ನಮ್ಮ ದೈನಂದಿನ ಜೀವನದಲ್ಲಿ ಕರ್ಮದ ಪ್ರಸ್ತುತತೆ

ಕರ್ಮವನ್ನು ಅರ್ಥಮಾಡಿಕೊಳ್ಳುವುದು 

ಇಂದು ನಾನು ನಮ್ಮ ದೈನಂದಿನ ಜೀವನದಲ್ಲಿ ಕರ್ಮದ ಪ್ರಸ್ತುತತೆಯ ಬಗ್ಗೆ ಮಾತನಾಡಲು ಬಯಸುತ್ತೇನೆ. ಮೊದಲಾಗಿ, ಕರ್ಮದ ಅರ್ಥವನ್ನು ನಾವು ಅರ್ಥಮಾಡಿಕೊಳ್ಳಬೇಕು. ಎರಡು ಸಾಮಾನ್ಯ ವಿವರಣೆಗಳಿವೆ. ಒಂದು, ಕರ್ಮವು ನಮ್ಮನ್ನು ವಿವಿಧ ರೀತಿಯ ಕ್ರಿಯೆಗಳಿಗೆ ಸೆಳೆಯುವ ಬಲವಾದ ಮಾನಸಿಕ ಪ್ರಚೋದನೆಗಳನ್ನು ಸೂಚಿಸುತ್ತದೆ, ಅದು ದೈಹಿಕವಾಗಿ ಮಾಡುವುದಾಗಿರಬಹುದು, ಮೌಖಿಕವಾಗಿ ಏನನ್ನಾದರೂ ಹೇಳುವುದಾಗಿರಬಹುದು ಅಥವಾ ಮಾನಸಿಕವಾಗಿ ಯೋಚಿಸುವುದಾಗಿರಬಹುದು. ಎರಡನೆಯ ವಿವರಣೆಯು ದೈಹಿಕ ಮತ್ತು ಮೌಖಿಕ ಕ್ರಿಯೆಗಳ ಬಗ್ಗೆ ವಿಭಿನ್ನ ಹೇಳಿಕೆಯನ್ನು ಹೊಂದಿರುತ್ತದೆ. ಅಂತಹ ಕ್ರಿಯೆಗಳಿಗೆ, ಕರ್ಮವು ನಮ್ಮ ದೈಹಿಕ ಕ್ರಿಯೆಗಳ ಪ್ರಚೋದಿತ ಆಕಾರ, ನಮ್ಮ ಮೌಖಿಕ ಕ್ರಿಯೆಗಳ ಪ್ರಚೋದಿತ ಶಬ್ದ ಮತ್ತು ಎರಡೂ ರೀತಿಯ ಕ್ರಿಯೆಗಳೊಂದಿಗೆ ಮತ್ತು ನಂತರ ನಮ್ಮ ಮಾನಸಿಕ ನಿರಂತರತೆಯೊಂದಿಗೆ ಮುಂದುವರಿಯುವ ಬಲವಾದ ಸೂಕ್ಷ್ಮ ಶಕ್ತಿಯಾಗಿರುತ್ತದೆ. ಕರ್ಮಕ್ಕಾಗಿ ಇರುವ ಟಿಬೆಟಿಯನ್ ಪದವು "ಕ್ರಿಯೆಗಳು" ಎಂಬ ಅರ್ಥವನ್ನು ನೀಡುವ ಆಡುಮಾತಿನ ಪದವಾಗಿದ್ದರೂ ಸಹ, ಈ ವಿವರಣೆಗಳಲ್ಲಿ ಕರ್ಮವು ನಿಜವಾದ ಕ್ರಿಯೆಗಳಲ್ಲ ಎಂಬುದನ್ನು ಗಮನಿಸುವುದು ಮುಖ್ಯ. 

ಈ ಪ್ರಚೋದಿತ ಕರ್ಮ ವಿಧಾನಗಳಲ್ಲಿ ಒಂದು ಕ್ರಿಯೆಯನ್ನು ಒಮ್ಮೆ ನಿರ್ವಹಿಸಿದರೆ, ಅದು ನಮ್ಮ ಮಾನಸಿಕ ನಿರಂತರತೆಗಳ ಮೇಲೆ ಒಂದು ರೀತಿಯ ಕರ್ಮದ ಪರಿಣಾಮಗಳನ್ನು ಬಿಡುತ್ತದೆ. ಇವುಗಳಲ್ಲಿ ಹೆಚ್ಚು ವ್ಯಾಪಕವಾಗಿ ಚರ್ಚಿಸಲಾದ ಸಕರಾತ್ಮಕ ಅಥವಾ ನಕರಾತ್ಮಕ ಕರ್ಮದ ಸಾಮರ್ಥ್ಯಗಳು ಮತ್ತು ಕರ್ಮದ ಪ್ರವೃತ್ತಿಗಳ ಬಗ್ಗೆ ಮಾತನಾಡೋಣ. ಈ ಎರಡರ ನಡುವೆ ಸ್ವಲ್ಪ ವ್ಯತ್ಯಾಸವಿದೆ, ಆದರೆ ನಾವು ಈಗ ಆ ಪಾರಿಭಾಷಿಕ ವಿವರಗಳ ಬಗ್ಗೆ ಮಾತನಾಡಬೇಕಾಗಿಲ್ಲ. ಈ ಕರ್ಮದ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳ ಒಂದು ವಿಷಯವೆಂದರೆ, ಸಾಕಷ್ಟು ಪರಿಸ್ಥಿತಿಗಳು ಪ್ರಸ್ತುತವಾಗಿದ್ದಾಗ ಅವುಗಳಿಂದ ಪರಿಣಾಮ ಅಥವಾ ಫಲಿತಾಂಶವನ್ನು ಉಂಟುಮಾಡಲಾಗುತ್ತದೆ. ತಾಂತ್ರಿಕ ಪರಿಭಾಷೆಯಲ್ಲಿ, ಇದು ಹಣ್ಣಿನ ತುಂಡಿನಂತೆ ಇರುತ್ತದೆ, ಅವು "ಹಣ್ಣಾಗುತ್ತವೆ". 

ಕರ್ಮದ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳಿಂದ ಏನು ಹಣ್ಣಾಗುತ್ತದೆ

ಈ ಕರ್ಮದ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳಿಂದ ಬರುವ ಹಲವಾರು ವಿಭಿನ್ನ ರೀತಿಯ ಫಲಿತಾಂಶಗಳಿವೆ. ಅತ್ಯಂತ ಸಾಮಾನ್ಯವಾದದ್ದು, ನಮ್ಮ ಅನುಭವದ ಪ್ರತಿ ಕ್ಷಣದೊಂದಿಗೆ ಒಂದು ಮಟ್ಟದ ಸಂತೋಷ ಅಥವಾ ಅಸಂತೋಷವನ್ನು ಅನುಭವಿಸುವುದು. ಅದು ಅಸಂತೋಷವಾಗಿದ್ದರೆ, ಅದು ವಿನಾಶಕಾರಿ ನಡವಳಿಕೆಯ ಫಲಿತಾಂಶವಾಗಿರುತ್ತದೆ ಮತ್ತು ಅದು ಸಂತೋಷವಾಗಿದ್ದರೆ, ಅದು ರಚನಾತ್ಮಕ ನಡವಳಿಕೆಯ ಫಲಿತಾಂಶವಾಗಿರುತ್ತದೆ. 

ಇದಲ್ಲದೆ, ಹಿಂದಿನ ರೀತಿಯ ಕ್ರಿಯೆಯನ್ನು ಪುನರಾವರ್ತಿಸುವ ಭಾವನೆಯೂ ಇದೆ. ಕರ್ಮವು ಕರ್ಮದ ಪರಿಣಾಮದಿಂದ ನೇರವಾಗಿ ಹಣ್ಣಾಗುವುದಿಲ್ಲ. ಮೊದಲು ಒಂದು ಭಾವನೆ ಉದ್ಭವಿಸುತ್ತದೆ, ಒಬ್ಬರ ಮೇಲೆ ಕೂಗಾಡುವಂತೆ ಅಥವಾ ಅವರನ್ನು ಅಪ್ಪಿಕೊಳ್ಳುವಂತೆ ಭಾಸವಾಗುತ್ತದೆ. ಆ ಭಾವನೆಯ ಆಧಾರದ ಮೇಲೆ, ನಿಜವಾಗಿಯೂ ಹಾಗೆ ಮಾಡಬೇಕೆಂಬ ಪ್ರಚೋದನೆಯು ನಮ್ಮನ್ನು ಆ ಕ್ರಿಯೆಗೆ ಸೆಳೆಯುತ್ತದೆ. ಭಾವನೆ ಮತ್ತು ಪ್ರಚೋದನೆಯ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಏನನ್ನಾದರೂ ಮಾಡಬೇಕೆಂಬ ಭಾವನೆ ಎಂದರೆ ಅದನ್ನು ಬಯಸುವುದು ಅಥವಾ ಹಾಗೆ ಮಾಡಲು ಬಯಸುವುದಾಗಿರುತ್ತದೆ. ಆದರೆ "ಭಾವಿಸುವುದು" ಎಂದರೆ, ಕನಿಷ್ಠವಾಗಿ ಇಂಗ್ಲಿಷ್‌ನಲ್ಲಿ, ಬಯಸುವುದು ಅಥವಾ ಇಚ್ಛಿಸುವುದಕ್ಕಿಂತ ಸ್ವಲ್ಪ ಹೆಚ್ಚು ವಿವರಣಾತ್ಮಕವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಕಡಿಮೆ ಉದ್ದೇಶಪೂರ್ವಕವಾಗಿರುತ್ತದೆ. ನಾವು ಮೊದಲು ಮಾಡಿದ್ದಕ್ಕೆ ಹೋಲುವ ಏನನ್ನಾದರೂ ಪುನರಾವರ್ತಿಸುವಂತೆ ಭಾವಿಸುತ್ತೇವೆ ಮತ್ತು ಇದೇ ರೀತಿಯ ಇನ್ನೊಮ್ಮೆ ಸಂಭವಿಸುವ ಪರಿಸ್ಥಿತಿಗೆ ಸಿಲುಕುವಂತೆ ನಾವು ಭಾವಿಸುತ್ತೇವೆ. ಆದರೆ, ನಮ್ಮ ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳ ಪರಿಣಾಮವಾಗಿ ಇತರ ವ್ಯಕ್ತಿಯು ನಾವು ಅವರ ಕಡೆಗೆ ವರ್ತಿಸಿದ ರೀತಿಯಲ್ಲಿಯೇ ನಮ್ಮ ಕಡೆಗೆ ವರ್ತಿಸುವುದಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ, ಅದು ಅವರ ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳಿಂದ ಹಣ್ಣಾಗುತ್ತದೆ, ನಮ್ಮಿಂದಲ್ಲ. ನಮ್ಮ ಕಡೆಯಿಂದ ಹಣ್ಣಾಗುವ ಏಕೈಕ ವಿಷಯವೆಂದರೆ ಆ ಪರಿಸ್ಥಿತಿಗೆ ಬರಲು, ಈ ವ್ಯಕ್ತಿಯನ್ನು ಭೇಟಿಯಾಗಲು ಇರುವ ನಮ್ಮ ಭಾವನೆ ಇತ್ಯಾದಿ. 

ನಿರ್ದಿಷ್ಟವಾಗಿ, ಈ ಸಂದರ್ಭದಲ್ಲಿ ನಮ್ಮ ಕರ್ಮ ಸಾಮರ್ಥ್ಯಗಳಿಂದ ಹಣ್ಣಾಗುವ ಇನ್ನೊಂದು ವಿಷಯವೆಂದರೆ, ನಾವು ಹೊಂದಿರುವ ಜೀವ ರೂಪ, ದೇಹ ಮತ್ತು ಮಾನಸಿಕ ಚಟುವಟಿಕೆಯ ಪ್ರಕಾರವಾಗಿರುತ್ತದೆ. ಉದಾಹರಣೆಗೆ, ನಮಗೆ ನಾಯಿಯ ಮೆದುಳು ಅಥವಾ ಮಾನವ ಮೆದುಳು ಇದ್ದರೆ ನಾವು ವಿಭಿನ್ನ ಮಾನಸಿಕ ಸಾಮರ್ಥ್ಯಗಳನ್ನು ಅನುಭವಿಸುತ್ತೇವೆ. ವಾಸ್ತವದಲ್ಲಿ, ಕರ್ಮ ಸಾಮರ್ಥ್ಯಗಳು ಮಾನಸಿಕ ನಿರಂತರತೆಯನ್ನು ತರುತ್ತವೆ, ಸಸ್ತನಿಯಾಗಿ ಪುನರ್ಜನ್ಮ ಪಡೆದ ಸಂದರ್ಭದಲ್ಲಿ, ನಿರ್ದಿಷ್ಟ ಪೋಷಕರ ಗುಂಪಿನ ವೀರ್ಯ ಮತ್ತು ಮೊಟ್ಟೆಯೊಂದಿಗೆ ಸಂಪರ್ಕ ಸಾಧಿಸುವಂತೆ ಮಾಡುತ್ತವೆ. ಈ ರೀತಿಯಾಗಿ, ನಾವು ತೆಗೆದುಕೊಳ್ಳುವ ಜೀವ ರೂಪ ಮತ್ತು ದೇಹದ ಪ್ರಕಾರವು ಈ ಕರ್ಮ ಸಾಮರ್ಥ್ಯಗಳಿಂದ ಉಂಟಾಗುತ್ತದೆ. 

ಜೀವಿತಾವಧಿಯಲ್ಲಿನ ಕರ್ಮ ಪಕ್ವತೆಗಳು ಹೆಚ್ಚಾಗಿ ಹಿಂದಿನ ಜನ್ಮಗಳಲ್ಲಿನ ಕ್ರಿಯೆಗಳಿಂದ ಬರುತ್ತವೆ 

ದೈನಂದಿನ ಜೀವನದಲ್ಲಿನ ನಮ್ಮ ಅನುಭವಗಳನ್ನು ನೋಡಿದಾಗ, ನಾವು ಅನುಭವಿಸುವ ಸಂತೋಷ ಅಥವಾ ಅತೃಪ್ತಿಯ ಯಾವುದೇ ಭಾವನೆಗಳು ಮತ್ತು ನಾವು ಏನನ್ನಾದರೂ ಮಾಡಬೇಕಾದ ಅಥವಾ ಹೇಳಬೇಕಾದ ಯಾವುದೇ ಭಾವನೆಗಳು, ಈ ಜೀವನದಲ್ಲಿನ ನಮ್ಮ ಹಿಂದಿನ ಕ್ರಿಯೆಗಳಿಂದ ನಮ್ಮ ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳ ಪಕ್ವತೆ ಎಂದು ನಾವು ಹೆಚ್ಚಾಗಿ ಭಾವಿಸುತ್ತೇವೆ. ಆದರೆ ನಿರ್ದಿಷ್ಟ ರೀತಿಯ ಕರ್ಮ ನಡವಳಿಕೆಗಳು ಮಾತ್ರ ಈ ಜೀವಿತಾವಧಿಯಲ್ಲಿ ಅವುಗಳ ಸಾಮರ್ಥ್ಯ ಮತ್ತು ಪ್ರವೃತ್ತಿಗಳ ಪಕ್ವತೆಯನ್ನು ತರುತ್ತವೆ. ವಿಶೇಷವಾಗಿ ನಮ್ಮ ಶಿಕ್ಷಕರು ಅಥವಾ ಪೋಷಕರಂತಹ ನಮಗೆ ಅತ್ಯಂತ ದಯೆ ತೋರಿದವರನ್ನು ಗುರಿಯಾಗಿರಿಸಿಕೊಂಡರೆ, ಇವುಗಳಲ್ಲಿ, ನಕಾರಾತ್ಮಕ ಮತ್ತು ಸಕಾರಾತ್ಮಕ ನಡವಳಿಕೆಗಳು ಹೆಚ್ಚಾಗಿ ಪ್ರೇರಿತವಾಗಿರುತ್ತವೆ. ಈ ಜೀವಿತಾವಧಿಯಲ್ಲಿ ಹಣ್ಣಾಗುವ ಮತ್ತು ನಾವು ಅನುಭವಿಸುವ ಬಹುಪಾಲು ವಿಷಯಗಳು ಹಿಂದಿನ ಜೀವಿತಾವಧಿಯಲ್ಲಿನ ಕ್ರಿಯೆಗಳಿಂದ ನಿರ್ಮಿಸಲಾದ ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳ ಫಲಿತಾಂಶಗಳಾಗಿರುತ್ತವೆ. 

