ಸರಿಯಾದ ಮಾತು, ನಡವಳಿಕೆ ಮತ್ತು ಜೀವನೋಪಾಯ

ಸಮೀಕ್ಷೆ 

ನೈತಿಕ ಶಿಸ್ತು, ಏಕಾಗ್ರತೆ ಮತ್ತು ವಿವೇಚನಾತ್ಮಕ ಅರಿವಿನ ಮೂರು ತರಬೇತಿಗಳು ನಮ್ಮ ಸಮಸ್ಯೆಗಳನ್ನು ಮತ್ತು ನಾವು ಅನುಭವಿಸುವ ಯಾವುದೇ ದುಃಖವನ್ನು ಜಯಿಸಲು ಸಹಾಯ ಮಾಡುವುದರ ಮೇಲೆಯೇ ಸದಾ ಕೇಂದ್ರೀಕೃತವಾಗಿರುತ್ತವೆ. ನಮ್ಮ ಕಷ್ಟಗಳ ಕಾರಣಗಳನ್ನು ಗುರುತಿಸಿ, ಅವುಗಳನ್ನು ತೊಡೆದುಹಾಕಲು ಈ ಮೂರನ್ನು ಅನ್ವಯಿಸುವುದೇ ಈ ವಿಧಾನವಾಗಿದೆ. 

ನಮ್ಮ ದೈನಂದಿನ ಜೀವನದಲ್ಲಿ, ಇತರರೊಂದಿಗೆ ವ್ಯವಹರಿಸಲು ಈ ಮೂರು ತರಬೇತಿಗಳನ್ನು ಬೆಳೆಸಿಕೊಳ್ಳುವುದರಿಂದ ಸಹಾಯವಾಗುತ್ತದೆ. 

  • ನೈತಿಕ ಶಿಸ್ತು – ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ ಮತ್ತು ಮಾತನಾಡುತ್ತೇವೆ ಎಂಬುದರ ಬಗ್ಗೆ ಗಮನವಿರುವುದು ಮುಖ್ಯವಾಗಿದೆ. ಹಾನಿಕಾರಕ ಅಥವಾ ವಿನಾಶಕಾರಿಯಾದ್ದದನ್ನು ಮಾಡದೇ ಇರಲು ನಮಗೆ ನೈತಿಕ ಶಿಸ್ತಿನ ಅಗತ್ಯವಿದೆ. 
  • ಏಕಾಗ್ರತೆ - ನಾವು ಇತರರೊಂದಿಗೆ ಸಂವಹನ ನಡೆಸುವಾಗ, ಅವರೊಂದಿಗೆ ಏನು ನಡೆಯುತ್ತಿದೆ ಮತ್ತು ಅವರ ಅಗತ್ಯತೆಗಳು ಏನೆಂದು ನಮಗೆ ತಿಳಿಯಲು, ನಮಗೆ ಕೇಂದ್ರೀಕರಿಸಲು ಸಾಧ್ಯವಾಗಬೇಕು. ನಮ್ಮ ಮನಸ್ಸು ಎಲ್ಲೆಂದರಲ್ಲಿ ಅಲೆದಾಡುತ್ತಿದ್ದರೆ, ನಿರಂತರವಾಗಿ ನಮ್ಮ ಫೋನ್‌ಗಳತ್ತ ನೋಡುತ್ತಿದ್ದರೆ, ಅದರಿಂದ ಇತರರೊಂದಿಗೆ ಸಂವಹನ ನಡೆಸುವುದು ಕಷ್ಟಕರವಾಗಿರುತ್ತದೆ. 
  • ವಿವೇಚನಾಶೀಲತೆ - ನಾವು ಬೇರೆಯೊಬ್ಬ ವ್ಯಕ್ತಿಯನ್ನು ಚೆನ್ನಾಗಿ ಆಲಿಸಿದ್ದರೆ, ಅದಕ್ಕೆ ಸೂಕ್ತವಾದ ಪ್ರತಿಕ್ರಿಯೆ ಏನೆಂದು ನಿರ್ಧರಿಸಲು ನಾವು ವಿವೇಚನಾತ್ಮಕ ಅರಿವನ್ನು ಬಳಸಬಹುದು. ಮತ್ತೊಮ್ಮೆ, ಇದು ಇತರರಿಗಾಗಿ ಯೋಚಿಸಲು, ವರ್ತಿಸಲು ಮತ್ತು ಮಾತನಾಡಲು ಕಾರಣವಾಗುತ್ತದೆ. 

ಈ ಮೂರು ತರಬೇತಿಗಳು ಒಟ್ಟಿಗೆ ಕೆಲಸಮಾಡುವುದರಿಂದ ಮತ್ತು ಪರಸ್ಪರ ಬಲಪಡಿಸುವುದರಿಂದ, ಇವೆಲ್ಲವನ್ನು ಏಕಕಾಲದಲ್ಲಿ ಅನ್ವಯಿಸಬೇಕಾಗಿದೆ. ನಾವು ಇತರರೊಂದಿಗೆ ಸಂವಹಿಸದಿದ್ದರೂ, ನಮಗಾಗಿಯೂ ಸಹ ಈ ಮೂರು ತರಬೇತಿಗಳು ಒಳ್ಳೆಯದಾಗಿರುತ್ತದೆ: 

  • ಅವು ನಮ್ಮನ್ನು ಸ್ವಯಂ-ವಿನಾಶಕಾರಿ ರೀತಿಯಲ್ಲಿ ವರ್ತಿಸದಂತೆ ತಡೆಯುತ್ತವೆ. 
  • ನಮ್ಮ ಮನಸ್ಸು ಕೇಂದ್ರೀಕೃತವಾಗಿರುವುದರಿಂದ, ನಾವು ಬಯಸಿದ್ದನ್ನು ಸಾಧಿಸಬಹುದು. 
  • ಯಾವುದು ಸೂಕ್ತವಾಗಿದೆ ಮತ್ತು ಅನುಚಿತವಾಗಿದೆ ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸಲು ನಾವು ನಮ್ಮ ಮೂಲ ಬುದ್ಧಿಮತ್ತೆಯನ್ನು ಬಳಸುತ್ತೇವೆ. 

ಹೀಗೆ, ಇವು ನಮ್ಮ ದೈನಂದಿನ ಜೀವನದಲ್ಲಿನ ವೈಯಕ್ತಿಕ ಸಂದರ್ಭಗಳಿಗೆ ಮತ್ತು ಸಾಮಾಜಿಕ ಸಂವಹನಗಳೆರಡಕ್ಕೂ ಅನ್ವಯಿಸಬಹುದಾದ ಮೂಲಭೂತ ತತ್ವಗಳಾಗಿವೆ. 

ಅಷ್ಟಾಂಗ ಮಾರ್ಗ 

ನಾವು ಈ ಮೂರು ತರಬೇತಿಗಳಲ್ಲಿ ತೊಡಗಿದಾಗ, ಇವನ್ನು ಮಾಡುವ ಬಗೆಯ ಒಂದು ಪ್ರಸ್ತುತಿಯೆಂದರೆ "ಅಷ್ಟಾಂಗ ಮಾರ್ಗ". ಇವುಗಳು ಎಂಟು ವಿಧದ ಅಭ್ಯಾಸಗಳಾಗಿದ್ದು, ಇವು ಆ ಮೂರು ಅಂಶಗಳನ್ನು ಅಭಿವೃದ್ಧಿಪಡಿಸಲು ಕಾರಣವಾಗುತ್ತವೆ. 

ನೈತಿಕ ಶಿಸ್ತಿನ ತರಬೇತಿಗಾಗಿ, ಈ ಮೂರು ಅಭ್ಯಾಸಗಳಿವೆ: 

  • ಸರಿಯಾದ ಮಾತು - ನಮ್ಮ ಸಂವಹನದ ವಿಧಾನ 
  • ಕ್ರಿಯೆಯ ಸೂಕ್ತವಾದ ಮಿತಿಗಳು - ನಾವು ಹೇಗೆ ವರ್ತಿಸುತ್ತೇವೆ 
  • ಸರಿಯಾದ ಜೀವನೋಪಾಯ - ನಾವು ಹೇಗೆ ಬದುಕುತ್ತೇವೆ. 

ಏಕಾಗ್ರತೆಯ ತರಬೇತಿಗಾಗಿ, ಈ ಮೂರು ಅಭ್ಯಾಸಗಳಿವೆ: 

  • ಸರಿಯಾದ ಪ್ರಯತ್ನ - ನಮ್ಮ ಮನಸ್ಸಿನಲ್ಲಿರುವ ವಿನಾಶಕಾರಿ ಆಲೋಚನೆಗಳನ್ನು ಹೊರಹಾಕಲು ಮತ್ತು ಧ್ಯಾನಕ್ಕೆ ಅನುಕೂಲಕರವಾದ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು 
  • ಸರಿಯಾದ ಸಾವಧಾನತೆ – ನಮ್ಮ ಗಮನದಲ್ಲಿನ ಮತ್ತು ನಮ್ಮ ಪ್ರೇರಣೆಯಾದ ವಸ್ತುವನ್ನು ಬಿಟ್ಟುಕೊಡದೇ ಇರುವುದು  
  • ಸರಿಯಾದ ಏಕಾಗ್ರತೆ - ರಚನಾತ್ಮಕವಾದ ಯಾವುದೇ ಕಾರ್ಯದ ಮೇಲೆ ಕೇಂದ್ರೀಕರಿಸುವುದು. 

ವಿವೇಚನಾತ್ಮಕ ಅರಿವಿನ ತರಬೇತಿಗಾಗಿ, ಎರಡು ಅಭ್ಯಾಸಗಳಿವೆ: 

  • ಸರಿಯಾದ ನೋಟ – ಯಾವುದು ಸರಿ ಅಥವಾ ತಪ್ಪು, ಯಾವುದು ಹಾನಿಕಾರಕ ಅಥವಾ ಸಹಾಯಕ ಎಂಬುದರ ನಡುವೆ ಇರುವ ವಿವೇಚನಾಶೀಲತೆಯಿಂದ ಅರಿತ ವ್ಯತ್ಯಾಸವನ್ನು ಆಧರಿಸಿದ ಸತ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ
  • ಸರಿಯಾದ ಉದ್ದೇಶ (ಸರಿಯಾದ ಪ್ರೇರಕವಾದ ಚಿಂತನೆ) - ನಮ್ಮ ಸರಿಯಾದ ದೃಷ್ಟಿಕೋನದ ಕಾರಣದಿಂದ ಸಿಗುವ ರಚನಾತ್ಮಕ ಮನಸ್ಥಿತಿ. 

ಹೆಚ್ಚಿನ ವಿಸ್ತಾರವಾದ ರೂಪದಲ್ಲಿ, ಈ ಎಂಟು ಅಭ್ಯಾಸಗಳಲ್ಲಿ ಪ್ರತಿಯೊಂದನ್ನೂ ತಪ್ಪಾಗಿ ಅನ್ವಯಿಸುವ ಮಾರ್ಗಗಳಿವೆ, ಅವನ್ನು ನಾವು ತೊರೆಯಲು ಬಯಸುತ್ತೇವೆ, ಬದಲಿಗೆ ಅವನ್ನು ಅನ್ವಯಿಸುವ ಸರಿಯಾದ ಮಾರ್ಗವನ್ನು ನಾವು ಅಳವಡಿಸಿಕೊಳ್ಳಲು ಬಯಸುತ್ತೇವೆ. 

ಮಾತು 

ನಾವು ಇತರರೊಂದಿಗೆ ಹೇಗೆ ಮಾತನಾಡುತ್ತೇವೆ ಎಂಬುದು ನಮ್ಮ ಸ್ವಂತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದು, ಇತರರು ಹೇಗೆ ಭಾವಿಸುತ್ತಾರೆ ಮತ್ತು ಪ್ರತಿಕ್ರಿಯೆಯಾಗಿ ನಮ್ಮನ್ನು ಹೇಗೆ ಪರಿಗಣಿಸುತ್ತಾರೆ ಮತ್ತು ನಮ್ಮೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಮಾತನಾಡುವ ವಿಧಾನಗಳಲ್ಲಿ ಯಾವುದು ಸಹಾಯಕವಾಗಿವೆ ಮತ್ತು ಯಾವುದು ಹಾನಿಕಾರಕವಾಗಿವೆ ಎಂದು ನಾವು ತಿಳಿದುಕೊಳ್ಳಬೇಕು. 

