ಧ್ಯಾನವನ್ನು, ಬೌದ್ಧಧರ್ಮ ಸೇರಿದಂತೆ, ಅನೇಕ ಸಂಪ್ರದಾಯಗಳಲ್ಲಿ ಕಾಣಬಹುದು; ಎಲ್ಲಾ ಭಾರತೀಯ ಸಂಪ್ರದಾಯಗಳಲ್ಲಿ ಧ್ಯಾನದ ಅನೇಕ ಅಂಶಗಳು ಕಂಡುಬರುತ್ತವೆಯಾದರೂ, ಇಲ್ಲಿ ನಾವು ನಮ್ಮ ಚರ್ಚೆಯನ್ನು ಬೌದ್ಧಧರ್ಮದಲ್ಲಿ ಪ್ರಸ್ತುತವಾಗುವ ವಿಧಾನಕ್ಕೆ ಸೀಮಿತಗೊಳಿಸಿದ್ದೇವೆ.
ಧ್ಯಾನ ಎಂದರೇನು?
"ಧ್ಯಾನ" ಎಂಬ ಪದದ ಅರ್ಥವು, ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು ಎಂದಾಗಿರುತ್ತದೆ. ಅದರ ಟಿಬೆಟಿಯನ್ ಮೂಲಪದವಾದ, "ಗೊಮ್ (sgom)," ಪ್ರಯೋಜನಕಾರಿಯಾದ ಅಭ್ಯಾಸವನ್ನು ನಿರ್ಮಿಸುವುದೆಂಬ ಅರ್ಥವನ್ನು ಸೂಚಿಸುತ್ತದೆ. ಸಂಸ್ಕೃತದ ಮೂಲಪದವಾದ, "ಭಾವನಾ", ಏನನ್ನಾದರೂ ವಾಸ್ತವದಲ್ಲಿ ಸಂಭವಿಸುವಂತೆ ಮಾಡುವ ಅರ್ಥವನ್ನು ಹೊಂದಿರುತ್ತದೆ. ಒಂದು ನಿರ್ದಿಷ್ಟವಾದ, ಪ್ರಯೋಜನಕಾರಿಯಾದ ಮನಸ್ಥಿತಿ ಅಥವಾ ಮನೋಭಾವವಿದ್ದು, ಅದನ್ನು ನಾವು ರಚಿಸಲು ಬಯಸುತ್ತೇವೆ, ಬೇರೆ ರೀತಿಯಲ್ಲಿ ಹೇಳುವುದಾದರೆ, ಆ ಮನಸ್ಥಿತಿಯು, ನಮ್ಮ ಆಲೋಚನೆ ಮತ್ತು ಜೀವನ ವಿಧಾನಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತೇವೆ. ಯಾವ ಧ್ಯಾನದ ಸಂಪ್ರದಾಯವನ್ನು ಬಳಸುತ್ತಿದ್ದೇವೆ ಎಂಬುದರ ಮೇಲೆ, ಅವುಗಳ ಸೂಚನೆಗಳು, ಪ್ರಯೋಜನಕಾರಿಯಾದ ಅಭ್ಯಾಸಗಳು ಯಾವುವು ಎಂಬುದರ ಜೊತೆಗೆ, ಅವುಗಳ ನಿಯಮಗಳು ಮತ್ತು ಅವುಗಳನ್ನು ವಾಸ್ತವಿಕಗೊಳಿಸುವ ಕಾರಣ ಮತ್ತು ಗುರಿ ಏನು ಎಂಬುದನ್ನು ನಿರ್ದಿಷ್ಟಪಡಿಸುತ್ತವೆ. ಆದರೆ ಎಲ್ಲಾ ಭಾರತೀಯ ಸಂಪ್ರದಾಯಗಳಲ್ಲಿಯೂ ಇದರ ಪ್ರಕ್ರಿಯೆ ಮೂರು ಪಟ್ಟಾಗಿರುತ್ತದೆ: ಮೊದಲು, ಕೇಳುವುದು ಅಥವಾ ಆಲಿಸುವುದು, ನಂತರ ಯೋಚಿಸುವುದು ಮತ್ತು ನಂತರ ವಾಸ್ತವಿಕವಾಗಿ ಧ್ಯಾನಿಸುವುದು.
ಬೋಧನೆಗಳನ್ನು ಆಲಿಸುವುದು
ನಾವು ಸಹಾನುಭೂತಿಯನ್ನು ಅಳವಡಿಸಿಕೊಳ್ಳುವ ಪ್ರಯೋಜನಕಾರಿಯಾದ ಅಭ್ಯಾಸವನ್ನು ನಿರ್ಮಿಸಲು ಬಯಸುತ್ತೇವೆ ಎಂದು ಭಾವಿಸೋಣ. ಸಹಾನುಭೂತಿಯನ್ನು ಅಭಿವೃದ್ಧಿಪಡಿಸಲು ಅಥವಾ ಅಸ್ತಿತ್ವದಲ್ಲಿರುವ ಸಹಾನುಭೂತಿಯ ಭಾವನೆಯನ್ನು ಹೆಚ್ಚಿಸಲು, ಮೊದಲು ನಾವು ಆ ವಿಷಯದ ಕುರಿತು ಕೆಲವು ಬೋಧನೆಗಳನ್ನು ಕೇಳಬೇಕು. ಪ್ರಾಚೀನ ಭಾರತದಲ್ಲಿ, ಯಾವುದೇ ಬೋಧನೆಗಳನ್ನು ಬರೆದಿಡುತ್ತಿರಲಿಲ್ಲ. ಅವೆಲ್ಲವನ್ನೂ ಮೌಖಿಕವಾಗಿ ರವಾನಿಸಲಾಗುತ್ತಿತ್ತು. ಆ ಕಾರಣದಿಂದಾಗಿ, ಧ್ಯಾನವನ್ನು ಕಲಿಯಲು, ಬೋಧನೆಗಳನ್ನು ಮೊದಲು ಆಲಿಸಬೇಕಾಗಿತ್ತು. ಅದಕ್ಕಾಗಿಯೇ ಮೊದಲ ಹಂತವನ್ನು "ಆಲಿಸುವುದು" ಎಂದು ಕರೆಯಲಾಗುತ್ತದೆ.
ಸಹಜವಾಗಿ, ಇತ್ತೀಚಿನ ದಿನಗಳಲ್ಲಿ, ನಾವು ವಿವಿಧ ಬೋಧನೆಗಳ ಬಗ್ಗೆ ಓದಬಹುದು – ನಮಗೆ ಯಾರೂ ವೈಯಕ್ತಿಕವಾಗಿ ಬೋಧಿಸಬೇಕಾಗಿಲ್ಲ - ಆದರೆ ಇದರ ಹಿಂದಿನ ತತ್ವವು ಬಹಳ ಪ್ರಸ್ತುತವಾಗಿರುತ್ತದೆ. ಪ್ರಾಚೀನ ಕಾಲದಲ್ಲಿ, ಎಲ್ಲವನ್ನೂ ಕಂಠಪಾಠ ಮಾಡಬೇಕಾಗಿತ್ತು ಮತ್ತು ಕೇಳುಗನಿಗೆ, ಅವನಿಗೆ ಬೋಧಿಸುತ್ತಿರುವ ವಿಷಯವು ನಿಖರವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಬೋಧನೆಯನ್ನು ನೆನಪಿನಿಂದ ಪಠಿಸುವ ವ್ಯಕ್ತಿಗೆ ಸರಿಯಾಗಿ ನೆನಪಿಲ್ಲದಿರಬಹುದು. ಕೆಲವು ತಪ್ಪುಗಳಾಗಬಹುದು ಮತ್ತು ಇದರಿಂದ ನಿಜವಾದ ಸಮಸ್ಯೆಗಳೇಳಬಹುದು.
ವಿವೇಚನಾತ್ಮಕ ಅರಿವು
ಬೋಧನೆಗಳನ್ನು ಆಲಿಸುವಾಗ, "ಆಲಿಸುವಿಕೆಯಿಂದ ಉಂಟಾಗುವ ವಿವೇಚನಾತ್ಮಕ ಅರಿವು" ಎಂಬುದನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ. ಸಾಮಾನ್ಯವಾಗಿ, ಟಿಬೆಟಿಯನ್ ಪದವಾದ "ಶೆರಾಬ್" (ಶೆಸ್-ರಾಬ್, ಸಂಸ್ಕೃತ. ಪ್ರಜ್ನಾ) ಅನ್ನು, "ಬುದ್ಧಿವಂತಿಕೆ" ಎಂದು ಅನುವಾದಿಸಲಾಗುತ್ತದೆ, ಆದರೆ "ಬುದ್ಧಿವಂತಿಕೆ" ಪದದ ಬಳಕೆ ಬಹಳಾ ಅಸ್ಪಷ್ಟವಾಗಿದೆ; ಇದಕ್ಕೆ ನಿಖರವಾದ ಅರ್ಥವಿಲ್ಲ. ಒಂದು ಗುಂಪಿನ ಜನರು "ಬುದ್ಧಿವಂತಿಕೆ" ಎಂಬ ಪದವನ್ನು ಕೇಳಿದರೆ, ಪ್ರತಿಯೊಬ್ಬ ವ್ಯಕ್ತಿಗೆ, ಅದರ ಅರ್ಥದ ವಿಭಿನ್ನವಾದ ಕಲ್ಪನೆಯಿರುತ್ತದೆ, ಆದ್ದರಿಂದ "ಬುದ್ಧಿವಂತಿಕೆ" ಎಂಬ ಪದವು "ಶೆರಾಬ್" ಎಂಬ ಪದವನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವುದಿಲ್ಲ. ಅದಕ್ಕಾಗಿಯೇ ನಾನು "ಶೆರಾಬ್" ಅನ್ನು "ವಿವೇಚನಾತ್ಮಕ ಅರಿವು" ಎಂದು ಭಾಷಾಂತರಿಸಲು ಇಷ್ಟ ಪಡುತ್ತೇನೆ.
