ವಿನಾಶಕಾರಿ ನಡವಳಿಕೆಯ ವ್ಯಾಖ್ಯಾನ
ಪ್ರತಿಯೊಂದು ನೀತಿಶಾಸ್ತ್ರ ವ್ಯವಸ್ಥೆಯು ತನ್ನದೇ ಆದ ವಿನಾಶಕಾರಿ ನಡವಳಿಕೆಯ ಪಟ್ಟಿಯನ್ನು ಹೊಂದಿರುತ್ತದೆ, ಇವು ಯಾವುದು ಸ್ವೀಕಾರಾರ್ಹ ಮತ್ತು ಯಾವುದು ಅಲ್ಲ ಎಂಬುದರ ವಿಭಿನ್ನ ವಿಚಾರಗಳನ್ನು ಆಧರಿಸಿರುತ್ತವೆ. ಧಾರ್ಮಿಕ ಮತ್ತು ನಾಗರಿಕ ವ್ಯವಸ್ಥೆಗಳು ಸ್ವರ್ಗೀಯ ಅಧಿಕಾರ, ರಾಷ್ಟ್ರದ ಮುಖ್ಯಸ್ಥ ಅಥವಾ ಒಂದು ರೀತಿಯ ಶಾಸಕಾಂಗದಿಂದ ಬರುವ ಕಾನೂನುಗಳನ್ನು ಆಧರಿಸಿರುತ್ತವೆ. ನಾವು ಅವಿಧೇಯರಾದಾಗ, ನಾವು ತಪ್ಪಿತಸ್ಥರಾಗಿರುತ್ತೇವೆ ಮತ್ತು ಶಿಕ್ಷಾರ್ಹರಾಗಿರುತ್ತೇವೆ; ನಾವು ವಿಧೇಯರಾಗಿದ್ದಾಗ, ನಮಗೆ ಸ್ವರ್ಗದಲ್ಲಿ ಅಥವಾ ಈ ಜೀವನದಲ್ಲಿ ಸುರಕ್ಷಿತ ಮತ್ತು ಸಾಮರಸ್ಯದ ಸಮಾಜದೊಂದಿಗಿರುವ ಪ್ರತಿಫಲ ಸಿಗುತ್ತದೆ. ಮಾನವೀಯ ವ್ಯವಸ್ಥೆಗಳು ಇತರರಿಗೆ ಹಾನಿ ಮಾಡದಿರುವ ಬಗ್ಗೆ ಗಮನಹರಿಸುತ್ತವೆ, ಆದರೆ ಇದು ಸಹ ಸಮಸ್ಯಾತ್ಮಕವಾಗಿದೆ: ಬೇರೆಯವರಿಗೆ ನಿಜವಾಗಿಯೂ ಯಾವುದು ಹಾನಿಕಾರಕ ಅಥವಾ ಸಹಾಯಕವಾದದ್ದು ಎಂಬುದನ್ನು ನಾವು ನಿರ್ಣಯಿಸಬಹುದೇ? ಉದಾಹರಣೆಗೆ, ಒಬ್ಬರ ಮೇಲೆ ರೇಗಾಡುವುದರಿಂದ ನಾವು ಅವರ ಭಾವನೆಗಳನ್ನು ನೋಯಿಸಬಹುದು, ಅಥವಾ ಅದು ಅವರನ್ನು ಅಪಾಯದಿಂದ ತಪ್ಪಿಸಲು ಸಹಾಯ ಮಾಡಬಹುದು.
ಬೌದ್ಧ ನೀತಿಶಾಸ್ತ್ರವು ಸ್ವಯಂ-ವಿನಾಶಕಾರಿ ನಡವಳಿಕೆಯಿಂದ ದೂರವಿರುವುದನ್ನು ಒತ್ತಿಹೇಳುತ್ತದೆ - ವಿಶೇಷವಾಗಿ ದೀರ್ಘಾವಧಿಯಲ್ಲಿ ನಮಗೆ ಹಾನಿ ಮಾಡುವ ರೀತಿಯಲ್ಲಿ ವರ್ತಿಸುವುದರಿಂದ ದೂರವಿರುವಂತೆ ಹೇಳುತ್ತದೆ. ನಾವು, ನಮ್ಮನ್ನು ಮೀರಿ ಹಾದುಹೋಗಲು ಹುಚ್ಚನಂತೆ ಪ್ರಯತ್ನಿಸುತ್ತಿದ್ದ ಚಾಲಕನೊಬ್ಬನ ಮೇಲೆ ಕಿರುಚಾಡಿದರೆ, ಅದು ನಮ್ಮಲ್ಲಿ ಕ್ಷಣಿಕವಾದ ಉತ್ತಮ ಭಾವನೆಯನ್ನು ಮೂಡಿಸಬಹುದು, ಆದರೆ ಅದು ನಮ್ಮ ಮನಸ್ಸನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ನಮ್ಮ ಶಕ್ತಿಯನ್ನು ಕದಡುತ್ತದೆ, ಇದರಿಂದಾಗಿ ನಾವು ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ನಾವು ಕಿರುಚಾಡುವುದುನ್ನು ಅಭ್ಯಾಸವನ್ನಾಗಿ ಮಾಡಿಕೊಂಡಾಗ, ನಾವು ಯಾವುದೇ ಅನಾನುಕೂಲತೆಯನ್ನು ಅಸಮಾಧಾನಗೊಳ್ಳದೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ; ಇದು ಇತರರೊಂದಿಗಿನ ನಮ್ಮ ಸಂಬಂಧಗಳನ್ನು ಮಾತ್ರವಲ್ಲದೆ ನಮ್ಮ ಸ್ವಂತ ಆರೋಗ್ಯಕ್ಕೂ ಹಾನಿಯುಂಟುಮಾಡುತ್ತದೆ.
ಇದಕ್ಕೆ ವಿರುದ್ಧವಾಗಿ, ನಮ್ಮ ನಡವಳಿಕೆಯು ಇತರರ ಬಗೆಗಿರುವ ಪ್ರೀತಿ, ಕರುಣೆ ಮತ್ತು ತಿಳುವಳಿಕೆಯೊಂದಿಗಿರುವ ನಿಜವಾದ ಕಾಳಜಿಯಿಂದ ಪ್ರೇರೇಪಿಸಲ್ಪಟ್ಟಾಗ, ನಾವು ಸ್ವಾಭಾವಿಕವಾಗಿ ಕಿರುಚಾಡಲು ಬಯಸಿದರೂ ಸಹ ನಾವು ಹಾಗೆ ಮಾಡುವುದರಿಂದ ಸ್ವಯಂಚಾಲಿತವಾಗಿ ತಡೆಯುತ್ತೇವೆ – ನಾವು ದಯೆತೋರಿ ಆ ಚಾಲಕನನ್ನು ಹಾದುಹೋಗಲು ಬಿಡುತ್ತೇವೆ. ಇದರ ಫಲಿತಾಂಶವೆಂದರೆ ಚಾಲಕ ಸಂತೋಷವಾಗಿರುತ್ತಾನೆ ಮತ್ತು ನಮಗೂ ಕೂಡ ಲಾಭವಾಗುತ್ತದೆ: ನಾವು ಮೂಲತಃ ಸಂತೋಷದ ಮನಸ್ಥಿತಿಯೊಂದಿಗೆ, ತಾಳ್ಮೆ ಮತ್ತು ಶಾಂತಿಯುತವಾಗಿರುತ್ತೇವೆ. ಕಿರುಚುವ ನಮ್ಮ ಪ್ರಚೋದನೆಯನ್ನು ನಾವು ನಿಗ್ರಹಿಸುವುದಿಲ್ಲ ಮತ್ತು ಅಂತಿಮವಾಗಿ ನಿರಾಶೆಗೊಳ್ಳುವುದಿಲ್ಲ. ಬದಲಾಗಿ, ರಸ್ತೆಯಲ್ಲಿರುವ ಪ್ರತಿಯೊಬ್ಬರೂ ಒಂದಾಗಿ, ಸಾಧ್ಯವಾದಷ್ಟು ಬೇಗ ತಮ್ಮ ಗಮ್ಯಸ್ಥಾನವನ್ನು ತಲುಪಲು ಬಯಸುತ್ತಾರೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ, ಆದ್ದರಿಂದ ನಮ್ಮ ಚಾಲನೆಯನ್ನು ಓಟವಾಗಿಸುವ ನಿರರ್ಥಕತೆ ಮತ್ತು ಅರ್ಥಹೀನತೆಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ.