ತಪ್ಪು ಮಾತಿನ ವಿಧಾನಗಳು 

ತಪ್ಪು ಮಾತು ಅತೃಪ್ತಿ ಮತ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ: 

  • ಸುಳ್ಳು ಹೇಳುವುದು – ಅಸತ್ಯವನ್ನು ನುಡಿದು, ಇತರರನ್ನು ಮೋಸಗೊಳಿಸುವುದು. ನಾವು ನುಡಿಯುವ ಮಾತುಗಳಿಂದ, ಸುಳ್ಳು ಹೇಳುವ ಅಥವಾ ಇತರರನ್ನು ಮೋಸ ಮಾಡುವ ವ್ಯಕ್ತಿ ಎಂದು ಗುರುತಾದರೆ, ಯಾರೂ ನಮ್ಮನ್ನು ನಂಬುವುದಿಲ್ಲ, ನಮ್ಮ ಮೇಲೆ ವಿಶ್ವಾಸವಿಡುವುದಿಲ್ಲ ಅಥವಾ ನಾವು ಹೇಳುವುದನ್ನು ಕೇಳುವುದಿಲ್ಲ. ಇದು ಅತೃಪ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. 
  • ಒಡಕುಂಟು ಮಾಡುವ ಹಾಗೆ ಮಾತನಾಡುವುದು - ಜನರ ಸ್ನೇಹಿತರು ಅಥವಾ ಸಂಗಾತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಸಂಬಂಧಗಳನ್ನು ಹಾಳುಮಾಡಲು ಪ್ರಯತ್ನಿಸುವುದು. ಇದರಿಂದ ಜನರ ಬೆನ್ನ ಹಿಂದೆ ನಾವು ಏನು ಮಾತನಾಡುತ್ತೇವೆ ಎಂದು ಅವರು ಯೋಚಿಸುವಂತೆ ಮಾಡುತ್ತದೆ ಮತ್ತು ಇದರಿಂದ ನಮ್ಮ ಸಂಬಂಧಗಳು ಹಾಳಾಗುತ್ತವೆ. 
  • ಕಠೋರವಾಗಿ ಮಾತನಾಡುವುದು - ಕ್ರೂರತನದಿಂದ ಮಾತನಾಡುವುದು, ಅಥವಾ ಇತರರನ್ನು ಬೈಯುವುದು ಮತ್ತು ಶಪಿಸುವುದು. ನಮ್ಮ ಮಾತಿನಿಂದ ನಾವು ಇತರರನ್ನು ನಿಂದಿಸಿದಾಗ, ಅವರೂ ಕೂಡ ನಮ್ಮೊಂದಿಗೆ ಈ ರೀತಿಯಾಗಿ ಮಾತನಾಡಲು ಪ್ರಾರಂಭಿಸುತ್ತಾರೆ, ಮತ್ತು ಅವರು ಆ ನಿಂದನೆಯನ್ನು ಆನಂದಿಸದ ವ್ಯಕ್ತಿಗಳಾಗಿದ್ದರೆ, ಅವರು ನಮ್ಮಂತೆ ನಿರಂತರವಾಗಿ ಕೂಗಾಡುವವರ ಸುತ್ತಮುತ್ತ ಇರಲು ಬಯಸುವುದಿಲ್ಲ. 
  • ಅರ್ಥಹೀನವಾಗಿ ವಟಗುಟ್ಟುವುದು - ಎಲ್ಲಾ ಸಮಯದಲ್ಲೂ ಬಡಬಡಾಯಿಸುತ್ತಾ ಮಾತನಾಡುವುದು, ಇತರರ ಮಾತಿಗೆ ಅಡ್ಡಿಹಾಕುವುದು ಮತ್ತು ಅಸಂಬದ್ಧತೆಯಿಂದ ಕೂಡಿದ ಮಾತುಗಳನ್ನಾಡುವುದು ಅಥವಾ ಹರಟೆ ಹೊಡೆಯುವುದು. ಇದರ ಫಲಿತಾಂಶವೆಂದರೆ ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಮತ್ತು ಜನರು ನಮ್ಮೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ನಾವು ನಮ್ಮ ಸಮಯ ಮತ್ತು ಇತರರ ಸಮಯವನ್ನು ವ್ಯರ್ಥ ಮಾಡುತ್ತೇವೆ. 

ಸರಿಯಾದ ಮಾತು 

ರಚನಾತ್ಮಕ ಮಾತುಗಳು, ಈ ಮೇಲಿನ ನಾಲ್ಕು ರೀತಿಯ ತಪ್ಪು ಮಾತುಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತವೆ. ಶಿಸ್ತಿನ ಮೊದಲ ಹಂತವೆಂದರೆ, ನಮಗೆ ಏನಾದರೂ ಅಸತ್ಯವನ್ನು ನುಡಿಯಲು, ಯಾರ ಮೇಲಾದರೂ ಕೂಗಲು ಅಥವಾ ಹರಟೆ ಹೊಡೆಯುವಂತೆ ಮನಸ್ಸಾದಾಗ, ಅದು ವಿನಾಶಕಾರಿ ಮತ್ತು ಅದರಿಂದ ಅತೃಪ್ತಿಯುಂಟಾಗುತ್ತದೆ ಎಂದು ನಾವು ಗುರುತಿಸುತ್ತೇವೆ ಮತ್ತು ಹಾಗೆ ಮಾಡದಿರಲು ನಾವು ಶ್ರಮಪಡುತ್ತೇವೆ.  

ಇದು ಸುಲಭವೇನಲ್ಲ, ಏಕೆಂದರೆ ನೀವು ಹಾಗೆ ಪ್ರಚೋದಿತವಾಗಿ ಮಾತನಾಡುವ ಮೊದಲು, ನೀವು ಹಾಗೆ ಮಾತನಾಡಲು ಬಯಸುವ ಕ್ಷಣದಲ್ಲಿ ನಿಮ್ಮನ್ನು ತಡೆದುಕೊಳ್ಳಬೇಕು. ಇದು ಕೇಕಿನ ಒಂದು ತುಂಡನ್ನು ಬಯಸುವಂತಿದೆ. ಕೆಲವೊಮ್ಮೆ ನಮಗೆ ಎರಡನೇ ತುಂಡನ್ನು ಸೇವಿಸುವ ಅವಕಾಶವಿರುತ್ತದೆ, ಆದರೆ ಹಠಾತ್ ಆಗಿ ಅದನ್ನು ತೆಗೆದುಕೊಳ್ಳುವ ಮೊದಲು, ನಾವು ಹೀಗೆ ಯೋಚಿಸಬಹುದು: "ನನಗೆ ಅದು ಬೇಕೆನಿಸಿದರೂ, ನಾನು ಹಾಗೆ ಮಾಡುವ ಅಗತ್ಯವಿಲ್ಲ. ನನಗೆ ಈ ಕೇಕಿನ ಅಗತ್ಯವಿಲ್ಲ; ಇದು ನನ್ನನ್ನು ಹೆಚ್ಚು ದಪ್ಪವಾಗಿಸುತ್ತದೆ ಮತ್ತು ನಾನು ಸ್ವಲ್ಪ ತೂಕವನ್ನು ಕಳೆದುಕೊಳ್ಳಬೇಕಾಗಿದೆ.” ನಾವು ಇದನ್ನೇ ಶಿಸ್ತಿನ ವಿಚಾರದಲ್ಲಿ ಚರ್ಚಿಸುತ್ತೇವೆ. 

ಹೀಗೆ ಮಾಡುವಂತೆ ನಮಗೆ ಅನಿಸಿದಾಗ, ಪ್ರಾಚೀನ ಭಾರತೀಯ ಬೋಧಕರಾದ ಶಾಂತಿದೇವ, ಮರದ ದಿಮ್ಮಿಯಂತೆ ಉಳಿಯಲು ಸಲಹೆ ನೀಡುತ್ತಾರೆ. ನನಗೆ ಅಸಭ್ಯವಾದದ್ದನ್ನು ಕೂಗಲು ಅಥವಾ ಹೇಳಬೇಕೆನಿಸುತ್ತದೆ, ಆದರೆ ಅದು ನನಗೂ ಮತ್ತು ನಿಮಗೂ ಅಸಮಾಧಾನವನ್ನುಂಟುಮಾಡುತ್ತದೆ ಎಂದು ನಾನು ಅರಿತುಕೊಂಡೆ, ಹಾಗಾಗಿ ನಾನು ಹಾಗೆ ಮಾತನಾಡುವುದಿಲ್ಲ. ನಾನು ಮರದ ದಿಮ್ಮಿಯಂತೆ ಉಳಿಯುತ್ತೇನೆ. ನನಗೆ ಮೂರ್ಖತನದ ಲೇವಡಿಯಾಡಲು ಅಥವಾ ಗೇಲಿಮಾಡಿ ಮಾತನಾಡುವಂತೆ ಅನಿಸುತ್ತದೆ, ಆದರೆ ಇದು ಕೇವಲ ನಿಷ್ಫಲ ಹರಟೆ ಎಂದು ಅರಿತುಕೊಂಡು, ನಾನು ಏನನ್ನೂ ಮಾತನಾಡುವುದಿಲ್ಲ. ಇದು ಇಂತಹ ವಿಷಯಗಳನ್ನು ಒಳಗೊಂಡಿರುತ್ತದೆ.  

ಶಿಸ್ತಿನ ಎರಡನೇ ಹಂತವೆಂದರೆ, ನೀವು ನಿಜವಾಗಿಯೂ ಏನಾದರೂ ರಚನಾತ್ಮಕವಾದದ್ದನ್ನು ಮಾಡುವಿರಿ – ಅಂದರೆ ಉಪಯುಕ್ತವಾಗುವ ರೀತಿಯಲ್ಲಿ ಮಾತನಾಡುವಿರಿ. ಹೀಗೆ ಮಾಡುವುದರಿಂದ ಸಂತೋಷ ಸಿಗುತ್ತದೆ ಮತ್ತು ಪ್ರತಿ ಸನ್ನಿವೇಶವು ಹೆಚ್ಚು ಸಾಮರಸ್ಯದಿಂದ ಕೂಡಿರುತ್ತದೆ ಎಂದು ಅರಿತುಕೊಳ್ಳುವುದರಿಂದ ಇದು ಬರುತ್ತದೆ. ನಾವು ಕಾರಣ ಮತ್ತು ಪರಿಣಾಮದ ಪ್ರಕಾರ ಯೋಚಿಸಬೇಕಾಗಿದೆ. 

ಸರಿಯಾದ ಮಾತಿನ ರೀತಿಯನ್ನು ಬೆಳೆಸಿಕೊಳ್ಳುವುದು ಬಹಳ ಪ್ರಜ್ಞಾಪೂರ್ವಕವಾದ ಪ್ರಯತ್ನವಾಗಿದ್ದು, ಸತ್ಯವಾಗಿ, ಮೃದುವಾಗಿ, ದಯೆಯಿಂದ, ಸೂಕ್ತ ಸಮಯದಲ್ಲಿ, ಸೂಕ್ತವಾದ ಅಳತೆಯಲ್ಲಿ ಮತ್ತು ಅರ್ಥಪೂರ್ಣವಾಗಿ ಮಾತನಾಡಬೇಕೆಂಬ ಬಲವಾದ ನಿರ್ಣಯವನ್ನು ತೆಗೆದುಕೊಳ್ಳಬೇಕಾಗಿದೆ: 

  • ಜನರು ಮಾತನಾಡುವಾಗ ಅವರಿಗೆ ನಿರಂತರವಾಗಿ ತಡೆಹಾಕದಿರಲು ಪ್ರಯತ್ನಿಸಬೇಕು ಅಥವಾ ನಿರಂತರವಾಗಿ ಅವರಿಗೆ ಕರೆ ಮಾಡಬಾರದು ಅಥವಾ ಮೆಸೇಜ್ಗಳನ್ನು ಕಳುಹಿಸಬಾರದು, ವಿಶೇಷವಾಗಿ “ನಿಮ್ಮ ಊಟ ಆಯಿತೇ?” ಅಥವಾ ಹರಟೆ ಹೊಡೆಯುವಂತಹ ಕ್ಷುಲ್ಲಕ ವಿಷಯಗಳಿಗೆ ತೊಂದರೆ ನೀಡಬಾರದು. ಇದು ಅರ್ಥಹೀನ ವಟಗುಟ್ಟುವಿಕೆಯಾಗಿದ್ದು, ಇತರರಿಗೆ ಕಿರಿಕಿರಿಯೆನಿಸುತ್ತದೆ.  
  • ಇತರರೊಂದಿಗೆ ಮಾತನಾಡುವಾಗ, ವಿಶೇಷವಾಗಿ ಅವರು ನಮ್ಮೊಂದಿಗೆ ಒಪ್ಪಿಕೊಂಡಾಗ, ನಾವು ಹೆಚ್ಚು ಮಾತನಾಡದೆ ಅಥವಾ ಕೆಲವು ವಿಷಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸದೇ ಇರುವುದು, ಸೂಕ್ತವಾಗಿರುತ್ತದೆ.  