ಬಹುಶಃ ಈ ಅಂಶವು ನಮ್ಮಲ್ಲಿ ಹೆಚ್ಚಿನವರಿಗೆ ಅರ್ಥವಾಗಲು ಬಹಳಾ ಕಷ್ಟಕರವಾಗಿರಬಹುದು. ಪಾಶ್ಚಿಮಾತ್ಯರಾಗಿ, ನಮ್ಮಲ್ಲಿ ಹೆಚ್ಚಿನವರಿಗೆ ಹಿಂದಿನ ಮತ್ತು ಭವಿಷ್ಯದ ಜೀವಿತಾವಧಿಯ ಬಗ್ಗೆ ಮನವರಿಕೆಯಾಗುವುದಿಲ್ಲ. ಅದು ಪ್ರತ್ಯೇಕ ವಿಷಯವಾಗಿದೆ ಮತ್ತು ದುರದೃಷ್ಟವಶಾತ್, ಈ ಸಂದರ್ಭದಲ್ಲಿ ನಮಗೆ ಹಿಂದಿನ ಮತ್ತು ಭವಿಷ್ಯದ ಜೀವಿತಾವಧಿಯ ಬಗ್ಗೆ ಮತ್ತು ನಾವು ಅವುಗಳನ್ನು ಹೇಗೆ ಮನವರಿಕೆ ಮಾಡಿಕೊಳ್ಳುತ್ತೇವೆ ಎಂಬುದನ್ನು ತನಿಖೆ ಮಾಡಲು ಸಮಯವಿಲ್ಲ. ಆದರೆ ಪುನರ್ಜನ್ಮದಲ್ಲಿ ನಂಬಿಕೆಯಿಲ್ಲದಿದ್ದರೂ ಸಹ, ಕರ್ಮದ ಬಗೆಗಿರುವ ಚರ್ಚೆಯು, ನಮ್ಮ ಜೀವನದಲ್ಲಿ ನಮಗೆ ಏನಾಗುತ್ತದೆ ಮತ್ತು ನಾವು ಹೇಗೆ ಭಾವಿಸುತ್ತೇವೆ ಎಂಬುದರ ಕುರಿತು ಬಹಳ ಬಲವಾದ ಪ್ರಸ್ತುತತೆಯನ್ನು ಹೊಂದಿರಬಹುದು ಎಂದು ನಾನು ಭಾವಿಸುತ್ತೇನೆ. 

ನಮ್ಮ ಪ್ರಚೋದಿತ ನಡವಳಿಕೆಯ ಬಗ್ಗೆ ಗಮನ, ಸಾವಧಾನತೆ ಮತ್ತು ವಿವೇಚನಾ ಅರಿವನ್ನು ಬೆಳೆಸಿಕೊಳ್ಳುವುದು 

ಜೀವನದಲ್ಲಿ ನಾವು ಅನುಭವಿಸುವುದನ್ನು ನಿಭಾಯಿಸಲು ಪ್ರಾರಂಭಿಸಲು, ನಾವು ಗಮನವನ್ನು ಬೆಳೆಸಿಕೊಳ್ಳಬೇಕು. ಗಮನ, ಅಥವಾ ಗಮನ ಕೊಡುವುದು, ಒಂದು ನಿರ್ದಿಷ್ಟ ವಸ್ತುವಿನೊಂದಿಗೆ ನಮ್ಮ ಮಾನಸಿಕ ಚಟುವಟಿಕೆಯನ್ನು ತೊಡಗಿಸಿಕೊಳ್ಳುವ ಮಾನಸಿಕ ಅಂಶವಾಗಿರುತ್ತದೆ. ಆ ವಸ್ತುವನ್ನು ನಾವು ಪ್ರತಿ ಕ್ಷಣ ಅನುಭವಿಸುತ್ತಿರುವಾಗ, ಪಾಶ್ಚಿಮಾತ್ಯ ವಲಯಗಳು ಅದನ್ನು “ಸಾವಧಾನತೆ” ಎಂದು ಕರೆಯುತ್ತವೆ, ಆದರೆ ವಾಸ್ತವದಲ್ಲಿ ಅದು ಮಾನಸಿಕ ಅಂಶದ “ಸಾವಧಾನತೆ”ಯ ಬೌದ್ಧ ಅರ್ಥವಾಗಿರುವುದಿಲ್ಲ. ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾವು ಗಮನಹರಿಸಿದಾಗ, ಸಾವಧಾನತೆ ಎಂಬುದು ಮಾನಸಿಕ ಅಂಶವಾಗಿದ್ದು, ಇದೊಂದು ಮಾನಸಿಕ ಅಂಟಿನಂತೆ ಕಾರ್ಯನಿರ್ವಹಿಸುತ್ತದೆ, ಮತ್ತು ಆ ಗಮನವನ್ನು ಕಳೆದುಕೊಳ್ಳದಂತೆ ತಡೆಯುತ್ತದೆ. ನಾವು ಹೆಚ್ಚು ಹೆಚ್ಚು ಗಮನಹರಿಸಿದಂತೆ, ನಾವು ಏನನ್ನಾದರೂ ಮಾಡಲು ಬಯಸಿದಾಗ ಅಥವಾ ಏನನ್ನಾದರೂ ಹೇಳಲು ಬಯಸಿದಾಗ ನಾವು ಉತ್ತಮವಾಗಿ ಗಮನವಿಡಲು ಸಾಧ್ಯವಾಗುತ್ತದೆ. ಅದು ಉದ್ಭವಿಸಿದಾಗ ನಾವು ಅದನ್ನು ಗ್ರಹಿಸಬಹುದು ಮತ್ತು ನಾವು ಏನನ್ನಾದರೂ ಮಾಡಲು ಬಯಸಿದಾಗ ಮತ್ತು ವಾಸ್ತವದಲ್ಲಿ ಅನುಗುಣವಾದ ನಡವಳಿಕೆಯತ್ತ ನಮ್ಮನ್ನು ಕರೆದೊಯ್ಯುವ ಬಲವಾದ ಪ್ರಚೋದನೆಯನ್ನು ಅನುಭವಿಸಿದಾಗ, ಅವುಗಳ ನಡುವೆ ಒಂದು ನಿರ್ದಿಷ್ಟ ಅಂತರವನ್ನು ಗಮನಿಸಬಹುದು. 

ಇಂಗ್ಲಿಷ್‌ನ ಆಡುಮಾತಿನಲ್ಲಿ, ಕೆಲವು ಜನರನ್ನು, ಯೋಚಿಸದೆ ತಮ್ಮ ತಲೆಯಲ್ಲಿ ಹೊಳೆಯುವ ಮೊದಲ ವಿಷಯವನ್ನು ಮಾತನಾಡುವವರು ಎಂದು ನಾವು ಕರೆಯುತ್ತೇವೆ. ಅವರು ಏನು ಹೇಳುತ್ತಾರೆ ಅಥವಾ ಏನು ಮಾಡುತ್ತಾರೆ ಎಂಬುದರ ಬಗ್ಗೆ ಅವರಲ್ಲಿ ಆಂತರಿಕ ಸೆನ್ಸಾರ್ ಇರುವುದಿಲ್ಲ. ಏನೇ ಹೊಳೆದರೂ, ಅವರು ಹಠಾತ್ತನೆ ಮಾಡುತ್ತಾರೆ ಅಥವಾ ಹೇಳುತ್ತಾರೆ. ಆದರೆ ಭಾವನೆ ಉದ್ಭವಿಸಿದಾಗ ಮತ್ತು ಆ ಭಾವನೆಯ ಆಧಾರದ ಮೇಲೆ ನಾವು ವರ್ತಿಸಿದಾಗ, ಅವುಗಳ ನಡುವೆ ಒಂದು ಅಂತರವಿರುವುದನ್ನು ನಾವು ಗಮನಿಸಿದಾಗ, ಆ ಭಾವನೆಯ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು "ವಿವೇಚನಾತ್ಮಕ ಅರಿವು" ಎಂದು ಕರೆಯಲ್ಪಡುವುದನ್ನು ಬಳಸಲು ನಮಗೆ ಅವಕಾಶವಿರುತ್ತದೆ. ಒಂದು ಕ್ರಿಯೆಯು ಸಹಾಯಕವಾಗುತ್ತದೆಯೇ ಅಥವಾ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆಯೇ ಎಂದು ನಾವು ವಿವೇಚಿಸುತ್ತೇವೆ. ಅದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಲಿದ್ದರೆ, ಅದು ವಿನಾಶಕಾರಿ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಾವು ಹಾಗೆ ವರ್ತಿಸುವುದಿಲ್ಲ. ಉದಾಹರಣೆಗೆ, ನಾವು ಯಾರಿಗಾದರೂ, "ನೀವು ಎಷ್ಟು ಕುರೂಪವಾದ ಉಡುಗೆ ಧರಿಸಿದ್ದೀರಿ" ಎಂದು ಹೇಳಬೇಕಾಗಿಲ್ಲ. ಅದರಿಂದ ಯಾವುದೇ ಸಹಾಯವಾಗುವುದಿಲ್ಲ, ಅಲ್ಲವೇ? 

ಈ ರೀತಿಯಲ್ಲಿ ವರ್ತಿಸುವ ಅಥವಾ ಮಾತನಾಡುವ ಭಾವನೆಗಳು ಅಭ್ಯಾಸಗಳಿಂದ ಬಂದಿವೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ - ನಾನು ಇಲ್ಲಿ "ಅಭ್ಯಾಸ”ಗಳನ್ನು ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳಿಗಾಗಿ ಇರುವ ಸಾಮಾನ್ಯ ಪದವಾಗಿ ಬಳಸುತ್ತಿದ್ದೇನೆ. ಈ ಅಭ್ಯಾಸಗಳು ಈ ಜೀವಿತಾವಧಿಯಿಂದ ಬಂದಿದೆಯೇ ಅಥವಾ ಹಿಂದಿನ ಜೀವಿತಾವಧಿಯಿಂದ ಬಂದಿದೆಯೇ ಎಂಬುದು ಅಪ್ರಸ್ತುತವಾಗಿರುತ್ತದೆ. ಮುಖ್ಯವಾದ ವಿಷಯವೆಂದರೆ ನಾವು ಹಿಂದಿನ ಮಾದರಿಗಳು, ಹಿಂದಿನ ಅಭ್ಯಾಸಗಳ ಆಧಾರದ ಮೇಲೆ ಬಲವಂತವಾಗಿ ವರ್ತಿಸುತ್ತಿದ್ದೇವೆ ಮತ್ತು ನಾವು ಅವುಗಳಿಗೆ ಗುಲಾಮರಾಗಿರಲು ಯಾವುದೇ ಕಾರಣವಿಲ್ಲ. ನಾವು ಮನುಷ್ಯರು, ಯಾವುದೋ ನಿಯಂತ್ರಣವಿಲ್ಲದ ಪ್ರಾಣಿಗಳ ರೀತಿಯಲ್ಲಿ ವರ್ತಿಸಬೇಕಾಗಿಲ್ಲ. ಮನುಷ್ಯರಾಗಿ, ನಮಗೆ ಬುದ್ಧಿವಂತಿಕೆ ಇದೆ; ಇದರರ್ಥ ಯಾವುದು ಸಹಾಯಕ ಮತ್ತು ಯಾವುದು ಹಾನಿಕಾರಕ ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ. ಹಿಂದಿನ ಜನ್ಮಗಳು ಅಸ್ತಿತ್ವದಲ್ಲಿರಲಿ ಬಿಡಲಿ, ನಮ್ಮ ಕೆಟ್ಟ ಅಭ್ಯಾಸಗಳ ಆಧಾರದ ಮೇಲೆ ವರ್ತಿಸುವುದು ಮೂರ್ಖತನ ಎಂದು ನಾವು ನೋಡಬಹುದು, ಅವು ನಮಗೆ ಹೆಚ್ಚು ಹೆಚ್ಚು ಸಮಸ್ಯೆಗಳನ್ನು ತರುತ್ತವೆ. ನಾವು ಬುದ್ದಿಹೀನರಾಗಿ ನಮಗಾಗಿ ಹೆಚ್ಚಿನ ಸಮಸ್ಯೆಗಳನ್ನು ಉಂಟುಮಾಡಲು ಬಯಸುವುದಿಲ್ಲವಾದ್ದರಿಂದ, ಕೆಟ್ಟ ಅಭ್ಯಾಸಗಳ ಆಧಾರದಿಂದ ಪ್ರಚೋದಿತವಾಗಿ ವರ್ತಿಸುವುದನ್ನು ಜಯಿಸಲು ನಾವು ಪ್ರಯತ್ನಿಸುತ್ತೇವೆ. 

ಒಂದು ರೀತಿಯಲ್ಲಿ, ನಮ್ಮ ಪುನರಾವರ್ತಿತ ಪ್ರಚೋದಿತ ನಡವಳಿಕೆಯ ಮಾದರಿಗಳನ್ನು ವ್ಯಸನಗಳಂತೆ ನೋಡಬೇಕು. ನಾವು ಮದ್ಯ, ಸಿಗರೇಟ್ ಅಥವಾ ಮಾದಕ ದ್ರವ್ಯಗಳಿಗೆ ವ್ಯಸನಿಯಾಗಬಹುದು. ಆದರೆ, ನಾವು ಜೂಜಾಟ, ಅಥವಾ ಲೈಂಗಿಕತೆ ಅಥವಾ ಜನರ ಮೇಲೆ ಕಿರುಚುವುದು ಮುಂತಾದ ಚಟುವಟಿಕೆಗಳಿಗೂ ವ್ಯಸನಿಯಾಗಬಹುದು. ವ್ಯಸನಗಳನ್ನು ಜಯಿಸಲು ಬೌದ್ಧ ಮತ್ತು ಬೌದ್ಧೇತರ ವಿಧಾನಗಳಿವೆ. ನಾವು ಈ ವಿಧಾನಗಳನ್ನು ಆತ್ಮಸಾಕ್ಷಿಯಂತೆ ಅನ್ವಯಿಸಬೇಕು, ಇಲ್ಲದಿದ್ದರೆ ನಾವು ನಿಯಂತ್ರಣ ತಪ್ಪುತ್ತೇವೆ ಮತ್ತು ಹೆಚ್ಚು ಹೆಚ್ಚು ಸಮಸ್ಯೆಗಳನ್ನು ಉಂಟುಮಾಡುತ್ತೇವೆ. 

ಯಾವುದೇ ವ್ಯಸನ ಕಾರ್ಯಕ್ರಮದ ಮೊದಲ ಹೆಜ್ಜೆಯು ನಾವು ವ್ಯಸನಿಗಳು ಎಂದು ಗುರುತಿಸುವುದು ಮತ್ತು ಒಪ್ಪಿಕೊಳ್ಳುವುದಾಗಿರುತ್ತದೆ. ಇದು ಅತ್ಯವಶ್ಯಕ. ನಾವು ಸಮಸ್ಯೆಯನ್ನು ನಿವಾರಿಸುವ ಮೊದಲು ಅದನ್ನು ಗುರುತಿಸಬೇಕು. ಆದರೆ ಕೆಲವು ವ್ಯಸನ ಕಾರ್ಯಕ್ರಮಗಳು, ವ್ಯಸನಿಯಾಗಿರುವುದೇ ನಮ್ಮ ನಿಜವಾದ, ಬದಲಾಗದ ಗುರುತು ಮತ್ತು ಯಾರೂ, ಎಂದಿಗೂ ವ್ಯಸನಿಯಾಗುವುದನ್ನು ಮೀರಲು ಸಾಧ್ಯವಿಲ್ಲ ಎಂದು ನಂಬುವಂತೆ ಮಾಡಬಹುದು - ನಮ್ಮ ವ್ಯಸನಕಾರಿ ನಡವಳಿಕೆಯ ನಿಜವಾದ ನಿಲುಗಡೆಯನ್ನು ನಾವು ಎಂದಿಗೂ ಸಾಧಿಸಲು ಸಾಧ್ಯವಿಲ್ಲ ಎಂದು ನಂಬುವಂತೆ ಮಾಡಬಹುದು. ಆದರೆ, ಬೌದ್ಧ ದೃಷ್ಟಿಕೋನದಿಂದ, ಸ್ವಯಂ-ವಿನಾಶಕಾರಿ ರೀತಿಯ ನಡವಳಿಕೆಗಳಿಗೆ, ನಮ್ಮ ವ್ಯಸನಗಳು ಸೇರಿದಂತೆ ಎಲ್ಲಾ ವ್ಯಸನಗಳ ನಿಜವಾದ ನಿಲುಗಡೆಯನ್ನು ನಾವು ಸಾಧಿಸಬಹುದು, ಇದರಿಂದ ಅವು ಮತ್ತೆ ಎಂದಿಗೂ ಉದ್ಭವಿಸುವುದಿಲ್ಲ. ಬೌದ್ಧ ಅಭ್ಯಸಿಗರಾಗಿ ಇದೇ ನಮ್ಮ ಗುರಿಯಾಗಿದೆ. 

