ನೈತಿಕ ಸ್ವಯಂ-ಶಿಸ್ತಿನ ಪರಿಪೂರ್ಣತೆ: ಶಿಲಾಪರಮಿತ

ಶಿಸ್ತು. ಈ ಪದವು ಕೆಲವರಿಗೆ ಶಾಲಾ ಬಂಧನದ ಚಿತ್ರಗಳನ್ನು ಅಥವಾ ಇತರರಿಗೆ ನಿರ್ಬಂಧಿತ ಆಹಾರಕ್ರಮವನ್ನು ಕಲ್ಪಿಸಬಹುದು. ಬೌದ್ಧಧರ್ಮದಲ್ಲಿ, ನೈತಿಕ ಸ್ವಯಂ-ಶಿಸ್ತು ನಮ್ಮ ನಡವಳಿಕೆಯು ನಮ್ಮ ಮೇಲೆ ಮತ್ತು ಇತರರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ನಮಗೆ ಅನುವು ಮಾಡಿಕೊಡುತ್ತದೆ. ನಮ್ಮನ್ನು ನಿರ್ಬಂಧಿಸುವ ಬದಲು, ನೈತಿಕ ಸ್ವಯಂ-ಶಿಸ್ತನ್ನು ಅನುಸರಿಸುವುದು ನಮಗೆ ಮತ್ತು ನಮ್ಮ ಸುತ್ತಮುತ್ತಲಿನ ಜನರಿಗೆ ಉತ್ತಮ ಪ್ರಯೋಜನವನ್ನು ನೀಡುವ ಸ್ವಾತಂತ್ರ್ಯವನ್ನು ನೀಡುತ್ತದೆ.

ಪರಿಚಯ 

ಆರು ದೂರಗಾಮಿ ವರ್ತನೆಗಳಲ್ಲಿ (ಪರಿಪೂರ್ಣತೆಗಳು) ಎರಡನೆಯದು ನೈತಿಕ ಸ್ವಯಂ-ಶಿಸ್ತು. ಇದು ಸಂಗೀತ ವಾದ್ಯವನ್ನು ಕಲಿಯಲು ಅಥವಾ ಕ್ರೀಡೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯವಿರುವ ರೀತಿಯ ಶಿಸ್ತು ಅಲ್ಲ, ಬದಲಿಗೆ ನಮ್ಮ ನೈತಿಕ ನಡವಳಿಕೆಗೆ ಸಂಬಂಧಿಸಿರುತ್ತದೆ. ಇದು ಇತರ ಜನರನ್ನು ನಿಯಂತ್ರಿಸುವುದು ಮಾಡುವುದು, ನಿಮ್ಮ ನಾಯಿಗೆ ತರಬೇತಿ ನೀಡುವುದು ಅಥವಾ ಸೈನ್ಯದಲ್ಲಿ ಜನರನ್ನು ನಿಯಂತ್ರಿಸುವುದರೊಂದಿಗೆ ಸಹ ಸಂಬಧಿತವಾಗಿರುವುದಿಲ್ಲ. ನಾವು ನಮ್ಮ ಸ್ವಂತ ಶಿಸ್ತಿನ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ, ಅದರಲ್ಲಿ ನಮಗೆ ಮೂರು ವಿಧಗಳಿವೆ. 

ವಿನಾಶಕಾರಿ ಕ್ರಿಯೆಗಳಿಂದ ದೂರವಿರುವುದು 

ಮೊದಲ ರೀತಿಯ ನೈತಿಕ ಸ್ವಯಂ-ಶಿಸ್ತು ಎಂದರೆ ನಾವು ಹೇಗೆ ವರ್ತಿಸುತ್ತೇವೆ, ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ ಎಂಬುದರ ಆಧಾರದ ಮೇಲೆ ವಿನಾಶಕಾರಿ ಕ್ರಿಯೆಗಳನ್ನು ಮಾಡುವುದನ್ನು ತಡೆಯುವುದು. ಇದರರ್ಥ ಸಾಮಾನ್ಯವಾಗಿ ನಾವು ಕೊಲ್ಲುವುದು, ಕದಿಯುವುದು, ಸುಳ್ಳು ಹೇಳುವುದು ಮುಂತಾದ ಹತ್ತು ರೀತಿಯ ವಿನಾಶಕಾರಿ ಕ್ರಿಯೆಗಳಿಂದ ದೂರವಿರುತ್ತೇವೆ ಮತ್ತು ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಅಡ್ಡಿಯಾಗುವ ನಡವಳಿಕೆಯನ್ನು ತಪ್ಪಿಸಲು ನಾವು ಪ್ರತಿಜ್ಞೆ ಮಾಡಿದ್ದರೆ, ನಾವು ಈ ಪ್ರತಿಜ್ಞೆಗಳನ್ನು ಪಾಲಿಸುತ್ತೇವೆ. 