ಸಹಜವಾಗಿ, ನಾವು ವಿವೇಚನಾಶೀಲತೆಯನ್ನು ಬಳಸಬೇಕಾಗಿದೆ. ಉದಾಹರಣೆಗೆ, ಸತ್ಯವನ್ನು ನುಡಿಯುವಾಗ, ಯಾರಾದರೂ ಚೆನ್ನಾಗಿರದ ಅಂಗಿ ಅಥವಾ ಉಡುಪನ್ನು ಧರಿಸಿದ್ದರೆ ನೀವು ಅವರಿಗೆ ನೋವುಂಟುಮಾಡುವ ಹಾಗೆ, “ಅದು ನಿಜವಾಗಿಯೂ ಕೆಟ್ಟದಾಗಿ ಕಾಣುತ್ತಿದೆ”, ಎಂದು ಹೇಳುವುದಿಲ್ಲ. ಕೆಲವೊಮ್ಮೆ ನೀವು ಜಾಗರೂಕರಾಗಿ ಮಾತನಾಡಬೇಕು, ಅದು ಆ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಸಹೋದರಿ ನನ್ನನ್ನು ಭೇಟಿ ಮಾಡಿದಾಗ, ನಾವು ಹೊರಗೆ ಹೋಗಲು ತಯಾರಾದಾಗ, ಅವಳು ಬ್ಲೌಸ್ ಒಂದನ್ನು ಧರಿಸಿದಳು. ಅದು ಸ್ವಲ್ಪ ಹಿಗ್ಗಿದ್ದು, ಸರಿಯಾಗಿ ಅವಳ ಮೇಲೆ ಕೂರಲಿಲ್ಲ, ಆದರೆ ಅವಳು ನನ್ನ ಸಹೋದರಿ ಆದ ಕಾರಣ ಅದು ಚೆನ್ನಾಗಿ ಕಾಣುತ್ತಿಲ್ಲ ಎಂದು ನಾನು ಅವಳಿಗೆ ಸ್ಪಷ್ಟವಾಗಿ ಹೇಳಬಹುದಾಗಿತ್ತು. ಆದರೆ ನಿಮ್ಮ ಕುಟುಂಬದವರನ್ನು ಹೊರತುಪಡಿಸಿ ಇತರರೊಂದಿಗೆ ಹಾಗೆ ಮಾತನಾಡುವುದು ಸುಲಭವಲ್ಲ! ನಿಮ್ಮ ಹೊಸ ಪ್ರೇಮಿಗೆ, ಅದು ಸತ್ಯವಾಗಿದ್ದರೂ ಸಹ, ನೀವು ಹೀಗೆ ಹೇಳುವುದಿಲ್ಲ, "ನೀನು ಧರಿಸಿರುವ ಬ್ಲೌಸ್ ಕೆಟ್ಟದಾಗಿದೆ, ಬೇರೆಯೇನಾದರೂ ಹಾಕಿಕೋ!”. 

ಕಠೋರ ಮಾತಿನ ಬಗ್ಗೆ ಹೇಳುವುದಾದರೆ, ಕೆಲವೊಮ್ಮೆ ನೀವು ಅಧಿಕಾರದಿಂದ ಮಾತನಾಡಲೇ ಬೇಕಾಗುವುದು. ನಿಮ್ಮ ಮಗುವು ಬೆಂಕಿಕಡ್ಡಿ, ಅಥವಾ ಲೈಟರ್ ಜೊತೆಗೆ ಆಟವಾಡುತ್ತಿದ್ದರೆ, ನೀವು ಜೋರಾಗಿ ಮಾತನಾಡಲೇಬೇಕು. ಇಲ್ಲಿ ನಿಮ್ಮ ಪ್ರೇರಣೆಯು ಕೋಪವಾಗಿಲ್ಲದ ಕಾರಣ ಅದು ಕಠಿಣ ಮಾತು ಎಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಪ್ರೇರಣೆಯು ಪ್ರಮುಖವಾಗಿರುತ್ತದೆ. 

ತಪ್ಪು ಮಾತಿನ ವಿಧಾನಗಳ ಇತರ ಉದಾಹರಣೆಗಳು 

ನಮ್ಮ ವಿನಾಶಕಾರಿ ಮಾತುಗಳು, ಕೇವಲ ಇತರರನ್ನು ನಿಂದಿಸುವ ಮಾತುಗಳನ್ನಲ್ಲದೆ, ನಮ್ಮನ್ನೂ ನಿಂದಿಸುವ ಮಾತುಗಳನ್ನು ಒಳಗೊಳ್ಳುವಂತೆ ವಿಸ್ತರಿಸಬಹುದು. ವಿನಾಶಕಾರಿಯಾಗಿ ಮಾತನಾಡುವ ವಿಧಾನಗಳ ಬಗ್ಗೆ ನಾವು ಹೆಚ್ಚು ವಿಶಾಲವಾದ ರೀತಿಯಲ್ಲಿ ಯೋಚಿಸಬಹುದು. 

ಸುಳ್ಳು ಹೇಳುವುದು, ಇತರರಿಗೆ ನಮ್ಮ ಭಾವನೆಗಳ ಬಗ್ಗೆ ಅಥವಾ ಅವರಿಗಾಗಿ ನಮ್ಮ ಬಳಿಯಿರುವ ಉದ್ದೇಶಗಳ ಬಗ್ಗೆ ಸುಳ್ಳು ಹೇಳುವುದನ್ನು ಒಳಗೊಂಡಿರುತ್ತದೆ. ನಾವು ಯಾರೊಂದಿಗಾದರೂ ತುಂಬಾ ಚೆನ್ನಾಗಿ ನಡೆದುಕೊಂಡಾಗ, ನಾವು ಅವರನ್ನು ಪ್ರೀತಿಸುತ್ತೇವೆ ಎಂದು ಅವರಿಗೆ ಹೇಳಬಹುದು, ಅದನ್ನು ನಂಬುವಂತೆ ನಮ್ಮನ್ನು ನಾವೇ ವಂಚಿಸಿಕೊಳ್ಳಬಹುದು, ಆದರೆ ವಾಸ್ತವದಲ್ಲಿ ನಮಗೆ ಕೇವಲ ಅವರ ಹಣ ಬೇಕಾಗಿರಬಹುದು. ಒಂದರ್ಥದಲ್ಲಿ ಇದು ವಂಚನೆಯಾಗಿರುತ್ತದೆ. ಖಂಡಿತವಾಗಿಯೂ ನಾವು ಆ ವ್ಯಕ್ತಿಯ ಬಳಿ "ನಿಜವಾಗಿಯೂ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ನನಗೆ ನಿನ್ನ ಹಣ ಮಾತ್ರ ಬೇಕು" ಎಂದು ಹೇಳುವುದಿಲ್ಲ, ಏಕೆಂದರೆ ಅದು ಅನುಚಿತವಾಗಿರುತ್ತದೆ. ಆದರೆ ನಮ್ಮ ಭಾವನೆಗಳು ಮತ್ತು ಉದ್ದೇಶಗಳ ಬಗ್ಗೆ ನಾವು ಸತ್ಯವಂತರಾಗಿದ್ದೇವೆಯೇ ಎಂದು ನಾವು ನಮ್ಮನ್ನು ಪರೀಕ್ಷಿಸಿಕೊಳ್ಳಬೇಕು. 

ಒಡಕುಂಟಾಗುವ ಹಾಗೆ ಮಾತನಾಡುವುದೆಂದರೆ, ನಾವು ಎಷ್ಟು ಅಸಹ್ಯಕರವಾದ ಮಾತುಗಳನ್ನಾಡುತ್ತೇವೆ ಎಂದರೆ, ಅದರಿಂದ ನಮ್ಮ ಸ್ವಂತ ಸ್ನೇಹಿತರು ನಮ್ಮನ್ನು ಬಿಟ್ಟು ಹೋಗಬಹುದು. ಕೆಲವರು ಯಾವಾಗಲೂ ದೂರು ನೀಡುತ್ತಾ ಗೊಣಗುತ್ತಿರುತ್ತಾರೆ ಅಥವಾ ನಿರಂತರವಾಗಿ ನಕರಾತ್ಮಕವಾಗಿರುತ್ತಾರೆ, ಇದರಿಂದ ಉಳಿದೆಲ್ಲರೂ ಅವರಿಂದ ದೂರವಿರುತ್ತಾರೆ. ನಾವು ಹಾಗೆ ಇದ್ದರೆ, ನಮ್ಮೊಂದಿಗೆ ಯಾರು ಇರಲು ಬಯಸುತ್ತಾರೆ? ಅಥವಾ ಬೇರೊಬ್ಬ ವ್ಯಕ್ತಿಗೆ ಮಾತನಾಡಲು ಅವಕಾಶ ನೀಡದೆ, ಎಡಬಿಡದೆ ಮಾತನಾಡುವುದು ಸಹ ಜನರನ್ನು ದೂರ ಓಡಿಸುತ್ತದೆ. ನಮ್ಮೆಲ್ಲರಿಗೂ ಅಂತಹ ಜನರು ಗೊತ್ತಿರುವರು ಮತ್ತು ಅಂತಹವರನ್ನು ಭೇಟಿ ಮಾಡಲು ನಮಗೇನು ಇಷ್ಟವಿರುವುದಿಲ್ಲ. ಇತರರ ಬಗ್ಗೆ ಒಳ್ಳೆಯದನ್ನು ನುಡಿಯುವುದು ಉತ್ತಮವಾಗಿರುತ್ತದೆ ಮತ್ತು ನಾವು ಸಾಧ್ಯವಾದಷ್ಟು ಸಕಾರಾತ್ಮಕವಾಗಿರಬೇಕು. 

ಕಠೋರವಾದ ಮಾತುಗಳಿಂದ ಕೇವಲ ಇತರರನ್ನು ಅಲ್ಲ, ನಮ್ಮನ್ನೂ ನಿಂದಿಸಿದಾಗ ಆಗುವ ಪರಿಣಾಮದ ಬಗ್ಗೆ ಯೋಚಿಸಬೇಕು. ಇತರರಿಗೆ ಅವರು ಮೂರ್ಖರು ಅಥವಾ ಕೆಟ್ಟವರು ಎಂದು ಹೇಳಿದಾಗ ಅದು ಸಹಜವಾಗಿ ಕ್ರೂರವಾಗಿರುತ್ತದೆ. ಹಾಗೆಯೇ, ಆ ಮಾತುಗಳನ್ನು ನಮ್ಮ ಕಡೆಗೆ ನಿರ್ದೇಶಿಸಿದಾಗಲೂ ಅದು ಕ್ರೂರವಾಗಿರುತ್ತದೆ. ನಿಸ್ಸಂದೇಹವಾಗಿ ಇದರಿಂದ ನಮಗೆ ಯಾವುದೇ ರೀತಿಯ ಸಂತೋಷ ಸಿಗುವುದಿಲ್ಲ, ಆದ್ದರಿಂದ ನಮ್ಮ ಬಗ್ಗೆ, ನಮ್ಮನ್ನು ನೋಡಿಕೊಳ್ಳುವಾಗ ಮತ್ತು ನಮ್ಮೊಂದಿಗೆ ಮನಸ್ಸಿನಲ್ಲಿ ಮಾತನಾಡುವಾಗ ಉತ್ತಮ ಮನೋಭಾವವನ್ನು ಹೊಂದಿರುವುದು ಮುಖ್ಯವಾಗಿರುತ್ತದೆ. 

ಕಾಲಾಹರಣ ಮಾಡುವ ಹರಟೆಯ ವಿಚಾರದಲ್ಲಿ, ನಾವು ನಮ್ಮ ಖಾಸಗಿ ವಿಷಯಗಳು, ನಮ್ಮ ಅನುಮಾನಗಳು, ನಮ್ಮ ಚಿಂತೆಗಳ ಬಗ್ಗೆ ಇತರರೊಂದಿಗೆ ವಿವೇಚನೆಯಿಲ್ಲದೆ ಮಾತನಾಡಬಾರದು. ಕೆಲವು ವಿಷಯಗಳನ್ನು ಇತರರೊಂದಿಗೆ ಖಂಡಿತವಾಗಿಯೂ ಹಂಚಿಕೊಳ್ಳಬಾರದು. ಉದಾಹರಣೆಗೆ, ಯಾರಾದರೂ ಅವರು ಸಲಿಂಗಕಾಮಿ ಎಂದು ಅಥವಾ ಅವರಿಗೆ ಕ್ಯಾನ್ಸರ್ ಇದೆ ಎಂದು ನಿಮ್ಮಲ್ಲಿ ಭರವಸೆ ಇಟ್ಟು ನಿಮ್ಮೊಂದಿಗೆ ಹಂಚಿಕೊಂಡು, ಅದನ್ನು ಯಾರಿಗೂ ಹೇಳಬಾರದೆಂದು ವಿನಂತಿಸಿದರೆ, ನೀವು ಹಾಗೆ ಮಾಡಬೇಕು. ಸಾಮಾನ್ಯವಾಗಿ, ಜನರ ವಿಶ್ವಾಸವನ್ನು ಒಡೆಯುವಂತಹ ಮಾತುಗಳು ಕಾಲಾಹರಣದ ಹರಟೆಯಲ್ಲೇ ಎದ್ದುಬರುತ್ತವೆ.  

ಸರಿಯಾದ ಮಾತು, ಸರಿಯಾದ ಸಮಯದಲ್ಲಿ, ಸರಿಯಾದ ಸಂದರ್ಭಗಳಲ್ಲಿ ಸೂಕ್ತವಾಗಿ ಮಾತನಾಡುವುದಾಗಿರುತ್ತದೆ. ಕೆಲವೊಮ್ಮೆ ಔಪಚಾರಿಕವಾಗಿ ಮತ್ತು ಕೆಲವೊಮ್ಮೆ ಅನೌಪಚಾರಿಕವಾಗಿ ಮಾತನಾಡಬೇಕಾಗುತ್ತದೆ. ಜನರನ್ನು ಆರಾಮವಾಗಿಸುವಂತಹ ರೀತಿಯಲ್ಲಿ ಮಾತನಾಡಬೇಕು. ನೀವು ನಿಮ್ಮ ಮಗುವಿಗೆ ಏನನ್ನಾದರೂ ವಿವರಿಸುವಾಗ ಅದು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೀವು ವಿವರಿಸಬೇಕು, ಹಾಗೆಯೇ ಇದು ವಯಸ್ಕರಿಗೆ ಮತ್ತು ಇತರ ಸಂಸ್ಕೃತಿಗಳ ಜನರಿಗೂ ಸಹ ಅನ್ವಯವಾಗುತ್ತದೆ. 

