ಆರು ಪರಿಪೂರ್ಣತೆಗಳ ಅವಲೋಕನ: ಆರು ಪರಮಿತಗಳು

ಆರು ದೂರಗಾಮಿ ವರ್ತನೆಗಳು ವಿಮೋಚನೆ ಮತ್ತು ಜ್ಞಾನೋದಯಕ್ಕೆ ಕಾರಣವಾಗುವ ಮನಸ್ಸಿನ ಸ್ಥಿತಿಗಳಾಗಿರುತ್ತವೆ. ನಮ್ಮಲ್ಲಿನ ಕೆಲವು ದೊಡ್ಡ ಮಾನಸಿಕ ಅಡೆತಡೆಗಳಾದ - ಕೋಪ, ದುರಾಸೆ, ಅಸೂಯೆ, ಸೋಮಾರಿತನ ಮತ್ತು ಮುಂತಾದವುಗಳಿಗೆ ಪ್ರತಿವಿಷಗಳಾಗಿ - ಆರು ವರ್ತನೆಗಳು ಒಟ್ಟಿಗೆ ಕೆಲಸ ಮಾಡುತ್ತವೆ, ಜೀವನವು ನಮ್ಮತ್ತ ಎಸೆಯುವ ಎಲ್ಲವನ್ನೂ ನಿಭಾಯಿಸಲು ನಮಗೆ ಅನುವು ಮಾಡಿಕೊಡುತ್ತವೆ. ಈ ವರ್ತನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ, ನಾವು ನಿಧಾನವಾಗಿ ಆದರೆ ಖಂಡಿತವಾಗಿಯೂ ನಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬಹುದು, ನಮಗೆ ಮತ್ತು ಇತರರಿಗೆ ಅತ್ಯುನ್ನತ ಪ್ರಯೋಜನವನ್ನು ತರಬಹುದು.

ಜೀವನದಲ್ಲಿ ನಮ್ಮ ಯಾವುದೇ ಸಕಾರಾತ್ಮಕ ಗುರಿಗಳನ್ನು ತಲುಪಲು ನಾವು ಅಭಿವೃದ್ಧಿಪಡಿಸಬೇಕಾದ ಆರು ಪ್ರಮುಖ ಮಾನಸಿಕ ಸ್ಥಿತಿಗಳನ್ನು ಬುದ್ಧ ಸೂಚಿಸಿರುವರು. ಅವುಗಳನ್ನು ಸಾಮಾನ್ಯವಾಗಿ "ಪರಿಪೂರ್ಣತೆಗಳು" ಎಂದು ಅನುವಾದಿಸಲಾಗುತ್ತದೆ, ಏಕೆಂದರೆ ಬುದ್ಧರಂತೆ ಅವುಗಳನ್ನು ಸಂಪೂರ್ಣವಾಗಿ ಪರಿಪೂರ್ಣಗೊಳಿಸುವ ಮೂಲಕ, ನಾವು ಸಹ ವಿಮೋಚನೆ ಮತ್ತು ಜ್ಞಾನೋದಯವನ್ನು ಪಡೆಯಬಹುದು. ಅವುಗಳ ಸಂಸ್ಕೃತ ಹೆಸರಾದ ಪರಮಿತಕ್ಕೆ ಅನುಗುಣವಾಗಿ ನಾನು ಅವುಗಳನ್ನು "ದೂರಗಾಮಿ ವರ್ತನೆಗಳು" ಎಂದು ಕರೆಯಲು ಬಯಸುತ್ತೇನೆ, ಏಕೆಂದರೆ ಅವುಗಳ ಮೂಲಕ ನಾವು ನಮ್ಮ ಸಮಸ್ಯೆಗಳ ಸಾಗರದ ದೂರದ ತೀರವನ್ನು ತಲುಪಬಹುದು.