ನಮ್ಮ ಪ್ರಚೋದಿತ ನಡವಳಿಕೆಯ ಮಾದರಿಯನ್ನು ತ್ಯಜಿಸುವುದು 

ನಮ್ಮ ವ್ಯಸನಕಾರಿ ಪ್ರಚೋದಿತ ನಡವಳಿಕೆಯ ಮಾದರಿಗಳನ್ನು ಜಯಿಸಲು ಬೇಕಾಗಿರುವ ತ್ಯಾಗದ ಬಗ್ಗೆ ಇಲ್ಲಿ ಚರ್ಚಿಸಲಿದ್ದೇವೆ. ತ್ಯಜಿಸುವುದು ಎಂದರೆ ಯಾವುದರಿಂದಾದರೂ ಮುಕ್ತಗೊಳ್ಳುವ ದೃಢನಿಶ್ಚಯ ಮತ್ತು ಅದನ್ನು ತ್ಯಜಿಸುವ ಇಚ್ಛೆಯಾಗಿರುತ್ತದೆ. ಅದರಲ್ಲಿ ಒಳಗೊಂಡಿರುವ ಭಾವನಾತ್ಮಕ ಭಾವನೆಯು ಸಂಪೂರ್ಣವಾದ ಅಸಹ್ಯ ಮತ್ತು ಬೇಸರವಾಗಿರುತ್ತದೆ: ನಮ್ಮ ನಡವಳಿಕೆಯ ವ್ಯಸನಗಳಿಂದ ನಾವು ಬೇಸರಗೊಂಡಿರಬಹುದು, ಅವು ಸ್ವಯಂ-ವಿನಾಶಕಾರಿ ನಕಾರಾತ್ಮಕ ವ್ಯಸನಗಳಾಗಿರಬಹುದು ಅಥವಾ ಗೊಂದಲಮಯವಾದ ಸಕಾರಾತ್ಮಕ ವ್ಯಸನಗಳಾಗಿರಬಹುದು. ಉದಾಹರಣೆಗೆ, ನಾವು ಯಾವಾಗಲೂ ಕೋಪಗೊಳ್ಳುವುದರಿಂದ ಮತ್ತು ಕಿರುಚುವುದರಿಂದ ಬೇಸರಗೊಂಡಿದ್ದೇವೆ, ಅಥವಾ ನಮ್ಮ ಕೈಗಳನ್ನು ಗೀಳಿನಿಂದ ತೊಳೆಯುವುದರಿಂದ ನಮಗೆ ಬೇಸರವಾಗಿದೆ. ಆದ್ದರಿಂದ, ನಮಗೆ ಮತ್ತೆ ತೊಳೆಯಬೇಕೆನಿಸದರೂ, ಮತ್ತೆ ಕಿರುಚಬೇಕೆನಿಸಿದರೂ, ಅಂತಹ ಭಾವನೆಯನ್ನು ನಮ್ಮಿಂದ ನಿವಾರಿಸಲು, ನಮ್ಮ ನಿರ್ಣಯವನ್ನು ನಾವು ಪುನರುಚ್ಚರಿಸುತ್ತೇವೆ. ಮೊದಲ ಹೆಜ್ಜೆಯಾಗಿ, ಕನಿಷ್ಠ ಪಕ್ಷ ಅಂತಹ ಭಾವನೆಗಳ ಪ್ರಭಾವದಡಿ ವರ್ತಿಸದಿರಲು ಮತ್ತು ಹಾಗೆ ಮಾಡದಿರಲು, ನಾವು ನಮ್ಮ ನಿರ್ಣಯವನ್ನು ಪುನರುಚ್ಚರಿಸುತ್ತೇವೆ ಮತ್ತು ನಂತರ ನಾವು ಸ್ವಯಂ ನಿಯಂತ್ರಣವನ್ನು ಅಭ್ಯಸಿಸುತ್ತೇವೆ. ಸಹಜವಾಗಿ, ಸ್ವಯಂ ನಿಯಂತ್ರಣವು ಕೇವಲ ಮೊದಲ ಹೆಜ್ಜೆಯಾಗಿರುತ್ತದೆ. ನಮ್ಮ ಪ್ರಚೋದಿತ ನಡವಳಿಕೆಯ ಆಳವಾದ ಕಾರಣವನ್ನು ತೆಗೆದುಹಾಕಲು ನಾವು ಇನ್ನೂ ಆಳವಾಗಿ ನೋಡಬೇಕಾಗಿದೆ. 

ಕರ್ಮದ ಬಗೆಗಿರುವ ತಪ್ಪು ತಿಳುವಳಿಕೆಗಳು 

ನಮ್ಮ ದೈನಂದಿನ ಜೀವನದಲ್ಲಿ ಕರ್ಮದ ಬಗ್ಗೆ ಇರುವ ಬೋಧನೆಗಳನ್ನು ಅನ್ವಯಿಸಲು ಪ್ರಯತ್ನಿಸುವಾಗ, ನಾವು ಅನುಭವಿಸುವ ಯಾವುದೇ ವಿಷಯವು, ನಮ್ಮ ಕರ್ಮದ ಪಕ್ವತೆಗೆ ತಕ್ಕಂತೆ ಇರುತ್ತದೆ ಎಂಬ ತಪ್ಪು ತಿಳುವಳಿಕೆಯ ಬಗ್ಗೆ ನಾವು ಎಚ್ಚರವಾಗಿರಬೇಕು. ಈ ಸೋಲಿನ ಮನೋಭಾವದಿಂದ, ನಾವು ಹಿಂದೆ ಕೆಟ್ಟ ಹುಡುಗ ಅಥವಾ ಹುಡುಗಿಯಾಗಿದ್ದರಿಂದ, ಈಗ ನಮಗೆ ಆಗುತ್ತಿರುವ ಶಿಕ್ಷೆಗೆ ಅರ್ಹರು ಎಂದು ನಾವು ಭಾವಿಸುತ್ತೇವೆ. ನಾವು ಗುರಿಯನ್ನು ಇಡದಿದ್ದರೆ, ಯಾರೂ ಅದರ ಮೇಲೆ ಬಾಣವನ್ನು ಬಿಡಲಾಗುವುದಿಲ್ಲ ಎಂಬ ಸ್ಥಿತಿಯನ್ನು ಶಾಂತಿದೇವರಿಂದ ನಾವು ಅರಿಯುತ್ತೇವೆ. ನಾವು ಹಿಂದೆ ವಿನಾಶಕಾರಿಯಾಗಿ ವರ್ತಿಸದಿದ್ದರೆ, ಜನರು ಈಗ ನಮ್ಮ ಮೇಲೆ ಕೋಪಗೊಂಡು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಾವು ಅನುಭವಿಸುತ್ತಿರಲಿಲ್ಲ. ಶಾಂತಿದೇವರ ಉದ್ದೇಶವು ಇತರ ವ್ಯಕ್ತಿಯನ್ನು ದೂಷಿಸುವುದಾಗಿರುವುದಿಲ್ಲ, ಬದಲಿಗೆ ನಮ್ಮನ್ನೇ ದೂಷಿಸುವುದಾಗಿರುತ್ತದೆ. ಆದರೆ, ನಾವು ಬಹಳಾ ಕೆಟ್ಟವರು ಮತ್ತು ನಮಗೆ ಸಂಭವಿಸುವ ದುಃಖಗಳನ್ನು ಅನುಭವಿಸಲು ನಾವು ಅರ್ಹರು, ಆದ್ದರಿಂದ ನಾವು ದೂರು ನೀಡದೆ ಸುಮ್ಮನಿದ್ದು ನಮ್ಮ ಶಿಕ್ಷೆಯನ್ನು ಸ್ವೀಕರಿಸಬೇಕು ಎಂದು ಭಾವಿಸುವ ತೀವ್ರತೆಗೆ ಹೋಗಬೇಕು ಎಂಬುದು ಇದರ ಅರ್ಥವಲ್ಲ. ಇದು ಕರ್ಮದ ಬಗ್ಗೆ ಇರುವ ಬೋಧನೆಗಳನ್ನು ನಿಭಾಯಿಸುವ ಆರೋಗ್ಯಕರ ಮಾರ್ಗ ಅಥವಾ ಅವುಗಳನ್ನು ಆಚರಣೆಗೆ ತರುವ ಉದ್ದೇಶಿತ ಮಾರ್ಗವಾಗಿರುತ್ತದೆ ಎಂದು ನನಗೆ ಅನಿಸುವುದಿಲ್ಲ. 

ಇಂತಹ ಮಾರಕ ದೃಷ್ಟಿಕೋನದ ಬದಲಿಗೆ, ದೈನಂದಿನ ಜೀವನದಲ್ಲಿ ಕರ್ಮ ಬೋಧನೆಗಳಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ನೋಡಲು ನಾವು ಅವುಗಳ ಇತರ ಅಂಶಗಳನ್ನು ಪರಿಶೀಲಿಸಬೇಕಾಗಿದೆ. ನಮಗೆ ಪ್ರಸ್ತುತವಾಗಿ ಏನಾದರೂ ಸಂಭವಿಸುತ್ತಿರುವುದನ್ನು ನಾವು ಅನುಭವಿಸಿದಾಗ, ಕರ್ಮದ ಬೋಧನೆಗಳಿಂದ, ಇದರ ಕಾರಣವು ನಮ್ಮ ಹಿಂದಿನ ನಡವಳಿಕೆಯಲ್ಲಿದೆ ಎಂದು ನಾವು ಊಹಿಸಬಹುದು. ಅನೇಕ ಬೋಧನೆಗಳು ನಾವು ಅನುಭವಿಸುವ ಮತ್ತು ಹಿಂದಿನ ನಡವಳಿಕೆಯ ನಡುವಿನ ಸಂಪರ್ಕವನ್ನು ವಿವರಿಸುತ್ತವೆ. ಉದಾಹರಣೆಗೆ, ನಾವು ಯಾವಾಗಲೂ ಶಾಶ್ವತವಲ್ಲದ ಸಂಬಂಧಗಳನ್ನು ಅನುಭವಿಸಿದರೆ, ನಾವು ಪ್ರೀತಿಪಾತ್ರರೊಂದಿಗೆ ಇರಲು ಸಾಧ್ಯವಿಲ್ಲ, ಅಥವಾ ಜನರು ಯಾವಾಗಲೂ ನಮ್ಮಿಂದ ದೂರವಾಗುತ್ತಿದ್ದರೆ, ಅದು ಇತರರ ನಡುವೆ ಬಿರುಕುಂಟಾಗುವ ರೀತಿಯಲ್ಲಿ ಮಾತನಾಡುವುದರ ಪರಿಣಾಮವಾಗಿರುತ್ತದೆ. ನಾವು ಜನರಿಗೆ ಅವರ ಸ್ನೇಹಿತರ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳಿರುವುದರಿಂದ ಅವರು ಬೇರ್ಪಡುತ್ತಾರೆ. ನಮ್ಮ ಸ್ವಂತ ಸ್ನೇಹಿತರು ನಮ್ಮನ್ನು ಬಿಟ್ಟು ಹೋಗುವುದನ್ನು ನಾವು ಅನುಭವಿಸಿದಾಗ, ಇದು ನಮ್ಮ ಕರ್ಮದ ಪಕ್ವತೆಯಾಗಿರುತ್ತದೆ, ಏಕೆಂದರೆ ಇತರರು, ನಮ್ಮಂತೆಯೇ ಏನನ್ನಾದರೂ ಮಾಡುತ್ತಿರುವ ಸಂದರ್ಭಗಳನ್ನು ನಾವು ಅನುಭವಿಸುತ್ತೇವೆ. 

ಬಿರುಕುಂಟಾಗುವಂತೆ ಮಾತನಾಡುವುದರಿಂದ ಪಕ್ವವಾಗುವ ಇನ್ನೊಂದು ವಿಷಯವೆಂದರೆ ಈ ರೀತಿಯ ನಡವಳಿಕೆಯನ್ನು ಪುನರಾವರ್ತಿಸಬೇಕೆಂಬ ಪ್ರಚೋದಿತ ಭಾವನೆ. ಈ ಅಂಶದ ಪ್ರಕಾರ, ಕರ್ಮದ ಬಗೆಗಿರುವ ನಮ್ಮ ತಿಳುವಳಿಕೆಯನ್ನು ರಚನಾತ್ಮಕ ಸಾಧನವಾಗಿ ಮಾಡಲು, ನಾವು ನಮ್ಮನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿಕೊಳ್ಳಬೇಕು. ನಾವು ಇತರರನ್ನು ಇಷ್ಟಪಡುವ, ಕೆಲಸ ಮಾಡುವ, ಅಧ್ಯಯನ ಮಾಡುವ ಅಥವಾ ಅವರೊಂದಿಗೆ ಸ್ನೇಹಪರರಾಗಿರುವವರನ್ನು ಟೀಕಿಸುವ ಅಥವಾ ಅವರ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುವ ಪ್ರವೃತ್ತಿಯನ್ನು ಹೊಂದಿದ್ದೇವೆಯೇ? ಬಹುಶಃ ನಾವು ತೀವ್ರವಾಗಿ ಟೀಕಿಸುತ್ತೇವೆ ಎಂದು ಕಂಡುಕೊಳ್ಳುತ್ತೇವೆ. ನಾವು ಯಾರ ಬಗ್ಗೆಯಾದರೂ ಅಪರೂಪವಾಗಿ ಒಳ್ಳೆಯದನ್ನು ಹೇಳುತ್ತೇವೆ ಮತ್ತು ಅವರ ಬಗ್ಗೆ ಕೆಟ್ಟದ್ದನ್ನು ಮಾತ್ರ ಹೇಳುತ್ತೇವೆ. ಇದು ಸರ್ವೇಸಾಮಾನ್ಯ, ಅಲ್ಲವೇ? ನಾವು ಇತರರ ನ್ಯೂನತೆಗಳನ್ನು ಎತ್ತಿ ತೋರಿಸಲು ಮತ್ತು ಅದರ ಬಗ್ಗೆ ಎಲ್ಲರಿಗೂ ಹೇಳಲು, ಅದರ ಬಗ್ಗೆ ದೂರು ನೀಡಲು ಉತ್ಸುಕರಾಗಿರುತ್ತೇವೆ. ಆದರೆ, ನಾವು ಎಷ್ಟು ಬಾರಿ ಇತರರ ಒಳ್ಳೆಯ ಗುಣಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಅವರನ್ನು ಹೊಗಳುತ್ತೇವೆ? ನಮ್ಮಲ್ಲಿ ಹೆಚ್ಚಿನವರಿಗೆ ಇದು ಅಪರೂಪದ ವಿಷಯ. 

ಕರ್ಮದ ಕುರಿತಾದ ಈ ಬೋಧನೆಗಳಿಂದ ನಾವು ಕಲಿಯಬಹುದಾದ ಮತ್ತು ನಮ್ಮ ದೈನಂದಿನ ಜೀವನದಲ್ಲಿ ನಾವು ಅನ್ವಯಿಸಬಹುದಾದ ಅತ್ಯಂತ ಉಪಯುಕ್ತ ಅಂಶಗಳಲ್ಲಿ ಇದು ಒಂದಾಗಿರುತ್ತದೆ. ನಮಗೆ ಸಂಭವಿಸುವ ಅನುಭವಗಳ ಪ್ರಕಾರಕ್ಕೆ ಅನುಗುಣವಾದ ಮಾದರಿಗಳನ್ನು ನಮ್ಮ ವಿಶಿಷ್ಟ ನಡವಳಿಕೆಯಲ್ಲಿ ನಾವು ಕಾಣಬಹುದು. ನಂತರ "ನಾನು ಹಿಂದಿನ ಜೀವನದಲ್ಲಿ ತುಂಬಾ ಕೆಟ್ಟವನಾಗಿದ್ದರಿಂದ, ಇತರರನ್ನು ಟೀಕಿಸುವುದರಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ" ಎಂಬ ಸೋಲಿನ ಮನೋಭಾವಕ್ಕೆ ಬೀಳುವ ಬದಲು, ನಾವು ಈಗ ನಮ್ಮ ನಡವಳಿಕೆಯ ಮೇಲೆ ಕೆಲಸ ಮಾಡವುದರ ಮೇಲೆ ಗಮನಹರಿಸಬಹುದು. ಬೇರೊಬ್ಬರ ಬಗ್ಗೆ ಕೆಟ್ಟದಾದದ್ದನ್ನು ಹೇಳಬೇಕೆನಿಸಿದಾಗ, ಅದರ ಬದಲು, ಅವರ ಒಳ್ಳೆಯ ಗುಣಗಳ ಬಗ್ಗೆ ಹೆಚ್ಚು ಯೋಚಿಸಬಹುದು ಮತ್ತು ಅವರನ್ನು ಹೊಗಳಬಹುದು. 