ನಾವು ಕೆಲವು ವಿನಾಶಕಾರಿ ನಡವಳಿಕೆಗಳನ್ನು ತಪ್ಪಿಸುವ ಬಗ್ಗೆ ಮಾತನಾಡುವಾಗ, ಎರಡು ವಿಧಗಳಿವೆ. ಒಂದು ಸ್ವಾಭಾವಿಕವಾಗಿ ವಿನಾಶಕಾರಿಯಾದ ನಡವಳಿಕೆ, ಅಂದರೆ ಕೊಲ್ಲುವುದು ಮತ್ತು ಕದಿಯುವುದು, ಇವುಗಳನ್ನು ಅರ್ಥಮಾಡಿಕೊಳ್ಳುವುದು ಸುಲಭ. ನಂತರ ಸ್ವಾಭಾವಿಕವಾಗಿ ವಿನಾಶಕಾರಿಯಲ್ಲದ ನಡವಳಿಕೆಗಳಿವೆ, ಆದರೆ ಇವುಗಳನನ್ಉ ತಪ್ಪಿಸುವುದು ಕೆಲವು ಜನರಿಗೆ ಅಥವಾ ಕೆಲವು ಸಮಯಗಳಲ್ಲಿ ಉತ್ತಮ ಎಂದು ಬುದ್ಧ ಹೇಳಿದರು. ಉದಾಹರಣೆಗೆ, ಸನ್ಯಾಸಿಗಳು ಮತ್ತು ಸನ್ಯಾಸಿನಿಯರು ರಾತ್ರಿಯಲ್ಲಿ ತಿನ್ನುವುದನ್ನು ತಪ್ಪಿಸಲು ಉದ್ದೇಶಿಸಲಾಗಿದೆ, ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ. ಈ ನಿಯಮವು, ರಾತ್ರಿ ಮತ್ತು ಬೆಳಿಗ್ಗೆ ಧ್ಯಾನ ಮಾಡಲು ಸ್ಪಷ್ಟ ಮನಸ್ಸನ್ನು ಹೊಂದಲು ಬಯಸಿದರೆ, ರಾತ್ರಿಯಲ್ಲಿ ತಿನ್ನದಿರುವುದು ಉತ್ತಮ ಎಂಬ ಅಂಶದಿಂದ ಬರುತ್ತದೆ. ಇನ್ನೊಂದು ಉದಾಹರಣೆಯೆಂದರೆ ಸನ್ಯಾಸಿ ಅಥವಾ ಸನ್ಯಾಸಿನಿಯಾಗಿ ಉದ್ದ ಕೂದಲು ಇಟ್ಟುಕೊಳ್ಳಬಾರದು ಎಂಬ ಸಲಹೆ, ಏಕೆಂದರೆ ಹಾಗೆ ಮಾಡುವುದರಿಂದ ಒಬ್ಬರ ಸ್ವಂತ ಸೌಂದರ್ಯದ ಮೇಲಿನ ಬಾಂಧವ್ಯ ಹೆಚ್ಚಾಗುತ್ತದೆ ಮತ್ತು ಪ್ರತಿದಿನ ಅದನ್ನು ವಿನ್ಯಾಸಗೊಳಿಸುವುದು ಸಮಯ ವ್ಯರ್ಥ! ನಿಸ್ಸಂಶಯವಾಗಿ, ಈ ಸಲಹೆ ಎಲ್ಲರಿಗಾಗಿ ಆಗಿರುವುದಿಲ್ಲ, ಕೇವಲ ಸನ್ಯಾಸಿಗಳು ಮತ್ತು ಸನ್ಯಾಸಿನಿಯರಿಗೆ ಮಾತ್ರ. 

ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು 

ಎರಡನೇ ರೀತಿಯ ನೈತಿಕ ಸ್ವಯಂ-ಶಿಸ್ತು ಎಂದರೆ ಸಕಾರಾತ್ಮಕ, ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು, ಇದು ಜ್ಞಾನೋದಯವನ್ನು ಸಾಧಿಸಲು ನಮಗೆ ಅಗತ್ಯವಿರುವ ಸಕಾರಾತ್ಮಕ ಶಕ್ತಿಯನ್ನು ನಿರ್ಮಿಸುತ್ತದೆ. ಇದರರ್ಥ ಬೋಧನೆಗಳಿಗೆ ಹೋಗಲು ಮತ್ತು ಅಧ್ಯಯನ ಮಾಡಲು, ಧರ್ಮವನ್ನು ಆಲೋಚಿಸಲು ಮತ್ತು ಧ್ಯಾನಿಸಲು ಮತ್ತು ನಮಸ್ಕಾರಗಳು, ಅರ್ಪಣೆಗಳು ಇತ್ಯಾದಿಗಳಂತಹ ನಮ್ಮ ನ್ಗೊಂಡ್ರೊ (ಸುಧಾರಿತ ತಂತ್ರ ಅಭ್ಯಾಸಕ್ಕಾಗಿ ಇರುವ ಪ್ರಾಥಮಿಕ ಹಂತಗಳು) ಅನ್ನು ಪೂರ್ಣಗೊಳಿಸಲು ಶಿಸ್ತನ್ನು ಹೊಂದಿರುವುದಾಗಿರುತ್ತದೆ. 

