ಸರಿಯಾದ ದೃಷ್ಟಿಕೋನ ಮತ್ತು ಉದ್ದೇಶ

ವಿವೇಚನಾತ್ಮಕ ಅರಿವು ಎಂದರೆ ಯಾವುದು ಸರಿ ಮತ್ತು ತಪ್ಪು, ಯಾವುದು ಸಹಾಯಕ ಮತ್ತು ಹಾನಿಕಾರಕ ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸುವುದಾಗಿರುತ್ತದೆ. ಇದಕ್ಕಾಗಿ, ಅಷ್ಟಾಂಗ ಮಾರ್ಗದಲ್ಲಿನ ಕೊನೆಯ ಎರಡು ಅಂಶಗಳಿವೆ: ಸರಿಯಾದ ದೃಷ್ಟಿಕೋನ ಮತ್ತು ಸರಿಯಾದ ಉದ್ದೇಶ (ಸರಿಯಾಗಿ ಪ್ರೇರಕವಾಗುವ ಚಿಂತನೆ). 

ಸರಿಯಾದ ದೃಷ್ಟಿಕೋನವು, ನಾವು ತಪ್ಪು ಮತ್ತು ಸರಿಯ ನಡುವೆ ಸರಿಯಾದ ವಿವೇಚನೆ ನಡೆಸಿ ಅಥವಾ ಹಾನಿಕಾರಕ ಮತ್ತು ಸಹಾಯಕವಾದವುಗಳ ನಡುವೆ ಸರಿಯಾದ ವಿವೇಚನೆ ನಡೆಸಿ ಯಾವುದು ಸತ್ಯವೆಂದು ನಂಬುವುದನ್ನು ಒಳಗೊಂಡಿರುತ್ತದೆ. ಸರಿಯಾದ ಪ್ರೇರಣೆಯು, ಇದಕ್ಕೆ ಕಾರಣವಾಗುವ ಮನಸ್ಸಿನ ರಚನಾತ್ಮಕ ಸ್ಥಿತಿಯಾಗಿರುತ್ತದೆ. 

ದೃಷ್ಟಿಕೋನ 

ನಮಗೆ ಸರಿಯಾದ ಅಥವಾ ತಪ್ಪಾದ ವಿವೇಚನಾತ್ಮಕ ಅರಿವು ಇರಬಹುದು:  

  • ನಾವು ಸರಿಯಾಗಿ ವಿವೇಚನೆ ನಡೆಸಿ ಅದನ್ನು ಸತ್ಯವೆಂದು ನಂಬಬಹುದು 
  • ನಾವು ತಪ್ಪಾಗಿ ವಿವೇಚನೆ ನಡೆಸಿ ಅದನ್ನು ಸತ್ಯವೆಂದು ನಂಬಬಹುದು. 

ನಾವು ತಪ್ಪು ವಿವೇಚನೆಯನ್ನು ನಡೆಸಿ ಅದನ್ನೇ ಸತ್ಯವೆಂದು ಎತ್ತಿ ಹಿಡಿದಾಗ ಅದು ತಪ್ಪು ದೃಷ್ಟಿಕೋನವಾಗಿರುತ್ತದೆ ಮತ್ತು ಸರಿಯಾದ ವಿವೇಚನೆಯನ್ನು ನಡೆಸಿ ಅದನ್ನು ಸತ್ಯವೆಂದು ಎತ್ತಿಹಿಡಿಯುವುದು ಸರಿಯಾದ ದೃಷ್ಟಿಕೋನವಾಗಿರುತ್ತದೆ. 

ತಪ್ಪು ದೃಷ್ಟಿಕೋನ 

ಉದಾಹರಣೆಗೆ, ನಮ್ಮ ಕ್ರಿಯೆಗಳು ಕೆಲವು ವಿನಾಶಕಾರಿ ಮತ್ತು ಕೆಲವು ರಚನಾತ್ಮಕವಾಗಿರುವ ನೈತಿಕ ಆಯಾಮಗಳನ್ನು ಹೊಂದಿಲ್ಲವೆಂದು ನಂಬುವುದು ಮತ್ತು ಪ್ರತಿಪಾದಿಸುವುದರೊಂದಿಗೆ, ಅವು ನಮ್ಮ ಅನುಭವಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುವುದಿಲ್ಲವೆಂದು ನಂಬುವುದು ತಪ್ಪು ದೃಷ್ಟಿಕೋನವಾಗಿರುತ್ತದೆ. ಇಂದು ಬಹಳಷ್ಟು ಜನರ ಬಳಿಯಿರುವ “ಏನಾದರೂ ಆಗಲಿ”, ಎಂಬ ಮನಸ್ಥಿತಿಯಿಂದ ಇದು ನಿರೂಪಿಸಲ್ಪಟ್ಟಿದೆ. ಇದು ಮುಖ್ಯವಲ್ಲ; ಯಾವುದೂ ಮುಖ್ಯವಲ್ಲ. ಏನಾದರೂ ಆಗಲಿ; ನಾನು ಇದನ್ನು ಮಾಡಲಿ, ಮಾಡದಿರಲಿ, ಅದರಿಂದ ಏನೂ ಆಗುವುದಿಲ್ಲ. ಹೀಗೆ ಯೋಚಿಸುವುದು ಸರಿಯಲ್ಲ. ನೀವು ಧೂಮಪಾನ ಮಾಡುತ್ತೀರೋ ಇಲ್ಲವೋ ಎಂಬುದು ಮುಖ್ಯವಾಗಿರುತ್ತದೆ. ನೀವು ಧೂಮಪಾನವನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯದ ವಿಷಯದಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