ನಾವು ಗುರುತಿಸಬಹುದಾದ ವಿವಿಧ ರೀತಿಯ ಕರ್ಮದ ಸಿಂಡ್ರೋಮ್‌ಗಳ ಹಲವು ಉದಾಹರಣೆಗಳಿವೆ. ಉದಾಹರಣೆಗೆ, ನಾವು ಬಡವರಾಗಿರಬಹುದು. ಇದನ್ನು ಪರಿಶೀಲಿಸಿದ ನಂತರ, ನಾವು ಯಾವಾಗಲೂ ಇತರ ಜನರ ವಸ್ತುಗಳನ್ನು ಬಳಸಿಕೊಳ್ಳುತ್ತಿದ್ದೇವೆ, ಅವರನ್ನು ಶೋಷಿಸುತ್ತಿದ್ದೇವೆ, ಬೇರೆಯವರಿಗೆ ಎಂದಿಗೂ ಹಣ ನೀಡುವುದಿಲ್ಲ, ಅವರು ನಮಗಾಗಿ ಹಣ ನೀಡಲಿ ಎಂದು ಯಾವಾಗಲೂ ನಿರೀಕ್ಷಿಸುತ್ತೇವೆ ಎಂಬಂತಹ ವಿಷಯಗಳನ್ನು ನಾವು ಕಂಡುಕೊಳ್ಳಬಹುದು. ನಿರ್ದಿಷ್ಟವಾಗಿ, ನಾನು ಇತರ ಜನರಿಗೆ ಸೇರಿದ ವಸ್ತುಗಳನ್ನು ಅನುಮತಿ ಕೇಳದೆ ಬಳಸುವುದನ್ನು ಉಲ್ಲೇಖಿಸುತ್ತಿದ್ದೇನೆ, ಉದಾಹರಣೆಗೆ, ಅನುಮತಿ ಕೇಳದೆ ಬೇರೆಯವರ ರೆಫ್ರಿಜರೇಟರ್‌ನಿಂದ ಆಹಾರವನ್ನು ತೆಗೆದುಕೊಳ್ಳುವುದು. ನಮಗೆ ಏನಾಗುತ್ತಿದೆ, ನಾವು ಏನು ಅನುಭವಿಸುತ್ತೇವೆ, ನಮ್ಮ ಭಾವನೆಗಳು ಮತ್ತು ಇದೇ ರೀತಿಯಲ್ಲಿ ವರ್ತಿಸುವ ಪ್ರವೃತ್ತಿಗಳ ನಡುವೆ ಇರುವ ಈ ಪರಸ್ಪರ ಸಂಬಂಧಗಳನ್ನು ನಾವು ಗಮನಿಸಬಹುದು. ಭಾರತೀಯ ಮಾಸ್ಟರ್ ಧರ್ಮರಕ್ಷಿತ ಅವರು ತಮ್ಮ ಮನಸ್ಸಿನ ತರಬೇತಿಯ ಪಠ್ಯವಾದ ವೀಲ್ ಆಫ್ ಶಾರ್ಪ್ ವೆಪನ್ಸ್(ಹರಿತವಾದ ಆಯುಧಗಳ ಚಕ್ರ)ದಲ್ಲಿ ಈ ಅನೇಕ ಪರಸ್ಪರ ಸಂಬಂಧಗಳನ್ನು ಒತ್ತಿ ಹೇಳಿದ್ದಾರೆ. 

ಅಲ್ಲದೆ, ಫಲಿತಾಂಶಗಳು ಕೇವಲ ಒಂದು ಕಾರಣದಿಂದ ಬರುವುದಿಲ್ಲ ಎಂದು ನಾವು ಅರಿತುಕೊಳ್ಳಬೇಕು. ಬುದ್ಧನು, ಒಂದು ಬಕೆಟ್, ಮೊದಲ ಹನಿ ಅಥವಾ ಕೊನೆಯ ಹನಿಯಿಂದ ತುಂಬುವುದಿಲ್ಲ ಎಂದು ಹೇಳಿದರು. ಅದು ಎಲ್ಲಾ ಹನಿಗಳ ಸಂಗ್ರಹದಿಂದ ತುಂಬಿರುತ್ತದೆ. ನಾವು ಅನುಭವಿಸುವ ಯಾವುದೇ ದುಃಖವು ನಾವು ಹಿಂದೆ ಮಾಡಿದ ಒಂದು ಅಸಹ್ಯಕರ ವಿಷಯದ ಫಲಿತಾಂಶವಾಗಿರುವುದಿಲ್ಲ, ಅಥವಾ ನಾವು ಹಿಂದೆ ಮಾಡಿದ ಹಲವಾರು ಅಸಹ್ಯಕರ ವಸ್ತುಗಳ ಸಂಗ್ರಹವೂ ಅಲ್ಲ. ಬದಲಿಗೆ, ನಾವು ಏನನ್ನಾದರೂ ಅನುಭವಿಸಲು, ಲೆಕ್ಕವಿಲ್ಲದಷ್ಟು ಕಾರಣಗಳು ಮತ್ತು ಪರಿಸ್ಥಿತಿಗಳು ಒಟ್ಟಿಗೆ ಬರಬೇಕು. 

ನಮಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಹೇಳೋಣ. ನಾವು ಮೊದಲು ಯಾರನ್ನಾದರೂ ಗಾಯಗೊಳಿಸಿರಬಹುದು, ಅದು ಕಾರಿನೊಂದಿಗೆ ಆಗಿರಬಹುದು, ಇಲ್ಲದಿರಬಹುದು. ಅಷ್ಟೇ ಅಲ್ಲ, ಅದು ನಮಗೆ ಹೊಡೆದ ಇತರ ವ್ಯಕ್ತಿಯ ಎಲ್ಲಾ ಕರ್ಮ ಸಾಮರ್ಥ್ಯಗಳನ್ನು ಸಹ ಒಳಗೊಂಡಿರುತ್ತದೆ. ಅದರ ನಂತರ ಹವಾಮಾನ, ಸಂಚಾರ ಪರಿಸ್ಥಿತಿಗಳು ಮತ್ತು ಆ ಸಮಯದಲ್ಲಿ ನಾವು ಹೊರಗೆ ಹೋದ ಕಾರಣಗಳನ್ನು ಒಳಗೊಂಡಿರುತ್ತದೆ. ರಸ್ತೆಯನ್ನು ನಿರ್ಮಿಸಿದ ಜನರಿರುತ್ತಾರೆ. ಕಾರು ನಮಗೆ ಡಿಕ್ಕಿ ಹೊಡೆಯುವುದನ್ನು ಅನುಭವಿಸಲು ಹಲವಾರು ಕಾರಣಗಳು ಮತ್ತು ಪರಿಸ್ಥಿತಿಗಳು ಒಟ್ಟಿಗೆ ಬರಬೇಕು. 

ನಾವು ಕಾರಣ ಮತ್ತು ಪರಿಣಾಮದ ಬಗೆಗಿರುವ ನಮ್ಮ ದೃಷ್ಟಿಕೋನವನ್ನು ವಿಸ್ತರಿಸಿದಾಗ ಮತ್ತು ಒಂದು ನಿರ್ದಿಷ್ಟ ಫಲಿತಾಂಶವನ್ನು ಪಡೆಯಲು ಅನೇಕ ಕಾರಣಗಳು ಮತ್ತು ಪರಿಸ್ಥಿತಿಗಳ ಒಟ್ಟಿಗೆ ಬರಬೇಕು ಎಂಬ ವಿಷಯವನ್ನು ಅರ್ಥಮಾಡಿಕೊಂಡಾಗ, ನಾವು "ನಾನು" ಎಂಬ ತಪ್ಪಿತಸ್ಥ ವ್ಯಕ್ತಿಯು ಅನುಭವಿಸಬೇಕು ಮತ್ತು ಅದು ಸಂಪೂರ್ಣವಾಗಿ ನಮ್ಮ ತಪ್ಪು ಎಂಬ ಘನವಾದ ವಿಷಯವನ್ನು ವಿಘಟಿಸಲು ಪ್ರಾರಂಭಿಸುತ್ತೇವೆ. ಹೌದು ನಾವು ಜವಾಬ್ದಾರರು, ಆದರೆ ಒಂದೆಡೆ, ನಮ್ಮ ನಡವಳಿಕೆಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೂ, ಘನವಾಗಿ ಅಸ್ತಿತ್ವದಲ್ಲಿರುವ "ನಾನು" ಎಂಬುದು ತಪ್ಪಿತಸ್ಥ, ಕೆಟ್ಟವನು ಎಂದು ಗುರುತಿಸುವುದಕ್ಕೂ ದೊಡ್ಡ ವ್ಯತ್ಯಾಸವಿರುತ್ತದೆ. 

ಕರ್ಮಕ್ಕೆ ಸಂಬಂಧಿಸಿದಂತೆ ಶೂನ್ಯತೆಯನ್ನು ಅರ್ಥಮಾಡಿಕೊಳ್ಳುವುದು

ಕಾರಣ ಮತ್ತು ಪರಿಣಾಮದ ಬಗೆಗಿರುವ ನಮ್ಮ ದೃಷ್ಟಿಕೋನವನ್ನು ವಿಸ್ತರಿಸುವುದರ ಜೊತೆಗೆ, ಇದು ಒಳಗೊಂಡಿರುವ "ಮೂರು ವಲಯಗಳು" ಎಂದು ಕರೆಯಲ್ಪಡುವುದನ್ನು ನಾವು ವಿಘಟಿಸಬೇಕು. ಈ ಮೂರು ವಲಯಗಳನ್ನು ರೂಪಿಸಲು ಹಲವು ಮಾರ್ಗಗಳಿವೆ, ಆದರೆ ಕರ್ಮದ ಪಕ್ವತೆಯ ವಿಷಯವಾಗಿ, ನಾವು ಅವುಗಳನ್ನು ಕರ್ಮದ ಪಕ್ವತೆಯನ್ನು ಅನುಭವಿಸುವ, ಕರ್ಮದಿಂದ ಪಕ್ವವಾಗಿ ನಾವು ಪ್ರಸ್ತುತವಾಗಿ ಅನುಭವಿಸುತ್ತಿರುವ ಮತ್ತು ನಮ್ಮ ಹಿಂದಿನ ಕಾರ್ಯಗಳ ಕರ್ಮ ಕಾರಣವನ್ನು ಅನುಭವಿಸುವ "ನಾನು” ಎಂಬುದನ್ನು ನಿರ್ದಿಷ್ಟಪಡಿಸಬಹುದು. ಮೂರು ವಲಯಗಳು ಪರಸ್ಪರ ಅವಲಂಬಿತವಾಗಿ ಉದ್ಭವಿಸುತ್ತವೆ ಮತ್ತು ಅವು ಅವಲಂಬಿತವಾಗಿ ಉದ್ಭವಿಸಿದ ಎಲ್ಲದರಿಂದ ಸ್ವತಂತ್ರವಾಗಿ ಸ್ವಯಂ-ಸ್ಥಾಪಿತವಾಗಿರುವುದಿಲ್ಲ ಎಂಬುದು ನಮಗೆ ಅರ್ಥವಾಗದಿದ್ದಾಗ, ನಾವು ಮಾನಸಿಕವಾಗಿ "ನಾನು" ಎಂಬ ಘನ ಅಸ್ತಿತ್ವವನ್ನು ರೂಪಿಸುತ್ತೇವೆ ಮತ್ತು ಗ್ರಹಿಸುತ್ತೇವೆ. ಈ ‘ನಾನು’ ಎನ್ನುವುದು ಮೊದಲು ಎಷ್ಟು ಕೆಟ್ಟದಾಗಿತ್ತು ಎಂದರೆ, ಈಗ ನಾವು ಅನುಭವಿಸುವ ದುಃಖವೆಲ್ಲದಕ್ಕೂ ನಾವು ಅರ್ಹರು ಎಂದು ಗ್ರಹಿಸುತ್ತೇವೆ. ಒಂದು ಅರ್ಥದಲ್ಲಿ, ನಾವು ಒಂದೋ ಬಲಿಪಶುವಾಗುತ್ತೇವೆ, ಅಥವಾ ಶಿಕ್ಷೆಯನ್ನು ಅನುಭವಿಸುತ್ತಿರುವ ಅಪರಾಧಿಯಾಗುತ್ತೇವೆ ಮತ್ತು ಆ ಘನ ಗುರುತನ್ನು ನಾವು ಹಿಡಿದಿಟ್ಟುಕೊಳ್ಳುತ್ತೇವೆ. ಇದು ಬಹಳಾ ಅತೃಪ್ತಿಕರವಾದ ಮನಸ್ಥಿತಿ, ಅಲ್ಲವೇ? ನಾವು ಪ್ರಸ್ತುತವಾಗಿ ಅನುಭವಿಸುತ್ತಿರುವುದು ಬಹಳಾ ಭಯಾನಕವಾದುದು ಎಂದು ಹೆಚ್ಚಾಗಿ ಭಾವಿಸುತ್ತೇವೆ ಮತ್ತು ಹಿಂದೆ ನಾವು ಮಾಡಿದ್ದನ್ನು ಸಹ ಬಹಳಾ ಭಯಾನಕವೆಂದು ಭಾವಿಸುತ್ತೇವೆ. ಇದೆಲ್ಲವೂ ಅಪರಾಧಿ ಭಾವನೆ ಮತ್ತು ನಮ್ಮ ಬಗೆಗಿರುವ ವಿಷಾದದಿಂದ ತುಂಬಿರುತ್ತದೆ. ಇದೆಲ್ಲವೂ ನಮ್ಮ ದೈನಂದಿನ ಜೀವನದ ಅನುಭವವನ್ನು ಹದಗೆಡುವಂತೆ ಮಾಡುತ್ತದೆ. 

ಆದ್ದರಿಂದ, ಶೂನ್ಯತೆಯ ಸ್ವಲ್ಪ ತಿಳುವಳಿಕೆಯನ್ನು ತರುವುದು ಬಹಳ ಮುಖ್ಯ. ಇದಿಲ್ಲದೆ, ವಿಷಯಗಳು ಸ್ವಲ್ಪ ಹೆಚ್ಚು ಘನವಾಗುತ್ತವೆ ಮತ್ತು ನಾವು ವಿವರಿಸಿದಂತೆ ಹೆಚ್ಚಿನ ಸಮಸ್ಯೆಗಳು ಮತ್ತು ದುಃಖಗಳನ್ನು ಉಂಟುಮಾಡುವ ವಿಪರೀತಗಳಿಗೆ ಹೋಗುವುದು ಬಹಳಾ ಸುಲಭವಾಗುತ್ತದೆ. ಆದರೆ ಶೂನ್ಯತೆಯ ಬಗ್ಗೆ ನಮಗೆ ಯಾವುದೇ ತಿಳುವಳಿಕೆ ಇಲ್ಲದಿದ್ದರೂ ಸಹ, ನಾವು ಏನು ಯೋಚಿಸುತ್ತೇವೆ, ಹೇಳುತ್ತೇವೆ ಅಥವಾ ಮಾಡುತ್ತೇವೆಯೋ ಅದರಿಂದ ಕರ್ಮದ ಪರಿಣಾಮಗಳು ಬೀರುತ್ತವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ವರ್ತಿಸಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ವಿನಾಶಕಾರಿ ರೀತಿಯಲ್ಲಿ ವರ್ತಿಸುವುದನ್ನು ತಡೆಯಬೇಕು ಮತ್ತು ಬದಲಿಗೆ ರಚನಾತ್ಮಕ ರೀತಿಯಲ್ಲಿ ವರ್ತಿಸಬೇಕು.