ಮತ್ತೊಮ್ಮೆ ಹೇಳುತ್ತೇನೆ, ನೈತಿಕ ಸ್ವಯಂ-ಶಿಸ್ತು ಎಂದರೆ ನಿಜವಾದ ನಡವಳಿಕೆಗಿಂತ ಮನಸ್ಸಿನ ಸ್ಥಿತಿಯಾಗಿರುತ್ತದೆ. ಇದು ನಮ್ಮ ಮನಸ್ಸಿನಿಂದ ಬರುವ ಶಿಸ್ತು ಮತ್ತು ನಾವು ವರ್ತಿಸುವ ವಿಧಾನವನ್ನು ರೂಪಿಸುತ್ತದೆ - ನಾವು ಸಕಾರಾತ್ಮಕ ವಿಷಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ವಿನಾಶಕಾರಿ ಮತ್ತು ಅನುಚಿತ ನಡವಳಿಕೆಯಿಂದ ದೂರವಿರುವುದಾಗಿರುತ್ತದೆ. ಈ ಶಿಸ್ತು ಇಲ್ಲದೆ, ನಾವು ಸಂಪೂರ್ಣವಾಗಿ ನಿಯಂತ್ರಣ ತಪ್ಪುತ್ತೇವೆ ಮತ್ತು ಸುಲಭವಾಗಿ ಗೊಂದಲದ ಭಾವನೆಗಳ ಪ್ರಭಾವಕ್ಕೆ ಒಳಗಾಗುತ್ತೇವೆ. 

ನೈತಿಕ ಸ್ವಯಂ-ಶಿಸ್ತು ವಿವೇಚನೆ ಮತ್ತು ವಿವೇಚನಾತ್ಮಕ ಅರಿವನ್ನು ಆಧರಿಸಿರುತ್ತದೆ. ವಿನಾಶಕಾರಿಯಾಗಿ ವರ್ತಿಸುವುದನ್ನು ತಡೆಯಲು, ನಾವು ವಿನಾಶಕಾರಿಯಾಗಿ ವರ್ತಿಸುವುದರ ಅನಾನುಕೂಲಗಳ ಬಗ್ಗೆ ವಿವೇಚಿಸುತ್ತೇವೆ ಮತ್ತು ನಿರ್ಣಾಯಕರಾಗುತ್ತೇವೆ. ಸಕಾರಾತ್ಮಕ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಧ್ಯಾನ ಮಾಡುವುದು, ಪ್ರಾಥಮಿಕ ಅಭ್ಯಾಸಗಳನ್ನು ಮಾಡುವುದು ಇತ್ಯಾದಿಗಳ ಪ್ರಯೋಜನಗಳನ್ನು ನಾವು ವಿವೇಚಿಸುತ್ತೇವೆ. ವಿವೇಚನೆಯಿಂದ ನಾವು ಸ್ವಯಂಚಾಲಿತವಾಗಿ ಹೇಗೆ ವರ್ತಿಸಬೇಕೆಂದು ತಿಳಿದಿರುತ್ತೇವೆ ಮತ್ತು ಅದರ ಬಗ್ಗೆ ವಿಶ್ವಾಸ ಹೊಂದುತ್ತೇವೆ. 

ಇತರರಿಗೆ ಪ್ರಯೋಜನವಾಗುವಂತೆ ಕೆಲಸ ಮಾಡುವುದು 

ಮೂರನೇ ರೀತಿಯ ನೈತಿಕ ಸ್ವಯಂ-ಶಿಸ್ತು ಎಂದರೆ ಇತರರಿಗೆ ನಿಜವಾಗಿಯೂ ಪ್ರಯೋಜನವಾಗಲು ಮತ್ತು ಸಹಾಯ ಮಾಡಲು ಕೆಲಸ ಮಾಡುವುದು. ಇಲ್ಲಿ, ಇತರರಿಗೆ ಸಹಾಯ ಮಾಡುವ ಪ್ರಯೋಜನದ ವಿವೇಚನೆಯನ್ನು ನಾವು ಹೊಂದಿದ್ದೇವೆ ಮತ್ತು ನಮಗೆ ಅದು ಇಷ್ಟವಿಲ್ಲದ ಕಾರಣ ಅಥವಾ ನಾವು ಯಾರನ್ನಾದರೂ ವಿಶೇಷವಾಗಿ ಇಷ್ಟಪಡದ ಕಾರಣದಿಂದ ಅವರಿಗೆ ಸಹಾಯ ಮಾಡದಿರುವುದನ್ನು ತಡೆಯುತ್ತೇವೆ. 