ಮತ್ತೊಂದು ತಪ್ಪು ದೃಷ್ಟಿಕೋನವೆಂದರೆ ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಮತ್ತು ನಮ್ಮ ನ್ಯೂನತೆಗಳನ್ನು ನಿವಾರಿಸಲು ಯಾವುದೇ ಮಾರ್ಗವಿಲ್ಲ, ಆದ್ದರಿಂದ ತಲೆಕೆಡಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಂಬುವುದು. ಇದು ತಪ್ಪು, ಏಕೆಂದರೆ ಯಾವುದೇ ವಿಷಯವು ಸ್ಥಿರವಾಗಿರುವುದಿಲ್ಲ ಅಥವಾ ಕಲ್ಲಿನಲ್ಲಿ ಕೆತ್ತಲಾಗಿರುವುದಿಲ್ಲ. ಇತರರಿಗೆ ದಯೆ ತೋರಿಸಲು ಅಥವಾ ಸಹಾಯ ಮಾಡಲು ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಕೆಲವರು ನಂಬುತ್ತಾರೆ, ಬದಲಿಗೆ ನಾವು ಪ್ರತಿಯಬ್ಬರನ್ನೂ ಬಳಸಿ, ಅವರಿಂದ ಸಾಧ್ಯವಾದಷ್ಟು ಲಾಭವನ್ನು ಗಳಿಸಬೇಕು, ಆಗ ನಮಗೆ ಸಂತೋಷ ಸಿಗುತ್ತದೆ ಎಂದು ನಂಬುತ್ತಾರೆ. ಇದು ತಪ್ಪು, ಏಕೆಂದರೆ ಇದು ಸಂತೋಷಕ್ಕೆ ಕಾರಣವಾಗುವುದಿಲ್ಲ. ಬದಲಿಗೆ ಇದು ಘರ್ಷಣೆ, ಅಸೂಯೆ ಮತ್ತು ಇತರರು ನಮ್ಮ ವಸ್ತುಗಳನ್ನು ಕದಿಯಬಹುದೆಂಬ ಚಿಂತೆಗಳನ್ನು ಹುಟ್ಟಿಸುತ್ತದೆ.  