ವಿನಾಶಕಾರಿ ನಡವಳಿಕೆಯಿಂದ ದೂರವಿರುವುದು 

ಯಾವುದೇ ರೀತಿಯ ವಿನಾಶಕಾರಿ ನಡವಳಿಕೆಯಿಂದ ದೂರವಿರಲು ಬೌದ್ಧ ಗ್ರಂಥಗಳಲ್ಲಿ ಕಲಿಸಲಾಗುವ ಕಾರಣವು, ಹಾಗೆ ವರ್ತಿಸುವುದರ ಅನಾನುಕೂಲಗಳ ಬಗ್ಗೆ ಯೋಚಿಸುವುದಾಗಿರುತ್ತದೆ. ಆ ನಡವಳಿಕೆಯ ನೋವಿನ ಫಲಿತಾಂಶಗಳನ್ನು ಅನುಭವಿಸಲು ನಾವು ಬಯಸುವುದಿಲ್ಲವಾದ್ದರಿಂದ, ವಿನಾಶಕಾರಿಯಾದ ಏನೇ ಮಾಡಲು ಅಥವಾ ಹೇಳಬೇಕೆಂಬ ಭಾವನೆ ಬಂದಾಗ, ನಾವು ಹಾಗೆ ಮಾಡುವುದರಿಂದ ದೂರವಿರುತ್ತೇವೆ. ಆದರೆ ಹೆಚ್ಚಾಗಿ ನಾವು ಆ ರೀತಿಯಾಗಿ ಯೋಚಿಸುವುದಿಲ್ಲ. ವಿನಾಶಕಾರಿಯಾದದ್ದನ್ನು ಮಾಡದಿರುವುದು ಸರಿ ಎಂದು ಭಾವಿಸುವುದರಿಂದ ನಾವು ದೂರವಿರುತ್ತೇವೆ. ವಾಸ್ತವದಲ್ಲಿ ಇದು ಬಹಳಾ ಆಸಕ್ತಿದಾಯಕವಾಗಿರುತ್ತದೆ, ಏಕೆಂದರೆ ಮೋಸ, ವಿಧ್ವಂಸಕತೆ ಅಂತಹ ನಕಾರಾತ್ಮಕ ನಡವಳಿಕೆಗಳು ಸರಿಯಾಗಿದೆ ಅನ್ನಿಸುವುದಿಲ್ಲ. ಹಾಗಿದ್ದಲ್ಲಿ ಪರವಾಗಿಲ್ಲ. ಬಹುಶಃ ನಾವು ನಕಾರಾತ್ಮಕ ಪರಿಣಾಮಗಳ ಬಗ್ಗೆ ಸಕ್ರಿಯವಾಗಿ ಯೋಚಿಸುವುದಿಲ್ಲವಾದರೂ, ನಾವು ಅಂತಹ ನಡವಳಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. 

ಹಾಗಿದ್ದಲ್ಲಿ, ಸೊಳ್ಳೆಗಳನ್ನು ಕೊಂದರೆ? ನನಗೆ ನಿಮ್ಮ ಬಗ್ಗೆ ತಿಳಿದಿಲ್ಲ, ಆದರೆ ಆಫ್ರಿಕಾದಲ್ಲಿ ಸಫಾರಿಯಲ್ಲಿರುವಂತೆ ಸುತ್ತಾಡಿ, ಬೇಟೆಯಾಡಿ, ಕೊನೆಗೆ ನನ್ನ ಕೋಣೆಯಲ್ಲಿರುವ, ನನ್ನನ್ನು ರಾತ್ರಿಯಿಡಿ ಎಚ್ಚರವಿರಿಸುವ ಸೊಳ್ಳೆಯನ್ನು ಕೊಲ್ಲುವುದು ಸರಿ ಎನ್ನಿಸುವ ಅನುಭವ ನನಗಿದೆ. ಈ ಸೊಳ್ಳೆಯ ವಿರುದ್ಧ ಸಫಾರಿ ಹೋಗುವುದು ಎಷ್ಟು ಹಾಸ್ಯಾಸ್ಪದ ಎಂದು ನಾವು ಅರಿತುಕೊಂಡರೂ, ನಾವು ಸಫಾರಿಗೆ ಹೋಗುತ್ತೇವೆ, ಅಲ್ಲವೇ? ಅಸಂಬದ್ಧ ಉದಾಹರಣೆಗಳ ಬಗ್ಗೆ ಯೋಚಿಸುವುದು ಈ ಸಂದರ್ಭದಲ್ಲಿ ನಿಜವಾಗಿಯೂ ಸಹಾಯಕವಾಗಬಹುದು. 

ಈ ರೀತಿಯ ವಿನಾಶಕಾರಿ ನಡವಳಿಕೆಗಳ, ಸೊಳ್ಳೆಯನ್ನು ಕೊಲ್ಲುವುದರಿಂದ ಮತ್ತು ಸಹಿಷ್ಣುತೆಯಿಲ್ಲದಿರುವುದರಿಂದ ಉಂಟಾಗುವ ಅನಾನುಕೂಲಗಳ ಬಗ್ಗೆ ಯೋಚಿಸುವುದು ಅತ್ಯವಶ್ಯಕ. ಇದರರ್ಥ, ನಾವು ಸೊಳ್ಳೆಗೆ ನಮ್ಮ ರಕ್ತವನ್ನು ತಿನ್ನಿಸಬೇಕು ಎಂದಲ್ಲ, ಬದಲಿಗೆ ಸೊಳ್ಳೆಯನ್ನು ನಿಭಾಯಿಸಲು ಶಾಂತಿಯುತ ವಿಧಾನವನ್ನು ಬಳಸಲು ಪ್ರಯತ್ನಿಸಬೇಕು. ಅದು ಗೋಡೆಯ ಮೇಲೆ ಬಿದ್ದಾಗ ನಾವು ಅದರ ಮೇಲೆ ಒಂದು ಜಾರ್ ಅನ್ನು ಇರಿಸಬಹುದು, ನಂತರ ಜಾರ್ ಕೆಳಗೆ ಒಂದು ಕಾಗದದ ತುಂಡನ್ನು ಜಾರಿಸಿ, ಅದನ್ನು ನಮ್ಮ ಕೋಣೆಯಿಂದ ಹೊರಗೆ ಕೊಂಡೊಯ್ಯಬಹುದು. ಇದು ಬಹಳಾ ಪ್ರಾಯೋಗಿಕವಾದ ವಿಧಾನವಾಗಿದೆ, ಆದರೆ ನಾವು ಈಗಲೂ ಸಫಾರಿಗೆ ಹೋಗುತ್ತಿಲ್ಲ ಎಂಬುದರ ಬಗ್ಗೆ ಜಾಗರೂಕರಾಗಿರಬೇಕು. ಜಾರ್ ಮತ್ತು ಕಾಗದದ ತುಂಡನ್ನು ಬಳಸುವಾಗಲೂ ನಾವು ಮಾನಸಿಕವಾಗಿ ಸಫಾರಿ ಮಾಡಬಹುದು. 

ನಿಜ ಹೇಳಬೇಕೆಂದರೆ, ಈ ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಯೋಗ್ಯವಾಗಿದೆ. ಕಚ್ಚಿದಾಗ ತುರಿಕೆ ಅನುಭವಿಸಲು ನಾವು ಬಯಸುವುದಿಲ್ಲ ಎಂಬ ಕಾರಣಕ್ಕಾಗಿ ನಾವು ಸೊಳ್ಳೆಯನ್ನು ನಮ್ಮ ಕೋಣೆಯಿಂದ ಹೊರಹಾಕುತ್ತಿದ್ದೇವೆಯೇ ಅಥವಾ ಸೊಳ್ಳೆಯ ವಿಷಯದಲ್ಲಿ ಯೋಚಿಸುತ್ತಿದ್ದೇವೆಯೇ? ಹೌದು, ನಾವು ಸೊಳ್ಳೆಯನ್ನು ಆಹಾರದಿಂದ ವಂಚಿಸುತ್ತಿದ್ದೇವೆ. ನಾವು ನಿರಂತರವಾಗಿ ಸೊಳ್ಳೆಗಳು ಅಥವಾ ನೊಣಗಳನ್ನು ಕೊಲ್ಲುತ್ತಿದ್ದರೆ, ನಾವು ಯಾವ ರೀತಿಯ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ನಾವು ಪರಿಗಣಿಸಬೇಕು. ನಾವು ಬೆಳೆಸುತ್ತಿರುವ ಅಭ್ಯಾಸವೆಂದರೆ, ನಮಗೆ ಕಿರಿಕಿರಿ ಉಂಟುಮಾಡುವ ಯಾವುದೇ ವಿಷಯಕ್ಕೆ, ನಮ್ಮ ಮೊದಲ ಪ್ರತಿಕ್ರಿಯೆಯು ಅದನ್ನು ಕೊಲ್ಲುವುದಾಗಿರುತ್ತದೆ. ಶಾಂತಿಯುತ ವಿಧಾನಗಳನ್ನು ಬಳಸಲು ಪ್ರಯತ್ನಿಸುವ ಬದಲು ಕಿರಿಕಿರಿಯನ್ನು ನಿವಾರಿಸಲು ಹಿಂಸಾತ್ಮಕ ವಿಧಾನಗಳನ್ನು ಬಳಸುವುದು ಪ್ರವೃತ್ತಿಯಾಗಿದೆ. ಆದ್ದರಿಂದ, ನಾವು ಸೊಳ್ಳೆಯನ್ನು ಒಂದು ಜಾರ್ ಮತ್ತು ಕಾಗದದ ತುಂಡಿನಿಂದ ಬೇಟೆಯಾಡುವಾಗ, ಕನಿಷ್ಠ ಪಕ್ಷ ಈ ಸೊಳ್ಳೆಯ ಮೇಲಿನ ದ್ವೇಷದಿಂದ ಹಾಗೆ ಮಾಡಬೇಡಿ. ಅದು ನಮ್ಮ ಜಾಗವನ್ನು ಆಕ್ರಮಿಸಿರುವುದರ ಕಾರಣದಿಂದ ಅದು ಸ್ವೀಕಾರಾರ್ಹವಲ್ಲದ ಜೀವ ರೂಪ ಮತ್ತು ನಾವು ಅದನ್ನು ನಾಶ ಮಾಡಬೇಕು ಎಂದು ನಾವು ಭಾವಿಸಬಾರದು. 

ಸಹಜವಾಗಿ, ನಾವು ಬಳಸಬಹುದಾದ ಹೆಚ್ಚು ಸುಧಾರಿತ ಅಭ್ಯಾಸಗಳಿವೆ, ಉದಾಹರಣೆಗೆ ಈ ಸೊಳ್ಳೆಯು ಹಿಂದಿನ ಜನ್ಮಗಳಲ್ಲಿ ನಮ್ಮ ತಾಯಿಯಾಗಿದೆ ಎಂದು ನೋಡುವುದು ಇತ್ಯಾದಿ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ, ಅದನ್ನು ಪ್ರಾಮಾಣಿಕವಾಗಿ ಪಾಲಿಸುವುದು ಬಹಳಾ ಕಷ್ಟ. ವಾಸ್ತವದಲ್ಲಿ, ಕೆಲವು ವಿಷಯಗಳಿಗೆ ವಿನಾಶಕಾರಿಯಾಗಿ ವರ್ತಿಸದಿರುವುದು ಸರಿ ಎಂದು ತೋರುತ್ತದೆ, ಆದರೆ ಇತರ ವಿಷಯಗಳಿಗೆ ನಾವು ನಿಜವಾಗಿಯೂ ನಮ್ಮ ಪ್ರೇರಣೆಯನ್ನು ಪ್ರಜ್ಞಾಪೂರ್ವಕವಾಗಿ ಮರು ದೃಢೀಕರಿಸಬೇಕು. 

ಕರ್ಮ ಪ್ರವೃತ್ತಿಗಳು ಮತ್ತು ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುವ ಅಂಶಗಳು 

ನಾನು ಉಲ್ಲೇಖಿಸಲು ಬಯಸುವ ಇನ್ನೊಂದು ಅಂಶವು, ನಮ್ಮ ಕರ್ಮ ಪ್ರವೃತ್ತಿಗಳು ಮತ್ತು ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುವ ಮತ್ತು ಅವುಗಳನ್ನು ಪಕ್ವಗೊಳಿಸಲು ಕಾರಣವಾಗುವ ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸಿದೆ. ಸಾವಿನ ಸಮಯದಲ್ಲಿ, ಕರ್ಮ ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುವ ಅಂಶಗಳ ವಿಷಯವಾಗಿ ಉದ್ಭವಿಸುವ ಅವಲಂಬಿತ ಹನ್ನೆರಡು ಕೊಂಡಿಗಳ ಕುರಿತಾಗಿ ಇರುವ ಬೋಧನೆಗಳಲ್ಲಿ ಅವುಗಳನ್ನು ಚರ್ಚಿಸಲಾಗಿದೆ. ಈ ಅಂಶಗಳು ನಮ್ಮ ಮಾನಸಿಕ ನಿರಂತರತೆಯನ್ನು ಭವಿಷ್ಯದ ಪುನರ್ಜನ್ಮಕ್ಕೆ "ಎಸೆಯುತ್ತವೆ". 

ಈ ಅಂಶಗಳಲ್ಲಿ ಮೊದಲನೆಯದು ಹಂಬಲದ ಕೊಂಡಿ. "ಹಂಬಲ" ಎಂಬುದು ಈ ಕೊಂಡಿಗೆ ಇರುವ ಟಿಬೆಟಿಯನ್ ಪದದ ಅನುವಾದವಾಗಿದೆ, ಆದರೆ ಅದರ ಮೂಲ ಸಂಸ್ಕೃತ ಪದದ ಅರ್ಥ "ಬಾಯಾರಿಕೆ"ಯಾಗಿರುತ್ತದೆ. ಇನ್ನೊಂದು ಅಂಶವನ್ನು ಸಾಮಾನ್ಯವಾಗಿ "ಗ್ರಹಿಸುವುದು" ಎಂದು ಅನುವಾದಿಸಲಾಗುತ್ತದೆ. ಅದು ಸ್ಪಷ್ಟವಾದ ಅನುವಾದವಲ್ಲ ಏಕೆಂದರೆ "ನಿಜವಾದ ಅಸ್ತಿತ್ವಕ್ಕಾಗಿ ಗ್ರಹಿಸುವುದು" ಎಂಬಂತೆ, ಸಾಮಾನ್ಯವಾಗಿ "ಗ್ರಹಿಸುವುದು" ಎಂದು ಅನುವಾದಿಸಲಾಗುವ ಇತರ ಪದಗಳಿವೆ ಮತ್ತು ಅವು ಈ ಇತರ ಪದಗಳಂತೆ ಇರುವುದಿಲ್ಲ. ಇಲ್ಲಿರುವ ಪದದ ಅಕ್ಷರಶಃ ಅರ್ಥ "ಏನನ್ನಾದರೂ ಪಡೆಯುವುದು" ಎಂದಾಗಿರುತ್ತದೆ. ನಾನು "ಪಡೆಯುವವರು" ಎಂಬ ಪದಕ್ಕೆ ಆದ್ಯತೆ ನೀಡುತ್ತೇನೆ. ಇದು ಪಡೆಯುವವರ ಭಾವನೆ ಅಥವಾ ಪಡೆಯುವವರ ಮನೋಭಾವವಾಗಿದ್ದು, ನಾವು ಅದನ್ನು ಅಭಿವೃದ್ಧಿಪಡಿಸಿದ್ದಲ್ಲಿ, ಭವಿಷ್ಯದ ಪುನರ್ಜನ್ಮವನ್ನು ನಮಗಾಗಿ ಪಡೆಯುತ್ತದೆ. ಹನ್ನೆರಡು ಕೊಂಡಿಗಳ ವಿಷಯದಲ್ಲಿ, ಇವುಗಳನ್ನು ಭವಿಷ್ಯದ ಪುನರ್ಜನ್ಮಕ್ಕಾಗಿ ಕರ್ಮವನ್ನು ಎಸೆಯುವುದನ್ನು ಸಕ್ರಿಯಗೊಳಿಸುತ್ತದೆ ಎಂದು ವಿವರಿಸಲಾಗಿದ್ದರೂ, ಅವು ಪ್ರತಿ ಕ್ಷಣದಲ್ಲಿ ನಮ್ಮ ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳನ್ನು ಸಕ್ರಿಯಗೊಳಿಸುವ ಪರ್ಯಾಯ ಪ್ರಸ್ತುತಿಗಳಾಗಿರುತ್ತವೆ.