ಬೌದ್ಧಧರ್ಮವು ವಿನಾಶಕಾರಿ ನಡವಳಿಕೆಯನ್ನು ಗೊಂದಲಮಯ ಭಾವನೆಗಳು ಮತ್ತು ನಕಾರಾತ್ಮಕ ಅಭ್ಯಾಸಗಳ ಪ್ರಭಾವದ ಅಡಿಯಲ್ಲಿ ಪ್ರಚೋದಿತವಾಗಿ ವರ್ತಿಸುವುದು ಎಂದು ವ್ಯಾಖ್ಯಾನಿಸುತ್ತದೆ. ಯಾವುದು ಹಾನಿಕಾರಕ ಮತ್ತು ಯಾವುದು ಸಹಾಯಕವಾಗಿದೆ ಎಂಬುದರ ನಡುವೆ ನಾವು ಸರಿಯಾಗಿ ವಿವೇಚಿಸುವುದಿಲ್ಲ, ಏಕೆಂದರೆ ನಮಗೆ ಯಾವುದು ಉತ್ತಮ ಎಂದು ತಿಳಿದಿರುವುದಿಲ್ಲ ಅಥವಾ ಬಹುಶಃ ನಮಗೆ ತಿಳಿದಿರುತ್ತದೆ, ಆದರೆ ನಮಗೆ ಯಾವುದೇ ಸ್ವಯಂ ನಿಯಂತ್ರಣವಿರುವುದಿಲ್ಲ. ಪ್ರಮುಖವಾದ ಗೊಂದಲಮಯ ಭಾವನೆಗಳು ದುರಾಸೆ ಮತ್ತು ಕೋಪ, ಅಲ್ಲದೆ ಗೊಂದಲಮಯ ಭಾವನೆಗಳಿಂದ ಪ್ರಭಾವಿತರಾದಾಗ ನಮ್ಮ ನಡವಳಿಕೆ, ಮಾತನಾಡುವಿಕೆ ಮತ್ತು ಆಲೋಚನೆಗಳ ಪರಿಣಾಮಗಳ ಬಗೆಗಿರುವ ಮುಗ್ಧತೆಯಾಗಿರುತ್ತದೆ. ಇದರೊಂದಿಗೆ, ನಮಗೆ ಆಗಾಗ್ಗೆ ಸ್ವ-ಮೌಲ್ಯದ ಯಾವುದೇ ಭಾವನೆ ಇರುವುದಿಲ್ಲ, ಆದ್ದರಿಂದ ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಬಗ್ಗೆ ನಾವು ಕಾಳಜಿ ವಹಿಸುವುದಿಲ್ಲ. ನಾವು ಏನು ಧರಿಸುತ್ತೇವೆ, ನಮ್ಮ ಕೂದಲು ಹೇಗಿರುತ್ತದೆ ಮತ್ತು ನಮ್ಮ ಸ್ನೇಹಿತರು ಯಾರು ಎಂಬಂತಹ ಕೆಲವು ಮೇಲ್ನೋಟದ ವಿಷಯಗಳನ್ನು ಹೊರತುಪಡಿಸಿ, ಯಾವುದೂ ಮುಖ್ಯವಲ್ಲ ಎಂಬ ಮನೋಭಾವ ನಮಲ್ಲಿರುತ್ತದೆ. ನಮ್ಮ ನಡವಳಿಕೆಯು ನಮ್ಮ ಇಡೀ ಪೀಳಿಗೆಯ ಮೇಲೆ ಅಥವಾ ನಮ್ಮ ಲಿಂಗ, ಜನಾಂಗ, ರಾಷ್ಟ್ರೀಯತೆ, ಧರ್ಮ ಅಥವಾ ನಾವು ಗುರುತಿಸಿಕೊಳ್ಳುವ ಯಾವುದೇ ಗುಂಪಿನ ಮೇಲೆ ಹೇಗೆ ಪ್ರತಿಫಲಿಸುತ್ತದೆ ಎಂಬುದರ ಬಗ್ಗೆ ನಾವು ಖಂಡಿತವಾಗಿಯೂ ಕಾಳಜಿ ವಹಿಸುವುದಿಲ್ಲ. ನಮ್ಮಲ್ಲಿ ಗೌರವ ಮತ್ತು ಸ್ವಾಭಿಮಾನದ ಕೊರತೆಯಿದೆ.
ಹತ್ತು ವಿನಾಶಕಾರಿ ಕ್ರಿಯೆಗಳ ಸಾಂಪ್ರದಾಯಿಕ ಪಟ್ಟಿ
ವಿನಾಶಕಾರಿಯಾದ ನಡವಳಿಕೆಯ ಅನೇಕ ದೈಹಿಕ, ಮೌಖಿಕ ಮತ್ತು ಮಾನಸಿಕ ಕ್ರಿಯೆಗಳಿವೆ. ಬೌದ್ಧಧರ್ಮವು ಹತ್ತು ಅತ್ಯಂತ ಹಾನಿಕಾರಕ ಕ್ರಿಯೆಗಳನ್ನು ವಿವರಿಸುತ್ತದೆ. ಅವು ಏಕೆ ಹಾನಿಕಾರಕವೆಂದರೆ ಅವು ಯಾವಾಗಲೂ ಗೊಂದಲಮಯ ಭಾವನೆಗಳು, ನಾಚಿಕೆಯಿಲ್ಲದಿರುವಿಕೆ, ಮುಜುಗರದ ಕೊರತೆ ಮತ್ತು ಕಾಳಜಿಯಿಲ್ಲದ ಕಾರಣದಿಂದಾಗಿ ಉದ್ಭವಿಸುತ್ತವೆ. ಅವು ಆಳವಾಗಿ ಬೇರೂರಿರುವ ಅಭ್ಯಾಸಗಳಿಂದ ಬರುತ್ತವೆ ಮತ್ತು ಅದರ ಪರಿಣಾಮವಾಗಿ, ನಮ್ಮ ನಕಾರಾತ್ಮಕ ಪ್ರವೃತ್ತಿಗಳನ್ನು ಬಲಪಡಿಸುತ್ತವೆ. ದೀರ್ಘಾವಧಿಯಲ್ಲಿ, ನಮ್ಮ ವಿನಾಶಕಾರಿ ನಡವಳಿಕೆಯು ಅತೃಪ್ತಿಕರ ಜೀವನಕ್ಕೆ ಕಾರಣವಾಗುತ್ತದೆ, ನಾವು ನಮಗಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಲೇ ಇರುತ್ತೇವೆ.
