ಬೌದ್ಧ ಮಾರ್ಗದಲ್ಲಿ ಹೆಜ್ಜೆಯಿಡುವ ಮೊದಲು ಒಂದು ಸಮಾಲೋಚನೆ

ದೈನಂದಿನ ಜೀವನದ ಸವಾಲುಗಳನ್ನು ಎದುರಿಸುವಲ್ಲಿ, ತೊಂದರೆಗಳನ್ನು ತಪ್ಪಿಸಲು, ಬೌದ್ಧಧರ್ಮವು ಪ್ರಾಯೋಗಿಕವಾದ ತಡೆಗಟ್ಟುವ ಕ್ರಮಗಳನ್ನು ಕಲಿಸುತ್ತದೆ. ಇದು ನಮ್ಮ ಗೊಂದಲಮಯ ಆಲೋಚನೆಗಳಲ್ಲಿರುವ ನಮ್ಮ ಸಮಸ್ಯೆಗಳ ಮೂಲವನ್ನು ಮತ್ತು ನಮ್ಮ ಭಾವನಾತ್ಮಕ ಅಸಮಾಧಾನಗಳು ಮತ್ತು ಪ್ರಚೋದಿತ ನಡವಳಿಕೆಯನ್ನು ಚಲಾಯಿಸುವ ನಮ್ಮ ಅವಾಸ್ತವಿಕ ವರ್ತನೆಗಳನ್ನು ಗಮನಿಸುತ್ತದೆ. ಧ್ಯಾನದ ಮೂಲಕ ನಮ್ಮ ಅಭ್ಯಾಸದಲ್ಲಿರುವ ಅಸಮರ್ಪಕ ಚಿಂತನೆ ಮತ್ತು ನಡವಳಿಕೆಯನ್ನು ಎದುರಿಸಬಹುದು ಮತ್ತು ಪ್ರೀತಿಯಿಂದ ಕೂಡಿದ ಮತ್ತು ಸಕಾರಾತ್ಮಕವಾಗಿರುವ ಇತರರಿಂದ ಸ್ಫೂರ್ತಿಗೊಂಡು, ನಮ್ಮ ದೈನಂದಿನ ಜೀವನದ ಗುಣಮಟ್ಟವನ್ನು ಸುಧಾರಿಸಲು ನಾವು ನಮ್ಮ ಮನಸ್ಸನ್ನು ಪರಿವರ್ತಿಸಬಹುದು.

ಬೌದ್ಧಧರ್ಮ ಮತ್ತು ಅದು ನಮ್ಮ ದೈನಂದಿನ ಜೀವನಕ್ಕೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಬಯಸಿದರೆ, ಬೌದ್ಧ ಬೋಧನೆಗಳು ಮತ್ತು ಅದರ ಆಚರಣೆಗಾಗಿ ಬಳಸಲಾಗುವ ಸಾಂಪ್ರದಾಯಿಕ ಪದಗಳ ಅರ್ಥವನ್ನು ತಿಳಿದುಕೊಳ್ಳುವುದು ಉತ್ತಮ: ಇದೇ ಧರ್ಮ. "ಧರ್ಮ" ಎಂಬುದು ಸಂಸ್ಕೃತ ಪದವಾಗಿದ್ದು, ಇದು ಅಕ್ಷರಶಃ "ತಡೆಗಟ್ಟುವ ಕ್ರಮ" ಎಂಬುದನ್ನು ಅರ್ಥೈಸುತ್ತದೆ. ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಇದನ್ನು ಅನುಸರಿಸುತ್ತೇವೆ. ಇದನ್ನು ನಾವು ಅರ್ಥಮಾಡಿಕೊಂಡರೆ, ಬುದ್ಧನು ಕಲಿಸಿದ ಎಲ್ಲಾ ವಿಷಯಗಳ ಹಿಂದಿನ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. 

ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಯಾವುದೇ ಆಸಕ್ತಿಯನ್ನು ಬೆಳೆಸಿಕೊಳ್ಳಲು, ಜೀವನದಲ್ಲಿ ಸಮಸ್ಯೆಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ನಿಜವಾಗಿಯೂ ಇದಕ್ಕಾಗಿ ಸಾಕಷ್ಟು ಧೈರ್ಯ ಬೇಕಾಗಿರುತ್ತದೆ. ಬಹಳಷ್ಟು ಜನರು ತಮ್ಮನ್ನು ಅಥವಾ ತಮ್ಮ ಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ದಿನವಿಡೀ ಬಹಳಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ನಂತರ, ಅವರು ದಣಿದಿರುವ ಕಾರಣ, ಸಂಜೆಯ ಸಮಯದಲ್ಲಿ ಮನರಂಜನೆ ಮತ್ತು ಇತರ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮನ್ನು ತಾವು ವಿಚಲಿತಗೊಳಿಸಿಕೊಳ್ಳುತ್ತಾರೆ. ಪ್ರಾಮಾಣಿಕತೆಯಿಂದ, ತಮ್ಮ ಜೀವನದಲ್ಲಿನ ಸಮಸ್ಯೆಗಳ ಬಗ್ಗೆ ಪ್ರತಿಫಲನ ಮಾಡುವುದಿಲ್ಲ. ತಮ್ಮ ಸಮಸ್ಯೆಗಳನ್ನು ನೋಡಿದರೂ ಸಹ, ಅವರ ಜೀವನವು ತೃಪ್ತಿಕರವಾಗಿಲ್ಲ ಎಂದು ಒಪ್ಪಿಕೊಳ್ಳಲು ಅವರು ನಿಜವಾಗಿಯೂ ಬಯಸುವುದಿಲ್ಲ, ಏಕೆಂದರೆ ಅದು ಚಿಂತಾಕ್ರಾಂತ ವಿಷಯವಾಗಿರುತ್ತದೆ. ನಮ್ಮ ಜೀವನದ ಗುಣಮಟ್ಟವನ್ನು ಪರಿಶೀಲಿಸುವುದು ಮತ್ತು ಅದು ಅತೃಪ್ತಿಕರವಾಗಿದೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಲು ಧೈರ್ಯ ಬೇಕಾಗಿರುತ್ತದೆ. 

Top