ನಾವು ಈ ಆರು ಮಾನಸಿಕ ಸ್ಥಿತಿಗಳನ್ನು ಕೇವಲ ಚೆನ್ನಾಗಿ ಕಾಣುವ ಪಟ್ಟಿಯಾಗಿ ಇಟ್ಟುಕೊಳ್ಳುವುದಿಲ್ಲ. ಬದಲಾಗಿ, ಅವು ನಮ್ಮ ದೈನಂದಿನ ಜೀವನದಲ್ಲಿ ಒಟ್ಟಿಗೆ ಬೆರೆತು ಬಳಸಬೇಕಾದ ಮನಸ್ಸಿನ ಸ್ಥಿತಿಗಳಾಗಿರುತ್ತವೆ. ಲ್ಯಾಮ್-ರಿಮ್ (ಕ್ರಮವಾದ ಮಾರ್ಗ) ದಲ್ಲಿ ಕಂಡುಬರುವ ಪ್ರೇರಣೆಯ ಮೂರು ಹಂತಗಳಿಗೆ ಅನುಗುಣವಾಗಿ, ನಮ್ಮ ಜೀವನದಲ್ಲಿ ಅವುಗಳನ್ನು ಅಭಿವೃದ್ಧಿಪಡಿಸುವುದರಿಂದ ನಮಗೆ ಬಹಳಷ್ಟು ಪ್ರಯೋಜನಗಳನ್ನು ತರುತ್ತದೆ: 

  • ಅವು ಸಮಸ್ಯೆಗಳನ್ನು ತಪ್ಪಿಸಲು ಮತ್ತು ಪರಿಹರಿಸಲು ನಮಗೆ ಅನುವು ಮಾಡಿಕೊಡುತ್ತವೆ. 
  • ಅವು ನಮ್ಮನ್ನು ಗೊಂದಲಮಯ ಭಾವನೆಗಳು ಮತ್ತು ಮಾನಸಿಕ ಸ್ಥಿತಿಗಳಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತವೆ. 
  • ಅವು ಇತರರಿಗೆ ಉತ್ತಮ ಸಹಾಯ ಮಾಡವಂತೆ ನಮ್ಮನ್ನು ಸಬಲೀಕರಿಸುತ್ತವೆ.  

ನಾವು ಈ ಸಕಾರಾತ್ಮಕ ಮನೋಭಾವಗಳನ್ನು ಬೆಳೆಸಿಕೊಳ್ಳಲು ತರಬೇತಿ ಪಡೆಯುವಾಗ, ಈ ಕೆಳಗಿನ ಗುರಿಗಳಲ್ಲಿ ಒಂದು ಅಥವಾ ಹೆಚ್ಚಿನದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅವುಗಳನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡುವುದನ್ನು ಮುಂದುವರಿಸಲು ಇವು ನಮಗೆ ಬಲವಾದ ಪ್ರೋತ್ಸಾಹವನ್ನು ನೀಡುತ್ತವೆ. 

ಔದಾರ್ಯ 

ಔದಾರ್ಯವೆಂದರೆ ಇತರರಿಗೆ ಅಗತ್ಯವಿರುವ ಎಲ್ಲವನ್ನೂ ನೀಡುವ ಇಚ್ಛೆ. ಇದರ ಪ್ರಯೋಜನಗಳು: 