ವಿನಾಶಕಾರಿಯಾದ ಮೂರು ರೀತಿಯ ದೈಹಿಕ ನಡವಳಿಕೆಗಳಿವೆ:
- ಇತರರ ಜೀವವನ್ನು ತೆಗೆದುಕೊಳ್ಳುವುದು - ಇನ್ನೊಬ್ಬ ವ್ಯಕ್ತಿಯಿಂದ ಹಿಡಿದು ಅತ್ಯಂತ ಚಿಕ್ಕ ಕೀಟದವರೆಗೆ. ಪರಿಣಾಮವಾಗಿ, ನಮಗೆ ಅಹಿತಕರವೆಂದು ತೋರುವ ಯಾವುದನ್ನೂ ನಾವು ಸಹಿಸುವುದಿಲ್ಲ; ನಮಗೆ ಇಷ್ಟವಿಲ್ಲದ ಎಲ್ಲದಕ್ಕೂ ನಮ್ಮ ತಕ್ಷಣದ ಪ್ರತಿಕ್ರಿಯೆಯು ಅದನ್ನು ಹೊಡೆದುರುಳಿಸಿ ನಾಶಪಡಿಸುವುದಾಗಿರುತ್ತದೆ; ಆಗಾಗ್ಗೆ ನಾವು ಜಗಳವಾಡುತ್ತೇವೆ.
- ನಮಗೆ ನೀಡದಿದ್ದನ್ನು ತೆಗೆದುಕೊಳ್ಳುವುದು - ಕದಿಯುವುದು, ನಾವು ಎರವಲು ಪಡೆದದ್ದನ್ನು ಹಿಂತಿರುಗಿಸದಿರುವುದು, ಅನುಮತಿಯಿಲ್ಲದೆ ಬೇರೆಯವರಿಗೆ ಸೇರಿದದ್ದನ್ನು ಬಳಸುವುದು ಇತ್ಯಾದಿ. ಪರಿಣಾಮವಾಗಿ, ನಾವು ಯಾವಾಗಲೂ ಬಡಪಾಯಿಗಳು ಮತ್ತು ಪಾಪದವರು ಎಂದು ಭಾವಿಸುತ್ತೇವೆ; ಯಾರೂ ನಮಗೆ ಏನನ್ನೂ ಸಾಲವಾಗಿ ನೀಡುವುದಿಲ್ಲ; ಇತರರೊಂದಿಗಿನ ನಮ್ಮ ಸಂಬಂಧಗಳು ಮೊದಲಾಗಿ ಪರಸ್ಪರ ಶೋಷಣೆಯನ್ನು ಆಧರಿಸಿರುತ್ತವೆ.
- ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗುವುದು - ಅತ್ಯಾಚಾರ, ವ್ಯಭಿಚಾರ, ನಿಷಿದ್ಧ ಸಂಭೋಗ, ಇತ್ಯಾದಿ. ಇದರ ಪರಿಣಾಮವಾಗಿ, ನಮ್ಮ ಲೈಂಗಿಕತೆಯ ಸಂಬಂಧಗಳು ಹೆಚ್ಚಾಗಿ ಅಲ್ಪಾವಧಿಯದ್ದಾಗಿರುತ್ತವೆ ಮತ್ತು ನಾವು ಮತ್ತು ನಮ್ಮ ಸಂಗಾತಿಗಳು ಆಗಾಗ್ಗೆ ಪರಸ್ಪರ ವಸ್ತುನಿಷ್ಠರಾಗುತ್ತೇವೆ; ಮೂಲತಃವಾಗಿ ನಾವು ಅಸಹನೀಯ ವಿಷಯಗಳಿಗೆ ಆಕರ್ಷಿತರಾಗುತ್ತೇವೆ.
ವಿನಾಶಕಾರಿಯಾದ ನಾಲ್ಕು ರೀತಿಯ ಮೌಖಿಕ ನಡವಳಿಕೆಗಳಿವೆ:
- ಸುಳ್ಳು ಹೇಳುವುದು - ಗೊತ್ತಿದ್ದೂ ಸುಳ್ಳು ಹೇಳುವುದು, ಇತರರನ್ನು ದಾರಿ ತಪ್ಪಿಸುವುದು, ಇತ್ಯಾದಿ. ಇದರ ಪರಿಣಾಮವಾಗಿ, ನಾವು ಹೇಳುವುದನ್ನು ಯಾರು ಎಂದಿಗೂ ನಂಬುವುದಿಲ್ಲ ಮತ್ತು ಅವರು ಹೇಳುವುದನ್ನು ನಾವು ನಂಬುವುದಿಲ್ಲ; ವಾಸ್ತವ ಮತ್ತು ನಮ್ಮ ಸ್ವಂತ ಕಟ್ಟುಕಥೆಗಳ ನಡುವಿನ ವ್ಯತ್ಯಾಸವನ್ನು ಹೇಳಲು ನಮಗೆ ಸಾಧ್ಯವಾಗುವುದಿಲ್ಲ.
- ಬಿರುಕು ಉಂಟುಮಾಡುವಂತೆ ಮಾತನಾಡುವುದು - ಇತರರನ್ನು ಪರಸ್ಪರ ದೂರ ಮಾಡಲು ಅಥವಾ ಅವರ ನಡುವೆ ದ್ವೇಷ ಹುಟ್ಟಿಸಲು ಅಥವಾ ಮನಸ್ತಾಪವನ್ನು ಇನ್ನಷ್ಟು ಹದಗೆಡಿಸಲು, ಅವರ ಬಗ್ಗೆ ಕೆಟ್ಟ ವಿಷಯಗಳನ್ನು ಹೇಳುವುದು. ಇದರ ಪರಿಣಾಮವಾಗಿ, ನಮ್ಮ ಸ್ನೇಹವು ಹೆಚ್ಚುಕಾಲ ಉಳಿಯುವುದಿಲ್ಲ ಏಕೆಂದರೆ ನಮ್ಮ ಸ್ನೇಹಿತರು ನಾವು ಅವರ ಬೆನ್ನ ಹಿಂದೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತೇವೆ ಎಂದು ಅನುಮಾನಿಸುತ್ತಾರೆ; ನಮಗೆ ಯಾವುದೇ ಆಪ್ತ ಸ್ನೇಹಿತರಿರುವುದಿಲ್ಲ, ಆದ್ದರಿಂದ ಪ್ರತ್ಯೇಕತೆ ಮತ್ತು ಒಂಟಿತನವನ್ನು ಅನುಭವಿಸುತ್ತೇವೆ.