ಹಲವಾರು ರೀತಿಯ ತಪ್ಪು ವಿವೇಚನೆಗಳಿವೆ. ಉದಾಹರಣೆಗೆ ಇದು ದುಃಖ ಮತ್ತು ಅದರ ಕಾರಣಗಳ ಬಗ್ಗೆ ಆಗಿರಬಹುದು. ನಿಮ್ಮ ಮಗು ಶಾಲೆಯಲ್ಲಿ ಚೆನ್ನಾಗಿ ಓದುತ್ತಿಲ್ಲ ಎಂಬ ಪ್ರಕರಣವನ್ನು ಪರಿಗಣಿಸಿ. ತಪ್ಪು ವಿವೇಚನೆಯು ಹೀಗೆ ಯೋಚಿಸುವುದಾಗಿರುತ್ತದೆ, “ಇದೆಲ್ಲವೂ ನನ್ನ ತಪ್ಪು. ಇದು ಪೋಷಕನಾಗಿ ನನ್ನ ತಪ್ಪು.” ಇದು ಈ ಪ್ರಕರಣದ ತಪ್ಪು ವಿವೇಚನೆಯಾಗಿರುತ್ತದೆ. ಘಟನೆಗಳು ಕೇವಲ ಒಂದು ಕಾರಣದಿಂದ ಉದ್ಭವಿಸುವುದಿಲ್ಲ ಅಥವಾ ಸಂಭವಿಸುವುದಿಲ್ಲ. ಕೇವಲ ಒಂದಲ್ಲ, ಬದಲಿಗೆ ಹಲವು ಕಾರಣಗಳು ಮತ್ತು ಪರಿಸ್ಥಿತಿಗಳ ಸಂಯೋಜನೆಯಿಂದಾಗಿ ಘಟನೆಗಳು ಸಂಭವಿಸುತ್ತವೆ. ನಾವೂ ಕೂಡ ಒಂದು ಕಾರಣವಾಗಿರಬಹುದು, ಆದರೆ ನಾವೊಬ್ಬರೇ ಸಮಸ್ಯೆಯ ಕಾರಣವಾಗಿರುವುದಿಲ್ಲ. ಮತ್ತು ಕೆಲವೊಮ್ಮೆ ನಾವು ಕಾರಣವಾಗಿರುವುದೇ ಇಲ್ಲ - ಅದು ಸಂಪೂರ್ಣವಾದ ತಪ್ಪು ಕಲ್ಪನೆಯಾಗಿರುತ್ತದೆ. ಇಲ್ಲ ನಾನು ಬಹಳಷ್ಟು ತೊಂದರೆಗೊಳಗಾದ ಒಬ್ಬ ವ್ಯಕ್ತಿಯ ಉದಾಹರಣೆಯ ಬಗ್ಗೆ ಹೇಳಲು ಬಯಸುತ್ತೇನೆ: ಅವನು ಫುಟ್ಬಾಲ್ ಆಟವೊಂದಕ್ಕೆ ಹೋದನು ಮತ್ತು ಅವನ ತಂಡವು ಸೋತಿತು. ಆಗ, “ನಾನು ಆಟಕ್ಕೆ ಹಾಜರಾಗಿದ್ದೇ ನನ್ನ ತಂಡವು ಸೋಲಲು ಏಕೈಕ ಕಾರಣ, ನಾನೇ ದುರದೃಷ್ಟವನ್ನು ಕರೆತಂದೆ. ತಂಡದ ಸೋಲು ನನ್ನ ತಪ್ಪು.” ಎಂದು ಅವನು ನಂಬಿದ್ದನು. ಇದು ಹಾಸ್ಯಾಸ್ಪದವಾಗಿದೆ. ಇದು ಕಾರಣದ ಬಗ್ಗೆಗಿನ ತಪ್ಪಾದ ವಿವೇಚನೆಯಾಗಿದೆ.  

ಸರಿಯಾದ ದೃಷ್ಟಿಕೋನ 

ಸರಿಯಾದ ವಿವೇಚನಾತ್ಮಕ ಅರಿವು ಅತ್ಯಂತ ಮುಖ್ಯವಾದದ್ದು, ಇದಕ್ಕಾಗಿ ನಾವು ವಾಸ್ತವತೆ, ಕಾರಣದ ವಾಸ್ತವತೆ ಇತ್ಯಾದಿಗಳ ಬಗ್ಗೆ ಕಲಿಯಬೇಕಾಗಿದೆ. ಹಲವಾರು ಕಾರಣಗಳು ಮತ್ತು ಪರಿಸ್ಥಿತಿಗಳಿಂದ ಪ್ರಭಾವಿತವಾಗುವ ಹವಾಮಾನದಂತೆಯೇ ನಾವಿರುವೆವು, ನಮ್ಮನ್ನು ದೇವರಂತೆ ತಪ್ಪಾಗಿ ಗ್ರಹಿಸಿ, ನಮ್ಮ ಯಾವುದೋ ಒಂದು ಕಾರ್ಯದಿಂದ ನಮ್ಮ ಮಗುವು ಶಾಲೆಯಲ್ಲಿ ಕೆಟ್ಟದಾಗಿ ನಡೆದುಕೊಳ್ಳುವ ಬದಲು ಚೆನ್ನಾಗಿ ನಡೆದುಕೊಳ್ಳುವಂತೆ ಆಗುತ್ತದೆ ಎಂಬ ತಪ್ಪು ಕಲ್ಪನೆಯಿರಬಾರದು. ಅದು ಹಾಗೆ ನಡೆಯುವುದಿಲ್ಲ. 

ವಿವೇಚನಾತ್ಮಕ ಅರಿವಿಗೆ, ಸಾಮಾನ್ಯ ಜ್ಞಾನ ಮತ್ತು ಬುದ್ಧಿವಂತಿಕೆ ಮತ್ತು ನಮ್ಮ ಸರಿಯಾದ ವಿವೇಚನೆಯ ಮೇಲೆ ಕೇಂದ್ರೀಕರಿಸಲು ಏಕಾಗ್ರತೆಯ ಅಗತ್ಯವಿರುತ್ತದೆ. ಇದಕ್ಕಾಗಿ ನಮಗೆ ಶಿಸ್ತು ಬೇಕು. ಹೀಗೆ ಇವೆಲ್ಲವೂ ಒಟ್ಟಾಗುತ್ತವೆ.