ಇತರರಿಗೆ ಸಹಾಯ ಮಾಡುವುದರಲ್ಲಿ ಹಲವು ಅಂಶಗಳಿವೆ, ಆದರೆ ಸಾಮಾನ್ಯವಾಗಿ ಹೇಳುವುದಾದರೆ, "ನಮ್ಮ ಸಕಾರಾತ್ಮಕ ಪ್ರಭಾವದ ಅಡಿಯಲ್ಲಿ ಇತರರನ್ನು ಒಟ್ಟುಗೂಡಿಸುವ ನಾಲ್ಕು ಮಾರ್ಗಗಳು" ಎಂದು ಕರೆಯಲ್ಪಡುವಲ್ಲಿ ತೊಡಗಿಸಿಕೊಳ್ಳಲು ನಮಗೆ ಶಿಸ್ತು ಇದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇತರರು ನಮ್ಮನ್ನು ಹೆಚ್ಚು ಒಪ್ಪಿಕೊಳ್ಳುವಂತಹ ರೀತಿಯಲ್ಲಿ ನಾವು ವರ್ತಿಸುತ್ತೇವೆ, ಇದರಿಂದ ನಾವು ಅವರಿಗೆ ಮತ್ತಷ್ಟು ಆಳವಾದ ವಿಷಯಗಳನ್ನು ಕಲಿಸಬಹುದು. 

ಈ ನಾಲ್ಕು ಮಾರ್ಗಗಳು: 

  • ಉದಾರವಾಗಿರುವುದು 
  • ಆಹ್ಲಾದಕರ ರೀತಿಯಲ್ಲಿ ಮಾತನಾಡುವುದು 
  • ಇತರರನ್ನು ಅವರ ಗುರಿಗಳನ್ನು ತಲುಪುವಂತೆ ಪ್ರೇರೇಪಿಸುವುದು 
  • ಈ ಗುರಿಗಳೊಂದಿಗೆ ಸ್ಥಿರವಾಗಿರುವುದು. 

ಆರು ದೂರಗಾಮಿ ಮನೋಭಾವಗಳ ಕುರಿತಾದ ಬೋಧನೆಗಳು, ನಾವು ಸಹಾಯ ಮಾಡಲು ಮತ್ತು ಪ್ರಯೋಜನವನ್ನು ನೀಡಲು ವಿಶೇಷವಾಗಿ ಶ್ರಮಿಸಬೇಕಾದ 11 ರೀತಿಯ ಜನರ ಪಟ್ಟಿಯನ್ನು ನಿರ್ದಿಷ್ಟಪಡಿಸುತ್ತವೆ. ನಾವು ಅದನ್ನು ಕೇವಲ ಒಂದು ಪಟ್ಟಿಯಾಗಿ ಪರಿಗಣಿಸಬಾರದು, ಆದರೆ ಅಂತಹ ಜನರನ್ನು ನಾವು ಎದುರಿಸಿದಾಗ ಅವರನ್ನು ನಿರ್ಲಕ್ಷಿಸುವ ಬದಲು ನಿಜವಾಗಿಯೂ ಅವರಿಗೆ ಸಹಾಯ ಮಾಡುವ ಒಂದು ನಿರ್ದಿಷ್ಟ ಸೂಚನೆಯಾಗಿ ಪರಿಗಣಿಸಬೇಕು. 

  • ಬಳಲುತ್ತಿರುವವರು 
  • ತಮಗೆ ತಾವು ಹೇಗೆ ಸಹಾಯ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಗೊಂದಲದಲ್ಲಿರುವವರು 
  • ನಮಗೆ ಸಹಾಯ ಮಾಡಿದವರು 
  • ಭಯದಿಂದ ತುಂಬಿರುವವರು 
  • ಮಾನಸಿಕ ದುಃಖದಲ್ಲಿ ಮುಳುಗಿರುವವರು 
  • ಬಡವರು ಮತ್ತು ನಿರ್ಗತಿಕರು 
  • ನಮ್ಮೊಂದಿಗೆ ಬಾಂಧವ್ಯ ಹೊಂದಿರುವವರು  
  • ಅವರ ಇಚ್ಛೆಗೆ ಅನುಗುಣವಾಗಿ ನಾವು ಸಹಾಯ ಮಾಡಲು ಸಾಧ್ಯವಾಗುವವರು 
  • ಪ್ರಾಮಾಣಿಕ ಜೀವನವನ್ನು ನಡೆಸುವವರು 
  • ವಿನಾಶಕಾರಿ ಜೀವನವನ್ನು ನಡೆಸುವವರು 
  • ನಮ್ಮಲ್ಲಿರಬಹುದಾದ ಯಾವುದೇ ಅಸಾಧಾರಣ ಸಾಮರ್ಥ್ಯಗಳನ್ನು ಬಳಸುವಂತೆ ನಮ್ಮನ್ನು ಒತ್ತಾಯಿಸುವವರು. 