- ಕಟುವಾಗಿ ಮಾತನಾಡುವುದು - ಇತರರ ಭಾವನೆಗಳನ್ನು ನೋಯಿಸುವ ವಿಷಯಗಳನ್ನು ಹೇಳುವುದು. ಇದರ ಪರಿಣಾಮವಾಗಿ, ಜನರು ನಮ್ಮನ್ನು ಇಷ್ಟಪಡುವುದಿಲ್ಲ ಮತ್ತು ದೂರವಿರಿಸುತ್ತಾರೆ; ನಮ್ಮೊಂದಿಗಿರುವಾಗಲೂ, ಇತರರು ವಿಶ್ರಾಂತಿಯಿಂದಿರಲು ಸಾಧ್ಯವಿಲ್ಲ ಮತ್ತು ಆಗಾಗ್ಗೆ ನಮ್ಮನ್ನು ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ; ನಾವು ಇನ್ನಷ್ಟು ಪ್ರತ್ಯೇಕವಾಗಿರುತ್ತೇವೆ ಮತ್ತು ಒಂಟಿಯಾಗುತ್ತೇವೆ.
- ಅರ್ಥಹೀನವಾಗಿ ಹರಟೆ ಹೊಡೆಯುವುದು - ನಮ್ಮ ಮತ್ತು ಇತರ ಜನರ ಸಮಯವನ್ನು ಅರ್ಥಹೀನ ಮಾತುಗಳಿಂದ ವ್ಯರ್ಥ ಮಾಡುವುದು; ಇತರರು ಸಕಾರಾತ್ಮಕ ಕಾರ್ಯಗಳನ್ನು ಮಾಡುವಾಗ ನಮ್ಮ ಅರ್ಥಹೀನ ಮಾತಿನಿಂದ ಅವರಿಗೆ ಅಡ್ಡಿಪಡಿಸುವುದು. ಪರಿಣಾಮವಾಗಿ, ಯಾರೂ ನಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ; ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನಮ್ಮ ಕೈಯಲ್ಲಿ ಹಿಡಿಯುವ ಸಾಧನವನ್ನು ಪರಿಶೀಲಿಸದೆ, ನಾವು ಯಾವುದೇ ಕೆಲಸದ ಮೇಲೆ ನಮ್ಮ ಗಮನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ; ನಮಗೆ ಅರ್ಥಪೂರ್ಣವಾದ ಯಾವುದೂ ಸಿಗುವುದಿಲ್ಲ.
ವಿನಾಶಕಾರಿಯಾದ ಮೂರು ರೀತಿಯ ಚಿಂತನೆಗಳಿವೆ:
- ದುರಾಸೆಯಿಂದ ಯೋಚಿಸುವುದು - ಅಸೂಯೆಯಿಂದಾಗಿ, ಗೀಳಿನಿಂದ ಯೋಚಿಸುವುದು ಮತ್ತು ಬೇರೆಯವರು ಹೊಂದಿರುವ ಏನನ್ನಾದರೂ ಅಥವಾ ಒಂದು ಗುಣಮಟ್ಟವನ್ನು ಹೇಗೆ ಪಡೆಯುವುದು ಅಥವಾ ಅವರನ್ನು ಮೀರಿಸಿ ಇನ್ನೂ ಉತ್ತಮವಾಗುವುದು ಹೇಗೆ ಎಂದು ಯೋಜಿಸುವುದು. ಇದರ ಪರಿಣಾಮವಾಗಿ, ನಮಗೆ ಎಂದಿಗೂ ಮನಸ್ಸಿನ ಶಾಂತಿ ಅಥವಾ ಸಂತೋಷ ಇರುವುದಿಲ್ಲ, ಏಕೆಂದರೆ ನಾವು ಯಾವಾಗಲೂ ಇತರರ ಸಾಧನೆಗಳ ಬಗ್ಗೆ ನಕಾರಾತ್ಮಕ ಆಲೋಚನೆಗಳಿಂದ ಪೀಡಿತರಾಗಿರುತ್ತೇವೆ.
- ದುರುದ್ದೇಶದಿಂದ ಯೋಚಿಸುವುದು - ಬೇರೆಯವರನ್ನು ಹೇಗೆ ನೋಯಿಸಬೇಕು ಅಥವಾ ಅವರು ಹೇಳಿದ ಅಥವಾ ಮಾಡಿದ ಯಾವುದೋ ವಿಷಯವಾಗಿ ಹೇಗೆ ಸೇಡು ತೀರಿಸಿಕೊಳ್ಳಬೇಕು ಎಂದು ಯೋಚಿಸುವುದು ಮತ್ತು ಸಂಚು ರೂಪಿಸುವುದು. ಪರಿಣಾಮವಾಗಿ, ನಾವು ಎಂದಿಗೂ ಸುರಕ್ಷಿತವಾಗಿರುವುದಿಲ್ಲ ಅಥವಾ ವಿಶ್ರಾಂತಿಯಿಂದಿರಲು ಸಾಧ್ಯವಾಗುವುದಿಲ್ಲ; ನಾವು ನಿರಂತರವಾಗಿ ಮತಿವಿಕಲ್ಪ ಮತ್ತು ಭಯದಿಂದ ಬದುಕುತ್ತೇವೆ, ಇತರರು ನಮ್ಮ ವಿರುದ್ಧವೂ ಸಂಚು ರೂಪಿಸುತ್ತಿದ್ದಾರೆ ಎಂಬ ಭಯದಿಂದ ಬದುಕುತ್ತೇವೆ.
- ವಿರೋಧಾಭಾಸದಿಂದ ವಿಕೃತವಾಗಿ ಯೋಚಿಸುವುದು - ಸತ್ಯ ಮತ್ತು ಸರಿಯಾದದ್ದಕ್ಕೆ ವಿರುದ್ಧವಾದದ್ದನ್ನು ಹಠಮಾರಿತನದಿಂದ ಯೋಚಿಸುವುದಲ್ಲದೆ, ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಇತರರೊಂದಿಗೆ ನಮ್ಮ ಮನಸ್ಸಿನಲ್ಲಿ ವಾದಿಸುವುದು ಮತ್ತು ಅವರನ್ನು ಆಕ್ರಮಣಕಾರಿ ರೀತಿಯಲ್ಲಿ ಕೀಳಾಗಿ ನೋಡುವುದು. ಪರಿಣಾಮವಾಗಿ, ನಾವು ಇನ್ನಷ್ಟು ಮುಜುಗರಗೊಳ್ಳುವ ಮನಸ್ಸಿನವರಾಗುತ್ತೇವೆ. ಯಾವುದೇ ಸಹಾಯಕವಾದ ಸಲಹೆಗಳು ಅಥವಾ ಸೂಚನೆಗಳನ್ನು ಸಂಪೂರ್ಣವಾಗಿ ಸ್ವೀಕರಿಸುವುದಿಲ್ಲ; ಹಾಗೆಯೇ ನಮ್ಮ ಮನಸ್ಸುಗಳ ಇತರರಿಗೆ ಮುಚ್ಚಲ್ಪಡುತ್ತವೆ, ಯಾವಾಗಲೂ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ ಮತ್ತು ನಾವು ಯಾವಾಗಲೂ ಸರಿ ಎಂದು ಭಾವಿಸುತ್ತೇವೆ; ನಾವು ಅಜ್ಞಾನಿಗಳು ಮತ್ತು ಮೂರ್ಖರಾಗಿಯೇ ಉಳಿಯುತ್ತೇವೆ.