ಉದ್ದೇಶ (ಪ್ರೇರಿತವಾಗುವ ಚಿಂತನೆ

ನಾವು ಯಾವುದು ಸಹಾಯಕ ಮತ್ತು ಹಾನಿಕಾರಕ, ಯಾವುದು ವಾಸ್ತವ ಮತ್ತು ಯಾವುದು ಅಲ್ಲ ಎಂಬುದರ ನಡುವೆ ವಿವೇಚನೆ ನಡೆಸಿದ ನಂತರ, ನಮ್ಮ ಉದ್ದೇಶ ಅಥವಾ ಪ್ರೇರೇಪಿಸುವ ಚಿಂತನೆಯು, ನಮ್ಮ ವಿವೇಚನೆಯು ನಾವು ಮಾತನಾಡುವ ಅಥವಾ ವರ್ತಿಸುವ ರೀತಿಯಲ್ಲಿ ಅಥವಾ ವಿಷಯಗಳ ಬಗ್ಗೆಗಿರುವ ನಮ್ಮ ಮನೋಭಾವವನ್ನು ಹೇಗೆ ಪ್ರಭಾವಿಸುತ್ತದೆ ಎಂಬುದರ ಬಗ್ಗೆಯಾಗಿರುತ್ತದೆ. ನಾವು ತಪ್ಪಾಗಿ ವಿವೇಚನೆ ನಡೆಸಿದ್ದರೆ, ತಪ್ಪಾಗಿ ಪ್ರೇರೇಪಿಸುವ ಚಿಂತನೆಯು ಅದನ್ನು ಅನುಸರಿಸುತ್ತದೆ ಮತ್ತು ಸರಿಯಾಗಿದ್ದರೆ, ಸರಿಯಾದ ಪ್ರೇರೇಪಿಸುವ ಚಿಂತನೆಯು ಅನುಸರಿಸುತ್ತದೆ. 

ತಪ್ಪು ಉದ್ದೇಶ 

ಉದ್ದೇಶ ಅಥವಾ ಪ್ರೇರೇಪಿಸುವ ಚಿಂತನೆಯು ಪರಿಣಾಮ ಬೀರುವಂತಹ ಮೂರು ಪ್ರಮುಖ ಕ್ಷೇತ್ರಗಳಿವೆ: 

ಸಂವೇದನಾ/ಇಂದ್ರಿಯಗಳನ್ನು ಆಧರಿಸಿದ ಬಯಕೆ 

ಒಂದು ತಪ್ಪಾಗಿ ಪ್ರೇರೇಪಿಸುವ ಆಲೋಚನೆಯು ಇಂದ್ರಿಯಗಳ ಬಯಕೆಯ ಮೇಲೆ ಆಧಾರಿತವಾಗಿರುತ್ತದೆ – ವಸ್ತುಗಳನ್ನು ಗ್ರಹಿಸಲು ಇರುವ ಹಾತೊರೆಯುವ ಬಯಕೆ ಮತ್ತು ಬಾಂಧವ್ಯ, ಅದು ಸುಂದರವಾದ ವಸ್ತುಗಳು, ಸಂಗೀತ, ಉತ್ತಮ ಆಹಾರ, ಉತ್ತಮವಾದ ಬಟ್ಟೆಗಳು ಮತ್ತು ಇತ್ಯಾದಿ ಆಗಿರಬಹುದು. ನಮ್ಮ ಆಸೆಗಳನ್ನು ಬೆನ್ನಟ್ಟುವ ನಮ್ಮ ಪ್ರೇರಕ ಚಿಂತನೆಯು, ಅವು ಅತ್ಯಂತ ಮುಖ್ಯವಾಗಿವೆ ಎಂಬ ತಪ್ಪು ವಿವೇಚನೆಯನ್ನು ಆಧರಿಸಿರುತ್ತದೆ. ನಮಗೆ ಸರಿಯಾದ ವಿವೇಚನೆಯಿದ್ದರೆ, ನಾವು ಸಮಚಿತ್ತವಾಗಿರುತ್ತೇವೆ, ಇದು ಸಂವೇದನಾ ವಸ್ತುಗಳ ಬಾಂಧವ್ಯದಿಂದ ಮುಕ್ತವಾದ ಸಮತೋಲನದ ಮನಸ್ಸಾಗಿರುತ್ತದೆ.

