ್ಲವೂ ಒಳ್ಳೆಯದಾಗಿರುತ್ತದೆ.” ಇದು ಬಹಳಾ ಅಪಾಯಕಾರಿಯಾದ ವಿಪರೀತವಾಗಿರುತ್ತದೆ ಏಕೆಂದರೆ ಇದು ನಾವು ಬದಲಾಗಬೇಕಿಲ್ಲ ಎಂಬ ಮನೋಭಾವಕ್ಕೆ ಕಾರಣವಾಗಬಹುದು; ನಮ್ಮಲ್ಲಿರುವ ಯಾವುದೇ ನಕಾರಾತ್ಮಕ ವಿಷಯಗಳನ್ನು ನಿಲ್ಲಿಸುವ ಅಥವಾ ಬಿಟ್ಟುಕೊಡುವ ಅಗತ್ಯವಿಲ್ಲ, ಏಕೆಂದರೆ ನಾವು ಈಗಾಗಲೇ ಪರಿಪೂರ್ಣರಾಗಿದ್ದೇವೆ. ನಾವು ಈ ಎರಡೂ ವಿಪರೀತಗಳನ್ನು ತಪ್ಪಿಸಬೇಕು - ನಾವು ಕೆಟ್ಟವರು ಅಥವಾ ನಾವು ಪರಿಪೂರ್ಣರು ಎಂಬ ಭಾವನೆ. ಮೂಲಭೂತವಾಗಿ, ನಮಗೆ ನಾವೇ ಜವಾಬ್ದಾರರಾಗಬೇಕು. ಇದು ನಮ್ಮ ದೈನಂದಿನ ಜೀವನದಲ್ಲಿ, ಧರ್ಮವನ್ನು ಸಂಯೋಜಿಸುವ ಮುಖ್ಯ ಕೀಲಿಕೈಯಾಗಿರುತ್ತದೆ. ನಮ್ಮ ಜೀವನದ ಗುಣಮಟ್ಟವನ್ನು ಬದಲಾಯಿಸಲು, ನಾವೇ ಜವಾಬ್ದಾರರಾಗಿರುತ್ತೇವೆ.
ಸ್ಫೂರ್ತಿ
ನಮ್ಮ ಮೇಲೆ ನಾವು ಕೆಲಸ ಮಾಡುವಾಗ, ನಾವು ಆಧ್ಯಾತ್ಮಿಕ ಶಿಕ್ಷಕರಿಂದ ಮತ್ತು ನಮ್ಮೊಂದಿಗೆ ಅಭ್ಯಾಸ ಮಾಡುವ ಇತರ ಜನರ ಸಮುದಾಯದಿಂದ ಸ್ಫೂರ್ತಿಯನ್ನು ಪಡೆಯಬಹುದು. ಆದರೆ ಹೆಚ್ಚಿನ ಜನರಿಗೆ, ಅನೇಕ ಶತಮಾನಗಳ ಹಿಂದೆ ಗಾಳಿಯಲ್ಲಿ ಹಾರಬಹುದಾದ ಗುರುಗಳ ಬಗೆಗಿನ ಅದ್ಭುತ ಕಥೆಗಳನ್ನು ಶಿಕ್ಷಕರಿಂದ ಕೇಳುವುದು ಸ್ಫೂರ್ತಿಯ ದೃಢವಾದ ಮೂಲವಾಗಿರುವುದಿಲ್ಲ. ಏಕೆಂದರೆ ಅಂತಹ ವಿಷಯಗಳಿಗೆ ಸಂಬಂಧಿಸುವುದು ಬಹಳಾ ಕಷ್ಟಕರವಾಗಿರುತ್ತದೆ ಮತ್ತು ಅವು ನಮ್ಮನ್ನು ಒಂದು ರೀತಿಯ ಮಾಯಾ ಜಗತ್ತಿನ ಪ್ರವಾಸಕ್ಕೆ ಕರೆದೊಯ್ಯುತ್ತವೆ. ಇದಕ್ಕಿಂತ ಉತ್ತಮದಾದದ್ದು, ಜೀವಂತ ಉದಾಹರಣೆಗಳಾಗಿರುತ್ತವೆ, ಅವರೊಂದಿಗಿನ ಸಂಪರ್ಕವು ಕನಿಷ್ಠವಾಗಿದ್ದರೂ ಸರಿ, ಅದು ನೈಜವಾಗಿರುತ್ತದೆ.