ಕೃತ್ಯಗಳ (ನಡವಳಿಕೆ) ಗಡಿಗಳು 

ಅಷ್ಟಾಂಗ ಮಾರ್ಗದಲ್ಲಿ ಎರಡನೆಯದು ಕ್ರಿಯೆಯ ಸೂಕ್ತವಾದ ಗಡಿಗಳ ಬಗ್ಗೆಯಾಗಿದ್ದು, ಇದು ಪಾರಿಭಾಷಿಕ ಪದವಾಗಿದೆ. ನಾವು ಗಡಿಗಳ ಬಗ್ಗೆ ಮಾತನಾಡುವಾಗ, ನಾವು ಒಂದು ನಿರ್ದಿಷ್ಟ ಮಿತಿಯ ಬಗ್ಗೆ ಮಾತನಾಡುತ್ತಿದ್ದೇವೆ, "ನಾನು ಈ ಮಿತಿಯವರೆಗೆ ಕಾರ್ಯನಿರ್ವಹಿಸುತ್ತೇನೆ, ಆದರೆ ಅದನ್ನು ಮೀರುವುದಿಲ್ಲ." 

ತಪ್ಪು ನಡವಳಿಕೆ 

ಮಿತಿಯನ್ನು ಮೀರುವುದು ಎಂದರೆ ಮೂರು ವಿಧದ ವಿನಾಶಕಾರಿ ನಡವಳಿಕೆಯನ್ನು ಸೂಚಿಸುತ್ತದೆ: 

  • ಒಂದು ಜೀವವನ್ನು ತೆಗೆದುಕೊಳ್ಳುವುದು – ಒಂದು ಜೀವಿಯನ್ನು ಕೊಲ್ಲುವುದು 
  • ನಮಗೆ ನೀಡದಿದ್ದನ್ನು ತೆಗೆದುಕೊಳ್ಳುವುದು – ನಮಗೆ ಸೇರದದ್ದನ್ನು ತೆಗೆದುಕೊಳ್ಳುವುದು, ಕದಿಯುವುದು 
  • ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗುವುದು

ಕೊಲ್ಲುವುದು 

ಸರಳವಾಗಿ ಹೇಳುವುದಾದರೆ, ಬೇರೊಬ್ಬರ ಜೀವವನ್ನು ತೆಗೆದುಕೊಳ್ಳುವುದು. ಇದು ಕೇವಲ ಮನುಷ್ಯರನ್ನಲ್ಲದೆ ಎಲ್ಲಾ ರೀತಿಯ ಪ್ರಾಣಿಗಳು, ಮೀನುಗಳು, ಕೀಟಗಳು ಮತ್ತು ಮುಂತಾದವುಗಳನ್ನು ಒಳಗೊಂಡಿರುತ್ತದೆ. 

ನನ್ನ ಪ್ರಕಾರ, ನಮ್ಮಲ್ಲಿ ಬಹುಪಾಲು ಜನರಿಗೆ, ಬೇಟೆಯಾಡುವುದು ಮತ್ತು ಮೀನುಗಾರಿಕೆಯನ್ನು ಬಿಟ್ಟುಕೊಡುವುದು ತುಂಬಾ ಕಷ್ಟವೇನಲ್ಲ. ಕೆಲವರಿಗೆ, ಕೀಟಗಳನ್ನು ಕೊಲ್ಲದಿರುವುದು ಹೆಚ್ಚು ಕಷ್ಟಕರವಾಗಿರುತ್ತದೆ. "ಈ ನೊಣವು ಹಿಂದಿನ ಜನ್ಮದಲ್ಲಿ ನನ್ನ ತಾಯಿಯಾಗಿರಬಹುದು" ಎಂದು ಯೋಚಿಸುತ್ತಾ, ಭೂತಕಾಲದ ಮತ್ತು ಭವಿಷ್ಯದ ಜೀವನದ ಬಗ್ಗೆ ಯೋಚಿಸದೆ ಇದನ್ನು ಪ್ರಸ್ತಾಪಿಸುವ ಹಲವು ಮಾರ್ಗಗಳಿವೆ. ಮುಖ್ಯವಾದದ್ದು ಏನೆಂದರೆ ನಮಗೆ ಕಿರಿಕಿರಿ ಉಂಟುಮಾಡುವ ಏನಾದರೂ ಇದ್ದರೆ, ಅದನ್ನು ಕೊಲ್ಲುವುದು ನಮ್ಮ ಸಹಜವಾದ, ಮೊದಲ ಪ್ರತಿಕ್ರಿಯೆಯಾಗದೇ ಇರುವುದು. ಇದು, ನಮಗೆ ಇಷ್ಟವಿಲ್ಲದ್ದನ್ನು ಹಿಂಸಾತ್ಮಕವಾಗಿ ನಾಶಮಾಡಲು ಬಯಸುವ ಅಭ್ಯಾಸವನ್ನು ನಿರ್ಮಿಸುತ್ತದೆ ಮತ್ತು ಈ ಅಭ್ಯಾಸವು ನಮ್ಮ ಸುತ್ತಲೂ ಝೇಂಕರಿಸುವ ನೊಣವನ್ನು ಮೀರಬಹುದು. ಬದಲಾಗಿ, ಕಿರಿಕಿರಿಯುಂಟುಮಾಡುವ ವಿಷಯಗಳೊಂದಿಗೆ ಶಾಂತಿಯುತವಾಗಿ ವ್ಯವಹರಿಸುವ ವಿಧಾನಗಳನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಬೇಕು. ನೊಣಗಳು ಅಥವಾ ಸೊಳ್ಳೆಗಳು ಗೋಡೆಯ ಮೇಲೆ ಕುಳಿತಿರುವಾಗ ನಾವು ಅವುಗಳ ಮೇಲೆ ಒಂದು ಲೋಟವನ್ನು ಇರಿಸಿ, ಕೆಳಗೆ ಒಂದು ಕಾಗದದ ತುಂಡನ್ನು ಇರಿಸಿ, ಅವುಗಳನ್ನು ಹೊರಗೆ ಬಿಡಬಹುದು. ಬಹಳಷ್ಟು ಸಂದರ್ಭಗಳಲ್ಲಿ, ನಾವು ಇಷ್ಟಪಡದ ವಿಷಯಗಳೊಂದಿಗೆ ವ್ಯವಹರಿಸಲು, ಹೆಚ್ಚು ಶಾಂತಿಯುತವಾದ, ಅಹಿಂಸಾತ್ಮಕ ಮಾರ್ಗವನ್ನು ನಾವು ಕಂಡುಕೊಳ್ಳಬಹುದು. 

ನನ್ನಂತೆ ನೀವು ಭಾರತದಲ್ಲಿ ವಾಸಿಸುತ್ತಿದ್ದರೆ, ನೀವು ಕೀಟಗಳೊಂದಿಗೆ ಬದುಕಲು ಕಲಿಯುತ್ತೀರಿ. ಭಾರತದಲ್ಲಿನ ಎಲ್ಲಾ ಕೀಟಗಳನ್ನು ಹೋಗಲಾಡಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ನಾನು ಪ್ರವಾಸೋದ್ಯಮದ ಏಜೆಂಟ್‌ಗಳಿಗಾಗಿ ಜಾಹೀರಾತು ಪ್ರಚಾರವೊಂದನ್ನು ಯೋಚಿಸುತ್ತಿದ್ದೆ: "ನಿಮಗೆ ಕೀಟಗಳು ಇಷ್ಟವಾದರೆ, ನೀವು ಭಾರತವನ್ನು ಖಂಡಿತವಾಗಿಯೂ ಪ್ರೀತಿಸುತ್ತೀರಿ!" ನಾನು ಮೊದಲು ಭಾರತಕ್ಕೆ ಬಂದಾಗ, ನನ್ನ ಹಿನ್ನೆಲೆ ಹೀಗಿತ್ತು - ನನಗೆ ಕೀಟಗಳು ಸ್ವಲ್ಪವೂ ಇಷ್ಟವಿರಲಿಲ್ಲ, ಆದರೆ ನಾನು ವೈಜ್ಞಾನಿಕ ಕಾದಂಬರಿಗಳ ದೊಡ್ಡ ಅಭಿಮಾನಿಯಾಗಿದ್ದೆ. ಆಗ ನಾನಂದುಕೊಂಡೆ - ನಾನು ದೂರದ ಗ್ರಹವೊಂದಕ್ಕೆ ಪ್ರಯಾಣಿಸಿದರೆ ಮತ್ತು ಅಲ್ಲಿನ ಜೀವಿಗಳೆಲ್ಲವೂ ಈ ರೀತಿಯ ಕೀಟಗಳ ಆಕಾರದಲ್ಲಿದ್ದರೆ, ನಾನು ಅವುಗಳನ್ನು ಭೇಟಿಯಾದಾಗ, ಕೇವಲ ಅವುಗಳನ್ನು ಹಿಸುಕುವ ಬಗ್ಗೆ ಯೋಚಿಸುತ್ತಿದ್ದರೆ ಅದು ಬಹಳಾ ಬೇಜಾರಿನ ವಿಷಯವಾಗಿರುತ್ತದೆ! ನೀವು ಆ ಕೀಟದ ಜಾಗದಲ್ಲಿ ನಿಮ್ಮನ್ನು ಯೋಚಿಸಿಕೊಳ್ಳಿ, ಆಗ ನಿಮ್ಮ ಪ್ರಕಾರ ನೀವು ನಿಮ್ಮ ಪಾಡಿಗೆ ಇರುವಿರಿ - ಆಗ ನೀವು ಅವನ್ನು ಜೀವಿಗಳಾಗಿ ಗೌರವಿಸಲು ಪ್ರಾರಂಭಿಸುವಿರಿ. 

ನಿಸ್ಸಂದೇಹವಾಗಿ, ಹಾನಿಕಾರಕ ಜನರಿರುವಂತಯೇ ಹಾನಿಕಾರಕ ಕೀಟಗಳಿವೆ, ಮತ್ತು ಕೆಲವೊಮ್ಮೆ ಅವುಗಳನ್ನು ನಿಯಂತ್ರಿಸಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತವಾಗಿರುತ್ತದೆ. ಆದರೆ ನಾವು ಮಾನವ ಘರ್ಷಣೆ ಬಗ್ಗೆ ಮಾತನಾಡುತ್ತಿರಲಿ ಅಥವಾ ಇರುವೆಗಳು ಅಥವಾ ಜಿರಳೆಗಳಿಂದ ಮುತ್ತಿಕೊಂಡಿರುವ ಮನೆಯ ಬಗ್ಗೆ ಮಾತನಾಡುತ್ತಿರಲಿ, ಮೊದಲು ಶಾಂತಿಯುತ ವಿಧಾನವನ್ನು ಪ್ರಯೋಗಿಸುವುದು ಉತ್ತಮ. 

ಆದರೆ ನಿಮ್ಮ ಬೆಳೆಗಳನ್ನು ನಾಶಮಾಡುವ ಮಿಡತೆಗಳ ಪ್ರಕರಣವನ್ನು ಪರಿಗಣಿಸಿ. ಇಲ್ಲಿ ಪ್ರೇರಣೆಯು ಪ್ರಮುಖವಾಗಿರುತ್ತದೆ. ಒಂದು ಉದಾಹರಣೆಯೆಂದರೆ, ಬುದ್ಧನ ಹಿಂದಿನ ಜೀವನದಲ್ಲಿ ಅವರೊಬ್ಬ ಹಡಗಿನ ನಾವಿಕ ಆಗಿದ್ದರು. ಅಲ್ಲಿ, ಹಡಗಿನಲ್ಲಿದ್ದ ಎಲ್ಲರನ್ನೂ ಕೊಲ್ಲಲು ಒಬ್ಬನು ಯೋಜಿಸುತ್ತಿದ್ದನು ಮತ್ತು ಈ ಸಾಮೂಹಿಕ ಹತ್ಯೆಯನ್ನು ಶಾಂತಿಯುತ ರೀತಿಯಲ್ಲಿ ತಡೆಯಲು ಯಾವುದೇ ಮಾರ್ಗವಿಲ್ಲದಿರುವುದನ್ನು ಬುದ್ಧ ಅರಿತುಕೊಂಡರು; ಇದನ್ನು ತಡೆಯುವ ಏಕೈಕ ಪರಿಹಾರವು ಈ ಸಂಭಾವ್ಯ ಸಾಮೂಹಿಕ ಕೊಲೆಗಾರನನ್ನು ಕೊಲ್ಲುವುದಾಗಿತ್ತು. ಆದ್ದರಿಂದ ಬುದ್ಧನು ಈ ವ್ಯಕ್ತಿಯನ್ನು ವಧಿಸಿದರು, ಆದರೆ ಇದಾದದ್ದು, ಭಯ ಅಥವಾ ಕೋಪದಿಂದಲ್ಲ, ಬದಲಿಗೆ ಸಹಾನುಭೂತಿಯ ಪ್ರೇರಣೆಯಿಂದ – ಇದು ಪ್ರಯಾಣಿಕರ ಜೀವಗಳನ್ನು ಉಳಿಸಲು ಮತ್ತು ಆ ವ್ಯಕ್ತಿಯು ದೊಡ್ಡ ಪ್ರಮಾಣದಲ್ಲಿ ನಕಾರಾತ್ಮಕ ಕರ್ಮವನ್ನು ಪಡೆದುಕೊಳ್ಳುವುದನ್ನು ತಡೆಯಲಾಗಿತ್ತು. ಆದರೆ ಪ್ರೇರಣೆಯನ್ನು ಹೊರತುಪಡಿಸಿ, ತಾನು ಒಬ್ಬನನ್ನು ಕೊಂದಿದ್ದೇನೆ ಮತ್ತು ಇದು ಒಂದು ವಿನಾಶಕಾರಿ ಕೃತ್ಯವೆಂದು ಬುದ್ಧನಿಗೆ ಅರಿವಿತ್ತು, ಆದ್ದರಿಂದ, "ಇತರರನ್ನು ಉಳಿಸಲು, ಇದರ ಕರ್ಮದ ಪರಿಣಾಮಗಳನ್ನು ನಾನೇ ಸ್ವೀಕರಿಸಲು ಸಿದ್ಧನಿದ್ದೇನೆ." ಎಂದು ಅವರು ನಿರ್ಧರಿಸಿದರು. 