ನಮ್ಮ ಧಾರ್ಮಿಕ ಹಿನ್ನೆಲೆ ಅಥವಾ ನಂಬಿಕೆ ಏನೇ ಇರಲಿ, ಸಂತೋಷದ ಜೀವನವನ್ನು ನಡೆಸಲು ಬಯಸುವ ಎಲ್ಲರಿಗೂ ಈ 10 ರಿಂದ ನಿರ್ಬಂಧವಿರುವುದು ಸೂಕ್ತವಾಗಿರುತ್ತದೆ.
ವಿನಾಶಕಾರಿ ನಡವಳಿಕೆಯ ಹತ್ತು ವಿಶಾಲ ವರ್ಗಗಳು
ಹತ್ತು ವಿನಾಶಕಾರಿ ಕ್ರಿಯೆಗಳು, ನಾವು ತಪ್ಪಿಸಬೇಕಾದ ಹತ್ತು ವಿಶಾಲ ವರ್ಗಗಳ ನಡವಳಿಕೆಯನ್ನು ಸೂಚಿಸುತ್ತವೆ. ನಮ್ಮ ನಡವಳಿಕೆ ಮತ್ತು ಅದರ ಪರಿಣಾಮಗಳ ಬಗ್ಗೆ ನಾವು ಸಾಧ್ಯವಾದಷ್ಟು ವಿಶಾಲವಾಗಿ ಯೋಚಿಸಬೇಕು. ಚಿಂತಿಸಲು ಕೆಲವು ಉದಾಹರಣೆಗಳು ಇಲ್ಲಿವೆ, ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಈ ಪಟ್ಟಿಯನ್ನು ವಿಸ್ತರಿಸಬಹುದು ಎಂದು ನನಗೆ ವಿಶ್ವಾಸವಿದೆ.
- ಇತರರ ಜೀವ ತೆಗೆಯುವುದು - ಜನರನ್ನು ಹೊಡೆಯುವುದು ಅಥವಾ ಒರಟಾಗಿ ನಡೆಸಿಕೊಳ್ಳುವುದು, ದೈಹಿಕ ಕಾರ್ಯದಲ್ಲಿ ಸಹಾಯದ ಅಗತ್ಯವಿರುವಾಗ, ಅವರಿಗೆ ಸಹಾಯ ಮಾಡುವುದನ್ನು ನಿರ್ಲಕ್ಷಿಸುವುದು, ಅನಾರೋಗ್ಯ ಪೀಡಿತ ಅಥವಾ ವೃದ್ಧರೊಂದಿಗೆ ಅತಿವೇಗವಾಗಿ ನಡೆಯುವುದು ಮತ್ತು ಪರಿಸರವನ್ನು ಕಲುಷಿತಗೊಳಿಸುವುದು ಮತ್ತು ಧೂಮಪಾನ ಮಾಡದವರ, ವಿಶೇಷವಾಗಿ ಮಕ್ಕಳ ಹತ್ತಿರದಲ್ಲಿ ಧೂಮಪಾನ ಮಾಡುವುದು ಸೇರಿದಂತೆ, ಯಾವುದೇ ರೀತಿಯ ದೈಹಿಕ ಹಾನಿಯನ್ನುಂಟುಮಾಡುವುದು
- ನೀಡದಿದ್ದನ್ನು ತೆಗೆದುಕೊಳ್ಳುವುದು - ಇಂಟರ್ನೆಟ್‌ನಿಂದ ಅಕ್ರಮವಾಗಿ ವಿಷಯವನ್ನು ಡೌನ್‌ಲೋಡ್ ಮಾಡುವುದು, ಕೃತಿಚೌರ್ಯ ಮಾಡುವುದು, ಮೋಸ ಮಾಡುವುದು, ತೆರಿಗೆ ತಪ್ಪಿಸುವುದು, ಇತರರ ಗೌಪ್ಯತೆಯನ್ನು ಆಕ್ರಮಿಸುವುದು ಮತ್ತು ನಮ್ಮ ಸಂಗಾತಿಯ ಅಥವಾ ಸ್ನೇಹಿತರ ತಟ್ಟೆಯಿಂದ ಕೇಳದೆಯೇ ರುಚಿ ನೋಡುವುದು
- ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗುವುದು – ಒಬ್ಬರಿಗೆ ಲೈಂಗಿಕ ಕಿರುಕುಳ ನೀಡುವುದು, ಪ್ರೀತಿ ಮಾಡುವಾಗ ನಮ್ಮ ಸಂಗಾತಿಯ ಅಗತ್ಯಗಳನ್ನು ನಿರ್ಲಕ್ಷಿಸುವುದು ಮತ್ತು ಬಹಳಾ ಕಡಿಮೆ ಅಥವಾ ಅತಿಹೆಚ್ಚು ಪ್ರೀತಿಯನ್ನು ತೋರಿಸುವುದು
- ಸುಳ್ಳು ಹೇಳುವುದು - ನಮ್ಮ ನಿಜವಾದ ಭಾವನೆಗಳ ಬಗ್ಗೆ ಅಥವಾ ಅವರೊಂದಿಗಿನ ನಮ್ಮ ಸಂಬಂಧದಲ್ಲಿ, ನಮ್ಮ ಉದ್ದೇಶಗಳ ಬಗ್ಗೆ ವಂಚಿಸುವುದು
- ಬಿರುಕುಂಟು ಮಾಡುವಂತೆ ಮಾತನಾಡುವುದು - ಯಾರಾದರೂ ಭಾಗಿಯಾಗಿರುವ ಅಥವಾ ಮಾಡಲು ಯೋಜಿಸುತ್ತಿರುವ ಸಕಾರಾತ್ಮಕ ಅಥವಾ ನೈತಿಕವಾಗಿ ತಟಸ್ಥವಾಗಿರುವ ವಿಷಯವನ್ನು ಟೀಕಿಸುವುದು ಮತ್ತು ಅದರಲ್ಲಿ ತೊಡಗಿಸಿಕೊಳ್ಳದಂತೆ ಅವರನ್ನು ನಿರುತ್ಸಾಹಗೊಳಿಸುವುದು
- ಕಟುವಾಗಿ ಮಾತನಾಡುವುದು - ಜನರ ಮೇಲೆ ಕಿರುಚಾಡುವುದು, ಆಕ್ರಮಣಕಾರಿ ಧ್ವನಿಯಲ್ಲಿ ಮಾತನಾಡುವುದು, ಯಾರಾದರೂ ಭಾವನಾತ್ಮಕವಾಗಿ ದುರ್ಬಲರಾಗಿರುವಾಗ ಅವರೊಂದಿಗೆ ಅನುಕಂಪವಿಲ್ಲದೆ ಮತ್ತು ಕಟುವಾಗಿ ಮಾತನಾಡುವುದು ಮತ್ತು ಅನುಚಿತ ಸಹವಾಸದಲ್ಲಿ ಅಥವಾ ಅನುಚಿತ ಸಮಯದಲ್ಲಿ ಅಸಭ್ಯ ಅಥವಾ ವ್ಯಂಗ್ಯ ಭಾಷೆಯನ್ನು ಬಳಸುವುದು.