ವಿವೇಚನಾತ್ಮಕ ಅರಿವು, ನಾನು ‘ಪ್ರತ್ಯೇಕತೆ’ ಎಂದು ಅನುವಾದಿಸಲು ಇಚ್ಛಿಸುವ, ಮೊದಲೇ ಅಸ್ತಿತ್ವದಲ್ಲಿರುವ ಮಾನಸಿಕ ಅಂಶವೊಂದನ್ನು ಆಧರಿಸಿರುತ್ತದೆ. ಹೆಚ್ಚಿನ ಜನರು ಈ ಪದವನ್ನು "ಗುರುತಿಸುವಿಕೆ" ಎಂದು ಅನುವಾದಿಸುತ್ತಾರೆ, ಆದರೆ "ಗುರುತಿಸುವಿಕೆ" ಅಷ್ಟಾಗಿ ನಿಖರವಾಗಿರುವುದಿಲ್ಲ. "ಗುರುತಿಸುವಿಕೆ" ಎಂಬುದರ ಅರ್ಥವು, ನೀವು ಆ ವಸ್ತುವಿನ ಬಗ್ಗೆ ಮೊದಲು ತಿಳಿದಿರುವಿರಿ ಮತ್ತು ನಂತರ ನೀವು ಅದನ್ನು ಮತ್ತೆ ಗುರುತಿಸುವಿರಿ ಎಂದಾಗಿರುತ್ತದೆ; ಇದು ಸರಿಯಲ್ಲ. "ಪ್ರತ್ಯೇಕತೆ" ಎಂದರೆ "ಈ” ವಸ್ತುವನ್ನು “ಇದು ಅಲ್ಲದ” ಇತರ ಎಲ್ಲಾ ವಸ್ತುಗಳಿಂದ ಪ್ರತ್ಯೇಕಿಸುವುದಾಗಿದೆ. ನಾವು "ಇದು" ಎಂಬುದನ್ನು “ಇದಲ್ಲ” ಎಂಬುದರಿಂದ ಪ್ರತ್ಯೇಕಿಸಲು ಮತ್ತು "ಇದು" ಎಂಬುದನ್ನು "ಅದು" ಎಂಬುದರಿಂದ ನಿರ್ದಿಷ್ಟವಾಗಿ ಪ್ರತ್ಯೇಕಿಸಲು ಸಾಧ್ಯವಾಗುತ್ತದೆ, ಏಕೆಂದರೆ ಎಲ್ಲವೂ ನಿರ್ದಿಷ್ಟವಾದ, ವೈಯಕ್ತಿಕವಾದ ಗುಣಲಕ್ಷಣಗಳನ್ನು ಅಥವಾ ಗುರುತುಗಳನ್ನು ಹೊಂದಿರುತ್ತವೆ ಮತ್ತು ಇವು ನಮಗೆ ತಿಳಿದಿದ್ದು, ಇವನ್ನು ನಾವು ವ್ಯಾಖ್ಯಾನಿಸಬಲ್ಲೆವು. ಒಂದು ಸರಳವಾದ ಉದಾಹರಣೆಯೆಂದರೆ, ಶಿಶುಗಳು "ಹಸಿವು" ಮತ್ತು "ಹಸಿವಿಲ್ಲ" ಎಂಬುದರ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು. ಈ ಎರಡು ವಿಭಿನ್ನ ದೈಹಿಕ ಸಂವೇದನೆಗಳನ್ನು ಗುರುತಿಸಲು, ಶಿಶುಗಳಿಗೆ ಪದಗಳ ಅಗತ್ಯವಿಲ್ಲ ಮತ್ತು "ಹಸಿವು” ಮತ್ತು "ಹಸಿವಿಲ್ಲ" ಎಂಬ ಪರಿಕಲ್ಪನೆಗಳನ್ನು ಬಹಳ ಆಳವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ. ಅದೇನೇ ಇದ್ದರೂ, ಶಿಶುಗಳು, ಅವೆರಡರ ನಡುವಿನ ವ್ಯತ್ಯಾಸವನ್ನು ಪ್ರತ್ಯೇಕಿಸಬಹುದು, ಏಕೆಂದರೆ ಅವೆರಡೂ ವಿಶಿಷ್ಟವಾದ ಲಕ್ಷಣವನ್ನು ಹೊಂದಿರುತ್ತವೆ - ಅದುವೇ ನಿರ್ದಿಷ್ಟವಾದ ದೈಹಿಕ ಸಂವೇದನೆಯಾಗಿರುತ್ತದೆ.
ವಿವೇಚನಾತ್ಮಕ ಅರಿವು ಆ ಪ್ರತ್ಯೇಕತೆಗೆ ನಿಶ್ಚಿತತೆಯ ಅಂಶವೊಂದನ್ನು ನೀಡುತ್ತದೆ: "ಈ ವಸ್ತುವು ಖಂಡಿತವಾಗಿಯೂ ಇದೇ ಆಗಿದೆ ಮತ್ತು ಅದಾಗಿಲ್ಲ" ನಾವು ಬೋಧನೆಗಳನ್ನು ಕೇಳಿದಾಗ ಅಥವಾ ಅವುಗಳ ಬಗ್ಗೆ ಓದಿದಾಗ, ಈ ಖಚಿತತೆಯ ಅಗತ್ಯವಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಲು ನಮಗೆ ಆತ್ಮವಿಶ್ವಾಸದ ಅಗತ್ಯವಿರುತ್ತದೆ: “ಇದು ನಿಜವಾದ ಬೋಧನೆ; ಇದು ಹುಸಿ ಬೋಧನೆ ಅಲ್ಲ.” "ಇದು ನಿಜವಾದ ಬೋಧನೆ" ಎಂದು ತಿಳಿದುಕೊಳ್ಳುವುದು ನಿಜವಾಗಿಯೂ ಬಹಳಾ ಕಷ್ಟವಾಗಿರುತ್ತದೆ, ಏಕೆಂದರೆ ಧರ್ಮಗ್ರಂಥಗಳನ್ನು ಸ್ವತಃ ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಸಾಮಾನ್ಯವಾಗಿ, ನಾವು ಅವುಗಳನ್ನು ವಿವರಿಸುವ ಪುಸ್ತಕಗಳ ಮೇಲೆ ಅಥವಾ ಶಿಕ್ಷಕರ ಮೇಲೆ ಅವಲಂಬಿತರಾಗಿರುತ್ತೇವೆ. ಆದರೆ, ಈ ಒಬ್ಬ ಶಿಕ್ಷಕನು ವಿಶ್ವಾಸಾರ್ಹ, ಅಧಿಕೃತ ಶಿಕ್ಷಕರಾಗಿರುವರು ಎಂದು ನಿಮಗೆ ತಿಳಿದಿರಲು ಹೇಗೆ ಸಾಧ್ಯ? ಒಬ್ಬರು ಬೌದ್ಧಧರ್ಮದ ಬಗ್ಗೆ ಬೋಧಿಸುತ್ತಿರಬಹುದು, ಅಥವಾ ಪ್ರೀತಿ ಮತ್ತು ಸಹಾನುಭೂತಿಯ ಬಗ್ಗೆ ಬೋಧಿಸುತ್ತಿರಬಹುದು, ಬಹುಶಃ ಅವರು, ಬೌದ್ಧಧರ್ಮವು ವಾಸ್ತವದಲ್ಲಿ ಏನು ಹೇಳುತ್ತದೆ ಎಂಬುದರೊಂದಿಗೆ ಸಂಘರ್ಷಗೊಳ್ಳುವ ಮಾಹಿತಿಯನ್ನು ನೀಡುತ್ತಿರಬಹುದು. ವಿವೇಚನಾತ್ಮಕ ಅರಿವನ್ನು ಬಳಸುವ ಮೂಲಕ, ನಾವು ಕೇಳುವ ಅಥವಾ ಓದುವ ಬೋಧನೆಯು ನಿಖರವಾಗಿದೆ ಎಂಬುದನ್ನು ನಾವು ಖಚಿತ ಪಡಿಸಿಕೊಳ್ಳಬೇಕು; ಇದು ಅಧಿಕೃತ ಬೋಧನೆಯಾಗಿದೆ ಎಂದು ನಾವು ಧೃಡವಾಗಿರಬೇಕು.
ಮಾನ್ಯವಾದ ಬೌದ್ಧ ಬೋಧನೆಯಾಗಿರಲು, ಅದರಲ್ಲಿ ಕೆಲವು ಅಂಶಗಳಿರಬೇಕು. ಲೇಖಕರು ಅಥವಾ ಅದನ್ನು ಪ್ರತಿಪಾದಿಸುವವರು, ನಿಜವಾಗಿಯೂ ಅರ್ಹರಾದ ಶಿಕ್ಷಕರು ಎಂದು ನಾವು ತನಿಖೆಯ ಮೂಲಕ ಸರಿಯಾಗಿ ನಿರ್ಧರಿಸಲಾಗಬೇಕು. ಇದನ್ನು ನಿರ್ಧರಿಸಲು, ನಾವು ಇತರ ಜನರನ್ನು ಕೇಳಬೇಕಾಗಿದೆ, ಉದಾಹರಣೆಗೆ: “ಈ ವ್ಯಕ್ತಿಯು ತಮ್ಮದೇ ಆದ ಮಾನ್ಯ ಶಿಕ್ಷಕರನ್ನು ಹೊಂದಿದ್ದಾರೆಯೇ ಮತ್ತು ಅವರಿಬ್ಬರ ನಡುವಿನ ಸಂಬಂಧ ಹೇಗಿದೆ? ಈ ವ್ಯಕ್ತಿಯ ಶಿಕ್ಷಕರು ಪ್ರಾಚೀನ ಕಾಲದಿಂದಂದಲೂ ಮಾನ್ಯತೆ ಪಡೆದಿರುವ ಪರಂಪರೆಯಿಂದ ಬಂದಿದ್ದಾರೆಯೇ?” ಇವು ತನಿಖೆ ನಡೆಸಬೇಕಾದ ಮುಖ್ಯವಾದ ಪ್ರಶ್ನೆಗಳಾಗಿವೆ. ಯಾರೋ ಪ್ರಸಿದ್ಧರಾದ ವ್ಯಕ್ತಿಯೊಬ್ಬರು ಬರೆದಿದ್ದಾರೆ ಎಂಬ ಕಾರಣದಿಂದ ನಾವು ಆ ಪುಸ್ತಕವನ್ನು ವಿಶ್ವಾಸಾರ್ಹ ಮೂಲವೆಂದು ಪರಿಗಣಿಸಬಾರದು. ಒಬ್ಬರ ಉಪನ್ಯಾಸವನ್ನು ಕೇಳುವಾಗಲೂ ಇದೇ ತತ್ವವನ್ನು ಅನ್ವಯಿಸಬೇಕು.