ಆದ್ದರಿಂದ, ಬೆಳೆಗಳನ್ನು ಮಿಡತೆಗಳಂತಹ ಪರಭಕ್ಷಕನಿಂದ ಉಳಿಸಲು, ಅವುಗಳನ್ನು ಕೊಲ್ಲುವುದು ಅಗತ್ಯವಿದ್ದರೆ - ಕೋಪದಿಂದ ಅಥವಾ ಭಯದಿಂದ ಅಥವಾ ಬೆಳೆಗಳನ್ನು ಮಾರಾಟ ಮಾಡಿ ಸಾಕಷ್ಟು ಹಣವನ್ನು ಗಳಿಸುವ ಬಯಕೆಯಿಂದಲ್ಲ, ಬದಲಿಗೆ ಸಹಾನುಭೂತಿಯಿಂದ, ಆಗ ಅದರ ಪರಿಣಾಮವು, ಕೋಪದಿಂದ ಈ ಕೃತ್ಯವನ್ನು ಎಸಗುವುದಕ್ಕೆ ಹೋಲಿಸಿದರೆ, ಬಹಳಾ ಕಡಿಮೆಯಾಗಿರುತ್ತದೆ. ಆದರೆ, ಬುದ್ಧನಂತೆ ಇದೊಂದು ನಕಾರಾತ್ಮಕ ಕೃತ್ಯವೆಂದು ಒಪ್ಪಿಕೊಂಡು, ಅದರಿಂದಾಗುವ ಯಾವುದೇ ಪರಿಣಾಮಗಳನ್ನು ಸ್ವೀಕರಿಸಲು ಸದ್ಧರಾಗಿರುವುದು ಮುಖ್ಯವಾಗಿರುತ್ತದೆ. 

ಕಳ್ಳತನ

ಹೆಚ್ಚಿನ ಜನರಿಗೆ ತಮ್ಮ ಆಸ್ತಿಗಿಂತ ತಮ್ಮ ಜೀವನದ ಮೇಲೆ ಹೆಚ್ಚು ಮೋಹವಿರುತ್ತದೆ, ಆದರೂ ನೀವು ಬೇರೊಬ್ಬರ ಸ್ವಾಧೀನದಲ್ಲಿರುವುದನ್ನು ತೆಗೆದುಕೊಂಡರೆ, ಅದು ಎರಡೂ ದಿಕ್ಕಿನಲ್ಲಿ ಬಹಳಷ್ಟು ಅಸಂತೋಷವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಕಳ್ಳನಿಗೆ "ನಾನು ಸಿಕ್ಕಿಬೀಳುತ್ತೇನೆಯೇ?" ಎಂಬ ಯೋಚನೆ ಕೊರೆಯುತ್ತಲೇ ಇರುತ್ತದೆ. 

ನಾವು ಸಮಸ್ಯೆಗಳಿಂದ ದೂರವಿರುವುದನ್ನು ನಮಗಾಗಿ ಬಯಸುತ್ತೇವೆ. ನಿಸ್ಸಂದೇಹವಾಗಿ, ನೀವು ಮೀನು ಅಥವಾ ಕೀಟಗಳನ್ನು ಕೊಂದರೆ, ಅದರಿಂದ ಅವುಗಳಿಗೆ ಸಮಸ್ಯೆಯಾಗುತ್ತದೆ. ಆದರೆ ಅದರಿಂದ ನಮಗೂ ಸಮಸ್ಯೆಯುಂಟಾಗುತ್ತದೆ, ಏಕೆಂದರೆ ನಾವು ಕೀಟಗಳಿಂದ ತುಂಬಾ ತೊಂದರೆಗೀಡಾಗಿದ್ದರೆ, ಸೊಳ್ಳೆಗಳು ನಮ್ಮನ್ನು ಆಕ್ರಮಿಸುತ್ತವೆ ಎಂದು ನಾವು ಯಾವಾಗಲೂ ಚಿಂತಿಸುತ್ತಿರುತ್ತೇವೆ, ಮಧ್ಯರಾತ್ರಿಯಲ್ಲಿ ಎದ್ದು ಅವುಗಳನ್ನು ಕೊಲ್ಲಲು ಯತ್ನಿಸುತ್ತೇವೆ. ಇದು ಅಶಾಂತಿಯ ಮನಸ್ಥಿತಿಯಾಗಿರುತ್ತದೆ. ಈ ವಿಷಯಗಳನ್ನು ನಿಭಾಯಿಸಲು ನಾವು ಶಾಂತಿಯುತ ವಿಧಾನಗಳನ್ನು ಬಳಸಿದರೆ, ನಮ್ಮ ಮನಸ್ಸು ಹೆಚ್ಚು ನಿರಾಳವಾಗಿರುತ್ತದೆ. 

ಕಳ್ಳತನಕ್ಕೂ ಇದು ಅನ್ವಯಿಸುತ್ತದೆ, ನೀವು ಸದ್ದಿಲ್ಲದೆ ಓಡಾಡಬೇಕು ಮತ್ತು ನೀವು ಸಿಕ್ಕಿಬೀಳುತ್ತೀರಿ ಎಂದು ನೀವು ಚಿಂತಿಸುತ್ತೀರಿ. ಇದು ತುಂಬಾ ಬಲವಾದ ಬಯಕೆಯನ್ನು ಆಧರಿಸಿದ್ದು, ನೀವು ಅದನ್ನು ಪಡೆಯಲು ಬೇಕಾದ ಕೆಲಸವನ್ನು ಮಾಡುವ ತಾಳ್ಮೆ ಹೊಂದಿರುವುದಿಲ್ಲ, ಆದ್ದರಿಂದ ನೀವು ಅದನ್ನು ಬೇರೆಯವರಿಂದ ಕದಿಯುತ್ತೀರಿ. 

ವಿರೋಧವಿರುವ ಪ್ರೇರಣೆಗಳೊಂದಿಗೆ ಕೊಲ್ಲುವುದು, ಕದಿಯುವ ಉದಾಹರಣೆಗಳೂ ಇವೆ: 

  • ನೀವು ಬಾಂಧವ್ಯ ಮತ್ತು ದುರಾಶೆಯಿಂದ ಕೊಲ್ಲಬಹುದು, ಬಹುಶಃ ನಿಮಗೆ ನಿಜವಾಗಿಯೂ ಪ್ರಾಣಿ ಅಥವಾ ಮೀನನ್ನು ತಿನ್ನುವ ಬಯಕೆಯಿರುವುದು. ಯಾವುದೇ ಬೇರೆ ರೀತಿಯ ಆಹಾರವಿಲ್ಲದಿದ್ದರೆ ಅದು ಒಂದು ವಿಷಯ, ಆದರೆ ಪರ್ಯಾಯಗಳಿದ್ದರೂ ಕೊಂದರೆ, ಅದು ಇನ್ನೊಂದು ವಿಷಯ. 
  • ನೀವು ಕೋಪದಿಂದ ಕದಿಯಬಹುದು, ನೀವು ಒಬ್ಬರಿಗೆ ನೋವುಂಟುಮಾಡಲು ಬಯಸುತ್ತೀರಿ, ಆದ್ದರಿಂದ ಅವರಿಗೆ ಸೇರಿದ ಯಾವುದನ್ನಾದರೂ ತೆಗೆದುಕೊಳ್ಳುತ್ತೀರಿ.  

ಅನುಚಿತವಾದ ಲೈಂಗಿಕ ನಡವಳಿಕೆ 

ಇದು ಕಷ್ಟಕರವಾದ ವಿಷಯವಾಗಿದೆ ಏಕೆಂದರೆ ನಮ್ಮಲ್ಲಿ ಹೆಚ್ಚಿನವರಿಗೆ, ನಮ್ಮ ಲೈಂಗಿಕ ನಡವಳಿಕೆಯ ಹಿಂದಿನ ಬಲವಾದ ಪ್ರೇರಣೆಯು ಹಾತೊರೆಯುವ ಬಯಕೆಯಾಗಿದೆ. ಬೌದ್ಧಧರ್ಮವು ಏನನ್ನು ದೂರವಿಡಬೇಕು ಎಂಬುದರ ಮೂಲಭೂತ ಮಾರ್ಗಸೂಚಿಗಳನ್ನು ವಿವರಿಸುತ್ತದೆ, ಅವುಗಳೆಂದರೆ: 

  • ಇತರರನ್ನು ಶೋಷಿಸುವುದು, ಇದು ಅತ್ಯಾಚಾರ ಮತ್ತು ನಮ್ಮ ಲೈಂಗಿಕ ನಡವಳಿಕೆಯಿಂದ ಇತರರಿಗೆ ಹಾನಿಯನ್ನುಂಟುಮಾಡುವುದನ್ನು ಒಳಗೊಂಡಿರುತ್ತದೆ 
  • ನಮ್ಮ ಸಂಗಾತಿಯು ಸೇರಿದಂತೆ, ಜನರನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಡ ಹೇರುವುದು 
  • ಬೇರೊಬ್ಬರ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ಅಥವಾ ನಮಗೆ ಸಂಗಾತಿಯಿದ್ದರೆ, ಬೇರೊಬ್ಬರೊಂದಿಗೆ ಲೈಂಗಿಕ ಕ್ರಿಯೆಗಳಲ್ಲಿ ತೊಡಗುವುದು. ನಾವು ಎಷ್ಟೇ ಎಚ್ಚರಿಕೆಯಿಂದಿದ್ದರೂ, ಅದು ಯಾವಾಗಲೂ ತೊಂದರೆಗೆ ಕಾರಣವಾಗುತ್ತದೆ, ಅಲ್ಲವೇ? 

ಅನುಚಿತ ಲೈಂಗಿಕ ನಡವಳಿಕೆಗಳ ಇತರ ಹಲವು ಅಂಶಗಳಿವೆ, ಆದರೆ ಅವುಗಳ ಹಿಂದಿರುವ ಯೋಚನೆಯೆಂದರೆ ನಾವು ಪ್ರಾಣಿಗಳಂತೆ ವರ್ತಿಸದಿರುವುದು. ಸುತ್ತಮುತ್ತ ಯಾರೇ ಇರಲಿ, ಇರದಿರಲಿ, ಒಂದು ಪ್ರಾಣಿಯು ತನಗೆ ಬೇಕಾದಂತೆ ಇನ್ನೊಂದು ಪ್ರಾಣಿಯ ಮೇಲೆ ಮುಗಿಬೀಳುತ್ತದೆ. ಅವುಗಳು ತಮ್ಮ ಆಸೆ ಮತ್ತು ಕಾಮದ ಸಂಪೂರ್ಣವಾದ ನಿಯಂತ್ರಣದಲ್ಲಿರುತ್ತವೆ - ಇದನ್ನೇ ನಾವು ತಪ್ಪಿಸಲು ಬಯಸುತ್ತೇವೆ. 

