ಸರಿಯಾದ ಪ್ರಯತ್ನ, ಸಾವಧಾನತೆ ಮತ್ತು ಏಕಾಗ್ರತೆ

ಅವಲೋಕನ 

ಇಲ್ಲಿ ನಾವು ಹೇಗೆ ಮೂರು ತರಬೇತಿಗಳು, ನಮ್ಮ ದೈನಂದಿನ ಜೀವನದಲ್ಲಿ ಅಷ್ಟಾಂಗ ಮಾರ್ಗವನ್ನು ಅಭ್ಯಾಸ ಮಾಡುವ ಮೂಲಕ ಸಹಾಯ ಮಾಡಬಹುದು ಎಂಬುದನ್ನು ತಿಳಿಯುತ್ತಿದ್ದೇವೆ. ಈ ಮೂರು ತರಬೇತಿಗಳೆಂದರೆ: 

 • ನೈತಿಕ ಸ್ವಯಂ-ಶಿಸ್ತು 
 • ಏಕಾಗ್ರತೆ 
 • ವಿವೇಚನಾತ್ಮಕ ಅರಿವು. 

ನೈತಿಕ ಸ್ವಯಂ-ಶಿಸ್ತನ್ನು ಅಭಿವೃದ್ಧಿಪಡಿಸಲು ನಾವು ಸರಿಯಾದ ಮಾತು, ಕ್ರಿಯೆ, ನಡವಳಿಕೆ ಮತ್ತು ಜೀವನೋಪಾಯವನ್ನು ಕಾರ್ಯಗತಗೊಳಿಸುತ್ತೇವೆ. ಈಗ ನಾವು ಏಕಾಗ್ರತೆಯ ತರಬೇತಿಯನ್ನು ಬಗ್ಗೆ ಮಾತನಾಡೋಣ, ಇದು ಸರಿಯಾದ ಪ್ರಯತ್ನ, ಸರಿಯಾದ ಸಾವಧಾನತೆ ಮತ್ತು ಸರಿಯಾದ ಏಕಾಗ್ರತೆಯನ್ನು ಒಳಗೊಂಡಿರುತ್ತದೆ. 

ಸರಿಯಾದ ಪ್ರಯತ್ನವು ವಿನಾಶಕಾರಿ ಚಿಂತನೆಗಳ ಹರಿತವನ್ನು ದೂರಮಾಡಿ, ಧ್ಯಾನಕ್ಕಾಗಿ ಅನುಕೂಲಕರವಾದ ಮನಸ್ಸಿನ ಸ್ಥಿತಿಗಳನ್ನು ಅಭಿವೃದ್ಧಿಪಡಿಸುವುದಾಗಿರುತ್ತದೆ.

ಸಾವಧಾನತೆಯು, ಯಾವುದನ್ನಾದರೂ ಮರೆಯದೇ ಇರಲು, ಅದು ಬಿಟ್ಟುಹೋಗದಂತೆ ಹಿಡಿದಿಟ್ಟುಕೊಳ್ಳುವಂತಹ ಒಂದು ಅಂಟಿನ ರೀತಿ ಕಾರ್ಯನಿರ್ವಹಿಸುತ್ತದೆ: 

 • ನಮ್ಮನ್ನು ವಿಚಲಿತಗೊಳಿಸದಂತೆ ನಮ್ಮ ದೇಹ, ಭಾವನೆಗಳು, ಮನಸ್ಸು ಮತ್ತು ಮಾನಸಿಕ ಅಂಶಗಳ ನೈಜ ಸ್ವರೂಪವನ್ನು ಮರೆಯದಿರುವುದು. 
 • ನಮ್ಮ ವಿವಿಧ ನೈತಿಕ ಮಾರ್ಗಸೂಚಿಗಳು, ನಿಯಮಗಳು, ಮತ್ತು ನಾವು ಪ್ರತಿಜ್ಞೆಗಳನ್ನು ತೆಗೆದುಕೊಂಡಿದ್ದಲ್ಲಿ, ಅವುಗಳ ಹಿಡಿತವನ್ನು ಕಳೆದುಕೊಳ್ಳದಿರುವುದು 
 • ನಮ್ಮ ಗಮನದಲ್ಲಿರುವ ವಸ್ತುವನ್ನು ಮರೆಯದೇ ಇರುವುದು. 

ಹೀಗಾಗಿ ನಾವು ಧ್ಯಾನ ಮಾಡುತ್ತಿದ್ದರೆ, ನಾವು ಗಮನದಲ್ಲಿರುವ ವಸ್ತುವನ್ನು ಕಳೆದುಕೊಳ್ಳದಂತೆ ನಮಗೆ ಖಂಡಿತವಾಗಿಯೂ ಸಾವಧಾನತೆ ಬೇಕಾಗಿರುತ್ತದೆ. ನಾವು ಯಾರೊಂದಿಗಾದರೂ ಸಂಭಾಷಣೆ ನಡೆಸುತ್ತಿದ್ದರೆ, ಆ ವ್ಯಕ್ತಿಯ ಮೇಲೆ ಮತ್ತು ಅವರು ಏನು ಹೇಳುತ್ತಿದ್ದಾರೆ ಎಂಬುದರ ಮೇಲೆ ನಾವು ಗಮನ ಹರಿಸಬೇಕು. 

ಏಕಾಗ್ರತೆಯು ನಮ್ಮ ಗಮನದಲ್ಲಿರುವ ವಸ್ತುವಿನ ಮೇಲಿರುವ ಮಾನಸಿಕ ನಿಯೋಜನೆಯಾಗಿದೆ. ಅಂದರೆ ನಾವು ಒಬ್ಬರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವಾಗ, ಅವರು ಏನು ಹೇಳುತ್ತಿದ್ದಾರೆ, ಅವರು ಹೇಗೆ ಕಾಣುತ್ತಿದ್ದಾರೆ, ಅವರು ಹೇಗೆ ವರ್ತಿಸುತ್ತಿದ್ದಾರೆ ಮತ್ತು ಮುಂತಾದವುಗಳ ಮೇಲೆ ನಮ್ಮ ಏಕಾಗ್ರತೆಯನ್ನು ಇರಿಸಲಾಗುತ್ತದೆ ಎಂದರ್ಥ. ಸಾವಧಾನತೆಯು, ನಮ್ಮ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಅದನ್ನು ಒಂದೇ ಜಾಗದಲ್ಲಿರಿಸಲು ಸಹಾಯ ಮಾಡುವ ಮತ್ತು ನಾವು ಮಂದವಾಗದೆ ಅಥವಾ ವಿಚಲಿತವಾಗದಿರಲು ಸಹಾಯ ಮಾಡುವ ಒಂದು ಮಾನಸಿಕ ಅಂಟಿನಂತೆ ಕಾರ್ಯನಿರ್ವಹಿಸುತ್ತದೆ. 

ಪ್ರಯತ್ನ 

ಇದು ನಮ್ಮ ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದರಲ್ಲಿ ಉಪಯೋಗಿಸುವ ಅಷ್ಟಾಂಗ ಮಾರ್ಗದ ಮೊದಲ ಅಂಶವಾಗಿದೆ. ನಮ್ಮ ಏಕಾಗ್ರತೆ ಮತ್ತು ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸಲು ಅನುಕೂಲಕರವಲ್ಲದ ವಿಚಲಿತ ಆಲೋಚನೆಗಳು ಮತ್ತು ಭಾವನಾತ್ಮಕ ಸ್ಥಿತಿಗಳನ್ನು ತೊಡೆದುಹಾಕಲು ನಾವು ಪ್ರಯತ್ನಿಸುತ್ತೇವೆ. ಸಾಮಾನ್ಯವಾಗಿ, ನಮ್ಮ ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಲು ಬಯಸಿದರೆ, ನಾವು ಪ್ರಯತ್ನ ಪಡಬೇಕಾಗುತ್ತದೆ. ಜೀವನದಲ್ಲಿ ಯಾವುದೂ ಹಾಗೆಯೇ ಸಿಗುವುದಿಲ್ಲ ಮತ್ತು ಇದು ಸುಲಭವೆಂದು ಯಾರೂ ಹೇಳುವುದಿಲ್ಲ. ಆದರೆ, ನಾವು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ, ಮಾತನಾಡುತ್ತೇವೆ ಮತ್ತು ವ್ಯವಹರಿಸುತ್ತೇವೆ ಎಂಬ ವಿಚಾರಗಳಲ್ಲಿ ನೈತಿಕ ಸ್ವಯಂ-ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸ್ವಲ್ಪ ಶಕ್ತಿಯನ್ನು ಬೆಳೆಸಿಕೊಂಡರೆ, ಅದು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಗಳ ಬಗ್ಗೆ ಶ್ರಮಪಡಲು ನಮಗೆ ಶಕ್ತಿಯನ್ನು ನೀಡುತ್ತದೆ. 

ತಪ್ಪು ಪ್ರಯತ್ನ 

ತಪ್ಪು ಪ್ರಯತ್ನವು ನಮ್ಮ ಶಕ್ತಿಯನ್ನು ಹಾನಿಕಾರಕ, ವಿನಾಶಕಾರಿ ಚಿಂತನೆಯ ಹರಿತದೆಡೆ ನಿರ್ದೇಶಿಸುವ ಮೂಲಕ ನಮ್ಮನ್ನು ವಿಚಲಿತಗೊಳಿಸುತ್ತದೆ ಮತ್ತು ಕೇಂದ್ರೀಕರಿಸಲು ಅಸಾಧ್ಯವಾಗಿಸದಿದ್ದರೂ ಕಷ್ಟಕರವಾಗಿಸುತ್ತದೆ. ವಿನಾಶಕಾರಿ ಚಿಂತನೆಯ ಮೂರು ಪ್ರಮುಖ ವಿಧಗಳಿವೆ: 

 • ದುರಾಸೆಯಿಂದ ಯೋಚಿಸುವುದು 
 • ದುರುದ್ದೇಶದಿಂದ ಯೋಚಿಸುವುದು 
 • ವಿರೋಧಾಭಾಸದೊಂದಿಗೆ ವಿಕೃತವಾಗಿ ಯೋಚಿಸುವುದು. 

ದುರಾಸೆಯಿಂದ ಯೋಚಿಸುವುದು 

ದುರಾಸೆಯಿಂದ ಯೋಚಿಸುವುದು, ಇತರರ ಸಾಧನೆ ಅಥವಾ ಅವರು ಆನಂದಿಸುವ ಸಂತೋಷಗಳು ಮತ್ತು ಭೌತಿಕ ವಸ್ತುಗಳ ಬಗ್ಗೆ ಅಸೂಯೆಯಿಂದ ಯೋಚಿಸುವುದನ್ನು ಒಳಗೊಂಡಿರುತ್ತದೆ. ನೀವು ಹೀಗೆ ಯೋಚಿಸಬಹುದು: "ನಾನು ಅದನ್ನು ನನಗಾಗಿ ಹೇಗೆ ಪಡೆಯಬಹುದು?" ಇದು ಬಾಂಧವ್ಯದಿಂದ ಉಂಟಾಗುತ್ತದೆ. ನಮ್ಮ ಬಳಿಯಿರದ ವಸ್ತುಗಳು ಬೇರೆಯವರ ಬಳಿಯಿರುವುದನ್ನು ಕಂಡರೆ ನಮಗೆ ಸಹಿಸಲಾಗುವುದಿಲ್ಲ, ಅದು ಯಶಸ್ಸಾಗಿರಲಿ, ಸುಂದರವಾದ ಸಂಗಾತಿಯಾಗಿರಲಿ, ಹೊಸ ಕಾರು ಆಗಿರಲಿ, ಅದು ಏನೇ ಆಗಿರಬಹುದು. ನಾವು ಅದರ ಬಗ್ಗೆ ನಿರಂತರವಾಗಿ ಯೋಚಿಸುತ್ತೇವೆ ಮತ್ತು ಇದು ಬಹಳಾ ಗೊಂದಲಮಯವಾದ ಮನಸ್ಸಿನ ಸ್ಥಿತಿಯಾಗಿರುತ್ತದೆ. ಇದು ನಮ್ಮ ಏಕಾಗ್ರತೆಯನ್ನು ಸಂಪೂರ್ಣವಾಗಿ ತಡೆಗಟ್ಟುತ್ತದೆ, ಅಲ್ಲವೇ? 

ಪರಿಪೂರ್ಣತಾವಾದವು ಈ ಶೀರ್ಷಿಕೆಯಡಿ ಬೀಳಬಹುದು - ನಾವು ನಮ್ಮನ್ನೇ ಹೇಗೆ ಮೀರಿಸಬಹುದು ಎಂಬುದರ ಬಗ್ಗೆ ನಿರಂತರವಾಗಿ ಆಲೋಚಿಸುತ್ತಿರುತ್ತೇವೆ. ನಮಗೆ ನಮ್ಮ ಬಗ್ಗೆಯೇ ಅಸೂಯೆಯಿರುತ್ತದೆ!  