- ಅರ್ಥಹೀನವಾಗಿ ಮಾತನಾಡುವುದು - ಇತರರ ವಿಶ್ವಾಸಕ್ಕೆ ದ್ರೋಹ ಬಗೆದು ಅವರ ಆತ್ಮೀಯ ರಹಸ್ಯಗಳನ್ನು ಇತರರಿಗೆ ಬಹಿರಂಗಪಡಿಸುವುದು, ವಿಶೇಷವಾಗಿ ಮಧ್ಯರಾತ್ರಿಯಲ್ಲಿ, ಕ್ಷುಲ್ಲಕ ವಿಷಯಗಳ ಬಗ್ಗೆ ಇತರರಿಗೆ ಸಂದೇಶ ಕಳುಹಿಸುವುದು, ನಮ್ಮ ದೈನಂದಿನ ಜೀವನದ ಕ್ಷುಲ್ಲಕ ಅಂಶಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವುದು, ಬೇರೆಯವರು ಮಾತನಾಡುವಾಗ ಅವರಿಗೆ ಮುಗಿಸಲು ಬಿಡದೆ ಅಡ್ಡಿಪಡಿಸುವುದು ಮತ್ತು ಗಂಭೀರ ಸಂಭಾಷಣೆಗಳ ಸಮಯದಲ್ಲಿ ಮೂರ್ಖತನದ ಹೇಳಿಕೆಗಳನ್ನು ನೀಡುವುದು
- ದುರಾಸೆಯಿಂದ ಯೋಚಿಸುವುದು - ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ವ್ಯಕ್ತಿಯು ಆರ್ಡರ್ ಮಾಡಿದ್ದರ ರುಚಿ ಅಥವಾ ಒಂದು ಸಿಪ್ ನೀಡಬೇಕೆಂದು ಬಯಸುವುದು, ಮತ್ತು ಇತರರು ಅನುಭವಿಸಿದ ರೋಮಾಂಚಕಾರಿ, ಅದ್ಭುತ ಸಮಯಗಳ ಬಗೆಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡುವಾಗ ಅಥವಾ ಪೋಸ್ಟ್‌ಗಳನ್ನು ಓದುವಾಗ, ನಮ್ಮ ಬಗ್ಗೆ ವಿಷಾದ ವ್ಯಕ್ತಪಡಿಸುವುದು ಮತ್ತು ನಾವು ಜನಪ್ರಿಯ ಮತ್ತು ಸಂತೋಷವಾಗಿರುವ ಬಯಕೆಯ ಬಗ್ಗೆ ಅಸೂಯೆಯಿಂದ ಯೋಚಿಸುವುದು
- ದುರುದ್ದೇಶದಿಂದ ಯೋಚಿಸುವುದು - ಯಾರಾದರೂ ನಮಗೆ ಅಸಹ್ಯ ಅಥವಾ ಕ್ರೂರವಾದದ್ದನ್ನು ಹೇಳಿದಾಗ ಮತ್ತು ನಮ್ಮಲ್ಲಿ ಪ್ರತಿಯುತ್ತರವಾಗಿ ಹೇಳಲು ಏನೂ ಇರದಿದ್ದಾಗ, ನಾವು ಅವರಿಗೆ ನೋವುಂಟುಮಾಡಲು ಏನು ಹೇಳಬೇಕು ಎಂಬುದರ ಬಗ್ಗೆಯ ಯೋಚನೆಯು ನಮ್ಮ ಮನಸ್ಸಿನಲ್ಲಿ ನೆಲೆಸುತ್ತದೆ.
- ವಿರೋಧದಿಂದ ವಿಕೃತವಾಗಿ ಯೋಚಿಸುವುದು – ನಾವು ಸ್ವಂತವಾಗಿ ನಿಭಾಯಿಸಬಲ್ಲ ವಿಷಯದ ಬಗ್ಗೆ ಯಾರಾದರೂ ನಮಗೆ ಸಹಾಯ ನೀಡಲು ಪ್ರಯತ್ನಿಸಿದಾಗ, ಅವರ ಬಗ್ಗೆ ನಕಾರಾತ್ಮಕ, ಪ್ರತಿಕೂಲವಾದ ಆಲೋಚನೆಗಳನ್ನು ಯೋಚಿಸುವುದು, ಮತ್ತು ಹಾನಿಕಾರಕವಲ್ಲದ, ಆದರೆ ನಮಗೆ ಆಸಕ್ತಿಯಿಲ್ಲದ ಅಥವಾ ಮುಖ್ಯವಲ್ಲದ ಕ್ಷೇತ್ರದಲ್ಲಿ ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಮೂರ್ಖರು ಎಂದು ಯೋಚಿಸುವುದು.
ನಮ್ಮ ಕಡೆಗೆ ವಿನಾಶಕಾರಿಯಾಗಿ ವರ್ತಿಸುವುದು
ನಮ್ಮಡೆಗೆ ಇರುವ ನಮ್ಮ ವರ್ತನೆಗಳು, ಇತರರನ್ನು ಗುರಿಯಾಗಿಸಿಕೊಂಡಾಗ ನಾವು ವರ್ತಿಸುವ ವಿಧಾನದಷ್ಟೇ ವಿನಾಶಕಾರಿಯಾಗಬಹುದು. ಸಂತೋಷದ ಜೀವನವನ್ನು ನಡೆಸಲು, ನಾವು ಈ ನಕಾರಾತ್ಮಕ ಮಾದರಿಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಸರಿಪಡಿಸಲು ಕೆಲಸ ಮಾಡಬೇಕು. ಮತ್ತೊಮ್ಮೆ, ವರ್ತನೆಯ ಹತ್ತು ವಿನಾಶಕಾರಿ ರೀತಿಗಳು ನಾವು ನಿಲ್ಲಿಸಬೇಕಾದ ನಡವಳಿಕೆಯ ಪ್ರಕಾರಗಳನ್ನು ಸೂಚಿಸುತ್ತವೆ.
- ಇತರರ ಜೀವ ತೆಗೆಯುವುದು - ಅತಿಯಾಗಿ ಕೆಲಸ ಮಾಡುವ ಮೂಲಕ, ಚೆನ್ನಾಗಿ ತಿನ್ನದೆ ಇರುವ ಮೂಲಕ, ವ್ಯಾಯಾಮ ಮಾಡದಿರುವ ಮೂಲಕ ಅಥವಾ ಸಾಕಷ್ಟು ನಿದ್ರೆ ಪಡೆಯದಿರುವ ಮೂಲಕ ನಮ್ಮನ್ನು ದೈಹಿಕವಾಗಿ ನಿಂದಿಸಿಕೊಳ್ಳುವುದು
- ನೀಡದಿದ್ದನ್ನು ತೆಗೆದುಕೊಳ್ಳುವುದು - ಕ್ಷುಲ್ಲಕ ವಿಷಯಗಳ ಮೇಲೆ ದುಡ್ಡು ವೆಚ್ಚಮಾಡುವುದು, ಅಥವಾ ನಮಗಾಗಿ ಖರ್ಚು ಮಾಡುವುದರಲ್ಲಿ ಜಿಪುಣತೆ ಅಥವಾ ಅಗ್ಗತನವನ್ನು ತೋರಿಸುವುದು.