ನಾವು ಎಲ್ಲಿ ಊಟ ಮಾಡುತ್ತೇವೆ ಮತ್ತು ನಾವು ಏನು ತಿನ್ನುತ್ತೇವೆ ಎಂಬುದು ಬಹಳ ಮುಖ್ಯ ಎಂದು ನೀವು ವಿವೇಚಿಸುವುದು ಒಂದು ಉದಾಹರಣೆಯಾಗಿದೆ. ನಾವು ಸರಿಯಾದ ಸ್ಥಳವನ್ನು ಮತ್ತು ಮೆನುವಿನಿಂದ ಸರಿಯಾದ ಖಾದ್ಯವನ್ನು ಆರಿಸಿದರೆ ಅದು ನಿಜವಾಗಿಯೂ ನಮಗೆ ಸಂತೋಷವನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ. ನೀವು ಸರಿಯಾಗಿ ವಿವೇಚನೆ ನಡೆಸಿದರೆ, ಅದು ಅಷ್ಟು ಮುಖ್ಯವಲ್ಲ ಎಂದು ನಿಮಗೆ ಅರಿವಾಗುತ್ತದೆ, ರಾತ್ರಿಯೂಟಕ್ಕೆ ಏನಿದೆ ಅಥವಾ ಟಿವಿಯಲ್ಲಿ ಏನಿದೆ ಎನ್ನುವುದಕ್ಕಿಂತ ಹೆಚ್ಚಿನ ಮುಖ್ಯವಾದ ವಿಷಯಗಳು ಜೀವನದಲ್ಲಿ ಇವೆ ಎಂದು ನಿಮಗೆ ಅರಿವಾಗುತ್ತದೆ. ಆಗ ಮನಸ್ಸು ಹೆಚ್ಚು ಶಾಂತ ಮತ್ತು ಸಮತೋಲಿತವಾಗುತ್ತದೆ.

ದುರುದ್ದೇಶ 

ಎರಡನೆಯ ತಪ್ಪು ಪ್ರೇರಣೆಯಾದ ದುರುದ್ದೇಶವು, ಯಾರನ್ನಾದರೂ ನೋಯಿಸುವ ಅಥವಾ ಅವರಿಗೆ ಹಾನಿ ಮಾಡುವ ಬಯಕೆಯಾಗಿರುತ್ತದೆ. ಯಾರಾದರೂ ಒಂದು ತಪ್ಪು ಮಾಡಿದಾಗ, ನೀವು ಕೋಪಗೊಂಡು, ಅವರು ನಿಜವಾಗಿಯೂ ಕೆಟ್ಟವರು ಮತ್ತು ಶಿಕ್ಷೆಗೆ ಒಳಗಾಗಬೇಕು ಎಂದು ಭಾವಿಸಿದಾಗ ಅದು ತಪ್ಪು ವಿವೇಚನೆಯಾಗಿರುತ್ತದೆ. 

ಜನರು ಎಂದಿಗೂ ತಪ್ಪುಗಳನ್ನು ಮಾಡುವುದಿಲ್ಲ ಎಂಬ ನಮ್ಮ ತಪ್ಪು ವಿವೇಚನೆಯು ಅಸಂಬದ್ಧವಾಗಿದೆ. ನಾವು ಒಬ್ಬರನ್ನು ಹೊಡೆಯಲು ಬಯಸುವಷ್ಟು ಕೋಪಗೊಳ್ಳಬಹುದು, ಆದರೆ ನಮಗೆ ಸರಿಯಾದ ವಿವೇಚನೆಯಿದ್ದರೆ, ನಾವು ಉದಾತ್ತತೆಯನ್ನು ಬೆಳೆಸಿಕೊಳ್ಳುತ್ತೇವೆ. ಇದು ಇತರರಿಗೆ ಸಹಾಯ ಮಾಡುವ ಮತ್ತು ಅವರಿಗೆ ಸಂತೋಷವನ್ನು ತರುವ ಬಯಕೆಯಾಗಿದೆ, ಮತ್ತು ಇದು ಶಕ್ತಿ ಮತ್ತು ಕ್ಷಮೆಯನ್ನು ಒಳಗೊಂಡಿರುತ್ತದೆ. ಯಾರಾದರೂ ತಪ್ಪು ಮಾಡಿದರೆ, ಇದು ಸಹಜ ಎಂದು ನೀವು ಅರಿತುಕೊಳ್ಳುತ್ತೀರಿ ಮತ್ತು ಅವರನ್ನು ದ್ವೇಷಿಸುವುದಿಲ್ಲ. 