ದುರುದ್ದೇಶದಿಂದ ಯೋಚಿಸುವುದು 

ದುರುದ್ದೇಶದಿಂದ ಯೋಚಿಸುವುದೆಂದರೆ ಯಾರಿಗಾದರೂ ಹಾನಿ ಮಾಡುವುದನ್ನು ಕುರಿತು ಯೋಚಿಸುವುದಾಗಿರುತ್ತದೆ, ಉದಾಹರಣೆಗೆ, "ಈ ವ್ಯಕ್ತಿಯೇನಾದರೂ ನನಗೆ ಇಷ್ಟವಿಲ್ಲದದ್ದನ್ನು ನುಡಿದರೆ ಅಥವಾ ಮಾಡಿದರೆ, ನಾನು ಸೇಡು ತೀರಿಸಿಕೊಳ್ಳುತ್ತೇನೆ." ಮುಂದಿನ ಬಾರಿ ಆ ವ್ಯಕ್ತಿಯನ್ನು ನೋಡಿದಾಗ ನಾವು ಏನು ಮಾಡುತ್ತೇವೆ ಅಥವಾ ಹೇಳುತ್ತೇವೆ ಎಂಬುದರ ಕುರಿತು ನಾವು ಯೋಚಿಸಬಹುದು ಮತ್ತು ಅವರು ನಮಗೆ ಏನನ್ನಾದರೂ ಹೇಳಿದಾಗ ನಾವು ಅವರಿಗೆ ಎದುರೇಟು ನೀಡಲಿಲ್ಲವೆಂದು ನಾವು ವಿಷಾದಿಸಬಹುದು. ಇದನ್ನು ನಮ್ಮ ತಲೆಯಿಂದ ಹೊರಹಾಕಲಾಗದೆ, ನಾವು ಅದರ ಬಗ್ಗೆ ತುಂಬಾ ಯೋಚಿಸುವಂತಾಗುತ್ತದೆ. 

ವಿರೋಧಾಭಾಸದೊಂದಿಗೆ ವಿಕೃತವಾಗಿ ಯೋಚಿಸುವುದು 

ವಿಕೃತವಾದ ವಿರೋಧಾತ್ಮಕ ಚಿಂತನೆ ಎಂದರೆ, ಉದಾಹರಣೆಗೆ, ಯಾರಾದರೂ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಅಥವಾ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರೆ, ನಾವು ಹೀಗೆ ಯೋಚಿಸುತ್ತೇವೆ, "ಅವರು ಮೂರ್ಖರು - ಅವರು ಮಾಡುತ್ತಿರುವುದರಿಂದ ಏನೂ ಪ್ರಯೋಜನವಿಲ್ಲ. ಯಾರಿಗಾದರೂ ಸಹಾಯ ಮಾಡಲು ಪ್ರಯತ್ನಿಸುವುದು ಹಾಸ್ಯಾಸ್ಪದವಾಗಿದೆ.” 

ಕೆಲವು ಜನರಿಗೆ ಕ್ರೀಡೆಗಳು ಇಷ್ಟವಾಗುವುದಿಲ್ಲ ಮತ್ತು ದೂರದರ್ಶನದಲ್ಲಿ ಫುಟ್ಬಾಲ್ ವೀಕ್ಷಿಸುವವರು ಅಥವಾ ಗುಂಪಿನ ಆಟವನ್ನು ವೀಕ್ಷಿಸಲು ಹೋಗುವವರು ಅಪ್ಪಟ ಮೂರ್ಖರು ಎಂದು ಭಾವಿಸುತ್ತಾರೆ. ಆದರೆ ಕ್ರೀಡೆಗಳನ್ನು ಇಷ್ಟಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಮೂರ್ಖತನ ಅಥವಾ ಸಮಯ ವ್ಯರ್ಥ ಎಂದು ಯೋಚಿಸುವುದು ಮನಸ್ಸಿನ ಅತ್ಯಂತ ವಿರೋಧಾತ್ಮಕ ಸ್ಥಿತಿಯಾಗಿರುತ್ತದೆ. 

ಅಥವಾ, ಬೇರೊಬ್ಬರು ಭಿಕ್ಷುಕನೊಬ್ಬನಿಗೆ ಹಣವನ್ನು ನೀಡುವ ಮೂಲಕ ಸಹಾಯ ಮಾಡಲು ಪ್ರಯತ್ನಿಸುವಾಗ, ನೀವು ಹೀಗೆ ಯೋಚಿಸಬಹುದು, "ಓಹ್, ನೀನು ಹೀಗೆ ಮಾಡುತ್ತಿರುವುದು ನಿಜವಾಗಿಯೂ ಮೂರ್ಖತನ." ಇತರರು ಎಷ್ಟು ಮೂರ್ಖರು ಮತ್ತು ಅವರು ಏನು ಮಾಡುತ್ತಿದ್ದರೂ ಅದು ಹೇಗೆ ಅಭಾಗಲಬ್ಧವಾಗಿದೆ ಎಂದು ನಾವು ನಿರಂತರವಾಗಿ ಯೋಚಿಸುತ್ತಿದ್ದರೆ, ನಮಗೆ ಎಂದಿಗೂ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇಂತಹ ಯೋಚನೆಗಳನ್ನು ನಾವು ತೊಡೆದುಹಾಕಲು ಬಯಸುತ್ತೇವೆ. 

ಸರಿಯಾದ ಪ್ರಯತ್ನ 

ಸರಿಯಾದ ಪ್ರಯತ್ನವು ನಮ್ಮ ಶಕ್ತಿಯನ್ನು ಹಾನಿಕಾರಕ, ವಿನಾಶಕಾರಿ ಆಲೋಚನೆಗಳಿಂದ ದೂರವಿರಿಸಿ, ಪ್ರಯೋಜನಕಾರಿ ಗುಣಗಳ ಬೆಳವಣಿಗೆಯ ಕಡೆಗೆ ನಿರ್ದೇಶಿಸುತ್ತದೆ. ಪಾಲಿಯಲ್ಲಿ "ನಾಲ್ಕು ಸಮ್ಯಕ ಪ್ರಧಾನಗಳು" ಎನ್ನುವ ಪರಿಭಾಷೆಯಲ್ಲಿ ನಾವು ಇದರ ಬಗ್ಗೆ ಮಾತನಾಡುತ್ತೇವೆ. ಸಂಸ್ಕೃತ ಮತ್ತು ಟಿಬೆಟಿಯನ್ ಸಾಹಿತ್ಯದಲ್ಲಿ, ಅವುಗಳನ್ನು ಸರಿಯಾದ ವಿಮೋಚನೆಗಳನ್ನು ಸಾಧಿಸಲು ಬೇಕಾಗುವ ನಾಲ್ಕು ವಿಷಯಗಳು ಎಂದು ಕರೆಯಲಾಗುತ್ತದೆ - ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮ ನ್ಯೂನತೆಗಳನ್ನು ನಿವಾರಿಸುವುದು - ಇವನ್ನು "ನಾಲ್ಕು ಶುದ್ಧ ಪರಿತ್ಯಾಗಗಳು" ಎಂದು ಕರೆಯಲಾಗುತ್ತದೆ: 

 1. ಮೊದಲನೆಯದಾಗಿ, ನಾವು ಇನ್ನೂ ಅಭಿವೃದ್ಧಿಪಡಿಸದಿರುವ ನಕಾರಾತ್ಮಕ ಗುಣಗಳ ಉದ್ಭವಿಸುವಿಕೆಯನ್ನು ತಡೆಗಟ್ಟಲು ಪ್ರಯತ್ನಿಸುತ್ತೇವೆ. ಉದಾಹರಣೆಗೆ, ನಾವು ವ್ಯಸನಕಾರಿ ವ್ಯಕ್ತಿತ್ವವನ್ನು ಹೊಂದಿದ್ದರೆ, ನಾವು ಚಲನಚಿತ್ರಗಳ ಆನ್ಲೈನ್ ಸ್ಟ್ರೀಮಿಂಗ್ ಸೇವೆಗಳನ್ನು ಸೇರುವುದನ್ನೇ ತಪ್ಪಿಸಬಹುದು. ಅಲ್ಲಿ ನೀವು ಧಾರವಾಹಿಗಳನ್ನು ಒಂದರ ಮೇಲೊಂದು ವೀಕ್ಷಿಸುತ್ತಲೇ ದಿನವಿಡೀ ಕಾಲ ಕಳೆಯಬಹುದು. ಇದು ಸಾಕಷ್ಟು ಹಾನಿಕಾರಕವಾಗಿದ್ದು, ನಿಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.  
 2. ನಂತರ, ನಮ್ಮಲ್ಲಿ ಈಗಾಗಲೇ ಇರುವ ನಕಾರಾತ್ಮಕ ಗುಣಗಳನ್ನು ನಿವಾರಿಸಲು ನಾವು ಪ್ರಯತ್ನಪಡಬೇಕು. ಆದ್ದರಿಂದ ನಾವು ವ್ಯಸನಿಗಳಾಗಿದ್ದರೆ, ಅ ವಸ್ಯವಿನ ಸೇವನೆಯನ್ನು ಮಿತಿಗೊಳಿಸಲು ಪ್ರಯತ್ನಿಸುವುದು ಉತ್ತಮ. ಉದಾಹರಣೆಗೆ, ಕೆಲವರು ತಮ್ಮ ಐಪಾಡ್‌ಗಳನ್ನು ಎಷ್ಟು ಹಚ್ಚಿಕೊಳ್ಳುತ್ತಾರೆಂದು ನಮಗೆಲ್ಲಾ ತಿಳಿದೇ ಇದೆ, ಅವರು ಸಂಗೀತವನ್ನು ಕೇಳದೆ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಅವರು ಮೌನವಾಗಿರಲು ಹೆದರುತ್ತಾರೆ, ಯಾವುದೇ ರೀತಿಯ ಆಲೋಚನೆಯನ್ನು ಯೋಚಿಸುವುದರಿಂದ ಹೆದರುತ್ತಾರೆ, ಆದ್ದರಿಂದ ಅವರು ನಿರಂತರವಾಗಿ ಸಂಗೀತವನ್ನು ಕೇಳುತ್ತಲೇ ಇರಬೇಕು. ಸಹಜವಾಗಿ, ಜೋರಾದ ಸಂಗೀತವು, ಬಹಳಾ ದೂರದವರೆಗೆ ಗಾಡಿಯನ್ನು ಚಲಿಸುವಾಗ ಎಚ್ಚರವಿರಲು ಅಥವಾ ವ್ಯಾಯಾಮ ಮಾಡುವಾಗ ನಿಮ್ಮ ವೇಗವನ್ನು ಕಾಪಾಡಿಕೊಳ್ಳಲು ಉಪಯುಕ್ತವಾಗಿರಬಹುದು ಮತ್ತು ಮೃದುವಾದ ಸಂಗೀತವು ಕೆಲಸ ಮಾಡುವಾಗ ಶಾಂತವಾಗಿರಲು ನಿಮಗೆ ಸಹಾಯ ಮಾಡಬಹುದು, ಆದರೆ ಯಾರೊಂದಿಗಾದರೂ ಸಂಭಾಷಣೆ ನಡೆಸುವಾಗ ಅದರ ಮೇಲೆ ಕೇಂದ್ರೀಕರಿಸಲು ಸಂಗೀತವು ಖಂಡಿತವೂ ಸಹಾಯ ಮಾಡುವುದಿಲ್ಲ. ಸಹಜವಾಗಿ ಇದು ನಮ್ಮನ್ನು ವಿಚಲಿತಗೊಳಿಸುತ್ತದೆ. 
 3. ಇದರ ನಂತರ, ನಾವು ಹೊಸತಾದ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು
 4. ನಂತರ, ಈಗಾಗಲೇ ಇರುವ ಸಕಾರಾತ್ಮಕ ಗುಣಗಳನ್ನು ಕಾಪಾಡಿಕೊಳ್ಳಲು ಮತ್ತು ಹೆಚ್ಚಿಸಲು ನಾವು ಪ್ರಯತ್ನಪಡುತ್ತೇವೆ. 

ಇವುಗಳನ್ನು ವಿಶ್ಲೇಷಿಸಿ, ಇವುಗಳ ಪ್ರಾಯೋಗಿಕ ಉಪಯೋಗಗಳನ್ನು ಹುಡುಕಲು ಪ್ರಯತ್ನಿಸುವುದು ಬಹಳಾ ಆಸಕ್ತಿದಾಯಕವಾಗಿರುತ್ತದೆ. ನನ್ನ ಒಂದು ಉದಾಹರಣೆಯೆಂದರೆ, ನನ್ನ ವೆಬ್‌ಸೈಟ್‌ ಕುರಿತು ನನ್ನಲ್ಲಿ ಒಂದು ತುಂಬಾ ಕೆಟ್ಟ ಅಭ್ಯಾಸವಿತ್ತು. ಈ ವೆಬ್ಸೈಟ್ ಮೇಲೆ ಸುಮಾರು 110 ಜನರು ಕೆಲಸ ಮಾಡುತ್ತಿದ್ದು, ಅವರ ಅನುವಾದಗಳನ್ನು ಮತ್ತು ತಿದ್ದುಪಡಿ ಮಾಡಿದ ಫೈಲ್‌ಗಳನ್ನು ನನಗೆ ನಿರಂತರವಾಗಿ ಇಮೇಲ್‌ ಮಾಡುತ್ತಿರುತ್ತಾರೆ - ನಾನು ಪ್ರತಿದಿನ ಹಲವಾರು ಇಮೇಲ್ಗಳನ್ನು ಪಡೆಯುತ್ತೇನೆ. ನನ್ನ ಕೆಟ್ಟ ಅಭ್ಯಾಸವೆಂದರೆ, ನನ್ನ ಸಹಾಯಕ ಮತ್ತು ನಾನು ಸುಲಭವಾಗಿ ಹುಡುಕಬಹುದಾದ ಸರಿಯಾದ ಫೋಲ್ಡರ್‌ಗಳಿಗೆ ಅವುಗಳನ್ನು ಹಾಕುವ ಬದಲು, ನಾನು ಎಲ್ಲವನ್ನೂ ಒಂದೇ ಫೋಲ್ಡರ್‌ಗೆ ಡೌನ್‌ಲೋಡ್ ಮಾಡುತ್ತಿದ್ದೆ. ಇದು ನಿಜವಾಗಿಯೂ ಒಂದು ಕೆಟ್ಟ ಅಭ್ಯಾಸವಾಗಿತ್ತು, ಏಕೆಂದರೆ ನನ್ನ ಅಸಮರ್ಥತೆಯಿಂದ, ಈ ಫೈಲ್‌ಗಳನ್ನು ಹುಡುಕಲು ಮತ್ತು ವಿಂಗಡಿಸಲು ಸಾಕಷ್ಟು ಸಮಯ ವ್ಯರ್ಥವಾಗಿ, ಅದು ನಮ್ಮ ಕೆಲಸದ ಮೇಲೆ ಕೇಂದ್ರೀಕರಿಸುವುದನ್ನು ತಡೆಯುತ್ತಿತ್ತು. ಹಾಗಾದರೆ ಇಲ್ಲಿರಬಹುದಾದ ಸಕಾರಾತ್ಮಕ ಗುಣವು ಯಾವುದಾಗಿರಬಹುದು? ಯಾವುದೇ ಫೈಲ್ ಬಂದಾಕ್ಷಣ ಅದು ತಕ್ಷಣವೇ ಸರಿಯಾದ ಫೋಲ್ಡರ್ಗೆ ಸೇರುವಂತಹ ಒಂದು ಉತ್ತಮವಾದ ವ್ಯವಸ್ಥೆಯನ್ನು ರಚಿಸುವುದು. ಇದು, ಸೋಮಾರಿತನದಿಂದ ಎಲ್ಲವೂ ಎಲ್ಲೆಂದರಲ್ಲಿ ಹರಡಲು ಬಿಡುವ ಬದಲು, ಮೊದಲಿನಿಂದಲೇ ವಿಷಯಗಳು ಅವುಗಳ ಸರಿಯಾದ ಸ್ಥಳಗಳಲ್ಲಿರುವಂತಹ ಅಭ್ಯಾಸವನ್ನು ನಿರ್ಮಿಸುತ್ತದೆ. 