ಹಾಗಿದ್ದಲ್ಲಿ ನಾವು ನಮ್ಮ ಲೈಂಗಿಕ ನಡವಳಿಕೆಗಳಿಗೆ ಒಂದು ಮಿತಿಯಿಟ್ಟು, ಆ ಮಿತಿಯನ್ನು ಮೀರದೇ ಇರುವ ಹಾಗೆ ನಿರ್ಧರಿಸಬೇಕು, ಅದನ್ನು ದಾಟಬಾರದು. ನಾವು ನಿಗದಿಪಡಿಸಿದ ಮಿತಿಯು ಆವರ್ತನ, ಲೈಂಗಿಕ ಕ್ರಿಯೆಗಳ ಪ್ರಕಾರಗಳು, ಲೈಂಗಿಕ ಸ್ಥಾನಗಳು ಮುಂತಾದವುಗಳ ಬಗ್ಗೆ ಆಗಿರಬಹುದು. ಇದರ ಗುರಿಯು ನಮ್ಮ ಲೈಂಗಿಕ ಜೀವನವನ್ನು ಹೇಗೆ ನಡೆಸುತ್ತೇವೆ ಎಂಬುದಕ್ಕೆ ಕೆಲವು ಮಾರ್ಗಸೂಚಿಗಳನ್ನು ಸ್ಥಾಪಿಸುವುದಾಗಿರುತ್ತದೆ, ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ, ಮತ್ತು ಯಾರೊಂದಿಗಾದರೂ, ಪ್ರಾಣಿಯಂತೆ ನಡೆದುಕೊಳ್ಳಬಾರದು. ನೈತಿಕ ಸ್ವಯಂ-ಶಿಸ್ತಿನ ವಿಷಯದಲ್ಲಿ ಇದು ಬಹಳ ಮುಖ್ಯವಾಗಿದೆ. ಸ್ವಯಂ ಶಿಸ್ತು ಎಂದರೆ ನಾವು ನಿಗದಿಪಡಿಸಿದ ಮಿತಿಯನ್ನು ಮೀರಿ ಹೋಗುವುದನ್ನು ತಡೆಯುವುದು, ಏಕೆಂದರೆ ಅದನ್ನು ಮೀರುವುದು ಕೇವಲ ಕಾಮವನ್ನು ಆಧರಿಸಿರುತ್ತದೆ ಮತ್ತು ಕಾಮವು ಅಸಂಖ್ಯಾತ ಸಮಸ್ಯೆಗಳ ಕಾರಣವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. 

ಅಮಲು ಪದಾರ್ಥಗಳನ್ನು ಸೇವಿಸುವುದು 

ಅಮಲು ಪದಾರ್ಥಗಳ ಸೇವನೆಯನ್ನು ವಿನಾಶಕಾರಿ ಕೃತ್ಯಗಳಲ್ಲಿ ಸೇರಿಸಲಾಗಿಲ್ಲ, ಆದರೆ ನಮ್ಮ ಅಭಿವೃದ್ದಿಗಾಗಿ ಅವುಗಳನ್ನು ತ್ಯಜಿಸುವುದು ಬಹಳ ಮುಖ್ಯವಾಗಿದೆ. 

ನಾವು ಏಕಾಗ್ರತೆಯನ್ನು ಬೆಳೆಸಲು ಬಯಸುತ್ತೇವೆ, ಶಿಸ್ತನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ. ಆದರೆ ನಾವು ಕುಡಿದಾಗ, ನಾವು ಎಲ್ಲಾ ಶಿಸ್ತನ್ನು ಕಳೆದುಕೊಳ್ಳುತ್ತೇವೆ, ಅಲ್ಲವೇ? ನಾವು ಸೈಕೆಡೆಲಿಕ್ ಡ್ರಗ್ಸ್ ಅಥವಾ ಗಾಂಜಾವನ್ನು ಸೇವಿಸುತ್ತೇವೆ ಮತ್ತು ಎಲ್ಲಾ ಏಕಾಗ್ರತೆಯನ್ನು ಕಳೆದುಕೊಳ್ಳುತ್ತೇವೆ. ನಮ್ಮ ಮನಸ್ಸು, ಮಾನಸಿಕ ಅಲೆದಾಟ ಮತ್ತು ಕಲ್ಪನೆಗಳಿಂದ ತುಂಬುತ್ತದೆ. ನಾವು ವಿವಿಧ ಡ್ರಗ್ಸ್ ಅಥವಾ ಮದ್ಯಪಾನದ ಪರಿಣಾಮಗಳನ್ನು, ನಮ್ಮ ವೈಯಕ್ತಿಕ ಬೆಳವಣಿಗೆಯಲ್ಲಿ ನಾವು ಸಾಧಿಸಲು ಬಯಸುವ ವಿಷಯಗಳಿಗೆ ಹೋಲಿಸಿದರೆ, ಅಮಲೇರುವುದು ಅಥವಾ ಕುಡಿಯುವುದು ಅದಕ್ಕೆ ವಿರೋಧಾಭಾಸವಾಗಿದೆ ಎಂದು ನಾವು ಕಂಡುಕೊಳ್ಳುತ್ತೇವೆ. ಇದು ಅಡೆತಡೆಗಳನ್ನು ಸೃಷ್ಟಿಸಿದ್ದು, ಅವು ಕೇವಲ ಕುಡಿದಿರುವ ಅವಧಿಗೆ ಮಾತ್ರವಲ್ಲ, ನಂತರವೂ ಉಳಿಯುತ್ತವೆ - ಹ್ಯಾಂಗೊವರ್‌ಗಳಂತೆ! ಆದ್ದರಿಂದ ಇವುಗಳ ಬಳಕೆಗಾಗಿ ಒಂದು ರೀತಿಯ ಮಿತಿಯಿಡುವುದು ಖಂಡಿತವಾಗಿಯೂ ಒಳ್ಳೆಯದು, ಅವುಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಇನ್ನೂ ಒಳ್ಳೆಯದು.  

ಕೃತ್ಯದ ಸೂಕ್ತವಾದ ಮಿತಿಗಳು (ಸರಿಯಾದ ನಡವಳಿಕೆ) 

ಸ್ವಯಂ-ಶಿಸ್ತಿನ ಒಂದು ಅಂಶವೆಂದರೆ ವಿನಾಶಕಾರಿ ನಡವಳಿಕೆಯಿಂದ ದೂರವಿರುವುದು. ಇನ್ನೊಂದು ಅಂಶವು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಿದೆ, ಇದನ್ನು "ಸರಿಯಾದ ನಡವಳಿಕೆ" ಎಂದು ಕರೆಯಲಾಗುತ್ತದೆ. 

ಹೀಗಾಗಿ, ಇತರ ಜೀವವನ್ನು ತೆಗೆದುಕೊಳ್ಳುವ ಬದಲು, ನೀವು ಸಕ್ರಿಯವಾಗಿ, ಜೀವವನ್ನು ಸಂರಕ್ಷಿಸಲು ಸಹಾಯ ಮಾಡಬೇಕು. ಇದರ ವ್ಯಾಪಕವಾದ ಬಳಕೆಯಲ್ಲಿ, ನೀವು ಪರಿಸರವನ್ನು ನಾಶಪಡಿಸುವುದಿಲ್ಲ, ಬದಲಿಗೆ ಪ್ರಾಣಿಗಳು ಮತ್ತು ಮೀನುಗಳು ಮುಕ್ತವಾಗಿ ಬದುಕುವಂತೆ ಅದನ್ನು ಸಂರಕ್ಷಿಸುತ್ತೀರಿ. ನೀವು ಹಂದಿಗಳನ್ನು ಸಾಕಿದ್ದರೆ, ಅವುಗಳಿಗೆ ಮೇವು ಹಾಕುತ್ತೀರಿ, ಅವು ದಪ್ಪಗಾದ ನಂತರ ನೀವು ಅವುಗಳನ್ನು ತಿನ್ನಬಹುದೆಂದಲ್ಲ, ಬದಲಿಗೆ ಅವು ಅಭಿವೃದ್ಧಿಗೊಳ್ಳಲಿ ಎಂದು – ಇದೇ ಜೀವನದ ಸಂರಕ್ಷಣೆ. ನಿಮ್ಮ ನಾಯಿಗೆ ಆಹಾರ ನೀಡುವುದು ಕೂಡ ಜೀವನವನ್ನು ಸಂರಕ್ಷಿಸಲು ಸಹಾಯ ಮಾಡುವ ಮಾರ್ಗವಾಗಿದೆ! ಅನಾರೋಗ್ಯದಿಂದ ಬಳಲುವ ಜನರನ್ನು ನೋಡಿಕೊಳ್ಳುವುದು ಅಥವಾ ಗಾಯಗೊಂಡವರಿಗೆ ಸಹಾಯ ಮಾಡುವಂತಹ ವಿಷಯಗಳನ್ನೂ ಸಹ ಇದು ಒಳಗೊಂಡಿರುತ್ತದೆ. 

ನಿಮ್ಮ ಕೋಣೆಯಲ್ಲಿ ಝೇಂಕರಿಸುವ ನೊಣ ಅಥವಾ ಜೇನುನೊಣದ ಬಗ್ಗೆ ಯೋಚಿಸಿ. ಅದಕ್ಕೆ ನಿಜವಾಗಿಯೂ ಅಲ್ಲಿರಲು ಇಷ್ಟವಿರುವುದಿಲ್ಲ. ಅದು ಹೊರಹೋಗಲು ಬಯಸುತ್ತದೆ, ಆದರೆ ಅದಕ್ಕೆ ಹೇಗೆ ಎಂದು ತಿಳಿದಿರುವುದಿಲ್ಲ, ಆದ್ದರಿಂದ ನಿಮ್ಮ ಕೋಣೆಗೆ ಹಾರಿಬರುವ ಒಂದು ಚಿಕ್ಕ ತಪ್ಪಿಗಾಗಿ ನೀವು ಅದನ್ನು ಕೊಂದರೆ, ಅದು ಒಳ್ಳೆಯದಲ್ಲ, ಅಲ್ಲವೇ? ನೀವು ಕಿಟಕಿಯನ್ನು ತೆರೆದು, "ಶೂ" ಅಥವಾ ಇನ್ನೇನಾದರೂ ಹೇಳುವ ಮೂಲಕ ಅದಕ್ಕೆ ಹೊರಹೋಗಲು ಸಹಾಯ ಮಾಡಬಹುದು - ಅದು ಜೀವವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಆ ಜೇನುನೊಣವು ಬದುಕಲು ಬಯಸುತ್ತದೆ! ಒಂದು ಹಕ್ಕಿಯು ತಪ್ಪಾಗಿ ನಿಮ್ಮ ಕೋಣೆಯೊಳಗೆ ಹಾರಿಬಂದರೆ, ನೀವು ಅದನ್ನು ಬಂದೂಕಿನಿಂದ ಹೊಡೆಯುವುದಿಲ್ಲ ಅಲ್ಲವೇ? ಆದರೆ ಜೇನುನೊಣ ಮತ್ತು ಹಕ್ಕಿಯ ನಡುವಿನ ವ್ಯತ್ಯಾಸವು ಕೇವಲ ಗಾತ್ರ, ನೋಟ ಮತ್ತು ಅವು ಮಾಡುವ ಶಬ್ದವಾಗಿರುತ್ತದೆ. ನಿಮ್ಮ ಕೋಣೆಗೆ ನೊಣಗಳು ಬರುವುದು ನಿಮಗೆ ಇಷ್ಟವಿಲ್ಲದಿದ್ದರೆ - ಕಿಟಕಿಯನ್ನು ತೆರೆಯಬೇಡಿ ಅಥವಾ ಪರದೆಗಳನ್ನು ಹಾಕಿಕೊಳ್ಳಿ! 

ಕಳ್ಳತನಕ್ಕೆ ವಿರುದ್ಧವಾಗಿ, ಇತರ ಜನರ ಆಸ್ತಿಯನ್ನು ರಕ್ಷಿಸುವುದು ಸರಿಯಾದ ಕ್ರಮವಾಗಿರುತ್ತದೆ. ಯಾರಾದರೂ ನಿಮಗೆ ಏನಾದರೂ ಸಾಲ ನೀಡಿದರೆ, ಅದಕ್ಕೆ ಹಾನಿಯುಂಟಾಗದಂತೆ ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ. ಇತರ ಜನರು ಉತ್ತಮ ವಸ್ತುಗಳನ್ನು ಪಡೆಯಲು ನೀವು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೀರಿ. 

ಅನುಚಿತ ಲೈಂಗಿಕ ನಡವಳಿಕೆಯ ಬದಲಿಗೆ - ಇದು ಇತರ ಜನರೊಂದಿಗಿನ ಲೈಂಗಿಕತೆ ಮಾತ್ರವಲ್ಲದೆ ನಿಮ್ಮೊಂದಿಗಿನ ಲೈಂಗಿಕತೆಯನ್ನೂ ಒಳಗೊಂಡಿರುತ್ತದೆ - ಲೈಂಗಿಕವಾಗಿ ನಾವು ಪ್ರೀತಿಯಿಂದ, ಸೌಮ್ಯವಾಗಿರಬೇಕು, ಕಾಮೋದ್ರೇಕದಲ್ಲಿರುವ ನಾಯಿಯಂತೆ ಅಲ್ಲ. 

ಸರಿ ಮತ್ತು ತಪ್ಪು ನಡವಳಿಕೆಗಳ ಇತರ ಉದಾಹರಣೆಗಳು 

ನಮ್ಮ ಚರ್ಚೆಯನ್ನು ವಿಸ್ತರಿಸಿದರೆ, ಈ ಮೇಲಿನ ಮೂರು ರೀತಿಯ ನಡವಳಿಕೆಗಳಲ್ಲಿ ಇನ್ನೂ ಹಲವು ಅಂಶಗಳಿವೆ ಎಂದು ನಾವು ನೋಡಬಹುದು. 