ನೈತಿಕ ಸ್ವ-ಶಿಸ್ತಿನ ಕುರಿತು ಶಾಂತಿದೇವ 

ಶಾಂತಿದೇವ ನೈತಿಕ ಸ್ವ-ಶಿಸ್ತನ್ನು "ಬೋಧಿಸತ್ವ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದು" ಎಂಬ ಅವರ ಪಠ್ಯದಲ್ಲಿನ ಎರಡು ಅಧ್ಯಾಯಗಳನ್ನು ವಿವರಿಸುವುದರ ಮೂಲಕ ಚರ್ಚಿಸುತ್ತಾರೆ. "ಕಾಳಜಿ ವಹಿಸುವ ಮನೋಭಾವ" ಎಂದು ಕರೆಯಲ್ಪಡುವ ಮೊದಲ ಅಧ್ಯಾಯವು ನೈತಿಕ ಸ್ವಯಂ-ಶಿಸ್ತಿನ ಆಧಾರವಾಗಿದೆ, ಅಲ್ಲಿ ನಾವು ನಮ್ಮ ನಡವಳಿಕೆಯ ಪರಿಣಾಮದ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ತೊಂದರೆಗೊಳಿಸುವ ಭಾವನೆಗಳ ಪ್ರಭಾವಕ್ಕೆ ಒಳಗಾಗದಂತೆ ಕಾಳಜಿ ವಹಿಸುತ್ತೇವೆ. ಇತರ ಜನರು ಸಹ ಭಾವನೆಗಳನ್ನು ಹೊಂದಿದ್ದಾರೆ ಮತ್ತು ನಾವು ವಿನಾಶಕಾರಿಯಾಗಿ ವರ್ತಿಸಿದರೆ ನಾವು ಅವರಿಗೆ ನೋವುಂಟು ಮಾಡುತ್ತೇವೆ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಭವಿಷ್ಯದಲ್ಲಿ, ನಮ್ಮ ನಡವಳಿಕೆಯ ಪರಿಣಾಮಗಳ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ. ಇದೆಲ್ಲವೂ ನೈತಿಕ ಸ್ವಯಂ-ಶಿಸ್ತಿನ ಆಧಾರವನ್ನು ಸೃಷ್ಟಿಸುತ್ತದೆ. ನಾವು ನಿಜವಾಗಿಯೂ ಇತರರನ್ನು ಅಥವಾ ನಮ್ಮ ಸ್ವಂತ ಭವಿಷ್ಯವನ್ನು ನೋಯಿಸುವ ಬಗ್ಗೆ ಕಾಳಜಿ ವಹಿಸದಿದ್ದರೆ, ನಾವು ನೈತಿಕ ರೀತಿಯಲ್ಲಿ ವರ್ತಿಸುವ ಅಗತ್ಯವನ್ನು ಅನುಭವಿಸುವುದಿಲ್ಲ. 

ಅನೇಕ ಭಾಷೆಗಳಲ್ಲಿ, ಈ ಕಾಳಜಿ ವಹಿಸುವ ಮನೋಭಾವವನ್ನು ಅನುವಾದಿಸುವುದು ಬಹಳ ಕಷ್ಟದ ಕೆಲಸ. ಇದು ಕಾಳಜಿ ವಹಿಸುವುದನ್ನು ಒಳಗೊಂಡಿರುತ್ತದೆ, ಆದ್ದರಿಂದ ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಬಗ್ಗೆ ಜಾಗರೂಕರಾಗಿರುತ್ತೇವೆ, ಆದರೆ ಇದನ್ನು ಅನುಸರಿಸುವುದನ್ನು ಕೂಡ ಗಂಭೀರವಾಗಿ ಪರಿಗಣಿಸುತ್ತದೆ, ಅಂದರೆ ನಮ್ಮ ಮತ್ತು ಇತರರ ಮೇಲೆ ನಮ್ಮ ನಡವಳಿಕೆಯಿಂದಾಗುವ ಪರಿಣಾಮ. 