- ಅನುಚಿತ ಲೈಂಗಿಕ ನಡವಳಿಕೆಯಲ್ಲಿ ತೊಡಗುವುದು - ನಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಲೈಂಗಿಕ ಕ್ರಿಯೆಗಳಲ್ಲಿ ತೊಡಗುವುದು, ಅಥವಾ ಅಶ್ಲೀಲತೆಯಿಂದ ನಮ್ಮ ಮನಸ್ಸನ್ನು ಕಲುಷಿತಗೊಳಿಸುವುದು
- ಸುಳ್ಳು ಹೇಳುವುದು - ನಮ್ಮ ಭಾವನೆಗಳು ಅಥವಾ ಪ್ರೇರಣೆಯ ಬಗ್ಗೆ ನಮ್ಮನ್ನು ಮೋಸಗೊಳಿಸುವುದು
- ಬಿರುಕುಂಟುಮಾಡುವಂತೆ ಮಾತನಾಡುವುದು - ಎಲ್ಲಾ ಸಮಯದಲ್ಲೂ ದೂರು ನೀಡುವಂತಹ ಅಸಹ್ಯಕರ ರೀತಿಯಲ್ಲಿ ಮಾತನಾಡುವುದು, ಇದರಿಂದ ಇತರರು ನಮ್ಮೊಂದಿಗೆ ಇರುವುದು ಬಹಳಾ ಅಹಿತಕರವೆಂದು ಕಂಡುಕೊಂಡು, ನಮ್ಮ ಸಹವಾಸವನ್ನು ತಪ್ಪಿಸುತ್ತಾರೆ
- ಕಠೋರವಾಗಿ ಮಾತನಾಡುವುದು - ಮಾತಿನಿಂದ ನಮ್ಮನ್ನು ನಿಂದಿಸಿಕೊಳ್ಳುವುದು
- ಹರಟೆ ಹೊಡೆಯುವುದು - ನಮ್ಮ ಖಾಸಗಿ ವಿಷಯಗಳು, ಅನುಮಾನಗಳು ಅಥವಾ ಚಿಂತೆಗಳ ಬಗ್ಗೆ ವಿವೇಚನೆಯಿಲ್ಲದೆ ಮಾತನಾಡುವುದು ಅಥವಾ ಸಾಮಾಜಿಕ ಮಾಧ್ಯಮವನ್ನು ನೋಡುವುದು, ಬುದ್ದಿಹೀನ ವೀಡಿಯೊ, ಆಟಗಳನ್ನು ಆಡುವುದು ಅಥವಾ ಇಂಟರ್ನೆಟ್ನಲ್ಲಿ ಕಾಲ ಕಳೆಯುತ್ತಾ ಅಂತ್ಯವಿಲ್ಲದೆ ಗಂಟೆಗಳನ್ನು ವ್ಯರ್ಥ ಮಾಡುವುದು
- ದುರಾಸೆಯಿಂದ ಯೋಚಿಸುವುದು -ಪರಿಪೂರ್ಣತಾವಾದಿಯಾಗಿರುವುದರಿಂದ ನಮ್ಮನ್ನು ಹೇಗೆ ಮೀರಿಸುವುದು ಎಂಬುದರ ಕುರಿತು ಯೋಚಿಸುವುದು
- ದುರುದ್ದೇಶದಿಂದ ಯೋಚಿಸುವುದು - ನಾವು ಎಷ್ಟು ಕೆಟ್ಟವರು ಮತ್ತು ನಾವು ಸಂತೋಷವಾಗಿರಲು ಅರ್ಹರಲ್ಲ ಎಂಬುದರ ಕುರಿತು ನೊಂದ ಭಾವನೆಯಿಂದ ಯೋಚಿಸುವುದು
- ವಿರೋಧದೊಂದಿಗೆ ವಿಕೃತವಾಗಿ ಯೋಚಿಸುವುದು - ನಮ್ಮನ್ನು ನಾವು ಸುಧಾರಿಸಿಕೊಳ್ಳಲು ಅಥವಾ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಕ್ಕಾಗಿ ನಾವು ಮೂರ್ಖರು ಎಂದು ಭಾವಿಸುವುದು.
ನಮ್ಮ ವಿನಾಶಕಾರಿ ಮಾದರಿಗಳನ್ನು ಹೇಗೆ ಎದುರಿಸುವುದು
ಹಿಂದೆ ನಾವು ವರ್ತಿಸಿದ ಎಲ್ಲಾ ವಿನಾಶಕಾರಿ ವಿಧಾನಗಳನ್ನು ಗಮನಿಸಲು ಪ್ರಾರಂಭಿಸಿದಾಗ, ನಮ್ಮ ಬಗ್ಗೆ ನಕಾರಾತ್ಮಕವಾಗಿ ಭಾವಿಸದೇ ಇರುವುದು ಮುಖ್ಯ. ಅಪರಾಧಿ ಭಾವನೆಯಿಂದ ಪಾರ್ಶ್ವವಾಯುವಿಗೆ ಒಳಗಾಗುವ ಬದಲು, ನಾವು ಮಾಡಿದ್ದು ಅಜ್ಞಾನದಿಂದ ಮತ್ತು ನಮ್ಮ ನಡವಳಿಕೆಯ ಪರಿಣಾಮಗಳ ಬಗೆಗಿರುವ ನಿಷ್ಕಪಟತೆಯಿಂದ ಎಂದು ನಾವು ಒಪ್ಪಿಕೊಳ್ಳಬೇಕು: ನಾವು ನಮ್ಮ ಗೊಂದಲಮಯ ಭಾವನೆಗಳಿಂದ ಪ್ರಚೋದಿತರಾಗಿದ್ದೆವು, ನಾವು ಅಂತರ್ಗತವಾಗಿ ಕೆಟ್ಟವರಾಗಿರುವುದರಿಂದ ಅಲ್ಲ. ನಮ್ಮ ವರ್ತನೆಗಾಗಿ ವಿಷಾದಿಸುತ್ತೇವೆ, ಅದು ಸಂಭವಿಸಬಾರದಿತ್ತು ಎಂದು ಬಯಸುತ್ತೇವೆ, ಆದರೆ ನಾವು ಹಿಂದಿನದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುತ್ತೇವೆ. ಆದದ್ದು ಆಗಿಹೋಗಿದೆ - ಆದರೆ ಈಗ ನಾವು ಅಂತಹ ನಡವಳಿಕೆಯನ್ನು ಪುನರಾವರ್ತಿಸದಿರಲು ಪ್ರಯತ್ನಿಸದಂತೆ ಪ್ರತಿಜ್ಞೆ ತೆಗೆದುಕೊಳ್ಳಬಹುದು. ನಂತರ ನಾವು ನಮ್ಮ ಜೀವನದಲ್ಲಿ ಇರಿಸಲು ಪ್ರಯತ್ನಿಸುತ್ತಿರುವ ಸಕಾರಾತ್ಮಕ ದಿಕ್ಕನ್ನು ಮತ್ತೊಮ್ಮೆ ದೃಢೀಕರಿಸುತ್ತೇವೆ ಮತ್ತು ಪ್ರೀತಿ ಮತ್ತು ಸಹಾನುಭೂತಿಯ ಆಧಾರದ ಮೇಲೆ ರಚನಾತ್ಮಕ ಕ್ರಿಯೆಗಳಲ್ಲಿ ಸಾಧ್ಯವಾದಷ್ಟು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಅಂತಿಮವಾಗಿ ನಕಾರಾತ್ಮಕ ಅಭ್ಯಾಸಗಳ ಬಲವಾದ ಶಕ್ತಿಯನ್ನು ಮೀರಿಸಲು ಹೆಚ್ಚು ಸಕಾರಾತ್ಮಕ ಅಭ್ಯಾಸಗಳನ್ನು ನಿರ್ಮಿಸುತ್ತದೆ.