ಉದಾಹರಣೆಗೆ, ಕೊಲ್ಲದಿರುವಿಕೆಯನ್ನು ವಿಸ್ತರಿಸಿದರೆ, ಇತರರನ್ನು ದೈಹಿಕವಾಗಿ ನಿಂದಿಸುವುದನ್ನು ನಿಲ್ಲಿಸುವುದಾಗಿದೆ. ಇದು ಜನರನ್ನು ಹೊಡೆಯುವುದು ಮಾತ್ರವಲ್ಲದೆ, ಅವರನ್ನು ಹೆಚ್ಚು ದುಡಿಸುವುದು ಅಥವಾ ದೈಹಿಕವಾಗಿ ಯಾವುದೇ ರೀತಿಯ ಹಾನಿಯುಂಟಾಗುವ ಕೆಲಸಗಳನ್ನು ಮಾಡುವಂತೆ ಬಲಪಡಿಸದಿರುವುದಾಗಿರುತ್ತದೆ. ಇದನ್ನು ನಮಗೂ ಅನ್ವಯಿಸಿಕೊಳ್ಳಬಹುದು - ಅತಿಯಾಗಿ ಕೆಲಸದ ಮೇಲೆ ಒತ್ತು ನೀಡುವ ಮೂಲಕ ನಮ್ಮನ್ನು ನಾವು ದುರುಪಚರಿಸಬಾರದು, ಆಹಾರವನ್ನು ಸರಿಯಾಗಿ ಸೇವಿಸದೇ ಇರಬಾರದು, ಅಥವಾ ಚೆನ್ನಾಗಿ ನಿದ್ರೆ ಮಾಡದೇ ಇರಬಾರದು. ಸಾಮಾನ್ಯವಾಗಿ ನಮ್ಮ ನಡವಳಿಕೆಯನ್ನು ಇತರರ ವಿಷಯದಲ್ಲಿ ಯೋಚಿಸುತ್ತೇವೆ, ಆದರೆ ಅವನ್ನು ನಮಗೂ ಅನ್ವಯಿಸುವುದು ಮುಖ್ಯವಾಗಿದೆ.

ಕಳ್ಳತನದ ಬಗ್ಗೆ ಮಾತನಾಡುವುದಾದರೆ, ಇದು ಕೇವಲ ಇತರರ ಆಸ್ತಿಯನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುವುದಿಲ್ಲ, ಬದಲಿಗೆ ಜನರ ವಸ್ತುಗಳನ್ನು ಅವರನ್ನು ಕೇಳದೇ ಬಳಸುವುದನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಸುಮ್ಮನೆ ಯಾರದೋ ಫೋನ್ ತೆಗೆದುಕೊಂಡು ದುಬಾರಿಯಾಗುವಂತಹ ಕರೆ ಮಾಡುವುದು, ಅಥವಾ ಅವರ ಅನುಮತಿಯಿಲ್ಲದೆ ಅವರ ಫ್ರಿಜ್‌ನಲ್ಲಿರುವುದನ್ನು ಸೇವಿಸುವುದು. ಟಿಕೆಟ್ಗಾಗಿ ದುಡ್ಡು ನೀಡದೆ ಚಿತ್ರಮಂದಿರಕ್ಕೆ ನುಸುಳುವುದು ಅಥವಾ – ಇದನ್ನು ಕೇಳಲು ಜನರಿಗೆ ಇಷ್ಟವಾಗುವುದಿಲ್ಲ - ನಿಮ್ಮ ತೆರಿಗೆಗಳನ್ನು ಪಾವತಿಸದೇ ಇರುವುದು! ಇದು ಕಳ್ಳತನವಾಗಿರುತ್ತದೆ. ನಾವು ಹೀಗೆ ವಾದಿಸಬಹುದು, “ನಾನು ತೆರಿಗೆಯನ್ನು ಏಕೆ ಪಾವತಿಸಲು ಬಯಸುವುದಿಲ್ಲವೆಂದರೆ ಅದು ಯುದ್ಧಗಳ ಧನಸಹಾಯಕ್ಕೆ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕಾಗಿ ಬಳಸಲಾಗುತ್ತದೆ." ಆದರೆ ವಾಸ್ತವದಲ್ಲಿ, ಅದು ರಸ್ತೆಗಳನ್ನು ನಿರ್ಮಿಸಲು ಮತ್ತು ಆಸ್ಪತ್ರೆಗಳು, ಶಾಲೆಗಳು ಇತ್ಯಾದಿಗಳನ್ನು ನಿರ್ಮಿಸಲು ಸಹ ಬಳಸಲಾಗುತ್ತದೆ. ನಿಮಗೆ ಅವು ಬೇಕಾದರೆ, ನೀವು ಸ್ವಲ್ಪ ತೆರಿಗೆಯನ್ನು ಪಾವತಿಸಲೇಬೇಕಾಗುತ್ತದೆ.

ಪರವಾನಗಿ ಇಲ್ಲದ ಅಥವಾ ಪೈರೇಟೆಡ್ ಸಾಫ್ಟ್‌ವೇರ್ ಅಥವಾ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿದರೆ ಅದು ಕಳ್ಳತನವೇ? "ಹಣ ಪಾವತಿಸದೆ ಇದನ್ನು ಡೌನ್‌ಲೋಡ್ ಮಾಡಬೇಡಿ" ಎಂದು ಸ್ಪಷ್ಟವಾಗಿ ತಿಳಿಸಲಾಗಿದ್ದರೆ, ಹೌದು ಅದು ಕಳ್ಳತನ ಎಂದು ನಾನು ಭಾವಿಸುತ್ತೇನೆ. ಅದು ಕಳ್ಳತನವಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. ಆದರೆ ಇಲ್ಲಿನ ತತ್ವವು, ಮಿತಿಯನ್ನು ರಚಿಸುವುದಾಗಿದೆ. ಪರಿಣಾಮಗಳ ಬಗ್ಗೆ ಯೋಚಿಸದೆ ನಿಮಗೆ ಬೇಕಾದುದನ್ನು ಮಾಡುವುದರಿಂದ ಹಿಡಿದು, ಏನನ್ನೂ ಮಾಡದೆ ಇರುವ ತನಕದ ಅಲೆಸಾಲೊಂದಿದೆ. ಕಳ್ಳತನಕ್ಕೆ ಸಂಬಂಧಿಸಿದಂತೆ, ನಾವು ಹೀಗೆ ಹೇಳಬಹುದು, “ನಾನು ಬ್ಯಾಂಕ್ ಅನ್ನು ದೋಚಲು ಅಥವಾ ಅಂಗಡಿಯಿಂದ ಕದಿಯಲು ಹೋಗುತ್ತಿಲ್ಲ, ಆದರೆ ಪಾವತಿಸದೇ ಡೌನ್‌ಲೋಡ್ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ.” ಕನಿಷ್ಠಪಕ್ಷ ಇದು ಒಂದು ರೀತಿಯ ಮಿತಿಯನ್ನು ರಚಿಸುತ್ತದೆ, ಆದರೆ ಪಾವತಿಸದೆ ಡೌನ್‌ಲೋಡ್ ಮಾಡುವುದು ಕಳ್ಳತನವೇ ಎಂದು ಒಪ್ಪಿಕೊಳ್ಳುವುದು ಬಹಳಾ ಮುಖ್ಯವಾಗಿದೆ. ನಿಮಗೆ ಪಾವತಿಸಲು ಹಣವಿರುವಾಗ ಮತ್ತು ಇಲ್ಲದಿರುವಾಗ ವಸ್ತುಗಳನ್ನು ಡೌನ್‌ಲೋಡ್ ಮಾಡುವುದರ ನಡುವೆ ದೊಡ್ಡ ವ್ಯತ್ಯಾಸವಿರುತ್ತದೆ. ನಿಮಗೆ ಪಾವತಿಸಲು ಸಾಧ್ಯವಾದರೂ, ಅಗ್ಗವಾಗಿರಲು ಅಥವಾ ಅಸಭ್ಯವಾಗಿರಲು ನೀವು ಹಾಗೆ ಮಾಡದೇ ಇರುವುದು ಹೆಚ್ಚು ಗಂಭೀರವಾದ ಸ್ಥಿತಿಯಾಗಿರುತ್ತದೆ. ಇದರಿಂದ ನೀವು ದೂರವಿರಬೇಕು. 

ಕಳ್ಳತನದ ಬಗ್ಗೆ ಮಾತನಾಡುವಾಗ ಒಮ್ಮೆ ನಾವು ನಮ್ಮತ್ತ ನೋಡಬೇಕು - ನಾವು ಕ್ಷುಲ್ಲಕ ವಿಷಯಗಳಿಗಾಗಿ ಹಣವನ್ನು ವ್ಯರ್ಥ ಮಾಡುವುದನ್ನು ನಿಲ್ಲಿಸಬೇಕು. ಉದಾಹರಣೆಗೆ ಜೂಜಾಟವು ನಮ್ಮ ಸ್ವಂತ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳುವುದಾಗಿರುತ್ತದೆ. ನಾವು ನಿಜವಾಗಿಯೂ ಖರೀದಿಸಲು ಸಮರ್ಥರಾಗಿರುವಾಗ, ನಾವು ನಮ್ಮ ವಿಷಯದಲ್ಲಿ ಜಿಪುಣರಾಗಿರಬಾರದು. ನಿಮ್ಮ ಬಳಿ ಆರೋಗ್ಯಕರ ಆಹಾರವನ್ನು ಸೇವಿಸಲು ಮತ್ತು ಉತ್ತಮ ಆಹಾರವಸ್ತುಗಳನ್ನು ಖರೀದಿಸಲು ಹಣವಿದೆ, ಆದರೂ ನೀವು ಜಿಪುಣರಾಗಿರುವ ಕಾರಣ ಕೇವಲ ಅಗ್ಗದ, ಕೆಟ್ಟ ಗುಣಮಟ್ಟದ ಆಹಾರವನ್ನು ಖರೀದಿಸುತ್ತೀರಿ. ಇದು ನಿಮ್ಮಿಂದ ನೀವೇ ಕದಿಯುವಂತಿದೆ! 

ಅನುಚಿತವಾದ ಲೈಂಗಿಕ ನಡವಳಿಕೆಗಳ ಬಗ್ಗೆ ಮಾತನಾಡುವಾಗ, ಅದು ಕೇವಲ ಇತರರ ಮೇಲೆ ಅಥವಾ ಅವರ ಸಂಗಾತಿಗಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದನ್ನು ನಿಲ್ಲಿಸುವುದಲ್ಲದೆ, ನಮ್ಮ ಸ್ವಂತ ದೈಹಿಕ ಅಥವಾ ಭಾವನಾತ್ಮಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಲೈಂಗಿಕ ಕ್ರಿಯೆಗಳಲ್ಲಿ ತೊಡಗುವುದನ್ನು ನಿಲ್ಲಿಸುವುದಾಗಿದೆ. ಉದಾಹರಣೆಗೆ, ನೀವು ಬಹಳಾ ಆಕರ್ಷಿತರಾಗಿರುವ ವ್ಯಕ್ತಿಯೊಬ್ಬರನ್ನು ಭೇಟಿಯಾಗುತ್ತೀರಿ, ಮತ್ತು ಒಂದು ಕಡೆ ನೀವು ಅವರೊಂದಿಗೆ ಸಂಭೋಗಿಸಲು ಬಯಸುತ್ತೀರಿ. ಆದರೆ ಅವರ ಬಳಿ ಎಲ್ಲಾ ರೀತಿಯ ಭಾವನಾತ್ಮಕ ಸಮಸ್ಯೆಗಳು ಮತ್ತು ಇತರ ತೊಂದರೆಗಳಿವೆ ಮತ್ತು ನೀವು ಅವರೊಂದಿಗೆ ಬೆರೆತುಕೊಂಡರೆ, ಮುಂದೆ ನಿಮಗೆ ತೊಂದರೆ ಉಂಟಾಗುತ್ತದೆ ಎಂದು ನೀವು ಅರಿತುಕೊಳ್ಳುತ್ತೀರಿ. ಆದ್ದರಿಂದ ನಿಮ್ಮ ವೈಯಕ್ತಿಕ ಆರೋಗ್ಯಕ್ಕಾಗಿ, ನೀವು ಅವರೊಂದಿಗೆ ಬೆರೆಯುವುದಿಲ್ಲ. ಒಬ್ಬರು ಸುಂದರವಾಗಿದ್ದಾರೆ ಎಂಬ ಕಾರಣಕ್ಕಾಗಿ ನಾವು ನಮ್ಮ ಕಾಮದಿಂದ ಪ್ರೇರಿತರಾಗಬಾರದು! 