ಕ್ರೌರ್ಯ 

ಮೂರನೆಯ ತಪ್ಪು ಉದ್ದೇಶವು ಕ್ರೌರ್ಯದಿಂದ ತುಂಬಿರುವ ಮನಸ್ಸಾಗಿರುತ್ತದೆ, ಇದರಲ್ಲಿ ವಿವಿಧ ಅಂಶಗಳಿವೆ: 

  • ಗೂಂಡಾಗಿರಿ – ಇದು ಇತರರು ಬಳಲುತ್ತಾ, ದುಃಖಿತರಾಗಿರಬೇಕೆಂದು ಬಯಸುವ ಸಹಾನುಭೂತಿಯಿಲ್ಲದ ಕ್ರೂರತೆಯಾಗಿರುತ್ತದೆ. ಉದಾಹರಣೆಗೆ, ನಾವು ಬೇರೊಂದು ಫುಟ್‌ಬಾಲ್ ತಂಡದ ಅನುಯಾಯಿಗಳು ಕೀಳೆಂದು ಭಾವಿಸಿ ಅವರ ವಿರುದ್ಧ ತಾರತಮ್ಯ ಮಾಡುತ್ತೇವೆ ಮತ್ತು ಅವರು ಕೇವಲ ಬೇರೆ ತಂಡವನ್ನು ಇಷ್ಟಪಡುತ್ತಾರೆಂಬ ಕಾರಣಕ್ಕಾಗಿ ಅವರೊಂದಿಗೆ ಜಗಳವಾಡುತ್ತೇವೆ. 
  • ಸ್ವಯಂ-ದ್ವೇಷ – ಸ್ವಯಂ-ಪ್ರೀತಿಯ ಕೊರತೆಯಿರುವ, ನಮ್ಮ ಸ್ವಂತ ಸಂತೋಷವನ್ನು ಹಾಳುಮಾಡುವ ಕ್ರೌರ್ಯವಿದು - ನಾವು ಕೆಟ್ಟ ವ್ಯಕ್ತಿ ಮತ್ತು ಸಂತೋಷವಾಗಿರಲು ಅರ್ಹರಲ್ಲ ಎಂದು ನಾವು ಭಾವಿಸುತ್ತೇವೆ. ಅನುಚಿತ ಸಂಬಂಧಗಳಲ್ಲಿ ಬೆರೆಯುವುದು, ಕೆಟ್ಟ ಅಭ್ಯಾಸಗಳನ್ನು ಇಟ್ಟುಕೊಳ್ಳುವುದು, ಅತಿಯಾಗಿ ತಿನ್ನುವುದು ಮತ್ತು ಮುಂತಾದವುಗಳ ಮೂಲಕ ನಾವು ಹೀಗೆ ಮಾಡುತ್ತೇವೆ. 
  • ವಿಕೃತವಾದ ಆನಂದ - ಇತರ ಜನರು ಬಳಲುತ್ತಿರುವುದನ್ನು ನೋಡಿದಾಗ ಅಥವಾ ಕೇಳಿದಾಗ ನಾವು ಕ್ರೂರತನದಿಂದ ಸಂತೋಷಪಡುತ್ತೇವೆ. ನಿಮ್ಮ ಕಣ್ಣಿನಲ್ಲಿ ಕೆಟ್ಟವರಾಗಿರುವವರು ಅನುಭವಿಸುತ್ತಿರುವ ಸಂಕಟವು ತಕ್ಕ ಶಾಸ್ತಿ ಎಂದು ನೀವು ಭಾವಿಸಬಹುದು, ಉದಾಹರಣೆಗೆ, ನಮಗೆ ಇಷ್ಟವಿಲ್ಲದ ರಾಜಕಾರಣಿಯು ಚುನಾವಣೆಯಲ್ಲಿ ಸೋತಾಗ. ಇಲ್ಲಿ, ಕೆಲವು ಜನರು ಕೆಟ್ಟವರು ಮತ್ತು ಶಿಕ್ಷೆಗೆ ಅರ್ಹರು ಮತ್ತು ಅವರಿಗೆ ಕೆಟ್ಟದ್ದು ಆಗಬೇಕು ಎಂದು ನಾವು ತಪ್ಪಾಗಿ ಯೋಚಿಸುತ್ತೇವೆ; ಆದರೆ ಇತರರಿಗೆ, ವಿಶೇಷವಾಗಿ ನಮಗೆ, ಎಲ್ಲವೂ ಸರಿಯಾಗಿ ನಡೆಯಬೇಕು ಎಂದು ಬಯಸುತ್ತೇವೆ. 