ಈ ಉದಾಹರಣೆಯಲ್ಲಿ, ನಾವು ಒಂದು ನಕಾರಾತ್ಮಕ ಗುಣ, ಅತ್ಯಂತ ಅನುತ್ಪಾದಕವಾದ ಅಭ್ಯಾಸ ಮತ್ತು ಸಕಾರಾತ್ಮಕ ಗುಣವೊಂದನ್ನು ಕಂಡುಕೊಂಡಿದ್ದೇವೆ. ಹೀಗಾಗಿ ನಾವು ನಕಾರಾತ್ಮಕ ಗುಣವನ್ನು ತಪ್ಪಿಸಲು ಪ್ರಯತ್ನಪಡುತ್ತೇವೆ ಮತ್ತು ಇದು ಮುಂದುವರಿಯದಂತೆ, ಸರಿಯಾದ ಫೈಲ್ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತೇವೆ. ಇಲ್ಲಿ ನಾವು ಅತ್ಯಂತ ಸರಳವಾದ ಅಭ್ಯಾಸದ ಬಗ್ಗೆ ಮಾತನಾಡುತ್ತಿದ್ದೇವೆ. 

ಏಕಾಗ್ರತೆಯ ಐದು ಅಡೆತಡೆಗಳನ್ನು ನಿವಾರಿಸುವುದು 

ಸರಿಯಾದ ಪ್ರಯತ್ನವು, ಏಕಾಗ್ರತೆಗಿರುವ ಐದು ಅಡೆತಡೆಗಳನ್ನು ನಿವಾರಿಸುವುದನ್ನೂ ಒಳಗೊಂಡಿರುತ್ತದೆ, ಅವುಗಳೆಂದರೆ: 

ಅಪೇಕ್ಷಣೀಯ ಸಂವೇದನಾ ವಸ್ತುಗಳ ಐದು ವಿಧಗಳಲ್ಲಿ ಯಾವುದನ್ನಾದರೂ ಅನುಸರಿಸುವ ಉದ್ದೇಶಗಳು 

ಐದು ಅಪೇಕ್ಷಣೀಯ ಸಂವೇದನಾ ವಸ್ತುಗಳೆಂದರೆ ಸುಂದರವಾದ ದೃಶ್ಯಗಳು, ಶಬ್ದಗಳು, ಸುಗಂಧಗಳು, ಅಭಿರುಚಿಗಳು ಮತ್ತು ಭೌತಿಕ ಸಂವೇದನೆಗಳಾಗಿವೆ. ಇದು, ನಮ್ಮ ಯಾವುದೇ ಕೆಲಸಕ್ಕಾಗಿ ಬೇಕಾಗುವ ಏಕಾಗ್ರತೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸುವುದಾಗಿದೆ, ಉದಾಹರಣೆಗೆ ನಮ್ಮ ಕೆಲಸದ ಮೇಲಿನ ಏಕಾಗ್ರತೆಯು ಹೀಗಿರುವ ಆಲೋಚನೆಗಳಿಂದ ವಿಚಲಿತಗೊಳ್ಳುತ್ತದೆ, "ನಾನು ಚಲನಚಿತ್ರವನ್ನು ವೀಕ್ಷಿಸಲು ಬಯಸುತ್ತೇನೆ" ಅಥವಾ "ನಾನು ಫ್ರಿಜ್ ಹತ್ತಿರ ಹೋಗಲು ಬಯಸುತ್ತೇನೆ." ಹೀಗೆ, ನಾವು ತಿನ್ನಲು ಬಯಸುವುದು, ಸಂಗೀತವನ್ನು ಕೇಳಲು ಬಯಸುವುದು ಇತ್ಯಾದಿಗಳಂತಹ ಸಂವೇದನಾ ಸುಖಗಳು ಅಥವಾ ಆಸೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅಂತಹ ಭಾವನೆಗಳು ಉದ್ಭವಿಸಿದಾಗ, ನಮ್ಮ ಏಕಾಗ್ರತೆಯು ಭಂಗವಾಗದಂತೆ ಅವುಗಳನ್ನು ಅನುಸರಿಸದಿರಲು ನಾವು ಪ್ರಯತ್ನಿಸಬೇಕು. 

ಕೆಟ್ಟ ಇಚ್ಛೆಯ ಆಲೋಚನೆಗಳು 

ಇದು ಯಾರನ್ನಾದರೂ ನೋಯಿಸುವ ಬಗ್ಗೆ ಯೋಚಿಸುವುದಾಗಿರುತ್ತದೆ. ನಾವು ಯಾವಾಗಲೂ ಹಗೆತನದಿಂದ ಯೋಚಿಸುತ್ತಿದ್ದರೆ, "ಈ ವ್ಯಕ್ತಿಯು ನನಗೆ ನೋವುಂಟುಮಾಡಿರುವನು, ನನಗೆ ಅವನು ಇಷ್ಟವಿಲ್ಲ, ನಾನು ಹೇಗೆ ಸೇಡು ತೀರಿಸಿಕೊಳ್ಳಬಹುದು?" - ಇದು ಏಕಾಗ್ರತೆಯ ದೊಡ್ಡ ಅಡಚಣೆಯಾಗಿರುತ್ತದೆ. ಇತರರ ಬಗ್ಗೆ ಮಾತ್ರವಲ್ಲದೆ ನಮ್ಮ ಬಗ್ಗೆಯೂ ಅಸಹ್ಯವಾದ ಹಾನಿಕಾರಕ ಆಲೋಚನೆಗಳನ್ನು ಯೋಚಿಸುವುದನ್ನು ತಪ್ಪಿಸಲು ನಾವು ಪ್ರಯತ್ನಪಡಬೇಕಾಗಿದೆ. 

ಮಂದವಾದ ಮನಸ್ಥಿತಿ ಮತ್ತು ಅರೆನಿದ್ರಾವಸ್ಥೆ 

ಇಲ್ಲಿ ನಮ್ಮ ಮನಸ್ಸು ಮಂಜಿನಲ್ಲಿ ಕಳೆದುಹೋಗಿದ್ದು, ನಾವು ನಿಷ್ಕ್ರಿಯಾವಸ್ಥೆಯಲ್ಲಿದ್ದು, ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. ಅರೆನಿದ್ರಾವಸ್ಥೆಯೆಂದರೆ, ನಾವು ನಿದ್ರಿಸುವಂತೆ ಇಚ್ಛಿಸುವ ಸ್ಥಿತಿಯಾಗಿರುತ್ತದೆ. ಇವುಗಳ ವಿರುದ್ಧ ಹೋರಾಡಲು ನಾವು ಪ್ರಯತ್ನಿಸಬೇಕು. ನೀವು ತಾಜಾ ಗಾಳಿಯನ್ನು ಪಡೆಯುವುದರಿಂದ ಆಗಲಿ ಅಥವಾ ಕಾಫಿಯೊಂದಿಗೆ ಆಗಲಿ ನಾವು ಇದಕ್ಕೆ ಮಣಿಯದೆ ಇರಲು ಪ್ರಯತ್ನಿಸಬೇಕು. ಆದರೆ ಕೇಂದ್ರಿಕರಿಸಲು ನಿಜವಾಗಿಯೂ ಕಷ್ಟವಾಗುತ್ತಿದ್ದರೆ, ನಾವು ಒಂದು ಮಿತಿಯನ್ನು ರಚಿಸಬೇಕಾಗಿದೆ. ನೀವು ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ, "ನಾನು ಇಪ್ಪತ್ತು ನಿಮಿಷಗಳ ಕಾಲ ಸ್ವಲ್ಪ ನಿದ್ರಿಸುತ್ತೇನೆ ಅಥವಾ ವಿರಾಮ ತೆಗೆದುಕೊಳ್ಳುತ್ತೇನೆ." ನೀವು ನಿಮ್ಮ ಕಚೇರಿಯಲ್ಲಿದ್ದರೆ, "ನಾನು ಹತ್ತು ನಿಮಿಷಗಳ ಕಾಲ ಕಾಫಿಯೊಂದಿಗೆ ವಿರಾಮ ತೆಗೆದುಕೊಳ್ಳುತ್ತೇನೆ." ಮಿತಿಯನ್ನು ರಚಿಸಿ ಮತ್ತು ಅದಾದ ನಂತರ ನಿಮ್ಮ ಕೆಲಸಕ್ಕೆ ಹಿಂತಿರುಗಿ. 

ಮನಸ್ಸಿನ ಹಾರಾಟ ಮತ್ತು ಪಶ್ಚಾತ್ತಾಪ 

ಮನಸ್ಸಿನ ಹಾರಾಟವೆಂದರೆ ನಮ್ಮ ಮನಸ್ಸು ಫೇಸ್‌ಬುಕ್, ಅಥವಾ ಯೂಟ್ಯೂಬ್ ಅಥವಾ ಇನ್ನಾವುದರ ಕಡೆಗೋ ಹಾರುವುದಾಗಿರುತ್ತದೆ. ಪಶ್ಚಾತ್ತಾಪದ ಭಾವನೆ ಎಂದರೆ ನಮ್ಮ ಮನಸ್ಸು ಅಪರಾಧಿಯ ಭಾವನೆಗಳಿಗೆ ಹಾರಿಹೋಗುವುದು, "ನಾನು ಹೀಗೆ ಮಾಡಿದ್ದು ಅಥವಾ ಹಾಗೆ ಮಾಡಿದ್ದರಿಂದ ಬಹಳಾ ಬೇಜರಾಗುತ್ತಿದೆ." ಈ ವಿಷಯಗಳು ಬಹಳಾ ಗಮನ ಸೆಳೆಯುವಂತಿದ್ದು, ನಮ್ಮನ್ನು ಕೇಂದ್ರೀಕರಿಸುವುದರಿಂದ ತಡೆಯುತ್ತವೆ. 

ಅನಿರ್ದಿಷ್ಟವಾದ ಅಲೆಯುವಿಕೆ ಮತ್ತು ಅನುಮಾನಗಳು 

ನಾವು ಮೀರಲು ಪ್ರಯತ್ನಿಸಬೇಕಾದ ಕೊನೆಯ ವಿಷಯವೆಂದರೆ ಅನಿರ್ದಿಷ್ಟವಾದ ಅಲೆದಾಡುವಿಕೆ ಮತ್ತು ಅನುಮಾನಗಳು. "ನಾನೇನು ಮಾಡಲಿ?" “ನಾನು ಊಟಕ್ಕೆ ಏನು ಮಾಡಬೇಕು? ಬಹುಶಃ ನಾನು ಇದನ್ನು ಸೇವಿಸಬೇಕು. ಅಥವಾ ನಾನು ಅದನ್ನು ಸೇವಿಸಬೇಕೇ?” ನೀವು ಮನಸ್ಸು ಮಾಡಲು ಸಾಧ್ಯವಾಗದೇ ಇರುವುದರಿಂದ ಬಹಳಾ ಸಮಯ ವ್ಯರ್ಥವಾಗುತ್ತದೆ. ನಾವು ಯಾವಾಗಲೂ ಸಂದೇಹಗಳು ಮತ್ತು ಅನಿರ್ದಿಷ್ಟತೆಯಿಂದ ತುಂಬಿದ್ದರೆ ನಮಗೆ ಗಮನಹರಿಸಲು ಮತ್ತು ಜೀವನದಲ್ಲಿ ಮುಂದುವರೆಯಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಇದನ್ನು ಪರಿಹರಿಸಲು ನಾವು ಪ್ರಯತ್ನಪಡಬೇಕಾಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದೆಂದರೆ, ಸರಿಯಾದ ಪ್ರಯತ್ನದ ಪ್ರಕಾರ, ನಾವು ಈ ಕೆಳಗಿನ ವಿಷಯಗಳ ಮೇಲೆ ಪ್ರಯತ್ನಪಡಬೇಕು: 

 • ಗೊಂದಲದ ಮತ್ತು ವಿನಾಶಕಾರಿ ಚಿಂತನೆಯ ಮಾರ್ಗಗಳನ್ನು ತಪ್ಪಿಸುವುದು 
 • ನಮ್ಮಲ್ಲಿರುವ ಕೆಟ್ಟ ಅಭ್ಯಾಸಗಳು ಮತ್ತು ನ್ಯೂನತೆಗಳನ್ನು ನಮ್ಮಿಂದ ದೂರಮಾಡುವುದು 
 • ನಮ್ಮಲ್ಲಿ ಈಗಾಗಲೇ ಇರುವ ಮತ್ತು ನಮ್ಮಲ್ಲಿ ಕೊರತೆಯಿರುವ ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸುವುದು 
 • ನಮ್ಮಲ್ಲಿರುವ ಏಕಾಗ್ರತೆಯ ಅಡೆತಡೆಗಳನ್ನು ತೊಡೆದುಹಾಕುವುದು. 