ನಂತರ ನಾವು ಎದುರಿಸುವ ಜನರು ಮತ್ತು ಘಟನೆಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ನಿಧಾನಗೊಳಿಸಲು ಪ್ರಾರಂಭಿಸುತ್ತೇವೆ, ಇದರಿಂದಾಗಿ ನಾವು ಅಭ್ಯಾಸದಿಂದ ವಿನಾಶಕಾರಿಯಾಗಿ ವರ್ತಿಸಲು ಬಯಸುವ ಮತ್ತು ನಾವು ನಿಜವಾಗಿಯೂ ವರ್ತಿಸುವ ನಡುವಿನ ಅಂತರವನ್ನು ಹಿಡಿಯಬಹುದು. ಯಾವುದು ಸಹಾಯಕವಾಗುತ್ತದೆ ಮತ್ತು ಯಾವುದು ಹಾನಿಕಾರಕವಾಗಿದೆ ಎಂಬುದನ್ನು ನಿರ್ಧರಿಸಲು ನಾವು ಆ ಕ್ಷಣವನ್ನು ಬಳಸುತ್ತೇವೆ, ವಿನಾಶಕಾರಿಯಾದ ಯಾವುದನ್ನಾದರೂ ಮಾಡುವುದರಿಂದ, ಹೇಳುವುದರಿಂದ ಅಥವಾ ಯೋಚಿಸುವುದರಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಮಹಾನ್ ಭಾರತೀಯ ಬೌದ್ಧ ಗುರು ಶಾಂತಿದೇವ ಶಿಫಾರಸು ಮಾಡಿದಂತೆ, "ಮರದ ದಿಮ್ಮಿಯಂತೆ ಇರಿ." ನಾವು ಹಾಗೆ ಮಾಡಬಹುದು, ಆದರೆ ಕೇವಲ ನಮಗಾಗಿ ಮತ್ತು ಇತರರಿಗಾಗಿ ತಿಳುವಳಿಕೆ, ಪ್ರೀತಿ, ಸಹಾನುಭೂತಿ ಮತ್ತು ಗೌರವದಿಂದ ಇದು ಸಾಧ್ಯ. ನಾವು ಯಾವುದನ್ನೂ ನಿಗ್ರಹಿಸುತ್ತಿಲ್ಲ, ಅದು ನಮ್ಮಲ್ಲಿ ಆತಂಕ ಉಂಟುಮಾಡುತ್ತದೆ ಮತ್ತು ನಮ್ಮನ್ನು ಉದ್ವಿಗ್ನರನ್ನಾಗಿ ಮಾಡುತ್ತದೆ. ಬುದ್ಧಿವಂತ ಮತ್ತು ಸಹಾನುಭೂತಿಭರಿತ ಮನಸ್ಸಿನಿಂದ, ನಾವು ನಂತರ ವಿಷಾದಿಸುವ ಏನನ್ನಾದರೂ ಮಾಡಲು ಅಥವಾ ಹೇಳಲು ನಮ್ಮನ್ನು ಪ್ರೇರೇಪಿಸುತ್ತಿದ್ದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತೇವೆ. ನಂತರ ನಾವು ಸಕಾರಾತ್ಮಕ ಭಾವನೆಗಳು ಮತ್ತು ತಿಳುವಳಿಕೆಯ ಆಧಾರದ ಮೇಲೆ ರಚನಾತ್ಮಕ ರೀತಿಯಲ್ಲಿ ವರ್ತಿಸಲು ಸ್ವತಂತ್ರರಾಗುತ್ತೇವೆ.
ಸಾರಾಂಶ
ನಾವು ವಿನಾಶಕಾರಿ ನಡವಳಿಕೆಗಳಿಂದ ದೂರವಿರುವಾಗ, ಅದು ಇತರರಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಅಂತಿಮವಾಗಿ ನಮ್ಮ ಸ್ವಂತ ಹಿತಾಸಕ್ತಿಗೆ ಕಾರಣವಾಗುತ್ತದೆ. ನಮ್ಮ ಸ್ವಂತ ನಡವಳಿಕೆಯೇ ನಮ್ಮ ಸ್ವಂತ ಅಸಂತೋಷಕ್ಕೆ ಕಾರಣ ಎಂದು ನಾವು ನೋಡಿದಾಗ, ನಾವು ಸ್ವಾಭಾವಿಕವಾಗಿ ವಿನಾಶಕಾರಿ ಮತ್ತು ನಕಾರಾತ್ಮಕ ಅಭ್ಯಾಸಗಳು ಮತ್ತು ಕ್ರಿಯೆಗಳನ್ನು ತಪ್ಪಿಸಲು ಸಂತೋಷಪಡುತ್ತೇವೆ. ನಾವು ಈ ಅಭ್ಯಾಸಗಳನ್ನು ಬಲಪಡಿಸುವುದನ್ನು ನಿಲ್ಲಿಸಿದಾಗ, ಇತರರೊಂದಿಗಿನ ನಮ್ಮ ಸಂಬಂಧಗಳು ಸುಧಾರಿಸುತ್ತವೆ ಮತ್ತು ನೈಜತೆ ಹೆಚ್ಚುತ್ತದೆ, ಆದರೆ ನಾವು ನಮ್ಮೊಂದಿಗೆ ಹೆಚ್ಚು ಶಾಂತಿಯಿಂದ ಇರುತ್ತೇವೆ. ನಾವು ನಿಜವಾಗಿಯೂ ಮನಸ್ಸಿನ ಶಾಂತಿಯನ್ನು ಬಯಸಿದರೆ, ನಾವು ವರ್ತಿಸುವ, ಮಾತನಾಡುವ ಮತ್ತು ಯೋಚಿಸುವ ವಿನಾಶಕಾರಿ ವಿಧಾನಗಳನ್ನು ನಿವಾರಿಸಲು ಪ್ರಯತ್ನಿಸಬೇಕು. ಹಾಗೆ ಮಾಡುವುದರಿಂದ ನಮ್ಮ ಜೀವನದ ಗುಣಮಟ್ಟವು ಅಗಾಧವಾಗಿ ಸುಧಾರಿತವಾಗುತ್ತದೆ.