ಬುದ್ಧರು ಅಥವಾ ನಿಜವಾಗಿಯೂ ಅರ್ಹರಾದ ಶಿಕ್ಷಕರು ನಮ್ಮನ್ನು ಮೆಚ್ಚಿಸಲು ಪ್ರಯತ್ನಿಸುವುದಿಲ್ಲ ಅಥವಾ ನಮ್ಮನ್ನು ಸ್ಫೂರ್ತಿಗೊಳಿಸಲು ಪ್ರಯತ್ನಿಸುವುದಿಲ್ಲ. ಅವರು ಸೂರ್ಯನಂತೆ ಇರುವರು. ಸೂರ್ಯನು, ಜನರನ್ನು ಬೆಚ್ಚಗಾಗಿಸಲು ಪ್ರಯತ್ನಿಸುವುದಿಲ್ಲ; ಸೂರ್ಯನ ನೈಸರ್ಗಿಕ ಸ್ವಭಾವವೇ ಇತರರನ್ನು ಬೆಚ್ಚಗಾಗಿಸುವುದಾಗಿರುತ್ತದೆ. ಮಹಾನ್ ಆಧ್ಯಾತ್ಮಿಕ ಗುರುಗಳ ವಿಷಯದಲ್ಲೂ ಇದೇ ಸತ್ಯವಾಗಿರುತ್ತದೆ. ಅವರು ಜೀವನವನ್ನು ನಡೆಸುವ ರೀತಿ, ಅವರ ಸ್ವಭಾವ ಮತ್ತು ವಿಷಯಗಳೊಂದಿಗೆ ವ್ಯವಹರಿಸುವ ವಿಧಾನಗಳಿಂದ ಅವರು ನಮಗೆ ಸ್ವಾಭಾವಿಕವಾಗಿ ಮತ್ತು ಸಹಜವಾಗಿ ಸ್ಫೂರ್ತಿ ನೀಡುತ್ತಾರೆ. ಇವು ಮಾಂತ್ರಿಕ ತಂತ್ರಗಳಲ್ಲ. ಇವು ಹೆಚ್ಚು ವಾಸ್ತವಿಕವಾಗಿದ್ದು ಮತ್ತು ಪ್ರಾಯೋಗಿಕವಾಗಿದ್ದು ಹೆಚ್ಚು ಸ್ಪೂರ್ತಿದಾಯಕವಾಗಿರುತ್ತವೆ.
ನನಗೆ ಡುಡ್ಜೋಮ್ ರಿಂಪೋಚೆ ಅವರ ನೆನಪಿದೆ. ಅವರು ಅನೇಕ ವರ್ಷಗಳ ಹಿಂದೆ ನಿಧನಗೊಂಡರು. ಅವರು ನ್ಯಿಂಗ್ಮಾ ವಂಶದ ಮುಖ್ಯಸ್ಥರಾಗಿದ್ದರು ಮತ್ತು ನನ್ನ ಶಿಕ್ಷಕರಲ್ಲಿ ಒಬ್ಬರಾಗಿದ್ದರು. ಅವರಿಗೆ ಭಯಾನಕ ಅಸ್ತಮಾ ಇತ್ತು. ನನಗೂ ಅಸ್ತಮಾ ಇದೆ, ಆದ್ದರಿಂದ ಉಸಿರಾಟದ ತೊಂದರೆ ಹೇಗಿರುತ್ತದೆ ಎಂದು ನನಗೆ ತಿಳಿದಿದೆ. ಸಾಮಾನ್ಯವಾಗಿ ಉಸಿರಾಡಲು ಆಗದಿದ್ದಾಗ, ಪಾಠ ಮಾಡುವುದು ಬಹಳಾ ಕಷ್ಟವಾಗಿರುತ್ತದೆ, ಏಕೆಂದರೆ ನಿಮ್ಮ ಶಕ್ತಿ ಸಾಮರ್ಥ್ಯವೆಲ್ಲವನ್ನೂ ಉಸಿರಾಡಲು ಒಳಮುಖವಾಗಿ ನಿರ್ದೇಶಿಸಬೇಕಾಗುತ್ತದೆ ಎಂದು ನನಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಶಕ್ತಿಯು ಹೊರ ಹೊಮ್ಮುವುದು ಬಹಳಾ ಕಷ್ಟ. ಆದರೂ, ಡುಡ್ಜೋಮ್ ರಿನ್‌ಪೋಚೆಯವನರಿಗೆ ಭೀಕರವಾದ ಅಸ್ತಮಾವಿದ್ದರೂ, ಅವರು ವೇದಿಕೆಯ ಮೇಲೆ ಹೋಗಿ ಬೋಧಿಸುವುದನ್ನು ನಾನು ನೋಡಿದ್ದೇನೆ. ತಮ್ಮ ಅಸ್ತಮಾದಿಂದ ಅವರು ಕಿಂಚಿತ್ತು ತೊಂದರೆಗೊಳಗಾಗಲಿಲ್ಲ ಮತ್ತು ಬೋಧನೆಗಳನ್ನು ನೀಡುವ ಕಾರ್ಯವನ್ನು ಅದ್ಭುತವಾಗಿ ನಿಭಾಯಿಸಿದರು. ಇದು ಬಹಳಾ ಸ್ಪೂರ್ತಿದಾಯಕವಾಗಿತ್ತು, ವಾಸ್ತವಿಕವಾಗಿತ್ತು ಮತ್ತು ಯಾವುದೇ ಮಾಯಾ ಮಂತ್ರದ ಆಟವಾಗಿರಲಿಲ್ಲ. ಇದು ನಿಜ ಜೀವನದ ಸನ್ನಿವೇಶಗಳೊಂದಿಗೆ ವ್ಯವಹರಿಸುತ್ತಿತ್ತು ಮತ್ತು ಅದು ಸ್ಪೂರ್ತಿದಾಯಕವಾಗಿತ್ತು.