ಸಾವಧಾನತೆ 

ಏಕಾಗ್ರತೆಯೊಂದಿಗೆ ಒಳಗೊಂಡ ಅಷ್ಟಾಂಗ ಮಾರ್ಗದ ಮುಂದಿನ ಅಂಶವು ಸರಿಯಾದ ಸಾವಧಾನತೆಯಾಗಿದೆ: 

 • ಮೂಲಭೂತವಾಗಿ ಸಾವಧಾನತೆಯು ಮಾನಸಿಕ ಅಂಟಿನ ಹಾಗಿರುತ್ತದೆ. ನೀವು ಏಕಾಗ್ರತೆಯಿಂದಿರುವಾಗ, ನಿಮ್ಮ ಮನಸ್ಸು ಒಂದು ವಸ್ತುವನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಹಿಡಿದಿಟ್ಟುಕೊಳ್ಳುವುದೇ ಸಾವಧಾನತೆ, ನೀವು ಅದನ್ನು ಬಿಟ್ಟುಕೊಡದಂತೆ ಇದು ನೋಡಿಕೊಳ್ಳುತ್ತದೆ. 
 • ಇದು ಎಚ್ಚರಿಕೆಯಿಂದ ಕೂಡಿದ್ದು, ಇದು ನಿಮ್ಮ ಗಮನವು ಅಲೆದಾಡುತ್ತಿದೆಯೇ ಅಥವಾ ನಿಮ್ಮ ಕಣ್ಣೆಳೆಯುತ್ತಿದೆಯೇ ಅಥವಾ ನೀವು ಮಂದವಾಗಿದ್ದೀರೇ ಎಂದು ಪತ್ತೆಹಚ್ಚುತ್ತದೆ. 
 • ನಂತರ ನಾವು ನಮ್ಮ ಗಮನವನ್ನು ಬಳಸುತ್ತೇವೆ, ಅಂದರೆ ನಾವು ನಮ್ಮ ಗಮನದಲ್ಲಿರುವ ವಸ್ತುವನ್ನು ಹೇಗೆ ಪರಿಗಣಿಸುತ್ತೇವೆ ಎಂಬುದಾಗಿರುತ್ತದೆ. 

ಇಲ್ಲಿ ನಾವು ನಮ್ಮ ದೇಹ, ಭಾವನೆಗಳು, ಮನಸ್ಸು ಮತ್ತು ವಿವಿಧ ಮಾನಸಿಕ ಅಂಶಗಳನ್ನು ಹೇಗೆ ಪರಿಗಣಿಸುತ್ತೇವೆ ಎಂಬುದರ ಬಗ್ಗೆ ಗಮನ ಹರಿಸುತ್ತೇವೆ. ನಮ್ಮ ದೇಹ ಮತ್ತು ಭಾವನೆಗಳನ್ನು ಪರಿಗಣಿಸುವ ತಪ್ಪು ವಿಧಾನಗಳನ್ನು ಬಿಡದೆ ಹಿಡಿದಿಟ್ಟುಕೊಳ್ಳುವುದನ್ನು ತಪ್ಪಿಸಲು ನಾವು ಬಯಸುತ್ತೇವೆ, ಏಕೆಂದರೆ ನಾವು ಬಿಡದಿದ್ದಾಗ, ನಾವು ವಿಚಲಿತರಾಗುತ್ತೇವೆ ಮತ್ತು ನಮಗೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಸಾವಧಾನತೆಯ ತಪ್ಪು ಮತ್ತು ಸರಿಯಾದ ರೂಪಗಳನ್ನು ಪರ್ಯಾಯವಾಗಿ ಇಲ್ಲಿ ನೋಡೋಣ. 

ನಮ್ಮ ದೇಹಕ್ಕೆ ಸಂಬಂಧಿಸಿರುವುದು 

ಸಾಮಾನ್ಯವಾಗಿ, ನಾವು ನಮ್ಮ ದೇಹದ ಬಗ್ಗೆ ಮಾತನಾಡುವಾಗ, ನಮ್ಮ ನಿಜವಾದ ದೇಹ ಮತ್ತು ದೇಹದ ವಿವಿಧ ದೈಹಿಕ ಸಂವೇದನೆಗಳು ಅಥವಾ ಅಂಶಗಳ ಬಗ್ಗೆ ಮಾತನಾಡುತ್ತೇವೆ. ದೇಹದ ಬಗ್ಗೆಗಿರುವ ಒಂದು ತಪ್ಪಾದ ಪರಿಗಣನೆಯೆಂದರೆ, ಸ್ವಭಾವತಃ, ನಮ್ಮ ದೇಹವು ಆಹ್ಲಾದಕರವಾಗಿರುತ್ತದೆ ಅಥವಾ ಸ್ವಚ್ಛ ಮತ್ತು ಸುಂದರವಾಗಿರುತ್ತದೆ ಎಂಬುದು. ನಾವು ಹೇಗೆ ಕಾಣುತ್ತೇವೆ ಎಂಬುದರ ಬಗ್ಗೆ - ನಮ್ಮ ಕೂದಲು ಮತ್ತು ಮೇಕಪ್, ನಾವು ಹೇಗೆ ನಮ್ಮನ್ನು ಸಿಂಗಾರಗೊಳಿಸುತ್ತೇವೆ ಮತ್ತು ಮುಂತಾದವುಗಳ ಬಗ್ಗೆ - ನಾವು ವಿಚಲಿತರಾಗಿ ಅಥವಾ ಚಿಂತಿತರಾಗುತ್ತಾ ಬಹಳಾ ಸಮಯವನ್ನು ಕಳೆಯುತ್ತೇವೆ. ಸ್ವಚ್ಛವಾಗಿರುವುದು ಮತ್ತು ಪ್ರಸ್ತುತಪಡಿಸುವಂತೆ ಇರುವುದು ಒಳ್ಳೆಯದು, ಆದರೆ ನಮ್ಮ ದೇಹದ ನೋಟವು ಆನಂದದ ಮೂಲವಾಗಿರುವಂತೆ ಮತ್ತು ಅದು ಯಾವಾಗಲೂ ಪರಿಪೂರ್ಣವಾಗಿರಬೇಕೆಂದು, ಇದರಿಂದ ನಾವು ಇತರರನ್ನು ಆಕರ್ಷಿಸಬಹುದು ಎಂದು ವಿವೇಕರಹಿತವಾಗಿ ಯೋಚಿಸುವಾಗ, ಅದು ನಮಗೆ ಹೆಚ್ಚು ಅರ್ಥಪೂರ್ಣವಾದ ಕಾರ್ಯಗಳ ಮೇಲೆ ಕೇಂದ್ರೀಕರಿಸಲು ಸಮಯವನ್ನು ನೀಡುವುದಿಲ್ಲ.  

ನಮ್ಮ ದೇಹವನ್ನು ವಾಸ್ತವಿಕವಾಗಿ ನೋಡೋಣ. ನೀವು ಹೆಚ್ಚು ಹೊತ್ತು ಕುಳಿತಿದ್ದರೆ, ನಿಮಗೆ ಇರುಸುಮುರುಸೆನಿಸುತ್ತದೆ ಮತ್ತು ಓಡಾಡಬೇಕೆನಿಸುತ್ತದೆ. ನೀವು ಮಲಗಿದ್ದರೆ, ಒಂದು ಸ್ಥಾನವು ಅಹಿತಕರವೆನಿಸುತ್ತದೆ, ಮುಂದಿನದು ಸಹ ಹಾಗೆ ಅನಿಸುತ್ತದೆ. ನಾವು ಅನಾರೋಗ್ಯದಿಂದ ಬಳಲುತ್ತೇವೆ; ನಮ್ಮ ದೇಹಕ್ಕೆ ವಯಸ್ಸಾಗುತ್ತದೆ. ದೇಹದ ಬಗ್ಗೆ ಕಾಳಜಿ ವಹಿಸುವುದು ಮತ್ತು ವ್ಯಾಯಾಮ ಮತ್ತು ಚೆನ್ನಾಗಿ ತಿನ್ನುವುದರ ಮೂಲಕ ನಾವು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ, ಆದರೆ ನಮ್ಮ ದೇಹವು ಶಾಶ್ವತವಾದ ಆನಂದದ ಮೂಲವಾಗಿದೆ ಎಂಬ ಕಲ್ಪನೆಯ ಮೇಲೆ ಹೆಚ್ಚು ಗಮನಹರಿಸುವುದು ಒಂದು ಸಮಸ್ಯೆಯಾಗಿರುತ್ತದೆ. 

ಇಂತಹ ತಪ್ಪಾದ ಪ್ರಜ್ಞೆಯನ್ನು ನಾವು ನಿವಾರಿಸಬೇಕಾಗಿದೆ. ನಮ್ಮ ಕೂದಲೇ ಅತ್ಯಂತ ಮುಖ್ಯವಾದುದು, ಅಥವಾ ನಾವು ಯಾವಾಗಲೂ ಬಣ್ಣ-ಸಂಯೋಜಿತವಾಗಿರಬೇಕು, ಇದು ನಮ್ಮನ್ನು ಸಂತೋಷವಾಗಿಸುತ್ತದೆ ಎಂಬ ಕಲ್ಪನೆಯನ್ನು ನಾವು ಬಿಟ್ಟುಬಿಡಬೇಕು. ನಾವು ಇವನ್ನು ಹಿಡಿದಿಟ್ಟುಕೊಳ್ಳುವುದನ್ನು ನಿಲ್ಲಿಸಿ, ಸರಿಯಾದ ರೀತಿಯ ಸಾವಧಾನತೆಯನ್ನು ಬೆಳೆಸಿಕೊಳ್ಳುತ್ತೇವೆ - “ನನ್ನ ಕೂದಲು ಮತ್ತು ಬಟ್ಟೆ ನನ್ನ ಸಂತೋಷದ ನಿಜವಾದ ಮೂಲವಲ್ಲ. ಅದರ ಬಗ್ಗೆ ಹೆಚ್ಚು ಯೋಚಿಸುವುದರಿಂದ ನನ್ನ ಸಮಯ ವ್ಯರ್ಥವಾಗುತ್ತದೆ ಮತ್ತು ಅದು ಹೆಚ್ಚು ಅರ್ಥಪೂರ್ಣವಾದ ಕಾರ್ಯಗಳ ಮೇಲೆ ಕೇಂದ್ರೀಕರಿಸುವುದರಿಂದ ನನ್ನನ್ನು ತಡೆಯುತ್ತದೆ.” 

ನಮ್ಮ ಭಾವನೆಗಳಿಗೆ ಸಂಬಂಧಿಸಿರುವುದು 

ಇಲ್ಲಿ ನಾವು ಅಸಂತೋಷ ಅಥವಾ ಸಂತೋಷದ ಭಾವನೆಗಳ ಬಗ್ಗೆ ಮಾತನಾಡುತ್ತಿದ್ದೇವೆ, ಇವು ಅಂತಿಮವಾಗಿ ದುಃಖದ ಮೂಲಕ್ಕೆ ಸಂಬಂಧಿಸಿರುತ್ತವೆ. ನಾವು ಅತೃಪ್ತರಾಗಿರುವಾಗ, "ಹಂಬಲ" ಎಂಬುದು ನಮ್ಮಲ್ಲಿ ಹುಟ್ಟುತ್ತದೆ - ಅತೃಪ್ತಿಯ ಮೂಲವನ್ನು ಕೊನೆಗೊಳಿಸಲು ನಾವು ಹಂಬಲಿಸುತ್ತೇವೆ. ಅದೇ ರೀತಿ, ನಮಗೆ ಸ್ವಲ್ಪ ಸಂತೋಷ ಸಿಕ್ಕರೆ, ನಮಗೆ ಹೆಚ್ಚು ಬೇಕು ಎಂಬುವ ಹಂಬಲವಿರುತ್ತದೆ. ಸಹಜವಾಗಿ ಇದು ಸಮಸ್ಯೆಗಳ ಮೂಲವಾಗಿರುತ್ತದೆ. 

ನಾವು ಅತೃಪ್ತಿಯನ್ನು, ಜಗತ್ತಿನಲ್ಲಿನ ಅತ್ಯಂತ ಕೆಟ್ಟ ವಿಷಯವೆಂದು ಪರಿಗಣಿಸಿದಾಗ, ಅದು ಏಕಾಗ್ರತೆಗಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹೇಗೆ? "ನನಗೆ ಸ್ವಲ್ಪ ಇರುಸುಮುರುಸಾಗಿದೆ,” ಅಥವಾ "ನಾನು ಒಳ್ಳೆಯ ಮನಸ್ಥಿತಿಯಲ್ಲಿಲ್ಲ," ಅಥವಾ "ನಾನು ಅಸಂತೋಷವಾಗಿದ್ದೇನೆ", ಹಾಗಿದ್ದರೆ ಏನು? ನೀವು ಏನು ಮಾಡುತ್ತಿದ್ದೀರೋ ಅದನ್ನು ಮುಂದುವರಿಸಿ. ನಿಮ್ಮ ಕೆಟ್ಟ ಮನಸ್ಥಿತಿಯೇ ಪ್ರಪಂಚದಲ್ಲಿ ಅತ್ಯಂತ ಕೆಟ್ಟದ್ದು ಎಂದು ನೀವು ನಿಜವಾಗಿಯೂ ಭಾವಿಸಿ, ಆ ಭಾವನೆಯನ್ನು ಹಿಡಿದಿಟ್ಟುಕೊಂಡರೆ, ನೀವು ಮಾಡುತ್ತಿರುವ ಕಾರ್ಯದ ಮೇಲೆ ಕೇಂದ್ರೀಕರಿಸಲು ಇದು ದೊಡ್ಡ ಅಡಚಣೆಯಾಗಿರುತ್ತದೆ. 