ಬೋಧನೆಗಳ ಸಂದರ್ಭವನ್ನು ನಿರ್ಧರಿಸಲು ವಿವೇಚನೆಯನ್ನು ಬಳಸುವುದು
ಇದಲ್ಲದೆ, ಪ್ರತಿಯೊಂದು ಬೌದ್ಧ ಬೋಧನೆಗೆ ಒಂದು ಸಂದರ್ಭವಿರುತ್ತದೆ, ಇದು ಬೋಧನೆಗಳನ್ನು ಕರೆತಂದ ತಾತ್ವಿಕ ವ್ಯವಸ್ಥೆಗಳಾಗಿರುತ್ತವೆ. ಒಂದು ನಿರ್ದಿಷ್ಟ ಬೋಧನೆಯ ಸಂರ್ದಭವು ಏನು ಎಂಬುದನ್ನು ತಿಳಿಯುವುದು ಮುಖ್ಯ. ಏಕೆಂದರೆ, ವಿವಿಧ ಬೌದ್ಧ ವ್ಯವಸ್ಥೆಗಳು ಒಂದೇ ತಾಂತ್ರಿಕ ಪದಕ್ಕೆ ವಿಭಿನ್ನ ವಿವರಣೆಗಳನ್ನು ಹೊಂದಿರುತ್ತವೆ, ಉದಾಹರಣೆಗೆ "ಕರ್ಮ." ಇದಲ್ಲದೆ, ಒಂದು ನಿರ್ದಿಷ್ಟ ವ್ಯವಸ್ಥೆಯಲ್ಲಿರುವ ಕರ್ಮದ ಮೇಲಿನ ಬೋಧನೆಗಳು, ಧರ್ಮದಲ್ಲಿನ ಇತರ ಸಂಬಂಧಿತ ವಿಷಯಗಳ ಬಗ್ಗೆ ಈ ವ್ಯವಸ್ಥೆಯಿಲ್ಲಿರುವ ವಿವರಣೆಗಳೊಂದಿಗೆ ಹೊಂದಿಕೊಳ್ಳುತ್ತವೆ, ಉದಾಹರಣೆಗೆ ಅರಿವಿನ ಸಿದ್ಧಾಂತ. ನಮ್ಮ ಬೋಧನೆಗಳು ಯಾವ ವ್ಯವಸ್ಥೆಯಿಂದ ಬರುತ್ತವೆ ಎಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು, ಆಗ ನಾವು ಕೇಳಿದ ಇತರ ಬೋಧನೆಗಳೊಂದಿಗೆ ಅವುಗಳನ್ನು ಒಟ್ಟು ಕೂಡಿಸಬಹುದು.
ಸಾಂದರ್ಭಿಕ ಸಂಭಾಷಣೆಯಲ್ಲಿಯೂ ಬಳಸುವ ಪದಗಳ ಹಿಂದಿನ ಸಂದರ್ಭವನ್ನು ತಿಳಿದುಕೊಳ್ಳುವುದು ಮುಖ್ಯವಾಗಿರುತ್ತದೆ. ಉದಾಹರಣೆಗೆ, ನೀವು "ಬೊನ್" ಎಂಬ ಪದವನ್ನು ಕೇಳಬಹುದು. ಇದು ಟಿಬೆಟ್‌ನಲ್ಲಿನ ಬೌದ್ಧ ಪೂರ್ವ ಸಂಪ್ರದಾಯಕ್ಕಾಗಿ ಇರುವ ಹೆಸರಾಗಿದೆ. ಆದರೆ ಫ್ರೆಂಚ್ ಭಾಷೆಯಲ್ಲಿ "ಬೊನ್" ಎಂದರೆ "ಒಳ್ಳೆಯದು" ಎಂದರ್ಥ. ಆದ್ದರಿಂದ ನೀವು ಭಾಷಾ ಸನ್ನಿವೇಷದ ಬಗ್ಗೆ ತಿಳಿದಿಲ್ಲದಿದ್ದರೆ, "ಬೊನ್" ಎಂಬ ಪದವನ್ನು ಕೇಳಿದಾಗ, ನೀವು ಗೊಂದಲಕ್ಕೊಳಗಾಗಬಹುದು. ಈ ವ್ಯಕ್ತಿಯು ಫ್ರೆಂಚ್ ಭಾಷೆಯಲ್ಲಿನ ಬೊನ್ ಬಗ್ಗೆ ಮಾತನಾಡುತ್ತಿದ್ದಾನೆಯೇ ಅಥವಾ ಇದು ಟಿಬೆಟಿಯನ್ ಆಗಿದೆಯೇ? ಅದು ಯಾವ ಭಾಷೆಯಲ್ಲಿದೆ ಎಂಬುದನ್ನು ತಿಳಿಯದೆ, ಕೇವಲ ಪದದ ಧ್ವನಿಯನ್ನು ಮಾತ್ರ ಅವಲಂಬಿಸಿದರೆ, ನೀವು ತಪ್ಪುದಾರಿಗಿಳಿಯಲು ಕಾರಣವಾಗಬಹುದು.
ಬೌದ್ಧ ತಾಂತ್ರಿಕ ಪದಗಳೊಂದಿಗೆ ವ್ಯವಹರಿಸುವಾಗ, ಅದರ ಸಂದರ್ಭವನ್ನು ತಿಳಿದುಕೊಳ್ಳುವುದು ಇನ್ನೂ ಹೆಚ್ಚು ನಿರ್ಣಾಯಕವಾಗಿರುತ್ತದೆ. ಉದಾಹರಣೆಗೆ, ನೀವು ಶೂನ್ಯತೆಯ ಬಗ್ಗೆ ಕಲಿಯುತ್ತಿರಬಹುದು, ಇದನ್ನು ಒಂದು ಭಾರತೀಯ ಬೌದ್ಧ ವ್ಯವಸ್ಥೆಯಲ್ಲಿ ಒಂದು ರೀತಿಯಾಗಿ ಮತ್ತು ಇನ್ನೊಂದು ವ್ಯವಸ್ಥೆಯಲ್ಲಿ ಇನ್ನೊಂದು ರೀತಿಯಾಗಿ ವಿವರಿಸಲಾಗುತ್ತದೆ. ಒಂದು ಭಾರತೀಯ ಬೌದ್ಧ ತತ್ತ್ವಶಾಸ್ತ್ರದೊಳಗೂ ಸಹ, ಬೌದ್ಧಧರ್ಮದ ವಿವಿಧ ಟಿಬೆಟಿಯನ್ ವ್ಯವಸ್ಥೆಗಳಲ್ಲಿ, ಶೂನ್ಯತೆಯನ್ನು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ.
ಒಂದೇ ವಿಷಯದ ಬಗ್ಗೆ ಹಲವಾರು ವಿಭಿನ್ನ ವಿವರಣೆಗಳಿವೆ ಎಂಬುದು, ಬೌದ್ಧಧರ್ಮವನ್ನು ಅಧ್ಯಯನ ಮಾಡುವಲ್ಲಿ ಪಾಶ್ಚಿಮಾತ್ಯರಿಗಿರುವ ಅತ್ಯಂತ ಗೊಂದಲಮಯ ಅಂಶಗಳಲ್ಲಿ ಒಂದಾಗಿರುತ್ತದೆ. ಆಧುನಿಕ ಯುಗದಲ್ಲಿ, ವಿಶೇಷವಾಗಿ ಇಂಟರ್ನೆಟ್‌ನೊಂದಿಗೆ, ಏಷ್ಯಾದಲ್ಲಿರುವ ಎಲ್ಲಾ ರೀತಿಯ ಬೌದ್ಧಧರ್ಮದ ಸಂಪ್ರದಾಯಗಳು ನಮಗೆ ಲಭ್ಯವಾಗಿರುವುದೇ ನಮಗೆ ಸಾಕಷ್ಟು ಗೊಂದಲಮಯವಾಗಿರುತ್ತದೆ. ಆದರೆ ಒಂದು ದೇಶದ ಬೌದ್ಧ ಸಂಪ್ರದಾಯದೊಳಗೇ - ಉದಾಹರಣೆಗೆ, ಟಿಬೆಟ್ - ಅನೇಕ ವ್ಯತ್ಯಾಸಗಳು ಮತ್ತು ವಿಭಿನ್ನ ವ್ಯಾಖ್ಯಾನಗಳಿರುತ್ತವೆ.
ಆ ಅಂಶವನ್ನು ನಾನು ಹೆಚ್ಚಾಗಿ ವಿವರಿಸುತ್ತೇನೆ. ನಾವು ನಿರ್ದಿಷ್ಟ ಶಿಕ್ಷಕರೊಂದಿಗೆ ಕರ್ಮದ ವಿವರವಾದ ವಿವರಣೆಯನ್ನು ಅಧ್ಯಯನ ಮಾಡುತ್ತಿದ್ದೇವೆ ಎಂದು ಭಾವಿಸೋಣ. ನಾವು ಕಲಿಯುತ್ತಿರುವ ವಿಷಯದ ಬಗ್ಗೆ ಗೊಂದಲಕ್ಕೀಡಾಗದಿರಲು, ಶಿಕ್ಷಕರು ವಿವರಿಸುವುದನ್ನು ಹೊರತುಪಡಿಸಿ, ಉಳಿದೆಲ್ಲ ವ್ಯವಸ್ಥೆಗಳಲ್ಲಿ ಕಂಡುಬರುವ ವಿವರಣೆಯನ್ನು ನಾವು ದೂರವಿಡಬೇಕಾಗಿದೆ. ಉದಾಹರಣೆಗೆ, ನಾವು ಬೌದ್ಧರ ವ್ಯಾಖ್ಯಾನದ ಬಗ್ಗೆ ಕಲಿಯುತ್ತಿದ್ದೇವೆ, ಹಿಂದೂ ವ್ಯಾಖ್ಯಾನ ಅಲ್ಲ ಎಂದು ನಾವು ತಿಳಿದುಕೊಳ್ಳಬೇಕು. ಬೌದ್ಧ ವಿವರಣೆಗಳ ನಡುವೆ, ನಾವು ಭಾರತೀಯ ಸಂಸ್ಕೃತ ಸಂಪ್ರದಾಯವನ್ನು ಅಧ್ಯಯನ ಮಾಡುತ್ತಿದ್ದೇವೆ, ಪಾಲಿ ಥೆರವಾದ ಸಂಪ್ರದಾಯವನ್ನಲ್ಲ. ಭಾರತೀಯ ಸಂಸ್ಕೃತ ಸಂಪ್ರದಾಯಗಳ ನಡುವೆ, ನಾವು ವೈಭಾಷಿಕ ದೃಷ್ಟಿಕೋನವನ್ನು ಅಧ್ಯಯನ ಮಾಡುತ್ತಿದ್ದೇವೆ, ಚಿತ್ತಮಾತ್ರ ದೃಷ್ಟಿಕೋನವನ್ನಲ್ಲ. ಅಲ್ಲದೆ, ನಾವು ವೈಭಾಷಿಕಾ ಪ್ರಸ್ತುತಿಯ ಗೆಲುಗ್ ವಿವರಣೆಯ ಬಗ್ಗೆ ಕಲಿಯುತ್ತಿದ್ದೇವೆ, ಕಗ್ಯು ವಿವರಣೆಯನ್ನಲ್ಲ. ನಾವು ನಿಖರವಾದ ಸಂದರ್ಭವನ್ನು ತಿಳಿದುಕೊಳ್ಳಬೇಕು, ಏಕೆಂದರೆ ಕರ್ಮದ ವಿಭಿನ್ನ ವಿವರಣೆಗಳು, ತಾತ್ವಿಕ ಸಂದರ್ಭಗಳ ಮೇಲೆ ಅವಲಂಬಿತವಾಗಿ ಸಾಕಷ್ಟು ವಿಭಿನ್ನವಾಗಿರುತ್ತವೆ. ನಾವು ಗೆಲುಗ್ನಲ್ಲಿರುವ ಧರ್ಮದ ವಿಷಯದ ವಿವರಣೆಯನ್ನು ಕಗ್ಯು ವ್ಯವಸ್ಥೆಯಲ್ಲಿ ಹೊಂದಿಸಲು ಪ್ರಯತ್ನಿಸಿದರೆ, ನಾವು ತುಂಬಾ ಗೊಂದಲಕ್ಕೊಳಗಾಗುತ್ತೇವೆ. ಮತ್ತು ನಾವು ಎಲ್ಲಾ ವಿವರಣೆಗಳನ್ನು ಒಂದು ದೊಡ್ಡ ಸೂಪ್ನಲ್ಲಿ ಮಿಶ್ರಣ ಮಾಡಲು ಪ್ರಯತ್ನಿಸಿದರೆ, ನಾವು ಇನ್ನಷ್ಟು ಗೊಂದಲಕ್ಕೊಳಗಾಗುತ್ತೇವೆ.