  • ಇದು ನಮಗೆ ‘ಇತರರಿಗೆ ಏನನ್ನಾದರೂ ಕೊಡುಗೆ ನೀಡುವ ಸಾಮರ್ಥ್ಯವಿದೆ’ ಎಂಬ ಸ್ವಾಭಿಮಾನದ ಭಾವನೆಯನ್ನು ನೀಡುತ್ತದೆ, ಕಡಿಮೆ ಸ್ವಾಭಿಮಾನ ಮತ್ತು ಖಿನ್ನತೆಯ ಸಮಸ್ಯೆಗಳನ್ನು ತಪ್ಪಿಸಲು ಅಥವಾ ಅದರಿಂದ ಹೊರಬರಲು ನಮಗೆ ಸಹಾಯ ಮಾಡುತ್ತದೆ. 
  • ಇದು ಬಾಂಧವ್ಯ, ಜಿಪುಣತನ ಮತ್ತು ಲೋಭವನ್ನು ಜಯಿಸಲು ಸಹಾಯ ಮಾಡುತ್ತದೆ, ಇವು ಪುನರಾವರ್ತಿತ ಸಮಸ್ಯೆಗಳನ್ನು ತರುವ ಮನಸ್ಸಿನ ಅಸಂತೋಷದ ಸ್ಥಿತಿಗಳಾಗಿರುತ್ತವೆ. 
  • ಇದು ಅಗತ್ಯವಿರುವವರಿಗೆ ಸಹಾಯ ಮಾಡುತ್ತದೆ. 

ನೈತಿಕ ಸ್ವಯಂಶಿಸ್ತು 

ನೈತಿಕ ಸ್ವಯಂಶಿಸ್ತು ಎಂದರೆ ನಾವು ವಿನಾಶಕಾರಿ ನಡವಳಿಕೆಗಳ ಅನಾನುಕೂಲಗಳನ್ನು ಅರಿತುಕೊಳ್ಳುವ ಮೂಲಕ ಅವುಗಳಿಂದ ದೂರವಿರುವುದಾಗಿರುತ್ತದೆ. ಇದರ ಪ್ರಯೋಜನಗಳು: 

  • ಇದು ಹಾನಿಕಾರಕವಾಗಿ ವರ್ತಿಸುವುದು, ಮಾತನಾಡುವುದು ಮತ್ತು ಯೋಚಿಸುವುದರಿಂದ ಉಂಟಾಗುವ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಲು ನಮಗೆ ಅನುವು ಮಾಡಿಕೊಡುತ್ತದೆ. ಇದು ಇತರರೊಂದಿಗೆ ನಂಬಿಕೆಯ ಆಧಾರವನ್ನು ಸೃಷ್ಟಿಸುತ್ತದೆ, ಇದು ನಿಜವಾದ ಸ್ನೇಹಕ್ಕೆ ಅಡಿಪಾಯವಾಗಿರುತ್ತದೆ. 
  • ಇದು ನಮ್ಮ ಪ್ರಚೋದಿತ ನಕಾರಾತ್ಮಕ ನಡವಳಿಕೆಯನ್ನು ಜಯಿಸಲು ಮತ್ತು ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ಶಾಂತವಾದ, ಹೆಚ್ಚು ಸ್ಥಿರವಾದ ಮನಸ್ಸಿಗೆ ಕಾರಣವಾಗುತ್ತದೆ. 
  • ಇದು ಇತರರನ್ನು ನೋಯಿಸುವುದನ್ನು ತಡೆಯುತ್ತದೆ. 

ತಾಳ್ಮೆ 

ತಾಳ್ಮೆ ಎಂದರೆ ಕೋಪಗೊಳ್ಳದೆ ಅಥವಾ ಅಸಮಾಧಾನಗೊಳ್ಳದೆ ತೊಂದರೆಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ. ಇದರ ಪ್ರಯೋಜನಗಳು ಹೀಗಿವೆ: 