ನಾವು ನಿಗದಿಪಡಿಸಿದ ಮಿತಿಗಳನ್ನು ಮೀರಿದಾಗ ಏನು ಮಾಡಬೇಕು 

ಅನಿವಾರ್ಯವಾಗಿ, ಕಾಲಕಾಲಕ್ಕೆ, ನಾವು ನಮ್ಮ ನಡವಳಿಕೆಗೆ ನಿಗದಿಪಡಿಸಿದ ಮಿತಿಗಳನ್ನು ಮೀರುತ್ತೇವೆ, ಆದ್ದರಿಂದ ಬೌದ್ಧಧರ್ಮವು ಅಂತಹ ಸಂದರ್ಭಗಳನ್ನು ಎದುರಿಸಲು ಅವನ್ನು ವಿರೋಧಿಸುವ ಗುಂಪೊಂದನ್ನು ನೀಡುತ್ತದೆ: 

  • ನೀವು ಮಾಡಿದ್ದನ್ನು ಒಪ್ಪಿಕೊಳ್ಳಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. 
  • ನೀವು ಹಾಗೆ ಮಾಡಬಾರದಿತ್ತು ಎಂದು, ನಿಮ್ಮ ಕೃತ್ಯದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿ. ಇದು ತಪ್ಪಿತಸ್ಥ ಭಾವನೆಗಿಂತ ಭಿನ್ನವಾಗಿದೆ, ಅಲ್ಲಿ ಮೂಲತಃ ನೀವು ನಿಮ್ಮನ್ನು ಬಹಳಾ ಕೆಟ್ಟ ವ್ಯಕ್ತಿ ಎಂದು ಭಾವಿಸುತ್ತೀರಿ ಮತ್ತು ಆ ಭಾವನೆಯನ್ನು ಬಿಡುವುದಿಲ್ಲ.  
  • ಆ ಕೃತ್ಯವನ್ನು ಪುನರಾವರ್ತಿಸದಿರುವಂತೆ ಪ್ರಯತ್ನಿಸಲು ನಿರ್ಣಯಿಸಿ.  
  • ನೀವು ಮಿತಿಯನ್ನು ಮೀರದೇ ಇರುವ ನಿಮ್ಮ ಪ್ರೇರಣೆಯನ್ನು ಮತ್ತೊಮ್ಮೆ ದೃಢೀಕರಿಸಿ, ಏಕೆಂದರೆ ಅದು ಅಸಮಾಧಾನಕ್ಕೆ ಕಾರಣವಾಗುತ್ತದೆ ಮತ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ. 
  • ಎದುರಾಳಿಯನ್ನು ಅನ್ವಯಿಸಿ. ಉದಾಹರಣೆಗೆ, ನೀವು ಯಾರ ಮೇಲಾದರೂ ಕಿರುಚಾಡಿದರೆ, ನೀವು ಅವರಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಬಹುದು, ನೀವು ಕೆಟ್ಟ ಮನಸ್ಥಿತಿಯಲ್ಲಿದ್ದಿರಿ ಎಂದು ವಿವರಿಸಬಹುದು. 

ಜೀವನೋಪಾಯ 

ಇದು ನಾವು ಹೇಗೆ ಬದುಕುತ್ತೇವೆ ಎಂಬುದಕ್ಕೆ ಸಂಬಂಧಿಸಿದೆ, ಕೆಲವು ಮಾರ್ಗಗಳು ನೈತಿಕವಾಗಿರುತ್ತವೆ ಮತ್ತು ಕೆಲವಾಗಿರುವುದಿಲ್ಲ. 

ತಪ್ಪು ಜೀವನೋಪಾಯ 

ಇದು ಕೆಲವು ಹಾನಿಕಾರಕ ಉದ್ಯಮಗಳಿಂದ ಅಥವಾ ನಮಗೆ ಮತ್ತು ಇತರರಿಗೆ ಹಾನಿಯುಂಟುಮಾಡುವ ರೀತಿಯಲ್ಲಿ ಹಣ ಸಂಪಾದಿಸುವುದರಿಂದ ದೂರವಿರುವುದಾಗಿರುತ್ತದೆ. ಇವುಗಳನ್ನು ಉದಾಹರಣೆಯಾಗಿ ಪರಿಗಣಿಸಬಹುದು: 

  • ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ಅಥವಾ ಅವುಗಳೊಂದಿಗೆ ವ್ಯವಹರಿಸುವುದು 
  • ಪ್ರಾಣಿಗಳನ್ನು ಕೊಲ್ಲುವುದು, ಬೇಟೆಯಾಡುವುದು, ಮೀನುಗಾರಿಕೆ, ಮತ್ತು ಕೀಟಗಳನ್ನು ನಿರ್ನಾಮ ಮಾಡುವುದು 
  • ಮದ್ಯ ಅಥವಾ ಮಾದಕ ದ್ರವ್ಯಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಅಥವಾ ಹಂಚುವುದು 
  • ಜೂಜಿನ ಕ್ಯಾಸಿನೊಗಳನ್ನು ನಿರ್ವಹಿಸುವುದು 
  • ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದು ಮತ್ತು ವಿತರಿಸುವುದು. 

ಈ ರೀತಿಯ ಜೀವನೋಪಾಯವು ಇತರರಿಗೆ ಹಾನಿಯನ್ನುಂಟುಮಾಡುತ್ತದೆ ಅಥವಾ ಅಶ್ಲೀಲ ಚಿತ್ರಗಳಂತಹವು ಕಾಮ ಮತ್ತು ಬಯಕೆಯನ್ನು ಹೆಚ್ಚಿಸುತ್ತವೆ. ನಾವು ನಿಯಮಿತ ರೀತಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ, ಪ್ರಾಮಾಣಿಕವಾಗಿರುವುದು ಮತ್ತು ಅಪ್ರಾಮಾಣಿಕತೆಯನ್ನು ತಪ್ಪಿಸುವುದು ಮುಖ್ಯವಾಗಿರುತ್ತದೆ: 

  • ಗ್ರಾಹಕರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸುವುದು, ಅವರಿಂದ ಸಾಧ್ಯವಾದಷ್ಟು ಹಣಕೀಳಲು ಪ್ರಯತ್ನಿಸುವುದು 
  • ದುರುಪಯೋಗ, ನಿಮ್ಮ ಸ್ವಂತ ಬಳಕೆಗಾಗಿ ವ್ಯಾಪಾರದಿಂದ ಹಣವನ್ನು ತೆಗೆದುಕೊಳ್ಳುವುದು 
  • ಸುಲಿಗೆ, ಇತರರಿಂದ ಹಣ ಪಡೆಯುವ ಸಲುವಾಗಿ ಬೆದರಿಸುವಿಕೆ 
  • ಲಂಚ 
  • ಇತರರ ಶೋಷಣೆ 
  • ತಪ್ಪು ಜಾಹೀರಾತು 
  • ಹೆಚ್ಚು ಹಣ ಗಳಿಸುವ ಸಲುವಾಗಿ ಆಹಾರ ಅಥವಾ ಉತ್ಪನ್ನಗಳಿಗೆ ಕಲಬೆರಕೆ ಮಾಡುವುದು. 

ಬದುಕಲು ಎಷ್ಟೊಂದು ಅಪ್ರಾಮಾಣಿಕವಾದ ಮಾರ್ಗಗಳಿವೆ! ಈ ರೀತಿಯ ಜೀವನೋಪಾಯಗಳನ್ನು ತಪ್ಪಿಸಲು ನಾವು ನೈತಿಕ ಸ್ವಯಂ-ಶಿಸ್ತನ್ನು ಅನ್ವಯಿಸಬೇಕಾಗಿದೆ.

ಸರಿಯಾದ ಜೀವನೋಪಾಯ 

ನಮ್ಮ ಜೀವನೋಪಾಯವು ಪ್ರಾಮಾಣಿಕವಾಗಿರಬೇಕು ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾಗಿರಬೇಕು ಎಂಬ ಗುರಿ ನಮಗಿರಬೇಕು: 

  • ವೈದ್ಯಶಾಸ್ತ್ರ 
  • ಸಾಮಾಜ ಸೇವೆ 
  • ನ್ಯಾಯೋಚಿತ ವಾಣಿಜ್ಯ 
  • ಇತರರಿಗೆ ಪ್ರಯೋಜನಕಾರಿಯಾಗುವ ಉತ್ಪನ್ನಗಳು ಮತ್ತು ಸೇವೆಗಳನ್ನು ತಯಾರಿಸುವುದು ಅಥವಾ ಮಾರಾಟ ಮಾಡುವುದು. 

ಸಮಾಜದ ಆರೋಗ್ಯಕರ ಕಾರ್ಯನಿರ್ವಹಣೆಗಾಗಿ ಮತ್ತು ಇತರರ ಕಲ್ಯಾಣಕ್ಕಾಗಿ ಕೊಡುಗೆ ನೀಡುವ ಯಾವುದೇ ಜೀವನೋಪಾಯವಾದರೂ ಅದ್ಭುತವಾಗಿರುತ್ತದೆ. ಇದಲ್ಲದೆ, ನಾವು: 

  • ಇತರರನ್ನು ಮೋಸಗೊಳಿಸಬಾರದು ಅಥವಾ ಅವರಿಗೆ ದುಬಾರಿ ಬೆಲೆಯನ್ನು ವಿಧಿಸಬಾರದು
  • ನ್ಯಾಯಯುತ ಬೆಲೆಯನ್ನು ನೀಡಬೇಕು, ಇದರಿಂದ ನಾವು ಮಿತಿಯಲ್ಲಿರಬಹುದಾದ ಲಾಭವನ್ನು ಗಳಿಸಬಹುದು 
  • ನಮ್ಮ ಕೆಲಸಗಾರರನ್ನು ಶೋಷಿಸದಂತೆ ಅವರಿಗೆ ಉತ್ತಮ ವೇತನವನ್ನು ನೀಡಬೇಕು. 

ಆಗಾಗ್ಗೆ ಎದ್ದುಬರುವ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯು ಅವಶ್ಯಕತೆಯ ಬಗ್ಗೆಯಾಗಿರುತ್ತದೆ. ಒಮ್ಮೆ ನಾನು ಆಸ್ಟ್ರೇಲಿಯಾದಲ್ಲಿ, ಟಿಬೆಟಿಯನ್ ಗುರುಗಳಿಗಾಗಿ ಅನುವಾದಿಸುತ್ತಿದ್ದೆ, ಅಲ್ಲಿ ಅಪಾರ ಪ್ರಮಾಣದಲ್ಲಿ ಕುರಿಗಳಿದ್ದು, ಒಬ್ಬರು ಕೇಳಿದರು, “ನಾನು ವಾಸಿಸುವ ಪಟ್ಟಣದಲ್ಲಿ, ಕುರಿಗಳ ಸಾಕಣೆ ಮಾತ್ರ ಲಭ್ಯವಿರುತ್ತದೆ, ನಂತರ ಅವನ್ನು ಉಣ್ಣೆ ಮತ್ತು ಮಾಂಸಕ್ಕಾಗಿ ಬಳಸಲಾಗುತ್ತದೆ. ನಾನು ಏನು ಮಾಡಲಿ? ನಾನು ಬೇರೆ ನಗರಕ್ಕೆ ತೆರಳಿ ಬೇರೆ ಕೆಲಸವನ್ನು ಹುಡುಕಲು ಸಾಧ್ಯವಿಲ್ಲ.” ಟಿಬೆಟಿಯನ್ ಲಾಮಾ ಹೇಳಿದರು, "ಮುಖ್ಯವಾದ ವಿಷಯವೆಂದರೆ ನಿಮ್ಮ ಕೆಲಸದಲ್ಲಿ ನೀವು ಪ್ರಾಮಾಣಿಕವಾಗಿರುವುದು ಮತ್ತು ಇತರರಿಗೆ ಮೋಸ ಮಾಡದಿರುವುದು, ಮತ್ತು ನೀವು ಕುರಿಗಳನ್ನು ಕ್ರೂರವಾಗಿ ನಡೆಸಿಕೊಳ್ಳದೆ, ಅವುಗಳನ್ನು ಬಹಳಾ ದಯೆಯಿಂದ ನಡೆಸಿಕೊಳ್ಳುವುದು, ಅವುಗಳಿಗೆ ಚೆನ್ನಾಗಿ ಮೇವು ಹಾಕುವುದು ಮತ್ತು ಅವುಗಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿರುತ್ತದೆ." ಹೀಗಾಗಿ, ಹೆಚ್ಚಾದ ಒತ್ತು ದಯೆ ಮತ್ತು ಪ್ರಾಮಾಣಿಕವಾಗಿರುವುದಕ್ಕೆ ಇರುತ್ತದೆ. 

ಸಾರಾಂಶ 

ನಾವು ಅಷ್ಟಾಂಗ ಮಾರ್ಗದಿಂದ ಪಡೆಯುವ ಸಲಹೆಯನ್ನು, ನಮ್ಮನ್ನು ನಿರ್ಬಂಧಿಸುವ ಒಂದು ರೀತಿಯ ನಿಯಮಗಳಾಗಿ ಪರಿಗಣಿಸಬಾರದು, ಬದಲಿಗೆ ನಮಗೆ ಮತ್ತು ಇತರರಿಗೆ ಹಾನಿಯನ್ನುಂಟುಮಾಡುವ ನಕಾರಾತ್ಮಕ ಕ್ರಿಯೆಗಳಿಂದ ನಮ್ಮನ್ನು ಮುಕ್ತಗೊಳಿಸುವ ಮಿತಿಗಳಾಗಿ ಸ್ವೀಕರಿಸಬೇಕು. 

Top