ನಾವು ಸಂತೋಷವಾಗಿರುವಾಗ, ಅದು ಬೆಳೆಯಲಿ ಮತ್ತು ಶಾಶ್ವತವಾಗಿರಲಿ ಎಂದು ಬಯಸುತ್ತಾ ನಾವು ವಿಚಲಿತರಾಗಬಾರದು. ಧ್ಯಾನ ಮಾಡುವಾಗ ಇದು ಸಂಭವಿಸಬಹುದು, ನೀವು ಒಳ್ಳೆಯದನ್ನು ಅನುಭವಿಸಲು ಪ್ರಾರಂಭಿಸುತ್ತೀರಿ ಮತ್ತು ಅದು ಎಷ್ಟು ಅದ್ಭುತವಾಗಿದೆಯೆಂದು ನೀವು ವಿಚಲಿತರಾಗುತ್ತೀರಿ. ಅಥವಾ ನೀವು ಇಷ್ಟಪಡುವ ಒಬ್ಬ ವ್ಯಕ್ತಿಯೊಡನೆ ಇರುವಾಗ ಅಥವಾ ರುಚಿಕರವಾದದ್ದನ್ನು ಸೇವಿಸುವಾಗ, ತಪ್ಪಾದ ಸಾವಧಾನತೆಯಿಂದ "ಇದು ತುಂಬಾ ಅದ್ಭುತವಾಗಿದೆ" ಎಂಬ ಭಾವನೆಯನ್ನು ಹಿಡಿದಿಟ್ಟುಕೊಂಡು ಅದರಿಂದ ವಿಚಲಿತರಾಗುತ್ತೇವೆ. ಅದನ್ನು ಆನಂದಿಸಿ ಆದರೆ ಆಚರಿಸಬೇಡಿ.

ನಮ್ಮ ಮನಸ್ಸಿಗೆ ಸಂಬಂಧಿಸಿರುವುದು 

ನಮ್ಮ ಮನಸ್ಸು ಕೋಪ ಅಥವಾ ಮೂರ್ಖತನ ಅಥವಾ ಅಜ್ಞಾನದಿಂದ ತುಂಬಿರುವ ತನ್ನದೇ ಆದ ಜೀವಿಯೆಂದು ಪರಿಗಣಿಸಿ, ಈ ಕಾರಣದಿಂದ ನಮ್ಮ ಮನಸ್ಸು ಸ್ವಾಭಾವಿಕವಾಗಿಯೇ ತಪ್ಪಾಗಿರುವುದು ಅಥವಾ ದೂಷಿತವಾಗಿರುವುದು ಎಂದು ಭಾವಿಸಿದರೆ, ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ನಾವು ಇನ್ನೂ ಅರ್ಹರಲ್ಲ ಅಥವಾ ಉತ್ತಮರಲ್ಲ ಎಂದು ನಮ್ಮ ಬಗ್ಗೆ ಆಗಾಗ್ಗೆ ಯೋಚಿಸುತ್ತಿರುತ್ತೇವೆ: “ನಾನು ಇದಲ್ಲ. ನಾನು ಹಾಗಲ್ಲ. ನಾನು ಏನೂ ಇಲ್ಲ." ಅಥವಾ ನಾವು ಪ್ರಯತ್ನಿಸುವ ಮೊದಲೇ "ನನಗೆ ಇದು ಅರ್ಥವಾಗುತ್ತಿಲ್ಲ". ನಾವು ಈ ಆಲೋಚನೆಗಳನ್ನು ಹಿಡಿದಿಟ್ಟುಕೊಂಡರೆ, ಅದು ಬಹಳ ನಿರಾಶದಾಯಕವಾಗಿರುತ್ತದೆ. ಆದರೆ ಸರಿಯಾದ ಸಾವಧಾನತೆಯೊಂದಿಗೆ, “ಇದು ನನಗೆ ತಾತ್ಕಾಲಿಕವಾಗಿ ಅರ್ಥವಾಗದಿರಬಹುದು, ತಾತ್ಕಾಲಿಕವಾಗಿ ನಾನು ಗೊಂದಲಕ್ಕೊಳಗಾಗಬಹುದು, ಆದರೆ ಇದರರ್ಥ ಇದೇ ನನ್ನ ಮಾನಸಿಕ ಸ್ವಭಾವ ಎಂದಲ್ಲ" ಎಂದು ನಾವು ಯೋಚಿಸುತ್ತೇವೆ, ಇದು ಏಕಾಗ್ರತೆಯನ್ನು ಬಳಸಿ ಕಾರ್ಯನಿರ್ವಹಿಸಲು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ.  

ನಮ್ಮ ಮಾನಸಿಕ ಅಂಶಗಳಿಗೆ ಸಂಬಂಧಿಸಿರುವುದು 

ನಾಲ್ಕನೆಯದು ನಮ್ಮ ಮಾನಸಿಕ ಅಂಶಗಳಾದ ಬುದ್ಧಿವಂತಿಕೆ, ದಯೆ, ತಾಳ್ಮೆ ಮತ್ತು ಇತ್ಯಾದಿಗಳಿಗೆ ಸಂಬಂಧಿಸಿರುವುದು. ತಪ್ಪಾದ ಸಾವಧಾನತೆಯು ನಾವು ಸ್ಥಿರವಾಗಿದ್ದೇವೆ ಎಂದು ಯೋಚಿಸುವುದಾಗಿರುತ್ತದೆ ಮತ್ತು “ನಾನು ಇರುವುದೇ ಹೀಗೆ ಮತ್ತು ಪ್ರತಿಯೊಬ್ಬರೂ ಅದನ್ನು ಒಪ್ಪಿಕೊಳ್ಳಬೇಕು. ಅವುಗಳನ್ನು ಬದಲಾಯಿಸಲು ಅಥವಾ ಬೆಳೆಸಲು ನನ್ನಿಂದ ಸಾಧ್ಯವಿಲ್ಲ.” ಸರಿಯಾದ ಸಾವಧಾನತೆಯು, ಈ ಎಲ್ಲಾ ಅಂಶಗಳು ಒಂದು ನಿರ್ದಿಷ್ಟ ಮಟ್ಟದಲ್ಲಿ ಹೆಪ್ಪುಗಟ್ಟಿರುವುದಿಲ್ಲ, ಬದಲಿಗೆ ಅವುಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ಬೆಳೆಸಬಹುದು ಎಂಬುದಾಗಿರುತ್ತದೆ – ಇಲ್ಲಿ ನಾವು ಏಕಾಗ್ರತೆಯನ್ನು ಬೆಳೆಸುವುದರ ಬಗ್ಗೆ ಮಾತನಾಡುತ್ತಿದ್ದೇವೆ. 

ನಮ್ಮನ್ನು ನಾವು ನಿಯಂತ್ರಿಸಿಕೊಳ್ಳುವುದು 

ಇದು ವಿಚಿತ್ರವಾಗಿದೆ, ನಾವು ನಿಜವಾಗಿಯೂ ಕೆಟ್ಟ ಮನಸ್ಥಿತಿಯಲ್ಲಿರುವಾಗ ಅಥವಾ ನಾವು ತಪ್ಪಿತಸ್ಥರೆಂದು ಭಾವಿಸುವಾಗ, ಅಂತಹ ಮನಸ್ಥಿತಿಯೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎಂದು ವಿಶ್ಲೇಷಿಸಿದರೆ, ನಾವು ಆ ಭಾವನೆಯನ್ನು ಹಿಡಿದಿಟ್ಟುಕೊಂಡು, ಅದರೊಂದಿಗೆ ಸಿಲುಕಿಕೊಳ್ಳುತ್ತೇವೆ ಎಂದು ನಾವು ಕಂಡುಕೊಳ್ಳುತ್ತೇವೆ. ಅಥವಾ ಪಾಪಪ್ರಜ್ಞೆಯಿಂದ ನಾವು ಮಾಡಿದ ತಪ್ಪಿಗಾಗಿಯೇ ಅಂಟಿಕೊಳ್ಳುತ್ತೇವೆ. ನಾವೆಲ್ಲರೂ ಮನುಷ್ಯರು, ಮತ್ತು ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ. ತಪ್ಪಾದ ಸಾವಧಾನತೆ ಎಂದರೆ, ನಾವು ಆ ಭಾವನೆಯನ್ನು ಹಿಡಿದಿಟ್ಟುಕೊಂಡು ಅದನ್ನು ಬಿಟ್ಟುಕೊಡದೇ ಇರುವುದು ಮತ್ತು ನಾವು ಎಷ್ಟು ಕೆಟ್ಟವರು ಎಂದು ಯೋಚಿಸುತ್ತಾ ನಮ್ಮನ್ನು ಹತಾಶಗೊಳಿಸುವುದಾಗಿರುತ್ತದೆ. ಸರಿಯಾದ ಸಾವಧಾನತೆಯು - ಮನಸ್ಥಿತಿಗಳು ಬದಲಾಗುತ್ತವೆ, ಏಕೆಂದರೆ ಅವು ಯಾವಾಗಲೂ ಬದಲಾಗುತ್ತಿರುವ ಕಾರಣಗಳು ಮತ್ತು ಪರಿಸ್ಥಿತಿಗಳ ಮೂಲಕ ಉದ್ಭವಿಸುತ್ತವೆ, ಮತ್ತು ಯಾವುದೂ ಶಾಶ್ವತವಾಗಿರುವುದಿಲ್ಲ ಎಂದು ತಿಳಿಯುವುದಾಗಿರುತ್ತದೆ. 

ಬೌದ್ಧ ಬೋಧನೆಗಳಲ್ಲಿ ನಾವು ಕಂಡುಕೊಳ್ಳುವ ಒಂದು ಬಹಳಾ ಸಹಾಯಕವಾದ ಸಲಹೆಯೆಂದರೆ "ನಿಮ್ಮ ನಿಯಂತ್ರಣವನ್ನು ನೀವೇ ತೆಗೆದುಕೊಳ್ಳಿ." ಇದನ್ನು, ನಿಮಗೆ ಬೆಳಿಗ್ಗೆ ಎಚ್ಚರವಾಗಿ ಇನ್ನೂ ಹಾಸಿಗೆಯಲ್ಲಿರುವಾಗ, ಆ ಆರಾಮದಾಯಕವಾಗಿರುವ ನಿದ್ರಾವಸ್ಥೆಯಿಂದ ಹೊರಬರಲು ಬಯಸದಿರುವುದಕ್ಕೆ ಹೋಲಿಸಬಹುದು. ಆದರೆ ಆಗ ನೀವು ನಿಯಂತ್ರಣದಲ್ಲಿದ್ದು ಎದ್ದೇಳುತ್ತೀರಿ, ಅಲ್ಲವೇ? ನಮಗೆ ಹಾಗೆ ಮಾಡುವ ಸಾಮರ್ಥ್ಯವಿದೆ, ಇಲ್ಲದಿದ್ದರೆ ನಮ್ಮಲ್ಲಿ ಅರ್ಧದಷ್ಟು ಜನರು ಎಂದಿಗೂ ಬೆಳಿಗ್ಗೆ ಎದ್ದೇಳುವುದಿಲ್ಲ! ನಾವು ಕೆಟ್ಟ ಮನಸ್ಥಿತಿಯಲ್ಲಿರುವಾಗ ಅಥವಾ ಸ್ವಲ್ಪ ನಿರಾಸೆಯಾಗಿರುವಾಗಲೂ ಹೀಗೆಯೇ, ನಾವು ನಮ್ಮ ಮೇಲಿನ ನಿಯಂತ್ರಣವನ್ನು ಸಾಧಿಸಬಹುದು - "ಹೌದು, ನಾನು ಹೀಗೆ ಮಾಡಬಹುದು!" - ಅದಕ್ಕೆ ಮಣಿಯದೆ, ನಾವು ಬೇಕಾದ ಕಾರ್ಯವನ್ನು ಮುಂದುವರಿಸಬೇಕು. 

ಸಾವಧಾನತೆಯ ಇತರ ಅಂಶಗಳು 

ಸಾಮಾನ್ಯವಾಗಿ, ಸಾವಧಾನತೆಯು ಬಹಳಾ ಮುಖ್ಯವಾಗಿರುತ್ತದೆ. ನಾವು ವಿಷಯಗಳನ್ನು ಮರೆತುಬಿಡುವುದನ್ನು ತಪ್ಪಿಸುತ್ತದೆ. ನಾವು ಮಾಡಬೇಕಾದ ಕೆಲಸಗಳಿದ್ದರೆ, ಸರಿಯಾದ ಸಾವಧಾನತೆಯು ಅವುಗಳ ಮೇಲೆ ಕೇಂದ್ರೀಕರಿಸಲು ನಮಗೆ ಸಹಾಯ ಮಾಡುತ್ತದೆ. ಸಾವಧಾನತೆಯು ನೆನಪಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದೆ, ಆದ್ದರಿಂದ ನಿಮ್ಮ ಮೆಚ್ಚಿನ ದೂರದರ್ಶನ ಕಾರ್ಯಕ್ರಮವು ಇಂದು ರಾತ್ರಿ ಪ್ರಸಾರವಾಗಲಿದೆ ಎಂದು ನೀವು ನೆನಪಿಸಿಕೊಳ್ಳಬಹುದು. ಆದರೆ ಇಂತಹ ಮುಖ್ಯವಲ್ಲದ ವಿಷಯಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ, ಹೆಚ್ಚು ಮುಖ್ಯವಾದ ಇತರ ವಿಷಯಗಳನ್ನು ಮರೆತುಬಿಡುವಂತೆ ಮಾಡುತ್ತದೆ.  

ನಾವು ಒಂದು ರೀತಿಯ ತರಬೇತಿಯನ್ನು ಅನುಸರಿಸುತ್ತಿದ್ದರೆ, ಅದನ್ನು ನೆನಪಿನಲ್ಲಿಡುವುದು ಸರಿಯಾದ ಸಾವಧಾನತೆಯಾಗಿರುತ್ತದೆ. ನಾವು ವ್ಯಾಯಾಮ ಮಾಡುತ್ತಿದ್ದರೆ, ಪ್ರತಿದಿನ ವ್ಯಾಯಾಮವನ್ನು ಮಾಡುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಆಹಾರಕ್ರಮವೊಂದನ್ನು ಪಾಲಿಸುತ್ತಿದ್ದರೆ, ನಮಗೆ ಕೇಕನ್ನು ನೀಡಿದಾಗ ಅದನ್ನು ಸ್ವೀಕರಿಸದಂತೆ ಅದರ ಬಗ್ಗೆ ಸಾವಧಾನವಾಗಿರಬೇಕು. 

ಸಾವಧಾನತೆಯು, ನಾವು ಮಾಡುತ್ತಿರುವ ಕಾರ್ಯದ ಮೇಲಿನ ಹಿಡಿತವಾಗಿರುತ್ತದೆ ಮತ್ತು ಉಳಿದೆಲ್ಲಾ ಬಾಹ್ಯ, ಮುಖ್ಯವಲ್ಲದ ಸಂಗತಿಗಳಿಂದ ವಿಚಲಿತರಾಗದೇ ಇರುವುದಾಗಿರುತ್ತದೆ.  

ನಮ್ಮ ಕುಟುಂಬದವರೊಂದಿಗೆ ಸಾವಧಾನತೆಯನ್ನು ನಿರ್ವಹಿಸುವುದು 

ಕೆಲವರು, ಸ್ನೇಹಿತರು ಅಥವಾ ಅಪರಿಚಿತರಿಗಿಂತ, ಅವರ ಕುಟುಂಬದವರೊಂದಿಗೆ ಇರುವಾಗ, ನೈತಿಕತೆಯ ಬಗ್ಗೆ ಎಚ್ಚರವಹಿಸಲು ಕಷ್ಟಪಡುತ್ತಾರೆ. ಹೀಗೆ ನಮ್ಮೊಂದಿಗೆ ಆಗುವುದಾದರೆ, ಪ್ರಾರಂಭದಲ್ಲೇ ಬಲವಾದ ಉದ್ದೇಶವನ್ನು ಇಟ್ಟುಕೊಳ್ಳುವುದು ಸಾಮಾನ್ಯವಾದ ಸಲಹೆಯಾಗಿರುತ್ತದೆ. ನೀವು ನಿಮ್ಮ ಸಂಬಂಧಿಕರನ್ನು ಭೇಟಿಯಾಗಲಿದ್ದರೆ, ನೀವು ಇದನ್ನು ನಿಮ್ಮ ಉದ್ದೇಶವಾಗಿ ಪರಿಗಣಿಸಬಹುದು - "ನಾನು ಕೋಪಗೊಳ್ಳದಂತೆ ಇರಲು ಪ್ರಯತ್ನಿಸುತ್ತೇನೆ. ಅವರು ನನಗೆ ಬಹಳಾ ಕರುಣಾಮಯಿಯಾಗಿದ್ದಾರೆ ಎಂದು ನೆನಪಿಟ್ಟುಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಅವರು ನನಗೆ ಹತ್ತಿರವಾದವರು ಮತ್ತು ನಾನು ಅವರೊಂದಿಗೆ ನಡೆದುಕೊಳ್ಳುವ ರೀತಿಯು ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ.” ಪ್ರಾರಂಭದಲ್ಲಿ ಇದು ಬಹಳ ಮುಖ್ಯವಾಗಿರುತ್ತದೆ. 

ಅವರೂ ಮನುಷ್ಯರೇ ಎಂದು ನಾವು ನೆನಪಿಟ್ಟುಕೊಳ್ಳಬೇಕು. ನಾವು ಅವರನ್ನು ಕೇವಲ ತಾಯಿ, ತಂದೆ, ಸಹೋದರಿ, ಸಹೋದರನ ಪಾತ್ರದಲ್ಲಿ ಅಥವಾ ನಿಮ್ಮೊಂದಿಗಿರುವ ಅವರ ಸಂಬಂಧದ ಮೂಲಕ ಗುರುತಿಸಬಾರದು. ನೀವು ಅವರನ್ನು ಒಂದು ನಿರ್ದಿಷ್ಟ ಪಾತ್ರದಲ್ಲಿ ಮಾತ್ರ ನೋಡುತ್ತಿದ್ದರೆ, ಅವರು ಏನೇ ಮಾಡಿದರೂ, ಅದಕ್ಕೆ ನಾವು ಒಬ್ಬ ತಾಯಿ ಅಥವಾ ತಂದೆಯ ಬಗ್ಗೆ ಇರುವ ನಮ್ಮ ಎಲ್ಲಾ ಪ್ರಕ್ಷೇಪಗಳೊಂದಿಗೆ ಮತ್ತು ನಮ್ಮೊಂದಿಗೆ ಇರುವ ಅವರ ಇತಿಹಾಸ ಮತ್ತು ನಿರೀಕ್ಷೆಗಳು ಮತ್ತು ನಿರಾಶೆಗಳೊಂದಿಗೆ ಪ್ರತಿಕ್ರಿಯಿಸುತ್ತೇವೆ. ಅದರ ಬದಲಿಗೆ ಮನುಷ್ಯರು ಪರಸ್ಪರ ಸಂಬಂಧ ಹೊಂದಿರುವಂತೆ ಇರುವುದು ಉತ್ತಮ. ಇದರ ಬಗ್ಗೆ ಗಮನ ಹರಿಸದೆ ಅವರು ನಮ್ಮನ್ನುಇನ್ನೂ ಮಗುವಿನಂತೆ ನಡೆಸಿಕೊಂಡರೆ, ನಾವು ಅವರಿಗೆ ಬೇಕಾದ ಹಾಗೆ ವರ್ತಿಸದೆ, ಅವರ ಮಾದರಿಯನ್ನು ಅನುಸರಿಸುವುದಿಲ್ಲ. ಅವರೂ ಕೂಡ ಮನುಷ್ಯರು ಎಂದು ನಾವು ನೆನಪಿಸಿಕೊಳ್ಳುತ್ತೇವೆ ಮತ್ತು ಅವರ ಆಟಗಳಲ್ಲಿ ಪಾಲ್ಗೊಳ್ಳುವುದಿಲ್ಲ; ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ತಟ್ಟಬಹುದು ಅಲ್ಲವೇ?

ಇತ್ತೀಚಿಗೆ ನನ್ನ ಅಕ್ಕ, ಒಂದು ವಾರದವರೆಗೆ ನನ್ನನ್ನು ಭೇಟಿ ಮಾಡಿದ್ದಳು. ಅವಳು ರಾತ್ರಿ ಬೇಗನೇ ಮಲಗಲು ಹೋಗುತ್ತಿದ್ದಳು ಮತ್ತು ನಂತರ ನನ್ನ ತಾಯಿಯೆಂಬಂತೆ "ಈಗ ಹೋಗಿ ಮಲಗು" ಎಂದು ನನಗೆ ಹೇಳುತ್ತಿದ್ದಳು. ಆದರೆ ನಾನೂ ಕೂಡ ಮಗುವಿನಂತೆ ಹೀಗೆ ಪ್ರತಿಕ್ರಿಯಿಸಿದರೆ, "ಇಲ್ಲ, ಇದು ಬಹಳಾ ಬೇಗವಾಯಿತು, ನನಗೆ ಈಗ ಮಲಗಲು ಇಷ್ಟವಿಲ್ಲ, ನಾನು ಎಚ್ಚರವಾಗಿರಲು ಬಯಸುತ್ತೇನೆ, ನೀನು ಯಾಕೆ ನನಗೆ ಮಲಗುವಂತೆ ಹೇಳುತ್ತಿದ್ದೀ?", ಆಗ ನಾನು ಅವಳ ಆಟದಲ್ಲಿ ಪಾಲ್ಗೊಳ್ಳುವಂತಾಗುತ್ತದೆ. ನಂತರ ನಾವಿಬ್ಬರೂ ಅಸಮಾಧಾನಗೊಳ್ಳುತ್ತೇವೆ. ಹಾಗಾಗಿ, ಅವಳು ನನ್ನ ಮೇಲಿನ ಕಾಳಜಿಯಿಂದ ಈ ಸಲಹೆ ನೀಡುತ್ತಿರುವಳೆಂದೂ, ನನ್ನನ್ನು ಕೋಪಗೊಳಿಸಲು ಹೀಗೆ ಮಾಡುತ್ತಿಲ್ಲವೆಂದೂ ನಾನು ನೆನಪಿಸಿಕೊಳ್ಳಬೇಕಾಗಿತ್ತು. ಅವಳ ಪ್ರಕಾರ, ನಾನು ಬೇಗನೆ ಮಲಗುವುದು ಉತ್ತಮ. ಆದ್ದರಿಂದ ನಾವು ನಮ್ಮ ಆಲೋಚನೆಗಳನ್ನು ಪ್ರಕ್ಷೇಪಿಸುವುದಕ್ಕಿಂತ ಹೆಚ್ಚಾಗಿ ವಾಸ್ತವಿಕವಾಗಿ ಏನಾಗುತ್ತಿದೆ ಎಂಬುದನ್ನು ನೋಡಲು ಪ್ರಯತ್ನಿಸಬೇಕು. 

ಆದ್ದರಿಂದ ನಾವು ನಮ್ಮ ಕುಟುಂಬಸ್ಥರನ್ನು ಭೇಟಿ ಮಾಡುವ ಮೊದಲು, ನಮ್ಮ ಪ್ರೇರಣೆಯ ಬಗ್ಗೆ ಗಮನ ಹರಿಸಬಹುದು, ಅಂದರೆ: 

 • ನಮ್ಮ ಗುರಿ: ನಾನು ಕಾಳಜಿವಹಿಸುವಂತಹ ಮತ್ತು ನನಗಾಗಿ ಕಾಳಜಿ ವಹಿಸುವಂತಹ ನಮ್ಮ ಕುಟುಂಬದೊಂದಿಗೆ ಉತ್ತಮವಾದ ಸಂವಾದವನ್ನು ಹೊಂದುವುದು ಗುರಿಯಾಗಿದೆ. 
 • ಜೊತೆಗಿರುವ ಭಾವನೆ: ನಮ್ಮ ಕುಟುಂಬಸ್ಥರನ್ನು ಮನುಷ್ಯರೆಂದು ಪರಿಗಣಿಸಿ, ಅವರ ಬಗ್ಗೆ ಕಾಳಜಿ ವಹಿಸುವುದು. 

ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಇದೊಂದು ಭಯಾನಕ ಅಗ್ನಿಪರೀಕ್ಷೆ ಎಂದು ಯೋಚಿಸುವ ಬದಲು, ಇದನ್ನು ಬೆಳೆಯಲು ಒಂದು ಸವಾಲಾಗಿ ಮತ್ತು ಅವಕಾಶವಾಗಿ ನೋಡುವುದಾಗಿದೆ: "ನಾನು ಕೋಪಗೊಳ್ಳದೆ ನನ್ನ ಕುಟುಂಬದೊಂದಿಗೆ ರಾತ್ರಿಯ ಊಟವನ್ನು ಮಾಡಬಹುದೇ?"

ನಿಮ್ಮ ಕುಟುಂಬದವರು, ಮತ್ತು ನಿಮ್ಮ ಪೋಷಕರು, ನಿಮ್ಮನ್ನು ಆಗಾಗ್ಗೆ ಪೀಡಿಸಲು ಪ್ರಾರಂಭಿಸಿದಾಗ, “ನೀನೇಕೆ ಮದುವೆಯಾಗಬಾರದು? ನೀನು ಇನ್ನೂ ಒಳ್ಳೆಯ ಕೆಲಸವನ್ನು ಯಾಕೆ ಹುಡುಕಬಾರದು? ನಿನಗೆ ಇನ್ನೂ ಯಾಕೆ ಮಕ್ಕಳಾಗಿಲ್ಲ?” (ನನ್ನ ಅಕ್ಕ ನನ್ನನ್ನು ನೋಡಿದಾಗ ಹೇಳಿದ ಮೊದಲ ವಿಷಯವೆಂದರೆ "ನೀನು ಕ್ಷೌರ ಮಾಡಿಸಿಕೊಳ್ಳಬೇಕು!”), ಅವರು ನಮ್ಮ ಬಗ್ಗೆ ಕಾಳಜಿ ವಹಿಸುವುದರಿಂದ ಆ ವಿಷಯವನ್ನು ಕೇಳುತ್ತಿದ್ದಾರೆ ಎಂದು ನಾವು ಗುರುತಿಸಿ, ಹೀಗೆ ಹೇಳಬಹುದು, "ನಿಮ್ಮ ಕಾಳಜಿಗಾಗಿ ಧನ್ಯವಾದಗಳು!” 