ಸರಿಯಾದ ಉದ್ದೇಶ 

ಸರಿಯಾದ ವಿವೇಚನೆಯನ್ನು ಆಧಾರಿಸಿದ ಸರಿಯಾದ ಉದ್ದೇಶವು ಅಹಿಂಸಾತ್ಮಕ, ಕ್ರೂರವಲ್ಲದ ವರ್ತನೆಯಾಗಿರುತ್ತದೆ. ಬಳಲುತ್ತಿರುವವರಿಗೆ ಹಾನಿಯನ್ನುಂಟುಮಾಡಲು ಬಯಸದ ಮನಸ್ಥಿತಿಯನ್ನು ನೀವು ಹೊಂದಿರುತ್ತೀರಿ, ಅವರನ್ನು ಕೆರಳಿಸಲು ಅಥವಾ ಕಿರಿಕಿರಿಗೊಳಿಸಲು ಅಲ್ಲ. ಅವರೊಂದಿಗೆ ಕೆಟ್ಟದ್ದು ನಡೆದಾಗ ನಾವು ಸಂತೋಷಪಡುವುದಿಲ್ಲ. ಇಲ್ಲಿ ಸಹಾನುಭೂತಿಯ ಪ್ರಜ್ಞೆಯೂ ಇರುತ್ತದೆ, ಇತರರು ದುಃಖ ಮತ್ತು ಅದರ ಕಾರಣಗಳಿಂದ ಮುಕ್ತರಾಗಬೇಕೆಂದು ನಾವು ಬಯಸುತ್ತೇವೆ, ಏಕೆಂದರೆ ಪ್ರತಿಯೊಬ್ಬರೂ ಬಳಲುತ್ತಿದ್ದಾರೆ, ಯಾರೂ ದುಃಖವನ್ನು ಇಷ್ಟಪಡುವುದಿಲ್ಲ ಮತ್ತು ಯಾರೂ ದುಃಖವನ್ನು ಅನುಭವಿಸಲು ತಕ್ಕವರಲ್ಲ ಎಂದು ನಾವು ತಿಳಿಯುತ್ತೇವೆ. ಜನರು ತಪ್ಪುಗಳನ್ನು ಮಾಡಿದರೆ, ಹಾಗಾಗಿದ್ದು ಅವರ ಗೊಂದಲದಿಂದಾಗಿ, ಅವರು ಆಂತರಿಕವಾಗಿ ಕೆಟ್ಟವರು ಎಂದು ಅಲ್ಲ ಎಂದು ನಾವು ತಿಳಿಯುತ್ತೇವೆ. ಸಹಜವಾಗಿ, ಸರಿಯಾದ ವಿವೇಚನೆ ಮತ್ತು ಸರಿಯಾದ ಉದ್ದೇಶವು ನಮ್ಮನ್ನು ಸರಿಯಾದ ಮಾತು ಮತ್ತು ಸರಿಯಾದ ಕ್ರಮದೆಡೆಗೆ ಕರೆದೊಯ್ಯುತ್ತವೆ. 

ಅಷ್ಟಾಂಗ ಮಾರ್ಗದ ಎಂಟು ಅಂಶಗಳನ್ನು ಒಟ್ಟಿಗೆ ಜೋಡಿಸುವುದು 

ಅಷ್ಟಾಂಗ ಮಾರ್ಗದ ಎಂಟು ಅಂಶಗಳು ಒಟ್ಟಿಗೆ ಕೂಡುತ್ತವೆ: 

  • ಸರಿಯಾದ ದೃಷ್ಟಿಕೋನ ಮತ್ತು ಉದ್ದೇಶವು, ಸರಿಯಾದ ಅಡಿಪಾಯವನ್ನು ಒದಗಿಸುತ್ತವೆ ಮತ್ತು ನಾವು ಸಹಜವಾಗಿ ಸರಿಯಾದ ಮಾತು, ಸರಿಯಾದ ಕ್ರಮ ಮತ್ತು ಸರಿಯಾದ ಜೀವನೋಪಾಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ಇತರರ ಮೇಲೆ ನಮ್ಮ ನಡವಳಿಕೆಯಿಂದಾಗುವ ಪರಿಣಾಮಗಳಲ್ಲಿ ಯಾವುದು ಸರಿ ಎಂಬುದರ ಬಗ್ಗೆ ನಾವು ವಿವೇಚನೆ ನಡೆಸುತ್ತೇವೆ ಮತ್ತು ಇತರರಿಗೆ ಹಾನಿ ಮಾಡುವ ಬದಲು ಅವರಿಗೆ ಸಹಾಯ ಮಾಡುವ ಬಯಕೆಯನ್ನು ಹೊಂದಿರುತ್ತೇವೆ. 
  • ಈ ಆಧಾರದ ಮೇಲೆ, ನಾವು ನಮ್ಮನ್ನು ಸುಧಾರಿಸಿಕೊಳ್ಳಲು, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ನಮ್ಮ ದೇಹ ಮತ್ತು ಭಾವನೆಗಳ ಬಗ್ಗೆಗಿರುವ ವಿಚಿತ್ರವಾದ ವಿಚಾರಗಳಿಂದ ವಿಚಲಿತರಾಗುವುದಿಲ್ಲ. ಯಾವುದು ಪ್ರಯೋಜನಕಾರಿ ಎಂಬುದರ ಮೇಲೆ ಕೇಂದ್ರೀಕರಿಸಲು ನಾವು ಏಕಾಗ್ರತೆಯನ್ನು ಬಳಸುತ್ತೇವೆ, ನಂತರ ನಮ್ಮ ಉದ್ದೇಶವು ಬಲಗೊಳ್ಳುತ್ತದೆ. ಈ ರೀತಿಯಾಗಿ, ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ.