ನನ್ನ ಶಿಕ್ಷಕರಲ್ಲಿ ಒಬ್ಬರಾದ ಗೆಶೆ ನ್ಗಾವಾಂಗ್ ದರ್ಗ್ಯೆ ಅವರು ಪಾಶ್ಚಿಮಾತ್ಯರ ಬಗೆಗಿರುವ ಒಂದು ಉತ್ತಮ ಒಳನೋಟವೊಂದನ್ನು ಹಂಚಿಕೊಂಡರು. ಅವರು ಹೀಗೆ ಹೇಳಿದರು: “ಪಾಶ್ಚಿಮಾತ್ಯ ಜನರಾದ ನೀವು ಯಾವಾಗಲೂ ಎರಡು ವಿಷಯಗಳನ್ನು ಹೋಲಿಸಲು ಪ್ರಯತ್ನಿಸುತ್ತೀರಿ, ಅವೆರಡರಲ್ಲಿ ನೀವು ಒಂದನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿರುವುದಿಲ್ಲ. ಕೊನೆಯಲ್ಲಿ, ನೀವು ಹೆಚ್ಚು ಗೊಂದಲಕ್ಕೆ ಒಳಗಾಗುತ್ತೀರಿ.” ಇದರಿಂದ ನಾವು ಕಲಿಯಬೇಕಾದ ಪಾಠವೆಂದರೆ ವಿಭಿನ್ನ ವ್ಯವಸ್ಥೆಗಳನ್ನು ಹೋಲಿಸುವುದು ಸರಿ, ಆದರೆ ಒಂದು ವ್ಯವಸ್ಥೆಯನ್ನು ಚೆನ್ನಾಗಿ ತಿಳಿದುಕೊಂಡಿರುವ ಆಧಾರದ ಮೇಲೆ ಮಾತ್ರ. ಒಮ್ಮೆ ನೀವು ಒಂದು ವ್ಯವಸ್ಥೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ನೀವು ಇತರ ವ್ಯವಸ್ಥೆಗಳನ್ನು ವಿಶ್ಲೇಷಿಸಬಹುದು ಮತ್ತು ಅವುಗಳಲ್ಲಿನ ವ್ಯತ್ಯಾಸಗಳನ್ನು ಪ್ರಶಂಸಿಸಬಹುದು, ಆದರೆ ಇದಕ್ಕೂ ಮುನ್ನ ಅಲ್ಲ.
ಆದ್ದರಿಂದ ನಾವು ಕರ್ಮ, ಅಥವಾ ಶೂನ್ಯತೆಯ ಬಗ್ಗೆ ಅಥವಾ ಬೌದ್ಧಧರ್ಮದ ಯಾವುದೇ ವಿಷಯದ ಬಗ್ಗೆ ಧ್ಯಾನಿಸಲು ಬಯಸಿದರೆ, ನಾವು ಶ್ರವಣಶಕ್ತಿಯಿಂದ ವಿವೇಚನಾತ್ಮಕ ಅರಿವನ್ನು ಬೆಳೆಸಿಕೊಳ್ಳಬೇಕು. ಇದರರ್ಥ ನಿಖರವಾಗಿ ಮತ್ತು ಖಚಿತವಾಗಿ ತಿಳಿದುಕೊಳ್ಳುವುದಾಗಿರುತ್ತದೆ:
- ಮಾತನಾಡಿದ ಪದಗಳು ಇವೇ, ಬೇರೆ ಯಾವುದೇ ಪದಗಳಲ್ಲ.
- ಅವುಗಳನ್ನು ನುಡಿದ ವ್ಯಕ್ತಿಯು, ಮಾಹಿತಿಯ ನಿಖರವಾದ ಮೂಲವಾಗಿರುವರು ಮತ್ತು ವಿಶ್ವಾಸಾರ್ಹವಲ್ಲದ ವ್ಯಕ್ತಿ ಆಗಿರುವುದಿಲ್ಲ.
- ಈ ವಿವರಣೆಯು, ಈ ತಾತ್ವಿಕ ವ್ಯವಸ್ಥೆಯಿಂದ ಬಂದಿದೆ, ಬೇರೆ ಯಾವುದೇ ವ್ಯವಸ್ಥೆಯಲ್ಲ.
ಆಲಿಸುವಿಕೆಯಿಂದ ಉಂಟಾಗುವ ವಿವೇಚನಾತ್ಮಕ ಅರಿವನ್ನು ನಾವು ಹೊಂದಿದ ನಂತರ, ನಾವು ಮುಂದಿನ ಹಂತಕ್ಕೆ ಹೆಜ್ಜೆಯಿಡಲು ಸಿದ್ಧರಾಗಿರುತ್ತೇವೆ.
ಮೂರು ವಿಧದ ಧ್ಯಾನಗಳು
ಬೋಧನೆಗಳನ್ನು ಕೇಳುವುದರಿಂದ ಮತ್ತು ಅವುಗಳ ಬಗ್ಗೆ ಯೋಚಿಸುವ ಮೂಲಕ ನಾವು ಈ ಎರಡಕ್ಕೂ ಸಂಬಂಧಿಸಿದ ವಿವೇಚನಾತ್ಮಕ ಅರಿವಿನ ಪ್ರಕಾರಗಳನ್ನು ಅಭಿವೃದ್ಧಿಪಡಿಸುತ್ತೇವೆ, ಹಾಗೆಯೇ ಧ್ಯಾನದಿಂದ ನಾವು "ಧ್ಯಾನದಿಂದ ಉದ್ಭವಿಸುವ ವಿವೇಚನಾತ್ಮಕ ಅರಿವು" ಎಂದು ಕರೆಯಲ್ಪಡುವುದನ್ನು ಅಭಿವೃದ್ಧಿಪಡಿಸಬಹುದು. ಈ ಅರಿವಿನೊಂದಿಗೆ, ಸಂಪೂರ್ಣ ಏಕಾಗ್ರತೆಯಿಂದ, ನಾವು ಅಭಿವೃದ್ಧಿಪಡಿಸಲು ಗುರಿಯಾಗಿ ಹೊಂದಿರುವ ಮನಸ್ಸಿನ ಪ್ರಯೋಜನಕಾರಿ ಸ್ಥಿತಿಯನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಮತ್ತು ನಾವು ಅದನ್ನು ಇತರ ಎಲ್ಲ ಮನಸ್ಥಿತಿಗಳಿಂದ ನಿರ್ಣಾಯಕವಾಗಿ ಮತ್ತು ನಿಖರವಾಗಿ ಪ್ರತ್ಯೇಕಿಸಬಹುದು. ಈ ವಿವೇಚನಾತ್ಮಕ ಅರಿವನ್ನು ಪಡೆಯಲು, ಅದನ್ನು ಪದೇ ಪದೇ ಉತ್ಪಾದಿಸುವ ಮೂಲಕ ನಾವು ಬಯಸಿದ ಮನಸ್ಥಿತಿಗೆ ನಮ್ಮನ್ನು ಒಗ್ಗಿಸಿಕೊಳ್ಳುತ್ತೇವೆ. ಹೀಗೆ ಮಾಡುವ ವಿವಿಧ ರೀತಿಯ ಧ್ಯಾನಗಳಿವೆ, ಆದರೆ ಇಲ್ಲಿ ಮೂರು ಸಾಮಾನ್ಯ ವಿಧಗಳನ್ನು ಮಾತ್ರ ಪರಿಗಣಿಸೋಣ.
ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವುದು
ಮೊದಲ ವಿಧದ ಧ್ಯಾನವು, ವಸ್ತುವಿನ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿರುತ್ತದೆ. ನಾವು ಯಾವುದೇ ರೀತಿಯ ವಸ್ತುವಿನ ಮೇಲೆ ಕೇಂದ್ರೀಕರಿಸಬಹುದು ಮತ್ತು ನಾವು ಆ ವಸ್ತುವಿನ ಮೇಲಿನ ಏಕಾಗ್ರತೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುತ್ತೇವೆ. ಅದು ಒಳಗೆ ಮತ್ತು ಹೊರಗೆ ಹೋಗುವ ಉಸಿರಾಟದ ಸಂವೇದನೆಯ ಮೇಲೆ ಕೇಂದ್ರೀಕರಿಸುತ್ತಿರಲಿ ಅಥವಾ ದೃಶ್ಯೀಕರಿಸಿದ ಬುದ್ಧನ ಮೇಲೆ ಕೇಂದ್ರೀಕರಿಸುತ್ತಿರಲಿ ಅಥವಾ ಮನಸ್ಸಿನ ಸ್ವಭಾವದ ಮೇಲೆ ಕೇಂದ್ರೀಕರಿಸುತ್ತಿರಲಿ, ಅದು ವಸ್ತುವಿನ ಮೇಲೆಯೇ ಕೇಂದ್ರೀಕೃತವಾಗಿರುತ್ತದೆ. ಆ ಮೂರು ವಸ್ತುಗಳು, ಟಿಬೆಟಿಯನ್ ಬೌದ್ಧಧರ್ಮದಲ್ಲಿ ಏಕಾಗ್ರತೆಯನ್ನು ಬೆಳೆಸಲು ಸಾಮಾನ್ಯವಾಗಿ ಬಳಸುವ ವಸ್ತುಗಳಾಗಿರುತ್ತವೆ.