ಅವರು ಹಿನ್ನೆಲೆಯ ಬಗ್ಗೆಯೂ ನಾವು ಯೋಚಿಸಬಹುದು, ಅಂದರೆ ಅವರ ಅನೇಕ ಸ್ನೇಹಿತರು ಹೀಗೆ ಕೇಳುವರು, “ಸರಿ, ನಿಮ್ಮ ಮಗ ಈಗ ಏನು ಮಾಡುತ್ತಿದ್ದಾನೆ? ನಿಮ್ಮ ಮಗಳು ಏನು ಮಾಡುತ್ತಿದ್ದಾಳೆ?", ಮತ್ತು ಅವರು ತಮ್ಮ ಸ್ನೇಹಿತರೊಂದಿಗೆ ಸಾಮಾಜಿಕವಾಗಿ ಸಂವಹನ ನಡೆಸಬೇಕಾಗಿರುತ್ತದೆ. ದುರುದ್ದೇಶದಿಂದ ಏಕೆ ನೀವು ಇನ್ನೂ ಮದುವೆಯಾಗಿಲ್ಲ ಎಂದು ಅವರು ಕೇಳುತ್ತಿಲ್ಲ, ಬದಲಿಗೆ ನಿಮ್ಮ ಸಂತೋಷದ ಬಗ್ಗೆಗಿನ ಕಾಳಜಿಯಿಂದ ಕೇಳುತ್ತಿದ್ದಾರೆ. ಇದನ್ನು ಒಪ್ಪಿಕೊಂಡು, ಅವರ ಕಾಳಜಿಯನ್ನು ಪ್ರಶಂಸಿಸುವುದೇ ಮೊದಲ ಹೆಜ್ಜೆ. ಮತ್ತು ನೀವು ಬಯಸಿದ್ದಲ್ಲಿ, ನೀವು ಏಕೆ ಮದುವೆಯಾಗಿಲ್ಲ ಎಂಬುದರ ಕುರಿತು ನೀವು ಶಾಂತವಾಗಿ ವಿವರಿಸಬಹುದು! 

ಅನುಚಿತವಾದ ಸಾವಧಾನತೆಯೊಂದಿಗೆ, ನಾವು ಯಾವುದೇ ಉಪಯೋಗವಿಲ್ಲದ ವಿಚಾರಗಳನ್ನು ಹಿಡಿದಿಟ್ಟುಕೊಳ್ಳುತ್ತೇವೆ. ಇದು ಪ್ರಾಚೀನ ಇತಿಹಾಸದ ವಿಚಾರವಾಗಿರಬಹುದು, "ನೀವು ಹತ್ತು ವರ್ಷಗಳ ಹಿಂದೆ ಏಕೆ ಹಾಗೆ ಮಾಡಿದಿರಿ?" ಅಥವಾ "ನೀವು ಮೂವತ್ತು ವರ್ಷಗಳ ಹಿಂದೆ ಹೀಗೆ ಹೇಳಿದ್ದಿರಿ." ನಾವು ಅದನ್ನು ಹಿಡಿದಿಟ್ಟುಕೊಂಡು, ಯಾರಿಗೂ ಮತ್ತೊಂದು ಅವಕಾಶವನ್ನು ನೀಡುವುದಿಲ್ಲ, ಇದರಿಂದ ಅವರು ಈಗ ಹೇಗಿದ್ದಾರೆ ಎಂಬುದರ ಮೇಲೆ ನಾವು ಕೇಂದ್ರೀಕರಿಸಲಾಗುವುದಿಲ್ಲ. ನಾವು ಈ ರೀತಿಯ ಪೂರ್ವಗ್ರಹಗಳನ್ನು ಹಿಡಿದಿಟ್ಟುಕೊಳ್ಳುತ್ತೇವೆ "ನನ್ನ ಪೋಷಕರು ಬರುತ್ತಿದ್ದಾರೆ, ಈ ಭೇಟಿ ಚೆನ್ನಾಗಿ ನಡೆಯುವುದಿಲ್ಲ”, ನಾವು ಮೊದಲೇ ಇದು ಚೆನ್ನಾಗಾಗುವುದಿಲ್ಲ ಎಂದು ನಿರ್ಧರಿಸಿರುತ್ತೇವೆ. ಇದು ಊಟಕ್ಕೆ ಮೊದಲೇ ನಮ್ಮನ್ನು ತುಂಬಾ ಉದ್ವಿಗ್ನಗೊಳಿಸುತ್ತದೆ! ಆದ್ದರಿಂದ ನಾವು ಇದರ ಬಗ್ಗೆ ಸರಿಯಾದ ಸಾವಧಾನತೆಯೊಂದಿಗೆ ಯೋಚಿಸುತ್ತೇವೆ, ಇದು ಅವರು ಹೇಗಿದ್ದಾರೆ ಎಂಬುದನ್ನು ನೋಡುವ ಅವಕಾಶವಾಗಿದೆ ಮತ್ತು ಪೂರ್ವಾಗ್ರಹಗಳಿಲ್ಲದೆ ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯಿಸುವ ಅವಕಾಶವಾಗಿದೆ ಎಂದು ಭಾವಿಸುತ್ತೇವೆ. 

ಸಾವಧಾನತೆಯನ್ನು ಕಾಪಾಡಿಕೊಳ್ಳಲು ಪ್ರಾಯೋಗಿಕ ಸಲಹೆ 

ಕಷ್ಟಕರ ಸಂದರ್ಭಗಳಲ್ಲಿ ನಾವು ನಮ್ಮ ಸಾವಧಾನತೆಯನ್ನು ಹೇಗೆ ಕಾಪಾಡಿಕೊಳ್ಳಬಹುದು? ನಾವು ಇವನ್ನು ಬೆಳೆಸಬೇಕಾಗಿದೆ: 

 • ಉದ್ದೇಶ - ಮರೆಯದಿರಲು ಪ್ರಯತ್ನಿಸುವ ಬಲವಾದ ಉದ್ದೇಶ 
 • ಪರಿಚಿತತೆ - ಒಂದೇ ಪ್ರಕ್ರಿಯೆಯನ್ನು, ಅದು ಸ್ವಯಂಚಾಲಿತವಾಗಿ ನೆನಪಾಗುವವರೆಗೆ ಪದೇ ಪದೇ ಮಾಡುವುದು. 
 • ಎಚ್ಚರಿಕೆ - ನಾವು ಸಾವಧಾನತೆಯನ್ನು ಕಳೆದುಕೊಂಡಾಗ ಅದನ್ನು ಗುರುತಿಸುವ ಎಚ್ಚರಿಕೆಯ ವ್ಯವಸ್ಥೆ. 

ಇದೆಲ್ಲವೂ ಕಾಳಜಿಯುಳ್ಳ ಮನೋಭಾವವನ್ನು ಆಧರಿಸಿದೆ, ನೀವು ನಿಮ್ಮ ಮತ್ತು ಇತರರ ಮೇಲೆ ನಿಮ್ಮ ನಡವಳಿಕೆಯಿಂದಾಗುವ ಪರಿಣಾಮದ ಬಗ್ಗೆ ಕಾಳಜಿ ವಹಿಸುತ್ತೀರಿ. ನೀವು ಹೇಗೆ ವರ್ತಿಸುತ್ತೀರಿ ಎಂಬುದರ ಬಗ್ಗೆ ನೀವು ಪ್ರಾಮಾಣಿಕವಾಗಿ ಕಾಳಜಿ ವಹಿಸದಿದ್ದರೆ, ಅದರಿಂದ ನೀವು ಸಾವಧಾನತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅಲ್ಲಿ ಯಾವುದೇ ರೀತಿಯ ಶಿಸ್ತು ಇರುವುದಿಲ್ಲ. ನಾವೇಕೆ ಕಾಳಜಿ ವಹಿಸಬೇಕು? ಏಕೆಂದರೆ ನೀವು ಮನುಷ್ಯರು. ನಿಮ್ಮ ತಾಯಿ ಮತ್ತು ತಂದೆ ಮನುಷ್ಯರು. ಮತ್ತು ನಾವೆಲ್ಲರೂ ಸಂತೋಷವಾಗಿರಲು ಬಯಸುತ್ತೇವೆ. ಯಾರೂ ಅಸಂತೋಷವಾಗಿರಲು ಬಯಸುವುದಿಲ್ಲ. ನಾವು ಇತರರೊಂದಿಗೆ ವರ್ತಿಸುವ ಮತ್ತು ಮಾತನಾಡುವ ರೀತಿಯು ಅವರ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಬಗ್ಗೆ ನಾವು ಕಾಳಜಿ ವಹಿಸಬೇಕು. 

ನಾವು ನಮ್ಮನ್ನು ಮತ್ತು ನಮ್ಮ ಪ್ರೇರಣೆಯನ್ನು ಪರೀಕ್ಷಿಸಬೇಕು. ಬೇರೆಯವರು ನಮ್ಮನ್ನು ಇಷ್ಟಪಡುತ್ತಾರೆ ಎಂಬ ಕಾರಣದಿಂದ ನಾವು ಒಳ್ಳೆಯವರಾಗಿರಲು ಬಯಸಿದರೆ, ಅದು ಸ್ವಲ್ಪ ಬಾಲಿಶವಾಗಿರುತ್ತದೆ. ಇದು ಸ್ವಲ್ಪ ಮೂರ್ಖತನವಾಗಿರುತ್ತದೆ. ಜಾಗರೂಕರಾಗಿರಲು ಮತ್ತು ಸಾವಧಾನತೆಯನ್ನು ಕಾಪಾಡಿಕೊಳ್ಳಲು ಅತ್ಯುತ್ತಮವಾದ ಕಾರಣವೆಂದರೆ ನಾವು ಕಾಳಜಿಯುಳ್ಳ ಮನೋಭಾವದಿಂದ ಇತರರ ಬಗ್ಗೆ ಕಾಳಜಿ ವಹಿಸುತ್ತೇವೆ. 

ಏಕಾಗ್ರತೆ 

ಏಕಾಗ್ರತೆಗಾಗಿ ನಾವು ಅನ್ವಯಿಸುವ ಅಷ್ಟಾಂಗ ಮಾರ್ಗದ ಮೂರನೆಯ ಅಂಶವನ್ನು ಸರಿಯಾದ ಏಕಾಗ್ರತೆ ಎಂದು ಕರೆಯಲಾಗುತ್ತದೆ (ಹೌದು, ಸ್ವತಃ ಏಕಾಗ್ರತೆಯೇ). ಏಕಾಗ್ರತೆಯು, ಒಂದು ವಸ್ತುವಿನ ಮೇಲಿರುವ ಮಾನಸಿಕ ನಿಯೋಜನೆಯಾಗಿರುತ್ತದೆ. ನಾವು ಕೇಂದ್ರೀಕರಿಸಲು ಬಯಸುವ ಯಾವುದನ್ನಾದರೂ ನಾವು ಒಮ್ಮೆ ಹಿಡಿದಿಟ್ಟುಕೊಂಡರೆ, ಸಾವಧಾನತೆಯು ಆ ಏಕಾಗ್ರತೆಯನ್ನು ಕಳೆದುಕೊಳ್ಳದಂತೆ ಅಲ್ಲಿಯೇ ಇರಿಸುತ್ತದೆ. ಆದರೆ ಮೊದಲು ಆ ವಸ್ತುವಿನ ಮೇಲೆ ಹಿಡಿತವನ್ನು ಸಾಧಿಸುವುದೇ ಏಕಾಗ್ರತೆ. 

ಒಂದು ವಸ್ತುವಿನ ಮೇಲೆ ಏಕಾಗ್ರತೆಯನ್ನು ತರಲು ನಾವು ಗಮನವನ್ನು ಬಳಸುತ್ತೇವೆ. ಹಿಂದಿನ ಕಾಲಕ್ಕೆ ಹೋಲಿಸಿಕೊಂಡರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಏನಾಗುತ್ತಿದೆ ಎಂದರೆ, ನಾವು ನಮ್ಮ ಗಮನವನ್ನು ವಿಭಜಿಸಿದ್ದೇವೆ, ಆದ್ದರಿಂದ ನಮಗೆ ಎಂದಿಗೂ ಒಂದು ವಿಚಾರದ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಲಾಗುವುದಿಲ್ಲ. ನೀವು ಟಿವಿಯಲ್ಲಿ ಸುದ್ದಿಯನ್ನು ವೀಕ್ಷಿಸುವಾಗ, ಪರದೆಯ ಮಧ್ಯದಲ್ಲಿ ದಿನದ ಸುದ್ದಿಯನ್ನು ಪ್ರಸಾರ ಮಾಡುವ ವ್ಯಕ್ತಿ ಇರುತ್ತಾರೆ, ನಂತರ ಅವರ ಕೆಳಗೆ ಇತರ ಸುದ್ದಿಗಳ ಲೇಖನಗಳು ಇರುತ್ತವೆ, ನಂತರ ಮೂಲೆಗಳಲ್ಲಿ ಇತರ ವಿಷಯಗಳು ಇರುತ್ತವೆ. ಅವುಗಳಲ್ಲಿ ಒಂದರ ಮೇಲೂ ನಮಗೆ ಗಮನಹರಿಸಲು ಅಥವಾ ಸಂಪೂರ್ಣವಾಗಿ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ನಾವು ಬಹುಕಾರ್ಯವನ್ನು ಮಾಡಬಹುದು ಎಂದು ನಾವು ಭಾವಿಸಿದರೂ, ನೀವು ಬುದ್ಧರಲ್ಲದಿದ್ದರೆ, ನಿಮ್ಮ ಬಹುಕಾರ್ಯಗಳಲ್ಲಿರುವ ಎಲ್ಲಾ ವಿಷಯಗಳ ಮೇಲೆ 100% ಏಕಾಗ್ರತೆಯನ್ನು ಇರಿಸಲು ಯಾರಿಗೂ ಸಾಧ್ಯವಾಗುವುದಿಲ್ಲ. 