ನಾವು ಮೂರು ತರಬೇತಿಗಳು ಮತ್ತು ಅಷ್ಟಾಂಗ ಮಾರ್ಗವನ್ನು ಒಂದು ಅನುಕ್ರಮವಾಗಿ ಪ್ರಸ್ತುತಪಡಿಸಬಹುದಾದರೂ, ಅಂತಿಮ ಗುರಿಯು ಸಮಗ್ರವಾಗಿ ಎಲ್ಲವನ್ನೂ ಆಚರಿಸಲು ಸಾಧ್ಯವಾಗುವುದಾಗಿರುತ್ತದೆ. 

ಸಾರಾಂಶ 

ನಾವು ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ಕ್ಷಣದವರೆಗೆ ನಮ್ಮ ಇಂದ್ರಿಯಗಳು ಮನರಂಜನೆಗಾಗಿ ಹಂಬಲಿಸುತ್ತಿರುತ್ತವೆ. ನಮ್ಮ ಕಣ್ಣುಗಳು ಸುಂದರವಾದ ರೂಪಗಳನ್ನು ಹುಡುಕುತ್ತವೆ, ನಮ್ಮ ಕಿವಿಗಳು ಹಿತವಾದ ಶಬ್ದಗಳನ್ನು ಬಯಸುತ್ತವೆ ಮತ್ತು ನಮ್ಮ ಬಾಯಿಗಳು ರುಚಿಕರವಾದ ಸವಿರುಚಿಯನ್ನು ಬಯಸುತ್ತವೆ. ಆನಂದದಾಯಕ ಅನುಭವಗಳನ್ನು ಬಯಸುವುದರಲ್ಲಿ ತಪ್ಪೇನೂ ಇಲ್ಲದಿದ್ದರೂ, ಕೇವಲ ಇದೇ ನಮ್ಮ ಜೀವನದ ಕಥೆಯಾಗಿದ್ದರೆ, ನಾವು ಎಂದಿಗೂ ತೃಪ್ತರಾಗುವುದಿಲ್ಲ ಮತ್ತು ನಾವು ಎಂದಿಗೂ ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ. 

ನೈತಿಕತೆ, ಏಕಾಗ್ರತೆ ಮತ್ತು ಅರಿವಿನ ಮೂರು ತರಬೇತಿಗಳು (ತ್ರಿಶಿಕ್ಷಾ) ನಮಗೆ ಪ್ರತಿ ಕ್ಷಣವನ್ನು ಅತ್ಯುತ್ತಮ ರೀತಿಯಲ್ಲಿ ಬದುಕಲು ಅನುವು ಮಾಡಿಕೊಡುತ್ತವೆ. ಅಷ್ಟಾಂಗ ಮಾರ್ಗವು ಕೇವಲ ನಮಗಾಗಿ ಆನಂದವನ್ನು ಹುಡುಕುವ ಬದಲು, ಇತರರಿಗೂ ಪ್ರಯೋಜನಗಳನ್ನು ನೀಡುವಂತಹ ಮಾದರಿಯನ್ನು ಒದಗಿಸುತ್ತದೆ. ಸರಿಯಾದ ದೃಷ್ಟಿಕೋನಗಳು ಏಕೆ ಸರಿಯಾಗಿವೆ ಮತ್ತು ತಪ್ಪು ದೃಷ್ಟಿಕೋನಗಳು ಏಕಿಲ್ಲ ಮತ್ತು ಸರಿಯಾದ ಕ್ರಮಗಳು ಏಕೆ ಸಹಾಯಕವಾಗಿವೆ ಮತ್ತು ತಪ್ಪು ಕ್ರಮಗಳು ಹಾನಿಕಾರಕವಾಗಿವೆ (ಹೀಗೆ ಮುಂತಾದವುಗಳು) ಎಂದು ನಾವು ಪರಿಶೀಲಿಸಿದಾಗ ಮತ್ತು ಅರ್ಥಮಾಡಿಕೊಂಡಾಗ ಮತ್ತು ಇದಕ್ಕೆ ಅನುಗುಣವಾಗಿ ವರ್ತಿಸಿದಾಗ, ನಮ್ಮ ಜೀವನವು ಸ್ವಯಂಚಾಲಿತವಾಗಿ ಉತ್ತಮಗೊಳ್ಳುತ್ತದೆ. ಆಗ ನಾವು "ಪೂರ್ಣ ಬೌದ್ಧ ಜೀವನ"ವನ್ನು ನಡೆಸುತ್ತೇವೆ.

Top