ಈ ರೀತಿಯ ಧ್ಯಾನದ ಪ್ರಮುಖ ರೂಪಾಂತರವು, ಏಕಾಗ್ರತೆಯೊಂದಿಗೆ ವಸ್ತುವಿನ ಮೇಲೆ ಕೇಂದ್ರೀಕರಿಸುವುದು ಮತ್ತು ಅದರ ಮೇಲೆ ಕೇಂದ್ರೀಕರಿಸುವಾಗ, ಅದನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಗ್ರಹಿಸಲು ಪ್ರಯತ್ನಿಸುವುದಾಗಿರುತ್ತದೆ, ಉದಾಹರಣೆಗೆ ಅಶಾಶ್ವತೆ. ಈ ವಿವೇಚನೆಯೊಂದಿಗೆ, ಈ ವಸ್ತುವಿನ ಮೇಲೆ ಕೇಂದ್ರೀಕರಿಸುವ ಮೂಲಕ, ಅದು ನಿಜವಾಗಿಯೂ ಅಶಾಶ್ವತವಾಗಿದೆ ಎಂಬುದು ನಮಗೆ ಮನದಟ್ಟಾಗುತ್ತದೆ. ಅದು ಶಾಶ್ವತವಾಗಿ ಉಳಿಯುತ್ತದೆ ಎಂಬ ಕಾರಣದಿಂದ ಅದರೊಂದಿಗೆ ಅಂಟಿಕೊಳ್ಳುವುದನ್ನು ಜಯಿಸುವುದರಲ್ಲಿ ಇದು ಬಹಳಾ ಸಹಾಯಕವಾಗಿರುತ್ತದೆ.
ಇನ್ನೊಂದು ಉಪಯುಕ್ತವಾದ ಉದಾಹರಣೆ ಹೀಗಿದೆ: ನೀವು ಒಬ್ಬರೊಂದಿಗೆ ಸ್ನೇಹ ಅಥವಾ ಸಂಬಂಧವನ್ನು ಹೊಂದಿದ್ದೀರಿ, ಮತ್ತು ಅವನು ನಿಮಗೆ ಕರೆನೀಡುವುದಿಲ್ಲ ಅಥವಾ ನಿಮ್ಮನ್ನು ಭೇಟಿ ಮಾಡುವುದಿಲ್ಲ ಮತ್ತು ಅದರಿಂದ ನೀವು ತುಂಬಾ ಅಸಮಾಧಾನಗೊಂಡಿದ್ದೀರಿ. ಈ ಉದಾಹರಣೆಯಲ್ಲಿ, ನೀವು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಸಂಪೂರ್ಣವಾಗಿ ಮನವರಿಕೆ ಮಾಡಿಕೊಳ್ಳಬೇಕು: “ನನ್ನ ಸ್ನೇಹಿತನ ಜೀವನದಲ್ಲಿ ನಾನು ಒಬ್ಬನೇ ಇರುವುದಿಲ್ಲ. ನನ್ನ ಹೊರತಾಗಿ ಅವನ ಜೀವನದಲ್ಲಿ ಬೇರೆಯವರಿದ್ದಾರೆ. ಆದ್ದರಿಂದ, ಅವನು ತನ್ನ ಸಮಯವನ್ನು ನನಗೆ ಪ್ರತ್ಯೇಕವಾಗಿ ನೀಡಲಿ ಮತ್ತು ಬೇರೆಯವರಿಗೆ ತನ್ನ ಸಮಯವನ್ನು ನೀಡದಿರುವಂತೆ ನಿರೀಕ್ಷಿಸುವುದು ಸಂಪೂರ್ಣವಾಗಿ ಅಸಮಂಜಸವಾಗಿರುತ್ತದೆ.” ಇಲ್ಲಿ ನೀವು ಅಸಾಧ್ಯವಾದ ಒಂದು ಕಾಲ್ಪನಿಕ ಪ್ರಕ್ಷೇಪಣವಾದ, “"ನನ್ನ ಸ್ನೇಹಿತನ ಜೀವನದಲ್ಲಿ ನಾನೊಬ್ಬನೇ ವ್ಯಕ್ತಿ." ಎಂಬುದನ್ನು ಸವಾಲು ಮಾಡುತ್ತಿದ್ದೀರಿ. ಆದ್ದರಿಂದ, ನಿಮ್ಮ ಸ್ನೇಹಿತ ನಿಮ್ಮೊಂದಿಗೆ ಸಾಕಷ್ಟು ಸಮಯವನ್ನು ಕಳೆಯುತ್ತಿಲ್ಲ ಎಂದು ನೀವು ಅಸಮಾಧಾನಗೊಂಡಾಗ, ನೀವು ವಿವೇಚನೆಯಿಂದ ಅವನ ಮೇಲೆ ಕೇಂದ್ರೀಕರಿಸಲು ಪ್ರಯತ್ನಿಸುತ್ತೀರಿ: "ನನ್ನ ಹೊರತಾಗಿ ಅವನ ಜೀವನದಲ್ಲಿ ಇತರ ವಿಷಯಗಳಿವೆ ಮತ್ತು ಇತರ ವ್ಯಕ್ತಿಗಳಿದ್ದಾರೆ."
ಆದ್ದರಿಂದ, ನಾವು ಧ್ಯಾನದ ಬಗ್ಗೆ ಮಾತನಾಡುವಾಗ, ನಾವು ಒಂದು ರೀತಿಯ ಅತೀಂದ್ರಿಯ, ಮಾಂತ್ರಿಕ ಪ್ರಕ್ರಿಯೆಯ ಬಗ್ಗೆ ಮಾತನಾಡುತ್ತಿಲ್ಲ; ನಾವು ಕಾಲ್ಪನಿಕ ಜಗತ್ತಿಗೆ ಹೋಗುತ್ತಿಲ್ಲ. ಬದಲಾಗಿ, ಧ್ಯಾನವು ನಮ್ಮ ಜೀವನದಲ್ಲಿ ನೋವು, ತೊಂದರೆಗಳು ಮತ್ತು ಸಮಸ್ಯೆಗಳನ್ನು ಎದುರಿಸಲು ಬೇಕಾದ ಬಹಳ ಪ್ರಾಯೋಗಿಕ ವಿಧಾನಗಳನ್ನು ಒಳಗೊಂಡಿರುತ್ತದೆ.
ಹಾಗಿದ್ದಲ್ಲಿ, ಮೊದಲ ವಿಧದ ಧ್ಯಾನದಲ್ಲಿ, ನಮ್ಮ ಸ್ನೇಹಿತನ ಮೇಲೆ ಕೇಂದ್ರೀಕರಿಸುವ ನಮ್ಮ ಉದಾಹರಣೆಯಂತೆ, ಒಂದು ನಿರ್ದಿಷ್ಟ ರೀತಿಯಲ್ಲಿ ಒಂದು ವಸ್ತುವಿನ ಮೇಲೆ, ಕೇವಲ ಏಕಾಗ್ರತೆ ಅಥವಾ ಒಂದು ರೀತಿಯ ತಿಳುವಳಿಕೆ ಮತ್ತು ವಿವೇಚನೆಯೊಂದಿಗೆ ಕೇಂದ್ರೀಕರಿಸುವುದಾಗಿರುತ್ತದೆ.
ಮನಸ್ಥಿತಿಯನ್ನು ಸೃಷ್ಟಿಸುವುದು
ಎರಡನೆಯ ವಿಧವು ಒಂದು ನಿರ್ದಿಷ್ಟ ಮನಸ್ಥಿತಿಯನ್ನು ಸೃಷ್ಟಿಸುವ ಧ್ಯಾನವಾಗಿರುತ್ತದೆ, ಉದಾಹರಣೆಗೆ ಪ್ರೀತಿ ಅಥವಾ ಸಹಾನುಭೂತಿಯನ್ನು ಉದ್ಭವಿಸುವುದು ಮತ್ತು ಅದನ್ನು ಅನುಭವಿಸುವುದರ ಮೇಲೆ ಕೇಂದ್ರೀಕರಿಸುವುದು. ಈ ಪ್ರೀತಿಯ ಅಥವಾ ಸಹಾನುಭೂತಿಯ ಗುರಿಯಾದ ವಸ್ತುವು ಮಹತ್ವದ್ದಾಗಿರುವುದಿಲ್ಲ; ಬದಲಿಗೆ, ಇಲ್ಲಿ ಭಾವನೆಯನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗುತ್ತದೆ.
ಆಕಾಂಕ್ಷೆಯನ್ನು ಹುಟ್ಟುಹಾಕುವುದು
ಮೂರನೆಯ ವಿಧದ ಧ್ಯಾನವು, ಒಂದು ವಸ್ತುವಿಗೆ ಸಂಬಂಧಿಸಿದ ಗುರಿಯನ್ನು ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರೀಕರಿಸುವುದಾಗಿರುತ್ತದೆ; ಉದಾಹರಣೆಗೆ, "ನಾನು ಅದನ್ನು ಸಾಧಿಸಲಿದ್ದೇನೆ" ಎಂಬ ಆಕಾಂಕ್ಷೆಯೊಂದಿಗೆ, ಇನ್ನೂ ಸಂಭವಿಸದ ನಮ್ಮ ವೈಯಕ್ತಿಕ ಜ್ಞಾನೋದಯದ ಮೇಲೆ ಕೇಂದ್ರೀಕರಿಸುವುದು. ಇದನ್ನು "ಬೋಧಿಚಿತ್ತ ಧ್ಯಾನ" ಎಂದು ಕರೆಯಲಾಗುತ್ತದೆ. ನಾವು ಬೋಧಿಚಿತ್ತದ ಮೇಲೆ ಧ್ಯಾನಿಸುತ್ತಿರುವಾಗ (ಇದನ್ನು ಕೆಲವೊಮ್ಮೆ "ಜಾಗೃತಗೊಳ್ಳುವ ಮನಸ್ಸು" ಎಂದೂ ಅನುವಾದಿಸಲಾಗುತ್ತದೆ), ಸಾಮಾನ್ಯವಾಗಿ ನಾವು ಜ್ಞಾನೋದಯದ ಮೇಲೆ ಗಮನಹರಿಸುತ್ತಿರುವುದಿಲ್ಲ, ಅಥವಾ ಬುದ್ಧನ ಜ್ಞಾನೋದಯದ ಮೇಲೆ ಗಮನಹರಿಸುವುದಿಲ್ಲ; ಬದಲಿಗೆ, ನಾವು ನಮ್ಮ ಸ್ವಂತ ವೈಯಕ್ತಿಕ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತೇವೆ. ನಮ್ಮ ಜ್ಞಾನೋದಯವು ಇನ್ನೂ ಸಂಭವಿಸಿಲ್ಲ, ಆದರೆ ಅದು ಸಂಭವಿಸಬಹುದು - ಅದು ಸಂಭವಿಸಬಹುದು ಎಂದು ನಮ್ಮ ಬುದ್ಧ-ಸ್ವಭಾವದ ಸಾಮರ್ಥ್ಯಗಳು ಮತ್ತು ಬಹಳಷ್ಟು ಕಠಿಣ ಪರಿಶ್ರಮದ ಆಧಾರದ ಮೇಲೆ ಮನವರಿಕೆಯಾಗಿದೆ. ಆದ್ದರಿಂದ ಈ ಮೂರನೇ ವಿಧದ ಧ್ಯಾನದೊಂದಿಗೆ, ನಾವು ಅದನ್ನು ಸಾಧಿಸುವ ಬಲವಾದ ಉದ್ದೇಶದೊಂದಿಗೆ, ಒಂದು ಭವಿಷ್ಯದ ಗುರಿಯ ಮೇಲೆ ಕೇಂದ್ರೀಕರಿಸುತ್ತಿದ್ದೇವೆ.