ಕರ್ಮದ ಕುರಿತಾದ ಬೋಧನೆಗಳು, ನಮ್ಮ ದೈನಂದಿನ ಜೀವನಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬ ವಿಷಯಕ್ಕೆ ಸಾಕಷ್ಟು ಪ್ರಸ್ತುತವಾಗಿರುತ್ತದೆ. ಮೊದಲನೆಯದಾಗಿ, ಹಂಬಲ ಎಂದರೇನು? ಈ ಬಾಯಾರಿಕೆ ಎನ್ನವುದೇನು? ಇದು ನಾವು ಅನುಭವಿಸುತ್ತಿರುವ ಸಂತೋಷ ಅಥವಾ ಅಸಂತೋಷದ ಒಂದು ನಿರ್ದಿಷ್ಟ ಮಟ್ಟವನ್ನು ಗುರಿಯಾಗಿರಿಸಿಕೊಂಡು ರೂಪಿಸುವ ಮತ್ತು ಮಹೋತ್ತರ ವಿಷಯವಾಗಿಸುವ ಮಾನಸಿಕ ಅಂಶವಾಗಿದೆ; ಅದು ಅದನ್ನು ಉತ್ಪ್ರೇಕ್ಷಿಸುತ್ತದೆ. ಸಂತೋಷದ ಮೇಲೆ ಕೇಂದ್ರೀಕರಿಸುವಾಗ, ಅದು ಕೊನೆಗೊಳ್ಳದಂತೆ ನಾವು ಹಂಬಲಿಸುತ್ತೇವೆ. ಅತೃಪ್ತಿ ಅಥವಾ ದುಃಖದ ಸಂದರ್ಭದಲ್ಲಿ, ಅದು ಕೊನೆಗೊಳ್ಳಬೇಕೆಂದು ನಾವು ಬಾಯಾರುತ್ತೇವೆ. ತಟಸ್ಥ ಭಾವನೆಗೆ ಸಂಬಂಧಿಸಿದಂತೆ, ಇದು ಒಟ್ಟುಗೂಡಿಸಿದ ಏಕಾಗ್ರತೆಯ ಉನ್ನತ ಸ್ಥಿತಿಗಳಲ್ಲಿ, ಧ್ಯಾನಗಳಲ್ಲಿ ಲೀನವಾದಾಗ, ನಾವು ಅನುಭವಿಸುವ ಅನುಭವವನ್ನು ಸೂಚಿಸುತ್ತದೆ. ಆ ಸ್ಥಿತಿಗಳಲ್ಲಿ, ತಟಸ್ಥ ಭಾವನೆಯು ಕಡಿಮೆಯಾಗದಂತೆ ನಾವು ಬಾಯಾರುತ್ತೇವೆ. ನಿಸ್ಸಂಶಯವಾಗಿ, ನಮ್ಮಲ್ಲಿ ಬಾಯಾರಿಕೆ ಮತ್ತು ಅಂಟಿಕೊಳ್ಳುವಿಕೆಯು ವಿಭಿನ್ನ ಹಂತಗಳಿರಬಹುದು. 

ಪಡೆಯುವವರು ಎಂಬುದು ಗೊಂದಲಮಯ ಭಾವನೆಗಳು ಮತ್ತು ತೊಂದರೆಗೊಳಿಸುವ ವರ್ತನೆಗಳ ಪಟ್ಟಿಯನ್ನು ಉಲ್ಲೇಖಿಸುತ್ತದೆ. ಅವುಗಳಲ್ಲಿ ಒಂದು ಅಥವಾ ಹೆಚ್ಚಿನವು, ಬಾಯಾರಿಕೆಯೊಂದಿಗೆ ಸೇರಿ, ನಮ್ಮ ಕರ್ಮ ಸಾಮರ್ಥ್ಯಗಳು ಮತ್ತು ಪ್ರವೃತ್ತಿಗಳ ಸಕ್ರಿಯಗೊಳಿಸುವಿಕೆಯನ್ನು ಪ್ರಚೋದಿಸುತ್ತದೆ. ಪಟ್ಟಿಯಿಂದ ಅತ್ಯಂತ ಗಮನಾರ್ಹವಾದದ್ದು, ನಮ್ಮನ್ನು ನಿಜವಾಗಿಯೂ ಅಸ್ತಿತ್ವದಲ್ಲಿರುವ "ನಾನು" ಎಂದು ಪರಿಗಣಿಸುವುದು, ಅದು ನಮ್ಮ ಒಟ್ಟುಗೂಡಿಗಳಲ್ಲಿ - ನಮ್ಮ ದೇಹ, ಮನಸ್ಸು, ಭಾವನೆಗಳು ಮತ್ತು ಮುಂತಾದವುಗಳಲ್ಲಿ - ಅಥವಾ ಅದರ ನಿಜವಾದ ಅಸ್ತಿತ್ವದಲ್ಲಿರುವ ಮಾಲೀಕನಾಗಿ "ನನ್ನದು" ಎಂದು ನಾವು ಅನುಭವಿಸುತ್ತೇವೆ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಬಾಯಾರಿಕೆಯು ಸಂತೋಷ ಅಥವಾ ಅಸಂತೋದ ಭಾವನೆಯ ಮಟ್ಟದ ಮೇಲೆ ಕೇಂದ್ರೀಕೃತವಾಗಿರುತ್ತದೆ, ಮತ್ತು ನಂತರ ಪಡೆಯುವವರ ಮನೋಭಾವವು ಅದನ್ನು ಅನುಭವಿಸುತ್ತಿರುವ "ನಾನು" ಎಂಬುದರ ಮೇಲೆ ಕೇಂದ್ರೀಕೃತವಾಗಿರುತ್ತದೆ. ಭಾವನೆಗಳ ಶೂನ್ಯತೆ ಮತ್ತು "ನಾನು" ಎಂಬ ಶೂನ್ಯತೆಯ ಬಗ್ಗೆ ನಮಗೆ ತಿಳುವಳಿಕೆ ಇಲ್ಲದಿದ್ದರೂ ಸಹ, ನಮ್ಮ ಕರ್ಮ ಸಾಮರ್ಥ್ಯಗಳನ್ನು ಸಕ್ರಿಯಗೊಳಿಸುವ ಈ ವಿಶ್ಲೇಷಣೆಯನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಬಹುದು. ಪ್ರತಿ ಕ್ಷಣದಲ್ಲಿ ನಾವು ಒಂದು ಮಟ್ಟದ ಸಂತೋಷ ಅಥವಾ ಅಸಂತೋಷವನ್ನು ಅನುಭವಿಸುತ್ತಿದ್ದೇವೆ. ಉದಾಹರಣೆಗೆ, "ಎಂಟು ಲೌಕಿಕ ಧರ್ಮಗಳು" ಎಂದು ಕರೆಯಲ್ಪಡುವ ಬೋಧನೆಗಳನ್ನು, ನಾವು ಇವುಗಳಿಗೆ ಇನ್ನೂ ಅನ್ವಯಿಸಬಹುದು. 

"ಲೌಕಿಕ," ಜಿಗ್ತೆನ್ ('ಜಿಗ್ರ್ಟೆನ್) ಎಂದು ಅನುವಾದಿಸಲಾದ ಟಿಬೆಟಿಯನ್ ಪದವು, "ಲೌಕಿಕ ಧರ್ಮಗಳು" ಎಂಬ ಪದದಲ್ಲಿನ ಎರಡು ಅಕ್ಷರಗಳಿಂದ ಮಾಡಲ್ಪಟ್ಟಿದೆ. ತೆನ್ ಎಂದರೆ ಒಂದು ಆಧಾರ, ಮತ್ತು ಜಿಗ್ ಎಂದರೆ ಬೇರ್ಪಟ್ಟು ನಾಶವಾಗುವ ವಸ್ತು. ಎಂಟು ಲೌಕಿಕ ಧರ್ಮಗಳು ಅಥವಾ ಎಂಟು ಲೌಕಿಕ ಕಾಳಜಿಗಳು ನಮ್ಮ ಜೀವನದಲ್ಲಿ ಸಂಭವಿಸುವ, ನಾಶವಾಗುವ ಆಧಾರಿತ ವಿಷಯಗಳ ಕಡೆಗೆ ನಾವು ಹೊಂದಿರುವ ವರ್ತನೆಗಳನ್ನು ಸೂಚಿಸುತ್ತವೆ. ಸ್ಥಿರವಾದ, ಆಧಾರವಿಲ್ಲದ, ಇದರ ಪರಿಣಾಮವಾಗಿ ಕ್ಷಣಿಕವಾದ ಜೀವನದಲ್ಲಿ ಸಂಭವಿಸುವ ವಿಷಯಗಳಲ್ಲಿ ನಾವು ಅತಿಯಾಗಿ ಸಂತೋಷಪಡುತ್ತೇವೆ ಅಥವಾ ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗುತ್ತೇವೆ. 

ಕರ್ಮ ಸಾಮರ್ಥ್ಯಗಳ ಈ ಕ್ರಿಯಾಕಾರಿಗಳ ವಿಷಯದಲ್ಲಿ, ಸಂಬಂಧಿತ ಲೌಕಿಕ ಧರ್ಮಗಳು ಸಂತೋಷವನ್ನು ಅನುಭವಿಸಿದಾಗ ಅತಿಯಾಗಿ ಸಂತೋಷಪಡುತ್ತವೆ ಮತ್ತು ನಾವು ಅಸಂತೋಷವಾಗಿರುವಾಗ ಖಿನ್ನತೆಗೆ ಒಳಗಾಗುತ್ತವೆ. ಈ ಸಂದರ್ಭಗಳಲ್ಲಿ, ಅಸ್ಥಿರವಾದ ಆಧಾರವನ್ನು ಹೊಂದಿರುವುದು ಯಾವುದು? ಅದು ನಾವು ಅನುಭವಿಸುತ್ತಿರುವ ಸಂತೋಷ ಅಥವಾ ಅಸಂತೋಷವಾಗಿರುತ್ತದೆ. ಸ್ಥಿರವಾದ ಆಧಾರವಿಲ್ಲದೆ, ಅವು ಕ್ಷಣಿಕ. ಆದರೆ ಅವು ಘನವಾಗಿ ಅಸ್ತಿತ್ವದಲ್ಲಿವೆ ಎಂಬಂತೆ ನಾವು ಅವುಗಳನ್ನು ಉಲ್ಬಣಗೊಳಿಸುವುದರಿಂದ, ಅವು ಶಾಶ್ವತವಾಗಿ ಉಳಿಯುತ್ತವೆ ಎಂದು ಭಾವಿಸುವುದರಿಂದ, ಅವು ಸಂಭವಿಸಿದಾಗ ನಾವು ಅತಿಯಾಗಿ ಸಂತೋಷಪಡುವ ಅಥವಾ ಸಂಪೂರ್ಣವಾಗಿ ಖಿನ್ನತೆಗೆ ಒಳಗಾಗುವ ಮೂಲಕ ಅತಿಯಾಗಿ ಪ್ರತಿಕ್ರಿಯಿಸುತ್ತೇವೆ. ಬಾಯಾರಿದ ವ್ಯಕ್ತಿಯು ಕೇವಲ ಒಂದು ಗುಟುಕು ನೀರನ್ನು ಪಡೆಯುವಂತೆ, ನಾವು ಸಂತೋಷದ ರುಚಿಯನ್ನು ಅನುಭವಿಸಿದಾಗ ನಾವು ಅತಿಯಾಗಿ ಸಂತೋಷಪಡುತ್ತೇವೆ ಮತ್ತು ಅದನ್ನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ. ಮತ್ತು ಬಾಯಾರಿದ ವ್ಯಕ್ತಿಯು ನೀರಿಲ್ಲದೆ ಬಳಲುತ್ತಿರುವಂತೆ, ನಾವು ಅಸಂತೋಷರಾದಾಗ ಮತ್ತು ಅದು ಹೋಗಬೇಕೆಂದು ಹಂಬಲಿಸಿದಾಗ ನಾವೆಲ್ಲರೂ ಖಿನ್ನತೆಗೆ ಒಳಗಾಗುತ್ತೇವೆ.

ಸಂತೋಷ ಮತ್ತು ಅಸಂತೋಷದ ಭಾವನೆಗಳಿಗಾಗಿ ಸಮಚಿತ್ತತೆ 

ಭಾರತೀಯ ಗುರು ಶಾಂತಿದೇವ ಈ ವರ್ತನೆಗಳನ್ನು ಬಾಲಿಶ ಎಂದು ಕರೆಯುತ್ತಾರೆ. ನಾವು ಅನುಭವಿಸುವ ಸಂತೋಷ ಅಥವಾ ಅಸಂತೋಷಕ್ಕೆ, ಈ ರೀತಿಯಾಗಿರುವ ಬಾಲಿಶ ಪ್ರತಿಕ್ರಿಯೆಗಳನ್ನು ನಾವು ಮೀರಬೇಕು. ಹೀಗೆ ಮಾಡಲು, ನಾವು ಸಮಚಿತ್ತತೆಯನ್ನು ಬೆಳೆಸಿಕೊಳ್ಳಬೇಕು. "ಸಮಚಿತ್ತತೆ" ಎಂದರೆ ನಾವು ಅನುಭವಿಸುವ ಯಾವುದೇ ಸಂತೋಷದ ಭಾವನೆಗಳಿಗೆ ಅತಿಯಾಗಿ ಪ್ರತಿಕ್ರಿಯಿಸದಿರುವುದು ಏಕೆಂದರೆ, ಸರಳವಾಗಿ ಹೇಳುವುದಾದರೆ, ಸಂಸಾರದ ಸ್ವರೂಪವೆಂದರೆ ಅದು ಮೇಲೆ ಕೆಳಗೆ ಹೋಗುತ್ತಿರುತ್ತದೆ. ಕೆಲವೊಮ್ಮೆ ನಾವು ಸಂತೋಷವನ್ನು ಅನುಭವಿಸುತ್ತೇವೆ ಮತ್ತು ಕೆಲವೊಮ್ಮೆ ನಾವು ಅಸಂತೋಷವನ್ನು ಅನುಭವಿಸುತ್ತೇವೆ. ಇದು ಸಹಜ. ಮತ್ತು ನಾವು ಯಾವಾಗ ಸಂತೋಷ ಅಥವಾ ಅತೃಪ್ತರಾಗುತ್ತೇವೆ ಎಂದು ಊಹಿಸಲು ಯಾವುದೇ ಮಾರ್ಗವಿಲ್ಲ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಮ್ಮ ಮನಸ್ಥಿತಿ ತಕ್ಷಣವೇ ಬದಲಾಗಬಹುದು. ನಾವು ಅನುಭವಿಸುವ ಸಂತೋಷ ಅಥವಾ ಅತೃಪ್ತಿಯ ಮಟ್ಟವು ನಾಟಕೀಯವಾಗಿರಬೇಕಾಗಿಲ್ಲ. ಅದು ಬಹಳಾ ಕಡಿಮೆ ಮಟ್ಟದಲ್ಲಿರಬಹುದು. ಇಲ್ಲಿರುವ ಪ್ರಮುಖ ಪದಗಳೆಂದರೆ, ನಾವು ಏನೇ ಭಾವಿಸಿದರೂ, ಅದು "ವಿಶೇಷವೇನೂ ಅಲ್ಲ". 

ವಾಸ್ತವದಲ್ಲಿ, ಇದೊಂದು ಬಹಳಾ ಆಳವಾದ ಅಂಶವಾಗಿದೆ. "ವಿಶೇಷವಾದದ್ದು ಏನೂ ಇಲ್ಲ" ಎಂದರೆ ಆಶ್ಚರ್ಯಕರವಾದದ್ದು ಏನೂ ಇಲ್ಲ, ಅಸಾಮಾನ್ಯವಾದದ್ದು ಏನೂ ಇಲ್ಲ. ನಾವು ಏನನ್ನು ನಿರೀಕ್ಷಿಸುತ್ತೇವೆ? ಖಂಡಿತ, ವಿಷಯಗಳು ಮೇಲೆ ಕೆಳಗಾಗುತ್ತಲೇ ಇರುತ್ತದೆ, ಆದ್ದರಿಂದ ನಾವು ಅದನ್ನು ದೊಡ್ಡ ವಿಷಯವಾಗಿಸುವ ಅಗತ್ಯವಿಲ್ಲ. ಜೀವನದಲ್ಲಿ ನಾವು ಏನೇ ಅನುಭವಿಸಿದರೂ, ಕೆಲವೊಮ್ಮೆ ನಾವು ಸಂತೋಷವಾಗಿರುತ್ತೇವೆ ಮತ್ತು ಕೆಲವೊಮ್ಮೆ ಅತೃಪ್ತರಾಗಿರುತ್ತೇವೆ. ಹೌದು, ಅತೃಪ್ತಿಯು ವಿನಾಶಕಾರಿಯಾಗಿ ವರ್ತಿಸುವುದರಿಂದ ಬರುತ್ತದೆ ಮತ್ತು ಸಂತೋಷವು ರಚನಾತ್ಮಕವಾಗಿ ವರ್ತಿಸುವುದರಿಂದ ಬರುತ್ತದೆ ಎಂದು ನಾವು ಅರಿತುಕೊಳ್ಳುತ್ತೇವೆ, ಆದರೆ ನಾವು ಅನುಭವಿಸುವುದು ಬಹಳಾ ಅದ್ಭುತ ಅಥವಾ ಭಯಾನಕವೆಂಬ ವಿಷಯಕ್ಕೆ ಅಂಟಿಕೊಳ್ಳುವ ಅಗತ್ಯವಿಲ್ಲ. ಮತ್ತು "ನಾನು ತುಂಬಾ ಸಂತೋಷವಾಗಿದ್ದೇನೆ" ಅಥವಾ "ನಾನು ಬಡಪಾಯಿ, ನಾನು ತುಂಬಾ ದುಃಖಿತನಾಗಿದ್ದೇನೆ" ಎಂಬಂತಹ ದೊಡ್ಡದಾದಾ ಘನವಾದ "ನಾನು" ಎಂಬುದಕ್ಕೆ ಅಂಟಿಕೊಳ್ಳುವ ಅಗತ್ಯವಿಲ್ಲ. 