ಕೆಲವೊಮ್ಮೆ ನಾವು ಒಬ್ಬರೊಂದಿಗೆ ಇರುವಾಗ ಮತ್ತು ಅವರು ನಮ್ಮೊಂದಿಗೆ ಮಾತನಾಡುತ್ತಿರುವಾಗ, ನಮ್ಮ ಮಾನಸಿಕ ನಿಯೋಜನೆಯು ನಮ್ಮ ಸೆಲ್ ಫೋನ್‌ನ ಮೇಲೆ ಇರುತ್ತದೆ. ಇದು ತಪ್ಪಾದ ಮಾನಸಿಕ ನಿಯೋಜನೆ ಏಕೆಂದರೆ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರೂ ನಾವು ಅದರ ಮೇಲೆ ಗಮನ ಹರಿಸುತ್ತಿಲ್ಲ. ನಮಗೆ ಒಂದು ವಿಷಯದ ಮೇಲೆ ಮಾನಸಿಕ ನಿಯೋಜನೆಯಿದ್ದರೂ, ಅದನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿರುತ್ತದೆ. ಇಂದಿನ ವೇಗವಾಗಿ ಬದಲಾಗುತ್ತಿರುವ ವಿಷಯಗಳಿಗೆ ಮತ್ತು ಒಂದರ ಮೇಲಂತೆ ಇನ್ನೊಂದು ವಿಷಯವನ್ನು ನೋಡುವುದಕ್ಕೆ ನಾವು ಎಷ್ಟು ಒಗ್ಗಿಕೊಂಡಿದ್ದೇವೆ ಎಂದರೆ, ನಾವು ಬಹಳಾ ಸುಲಭವಾಗಿ ಬೇಸರಗೊಳ್ಳುತ್ತೇವೆ. ಆ ರೀತಿಯ ಏಕಾಗ್ರತೆಯಿರುವುದು – ಇದರ ಮೇಲೆ ಒಂದು ಕ್ಷಣ, ಅದರ ಮೇಲೆ ಒಂದು ಕ್ಷಣ - ಒಂದು ಅಡಚಣೆಯಾಗಿದೆ. ಇದು ತಪ್ಪಾದ ಏಕಾಗ್ರತೆ. ಸರಿಯಾಗಿ ಕೇಂದ್ರೀಕರಿಸಲು ಸಾಧ್ಯವಾಗುವುದು ಎಂದರೆ ಅಗತ್ಯವಿರುವವರೆಗೂ ಕೇಂದ್ರೀಕರಿಸಲು ಸಾಧ್ಯವಾಗುವುದು, ನಮಗ ಬೇಸರವಾದಾಗ ಅಥವಾ ನಮಗೆ ಆಸಕ್ತಿಯಿಲ್ಲದ ಕಾರಣ ಅದನ್ನು ಬಿಟ್ಟು ಬೇರೊಂದು ವಿಷಯಕ್ಕೆ ಮುಂದುವರೆಯುವುದು ಎಂದಲ್ಲ. 

ಒಂದು ಮುಖ್ಯ ಅಡಚಣೆಯೆಂದರೆ ನಾವು ಮನರಂಜನೆಯನ್ನು ಬಯಸುತ್ತೇವೆ. ಇದು ತಪ್ಪು ಸಾವಧಾನತೆಯಾಗಿರುತ್ತದೆ, ತಾತ್ಕಾಲಿಕ ಆನಂದವು ನಮ್ಮನ್ನು ತೃಪ್ತಿಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ ಆದರೆ ಅದು ಮತ್ತಷ್ಟು ಹಂಬಲವನ್ನು ಸೃಷ್ಟಿಸುತ್ತದೆ. ನಾವು ಮಾಡಬಹುದಾದ ಮತ್ತು ನೋಡಬಹುದಾದ ಹೆಚ್ಚಿನ ಸಾಧ್ಯತೆಗಳಿದ್ದಷ್ಟು – ಇವುಗಳನ್ನು ಇಂರ್ಟನೆಟ್ ನಮಗೆ ನೀಡುತ್ತದೆ, ಅನಿಯಮಿತವಾದ ಸಾಧ್ಯತೆಗಳು! – ನಾವು ಅಷ್ಟೇ ಹೆಚ್ಚು ಬೇಸರ, ಉದ್ವಿಗ್ನತೆ ಮತ್ತು ಒತ್ತಡವನ್ನು ಅನುಭವಿಸುತ್ತೇವೆ ಎಂದು ಸಾಮಾಜಿಕ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ನೀವು ಒಂದನ್ನು ನೋಡುತ್ತಿರುವಾಗ, ಇನ್ನೂ ಹೆಚ್ಚಿನ ಮನರಂಜಿತವಾಗಿರುವ ಇನ್ನೊಂದಿರಬಹುದು ಮತ್ತು ಅದು ನನ್ನಿಂದ ತಪ್ಪಿಸಿಕೊಳ್ಳಬಹುದು ಎಂದು ನೀವು ಭಯಪಡುತ್ತೀರಿ. ಈ ರೀತಿಯಾಗಿ ಮುಂದುವರೆದು, ನೀವು ಯಾವುದರ ಬಗ್ಗೆಯೂ ಗಮನಹರಿಸುವುದಿಲ್ಲ. ಇದು ಕಷ್ಟಕರವಾಗಿದ್ದರೂ, ಒಂದೇ ಸಮಯದಲ್ಲಿ ಬಹಳಾ ವಿಷಯಗಳು ನಡೆಯದಂತೆ ನಿಮ್ಮ ಜೀವನವನ್ನು ಸರಳಗೊಳಿಸಲು ಪ್ರಯತ್ನಿಸುವುದು ಉತ್ತಮವಾಗಿರುತ್ತದೆ. ನಿಮ್ಮ ಏಕಾಗ್ರತೆ ಬೆಳೆದಂತೆ, ನೀವು ವ್ಯವಹರಿಸಬಹುದಾದ ವ್ಯಾಪ್ತಿಯನ್ನು ಹೆಚ್ಚಿಸಲು ನಿಮಗೆ ಸಾಧ್ಯವಾಗುತ್ತದೆ. 

ನಿಮ್ಮಲ್ಲಿ ಉತ್ತಮ ಏಕಾಗ್ರತೆಯಿದ್ದರೆ, ನೀವು ಒಮ್ಮೆ ಇದರ ಮೇಲೆ, ನಂತರ ಅದರ ಮೇಲೆ ಕೇಂದ್ರೀಕರಿಸಬಹುದು; ಆದರೆ ವಿಚಲಿತರಾಗದೆ, ಒಂದು ಕಾಲದಲ್ಲಿ ಒಂದರ ಮೇಲೆ ಮಾತ್ರ ಕೇಂದ್ರೀಕರಿಸಬೇಕು. ಒಬ್ಬ ವೈದ್ಯರು, ಹೇಗೆ ಒಂದು ಸಮಯದಲ್ಲಿ ಒಂದು ರೋಗಿಯೊಂದಿಗೆ ಮಾತ್ರ ವ್ಯವಹರಿಸಬೇಕು ಮತ್ತು ಅವರ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಬೇಕು, ಹಿಂದಿನ ಅಥವಾ ಮುಂದಿನ ರೋಗಿಯ ಬಗ್ಗೆ ಯೋಚಿಸಬಾರದೋ, ಹಾಗೆಯೇ ನಾವೂ ಇರಬೇಕು. ಹಗಲುಹೊತ್ತು, ವೈದ್ಯರು ಅನೇಕ ರೋಗಿಗಳನ್ನು ನೋಡಬಹುದಾದರೂ, ಅವರು ಯಾವಾಗಲೂ ಒಂದು ಸಮಯದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸುತ್ತಾರೆ. ಇದು ಏಕಾಗ್ರತೆಗೆ ಹೆಚ್ಚು ಉತ್ತಮವಾಗಿರುತ್ತದೆ. 

ಆದರೆ ಇದು ಸವಾಲೊಡ್ಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನನ್ನ ಬಗ್ಗೆ ಹೇಳುವುದಾದರೆ, ನಾನು ವೆಬ್‌ಸೈಟ್ ಮತ್ತು ವಿವಿಧ ಭಾಷೆಗಳು ಮತ್ತು ಮುಂತಾದವುಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ವಿವಿಧ ಕಾರ್ಯಗಳನ್ನು ನಿಭಾಯಿಸುತ್ತೇನೆ. ಒಂದೇ ವಿಷಯದ ಮೇಲೆ ಕೇಂದ್ರೀಕರಿಸುವುದು ನಿಜವಾಗಿಯೂ ಕಷ್ಟವಾಗಿರುತ್ತದೆ. ಒಂದೇ ಸಮಯದಲ್ಲಿ ಬಹಳಷ್ಟು ವಿಷಯಗಳು ಎದ್ದುಬರುತ್ತವೆ. ಸಂಕೀರ್ಣತೆಯಿಂದ ತುಂಬಿದ ವ್ಯವಹಾರದಲ್ಲಿ ಕೆಲಸ ಮಾಡುವವರೆಲ್ಲರೂ ಇದನ್ನು ಎದುರಿಸುತ್ತಾರೆ. ಆದರೆ ಏಕಾಗ್ರತೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಬಹುದು. 

ಸಾರಾಂಶ 

ಏಕಾಗ್ರತೆಗಾಗಿ ಇರುವ ಅಡೆತಡೆಗಳನ್ನು ನಮ್ಮಿಂದ ದೂರಗೊಳಿಸುವ ವಿಧಾನಗಳು ಸಾಕಷ್ಟಿವೆ. ಒಂದು ಸರಳವಾದ ವಿಧಾನವೆಂದರೆ, ನಾವು ಕೆಲಸ ಮಾಡುತ್ತಿರುವಾಗ ನಮ್ಮ ಫೋನ್ ಅನ್ನು ಆಫ್ ಮಾಡುವುದು ಅಥವಾ ಇಮೇಲ್‌ಗಳನ್ನು ಪರಿಶೀಲಿಸಲು ದಿನಕ್ಕೆ ಒಂದು ಅಥವಾ ಎರಡು ಬಾರಿ, ಒಂದು ನಿರ್ದಿಷ್ಟ ಸಮಯವನ್ನು ಇಟ್ಟುಕೊಳ್ಳುವುದಾಗಿರುತ್ತದೆ, ಹೀಗೆ ಮಾಡುವುದರಿಂದ ನಾವು ಮಾಡುತ್ತಿರುವ ಕೆಲಸದ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಲು ನಮಗೆ ಸಾಧ್ಯವಾಗುತ್ತದೆ. ಒಬ್ಬ ವೈದ್ಯರು ಅಥವಾ ಪ್ರಾಧ್ಯಾಪಕರಿಗೆ ಇರುವ ಕಚೇರಿಯ ಸಮಯದಂತೆ; ಅವರನ್ನು ಭೇಟಿ ಮಾಡಲು ಯಾವಾಗ ಬೇಕಾದರೂ ಆವಾಗ ಹೋಗುವುದಲ್ಲ, ಅವರು ಲಭ್ಯವಿರುವ ಕೆಲವು ಗಂಟೆಗಳಿರುತ್ತವೆ. ಇದನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು, ಇದು ನಮ್ಮ ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. 

ಸಾಮಾಜಿಕ ಬೆಳವಣಿಗೆಯನ್ನು ವಿಶ್ಲೇಷಿಸುವುದು ಆಸಕ್ತಿದಾಯಕವಾಗಿದೆ. ಹಿಂದಿನ ಕಾಲದಲ್ಲಿ, ಏಕಾಗ್ರತೆಯ ಮುಖ್ಯ ಅಡಚಣೆಗಳು ನಮ್ಮದೇ ಆದ ಮಾನಸಿಕ ಸ್ಥಿತಿಗಳಾಗಿದ್ದವು - ಮಾನಸಿಕ ಅಲೆದಾಟ, ಹಗಲುಗನಸು ಕಾಣುವುದು ಇತ್ಯಾದಿ. ಇಂದು ಅವು ಬಹಳಷ್ಟಿವೆ, ಮತ್ತು ಇವುಗಳಲ್ಲಿ ಹೆಚ್ಚಿನವು ಸೆಲ್ ಫೋನ್‌ಗಳು, ಫೇಸ್‌ಬುಕ್ ಮತ್ತು ಇಮೇಲ್‌ನಂತಹ ಬಾಹ್ಯ ಮೂಲಗಳಿಂದ ಬರುತ್ತವೆ. ನಿಜವಾಗಿಯೂ ಇವೆಲ್ಲವುಗಳಿಂದ ಪರವಶವಾಗದಿರಲು ಪ್ರಯತ್ನಪಡಬೇಕಾಗುತ್ತದೆ, ಮತ್ತು ಹಾಗೆ ಸಾಧ್ಯವಾಗಲು ನಾವು ಈ ಮಾಧ್ಯಮಗಳ ಹಾನಿಕಾರಕ ಲಕ್ಷಣಗಳನ್ನು ಗುರುತಿಸಬೇಕಾಗಿದೆ. ಇವುಗಳಲ್ಲಿ ಬಹಳಷ್ಟು ಜನರು ನಿಸ್ಸಂದೇಹವಾಗಿ ಅನುಭವಿಸುತ್ತಿರುವುದು ನಮ್ಮ ಗಮನವಿಡುವ ವ್ಯಾಪ್ತಿಯು ಕ್ರಮೇಣವಾಗಿ ಕಡಿಮೆಯಾಗುತ್ತಿರುವುದು. ಟ್ವಿಟರ್ನಲ್ಲಿ ಅಕ್ಷರಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ ಮತ್ತು ಫೇಸ್ಬುಕ್ನ ಫೀಡ್ ನಿರಂತರವಾಗಿ ನವೀಕರಿಸುತ್ತಿರುತ್ತದೆ. ಇವೆಲ್ಲವೂ ಬಹಳಾ ವೇಗವಾಗಿ ಆಗುತ್ತಿದ್ದು, ಅವು ಏಕಾಗ್ರತೆಗೆ ಹಾನಿಕಾರಕವಾಗುವಂತಹ ಕೆಟ್ಟದಾದ ಅಭ್ಯಾಸಗಳನ್ನು ನಿರ್ಮಿಸುತ್ತದೆ, ಏಕೆಂದರೆ ನೀವು ಯಾವುದರ ಮೇಲೂ ನಿಮ್ಮ ಗಮನವಿಡಲು ಸಾಧ್ಯವಾಗುವುದಿಲ್ಲ; ಎಲ್ಲವೂ ನಿರಂತರವಾಗಿ ಬದಲಾಗುತ್ತಿರಬೇಕು. ಈ ವಿಷಯದ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. 

Top