ದೈನಂದಿನ ಜೀವನದಲ್ಲಿ ಧ್ಯಾನದ ಮೂರು ವಿಧಗಳು
ಈ ಮೂರು ವಿಧದ ಧ್ಯಾನಗಳು, ನಮ್ಮ ದೈನಂದಿನ ಜೀವನದಲ್ಲಿ, ನಾವು ಕರೆತರಲು ಬಯಸುವ ಪ್ರಯೋಜನಕಾರಿ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುತ್ತವೆ. ಧ್ಯಾನವು ನಮ್ಮ ಜೀವನಕ್ಕೆ ಯಾವುದೇ ಸಂಬಂಧವಿಲ್ಲದ, ಬದಿಯಲ್ಲಿ ನಡೆಸುವ ಚಟುವಟಿಕೆಯಾಗಿರಬಾರದು ಎಂಬುದು ಬಹಳ ಮುಖ್ಯ. ಧ್ಯಾನವು ಒಂದು ರೀತಿಯ ಪಲಾಯನವಾಗಿರುವುದಿಲ್ಲ; ಇದು ಆಟವಲ್ಲ; ಇದು ಹವ್ಯಾಸವಲ್ಲ. ನಾವು ನಮ್ಮ ಜೀವನದಲ್ಲಿ ತರುವ ಮತ್ತು ಪ್ರತಿದಿನ ಬಳಸಲು ಬಯಸುವ ಗುಣಗಳನ್ನು ಅಭಿವೃದ್ಧಿಪಡಿಸಲು ನಮಗೆ ಸಹಾಯ ಮಾಡುವ ವಿಧಾನವಾಗಿರುತ್ತದೆ.
ಈಗ ಉಲ್ಲೇಖಿಸಲಾದ ಉದಾಹರಣೆಗಳನ್ನು ಬಳಸಿಕೊಂಡು ನಾವು ಈ ಮೂರು ವಿಧಾನಗಳನ್ನು ಹೇಗೆ ಅನ್ವಯಿಸುತ್ತೇವೆ ಎಂಬುದನ್ನು ವಿವರಿಸೋಣ. ನಾವು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸಲು ಮೊದಲ ರೀತಿಯ ಧ್ಯಾನವನ್ನು ಅಭ್ಯಾಸ ಮಾಡುವಾಗ, ನಾವು ಶಾಂತವಾಗಿರಲು ಕಲಿಯುತ್ತೇವೆ, ನಮ್ಮ ಮನಸ್ಸು ಮತ್ತು ಏಕಾಗ್ರತೆಯು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಕೇವಲ ನಮ್ಮ ಕೆಲಸದ ಮೇಲೆ ಕೇಂದ್ರೀಕರಿಸಲು ಕಲಿಯುವುದಿಲ್ಲ, ಅದರ ಜೊತೆಗೆ ನಾವು ಒಬ್ಬರೊಂದಿಗೆ ಸಂಭಾಷಣೆ ನಡೆಸುತ್ತಿರುವಾಗಲೂ, ಅವರ ಮೇಲೆ ಕೇಂದ್ರೀಕರಿಸಲು ಕಲಿಯುತ್ತೇವೆ. ನಾವು ಆ ವ್ಯಕ್ತಿಯ ಮೇಲೆ ಮತ್ತು ಅವರು ಏನು ಹೇಳುತ್ತಿದ್ದಾರೆ ಎಂಬುದರ ಮೇಲೆ ಕೇಂದ್ರೀಕರಿಸಲು ಬಯಸುತ್ತೇವೆ ಮತ್ತು ಎಲ್ಲಾ ರೀತಿಯ ಇತರ ವಿಷಯಗಳ ಬಗ್ಗೆ ನಮ್ಮ ಮನಸ್ಸು ಯೋಚಿಸುವುದಿಲ್ಲ. "ಓಹ್, ಅದು ನಿಜವಾದ ಮೂರ್ಖತನ" ಅಥವಾ "ಅವನು ಬಾಯಿ ಮುಚ್ಚಿದರೆ ಸಾಕು" ಎಂದು ಅವರ ಮಾತಿನ ಬಗ್ಗೆ ನಿರ್ಣಯಿಸದೆ, ಯಾವುದೇ ಮಾನಸಿಕ ಪ್ರತಿಕ್ರಿಯೆಗಳಿಲ್ಲದೆ, ನಾವು ಕೇಳಲು ಬಯಸುತ್ತೇವೆ. ಆ ಎಲ್ಲಾ ಮಾನಸಿಕ ವಟಗುಟ್ಟುವಿಕೆಯನ್ನು ನಾವು ಶಾಂತಗೊಳಿಸಲು ಬಯಸುತ್ತೇವೆ. ನಾವು ಈ ವ್ಯಕ್ತಿಯ ಮೇಲೆ ಮತ್ತು ಅವರ ಮಾತುಗಳ ಮೇಲೆ ನಮ್ಮ ಏಕಾಗ್ರತೆಯನ್ನು ಈ ವಿವೇಚನೆಯೊಂದಿಗೆ ಪೂರಕಗೊಳಿಸಬಹುದು: “ನೀವು ಮನುಷ್ಯರೇ ಮತ್ತು ನನ್ನಂತೆಯೇ ನೀವು ಭಾವನೆಗಳನ್ನು ಹೊಂದಿದ್ದೀರಿ; ನನ್ನಂತಯೇ ನೀವು ಕೂಡ ಮಾತನಾಡುವಾಗ ನಿಮ್ಮ ಮೇಲೆ ಗಮನವಿರಬೇಕೆಂದು ಬಯಸುತ್ತೀರಿ.” ಏಕಾಗ್ರತೆಯ ಧ್ಯಾನದ ಮೂಲಕ ನಾವು ಹೀಗೆ ಮಾಡಲು ತರಬೇತಿ ನೀಡುತ್ತೇವೆ.
ದೈನಂದಿನ ಜೀವನದಲ್ಲಿ, ನಮ್ಮಲ್ಲಿರುವ ಪ್ರೀತಿ ಮತ್ತು ಸಹಾನುಭೂತಿಯನ್ನು ಹೆಚ್ಚಿಸುವ ಮನಸ್ಥಿತಿಯನ್ನು ಉಂಟುಮಾಡಲು, ನಾವು ಎರಡನೇ ರೀತಿಯ ಧ್ಯಾನವನ್ನು ಬಳಸಬಹುದು. ಪ್ರೀತಿಯನ್ನು ಹುಟ್ಟುಹಾಕಲು ನಾವು ಕೆಲಸ ಮಾಡುತ್ತೇವೆ - ನಾವು ಎಲ್ಲಿದ್ದರೂ ಅಥವಾ ಯಾರೊಂದಿಗೆ ಇದ್ದರೂ ಪರವಾಗಿಲ್ಲ,ಎಲ್ಲರೂ ಸಂತೋಷವಾಗಿರಲಿ ಎಂಬ ಹಾರೈಕೆ. ಇಲ್ಲಿ ಪ್ರೀತಿಯೆಂದರೆ, ನಿಜವಾಗಿಯೂ ಎಲ್ಲರಿಗೂ ಇರುವ ಪ್ರೀತಿಯಾಗಿರುತ್ತದೆ: ಬಸ್‌ನಲ್ಲಿರುವ ಪ್ರತಿಯೊಬ್ಬರಿಗೂ, ಸುರಂಗಮಾರ್ಗದಲ್ಲಿರುವ ಪ್ರತಿಯೊಬ್ಬರಿಗೂ, ಟ್ರಾಫಿಕ್‌ನಲ್ಲಿರುವ ಪ್ರತಿಯೊಬ್ಬರಿಗೂ, ಅಂಗಡಿಯಲ್ಲಿರುವ ಪ್ರತಿಯೊಬ್ಬರಿಗೂ, ಎಲ್ಲಾ ಪ್ರಾಣಿಗಳು ಮತ್ತು ಕೀಟಗಳಿಗೂ – ಎಲ್ಲರಿಗೂ. ಆದ್ದರಿಂದ ಪ್ರತಿಯೊಬ್ಬರ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳುವುದು ಎಂದಾಗಿರುತ್ತದೆ. ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುವುದರಲ್ಲಿ ಮತ್ತು ಅತೃಪ್ತರಾಗದೇ ಇರಲು ಬಯಸುವುದರಲ್ಲಿ ಸಮಾನರಾಗಿರುತ್ತಾರೆ. ನೊಣವೂ ಸೇರಿದಂತೆ, ಎಲ್ಲರಿಗೂ ಸಂತೋಷವಾಗಿರುವ ಸಮಾನ ಹಕ್ಕಿದೆ!
ಮತ್ತು ಅಂತಿಮವಾಗಿ, ನಮ್ಮ ಜೀವನದುದ್ದಕ್ಕೂ ನಾವು ಹೊಂದಿರುವ ಮಹತ್ವಾಕಾಂಕ್ಷೆಯನ್ನು ಅಭಿವೃದ್ಧಿಪಡಿಸಲು ನಾವು ಧ್ಯಾನವನ್ನು ಬಳಸುತ್ತೇವೆ: "ನನ್ನ ಗುರಿಯತ್ತ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ನ್ಯೂನತೆಗಳನ್ನು ಕಡಿಮೆ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಉತ್ತಮ ಗುಣಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಕೆಲಸ ಮಾಡುತ್ತಿದ್ದೇನೆ ಮತ್ತು ನಾನು ವಿಮೋಚನೆ ಮತ್ತು ಜ್ಞಾನೋದಯದ ಕಡೆಗೆ ಕೆಲಸ ಮಾಡುತ್ತಿದ್ದೇನೆ.” ಆ ಆಕಾಂಕ್ಷೆಯು ನಮ್ಮ ಇಡೀ ಜೀವನವನ್ನು ವ್ಯಾಪಿಸುತ್ತದೆ, ನಾವು ಕುಶನ್ ಮೇಲೆ ಕುಳಿತಿರುವ ಅಲ್ಪಾವಧಿಯನ್ನು ಮಾತ್ರವಲ್ಲ.