ಸ್ಪಷ್ಟವಾಗಿ, ಸಾಂಪ್ರದಾಯಿಕವಾಗಿ, ನಾವು ಸಂತೋಷವಾಗಿರಲು ಬಯಸುತ್ತೇವೆ ಮತ್ತು ನಾವು ಅಸಂತೋಷವಾಗಿರಲು ಬಯಸುವುದಿಲ್ಲ. ಇದಲ್ಲದೆ, ಸಾಂಪ್ರದಾಯಿಕವಾಗಿ, ನಮ್ಮ ಬೌದ್ಧ ಆಚರಣೆಗಳೊಂದಿಗೆ ನಾವು ವಿಮೋಚನೆ ಮತ್ತು ಜ್ಞಾನೋದಯವನ್ನು ಗುರಿಯಾಗಿಸಿಕೊಂಡಿದ್ದೇವೆ, ಅಲ್ಲಿ ನಾವು ಅಸಂತೋಷ ಮತ್ತು ದುಃಖದಿಂದ ಮುಕ್ತರಾಗುತ್ತೇವೆ. ಆದರೆ ನಾವು ಅದರಿಂದ ದೊಡ್ಡ ವಿಷಯವಾಗಿ ಮಾಡುವುದಿಲ್ಲ. ಇದು ಮುಖ್ಯ. ಇದು ನಮ್ಮ ದೈನಂದಿನ ಜೀವನದಲ್ಲಿ, ಕರ್ಮದ ಕುರಿತಾದ ಈ ಬೋಧನೆಗಳ ಪ್ರಸ್ತುತತೆಯನ್ನು ಮತ್ತು ನಮಗೆ ಹೆಚ್ಚಿನ ಮನಸ್ಸಿನ ಶಾಂತಿಯನ್ನು ತರುವುದನ್ನು ಸೂಚಿಸುತ್ತದೆ. ನಾವು ಪ್ರತಿದಿನ ಹಾದುಹೋಗುವಾಗ ನಮ್ಮ ಬದಲಾಗುತ್ತಿರುವ ಮನಸ್ಥಿತಿಗಳ ವಿಷಯದಲ್ಲಿ ಸಮಚಿತ್ತತೆಯನ್ನು ಹೊಂದುವುದರಿಂದ ಮನಸ್ಸಿನ ಶಾಂತಿ ಬರುತ್ತದೆ ಏಕೆಂದರೆ, ಸ್ವಾಭಾವಿಕವಾಗಿ, ಕೆಲವೊಮ್ಮೆ ನಾವು ಸಂತೋಷವಾಗಿರುತ್ತೇವೆ ಮತ್ತು ಕೆಲವೊಮ್ಮೆ ಅಸಂತೋಷವಾಗಿರುತ್ತೇವೆ. ಅದು ಸಂಸಾರದ ಭಾಗವಾಗಿರುತ್ತದೆ; ಅದು ನಿರೀಕ್ಷಿತವಾಗಿರುತ್ತದೆ. ನಮ್ಮ ಯಾವುದೋ ಒಂದು ರೀತಿಯ ಧರ್ಮಾಚರಣೆಯನ್ನು ಮುಂದುವರಿಸುತ್ತೇವೆ. ಯಾವುದೋ ಒಂದು ಕ್ಷಣದಲ್ಲಿ ನಾವು ಬಹಳಾ ಸಂತೋಷವಾಗಿರದಿದ್ದರೆ, ಏನಾದೀತು? 

ಜೀವನದ ಏರಿಳಿತಗಳು 

ಇದರರ್ಥ ನಾವು ಯಾವುದೇ ಭಾವನೆಗಳನ್ನು ಹೊಂದುವುದನ್ನು ನಿಲ್ಲಿಸಬೇಕು, ನಾವು ಸಂತೋಷವಾಗಿರುವುದನ್ನು ಅಥವಾ ಅತೃಪ್ತರಾಗಿರುವುದನ್ನು ನಿಲ್ಲಿಸಬೇಕು ಮತ್ತು ಯಾವುದೇ ಭಾವನೆಗಳಿಲ್ಲದ ವ್ಯಕ್ತಿಯಾಗಬೇಕು ಎಂದಲ್ಲ. ಇದು ಖಂಡಿತವಾಗಿಯೂ ನಿಜವಲ್ಲ. ಸಂತೋಷವಾಗಿರುವುದು ಅಥವಾ ಅಸಂತೋಷವಾಗಿರುವುದು ಪರವಾಗಿಲ್ಲ. ಏನಾದರೂ ಒಳ್ಳೆಯದು ಸಂಭವಿಸಿದರೆ, ನಾವು ಸಂತೋಷವಾಗಿರುತ್ತೇವೆ. ತುಂಬಾ ಒಳ್ಳೆಯದಲ್ಲದದ್ದು ಸಂಭವಿಸಿದರೆ, ನಾವು ಬಹಳಾ ಸಂತೋಷವಾಗಿರುವುದಿಲ್ಲ. ಉದಾಹರಣೆಗೆ, ನಾವು ರೆಸ್ಟೋರೆಂಟ್‌ಗೆ ಹೋಗುತ್ತೇವೆ ಮತ್ತು ನಮ್ಮ ನೆಚ್ಚಿನ ಖಾದ್ಯವನ್ನು ಆರ್ಡರ್ ಮಾಡಲು ಬಯಸುತ್ತೇವೆ, ಆದರೆ ಅವರ ಬಳಿ ಅದು ಇರುವುದಿಲ್ಲ. ಅದು ಖಾಲಿಯಾಗಿದೆ, ಆದ್ದರಿಂದ ನಮಗೆ ಬಹಳಾ ಸಂತೋಷವಾಗುವುದಿಲ್ಲ. ಇದು ದುಃಖಕರ, ಆದರೆ ನಾವು ಇದನ್ನು ದೊಡ್ಡ ವಿಷಯವನ್ನಾಗಿಸುವುದಿಲ್ಲ. ಅತೃಪ್ತಿ ಅನುಭವಿಸುವುದು ಸರಿ, ಆದರೆ ಅದನ್ನೇ ಹಿಡಿದಿಟ್ಟುಕೊಂಡು ಕೆಟ್ಟ ಮನಸ್ಥಿತಿಯಲ್ಲಿ ಸಿಲುಕಿಕೊಳ್ಳಬೇಡಿ. 

ಬಹುಶಃ ಇದೊಂದು ಮೂರ್ಖ ಉದಾಹರಣೆಯಾಗಿರಬಹುದು, ಆದರೆ ಹೆಚ್ಚು ಪ್ರಸ್ತುತವಾದ ಉದಾಹರಣೆಯೆಂದರೆ ಪ್ರೀತಿಪಾತ್ರರ ಸಾವು. ನಾವು ದುಃಖಿತರಾಗುವುದು ಮತ್ತು ಅತೃಪ್ತರಾಗುವುದು ಸಹಜ. ಅದರಲ್ಲಿ ಯಾವುದೇ ತಪ್ಪಿಲ್ಲ. ವಾಸ್ತವದಲ್ಲಿ, ದುಃಖಿಸದಿರುವುದು ಬಹಳಾ ಅನಾರೋಗ್ಯಕರವಾದ ವಿಷಯ. ಆದರೆ, ಅದಕ್ಕೆ ಅಂಟಿಕೊಳ್ಳಬೇಡಿ ಮತ್ತು ಆ ದುಃಖವನ್ನು ಬಹಳಾ ದುಃಖಕರವಾಗಿರುವ, ಘನವಾದ "ನಾನು" ಎಂಬುದರ ನಿಜವಾದ ಗುರುತಾಗಿ ಗುರುತಿಸಬೇಡಿ. ಇನ್ನೊಂದು ದೃಷ್ಟಿಕೋನದಲ್ಲಿ ನೋಡಿದರೆ, ನಾವು ಯಾರೊಂದಿಗಾದರೂ, ನಿರಂತರವಾಗಿ "ನಾನು ಬಹಳಾ ಸಂತೋಷವಾಗಿದ್ದೇನೆ. ಈ ಸಮಯ ಚೆನ್ನಾಗಿದೆ ಅಲ್ಲವೇ?" ಎಂದು ಹೇಳುತ್ತಿದ್ದರೆ, ಇದು ಇಡೀ ಮನಸ್ಥಿತಿಯನ್ನು ಹಾಳುಮಾಡುತ್ತದೆ, ಅಲ್ಲವೇ? ಜೀವನದ ಏರಿಳಿತಗಳನ್ನು ಅನುಭವಿಸಿ. ನಾವು ಸಂತೋಷವಾಗಿರುತ್ತೇವೆ ಅಥವಾ ಅತೃಪ್ತರಾಗಿರುತ್ತೇವೆ - ಇದು ದೊಡ್ಡ ವಿಷಯವಲ್ಲ, ವಿಶೇಷವೇನಲ್ಲ. 

ಈ ಸಮಚಿತ್ತತೆಯ ಜೊತೆಗೆ, ನಾವು ಅತೃಪ್ತರಾಗಿರುವಾಗ ಮತ್ತು ವಿಷಯಗಳು ಕೆಟ್ಟದಾಗಿ ನಡೆಯುತ್ತಿರುವಾಗ ನಾವು ಬೆಳೆಸಿಕೊಳ್ಳಬಹುದಾದ ಇನ್ನೊಂದು ವರ್ತನೆ ಮತ್ತು ದೃಷ್ಟಿಕೋನವೆಂದರೆ ಅದಕ್ಕೆ ಕರ್ಮದ ಕಾರಣ ಏನಾಗಿರಬಹುದು ಎಂಬುದನ್ನು ನೋಡುವುದಾಗಿರುತ್ತದೆ. ನಾವು ಚರ್ಚಿಸಿದಂತೆ, ನಾವು ಮಾದರಿಯನ್ನು ಪರಿಶೀಲಿಸಬಹುದು ಮತ್ತು ಗಮನಿಸಲು ಪ್ರಯತ್ನಿಸಬಹುದು, ಅದಕ್ಕೆ ಹೋಲುವ ಯಾವುದನ್ನಾದರೂ ನಾವು ಹೇಗೆ ಪುನರಾವರ್ತಿಸುತ್ತಿದ್ದೇವೆ ಎಂಬುದನ್ನು ನೋಡಬಹುದು ಮತ್ತು ಅದರ ಮೇಲೆ ಕೆಲಸ ಮಾಡಬಹುದು. 

ಲ್ಯಾಮ್-ರಿಮ್ ಕ್ರಮವಾದ ಹಂತಗಳಲ್ಲಿ ಪ್ರೇರಣೆಯ ಮೂರು ಹಂತಗಳು

ನಾನು ಉಲ್ಲೇಖಿಸಲು ಬಯಸುವ ಇನ್ನೊಂದು ವಿಷಯವೆಂದರೆ ಲ್ಯಾಮ್-ರಿಮ್‌, ಕ್ರಮವಾದ ಹಂತಗಳ ಮಾರ್ಗದಲ್ಲಿ ಪ್ರಸ್ತುತಪಡಿಸಲಾದ ಮೂರು ಹಂತದ ಪ್ರೇರಣೆಗಳು. ಸಾಮಾನ್ಯವಾಗಿ, ಕರ್ಮದ ಕುರಿತಾದ ಬೋಧನೆಗಳನ್ನು ಪ್ರೇರಣೆಯ ಆರಂಭಿಕ ವ್ಯಾಪ್ತಿಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ನಾವು ವಿನಾಶಕಾರಿಯಾಗಿ ವರ್ತಿಸುವುದರಿಂದ ದೂರವಿರುತ್ತೇವೆ ಏಕೆಂದರೆ ನಾವು ದೂರವಿರದಿದ್ದರೆ ನಾವು ಅನುಭವಿಸುವ ದುಃಖದ ಪರಿಣಾಮಗಳ ಬಗ್ಗೆ ನಾವು ಭಯಪಡುತ್ತೇವೆ. ನಮ್ಮ ಕ್ರಿಯೆಗಳ ಪರಿಣಾಮವಾಗಿ ಇತರರು ಏನು ಅನುಭವಿಸುತ್ತಾರೆಂದು ನಮಗೆ ತಿಳಿದಿರುವುದಿಲ್ಲ. ಅವರ ಮೇಲೆ ಅವುಗಳ ಪರಿಣಾಮವನ್ನು ನಾವು ಖಾತರಿಪಡಿಸಲು ಸಾಧ್ಯವಿಲ್ಲ. ಆದರೆ, ನಮ್ಮ ಕಡೆಯಿಂದ, ನಮ್ಮ ವಿನಾಶಕಾರಿ ನಡವಳಿಕೆಯ ಪರಿಣಾಮವಾಗಿ ನಾವು ಅನುಭವಿಸುವ ದುಃಖ ಮತ್ತು ಅತೃಪ್ತಿಯನ್ನು ನಾವು ನಿಜವಾಗಿಯೂ ಬಯಸುವುದಿಲ್ಲ. ನಾವು ಅದರಿಂದ ಭಯಪಡುತ್ತೇವೆ ಅಥವಾ ಭಯಬೀತರಾಗುತ್ತೇವೆ, ಆದರೆ ನಾವು ಅದನ್ನು ಆರೋಗ್ಯಕರ ರೀತಿಯಲ್ಲಿ ಮಾಡುತ್ತೇವೆ. ನಾವು ಶಿಕ್ಷೆಯ ಭಯದ ಬಗ್ಗೆ ಮಾತನಾಡುತ್ತಿಲ್ಲ. ನಾವು ನಿಜವಾಗಿಯೂ ದುಃಖ ಮತ್ತು ಅತೃಪ್ತಿಯನ್ನು ತಪ್ಪಿಸಲು ಬಯಸುತ್ತೇವೆ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಭವಿಷ್ಯದ ಜೀವನದಲ್ಲಿ ದುಃಖ ಮತ್ತು ಅತೃಪ್ತಿಯನ್ನು ತಪ್ಪಿಸಲು ನಾವು ಬಯಸುತ್ತೇವೆ. ಇದು ಆರಂಭಿಕ ವ್ಯಾಪ್ತಿಯ ಪ್ರೇರಣೆಯಾಗಿರುತ್ತದೆ. 

ಮಧ್ಯಂತರ ಮಟ್ಟದಲ್ಲಿ, ನಾವು ಎಲ್ಲಾ ರೀತಿಯ ಕಡ್ಡಾಯ ಕರ್ಮ ನಡವಳಿಕೆಯನ್ನು ತಪ್ಪಿಸಲು ಬಯಸುತ್ತೇವೆ, ಏಕೆಂದರೆ ನಾವು ಮುಕ್ತಿಯನ್ನು ಪಡೆಯಲು ಬಯಸುತ್ತೇವೆ. ನಾವು ಮುಕ್ತಿಯನ್ನು ಪಡೆಯದಿದ್ದರೆ, ಸಂಸಾರದ ಸುಖ ಮತ್ತು ಅತೃಪ್ತಿಯ ಏರಿಳಿತಗಳು ಮುಂದುವರಿಯುತ್ತವೆ. ಅದೆಷ್ಟು ಭಯಾನಕವಾಗಿರುತ್ತದೆ ಅಲ್ಲವೇ?  