ಆಧ್ಯಾತ್ಮಿಕ ಹಾದಿಯಲ್ಲಿ ಪ್ರಗತಿ ಸಾಧಿಸಿದಂತೆ, ನಾವು ನಮ್ಮಿಂದಲೇ ಸ್ಫೂರ್ತಿಗೊಳ್ಳಬಹುದು. ಇದೂ ಕೂಡ ಸ್ಫೂರ್ತಿಯ ಪ್ರಮುಖ ಮೂಲವಾಗಿರುತ್ತದೆ. ನಾವು ನಮ್ಮದೇ ಆದ ಪ್ರಗತಿಯಿಂದ ಸ್ಫೂರ್ತಿ ಪಡೆಯುತ್ತೇವೆ. ಆದರೆ, ಇದನ್ನು ಮಾಡುವಲ್ಲಿ ನಾವು ಬಹಳ ಸೂಕ್ಷ್ಮವಾಗಿರಬೇಕು. ಹೆಚ್ಚಿನ ಜನರಿಗೆ ಈ ಅಂಶವನ್ನು ಭಾವನಾತ್ಮಕವಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ ನಾವು ಸ್ವಲ್ಪ ಪ್ರಗತಿ ಸಾಧಿಸಿದರೂ, ನಮಗೆ ಸೊಕ್ಕಿನ ಮತ್ತು ಹೆಮ್ಮೆಪಡುವ ಪ್ರವೃತ್ತಿಯಿರುತ್ತದೆ. ಆದ್ದರಿಂದ, ನಾವು ಪ್ರಗತಿಯ ಅರ್ಥವನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕು.
ಮಾರ್ಗದಲ್ಲಿನ ಪ್ರಗತಿ
ಪ್ರಗತಿಯು ಎಂದಿಗೂ ರೇಖಾತ್ಮಕವಾಗಿರುವುದಿಲ್ಲ ಎಂಬುದನ್ನು ನಾವು ಮೊದಲು ಅರಿತುಕೊಳ್ಳಬೇಕು; ಅದು ಮೇಲೆ-ಕೆಳಗೆ, ಮೇಲೆ-ಕೆಳಗೆ ಹೋಗುತ್ತಲೇ ಇರುತ್ತದೆ. ಇದು ಸಂಸಾರದ ಮುಖ್ಯ ಗುಣಲಕ್ಷಣಗಳಲ್ಲಿ ಒಂದಾಗಿರುತ್ತದೆ, ಸಂಸಾರವು ಕೇವಲ ಉನ್ನತವಾದ ಮತ್ತು ಕೀಳಾದ ಪುನರ್ಜನ್ಮಗಳ ಬಗ್ಗೆಯಾಗಿರುವುದಿಲ್ಲ. ದೈನಂದಿನ ಜೀವನದಲ್ಲೂ ಸಹ ಏರಿಳಿತವನ್ನು ನಾವು ನೋಡಬಹುದು. ಈಗ ನನಗೆ ಸಂತೋಷವಾಗಿದೆ; ಈಗ ನಾನು ಅತೃಪ್ತನಾಗಿದ್ದೇನೆ. ನಮ್ಮ ಮನಸ್ಥಿತಿಗಳು ಮೇಲಕ್ಕೆ - ಕೆಳಕ್ಕೆ ಹೋಗುತ್ತಿರುತ್ತವೆ. ಈಗ ನನಗೆ ಅಭ್ಯಾಸ ಮಾಡಬೇಕೆಂದು ಅನಿಸುತ್ತಿದೆ, ಈಗ ನನಗೆ ಅಭ್ಯಾಸ ಮಾಡಬೇಕೆಂದು ಅನಿಸುತ್ತಿಲ್ಲ - ಅದು ಸಾರ್ವಕಾಲಿಕವಾಗಿ ಮೇಲೆ-ಕೆಳಗೆ ಹೋಗುತ್ತಿರುತ್ತದೆ, ಆದ್ದರಿಂದ ಆಶ್ಚರ್ಯಪಡಬೇಡಿ. ವಾಸ್ತವದಲ್ಲಿ, ನಾವು ಸಂಸಾರದಿಂದ ಮುಕ್ತರಾಗುವವರೆಗೆ, ನಾವು ಅರ್ಹತ್ - ನಾವು ವಿಮೋಚನೆಗೊಂಡ ಆತ್ಮವಾಗುವವರೆಗೆ ಹೀಗೆಯೇ ಮುಂದುವರಿಯುತ್ತದೆ. ಆ ನಂಬಲಾಗದಷ್ಟು ಉನ್ನತಮಟ್ಟದ ಹಂತವನ್ನು ತಲುಪುವವರೆಗೆ, ಸಂಸಾರದಲ್ಲಿ ಏರಿಳಿತವಾಗುತ್ತಲೇ ಮುಂದುವರಿಯುತ್ತದೆ. ಆದ್ದರಿಂದ, ಬಹಳ ಸಮಯದವರೆಗೆ ಅಭ್ಯಾಸ ಮಾಡಿದ ನಂತರವೂ, ಇದ್ದಕ್ಕಿದ್ದಂತೆ ನಮ್ಮ ವೈಯಕ್ತಿಕ ಪ್ರಣಯ ಸಂಬಂಧದಲ್ಲಿ ನಾವು ತೊಂದರೆಗೆ ಸಿಲುಕಿಕೊಂಡಾಗ ನಿರುತ್ಸಾಹಗೊಳ್ಳಬಾರದು. ಇದ್ದಕ್ಕಿದ್ದಂತೆ, ನಾವು ಭಾವನಾತ್ಮಕವಾಗಿ ಅಸಮಾಧಾನಗೊಳ್ಳುತ್ತೇವೆ - ಇದು ಸಂಭವಿಸುತ್ತದೆ! ಇದರರ್ಥ ನಾವು ಬಹಳಾ ಕೆಟ್ಟದಾದ ಅಭ್ಯಾಸಕಾರರಾಗಿದ್ದೇವೆ ಎಂದಲ್ಲ. ನಮ್ಮ ಸಂಸಾರಿಕ ಸ್ಥಿತಿಯ ವಾಸ್ತವತೆಗೆ ಅನುಗುಣವಾಗಿ, ಇದು ಸಹಜವಾಗಿರುತ್ತದೆ.