ಪ್ರಯೋಜನಕಾರಿ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುವುದರ ಕುರಿತು ತ್ಸೋಂಗ್ಖಾಪಾ ಅವರ ಸಲಹೆ
ಈ ಎಲ್ಲಾ ರೀತಿಯ ಧ್ಯಾನಕ್ಕಾಗಿ ನಾವು ನಿಜವಾಗಿಯೂ ಏನನ್ನು ತಿಳಿದುಕೊಳ್ಳಬೇಕು ಎಂಬುದನ್ನು ಮಹಾನ್ ಟಿಬೆಟಿಯನ್ ಗುರುಗಳಾದ ತ್ಸೋಂಗ್‌ಖಾಪಾ ಅವರು ಚೆನ್ನಾಗಿ ವಿವರಿಸಿರುವರು; ಬೇರೆ ರೀತಿಯಲ್ಲಿ ಹೇಳುವುದಾದರೆ, ಧ್ಯಾನಕ್ಕೆ ಅಡಿಪಾಯವಾಗಿ ಮನಸ್ಸಿನ ಪ್ರಯೋಜನಕಾರಿ ಸ್ಥಿತಿಯನ್ನು ಹೇಗೆ ಅಭಿವೃದ್ಧಿಪಡಿಸುವುದು.
ನೀವು ಯಾವುದರ ಮೇಲೆ ಕೇಂದ್ರೀಕರಿಸುತ್ತಿದ್ದೀರಿ ಎಂಬುದನ್ನು ತಿಳಿಯಿರಿ
ಮೊದಲು ನಾವು ಯಾವುದರ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಸಹಾನುಭೂತಿಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಸಹಾನುಭೂತಿಯ ಮೇಲೆ ಕೇಂದ್ರೀಕರಿಸುವಲ್ಲಿ, ನಾವು ಇತರರ ದುಃಖದ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ಇದು ಬೋಧಿಚಿತ್ತಕ್ಕಿಂತ ಭಿನ್ನವಾಗಿರುತ್ತದೆ, ಇದರಲ್ಲಿ ನಾವು ಇನ್ನೂ ಸಂಭವಿಸದ ನಮ್ಮ ಸ್ವಂತ ವೈಯಕ್ತಿಕ ಜ್ಞಾನೋದಯದ ಮೇಲೆ ಕೇಂದ್ರೀಕರಿಸಿರುತ್ತೇವೆ. ಕೆಲವರು ತಾವು ಬೋಧಿಚಿತ್ತದ ಮೇಲೆ ಧ್ಯಾನಿಸುತ್ತಿದ್ದೇವೆಯೆಂದು ಭಾವಿಸುತ್ತಾರೆ, ಆದರೆ ಅವರು ಕೇವಲ ಸಹಾನುಭೂತಿಯ ಬಗ್ಗೆ ಮಾತ್ರ ಧ್ಯಾನಿಸುತ್ತಿರುತ್ತಾರೆ; ಸಹಾನುಭೂತಿಯು ಬೋಧಿಚಿತ್ತದ ಅಡಿಪಾಯವಾಗಿರುತ್ತದೆ, ಆದರೆ ಸಹಾನುಭೂತಿ ಮತ್ತು ಬೋಧಿಚಿತ್ತ ಒಂದೇ ಆಗಿರುವುದಿಲ್ಲ.
ಅದರ ಎಲ್ಲಾ ಅಂಶಗಳನ್ನು ತಿಳಿಯಿರಿ
ನಮ್ಮ ಗಮನದಲ್ಲಿರುವ ನಿಖರವಾದ ವಸ್ತುವನ್ನು ನಿರ್ಧರಿಸಿದ ನಂತರ - ಈ ಸಂದರ್ಭದಲ್ಲಿ, ಇದು ಸಹಾನುಭೂತಿಯ ಕೇಂದ್ರ ವಸ್ತುವಾದ ಇತರರ ದುಃಖವಾಗಿರುತ್ತದೆ - ನಾವು ಆ ವಸ್ತುವಿನ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳಬೇಕು. ಹೀಗಾಗಿ ಪ್ರತಿಯೊಬ್ಬರೂ ಅನುಭವಿಸುವ ದುಃಖದ ವಿವಿಧ ಅಂಶಗಳನ್ನು ಅಥವಾ ವಿಧಗಳನ್ನು ನಾವು ಅನ್ವೇಷಿಸುತ್ತೇವೆ: ಅತೃಪ್ತಿ, ನಮ್ಮ ಸಾಮಾನ್ಯ ರೀತಿಯ ಸಂತೋಷ, ಕರ್ಮದ ಪ್ರಚೋದಿತ ನಿಯಂತ್ರಣದಲ್ಲಿರುವುದು ಮತ್ತು ಅನಿಯಂತ್ರಿತವಾಗಿ ಮರುಕಳಿಸುವ ಮರುಜನ್ಮದ ನೋವು. ನಾವು ಕೇವಲ ಕೆಲವು ಜೀವಿಗಳ ಒಂದು ಸೀಮಿತ ರೀತಿಯ ದುಃಖದ ಮೇಲೆ ಕೇಂದ್ರೀಕರಿಸುವುದಿಲ್ಲ, ಉದಾಹರಣೆಗೆ ಉದ್ಯೋಗವನ್ನು ಕಳೆದುಕೊಳ್ಳುವುದರಿಂದ ಆಗುವ ಅತೃಪ್ತಿ ಮತ್ತು ತೊಂದರೆಗಳು. ಮಹಾನ್ ಸಹಾನುಭೂತಿಯ ವಿಷಯದಲ್ಲಿ, ಪ್ರಾಣಿಗಳು ಸೇರಿದಂತೆ ಎಲ್ಲರೂ ಸಾರ್ವತ್ರಿಕವಾಗಿ ಅನುಭವಿಸುವ ದುಃಖದ ಎಲ್ಲಾ ಅಂಶಗಳ ಮೇಲೆ ನಾವು ಕೇಂದ್ರೀಕರಿಸುತ್ತೇವೆ.
ನಮ್ಮ ಮನಸ್ಸು ಅದಕ್ಕೆ ಹೇಗೆ ಸಂಬಂಧಿಸುತ್ತದೆ ಎಂಬುದನ್ನು ತಿಳಿಯಿರಿ
ಅದಾದ ನಂತರ ಆ ವಸ್ತುವಿಗೆ ನಮ್ಮ ಮನಸ್ಸು ಹೇಗೆ ಸಂಬಂಧಿಸಿದೆ ಎಂಬುದನ್ನು ತಿಳಿಯಬೇಕು. ಸಹಾನುಭೂತಿಯಿಂದ, ನಮ್ಮ ಮನಸ್ಸು, ಇತರರ ಎಲ್ಲಾ ದುಃಖಗಳ ಮೇಲೆ ಮತ್ತು ಅವು ಹೊರಟುಹೋಗುವಂತೆ ಮತ್ತು ಎಂದಿಗೂ ಹಿಂತಿರುಗುವಂತೆ ಇಚ್ಛಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು "ಓಹ್ ಎಷ್ಟು ಭಯಾನಕ" ಎಂಬ ಮನೋಭಾವವಾಗಿರುವುದಿಲ್ಲ. ಆದ್ದರಿಂದ, ಈ ಚಿಂತನೆಯು ಮತ್ತೊಮ್ಮೆ, ಬೋಧಿಚಿತ್ತಕ್ಕಿಂತ ಬಹಳ ಭಿನ್ನವಾಗಿರುತ್ತದೆ. ಬೋಧಿಚಿತ್ತದೊಂದಿಗೆ ನಾವು ನಮ್ಮ ಇನ್ನೂ ಸಂಭವಿಸದ ಜ್ಞಾನೋದಯದ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ನಾವು ಈ ಉದ್ದೇಶದಿಂದ ಅದರೊಂದಿಗೆ ವ್ಯವಹರಿಸುತ್ತೇವೆ: "ನಾನು ಅದನ್ನು ಸಾಧಿಸುತ್ತೇನೆ ಮತ್ತು ಆ ಸಾಧನೆಯ ಮೂಲಕ ಇತರರಿಗೆ ಉಪಕಾರಿಯಾಗುತ್ತೇನೆ." ಇತರರ ದುಃಖದೊಂದಿಗೆ ನಾವು ಸಹಾನುಭೂತಿಯಿಂದ ಸಂಬಂಧಿಸುವುದರಿಂದ ಇದು ಬಹಳಾ ಭಿನ್ನವಾಗಿರುತ್ತದೆ.
ಅದನ್ನು ಅಭಿವೃದ್ಧಿಪಡಿಸಲು ಯಾವುದು ಸಹಾಯಕವಾಗಿರುತ್ತದೆ ಎಂಬುದನ್ನು ತಿಳಿಯಿರಿ
ನಂತರ ಈ ಮನಸ್ಥಿತಿಯನ್ನು ಅಭಿವೃದ್ಧಿಪಡಿಸಲು ನಮಗೆ ಏನು ಸಹಾಯ ಮಾಡುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಉದಾಹರಣೆಯಲ್ಲಿ, ನಮ್ಮ ಸ್ವಂತ ದುಃಖದ ವಿಷಯದಲ್ಲೂ, ಸಹಾನುಭೂತಿ ಅದೇ ರೀತಿಯ ಉದ್ದೇಶ ಅಥವಾ ಭಾವನೆಯಿಂದ ಬೆಂಬಲಿತವಾಗಿರುತ್ತದೆ. ಇದನ್ನು "ಸ್ವಾತಂತ್ರ್ಯದ ನಿರ್ಣಯ" ಎಂದು ಕರೆಯಲಾಗುತ್ತದೆ, ಮತ್ತು ಸಾಮಾನ್ಯವಾಗಿ "ಪರಿತ್ಯಾಗ" ಎಂದು ಅನುವಾದಿಸಲಾಗುತ್ತದೆ. ಇದು ನಮ್ಮ ಸ್ವಂತ ದುಃಖದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಆ ಸಂಕಟದಿಂದ ಮುಕ್ತರಾಗಲು ಮತ್ತು ಅದರ ಕಾರಣಗಳಿಂದ ಮುಕ್ತರಾಗಿರುವ ನಿರ್ಧಾರವಾಗಿರುತ್ತದೆ. ದುಃಖದ ಕಾರಣಗಳಿಂದ ಮುಕ್ತರಾಗಲು ಬಯಸುವುದು ಎಂದರೆ ಕೋಪಗೊಳ್ಳುವಂತಹ ದುಃಖವನ್ನು ಉಂಟುಮಾಡುವ ನಡವಳಿಕೆಯನ್ನು ತ್ಯಜಿಸಲು ಸಿದ್ಧರಾಗಿರುವುದು. ನಾವು ನಿಜವಾಗಿಯೂ ದುಃಖದಿಂದ ಮುಕ್ತರಾಗುವ ದೃಢಸಂಕಲ್ಪವನ್ನು ಬೆಳೆಸಿಕೊಳ್ಳಬಹುದಾದರೆ, ಅದನ್ನು ನಮ್ಮ ಮೇಲೆ ಕೇಂದ್ರೀಕರಿಸುವ ತೀವ್ರತೆಯಿಂದಲೇ, ಆ ಮನೋಭಾವವನ್ನು, ಆ ಆಶಯವನ್ನು ಇತರರ ಕಡೆಗೆ ನಿರ್ದೇಶಿಸಲು ಸಾಧ್ಯವಾಗುವಂತೆ ಅದು ಬೆಂಬಲಿಸುತ್ತದೆ.