  • ವಿಷಯಗಳು ತಪ್ಪಾದಾಗ ಅಥವಾ ನಾವು ಅಥವಾ ಇತರರು ತಪ್ಪುಗಳನ್ನು ಮಾಡಿದಾಗ, ರಂಪಾಟ ನಡೆಸುವುದನ್ನು ತಪ್ಪಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ. 
  • ಇದು ಕೋಪ, ಅಸಹನೆ ಮತ್ತು ಅಸಹಿಷ್ಣುತೆಯನ್ನು ಜಯಿಸಲು ನಮಗೆ ಸಹಾಯ ಮಾಡುತ್ತದೆ, ಇವು ಮನಸ್ಸಿನ ಗೊಂದಲಮಯ ಸ್ಥಿತಿಗಳಾಗಿರುತ್ತವೆ. ಕಷ್ಟಗಳ ನಡುವೆಯೂ ನಾವು ಶಾಂತವಾಗಿರಲು ಸಾಧ್ಯವಾಗುತ್ತದೆ. 
  • ಇದು ಇತರರಿಗೆ ಉತ್ತಮವಾಗಿ ಸಹಾಯ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ, ಏಕೆಂದರೆ ಅವರು ನಮ್ಮ ಸಲಹೆಯನ್ನು ಅನುಸರಿಸದಿದ್ದಾಗ, ತಪ್ಪುಗಳನ್ನು ಮಾಡಿದಾಗ, ಅಭಾಗಲಬ್ಧವಾಗಿ ವರ್ತಿಸಿದಾಗ ಅಥವಾ ಮಾತನಾಡಿದಾಗ ಅಥವಾ ನಮಗೆ ಕಷ್ಟವನ್ನುಂಟುಮಾಡಿದಾಗ ನಾವು ಅವರ ಮೇಲೆ ಕೋಪಗೊಳ್ಳುವುದಿಲ್ಲ. 

ಪರಿಶ್ರಮ 

ಪರಿಶ್ರಮ ಎಂದರೆ ಕಷ್ಟವಾದಾಗ ಬಿಟ್ಟುಕೊಡದೆ, ಕೊನೆಯವರೆಗೂ ನಿರಂತರವಾಗಿ ಪ್ರಯತ್ನವನ್ನು ಮುಂದುವರಿಸುವ ವೀರೋಚಿತ ಧೈರ್ಯ. ಇದರ ಪ್ರಯೋಜನಗಳು ಹೀಗಿವೆ: 

  • ನಾವು ಪ್ರಾರಂಭಿಸಿದ್ದನ್ನು ನಿರುತ್ಸಾಹಗೊಳ್ಳದೆ ಮುಗಿಸಲು ಇದು ನಮಗೆ ಶಕ್ತಿಯನ್ನು ನೀಡುತ್ತದೆ. 
  • ಇದು ಅಸಮರ್ಪಕತೆಯ ಭಾವನೆಗಳನ್ನು ಮತ್ತು ವಿಳಂಬದ ಸೋಮಾರಿತನವನ್ನು- ಇಲ್ಲಿ ನಾವು ಕ್ಷುಲ್ಲಕ ವಿಷಯಗಳಿಂದ ವಿಚಲಿತಗೊಳ್ಳುತ್ತೇವೆ - ಜಯಿಸಲು ನಮಗೆ ಸಹಾಯ ಮಾಡುತ್ತದೆ. 
  • ಇದು ಅತ್ಯಂತ ಕಷ್ಟಕರವಾದ ಕೆಲಸಗಳನ್ನು ಸಾಧಿಸುವಲ್ಲಿನ ನಮ್ಮ ಯಶಸ್ಸನ್ನು ಶಕ್ತಗೊಳಿಸುತ್ತದೆ ಮತ್ತು ಸಹಾಯ ಮಾಡಲು ಕಷ್ಟಕರವಾದವರನ್ನು ಬಿಟ್ಟುಕೊಡುವುದನ್ನು ತಡೆಯುತ್ತದೆ. 

ಮಾನಸಿಕ ಸ್ಥಿರತೆ (ಏಕಾಗ್ರತೆ

ಮಾನಸಿಕ ಸ್ಥಿರತೆ (ಏಕಾಗ್ರತೆ) ಮಾನಸಿಕ ಅಲೆದಾಡುವಿಕೆ, ಮಂದತೆ ಮತ್ತು ಭಾವನಾತ್ಮಕ ಅಸಮಾಧಾನದಿಂದ ಸಂಪೂರ್ಣವಾಗಿ ಮುಕ್ತವಾದ ಮನಸ್ಥಿತಿಯಾಗಿರುತ್ತದೆ. ಇದರ ಪ್ರಯೋಜನಗಳು: 