ಶಾಂತಿದೇವ ಈ ವಿಷಯಕ್ಕೆ ಮೀಸಲಿಟ್ಟ ಎರಡನೇ ಅಧ್ಯಾಯವು ಸಾವಧಾನತೆ ಮತ್ತು ಜಾಗರೂಕತೆಯೊಂದಿಗೆ ವ್ಯವಹರಿಸುತ್ತದೆ. ಸಾವಧಾನತೆ (ಮೈಂಡ್ಫುಲ್ನೆಸ್) ಎಂದರೆ ತೊಂದರೆಗೊಳಗಾದ ಭಾವನೆಗಳಿಗೆ ಬಲಿಯಾಗದೆ, ಶಿಸ್ತಿನ ಮೇಲೆ ಮಾನಸಿಕ ಹಿಡಿತವನ್ನು ಇಟ್ಟುಕೊಳ್ಳುವ ಮನಸ್ಸಿನ ಸ್ಥಿತಿ. ಇದು ಶಿಸ್ತಿಗೆ ಅಂಟಿಕೊಳ್ಳುವ ಮಾನಸಿಕ ಅಂಟು, ನಾವು ಆಹಾರಕ್ರಮವನ್ನು ಪಾಲಿಸುವಾಗ ಬೇಕರಿಯಲ್ಲಿ ನಮ್ಮ ನೆಚ್ಚಿನ ಕೇಕ್ ಅನ್ನು ನೋಡಿದಾಗ ನಮ್ಮನ್ನು ನಾವು ಹೇಗೆ ತಡೆದುಕೊಳ್ಳುತ್ತೇವೆಯೋ, ಅದೇ ರೀತಿಯಾಗಿ ನಿರ್ವಹಿಸುತ್ತೇವೆ. ನಾವು ನಮ್ಮ ಆಹಾರಕ್ರಮವನ್ನು ಬಿಡುವುದಿಲ್ಲ: "ನನ್ನ ದುರಾಸೆ ಮತ್ತು ಬಾಂಧವ್ಯದ ಪ್ರಭಾವದಿಂದ ನಾನು ಆ ಕೇಕ್ ಅನ್ನು ಖರೀದಿಸುವುದಿಲ್ಲ." ಇದು ಸಾವಧಾನತೆಯಿಂದ ಉಂಟಾಗುತ್ತದೆ, ಮತ್ತು ಇದು ನೈತಿಕ ಶಿಸ್ತಿಗೆ ಬಹಳ ಮುಖ್ಯ. ಜಾಗರೂಕತೆಯೆಂದರೆ, ನಾವು ನಮ್ಮ ಆಹಾರಕ್ರಮದಿಂದ ವಿಚಲಿತರಾಗಲು ಪ್ರಾರಂಭಿಸಿದಾಗ "ಇದು ಒಂದು ಸಣ್ಣ ಕೇಕಿನ ತುಂಡು ಅಷ್ಟೇ!" ಎಂದು ಯೋಚಿಸಿದಾಗ, ನಾವು ಜಾಗರೂಕರಾಗುತ್ತೇವೆ. ನಮ್ಮ ಜಾಗರೂಕತೆಯು ಆಂತರಿಕ ಎಚ್ಚರಿಕೆಯನ್ನು ನೀಡುತ್ತದೆ, ಇದರಿಂದ ನಾವು ದೂರವಿರುತ್ತೇವೆ ಮತ್ತು ನಮ್ಮ ಸ್ವಯಂ ನಿಯಂತ್ರಣಕ್ಕೆ ಮರಳುತ್ತೇವೆ. ನಾವು ಈ ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಸಾವಧಾನತೆ ಮತ್ತು ಜಾಗರೂಕತೆಯು ನೈತಿಕ ಶಿಸ್ತಿಗೆ ಬೆಂಬಲವಾಗಿರುತ್ತದೆ. ಅವು ನಾವು ನಮ್ಮ ಶಿಸ್ತನ್ನು ಉಳಿಸಿಕೊಳ್ಳಲು ಸಾಧ್ಯವಾಗುವ ಸಾಧನಗಳಾಗಿವೆ ಮತ್ತು ನಂತರ ನಾವು ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಬಳಸಬಹುದಾಗಿದೆ. 

ಕೊನೆಯದಾಗಿ, ಶಾಂತಿದೇವ ಸಾವಧಾನತೆಯನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ನಮಗೆ ಸಹಾಯ ಮಾಡುವ ಮೂರು ಅಂಶಗಳನ್ನು ಸೂಚಿಸುತ್ತಾರೆ: 