ಅದರ ಬೆಳವಣಿಗಗೆ ಯಾವುದು ಅಡ್ಡಿಯಾಗಬಹುದು ಎಂಬುದನ್ನು ತಿಳಿಯಿರಿ
ಈ ಮನಸ್ಥಿತಿಯ ಬೆಳವಣಿಗೆಗೆ ಏನು ಅಡ್ಡಿಯಾಗುತ್ತದೆ ಎಂಬುದನ್ನು ಸಹ ನಾವು ತಿಳಿದುಕೊಳ್ಳಬೇಕು. ಸಹಾನುಭೂತಿಯ ಬೆಳವಣಿಗೆಗೆ ಅಡ್ಡಿಯಾಗುವುದೇನೆಂದರೆ, ಇತರರನ್ನು ಗಂಭೀರವಾಗಿ ಪರಿಗಣಿಸದಿರುವುದು ಮತ್ತು ಅವರ ನೋವನ್ನು ಗಂಭೀರವಾಗಿ ಪರಿಗಣಿಸದಿರುವುದು. ಅದನ್ನು ಎದುರಿಸಲು, ನಾವು ಹೀಗೆ ಯೋಚಿಸಬೇಕು, “ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಯಾರೂ ಅಸಂತೋಷವನ್ನು ಬಯಸುವುದಿಲ್ಲ. ದುಃಖದಿಂದ ಮುಕ್ತರಾಗಬೇಕೆಂಬ ಬಯಕೆಯಲ್ಲಿ ಯಾರೂ ಭಿನ್ನವಾಗಿರುವುದಿಲ್ಲ. ನಾವೆಲ್ಲರೂ ಒಂದೇ. ನಾನು ಭಾವನೆಗಳನ್ನು ಹೊಂದಿರುವಂತೆಯೇ, ಪ್ರತಿಯೊಬ್ಬರಿಗೂ ಭಾವನೆಗಳಿವೆ. ನನ್ನ ಸಂಕಟ ನನಗೆ ಎಷ್ಟು ನೋವುಂಟು ಮಾಡುತ್ತದೆಯೋ, ಅಷ್ಟೇ ನೋವನ್ನು ಪ್ರತಿಯೊಬ್ಬರೂ ತಮ್ಮ ಸಂಕಟಗಳಿಂದ ಅನುಭವಿಸುತ್ತಾರೆ. ನಾನು ನನ್ನ ಸಂಕಟದಿಂದ ಮುಕ್ತನಾಗಲು ಬಯಸುವಂತೆಯೇ ಅವರೂ ತಮ್ಮ ಸಂಕಟದಿಂದ ಮುಕ್ತರಾಗಲು ಬಯಸುತ್ತಾರೆ.” ಈ ರೀತಿಯಾಗಿ, ನಾವು ಇತರರ ಬಗ್ಗೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಅವರ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳುತ್ತೇವೆ. ನಮಗೆ ಅಂತಹ ಸೂಕ್ಷ್ಮತೆ ಮತ್ತು ಗೌರವವಿಲ್ಲದಿದ್ದರೆ, ನಮ್ಮ ಸಹಾನುಭೂತಿಯ ಪ್ರಮಾಣಿಕವಾದ ಬೆಳವಣಿಗೆಯಲ್ಲಿ ನಾವು ತೊಂದರೆಗಳನ್ನು ಎದುರಿಸುತ್ತೇವೆ.
ಇದರ ಅನ್ವಯವನ್ನು ತಿಳಿಯಿರಿ
ಒಮ್ಮೆ ನಾವು ಈ ಮನಸ್ಥಿತಿಯನ್ನು ಬೆಳೆಸಿಕೊಂಡ ನಂತರ, ಅದರೊಂದಿಗೆ ನಾವು ಏನು ಮಾಡುತ್ತೇವೆ ಎಂಬುದನ್ನು ತಿಳಿಯಬೇಕು ಎಂದು ತ್ಸೋಂಗ್‌ಖಾಪಾ ಮುಂದುವರಿಸುತ್ತಾರೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅದನ್ನು ಹೇಗೆ ಅನ್ವಯಿಸುವುದು. ನಾನು ಸಹಾನುಭೂತಿಯನ್ನು ಬೆಳೆಸಿಕೊಂಡ ನಂತರ ಏನು ಮಾಡುವುದು? ಇತರರೊಂದಿಗೆ ವ್ಯವಹರಿಸಲು ನನಗೆ ಇದು ಸಹಾಯ ಮಾಡುತ್ತದೆ; ಅವರ ಹಿತಕ್ಕಾಗಿ ಕೆಲಸ ಮಾಡಲು ಇದು ನನಗೆ ಸಹಾಯ ಮಾಡುತ್ತದೆ; ಮತ್ತು ಇದು ನಿಜವಾಗಿಯೂ ನನ್ನನ್ನು ಪ್ರೇರೇಪಿಸುತ್ತದೆ ಮತ್ತು ಜ್ಞಾನೋದಯದ ಅಂತಿಮ ಗುರಿಯನ್ನು ಸಾಧಿಸಲು ನನ್ನನ್ನು ಹುರಿದುಂಬಿಸುತ್ತದೆ, ಇದರಿಂದ ನಾನು ಇತರರಿಗೆ ಗಣನೀಯ ರೀತಿಯಲ್ಲಿ ಸಹಾಯ ಮಾಡಬಹುದು. ಪ್ರಸ್ತುತವಾಗಿ, ಅವರಿಗೆ ಸಹಾಯ ಮಾಡಲು ಸಾಧ್ಯವಾಗದಂತೆ ನನ್ನನ್ನು ತಡೆಯುತ್ತಿರುವುದು ನನ್ನ ಮಿತಿಗಳು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ, ಆದ್ದರಿಂದ ನನ್ನ ಮಿತಿಗಳನ್ನು ಮೀರಲು ನಾನು ಬಹಳಾ ಇಚ್ಛಿಸುತ್ತೇನೆ.
ಇದು ಏನನ್ನು ನಿವಾರಿಸುತ್ತದೆ ಎಂದು ತಿಳಿಯಿರಿ
ನಾವು ತಿಳಿದುಕೊಳ್ಳಬೇಕಾದ ಮುಂದಿನ ವಿಷಯವೆಂದರೆ: ಈ ಮನಸ್ಥಿತಿಯು ಏನನ್ನು ನಿವಾರಿಸುತ್ತದೆ ಅಥವಾ ತೊಡೆದುಹಾಕುತ್ತದೆ? ಇತರರನ್ನು ನಿರ್ಲಕ್ಷಿಸುವ ಕಲ್ಲು ಹೃದಯದ ಭಾವನೆಯನ್ನು ಸಹಾನುಭೂತಿ ತೊಡೆದುಹಾಕುತ್ತದೆ. ಇದು ಇತರರಿಗೆ ಸಹಾಯ ಮಾಡಲು ಬಯಸದ ಸೋಮಾರಿತನವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ನನ್ನ ಮೇಲೆ ನಾನೇ ಕೆಲಸ ಮಾಡಲು ಬಯಸದ ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಈ ಕಲ್ಲು ಹೃದಯದ ಭಾವನೆಯನ್ನು ತೊಡೆದುಹಾಕುವ ಮೂಲಕ, ನಾನು ಇತರರಿಗೆ ಹೆಚ್ಚು ಸಹಾಯ ಮಾಡಬಹುದು. ಸಹಾನುಭೂತಿಯನ್ನು ಅಭಿವೃದ್ಧಿಪಡಿಸಲು ಮತ್ತು ಅದರ ಮೇಲೆ ಧ್ಯಾನಿಸಲು ಈ ಎಲ್ಲಾ ಅಂಶಗಳನ್ನು ನಾವು ತಿಳಿದಿದ್ದರೆ, ನಾವು ಈ ಧ್ಯಾನವನ್ನು ಸರಿಯಾಗಿ ಮಾಡುತ್ತಿದ್ದೇವೆ ಎಂದು ನಾವು ಬಹಳಾ ವಿಶ್ವಾಸದಿಂದಿರಬಹುದು; ನಾವು ಏನು ಮಾಡುತ್ತಿದ್ದೇವೆ ಮತ್ತು ಏಕೆ ಮಾಡುತ್ತಿದ್ದೇವೆ ಎಂದು ನಮಗೆ ದಿಟ್ಟವಾಗಿ ತಿಳಿದಿದೆ. ಈ ಧ್ಯಾನದಲ್ಲಿ ತೊಡಗಿಸಿಕೊಳ್ಳಲು ನಾವು ಸರಿಯಾಗಿ ಸಿದ್ಧರಾಗಿದ್ದೇವೆ. ಇಲ್ಲದಿದ್ದರೆ, ಈಜುಕೊಳದ ಆಳವಾದ ನೀರಿನಲ್ಲಿ, ಈಜುವುದು ಹೇಗೆ ಎಂದು ತಿಳಿಯದೆ ಜಿಗಿದಂತಾಗುತ್ತದೆ. "ಸರಿ, ಸುಮ್ಮನೆ ಕುಳಿತು ಧ್ಯಾನಿಸೋಣ" ಎಂದು ನಾವು ಸರಾಗವಾಗಿ ನುಡಿದರೆ ಮತ್ತು ನಾವು ಏನು ಮಾಡಬೇಕೆಂದು ತಿಳಿದಿಲ್ಲದಿದ್ದರೆ, ನಾವು ಫಲಪ್ರದ ಫಲಿತಾಂಶವನ್ನು ಪಡೆಯದಿರುವ ಸಾಧ್ಯತೆಗಳು ಹೆಚ್ಚಾಗುತ್ತದೆ.