  • ನಾವು ಏನು ಮಾಡುತ್ತಿದ್ದರೂ ಅದರ ಮೇಲೆ ಗಮನಹರಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ, ಆದ್ದರಿಂದ ನಾವು ತಪ್ಪುಗಳು ಮತ್ತು ಅಪಘಾತಗಳನ್ನು ತಪ್ಪಿಸಬಹುದು. 
  • ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸಲು, ಮತ್ತು ಅತಿಯಾದ ಉತ್ಸಾಹ, ಅಂತರ ಅಥವಾ ಭಾವನಾತ್ಮಕವಾಗಿ ಉದ್ರೇಕಗೊಳ್ಳುವುದನ್ನು ನಿವಾರಿಸಲು ನಮಗೆ ಸಹಾಯ ಮಾಡುತ್ತದೆ. 
  • ಇದು ಇತರರು ಏನು ಹೇಳುತ್ತಿದ್ದಾರೆ ಮತ್ತು ಅವರು ಹೇಗೆ ವರ್ತಿಸುತ್ತಿದ್ದಾರೆ ಎಂಬುದರ ಮೇಲೆ ಕೇಂದ್ರೀಕರಿಸಲು ನಮಗೆ ಅನುವು ಮಾಡಿಕೊಡುತ್ತದೆ, ಆದ್ದರಿಂದ ನಾವು ಅವರಿಗೆ ಹೇಗೆ ಸಹಾಯ ಮಾಡಬೇಕೆಂಬುದನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಹುದು. 

ವಿವೇಚನಾತ್ಮಕ ಅರಿವು (ಬುದ್ಧಿವಂತಿಕೆ

ವಿವೇಚನಾತ್ಮಕ ಅರಿವು (ಬುದ್ಧಿವಂತಿಕೆ) ಎಂದರೆ ಯಾವುದು ಸೂಕ್ತ ಮತ್ತು ಸೂಕ್ತವಲ್ಲ, ಯಾವುದು ಸರಿ ಮತ್ತು ತಪ್ಪು ಎಂಬುದರ ನಡುವೆ ಸರಿಯಾದ ಮತ್ತು ಖಚಿತವಾದ ವ್ಯತ್ಯಾಸವನ್ನು ಗುರುತಿಸುವ ಮನಸ್ಥಿತಿಯಾಗಿರುತ್ತದೆ. ಇದರ ಪ್ರಯೋಜನಗಳು ಹೀಗಿವೆ: 

  • ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ಮತ್ತು ಹೇಗೆ ವರ್ತಿಸಬೇಕು ಎಂಬುದನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ನೋಡಲು ಇದು ನಮಗೆ ಅನುವು ಮಾಡಿಕೊಡುತ್ತದೆ, ನಾವು ನಂತರ ವಿಷಾದಿಸಬಹುದನ್ನು ಮಾಡುವುದರಿಂದ ತಡೆಯುತ್ತದೆ. 
  • ಇದು ನಿರ್ಣಯ ಮತ್ತು ಗೊಂದಲವನ್ನು ನಿವಾರಿಸಲು ನಮಗೆ ಸಹಾಯ ಮಾಡುತ್ತದೆ. ;
  • ಇದು ಇತರರ ಸಂದರ್ಭಗಳನ್ನು ನಿಖರವಾಗಿ ಮೌಲ್ಯಮಾಪನ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ, ಆದ್ದರಿಂದ ಹೆಚ್ಚಿನ ಪ್ರಯೋಜನವನ್ನು ನೀಡುವಂತಹ ಯಾವ ಮಾತುಗಳನ್ನಾಡಬೇಕು ಮತ್ತು ಮಾಡಬೇಕೆಂಬುದು ನಮಗೆ ತಿಳಿದಿರುತ್ತದೆ.

Top