ಪ್ರೇರಣೆಯ ಮುಂದುವರಿದ ವ್ಯಾಪ್ತಿಯೊಂದಿಗೆ, ನಾವು ಎಲ್ಲಾ ರೀತಿಯ ಪ್ರಚೋದಿತ ಕರ್ಮದ ನಡವಳಿಕೆಯಿಂದ ದೂರವಿರಲು ಬಯಸುತ್ತೇವೆ ಏಕೆಂದರೆ ಅವು ಇತರರಿಗೆ ಸಹಾಯ ಮಾಡುವ ನಮ್ಮ ಸಾಮರ್ಥ್ಯಕ್ಕೆ ನಿಜವಾಗಿಯೂ ಅಡ್ಡಿಯಾಗುತ್ತವೆ. ನಾವು ನಿರಂತರವಾಗಿ ಈ ಏರಿಳಿತಗಳನ್ನು ಎದುರಿಸುತ್ತಿದ್ದರೆ ಮತ್ತು ಕೆಲವು ಅಹಿತಕರ ವಿಷಯಗಳು ನಿರಂತರವಾಗಿ ನಮಗೆ ಸಂಭವಿಸಿದಾಗ ನಾವು ಇತರರಿಗೆ ಹೇಗೆ ತಾನೆ ಸಹಾಯ ಮಾಡಲು ಸಾಧ್ಯ? ನಮ್ಮ ಮುಖ್ಯ ಆಲೋಚನೆಯೆಂದರೆ, ಇದು ಇತರರಿಗೆ ಸಹಾಯ ಮಾಡುವ ನಮ್ಮ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಾವು ನಿಜವಾಗಿಯೂ ಇತರರಿಗೆ ನೋವುಂಟುಮಾಡುವ ಬಗ್ಗೆ ಮಾನವೀಯ ರೀತಿಯಲ್ಲಿ ಯೋಚಿಸುತ್ತಿಲ್ಲ. ಅವರಿಗೆ ಸಹಾಯ ಮಾಡುವ ನಮ್ಮ ಸಾಮರ್ಥ್ಯಕ್ಕೆ ಇರುವ ಅಡೆತಡೆಗಳ ಬಗ್ಗೆ ಹೆಚ್ಚು ಯೋಚಿಸುತ್ತಿದ್ದೇವೆ. 

ನೈತಿಕ ನಡವಳಿಕೆಯ ಬಗೆಗಿನ ಬೌದ್ಧ ಮನೋಭಾವ ಮತ್ತು "ನಾನು ಮಾಡುವ ಕೆಲಸದಿಂದ ಯಾರಿಗೂ ನೋವುಂಟು ಮಾಡದಿರುವವರೆಗೆ, ಅದು ಸರಿಯಾಗಿರುತ್ತದೆ" ಎಂಬ ಪಾಶ್ಚಿಮಾತ್ಯ ಮಾನವೀಯ ವಿಧಾನದ ನಡುವೆ ದೊಡ್ಡ ವ್ಯತ್ಯಾಸವಿದೆ. ಆ ವಿಧಾನದಲ್ಲಿ ಯಾವುದೇ ತಪ್ಪಿಲ್ಲ, ನಮ್ಮ ನಡವಳಿಕೆಯು ಇತರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನಿಜವಾಗಿಯೂ ಖಾತರಿಪಡಿಸಲು ಸಾಧ್ಯವಿಲ್ಲ. ಉದಾಹರಣೆಗೆ, ನಾವು ಒಬ್ಬರಿಂದ ಏನನ್ನಾದರೂ ಕದಿಯಬಹುದು, ಅದು ಹದಗೆಟ್ಟ ಸ್ಥಿತಿಯಲ್ಲಿದ್ದ ಕಾರಣ ಅವರು ಬಹಳಾ ಸಂತೋಷಪಡುತ್ತಾರೆ ಮತ್ತು ಅವರು ಅದರ ವಿಮೆಯನ್ನು ಸಂಗ್ರಹಿಸಬಹುದು. ಮತ್ತೊಂದೆಡೆ, ನಾವು ಯಾರಿಗಾದರೂ ದೊಡ್ಡ ಮೊತ್ತದ ಹಣವನ್ನು ನೀಡಬಹುದು ಮತ್ತು ಅವರು ದರೋಡೆಗೊಳಗಾಗಬಹುದು ಮತ್ತು ಅವರ ಕೊಲೆಯಾಗಬಹುದು. 

ಖಂಡಿತವಾಗಿಯೂ ನಾವು ಬೌದ್ಧಧರ್ಮದಲ್ಲಿ ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಇತರರಿಗೆ ಹಾನಿ ಮಾಡಲು ಬಯಸುವುದಿಲ್ಲ. ಆದರೆ, ಪ್ರೇರಣೆಯ ಮುಂದುವರಿದ ವ್ಯಾಪ್ತಿಯೊಂದಿಗೆ, ಮುಖ್ಯವಾಗಿ, ಇತರರಿಗೆ ಸಹಾಯ ಮಾಡುವ ನಮ್ಮ ಸಾಮರ್ಥ್ಯವನ್ನು ಮಿತಿಗೊಳಿಸುವ ಯಾವುದನ್ನೂ ನಾವು ಮಾಡಲು ಬಯಸುವುದಿಲ್ಲ. ಆ ರೀತಿಯ ಪ್ರೇರಣೆ, ಜ್ಞಾನೋದಯದ ಕಡೆಗೆ ಕೆಲಸ ಮಾಡುವ ಸಂಪೂರ್ಣ ಬೌದ್ಧ ಆಧ್ಯಾತ್ಮಿಕ ಮಾರ್ಗದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ ಮತ್ತು ನಾವು ಸಾಧ್ಯವಾದಷ್ಟು ಸಂಪೂರ್ಣವಾಗಿ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಬೌದ್ಧಧರ್ಮದಲ್ಲಿನ ಕರ್ಮದ ಚರ್ಚೆಯಲ್ಲಿ ಇದು ಮುಖ್ಯವಾಗಿರುತ್ತದೆ. 

ನಮ್ಮ ದೈನಂದಿನ ನಡವಳಿಕೆಯ ವಿಷಯದಲ್ಲಿ, ಈ ಮಹಾಯಾನ ಪ್ರೇರಣೆಯ ಪ್ರಸ್ತುತತೆಯೆಂದರೆ ಅದು ನಮ್ಮ ನೈತಿಕ ಸ್ವಯಂ-ಶಿಸ್ತಿಗೆ ಬಲವನ್ನು ಸೇರಿಸುತ್ತದೆ. ನಾವು ವಿನಾಶಕಾರಿಯಾಗಿ ವರ್ತಿಸಿದರೆ, ನಾವು ನಿಜವಾಗಿಯೂ ಇತರರಿಗೆ ಹೇಗೆ ಸಹಾಯ ಮಾಡಲು ಸಾಧ್ಯ? ಉದಾಹರಣೆಗೆ, ನಾವು ಯಾವಾಗಲೂ ಇತರರಿಗೆ ಮೋಸ ಮಾಡುತ್ತಿದ್ದರೆ, ಯಾರೂ ನಮ್ಮನ್ನು ನಂಬಲು ಸಾಧ್ಯವಾಗುವುದಿಲ್ಲ. ನಂತರ, ನಾವು ಯಾರಿಗಾದರೂ ಸಹಾಯ ಮಾಡಲು ಹೇಗೆ ಸಾಧ್ಯ? ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಶಿಕ್ಷಕರಾಗಿ, ನಮ್ಮ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ನಮ್ಮನ್ನು ತೊರೆಯುವ ರೂಪದಲ್ಲಿ ನಮ್ಮ ಕರ್ಮದ ಪಕ್ವತೆಯನ್ನು ನಾವು ಅನುಭವಿಸುತ್ತಿದ್ದರೆ - ನಮ್ಮ ಹಿಂದಿನ ಉದಾಹರಣೆಯನ್ನು ಬಳಸಲು - ನಾವು ನಿಜವಾಗಿಯೂ ಅವರಿಗೆ ಸಹಾಯ ಮಾಡಲು ಹೇಗೆ ಸಾಧ್ಯ? ನಮ್ಮ ವಿದ್ಯಾರ್ಥಿಗಳು ಎಂದಿಗೂ ನಮ್ಮೊಂದಿಗೆ ಇರುವುದಿಲ್ಲ. ಅವರು ಯಾವಾಗಲೂ ಹೊರಟು ಹೋಗುತ್ತಿರುತ್ತಾರೆ. ಸಹಜವಾಗಿ ಅದು ನಮ್ಮನ್ನು ಇತರರನ್ನು ಟೀಕಿಸುವುದನ್ನು ನಿಲ್ಲಿಸುವಂತೆ ಮತ್ತು ಇತರರ ಉತ್ತಮ ಗುಣಗಳ ಬಗ್ಗೆ ಮಾತನಾಡುವಂತೆ ಬಲವಾಗಿ ಪ್ರೇರೇಪಿಸುತ್ತದೆ. 

ರಚನಾತ್ಮಕ ನಡವಳಿಕೆಯೊಂದಿಗೆ ಪ್ರಸ್ತುತವಾಗಿರುವ ಎರಡು ಮಾನಸಿಕ ಅಂಶಗಳು 

ಒಂದು ಕೊನೆಯ ಮಾತು. ವಿಶೇಷ ಜ್ಞಾನನಿಧಿಯ ಗೃಹವಾದ ಅಭಿಧರ್ಮಕೋಶದಲ್ಲಿ, ಮಹಾನ್ ಭಾರತೀಯ ಗುರು ವಸುಬಂಧು ಅವರು, ಯಾವುದೇ ರಚನಾತ್ಮಕ ಕ್ರಿಯೆಯೊಂದಿಗೆ ಯಾವಾಗಲೂ ಎರಡು ಮಾನಸಿಕ ಅಂಶಗಳಿವೆ ಎಂದು ಉಲ್ಲೇಖಿಸುತ್ತಾರೆ. ತಮ್ಮ ಪಠ್ಯದಲ್ಲಿ, ಅಸಂಗ ಅವರು ಈ ಮಾನಸಿಕ ಅಂಶಗಳನ್ನು ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಿದರೂ, ನಾವು ವಸುಬಂಧುವಿನ ವ್ಯಾಖ್ಯಾನಗಳನ್ನು ಸಹ ಅರ್ಥಮಾಡಿಕೊಳ್ಳಬೇಕು. ಈ ಅಂಶಗಳಲ್ಲಿ ಮೊದಲನೆಯದು ಒಳ್ಳೆಯ ಗುಣಗಳು ಮತ್ತು ಅವುಗಳನ್ನು ಹೊಂದಿರುವವರಿಗೆ ಗೌರವವನ್ನು ಹೊಂದಿರುವುದಾಗಿರುತ್ತದೆ. ಎರಡನೆಯದು ನಿರ್ಲಜ್ಜವಾಗಿ ವಿನಾಶಕಾರಿಯಾಗುವುದನ್ನು ತಡೆಯುವುದು. "ನಿರ್ಲಜ್ಜವಾಗಿ" ಎಂದರೆ ನಾವು ಕಾಳಜಿ ವಹಿಸದೆ ಇರುವುದು. ನಾವು ಯಾವುದೇ ಸ್ವಯಂ ನಿಯಂತ್ರಣವನ್ನು ನಿರ್ವಹಿಸುವುದಿಲ್ಲ. ನಾವು ಕಾಳಜಿ ವಹಿಸುವುದಿಲ್ಲವಾದ್ದರಿಂದ ನಾವು ವಿನಾಶಕಾರಿಯಾಗುವುದನ್ನು ತಡೆಯುವುದಿಲ್ಲ. ನಮಗೆ ಏನು ಬೇಕೋ ಅದನ್ನು ನಾವು ಮಾಡುತ್ತೇವೆ. 

ರಚನಾತ್ಮಕ ನಡವಳಿಕೆಯೊಂದಿಗೆ, ನಮ್ಮಲ್ಲಿ ವಿರುದ್ಧವಾದ ವರ್ತನೆಗಳಿವೆ: ನಮಗೆ ಸಕಾರಾತ್ಮಕ ಗುಣಗಳು ಮತ್ತು ಅವುಗಳನ್ನು ಹೊಂದಿರುವವರಿಗೆ ಗೌರವವಿದೆ ಮತ್ತು ನಾವು ಸ್ವಯಂ ನಿಯಂತ್ರಣವನ್ನು ಅಭ್ಯಸಿಸುತ್ತೇವೆ. ನಮ್ಮ ಕ್ರಿಯೆಗಳು ಎಂದಿಗೂ ನಿರ್ಲಜ್ಜವಾಗಿ ವಿನಾಶಕಾರಿಯಾಗಿರುವುದಿಲ್ಲ; ನಾವು ಏನು ಹೇಳುತ್ತೇವೆ ಮತ್ತು ಮಾಡುತ್ತೇವೆ ಎಂಬುದರ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ. ಇದು ಬಹುಶಃ "ಅದು ಸರಿ ಅನಿಸುತ್ತದೆ" ಎಂಬುದನ್ನು ನಮಗೆ ನೆನಪಿಸುತ್ತದೆ. 

ನಮ್ಮ ದೈನಂದಿನ ಜೀವನದಲ್ಲಿ ನಾವು ಏನನ್ನು ಒತ್ತಿ ಹೇಳಬೇಕು ಮತ್ತು ಯಾವಾಗಲೂ ಏನನ್ನು ನೆನಪಿಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. ತಾಳ್ಮೆ ಮತ್ತು ದಯೆಯಂತಹ ಉತ್ತಮ ಗುಣಗಳಿಗೆ ಮತ್ತು ಆ ಗುಣಗಳನ್ನು ಹೊಂದಿರುವವರಿಗೆ ನಮ್ಮ ಅಪಾರ ಗೌರವವನ್ನು ನಾವು ಮತ್ತೊಮ್ಮೆ ದೃಢೀಕರಿಸಬೇಕಾಗಿದೆ. ಅವು ಉತ್ತಮ ಸ್ಫೂರ್ತಿಯ ಮೂಲಗಳಾಗಿವೆ. ಇದಲ್ಲದೆ, ನಾವು ಸ್ವಯಂ ನಿಯಂತ್ರಣವನ್ನು ಅಭ್ಯಸಿಸಲು ಮತ್ತು ನಾವು ಏನು ಹೇಳುತ್ತೇವೆ ಮತ್ತು ಮಾಡುತ್ತೇವೆ ಎಂಬುದರ ಬಗ್ಗೆ ಕಾಳಜಿ ವಹಿಸಲು ಬಯಸುತ್ತೇವೆ ಮತ್ತು ಸಂಪೂರ್ಣವಾಗಿ ವಿನಾಶಕಾರಿಯಾಗಿ ಮತ್ತು ಭಯಾನಕವಾಗಿ ವರ್ತಿಸುವುದಿಲ್ಲ ಎಂದು ನಾವು ಮತ್ತೆ ದೃಢೀಕರಿಸಬೇಕಾಗಿದೆ. 

ಮುಕ್ತಾಯ 

ನಾವು ಕರ್ಮದ ಬಗ್ಗೆ ಮತ್ತು ಈ ಬೋಧನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಹೇಗೆ ಪ್ರಸ್ತುತವಾಗಿಸಬಹುದು ಎಂಬುದರ ಬಗ್ಗೆ ಬಹಳಷ್ಟು ವಿಷಯಗಳನ್ನು ನೋಡಿದ್ದೇವೆ. ಈ ಎರಡು ಅಂಶಗಳನ್ನು ಸಹ ಸ್ವಲ್ಪ ಅರ್ಥಮಾಡಿಕೊಳ್ಳೋಣ. ಸಂಕ್ಷಿಪ್ತವಾಗಿ ಹೇಳುವುದಾದರೆ, ರಚನಾತ್ಮಕವಾಗಿ ವರ್ತಿಸುವ ವಿಷಯದಲ್ಲಿ, ನಾವು ಒಳ್ಳೆಯ ಹುಡುಗ ಅಥವಾ ಒಳ್ಳೆಯ ಹುಡುಗಿಯಾಗಬೇಕೆಂಬ ಬಯಕೆಯ ಆಧಾರದ ಮೇಲೆ ಹಾಗೆ ವರ್ತಿಸುವುದಿಲ್ಲ. ಅದು ಆಧಾರವಾಗಿರುವುದಿಲ್ಲ. ಬದಲಾಗಿ, ಒಳ್ಳೆಯ ಗುಣಗಳು ಮತ್ತು ಅವುಗಳನ್ನು ಹೊಂದಿರುವವರಿಗೆ ಗೌರವದ ಆಧಾರದ ಮೇಲೆ ನಾವು ರಚನಾತ್ಮಕವಾಗಿ ವರ್ತಿಸುತ್ತೇವೆ ಮತ್ತು ಯಾವುದೇ ಸ್ವಯಂ ನಿಯಂತ್ರಣವಿಲ್ಲದೆ ಬಹಿರಂಗವಾಗಿ ವಿನಾಶಕಾರಿಯಾಗಿ ವರ್ತಿಸುವುದನ್ನು ತಡೆಯುವುದು ಸರಿಯೆಂದು ಭಾವಿಸುತ್ತೇವೆ. ನಾವು ಹಾಗೆ ಮಾಡಬೇಕು ಮತ್ತು ಹಾಗೆಯೇ ವರ್ತಿಸಬೇಕು! 

Top