ಸಾಮಾನ್ಯವಾಗಿ, ಧರ್ಮಾಚರಣೆಯಲ್ಲಿ ಪವಾಡಗಳು ನಡೆಯುವುದಿಲ್ಲ. ನಾವು ದೈನಂದಿನ ಜೀವನದಲ್ಲಿ ಧರ್ಮವನ್ನು ಅನ್ವಯಿಸಲು ಬಯಸಿದರೆ, ವಿಶೇಷವಾಗಿ ನಮ್ಮ ಪ್ರಗತಿಯ ವಿಷಯವಾಗಿ, ಪವಾಡಗಳನ್ನು ನಿರೀಕ್ಷಿಸಬೇಡಿ. ನಾವು ಪ್ರಗತಿಯನ್ನು ವಾಸ್ತವಿಕವಾಗಿ ಅಳೆಯುವುದು ಹೇಗೆ? ಧರ್ಮಾಚರಣೆಯ ಒಂದು ಅಥವಾ ಎರಡು ವರ್ಷಗಳ ಪರಿಭಾಷೆಯಲ್ಲಿ ನೋಡಬೇಡಿ ಎಂದು ಪರಮಪೂಜ್ಯ ದಲೈ ಲಾಮಾ ಅವರು ಹೇಳುತ್ತಾರೆ. ಐದು ಅಥವಾ ಹತ್ತು ವರ್ಷಗಳ ಅಭ್ಯಾಸದ ಪರಿಭಾಷೆಯಲ್ಲಿ ಪರೀಕ್ಷಿಸಿ, “ಐದು ಅಥವಾ ಹತ್ತು ವರ್ಷಗಳ ಹಿಂದೆಗೆ ಹೋಲಿಸಿಕೊಂಡರೆ, ಇಂದು ನಾನು ಶಾಂತವಾಗಿರುವ ವ್ಯಕ್ತಿಯಾಗಿದ್ದೇನೆಯೇ? ನಾನು ಹೆಚ್ಚು ಕಷ್ಟಕರ ಸಂದರ್ಭಗಳ ಬಗ್ಗೆ ಅಸಮಾಧಾನಗೊಳ್ಳದೆ ಅಥವಾ ವಿಚಲಿತಗೊಳ್ಳದೆ, ಅವುಗಳನ್ನು ನಿಭಾಯಿಸಲು ಶಕ್ತನಾಗಿದ್ದೇನೆಯೇ?” ನಾವು ಹಾಗೆ ಮಾಡಿದ್ದಲ್ಲಿ, ನಾವು ಸ್ವಲ್ಪ ಪ್ರಗತಿಯನ್ನು ಸಾಧಿಸಿದ್ದೇವೆ ಎಂದರ್ಥ ಮತ್ತು ಅದು ಸ್ಪೂರ್ತಿದಾಯಕವಾಗಿರುತ್ತದೆ. ನಮ್ಮಲ್ಲಿ ಸಮಸ್ಯೆಗಳು ಇನ್ನೂ ಇವೆ, ಆದರೆ ಇದು, ನಮಗೆ ಮುಂದುವರಿಯಲು ಶಕ್ತಿಯನ್ನು ನೀಡುತ್ತದೆ. ವಿಷಯಗಳು ಹದಗೆಟ್ಟಾಗ ಅಥವಾ ಕಷ್ಟಕರ ಸಂದರ್ಭಗಳಲ್ಲಿ ನಾವು ತೀರಾ ಅಸಮಾಧಾನಗೊಳ್ಳುವುದಿಲ್ಲ. ನಾವು ವೇಗವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಬಗ್ಗೆ ಸ್ಫೂರ್ತಿಯ ಮೂಲವಾಗಿ ಮಾತನಾಡುವಾಗ, ಈ ಸ್ಫೂರ್ತಿಯು ನಮಗೆ ಈ ಮಾರ್ಗದಲ್ಲಿ ಮುಂದುವರಿಯಲು ಶಕ್ತಿಯನ್ನು ನೀಡುತ್ತದೆ ಎಂಬುದು ಮುಖ್ಯವಾದ ಅಂಶವಾಗಿರುತ್ತದೆ. ಏಕೆಂದರೆ ನಾವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಎಂದು ನಮಗೆ ಮನವರಿಕೆಯಾಗುತ್ತದೆ. ಮತ್ತು ಆ ದಿಕ್ಕಿನಲ್ಲಿ ಸಾಗುವುದರ ಅರ್ಥದ ಬಗ್ಗೆ ವಾಸ್ತವಿಕ ಕಲ್ಪನೆಯನ್ನು ಹೊಂದಿದ್ದಲ್ಲಿ ಮಾತ್ರ ನಾವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿದ್ದೇವೆ ಎಂದು ನಮಗೆ ಮನವರಿಕೆಯಾಗುತ್ತದೆ - ಅಂದರೆ, ಆ ಸಾಮಾನ್ಯ ದಿಕ್ಕಿನಲ್ಲಿ ಹೋಗುವಾಗ, ನಾವು ನಿರಂತರವಾಗಿ ಮೇಲೆ-ಕೆಳಗೆ ಹೋಗುತ್ತಲೇ ಇರುತ್ತೇವೆ.
ದೈನಂದಿನ ಜೀವನದಲ್ಲಿ ಧರ್ಮದ ಆಚರಣೆಯನ್ನು ಹೇಗೆ ಸಂಯೋಜಿಸುವುದು ಎಂಬುದರ ಕುರಿತು ಇವು ಕೆಲವು ಸಾಮಾನ್ಯ ವಿಚಾರಗಳಾಗಿವೆ. ಅವು ಸಹಾಯಕವಾಗಿವೆಯೆಂದು ನಾನು ಭಾವಿಸುತ್ತೇನೆ. ಧನ್ಯವಾದಗಳು.