  • ನಮ್ಮ ಆಧ್ಯಾತ್ಮಿಕ ಶಿಕ್ಷಕರ ಸಹವಾಸದಲ್ಲಿರುವುದು. ನಮಗೆ ಸಾಧ್ಯವಾಗದಿದ್ದರೆ, ನಾವು ಅವರ ಉಪಸ್ಥಿತಿಯಲ್ಲಿದ್ದೇವೆ ಎಂದು ಭಾವಿಸಬಹುದು. ನಾವು ಅವರ ಉಪಸ್ಥಿತಿಯಲ್ಲಿದ್ದರೆ, ಅವರ ಮೇಲಿನ ಗೌರವದಿಂದ ನಾವು ಮೂರ್ಖತನದಿಂದ ಅಥವಾ ವಿನಾಶಕಾರಿಯಾಗಿ ವರ್ತಿಸುವುದಿಲ್ಲ. " ನನ್ನ ಶಿಕ್ಷಕರ ಉಪಸ್ಥಿತಿಯಲ್ಲಿ ನಾನು ಈ ರೀತಿಯಾಗಿ ವರ್ತಿಸುತ್ತೇನೆಯೇ ಅಥವಾ ಈ ವಿಷಯಗಳನ್ನು ಹೇಳುತ್ತೇನೆಯೇ?" ಎಂದು ಯೋಚಿಸುವುದು ಒಳ್ಳೆಯದು. ನಾವು ಹಾಗೆ ಮಾಡದಿದ್ದರೆ, ಶಾಂತಿದೇವ "ಮರದ ದಿಮ್ಮಿಯಂತೆ ಉಳಿಯಿರಿ" ಎಂದು ನಮಗೆ ಸಲಹೆ ನೀಡುತ್ತಾರೆ. ಸುಮ್ಮನೆ ಹಾಗೆ ಮಾಡಲು ಹೋಗಬೇಡಿ. ಇದು ನಮ್ಮನ್ನು ಜಾಗರೂಕರಾಗಿರಿಸಲು ಸಹಾಯ ಮಾಡುತ್ತದೆ - ನಿಸ್ಸಂಶಯವಾಗಿ ನಾವು ನಮ್ಮ ಶಿಕ್ಷಕರೊಂದಿಗೆ ಊಟ ಮಾಡುತ್ತಿದ್ದರೆ, ನಾವು ಕೇಕನ್ನು ಮುಕ್ಕುವುದಿಲ್ಲ ಅಥವಾ ಯಾರ ಮೇಲಾದರೂ ರೇಗಾಡುವುದಿಲ್ಲ. 
  • ನಮ್ಮ ಶಿಕ್ಷಕರ ಸಲಹೆ ಮತ್ತು ಸೂಚನೆಯನ್ನು ಅನುಸರಿಸುವುದು. ಅವರು ಹೇಳಿದ್ದನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುವುದು ನಮ್ಮನ್ನು ಜಾಗರೂಕರಾಗಿರಿಸಲು ಸಹಾಯ ಮಾಡುತ್ತದೆ. 
  • ಜಾಗರೂಕರಾಗಿರದ ಪರಿಣಾಮಗಳ ಬಗ್ಗೆ ಭಯಪಡುವುದು. ನಾವು ಭಯಪಡುತ್ತೇವೆ ಎಂದಲ್ಲ, ಆದರೆ ಸ್ವಾಭಿಮಾನದ ಪ್ರಜ್ಞೆಯ ಆಧಾರದ ಮೇಲೆ ಜಾಗರೂಕರಾಗಿರದ ಪರಿಣಾಮಗಳನ್ನು ಅನುಭವಿಸಲು ನಾವು ಬಯಸುವುದಿಲ್ಲ. ನಾವು ನಮ್ಮ ಬಗ್ಗೆ ಸಾಕಷ್ಟು ಯೋಚಿಸುತ್ತೇವೆ, ಸಕಾರಾತ್ಮಕ ರೀತಿಯಲ್ಲಿ, ಕೋಪ, ದುರಾಸೆ ಮತ್ತು ಮುಂತಾದವುಗಳ ಪ್ರಭಾವದ ಅಡಿಯಲ್ಲಿ ವರ್ತಿಸುವ ಮೂಲಕ ನಾವು ಕೆಳಮುಖವಾಗಿ ಹೋಗಲು ಬಯಸುವುದಿಲ್ಲ. 

ಮೇಲಿನವುಗಳೊಂದಿಗೆ, ನಮ್ಮ ಆಧ್ಯಾತ್ಮಿಕ ಶಿಕ್ಷಕರ ಬಗ್ಗೆ ನಾವು ಭಯವನ್ನು ಬೆಳೆಸಿಕೊಳ್ಳಬೇಕು. "ವಿಸ್ಮಯ" ಎಂಬುದು ಕಠಿಣ ಪದ. ಇದರರ್ಥ ನಾವು ನಮ್ಮ ಆಧ್ಯಾತ್ಮಿಕ ಶಿಕ್ಷಕರ ಬಗ್ಗೆ, ನಮ್ಮನ್ನು ಬೈಯುತ್ತಾರೆ ಎಂದು ಭಯಪಡುವುದಲ್ಲ. ವಿಸ್ಮಯ ಎಂದರೆ ನಾವು ನಮ್ಮ ಆಧ್ಯಾತ್ಮಿಕ ಶಿಕ್ಷಕರನ್ನು ಮತ್ತು ಬೌದ್ಧಧರ್ಮವನ್ನು ತುಂಬಾ ಗೌರವಿಸುತ್ತೇವೆ, ನಮ್ಮ ನಕಾರಾತ್ಮಕ ನಡವಳಿಕೆಯು ಅವರ ಮೇಲೆ ಕೆಟ್ಟದಾಗಿ ಪ್ರತಿಫಲಿಸಿದರೆ ಅದು ನಮಗೆ ಭಯಾನಕವೆನಿಸುತ್ತದೆ. ನಮ್ಮ ಕಾರಣದಿಂದಾಗಿ, ಜನರು "ಓಹ್, ಈ ಶಿಕ್ಷಕರ ವಿದ್ಯಾರ್ಥಿಗಳು ಈ ರೀತಿ ವರ್ತಿಸುತ್ತಾರೆಯೇ?" ಅಥವಾ "ನೀವು ಬೌದ್ಧರೇ?! ಆದರೆ ನೀವು ಕುಡಿದು ಜಗಳವಾಡುತ್ತಾ ಕೋಪಗೊಳ್ಳುತ್ತಲೇ ಇರುತ್ತೀರಿ" ಎಂದು ಯೋಚಿಸಿದರೆ ಅದು ಎಷ್ಟು ಭಯಾನಕವಾಗಿರುತ್ತದೆ ಎಂಬುದರ ಬಗ್ಗೆ ನಾವು ಭಯಪಡುತ್ತೇವೆ. ವಿಸ್ಮಯ ಮತ್ತು ಗೌರವದ ಭಾವನೆಯಿಂದ, ನಾವು ನಮ್ಮ ಜಾಗರೂಕತೆಯನ್ನು ಕಾಪಾಡಿಕೊಳ್ಳುತ್ತೇವೆ ಮತ್ತು ನೈತಿಕ ಶಿಸ್ತಿಗೆ ಅನುಗುಣವಾಗಿ ವರ್ತಿಸುತ್ತೇವೆ. 

ಸಾರಾಂಶ 

ನಮ್ಮ ಜೀವನದಲ್ಲಿ ಪ್ರಗತಿ ಸಾಧಿಸುವಲ್ಲಿ ಶಿಸ್ತು ನಂಬಲಾಗದಷ್ಟು ಪ್ರಮುಖ ಅಂಶವಾಗಿದೆ ಎಂಬ ಅಂಶವನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಅದು ಅಕ್ಷರಮಾಲೆಯನ್ನು ಕಲಿಯುವುದಾಗಲಿ, ಪರೀಕ್ಷೆಗಳಿಗೆ ಅಧ್ಯಯನ ಮಾಡುವುದಾಗಲಿ ಅಥವಾ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವುದಾಗಲಿ - ಶಿಸ್ತು ಇಲ್ಲದೆ, ಏನೇ ಮಾಡುವುದು ಕಷ್ಟ. 

ಬೌದ್ಧ ಪದ್ಧತಿಯಲ್ಲೂ ಇದೇ ರೀತಿಯಾಗಿರುತ್ತದೆ, ಇಲ್ಲಿ ನಾವು ಹಾದಿಯಲ್ಲಿ ಪ್ರಗತಿ ಸಾಧಿಸಲು, ನಮ್ಮ ನಡವಳಿಕೆಯ ವಿಷಯದಲ್ಲಿ ಶಿಸ್ತು ಅಗತ್ಯವಿದೆ. ನಾವು ನಮ್ಮ ಬಗ್ಗೆ ಮತ್ತು ಇತರರ ಬಗ್ಗೆ ಕಾಳಜಿ ವಹಿಸಿದರೆ, ನೈತಿಕ ಸ್ವಯಂ-ಶಿಸ್ತು ಒಂದು ದೂರದ ಕಲ್ಪನೆಯಲ್ಲ, ಬದಲಿಗೆ ಅದು ಸ್ವಾಭಾವಿಕ, ಸಾಮಾನ್ಯ ಜ್ಞಾನದ ವಿಷಯವಾಗಿದೆ. ರಚನಾತ್ಮಕ ನಡವಳಿಕೆಯನ್ನು ಎಚ್ಚರಿಕೆಯಿಂದ ಬೆಳೆಸಿಕೊಳ್ಳುವ ಮೂಲಕ ಮತ್ತು ಇತರರಿಗೆ ಹಾನಿ ಮಾಡದಿರಲು ನಮ್ಮ ಕೈಲಾದಷ್ಟು ಪ್ರಯತ್ನಿಸುವ ಮೂಲಕ, ನಾವು ಸಂತೋಷದ ಪ್ರಸ್ತುತ ಮತ್ತು ಸಂತೋಷದ ನಾಳೆಗೆ ಆಧಾರ ಮತ್ತು ಕಾರಣಗಳನ್ನು ಸೃಷ್ಟಿಸುತ್ತೇವೆ.

Top